ಕಳೆದ ಒಂದೂವರೆ ತಿಂಗಳಿಂದ ಕೂರೋನಾ ಮಹಾಮಾರಿಯಿ ಸೋಂಕಿನಿಂದಾಗಿ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಜಾರಾಗಿ ಹೋಗಿದೆ. ಎಲ್ಲಾ ಸರಿ ಇದ್ದಿದ್ರೇ ಈ ಬೇಸಿಗೆ ರಜೆಯಲ್ಲಿ ಸಂಸಾರ ಸಮೇತ ಯಾವುದಾದರೂ ಪ್ರವಾಸೀ ತಾಣಗಳಿಗೆ ಹೋಗಿ ಒಂದಷ್ಟು ದಿನ ಆರಾಮಾಗಿ ಇದ್ದು ಬರ್ತಾ ಇದ್ವಿ ಅನ್ಸತ್ತೆ . ಅದಕ್ಕೆ ಈಗ ಕುಳಿತಲ್ಲಿಂದಂದಲೇ ನಾವು ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಲೇಜಿನಲ್ಲಿರುವಾಗ ಬಲಮುರಿಗೆ ಹೋಗಿದ್ದ ರೋಚಕ ಪ್ರವಾಸದ ಅನುಭವವನ್ನು ಹಂಚಿಕೊಳ್ತಾ ಇದ್ದೀನಿ. ಓದಿ ನೀವೂ ಕುಳಿತಲ್ಲಿಂದಲೇ ಆನಂದಿಸಿ.
ಆಗ 1992ನೇ ಇಸ್ವಿ. ನಾವಾಗ ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ ನಲ್ಲಿ ಅಂತಿಮ ವರ್ಷದ ಡಿಪ್ಲಮೋ ವ್ಯಾಸಂಗ ಮಾಡುತಾಇದ್ವಿ. ಇನ್ನೇನು ಕೆಲವೇ ದಿನಗಳಲ್ಲಿ ಕಾಲೇಜು ಮುಗಿದು ಪರೀಕ್ಷೇ ಆಗಿ ಹೋದ್ರೇ, ಕೆಲಸ ಹುಡುಕೋದೋ ಇಲ್ವೇ, ವ್ಯಾಸಂಗ ಮುಂದುವರಿಸುವ ಬಗ್ಗೆ ಯೋಚನೆ ಮಾಡ್ತಾ ಇದ್ರು. ಅದೇ ಸಮಯದಲ್ಲಿ ಕೊಡಗು, ಮೈಸೂರಿನ ಸುತ್ತಮುತ್ತಲೂ ಒಳ್ಳೆಯ ಮಳೆಯಾಗಿ ಕಾವೇರಿ, ಕಪಿಲ ನದಿಗಳು ತುಂಬಿ ಹರಿಯುತ್ತಿದ್ದನ್ನು ಎಲ್ಲಾ ವೃತ್ತ ಪತ್ರಿಕೆಗಳೂ ದಿನೇ ದಿನೇ ಪ್ರಕಟಿಸುತ್ತಿದ್ದವು. ಮೈಸೂರಿನ ಕೃಷ್ಣರಾಜಾ ಅಣೆಕಟ್ಟೆ ತುಂಬಿ ಬಂದಾವನ ನೋಡಲು ರಮಣೀಯವಾಗಿದ್ದು ಅಲ್ಲಿಯ ಸಂಗೀತ ಕಾರಂಜಿಯನ್ನು ನೋಡಲು ಅಪಾರ ಜನಸಾಗರವೇ ಹರಿಯುತ್ತಿದ್ದನ್ನು ಓದಿ, ಕೇಳಿ ನಮಗೂ ನೋಡುವ ಆಸೆಯಾಗಿತ್ತು. ಅಂತಿಮ ವರ್ಷದ ವಿದ್ಯಾರ್ಥಿಗಳ ಎಲ್ಲಾ ಸೇರಿ ಮೈಸೂರಿನ ಸುತ್ತ ಮುತ್ತ ಕಾಲೇಜಿನ ಸಹಪಾಠಿಗಳೊಂದಿಗೆ ಪ್ರವಾಸ ಮಾಡಲು ನಿರ್ಧರಿಸಿ, ಪ್ರಾಂಶುಪಾಲರ ಅನುಮತಿ ಕೇಳಿದಾಗ ಇಬ್ಬರು ಅಧ್ಯಾಪಕರ ನೇತೃತ್ವದಲ್ಲಿ ವಾರಾಂತ್ಯದಲ್ಲಿ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆ ಬರದಂತೆ ಹೋಗಿಬರಲು ಅಪ್ಪಣೆ ನೀಡಿದಾಗ ನಮಗೆಲ್ಲಾ ಸ್ವರ್ಗಕ್ಕೆ ಮೂರೇ ಗೇಣು.
