ಅದೊಂದು ಸುಮಾರು 200-300 ಕುಟುಂಬಗಳು ವಾಸವಾಗಿದ್ದಂತಹ ಸಣ್ಣ ಹಳ್ಳಿ. ಬಹುತೇಕ ಕೃಷಿಯನ್ನೇ ಆಧಾರವಾಗಿದ್ದಂತಹ ಕುಟಂಬಗಳು ಅದೇಕೋ ಏನೋ ಪ್ರಕೃತಿ ಮಾತೆಯ ಮುನಿಸಿನಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಸರಿಯಾಗಿ ಮಳೆಯಾಗದೇ ಬೆಳೆಯೂ ಅಷ್ಟಕ್ಕಷ್ಟೇ ಇತ್ತು ಮತ್ತು ಕೆರೆ ಕಟ್ಟೆ ಭಾವಿಗಳೂ ಬರಿದಾಗ ತೊಡಗಿ ಕುಡಿಯಲು ಮತ್ತು ದಿನ ಬಳಕೆಗಾಗಿ ನೀರು ಸಿಗುವುದು ಕಷ್ಟವಾಗ ತೊಡಗಿದಾಗ, ನಿಧಾನವಾಗಿ ಊರಿನ ಯುವಕರು ಸುಮ್ಮನೆ ಊರಿನಲ್ಲಿ ಕೆಲಸವಿಲ್ಲದೇ ಕೂರಲು ಇಷ್ಟ ಪಡದೇ ಹತ್ತಿರದ ಪಟ್ಟಣಗಳಿಗೆ ಗುಳೆ ಹೋಗತೊಡಗಿದರು. ಒಂದಷ್ಟು ಹುಡುಗರು ಅಕ್ಕ ಪಕ್ಕದ ಊರುಗಳ ಗಾರ್ಮೆಂಟ್ಸ್, ಬಾರ್ & ರೆಸ್ಟೋರೆಂಟ್, ಸೆಕ್ಯೂರಿಟಿಗಾರ್ಡ್ಗಳಾಗಿ ಕೆಲಸಕ್ಕೆ ಸೇರಿ ಅಲ್ಪ ಸ್ವಲ್ಪ ಸಂಪಾದಿಸುವುದನ್ನು ಕಂಡ ಬಹುತೇಕ ನಿರುದ್ಯೋಗಿ ಯುವಕರು ಪಟ್ಟಗಳಿಗೆ ಹೋಗುವ ಮೂಲಕ ಅಕ್ಷರಶಃ ಆ ಹಳ್ಳಿ ವಯೋವೃದ್ಧರ ತಾಣವಾಗಿ ಹೋಗಿತ್ತು.
ಅದೊಂದು ಸಂಜೆ ಊರಿನ ಅರಳೀಕಟ್ಟೆಯ ಮೇಲೆ ಕುಳಿತು ಕೊಂಡು ಲೋಕಾಭಿರಾಮವಾಗಿ ಊರಿನ ಕೆಲವರು ಮಾತನಾಡುತ್ತಿದ್ದಾಗ, ಅವರ ಮುಂದೆ ಊರಿನಲ್ಲಿದ್ದ ಪುರಾತನವಾದ ಮತ್ತು ಶಿಥಿಲವಾಗಿದ್ದ ದೇವಸ್ಥಾನದ ಅರ್ಚಕರು ಸಂಜೆಯ ಪೂಜೆಗೆ ದೇವಾಲಯದ ಕಡೆಗೆ ಹೋಗುತ್ತಿದ್ದರು. ಅವರನ್ನು ಕಂಡ ಆ ಹಿರಿಯರು ಗೌರವ ಪೂರ್ವಕವಾಗಿ ಎದ್ದು ನಿಂತು ನಮಸ್ಕರಿಸಿ, ಸ್ವಾಮೀ, ಪ್ರತೀ ದಿನ ನಿಸ್ವಾರ್ಥವಾಗಿ ಮಳೆ, ಚಳಿ, ಗುಡುಗು ಎಂದು ಎಣಿಸದೇ, ತಪ್ಪದೇ ಪೂಜೇ ಮಾಡ್ತಾ ಇದ್ದೀರಿ ನೀವು ಆದರೂ ಆ ಭಗವಂತ ನಮ್ಮ ಊರಿನ ಕಡೆ ಕರುಣೆಯನ್ನೇ ತೋರಿಸಿಲ್ಲವಲ್ಲಾ? ಎಂದು ಮುಗ್ಧತೆಯಿಂದ ಕೇಳಿದರು. ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಆ ಅರ್ಚಕರೂ ಹೌದಪ್ಪಾ ಹೌದು. ಅಂತಹ ಐತಿಹಾಸಿಕ ದೇವಸ್ಥಾನ ಪಾಳು ಬಿದ್ದು ಹೋಗಿದೆ. ದೇವಾಸ್ಥಾನದ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಮಾವಾಸ್ಯೆಗೋ ಇಲ್ವೇ ಪೌರ್ಣಿಮೆಗೋ ಒಮ್ಮೇ ಯಾರೋ ಒಬ್ಬರು ದೇವಸ್ಥಾನಕ್ಕೆ ಪೂಜೆಗೆ ಕೊಡ್ತಾರೆ. ದೇವರಿಗೆ ಪೂಜೆಮಾಡಲು ಹೂವು ಮತ್ತು ಮಂಗಳಾರತಿ ಬೆಳಗುವ ದೀಪಕ್ಕೂ ಎಣ್ಣೆ ಕೊಡುವವರು ಇಲ್ಲ. ಅದರ ಬಗ್ಗೆ ಎಷ್ಟೇ ಹೇಳಿದರೂ ಊರಿನವರಾರೂ ತಲೇನೇ ಕೆಡಿಸಿಕೊಳ್ತಾ ಇಲ್ಲ. ಇಷ್ಟೇಲ್ಲಾ ಆದ್ರೂ ಭಗವಂತ ಕಾಪಡಬೇಕು ಅಂದ್ರೇ ಹೇಗಪ್ಪಾ? ಎಂದು ಹೇಳುತ್ತಲೇ ತಮ್ಮ ಪಾಡಿಗೆ ತಾವು ತಮ್ಮಕರ್ತವ್ಯ ನಿಭಾಯಿಸಲು ಹೊರಟೇ ಹೋದರು.
ಅರ್ಚಕರ ಆ ಅವೇಶಭರಿತಭರಿತ ಮಾತುಗಳು ಒಂದು ಕ್ಷಣ ಊರಿನವರಿಗೆ ಕಸಿವಿಸಿ ಉಂಟು ಮಾಡಿದರೂ, ಸ್ವಲ್ಪ ಹೊತ್ತಿನ ನಂತರ ಊರಿನವರಿಗೂ ಅರ್ಚಕರ ಮಾತಿನಲ್ಲಿಯೂ ಬೆಲೆ ಇದೆ. ಅವರು ಸತ್ಯವನ್ನೇ ಹೇಳುತ್ತಿದ್ದಾರೆ ಎಂದಿನಿಸಿ ಊರ ಪೂರಾ ಡಂಗೂರ ಹೊಡೆಸಿ ಮಾರನೇ ದಿನ ಎಲ್ಲರೂ ದೇವಸ್ಥಾನದ ಅಭಿವೃದ್ಧಿಗೆ ಕುರಿತಂತೆ ಮಾತನಾಡಲು ಪಂಚಾಯಿತಿ ಕರೆದು, ಊರಿನಲ್ಲಿರುವ ದೇವಸ್ಥಾನದ ಸ್ಥಿತಿಗತಿಯನ್ನು ವಿವರಿಸಿ ಅದನ್ನು ಪುನರುಜ್ಜೀವನ ಗೊಳಿಸದ ಹೊರತಾಗಿ ನಮ್ಮ ಊರು ಉದ್ಧಾರವಾಗದು ಅದಕ್ಕಾಗಿ ಪಾಳು ಬಿದ್ದ ದೇವಾಲಯವನ್ನು ಕೆಡವಿ ಅದೇ ಜಾಗದಲ್ಲಿ ಭವ್ಯವಾದ ಹೊಸಾ ದೇವಸ್ಥಾನವನ್ನು ಕಟ್ಟಿಸಬೇಕೆಂದು ಈ ಪಂಚಾಯಿತಿಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕಾಗಿ ಎಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು. ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕು ಎನ್ನುವುದಕ್ಕೆ ಎಲ್ಲರ ಸಹಕಾರವಿದ್ದರೂ ಸದ್ಯಕ್ಕೆ ಎಲ್ಲರ ಹಣಕಾಸಿನ ಪರಿಸ್ಥಿತಿ ಗಂಭೀರವಾಗಿರುವುದರಿಂದ ದೇವಸ್ಥಾನ ಹೇಗೆ ಕಟ್ಟುವುದು ಎಂಬದನ್ನು ಮತ್ತೊಮ್ಮೆ ಊರಿನವರೆಲ್ಲರೊಂದಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರಿಕೊಂಡರು.
ಅದೇ ಸಮಯದಲ್ಲಿ ಊರಿಗೆ ಬಂದಿದ್ದ ಸಿವಿಲ್ ಇಂಜೀನಿಯರ್ ಆಗಿದ್ದ ಆರ್ಚಕರ ಮಗನ ಕಿವಿಗೂ ಈ ವಿಷಯ ತಿಳಿದು ಬಹಳ ಸಂತೋಷವಾಗಿ, ಈ ಮಹತ್ಕಾರ್ಯಕ್ಕೆ ತಾನೇ ಖುದ್ದಾಗಿ ನಿಸ್ವಾರ್ಥವಾಗಿ ಮುಂದಾಳತ್ವ ವಹಿಸುತ್ತೇನೆ. ತಾನೂ ಸ್ವಲ್ಪ ಹಣ ಸಹಾಯ ಮಾಡುವುದಲ್ಲದೇ, ಪಟ್ಟಣದಲ್ಲಿದ್ದ ಕೆಲವು ಹಿತೈಷಿಗಳಿಂದ ಹಣ ಸಹಾಯ ತರುತ್ತೇನೆ ಎಂದಾಗ ಊರಿನ ಮುಖಂಡರೆಲ್ಲರೂ ಸಂತೋಷಗೊಂಡರು. ಅರ್ಚಕರ ಮಗನ ಮಾತಿನಿಂದ ಉತ್ಸಾಹಿತರಾದ ಊರಿನ ಪಟೇಲರು, ಅ ಸ್ಥಳದಲ್ಲೇ ದೇವಸ್ಥಾನದ ಜೀರ್ಣೊದ್ಧಾರಕ್ಕೆ ಒಂದು ಉತ್ತಮವಾದ ಮೊತ್ತವೊಂದನ್ನು ಮೊದಲ ದೇಣಿಗೆಯಾಗಿ ಕೊಟ್ಟೇ ಬಿಟ್ಟರು. ಅವರು ಕೊಟ್ಟದ್ದು ಉತ್ತಮ ಮೊತ್ತವಾಗಿದ್ದರೂ, ಊರಿನ ಜನಾ ಹೇ!! ಇದೇನೂ ನಮ್ಮ ಪಟೇಲರಿಗೆ ಇನ್ನೂ ಹತ್ತು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿ ಇದೇ. ನಮ್ಮೆಲ್ಲರ ಬಳಿ ಹಣ ಕೇಳುವುದು ಬಿಟ್ಟು ಆವರೇ ಸ್ವಂತ ಖರ್ಚಿನಲ್ಲಿಯೇ ಭವ್ಯವಾದ ದೇವಸ್ಥಾನ ಕಟ್ಟಿಸಿಬಿಡಬಹುದು ಎಂದು ಮನಸ್ಸಿನಲ್ಲಿಯೇ ಯೋಚಿಸಿಕೊಂಡರೂ ಜೋರಾಗಿ ಹೇಳಲು ಧೈರ್ಯ ಸಾಲದೇ ಪರಸ್ಪರ ಪಿಸು ಪಿಸುಗುಟ್ಟಿದ್ದು ಪಟೇಲರ ಕಿವಿಗೆ ಬಿದ್ದರೂ ಅದನ್ನು ಕೇಳದರೂ ಕೇಳಿಸಿಕೊಳ್ಲದ ಹಾಗಿ ಸುಮ್ಮನಾದರು ಪಟೇಲರು.
ಅರ್ಚಕರ ಮಗ, ಪರಿಚಯವಿದ್ದ ಒಳ್ಳೆಯ ದೇವಾಸ್ಥಾನ ಕಟ್ಟುವ ವಾಸ್ತುತಜ್ಞರನ್ನು ಭೇಟಿ ಮಾಡಿ ದೇವಾಲಯದ ನೀಲನಕ್ಷೆ ತಯಾರಿಸಿ, ತಮ್ಮ ತಂದೆಯವರಿಂದ ಒಳ್ಳೆಯ ಮಹೂರ್ತ ಒಂದು ನಿರ್ಧರಿಸಿ ಊರಿನ ಜನರ ಸಮ್ಮುಖದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಆರಂಭಿಸಿಯೇ ಬಿಟ್ಟ. ಸ್ಥಳೀಯ ಕೆಲಸಗಾರರನ್ನೇ ಬಳೆಸಿಕೊಂಡು ಮೂಲವಿಗ್ರಹವನ್ನು ಜಲಸ್ಥಂಭನ ಮಾಡಿ ಹಳೆಯ ದೇವಸ್ಥಾನವನ್ನು ಕೆಡವಿ, ಪಟೇಲರು ಕೊಟ್ಟ ಮೂಲಧನವನ್ನೇ ಆಧಾರವಾಗಿಟ್ಟು ಕೊಂಡು ಭವ್ಯವಾದ ದೇವಸ್ಥಾನಕ್ಕೆ ಎತ್ತರವಾದ ಅಡಿಪಾಯವನ್ನೇ ಹಾಕಿಬಿಟ್ಟ. ದೇವಸ್ಥಾನದ ಕೆಲಸ ಭರದಿಂದ ಸಾಗುತ್ತಿದ್ದದ್ದನ್ನು ನೋಡಲು ಊರಿನವರಲ್ಲದೇ ಅಕ್ಕ ಪಕ್ಕದ ಊರಿನ ಹಿರಿಯರೆಲ್ಲರು ಬರತೊಡಗಿದರು. ಊರಿನ ರೈತರೊಬ್ಬರು ತಮ್ಮ ಜಮೀನಿನಲ್ಲಿದ್ದ ಬಂಡೆಯನ್ನು ದೇವಸ್ಥಾನ ಕಟ್ಟಲು ಉಪಯೋಗಿಸಿಕೊಳ್ಳಿ ಎಂದು ಹೇಳಿದರು. ಅವರು ಹಾಗೆ ಹೇಳಿದ್ದೇ ತಡಾ ಊರಿನಲ್ಲಿದ್ದ ಭೋವಿಗಳು ಆ ಬಂಡೆಯನ್ನು ದೇವಸ್ಥಾನಕ್ಕೆ ಅಗತ್ಯಕ್ಕೆ ತಕ್ಕಂತೆ ಒಡೆದುಕೊಡುವ ಜವಾಬ್ಧಾರಿ ನಮ್ಮದು. ದೇವಸ್ಥಾನ ಕಟ್ಟಲು ದಾನ ಸಾಧ್ಯವಾಗದಿದ್ದರೂ ನಮ್ಮ ಶ್ರಮದಾನ ಮಾಡುತ್ತೇವೆ ಎಂದು ಮುಂದೆ ಬಂದರು. ಅದರಿಂದ ಪ್ರಭಾವಿತರಾದ ಮತ್ತೊಬ್ಬರು ದೇವಸ್ಥಾನಕ್ಕೆ ಬೇಕಾಗುವ ಮರಮುಟ್ಟುಗಳನ್ನು ತಾನು ಕೊಡುತ್ತೀನಿ ಎಂದರೆ, ಆ ಮರಮುಟ್ಟುಗಳನ್ನು ಬಳೆಸಿ ಕಿಟಕಿ ಬಾಗಿಲುಗಳನ್ನು ನಿರ್ಮಿಸಿಕೊಡುವ ಜವಾಬ್ಧಾರಿ ನಮ್ಮದು ಎಂದು ಊರಿನ ಬಡಗಿಗಳು ಒಪ್ಪಿಕೊಂಡರು. ಹೀಗೆ ಊರಿನ ಆನೇಕರು ತಮ್ಮ ತಮ್ಮ ಕುಲ ಕಸುಬಿನ ಅನುಗುಣವಾಗಿ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಭಾಗಿಗಳಾಗತೊಡಗಿದರು.
ನೋಡ ನೋಡುತ್ತಿದ್ದಂತೆಯೇ ದೇವಸ್ಥಾನದ ಕೆಲಸ ಅಂದು ಕೊಂಡಿದ್ದಕ್ಕಿಂತಲೂ ಸರಾಗವಾಗಿ ಆಗತೊಡಗಿತು. ದೇವಸ್ಥಾನ ಕಟ್ಟಲು ಸಾಕಷ್ಟು ನೀರು ಬೇಕು. ದೇವಸ್ಥಾನದ ಎದುರಿಗಿದ್ದ ಕಲ್ಯಾಣಿಯಲ್ಲಿ ಕಸ ಕಡ್ಡಿ ಹೂಳು ತುಂಬಿಕೊಂಡು ಎಂದೋ ಪಾಳುಬಿದ್ದು ಹೋಗಿತ್ತು. ಈ ಕಲ್ಯಾಣಿಯ ಕಸ. ಮತ್ತು ಹೂಳನ್ನು ತೆಗೆದು ನೀರಿನ ಸೆಲೆಯನ್ನು ಬಿಡಿಸಿದಲ್ಲಿ ನೀರು ಬರಬಹುದು ಎಂದು ಅರ್ಚಕರ ಮಗ ಹೇಳಿದ್ದನ್ನು ಕೇಳಿದ ಊರಿನ ಯುವಕರು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ತಮ್ಮ ಗೆಳೆಯರಿಗೂ ಈ ವಿಷಯ ತಿಳಿಸಿ ಎಲ್ಲರೂ ಒಂದು ವಾರದ ಮಟ್ಟಿಗೆ ಊರಿಗೆ ಬಂದು ದೇವಸ್ಥಾನದ ಕೆಲಸದಲ್ಲಿ ತೊಡಗಿಕೊಳ್ಳಬೇಕೆಂದು ಕೋರಿಕೊಂಡಿದ್ದನ್ನು ಮನ್ನಿಸಿ ಅನೇಕರು ಊರುಗೆ ಬಂದು ಎಲ್ಲರೂ ಒಗ್ಗಟ್ಟಾಗಿ ಕಲ್ಯಾಣಿಯ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಕೇವಲ ಮೂರ್ನಾಲ್ಕು ದಿನಗಳಲ್ಲಿಯೇ ಆ ವಿಶಾಲವಾದ ಕಲ್ಯಾಣಿಯಲ್ಲಿದ್ದ ಕಸಕಡ್ಡಿಗಳಲ್ಲವನ್ನೂ ತೆಗೆದು ಅದರಲ್ಲಿದ್ದ ಹೂಳು ಉತ್ತಮವಾಗಿದ್ದ ಗೋಡು ಮಣ್ಣು( ಗೊಬ್ಬರ) ಆಗಿದ್ದರಿಂದ ಅಕ್ಕ ಪಕ್ಕದ ಜಮೀನಿನವರು ಕೂಡಲೇ ತಮ್ಮ ತಮ್ಮ ಜಮೀನುಗಳಿಗೆ ಸಾಗಿಸುತ್ತಿದ್ದಾಗಲೇ, ಇದ್ದಕ್ಕಿದ್ದಂತೆಯೇ ಪಾಳು ಬಿದ್ದಿದ್ದ ಕಲ್ಯಾಣಿಯಲ್ಲಿ ನೀರು ಜಿನುಗಿದ್ದದ್ದನ್ನು ಕಂಡ ಕೂಡಲೇ ಎಲ್ಲರಿಂದಲೂ ಹರ್ಷೋಧ್ಗಾರ. ಊರ ಹೆಂಗಳೆಯರೆಲ್ಲರೂ ಒಗ್ಗಟ್ಟಾಗಿ ಬಂದು ಚಿಮ್ಮಿದ ನೀರಿಗೆ ಗಂಗೇ ಪೂಜೆ ಮಾಡಿದ ಬಳಿಕ ಎಲ್ಲರೂ ಮತ್ತೇ ಕಲ್ಯಾಣಿ ಸ್ವಚ್ಛತಾ ಕೆಲಸ ಮುಂದುವರೆಸಿದ ಪರಿಣಾಮ ಬತ್ತಿ ಹೋಗಿದ್ದ ಕಲ್ಯಾಣಿಯಲ್ಲಿಯೂ ನೀರನ್ನು ಕಾಣುವಂತಾಯಿತು .
ಒಂದು ಕಡೆ ಊರಿನವರೆಲ್ಲರೂ ಸ್ವಯಂಪ್ರೇರಿತರಾಗಿ ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡುವುದೋ ಅಥವಾ ಶ್ರಮದಾನ ಮಾಡುವ ಮುಖಾಂತರ ಕೆಲವೇ ಕೆಲವು ತಿಂಗಳಲ್ಲಿ ಪಾಳು ಬಿದ್ದಿದ್ದ ಜಾಗದಲ್ಲಿ ಎಲ್ಲರ ತುಂಬು ಹೃದಯದ ಸಹಕಾರದಿಂದ ಭವ್ಯವಾದ ದೇವಸ್ಥಾನ ಮತ್ತು ಅದರ ಜೊತೆಗೆ ವಿಶಾಲವಾದ ಕಲ್ಯಾಣಿ ಸಿದ್ಧವಾಗಿದ್ದ ವಿಷಯ ನಾಡಿನ ಪ್ರಸಿದ್ಧ ಮಠಾಧೀಶರ ಕಿವಿಗೆ ಬಿದ್ದು ಅವರೂ ಸಹಾ ತಮ್ಮ ಶಿಷ್ಯರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಿತವಾಗಿದ್ದ ದೇವಾಲಯ ನೋಡಿ ಸಂತೋಷಗೊಂಡು ತಾವೇ ಖುದ್ದಾಗಿ ದೇವಸ್ಥಾನದ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನೆ ಮಾಡಿಕೊಡುವುದಾಗಿ ಹೇಳಿ ಅದಕ್ಕೆ ಒಂದು ಒಳ್ಳೆಯ ಮಹೂರ್ತವನ್ನು ತಿಳಿಸಿಯೇ ಬಿಟ್ಟರು.
