ಮಸಾಲೇ ದೋಸೆ

ದೋಸೆ ಎಂದ ತಕ್ಶಣ ನಮ್ಮೆಲ್ಲರ ಮನದಲ್ಲಿ ಥಟ್ ಅಂತಾ ಮೂಡೋದೇ, ಮಸಾಲೇ ದೋಸೆ. ಈಗ ಇರೋ ಬೇಲೆ ನೋಡಿದರೆ ಹೋಟೆಲ್ಗಳಿಗೆ ಹೋಗಿ ಹೊಟ್ಟೇ ತುಂಬಾ ದೋಸೆ ತಿನ್ನೋದು ಸಾಧ್ಯವೇ ಇಲ್ಲದ ಮಾತು. ಇನ್ನು ಮಸಾಲೇ ದೋಸೆಗೆ ರುಚಿ ಕೊಡೋದೇ ಒಳಗೆ ಹಾಕೋ ಕೆಂಪು ಚೆಟ್ನಿ, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಕೆಂಪು ಚೆಟ್ನಿ ಮಾಡೋದೇ ಇಲ್ಲ. ಅದರ ಬದಲಾಗಿ ಚೆಟ್ನೀ ಪುಡಿಯನ್ನು ಉದುರಿಸಿಕೊಡುತ್ತಾರಾದರೂ, ಮಸಾಲೇ ದೋಸೆ ರುಚಿ ಬರೋದಿಲ್ಲ. ಅದಕ್ಕಾಗಿಯೇ ದೋಸೆಗಳ ರಾಜ ಮಸಾಲೇ ದೋಸೆಯನ್ನು ಸಾಂಪ್ರದಾಯಿಕವಾಗಿ ಮತ್ತು ಧಿಡೀರ್ ಆಗಿ ಮನೆಯಲ್ಲಿಯೇ ತಯಾರಿಸಿಕೊಳ್ಳುವುದನ್ನು ಸವಿವರವಾಗಿ ವಿವರಿಸಿದ್ದೇನೆ.

ಸಾಂಪ್ರದಾಯಿಕವಾದ ಸುಮಾರು 12-15 ಮಸಾಲೇ ದೋಸೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

 • ದೋಸೆ /ಪೊನ್ನಿ ಅಕ್ಕಿ – 3 ಲೋಟ
 • ಉದ್ದಿನ ಬೇಳೆ – 1ಲೋಟ
 • ಗಟ್ಟಿ ಅವಲಕ್ಕಿ – 1/2 ಲೋಟ
 • ಕಡಲೇಬೇಳೆ – 1/4 ಲೋಟ
 • ಮೆಂತ್ಯ – 1 ಚಮಚ
 • ಎಣ್ಣೆ ಎರಡು ದೊಡ್ಡ ಚಮಚ
 • ರುಚಿಗೆ ತಕ್ಕಷ್ಟು ಉಪ್ಪು

