ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ

1964 ರಲ್ಲಿ ಕೆ.ಬಾಲಚಂದರ್ ಆವರ ನಿರ್ದೇಶನದಲ್ಲಿ ಕನ್ನಡಿಗ ತಾಯ್ ನಾಗೇಶ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಸರ್ವರ್ ಸುಂದರಂ ಎಂಬ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ರೆಕಾರ್ಡ್ ಆಗಿದ್ದಲ್ಲದೇ ಅನೇಕ ಭಾಷೆಗಳಲ್ಲಿಯೂ ಡಬ್ ಮತ್ತು ರೀಮೇಕ್ ಆಯಿತು. ತೊಂಭತ್ತರ ದಶಕದಲ್ಲಿ ಜಗ್ಗೇಶ್ ಅವರು ಅದೇ ಸಿನಿಮಾವನ್ನು ಸರ್ವರ್ ಸೋಮಣ್ಣ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರೀಮೇಕ್ ಮಾಡಿದ್ದರು. ಚಿತ್ರನಟನಾಗಬೇಕೆಂಬ ಆಸೆ ಹೊತಿದ್ದ ಯುವಕನೊಬ್ಠ ಹೊಟ್ಟೆ ಪಾಡಿಗೆ ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಸೇರಿಕೊಂಡು ಅಲ್ಲಿಗೆ ಬರುವ ಗ್ರಾಹಕರಲ್ಲಿ ಒಬ್ಬಳನ್ನು ತನಗರಿವಿಲ್ಲದಂತೆಯೇ ಪ್ರೀತಿಸುತ್ತಾನೆ. ನಂತರ ಅದೇ ಹೋಟೆಲ್ಲಿಗೆ ಬರುವ ಮತ್ತೊಬ್ಬ ಗ್ರಾಹಕ ಈತ ನಟನಾಗಬೇಕೆಂಬುದನ್ನು ಅರಿತು ತನ್ನ ಪ್ರಭಾವದಿಂದ ನಟನನ್ನಾಗಿಸುತ್ತಾನೆ. ನಟನಾಗಿ ಉಚ್ಚ್ರಾಯ ಸ್ಥಿತಿಯಲ್ಲಿದ್ದು ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ವಯೋವೃದ್ಧ ತಾಯಿ ಕಾಲು ಜಾರಿ ಪೆಟ್ಟು ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು ಅಲ್ಲಿಗೆ ಬರುವಷ್ಟರಲ್ಲಿ ತಾಯಿ ಮೃತರಾಗಿರುತ್ತಾರೆ. ಇತ್ತ ತಾನು ಪ್ರೀತಿಸಿದ ಹುಡುಗಿ ತನ್ನನ್ನು ನಟನನ್ನಾಗಿಸಿದ ಸ್ನೇಹಿತನನ್ನು ಇಚ್ಚೆಪಟ್ಟಿದ್ದಾಳೆ ಎಂಬುದನ್ನು ಅರಿತು ಮತ್ತೊಮ್ಮೆ ಸರ್ವರ್ ಆಗಿ ಬದಲಾಗುತ್ತಾನೆ. ಆದರೆ ನಾನು ಇಂದು ಹೇಳಲು ಹೊರಟಿರುವುದು ಇದಕ್ಕೆ ತದ್ವಿರುದ್ಧವಾದ ಮತ್ತೊಬ್ಬ ಸರ್ವರ್ ಸುಂದರಂ ಕಥೆ.

