ಸಾಧಾರಣವಾಗಿ ಎಲ್ಲರ ಮನೆಯಲ್ಲಿಯೂ ಸಂಭ್ರಮವನ್ನು ಸಿಹಿತಿಂಡಿಯನ್ನು ಪರಸ್ಪರ ಹಂಚಿತಿನ್ನುವ ಮೂಲಕ ಸಂಭ್ರಮಿಸುವುದು ವಾಡಿಕೆ. ಹಾಗೆ ