ಬೆಳಿಗ್ಗೆ ತಿಂಡಿಗೆ ದೋಸೆ ಮಾಡಿರ್ತೀರೀ. ದೋಸೆ ಹಿಟ್ಟು ಇನ್ನೂ ಹಾಗೆಯೇ ಉಳಿದಿರುತ್ತದೆ. ಸಂಜೆನೂ ಅದೇ ಹಿಟ್ಟಿನಲ್ಲಿ ದೋಸೇ ಮಾಡಿದ್ರೇ ಮನೆಯವರೆಲ್ಲರೂ ಬೆಳಿಗ್ಗೆನೂ ದೋಸೇ ಈಗಲೂ ದೋಸೇನಾ ಅಂತಾ ತಿನ್ನಲು ಮೂಗು ಮುರಿತಾರೆ. ಹಾಗಂತ ಈಗಿನ ಪರಿಸ್ಥಿತಿಯಲ್ಲಿ ಅ ದೋಸೆ ಹಿಟ್ಟನ್ನು ಬಿಸಾಡಲೂ ಮನಸ್ಸು ಬರುವುದಿಲ್ಲ. ಅದಕ್ಕೇ ಅಂತಾನೇ, ಅದೇ ದೋಸೆ ಹಿಟ್ಟಿನಲ್ಲಿ ರುಚಿಯಾದ ಮತ್ತು ಆಕರ್ಷಣೀಯವಾದ ಪಡ್ಡು/ ಗುಳಿಯಪ್ಪ/ ಗುಂತ ಪೊಂಗಣಾಲು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.
ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ಪಡ್ಡು/ ಗುಳಿಯಪ್ಪ/ ಗುಂತ ಪೊಂಗಣಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ದೋಸ ಹಿಟ್ಟು 10-12 ಸೌಟು
- ಉದ್ದಿನ ಬೇಳೆ 1/2 ಚಮಚ
- ಕಡಲೇ ಬೇಳೆ 1/2 ಚಮಚ
- ಸಾಸಿವೆ 1/4 ಚಮವ
- ಕತ್ತರಿಸಿದ ಮಧ್ಯಮ ಗಾತ್ರದ ಈರುಳ್ಳಿ- 2
- ಕತ್ತರಿಸಿದ ಹಸೀಮೆಣಸಿನಕಾಯಿ ೩-4
- ತುರಿದ ಶುಂಠಿ 1 ಚಮಚ
- ಕತ್ತರಿಸಿದ ಜೊತ್ತಂಬರಿ ಸೊಪ್ಪು. 1 ಚಮಚ
- ಕರಿಬೇವು ಎರಡು ಕಡ್ಡಿ
- ಅಡುಗೆ ಎಣ್ಣೆ 2-3 ಚಮಚ
- ಚಿಟಿಕೆಯಷ್ಟು ಇಂಗು
- ರುಚಿಗೆ ತಕ್ಕಷ್ಟು ಉಪ್ಪು
ಪಡ್ಡು/ ಗುಳಿಯಪ್ಪ/ ಗುಂತ ಪೊಂಗಣಾಲು ತಯಾರಿಸುವ ವಿಧಾನ
- ಒಂದು ಅಗಲವಾದ ಪಾತ್ರೆಯಲ್ಲಿ ದೋಸೆ ಹಿಟ್ಟನ್ನು ಹಾಕಿಕೊಂಡು, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುವಿ ಕೊಳ್ಳಬೇಕು
- ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಅದು ಚಟ ಪಟ ಸಿಡಿದ ನಂತರ ಉದ್ದಿನ ಬೇಳೆ, ಕಡಲೇ ಬೇಳೆ ಹಾಕಿ ಕಂದು ಬಣ್ಣ ಬರುವ ವರೆಗೂ ಹುರಿದು ಕೊಂಡು, ಬಾಣಲೆಗೆ ಕರಿಬೇವು, ಇಂಗು,ತುರಿದ ಶುಂಠಿ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಜೊತೆಗೆ ಸ್ವಲ್ಪ ಉಪ್ಪುನ್ನು ಸೇರಿಸಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವ ತನಕ ಹುರಿದುಕೊಳ್ಳಬೇಕು.
