ದಕ್ಷಿಣ ಭಾರತೀಯರಿಗೆ ಅದರಲ್ಲೂ ಕರ್ನಾಟಕ, ತಮಿಳು ನಾಡು ಮತ್ತು ಅವಿಭಜಿತ ಆಂಧ್ರ ಪ್ರದೇಶದವರ ಬಹುತೇಕ ಸಭೆ ಸಮಾರಂಭಗಳಿರಲಿ ಅಥವಾ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಹುಗ್ಗಿಯನ್ನು ಬಳೆಸಲಾಗುತ್ತದೆ. ಧನುರ್ಮಾಸದಲ್ಲಂತೂ ಇಡೀ ಒಂದು ತಿಂಗಳು ಪೂರ್ತಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿಯೂ ಸಿಹಿ ಇಲ್ಲವೇ ಖಾರ ಹುಗ್ಗಿ (ಪೊಂಗಲ್)ಯದೇ ಭರಾಟೆ. ಇಂತಹ ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)ಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ.
ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು
ಖಾರ ಹುಗ್ಗಿ ತಯಾರಿಸಲು ಬೇಕಾದ ಸಾಮಗ್ರಿಗಳು
- ಅಕ್ಕಿ – 3 ಕಪ್
- ಹೆಸರು ಬೇಳೆ – 1 ಕಪ್
- ತುಪ್ಪ – 2-3 ಚಮಚ
- ಗೊಡಂಬಿ – 8-10
- ಜೀರಿಗೆ- 1 ಚಮಚ
- ಕಾಳು ಮೆಣಸು- 1 ಚಮಚ
- ಸಾಸಿವೆ-1/4 ಚಮಚ
- ಚಿಟಿಕೆ ಅರಿಶಿನ
- ತುರಿದ ಕೊಬ್ಬರಿ/ಕಾಯಿ ತುರಿ- 1 ಕಪ್
- ಕತ್ತರಿಸಿದ ಹಸೀ ಮಣಸಿನಕಾಯಿ 4-5
- ಕತ್ತರಿಸಿದ ಕೊತ್ತಂಬರಿ ಸೊಪ್ಪು -2 ಚಮಚ
- ತುರಿದ ಶುಂಠಿ – 1 ಚಮಚ
- ಕರಿಬೇವಿನ ಸೊಪ್ಪು 2 ಕಡ್ಡಿ
- ರುಚಿಗೆ ತಕ್ಕಷ್ಟು ಉಪ್ಪು
ಸಿಹಿ ಹುಗ್ಗಿ ತಯಾರಿಸಲು ಬೇಕಾದ ಸಾಮಗ್ರಿಗಳು
- ಬೆಲ್ಲ – 300 gms
- ತುರಿದ ಕೊಬ್ಬರಿ/ಕಾಯಿ ತುರಿ- 1 ಕಪ್
- ಗೊಡಂಬಿ – 8-10
- ಒಣ ದ್ರಾಕ್ಷಿ- 8-10
- ಏಲಕ್ಕಿ ಪುಡಿ ¼ ಚಮಚ
- ತುಪ್ಪ – 2-3 ಚಮಚ
ಖಾರಾ ಹುಗ್ಗಿ ಮಾಡುವ ವಿಧಾನ
- ಮೊದಲು ಸಣ್ಣ ಕುಕ್ಕರಿನಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಅದು ಕಾದ ನಂತರ ಹೆಸರು ಬೇಳೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು
- ಅಕ್ಕಿಯನ್ನು ಚೆನ್ನಾಗಿ ತೊಳೆದು ಕೊಂಡು ೧:೩ ಪ್ರಮಾಣದ ಹೆಸರು ಬೇಳೆ ಮತ್ತು ಅಕ್ಕಿಯನ್ನು ಹಾಕಿಕೊಂಡು ೪-೫ ಸೀಟಿ ಬರುವಷ್ಟರ ಮಟ್ಟಿಗೆ ಸ್ಟೌವ್ ಮೇಲಿಟ್ಟು ಅನ್ನವನ್ನು ಮಾಡಿಕೊಂಡು ತಣ್ಣಗಾಗಲು ಬಿಡಬೇಕು
- ಮೆಣಸು ಮತ್ತು ಜೀರಿಗೆಯನ್ನು ಕುಟ್ಟಣಿಯಲ್ಲಿ ತರಿ ತರಿಯಾಗಿರುವಂತೆ ಕುಟ್ಟಿ ಪುಡಿ ಮಾಡಿಟ್ಟು ಕೊಂಡಿರ ಬೇಕು
- ಒಲೆಯ ಮೇಲೆ ಪಾತ್ರೆಯೊಂದರಲ್ಲಿ ಐದಾರು ಲೋಟ ನೀರನ್ನು ಹಾಕಿ ಅದನ್ನು ಚೆನ್ನಾಗಿ ಕಾಯಿಸಿಕೊಳ್ಳುತ್ತಿರಬೇಕು
- ಅಗಲವಾದ ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ, ತುಪ್ಪಾ ಕಾದ ನಂತರ ಸಾಸಿವೆಯನ್ನು ಹಾಕಿ ಚಟ ಪಟ ಸಿಡಿಸಿಕೊಳ್ಳಬೇಕು.
