ಸ್ವದೇಶೀ ಜಾಗೃತಿ

ಮೊನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ಇಪ್ಪತ್ತು ಲಕ್ಷ ಕೋಟಿಗಳ (ಅಂಕೆಯಲ್ಲಿ ಬರೆದರೆ ಎಷ್ಟು ಸೊನ್ನೆ ಹಾಕಬೇಕು ಅನ್ನುವುದೇ ಗೊತ್ತಾಗದ ಕಾರಣ ಅಕ್ಷರದಲ್ಲೇ ಬರೆಯುತ್ತಿದ್ದೇನೆ 😃😃 ) ಆತ್ಮನಿರ್ಭರ್ (ಸ್ವಾಲಂಭನೆ) ಪರಿಹಾರ ನಿಧಿಯ ಜೊತೆಗೆ ಜೊತೆಗೆ ದೇಶವಾಸಿಗಳು ಸ್ವದೇಶಿ ಉತ್ಪನ್ನಗಳನ್ನು ಬಳೆಸುವತ್ತ ಹರಿಸಬೇಕು ತಮ್ಮ ಚಿತ್ತ ಎಂದು ಕರೆ ನೀಡುತ್ತಿದ್ದಂತೆಯೇ ಇಡೀ ಭಾರತೀಯರು ಜಾಗೃತವಾಗಿಬಿಟ್ಟಿದ್ದಾರೆ. ಈ ಕೂಡಲೇ ಬಹುರಾಷ್ಟ್ರೀಯ ಕಂಪನಿ ಉತ್ಪಾದಿತ ಸೋಪು, ಶಾಂಪು, ಟೂಟ್ ಪೇಸ್ಟ್ ಗಳನ್ನು ಬದಲಿಸಿ ಎಂದು ಸಾಮಾಜಿಕ ಅಂತರ್ಜಾಲದಲ್ಲಿ ತಾವೇ ಸ್ವದೇಶೀ ಸೋಪು, ಶಾಂಪೂ, ಟೂಟ್ ಪೇಸ್ಟ್ ಗಳ ಕಂಪನಿಗಳ ರಾಯಭಾರಿಗಳೋ ಇಲ್ಲವೇ ಪ್ರತಿನಿಧಿಗಳೋ ಎನ್ನುವಂತೆ ಪುಂಖಾನು ಪುಂಖವಾಗಿ ಅಸಹ್ಯ ಎನಿಸುವಷ್ಟು ಸ್ವದೇಶಿ ಕಂಪನಿಗಳ ಜಾಹೀರಾತುಗಳನ್ನು ನೀಡತೊಡಗಿದ್ದಾರೆ. ಹಾಗಾದರೆ ಕೇವಲ ಸ್ವದೇಶೀ ಸೋಪು, ಶಾಂಪೂ, ಟೂಟ್ ಪೇಸ್ಟ್ ಗಳನ್ನು ಬಳೆಸಿದರೆ ಸಾಕೇ? ಹಾಗೆ ಸ್ವದೇಶೀ ಉತ್ಪನ್ನಗಳನ್ನು ಬಳೆಸಿದರೆ ದೇಶ ಉದ್ಧಾರವಾಗಿ ಬಿಡುತ್ತದೆಯೇ? ಇದರ ಹೊರತಾಗಿಯೂ ಏನಾದರು ಮಾಡಬೇಕೇ? ಎಂಬ ಪ್ರಶ್ನೆಗಳಿಗೆ ಇದೋ ಇಲ್ಲಿದೆ ಉತ್ತರ.

ram_lak

ಸ್ವದೇಶೀ ಕಲ್ಪನೆ ನಮಗೆ ನೆನ್ನೆ ಮೊನ್ನೆ ಬಂದಿದ್ದಲ್ಲ. ತ್ರೇತಾಯುಗದಲ್ಲೇ ಲಂಕಾಧಿಪತಿಯನ್ನು ಸೋಲಿಸಿ ಸೀತಾಮಾತೆಯನ್ನು ಶ್ರೀರಾಮಚಂದ್ರನು ಕರೆದುಕೊಂಡು ಬರುವಾಗ, ಆಂಜನೇಯನ ಲಂಕಾದಹನದಿಂದ ಅರ್ಧಕ್ಕರ್ಧ ಸುಟ್ಟು ಹೋಗಿದ್ದರೂ ಆ ನಗರಕ್ಕೆ ಮಾರು ಹೋದ ಲಕ್ಷ್ಮಣ, ಅಣ್ಣಾ ನಾವು ಅಯೋಧ್ಯೆಗೆ ಹಿಂದಿರುಗಿ ಹೋದಲ್ಲಿ ಭರತ ನಮಗೆ ರಾಜ್ಯ ಕೊಡದೇ ಇರಬಹುದು. ಹಾಗಾಗಿ ಹೇಗೋ ಈ ಲಂಕೆಯನ್ನು ಗೆದ್ದಿದ್ದೇವೆ. ಇಲ್ಲಿಯೇ ಹಾಯಾಗಿ ಇದ್ದು ಬಿಡೋಣ ಎಂಬ ಸಲಹೆಯನ್ನಿತ್ತಾಗ, ತಮ್ಮನ ಮೇಲೆ ಎಂದೂ ಕೋಪಮಾಡಿಕೊಳ್ಳದ ಶ್ರೀ ರಾಮಚಂದ್ರ ಅಂದು ಸ್ವಲ್ಪ ಸಿಟ್ಟಿನಿಂದಲೇ ಅಪಿ ಸ್ವರ್ಣಮಯೀ ಲಂಕಾ, ನ ಮೇ ಲಕ್ಷ್ಮಣ ರೋಚತೇ || ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ || ಅಂದರೆ, ಹೇ ಲಕ್ಷ್ಮಣಾ, ಈ ಲಂಕಾ ಪಟ್ಟಣವು ಬಂಗಾರದಿಂದ ಕೂಡಿದ್ದಾಗಿದ್ದರೂ ಸಹಾ ನಾವು ಇಲ್ಲಿರುವುದು ಉಚಿತವಲ್ಲ. ಏಕೆಂದರೆ ನಮ್ಮೆಲ್ಲರಿಗೂ ನಮ್ಮ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು. ಅಂದರೆ ನಮ್ಮ ತಾಯಿ ಕೊಡುವ ಪ್ರೀತಿ ಅಥವಾ ತಾಯಿನಾಡಿನಲ್ಲಿ ನಮ್ಮವರು ತೋರಿಸುವಂತಹ ಪ್ರೀತಿ ನಮಗೆ ಬೇರೆ ಎಲ್ಲೂ ಸಿಗುವುದಿಲ್ಲ ಅದು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಸ್ವದೇಶೀ ಕಲ್ಪನೆಯನ್ನು ಅಂದೇ ಶ್ರೀರಾಮನು ಎಲ್ಲರಲ್ಲೂ ಜಾಗೃತಗೊಳಿಸಿರುತ್ತಾರೆ.