- ಸಿದ್ಧ ಪಡಿಸಿಟ್ಟು ಕೊಂಡಿದ್ದ ದೋಸೆ ಹಿಟ್ಟಿಗೆ ಒಗ್ಗರಣೆಯ ಮಿಶ್ರಣ ಮತ್ತು ಕತ್ತರಿಸಿದ ಜೊತ್ತಂಬರೆ ಸೊಪ್ಪನ್ನು ಬೆರೆಸಿ ಚೆನ್ನಾಗಿ ಗೊಟಾಯಿಸಿಕೊಳ್ಳ ಬೇಕು
- ಈಗ ಪಡ್ಡು ಕಾವಲಿಯನ್ನು ಒಲೆಯ ಮೇಲಿಟ್ಟು ಅದಕೆ ಎಣ್ಣೆ ಸವರಿ, ಪ್ರತಿಯೊಂದು ಗುಳಿ ತುಂಬುವಷ್ಟು ಹಿಟ್ಟನ್ನು ಹಾಕಿ, ಅದರ ಮೇಲೆ ತಟ್ಟೆಯೊಂದನ್ನು ಮುಚ್ಚಿ ಮೂರ್ನಾಲ್ಕು ನಿಮಿಷಗಳಷ್ಟು ಬೇಯಿಸಿ ಪಡ್ಡು ಉಬ್ಬಿ ಸ್ವಲ್ಪ ಬಾಯಿ ಬಿರಿದಾದ ನಂತರ, ಕಡ್ದಿಯಿಂದಲೋ ಅಥವಾ ಚಮಚದಿಂದಲೂ ಆ ಪಡ್ಡುಗಳನ್ನು ಮಗುಚಿ ಹಾಕಿ, ಪುನಃ ಮೂರ್ನಾಲ್ಕು ನಿಮಿಷಗಳಷ್ಟು ಎರಡೂ ಕಡೆಯೂ ಸಮ ಪ್ರಮಾಣದಲ್ಲಿ ಬೇಯಿಸಿದರೆ, ಬಿಸಿ ಬಿಸಿಯಾದ, ರುಚಿ ರುಚಿಯಾದ ಆಕರ್ಷಣೀಯವಾದ ಪಡ್ಡು ಸಿದ್ದ,
ಈ ಬಿಸಿ ಬಿಸಿಯಾದ ಪಡ್ಡನ್ನು,ಕಾಯಿ ಕಾಯಿ ಚಟ್ನಿಯ ಜೊತೆ ಸವಿಯಲು ಬಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳ್ಳಿ , ಮಾಡ್ಕೋಳ್ಳಿ, ತಿಂದ್ಕೋಳ್ಳಿ
ಏನಂತೀರೀ?
ಮನದಾಳದ ಮಾತು : ಮನದಾಳದ ಮಾತು : ಈಗ ಬಹುತೇಕ ಹೋಟೆಲ್ಗಳಲ್ಲಿ ಸಂಜೆ ಹೊತ್ತು ಪಡ್ಡು ದೊರಕುತ್ತವೆ. ಅದದಲ್ಲಿ ಅವೆಲ್ಲವೂ ಎಣಿಸಿದ ಕಜ್ಜಾಯದ ರೂಪದಲ್ಲಿ ಪ್ಲೇಟ್ ಲೆಖ್ಖದಲ್ಲಿ ಇರುವುದರಿಂದ, ಹಣ ಖರ್ಖಾಗುತ್ತದೇ ಅಂತಾ ಬಾಯಿ ಚಪಲವನ್ನು ಹತ್ತಿಕಬೇಕಾಗುತ್ತದೆ ಮತ್ತು ಮಕ್ಕಳಿಗೂ ತಿಂದ ಸಮಾಧಾನವಿರುವುದಿಲ್ಲ. ಅದಕ್ಕೇ ಮನೆಯಲ್ಲಿಯೇ ಅಚ್ಚುಕಟ್ಟಾಗಿ ಶುಚಿರುಚಿಯಾಗಿ ಮನಸ್ಸಿಗೆ ಮತ್ತು ಹೊಟ್ಟೆಗೆ ಬೇಕಾಗುವಷ್ಟು ಮಾಡಿ ಕೊಂಡು ತಿನ್ನೋಣ. ಮಕ್ಕಳ ಶಾಲಾ ಊಟದ ಡಬ್ಬಿಗೆ ಒಣಗಿ ಹೋದ ದೋಸೆ ಹಾಕಿ ಕೊಡುವ ಬದಲು ಈ ಪಡ್ಡುಗಳ ಜೊತೆಗೆ ಒಳ್ಳೆಯ ಟೊಮ್ಯಾಟೋ ಕೆಚೆಪ್ ಕಾಕಿ ಕಳುಹಿಸಿ ಕೊಟ್ಟು ನೋಡಿ ಮಕ್ಕಳು ಹೇಗೆ ಸವಿಯುತ್ತಾರೆ ಅಂತ.