ಶೈಲ ಪಿತಾಮಹ ವಿಷ್ಣು ಶ್ರೀಧರ್ ವಾಕಣ್ಕರ್

16ನೇ ಶತಮಾನದ ಆರಂಭದಲ್ಲಿ ವ್ಯಾಪಾರಕ್ಕೆಂದು ಬ್ರಿಟೀಷರು ಭಾರತೆಕ್ಕೆ ಆಗಮಿಸುವ ವರೆಗೂ ಸುಮಾರು ಒಂದು ಸಾವಿರ ವರ್ಷಗಳ ಕಾಲ ಮುಸಲ್ಮಾನರ ಧಾಳಿ, ಬಲವಂತದ ಬಲಾತ್ಕಾರ, ಮತಾಂತರ , ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ವಿಶ್ವವಿದ್ಯಾನಿಲಯಗಳ ಮೇಲೇ ಪದೇ ಪದೇ ದಬ್ಬಾಳಿಕೆ ನಡೆಸುತ್ತಿದ್ದರೂ ಭಾರತೀಯರು ಸಮರ್ಥವಾಗಿ ಎದುರಿಸಿ ತಮ್ಮ ಅಸ್ಮಿತೆಯನ್ನು ಅಲ್ಲಲ್ಲಿ ಉಳಿಸಿಕೊಂಡಿದ್ದರು. ಆದರೆ ಯಾವಾಗ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟೀಷರು ನಮ್ಮಲ್ಲಿದ ಸಂಪತ್ತುಗಳನ್ನು ನೋಡಿ ದಂಗಾಗಿ ಹೇಗಾದರೂ ಮಾಡಿ ಇದನ್ನು ಲೂಟಿ ಹೊಡೆಯಲೇ ಬೇಕೆಂದು ನಿರ್ಧರಿಸಿ ಭಾರತೀಯರಲ್ಲಿ ಒಗ್ಗಟ್ಟಿಲ್ಲದ್ದನ್ನು ನೋಡಿ ಅದನ್ನು ಸಮರ್ಥವಾಗಿ ಬಳೆಸಿಕೊಂಡು ಇಡೀ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. 18 ಮತ್ತು 19ನೇ ಶತಮಾನದಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತೆಂದರೆ.

 • ಭಾರತ ಎಂದರೆ ಅದೊಂದು ಹಾವಾಡಿಗರ ದೇಶ, ಅನಾಗರೀಕರು ಮತ್ತು ಮೂಡ ನಂಬಿಕೆ ಜನರು ಇರುವಂತಹ ದೇಶ
 • ನಾವು ಪವಿತ್ರವೆಂದು ನಂಬುವ ಮತ್ತು ಪಾಲಿಸುವ ವೇದಗಳೇ ಭಾರತದಲ್ಲ
 • ಅಸಲಿಗೆ ಭಾರತೀಯರೆಂದರೆ ಕೇವಲ ದಕ್ಷಿಣ ಭಾರತದಲ್ಲಿರುವ ದ್ರಾವಿಡರು ಮಾತ್ರ, ಉಳಿದವೆಲ್ಲರೂ ಆರ್ಯರು ಮತ್ತು ಅವರು ಮದ್ಯ ಏಷ್ಯಾದಿಂದ ಭಾರತಕ್ಕೆ ಬಂದವರು ಹಾಗಾಗಿ ಅವರೂ ಸಹಾ ಸ್ಥಳೀಯರಲ್ಲ
 • ಭಾರತವನ್ನು ಇಲ್ಲಿಯ ಜನರ ಮೈಬಣ್ಣಗಳಿಂದ ವಿಭಜಿಸಿ ಕಪ್ಪು ಮೈಬಣ್ಣದವರು ಮಾತ್ರವೇ ಇಲ್ಲಿಯ ಸ್ಥಳಿಯರು, ಗೋದಿ ಮೈ ಬಣ್ಣದವರೆಲ್ಲಾ ಪರಕೀಯರು
 • ನಮ್ಮ ಪುರಾಣ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳು ಕಾಲ್ಪನಿಕ ಕಥೆಗಳು
 • ಗುರುಕುಲ ಶಿಕ್ಷಣ ಪದ್ದತಿ ಪುರೋಹಿತಶಾಹಿ ಪದ್ದತಿಯಾಗಿದ್ದು ಅದು ಕೆಲವೇ ಕಲವರ ಸ್ವತ್ತಾಗಿ ಅವರು ಮಾತ್ರಾ ವಿದ್ಯಾವಂತರಾಗಿ ಉಳಿದವರೆಲ್ಲರನ್ನೂ ದಬ್ಬಾಳಿಕೆಯಿಂದ ತುಳಿಯುತ್ತಿದ್ದಾರೆ.
 • ಇಲ್ಲಿಯ ಶಿಲ್ಪ ಕಲೆ ಮತ್ತು ಲಲಿತ ಕಲೆಗಳೂ ಸಹಾ ಇಲ್ಲಿಯದಾಗಿರದೇ, ಮಧ್ಯ ಪ್ರಾಚ್ಯದಿಂದ ಎರವಲು ಪಡೆದದ್ದಾಗಿದೆ
 • ಭಾರತದ ಪವಿತ್ರ ನದಿಯಾದ ಸರಸ್ವತಿ ಎಂಬುದು ಕಾಲ್ಪನಿಕ ಅಂತಹ ನದಿ ಇರಲೇ ಇಲ್ಲ

ಹೀಗೆ ಹೇಳುತ್ತಾ ಹೋದಲ್ಲಿ ಪುಟಗಟ್ಟಲೆ ಬರೆಯ ಬಹುದಾದಷ್ಟು ರೀತಿಯಲ್ಲಿ ಭಾರತದ ಇತಿಹಾಸವನ್ನು ತಮ್ಮ ಅನುಕೂಲಕ್ಕೆ ಮತ್ತು ಭಾರತೀಯರು ತಮ್ಮನ್ನು ತಾವು ಅಸಹ್ಯಪಟ್ಟುಕೊಳ್ಲುವಷ್ಟರ ಮಟ್ಟಿಗೆ ಮಾರ್ಪಾಡು ಮಾಡಿ ನಮ್ಮನ್ನು ಉದ್ಧಾರ ಮಾಡಲೆಂದೇ ಬಂದಿರುವುದಾಗಿಯೂ ಅವರ ಮತಕ್ಕೆ ಪರಿವರ್ತನೆಯಾಗಿ ಇಲ್ಲವೇ ಅವರ ಶಿಕ್ಷಣ ಪದ್ದತಿಯಲ್ಲಿ ಇಂಗ್ಲೀಷ್ ಕಲಿತಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನ ಮಾನಗಳು ಲಭಿಸುತ್ತವೆ ಎಂಬ ತಪ್ಪು ಕಲ್ಪನೆಯನ್ನೇ ಮೂಡಿಸಿದ್ದವು.

ನಮ್ಮ ಹಿರಿಯರು ರೂಢಿಸಿದ್ದ ಪದ್ದತಿಗಳೆಲ್ಲವೂ ವಿಜ್ಞಾನಿಕ ನಮ್ಮಿ ಇತಿಹಾಸ ಮತ್ತು ಸಂಸ್ಕೃತಿಗಳು ಕೇವಲ ಕೆಲವಾರು ಸಾವಿರ ವರ್ಷಗಳಲ್ಲ,ಅದು ಲಕ್ಷಾಂತರ ಹಿಂದಿನದ್ದು ಎಂದು ಖಡಾಖಂಡಿತವಾಗಿ ಅಧಾರ ಸಹಿತ ಮಂಡಿಸುವಂತಹ ಯಾವುಡೇ ಸಾಕ್ಷಗಳಾಗಲಿ ಅಥವಾ ಸಾಕ್ಷಿಗಳಿದ್ದರೂ ಅದನ್ನು ಎತ್ತಿ ತೋರಿಸುವ ಮಹಾನುಭಾವರ ಕೊರೆತೆ ಎದ್ದು ಕಾಣುತ್ತಿತ್ತು. ಅಂತಹ ಸಮಯದಲ್ಲಿ ಭಾರತಕ್ಕೆ ಆಶಾಕಿರಣವಾಗಿ ತಮ್ಮನ್ನು ತಾವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲವನ್ನು ಒಂದೊಂದಾಗಿ ಎಳೆ ಎಳೆಯಾಗಿ ದಾಖಲೆಗಳು ಮತ್ತು ಪುರಾವೆಗಳ ಮೂಲಕ ಇಡೀ ಜಗತ್ತಿಗೆ ತೋರಿಸಿ ಭಾರತದ ಹಿರಿಮೆ ಮತ್ತು ಗತಿಮೆ ತಂದು ಕೊಟ್ಟವರೇ ಶ್ರೀ ವಿಷ್ಣು ಶ್ರೀಧರ್ ವಾಕಣ್ಕರ್ ಅವರನ್ನು ಹರಿಬೌ ವಾಕಂಕರ್ ಎಂದೂ ಕರೆಯುತ್ತಾರೆ. ಆವರು ಭಾರತೀಯ ಖ್ಯಾತ ಪುರಾತತ್ವಶಾಸ್ತ್ರಜ್ಞರಾಗಿದ್ದರು ಮತ್ತು 1957 ರಲ್ಲಿ ಭಿಂಬೆಟ್ಕಾ ಬಂಡೆಯ ಗುಹೆಗಳನ್ನು ಕಂಡುಹಿಡಿದವರು. ಮುಂದೆ 1970 ರಲ್ಲಿ, ಯುನೆಸ್ಕೋ ಈ ಭೀಂಬೆಟ್ಕಾ ಶಿಲಾ ಗುಹೆಗಳನ್ನು ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ.

ಮಧ್ಯಪ್ರದೇಶದ ನೀಮಚ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದ ವೈದೀಕ ಕುಟುಂಬದ ಶ್ರೀಧರ ಸಿದ್ಧನಾಥ ವಾಕಣ್ಕರ್ ಮತ್ತು ಸೀತಾಬಾಯಿ ದಂಪತಿಗಳ ಎರಡನೇಯ ಮಗನಾಗಿ 4 ಮೇ 1919ರಲ್ಲಿ ಅವರ ಜನಿಸಿದರು. ಚಿಕ್ಕಂದಿನಿಂದಲೇ ಬಹಳ ಚುರುಕಾಗಿದ್ದ ವಿಷ್ಣು ಎಳೆಯ ವಯಸ್ಸಿನಲ್ಲಿಯೇ ತನ್ನನ್ನು ನೋಡಿಕೊಳ್ಳುವ ಆಯಾಳ ಮೂಲಕ ಸುಲಲಿತವಾಗಿ, ನಿರರ್ಗಳವಾಗಿ ಸ್ಥಳೀಯ ಮಾಲವೀ ಭಾಷೆಯ ಪ್ರಾವೀಣ್ಯತೆ ಪಡೆದುಕೊಳ್ಳುತ್ತಾನೆ. ಓದಿನಲ್ಲಿ ಸದಾ ಚುರುಕಾಗಿದ್ದ ಹುಡುಗ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದು ತನ್ನ ಕಾಲೇಜು ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ಮೂರನೇ ವರ್ಷದ ಸಂಘಶಿಕ್ಷಾವರ್ಗವನ್ನೂ ಯಶಸ್ವಿಯಾಗಿ ಮುಗಿಸಿ ಕಲಾ ವಿಭಾಗದಲ್ಲಿ ತನ್ನ ಪದವಿಯನ್ನು ಪಡೆದುಕೊಳ್ಳುತ್ತಾರೆ. ಪದವಿ ಮುಗಿಸಿದ ನಂತರ ಕೆಲಕಲ ಸಂಘದ ಪ್ರಚಾರಕರಾಗಿ ಮಧ್ಯಪ್ರದೇಶದಲ್ಲಿಯೇ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾಗ , ಲಲಿತ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಚಾರಣ, ಹಸ್ತಪ್ರತಿಗಳ ಸಂಗ್ರಹ, ಶಾಸನಗಳ ಓದುವಿಕೆ ಹೀಗೆ ಹತ್ತು ಹಲವಾರು ವಿಷಯಗಳ ಕುರಿತಾಗಿ ಮಧ್ಯಪ್ರದೇಶಾದ್ಯಂತ ಓಡಾಡಿ ತಕ್ಕ ಪ್ರಾವೀಶ್ಯತೆಯನ್ನು ಪಡೆದುಕೊಳ್ಳುತ್ತಾರೆ. ಮುಂದೆ ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿಹೆಡಿಯನ್ನೂ ಸಹಾ ಮುಗಿಸುತ್ತಾರೆ. ಇದೇ ಸಮಯದಲ್ಲಿ ಥಾರ್ ಪ್ರದೇಶದ ಹೆಸರಾಂತ ಚಿತ್ರಕಲಾವಿದರಾದ ಫಡ್ಕೆಯವರ ಪರಿಚಯವಾಗಿ ಚಿತ್ರಕಲೆಯಲ್ಲಿಯೂ ತಮ್ಮ ಪ್ರಾವೀಣ್ಯತೆ ಪಡೆಯುತ್ತಾರೆ.

