ದ್ವೇಷ

ಹಾವಿನ ದ್ವೇಷ ಹನ್ನೆರಡು ವರುಷ ನನ್ನ ರೋಷ ನೂರು ವರುಷ ಎನ್ನುವುದು ಪುಟ್ಟಣ್ಣ ಕಣಗಾಲರ ಜನಪ್ರಿಯ ನಾಗರ ಹಾವು ಚಿತ್ರದ ಹಾಡು. ಹಾವಿಗೆ ಹನ್ನೆರಡು ವರ್ಷ ದ್ವೇಷ ಇರುತ್ತದೆಯೋ ಗೊತ್ತಿಲ್ಲ. ಆದರೆ ಮನುಷ್ಯರ ಸಣ್ಣ ಪುಟ್ಟ ದ್ವೇಷಗಳಿಂದಾಗಿ ಲಕ್ಷಾಂತರ ಸಂಸಾರಗಳು ಹಾಳಾಗಿರುವುದಂತೂ ಸತ್ಯ. ಅಂತಹ ಕೆಲವೊಂದು ನೈಜ ಘಟನೆಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ.

ಅದೊಂದು ಮುದ್ದಾದ ಕುಟುಂಬ ಗಂಡ ಹೆಂಡತಿಯಿಬ್ಬರೂ ಉದ್ಯೋಸ್ಥರಾದರೂ ಬಹಳ ಜತನದಿಂದ ತಮ್ಮ ಮಗ ಮತ್ತು ಮಗಳನ್ನು ಮುದ್ದಿನಿಂದ ಸಾಕಿ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದರು. ಮಗ ದೂರದ ಅಮೇರೀಕಾದಲ್ಲಿ ಕೆಲಸಕ್ಕೆಂದು ಹೋದವ ಅಲ್ಲೇ ಕನ್ನಡಿತಿಯೊಬ್ಬಳನ್ನು ಇಷ್ಟ ಪಟ್ಟ. ಮಗನ ಇಷ್ಟದ ವಿರುದ್ಧ ಹೋಗಲಾರದೇ ತಂದೇ ತಾಯಿಯರೇ ಮುಂದು ನಿಂತು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ಮಗನ ಸಂಸಾರವನ್ನು ಒಪ್ಪಮಾಡಿದರು. ಆರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ಕೆಲದಿನಗಳ ಕಾಲ ಅಮೇರಿಕಾದ ಮಗನ ಮನೆಗೆ ಹೋಗಿ ಬರುತ್ತಿದ್ದರು. ಮಗನಿಗೊಂದು ಮುದ್ದಾದ ಮಗಳಾದಾಗಾ ಇವರೂ ಸಹಾ ಅಲ್ಲಿಗೆ ಹೋಗಿ ಮೂರು ತಿಂಗಳಕಾಲ ಬಾಣಂತನವನ್ನೂ ಮಾಡಿ ಬಂದಿದ್ದರು. ಒಳ್ಳೆಯ ವಿದ್ಯಾವಂತೆಯಾದ ಮಗಳಿಗೂ ಮದುವೆಯ ವಯಸ್ಸಾದ ಕಾರಣ ಒಳ್ಳೆಯ ಸಂಬಂಧ ಹುಡುಕಿದರು. ಕಾಕತಾಳೀಯವೆಂದರೆ ಅಳಿಯನೂ ಸಹಾ ಅಮೇರಿಕಾದ ಕಂಪನಿಯೊಂದರಲ್ಲಿ ನೌಕರಿಮಾಡುತ್ತಿದ್ದ. ಈಡು ಜೋಡಿ ಚೆನ್ನಾಗಿತ್ತು. ಮನೆಯವರೆಲ್ಲರೂ ಕುಳಿತು ಮಾತನಾಡಿ ಮದುವೆಯ ನಿಶ್ವಿರ್ತಾರ್ಥ ಮುಗಿಸಿ ಮದುವೆ ಸಂಭ್ರಮ ಮನೆಯಲ್ಲಿ ನಡೆಯುತ್ತಿತ್ತು. ಛತ್ರ, ಅಡುಗೆಯವರು, ಓಲಗದವರು, ಪುರೋಹಿತರು, ದೀಪಾಲಂಕಾರ ಹೀಗೆ ಎಲ್ಲದ್ದಕ್ಕೂ ಅಡ್ವಾನ್ಸ್ ಕೊಟ್ಟಾಗಿತ್ತು. ಮದುವೆಗೆ ಬೇಕಾದ ಒಡವೆ, ಬಟ್ಟೆ ಬರೆ ಎಲ್ಲವನ್ನೂ ಖರೀದಿಸಿಯಾಗಿತ್ತು. ಆ ನಡುವಯಸ್ಸಿನ ದಂಪತಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ತಮ್ಮೆಲ್ಲಾ ಬಂಧು ಮಿತ್ರರನ್ನೂ ಊರಿಗೆ ಮುಂಚೆಯೇ ಮದುವೆಗೆ ಆಹ್ವಾನಿಸಿ ಮದುವೆಯ ದಿನಕ್ಕಾಗಿ ಕಾಯತೊಡಗಿದರು. ಮದುವೆಯ ನೆಪದಲ್ಲಿ ಮಗ ಸೊಸೆ, ಮೊಮ್ಮಗಳು, ಮಗಳು