ಚಕ್ಕುಲಿ ನಮ್ಮ ದಕ್ಷಿಣಭಾರತೀಯರ ಅಚ್ಚುಮೆಚ್ಚಿನ ಕುರುಕಲು ತಿಂಡಿ. ಜೊತೆಗೆ ಸಾಂಪ್ರದಾಯಿಕ ತಿಂಡಿಯೂ ಹೌದು. ಎಲ್ಲಾ ಶುಭ ಸಮಾರಂಭಗಳಲ್ಲಿ ಮುತ್ತೈದೆಯರಿಗೆ ಚಕ್ಕುಲಿ ಉಂಡೆ ಬಾಗಣಕೊಟ್ಟಲ್ಲಿ ಮಾತ್ರವೇ ಆ ಕಾರ್ಯಕ್ರಮ ಯಶಸ್ವಿಯಾಗೋದು. ಹಿಂದಿನ ಕಾಲದಲ್ಲೆಲ್ಲಾ ಗೋಕುಲಾಷ್ಠಮಿ ಅಥವಾ ಮನೆಯ ಸಮಾರಂಭಕ್ಕಿಂತ ಒಂದು ತಿಂಗಳಿಗಿಂತಲೂ ಮುಂಚೆಯೇ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ತೊಳೆದು ಒಣಗಿಸಿ, ಅದನ್ನು ಬೆಚ್ಚಗೆ ಹುರಿದು ಸಮ ಪ್ರಮಾಣದಲ್ಲಿ ಬೆರೆಸಿ, ಬೀಸೋ ಕಲ್ಲಿನಿಂದಲೋ ಇಲ್ಲವೇ ಫ್ಲೋರ್ ಮಿಲ್ಲಿನಲ್ಲಿ ಪುಡಿಮಾಡಿಸಿಟ್ಟು ಸಮಾರಂಭಕ್ಕಿಂತ ಒಂದು ವಾರಕ್ಕೆ ಮುಂಚೆಯೇ ನೆಂಟರಿಷ್ಢರು ಮತ್ತು ಅಕ್ಕ ಪಕ್ಕದವರೆಲ್ಲಾ ಸೇರಿ ಸಂಭ್ರಮದಿಂದ ಚಕ್ಕುಲಿ ಉಂಡೆ ಮಾಡುತ್ತಿದ್ದರು. ಆದರೆ ಇಂದು ಯಾರಿಗೂ ಅಷ್ಟು ಹೊತ್ತು ಕಾಯಲು ಸಿದ್ದರಿಲ್ಲ. ಎಲ್ಲವೂ instant ಆಗಿರಬೇಕು. ಹಾಗಾಗಿ ಅಕ್ಕಿ ಮತ್ತು ಉದ್ದಿನ ಬೇಳೆ ತೊಳೆದು ಹಾಕಿ ಮಾಡಿದಷ್ಟೇ ರುಚಿಯಾದ ಗರಿಗರಿಯಾದ ದಿಢೀರ್ ಚಕ್ಕುಲಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ.
ಸುಮಾರು 10-15 ದಿಢೀರ್ ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು
• ಉದ್ದಿನ ಬೇಳೆ -1 ಬಟ್ಟಲು
• ಅಕ್ಕಿ ಹಿಟ್ಟು -2.5 ಬಟ್ಟಲು
• ಜೀರಿಗೆ -1 ಚಮಚ
• ಬಿಸಿ ಮಾಡಿದ ಅಡುಗೆ ಎಣ್ಣೆ -1 ಸೌಟಿನಷ್ಟು
• ರುಚಿಗೆ ತಕ್ಕಷ್ಟು ಇಂಗು
• ರುಚಿಗೆ ತಕ್ಕಷ್ಟು ಉಪ್ಪು
ದಿಢೀರ್ ಚಕ್ಕುಲಿ ಮಾಡುವ ವಿಧಾನ
• ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು ಪ್ರೆಷರ್ ಕುಕ್ಕರಿನಲ್ಲಿ 2 ಸೀಟಿ ಬರುವವರೆಗೂ ಬೇಯಿಸಿಕೊಂಡು ಅದು ಆರಿದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು
• ಒಂದು ಅಗಲಾವದ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಜೀರಿಗೆ, ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಅದಕ್ಕೆ ಒಂದು ಸೌಟಿನಷ್ಟು ಕಾದ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ ಕಲೆಸಿಕೊಳ್ಳಬೇಕು.