ದೋಸೆ ಹಿಟ್ಟನ್ನು ತಯಾರಿಸಿಕೊಳ್ಳುವ ವಿಧಾನ

 • ಅಕ್ಕಿ, ಉದ್ದಿನ ಬೇಳೆ , ಕಡಲೇ ಬೇಳೆ ಮತ್ತು ಮೆಂತೆಯನ್ನು ಚೆನ್ನಾಗಿ ತೊಳೆದು ಬೆಳ್ಳಿಗ್ಗೆ ನೀರಿನಲ್ಲಿ ಬೇರೆ ಬೇರೆಯಾಗಿ ನೆನೆಸಬೇಕು.
 • ನೆನೆಸಿಟ್ಟ ಪದಾರ್ಥಗಳನ್ನು ರುಬ್ಬಿಕೊಳ್ಳುವ ೧೦ ನಿಮಿಷಗಳಿಗಿಂತ ಮುಂಚೆ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಬೇಕು.
 • ಸಂಜೆಯ ವೇಳೆಗೆ ಉದ್ದಿನ ಬೇಳೆಯನ್ನು ಮೊದಲು ಚೆನ್ನಾಗಿ ರುಬ್ಬಿಕೊಂಡು ಆದದ ನಂತರ ಅದಕ್ಕೆ ಮೆಂತ್ಯ, ಕಡಲೇಬೇಳೆ (ದೋಸೆ ಹೊಂಬಣ್ಣ ಬರಲು) ಮತ್ತು ಅಕ್ಕಿಯನ್ನು ಸೇರಿಸಿ ರುಬ್ಬಿ, ಸ್ವಲ್ಪ ನುಣ್ಣಗಾಗುವ ಸಮಯದಲ್ಲಿಯೇ ಅದಕ್ಕೆ ನೆನಸಿದ ಅವಲಕ್ಕಿಯನ್ನೂ ಸೇರಿಸಿ ರುಬ್ಬಿಕೊಳ್ಳಬೇಕು.
 • ರುಬ್ಬಿಟ್ಟು ಕೊಂಡ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ತಟ್ಟೆ ಮುಚ್ಚಿಟ್ಟಲ್ಲಿ ಬೆಳಗಾಗುವಷ್ಟರಲ್ಲಿ ಹಿಟ್ಟಿನಲ್ಲಿ ಈಸ್ಟ್ ಫಾರ್ಮಾಗಿ ಚೆನ್ನಾಗಿ ಹುದುಗು ಬಂದಿರುತ್ತದೆ
 • ದೋಸೆ ಹುಯ್ಯುವ ಮೊದಲು ದೊಸೆ ಸರಾಗವಾಗಿ ಹುಯ್ಯಲು ಆಗುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ಹೊತ್ತು ಗೊಟಾಯಿಸಿದಲ್ಲಿ ದೋಸೆ ಹುಯ್ಯಲು ಹಿಟ್ಟು ಸಿದ್ಧವಾಗಿರುತ್ತದೆ.

ಆಲೂಗೆಡ್ಡೆ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು

alupalya1

 • ದೂಡ್ಡ ಗಾತ್ರದ ಆಲೂಗೆಡ್ಡೆ 4-5
 • ದೊಡ್ಡ ಗಾತ್ರದ ಈರುಳ್ಳಿ 1-2
 • ಹಸೀಮೆಣಸಿಕಕಾಯಿ 4-5
 • ತೆಂಗಿನ ಕಾಯಿ ತುರಿ 1/4 ಕಪ್
 • ಶುಂಠಿ 1 ಚಮಚ
 • ಕತ್ತರಿಸಿದ ಕೊತ್ತಂಬರಿ 1/2ಕಪ್
 • ಬೆಳ್ಳುಳ್ಲಿ ಎಸಳು 3-4 ( ಐಚ್ಚಿಕ)
 • ಕರಿಬೇವು
 • ಕಡಲೇ ಬೇಳೆ 1 ಚಮಚ
 • ಊದ್ದಿನ ಬೇಳೆ 1 ಚಮಚ
 • ಸಾಸಿವೆ 1/2 ಚಮಚ
 • ಚಿಟಿಕೆ ಇಂಗು
 • ಚಿಟಿಕೆ ಅರಿಶಿನ ಪುಡಿ
 • ರುಚಿಗೆ ತಕ್ಕಷ್ಟು ಉಪ್ಪು