ಅಳಿಯ ಹೀಗೆ ಇಡೀ ಕುಟುಂಬವೇ ಕೆಲವು ದಿನಗಳ ಕಾಲ ಒಂದಾಗಿ ಇರಬಹುದು ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಮಗ ಸೊಸೆ, ಮದುವೆಗೆ ಒಂದು ವಾರಕ್ಕೆ ಮಂಚೆ ಬಂದು, ಮದುವೆ ಮುಗಿದ ಎರಡು ವಾರದ ನಂತರ ಹೋಗುವುದಾಗಿ ನಿಶ್ಚಯವಾಗಿದ್ದರೂ, ಮದುವೆಗೆ ಎರಡು ದಿನಗಳ ಹಿಂದಿನ ದಿನದವರೆಗೂ ಮಗ ಸೊಸೆಯ ಪತ್ತೇಯೇ ಇಲ್ಲ. ಮಗಳ ಮದುವೆಯಲ್ಲಿ ಮಗನೇ ಓಡಾಡದಿದ್ದರೇ ಹೇಗೆ ಎನ್ನುವ ಧಾವಂತವಾದರೂ ಬಂದವರ ಮುಂದೆ ತೋರಿಸಿಕೊಳ್ಳದೆ ಮನಸ್ಸಿನಲ್ಲೇ ದುಃಖ ಪಡುತ್ತಿದ್ದರು. ಅದೇ ದುಃಖದಲ್ಲೇ ಮದುವೆಯ ಹಿಂದಿನ ದಿನ ಬೆಳಿಗ್ಗೆ ಛತ್ರಕ್ಕೆ ಹೋಗಿ ನಾಂದಿಗೆ ಸಿದ್ಧವಾಗುತ್ತಿದ್ದಾಗ, ಯಾರೋ ದೂರದ ಬಂಧುಗಳು ಬರುವಂತೆ ಮಗ ನೇರವಾಗಿ ಛತ್ರಕ್ಕೆ ಬಂದರೂ, ಸದ್ಯ ಮಗ ಬಂದನಲ್ಲ ಎಂಬ ಸಂತೋಷ ಒಂದು ಕಡೆಯಾದರೂ, ಕಣ್ಣುಗಳು ಸೊಸೆ ಮತ್ತು ಮೊಮ್ಮಗಳನ್ನು ಅರಸಿದ್ದಂತೂ ಸುಳ್ಳಲ್ಲ. ಮಗನನ್ನು ಒಂದು ಮೂಲೆಯ ಕೊಠಡಿಗೆ ಕರೆದುಕೊಂಡು ಹೋಗಿ ಏನೋ ಇಷ್ಟು ಹೊತ್ತಿಗೇನೋ ಬರೋದು? ಅಮ್ಮಾ ಮಗಳು ಎಲ್ಲೋ? ಅಂದ್ರೇ, ಮಗನ ಕಣ್ಣಲ್ಲಿ ಧಾರಾಕಾರ ಕಣ್ಣೀರು. ಇಂತಹ ಸಂತೋಷದ ಸಮಯದಲ್ಲಿ ಮಗನ ಕಣ್ಣಲ್ಲಿ ನೀರನ್ನು ನೋಡಲು ಆಗದೇ ಸರಿ ಸರಿ ಕಣ್ಣು ಒರೆಸಿಕೋ ಹೇಗೋ ಸಂಬಾಳಿಸೋಣ ಎಂದು ಸಮಾಧಾನ ಪಡಿಸಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡರು. ಮದುವೆಯ ಮನೆಯವರೇನೋ ಸಮಾಧಾನ ಪಟ್ಟುಕೊಳ್ಳಬಹುದು ಆದರೇ ಮದುವೆಗೆ ಬಂದವರನ್ನು ಸಂಭಾಳಿಸುವುದೇ ಕಷ್ಟ. ಎನ್ರೀ, ಮಗ ಏನೋ ಓಡಾಡ್ತಾ ಇದ್ದಾನೆ. ಸೊಸೆ ಮೊಮ್ಮಗಳು ಕಾಣ್ತಾನೇ ಇಲ್ಲಾ ಎಂಬ ಕುಹಕ ಮಾತು. ಅಯ್ಯೋ ಅದಾ, ಸೊಸೆ ಒಳಗಿಲ್ಲ. ಶುಭಸಮಾರಂಭದಲ್ಲಿ ಮುಟ್ಟು ಮೈಲಿಗೆಯಾಕೆ ಎಂದು ಅವಳ ಅಮ್ಮನ ಮನೆಯಲ್ಲಿಯೇ ಇದ್ದಾಳೆ. ಇನ್ನು ಅಮ್ಮ ಇಲ್ಲದೇ ಮೊಮ್ಮಗಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲಾ ನೋಡಿ ಎಂದು ಬಲವಂತದ ನಗೆಯಿಂದ ಹೇಳುತ್ತಲೇ ಇಡೀ ಮದುವೆಯನ್ನು ನಿರ್ವಿಜ್ಞವಾಗಿ ಮುಗಿಸಿದರೂ, ಅಷ್ಟು ದೂರದ ಅಮೇರೀಕದಿಂದ ಬಂದರೂ, ಮದುವೆಗೆ ಮನೆಯ ಸೊಸೆ ಮತ್ತು ಮೊಮ್ಮಗಳು ಮಗಳ ಮದುವೆಗೆ ಬರಲಿಲ್ಲ ಎನ್ನುವುದು ಆ ದಂಪತಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಕಾಡಿದ್ದಂತೂ ಸುಳ್ಳಲ್ಲ.

