ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಇಡ್ಲಿ ಮತ್ತು ದೋಸೆಗಳು ಹೆಸರುವಾಸಿಯಾಗಿವೆ. ಮನೆಯಲ್ಲಿ ಎಷ್ಟು ಚೆನ್ನಾಗಿ ದೋಸೆ ಮಾಡಿ ಕೊಟ್ಟರೂ, ಮಕ್ಕಳನ್ನು ಹೋಟೆಲ್ಲಿಗೆ ಕರೆದುಕೊಂಡು ಹೋದ ತಕ್ಷಣ ಆರ್ಡರ್ ಮಾಡುವುದೇ ಮಸಾಲೆ ದೋಸೆ. ಮಸಾಲೇ ದೋಸೆಗೆ ಸಡ್ಡು ಹೊಡೆಯಲು ಇರುವ ಗಾತ್ರದಲ್ಲಿ ಚಿಕ್ಕದಾಗಿ, ಸ್ಪಂಜಿನಂತೆ ಸ್ವಲ್ಪ ದಪ್ಪದಾಗಿ, ಅಷ್ಟೇ ಮೃದುವಾದ ಮತ್ತೊಂದು ದೋಸೆಯೇ ಸೆಟ್ ದೋಸೆ. ಅಂತಹ ಸೆಟ್ ದೋಸೆಯನ್ನು ಸಾಂಪ್ರದಾಯಿಕವಾಗಿ ಮತ್ತು ದಿಡೀರ್ ಆಗಿ ಮಾಡುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಸಾಂಪ್ರದಾಯಿಕವಾದ ಸುಮಾರು 12-15 ಸೆಟ್ ದೋಸೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
- ಪೊನ್ನಿ (ಇಡ್ಲಿ) ಅಕ್ಕಿ ಒಂದು ಕಪ್
- ಅಕ್ಕಿ: ಒಂದು ಕಪ್
- ಉದ್ದಿನ ಬೇಳೆ : ಅರ್ಧ ಕಪ್
- ಗಟ್ಟಿ ಅವಲಕ್ಕಿ: ಅರ್ಧ ಕಪ್
- ಸಬ್ಬಕ್ಕಿ : ಒಂದು ಕಪ್
- ಮೆಂತ್ಯ ಒಂದು ಚಮಚ
- ಎಣ್ಣೆ ಎರಡು ದೊಡ್ಡ ಚಮಚ
- ರುಚಿಗೆ ತಕ್ಕಷ್ಟು ಉಪ್ಪು
- ತುರಿದ ಕ್ಯಾರೆಟ್ ಅರ್ಧ ಕಪ್
- ಸಣ್ಣಗೆ ಹೆಚ್ಚಿದ ಕೊತ್ತಂಬರಿ ಅರ್ಧ ಕಪ್
ಸಾಂಪ್ರದಾಯಿಕವಾದ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳುವ ವಿಧಾನ
- ಎರಡೂ ವಿಧದ ಅಕ್ಕಿ, ಉದ್ದಿನ ಬೇಳೆ, ಸಬ್ಬಕ್ಕಿ ಮತ್ತು ಮೆಂತೆಯನ್ನು ಚೆನ್ನಾಗಿ ತೊಳೆದು ಬೆಳ್ಳಿಗ್ಗೆ ನೀರಿನಲ್ಲಿ ನೆನೆಸಬೇಕು.
- ನೆನೆಸಿಟ್ಟ ಪದಾರ್ಥಗಳನ್ನು ರುಬ್ಬಿಕೊಳ್ಳುವ 10 ನಿಮಿಷಗಳಿಗಿಂತ ಮುಂಚೆ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಬೇಕು.
- ಸಂಜೆಯ ವೇಳೆಗೆ ಉದ್ದಿನ ಬೇಳೆ, ಮೆಂತ್ಯ, ಅಕ್ಕಿಯನ್ನು ರುಬ್ಬಿಕೊಂಡು ಸ್ವಲ್ಪ ನುಣ್ಣಗಾಗುವ ಸಮಯದಲ್ಲಿಯೇ ಅದಕ್ಕೆ ನೆನಸಿದ ಅವಲಕ್ಕಿಯನ್ನೂ ಸೇರಿಸಿ ರುಬ್ಬಿಕೊಳ್ಳಬೇಕು.
