2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

ಲೋಕಸಭಾ ಚುನಾವಣೆಗೆ ಇನ್ನೂ 4 ವರ್ಷಗಳು ಇರುವಾಗ ಇಂತಹ ಪ್ರಶ್ನೆ ಸೂಕ್ತವೇ ? ಎಂದು ಎಲ್ಲರಿಗೂ ಅನಿಸಬಹುದು. ಆದರೆ ಪ್ರಸ್ತುತ ದೇಶದ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವನ್ನು ಗಮನಿಸಿದರೆ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಇನ್ನೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ? ಅಥವಾ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆಯೇ? ಎಂಬುದರ ಬಗ್ಗೆ ಅನೇಕ ಜಿಜ್ಞಾಸೆಗಳು ಮೂಡುತ್ತಿರುವುದು ಸುಳ್ಳಲ್ಲ. ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ಅವಲೋಕನ ಮಾಡಿದಲ್ಲಿ , ಕಾಂಗ್ರೆಸ್ ಸಹಿತ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಸಂಘಟಿತವಾಗಿ, ನಿಸ್ವಾರ್ಥವಾಗಿ ಮತ್ತು ದೇಶದ ಹಿತ ದೃಷ್ಟಿಯಿಂದ ಕಾರ್ಯ ನಿರ್ವಹಿಸದ ಕಾರಣ ಯಾವುದೇ ವಿರೋಧ ಪಕ್ಷಗಳು ಸ್ವಸಾಮರ್ಥ್ಯದಿಂದ ಹತ್ತರಿಂದ ಹದಿನೈದರ ಸಂಖ್ಯೆಗಿಂತ ಹೆಚ್ಚಿಗೆ ದಾಟಲು ಯಾವುದೇ ಅವಕಾಶವಿಲ್ಲವಾಗಿದೆ ಮತ್ತು ಈಗಿರುವ ಶಕ್ತಿಯನ್ನೇ ಉಳಿಸಿಕೊಳ್ಳುವುದೂ ಆ ಪಕ್ಷಗಳಿಗೆ ಬಹಳ ತ್ರಾಸದಾಯಕವಾಗಿದೆ ಎಂದರೆ ತಪ್ಪಾಗಲಾರದು.

ಸದ್ಯದ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವರ್ತಿಸುವ ರೀತಿ ರಾಜಕೀಯದಲ್ಲಿ ಅವರಿಗೆ ಹೆಚ್ಚಿನ ಅನುಕೂಲವನ್ನೇನೂ ತಂದು ಕೊಡುತ್ತದೆ ಎನ್ನಲಾಗುತ್ತಿಲ್ಲ . ಆ ಎಲ್ಲಾ ವಿರೋಧ ಪಕ್ಷಗಳಿಗೆ ಬಿಜೆಪಿ ಪಕ್ಷವನ್ನು ವಿರೋಧಿಸಬೇಕೋ ಅಥವಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಬೇಕೋ ಎಂಬ ಗೊಂದಲದಲ್ಲಿಯೇ ಹೆಚ್ಚು ಸಮಯವನ್ನು ಮತ್ತು ಅವಕಾಶವನ್ನು ಹಾಳುಮಾಡುತ್ತಿರುವುದು ಬಿಜೆಪಿ ಪಕ್ಷಕ್ಕೆ ಅನುಕೂಲಕರವಾಗಿದೆ.