ಹೀಗೆ ಸಕಲಕಲಾ ವಲ್ಲಭರಾಗಿದ್ದ ವಾಕಣ್ಕರ್ ಅವರು 1957 ರ ಮಾರ್ಚ್ 23 ರಂದು,  ಭೋಪಾಲ್‌ನಿಂದ ನಾಗ್‌ಪುರದ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಾರ್ಗದ ಮಧ್ಯದಲ್ಲಿದ್ದ ಬಹು ದೊಡ್ಡ ಬೆಟ್ಟ ಗುಡ್ಡಗಳ ಸಾಲು ಅವರ ಮನಸನ್ನು ಸೆಳೆಯುತ್ತದೆ ಹಾಗೆಯೇ ಕುತೂಹಲದಿಂದ ಈ ಪ್ರದೇಶ ಯಾವುದು ಎಂದು ಸಹ ಪ್ರಯಾಣಿಕರೊಂದಿಗೆ ವಿಚಾರಿಸಿದಾಗ ಅದು ಪ್ರಾಚೀನ ಗುಹೆಗಳ ಭೀಂಬೆಟ್ಕಾ ಬೆಟ್ಟಗುಡ್ಡಗಳು ಎಂದು ತಿಳಿಸಿ ರೈಲಿನಿಂದ ಇಳಿಯಲು ಸಿದ್ಧರಾಗುತ್ತಾರೆ. ಆಗ ಅರೇ ಮುಂದಿನ ನಿಲ್ದಾಣವಿರುವುದು ಇಲ್ಲಿಂದ ಬಹುದೂರದಲ್ಲಿರುವ ಹೋಶಂಗಾಬಾದಿನಲ್ಲೇ ಅಲ್ಲವೇ ಎಂದಾಗ, ಹೌದು ಆದರೆ ಇಲ್ಲೇ ಇರುವ ಬರಖೇಡದ ತಿರುವಿನ ಬಾರೆಯಲ್ಲಿ ರೈಲಿನ ವೇಗ ಸ್ವಲ್ಪ ಕಡಿಮೆಯಾಗುತ್ತದೆ ಆಗ ನಾವುಗಳು ಧುಮುಕುತ್ತೇವೆ ಎಂದು ಹೇಳಿದಾಗ, ಹಿಂದೂ ಮುಂದೇ ನೋಡದೇ ವಾಕಣ್ಕರ್ ಅವರೂ ಕೂಡಾ ಆ ಸಹಪ್ರಯಾಣಿಕರ ಜೊತೆ ಚಲಿಸುವ ರೈಲಿನಿಂದ ಧುಮುಕುತ್ತಾರೆ. ಹಾಗೆ ಧುಮುಕುವ ಭರದಲ್ಲಿ ಕಾಲು ಜಾರಿ ಬಿದ್ದು ಮೈಕೈ ಎಲ್ಲಾ ತರಚಿ ಗಾಯಗಾಳಾದರೂ ಅದನ್ನು ಲೆಖ್ಖಿಸದೇ ಹರಿಯುತ್ತದೆ ಅವರ ಚಿತ್ತ ಭೀಂಬೆಟ್ಕಾದತ್ತ.

ಮಧ್ಯಪ್ರದೇಶ ರಾಜಧಾನಿ ಭೂಪಾಲದಿಂದ ಕೇವಲ 28 ಕಿ.ಮೀ. ದೂರದಲ್ಲಿರುವ ಈ ಗುಹೆಗಳ ಸಾಲಿಗೆ ಶಿಲಾಯುಗದ ನಂಟಿದೆ. ಈ ದೇಶದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಕ್ಕೂ ಸಹ ಆ ಗುಹೆಗಳ ಜೊತೆ ಸಂಬಂಧವಿದೆ. ಹಾಗಾಗಿ ಈ ಗುಹೆಯ ಹೆಸರು ಭೀಮ್ ಬೆಟ್ಕ ! ಅಂದರೆ ಭೀಮನ ಬೆಟ್ಟಗಳು ಎಂಬುದಾಗಿದೆ. ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಇದೇ ಗುಹೆಯಲ್ಲಿಯೇ ಕಳೆದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕಾರಣಕ್ಕೆ ಈ ಜಾಗಕ್ಕೆ ಭೀಮ್‌ಬೈತ್ಕಾ ಎಂಬ ಹೆಸರು ಬಂದಿದ್ದು ಎನ್ನಲಾಗಿದೆ. ಭೀಮ್‌ಬೈತ್ಕಾ ಎಂದರೆ ಭೀಮ ಕುಳಿತ ಜಾಗ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಬಂಡೆಯಲ್ಲಿ ಭೀಮ ಕುಳಿತಿದ್ದಂತಹ ಗುರುತು ಸಹಾ ಇದೆ.