ಸದ್ಯದ ಪರಿಸ್ಥಿತಿಯಲ್ಲಿ ನಾವೆಲ್ಲಾ ನೋಡುತ್ತಿರುವುದು ಯಾರೋ ದಾನಿಗಳು ಕೊಟ್ಟಿದ್ದನ್ನೋ ಇಲ್ಲವೇ ಸರ್ಕಾರಿ ಸೌಲಭ್ಯಗಳನ್ನೇ ತಾವು ತಮ್ಮ ಸ್ವಂತ ಖರ್ಚಿನಿಂದ ಕೊಟ್ಟದ್ದು ಎನ್ನುವಂತೆ ನೂರಾರು ಜನರ ಸಮ್ಮುಖದಲ್ಲಿ ಎಲ್ಲಾ ಮಾಧ್ಯಮದವರ ಸಮ್ಮುಖದಲ್ಲಿ ಆಡಂಬರದ ಪ್ರಚಾರ ಪ್ರಿಯತೆಗಾಗಿ ಸೇವೆ ಮಾಡಿರುವವರೇ ಹೆಚ್ಚಾಗಿರುವಾಗ, MSc Library Science ನಲ್ಲಿ ಚಿನ್ನದ ಪದಕ ಪಡೆದವರೊಬ್ಬರು ಸಂತನ ರೀತಿಯಲ್ಲಿ, ಬಲಗೈಯಲ್ಲಿ ಕೊಟ್ಟದ್ದು ಎಡಗೈಯ್ಯಿಗೂ ತಿಳಿಳಬಾರಂದತೆ ತಮ್ಮ ಜೀವಮಾದ ಇಡೀ ಸಂಪಾದನೆಯನ್ನು ಬಡವರಿಗಾಗಿ ಮೀಸಲಾಗಿಟ್ಟು ತಮ್ಮ ಎರಡು ಹೊತ್ತಿನ ಊಟಕ್ಕಾಗಿ ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಪಾರ್ಟ್ ಟೈ ಕೆಲಸಮಾಡುತ್ತಿದ್ದ ಮ್ಯಾನ್ ಆಫ್ ದಿ ಮಿಲೇನಿಯಮ್ ಎಂಬ ಪ್ರಶ್ರಸ್ತಿ ಪುರಸ್ಕೃತ ಶ್ರೀ ಕಲ್ಯಾಣ ಸುಂದರಂ ಅವರ ಕಾರ್ಯ ಸೇವೆಯ ಬಗ್ಗೆ ತಿಳಿದುಕೊಳ್ಳೋಣ.

1940 ರ ಮೇ 10 ರಂದು ತಮಿಳುನಾಡಿನ ತಿರುನೆಲ್ವೇಲಿಯ ಮೇಲಕರುವೆಲಂಗುಲಂ ಎಂಬ ಪುಟ್ಟ ಹಳ್ಳಿಯಲ್ಲಿ ಪಾಲವಣ್ಣನಾಥನ್ ಮತ್ತು ತಾಯಮ್ಮಾಳ್ ಎಂಬ ಸಭ್ಯಸ್ಥ ದಂಪತಿಗಳಿಗೆ ಜನಿಸಿದವನೇ ಶ್ರೀ ಕಲ್ಯಾಣ ಸುಂದರಂ. ದುರಾದೃಷ್ಟವಷಾತ್ ಅವರಿಗೆ ಒಂದು ಒಂದು ವರ್ಷವಾಗುವಷ್ಟರಲ್ಲೇ ಅವರ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲೇ ಬೆಳೆಯುತ್ತಾರೆ. ಹುಟ್ಟಿದ ವರ್ಷದಲ್ಲೇ ತಂದೆಯನ್ನು ತಿಂದು ಕೊಂಡ ದುರೈವೀ ಮಗೂ ಎಂಬ ನಿಂದನೆ ಕೇಳಿಬಂದರೂ ಅವರ ತಾಯಿ ಅದಕ್ಕೆಲ್ಲಾ ಎದೆಗುಂದದೆ ತನ್ನ ಮಗನನ್ನು ಜತನದಿಂದ ಸಾಕಿ ದೊದ್ಡವನನ್ನಾಗಿ ಮಾಡುತ್ತಾರೆ.