ನಾವು ಕಾಲೇಜಿಗೆ ಸೇರಿದ ಮೊದಲನೇ ದಿನದಂದಲೂ ನಾವು ಆರು ಮಂದಿ ಸ್ನೇಹಿತರು (ಇಂದಿಗೂ ಅಂದಿನಷ್ಟಲ್ಲದಿದ್ದರೂ ಅದೇ ಗೆಳೆತನ ಮುಂದುವರಿದಿದೆ) ನಗರದ ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದರೂ, ನಾವೆಲ್ಲರೂ ಒಟ್ಟಿಗೆ ಕಾಲೇಜಿಗೆ ಬರುವುದು, ಒಟ್ಟಿಗೆ ಹೋಗುವುದು, ಆಟ ಊಟಗಳೆಲ್ಲವೂ ಒಟ್ಟೋಟ್ಟಿಗೆ ಮಾಡುತ್ತಿದ್ದದ್ದು ಅನೇಕ ಸ್ನೇಹಿತರಿಗೆ ಆಶ್ಚರ್ಯ. ನಾವೆಲ್ಲರೂ ಕೀಟಲೆ ಮಾಡುವುದರಲ್ಲಿಯೂ ಅಗ್ರಗಣ್ಯರಾದರೂ, ಓದಿನಲ್ಲೂ, ಆಟಗಳಲ್ಲೂ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಕಾರಣ, ಎಲ್ಲ ಅಧ್ಯಾಪಕರ ನೆಚ್ಚಿನ ಶಿಷ್ಯರಾಗಿದ್ದೆವು. ಹೀಗಾಗಿ ಸಹಜವಾಗಿ ನಾವೇ ಆಸಕ್ತಿ ವಹಿಸಿ ಅಂತಿಮ ವರ್ಷದ Computer Sc & Electronics ವಿದ್ಯಾರ್ಥಿಗಳನ್ನು ಮಾತನಾಡಿಸಿ ಎಲ್ಲರನ್ನೂ ಪ್ರವಾಸಕ್ಕೆ ಬರಲು ಒಪ್ಪಿಸಿದೆವು. ಇಡೀ ಎರಡೂ ತರಗತಿಗಳು ಸೇರಿದರೂ ಸಂಖ್ಯೇ 35ಕ್ಕೇರದ ಕಾರಣ ಬಸ್ಸಿನ ಒಟ್ಟು ಸಂಖ್ಯೆ 50 ಇದ್ದ ಕಾರಣ ಇಬ್ಬರು ಶಿಕ್ಷಕರನ್ನು ಹೊರತು ಪಡಿಸಿದರೆ ಇನ್ನೂ ಉಳಿದ 13 ಸಂಖ್ಯೆಗಳನ್ನು ತುಂಬಲು ಮೊದಲನೇ ವರ್ಷದವರನ್ನು ನಮ್ಮ ಜೊತೆಗೆ ಕರೆದೊಯ್ಯಲು ನಿರ್ಧರಿಸಿ ಪ್ರಾಂಶುಪಾರರಿಂದ ಸುಲಭವಾಗಿ ಅನುಮತಿಯನ್ನು ಪಡೆದೇ ಬಿಟ್ಟವು.
ಪ್ರವಾಸ ನಿರ್ಧರಿಸಿಯಾಗಿತ್ತು. ವಿದ್ಯಾರ್ಥಿಗಳು ತಯಾರಾಗಿದ್ದರು. ಕಾಲೇಜಿನಿಂದಲೂ ಅನುಮತಿ ಪಡೆದಾಗಿತ್ತು. ಈಗ ಉಳಿದಿದ್ದು ಊಟ, ತಿಂಡಿ ಮತ್ತು ಬಸ್ ವ್ಯವಸ್ಥೆ ಮಾಡಿ ಒಟ್ಟು ಎಷ್ಟು ಖರ್ಚಾಗುವುದೆಂದು ನಿರ್ಧರಿಸಿ ಅದನ್ನು ಸಮಭಾಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಹಂಚಿ ಅವರಿಂದ ಮುಂಚಿತವಾಗಿ ಹಣವನ್ನು ಸಂಗ್ರಹಿಸುವ ಮಹತ್ಕಾರ್ಯ ಉಳಿದಿತ್ತು. ಮಲ್ಲೇಶ್ವರಂನಲ್ಲಿ ಪರಿಚಯವಿದ್ದ ಒಂದು ಟ್ರಾವೆಲ್ಸ್ ಕಂಪನಿಯನ್ನು ಮಾತನಾಡಿಸಿದಾಗ ಕಾಲೇಜ್ ಹುಡುಗರು ಎಂದು ಆದಷ್ಟು ಕಡಿಮೆ ಬೆಲೆಯಲ್ಲಿ ಬಸ್ ನೀಡಲು ಒಪ್ಪಿಕೊಂಡರು. ಜೊತೆಗೆ ಅವರ ಬಳಿಯಿದ್ದ ನುರಿತ ಚಾಲಕನನ್ನು ನಮಗೆ ಪರಿಚಯಿಸಿ ನಮ್ಮ ಹುಡುಗರು ಇವರು. ಇವರನ್ನು ಜಾಗೃತೆಯಿಂದ ಕರೆದುಕೊಂಡು ಹೋಗು ಎಂದು ಅಪ್ಪಣೆ ಮಾಡಿದರು ಇನ್ನು ಪರಿಚಯದ ಅಡುಗೆಯವರನ್ನು ಭೇಟಿಯಾಗಿ, ಶುಚಿ ರುಚಿಯಾಗಿ ಆದಷ್ಟು ಕಡಿಮೆ ಕರ್ಚಿನಲ್ಲಿ ಹೊಟ್ಟೆ ತುಂಬುವಷ್ಟು ತಿಂಡಿ ಮತ್ತು ಊಟ ತಯಾರಿಸಿಕೊಡಲು ವಿನಂತಿಸಿದಾಗ ಅವರೂ ಸಹಾ ಸ್ನೇಹಪೂರ್ವಕ ಸಂಭಾವನೆಗೆ ಒಪ್ಪಿಕೊಂಡು ಅಡುಗೆ ಮಾಡಲು ಅವಶ್ಯತೆ ಇದ್ದ ಎಲ್ಲ ಪರಿಕರಗಳು ಮತ್ತು ಸಾಮಾನಿನ ಪಟ್ಟಿಯನ್ನು ಬರೆದು ಕೊಟ್ಟರು
ಸಾಮಾನಿನ ಪಟ್ಟಿ ಹಿಡಿದು ಕೊಂಡು ಸಮೀಪದ ಅಂಗಡಿಯಲ್ಲಿ ಅದಕ್ಕೇ ಆಗಬಹುದಾದ ಖರ್ಚನ್ನು ತಿಳಿದುಕೊಂಡು ಇಡೀ ಪ್ರವಾಸಕ್ಕೆ ಆಗಬಹುದಾಗಿದ್ದ ಅಂದಾಜು ಮೊತ್ತವನ್ನು ತಿಳಿದುಕೊಂಡು ಒಟ್ಟು ಮೊತ್ತವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸಮನಾಗಿ ಹಂಚಿ ಅದಕ್ಕೆ ತಕ್ಕಂತೆ ಹಣ ಪಡೆಯಬೇಕೆಂದು ನಿರ್ಧರಿಸುತ್ತಿರುವಾಗಲೇ ನಮ್ಮಲ್ಲೇ ಇದ್ದ ಬುದ್ದಿವಂತನೊಬ್ಬ ಇಡೀ ಪ್ರವಾಸಕ್ಕೇ ನಮ್ಮೆಲ್ಲರ ಇಷ್ಟೊಂದು ಪರಿಶ್ರಮಕ್ಕೆ ಏನಾದರೂ ಪ್ರತಿಫಲವಿರಲೇಬೇಕು. ನಮ್ಮ ಸಮಯಕ್ಕೂ ಬೆಲೆ ಇದೆ ಎಂದು ನಿರ್ಧರಿಸಿ ಒಟ್ತು ಮೊತ್ತವನ್ನು ಎಲ್ಲ ವಿದ್ಯಾರ್ಥಿಗಳಿಗೆ ಸಮನಾಗಿ ಹಂಚುವ ಬದಲು ನಾವು ಆರುಜನರನ್ನು ಹೊರತು ಪಡಿಸಿ ಇಡೀ ಪ್ರವಾಸದ ಖರ್ಚನ್ನು 42 ವಿದ್ಯಾರ್ಥಿಗಳಿಗೆ ಹಂಚ ಬೇಕೆಂದು ಪ್ರಸ್ತಾಪವನ್ನಿಟ್ಟೇ ಬಿಟ್ಟ. ಆರಂಭದಲ್ಲಿ ಕೆಲವರು ವಿರೋಧಿಸಿದರೂ ಹುಡುಗು ಬುದ್ದಿಯ ನಾವೆಲ್ಲರೂ ಒಪ್ಪಿ ಕೊಂಡು ಈ ನಿರ್ಧಾರ ನಮ್ಮ ಆರು ಜನರ ಮಧ್ಯೆಯಲ್ಲಿಯೇ ಇರಬೇಕೆಂದು ಆಪ್ಪಿ ತಪ್ಪಿ ಕೂಡಾ ಇದು ಯಾರಿಗೂ ತಿಳಿಸಬಾರದೆಂದು ಆಣೆ ಪ್ರಮಾಣಗಳನ್ನು ಪರಸ್ಪರ ತೆಗೆದುಕೊಂಡದ್ದೂ ಆಯಿತು. ಪ್ರವಾಸದ ಪ್ರತಿ ವಿದ್ಯಾರ್ಥಿಗಳ ಅಂದಾಜು ಮೊತ್ತ ನೂರು ರೂಪಾಯಿಗಳಿಗೂ ಕಡಿಮೆ ಇದ್ದದ್ದರಿಂದ ಯಾರಿಗೂ ಅನುಮಾನ ಬಾರದೇ ಎಲ್ಲರೂ ಸಮಯಕ್ಕೆ ಸರಿಯಾಗಿ ಅಲ್ಲದಿದ್ದರೂ ಒಂದೆರಡು ದಿನಗಳು ತಡವಾಗಿ ಕೊಟ್ಟು ಬಿಟ್ಟರು. ಪ್ರವಾಸದ ಹಿಂದಿನ ದಿನ ನಮ್ಮ ಪ್ರಾಂಶುಪಾಲರು ನಮ್ಮೆಲ್ಲರನ್ನೂ ಕರೆದು ಪ್ರವಾಸದಲ್ಲಿ ನಾವೆಲ್ಲರೂ ಹೇಗೆ ನಡೆದುಕೊಳ್ಳಬೇಕೆಂದು ಒಂದೆರಡು ಗಂಟೆಯ ಉಪನ್ಯಾಸವನ್ನು ಮಾಡಿ ಎಲ್ಲರೂ ಬೆಳಿಗ್ಗೆ ಏಳಕ್ಕೆ ಸರಿಯಾಗಿ ಕಾಲೇಜಿನ ಬಳಿಯೇ ಬರಬೇಕೆಂದು ರಾತ್ರಿ ಸುಮಾರು 10:30 ರಿಂದ 11ರ ಒಳಗೆ ನಗರದ ಕೆಲವೊಂದು ಪ್ರತಿಷ್ಟಿತ ಬಡಾವಣೆಯ ಬಳಿ ಕರೆತಂದು ಬಿಡುವುದಾಗಿ ತಿಳಿಸಲಾಯಿತು.
ಪ್ರವಾಸದ ಹಿಂದಿನ ಸಂಜೆ ಕಾಲೇಜನ್ನು ಮುಗಿಸಿ ಎಲ್ಲರೂ ಮಲ್ಲೇಶ್ವರದಲ್ಲೇ ಇದ್ದ ನಮ್ಮ ಸ್ನೇಹಿತನ ಮನೆಗೆ ಬಂದು ಎಲ್ಲರೂ ಒಂದೊಂದು ಕೆಲಸಗಳನ್ನು ಹಂಚಿಕೊಂಡು ಅಡುಗೆಗೆ ಬೇಕಾದ ಸಾಮನುಗಳನ್ನು ತರಲು ಕೆಲವರು ಮತ್ತೇ ಕಲವರು ಒಲೆ, ಪಾತ್ರೆ ಪಡಗಗಳನ್ನು ತರಲು ಹೊರಟೆವು. ಅಡುಗೆಗೆ ಬೇಕಾದ ತರಕಾರಿ ಮತ್ತು ಸಾಮಾನುಗಳ ಬೆಲೆ ನಾವು ಅಂದಾಜು ಮಾಡಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಆಯಿತು. ಇನ್ನು ಪಾತ್ರೆಗಳನ್ನು ಬಾಡಿಗೆಗೆ ತರಲು ಹೋದಾಗ ಯಾವ ಕಾರ್ಯಕ್ರಮಕ್ಕೆ ಈ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರೆಂದು ಅಂಗಡಿಯವರು ಕೇಳಿದಾಗ ಸತ್ಯಹರಿಶ್ಚಂದ್ರರ ವಂಶದವರಂತೆ, ಕಾಲೇಜು ಪ್ರವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಬಾಯಿ ತಪ್ಪಿ ಹೇಳಿದಾಗ ನಾವು ಪ್ರವಾಸಕ್ಕೆಲ್ಲಾ ಪಾತ್ರೆಗಳನ್ನು ಕೊಡೋದಿಲ್ಲ ಅಂತಾ ಹೇಳೋದೇ? ನಾವು ಎಷ್ಟೇ ಪರಿ ಪರಿಯಾಗಿ ಬೇಡಿ ಕೊಂಡರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಅವರು ಪಾತ್ರೇ ಕೊಡಲು ಒಪ್ಪಲೇ ಇಲ್ಲಾ. ಅರೇ ಇದೊಳ್ಳೆ ಪಜೀತೀ ಆಯ್ತಲ್ಲಪ್ಪಾ ಅಂತಾ ಯೋಚಿಸುತ್ತಿರುವಾಗಲೇ ಅದೃಷ್ಟವೋ ಎಂಬಂತೆ ಆ ಅಂಗಡಿಯ ಮಾಲಿಕರರ ತಮ್ಮ ಅಲ್ಲಿಗೆ ಬಂದು ಅವನಿಗೆ ನಮ್ಮ ಗೆಳೆಯನೊಬ್ಬ ಪರಿಚಯವಿದ್ದ ಕಾರಣಾ, ಏ ಇದೇನೋ ಇಲ್ಲಿ ಅಂತಾ ಕೇಳಿದಾಗ, ಮರುಭೂಮಿಯಲ್ಲಿ ಓಯಸಿಸ್ ಕಂಡತಾಯಿತು. ಈಗ ಅವನ ಮೂಲಕ ಅವರ ಅಣ್ಣನನ್ನು ಪುಸಲಾಯಿಸಿ, ತಮ್ಮನ ಸ್ನೇಹಿತರೆಂಬ ಸಲಿಗೆಯಿಂದ ಸ್ವಲ್ಪ ಹೆಚ್ಚಿನ ಹಣಕ್ಕೆ ಒಪ್ಪಿ ಪಾತ್ರೆ ಸಾಮಾನುಗಳನ್ನು ಕೊಟ್ಟರು. ಉಸ್ಸಪ್ಪಾ, ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಆರಂಭದಲ್ಲಾದ ವಿಘ್ನಗಳೆಲ್ಲಾ ನಿವಾರಣೆಯಗಿದ್ದದ್ದು ನಮಗೆಲ್ಲಾ ನೆಮ್ಮದಿ ತಂದಿತ್ತಾದರೂ ಅಂದು ಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತವೇ ಖರ್ಚಾಗುತ್ತಿದ್ದದ್ದು ಸ್ವಲ್ಪ ಕಳವಳಕಾರಿಯಗಿತ್ತು.
