ನಿಖರತೆ ಮತ್ತು ವಿಶ್ವಾಸ

ಅದೊಮ್ಮೆ ರಾಜ ತನ್ನ ಅರಮನೆಯಲ್ಲಿ ಏಕಾಂತದಲ್ಲಿರುವಾದ ರಾಜ್ಯದ ಸೇನಾಧಿಪತಿ ಸರಸರನೆ ಧಾವಿಸಿ ಬಂದು ರಾಜನಿಗೆ ವಂದಿಸಿ ತುಸು ಸಿಟ್ಟಿನಿಂದ ಏರು ಧನಿಯಲ್ಲಿ ಮಹಾರಾಜರೇ ನೀವು ಮಾಡಿದ್ದು ಸರಿಯೇ? ನಾನು ಈ ರಾಜ್ಯದ ಸೇನಾಧಿಪತಿ. ಹಗಲು ರಾತ್ರಿ ಎನ್ನದೇ ರಾಜ್ಯದ ಹಿತಕ್ಕಾಗಿ ಮತ್ತು ನಿಮ್ಮ ಶ್ರೇಯಕ್ಕಾಗಿಯೇ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ಆದರೆ ಏನನ್ನೂ ಮಾಡದ, ಸದಾ ನಿಮ್ಮ ಹಿಂದೆಯೇ ಸುತ್ತುತಾ ಇರುವ ಆ ಮಹಾಮಂತ್ರಿಯನ್ನು ಎಲ್ಲಾ ಕಡೆಯಲ್ಲಿಯೂ ಮೆರೆಸುತ್ತೀರಿ ಮತ್ತು ಕಂಡ ಕಂಡ ಕಡೆ ಹೊಗಳುತ್ತೀರಿ. ನಮ್ಮ ಕೆಲಸದ ಬಗ್ಗೆ ನಿಮಗೆ ಒಂದು ಚೂರೂ ವಿಶ್ವಾಸವಿಲ್ಲ ಮತ್ತು ಅಕ್ಕೆರೆಯಿಲ್ಲ ಎನ್ನುತ್ತಾನೆ. ಸೇನಾಧಿಪತಿಯ ಈ ಅಳಲನ್ನು ನಗುನಗುತ್ತಲೇ ಸ್ವೀಕರಿಸಿದ ರಾಜರು, ಅರೇ ನೀವು ನಮ್ಮ ಅರಮನೆಗೆ ಬರುವಾಗ ಅರಮನೆಯ ಮುಂದೆ ಜನ ಸಂಧಣಿಯಾಗಿತ್ತಲ್ಲವೇ? ಏನು ಸಮಾಚಾರ ಎನ್ನುತ್ತಾರೆ.