- ಆದಾದ ನಂತರ ಸೀಳಿದ ಹಸೀ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು
- ಇದಾದ ನಂತರ ಕರಿಬೇವು, ಶುಂಠಿ ಹಾಗಿ ಬಾಡಿಸಿಕೊಳ್ಳಬೇಕು
- ಈಗ ಚಿಟುಕಿ ಅರಿಶಿನ ಮತ್ತು ಕಾಳು ಮೆಣಸು ಮತ್ತು ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು
- ಈಗ ಪಕ್ಕದ ಒಲೆಯಲ್ಲಿ ಕಾಯುತ್ತಿರುವ ಬಿಸಿ ನೀರನ್ನು ಹಾಕಿ ಮಿಶ್ರಣವನ್ನು ಚೆನ್ನಾಗಿ ಕುದಿಸಬೇಕು
- ನೀರು ಚೆನ್ನಾಗಿ ಕುದಿಯುತ್ತಿರುವಾಗ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಅದಕ್ಕೆ ಹೆಸರು ಬೇಳೆ ಮತ್ತು ಅಕ್ಕಿ ಹಾಕಿ ಅನ್ನ ಮಾಡಿಕೊಂಡಿದ್ದರಲ್ಲಿ ಸುಮಾರು ಮುಕ್ಕಾಲು ಭಾಗವನ್ನು ಕುದಿಯುತ್ತಿರುವ ನೀರಿಗೆ ಹಾಕಿ ಗಂಟು ಬಾರದಂತೆ ಚೆನ್ನಾಗಿ ಮೂರ್ನಾಕು ನಿಮಿಷ ತಿರುಗಿಸಬೇಕು
- ಈಗ ಅರ್ಥ ಬಟ್ಟಲು ಕೊಬ್ಬರಿ ಹುಡಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪುನ್ನು ಸೇರಿಸಿ ಸುಮಾರು ಐದಾರು ನಿಮಿಷಗಳಷ್ಟು ಕುದಿಸಿದಲ್ಲಿ ಸಾಂಪ್ರದಾಯಿಕ ರೀತಿಯ ಬಿಸಿ ಬಿಸಿಯಾದ ಖಾರಾ ಹುಗ್ಗಿ (ಪೊಂಗಲ್ ) ಸಿದ್ಧ
- ಇದಕ್ಕೆ ಅರ್ಧ ಹೋಳು ನಿಂಬೇಹಣ್ಣಿನ ರಸ ಬೆರೆಸಿದಲ್ಲಿ ಹುಗ್ಗಿ ಇನ್ನೂ ರುಚಿಕರವಾಗಿರುತ್ತದೆ.
ಸಿಹಿ ಹುಗ್ಗಿ ಮಾಡುವ ವಿಧಾನ
- ಪುಡಿ ಮಾಡಿಟ್ಟು ಕೊಂಡ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಒಂದು ಲೋಟ ನೀರನ್ನು ಬೆರೆಸಿ ಒಲೆಯ ಮೇಲಿಟ್ಟು ಬೆಲ್ಲದ ಪಾಕವನ್ನು ತಯಾರಿಸಿಕೊಳ್ಳಬೇಕು.
- ತಯಾರಿಸಿಕೊಂಡ ಪಾಕವು ಆರಿದ ಮೇಲೆ ಅದನ್ನು ಶೋಧಿಸಿ ಅದರಲ್ಲಿದ ಕಲ್ಮಶವನ್ನೆಲ್ಲಾ ಬೇರ್ಪಡಿಸಿಟ್ತುಕೊಳ್ಳ ಬೇಕು
- ಬಾಣಲೆಯೊಂದನ್ನು ಸ್ಟೌವ್ ಮೇಲೆ ಸಣ್ಣ ಉರಿಯಲ್ಲಿಟ್ಟು ಅದಕ್ಕೆ ಎರಡು ಮೂರು ಚಮಚ ತುಪ್ಪಾ ಹಾಕಿ ಕಾಯಲು ಬಿಡಬೇಕು
- ತುಪ್ಪಾ ಕಾದ ನಂತರ ಅದಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಕೆಂಪಗೆ ಹುರಿದುಕೊಂಡ ನಂತರ ಅದಕ್ಕೆ ಒಣ ದ್ರಾಕ್ಷಿಯನ್ನು ಸೇರಿಸಿ ಚೆನ್ನಾಗಿ ಹುರಿದು ಕೊಳ್ಳಬೇಕು
- ಈಗ ಬೆಲ್ಲದ ಪಾಕವನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳ ಬೇಕು.