ಶಿಲಾಯುಗದಿಂದ ಹಿಡಿದು ಇಲ್ಲಿಯವರೆಗೆ ಅನೇಕ ಆದಿವಾಸಿ ಜನಾಂಗಳ ಆವಾಸ ಸ್ಥಾನ ಎನಿಸಿಕೊಂಡಿರುವ ಆ ಗುಹೆಗಳು ನಮ್ಮ ಪರಂಪರೆ ಹಾಗೂ ಇತಿಹಾಸದ ಪಳಯುಳಿಕೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಹಾಗಾಗಿ ಇಲ್ಲಿ ಆದಿಮಾನವರು ಇದ್ದರು ಎಂಬುದು ಸ್ಪಷ್ಟ. ಅದಕ್ಕೆ ಇಲ್ಲಿರುವ ಕುರುಹುಗಳೇ ಸಾಕ್ಷಿ. ಅದಕ್ಕೆ ಪುರಾವೆಗಳೆಂಬಂತೆ ಅಂದಿನ ಕಾಲದ ಚಿತ್ರಣವನ್ನು ವಿವರಿಸುವ ಬಣ್ಣ ಬಣ್ಣದ ಚಿತ್ರಗಳನ್ನು ಬಂಡೆಗಳ ಮೇಲೆ ಮೂಡಿಸಿದ್ದಾರೆ. ಎಷ್ಟೋ ಸಹಸ್ರ ವರ್ಷಗಳ ಹಿಂದೆ ಬಿಡಿಸಿದ ಬಣ್ಣದ ಚಿತ್ರಗಳು ಇಂದಿಗೂ ಮಾಸಿಲ್ಲವೆಂದರೆ ಅವರಿಗೆ ಬಣ್ಣಗಳ ರಾಸಾಯನಿಕ ಮಿಶ್ರಣ ಸಂಪೂರ್ಣ ಅರಿವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಬಣ್ಣಗಳನ್ನು Carbon dating (ಸಾವಯವ ವಸ್ತುಗಳ ವಯಸ್ಸು ಅಥವಾ ದಿನಾಂಕವನ್ನು ನಿರ್ಧರಿಸುವುದು) ವಿಧಾನದ ಮೂಲಕ ಪರೀಕ್ಷೆ ಮಾಡಿದಾಗ ಈ ಬಣ್ಣಗಳ ಕಾಲಮಾನ ಹತ್ತು ಸಾವಿರಕ್ಕೂ ಅಧಿಕ ವರ್ಷವೆಂದೇ ಗೊತ್ತಾಗಿದೆ. .

ಶಿಲಾಯುಗದ ಕಥೆ ಹೇಳುವ ಇಲ್ಲಿ ಭಿತ್ತಿ ಚಿತ್ರಗಳಿಗೆ ಸುಮಾರು 8000 ವರ್ಷಗಳಾಗಿವೆ ಎಂದು ಅಂದಾಜಿಸಲಾಗಿದೆ. ಪ್ರಾಣಿಗಳನ್ನ ಬೇಟೆ ಆಡುತ್ತಿರೋ ಮನುಷ್ಯರು, ವಿಚಿತ್ರವಾದ ಆಕಾರದ ನಿಗೂಢ ಜೀವಿಗಳು, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳು, ನೃತ್ಯ ಮಾಡುತ್ತಿರುವ ನರ್ತಕಿಯರು, ಸಂಗೀತದ ಚಿಹ್ನೆಗಳು, ಹಲ್ಲಿ, ಆನೆ, ಸಿಂಹ, ಹುಲಿ, ಜಿಂಕೆ, ಹಸು, ಮೊಸಳೆ ಹೀಗೆ ಇಲ್ಲಿನ ಬಂಡೆಗಳಲ್ಲಿ ಚಿತ್ರಿಸಲ್ಪಟ್ಟಿರುವ ಭಿತ್ತಿಚಿತ್ರಗಳು ಶಿಲಾಯುಗದಲ್ಲಿ ಬಾಳಿ ಹೋದ ಮಾನವರ ಕಥೆಗಳನ್ನು ನಮ್ಮ ಕಣ್ಣ ಮುಂದೆ ತರುತ್ತವೆ. ಕೆಲವು ಇತಿಹಾಸಕಾರರ ಪ್ರಕಾರ ಭೀಂಬೇಟ್ಕ ಗುಹೆಗಳಲ್ಲಿರುವ ವರ್ಣಚಿತ್ರಗಳಿಗೆ ಸುಮಾರು 30 ಸಾವಿರ ವರ್ಷಗಳಾಗಿವೆಯಂತೆ. ಇಷ್ಟೆಲ್ಲ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರೋ ಭೀಮನ ಗುಹೆಗಳನ್ನು ಪ್ರಪ್ರಥಮಬಾರಿಗೆ ಜಗತ್ತಿಗೆ ಪರಿಚಯಿಸಿದ ಕೀರ್ತಿ ಶ್ರಿ ವಿಷ್ಣು ವಾಕಣ್ಕರ್ ಆವರಿಗೆ ಸಲ್ಲುತ್ತದೆ. ಈ ಮೂಲಕ ಭಾರತದ ಇತಿಹಾಸ ಸಂಸ್ಕೃತಿ ಮತ್ತು ಪಳಿಯುಳಿಕೆಗಳು ಕೇವಲ ಕೆಲವೇ ಸಾವಿರವರ್ಷಗಳ ಹಳೆಯದಾಗಿರದೇ ಇದನ್ನು ಸರಿಯಾಗಿ ವಿಶ್ಲೇಷಿಸಿ ಇಲ್ಲಿನ ಗುಹೆಗಳಿಗೆ ಬರೋಬರಿ 1 ಲಕ್ಷ ವರ್ಷಗಳಾಗಿವೆ ಎಂಬ ಅಚ್ಚರಿಯ ಮಾಹಿತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟರು. ಭಾರತೀಯ ನಾಗರೀಕತೆ ಇಷ್ಟೋಂದು ಹಳೆಯದ್ದು ಎಂದು ತಿಳಿದ ಮೇಲೆ ಇಡೀ ಜಗತ್ತೇ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿ ತೋರಿಸಿದರು ಶ್ರೀ ವಾಕಣ್ಕರ್. ಇದಕ್ಕೂ ಮೊದಲು 1888 ರಲ್ಲಿ, ಶ್ರೀ ಕಿಂಕ್ಡ್; ಎಂಬ ಬ್ರಿಟಿಷ್ ಸರ್ವೇಯರ್ ಇಲ್ಲೊಂದು ಚಿತ್ರಗಳುಳ್ಳ ಬಂಡೆಗಳಿವೆ ಎಂಬ ಮಾಹಿತಿಯನ್ನು ದಾಖಲಿಸಿದ್ದರೇ ಹೊರತು ಈ ಪರಿಯಾದ ಆಧ್ಯಯನ ಮಾಡಿರಲಿಲ್ಲ. ಹಾಗಾಗಿ 1970 ರಲ್ಲಿ ಯುನೆಸ್ಕೋ ಭೀಂಬೆಟಕ ಗುಹೆಗಳನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು ಮತ್ತು ವಾಕಣ್ಕರ್ ಅವರನ್ನು ಶೈಲಾ ಪಿತಾಮಹ ಎಂದು ಬಣ್ಣಿಸಿತು. ಅಂದಿನಿಂದ ಈ ಪ್ರದೇಶ ವಿಶ್ವದ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿ ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಇದು ಸ್ಥಾನ ಪಡೆದುಕೊಂಡಿದೆ.