raja1ಕ್ಷಮಿಸಿ ಮಹಾರಾಜಾ ನಿಮ್ಮನ್ನು ಕಾಣುವ ಭರದಲಿ ನಾನದನ್ನು ಗಮನಿಸಿಯೇ ಇಲ್ಲ. ಈ ಕೂಡಲೇ ಹೋಗಿ ತಿಳಿದು ಬರುತ್ತೇನೆ ಎಂದು ಕೆಲವು ನಿಮಿಷಗಳ ನಂತರ ಹಿಂದಿರುಗಿ, ರಾಜಾ ಚಿಂತೆ ಮಾಡುವ ಅಗತ್ಯವಿಲ್ಲ. ಅರಮನೆಯ ಮುಂದೆ ವಾಸವಾಗಿದ್ದ ಹೆಣ್ಣುನಾಯಿ ಮುದ್ದು ಮುದ್ದಾದ ಮರಿಗಳನ್ನು ಹಾಕಿದಯಷ್ಟೇ ಎನ್ನುತ್ತಾನೆ. ಓಹೋ ಹಾಗಾ ಸಂಗತಿ ಹಾಗಾದರೆ ಎಷ್ಟು ಮರಿಗಳು ಹಾಕಿವೆ ಎಂದು ಕೇಳಿದಾಗ, ಒಂದು ನಿಮಿಷ ಎಂದು ಅಪ್ಪಣೆ ಪಡೆದು ಮತ್ತೆ ಹಿಂದಿರುಗಿ ಮಹಾರಾಜರೇ ಆ ನಾಯಿ ಐದು ಮರಿಗಳಿಗೆ ಜನ್ಮ ಕೊಟ್ಟಿದೆ ಎನ್ನುತ್ತಾನೆ. ಓಹೋ!! ಐದು ಮರಿಗಳು ಅವುಗಳಲ್ಲಿ ಎಷ್ಟು ಗಂಡು ಎಷ್ಟು ಹೆಣ್ಣು ಮರಿಗಳು ಎಂದಾಗ ಮತ್ತೇ ಹೋಗಿ ಬಂದ ಸೇನಾಧಿಪತಿ ಮಹಾರಾಜಾ ಆ ಐದು ಮರಿಗಳಲ್ಲಿ ಮೂರು ಹೆಣ್ಣು ಮತ್ತು ಎರಡು ಗಂಡು ಮರಿಗಳಿವೆ ಎನ್ನುತ್ತಾನೆ. ಭಲೆ ಭಲೇ ಮೂರು ಹೆಣ್ಣು ಮರಿಗಳೇ? ಸರಿ ಅವುಗಳ ಬಣ್ಣಗಳು ಯಾವುವು ಎಂದು ನೋಡಿದಿರೇ? ಎಂದಾಗ ಮತ್ತೆ ಸೇನಾಧಿಪತಿ ಅಲ್ಲಿಗೆ ಹೋಗಿ ಬಂದು ರಾಜಾ ಮೂರು ಕಪ್ಪು ಮತ್ತು ಎರಡು ಬಿಳಿ ಎಂದು ತಿಳಿಸುತ್ತಾನೆ. ತಾನು ಬಂದ ವಿಷಯವೇ ಬೇರೆ ಇಲ್ಲಿ ನಡೆಯುತ್ತಿರುವ ಸಂಗತಿಯೇ ಬೇರೆ ಎಂದು ಬುಸು ಬುಸು ಗುಟ್ಟುತ್ತಾ , ಮಹಾರಾಜರೇ ಸುಮ್ಮನೆ ವಿಷಯಾಂತರ ಮಾಡುತ್ತಾ ಕಾಲಾಹರಣ ಮಾಡುತ್ತಿದ್ದೀರೆಯೇ ಹೊರತು ನನ್ನ ಸಮಸ್ಯೆಗೆ ಪರಿಹಾರವನ್ನೇ ನೀಡಲಿಲ್ಲ ಎನ್ನುತ್ತಾನೆ.

raja2ಅದೇ ಸಮಯಕ್ಕೆ ಅಲ್ಲಿ ಮಹಾಮಂತ್ರಿಗಳು ಬಂದು ಮಹಾರಾಜರಿಗೆ ಜಯವಾಗಲಿ ಎಂದು ವಂದಿಸುತ್ತಾರೆ. ಮಹಾರಾಜರೂ ಅವರಿಗೆ ಪ್ರತಿವಂದಿಸುತ್ತಾ , ಮಂತ್ರಿಗಳೇ, ನೀವು ನಮ್ಮ ಅರಮನೆಗೆ ಬರುವಾಗ ಅರಮನೆಯ ಮುಂದೆ ಜನ ಸಂಧಣಿಯಾಗಿತ್ತಲ್ಲವೇ? ಏನು ಸಮಾಚಾರ ಎನ್ನುತ್ತಾರೆ. ರಾಜರು ಆಪ್ರಶ್ನೆ ಕೇಳುತ್ತಲೇ, ಮಹಾರಾಜರೇ, ನೀವು ನಿಜವಾಗಿಯೂ ಸಂತಸ ಪಡುವ ವಿಷಯ. ನಿಮ್ಮ ಆಡಳಿತದಲ್ಲಿ ಕೇವಲ ಪ್ರಜೆಗಳಷ್ಟೇ ಸುಭಿಕ್ಷವಾಗಿರುವುದಲ್ಲದೇ, ಪ್ರಾಣಿಗಳೂ ಸಂತೋಷವಾಗಿವೆ. ಅರಮನೆಯ ಆವರಣದಲ್ಲಿದ್ದ ನಾಯಿಯೊಂದು ಐದು ಮರಿಗಳಿಗೆ ಜನ್ಮವಿತ್ತಿದ್ದು ಅವುಗಳಲ್ಲಿ ಮೂರು ಹೆಣ್ಣು ಮತ್ತು ಎರಡು ಗಂಡು ಮರಿಗಳಾಗಿದ್ದು, ಮೂರು ಕಪ್ಪು ಬಣ್ಣಗಳು ಮತ್ತು ಎರಡು ಬಿಳಿಯದ್ದಾಗಿದೆ. ರಾಜ ಭಟರಿಗೆ ತಿಳಿಸಿ ಆ ನಾಯಿ ಮರಿಗಳ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳಬೇಕೆಂದು ವ್ಯವಸ್ಥೆ ಮಾಡಿದ್ದೇನೆ ಪ್ರಭುಗಳೇ ಎಂದು ಒಂದೇ ಉಸಿರಿನಲ್ಲಿ ನಡೆದ ವಿಷಯಗಳನ್ನೆಲ್ಲಾ ತಿಳಿಸುತ್ತಾರೆ. ಮಂತ್ರಿಗಳ ಉತ್ತರದಿಂದ ಸಂತೃಷ್ಟರಾದ ಮಹಾರಾಜರು, ನಾನೀಗ ಸೇನಾಧಿಪತಿಗಳ ಹತ್ತಿರ ಕೆಲವೊಂದು ಗಹನವಾದ ಚರ್ಚೆಯಲ್ಲಿದ್ದೇನೆ. ನಿಮಗೇನು ಆಭ್ಯಂತರವಿಲ್ಲದಿದ್ದರೆ ಮತ್ತು ಯಾವುದೇ ತುರ್ತಾದ ಕೆಲಸ ವಿಲ್ಲದಿದ್ದರೆ ಸ್ವಲ್ಪ ಸಮಯದ ನಂತರ ಭೇಟಿಯಾಗ ಬಹುದೇ ಎಂದು ಕೇಳುತ್ತಾರೆ. ಅದಕ್ಕೆ ಅಷ್ಟೇ ವಿನಮ್ರದಿಂದ ಮಂತ್ರಿಗಳು. ನಿಮ್ಮಿಬ್ಬರ ಮಧ್ಯೆ ಬಂದಿದ್ದಕ್ಕಾಗಿ ಕ್ಷಮಿಸಿ ಬಿಡಿ. ನಾನು ಅರಮನೆಯ ಆವರಣದಲ್ಲಿ ನಡೆದ ಈ ವಿಷಯವನ್ನು ನಿಮ್ಮ ಗಮನಕ್ಕೆ ತರಲಷ್ಟೇ ಬಂದಿದ್ದು ಎಂದು ರಾಜರಿಗೆ ನಮಸ್ಕರಿಸಿ ಹೊರಟು ಹೋಗುತ್ತಾರೆ.

ಮಂತ್ರಿಗಳು ಹೊರಟು ಹೋದ ಮೇಲೆ ಸೇನಾಧಿಪತಿಗಳತ್ತ ತಿರುಗಿ ನೋಡಿದಾಗ, ಸೇನಾಧಿಪತಿಯವರು ತಲೆ ತಗ್ಗಿಸಿ ನಿಂತಿರುತ್ತಾರೆ. ತಲೆ ತಗ್ಗಿಸಿ ನಿಂತಿದ್ದ ಸೇನಾಧಿಪತಿಗಳನ್ನು ಕುರಿತು ಮಹಾರಾಜರು, ನಮ್ಮ ರಾಜ್ಯದ ಸೇನಾಧಿಪತಿಗಳೆಂದೂ ತಲೆ ತಗ್ಗಿಸಬಾರದು. ಅದು ರಾಜ್ಯಕ್ಕೆ ಶ್ರೇಯಸ್ಕರವಲ್ಲ. ನೀವು ತಲೆತಗ್ಗಿಸುವಂತಹ ಕೆಲಸವನ್ನೇನೂ ಮಾಡಿಲ್ಲ ಎಂದು ಹೇಳುತ್ತಾ ಸೇನಾಧಿಪತಿಗಳನ್ನು ಸಂತೈಸುತ್ತಾರೆ. ಸೇನಾಧಿಪತಿಗಳೇ ಇದೇ ನೋಡಿ ನಿಮಗೂ ಮತ್ತು ಮಹಾ ಮಂತ್ರಿಗಳಿಗೂ ಇರುವ ವೆತ್ಯಾಸ. ಇಬ್ಬರಿಗೂ ಕೇಳಿದ ಪ್ರಶ್ನೆ ಒಂದೇ ಆಗಿತ್ತಾದರೂ, ಸಂಪೂರ್ಣ ಮಾಹಿತಿ ದೊರಕಿಸಿಕೊಡಲು ನೀವು ಐದಾರು ಬಾರಿ ಹೋಗಿ ಬರಬೇಕಾಯಿತು. ಈ ಪ್ರಕ್ರಿಯೆಯಲ್ಲಿ ನಮ್ಮಿಬ್ಬರ ಸಮಯವೂ ವ್ಯರ್ಥವಾಯಿತಲ್ಲದೇ, ವೃಥಾ ನೀವು ಶ್ರಮ ಪಡಬೇಕಾಯಿತು. ಐದಾರು ಬಾರಿ ಮತ್ತೆ ಮತ್ತೆ ಹೋದ ಪರಿಣಾಮ ನಿಮ್ಮ ಸಹನೆಯ ಕಟ್ಟೆಯೂ ಒಡೆಯಿತು. ಎಲ್ಲದ್ದಕ್ಕಿಂತಲೂ ಮುಖ್ಯವಾದ ವಿಷಯವೇನೆಂದರೆ, ನೀವೂ ಅದೇ ಸ್ಥಳದ ಮುಖಾಂತರವೇ ಬಂದಿದ್ದರೂ ನಾನು ಕೇಳುವ ವರೆಗೂ ನಿಮಗೆ ಆ ಪ್ರಸಂಗದ ಅರಿವಿರಲಿಲ್ಲ.

ಅದೇ ಪ್ರಶ್ನೆಯನ್ನು ಮಹಾಮಂತ್ರಿಗಳಲ್ಲಿ ಕೇಳಿದಾಗ ಅವರು ಎಲ್ಲಾ ಪ್ರಶ್ನೆಗಳಿಗೂ ಸಿದ್ಧರಾಗಿಯೇ ಬಂದಿದ್ದು ಒಂದೇ ಉಸಿರಿನಲ್ಲಿ ಶಾಂತ ಚಿತ್ತದಿಂದ ಉತ್ತರಿಸಿದ್ದಲ್ಲದೇ, ನಾಯಿ ಮತ್ತು ಮರಿಗಳ ಯೋಗಕ್ಷೇಮಕ್ಕಾಗಿ ಅಗತ್ಯವಿದ್ದ ವ್ಯವಸ್ಥೆಯನ್ನೂ ಮಾಡಿ ಬಂದಿದ್ದರು. ನಾನು ಈ ವಿಷಯದಲ್ಲಿ ಯಾರನ್ನೂ ಹೊಗಳುತ್ತಿಲ್ಲ ಮತ್ತು ತೆಗಳುತ್ತಿಲ್ಲ. ನನಗೆ ನಿಮ್ಮಿಬ್ಬರ ಸಾಮರ್ಥ್ಯದ ಮೇಲೂ ಖಂಡಿತವಾಗಿಯೂ ವಿಶ್ವಾಸವಿದೆ ಆದರೆ ನಿಖರತೆ ಎಂದು ಬಂದಾಗ ಮಂತ್ರಿಗಳ ಈ ನಡತೆ ಆವರ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ಇದರಿಂದ ನಿಮಗೆ ಬೇಸರವಿಲ್ಲಾ ಎಂದು ತಿಳಿಯುತ್ತೇನೆ ಎನ್ನುತ್ತಾರೆ. ಸೇನಾಧಿಪತಿಳಿಗೆ ತಮ್ಮ ತಪ್ಪಿನ ಅರಿವಾಗಿ ಇಂತಹ ತಪ್ಪು ಮರುಕಳಿಸಿದಂತೆ ಪ್ರಯತ್ನಿಸುವೇ ರಾಜರಲ್ಲಿ ಕ್ಷಮೆಯಾಚಿಸಿ ಯಾಥಾಶಕ್ತಿ ತಮ್ಮ ಕೆಲಸ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಾರೆ

ನಾಯಕನಾದವರಿಗೆ ತನ್ನ ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯರ ಮೇಲೂ ವಿಶ್ವಾಸವಿರಬೇಕು ಅದೇ ರೀತಿ ತಂಡದಲ್ಲಿರುವ ಸದಸ್ಯರಿಗೂ ತಮ್ಮ ನಾಯಕನ ಮತ್ತು ತಂಡ ಮೇಲೆ ವಿಶ್ವಾಸವಿದ್ದು ಅವರಿಗೆ ವಹಿಸಿದ ಕೆಲಸ ಕಾರ್ಯ ಗಳನ್ನು ನಿಖರವಾಗಿ ಕಾರ್ಯಸಾಧುವನ್ನಾಗಿ ಮಾಡಬೇಕಾದ ಜವಾಬ್ಧಾರಿ ಇರುತ್ತದೆ. ನಾಯಕ ಮತ್ತು ಆಟಗಾರರ ವಿಶ್ವಾಸ ಮತ್ತು ನಿಖರತೆಗೆ 1976-77ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಟೆಸ್ಟ್  ಪಂದ್ಯವೇ ಸಾಕ್ಷಿಯಗಿದೆ.

lillyಆ ಸಮಯದಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಜೆಫ್ ಥಾಮ್ಸನ್ 160.6 ಕಿ.ಮೀ. ಮತ್ತು ಡೆನ್ನಿಸ್ ಲಿಲ್ಲಿ 154.8 ಕಿ.ಮೀ. ವೇಗದಲ್ಲಿ ಬೋಲಿಂಗ್ ಮಾಡುತ್ತಿದ್ದರು. ಬಾಟ್ಸ್ ಮನ್ನುಗಳು ಅವರ ವೇಗ ಮತ್ತು ಬೌನ್ಸರ್ಗಳಿಗೆ ಹೆದರಿ ತರೆಗೆಲೆಗಳಂತೆ ಉದುರಿಹೋದ ಉದಾಹಣೆಗಳೆಷ್ಟೋ ಇದೆ.  ಅದಾಗಲೇ ನ್ಯೂಜಿಲೆಂಡ್ ತಂಡದ 9 ವಿಕೆಟ್  ಉರುಳಿ ಆಸ್ಟ್ರೇಲಿಯ ಸುಲಭದ ಗೆಲುವು ಸಾಧಿಸುವತ್ತ ಧಾಪುಗಾಲು ಹಾಕುತ್ತಿತ್ತು. 11 ನೇ ಕ್ರಮಾಂಕದ ಪೀಟರ್ ಪೆಥೆರಿಕ್ ಬ್ಯಾಟಿಂಗ್ ಮಾಡಲು ಬಂದಾಗ, ಡೆನ್ನಿಸ್ ಲಿಲ್ಲಿ ಅವರ ಅಪೇಕ್ಷೆಯ ಮೇರೆಗೆ ಚಾಪೆಲ್ ತಂಡದ ಎಲ್ಲಾ 9 ಸದಸ್ಯರನ್ನೂ ಒಟ್ಟಿಗೆ ಸ್ಲಿಪ್ನಲ್ಲಿ ನಿಲ್ಲಿಸಿ ತನ್ನ ಬೌಲರ್ ನಿರ್ಧಾರಕ್ಕೆ ಬೆಂಬಲ ವಿತ್ತರೆ ಆದೇ ವಿಶ್ವಾಸವನ್ನು ಉಳಿಸಿಕೊಂಡ ಡೆನ್ನಿಸಿ ಲಿಲ್ಲಿ ನಿಖರವಾಗಿ ಮಿಡಲ್ ಸ್ಟಂಪಿನ ಮೇಲೇ ಹಾಕಿ ಆಫ್ ಸ್ಟಂಪ್ ಕಡೆಗೇ ಸ್ವಿಂಗ್ ಆಗುವಂತೆ ಮತ್ತು ಬ್ಯಾಟ್ಸ್ ಮನ್ ಮತ್ತಿನ್ನೇನೂ ಮಾಡಲಾಗದೇ, ಒಂದೋ ಚೆಂಡನ್ನು ಆಡದೇ ಬಿಡಬೇಕು ಇಲ್ಲವೇ ಚೆಂಡು ಬ್ಯಾಟಿಗೆ ತಾಗಿಕೊಂಡು ಒಂದಲ್ಲಾ ಒಂದು ಸ್ಲಿಪ್ಪಿನ ಕಡೆಗೇ ಹೋಗುವಂತೆ ಬೋಲ್ ಮಾಡಿ ಔಟ್ ಮಾಡಿದರು.