ಊರಿನವರು ಉತ್ತಮವಾದ ಗುರಿಯೊಂದಿಗೆ ಮಾಡಲು ಹೊರಟ ಕೆಲಸಕ್ಕೆ ಗುರುಗಳ ಆಶೀರ್ವಾದವೂ ಸಿಕ್ಕಿದ್ದರಿಂದ ಸಂತಸಗೊಂಡ ಊರಿನವರೆಲ್ಲರೂ ದೇವಸ್ಥಾನದ ಉಧ್ಘಾಟನಾ ಸಮಾರಂಭಕ್ಕೆ ಸಿದ್ಧತೆ ನಡೆಸಿ, ಊರಿನವವರೆಲ್ಲರೂ ಅಲ್ಲದೇ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗರನ್ನೂ ವಿಶೇಷವಾಗಿ ಆಹ್ವಾನಿಸಿ ಬಹಳ ಅದ್ದೂರಿಯಿಂದ ಗುರುಗಳ ಸಮ್ಮುಖದಲ್ಲಿ ದೇವಸ್ಥಾನದ ಉಧ್ಘಾಟನೆ ಮಾಡಿಯೇ ಬಿಟ್ಟರು. ನೂತನವಾದ ದೇವಸ್ಥಾನ ನೋಡಲು ಬಂದಿದ್ದ ಎಲ್ಲಾ ಭಕ್ತಾದಿಗಳಿಗೂ ಭೋಜನದ ವ್ಯವಸ್ಥೆಗೆ ಊರಿನವರೆಲ್ಲರೂ ತಮ್ಮ ತಮ್ಮ ಮನೆಗಳಿಂದ ದವಸ ಧಾನ್ಯ, ತರಕರಿಗಳು, ತೆಂಗಿನ ಕಾಯಿ ತಂದು ಕೊಟ್ಟಿದ್ದಲ್ಲದೇ, ಊರಿನ ಎಲ್ಲಾ ಹೆಂಗಸರು ತರಕಾರಿ ಹೆಚ್ಚುವುದು, ಕಾಯಿ ತುರಿದುಕೊಡುವುದು, ಕುಟ್ಟುವುದು ರುಬ್ಬುವುದನ್ನು ಮಾಡಿಕೊಟ್ಟರೆ, ಗಂಡಸರೆಲ್ಲರೂ ಸೇರಿ ನಳ-ಭೀಮರಂತೆ ಪಾಕ ಪ್ರವೀಣರಾಗಿ ಅಡುಗೆ ತಯಾರಿಸಿದ್ದರು. ದೊಡ್ಡವರು ಮಾಡಿಟ್ಟಿದ್ದ ಅಡುಗೆಯನ್ನು ಯುವಕರು ಮತ್ತು ಮಕ್ಕಳು ಒಂದು ಚೂರೂ ಚೆಲ್ಲದಂತೆ ವಿತರಿಸುವ ಜವಾಬ್ಧಾರಿಯನ್ನು ಹೊತ್ತಿಕೊಂಡು ನ ಭೂತೋ ನಭವಿಷ್ಯತಿ ಎನ್ನುವ ಮೂಲಕ ಅಚ್ಚುಕಟ್ಟಾಗಿ ನಿಭಾಯಿಸಿದರು. ಅಂದು ಊರಿನಲ್ಲಿ ಬಡವ ಬಲ್ಲಿದ, ಮೇಲ್ಜಾತಿ, ಕೀಳ್ಜಾತಿ ಎನ್ನುವ ಯಾವುದೇ ಬೇಧಭಾವವಿಲ್ಲದೇ ಎಲ್ಲರೂ ಇದು ನಮ್ಮ ದೇವಸ್ಥಾನ ಮತ್ತು ನಾವೆಲ್ಲರೂ ಆ ತಾಯಿಯ ಭಕ್ತರು ಎಂಬತೆ ಸಂಭ್ರಮಿಸಿ ಎಲ್ಲರೂ ಬಾಯಿಯ ಮೇಲೆ ಕೈಯಿಡುವಂತೆ ಮಾಡಿ ತೋರಿಸಿ ಬಂದವರೆಲ್ಲರ ಮೆಚ್ಚುಗೆ ಗಳಿಸಿದರು.