wak2ಈ ಸಾಧನೆ ಕೇವಲ ಒಂದೆರಡು ವರ್ಷದ್ದಲ್ಲ. ಇದರ ಸಮಗ್ರ ಅಧ್ಯಯನಕ್ಕಾಗಿ ಆವರು ಸತತವಾಗಿ ಸುಮಾರು 17 ವರ್ಷಗಳ ಕಾಲ ಆ ಪ್ರದೇಶದಲ್ಲಿ ಒಬ್ಬಂಟಿಯಾಗಿ ಅಲೆದು ಎಲ್ಲಾ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಗೆಡ್ಡೆ ಗೆಣೆಸುಗಳೇ ಅಕ್ಷರಶಃ ಅವರ ಅಹಾರ. ಆಗಸದ ಅಡಿಯಲ್ಲಿ ನಕ್ಷತ್ರಗಳನ್ನು ಎಣಿಸುತ್ತಲ್ಲೇ ಅವರ ನಿದ್ದೆ. ರಾತ್ರಿಯ ಹೊತ್ತು ನೆಲವನ್ನು ಸ್ವಲ್ಪ ಅಗೆದು ಅದರೊಳಗೆ ಆಲೂಗೆದ್ಡೆ ಮತ್ತಿತರ ಗೆಡ್ಡೇ ಗೆಣಸುಗಳನ್ನು ಹೂತಿಟ್ತು ಅದರೆ ಮೇಲೆ ಬೆಂಕಿ ಹಚ್ಚಿಡುತ್ತಿದ್ದರು. ರಾತ್ರಿ ಇಡೀ ಉರಿಯುತ್ತಿರುವ ಬೆಂಕಿ ಕಾಡು ಪ್ರಾಣಿಗಳಿಂದ ರಕ್ಷಿಸುತ್ತಿದ್ದಲ್ಲದೇ, ಅದರ ಶಾಖಕ್ಕೆ ಅದರಡಿಯಲ್ಲಿ ಹೂತಿಟ್ಟಿದ್ದ ಗೆಡ್ಡೆಗಳು ಬೇಯುತ್ತಿದ್ದವು. ಬೆಳಗಿನ ಹೊತ್ತು ಅಲ್ಲಿಯೇ ಹರಿಯುತ್ತಿದ್ದ ಝರಿಗಳಲ್ಲಿ ಸ್ನಾನ ಇದೇ ಆಹಾರ ಹೀಗಿತ್ತು ಅವರ ಜೀವನ.

ಇದಾದ ನಂತರ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಿರುವಂತಹ ಸರಸ್ವತಿ ನದಿಯ ಪಾತ್ರವನ್ನು ಕಂಡುಹಿಡಿಯುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಪುರಾಣ ಕಾಲದಲ್ಲಿ ಸರಸ್ವತಿ ನದಿ ಸಿಹಿನೀರಿನ ಪ್ರಮುಖ ಮೂಲವಾಗಿತ್ತು ಎಂದರೆ ಅಂದಿನ ಕಾಲದ ಬ್ರಿಟಿಷ್ ಮತ್ತು ಕಮ್ಯೂನಿಷ್ಟ್ ಇತಿಹಾಸಕಾರರು ಸರಸ್ವತಿ ನದಿಯ ಹಿಂದಿನ ಅಸ್ತಿತ್ವವನ್ನೇ ನಿರಾಕರಿಸಿ ಅದೊಂದು ಕಾಲ್ಕನಿಕ ಕಟ್ಟು ಕಥೆಗಳ ಪುರಾಣ ಜರಿದಿದ್ದರು.

ಛಲಬಿಡದ ತ್ರಿವಿಕ್ರಮನಂತೆ ವಾಕಣ್ಕರ್ ಆಮೂಲಾಗ್ರವಾಗಿ ನಮ್ಮ ಹಿಂದೂ ಧರ್ಮದ ಪುರಾಣಗಳನ್ನು ಓದಿ ಅನೇಕ ವಿಷಯಗಳನ್ನು ಸಂಗ್ರಹಿಸಿಕೊಂಡು 1983 ರಲ್ಲಿ, ಆರ್ಎಸ್ಎಸ್ ನ ಅನುಭವಿ ಮೊರೊಪಂತ್ ಪಿಂಗಲೆ ಮತ್ತು ಇತರೇ 18 ಸದಸ್ಯರ ತಂಡದೊಂದಿಗೆ ಸರಸ್ವತಿ ನದಿಯ ಹುಡುಕಾಟದ ಅಭಿಯಾನವನ್ನು ವಾಯುವ್ಯ ಭಾರತದ ರಾಜ್ಯಗಳಲ್ಲಿ (ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್) ಆರಂಭಿಸಿದರು.

