ಮಳೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳ್ರೀ ಇಳೆಯ ಕೊಳೆಯನ್ನೆಲ್ಲಾ ತೆಗೆದು ಹಾಕಿ ನಾಡಿಗೆ ಸಮೃದ್ಧಿಯನ್ನು ಕೊಡುವ ಪ್ರಾಕೃತಿಕ ಪ್ರಕ್ರಿಯೆ. ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವ ಪ್ರಕ್ರಿಯೆಯೇ ಮಳೆ . ಅಂತಹ ಮಳೆಗಾಗಿ ಬಾರದೇ ಭೂಮಿಯೆಲ್ಲಾ ಬಾಯ್ಬಿರಿದಿದ್ದರೆ, ತೆರೆದ ಬಾಯಿ ಮುಚ್ಚದೇ ಮೋಡಗಳತ್ತ ದಿಕ್ಕೆಟ್ಟು ನೋಡುತ್ತಿತ್ತಾನೆ ರೈತ. ಅಂತಹ ಸಮಯದಲ್ಲಿ ಆಗದಲ್ಲಿ ಕಾರ್ಮೋಡ ಕವಿದಾಗ ರೈತನಿಗೆ ಖುಷಿಯೋ ಖುಷಿ.
ಒಂದು ಹದ ಮಳೆ ಬೀಳುತ್ತಲೇ ರೈತನ ಮುಖದಲ್ಲಿ ಆಗೋ ಸಂತೋಷ ಬಣ್ಣಿಸಲಾಗದು. ನೇಗಿಲನ್ನು ಎತ್ತಿಕೊಂಡು ದನಗಳನ್ನು ಕಟ್ಟಿಕೊಂಡು ಅಚ್ಚುಕಟ್ಟಾಗಿ ಗಂಟಿಲ್ಲದಂತೆ ಆರಂಭ ಮಾಡಿ ಜಮೀನನ್ನು ಹದಗೊಳಿಸಿ, ಹಸನು ಗೊಳಿಸಿ, ಬೀಜ ಚೆಲ್ಲಿ ಅದು ಮೊಳಕೆಯೊಡೆದು ಪೈರಾದಾಗ ಒಟ್ಟಲು ಹಾಕಿ ಮನೆ ಮಂದಿಯೆಲ್ಲಾ ಸೇರಿ ನಾಟಿ ಮಾಡುತ್ತಾನೆ. ಕಾಲ ಕಾಲಕ್ಕೆ. ನೀರು ಹಾಯಿಸುತ್ತಾ, ಗೊಬ್ಬರ ಹಾಕುತ್ತಾ ತನ್ನ ಸ್ವಂತ ಮಕ್ಕಳನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತಾನೆ. ಹಾಕಿದ ಪರಿಶ್ರಮಕ್ಕೆ ತಕ್ಕಂತೆ ಫಸಲು ಬಂದರಂತೂ ಅವನ ಆನಂದ ಹೇಳತೀರದು.
ಇನ್ನೂ ಮಕ್ಕಳಿಗೆ ಮಳೆ ಬಂದರಂತೂ ಅಮಿತಾನಂದ. ಸುರಿಯುತ್ತಿರುವ ಮಳೆಯಲ್ಲಿಯೇ ಶಾಲೆಯ ಚೀಲವನ್ನು ನೇತು ಹಾಕಿಕೊಂಡು ಓಡೋಡಿ ಬರುತ್ತಿದ್ದರೆ, ಮಳೆಯಲ್ಲಿ ಎಲ್ಲಿ ತಮ್ಮ ಮಕ್ಕಳು ನೆನೆದು ನೆಗಡಿ ಕೆಮ್ಮು ಶೀತ ಬಂದು ಮಕ್ಕಳ ಆರೋಗ್ಯ ಹಾಳಾಗಿ ಬಿಡುತ್ತದೋ ಎಂದು ತಂದೆ ತಾಯಿಯರು ತಂದು ಕೊಂಡುವ ಕೊಡೆ. ಆ ಕೊಡೆಯಲ್ಲಿ ಅಪ್ಪ-ಮಗಾ, ಇಲ್ಲವೇ ಅಮ್ಮಾ-ಮಗಳು ಹೋಗುವುದನ್ನು ನೋಡುವುದಕ್ಕೇ ಆನಂದ.