• ಇದೇ ಮಿಶ್ರಣಕ್ಕೆ ರುಬ್ಬಿಟ್ಟುಕೊಂಡ ಉದ್ದಿನಹಿಟ್ಟನ್ನು ಬೆರೆಸಿ ಚೆನ್ನಾಗಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು. ಕಲೆಸುವಾಗ ಅಗತ್ಯವಿದ್ದಲ್ಲಿ ಮಾತ್ರವೇ ನೀರನ್ನು ಬಳೆಸಿಕೊಂಡು ಹಿಟ್ಟನ್ನು ಚೆನ್ನಾಗಿ ನಾದಬೇಕು
• ಚಕ್ಕುಲಿ ಒರಳನ್ನು ತೆಗೆದುಕೊಂಡು, ಚಕ್ಕುಲಿ ಬಿಲ್ಲೆಯನ್ನು ಅದಕ್ಕೆ ಅಳವಡಿಸಿ, ಅದರೊಳಗೆ ಹಿಟ್ಟು ಅಂಟದಿರುವಂತೆ ಚೆನ್ನಾಗಿ ಎಣ್ಣೆಯನ್ನು ಸವರಿ, ನಾದಿಟ್ಟು ಕೊಂಡಿದ್ದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಕ್ಕುಲಿ ಒರಳಿನೊಳಗೆ ಹಾಕಿ ನಮಗೆ ಇಷ್ಟ ಬಂದಷ್ಟು ಅಗಲಕ್ಕೆ ಚೆಕ್ಕುಲಿಯನ್ನು ಒತ್ತಿ ಕೊಳ್ಳಬೇಕು
• ಗಟ್ಟಿ ತಳದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಒತ್ತಿಕೊಂಡಿರುವ ಚಕ್ಕುಲಿಯನ್ನು ಹದವಾಗಿ ಎರಡೂ ಬದಿಯೂ ಕೆಂಪಗಾಗುವಂತೆ ಬೇಯಿಸಿದಲ್ಲಿ ಬಿಸಿ ಬಿಸಿಯಾದ ರುಚಿ ರುಚಿಯಾದ ಮತ್ತು ಗರಿ ಗರಿಯಾದ ದಿಢೀರ್ ಚಕ್ಕುಲಿ ತಿನ್ನಲು ಸಿದ್ಧ.
ದಿಢೀರ್ ಚಕ್ಕುಲಿ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದೇವೆ. ನಿಮ್ಮ ಮನೆಯಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಖಂಡಿತವಾಗಿಯೂ ಇಷ್ಟ ಪಡ್ತಾರೆ ನೋಡಿ.
ನೋಡ್ಕೊಳೀ, ಮಾಡ್ಕೊಳೀ, ತಿನ್ಕೋಳಿ
ಮನದಾಳದ ಮಾತು : ಅಯ್ಯೋ ಎಲ್ಲರೂ ಆರೋಗ್ಯಕರವಾಗಿ ಇರಲು ಕರಿದ ತಿಂಡಿಯಿದ ದೂರ ಇರೀ ಅಂತಾ ಹೇಳಿದ್ರೇ , ಇದೇನಪ್ಪಾ ಇವ್ರು ಕರಿದ ಕುರುಕಲು ತಿಂಡಿಯಾದ ದಿಢೀರ್ ಚಕ್ಕುಲಿ ಮಾಡ್ಕೊಂಡು ತಿನ್ನಿ ಅಂತಾ ಇದ್ದಾರೆ ಅಂತಾ ಯೋಚಿಸ್ತಿದ್ದಿರಾ? ನಮ್ಮ ಹಿಂದಿನ ಕಾಲದವರು ಈ ಎಲ್ಲಾ ರೀತಿಯ ಕುರುಕಲು ತಿಂಡಿಯನ್ನೂ ಭರ್ಜರಿಯಗಿಯೇ ತಿನ್ನುತ್ತಾ, ಯಾವುದೇ ರೀತಿಯ ಆನಾರೋಗ್ಯವಿಲ್ಲದೇ ಸುಮಾರು 80-90 ವರ್ಷಗಳಷ್ಟು ಇನ್ನೂ ಕೆಲವರು 100 ವರ್ಷಗಳಷ್ಟು ಕಾಲ ಬಾಳಿ ಬದುಕಿದ್ದರು. ಅದಕ್ಕೆ ಮುಖ್ಯ ಕಾರಣ ಅವರು ಬಳಸುತ್ತಿದ್ದ ಕಲಬೆರಕೆ ರಹಿತ ಸಾಮಾಗ್ರಿಗಳು ಮತ್ತು ಶುದ್ಧವಾದ ಗಾಣದ ಎಣ್ಣೆ. ಈಗಲೂ ಸಹಾ ನಾವು ಬಳೆಸುತ್ತಿರುವ 80-100/lts ಎಣ್ಣೆಗಳೆಲ್ಲವೂ ಕಲಬೆರೆಕೆ ಎಣ್ಣೆಯಾಗಿದೆ. ಅದು ನಿಜವಾಗಿಯೂ ಆಡುಗೆ ಎಣ್ಣೆಯಾಗಿರದೇ, ಪೆಟ್ರೋಲಿಯಂ ತ್ರಾಜ್ಯವಾದ liquid parafin ಆಗಿದೆ. ಹಾಗಾಗಿ ಆರೋಗ್ಯದ ದೃಷ್ಟಿಯಂದ ಸ್ವಲ್ಪ ಹಣ ಹೆಚ್ಚಾದರೂ ಪರವಾಗಿಲ್ಲ ಶುದ್ಧವಾದ ಗಾಣದಲ್ಲಿ ಅರೆದ ಎಣ್ಣೆಯನ್ನೇ ಬಳೆಸೋಣ ಆರೋಗ್ಯಕರವಾಗಿರೋಣ
ಏನಂತೀರೀ?