ಸರಸ್ವತಿಯ ಹರಿವು ವಾಯುವ್ಯ ಭಾರತದಲ್ಲೇ ಅತಿ ದೊಡ್ದದ್ದಾಗಿತ್ತು ಮತ್ತು ಸಿಂಧೂ ಕಣಿವೆಯ ನಾಗರಿಕತೆಯು ಸರಸ್ವತಿಯ ಮೇಲೆ ಅವಲಂಬಿತವಾಗಿದೆ ಎಂದು ಕಂಡು ಕೊಂಡರು.ಸುಮಾರು 3500 ವರ್ಷದ ಹಿಂದೆ ಸರಸ್ವತಿ ನದಿ ರಭಸವಾಗಿ ಹರಿಯುತ್ತಿತ್ತು. ಅದರ ಅಗಲವೇ 20 ಕಿ.ಮೀ.ಗಳಷ್ಟಿತ್ತು. ಆಗ ಸಂಭವಿಸಿದ ಪ್ರಬಲ ಭೂಕಂಪದಿಂದ ನದಿಯ ಅರ್ಧಭಾಗ ಮುಚ್ಚಿ ಆಗ್ನೇಯ ಭಾಗಕ್ಕೆ ಹರಿಯ ತೊಡಗಿ ಅದು ಗಂಗೆ ಮತ್ತು ಯಮುನಾ ನದಿಗಳ ಭಾಗವಾಯಿತು ಮತ್ತು 2ನೇ ಸಲ ಭೂಕಂಪ ಸಂಭವಿಸಿದಾಗ ಇನ್ನುಳಿದ ಭಾಗ ಮುಚ್ಚಿಹೋಯಿತು ಎಂಬುದನ್ನು ಎತ್ತಿ ತೋರಿಸಿ ಸರಸ್ವತಿ ನದಿಯ ಅಸ್ತಿತ್ವವನ್ನು ಜಗತ್ತಿಗೆ ಸಾರಿ ಹೇಳಿದರು.

ಇನ್ನು ಮಧ್ಯ ಏಷ್ಯದಿಂದ ಆರ್ಯರು ಆಕ್ರಮಣಕಾರರಾಗಿ ಭಾರತಕ್ಕೆ ಬಂದರು ಎಂದು ಅಂದಿನ ಕಾಲದ ಇತಿಹಾಸಕಾರರು ಬಣ್ಣಿಸಿದರೆ,
ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಒಂದು ರಾಖಿಗಾರ್ಹಿ ಎಂಬ ಹಳ್ಳಿಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಡಿಎನ್‌ಎ ಅಧ್ಯಯನವು ಸ್ಪಷ್ಟವಾಗಿ ಇದು ಸಿಂಧೂ ನದಿಯ ನಾಗರೀಕತೆಯಲ್ಲಿದ್ದ ಹರಪ್ಪಾ ಮತ್ತು ಮಹೆಂಜದರೋ ನೊಂದಿಗೆ ಸರಿಹೊಂದುವ ಕಾರಣ ಅವರು ಸ್ಥಳೀಯರು ಮತ್ತು ಆರ್ಯರು ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದರು ಎನ್ನುವ ಇತಿಹಾಸವೇ ತಪ್ಪು ಎಂಬುದನ್ನು ತೋರಿಸಿಕೊಟ್ಟರು ಶ್ರೀ ವಿಷ್ಣು ವಾಕಣ್ಕರ್.