ಮದುವೆ ಎಲ್ಲಾ ಮುಗಿದ ನಂತರ ತಿಳಿದು ಬಂದ ವಿಷಯವೇನೆಂದರೆ, ಕೆಲ ವರ್ಷದ ಹಿಂದೆ ಹೆಂಡತಿಯ ತಂಗಿಯ ಮದುವೆಯ ಸಮಯದಲ್ಲಿ ಗಂಡನಿಗೆ ರಜೆ ಸಿಗದಿದ್ದ ಕಾರಣ, ಹೆಂಡತಿಯೊಬ್ಬಳೇ ತನ್ನ ತಂಗಿಯ ಮದುವೆಗೆ ಬಂದಿದ್ದಳಂತೆ. ತಾನು ಅಂದು ಅನುಭವಿಸಿದ ನೋವನ್ನು ತನ್ನ ಗಂಡನೂ ಅವನ ತಂಗಿಯ ಮದುವೆಯಲ್ಲಿ ಅನುಭವಿಸಲೀ ಎಂಬುದು ಆಕೆಯ ಇಚ್ಚೆಯಾಗಿತ್ತಂತೆ. ಪರಿಸ್ಥಿತಿಯ ಪರಿಣಾಮವಾಗಿ ಮದುವೆಗೆ ಬರಲಾಗದ ಕ್ಷುಲ್ಲಕ ಕಾರಣವೇ ದ್ವೇಷವಾಗಿ ಮಾರ್ಪಟ್ಟು ಮದುವೆಯ ಸಂಭ್ರಮವನ್ನು ಹಾಳುಮಾಡಿದ್ದು ಸುಳ್ಳಲ್ಲ