ಬ್ರಿಟೀಷರು ನಮ್ಮನ್ನು ಸುಮಾರು 350 ವರ್ಷಗಳ ಕಾಲ ಆಳಿಹೋದ ನಂತರ, ದೇಶಕ್ಕೆ ಸ್ವಾತಂತ್ರ್ಯ ಬಂದ 73 ವರ್ಷಗಳ ನಂತರವೂ ನಮ್ಮ ನಾಗರಿಕತೆ, ರಾಜಕೀಯ, ಆರ್ಥಿಕತೆ, ಸಾಮಾಜಿಕ ವ್ಯವಸ್ಥೆಗಳು, ವೈಯಕ್ತಿಕ ಜೀವನ ಶೈಲಿ ಎಲ್ಲವೂ ಇನ್ನೂ ಬ್ರಿಟೀಷರ ದಾಸ್ಯ ರೂಪದಲ್ಲಿಯೇ ಇದೆ ಎಂದರೆ ತಪ್ಪಾಗಲಾರದು. ಬ್ರಿಟಿಷರು ಭಾರತಕ್ಕೆ ಬರುವ ಮುನ್ನಾ ನಮ್ಮದು ಕೃಷಿಯಾಧಾರಿತ, ಗುಡಿ ಕೈಗಾರಿಗೆ ಆಧಾರಿತ, ಪರಸ್ಪರ ವಸ್ತುಗಳ ವಿನಿಮಯ ರೂಪದ ಸಾಮಾಜಿಕ ಪದ್ದತಿ ರೂಡಿಯಲ್ಲಿದ್ದು ಎಲ್ಲರೂ ಸ್ವಾವಲಂಭಿಗಳಾಗಿ ಬದುಕುತ್ತಿದ್ದರು. ಆದರೆ ಬ್ರಿಟಿಷರು ಭಾರತಕ್ಕೆ ಬಂದೊಡನೆಯೇ ಮಾಡಿದ ಮೊತ್ತ ಮೊದಲ ಕೆಲಸವೆಂದರೆ ನಮ್ಮ ಗುಡಿಕೈಗಾರಿಕೆಗಳ ನಾಶ ಮತ್ತು ಸ್ವಾವಂಭಿಗಳನ್ನು ಜೀತ ಪದ್ದತಿಗೆ ದೂಡಿದ್ದು. ನಮ್ಮ ಗುರುಕುಲ ಶಿಕ್ಷಣ ಪದ್ದತಿಯ ಬದಲು ಮೆಕಾಲೇ ಶಿಕ್ಷಣ ಪದ್ದತಿಯಲ್ಲಿ ಟಸ್ ಪುಸ್ ಎಂಬ ಇಂಗ್ಲೀಷ್ ಭಾಷೆಯನ್ನು ಕಲಿಸಿ ಅವರಲ್ಲೇ ಉದ್ಯೋಗ ಕೊಟ್ಟು ಸೂಟು ಬೂಟು ಹಾಕಿಸಿ ಮೂಲ ಒಕ್ಕಲುತನಕ್ಕೇ ಕೊಳ್ಳಿ ಇಟ್ಟರು. ಸಾವಯವ ಕೃಷಿ ಪದ್ಧತಿಯ ಬದಲು ರಾಸಾಯನಿಕ ವಿಷಯುಕ್ತ ವ್ಯವಸಾಯ, ಎಗ್ಗಿಲ್ಲದ ನೀರಿನ ಬಳಕೆ, ಕಾಡು ಕಡಿದು ನಾಡು ಮಾಡಿದ್ದು, ದೇಶೀ ತಳೀ ಹಸುಗಳ ಬದಲಾಗಿ ಸೀಮೇ ಹಸುಗಳನ್ನು ಪರಿಚಯಿಸಿ ನಂತರ ಜರ್ಸೀ ಹಸುಗಳ ಹಾಲಿನ ರೂಪದಲ್ಲಿ ಹಾಲಾಹಲವನ್ನು ಕುಡಿಸುವ ದುರಾಭ್ಯಾಸ ಮಾಡಿಸಿಯೇ ಬಿಟ್ಟರು.