ಬಾಲಕ ದಿನಕಳೆದಂತೆ ದೊಡ್ಡವನಾಗುತ್ತಿದ್ದಂತೆಯೇ ಆತನ ಧ್ವನಿ ಇತರೇ ಗಂಡು ಮಕ್ಕಳಂತೆ ಗಡುಸಾಗದೇ ಸ್ದ್ರೀ ಧ್ವನಿಯಿಂದ ಕೂಡಿರುವುದರಿಂದ ಎಲ್ಲರೂ ಆತನನ್ನು ಗೇಲಿ ಮಾಡುತ್ತಿದ್ದರಿಂದ ಆ ಪುಟ್ಟ ಬಾಲಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೂ ಬಂದಿರುತ್ತಾನೆ. ಆದರೆ ತನ್ನ ಬಿಡುವಿನ ಸಮಯದಲ್ಲಿ ಕಲ್ಕಾಂಡು ಎಂಅ ತಮಿಳು ಪತ್ರಿಕೆಯನ್ನು ಓದುತ್ತಿರುತ್ತಾರೆ. ಆ ಪತ್ರಿಕೆಯ ಸಂಪಾದಕರಾದ ಶ್ರೀ ತಮಿಳುವಾನನ್ ಅವರ ಬರಗಳಿಗೆ ಮಾರು ಹೋಗಿ ಪತ್ರ ವ್ಯವಹಾರಗಳನ್ನು ಮಾಡಲು ಆರಂಭಿಸುತ್ತಾರೆ. ಬಾಲಕ ಕಲ್ಯಾಣ ಸುಂದರಂ ಅವರ ಪ್ರತ್ರ ವ್ಯವಹಾರಗಳಿಂದ ಸಂತೃಷ್ಟರಾದ ಸಂಪಾದಕರು ಆ ಬಾಲಕನನ್ನು ಚೆನ್ನೈನಲ್ಲಿ ನಡೆವ ಒಂದು ಸಮಾರಂಭಕ್ಕೆ ಆಹ್ವಾನಿಸುತ್ತಾರೆ. ಹಾಗೆ ಅವರಿಬ್ಬರ ಭೇಟಿಯ ಸಂದರ್ಭದಲ್ಲಿ ತಮ್ಮ ಕೀರಲು ಧ್ವನಿಯ ಬಗ್ಗೆ
ಬೇಸರ ವ್ಯಕ್ತ ಪಡಿಸುತ್ತಾರೆ. ಬಾಲಕನ ಸಮಸ್ಯೆಯನ್ನು ಅರಿತ ಶ್ರೀ ತಮಿಳುವಾನನ್ ಅವರು ಹೇ ಇದು ಅಂಗವೈಕಲ್ಯವಲ್ಲ ಇದೊಂದು ಸಹಜ ಸಣ್ಣ ಸಮಸ್ಯೆಯಷ್ಟೇ ಮತ್ತು ವಯಸ್ಸಾದಂತೆ ಸರಿ ಹೋಗಲೂ ಬಹುದು. ಹಾಗಾಗಿ ಧೃತಿಗೆಡದಿರು. ಜನರು ನಮ್ಮ ಹಿಂದೆ ಏನು ಮಾತನಾಡುತ್ತಾರೆ ಮತ್ತು ಹೇಗೆ ಗೇಲಿ ಮಾಡುತ್ತಾರೆ ಎಂಬುದರ ಬಗ್ಗೆ ತಲೆ ಕೆಡಸಿಕೊಳ್ಳಬಾರದು. ನಾವು ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡುವ ಮೂಲಕ ಅದೇ ಜನರು ನಮ್ಮ ಬಗ್ಗೆ ಮಾತನಾಡುವಂತೆ ಮಾಡಬೇಕು ಎಂದು ತಿಳಿಸುತ್ತಾರೆ. ಈ ಪ್ರೇರಣಾತ್ಮಕ ಸಾಂತ್ವನಗಳಿಂದ ಬಹಳ ಉತ್ಸಾಹಿದಿಂದ ತಮ್ಮ ಹಳ್ಳಿಗೆ ಮರಳಿದ ಶ್ರೀ ಕಲ್ಯಾಣ ಸುಂದರಂ ಅಲ್ಲಿನ ಜನರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲು ನಿರ್ಧರಿಸುತ್ತಾರೆ.

1963 ರಲ್ಲಿ ಭಾರತ ಮತ್ತು ಚೀನಾ ಯುದ್ಧ ಪ್ರಾರಂಭವಾದಾಗ, ಪ್ರಧಾನಿ ಜವಾಹರಲಾಲ್ ನೆಹರು ಜನರು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುವಂತೆ ರೇಡಿಯೊದಲ್ಲಿ ಸಾರ್ವಜನಿಕವಾಗಿ ಮನವಿ ಮಾಡುತ್ತಾರೆ. ಆ ಸಂದರ್ಭದಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಶ್ರೀ ಕಲ್ಯಾಣ ಸುಂದರಂ ತಮ್ಮ ಕುತ್ತಿಗೆಯಲ್ಲಿದ್ದ 65 ಗ್ರಾಂ ತೂಕದ ಚಿನ್ನದ ಸರವನ್ನು ತಮಿಳುನಾಡಿನ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕಾಮರಾಜ್ ಅವರಿಗೆ ನೀಡುತ್ತಾರೆ. ಬಾಲಕನ ಈ ಸಮಾಜಮುಖೀ ದಾನದಿಂದ ಪ್ರಭಾವಿತರಾದ ಶ್ರೀ ಕಾಮರಾಜ್ ಅವರು ಯುವಕ ಕಲ್ಯಾಣ ಸುಂದರಂ ಅವರನ್ನು ರಾಷ್ಟ್ರೀಯ ನಿಧಿ ಎಂದು ಘೋಷಿಸಿದರಲ್ಲದೇ ಆವರ ಮುಂದಿನ ಭಬಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದರು.

ರಾಷ್ಟ್ರೀಯ ರಕ್ಷಣಾ ನಿಧಿಗೆ ಇಷ್ಟೋಂದು ದೇಣಿಗೆಯನ್ನು ನೀಡಿ ಮುಖ್ಯಮಂತ್ರಿಗಳಿಂದ ಹೊಗಳಿಕೆಯನ್ನು ಪಡೆದ ಯುವಕ ಕಲ್ಯಾಣ ಸುಂದರಂ ಅವರನ್ನು ಆನಂದ ವಿಗಟನ್ ನಿಯತಕಾಲಿಕದ ಅಂದಿನ ಸಂಪಾದಕರಾಗಿದ್ದ ಬಾಲಸುಬ್ರಮಣಿಯನ್ ಅವರು ಸಂದರ್ಶಿಸುವ ಸಂದರ್ಭದಲ್ಲಿ ನೀವು ಸಹಾಯ ಮಾಡಿದ್ದೇನೂ ಸಂತೋಷ ಆದರೆ ಪೂರ್ವಜರಿಂದ ಬಂದ ಬಳುವಳಿಯನ್ನು ದಾನ ಮಾಡಿದಲ್ಲಿ ಅದು ನಿಜವಾದ ಸೇವೆ ಎನಿಸುವುದಿಲ್ಲ, ನಮ್ಮ ಸ್ವಂತ ಪರಿಶ್ರಮದಿಂದ ದುಡಿದ ಹಣದಿಂದ ದಾನ ಧರ್ಮ ಮಾಡಿದಲ್ಲಿ ಅದಕ್ಕೆ ಹೆಚ್ಚಿನ ಮಹತ್ವವಿರುತ್ತದೆ ಎಂದು ಹೇಳಿದ್ದು ಕಲ್ಯಾಣ ಸುಂದರಂ ಅವರ ಮೇಲೇ ಭಾರೀ ಪ್ರಭಾವವನ್ನು ಬೀರುತ್ತದೆ.

