ಅನ್ನದಿಂದ ಬಹಳ ಸುಲಭವಾಗಿ ಮಾಡುವ ತಿಂಡಿ ಎಂದರೆ ಚಿತ್ರಾನ್ನ. ಅದರೇ ಅದೇ ಚಿತ್ರಾನ್ನವನ್ನು ಎಷ್ಟು ಸಲಾ ಅಂತಾ ಮಕ್ಕಳು ತಿನ್ನುತ್ತಾರೆ. ಚಿತ್ರಾನ್ನಕ್ಕೆ ಬಳಸುವ ಪರಿಕರಗಳನ್ನೇ ಉಪಯೋಗಿಸಿ, ಮತ್ತೊಂದು ಅಧ್ಭುತವಾದ ಉತ್ತರ ಭಾರತದ ತಿಂಡಿಯನ್ನು ತಯಾರಿಸಬಹುದೇ ಅದೇ ಜೀರಿಗೇ ಅನ್ನ ಅಥವಾ ಜೀರಾ ರೈಸ್. ಬನ್ನಿ ಈಗ ಜೀರಾ ರೈಸ್ ಮತ್ತು ಅದರ ಜೊತೆಗೆ ನೆಂಚಿಕೊಳ್ಳಲು ರುಚಿಕರವಾದ ದಾಲ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇನೆ.
ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ಜೀರಾ ರೈಸ್ ಮತ್ತು ದಾಲ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಅಕ್ಕಿ – 3 ಪಾವು
- ಜೀರಿಗೆ – 2 ಚಮಚ
- ತುಂಡರಿಸಿದ ಗೋಡಂಬಿ – 10-12
- ಸಣ್ಣಗೆ ಕತ್ತರಿಸಿದ ಈರುಳ್ಳಿ – 2
- ಉದ್ದುದ್ದ ಸೀಳಿದ ಮೆಣಸಿನಕಾಯಿ – 3-4
- ಕರಿಬೇವು – 2 ಕಡ್ಡಿ
- ತುಪ್ಪಾ – 2 ಚಮಚ
- ಅಡುಗೆ ಎಣ್ಣೆ – 2 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಜೀರಾ ರೈಸ್ ತಯಾರಿಸುವ ವಿಧಾನ
- ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಕುಕ್ಕರಿನಲ್ಲಿ ಸ್ವಲ್ಪ ಉದುರು ಉದುರಾಗುವಂತೆ ಅನ್ನವನ್ನು ಮಾಡಿಕೊಂಡು ಅದನ್ನು ತಣ್ಣಗೆ ಆರಲು ಬಿಡಿ.
- ಅಗಲವಾದ ಬಾಣಲೆಯಲ್ಲಿ 2 ಚಮಚ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಅದು ಕಾದ ನಂತರ ಕತ್ತರಿಸಿದ ಈರುಳ್ಳಿ ಬೆರೆಸಿ ಅದು ಕೆಂಪಗಾಗುವಷ್ಟು ಹುರಿಯಿರಿ
- ಈಗ ತುಂಡರಿಸಿದ ಗೋಡಂಬಿ ಬಾಣಲೆಗೆ ಹಾಕಿ ಕೆಂಪಗಾಗುವಷ್ಟು ಹುರಿಯಿರಿ
- ಈಗ ಸೀಳಿದ ಮೆಣಸಿನಕಾಯಿಗಳನ್ನು ಮತ್ತು ಕರಿಬೇವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯಿರಿ
- ಈಗ ಜೀರಿಗೆಯನ್ನು ಹಾಕಿ ಅದು ಕೆಂಪಗಾಗುವಂತೆ ಹುರಿಯಿರಿ
- ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ತಣ್ಣಗೆ ಆರಿಸಿಟ್ಟಿದ್ದ ಅನ್ನವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಐದಾರು ನಿಮಿಷಗಳಷ್ಟು ಬಾಡಿಸಿದಲ್ಲಿ ರುಚಿ ರುಚಿಯಾದ ಜೀರಾ ರೈಸ್ ಸಿದ್ಧ
ದಾಲ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ತೊಗರೀ ಬೇಳೆ – 2 ಕಪ್
- ಹೆಸರು ಬೇಳೆ – 2 ಕಪ್
- ಜೀರಿಗೆ – 1/4 ಚಮಚ
- ಸಾಸಿವೆ – 1/4 ಚಮಚ
- ಅಚ್ಚ ಖಾರದ ಪುಡಿ – 1 ಚಮಚ
- ಗರಂ ಮಸಾಲ ಪುಡಿ – 1 ಚಮಚ
- ಸಾಸಿವೆ – 1/4 ಚಮಚ
- ಅರಿಶಿನಪುಡಿ – 1/4 ಚಮಚ
- ಸಣ್ಣಗೆ ಹೆಚ್ಚಿದ ಈರುಳ್ಳಿ – 1 ದೊಡ್ಡಗಾತ್ರದ್ದು
- ಸೀಳಿದ ಮೆಣಸಿನಕಾಯಿ – 2-5 ಖಾರಕ್ಕೆ ಅನುಗುಣವಾಗಿ
- ಬೆಳ್ಳುಳ್ಳಿ – 4-6 ಎಸಳು
- ಶುಂಠಿ – 1 ಇಂಚು
- ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಚಮಚ
- ಕರಿಬೇವು – 2 ಕಡ್ಡಿ
- ತುಪ್ಪಾ – 1 ಚಮಚ
- ಅಡುಗೆ ಎಣ್ಣೆ – 2 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ದಾಲ್ ತಯಾರಿಸುವ ವಿಧಾನ
- ಕುಕ್ಕರಿಗೆ ತೊಗರೀ ಬೇಳೆ ಮತ್ತು ಹೆಸರಬೇಳೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಂಡು ಅದಕ್ಕಿ ನೀರು ಬೆರೆಸಿ ಚಿಟಿಕೆ ಅರಿಶಿನ ಪುಡಿಹಾಕಿ ಐದಾರು ವಿಷಿಲ್ ಬರುವಷ್ಟರ ವರೆಗೆ ಬೇಯಿಸಿಟ್ಟು ಕೊಂಡು ಅದನ್ನು ತಣ್ಣಗಾಗಲು ಬಿಡಿ
- ಅಗಲವಾದ ಬಾಣಲೆಯಲ್ಲಿ 2 ಚಮಚ ಎಣ್ಣೆ ಮತ್ತು 1 ಚಮಚ ತುಪ್ಪಾ ಹಾಕಿ ಅದು ಕಾದ ನಂತರ ಸಾಸಿವೆ ಹಾಕಿ ಸಿಡಿಯಲು ಬಿಡಿ
- ಈಗ ಕತ್ತರಿಸಿದ ಈರುಳ್ಳಿ ಬೆರೆಸಿ ಅದು ಕೆಂಪಗಾಗುವಷ್ಟು ಹುರಿಯಿರಿ
- ಈಗ ಸೀಳಿದ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ
- ಈಗ ಜೀರಿಗೆಯನ್ನು ಹಾಕಿ ಅದು ಕೆಂಪಗಾಗುವಂತೆ ಹುರಿಯಿರಿ
- ಈಗ ರುಚಿಗೆ ತಕ್ಕಷ್ಟು ಉಪ್ಪು, ಅಚ್ಚ ಖಾರದ ಪುಡಿ, ಗರಂ ಮಸಾಲ ಸ್ವಲ್ಪ ಬಾಡಿಸಿಕೊಳ್ಳಿ
- ಈಗ ಬೇಯಿಸಿದ ಬೇಳೆಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿದಲ್ಲಿ ರುಚಿಯಾದ ದಾಲ್ ಸಿದ್ಧ.