ಒಮ್ಮೆ ಮನೆಗೆ ಹೋದ ತಕ್ಷಣ ಶಾಲಾ ಸಮವಸ್ತ್ರ ಬಿಚ್ಚಿ ಹಾಕಿ ಸಾಧಾರಣ ಉಡುಪು ಹಾಕಿಕೊಂಡು ಸುರಿಯುತ್ತಿರುವ ಮಳೆಯಲ್ಲಿ ಇತರೇ ಮಕ್ಕಳೊಡನೆ ಆಟ ಆಡುವುದು ಇದೆಯಲ್ಲಾ ಅದರ ಮುಂದೆ ಕ್ರಿಕೆಟ್, ಪುಟ್ಪಾಲ್ ಟೆನ್ನಿಸ್ ವಾಲಿಬಾಲ್ ಗಳನ್ನು ನೀವಾಳಿಸಿ ಹಾಕಬೇಕು. ಬಾಲ್ಯದಲ್ಲಿ ಮಳೆ ಸ್ವಲ್ಪ ನಿಂತ ಕೂಡಲೇ ಮನೆಯಿಂದ ಶಾಲೆಯ ಪುಸ್ತಕದ ಹಾಳೆಯನ್ನು ಹರಿದು ತಂದು ಅದರಲ್ಲಿ ಹಾಳೆಯ ದೋಣಿಯನ್ನು ಮಾಡಿ ದೋಣಿಯ ಪಂದ್ಯವನ್ನು ಆಡ್ತಾ ಮಜ ಮಾಡ್ತಾ ಇದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ
ಸರಿಯಾದ ಮಳೆ ನೋಡ್ಬೇಕು ಅಂದ್ರೇ ಮಲೆನಾಡಿಗೇ ಹೋಗ್ಬೇಕು. ಮಟ ಮಟ ಮಧ್ಯಾಹ್ನ ಧೋ ಎಂದು ಮಳೆ ಸುರಿಯಲು ಶುರುವಾದ್ರೇ ಇನ್ನು ನಿಲ್ಲುವುದು ಎಷ್ಟು ಹೊತ್ತೋ ಯಾರಿಗೆ ಗೊತ್ತು. ಹಾಗೆ ಸುರಿಯೋ ಮಳೆನ ಮನೆಯ ಹಜಾರದಲ್ಲಿ ಕುತ್ಕೊಂಡು ನೋಡೋ ಮಜಾ ಯಾವುದೇ ಮಲ್ಟೀ ಪ್ಲೆಕ್ಸಿನಲ್ಲಿ ಕುಳಿತು ರೋಮಾನ್ಸ್ ಮೂವಿನೋ ಇಲ್ವೇ ಆಕ್ಷನ್ ಸಿನಿಮಾ ನೋಡಿದ್ರೂ ಖಂಡಿತವಾಗಿಯೂ ಬರೋದಿಲ್ಲ ನೋಡಿ.
ಮಳೆ ಜೊತೆ ದಪ ದಪ ಮನೆಯ ಹೆಂಚಿನ ಮೇಲೆ ಸದ್ದಾಯಿತೆಂದರೆ ಆಲಿಕಲ್ಲು ಬೀಳುತ್ತಿದೆ ಎಂದರ್ಥ, ಕೂಡಲೇ ಆಡುಗೇ ಮನೆಗೆ ಹೋಗಿ ಕೈಗೆ ಸಿಕ್ಕ ಲೋಟಾನೋ ಇಲ್ಲವೇ ಬಟ್ಟಲನ್ನೋ ಹಿಡಿದುಕೊಂಡು ಮನೆಯ ಮುಂದೆ ದುತ್ತೆಂದು ಬೀಳುವ ತಣ್ಣನೆಯ ಆಲಿಕಲ್ಲಿನ ಮಂದೆ ಅಮೂಲ್, ಬಾಸ್ಕಿನ್ ರಾಬಿನ್ಸ್, ವಾಡಿಲಾಲ್ ಕ್ವಾಲಿಟಿ ಐಸ್ಕ್ರೀಮ್ ಎನೂ ಇಲ್ಲ ಬಿಡಿ.
ಮುಂಗಾರು ಸರಿಯಾಗಿ ಬಿದ್ದು ಕರೆ ಕಟ್ಟೆಗಳೆಲ್ಲಾ ತುಂಬಿ ಕೋಡಿ ಹರಿದು ನದಿ ಸೇರಿ ನದಿಗೆ ಆಡ್ಡಲಾಗಿ ಕಟ್ಟಿದ ಅಣೆಕಟ್ಟು ತುಂಬಿದರಂತೂ ನಾಡಿನ ಜನತೆಗೆ ಮುಂದಿನ ವರ್ಷದ ಮಳೆಗಾಲದವರೆಗೂ ನಮ್ಮೆದಿ.
ಈಗ ತಾನೇ ಮಳೆಗಾಲ ಆರಂಭ ಆಗುತ್ತಲಿದೆ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ ಉತ್ತಮವಾದ ಮಳೆ ಬೀಳುವ ಸಂಭವವಿದೆ ಎಂದಿದ್ದಾರೆ. ಅವರ ನಿರೀಕ್ಷೆ ನಿಜವಾಗಿ ಸಕಾಲದಲ್ಲಿ ಕೆರೆಕಟ್ಟೆ ತುಂಬುವಷ್ಟು ಮಳೆ ಬಂದು ರೈತರಿಗೆ ಒಳ್ಳೆಯ ಫಸಲು ಬಂದು ನಾಡು ಸುಭಿಕ್ಷವಾಗಿರಲಿ ಎಂದು ಆಶಿಸೋಣ.
ಏನಂತೀರೀ?