ಆಲೂಗೆಡ್ಡೆ ಪಲ್ಯ ಮಾಡುವ ವಿಧಾನ

 • ಆಲೂಡೆಡ್ಡೆಯನ್ನು ಚೆನ್ನಾಗಿ ತೊಳೆದು ಕೊಂಡು ಸಿಪ್ಪೆಯನ್ನು ಸುಲಿದು, ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ಸ್ವಲ್ಪ ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಮೂರ್ನಾಲ್ಕು ವಿಶಿಲ್ ಬರುವಷ್ತು ಹೊತ್ತು ಬೇಯಿಸಿಕೊಂಡು, ಆರಿದ ನಂತರ ನೀರನ್ನು ಬಗ್ಗಿಸಿಕೊಂಡು ಆಲೂಗೆಡ್ಡೆ ಸಣ್ಣ ಸಣ್ನ ಹೋಳುಗಳಾಗುವಷ್ಟರ ಮಟ್ಟಿಗೆ ಪುಡಿ ಮಾಡಿಕೊಳ್ಳಬೇಕು.
 • ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಸಿಪ್ಪೆ ಸುಲಿದು ಸಣ್ಣದಾಗಿ ಹೆಚ್ಚಿಟ್ಟು ಕೊಳ್ಳಬೇಕು,
 • ದಪ್ಪ ತಳದ ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಚಟ ಪಟ ಎಂದು ಸಿಡಿದ ನಂತರ, ಕರಿಬೇಬು ಸೊಪ್ಪನ್ನು ಹಾಕಿದ ನಂತರ, ಕಡಲೇಬೇಳೆ ಮತ್ತು ಉದ್ದಿನಬೇಳಿ ಹಾಕಿ ಚೆನ್ನಾಗಿ ಕೆಂಪಗೆ ಬರುವವರೆಗೂ ಹುದಿಯಬೇಕು
 • ಸಣ್ಣಗೆ ಕತ್ತರಿಟ್ಟ ಈರುಳ್ಳಿಯನ್ನು ಒಗ್ಗರಣೆಗೆ ಹಾಕಿ, ಈರುಳ್ಳಿ ಕಂದು ಬರುವ ವರೆಗೂ ಹುರಿದುಕೊಳ್ಳಬೇಕು
 • ಆರೋಗ್ಯದ ದೃಷ್ಟಿಯಿಂದಲೂ ಮತ್ತು ರುಚಿಯನ್ನು ಹೆಚ್ಚಿಸಲು ತುರಿದಿಟ್ಟ ಶುಂಠಿ ಮತ್ತು ಸಣ್ಣಗೆ ಹೆಚ್ಚಿದ ಇಲ್ಲವೇ ಜೆಜ್ಜಿದ ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಹಾಕಿ ಸ್ವಲ್ಪ ಹೊತ್ತು ಬಾಡಿಸಿಕೊಳ್ಳಬೇಕು
 • ಚಿಟುಕಿ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಗ್ಗರಣೆಗೆ ಸೇರಿಸಿ, ಬೇಯಿಸಿ, ಸಣ್ಣ ಸಣ್ಣ ಹೋಳುಗಳಾಗಿ ಮಾಡಿಕೊಂಡಿದ್ದ ಆಲೂಗೆಡ್ಡೆಯನ್ನು ಒಗ್ಗರಣೆಗೆ ಸೇರಿಸಿ ಚೆನ್ನಾಗಿ ೮-೧೦ ನಿಮಿಷಗಳ ಕಾಲ ಬಾಡಿಸಿದಲ್ಲಿ ರುಚಿ ರುಚಿಯಾದ ಆಲೂಗೆಡ್ಡೆ ಪಲ್ಯ ಸಿದ್ದ
 • ತುರಿದಿಟ್ಟು ಕೊಂಡಿದ್ದ ತೆಂಗಿನ ತುರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಪಲ್ಯಕ್ಕೆ ಬೇರಿಸದಲ್ಲಿ ಪಲ್ಯದ ರುಚಿಯೂ ಇಮ್ಮಡಿಯಾಗುತ್ತದೆ.

ಕೆಂಪು ಖಾರ ಚೆಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು

alupalya1

 • ತುರಿದ ಒಣ ಕೊಬ್ಬರಿ 1/2 ಕಪ್
 • ಒಣ ಮೆಣಿನಕಾಯಿ 6-8
 • ಬೆಲ್ಲ 2 ಚಮಚ
 • ಜೀರಿಗೆ 1/2 ಚಮಚ
 • ಈರುಳ್ಳಿ 1
 • ಬೆಳ್ಲುಳ್ಳಿ 4-5 ಎಸಳು
 • ಹುಣಸೇಹಣ್ಣು ನಿಂಬೇಹಣ್ಣಿನ ಗಾತ್ರದ್ದು
 • ಕೊತ್ತಂಬರಿ ಸೊಪ್ಪು
 • ಅಡುಗೆ ಎಣ್ಣೆ 1 ಸ್ಪೂನ್
 • ರುಚಿಗೆ ತಕ್ಕಷ್ಟು ಉಪ್ಪು