ತಮ್ಮ ಲೈಬ್ರರಿ ಸೈನ್ಸ್ ನಲ್ಲಿ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಮುಗಿಸಿದ ಕಲ್ಯಾಣ ಸುಂದರಂ ಅವರಿಗೆ ಸರಕಾರದ ಲೈಬ್ರರಿಯಲ್ಲಿ ಕೆಲಸವೂ ಸಿಗುತ್ತದೆ. ಆನಂದ ವಿಗಡನ್ ಸಂದರ್ಶನ ಸಮಯದಲ್ಲಿ ಕೇಳಿದ್ದ ಮಾತು ಅವರ ಗಮನದಲ್ಲಿ ಸದಾ ಕಾಲವೂ ಇದ್ದು, ತನ್ನ ದುಡಿಮೆಯ ಅಷ್ಟೂ ಹಣವನ್ನು ಸಮಾಜಕ್ಕೆ ಕೊಡುವುದಾಗಿ ಅಂದಿನಿಂದಲೇ ಎಂದು ದೃಢ ಸಂಕಲ್ಪವನ್ನು ಮಾಡುತ್ತಾರೆ ಮತ್ತು ಪ್ರತೀ ತಿಂಗಳೂ ಸಂಬಳ ಬಂದ ಕೂಡಲೇ ಇಡೀ ಸಂಬಳದ ಹಣವನ್ನು ಅವಶ್ಯಕತೆ ಇರುವವರನ್ನು ಹುಡುಕಿ ದಾನ ಮಾಡವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಾರೆ. ಹೆಸರೇನೋ ಕಲ್ಯಾಣ ಸುಂದರಂ ಆದರೆ ತಾನು ಕಲ್ಯಾಣವಾದಲ್ಲಿ (ಮದುವೆ) ಸಂಸಾರದ ತೊಳಲಾಟದಲ್ಲಿ ತನ್ನೀ ಸಮಾಜಮುಖೀ ಕಾರ್ಯಕ್ಕೆ ಅಡ್ಡಿಯಾಗ ಬಹುದೆಂದು ಗ್ರಹಿಸಿ ಅವರು ಅಜೀವ ಬ್ರಹ್ಮಚಾರಿಗಳಾಗಿಯೇ ಇರಲು ನಿರ್ಧರಿಸುತ್ತಾರೆ.

ತನ್ನ ಸರ್ಕಾರಿ ಸಂಬಳದಿಂದ ಬಂದ ಅಷ್ಟೂ ಹಣವನ್ನು ಸಮಾಜಕ್ಕೇ ದಾನ ಮಾಡಿಬಿಟ್ಟಲ್ಲಿ ಅವರ ಊಟ – ತಿಂಡಿ ಖರ್ಚಿಗಾದರೂ ಹಣ ಬೇಕಲ್ಲವೇ? ಹಾಗಾಗಿ ತಮ್ಮ ಲೈಬ್ರರಿಯ ಕೆಲಸ ಮುಗಿದ ನಂತರ ಸಂಜೆಯ ಹೊತ್ತಿನಲ್ಲಿ ಅಲ್ಲಿಯೇ ಒಂದು ಹೋಟೇಲಿನಲ್ಲಿ ಸರ್ವರ್ ಆಗಿ ಪಾರ್ಟ್ ಟೈಂ ಕೆಲಸಕ್ಕೆ ಸೇರಿಕೊಂಡು ತಮ್ಮ ಎರಡು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅತ್ಯಂತ ಬುದ್ದಿವಂತ, ಕೈ ತುಂಬಾ ಸಂಬಳ ಪಡೆಯುವಾತ ಹೋಟೆಲ್ಲಿನಲ್ಲಿ ಎಂಜಲು ತಟ್ಟೇ ತೊಳೆಯುವುದೇ , ಈತನಿಗೆಲ್ಲೋ ಹುಚ್ಚು ಹಿಡಿದಿರಬೇಕು ಎಂದು ಜನಾ ಆಡಿಕೊಂಡರೂ ಅದಕ್ಕೆ ಒಂದೂ ಚೂರೂ ಬೇಸರಿಸಿಕೊಳ್ಳದ ಕಲ್ಯಾಣ ಸುಂದರಂ ತಮ್ಮ ಧ್ಯೇಯವನ್ನೇ ಧೃಡವಾಗಿ ನಂಬಿಕೊಂಡು ಮುಂದೆ ಸಾಗುತ್ತಾರೆ.