ಈ ಎಲ್ಲಾ ಪಕ್ಷಗಳಿಗೂ ಮುಂದಿನ ಸಾರ್ವತ್ರಿಕ ಚುನಾವಣೆಯು ಬಿಜೆಪಿ ವಿರುದ್ಧ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಮಾಡು ಇಲ್ಲವೇ ಮಡಿ ಎಂಬ ಚುನಾವಣೆಯಾಗಿದೆ ಎಂದರೂ ತಪ್ಪಾಗಲಾರದು. ಈಗಾಗಲೇ ಸಂಸತ್ತಿನ ಕೆಳಮನೆ ರಾಜ್ಯಸಭೆಯಲ್ಲಿ ಅನೇಕ ಪಕ್ಷಗಳು ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳ ತೊಡಗಿದೆ. 2014 ರಲ್ಲಿ ಅದು ಬಿಎಸ್ಪಿ ಮತ್ತು 2019 ರಲ್ಲಿ ಲೋಕದಳ ಸದಸ್ಯರ ಸಂಖ್ಯೆ ರಾಜ್ಯಸಭೆಯಲ್ಲಿ ನಗಣ್ಯವಾಗಿದೆ. ಇನ್ನೂ 2024 ರಲ್ಲಿ ಬಹುತೇಕ ವಿರೋಧ ಪಕ್ಷಗಳ ಸಂಖ್ಯಾ ಬಲಾಬಲಗಳು ಕ್ಷೀಣವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾಗಿದೆ. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತನ್ನ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಂಡು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಬಹುತೇಕ ಅಂಶಗಳನ್ನು ಕಾರ್ಯರೂಪಕ್ಕೆ ತರಲು ಬಿಜೆಪಿಗೆ ಅನುಕೂಲವಾಗುತ್ತದೆ.
.
ಯಾವಾಗ ಈ ಎಲ್ಲಾ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಚುನಾಚಣೆಯಲ್ಲಿ ಬಿಡಿ ಬಿಡಿಯಾಗಿ ಸ್ಪರ್ಧಿಸುತ್ತವೋ ಆಗ ಅವರ ಸಾಂಪ್ರದಾಯಿಕ ಮತ್ತು ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಮತ್ತಷ್ಟು ವಿಭಜನೆಯಾಗಿ Article 370, 35A, ರಾಮಮಂದಿರ ನಿರ್ಮಾಣ ಮತ್ತು ಅಷ್ಟರಲ್ಲಿ ಏನಾದರೂ ಪಾಕೀಸ್ಥಾನ ಆಕ್ರಮಿತ ಭಾರತವೂ ನಮ್ಮ ಕೈವಶವಾದಲ್ಲಿ ಹಿಂದೂ ಮತಗಳು ಧೃವೀಕರಣಗೊಂಡು ಬಿಜೆಪಿ ಮತ್ತು ಎನ್‌ಡಿಎ ಸುಮಾರು 400+ ಸ್ಥಾನಗಳನ್ನು ದಾಟಿದರೂ ಆಶ್ವರ್ಯವೇನಿಲ್ಲ .

ಹಾಗಾದರೆ , ಮಾಯಾವತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ರಾಹುಲ್ ಗಾಂಧಿಯಂತಹ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಗಳು ಸುಮ್ಮನಿರುತ್ತಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವುದು ಸಹಜ. ಹಾಗಾಗಿ ಅವರೆಲ್ಲರ ಬಲಾಬಲಗಳನ್ನೇ ವಿಶ್ಲೇಷಣೆ ಮಾಡೋಣ ಬನ್ನಿ.