ಕೆಂಪು ಖಾರ ಚೆಟ್ನಿ ಮಾಡುವ ವಿಧಾನ

 • ಬಾಣಲೆಯಲ್ಲಿ ಸ್ವಲ್ಪ ಎಣ್ಣೆಹಾಕಿ ಕಾದ ನಂತರ ಅದಕ್ಕೆ ಜೀರಿಗೆ ಹಾಕಿಕೊಂಡು ಬಾಡಿಸಿಕೊಂಡ ನಂತರ ಒಣಮೆಣಸಿನಕಾಯಿಯನ್ನು ಹಾಕಿ ಬಾಡಿಸಿಕೊಳ್ಳಬೇಕು
 • ಒಗ್ಗರಣೆ ಆರಿದ ನಂತರ, ಮೇಲೆ ಹೇಳಿದ ಎಲ್ಲಾ ವಸ್ತುಗಳೊಂದಿಗೆ ಒಗ್ಗರಣೆಯನ್ನೂ ಸೇರಿಸಿ, ಸ್ವಲ್ಪವೇ ನೀರು ಹಾಕಿ ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಂಡಲ್ಲಿ ಮಸಾಲೆ ದೋಸೆಗೆ ಒಳಗೆ ಹಾಕುವ ಕೆಂಪು ಚೆಟ್ನಿ ಸಿದ್ದ.

ಮಸಾಲೆ ದೋಸೆ ಮಾಡುವ ವಿಧಾನ

masale5

 • ಒಲೆಯ ಮೇಲೆ ಕಾವಲಿಯನ್ನು ಬಿಸಿಯಾಗಲು ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ ಅರ್ಧ ಹೆಚ್ಚಿದ ಈರುಳ್ಳಿಯಲ್ಲಿ ಕಾವಲಿಯನ್ನು ಸವರಿದಲ್ಲಿ ದೋಸೆಯು ಗರಿಗರಿಯಾಗುತ್ತದೆ ಮತ್ತು ಕಾವಲಿಗೆ ಹಿಟ್ಟು ಅಷ್ಟಾಗಿ ಅಂಟಿಕೊಳ್ಳುವುದಿಲ್ಲ.
 • ಕಾವಲಿ ಕಾದ ಮೇಲೆ ಸ್ವಲ್ಪ ತೆಳುವಾಗಿ ಹಿಟ್ಟನ್ನು ಹುಯ್ದು , ಸ್ವಲ್ಪ ಬೆಂದ ಮೇಲೆ ರುಚಿಹೆಚ್ಚಿಸಲು ಸ್ವಲ್ಪ ಎಣ್ಣೆಯನ್ನು ಹಾಕಬೇಕು.
 • ದೋಸೆ ಅರ್ಧ ಬೆಂದ ಮೇಲೆ ಮಾಡಿಟ್ಟುಕೊಂಡ ಒಂದು ಚಮಚ ಕೆಂಪು ಚೆಟ್ನಿಯನ್ನು ದೋಸೆಯ ಮೇಲೆ ಸವರಿ ಸ್ವಲ್ಪ ಕಾಲ ಚೆನ್ನಾಗಿ ಬೇಯಿಸಬೇಕು.
 • ಈಗ ಮೂರು ಚಮಚ ಆಲೂಗೆಡ್ಡೆ ಪಲ್ಯವನ್ನು ಬೆಂದ ದೋಸೆಯೊಳಗೆ ಹಾಕಿ ಆರ್ಧ ನಿಮಿಷ ಬೇಯಿಸಿ ನಂತರ ದೋಸೆಯನ್ನು ಅರ್ಧಭಾಗ ಮುಚ್ಚುವಂತೆ ಮಗುಚಿಹಾಕಿ ತಟ್ಟೆಯಲ್ಲಿ ಹಾಕಿಕೊಟ್ಟಲ್ಲಿ ಗರಿಗರಿಯಾದ ರುಚಿಯಾದ ಮಸಾಲೇ ದೋಸೆ ಸಿದ್ದ

ಮನೆಯಲ್ಲಿ ರುಬ್ಬಿಕೊಳ್ಳುವ ವ್ಯವಸ್ಥೆ ಇಲ್ಲಾ ಎನ್ನುವಂತಹವರು ದಿಢೀರ್ ಮಸಾಲೇ ದೋಸೆ ಹಿಟ್ಟನ್ನು ಹೀಗೂ ತಯಾರಿಸಿಕೊಳ್ಳಬಹುದು