ಮನೆಗೆ ಬಂದ ಅಡುಗೆ ಸಾಮಾನುಗಳನ್ನು ಗಮನಿಸಿದ ನಮ್ಮ ಸ್ನೇಹಿತನ ತಾಯಿ ಮತ್ತು ಆತನ ಚಿಕ್ಕಮ್ಮ ಅಯ್ಯೋ ಇಷ್ಟು ಜನರಿಗೆ ಅಡುಗೆ ಮಾಡಲು ಇಷ್ಟೋಂದು ತುಪ್ಪಾ, ಎಣ್ಣೆ ಮತ್ತು ಡಾಲ್ಡಾ ಏಕೆ? ಅಡುಗೆಯವರು ಸುಮ್ಮನೆ ಸುರಿತಾರೆ ಇಲ್ಲಾಂದ್ರೆ ನಮಗೆ ಗೊತ್ತಾಗದ ಹಾಗೆ ಮನೆಗೆ ಕದ್ದೊಯ್ತಾರೆ. ವಾಪಸ್ ಕೊಟ್ಟು ಬನ್ನಿ ಎಂದಾಗ, ಅಹಾ! ದುಡ್ಡು ಉಳಿಸುವುದನ್ನೇ ಯೋಚಿಸುತ್ತಿದ್ದ ವಾವು ಕೂಡಲೇ ಅಂಗಡಿಗೆ ಹೋಗಿ ಹೆಚ್ಚಾಗಿದೆ ಎಂದಿದ್ದ ಎಣ್ಣೆ, ಡಾಲ್ಡ ಮತ್ತು ತುಪ್ಪವನ್ನು ಹಿಂದಿರುಗಿಸಿ ಹಣ ವಾಪಸ್ ಪಡೆದಾಗ ಮನಸ್ಸಿಗೆ ಸ್ವಲ್ಪ ನಿರಾಳ. ಅಂದು ಇಡೀ ರಾತ್ರಿ ನಾವುಗಳು ಯಾರೂ ನಿದ್ದೇಯೇ ಮಾಡಲಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಗೆ ಎಲ್ಲರೂ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಒಂದಿಬ್ಬರು ಬಸ್ ತರಲು ಹೋದರೆ ಉಳಿದವರು ಅಡುಗೆಯವರ ಸಹಾಯಕ್ಕೆ ನಿಂತೆವು. ಉಪ್ಪಿಟ್ಟಿಗೇನೋ ತಂದಿದ್ದ ಎಣ್ಣೆ ಸಾಕಾಯ್ತು. ಕೇಸರಿ ಬಾತ್ ಮತ್ತು ಪಲಾವ್ಗೆ ತುಪ್ಪಾ ಮತ್ತು ಡಾಲ್ಡಾ ಸಾಕಾಗೋದಿಲ್ಲ, ಓಡಿ ಹೋಗಿ ಇನ್ನೂ ಸ್ವಲ್ಪ ಡಾಲ್ಡಾ, ಎಣ್ಣೆ ಮತ್ತು ತುಪ್ಪಾ ತಂದ್ಬಿಡಿ ಎಂದು ಬೆಳಗಿನ ಜಾವ ಐದಕ್ಕೇ ಅಡುಗೆಯವರು ಹೇಳಿದಾಗ ಹೃದಯ ಕೈಗೆ ಬಂದಂತಾಯ್ತು. ಅಯ್ಯೋ ದೇವರೇ ದುಡ್ಡು ಉಳಿಸಲು ಹೋಗಿ ಯಾರದ್ದೋ ಮಾತು ಕೇಳಿಕೊಂಡು ತಂದಿದ್ದ ಸಾಮಾನನ್ನು ಹಿಂದಿರುಗಿಸಿ ಕೈ ಸುಟ್ಟು ಕೊಂಡೆವಲ್ಲಾ ಎಂದೆಣಿಸುತ್ತಾ , ಸ್ನೇಹಿತನ ಮನೆಯಲ್ಲಿದ್ದ ತುಪ್ಪಾ ಮತ್ತು ಎಣ್ಣೆಯನ್ನೇ ಬಳಸಿಕೊಂಡು ಸರಿ ತೂಗಿಸಿ. ತಿಂಡಿ ಅಡುಗೆ ಕೆಲಸ ಮುಗಿಸಿ ಬಸ್ ಬರುವುದನ್ನೇ ಕಾಯತೊಡಗಿದೆವು.
ಇನ್ನು ಬಸ್ ಕರೆತರಲು ಟ್ರಾವೆಲ್ಸ್ಗೆ ಹೋದರೆ ಅಲ್ಲಿ ಬಸ್ಸೇ ಇಲ್ಲಾ. ನಮ್ಮ ಹುಡುಗರಿಗೆ ಅಯ್ಯೋ ರಾಮ ಏನಪ್ಪಾ ಮಾಡೋದು ಬಸ್ಸೇ ಇಲ್ಲವಲ್ಲಾ ಎಂಬ ಗಾಬರಿ. ಯಾರಿಗಾದರೂ ಫೋನ್ ಮಾಡಿ ಕೇಳೋಣವೆಂದರೆ ಇಂದಿಂತೆ ಮೊಬೈಲ್ ಕೂಡಾ ಇಲ್ಲದ ಸಮಯವದು. ಸರಿ ಟ್ರಾವೆಲ್ಸ್ ಆಫೀಸಿನಲ್ಲಿ ಮಲಗಿದ್ದ ಕ್ಲೀನರ್ ಅನ್ನು ಎಬ್ಬಿಸಿ ಕೇಳಿದರೆ ರಾತ್ರಿ ಬೇರೇ ಪ್ರವಾಸಕ್ಕೆ ಹೋಗಿದ್ದ ಬಸ್ ತಡವಾಗಿ ಬಂದಿದ್ದ ಕಾರಣ ಡ್ರೈವರ್ ಬಸ್ಸನ್ನು ಸೀದಾ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಇನ್ನೇನು ಬಂದು ಬಿಡ್ತಾರೆ ಎಂದ. ಸರಿ ಈಗ ಬರ್ತಾರೆ ಆಗ ಬರ್ತಾರೆ ಅಂತಾ ಅರ್ಧ ಮುಕ್ಕಾಲು ಗಂಟೆ ಕಾದ್ರೂ ಬಸ್ಸಿನ ಪತ್ತೆ ಇಲ್ಲದ ಕಾರಣ ಗಾಭರಿಯಿಂದ ಕ್ಲೀನರನ್ನು ನಮ್ಮ ಸ್ಕೂಟರ್ನಲ್ಲಿ ಕೂಡಿಸಿಕೊಂಡು ಡ್ರೈವರ್ ಮನೆ ಕಡೆಗೆ ಹೋಗಿ ನೋಡಿದ್ರೇ, ರಾತ್ರಿ ಏರಿಸಿದ್ದ ನಶೆ ಇನ್ನೂ ಇಳಿಯದೆ ಕುಂಭಕರ್ಣನ ತಮ್ಮನಂತೆ ನಿದ್ರಿಸುತ್ತಿದ್ದರು ಡ್ರೈವರ್. ಅಂತೂ ಇಂತೂ ಹರ ಸಾಹಸ ಪಟ್ಟು ಅವರನ್ನು ಎಬ್ಬಿಸಿಕೊಂಡು ಬಸ್ಸನ್ನು ಹೊರಡಿಸಿಕೊಂಡು ಸ್ನೇಹಿತನ ಮನೆಯ ಬಳಿ ಸಿದ್ದ ಪಡಿಸಿದ್ದ ಅಡುಗೆಯನ್ನು ತೆಗೆದುಕೊಂಡು ಕಾಲೇಜ್ ಬಳಿ ಬಂದಾಗ, ಗಂಟೆ ಅದಾಗಲೇ 7:10. ಉತ್ಸಾಹದಿಂದ ಬೆಳಿಗ್ಗೆ 6.00ಕ್ಕೆಲ್ಲಾ ಕಾಲೇಜ್ ಬಳಿ ಬಂದು ಕಾಯುತ್ತಿದ್ದವರೆಲ್ಲಾರೂ ತಡವಾಗಿ ಬಂದ ನಮಗೆ ಹಿಡಿಶಾಪ ಹಾಕಿದರೂ ಕಿತ್ತಾಡಲು ಇದು ಸೂಕ್ತ ಸಮಯವಲ್ಲದ ಕಾರಣ, ನಮ್ಮ ಕಷ್ಟ ನಮಗೆ ಎಂದು ಕೊಂಡು ಹಲ್ಲು ಕಚ್ಚಿಕೊಂಡು ಸುಮ್ಮನಾದವು. ಸರಿ ಸರಿ ತಡವಾಗಿದೆ ಎಂದು ಎಲ್ಲರೂ ಬಸ್ ಹತ್ತಿ ಎಂದು ಹೇಳಿ ಎಲ್ಲರನ್ನೂ ಲಗು ಬಗನೇ ಬಸ್ ಹತ್ತಿಸಿಕೊಂಡು ಸಂಖ್ಯೆ ಎಣಿಸಿನೋಡಿದರೆ, ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪರಕರನ್ನು ಸೇರಿಸಿ 49 ಸಂಖ್ಯೆ ಬರ್ತಾ ಇದೆ. ಯಾರಪ್ಪ ಅದು ಮಿಸ್ಸಾಗಿರೋದು ಅಂತ ಗೊಣಗಾಡ್ತಾ, ನಮ್ಮ ಲಿಸ್ಟ್ ತೆಗೆದು ನೋಡಿದರೆ, ಪೆರುಮಾಳ್ ಇನ್ನೂ ಬಂದಿಲ್ಲ. ಬಿಟ್ಟು ಹೋಗೋದುಕ್ಕೂ ಆಗೋದಿಲ್ಲ. ಕಾಯುವುದಕ್ಕೂ ಆಗೋದಿಲ್ಲ. ಸರಿ ಸರಿ ಅಷ್ಟರೋಳಗೆ ಬಸ್ಸಿಗೆ ಪೂಜೆ ಮಾಡಿಬಿಡೋಣ ಅಂತ ನಿರ್ಧರಿಸಿ, ನಾಗಾ, (ನಮ್ಮ ಕಾಲೇಜಿನ Compute Lab Assistant ಮತ್ತು ವೃತ್ತಿ ನಿರತ ಪೂಜಾರಿ ನಾಗರಾಜ) ಯಾವುದೇ ವಿಘ್ನ ಆಗದಂತೇ ಸರಿಯಾಗಿ ಪೂಜೇ ಮಾಡಪ್ಪಾ ಎಂದು ಜೋರಾಗಿ ಹೇಳಿ ಅವನ ಕಿವಿಯ ಬಳಿ ನಾಗಾ, ಪೆರುಮಾಳ್ ಇನ್ನೂ ಬಂದಿಲ್ಲ. ನಿಧಾನವಾಗಿ ಪೂಜೆ ಮಾಡು ಎಂದ್ವಿ. ಆತನೂ ಕೂಡಾ ಅಚ್ಚುಕಟ್ಟಾಗಿ ನಾವು ಹೇಳಿದಂತೆಯೇ ಪೂಜೆ ಮಾಡಿ, ಮಂಗಳಾರತಿ ಮಾಡಿ ಈಡುಗಾಯಿ ಹೊಡೆಯುವಷ್ಟರಲ್ಲಿ ಗಂಟೆ 7:45. ಇನ್ನು ಕಾಯುವುದು ಮೂರ್ಖತನ ಎಂದು ನಿರ್ಧರಿಸಿ, ಹೇಗೂ ಒಂದು ಸೀಟ್ ಕಡೆಮೆ ಇದ್ದ ಕಾರಣ ನಮ್ಮ ನಾಗರಾಜನನ್ನೇ ಕರೆದುಕೊಂಡು ರೈಟ್ ರೈಟ್ ಅಂತಾ ಬಸ್ ಹೊರಡಿಸಿ, ಕಾಲೇಜ್ ಆವರಣ ಬಿಟ್ಟು, ತಿರುವು ತೆಗೆದುಕೊಂಡು ಒಂದು ಸ್ವಲ್ಪ ದೂರ ಹೋಗ್ತಾ ಇದ್ದ ಹಾಗೆಯೇ, ದೂರದಲ್ಲಿ ಯಾರೋ ಓಡೋಡಿ ಬರುತ್ತಾ ಬಸ್ಸಿಗೆ ಅಡ್ಡವಾಗಿ ಕೈ ತೋರಿಸೋದು ಕಾಣಿಸ್ತು ಹತ್ತಿರ ಹೋಗಿ ನೋಡಿದ್ರೇ ನಮ್ಮ ಪೆರುಮಾಳ್. ಬಸ್ ನಿಲ್ಲಿಸಿ, ತಡವಾಗಿ ಬಂದಿದ್ದಕ್ಕಾಗಿ ಪೆರುಮಾಳಿಗೆ ಸಹಸ್ರನಾಮಾರ್ಚನೆಯನ್ನು ಮಾಡಿ ಬಸ್ಸಿಗೆ ಹತ್ತಿಸಿಕೊಂಡು ಹೊರಟಾಗ ಗಂಟೆ 8.00
ಬಸ್ಸಿನಲ್ಲಿ ಕರೆದುಕೊಂಡು ಹೋಗಲು ಅನುಮತಿ ಇರೋದು 50 ಜನ. ನಾವು 51 ಮಂದಿ ಇದ್ದೀವಿ. ಒಬ್ಬರೇ ತಾನೇ ಹೇಗೋ ಅನುಸರಿಸಿಕೊಂದು ಹೋಗ್ಬೋದಲ್ವಾ ಅಂತಾ ಎಲ್ಲರೂ ಯೋಚನೆ ಮಾಡ್ತಾ ಇರಬಬಹುದು ಅಲ್ವೇ? ಆದ್ರೇ ಆ ಹೆಚ್ಚಾದ ಒಂದು ಸಂಖ್ಯೆ ಮತ್ತು ಕಾದು ಕಾದು ಕರೆದುಕೊಂಡು ಹೋದ ಪೆರುಮಾಳ್ ಇವರಿಬ್ಬರಿಂದಲೇ ನಮ್ಮ ಪ್ರವಾಸದಲ್ಲಿ ರೋಚಕ ತಿರುವು ಹೇಗೆ ಪಡೆದುಕೊಳ್ಳುತ್ತದೆ? ಒಂದು ಗಂಟೆ ತಡವಾಗಿ ಹೊರೆಟ ನಾವು ಸರಿಯಾದ ಸಮಯಕ್ಕೆ ಎಲ್ಲವನ್ನು ನೋಡಲಿಕ್ಕೆ ಆಯ್ತಾ? ಪ್ರವಾಸ ಸುಖ್ಯಾಂತ್ಯವಾಗಿತ್ತಾ? ಎಲ್ಲಾ ಕೂತೂಹಲವನ್ನು ಭಾಗ- 2 ರಲ್ಲಿ ಸವಿವರವಾಗಿ ತಿಳಿಸುತ್ತೇನೆ.
ಏನಂತೀರೀ?