ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕ್ರಾಂಗ್ರೇಸ್ ಮತ್ತು ನೆಹರು ಕುಟುಂಬದ ಭವಿಷ್ಯ ಭಯಾನಕವಾಗಿದೆ ಮತ್ತು ಮುಂದಿನ ದಿನಗಳಲ್ಲಿ, ಅವರ ಪರಿಸ್ಥಿತಿ ಇನ್ನೂ ಹದಗೆಡಲಿದೆ ಎಂಬುದು ನನ್ನ ಸೀಮಿತ ರಾಜಕೀಯ ಅನುಭವದಲ್ಲಿ ಹೇಳಲು ಇಚ್ಚಿಸುತ್ತಿದ್ದೇನೆ. ಹೀಗೆ ಹೇಳುವುದಕ್ಕೆ ಹಲವಾರು ಪ್ರಭಲ ಕಾರಣಗಳಿವೆ ಆ ಪಕ್ಷ ಮತ್ತು ಕುಟುಂಬದ ಸಮಸ್ಯೆ ಏನೆಂದರೆ, ಅವರ ರಾಜಕೀಯ ಅಧಃಪತನದ ಸ್ಥಿತಿ ಅವರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆಯಾದರೂ, ಅದರಿಂದ ಹೇಗೆ ಹೊರಬರುವುದು ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕಿಂದ ಅವರಲ್ಲಿರುವ ಅಹಂ ನಿಂದಾಗಿ ಪರಿಸ್ಥಿತಿಯಿಂದ ಹೊರಬರಲು ಅವರಿಗೆ ಕಷ್ಟವಾಗುತ್ತಿದೆ. ಇಡೀ ಪಕ್ಷ, ಅವರ ಕುಟುಂಬ ಮತ್ತು ಅವರ ಕೆಲ ಭಟ್ಟಂಗಿಗಳ ಕೈಯಲ್ಲಿ ನಲುಗಿಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಉದಾಹರಣೆಗೆ ಇತ್ತೀಚಿನ ಮಧ್ಯಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸೋಣ. ರಾಜಕೀಯ ಎಂದರೆ ಕೇವಲ ಗೆಲ್ಲುವುದಕ್ಕಷ್ಟೇ ಸೀಮಿತವಲ್ಲ. ಗೆದ್ದ ನಂತರ ಅಧಿಕಾರವನ್ನು ಸೂಕ್ತ ನಾಯಕತ್ವದಡಿಯಲ್ಲಿ ಸರಿಯಾಗಿ ಉಳಿಸಿಕೊಂಡು ಹೋಗುವುದು ಮತ್ತು ಅದನ್ನು ವಿಸ್ತರಿಸಿಕೊಂಡು ಹೋಗುವುದು ಅದರ ಭಾಗವಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ನಿರ್ಣಯಗಳನ್ನು ಕಾಂಗ್ರೇಸ್ ತೆಗೆದುಕೊಂಡ ಪರಿಣಾಮ ತನ್ನ ಒಳ ಜಗಳಗಳಿಂದಲೇ ಅಚಾನಕ್ಕಾಗಿ ಬಂದಿದ್ದ ಅಧಿಕಾರವನ್ನು ಅಷ್ಟೇ ಆಶ್ವರ್ಯಚಕಿತವಾಗಿ ಕಳೆದು ಕೊಳ್ಳಬೇಕಾಯಿತು. ಸತತವಾಗಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಶಿವರಾಜ್ ಚವ್ಹಾಣ್ ಉತ್ತಮವಾದ ಆಡಳಿತವನ್ನೇ ನಡೆಸಿದ್ದರಾದರೂ, ಜ್ಯೋತಿರಾಧ್ಯ ಸಿಂಧ್ಯಾ ಅವರಂತಹ ಯುವ ನಾಯಕತ್ವ ಹೊಸತನ್ನೇನಾದರೂ ಸಾಧಿಸಬಹುದು ಎಂದು ನಂಬಿದ ಮಧ್ಯಪ್ರದೇಶಿಗರು ಕಾಂಗ್ರೇಸ್ಸಿಗೆ ಕೂದಲೆಳೆಯ ಅಂತರದ ಮುನ್ನಡೆಯನ್ನು ತಂದು ಕೊಟ್ಟರು.