ಪ್ರಂಪ‍ಚದಲ್ಲೇ ಅತ್ಯಂತ ಪ್ರಖ್ಯಾತವಾಗಿದ್ದ , ಒಂಬತ್ತು ಗಜದ ಇಡೀ ಸೀರೆಯನ್ನು ಒಂದು ಬೆಂಕಿ ಪೊಟ್ಟಣದಲ್ಲಿ ಮಡಿಸಿಡಬಲ್ಲ ನುಣುಪಾದ ನಯವಾದ ಮಸ್ಲಿನ್ ಬಟ್ಟೆಗಳನ್ನು ನೇಯುತ್ತಿದ್ದ ನೇಕಾರರ ಕೈಕಡಿದು ಮ್ಯಾಂಚೆಸ್ಟರ್ ನಲ್ಲಿ ಕೈಗಾರಿಕಾ ಕ್ರಾಂತಿಯಿಂದಾಗಿ ಯಂತ್ರಗಳಲ್ಲಿ ತಯಾರಾದ ಬಟ್ಟೆಗಳ ಶೋಕಿಯನ್ನು ನಮಗೆ ಹತ್ತಿಸಿ, ನಮ್ಮ ಖಾದಿಯ ಖದರ್ ಅವರ ಖಾಖಿಯ ಮುಂದೆ ತಲೆ ತಗ್ಗಿಸುವಂತಾಯಿತು.

toot

ಇನ್ನು ಬೆಳಗ್ಗೆ ಎದ್ದ ಕೂಡಲೇ ಬೇವಿನ ಕಡ್ಡಿಯಿಂದಲೋ, ಇದ್ದಿಲಿಂದಲೋ, ಬೂದಿಯಿಂದಲೋ, ಉಪ್ಪಿನಿಂದಲೋ ಹಲ್ಲನ್ನು ಉಜ್ಜಿ, ಕಡಲೇ ಹಿಟ್ಟಿನಿಂದ ಮುಖ ತೊಳೆದುಕೊಂಡು ಸ್ನಾನ ಮಾಡಿ ಶುಭ್ರವಾಗಿ ನೊಸಲಿಗೆ ಗೋಮಯದ ಭಸ್ಮ ಧರಿಸುತ್ತಿದ್ದವನಿಗೆ ನಿಧಾನವಾಗಿ ಟೋಥ್ ಬ್ರಷ್, ಪೇಸ್ಟ್,, ಸೋಪು, ಶಾಂಪು, ಫೇಸ್ ವಾಷ್ ಫೇಸ್ ಕ್ರೀಂಗಳನ್ನು ಅಭ್ಯಾಸ ಮಾಡಿಸಿ ಅಂತಹ ಉತ್ಪನ್ನಗಳನ್ನು ವಿದೇಶದಿಂದಲೇ ಅಮದು ಮಾಡಿಕೊಂಡು ಬಳೆಸಿದಲ್ಲಿ ಮಾತ್ರವೇ ಹೆಮ್ಮೆಯ ವಿಷಯ ಎನ್ನುವ ಭ್ರಮೆಯನ್ನು ಮೂಡಿಸಿ ಬಿಟ್ಟರು.

coke

ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ ನಮ್ಮವರ ಜೀವನ ಶೈಲಿ ಬದಲಾಗಲೇ ಇಲ್ಲ. ಜನಾ ಹಳ್ಳಿಗಳಲ್ಲಿ ಬೇಸಾಯ ಮಾಡುವುದನ್ನು ಬಿಟ್ಟು ಪಟ್ಟಣಗಳಲ್ಲಿ ಐಶಾರಾಮ್ಯದ ವೈಟ್ ಕಾಲರ್ಡ್ ಕೆಲಸಗಳಿಗಳಿಗೆ ಒಗ್ಗಿಹೋದರು. ಎಪ್ಪತ್ತರ ದಶಕದಲ್ಲಿ ಭಾರತಕ್ಕೆ ಲಗ್ಗೆ ಇಟ್ಟ ವಿದೇಶೀ ತಂಪು ಪಾನೀಯ ಕೋಕ್ ಕಂಪನಿಗೆ ಅಂದಿನ ಜನತಾ ಪಕ್ಷದ ಸರ್ಕಾರದ ಜಾರ್ಜ್ ಫರ್ನಾಂಡೀಸ್ ಕೋಕ್ ಕೊಡುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬರುವುದಕ್ಕೆ ಅಡ್ದಿ ಪಡಿಸಿದರೂ, ತೊಂಭತ್ತರ ದಶಕದಲ್ಲಿ ಪಿ ವಿ ನರಸಿಂಹರಾವ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ಡಾ. ಮನಮೋಹನ್ ಸಿಂಗ್ ಅವರನ್ನು ತಮ್ಮ ಹಣಕಾಸು ಮಂತ್ರಿಯಾಗಿ ನೇಮಿಸಿಕೊಂಡ ನಂತರ ದೇಶದ ಆರ್ಥಿಕ ಕುಸಿತದಿಂದ ರಕ್ಷಿಸಲು ಜಾಗತೀಕರಣ ಎಂಬ ಹೆಸರಿನಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀತಿಗಳನ್ನು ಜಾರಿಗೆ ತರುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸುಗೆಯನ್ನು ಹಾಸಿ ಭಾರತಕ್ಕೆ ಕರೆ ತಂದ ನಂತರ ದೇಶದ ಜನರ ದಿಕ್ಕು ದೆಸೆಯೇ ಬದಲಾಗಿ ಹೋಯಿತು.