ಸಾಮಾನ್ಯವಾಗಿ ಯಾವುದೇ ಬೌಲರ್ ಹ್ಯಾಟ್ರಿಕ್ನಲ್ಲಿದ್ದಾಗ, ಸಿಂಗಲ್ ಅನ್ನು ಕದಿಯುವುದನ್ನು ತಪ್ಪಿಸಲೂ ಅಥವಾ ತಂಡ ಗೆಲುವಿಗೆ ಹತ್ತಿರದಲ್ಲಿದ್ದಾಗ ಈ ರೀತಿಯಾದ ಅತ್ಯಂತ ಆಕ್ರಮಣಕಾರಿ ಮತ್ತು ಆಕ್ರಮಣಕಾರಿಯಾದ ಕ್ಷೇತ್ರರಕ್ಷಣೆಯನ್ನು ನಿಯೋಜಿಸಲಾಗುತ್ತದೆ. ಈ ರೀತಿಯಾಗಿ ಎಲ್ಲಾ 9 ಫೀಲ್ಡರ್‌ಗಳು ನಿಕಟ ಸ್ಥಾನದಲ್ಲಿ ಆಡಿಸುವ ಪದ್ದತಿಯನ್ನು umbrella field setting ಎಂದು ಹೇಳುತ್ತಾರೆ. ಹಿಂದೆಲ್ಲಾ ಈ ರೀತಿಯ ಕ್ಷೇತ್ರ ರಕ್ಷಣೆ ಸಾಮಾನ್ಯವಾಗಿತ್ತು ಆದರೆ ಇಂದು ಆ ರೀತಿಯಾಗಿ ಕರಾರುವಾಕ್ಕಾಗಿ ನಿಖರತೆಯಿಂದ ಬೋಲಿಂಗ್ ಮಾಡುವವರೇ ವಿರಳವಾಗಿವ ಕಾರಣ ಈ ಆಕ್ರಮಣಕಾರಿ ಕ್ಷೇತ್ರ ರಕ್ಷಣೆ ನೋಡುವುದು ವಿರಳವಾಗಿ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಬಹುತಾಗಿದೆ,

slip23 ಅಕ್ಟೋಬರ್ 1999 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇದೇ ರೀತಿ ಒಂಬತ್ತು ಸ್ಲಿಪ್‌ಗಳನ್ನು ಇಟ್ಟುಕೊಂಡು ಫೀಲ್ಡಿಂಗ್ ಮಾಡಿದ ಉದಾಹರಣೆಯಿದ್ದರೆ ಭಾರತದಲ್ಲಿಯೂ ಕೆಲವು ದೇಶೀ ಪಂದ್ಯಗಳಲ್ಲಿ ಈ ರೀತಿಯ ಕ್ಷೇತ್ರ ರಕ್ಷಣೆ ಮಾಡಿದ ಉದಾಹರಣೆಗಳಿವೆ.

 

ಒಟ್ಟಿನಲ್ಲಿ ಅದು ಆಟದಲ್ಲೇ ಆಗಿರಲಿ, ಕೆಲಸದಲ್ಲೇ ಆಗಿರಲಿ ಅಥವಾ ಜೀವನದಲ್ಲೇ ಆಗಿರಲೀ ಯಾವುದೇ ಕೆಲವನ್ನು ಮಾಡುವಾಗ, ಮಾಡುವ ಕೆಲಸದ ಮೇಲೆ ಆತ್ಮ ವಿಶ್ವಾಸವಿರಬೇಕು ಮತ್ತು ವಹಿಸಿದ ಕೆಲಸವನ್ನು ಕರಾರುವಾಕ್ಕಾಗಿ ನಿಖರತೆಯಿಂದ ಹೇಳಿದ ಸಮಯದಲ್ಲಿ  ಮಾಡಿ ಮುಗಿಸಿದಾಗ ನಮ್ಮ ಮೇಲಿನ ವಿಶ್ವಾಸ ಹೆಚ್ಚಾಗುತ್ತದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s