ಆ ಮುನ್ನಡೆ ನಿಜಕ್ಕೂ ನೆಹರು ಕುಟಂಬ ಸದಸ್ಯರ ಪರಿಶ್ರಮವಾಗಿರದೇ, ಸ್ಥಳಿಯ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಯುವ ನಾಯಕತ್ವದ ಪರಿಶ್ರಮವಾಗಿತ್ತು. ಆದರೆ ಇದನ್ನು ನೆಹರು ಕುಟುಂಬಸ್ಥರು ಮತ್ತು ಅವರ ಭಟ್ಟಂಗಿಗಳು ಸರಿಯಾಗಿ ಅರ್ಧೈಸಿಕೊಳ್ಳದೇ, ಯುವನಾಯಕತ್ವಕ್ಕೆ ಮನ್ನಣೆ ನೀಡದೇ, ದಿಗ್ವಿಜಯ್ ಸಿಂಗ್ ಎಂಬ ತಿಕ್ಕಲು ತನದ ಅರಳು ಮರಳು ಭಟ್ಟಂಗಿಯ ಮಾತಿಗೆ ಮರುಳಾಗಿ ರಾಜಕೀಯದಲ್ಲಿ ಅದಾಗಲೇ ಸವಕಲು ನಾಣ್ಯವಾಗಿದ್ದ ಕಮಲ್ ನಾಥ್ ಅವರಿಗೆ ಮುಖ್ಯ ಮಂತ್ರಿ ಪಟ್ಟವನ್ನು ಕಟ್ಟುವ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಂಡಿತು ಎಂದರೆ ಆಶ್ವರ್ಯ ಪಡಬೇಕಿಲ್ಲ. ಈ ರೀತಿಯ ಅಚ್ಚರಿಯ ಬೆಳವಣಿಗೆ ಸ್ಥಳೀಯ ಕಾರ್ಯಕರ್ತರು ಮತ್ತು ಯುವ ನಾಯಕರನ್ನು ಬೆಚ್ಚಿಬೀಳಿಸಿತಲ್ಲದೇ, ಅದರೆ ಪರಿಣಾಮವನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ನಡೆದ ಲೋಕಸಭಾ ಚುನಾಚಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಒಟ್ಟು 29 ಲೋಕಸಭಾ ಸದಸ್ಯರಲ್ಲಿ 28ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ, ಕೇವಲ 1ರಲ್ಲಿ ಅದೂ ಕಮಲ್ ನಾಥ್ ಅವರ ಮಗ ನಕುಲ್ ಕಮಲ್ ನಾಥ್ ಗೆಲ್ಲಲು ಸಾಧ್ಯವಾಯಿತು. ಗೆದ್ದೇ ಗೆಲ್ಲುವನೆಂಬ ಅತಿಯಾದ ಆತ್ಮವಿಶ್ವಾಸದಿಂದ ಸ್ವಕ್ಷೇತ್ರ ಗುನಾದಲ್ಲಿ ಪ್ರಚಾರವನ್ನೇ ಮಾಡದೇ ಉತ್ತರ ಪ್ರದೇಶದಲ್ಲಿ ಕೆಲಸಮಾಡಿದ ಜ್ಯೋತಿರಾಧ್ಯ ಸಿಂಧ್ಯಾರನ್ನೂ ಜನಾ ಮಕಾಡೆ ಮಲಗಿಸಿಬಿಟ್ಟರು.
ವಿಧಾನ ಸಭೆಯಲ್ಲಿಯೂ ಅಂತಹದ್ದೇನೂ ಹೆಚ್ಚಿನ ಮುನ್ನಡೆ ಇರಲಿಲ್ಲ. ಲೋಕಸಭೆಯಲ್ಲೂ ಬೆಚ್ಚಿ ಬೀಳಿಸುವ ಫಲಿತಾಂಶ ಇಂತಹ ವಿಷಮ ಪರಿಸ್ಥಿತಿಯಲ್ಲಿ ನೆಹರು ಕುಟುಂಬಕ್ಕೇನಾದರೂ ರಾಜಕೀಯ ಮುತ್ಸದ್ದಿ ತನವಿದ್ದಿದ್ದಲ್ಲಿ ಸೋತವರನ್ನೆಲ್ಲರನ್ನೂ ಒಗ್ಗೂಡಿಸಿ ಸೋತದ್ದೇಕೆ ಎಂದು ಆತ್ಮಾವಲೋಕನ ಮಾಡಿ, ಮುಂದೆ ಹೇಗೆ ಗೆಲ್ಲುವುದು ಎಂಬುವುದರ ಬಗ್ಗೇ ಆಗಿನಿಂದಲೇ ಕಾರ್ಯಪ್ರವೃತ್ತರಾಗ ಬೇಕಿತ್ತು. ಆದರೆ ಸ್ವಕ್ಷೇತ್ರದಲ್ಲಿಯೇ ಸೋತು ಸುಣ್ಣವಾಗಿ ಹೋಗಿದ್ದ ರಾಹುಲ್ ಗಾಂಧಿ, ರೂಪದಲ್ಲಿ ಅಜ್ಜಿಯ ತರಹ ಇದ್ದ ಮಾತ್ರಕ್ಕೇ ಅಜ್ಜಿಯ ತರಹ ಅಧಿಕಾರಕ್ಕೇರ ಬಹುದು ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವ ಪ್ರಿಯಾಂಕ, ದಿನೇ ದಿನೇ ಹದಗೆಡುತ್ತಿರುವ ವಯಕ್ತಿಕ ಮತ್ತು ಪಕ್ಷದ ಆರೋಗ್ಯ ಮತ್ತು ಕ್ಷೀಣಿಸುತ್ತಿರುವ ಮಕ್ಕಳ ರಾಜಕೀಯ ಭವಿಷ್ಯದಿಂದ ಕಂಗೆಟ್ಟಿರುವ ಸೋನಿಯಾ ಗಾಂಧಿ ಯವರು ಸರಿಯಾದ ನಿರ್ಧಾರ ತೆಗೆದುಕೊಳ್ಳದ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ ಹಿರಿಯ ನಾಯಕರು ಮತ್ತು ಯುವನಾಯಕರ ಜಗಳದಿಂದಾಗಾಗಿ ಸುಮಾರು ಇಪ್ಪತ್ತಕ್ಕೂ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸುಲಭವಾಗಿ ಅಧಿಕಾರ ಸಿಗುವಂತೆ ಮಾಡಿದರು.
ಗತಿಸಿ ಹೋದ ಮೇಲೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಅಧಿಕಾರ ಕಳೆದು ಕೊಂಡ ಮೇಲೇ ಬಿಜೆಪಿ ಪಕ್ಷವನ್ನು ದೂರುವುದರ ಬದಲು ಇಡೀ ಈ ಕಥೆಯ ವಿಪರ್ಯಾಸವೆಂದರೆ, ಇಲ್ಲಿ ಆಪರೇಷನ್ ಕಮಲದ ಪ್ರಭಾವಕ್ಕಿಂತ ದಿಗ್ವಿಜಯ್ ಸಿಂಗ್ ಅವರ ದುರಹಂಕಾರವೇ ಪಕ್ಷಕ್ಕೆ ಮುಳುವಾಯಿತು. ಲೋಕಸಭಾ ಚುನಾವಣೆಯಲ್ಲಿ ಸೋತ ಸಿಂಧ್ಯಾರವರರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಲ್ಲಿ ಪಕ್ಷಕ್ಕಾದ ಮುಜುಗರವೂ ತಪ್ಪುತ್ತಿತ್ತು ಮತ್ತು ಮಧ್ಯಪ್ರದೇಶದಲ್ಲಿ ಪಡೆದುಕೊಂಡಿದ್ದ ಅಧಿಕಾರವು ಉಳಿದಿರುತ್ತಿತ್ತು.
ರಾಜಾಸ್ಥಾನದ ಪರಿಸ್ಥಿತಿಯೂ. ಇದಕ್ಕಿಂತ ಭಿನ್ನವಾಗಿಲ್ಲ. ರಾಜಾಸ್ಥಾನದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಲು ಪಕ್ಷ ಅಥವಾ ಸ್ಥಳೀಯ ನಾಯಕರ ಕೆಲಸ ಅಥವಾ ವರ್ಚಸ್ಸಿಗಿಂತ ಹಿಂದಿನ ಬಿಜೆಪಿ ವಸುಂಧರಾ ರಾಜೆಯವರ ವಿರುದ್ದ ಆಡಳಿತಾತ್ಮಕ ವಿರೋಧವೇ ಕಾರಣವಾಯಿತು. ಅಲ್ಲಿಯ ಜನ ರಾಜ್ಯದಲ್ಲಿ ಬದಲಾವಣೆ ಬಯಸಿದರೂ ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿಗೆ 25 ಕ್ಕೆ 25 ಲೋಕಸಭಾ ಸದಸ್ಯರನ್ನು ಗೆಲ್ಲಿರುವ ಮೂಲಕ ಕಾಂಗ್ರೇಸ್ಸಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದ್ದಾರೆ. ಅಲ್ಲಿಯೂ ಸಹಾ ಮುಖ್ಯಮಂತ್ರಿ ಆಶೋಕ್ ಗೆಹ್ಲಾಟ್ ಮತ್ತು ಯುವ ನಾಯಕ ಸಚಿನ್ ಪೈಲೆಟ್ ನಡುವಿನ ಸಾಮರಸ್ಯ ಅಷ್ಟೇನು ಚೆನ್ನಾಗಿಲ್ಲ. ಸಿಂಧ್ಯಾ ಮತ್ತು ಪೈಲೆಟ್ ನಡುವಿನ ಗೆಳೆತನವೇನಾದರೂ ಮುಂದುವರೆದಲ್ಲಿ ಕಾಂಗ್ರೇಸ್ ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಇನ್ನು ಇಡೀ ದಕ್ಷಿಣ ಭಾರತದಲ್ಲಿ ಕ್ರಾಂಗ್ರೇಸ್ಸಿಗೆ ಅಲ್ಪ ಸ್ವಲ್ಪ ಭರವಸೆ ಇರುವುದು ಕರ್ನಾಟಕದಲ್ಲಿ ಮಾತ್ರವೇ. ಕಳೆದ ಬಾರಿಯೂ ಸಹಾ ಬಿಜೆಪಿಯವರ ಒಳಜಗಳ, ಯಡೆಯೂರಪ್ಪ ಮತ್ತು ಶ್ರೀರಾಮಲು ಪಕ್ಷದಿಂದ ದೂರಾದ ಪರಿಣಾಮವಾಗಿಯೇ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಭೂತಪೂರ್ವವಾದ ಬೆಂಬಲದೊಂದಿಗೆ ಆಡಳಿತಕ್ಕೆ ಬಂದಿತಾದರೂ, ಅತೀಯಾದ ಅಲ್ಪ ಸಂಖ್ಯಾತರ ತುಷ್ಟೀಕರಣ,
ಸಿದ್ದರಾಮಯ್ಯನವರ ಹುಂಬತನ ದಿಂದಾಗಿ ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿದ್ದರೂ ಎರಡನೇಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳ ಬೇಕಾಯಿತಾದಾರೂ, ಹೇಗಾದರೂ ಮಾಡೀ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ನೆಪದಿಂದಾಗಿ ಜನರ ಭಾವನೆಗಳ ಹೊರತಾಗಿಯೂ ದೇವೇಗೌಡರ ಸಾಹವಾಸದಿಂದ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಎರಡೂ ಪಕ್ಷಗಳ ನಡುವಿನ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿತ್ತು. ಎತ್ತು ಏರಿಗೆ ಏಳೆದರೆ ಕೋಣ ನೀರಿಗೆ ಎಳೆಯಿತು ಎನ್ನುವಂತೆ ಅಧಿಕಾರದಲ್ಲಿದ್ದ ದೋಸ್ತೀ ಸರ್ಕಾರದ ಎರಡೂ ಪಕ್ಷಗಳು ಪರಸ್ಪರ ಸಮಯಸಿಕ್ಕಾಗಲೆಲ್ಲಾ ಒಂದನ್ನೊಂದು