- ಕುದಿಯುತ್ತಿರುವ ಬೆಲ್ಲದ ಪಾಕಕ್ಕೆ ಅರ್ಧ ಕಪ್ ಕೊಬ್ಬರಿ ಹುಡಿ ಅಥವಾ ಕಾಯಿ ತುರಿಯನ್ನು ಸೇರಿಸಿ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಒಂದೆರಡು ನಿಮಿಷ ಕುದಿಸಬೇಕು.
- ಕುದಿಯುತ್ತಿರುವ ಮಿಶ್ರಣಕ್ಕೆ ಬೇಯಿಸಿಟ್ಟು ಕೊಂಡಿದ್ದ ಬೇಳೆ ಮತ್ತು ಅನ್ನವನ್ನು ಬೆರೆಸಿ ಗಂಟಿಲ್ಲದಂತೆ ತಿರುವಿ, ಐದಾರು ನಿಮಿಷಗಳಷ್ಟು ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿದ್ದರೆ ಸಿಹಿ ಸಿಹಿಯಾದ ಸಾಂಪ್ರದಾಯಿಕ ರೀತಿಯ ಸಿಹಿ ಹುಗ್ಗಿ (ಸಕ್ಕರೆ ಪೊಂಗಲ್) ಸಿದ್ಧ.
- ಈ ಹುಗ್ಗಿಯ ಜೊತೆ ಕಾಯಿ ಚೆಟ್ನಿ ಇಲ್ಲವೇ ಹುಣಸೇ ಗೊಜ್ಜಿನೊಡನೆ ಸವಿಯಲು ಮಜವಾಗಿರುತ್ತದೆ.
ಸಾಂಪ್ರದಾಯಿಕವಾಗಿ ಸಿಹಿ ಮತ್ತು ಖಾರ ಹುಗ್ಗಿಯನ್ನು ಈ ವೀಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಇಷ್ಟ ಲೇಖನ ಮತ್ತು ವೀಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ Like ಮಾಡಿ. Share ಮಾಡಿ, Subscribe ಆಗಿ
ಏನಂತೀರೀ?
ಮನದಾಳದ ಮಾತು : ಹುಗ್ಗಿಯಲ್ಲಿ ಮೆಣಸು, ಜೀರಿಗೆ, ಅಕ್ಕಿ, ಹೆಸರು ಬೇಳೆ, ತುಪ್ಪ ಮತ್ತು ಕೊಬ್ಬರೀಯನ್ನು ಹಿತಮಿತವಾಗಿ ಬಳೆಸಿ ತಯಾರಿಸಿದಂತಹ ಹುಗ್ಗಿ ಆರೋಗ್ಯಕರವಾದ ತಿಂಡಿಯಾಗಿದೆ. ಮೆಣಸು, ಜೀರಿಗೆ, ಶುಂಠಿ ಮತ್ತು ಕೊಬ್ಬರಿಯನ್ನು ಹಾಗೆಯೇ ಹಾಕುವ ಬದಲು ಜೀರಿಗೆ ಮತ್ತು ಮೆಣಸನ್ನು ಪುಡಿ ಮಾಡಿ ಮತ್ತು ಶುಂಠಿ ಮತ್ತು ಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಂಡು, ಕರಿಬೇವನ್ನು ಸಣ್ಣದಾಗಿ ಹೆಚ್ಚಿಕೊಂಡು ಬಳೆಸಿದಲ್ಲಿ ಯಾರೂ ಸಹಾ ಯಾವುದೇ ಪದಾರ್ಥವನ್ನು ಬಿಸಾಡದೇ ಪರೋಕ್ಷವಾಗಿ ಎಲ್ಲವನ್ನು ತಿನ್ನುವ ಮೂಲಕ ಆರೋಗ್ಯಕರವಾಗಿರಬಹುದು
#ಅನ್ನಪೂರ್ಣ
#ಹುಗ್ಗಿ
#ಪೊಂಗಲ್
#ಏನಂತೀರೀ YouTube