ಪ್ರಪಂಚದ ಎರಡನೇ ಅತೀ ದೊಡ್ಡ ಜನಸಂಖ್ಯೆಯುಳ್ಳ ಮತ್ತು ಅತೀ ಬುದ್ದಿವಂತರು ಮತ್ತು ಹೆಚ್ಚಾಗಿ ಯುವಕರನ್ನೇ ಹೊಂದಿದ ರಾಷ್ಟ್ರವಾದ ಭಾರತದ ವಿಶಾಲವಾದ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಜಗತ್ತಿನ ಮೂಲೆ ಮೂಲೆಯ ಕಂಪನಿಗಳು ಹಾತೊರೆಯತೊಡಗಿದವು. ಇದೇ ಅವಕಾಶವನ್ನು ಬಳೆಸಿಕೊಂಡ ಭಾರತದ ಯುವ ಜನತೆಯ ಪ್ರತಿಭಾ ಫಲಾಯನದೊಂದಿಗೆ ಅಮೇರಿಕಾ ಮತ್ತು ಭಾರತದ ನಡುವಿನ ಅಂತರ ಅಡುಗೆ ಮನೆ ಮತ್ತು ಬಚ್ಚಲು ಮನೆಯಂತಾಗಿ ಹೋಯಿತು. ಐರೋಪ್ಯ ದೇಶಗಳು, ಗಲ್ಫ್ ರಾಷ್ಟ್ರಗಳು ಮತ್ತು ಅಮೇರೀಕಾದಲ್ಲಿ ದುಡಿವ ಮಕ್ಕಳು ಕಳುಹಿಸಿದ ದುಡ್ಡಿನಿಂದ ಭಾರತದಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗ ತೊಡಗಿತು.

monkey

ಭಾರತೀಯರ ಕೊಳ್ಳುಬಾಕ ಸಂಸ್ಕೃತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹೇಗೆ ದುರ್ಬಳಕೆ ಮಾಡಿಕೊಂಡವು ಎನ್ನುವುದಕ್ಕೆ ಈ ಸುಂದರ ದೃಷ್ಟಾಂತದ ಉತ್ತಮ ಉದಾಹರಣೆಯಾಗಬಲ್ಲದು. ಅದೊಂದು ಸುಂದರ ಊರು ಎಲ್ಲರೂ ಸುಖಃದಿಂದ ಜೀವನ ನಡೆಸುತ್ತಿದ್ದಾಗ ಊರಿಗ ಅರಳೀ ಕಟ್ಟೆಯ ಬಳಿ ಕುಳಿತಿದ್ದ ಗ್ರಾಮಸ್ಥರ ಬಳಿ ಮನುಷ್ಯನೊಬ್ಬ ಬಂದು ಯಜಮಾನ್ರೇ, ಈ ಊರಿನಲ್ಲಿ ಕೋತಿಗಳು ಸಿಗುತ್ತವೆಯೇ? ಯಾವುದೋ ಸಂಶೋಧನೆಗಾಗಿ ಸುಮಾರು 100-150 ಕೋತಿಗಳು ಬೇಕಾಗಿವೆ. ಪ್ರತೀ ಕೋತಿಗೆ 300 ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತೇವೆ ಎಂದ. ಅರೇ ಇದೆಂತಹ ಹುಚ್ಚುತನ? ಕೋತಿಯನ್ನು ಯಾರಾದರೂ ಕೊಂಡು ಕೊಳ್ಳುತ್ತಾರ ಎಂದು ಕೆಲವರು ಆಡಿ ಕೊಂಡರೆ, ಊರಿನಲ್ಲಿದ್ದ ಕೆಲವು ಯುವಕರು ಪಕ್ಕದ ಕಾಡಿಗೆ ಹೋಗಿ ಕೋತಿಯನ್ನು ಹಿಡಿದು ತಂದು ಕೊಟ್ಟಾಗ, ಆಡಿದ ಮಾತಿಗೆ ತಪ್ಪದೇ ತಲಾ 300 ರೂಪಾಯಿಗಳನ್ನು ಕೊಟ್ಟು ಕೊಂಡು ಕೊಂಡು ಹೋಗಿಯೇ ಬಿಟ್ಟ. ಅದಾದ ಕೆಲವು ದಿನಗಳ ನಂತರ ಮತ್ತೆ ಬಂದ ಅದೇ ವ್ಯಕ್ತಿ ಈ ಬಾರೀ ಸುಮಾರು 500-800 ಕೋತಿಗಳು ಅವಶ್ಯಕತೆ ಇದೆ. ಹಾಗಾಗಿ ಪ್ರತೀ ಕೋತಿಗೆ 500 ರೂಪಾಯಿಗಳನ್ನು ಕೊಡುತ್ತೇನೆಂದಾಗ ಮತ್ತದೇ ಊರಿನ ಯುವಕರು ಕಾಡು ಮೇಡು ಎಲ್ಲಾ ಅಲೆದು ಸುಮಾರು 300 ಕೋತಿಗಳನ್ನು ಹಿಡಿದು ತಂದು ಕೊಟ್ಟಾಗ ಆ ವ್ಯಕ್ತಿ ಛೇ, ಇನ್ನೂ 500 ಕೋತಿಗಳ ಅವಶ್ಯಕತೆ ಇದೆ. ಹೇಗಾದರೂ ಮಾಡಿ ಹಿಡಿದಿಟ್ಟಿರಿ ತಲಾ1000 ರೂಗಳಿಗೆ ಕೊಂಡು ಕೊಳ್ಳುತ್ತೇನೆ ಎಂಬ ಆಸೆ ತೋರಿಸಿ ಹೋದ. ಈಗಾಗಲೇ ಎರಡು ಬಾರಿ ಹೇಳಿದ್ದಷ್ಟು ಹಣ ಕೊಟ್ಟು ನಂಬಿಕೆ ಗಳಿಸಿದ್ದ ಕಾರಣ ಹಳ್ಳಿಯ ಯುವಕರೆಲ್ಲಾ ಕಾಡು ಮೇಡು ಅಲೆದರೂ ಬೆರಳೆಣಿಕೆಯಷ್ಟು ಕೋತಿಯ ಹೊರತಾಗಿ ಸಿಗಲಿಲ್ಲ. ಅದೇ ಸಮಯದಲ್ಲಿ ಆ ಊರಿಗೆ ವ್ಯಕ್ತಿಯೊಬ್ಬನು ಬಂದು ಅಯ್ಯಾ ಈ ಊರಿನಲ್ಲಿ ಕೋತಿಗಳನ್ನು ತೆಗೆದುಕೊಳ್ಳುವವರು ಇದ್ದಾರಂತಲ್ಲಾ ಅವರ ವಿಳಾಸ ತಿಳಿಸಿ ನನ್ನ ಬಳಿ ಸುಮಾರು 500 ಕೋತಿಗಳಿವೆ ಅವುಗಳನ್ನು ಮಾರಬೇಕಿದೆ ಎಂದ. ಆ ವ್ಯಕ್ತಿಯ ಮಾತು ಕೇಳಿದ ಯುವಕರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಗಾಗಿ ಆವ್ಯಕ್ತಿಯ ಬಳಿಯಲ್ಲಿದ್ದ ಅಷ್ಟೋ ಕೋತಿಗಳನ್ನು ತಲಾ 800 ರೂಪಾಯಿಗಳಿಗೆ ಖರೀದಿಸಿ ಪ್ರತೀ ಕೋತಿಗೆ 200 ರೂಪಾಯಿ ಲಾಭ ಗಳಿಸಬಹುದು ಎಂದು ಮನಸ್ಸಿನಲ್ಲಿಯೇ ಮಂಡಿಗೆ ಸವಿಯುತ್ತಾ ಕೋತಿ ಖರೀದಿ ಮಾಡುವವನು ಈಗ ಬರಬಹುದು ಆಗ ಬರಬಹುದು ಎಂದು ಕಾದಿದ್ದೇ ಆಯ್ತು. ಎಷ್ಟು ತಿಂಗಳಾದರೂ ಆತ ಬರಲೇ ಇಲ್ಲ. ಅದೇ ಊರಿನ ಕೋತಿಗಳನ್ನು ಅವರಿಂದಲೇ ಅಲ್ಪ ಮೊತ್ತಕ್ಕೆ ಖರೀದಿಸಿ ಅವುಗಳಿಗೆ ಬೇಡಿಕೆ ಹೆಚ್ಚಿಸಿ ಮತ್ತೊಬ್ಬರ ಮೂಲಕ ಹೆಚ್ಚಿನ ಬೆಲೆಗೆ ಅವರಿಗೇ ಮಾರಾಟ ಮಾಡಿ ಎಲ್ಲರಿಗೂ ಮೋಸ ಮಾಡಿ ಹೋಗಿದ್ದರು ಆ ಕೋತಿ ಮಾರಾಟಗಾರರು. ಈಗಿರುವ ಬಹುರಾಷ್ಟ್ರೀಯ ಕಂಪನಿಗಳೂ ಇದಕ್ಕೆ ಹೊರತಾಗಿಲ್ಲ, ಸುಖಾ ಸುಮ್ಮನೆ ನಮಗೆ ಆಸೆಯನ್ನು ತೋರಿಸಿ, ಅವರ ಪದಾರ್ಥಗಳ ರುಚಿ ತೋರಿಸಿ ಒಂದಕ್ಕೆ ಎರಡರಷ್ಟು ಬೆಲೆಗೆ ನಮಗೇ ಮಾರಿ ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ.