ವರ್ಷಗಳು ಉರುಳಿದಂತೆ ಕಲ್ಯಾಣ ಸುಂದರಂ ಅವರ ಕೂಡ ದಾನ ಧರ್ಮದ ಕಾರ್ಯಗಳು ಎಲೆಮರೆ ಕಾಯಿಯಂತೆ ನಡೆಯುತ್ತಲೇ ಸಾಗಿತು. ತಮ್ಮ ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದಾಗ ಬಂದ ಹತ್ತು ಲಕ್ಷ ರೂಪಾಯಿ ಗ್ರಾಚ್ಯುಟಿ ಹಣವನ್ನು ತಮ್ಮ ಊರಿನ ಶಾಲಾ ನಿರ್ಮಾಣಕ್ಕೆಂದು ಜಿಲ್ಲಾಧಿಕಾರಿಗಳಿಗೆ ಚೆಕ್ ಕೊಟ್ಟಾಗಲೇ ಅವರ ಇಷ್ಟು ವರ್ಷದ ನಿಸ್ವಾರ್ಥ ಸೇವೆ ಮಾಧ್ಯಮದ ಮೂಲಕ ಜನರಿಗೆ ಪರಿಚಯವಾಗುತ್ತದೆ. ಮುಂದೆ ದಾನಿಗಳು ಮತ್ತು ನಿರ್ಗತಿಕರ ಮಧ್ಯೆ ಕೆಲಸ ಮಾಡುವುದಕ್ಕಾಗಿಯೇ ಪಾಲಂ (ಸೇತುವೆ) ಎನ್ನುವ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ಸೇವೆಯನ್ನು ಮುಂದು ವರಿಸಿಕೊಂಡು ಹೋಗುತ್ತಾರೆ. ತಮ್ಮ ಪ್ರತೀ ತಿಂಗಳ ನಿವೃತ್ತ ವೇತನವನ್ನೂ ತಮ್ಮ ಪಾಲಂ ಸಂಸ್ಥೆಯ ಮೂಲಕ ವಿನಿಯೋಗಿಸುವ ಕಾರ್ಯ ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಶ್ರೀ ಕಲ್ಯಾಣ ಸುಂದರಂ ಅವರ ಈ ನಿಸ್ವಾರ್ಥ ಸಮಾಜಮುಖೀ ಸೇವಾ ಕಾರ್ಯದ ಕುರಿತು ಹಲವಾರು ಪತ್ರಿಕೆಗಳು, ಟಿವಿ ಚಾನೆಲ್ ಗಳು ಸುದ್ದಿ ಮಾಡುತ್ತಿದ್ದಂತೆಯೇ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕೊಕೊಂಡು ಬಂದವು. ಭಾರತ ಸರ್ಕಾರ ಇವರನ್ನು Best Librarian of India ಎಂದು ಗೌರವಿಸಿತು. ಯುನೈಟೆಡ್ ನೇಷನ್ಸ್ ಇವರನ್ನು ‘Noblest Man of 20th Century’ ಎಂದರೆ, ಸ್ಥಳೀಯ ರೋಟರಿ ಸಂಸ್ಥೆ ಇವರನ್ನು Man of the Millennium ಎಂದು ಸನ್ಯಾನಿಸಿತು. ಈ ಎಲ್ಲಾ ಪ್ರಶಸ್ತಿಗಳ ಜೊತೆ ಸರಿ ಸುಮಾರು ಮೂವತ್ತು ಕೋಟಿ ರೂಪಾಯಿಗಳಷ್ಟು ಪುರಸ್ಕಾರವೂ ದೊರೆಯಿತು. ಅಷ್ಟೂ ಹಣವನ್ನು ತಮ್ಮ ಪಾಲಂ ಸಂಸ್ಥೆಯ ಮೂಲಕ ದೀನ ದಲಿತರಿಗೆ ತಲುಪಿಸುವ ವ್ಯವಸ್ಥೆ ಮಾಡಿದರು.