ರಾಹುಲ್, ಅಖಿಲೇಶ್, ಮಾಯಾವತಿ ಮತ್ತು ಮಮತಾ ಅವುರುಗಳಲ್ಲದೇ ಅರವಿಂದ್ ಕೇಜ್ರಿವಾಲ್, ನವೀನ್ ಪಟ್ನಾಯಕ್, ಕೆಸಿಆರ್, ಜಗನ್ ಮತ್ತು ಸ್ಟಾಲೀನ್ ಕೂಡಾ ಈ ಸ್ಪರ್ಧೆಯಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಾರಾದರೂ. ಇವರೆಲ್ಲರೂ ರಾಷ್ಟ್ರ ರಾಜಕಾರಣಿಕ್ಕಿಂತ ತಮ್ಮ ರಾಜ್ಯ ರಾಜಕೀಯದತ್ತಲೇ ಹೆಚ್ಚಿನ ಗಮನವನ್ನು ವಹಿಸುತ್ತಾರೆ. ಶಿವಸೇನೆ ಮತ್ತು ಎನ್.ಸಿ.ಪಿ. ಪಕ್ಷಗಳು ಮಹಾರಾಷ್ಟ್ರದ ಹೊರತಾಗಿ ಹೆಚ್ಚಿನ ಪ್ರಭಾವಶಾಲಿಯಾಗಿಲ್ಲ ಮತ್ತು ಇತ್ತೀಚಿನ ಅವರ ಅನೈತಿಕ ಮೈತ್ರಿಯೂ ಸಹಾ ಜನರನ್ನು ಕೆರಳಿಸಿ ಮುಂದಿನ ಚುನಾವಣೆಯಲ್ಲಿ ಆ ಎರಡೂ ಪಕ್ಷಗಳಿಗೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಲೂ ಬಹುದು. ರಾಜ್ಯ ರಾಜಕಾರಣದಿಂದ ರಾಷ್ಟ್ರರಾಜಕಾರಣಕ್ಕೆ ಜಿಗಿಯಲು ಹೋಗಿ, ರಾಜ್ಯದಲ್ಲೂ ಮತ್ತು ರಾಷ್ಟ್ರದಲ್ಲೂ ಸೋತು ಸುಣ್ಣವಾದ ಚಂದ್ರಬಾಬು ನಾಯ್ಡು ಕಥೆ ಇವರೆಲ್ಲರಿಗೂ ಪಾಠವಾಗಿದೆ ಎನ್ನುವುದು ಸತ್ಯವೇ ಸರಿ. ಅದೂ ಅಲ್ಲದೇ ಈ ನಾಯಕರೆಲ್ಲರೂ ತಮ್ಮ ರಾಜ್ಯದ ಹೊರತಾಗಿ ರಾಷ್ಟ್ರೀಯ ನಾಯಕರುಗಳಾಗಿ ಗುರುತಿಸಿಕೊಳ್ಳದಿರುವ ಕಾರಣ ಅವರುಗಳನ್ನು ಪ್ರಧಾನಿ ಹುದ್ದೆಗೆ ಸದ್ಯದ ಪರಿಸ್ಥಿತಿಯಲ್ಲಿ ಪರಿಗಣಿಸಲು ಸಾಧ್ಯವಾಗದು.