chips

ನಮ್ಮದೇ ರೈತರ ಬಳಿ ಕೆಜಿಗೆ ಹತ್ತರಿಂದ ಹದಿನೈದು ರೂಪಾಯಿಗಳಿಗೆ ಆಲೂಗೆಡ್ಡೆ ಖರೀದಿಸಿ ಅವುಗಳಿಂದ ಚಿಪ್ಸ್ ತಯಾರಿಸಿ ಚೆಂದನೆಯ ಪ್ಯಾಕ್ ಮಾಡಿ ಅದೇ ರೀತಿ ನಮ್ಮದೇ ನೀರಿಗೆ ಸ್ವಲ್ಪ ಸಕ್ಕರೆಯ ಜೊತೆಗೆ ಆನಾರೋಗ್ಯಕರ ಆನಿಲವನ್ನು ಸೇರಿಸಿ ಕ್ರಿಕೆಟ್ ಆಟಗಾರರು, ಚಲನಚಿತ್ರದ ನಾಯಕಿ ಮತ್ತು ನಾಯಕರ ಜಾಹೀರಾತಿನೊಂದಿಗೆ ಮರಳು ಮಾಡಿ ಒಂದಕ್ಕೆ ಹತ್ತರಷ್ಟು ಬೆಲೆಗೆ ನಮಗೇ ಮಾರಿ ಕೋಟ್ಯಾಂತರ ರೂಪಾಯಿಗಳನ್ನು ತಮ್ಮ ದೇಶಕ್ಕೆ ಹೊತ್ತೊಯ್ದರು.

tractors

ಹಳ್ಳಿಗಳಲ್ಲಿ ಎತ್ತುಗಳನ್ನು ಬಳಸಿಕೊಂಡು ಸಾವಯವ ಕೃಷಿಯಾಧಾರಿತ ಬೆಳೆದ ಪದಾರ್ಥಗಳನ್ನು ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ರೈತರೆಲ್ಲರೂ ತಾವು ಬೆಳೆದದ್ದನ್ನು ಅಲ್ಲಿಗೆ ತಂದು ವ್ಯಾಪಾರ ಮಾಡಿಕೊಂಡು ಅಲ್ಲಿಯೇ ತಮ್ಮ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಿ ಸ್ವಾವಲಂಬಿ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಕೃಷಿಯಲ್ಲಿಯೂ ಬಹುರಾಷ್ಟ್ರೀಯ ಕಂಪನಿಗಳು ದಾಂಗುಡಿ ಇಟ್ಟವು. ಕೃಷಿಯಲ್ಲಿಯೂ ಯಂತ್ರಗಳು ಸದ್ಧು ಮಾಡತೊಡಗಿತು. ಹೆಚ್ಚು ಹೆಚ್ಚು ಬೆಳೆಯುವ ಸಲುವಾಗಿ, ನೇಗಿಲುಗಳ ಜಾಗದಲ್ಲಿ ಟ್ರಾಕ್ಟರ್ ಬಂದವು, ಸಾವಯವ ಗೊಬ್ಬರದ ಜಾಗದಲ್ಲಿ ರಾಸಾಯಿನಿಕ ಗೊಬ್ಬರಗಳು ಬಂದವು, ನದಿಯ ನೀರೆಲ್ಲಾ ಬರಿದಾಗಿ, ಎಗ್ಗಿಲ್ಲದೇ ಕೊಳವೆ ಭಾವಿಗಳನ್ನು ಕೊರೆದು ಅಂತರ್ಜಲವನ್ನೂ ಬರಿದು ಮಾಡಿಟ್ಟರು.