ಹೀಗೆ ಭಾರತೀಯರಿಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ಬರೆಯುವುದೂ ಸಹ ಗೊತ್ತಿಲ್ಲ ಎಂದು ಎಂದು ಮೂದಲಿಸುತ್ತಿದ್ದ ವಿದೇಶಿಗರಿಗೆ ಅವರು ಹೇಳುತ್ತಿರುವ ಇತಿಹಾಸವೇ ಸುಳ್ಳು. ಇತಿಹಾಸಕ್ಕೆ ಅರ್ಥ ಹಾಗೂ ವಿವರಣೆ ಕೊಟ್ಟವರೇ ಭಾರತೀಯರು. ಪ್ರತಿಯೊಂದು ವಂಶವೃಕ್ಷದ ಬಗ್ಗೆ ಬರೆಯುವುದು ಭಾರತೀಯರಿಗೆ ಗೊತ್ತಿತ್ತು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಶ್ರೀ ವಿಷ್ಣು ವಾಕಣ್ಕರ್.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ 1975 ರಲ್ಲಿದ್ದ ಶ್ರೀಮತಿ ಇಂದಿರಾ ಗಾಂಧಿಯವರ ಕಾಂಗ್ರೇಸ್ ಸರ್ಕಾರ ಶ್ರೀ ವಿಷ್ಣು ವಾಕಣ್ಕರ್ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲು ಮುಂದಾಯಿತು. ಪ್ರಶಸ್ಥಿ ಪ್ರಧಾನ ಸಮಾರಂಭದಕ್ಕೆ ಆರ್.ಎಸ್.ಎಸ್ ಗಣವೇಶದ ಕರೀ ಟೋಪಿಯನ್ನು ಧರಿಸಿ ಹೋಗಿದ್ದ ವಾಕಣ್ಕರ್ ಅವರನ್ನು ಅಲ್ಲಿಯ ಅಧಿಕಾರಿಗಳು ಆ ಟೋಪಿಯನ್ನು ತೆಗೆಯಲು ಸೂಚಿಸಿದರು. ಆದರೆ ತಮ್ಮೆಲ್ಲಾ ಈ ಸಾಧನೆಗಳಿಗೆ ಮೂಲ ಪ್ರೇರಣೆಯೇ ಸಂಘ. ಹಾಗಾಗಿ ಒಬ್ಬ ಸಂಘದ ಸ್ವಯಂಸೇವಕನಾಗಿ ಈ ಟೋಪಿ ನನ್ನ ಉಡುಗೆಯ ಭಾಗವಾಗಿದೆ. ಈ ಟೋಪಿಯಿಂದಾಗಿ ನನಗೆ ಪ್ರಶಸ್ತಿ ಕೊಡಲು ಸಾಧ್ಯವಿಲ್ಲವೆಂದಲ್ಲಿ ಅಂತಹ ಪ್ರಶಸ್ತಿಯೇ ಬೇಡ ಎಂದು ಸಮಾರಂಭದಿಂದ ಹೊರನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ ಎಂಬುದನ್ನು ಅರಿತ ಅಧಿಕಾರಿಗಳು ಸಂಘದ ಟೋಪಿಯೊಂದಿಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ವಾಕಣ್ಕರ್ ಅವರ ಸಂಶೋದನೆ ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗಿರದೇ ಅಮೇರಿಕಾ, ರಷ್ಯಾ ಸ್ಪೇನ್, ಇಟಲಿ, ಇಂಗ್ಲೇಂಡ್ , ಸಿಂಗಾಪುರ್ ಮುಂತಾದ ದೇಶಗಳಿಗೆ ಹೋಗಿ ಅಲ್ಲಿ ಹಲವಾರು ಉಪನ್ಯಾಸಗಳನ್ನು ಮಾಡಿದ್ದಲ್ಲದೇ ಅಲ್ಲಿ ಕೆಲವೊಂದು ಕಡೆ ಉತ್ಕತನ ನಡೆಸಿ ಅಲ್ಲಿ ಸಿಕ್ಕಿದ ಕನ್ನಡಿಯ ಚೌಕಟ್ಟು ಮತ್ತು ಅದರಲ್ಲಿದ್ದ ಲಕ್ಷಿಯ ವಿಗ್ರಹವನ್ನು ತೋರಿಸಿ ಅಂದಿನ ಕಾಲದಲ್ಲಿಯೇ ಭಾರತ ಮತ್ತು ರೋಮ್ ನಡುವೆ ವ್ಯಾಪಾರ ವಹಿವಾಟುಗಳು ನದೆಯುತ್ತಿತ್ತು ವಾಸ್ಕೋಡಿಗಾಮಾ ಭಾರಕ್ಕೆ ಬಂದ ಮೊದಲ ವ್ಯಾಪಾರಿ ಎಂಬುದು ಸತ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದರು.

1984 ರಲ್ಲಿ ದಕ್ಷಿಣ ಅಮೇರಿಕಾ ಪ್ರವಾಸ ಮಾಡಿ ಅಲ್ಲಿಯ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರ ಆಚಾರ ಪದ್ದತಿಗಳಿಗೂ ನಮ್ಮ ಸನಾತನ ಹಿಂದೂ ಪದ್ದತಿಗಳಿಗೂ ಅನೇಕ ಸಾಮ್ಯತೆಗಳನ್ನು ತೋರಿಸಿಕೊಟ್ಟರು ನಾವು ಹೋಮ ಮಾಡುವಾಗ ಸ್ವಾಹಾ ಎಂದರೆ ಅವರು ಮಾಡುವ ಹೋಮದಲ್ಲಿ ಹವಾಹ ಎಂಬುದಾಗಿದೆ. ಸ್ವಾಹಾ ಎಂಬುದೇ ಅಪಭ್ರಂಷವಾಗಿ ಹವಾಹ ಆಗಿದೆ ಎಂದು ಹೇಳಿದಾಗ ಯಾರೂ ಸಹಾ ಅಲ್ಲಗಳಿಯಲಾಗಲಿಲ್ಲ. ಇಷ್ಟೇಲ್ಲಾ ತಿರುಗಾಟಗಳಿಂದಾಗಿ ಜರ್ಜರಿತವಾಗಿದ್ದ ಅವರ ದೇಹಕ್ಕೆ ಪಾರ್ಶ್ವವಾಯು ಬಡಿಯಿತು. ಆದರೆ ಚೈತ್ಯನದ ಚಿಲುಮೆ ಮತ್ತು ಧೃಢ ಸಂಕಲ್ಪದವರಾದ ವಾಕಣ್ಕರ್ ಬಹುಬೇಗನೆ ಚೇತರಿಸಿಕೊಂಡು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು.

ಕಡೆಯದಾಗಿ ಅವರು ಪ್ರಪಂಚದ ಕಾಲಘಟ್ಟವನ್ನು ನಿರ್ಧರಿಸಲು ಅಕ್ಷಾಂಶ ಮತ್ತು ರೇಖಾಂಶಗಳ ಆಧಾರವಾಗಿ ಪ್ರಪಂವದ ಮಧ್ಯ ಭಾಗ ಎಂದು ಗ್ರೀನಿಜ್ ಟೈಮ್ ಅಳವಡಿಸಿಕೊಂಡಿದೆ. ಆದರೆ ನಿಜವಾಗಿಯೂ ಭಾರತದ ಉಜ್ಜೈನಿಯೇ ಕಾಲಗಣನೆಯ ಪ್ರಖಾರ ಶೂನ್ಯ ರೇಖಾಂಶ ಸ್ಥಾನ ಎಂಬುದನ್ನು ಲೆಖ್ಖಾಚಾರ ಮತ್ತು ಭಾರತೀಯ ಪುರಾಣಗಳ ಮೂಲಕ ಸ್ಪಷ್ಟವಾಗಿ ನಿರೂಪಿಸಿದರು.