ಅಖಿಲೇಶ್ ಯಾದವ್

sp

ಅಪ್ಪನ ಬಲದಿಂದ ಅಧಿಕಾರಕ್ಕೇರಿ ಅಧಿಕಾರದ ಕೊನೆಯ ಹಂತದಲ್ಲಿ ಅಪ್ಪನ ವಿರುದ್ಧವೇ ಹೋರಾಟಮಾಡಬೇಕಾಗಿ ಬಂದ ಕಾರಣ ಅವರರಿನ್ನೂ ರಾಷ್ಟ್ರೀಯ ರಾಜಕಾರಣವನ್ನು ನಿಭಾಯಿಸುವಷ್ಟು ಪ್ರಬುದ್ಧರಾಗಿಲ್ಲ. ರಾಷ್ಟ್ರೀಯ ರಾಜಕಾರಣಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಲು ಅವರಿಗೆ ಹೆಚ್ಚಿನ ಸಮಯ ಮತ್ತು ಅನುಭವ ಬೇಕು. ಅವರ ಹಿಂದಿನ ಯಶಸ್ಸಿಗೆ ಕಾರಣವಾಗಿದ್ದು ಅವರ ರಾಜಕೀಯ ರಾಜವಂಶ. ಅವರ ತಂದೆ , ಚಿಕ್ಕಪ್ಪ ಮತ್ತು ಅವರ ಕುಟುಂಬದ ವಿವಾದಗಳ ನಂತರ, ಉತ್ತರ ಪ್ರದೇಶದ ಜನರು ಸಮಾಜವಾದಿ ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. 2012 ರಲ್ಲಿ ಅವರು ಯುಪಿ ಸಿಎಂ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದಾಗ, ಈತನಿಗೆ ಭಾರತೀಯ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದೇ ನಂಬಲಾಗಿತ್ತಾದರೂ ಆ ಅವಕಾಶವನ್ನು ಆತ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕಾರಣ ಆತ ತನ್ನ ಪ್ರಭಾವವನ್ನು ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ಮಾತ್ರವೇ ಸೀಮಿತಗೊಳಿಕೊಂಡರು. ಇನ್ನು ಅವರ ಯಾದವೀ ಕೌಟುಂಬಿಕ ವಿವಾದಗಳಿಂದಾಗಿಯೇ 2017 ರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸಿ ಅವರ ಸಾಂಪ್ರದಾಯಿಕ ಮತಗಳೇ ವಿಭಜಿತವಾಗಿ ಬಹಳ ಹೀನಾಯವಾಗಿ ಸೋತು ಹೋದದ್ದು ಈಗ ಇತಿಹಾಸ. ಸೋತ ನಂತರ ಬುದ್ಧಿ ಬಂದಂತೆ ಕಂಡು ಕಾಂಗ್ರೇಸ್, ಆರ್‌ಎಲ್‌ಡಿ ಮತ್ತು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆ ಗೋರಖ್‌ಪುರವನ್ನು ಗೆದ್ದರಾದರೂ, ಅದೇ ಮೈತ್ರಿಯನ್ನು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಂದುವರಿಸಿಕೊಂಡು ಹೋಗಲಾರದೇ ಕೇವಲ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡ ಅನುಕೂಲ ಸಿಂಧುರಾಜಕಾರಣವನ್ನು ಜನಾ ಸಾರಾಸಗಟಾಗಿ ತಿರಸ್ಕರಿಸಿದರು. ಪ್ರಸ್ತುತ ಯೋಗಿ ಆದಿತ್ಯನಾಥರ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತಹ ಡೇರ್ ಡೆವಿಲ್ ರಾಜಕಾರಣ ನೋಡಿದರೆ ಉತ್ತರ ಪ್ರದೇಶದ ಜನ ಮತ್ತೊಮ್ಮೆ ಯೋಗಿ ಆದಿತ್ಯನಾಥರಿಗೇ ಬಹುಮತ ಕೊಡುವುದರಲ್ಲಿ ಸಂದೇಹವೇ ಇಲ್ಲ.