Shubha

Dec 3 2003 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬಿ.ವಿ.ಗಿರೀಶ್ ಅವರ ಜೊತೆ ಅವರ ರಸ್ತೆಯಲ್ಲೇ ಇದ್ದ 21 ವರ್ಷದ ಕಾನೂನು ವಿದ್ಯಾರ್ಥಿನಿ ಶುಭ ಶಂಕರನಾರಾಯಣ್ ಅವರೊಂದಿಗೆ ಮದುವೆಯ ನಿಶ್ಚಿತಾರ್ಥವಾಗುತ್ತದೆ. ಚಿಕ್ಕ ವಯಸ್ಸಿನಿಂದಲೂ. ಒಟ್ಟಿಗೆ ಆಡಿ ಬೆಳೆದವರಾದ್ದರಿಂದ ಇಬ್ಬರ ಮನೆಯಲ್ಲೂ ಹರ್ಷಕ್ಕೆ ಪಾರವೇ ಇರಲಿಲ್ಲ. ನಿಶ್ಚಿತಾರ್ಥ ಮುಗಿದ ಮೂರೇ ದಿನಕ್ಕೆ ಗಿರೀಶ್ ಮತ್ತು ಶುಭಾ ಇಬ್ಬರೂ ಸಂಜೆ ಊಟಕ್ಕೆ ಹೊರತೆ ಹೋಗುವುದಾಗಿ ತಿಳಿಸಿ, ಊಟ ಮುಗಿಸಿ ಮನೆಗೆ ಸ್ಕೂಟರ್‌ನಲ್ಲಿ ಹಿಂದಿರುಗುವ ಸಮಯದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಇಳಿಯುವುದನ್ನು ವೀಕ್ಷಿಸಲು ಶುಭಾ ಬಯಸಿದ್ದರಿಂದ ರಿಂಗ್ ರಸ್ತೆಯ ಏರ್ ವ್ಯೂ ಪಾಯಿಂಟ್‌ನಲ್ಲಿ ನಿಲ್ಲಿಸಿದರು. ರಾತ್ರಿ 9.30 ರ ಸುಮಾರಿಗೆ ಅವರು ನೋಡುತ್ತಿದ್ದಾಗ ಗಿರೀಶ್ ಅವರ ಮೇಲೆ ಮಾರಾಣಾಂತರ ಹಲ್ಲೆ ನಡೆದು ಕೂಡಲೇ ಸ್ಥಳೀಯರ ಸಹಾಯದಿಂದ ಗಿರೀಶ್‌ನನ್ನು ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದರಾದರೂ ಗುರುತರವಾದ ಹಲ್ಲೆಯಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಬೆಳಿಗ್ಗೆ 8.05 ಗಿರೀಶ್ ಮೃತರಾಗುತ್ತಾರೆ.

ಗಿರೀಶ್ ಅವರ ವಯೋವೃದ್ಧ ತಂದೆಯವರದ ಶ್ರೀ ವೆಂಕಟೇಶ್ ಅವರು ಅದೇ ದಿನ ವಿವೇಕನಗರ ಪೊಲೀಸರಿಗೆ ದೂರು ನೀಡಿದ ಪರಿಣಾಮ ತೀಕ್ಷಣ ತರವಾದ ವಿಚಾರಣೆ ನಡೆಸಿದಾಗ ತಿಳಿದು ಬಂದ ಗಾಭರಿ ಅಂಶವೆಂದರೆ, ಶುಭಾಳಿಗೆ ತನ್ನ ಕಾಲೇಜಿನಲ್ಲಿ ತನಗಿಂತಲೂ ಕಿರಿಯವನಾದ ಅರುಣ್ ವರ್ಮಾ (19) ನೊಂಡಿಗೆ ಸ್ನೇಹವಿತ್ತು. ಮನೆಯವರು ಅವಳ ವಿರುದ್ಧವಾಗಿ ಗಿರೀಶ್ ನೊಂದಿಗೆ ನಿಶ್ಚಿತಾರ್ಥ ನಡೆಸಿದ ಪರಿಣಾಮ ಮನೆಯವರೆ ವಿರುದ್ಧ ದ್ವೇಷ ತೀರಿಸಿಕೊಳ್ಳಲು ತನ್ನ ಬಿಎಂಎಸ್ ಕಾಲೇಜ್ ಆಫ್ ಲಾದಲ್ಲಿ ಎರಡು ವರ್ಷ ಕಿರಿಯವನಾದ ಅರುಣ್ ವರ್ಮಾ ಅವನ ಸೋದರ ಸಂಬಂಧಿ ದಿನೇಶ್ ಅಲಿಯಾಸ್ ದಿನಕರನ್ ಜೊತೆಗೂಡಿ ನಿರುಪದ್ರವಿ ಗಿರೀಶನನ್ನು ಹತ್ಯೆ ಗೈದಿದ್ದರು.