- ರುಬ್ಬಿಟ್ಟು ಕೊಂಡ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ತಟ್ಟೆ ಮುಚ್ಚಿಟ್ಟಲ್ಲಿ ಬೆಳಗಾಗುವಷ್ಟರಲ್ಲಿ ಹಿಟ್ಟಿನಲ್ಲಿ ಈಸ್ಟ್ ಫಾರ್ಮಾಗಿ ಚೆನ್ನಾಗಿ ಹುದುಗು ಬಂದಿರುತ್ತದೆ
- ಸರಾಗವಾಗಿ ದೊಸೆ ಹುಯ್ಯಲು ಆಗುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ಹೊತ್ತು ಗೊಟಾಯಿಸಿದಲ್ಲಿ ದೋಸೆ ಹುಯ್ಯಲು ಹಿಟ್ಟು ಸಿದ್ಧವಾಗಿರುತ್ತದೆ.
ದಿಢೀರ್ ಸೆಟ್ ದೋಸೆ ಹಿಟ್ಟನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
- ಚಿರೋಟಿ ರವೆ ಒಂದು ಕಪ್
- ಗಟ್ಟಿ ಅವಲಕ್ಕಿ ಒಂದು ಕಪ್
- ಅಕ್ಕಿ ಹಿಟ್ಟು ಎರಡು ಕಪ್
- ಮೊಸರು ಒಂದು ಕಪ್
- ಚಿಟುಕಿ ಅಡಿಗೆ ಸೋಡ
- ರುಚಿಗೆ ತಕ್ಕಷ್ಟು ಉಪ್ಪು
- ತುರಿದ ಕ್ಯಾರೆಟ್ ಅರ್ಧ ಕಪ್
- ಸಣ್ಣಗೆ ಹೆಚ್ಚಿದ ಕೊತ್ತಂಬರಿ ಅರ್ಧ ಕಪ್
ದಿಢೀರ್ ಸೆಟ್ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳುವ ವಿಧಾನ
- ಚಿರೋಟಿ ರವೆ ಮತ್ತು ಗಟ್ಟಿ ಅವಲಕ್ಕಿಯನ್ನು ಹತ್ತು ನಿಮಿಷಗಳಷ್ಟು ನೀರಿನಲ್ಲಿ ನೆನೆಸಿಟ್ಟು ಕೊಳ್ಳಬೇಕು
- ನೆನೆಸಿಟ್ಟು ಕೊಂಡ ರವೆ ಮತ್ತು ಅವಲಕ್ಕಿಯ ಜೊತೆಗೆ ಅಕ್ಕಿ ಹಿಟ್ಟನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು
- ರುಬ್ಬಿಕೊಂಡ ಹಿಟ್ಟಿಗೆ ಚಿಟುಕಿ ಅಡಿಗೆ ಸೋಡ ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಕಲೆಸಿ ಹತ್ತು ನಿಮಿಷಗಳಷ್ಟು ಸಮಯ ಇಟ್ಟಲ್ಲಿ ದೋಸೆ ಹಿಟ್ಟು ಸಿದ್ದ
ಸೆಟ್ ದೋಸೆ ಮಾಡುವ ವಿಧಾನ
- ಒಲೆಯ ಮೇಲೆ ಕಾವಲಿಯನ್ನು ಬಿಸಿಯಾಗಲು ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ ಅರ್ಧ ಹೆಚ್ಚಿದ ಈರುಳ್ಳಿಯಲ್ಲಿ ಕಾವಲಿಯನ್ನು ಸವರಿದಲ್ಲಿ ದೋಸೆಯು ಗರಿಗರಿಯಾಗುತ್ತದೆ ಮತ್ತು ಕಾವಲಿಗೆ ಹಿಟ್ಟು ಅಷ್ಟಾಗಿ ಅಂಟಿಕೊಳ್ಳುವುದಿಲ್ಲ.