ಮಾಯಾವತಿ

bsp

ಕಾಂಶೀರಾಮ್ ಅವರ ಮಾನಸಪುತ್ರಿ ಎಂದೇ ಪ್ರವರ್ಧಮಾನಕ್ಕೆ ಬಂದ ಮಾಯವಾತಿ ಆರಂಭದಲ್ಲಿ ದಲಿತವರ್ಗದ ನಾಯಕಿಯಾಗಿ ಹೊರಹೊಮ್ಮಿ ಒಮ್ಮೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ನಂತರ ಅಧಿಕಾರದ ರುಚಿಗಾಗಿ ತನ್ನ ಪಕ್ಷದ ಧ್ಯೇಯಗಳಿಗೇ ತಿಲಾಂಜಲಿ ಕೊಟ್ಟು ದಲಿತರ ಜೊತೆಗೆ ಮುಂದುವರಿದ ಜನಾಂಗದವರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಏಕಪಕ್ಷೀಯವಾಗಿ ಅಧಿಕಾರಕ್ಕೆ ಬಂದು ಎಲ್ಲರ ಹುಬ್ಬೇರಿಸಿದ್ದರೂ ನಂತರದ ದಿನಗಳಲ್ಲಿ ಅದೇ ಛವಿಯನ್ನು ಉಳಿಸಿಕೊಳ್ಳಲು ವಿಫಲಾರಾದರು. ಹೇಳಿ ಕೇಳಿ ಈಕೆ ದಲಿತ ನಾಯಕಿ ಈಕೆಯನ್ನು ನಂಬಿದಲ್ಲಿ ತಾವು ಕೆಡುತ್ತೇವೆ ಎಂದು ಮುಂದುವರಿದ ಜನಾಂಗದವರೂ ಮತ್ತು ಈಕೆ ಮುಂದುವರಿದ ಜನಾಂಗದವರ ಓಟಿಗಾಗಿ, ದಲಿತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾಳೆ ಎಂದು ದಲಿತರೂ ಭಾವಿಸಿದ್ದರಿಂದ ಇಬ್ಬರೂ ಆಕೆಯನ್ನು ನಡು ನೀರಿನಲ್ಲಿ ಕೈಬಿಟ್ಟ ಕಾರಣ, ರಾಜಕೀಯದಲ್ಲಿ ಆಕೆಯ ಸ್ಥಿತಿ ಅತಂತ್ರವಾಗಿದೆ. ಎಲ್ಲದ್ದಕ್ಕೂ ಹೆಚ್ಚಾಗಿ ಆಕೆ ತನ್ನ ಕುಟಂಬದ ಸದಸ್ಯರನ್ನು ಹೊರತಾಗಿ ಯಾರನ್ನೂ ನಂಬದ ಕಾರಣ ಆಕೆಯ ಜೊತೆ ದೀರ್ಘಾವಧಿಗೆ ಯಾರೂ ನಿಲ್ಲಲು ತಯಾರಿಲ್ಲ. ವಿಧಾನ ಸಭೆ ಚುನಾವಣೆ ಸೋತಾಗ ಲೋಕಸಭೆ ಪ್ರವೇಶಿಸುವುದು, ಲೋಕಸಭಾ ಚುನಾವಣೆಯಲ್ಲಿ ಸೋತಾಗ ವಿಧಾನ ಸಭೆಗೆ ಪ್ರಯತ್ನ ಮಾಡುವ ಎಡಬಿಡಂಗಿ ರಾಜಕಾರಣವನ್ನು ಜನರು ಮೆಚ್ಚದೇ ಆಕೆಯನ್ನೂ ಎರಡೂ ಕಡೆಯಲ್ಲೂ ಕಡೆಗಣಿಸಿ ಮನೆಯಲ್ಲಿ ಕೂರಿಸಿರುವುದು ಸದ್ಯದ ಆಕೆಯ ಸ್ಥಿತಿಗತಿಯಾಗಿದೆ.