ks4

1992ರಲ್ಲಿ ಪ್ರವಾಹಕ್ಕೆ ದಕ್ಷಿಣ ತಮಿಳುನಾಡಿನ ಅನೇಕ ಜಿಲ್ಲೆಗಳು ಬಲಿಯಾದಾಗ ಶ್ರೀ ಕಲ್ಯಾಣ ಸುಂದರಂ ಅವರು ಸುಮಾರು 10,000 ಮಕ್ಕಳಿಗೆ ಪುಸ್ತಕಗಳು, ಶಾಲಾ ಸಮವಸ್ತ್ರಗಳನ್ನು ನೀಡಿದರು. ಈ ವಿಷಯ ಕರ್ನಾಟಕ ಸಂಗೀತರಂಗದ ಖ್ಯಾತ ಗಾಯಕಿ ಶ್ರೀಮತಿ ಎಂ ಎಸ್ ಸುಬ್ಬುಲಕ್ಷ್ಮಿ ಅವರಿಗೆ ತಲುಪಿ ಕಲ್ಯಾಣ ಸುಂದರಂ ಅವರ ಕಾರ್ಯದಿಂದ ಪ್ರಭಾವಿತರಾಗಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಗೌರವಿಸಿದ್ದಲ್ಲದೇ ಆನಂದ ವಿಗಡನ್ ಪತ್ರಿಕೆ ನೀಡಿದ ಒಂದು ಪುರಸ್ಕಾರದ ಹಣವನ್ನು ಕಲ್ಯಾಣ ಸುಂದರಂ ಅವರ ಪಾಲಂ ಸಂಸ್ಥೆಗೇ ವರ್ಗಾಯಿಸುವಂತೆ ತಿಳಿಸಿದರು.

ks7

ತಮಿಳು ನಾಡಿನ ಜನರ ಆರಾಧ್ಯ ದೈವ, ಕನ್ನಡಿಗರಾದ ಶ್ರೀ ರಜನೀಕಾಂತ್ ಅವರೂ ಸಹಾ ಶ್ರೀ ಕಲ್ಯಾಣ ಸುಂದರಂ ಅವರ ಕಾರ್ಯದಿಂದ ಪ್ರಭಾವಿತರಾಗಿ ಅವರನ್ನು ತನ್ನ ದತ್ತು ತಂದೆಯೆಂದು ಘೋಷಿಸದ್ದಲ್ಲದೇ, ಕಲ್ಯಾಣ ಸುಂದರಂ ಅವರನ್ನು ತಮ್ಮ ಕುಟುಂಬ ಸದಸ್ಯರಂತೆ ತಮ್ಮ ಮನೆಯಲ್ಲಿಯೇ ಶಾಶ್ವತವಾಗಿ ಇರಲು ಆಹ್ವಾನಿಸಿದರು. ಅವರ ಆಹ್ವಾನಕ್ಕೆ ಮನ್ನಣೆ ಕೊಟ್ಟು ಒಂದು 15 ದಿನಗಳ ಅವರ ಮನೆಯ ಆತಿಥ್ಯ ಪಡೆದ ನಂತರ ತನ್ನ ಧ್ಯೇಯ ದೀನ ದಲಿತರ ಸೇವೆಗಾಗಿಯೇ ಹೊರತು ಇಂತಹ ಐಶಾರಾಮ್ಯ ಜೀವನಕ್ಕಲ್ಲ . ಇಂತಹ ಐಶಾರಾಮ್ಯ ಜೀವನ ಒಂದು ರೀತಿಯ ಸೆರೆವಾಸ ಅನುಭವಿಸಿದಂತೆ ಆಗುತ್ತದೆ ಎಂದು ತಿಳಿಸಿ ಮತ್ತೆ ತಮ್ಮ ಅಗತ್ಯವಿದ್ದ ಜನರತ್ತಲೇ ಬಂದು ಸೇರಿಕೊಂಡರು .