ಹಳಿಯಲೆಂದೇ ಕತ್ತೀ ಮಸೆಯ ತೊಡಗಿದ ಕಾರಣ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಎಂದೂ ಕಾಣದಂತಹ ಅಭೂತಪೂರ್ವ ಫಲಿತಾಂಶ ಬಂದು ಬಿಜೆಪಿ 25, ಬೆಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ತಿ 1, ಕಾಂಗ್ರೇಸ್ ಮತ್ತು ಜನತಾದಳ ತಲಾ ಒಂದೊಂದು ಸ್ಥಾನ ಗಳಿಸುವಷ್ಟರಲ್ಲಿ ಏದುರಿರು ಬಿಡುವಂತಾಯಿತು. ಸ್ವತಃ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವೇ ನಾನಾ ರೀತಿಯ ತಂತ್ರಗಳನ್ನು ರೂಪಿಸಿ ಕೋಟ್ಯಾಂತರ ಹಣವನ್ನು ಖರ್ಚುಮಾಡಿದರೂ. ಮುಖ್ಯಮಂತ್ರಿಗಳ ಪುತ್ರರನ್ನು ಮಂಡ್ಯಾದಲ್ಲಿ ಮತ್ತು ಮಾಜೀ ಪ್ರಧಾನಿಗಳನ್ನು ತುಮಕೂರಿನಲ್ಲಿ ಮಕಾಡೆ ಮಲಗಿಸಿದ್ದು ರಾಜ್ಯದ ಜನರ ರಾಜಕೀಯ ಬುದ್ದಿವಂತಿಕೆಯನ್ನು ಜಗತ್ತಿಗೆ ಪರಿಚಯಿಸಿತು.
ದೋಸ್ತೀ ಸರ್ಕಾರದ ಸಾಧನೆ ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚಿದರೂ ಎರಡೂ ಪಕ್ಷಗಳು ಬುದ್ಧಿ ಕಲಿಯಲೇ ಇಲ್ಲ. ಇಲ್ಲೂ ಸಹಾ ನೆಹರು ವಂಶ ಸೋಲಿನ ಅತ್ಮಾವಲೋಕನ ಮಾಡದೇ ಪರಸ್ಪರ ಕೆಸರನ್ನೆರಚುವ ಕಾರ್ಯದಲ್ಲಿ ತೊಡಗಿತು. ಸೋಲಿನ ಹೊಣೆಯನ್ನು ಹೊತ್ತು ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ವಿಧಾನ ಸಭೆಯ ನಾಯಕ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರಾದರೂ ಅವರ ಜಾಗಕ್ಕೆ ಮತ್ತೊಬ್ಬ ನಾಯಕರನ್ನು ಅಯ್ಕೆಮಾಡಲು ತಿಣುಕಾಡತೊಡಗಿತು. ಸಿದ್ದರಾಮಯ್ಯನವರೂ ಸಹಾ ಮಗು ಕುಂ.. ಜಿಗುಟಿ ತೊಟ್ಟಿಲು ತೂಗಿ ತಮ್ಮ ಪ್ರಾಭಲ್ಯವನ್ನು ತೋರಿಸಲು ಹೋಗಿ ತಮ್ಮ ಶಿಷ್ಯಂದಿರಿಂದ ರಾಜೀನಾಮೆ ಕೊಡಿಸಿ, ಬಿಜೆಪಿಗೆ ಸುಲಭವಾಗಿ ಅಧಿಕಾರ ಕೊಡಿಸಿ ಬೆಣೆ ತೆಗೆಯಲು ಹೋಗಿ ಬಾಲ ಸಿಕ್ಕಿಸಿ ಮಂಗನಂತೆ ಆದದ್ದು ಈಗ ಜಗಜ್ಜಾಹೀರಾತಾಗಿದೆ. ಪದೇ ಪದೇ ಯಡೇಯೂರಪ್ಪನವರನ್ನು ಜೈಲಿಗೆ ಹೋದವರು ಜೈಲಿಗೆ ಹೋದವರು ಎಂದು ಹಳಿಯುತ್ತಿದ್ದ ಕಾಂಗ್ರೇಸ್ಸಿಗರಿಗೆ, ತಿಹಾರ್ ಜೈಲಿಯಲ್ಲಿ ರೊಟ್ತಿ ಮುರಿದ ಡಿಕೆಶಿಯವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕಾದ ಅನಿವಾರ್ಯಪರಿಸ್ಥಿತಿ ಬಂದಿತೆಂದರೆ, ಒಬ್ಬ ಸಮರ್ಥ, ನಿಶ್ಕಳಂಕ ರಾಜ್ಯಾಧ್ಯಕ್ಷರನ್ನೂ ಆಯ್ಕೆ ಮಾಡಿಕೊಳ್ಳಲು ಆಗದಂತಹ ದೈನೇಸೀ ಸ್ಥಿತಿಗೆ ರಾಜ್ಯದ ಕಾಂಗ್ರೇಸ್ ಬಂದು ತಲುಪಿರುವುದು ಗೊತ್ತಾಗುತ್ತಿದೆ.