ಮಮತಾ ಬ್ಯಾನರ್ಜಿ

TC

ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ಕಮ್ಯೂನಿಷ್ಟರ ಕಪಿ ಮುಷ್ಠಿಯಲ್ಲಿ ಪಶ್ಚಿಮ ಬಂಗಾಳ ನಲುಗಿ ಹೋಗಿದ್ದಾಗ ಕ್ರಾಂಗೇಸ್ ಪಕ್ಷದಲ್ಲಿದ್ದ ಅಂದಿನ ಯುವ ನಾಯಕಿ ಮಮತಾ ಪಶ್ಚಿಮ ಬಂಗಾಳದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದರು. ಕಾಂಗ್ರೇಸ್ ಪಕ್ಷದಿಂದ ಹೊರಬಂದು ತನ್ನದೇ ತೃಣಮೂಲ ಕಾಂಗ್ರೇಸ್ ಪಕ್ಷ ಕಟ್ಟಿದಾಗ ಅಲ್ಲಿಯ ಜನರು ಬಹಳ ಆಶಾಭಾವನೆಯಿಂದ ಆಕೆಗೆ ಅಭೂತಪೂರ್ವ ಜಯವನ್ನು ಕೊಟ್ಟು ಆಕೆಯನ್ನು ಅಧಿಕಾರಕ್ಕೆ ತಂದರು. ಅದರೆ ಈ ಸಂತೋಷ ಬಹಳ ಕಾಲ ಉಳಿಯದೇ, ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ ಪಶ್ಚಿಮ ಬಂಗಾಳದ ಪ್ರಜೆಗಳದ್ದಾಯಿತು. ತೃಣಮೂಲ ಕಾರ್ಯಕರ್ತರ ಗೂಂಡಾಗಿರಿ ಕಮ್ಯುನಿಸ್ಟ್ ಪಕ್ಷಕ್ಕಿಂದಲೂ ಅದೆಷ್ಟೋ ಪಟ್ಟು ಹೆಚ್ಚಿನ ರಾಕ್ಷಸೀಯ ಪ್ರವೃತ್ತಿಯಾಗಿದೆ. ಒಮ್ಮೆ ಆಕೆ ಅಧಿಕಾರಕ್ಕೆ ಬಂದನಂತರ ಅಲ್ಲಿಯ ಯಾವ ಚುನಾವಣೆಗಳು ನಿಶ್ಪಕ್ಷಪಾತವಾಗಿ ನಡೆದ ಉದಾಹರಣೆಯೇ ಇಲ್ಲ. ಇತ್ತೀಚೆಗಂತೂ ಅಧಿಕಾರದ ಉಳಿವಿಗಾಗಿ ಅತೀಯಾದ ಅಲ್ಪಸಂಖ್ಯಾತರ ತುಷ್ಟೀಕರಣ, ಆಕೆಯ ವಿಪರೀತವಾದ ಹಿಂದೂಗಳ ವಿರುದ್ಧ ಧಮನಕಾರಿಯಾದ ಹೇಳಿಕೆಗಳು ಮತ್ತು ದೌರ್ಜನ್ಯಗಳು ಹೆಚ್ಚುತ್ತಿರುವ ಕಾರಣಗಳಿಂದಾಗಿ ಅಕೆಯ ಪ್ರಭಾವ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕಳೆದ ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿ ಆಕೆಯ ಭದ್ರಕೋಟೆಯನ್ನು ಛಿದ್ರಗೊಳಿಸಿ ಹದಿನೈದಕ್ಕೂ ಹೆಚ್ಚಿನ ಸಾಂಸದರನ್ನು ಗೆಲ್ಲಿಸಿಕೊಳ್ಳಲು ಸಫಲರಾಗಿರುವುದು ಆಕೆಯ ನಿದ್ದೆಯನ್ನುಗೆಡಿಸಿರುವುದಂತೂ ಸುಳ್ಳಲ್ಲ. ಇತ್ತೀಚಿನ ವರದಿಯ ಪ್ರಕಾರ ಹಿಂದೂಗಳ ಮೇಲೆ ಹಲ್ಲೆಗಳನ್ನು ರಕ್ಷಿಸಲು ಆಕೆ ವಿಫಲರಾಗಿರುವುದರಿಂದ ಕೇಂದ್ರ ಸರ್ಕಾರ ಮಿಲಿಟರಿ ಸೈನ್ಯವನ್ನು ಕಳುಹಿಸಿರುವುದು ಆಕೆಯನ್ನು ಮತ್ತಷ್ಟೂ ಉಗ್ರೆ ಯನ್ನಾಗಿಸಿದೆ. ಸದಾಕಾಲವೂ ಕುರುಡು ದ್ವೇಷದ ಕಾರಣದಿಂದಾಗಿ ಕೇಂದ್ರಸರ್ಕಾರದ ಪ್ರತೀ ನೀತಿಗಳನ್ನು ವಿರೋಧಿಸುತ್ತಿರುವುದೂ ಅಲ್ಲಿಯ ಜನರ ವಿರೋಧಕ್ಕೆ ಕಾರಣವಾಗಿರುವ ಕಾರಣ ಮುಂದಿನ ವರ್ಷದ ಆರಂಭದಲ್ಲಿ ಬರುವ ವಿಧಾನಸಭೆ ‍ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರುವ ಎಲ್ಲಾ ಸಂಭವವೂ ಹೆಚ್ಚಾಗಿದೆ.