ringroad_shubha

ಹೈಕೋರ್ಟಿನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಪ್ರತಿದಿನವೂ ತಪ್ಪದೇ ಹಾಜರಾಗುತ್ತಿದ್ದ ಗಿರೀಶ್ ಅವರ ವಯೋವೃದ್ಧ ತಂದೆಯವರು ಪುತ್ರ ಶೋಕ ನಿರಂತರಂ ಎನ್ನುವಂತೆ ಅದೇ ವ್ಯಥೆಯಲ್ಲಿ ನಿಧನರಾದರು, ಶುಭಾಳ ತಂದೆಯೂ ಸಹಾ ವಕೀಲರಾಗಿದ್ದಕಾರಣ ತಮ್ಮ ಪ್ರಭಾವದಿಂದಾಗಿ ಕೇಸ್ ಮುಂದಕ್ಕೆ ಹಾಕಿಸುತ್ತಲೇ ಹೋದರು, ಇಷ್ಟರ ಮಧ್ಯೆ ಶುಭಾ ಜೈಲಿನಿಂದಲೇ ತನ್ನ ಕಾನೂನು ಪದವಿ ಮುಗಿಸಿದಳು. ನಂತರ ಕೇಸೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ Aug 11 2014ರಂದು ಶುಭಾಳಿಗೆ ಬೇಲ್ ಸಿಕ್ಕಿ ಈಗ ಆಕೆ ಆರಾಮಾಗಿದ್ದಾಳೆ ಆದರೆ ಆಕೆಯ ದ್ವೇಷಕ್ಕೆ ಏನೂ ಅರಿಯದ ಸುರದ್ರೂಪಿ ತರುಣ ಗಿರೀಶ್ ಮತ್ತು ಅವನ ತಂದೆ ಬಲಿಯಾದರೆ, ಆಕೆಯ ಮಾತನ್ನು ಕೇಳಿದ ಆಕೆಯ ಪ್ರಿಯಕರ ಅರುಣ್ ಮತ್ತವನ ಸಂಬಂಧಿ ದಿನೇಶ್ ಬೇಲ್ ಸಿಗದೇ ಜೈಲಿನಲ್ಲಿ ಮುದ್ದೇ ಮುರಿಯುತ್ತಿದ್ದಾರೆ.

crime2

ಇನ್ನೂ ಕಳೆದ ಭಾನುವಾರ ಜೆಪಿ ನಗರದ ರಿಸರ್ವ್ ಬ್ಯಾಂಕ್ ಲೇಔಟಿನಲ್ಲಿ ನಡೆದ ಗಂಡ ಹೆಂಡತಿಯರ ಬರ್ಬರ ಹತ್ಯೆ ಇನ್ನೂ ಭಯಾನಕ. ಗಂಡ ರಿಸರ್ವ್ ಬ್ಯಾಂಕಿನ ನಿವೃತ್ತ ನೌಕರರು, ಹೆಂಡತಿ ಹೈಕೋರ್ಟ್ ಸಹಕಾರಿ ಸಂಘದಲ್ಲಿ ಗುಮಾಸ್ತೆ. ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗನಿಗೆ ಒಳ್ಳೆಯ ಕಡೆಯ ಸಂಬಂಧ ನೋಡಿ ಮದುವೆ ಮಾಡಿದ್ದರೂ, ಅದೇಕೋ ಏನೋ ದಾಂಪತ್ಯದಲ್ಲಿ ಇರುಸು ಮುರುಸು. ವಿವಾಹ ವಿಚ್ಚೇದನಕ್ಕೆ ಕೋರ್ಟಿನ ಮೆಟ್ಟಿಲು ಹತ್ತಿ ಅಲ್ಲೂ ಒಟ್ಟಿಗೆ ಇರಲು ಸೂಚಿಸಿದ್ದರು. ಕಳೆದ ಭಾನುವಾರ ಅದೇ ವಿಷಯಕ್ಕೆ ಫೋನಿನಲ್ಲಿ ಜಟಾಪಟಿಯಾದಾಗ, ಸುಮ್ಮನೆ ನಮ್ಮ ತಂಗಿಯ ವಿಷಯಕ್ಕೆ ಬಂದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ, ನಾನು ಏನು ಮಾಡ್ತೀನಿ ಎಂದು ನನಗೇ ಗೊತ್ತಿಲ್ಲ ಎಂದು ಸೊಸೆಯ ಅಣ್ಣ ಧಮ್ಕಿ ಹಾಕಿದ್ದಾನೆ. ಇದೆಲ್ಲಾ ಮಾಮೂಲಿ ಧಮ್ಕಿ ಎಂದು ಸುಮ್ಮನಾದರು ದಂಪತಿಗಳು. ಸಂಜೆ ತನ್ನ ತಂಗಿಯ ಮನೆಗೆ ಹೋದವನೇ, ಬರ್ಬರವಾಗಿ ತನ್ನ ತಂಗಿಯ ಅತ್ತೆ ಮತ್ತು ಮಾವಂದಿರನ್ನು ಕೊಚ್ಚಿ ಹಾಕಿ ತನ್ನ ದ್ವೇಷ ತೀರಿಸಿಕೊಂಡ. ದ್ವೇಷವೇನೋ ತೀರಿರಬಹುದು ಆದರೆ ಆ ದಂಪತಿಗಳ ಜೀವ ಹಾರಿಹೋಗಿತ್ತು. ಕೊಲೆ ಮಾಡಿದಕ್ಕಾಗಿ ತನ್ನ ಜೀವನಾವಧಿ ಆತ ಜೈಲಿನಲ್ಲೇ ಕಳೆಯಬೇಕಾಗುವುದರಿಂದ ಅವನ ಸಂಸಾರವೂ ಹಾಳಾಯಿತು ತನ್ನ ತಂಗಿಯ ಬಾಳೂ ಹಾಳಾಯಿತು