banks

ಅತ್ಯುತ್ತಮ ಸೇವೆ ಮತ್ತು ಗ್ರಾಹಕ ಸ್ನೇಹಿಗುಣಗಳುಳ್ಳ ಅಂತರಾಷ್ಟ್ರೀಯ ಬ್ಯಾಂಕುಗಳು ಮುಂದೆ ರಾಷ್ಟ್ರೀಕೃತ ಬ್ಯಾಂಕುಗಳು ಪತರಗುಟ್ಟ ತೊಡಗಿದವು, ದೇಶದ ಅತೀ ದೊಡ್ಡ ವಿಮಾ ಕಂಪನಿ LIC ಜೊತೆ ನೂರಾರು ವಿದೇಶೀ ಖಾಸಗೀ ವಿಮಾ ಕಂಪನಿಗಳು ಸ್ಪರ್ಧೆಗಿಳಿದು ತ್ವರಿತವಾಗಿ ಇತ್ಯರ್ಥಗಳನ್ನು ಮುಗಿಸುವ ಮೂಲಕ ಜನಸ್ನೇಹಿಯಾಗಿ ಹೋಗಿ ನಮ್ಮ‌ ದೇಶೀ ವಿಮಾ ಕಂಪನಿಗಳು ಮುಚ್ಚುವ ಹಂತಕ್ಕೆ ದೂಡಿವೆ. ವೃತ್ತಿ ರಂಗಭೂಮಿಯನ್ನು ಸಿನಿಮಾ ಟೆಂಟ್ ಮತ್ತು ಟಾಕೀಸುಗಳು ನುಂಗಿಹಾಕಿದರೆ, ಒಂದಕ್ಕೆ ನಾಲ್ಕರಷ್ಟು ಹಣ ಕೀಳುವ ಮಲ್ಟೀ ಪ್ಲೆಕ್ಸ್ಗಳು ಥಿಯೇಟರ್ಗಳನ್ನು ನೆಲಸಮ ಮಾಡಿದವು. ಸಾಮಾನ್ಯ ಅಂಗಡಿಗಳ ಬದಲಾಗಿ ಸೂಜಿಯಿಂದ ಹಿಡಿದು ಸೊಳ್ಳೆ ಬ್ಯಾಟ್ ಖರೀದಿಸಲೂ ಜನಾ ಮಾಲ್ ಸಂಸ್ಕೃತಿಗೆ ಒಗ್ಗಿ ಹೋದರು. ಇನ್ನು ದಿನಸೀ ವಸ್ತುಗಳನ್ನೂ ಮನೆಯ ಬಾಗಿಲಿಗೇ ತಲುಸಲು ಅನೇಕ ಬಹುರಾಷ್ತ್ರೀಯ ಕಂಪನಿಗಳು ಮುಂದಾಗಿ ಸ್ಥಳೀಯ ಕಿರಾಣಿ ಅಂಗಡಿಗಳಿಗೆ ಶಾಶ್ವತವಾಗಿ ಬೀಗ ಹಾಕಿಸಿಬಿಟ್ಟವು.

ಇಷ್ಟೆಲ್ಲಾ ಜನ ಜೀವನದಲ್ಲಿ ಹಾಸು ಹೊಕ್ಕಾಗಿ ಹೋಗಿರುವ ಬಹುರಾಷ್ಟ್ರೀಯ ಕಂಪನಿಗಳ ಹಾವಳಿಯನ್ನು ಸ್ವದೇಶೀ ಜಾಗೃತಿಯ ಅಡಿಯಲ್ಲಿ ಸ್ವದೇಶೀ ಉತ್ಪಾದಿತ ಸೋಪು ಶ್ಯಾಂಪು ಟೋಟ್ ಪೇಸ್ಟ್ ಬಳಕೆ ಮಾಡುವುದು ಮೊದಲ ಹೆಜ್ಜೆಯಾದರೂ ಅದರ ಜೊತೆ ಜೊತೆಯಲ್ಲಿಯೇ, ನಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗಿದೆ. ಕೊರೋನಾ ಲಾಕ್ ಡೌನ್ ನೆಪದಲ್ಲಿ ಹೇಗೂ ಎರಡು ತಿಂಗಳು ಯಾವುದೇ ಖಯಾಲುಗಳಿಲ್ಲದೇ, ಜಂಕ್ ಪುಡ್ ಗಳಿಲ್ಲದೇ ಉತ್ತಮ ಹವ್ಯಾಸದ ಜೀವನ ಶೈಲಿಗೆ ಒಗ್ಗಿ ಹೋಗಿದ್ದೇವೆ. ಸ್ಥಳೀಯ ರೈತರು ಬೆಳೆದ ತರಕಾರಿಗಳು, ಸ್ಥಳಿಯ ಕಿರಾಣಿ ಅಂಗಡಿಗಳ ಪದಾರ್ಥಗಳನ್ನೇ ಬಳಸಿ ಕೊಂಡು ಉತ್ತಮ ಜೀವನವನ್ನೇ ನಡೆಸಿದ್ದೇವೆ. ಯಾವುದೇ ವಸ್ತುಗಳನ್ನು ಕೊಳ್ಳುವ ಮೊದಲು ಕೇವಲ ಬೆಲೆ ಮತ್ತು ಗಡುವು ದಿನಾಂಕ ನೋಡುವುದರ ಜೊತೆಗೆ ತಯಾರಕರ ವಿವರಗಳತ್ತಲೂ ಕಣ್ಣಾಡಿಸಿ ಸ್ಥಳೀಯ ತಯಾರಕರಿಗೆ ಆದ್ಯತೆ ಕೊಡುವ ಮೂಲಕ ಸ್ಥಳೀಯರಿಗೆ ಅವಕಾಶವನ್ನು ಹೆಚ್ಚಿಸುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲತ್ತಬಹುದಾಗಿದೆ.