ks3

ನೆಮ್ಮದಿಯ ಸುಖಃ ಜೀವನವನ್ನು ನಡೆಸಲು ಎರಡು ಹೊತ್ತಿನ ಊಟ, ಕಣ್ತುಂಬ ನಿದ್ದೆ ಸಾಕು ಎಂಬುದನ್ನು ಅರಿತಿದ್ದರೂ, ತಮ್ಮ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿಗಳನ್ನು ಸಂಪಾದಿಸುವತ್ತಲೇ ತಮ್ಮ ಜೀವಮಾನ ಕಳೆದು, ಇಳೀ ವಯಸ್ಸಿನಲ್ಲಿ ತಾವು ಸಂಪಾದಿಸಿದ್ದನ್ನೂ ಸರಿಯಾಗಿ ಅನುಭವಿಸಿದದೇ ಖಾಯಿಲೆಗೆ ತುತ್ತಾಗಿ ಗಳಿಸಿದ್ದಲ್ಲವನ್ನೂ ಆಸ್ಪತ್ರೆಗಳಿಗೆ ಸುರಿದು, ಅಯ್ಯೋ ಈ ಮನುಷ್ಯ ಇನ್ನೂ ಸಾಯಲಿಲ್ಲವೇ ಎಂದು ತನ್ನವರಿಂದಲೇ ಹೀಯಾಳಿಸಿಕೊಳ್ಳುವವರ ಸಂಖ್ಯೆ ಒಂದೆಡೆಯಾದರೆ, ನನಗೇ ಇಲ್ಲಾ. ನಾನೇನು ಮತ್ತೊಬ್ಬರಿಗೆ ಕೊಡಲೀ? ಎನ್ನುವರು ಇನ್ನಷ್ಟು ಮಂದಿ. ಇನ್ನೂ ಕೆಲವರು ಮಾಡಿದ ಸಣ್ಣ ಪುಟ್ಟ ದಾನಗಳಿಗಿಂತ ಹೆಚ್ಚಾದ ಹಣವನ್ನು ಪತ್ರಿಕೆಗಳಲ್ಲಿ ದೊಡ್ಡ ದೊಡ್ಡದಾದ ಜಾಹೀತಾತುಗಳಿಗೇ ಖರ್ಚುಮಾಡುತ್ತಾರೆ. ಇಂತಹವರೆಲ್ಲರ ಮಧ್ಯೆ ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ ಬಹಳ ವಿಭಿನ್ನವಾಗಿ ನಮಗೆ ಕಾಣ ಸಿಗುತ್ತಾರೆ . ಸಮಾಜಕ್ಕೆ ಯಥಾಶಕ್ತಿ ಹೇಗೆ ಯಾವ ರೂಪದಲ್ಲದಾರೂ ಸೇವೆ ಮಾಡಬಹುದು ಎಂಬುದನ್ನು ತೋರಿಸಿದ ಮಾರ್ಗದರ್ಶಿಗಳಾಗಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2022-23ರ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀ ಕಲ್ಯಾಣ ಸುಂದರಂ. ಅಂತಹ ಪ್ರಾಥ:ಸ್ಮರಣೀಯರ ಸಮಾಜಮುಖೀ ಕಾರ್ಯಗಳಿಂದ ಮತ್ತಷ್ಟು ಜನ ಪ್ರೇರೇಪಿತರಾಗಲೀ ಎಂಬುದೇ ಈ ಲೇಖನದ ಉದ್ದೇಶ. ನಾನು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ, ನೀವೂ?

ಏನಂತೀರೀ?

Leave a comment