ಬಿಸಿ ಬಿಸಿಯಾದ ಜೀರಾ ರೈಸ್ ಜೊತೆಯಲ್ಲಿ ಒಂದು ಬಟ್ಟಲು ದಾಲ್ ಮತ್ತು ಸೌತೇಕಾಯಿ, ಖಾರ ಬೇಕಿದ್ದಲ್ಲಿ ಹಸೀ ಮೆಣಸಿಕಾಯಿ, ಸಣ್ಣಗೆ ಕತ್ತರಿಸಿದ ನಿಂಬೇಹಣ್ಣಿನ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ರುಚಿ ರುಚಿಯಾಗಿ ಮನೆಯಲ್ಲಿಯೇ ಜೀರಾ ರೈಸ್ ಮತ್ತು ದಾಲ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೇನೆ.
ಇನ್ನೇಕೆ ತಡಾ ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ನಾನು ಮೊದಲ ಬಾರಿಗೆ ಜೀರಾ ರೈಸ್ ಸವಿದಿದ್ದು ಸುಮಾರು ೨೫ ವರ್ಷಗಳ ಹಿಂದೆ ಚೆನ್ನೈಯ್ಯಿನ ಮೈಲಾಪುರದ ಕರ್ಪಗಂ ದೇವಾಸ್ಥಾನದ ಎದುರಿಗಿದ್ದ ಸಂಗೀತಾ ಹೋಟೆಲ್ಲಿನಲ್ಲಿ. ದಿನಾ ಅದೇ ಊಟ ಮಾಡಿ ಬೇಜಾರಾಗಿದ್ದ ನನಗೆ ಮೊದಲಬಾರಿ ಜೀರಾ ರೈಸ್ ಆರ್ಡರ್ ಮಾಡಿದಾಗ ಅದು ಹೇಗಿರುತ್ತದೆ ಎಂದೂ ಗೊತ್ತಿರಲಿಲ್ಲ. ಹೆಸರಿಗೆ ಮಾತ್ರ ಜೀರಾ ರೈಸ್ ಅಂತಿದ್ರೂ, ಜೀರಾ ರೈಸ್ ನಲ್ಲಿ ಗೋಡಂಬಿ ಹುಡುಕುವ ಬದಲು, ಗೊಂಡಂಬಿಯಲ್ಲಿ ಜೀರಾ ರೈಸ್ ಹುಡುಕುವಂತಿದ್ದು ತುಂಬಾ ರುಚಿಕರವಾಗಿತ್ತು. ಹಾಗಾಗಿ ಅಂದಿಗೂ ಇಂದಿಗೂ ದಿಢೀರ್ ಎಂದು ಏನಾದ್ರೂ ಮಾಡ್ಬೇಕು ಅಂದ್ರೇ ಜೀರಾ ರೈಸ್ ಮಾಡಿ ಕೊಳ್ಳುತ್ತೇವೆ.
Jeera rice ge thuppa yaari hakolla , baryodadre sariyage bariri illa gottiro topic aste selet madi, ethara fool madbedi
LikeLike
ಲೋಕೋ ಭಿನ್ನ ರುಚಿಃ ಅನ್ನೋ ರೀತಿ ಒಬ್ಬೊಬ್ಬರು ಒಂದು ರೀತಿಯಲ್ಲಿ ಮಾಡ್ತಾರೆ. ನೀವೂ ತುಪ್ಪಾ ಹಾಕಿ ಒಂದು ಸಲಾ ಜೀರಾ ರೈಸ್ ಮಾಡ್ಕೊಂಡು ತಿಂದು ನೋಡಿ ಆಮೇಲೆ ನಿಮ್ಮ ಅಭಿಪ್ರಾಯನೂ ಬದಲಾಗಬಹುದು.
ಕೋಪ ಆರೋಗ್ಯಕ್ಕೆ ಒಳ್ಳೆಯದಲ್ಲ. ಸ್ವಲ್ಪ ತಾಳ್ಮೆವಹಿಸಿ
LikeLike