makeinindia

ಇಷ್ಟೆಲ್ಲಾ ವಿವರಿಸಿದ ಮೇಲೆ ಸಾರಾ ಸಗಟಾಗಿ ವಿದೇಶೀ ಉತ್ಪನ್ನಗಳನ್ನು ವಿರೋಧಿಸಲೂ ಸಾಧ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಎಲೆಕ್ಟ್ರ್ರಾ ನಿಕ್ಸ್ ಹಾರ್ಡವೇರ್ ತಯಾರಕೆಯಲ್ಲಿ ಬಹಳ ಹಿಂದಿದ್ದೇವೆ. ಬಹುಶಃ ಈ ಕೊರೋನಾ ಪ್ರಭಾವದಿಂದಾಗಿ ಚೈನಾದಲ್ಲಿದ್ದ ಅನೇಕ ಕಂಪನಿಗಳು ಭಾರತಕ್ಕೆ ಸ್ಥಳಾಂತರಿಸಿದಲ್ಲಿ ಸ್ವಲ್ಪ ಸುಧಾರಿಸಬಹುದೇನೋ? ಸಂಪೂರ್ಣವಾಗಿ Made in India ಸಾಧ್ಯವಾಗದಿದ್ದರೂ make in india ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತು ಸ್ಥಳೀಯರಿಂದಲೇ ತಯಾರಾದ ಪದಾರ್ಥಗಳನ್ನು ಬಳೆಸಬಹುದಾಗಿದೆ.

local

ಇನ್ನು ಕೃಷಿಯು ದೇಶದ ಶೇ.45ರಷ್ಟು ಮಂದಿಗೆ ಉದ್ಯೋಗ ನೀಡುತ್ತಿದ್ದು, ಸಾವಯವ ಕೃಷಿಗೆ ಆದ್ಯತೆ ನೀಡುವತ್ತ ಕೃಷಿಕರನ್ನು ಸೆಳೆಯುವ ಮೂಲಕ, ಕಡಿಮೆ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲದ ಸೌಲಭ್ಯ ನೀಡುವ ಮೂಲಕ ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ರೈತರ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆ ಸಿಗುವ ಹಾಗೆ ಮಾಡುವ ಮೂಲಕ ರೈತನ ಬಾಳನ್ನು ಹಸನು ಮಾಡುವುದಲ್ಲದೇ ಉತ್ತಮ ಸಾವಯವ ಉತ್ಪನಗಳ ಮೂಲಕ ದೇಶವಾಸಿಗಳ ಅರೋಗ್ಯದ ಕಡೆಗೂ ಗಮನ ಹರಿಸಿದಂತಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಶೇ.4ರಷ್ಟು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಶೇ.3ರಷ್ಟು ಮಾತ್ರವೇ ಉದ್ಯೋಗ ಕಲ್ಪಿಸುತ್ತಿದೆ. ಇದರ ಮೂಲಕ ಯುವಜನತೆ ಕೇವಲ ಸರ್ಕಾರಿ ಅಥವಾ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಕ್ಕೆ ಹಾತೊರೆಯದೇ ಕೃಷಿ, ಗುಡಿಕೈಗಾರಿಕೆ ಮತ್ತು ಸ್ವಉದ್ಯೋಗಳತ್ತ ಗಮನ ಹರಿಸಲು ಸಹಕಾರಿಯಾಗುತ್ತದೆ ಮತ್ತು ಸ್ಥಳೀಯ ಮಾರುಕಟ್ಟೆಯೂ ಸುಧಾರಣೆಗೊಂಡು ಕೋಟ್ಯಾಂತರ ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ಹಸನಾಗುತ್ತದೆ. ಹೀಗಾದಲ್ಲಿ ಮಾತ್ರವೇ ದೇಶದಲ್ಲಿ ನಿಜವಾದ ಅರ್ಥದಲ್ಲಿ ಸ್ವದೇಶೀ ಜಾಗೃತಿ ಮೂಡುವಂತಾಗುತ್ತದೆ. ನಾವು ಸ್ವಾವಲಂಬಿಗಳಾಗದಿದ್ದರೆ ಯಾರು ಎಷ್ಟೇ ಲಕ್ಷ ಕೋಟಿ ಪರಿಹಾರ ನೀಡಿದರೂ ಆತ್ಮನಿರ್ಭರ್ ಫಲಕಾರಿಯಾಗದೇ, ಅದೆಲ್ಲಾ ಅಪಾತ್ರರ ಪಾಲಾಗಿ ದೇಶದ ಹಿಸಾಬ್ ಬರಾಬರ್ ಆಗುವ ಸಂಭವವೇ ಹೆಚ್ಚಾಗಿದೆ.