ರಾಹುಲ್ ಗಾಂಧಿ

cong

ಇವರ ಬಗ್ಗೆ ಮತ್ತು ಇವರ ಸಾಮರ್ಥ್ಯದ ಬಗ್ಗೆ ಈಗಾಗಲೇ ಹಲವಾರು ಲೇಖನದಲ್ಲಿ ಸವಿರವಾಗಿ ವಿಶ್ಲೇಷಣೆ ಮಾಡಲಾಗಿದೆ. ದೇಶದ ಪ್ರಭಾವೀ ರಾಜಕಾರಣದ ವಂಶದಲ್ಲಿ ಹುಟ್ಟಿರುವ ಏಕೈಕ ಕಾರಣದಿಂದಾಗಿಯೇ ಯಾವುದೇ ಬುದ್ಧಿ ಮತ್ತೆ ಇಲ್ಲದಿದ್ದರೂ ಅಧಿಕಾರಕ್ಕೇ ಎರಬಹುದೆಂಬ ಭ್ರಮಾಲೋಕದಲ್ಲಿ ತೇಲಾಡುತ್ತಿರುವ ಮನುಷ್ಯ. ಭಾರತೀಯ ಪುರುಷರ ವಯಸ್ಸು ಐವತ್ತಾದರೇ ತಮ್ಮ ಇಳಿವಯಸ್ಸಿನ ಆರಂಭ ಕಾಲ ಮತ್ತು ತಮ್ಮ ಮಕ್ಕಳ ಶಿಕ್ಷಣ, ಮದುವೆಯಲ್ಲಿ ತಮ್ಮನ್ನು ತೊಡಗಿಸುವ ಕಾಲ. ಆದರೆ ಈತನ ವಯಸ್ಸು ಐವತ್ತಾದರೂ ಆತ, ಇನ್ನೂ ತನ್ನ ಸಂಸಾರವನ್ನೇ ಆರಂಭಿಸಲು ಗೊಂದಲದಲ್ಲಿರುವ ಯುವನಾಯಕ. ತನ್ನ ವಯಕ್ತಿಯ ಜೀವನವನ್ನೇ ಸರಿಪಡಿಸಿಕೊಳ್ಳಲಾಗದವ ದೇಶವನ್ನು ಹೇಗೆ ನೋಡಿಕೊಳ್ಳಬಲ್ಲ ಎಂಬುದನ್ನು ಜನರು ಹೇಳುತ್ತಿರುವುದರಲ್ಲಿ ಸುಳ್ಳಿಲ್ಲ ಅಲ್ಲವೇ? ಸುಮ್ಮನೆ ರಾಜಕೀಯದಲ್ಲಿ ತನಗೆ ಭವಿಷ್ಯವಿಲ್ಲ ಎಂಬುದನ್ನು ಅರಿತು ಹತ್ತು ತಲೆಮಾರುಗಳು ಕರಗದ ಆಸ್ತಿಯನ್ನು ಸಂಭಾಳಿಸಿಕೊಂಡು ನೆಮ್ಮದಿಯಾಗಿರುವುದು ಆತನಿಗೂ ಮತ್ತು ದೇಶಕ್ಕೂ ಒಳಿತು.