ದಿಢೀರ್ ಮಸಾಲೇ ದೋಸೆ ಹಿಟ್ಟನ್ನು ತಯಾರಿಸಲು ಬೇಕಾಗುವ ಪದಾರ್ಥಗಳು

 • ಅಕ್ಕಿ ಹಿಟ್ಟು 3 ಕಪ್
 • ಹುರಿಗಡಲೆ ಹಿಟ್ಟು, 1 ಕಪ್
 • ಗೋಧಿ ಹಿಟ್ಟು 1 ಕಪ್
 • ಹುಳಿ ಮೊಸರು 1 ಕಪ್
 • ಚಿಟಕಿ ಅಡುಗೆ ಸೋಡಾ
 • ರುಚಿಗೆ ತಕ್ಕಷ್ಟು ಉಪ್ಪು

ದಿಢೀರ್ ಮಸಾಲೇ ದೋಸೆ ಹಿಟ್ಟು ತಯಾರಿಸುವ ವಿಧಾನ

 • ಅಕ್ಕಿ ಹಿಟ್ಟು, ಹುರಿಗಡಲೆ ಹಿಟ್ಟು ಮತ್ತು ಗೋಧಿ ಹಿಟ್ಟು ಈ ಮೂರನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಎರಡು ಲೋಟ ನೀರನ್ನು ಸೇರಿಸಿ ಗಂಟು ಬಾರದಂತೆ ಚೆನ್ನಾಗಿ ಕಲೆಸಿಕೊಳ್ಳಬೇಕು. ನಂತರ ಅದಕ್ಕೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಚಿಟುಕೆ, ಸೋಡಪುಡಿ ಮತ್ತು ಹುಳಿ ಮೊಸರು ಸೇರಿಸಿ ಚೆನ್ನಾಗಿ ಗೊಟಾಯಿಸಿ 10-15 ನಿಮಿಷಗಳಷ್ಟು ಹೊತ್ತು ಇಟ್ಟಲ್ಲಿ ದಿಢೀರ್ ಮಸಾಲೇ ದೋಸೇ ಹಿಟ್ಟು ಸಿದ್ದ.
 • ಮೇಲೆ ತಿಳಿಸಿದಂತೆ ಆಲೂಗೆಡ್ಡೆ ಪಲ್ಯ ಮತ್ತು ಕೆಂಪು ಚೆಟ್ನಿಯನ್ನು ತಯಾರಿಸಿಕೊಂಡು ಅಲ್ಲಿ ವಿವರಿಸಿದಂತೆಯೇ ಬಿಸಿಯಾದ ಕಾವಲಿಮೇಲೆ ದೋಸೆ ಹುಯ್ದು ಅದಕ್ಕೆ ಕೆಂಪು ಚೆಟ್ನಿ ಮತ್ತು ಅಲೂಗೆಡ್ಡೆ ಪಲ್ಯ ಸೇರಿಸಿದಲ್ಲಿ ದಿಡೀರ್ ಮಸಾಲೆ ದೋಸೆ ಸಿದ್ದ.

ಈ ಮಸಾಲೇ ದೋಸೆಯ ಜೊತೆಗೆ ಮನೆಯಲ್ಲಿ ಮಾಡಿದ ಬೆಣ್ಣೆ , ಕಾಯಿ ಚೆಟ್ನಿ ಮತ್ತು ಈರುಳ್ಳೀ ಸಾಂಬಾರ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು .

ದೋಸೆಗಳ ರಾಜ, ಮಸಾಲೇ ದೋಸೆಯನ್ನು ಸಾಂಪ್ರದಾಯಿಕವಾಗಿಯೂ ಮತ್ತು ದಿಢೀರ್ ಆಗಿಯೂ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ.

ಓದ್ಕೋಳ್ಳಿ , ಮಾಡ್ಕೋಳ್ಳಿ, ತಿಂದ್ಕೋಳ್ಳಿ

ಏನಂತೀರೀ?