ಇನ್ನೂ ಕೇರಳದಲ್ಲಿ ಕಾಂಗ್ರೇಸ್ ಅಲ್ಪ ಸ್ವಲ್ಪ ಮಾನವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ, ಸುಪ್ರೀಂ ಕೋರ್ಟಿನಲ್ಲಿ ಶಬರಿಮಲೈ ಕುರಿತಂತೆ ಸ್ಥಳಿಯ ಜನರ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾದಂತಹ ತೀರ್ಪು ಬಂದಾಗ, ಸ್ಥಳೀಯರ ಭಾವನೆಗಳಿಗೆ ವಿರುದ್ಧವಾಗಿ ಸ್ಪಂದಿಸಿದ್ದ ಕಾರಣದಿಂದಾಗಿಯೇ ಜನರು ಕೋಪಗೊಂಡು ಅಲ್ಲಿ ಬಿಜೆಪಿ ಪಕ್ಷವೂ ಇನ್ನೂ ಪ್ರಭಲ ಪಕ್ಷವಾಗಿರದ ಕಾರಣ, ಗತಿ ಇಲ್ಲದೇ ಕಮ್ಯೂನಿಷ್ಟ್ ಸರ್ಕಾರದ ವಿರುದ್ಧವಾಗಿ, ಕಾಂಗ್ರೇಸ್ ಪರವಾಗಿ ಮತ ಚಲಾಯಿಸಿದರೇ ಹೊರತು, ಅಮೇಠಿಯಲ್ಲಿ ಸೋಲುವನೆಂದು ತಿಳಿದು, ಸ್ವಾರ್ಥಕ್ಕಾಗಿ ವೈನಾಡಿನಲ್ಲಿ ರಾಹುಲ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರಿಂದ ಕೇರಳಿಗರು ಕಾಂಗ್ರೇಸ್ ಪರ ಮತ ಚಲಾಯಿಸಿದ್ದಾರೆ ಎಂದು ತಿಳಿಯುವುದು ಮೂರ್ಖತನದ ಪರಮಾವಧಿ.
ಕಾಂಗೇಸ್ಸಿಗರ ಮಾಡುತ್ತಿರುವ ಪ್ರತೀ ತಪ್ಪುಗಳೂ ಬಿಜೆಪಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗೆ ಆಗುತ್ತಿದೆ. ಹಾಗೆಂದ ಮಾತ್ರಕ್ಕೇ ಬಿಜೆಪಿಯವರೂ ಸುಖಾಸುಮ್ಮನೇ ಫಲವನ್ನೇನೂ ಅನುಭವಿಸುತ್ತಿಲ್ಲ. ಆದಕ್ಕೆ ಪೂರಕವಾಗಿ ಏನೇನು ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಉದಾ. ಅಮೇಥಿಯಲ್ಲಿ ರಾಹುಲ್ ಗಾಂಧಿ, ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಮುನಿಯಪ್ಪನವರನ್ನು ಸೋಲಿಸಲು ಚುನಾವಣೆಗಿಂತಲು ಮೊದಲೇ ತಕ್ಕದಾದ ಪೂರ್ವ ಸಿದ್ದತೆ ಮಾಡಿಕೊಂಡಿತ್ತಲ್ಲದೇ ಅದನ್ನು
ತನ್ನ ಕಾರ್ಯಕರ್ತರ ಮೂಲಕ ಸರಿಯಾಗಿ ಕಾರ್ಯರೂಪಕ್ಕೆ ತರುವುದರಲ್ಲಿ ಸಫಲವೂ ಆಗಿದೆ.