ap

ಈ ಎಲ್ಲಾ ಕಾರಣಗಳಿಂದಾಗಿ ಮೇಲೆ ತಿಳಿಸಿದ ಯಾವ ನಾಯಕರಿಗೂ ಸದ್ಯದ ಪರಿಸ್ಥಿತಿಯಲ್ಲಿ ಪ್ರಧಾನಿಯಾಗುವ ಹೆಚ್ಚಿನ ಅವಕಾಶವು ಇಲ್ಲವೆಂದೇ ಸ್ಪಷ್ಟವಾಗಿ ತೋರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವು ಬಾಡಿಗೆ ಭಂಟರನ್ನು ನೇಮಿಸಿಕೊಂಡು ಅವರ ಮೂಲಕ ಟ್ರೋಲ್ ಸ್ಟಾರ್ ಮಾಡುವ ವಿಧಾನದಿಂದ ಅಥವಾ ಮೋದಿಯವರನ್ನು ಹೀನಾಮಾನವಾಗಿ ಅವಮಾನ ಮಾಡಿಸುವುದರಿಂದ ತಾವು ಪ್ರಧಾನಿ ಪಟ್ಟಕ್ಕೆ ಏರಬಹುದೆಂದು ಯಾರದರೂ ಎಣಿಸಿದ್ದಲ್ಲಿ ಅದು ಭ್ರಮೆ ಎಂದಷ್ಟೇ ಹೇಳಬಹುದು. ಜನಾ ಟ್ರೋಲ್ ಗಳನ್ನು ನೋಡಿ ಆನಂದಿಸುತ್ತಾರೆಯೇ ಹೊರತು ಅವುಗಳಿಂದ ಪ್ರಭಾವಿತರಾಗಿ ಮತ ಚಲಾಯಿಸುವುದಿಲ್ಲ. ಏಕೆಂದರೆ ಭಾರತೀಯರು ಈಗ ಹೆಚ್ಚು ಪ್ರಭುದ್ಧರಾಗುತ್ತಿದ್ದಾರೆ. ಯಾರು ಅಭಿವೃದ್ದಿಯ ಪರವಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೋ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದಕ್ಕೆ ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ವಿಭಿನ್ನವಾದ ರೀತಿಯ ಫಲಿತಾಂಶಗಳೇ ಸಾಕ್ಷಿಯಾಗಿದೆ.

ಈ ಎಲ್ಲಾ ಸಕಾರತ್ಮಕ ಅಂಶಗಳಿಂದ ಬಿಜೆಪಿ ಅತ್ಯಂತ ಸುಲಭವಾಗಿ 2024 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರುತ್ತೇವೆ ಎಂದು ಭಾವಿಸಿದರೂ ತಪ್ಪಾಗುತ್ತದೆ. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಮೋದಿ, ಶಾ, ಯೋಗಿ, ಪಿಯೂಶ್ ಮುಂತಾದ ಬೆರಳೆಣಿಕೆಯ ನಾಯಕರ ಕಾರ್ಯತತ್ಪರತೆಗಳಿಗೆ ಮಾತ್ರವೇ ಜನ ಮನ್ನಣೆ ತೋರುತ್ತಿದ್ದಾರೆ ಮತ್ತು ಸ್ಥಳೀಯ ನಾಯಕರುಗಳ ಬಗ್ಗೆ ಇನ್ನೂ ಅವರಲ್ಲಿ ಅಸಮಧಾನವಿದೆ. ಮುಂದಿನ 4 ವರ್ಷಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದಿದ್ದಲ್ಲಿ ಅಧಿಕಾರವು ಗಗನ ಕುಸುಮವಾಗಿ ಮಹಾರಾಷ್ಟ್ರದಲ್ಲಿ ಆದಂತೆ ಕೇಂದ್ರದಲ್ಲೂ ಎಲ್ಲಾ ಪಕ್ಷಗಳು ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಮತ್ತೊಮ್ಮೆ ಖಿಚಿಡಿ ಸರ್ಕಾರ ರಚಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಏನಂತೀರೀ?

One thought on “2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದೇ?

  1. ವಿಶ್ಲೇಷಣೆ ಪ್ರಚಲಿತ ವಿದ್ಯಮಾನ ಕ್ಕೆ ತಕ್ಕಂತೆ ಇದೆ.
    ಆದರೆ ಇನ್ನೂ ನಾಲ್ಕು ವರ್ಷಗಳಲ್ಲಿ ಸರ್ಕಾರದ ಕಾರ್ಯವೈಖರಿ ಮತ್ತು ಜನರ ಅಭಿಪ್ರಾಯ ಯಾವ ರೀತಿ ಬದಲಾಗುತ್ತದೆ ಎಂದು ಕಾದು ನೋಡಬೇಕಿದೆ.

    ಜೊತೆಗೆ, ಇದೆ ವ್ಯಕ್ತಿಗಳೇ ಮುಂದಿನ ಚುನಾವಣೆಯಲ್ಲಿ ಇರುತ್ತಾರೆ ಎನ್ನುವುದು ಕೂಡ ಪ್ರಶ್ನಾರ್ಹ….

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s