ಮದದಾಳದ ಮಾತು : ಮನೆಯಲ್ಲಿ ಈ ರೀತಿಯಾಗಿ ಎಷ್ಟೇ, ಶುಚಿ ರುಚಿಯಾಗಿ, ಆರೋಗ್ಯಕರವಾಗಿ ಮಸಾಲೇ ದೋಸೆ ಮಾಡಿದರೂ ಅದೇಕೋ ಏನೋ ಯಾವುದೇ ಸಣ್ಣ ಹೊಟೆಲ್ಲಿನಲ್ಲಿ ಮಾಡಿದಂತಹ ರುಚಿ ಬರುವುದೇ ಇಲ್ಲ ಎನ್ನುವುದು ಬಹುತೇಕರ ಅಳಲು. ಬಹುಶಃ ಅವರು ಬಳೆಸುವ ತೆಳುವಾದ ಅಗಲವಾದ ಕಾವಲಿ ಮತ್ತು ಆವರು ಎಗ್ಗಿಲ್ಲದೆ ಸುರಿಯುವ ಎಣ್ಣೆ ಹೆಚ್ಚು ರುಚಿಕೊಡಬಹುದೇನೋ? ಆರೋಗ್ಯದ ಹಿತದೃಷ್ಠಿಯಿಂದ ನೋಡಿದಲ್ಲಿ ಮನೆಯಲ್ಲಿ ಮಾಡಿಕೊಂಡು ತಿನ್ನುವುದೇ ಉತ್ತಮ.

ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಚಿಂತಾಮಣಿ ಮತ್ತು ಶಿಡ್ಲಗಟ್ಟ ಕಡೆಯ ಕೆಲವು ಹೋಟೆಲ್ಗಳಲ್ಲಿ ಈಗಲೂ ಆಲೂಗೆಡ್ಡೆ ಪಲ್ಯದ ಬದಲಾಗಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಗರಂ ಮಸಾಲ ಹಾಕಿದ ರುಚಿಕರವಾದ ಚಿತ್ರಾನ್ನ ಹಾಕಿ ಮಸಾಲೇ ದೋಸೆ ಮಾಡಿಕೊಡುತ್ತಾರೆ. ಅದರ ರುಚಿಯನ್ನೊಮ್ಮೆ ಒಮ್ಮೆ ಹತ್ತಿತೆಂದರೆ ಮಸಾಲೇ ದೋಸೆಗೆ ಆಲೂಗೆಡೆ ಪಲ್ಯವೇ ಬೇಡ. ಚಿತ್ರಾನ್ನವೇ ಬೇಕು ಅಂತಾ ಹೇಳೋದಂತೂ ಖಂಡಿತ.

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

One thought on “ಮಸಾಲೇ ದೋಸೆ”

 1. ಕೆಂಪು ಚಟ್ನಿಗೆ ನಮ್ಮ ತಾಯಿ ಚೆಕ್ಕೆ ಹಾಕ್ತಿದ್ರು. ಬ್ಯಾಡಗಿ ಮತ್ತು ಗುಂಟೂರು ಮೆಣಸಿನ ಕಾಯಿ ಸಮ ಪ್ರಮಾಣದಲ್ಲಿ ನೀರಲ್ಲಿ ನೆನೆಸಿ ನೀನು ತಿಳಿಸಿದ ಪರಿಕರಗಳ ಜೊತೆ ಒಂದು ಟೊಮೆಟೋ ಹಣ್ಣು ಹಾಕಿ ನುಣ್ಣಗೆ ರುಬ್ಬಿ ದೋಸೆಗೆ ಬಳಿಯುವ ಚಟ್ನಿ ತಯಾರಿಸುತ್ತಿದ್ದರು. ನಮ್ಮ ತಾತ ಹನುಮಂತ ರಾವ್ ಮಸಾಲೆ ದೋಸೆ ಅದ್ಭುತವಾಗಿ ಮಾಡ್ತಿದ್ರು. ನಮ್ಮ ತಾಯಿ ಧಾರಾಳವಾಗಿ ಬೆಣ್ಣೆ ಹಾಕಿ ಮಾಡ್ತಾ ಇದ್ದ ಸಾಗು ಮಸಾಲೆ ದೋಸೆ ನನ್ನ ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಒಂದು. ನನ್ನ ಮಕ್ಕಳಿಗೆ ದೋಸೆ ಮಾಡಿದರೆ ಹಬ್ಬ. ಬಹುಶಃ ದೋಸೆ ಇಷ್ಟ ಪಡದವರು ವಿರಳಾತಿವಿರಳ ಎಂದೇ ಭಾವನೆ.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s