ಈ ದಿಢೀರ್ ಚಕ್ಕುಲಿಯ ಪಾಕಶಾಸ್ತ್ರವನ್ನು ತಿಳಿಸಿಕೊಟ್ಟ ಚೆನ್ನರಾಯಪಟ್ಟಣದ ಶ್ರೀಮತಿ ಸವಿತಾ ರವಿ ಬಾಳಗಂಚಿಯವರಿಗೆ ಹೃತ್ಪೋರ್ವಕ ಧನ್ಯವಾದಗಳು
ಚಕ್ಕುಲಿ ಬಗ್ಗೆ ನಿಮ್ಮ ಲೇಖನ ಚೆನ್ನಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಚಕ್ಕುಲಿ ಎಂದರೆ ಇಷ್ಟ. ಬೇರೆ ತಿಂಡಿಗಳು ಮನೆಯಲ್ಲಿದ್ದರೂ ಚಕ್ಕುಲಿಗಿರುವಷ್ಟು ಬೇಡಿಕೆ ಬೇರೆ ತಿಂಡಿಗಿರುವುದಿಲ್ಲ. ನಾವು ಚಿಕ್ಕವರಾಗಿರುವಾಗ ನಮ್ಮಮ್ಮ ಮದುವೆ, ಮುಂಜಿ, ಸೀಮಂತ ಇಂಥ ಸಮಾರಂಭಗಳಿಗೆ ಹೋಗಿಬಂದಾಗ ಚಕ್ಕುಲಿ ಉಂಡೆ ಪ್ಯಾಕೆಟ್ ಗಳನ್ನು ತಂದಾಗ ಮೊದಲು ನಾವು ಅದರಲ್ಲಿ ಚಕ್ಕುಲಿಗಳನ್ನು ತೊಗೊಂಡು ತಿಂದುಬಿಡುತ್ತಿದ್ದೆವು. ನೀವು ಹೇಳಿರುವಂತೆ ಶುಭ ಸಮಾರಂಭಗಳು ಮನೆಯಲ್ಲಿದ್ದಾಗ ಒಂದು ತಿಂಗಳ ಮುಂಚೆಯಿಂದಲೇ ಚಕ್ಕುಲಿ ತಯಾರಿಸುವ ಸಂಭ್ರಮ. ನಮಗೆ ಗೋಕುಲಾಷ್ಟಮಿ (ಕೃಷ್ಣ ಜಯಂತಿ) ದೊಡ್ಡ ಹಬ್ಬ. ಹಿಂದೆಲ್ಲ ಕೃಷ್ಣ ಜಯಂತಿ ಬಂದರೆ ಚಕ್ಕುಲಿ ಬೆಳ್ಳಗೆ ಬರಬೇಕೆಂದು ಒಂದು ತಿಂಗಳಿಂದಲೇ ಅಕ್ಕಿ ತೊಳೆದು ಬಿಸಿಲಲ್ಲಿ ಒಣಗಿಸಿಡುತ್ತಿದ್ದರು ನಮ್ಮ ಮನೆಗಳಲ್ಲಿ. ಈ ಹಬ್ಬಕ್ಕೆ ಹತ್ತು ಹದಿನೈದು ತರಹದ ತಿಂಡಿಗಳನ್ನು ಮಾಡುವ ಸಂಬ್ರಮವನ್ನು ಈಗ ನಾವು ಕಾಣುವುದು ಅಪರೂಪ. ಡಾಕ್ಟರ್ ಡಿ.ವಿ.ಜಿ.ಯವರಿಗೆ ಮನೆಯಲ್ಲಿ ಯಾವಾಗಲೂ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಮುಂತಾದ ಕರಿದ ಪದಾರ್ಥಗಳು ಕಡ್ಡಾಯವಾಗಿ ಇರಬೇಕಾಗಿತ್ತು. ಹೀಗೆ ಚಕ್ಕುಲಿ ಎಲ್ಲರಿಗೂ ಪ್ರಿಯವಾದ ತಿಂಡಿ. ಈ ಬಗ್ಗೆ ತಿಳಿಸಿರುವುದಕ್ಕಾಗಿ ವಂದನೆಗಳು.
LikeLiked by 1 person
ಸರ್ ನಿಮ್ಮೀ ಚಕ್ಕುಲಿಯ ಅನುಭವ ನಿಜಕ್ಕೂ ಸೂಪರ್
LikeLike