ಇನ್ನು ನೆಹರು ವಂಶಸ್ತರ ರಾಜಕೀಯ ಪ್ರಬುದ್ಧತೆ ಇನ್ನೂ ಬೆಳೆದಿಲ್ಲ ಎನ್ನುವುದಕ್ಕೆ ಇತ್ತೀಚಿನ ಕೊರೋನಾ ವಿರುದ್ಧದ ಅವರ ನಿಲುವುಗಳೇ ಸಾಕ್ಷಿ. ಇಡೀ ಪ್ರಪಂಚಾದ್ಯಂತ ಮಹಾಮಾರಿಯಿಂದ ತತ್ತರಿಸುತ್ತಿರುವಾಗ, ಜಬಾಬ್ಧಾರಿಯುತ ವಿರೋಧ ಪಕ್ಷವಾಗಿ, ದೇಶದ ಪ್ರಜೆಗಳ ಒಳಿತಕ್ಕಾಗಿ ಆಡಳಿತ ಪಕ್ಷದ ಜೊತೆ ಕೈ ಜೋಡಿಸಿಯೋ ಇಲ್ಲವೇ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಪರಿಸ್ಥಿತಿ ನಿಭಾಯಿಸುವುದರಲ್ಲಿ ಸಹಕರಿಸುವುದನ್ನು ಬಿಟ್ಟು ತಮ್ಮರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಧಾನಿಗಳ ವಿರುದ್ದ ಅಮ್ಮಾ, ಮಗ, ಮಗಳು ದಿನಕ್ಕೊಂದು ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಾ ಅಳುದುಳಿದಿದ್ದ ತಮ್ಮ ಮಾನವನ್ನೇ ಹರಾಜು ಹಾಕಿಕೊಳ್ಳುತ್ತಿದ್ದಾರೆ.
ದೇಶಾದ್ಯಂತ ಲಾಕ್ ಡೊನ್ ಇರುವ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿದ್ದರೂ ಅಣ್ಣಾ ಮತ್ತು ತಂಗಿ ಒಟ್ಟಿಗೇ ಒಂದೇ ಕಾರಿನಲ್ಲಿಯೇ ಪ್ರಯಾಣಿಸಿ ಅವರನ್ನು ತಡೆದ ಪೋಲೀಸ್ ಅಧಿಕಾರಿಗಳ ಮೇಲೆ ತಮ್ಮ ದುರಹಂಕಾರದ ಮತ್ತು ದರ್ಪನ್ನು ತೋರಿಸಿರುವ ವೀಡಿಯೋ ಈಗ ವೈರಲ್ ಆಗಿದ್ದರೂ ಅದಕ್ಕೆ ಒಂದು ಕ್ಷಮೆಯನ್ನೂ ಯಾಚಿಸದೇ ಈ ಪರಿಸ್ಥಿತಿಯಲ್ಲೂ ಹೊರಗೆ ಹೋಗುವಂತಹ ಅದೆಂತಹಾ ಘನಂದಾರಿ ಕೆಲಸ ಇತ್ತು ಎಂದು ಜನರಿಗೆ ತಿಳಿಸದೇ ಜನರಿಂದ ತಿರಸ್ಕೃತರಾಗುತ್ತಿದ್ದಾರೆ.