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ಮಹಾಮಾರಿ ಕೊರೋನಾ ಹರಡುವ ವಿಷಯದಲ್ಲೂ ಒಂದು ಪಂಗಡ ಇದೇ ರೀತಿಯ ದ್ವೇಷತನವನ್ನು ತೋರಿಸುತ್ತಿರುವುದು ದೇಶದ ಹಿತಕ್ಕೆ ಮಾರಕವಾಗಿದೆ. ತಮ್ಮದು ಒಂದು ಕಣ್ಣು ಹೋದರೂ ಚಿಂತೆ ಇಲ್ಲ ಮತ್ತೊಬ್ಬರ ಎರಡು ಕಣ್ಣು ಹಾಳಾಗಬೇಕು ಎನ್ನುವ ಮನಸ್ಥಿತಿ ನಿಜಕ್ಕೂ ಆಘಾತಕಾರಿಯಾಗಿದೆ. ತಾವು ಆರೋಗ್ಯವಾಗಿದ್ದಲ್ಲಿ ದೇಶವೂ ಆರೋಗ್ಯವಾಗಿರುತ್ತದೆ ಸಾಮಾನ್ಯ ತಿಳುವಳಿಕೆಯನ್ನು ಮರೆತು ಸುಖಾಸುಮ್ಮನೆ ಆಹಾರ ಪದಾರ್ಥಗಳು, ತರಕಾರಿ ಹಣ್ಣುಗಳ ಮೇಲೆ ಉಗಿಯುವುದು, ಮೂತ್ರ ಮಾಡುವು, ದೆಹಲಿಯ ತಬ್ಲೀಕ್ ಜಮಾತೆಗೆ ಹೋದವರು, ಕೊರೋನಾ ಸೋಂಕಿತರನ್ನು ತಮ್ಮ ಮನೆಗಳಲ್ಲಿ ಆಶ್ರಯ ನೀಡುವುದರ ಮೂಲಕ ಸಮಾಜದ ಸಾಮರಸ್ಯತೆಗೆ ಧಕ್ಕೆ ತರುವ ಕಾರ್ಯದಲ್ಲಿ ನಿರತವಾಗಿರುವುದು ಅಕ್ಷಮ ಅಪರಾಧವಾಗಿದೆ.

ಯಾವುದೋ ಕ್ಷುಲ್ಲಕ ಕಾರಣದ ಒಂದು ನಿಮಿಷದ ದ್ವೇಷಕ್ಕೆ ಬಲಿಯಾಗಿ ಕೋಪದಿಂದ ಕತ್ತರಿಸಿಕೊಂಡ ಮೂಗು ಹೇಗೆ ಬೆಳೆಯುವುದಿಲ್ಲವೋ ಹಾಗೆಯೇ ಮಾಡಿದ ಕುಕೃತ್ಯದಿಂದ ಆದ ತಪ್ಪನ್ನು ಮತ್ತೆ ಸರಿಪಡಿಸಲಾಗದು. ಅದಕ್ಕಾಗಿ ದ್ವೇಷ ಮರೆತು ಕೋಪ ಬಂದಾಗ ಕೆಲ ಹೊತ್ತು ಸಮ ಚಿತ್ತದಿಂದ ಶಾಂತ ಚಿತ್ತರಾದಲ್ಲಿ ಇಂತಹ ಕೃತ್ಯಗಳನ್ನು ತಪ್ಪಿಸಬಹುದಾಗಿದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s