- ಕಾವಲಿ ಕಾದ ಮೇಲೆ ಸ್ವಲ್ಪ ದಪ್ಪವಾಗಿ ಹಿಟ್ಟನ್ನು ಹುಯ್ದು , ಸ್ವಲ್ಪ ಬೆಂದ ಮೇಲೆ ರುಚಿಹೆಚ್ಚಿಸಲು ಸ್ವಲ್ಪ ಎಣ್ಣೆಯನ್ನು ಸವರಬೇಕು
- ಅಲಂಕಾರಿಕವಾಗಿ ಕಾಣಲು ಮತ್ತು ರುಚಿಯನ್ನೂ ಹೆಚ್ಚಿಸಲು ತುರಿದಿಟ್ಟ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ದೋಸೆಯ ಮೇಲೆ ಹಾಕಬೇಕು
- ದೋಸೆ ಸ್ವಲ್ಪ ಕೆಂಪಗಾದ ಮೇಲೆ ದೋಸೆಯನ್ನು ಮೊಗಚಿಹಾಕಿ ಎರಡೂ ಬದಿಯಲ್ಲಿಯೂ ಚೆನ್ನಾಗಿ ಬೇಯಿಸಿದಲ್ಲಿ ಸ್ಪಾಂಜಿನಂತಹ ಮೃದುವಾದ ಬಿಸಿ ಬಿಸಿಯಾದ ಸೆಟ್ ದೋಸೆ ಸಿದ್ಧ.
ಇಂತಹ ಎರಡು- ಮೂರು ದೋಸೆಗಳನ್ನು ಕಾಯಿ ಚೆಟ್ನಿ ಮತ್ತು ತರಕಾರಿ ಸಾಗುವಿನೊಂದಿಗೆ ತಿನ್ನಲು ಮಜವಾಗಿರುತ್ತದೆ.
ಮೃದುವಾದ ಸ್ಪಾಂಜಿನಂತಹ ಸೆಟ್ ದೋಸೆಯನ್ನು ಸಾಂಪ್ರದಾಯಿಕವಾಗಿಯೂ ಮತ್ತು ದಿಢೀರ್ ಆಗಿಯೂ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ.
ಓದ್ಕೋಳ್ಳಿ , ಮಾಡ್ಕೋಳ್ಳಿ, ತಿಂದ್ಕೋಳ್ಳಿ
ಏನಂತೀರೀ?
ಮನದಾಳದ ಮಾತು : ಪ್ರತೀಬಾರಿ ಹೊಟೆಲ್ಲಿಗೆ ಹೋದಾಗ ಮಕ್ಕಳು ಮಸಾಲೇ ದೋಸೆ, ಮಡದಿ ಈರುಳ್ಳೀ ದೋಸೆ ತೆಗೆದುಕೊಂಡರೇ ನಾನು ಮಾತ್ರ ತೆಗೆದುಕೊಳ್ಳೋದು ಸೆಟ್ ದೋಸೆಯನ್ನೇ. ಬಹುಶಃ ಈ ಅಭ್ಯಾಸ ನಮ್ಮ ತಂದೆಯವರಿಂದ ಬಂದ ಬಳುವಳಿ ಅನ್ಸತ್ತೆ. ಅವರೂ ಚಿಕ್ಕವರಿದ್ದಾಗ ಒಂದು ಮಸಾಲೇ ದೋಸೇ ಬದಲು ಒಂದು ಪ್ಲೇಟಿಗೆ ಎರಡು ಕೊಡುವ ಖಾಲೀ ದೋಸೆ ತಿನ್ನುತ್ತಿದ್ದರಂತೆ. ಅವರ ಮಗನಾಗನಾದ ನಾನು ಈ ವಿಷಯದಲ್ಲಿ ಮಾತ್ರ ಅವರಿಗಿಂತ ಸ್ವಲ್ಪ ಮುಂದಾಗಿ ಮೂರು ದೋಸೆ ಕೊಡುವ ಸೆಟ್ ದೋಸೆಗಳನ್ನೇ ಇಷ್ಟ ಪಡೋದು. ಈಗಲೂ ಮೈಸೂರಿನ ಕೆಲವು ಹೋಟೆಲ್ಗಳಲ್ಲಿ ಒಂದು ಪ್ಲೇಟಿಗೆ ನಾಲ್ಕು ಸಸೆಟ್ ದೋಸೆಗಳನ್ನು ಕೊಡುತ್ತಾರೆ. ಅಂತಹ ಹೋಟೆಲ್ಗಳನ್ನು ಹುಡುಕಿ ಹುಡುಕಿ ಕೊಂಡ ಹೋದ ದಿನಗಳು ಕಣ್ಣ ಮುಂದೆ ಬರುತ್ತಿದೆ.