ಇನ್ನು ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾ, ಅಳಿಯಾ ಮನೆ ತೊಳಿಯಾ ಎಂಬಂತೆ ಮಗ್ಗುಲ ಮುಳ್ಳಾಗಿ, ಅವನು ಮಾಡಿರುವ ಕಾನೂನೂ ಬಾಹೀರ ಚಟುವಟಿಕೆಗಳು ಬೂದಿ ಮುಚ್ಚಿದ ಕೆಂಡದಂತಿದ್ದು ಒಂದಲ್ಲಾ ಒಂದು ದಿನ ಪ್ರವರ್ಧಮಾನಕ್ಕೆ ಬಂದು ಅತನೂ ಅಲ್ಲದೇ ಅವನ ಇಡೀ ಕುಟುಂಬವನ್ನೇ ಸುಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಹೀಗೆ ಕಾಂಗೇಸ್ ಪಕ್ಷ ಮತ್ತು ಸದ್ಯದ ನೆಹರು ವಂಶಸ್ಥರ ಸ್ವಯಂಕೃತಾಪರಾಧಗಳ ಬಗ್ಗೆ ಹೇಳುತ್ತಾ ಹೋದರೆ ಇಡೀ ದಿನವೇ ಸಾಲುವುದಿಲ್ಲ. ದೇಶದ ಅಭಿವೃದ್ಧಿಗಾಗಿ ಆಡಳಿತ ಪಕ್ಷ ಎಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸ ಬೇಕು ಎಂಬ ನಿರೀಕ್ಷೆ ಜನರಲ್ಲಿ ಇರುತ್ತದೋ ಹಾಗೆಯೇ ವಿರೋಧ ಪಕ್ಷವೂ ಅಷ್ಟೇ ಏಕೆ ? ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸ ಬೇಕು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸನ್ಮಾನ್ಯ ಕುಮಾರ ಸ್ವಾಮಿಯವರು ಮತ್ತು ಡಾ. ಸುಬ್ರಹ್ಮಣ್ಯ ಸ್ವಾಮಿ. ಅವರು ಎರಡು ಬಾರಿ ಅಲ್ಪಾವಧಿಯ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಣೆ ಮಾಡಿದ್ದಕ್ಕಿಂತಲೂ ಯಡೆಯೂರಪ್ಪನವರ ಕಾಲದಲ್ಲಿ ವಿರೋಧ ಪಕ್ಷದ ನಾಯಕರಾಗಿ ಮಿಂಚಿದ್ದೇ ಹೆಚ್ಚು. ಇನ್ನು ಸುಬ್ರಹ್ಮಣ್ಯ ಸ್ವಾಮಿಗಳ ಬಗ್ಗೆ ಹೇಳುವುದೇ ಬೇಡ. ಅವರು ಅಧಿಕಾರದಲ್ಲಿ ಇರಲೀ ಬಿಡಲೀ ಅವರಿದ್ದಾರೆ ಎಂದರೆ ತಪ್ಪುಮಾಡಲು ಯಾರೂ ಮುಂದಾಗುವುದಿಲ್ಲ.
ಒಟ್ಟಿನಲ್ಲಿ ಸದ್ಯದ ಪರಸ್ಥಿತಿಯಲ್ಲಿ ಸದ್ಯದ ನೆಹರೂ ಮನೆತನದ ರಾಜಕೀಯ ಪ್ರಬುದ್ಧತೆ ಮತ್ತು ಮುತ್ಸದ್ದಿತನದ ಕೊರತೆಯಿಂದಾಗಿ ಕ್ರಾಂಗ್ರೇಸ್ ಪಕ್ಷ ಮುಳುತ್ತಿರುವ ಹಡುಗಾಗಿಗಿದ್ದು. ಜೀವ ರಕ್ಷಣೆಗಾಗಿ, ಹಡುಗಿನಲ್ಲಿರುವ ಪ್ರಯಾಣಿಕರು, ಹಡುಗಿನಿಂದ ಹೊರ ಹಾರುವಂತೆ ಅಳುದುಳಿದ ಕಾಂಗ್ರೇಸ್ಸಿಗರು ಆ ಪಕ್ಷ ಈ ಪಕ್ಷ ಎಂದು ಜಿಗಿಯುತ್ತಿರುವುದು ಸದ್ಯದ ಪರಿಸ್ಥಿತಿಯಾಗಿದೆ. ಜಾತಸ್ಯ ಮರಣಂ ಧೃವಂ. ಎಂದರೆ ಹುಟ್ಟಿದವರು ಸಾಯಲೇ ಬೇಕು ಎಂಬುದು ಜಗದ ನಿಯಮ. ಅದು ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆಯಲ್ಲವೇ?
ಏನಂತೀರೀ?