ಭಾರತೀಯರಲ್ಲಿಯೇ, ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳು ಕ್ರಮೇಣವಾಗಿ ಕಡಿಮೆಯಾಗುತ್ತಿದ್ದನ್ನು ಮನಗಂಡು ಲಲಿತ ಕಲಾ ಕ್ಷೇತ್ರದಲ್ಲಿ ಭಾರತೀಯರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತಾಗ ಬೇಕು ಎಂದು ನಿರ್ಧರಿಸಿ 1981ರಲ್ಲಿ ಸಂಘ ಪರಿವಾರದ ಲಲಿತಕಲೆಯ ಅಂಗವಾಗಿ ಸಂಸ್ಕಾರ ಭಾರತೀ ಆರಂಭವಾದಾಗ ಶ್ರೀ ವಿಷ್ಣು ವಾಕಣ್ಕರ್ ಅವರೂ ಸಹಾ ಅದರ ಸಂಸ್ಥಾಕರಲ್ಲಿ ಒಬ್ಬರಾಗಿದ್ದರು.

wak31988ರಲ್ಲಿ ಸಿಂಗಾಪುರಕ್ಕೆ ಉಪನ್ಯಾಸ ಮಾಡಲು ಹೋಗಿದ್ದಾಗ ಏಪ್ರಿಲ್3 ರಂದು ಅಲ್ಲಿ ಪೆಸಿಫಿಕ್ ಹೋಟೆಲ್ ಒಂದರಲ್ಲಿ ತಮ್ಮ ನೆಚ್ಚಿನ ತೈಲ ಚಿತ್ರವನ್ನು ಬಿಡಿಸುತ್ತಿದ್ದಾಗಲೇ ಸ್ವರ್ಗಸ್ಥರಾದರು. ಇಂದು ಮೇ 4, 2020, ಇಂದಿಗೆ ಸರಿಯಾಗಿ 4 ಮೇ 1919ರಲ್ಲಿ ಜನಿಸಿದ ವಾಕಣ್ಕರ್ ಅವರಿಗೆ 100 ಪೂರ್ಣವಾಗುತ್ತದೆ. ಕಳೆದ ವರ್ಷವಿಡೀ ಸಂಸ್ಕಾರ ಭಾರತಿ ಆಶ್ರಯದಲ್ಲಿ ದೇಶಾದ್ಯಂತ ಶ್ರೀ ವಿಷ್ಣು ಶ್ರಿಧರ ವಾಕಣ್ಕರ್ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಸಾಧನೆಗಳನ್ನು ಕೋಟ್ಯಾಂತರ ಜನರಿಗೆ ಪರಿಚಯಿಸಿದ್ದಾರೆ. ಶ್ರೀ ವಿಷ್ಣು ಶ್ರೀಧರ ವಾಕಣ್ಕರ್ ತಮ್ಮ ಕಾರ್ಯ ಸಾಧನೆಗಳ ಮೂಲಕ ಭಾರತೀಯರು ಎಂದರೆ ಸಾಮಾನ್ಯರಲ್ಲ. ನಾವು ಅಸಮಾನ್ಯರು. ಇಡೀ ಪ್ರಪಂಚಕ್ಕೇ ನಾಗರೀಕತೆಯನ್ನು ಪರಿಚಯಿಸಿದ ವಿಶ್ವಗುರುವೇ ಹೌದು ಎಂಬುದನ್ನು ಎತ್ತಿ ಸಾರುವ ಮೂಲಕ ಪ್ರತಿಯೊಬ್ಬ ಭಾರತೀಯರೂ ಪ್ರತಿ ದಿನವೂ ನೆನೆಸಿಕೊಳ್ಳುವಂತಹ ಪ್ರಾತಃ ಸ್ಮರಣೀಯರಾಗಿದ್ದಾರೆ.

ಹಿಂದೂ ಧರ್ಮ ಆಧ್ಯಾತ್ಮಿಕ ಅಂಶಗಳನ್ನು ಜಗತ್ತಿಗೆ ಪರಿಚಯಿಸುವ ಮುಖಾಂತರ ಭಾರತವದ ಕೀರ್ತಿಪತಾಕೆಯನ್ನು ವಿದೇಶದಗಳಲ್ಲಿ ಸ್ವಾಮಿ ವಿವೇಕಾನಂದರು ಹಾರಿಸಿದರೆ, ತಮ್ಮ ಪುರಾತತ್ತ್ವ ಸಂಶೋಧನೆಗಳ ಮುಖಾಂತರ ಭಾರತದ ಗರಿಮೆಯನ್ನು ಜಗತ್ತಿಗೇ ತೋರಿಸಿದ ದಿಗ್ಗಜರು ಶ್ರೀ ವಾಕಣ್ಕರ್ ಎಂದರೆ ಅತಿಶಯೋಕ್ತಿಯಲ್ಲ

 

ಏನಂತೀರೀ?

ಈ ಲೇಖನ ಬರೆಯಲು ಥಟ್ ಅಂತ ಹೇಳಿ ಖ್ಯಾತಿಯ ಶ್ರೀ ನಾ ಸೋಮೇಶ್ವರ್ ಅವರ ವಿದ್ಯಾರಣ್ಯಪುರದಲ್ಲಿ ಮಾಡಿದ ಮಂಥನ ಕಾರ್ಯಕ್ರಮ ಮತ್ತು ಸಂಸ್ಕಾರ ಭಾರತಿಯ ಶ್ರೀ ಜಯಸಿಂಹ ಅವರು ನೀಡಿದ ಕೆಲವು ವಿಷಯಗಳು ಸಹಕಾರಿಯಾದವು. ಈ ಇಬ್ಬರು ಮಹನೀಯರಿಗೆ ತುಂಬು ಹೃದಯದ ಧನ್ಯವಾದಗಳು.

ಫೋಟೋಗಳನ್ನು ಅಂತರ್ಜಾಲದಿಂದ ನಕಲು ಮಾಡಲಾಗಿದೆ.

One thought on “ಶೈಲ ಪಿತಾಮಹ ವಿಷ್ಣು ಶ್ರೀಧರ್ ವಾಕಣ್ಕರ್

 1. ನಿಜಕ್ಕೂ ಪರಿಚಯಿಸುವ ಮೂಲಕ ಹೆಮ್ಮೆಯ ವಿಷಯ. ಇವೆಲ್ಲ ಮಕ್ಕಳ ಪಠ್ಯದಲ್ಲಿ ಸೇರಿಸಬೇಕು.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s