ದೇವಸ್ಥಾನ ಉದ್ಘಾಟನೆ ಆದ ನಂತರ ಊರಿಗೆ ಬಂದ ನೆಂಟರಿಷ್ಟರು, ಕೆಲಸಬಿಟ್ಟು ದೇವಸ್ಥಾನದ ಕೆಲಸಕ್ಕಾಗಿ ಪಟ್ಟಣದಿಂದ ಬಂದ ಯುವಕರುಗಳು ತಮ್ಮ ತಮ್ಮ ಕೆಲಸಕ್ಕೆ ಹೋರಟು ಬಿಟ್ಟರು. ದೇವಸ್ಥಾನದ ಅರ್ಚಕರು ಶ್ರದ್ಧೆಯಿಂದ 47ದಿನಗಳ ಕಾಲ ಮಂಡಲ ಪೂಜೆಯನ್ನು ನೆರವೇರಿಸಿ 48ನೇ ದಿನ ಮತ್ತದೇ ಅದ್ದೂರಿಯಾಗಿ ಹೋಮ ಹವನಗಳನ್ನು ನೆರವೇರಿಸಿ ಸಂಜೆ ಎಲ್ಲರೂ ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತು ದೇವಸ್ಥಾನ ಜೀರ್ಣೋದ್ಧಾರ ಕೆಲಸದ ಅವಲೋಕನ ಮಾಡ ತೊಡಗಿದರು. ಆಗ ಊರಿನ ಪಟೇಲರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೂಲ ಪ್ರೇರಕರಾದ ಅರ್ಚಕರನ್ನು ಮತ್ತು ಅವರ ಮಗನ ಸೇವೆಯನ್ನು ಸ್ಮರಿಸಿ ಅದಲ್ಲದೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೂ ವಂದನೆ ಸಲ್ಲಿಸಿದರು. ಹಾಗೇ ಮಾತನ್ನು ಮುಂದುವರಿಸಿ ಇಂತಹ ಭವ್ಯವಾದ ದೇವಸ್ಥಾನ ಕಟ್ಟಲು ಕೋಟ್ಯಾಂತರ ರೂಪಾಯಿ ಹಣ ಖರ್ಚಾಗುತ್ತದೆ. ಆದರೆ ನಮ್ಮೀ ದೇವಸ್ಥಾನ ಇಷ್ಟು ಅಚ್ಚು ಕಟ್ಟಾಗಿ ಭವ್ಯವಾಗಿ ತಲೆ ಎತ್ತಲು ಎಲ್ಲರ ಶ್ರಮದಾನ ಮತ್ತು ಕೈಂಕರ್ಯವೇ ಮೂಲ ಕಾರಣ. ನಿಜವಾಗಿಯೂ ಹೇಳಬೇಕೆಂದರೆ ಈ ದೇವಸ್ಥಾನಕ್ಕೆ ಖರ್ಚಾದ ಹಣವನ್ನು ನಾನೋಬ್ಬನೇ ಕಟ್ಟುವಷ್ಟು ಶಕ್ತಿಯನ್ನು ಆ ತಾಯಿ ನನಗೆ ಖಂಡಿತವಾಗಿಯೂ ಕೊಟ್ಟಿದ್ದಾಳೆ. ಆದರೆ ನಾನೋಬ್ಬನೇ ಖರ್ಚುಮಾಡಿ ದೇವಸ್ಥಾನ ಕಟ್ಟಿಸಿದ್ದಲ್ಲಿ ಅದು ಕೇವಲ ನಮ್ಮ ಕುಟಂಬದ ದೇವಸ್ಥಾನ ಎಂದೆನಿಸಿ ಬಹುಶಃ ಅದು ಇಷ್ಟರ ಮಟ್ಟಿಗೆ ಭವ್ಯವಾಗಿ ತಲೆ ಎತ್ತುತ್ತಿತ್ತು ಎಂದು ನನಗೆ ಅನಿಸುವುದಿಲ್ಲ. ಏಕೆಂದರೆ ಆಳು ಮಾಡಿದ್ದು ಹಾಳು. ಮಗ ಮಾಡಿದ್ದು ಮಧ್ಯಮ ಮತ್ತು ತಾ ಮಾಡಿದ್ದು ಉತ್ತಮ ಎನ್ನುವಂತೆ ಎಲ್ಲರೂ ಇದು ತಮ್ಮದೇ ದೇವಸ್ಥಾನ ಎನ್ನುವಂತೆ ತನು ಮನ ಧನದೊಂದಿಗೆ ಶ್ರಮದಾನ ಮಾಡಿದ್ದರಿಂದಲೇ ಇಷ್ಟು ಭವ್ಯವಾದ ಕಟ್ಟಲು ಸಾಧ್ಯವಾಗಿದೆ. ಸೇವೆ ಎಂದರೆ ಕೇವಲ ಹಣದಿಂದ ಮಾತ್ರವೇ ಮಾಡಬೇಕು ಎಂದೇನಿಲ್ಲ ಮತ್ತು ಮಾಡಿದ ಸೇವೆಯನ್ನು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯೂ ಇಲ್ಲ. ಇಲ್ಲಿ ಯಾರು? ಏನೇನು? ಎಷ್ಟೆಷ್ಟು? ಹೇಗೆ ಸೇವೆ ಮಾಡಿದರು ಅನ್ನೋದರ ಕುರಿತು ಚರ್ಚಿಸಿದರೆ, ಅವರು ಮಾಡಿದ ಸೇವೆಗೆ ಅಪಮಾನ ಮಾಡಿತಂತೆ. ಅವರವರು ಮಾಡಿದ ಸೇವೆ ಅವರಿಗೇ ಮತ್ತು ಭಗವಂತನಿಗೆ ಗೊತ್ತಾದರೆ ಸಾಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯದ ಹಾಗೆ ಮಾಡಿದರೇನೇ ಕೈಂಕರ್ಯ/ಸೇವೆ ಅನ್ನೋದು. ಹಾಗಾಗಿ ಇನ್ನು ಮುಂದೆ ಈ ದೇವಸ್ಥಾನ ಸಾರ್ವಜನಿಕರ ಸ್ವತ್ತು. ಇಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ಯಥಾಶಕ್ತಿ ಪೂಜಾಕಾರ್ಯಗಳನ್ನು ಸಲ್ಲಿಸ ಬಹುದಾಗಿದೆ ಎಂದು ತಿಳಿಸಿದಾಗ ಎಲ್ಲರ ಮನಸ್ಸಿನಲ್ಲಿಯೂ ಮತ್ತು ಮುಖದಲ್ಲಿಯೂ ಒಂದು ರೀತಿಯ ಸಾರ್ಥಕತೆ ಮೂಡಿತ್ತು.