ಏನಂತೀರೀ?

3 thoughts on “ಸ್ವದೇಶೀ ಜಾಗೃತಿ

 1. ನಮಸ್ಕಾರ ಸರ್. ನಿಮ್ಮ ಬ್ಲಾಗ್ ಚೆನ್ನಾಗಿದೆ. ವೈವಿಧ್ಯಮಯ ಬರಹಗಳನ್ನು ಬರೆದಿದ್ದೀರಿ. ಅದೆಷ್ಟು ಬರೆಯುತ್ತೀರಿ ನೀವು! Frankly speaking, ಕನ್ನಡದಲ್ಲಿ ಬ್ಲಾಗಿಂಗ್ ಸಂಸ್ಕೃತಿ ಇನ್ನೇನು ನಶಿಸಿ ಹೋಗುತ್ತಿದೆಯೇನೋ ಅನ್ನುವ ಕಾಲ ಬಂದಿರುವಾಗ ರೆಗ್ಯುಲರ್ ಆಗಿ ಬ್ಲಾಗ್ ಬರೆಯುವ ಹವ್ಯಾಸವನ್ನು ನೀವು ಮುಂದುವರೆಸಿಕೊಂಡಿದ್ದೀರಿ. ತುಂಬ ಖುಷಿಯಾಯಿತು. ಹೀಗೇ ಬರಿತಾ ಇರಿ. ಬಿಡುವಿದ್ದಾಗ ನನ್ನ ಬ್ಲಾಗನ್ನೂ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ನಾನೇನೂ ನಿಮ್ಮಷ್ಟು Active ಆಗಿ ಬ್ಲಾಗ್ ಬರೆಯುವುದಿಲ್ಲ. ನನ್ನ ವೈದ್ಯಕೀಯ ಅಧ್ಯಯನದಲ್ಲಿ ಅದಕ್ಕೆ ಸಮಯ ಸಾಲುವುದೂ ಇಲ್ಲ. ಆದರೂ ಬ್ಲಾಗಿಂಗ್ ಪ್ರೀತಿಯನ್ನು ಇನ್ನೂ ಉಳಿಸಿಕೊಂಡಿದ್ದೇನೆ. ನನ್ನ ಲಿಂಕ್ ಇಲ್ಲಿದೆ. http://www.mijarchitra.wordpress.com

  Like

 2. ನಮಸ್ಕಾರ ಸರ್. ನಿಮ್ಮ ಬ್ಲಾಗ್ ಚೆನ್ನಾಗಿದೆ. ವೈವಿಧ್ಯಮಯ ಬರಹಗಳನ್ನು ಬರೆದಿದ್ದೀರಿ. ಅದೆಷ್ಟು ಬರೆಯುತ್ತೀರಿ ನೀವು? Frankly speaking, ಕನ್ನಡದಲ್ಲಿ ಬ್ಲಾಗಿಂಗ್ ಸಂಸ್ಕೃತಿ ಇನ್ನೇನು ನಶಿಸಿ ಹೋಗುತ್ತಿದೆಯೇನೋ ಅನ್ನುವ ಕಾಲ ಬಂದಿರುವಾಗ ರೆಗ್ಯುಲರ್ ಆಗಿ ಬ್ಲಾಗ್ ಬರೆಯುವ ಹವ್ಯಾಸವನ್ನು ನೀವು ಮುಂದುವರೆಸಿಕೊಂಡಿದ್ದೀರಿ. ತುಂಬ ಖುಷಿಯಾಯಿತು. ಹೀಗೇ ಬರಿತಾ ಇರಿ. ಬಿಡುವಿದ್ದಾಗ ನನ್ನ ಬ್ಲಾಗನ್ನೂ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ನಾನೇನೂ ನಿಮ್ಮಷ್ಟು Active ಆಗಿ ಬ್ಲಾಗ್ ಬರೆಯುವುದಿಲ್ಲ. ನನ್ನ ವೈದ್ಯಕೀಯ ಅಧ್ಯಯನದಲ್ಲಿ ಅದಕ್ಕೆ ಸಮಯ ಸಾಲುವುದೂ ಇಲ್ಲ. ಆದರೂ ಬ್ಲಾಗಿಂಗ್ ಪ್ರೀತಿಯನ್ನು ಇನ್ನೂ ಉಳಿಸಿಕೊಂಡಿದ್ದೇನೆ. ನನ್ನ ಲಿಂಕ್ ಇಲ್ಲಿದೆ. http://www.mijarchitra.wordpress.com
  Thanks
  -Dr.Lakshmeesha J Hegade

  Liked by 1 person

  1. ಧನ್ಯವಾದಗಳು ‌ಸರ್. ಖಂಡಿತವಾಗಿಯೂ ನಿಮ್ಮ ಬ್ಗಾಗ್ ಓದಿ ಅಭಿಪ್ರಾಯವನ್ನು ತಿಳಿಸುತ್ತೇನೆ.

   ಈ ಲಾಕ್ ಡೌನ್ ಸಮಯದಲ್ಲಿ ‌ಮನೆಯಿಂದಲೇ ಕೆಲಸ ‌ಮಾಡುವ ಸಂಯೋಗದಿಂದ ‌ಹೆಚ್ಚು ಅಧ್ಯಯನಕ್ಕೆ ‌ಮತ್ತು ಬರೆಯಲು ಸಮಯ‌ ಸಿಗುತ್ತಿದೆ. ಒಮ್ಮೆ ಕಛೇರಿಗೆ ಹೊರಟವೆಂದರೆ ರಸ್ತೆಯಲ್ಲಿಯೇ ಸಮಯ ಕಳೆದು ಹೋಗಿ ಬರೆಯಲು ‌ಪುರುಸೊತ್ತೇ ಆಗುವುದಿಲ್ಲ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s