ಭಕ್ತರ ಈ ಕೈಂಕರ್ಯಕ್ಕೆ ಮೆಚ್ಚಿಯೋ ಅಥವಾ ಕಾಕತಾಳೀಯವೋ ಎಂಬಂತೆ ದೇವಸ್ಥಾನ ಕಟ್ಟಿದ ಕೆಲವೇ ಕೆಲವು ದಿನಗಳಲ್ಲಿ ಅತ್ಯುತ್ತಮವಾಗಿ ಮಳೆಯಾಗಿ ಕೆರೆ ಕಟ್ಟೆಗಳೆಲ್ಲವೂ ತುಂಬಿ ಹೋಗಿದ್ದ ಪರಿಣಾಮ ಕೃಷಿ ಚಟುವಟಿಕೆಗಳೆಲ್ಲಾವೂ ಗರಿಗೆದರಿತು, ಕಲ್ಯಾಣಿಯಿಂದ ತೆಗೆದಿದ್ದ ಫಲವತ್ತಾದ ಗೋಡು ಮಣ್ಣಿನಿಂದ ಅತ್ಯುತ್ತಮವಾದ ಫಸಲೂ ಬಂದಿತು. ಪಟ್ಟಣಕ್ಕೆ ವಲಸೆ ಹೋಗಿದ್ದ ಯುವಕರೆಲ್ಲರೂ ಒಬ್ಬಬ್ಬರಾಗಿಯೇ ಊರಿಗೇ ಹಿಂದಿರುಗಿ ಇಡೀ ಊರಿಗೆ ಊರೇ ನೆಮ್ಮೆದಿಯ ಬದುಕನ್ನು ಕಾಣುವಂತಾಯಿತು.
ಸದ್ಯದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕೊರೋನಾ ಎಂಬ ಮಹಾಮಾರಿ ಪ್ರಪಚವನ್ನೇ ಆವರಿಸಿಕೊಂಡು ದೇಶ ದೇಶಗಳೇ ಲಾಕ್ ಡೌನ್ ಆಗಿ ಅರ್ಥಿಕ ಪರಿಸ್ಥಿತಿಯೆಲ್ಲವೂ ಸ್ಥಬ್ಧವಾಗಿ ಹೋಗಿ ಒಂದು ರೀತಿಯ ಕ್ಷಾಮವೇ ಬಂದೊದಗಿದೆ. ನಮ್ಮ ಸುತ್ತ ಮುತ್ತಲೂ ಲಕ್ಷಾಂತರ ಜನ ಒಂದು ಹೊತ್ತು ಊಟವಿಲ್ಲದೇ ಒದ್ದಾಡುತ್ತಿದ್ದಾರೆ. ಹಾಗಾಗಿ ಅಂದು ಆ ಊರಿನ ಇಡೀ ಜನರು ಒಗ್ಗೂಡಿ ತಮ್ಮ ತಮ್ಮ ಕೈಲಾದ ಮಟ್ಟಿಗೆ ತನು ಮನ ಧನ ಕೈಂಕರ್ಯ ಮಾಡಿದ್ದರಿಂದ ಊರು ನೆಮ್ಮದಿಯ ಬದುಕನ್ನು ಕಾಣುವಂತಾಯಿತೋ ಹಾಗೆಯೇ ಇಂದೂ ಸಹಾ ಎಲ್ಲರೂ ಸಹಾ ಅವಶ್ಯಕತೆ ಇದ್ದವರಿಗೆ ಯಾವುದೇ ರೀತಿಯಲ್ಲಾದರೂ ನಮ್ಮ ಕೈಲಾದ ಸಹಾಯ ಮಾಡೋಣ ಈ ಮಹಾಮಾರಿಯಿಂದಾದ ಆರ್ಥಿಕ ದುಸ್ಥಿತಿಯಿಂದ ಹೊರಬಂದು ನೆಮ್ಮದಿಯ ಬದುಕನ್ನು ಕಾಣುವಂತಾಗೋಣ.
ಏನಂತೀರೀ?
ಸೂಚನೆ: ಅಂತರ್ಜಾಲದಿಂದ ನಕಲು ಮಾಡಿದ ಸಾಂದರ್ಭಿಕ ಚಿತ್ರಗಳು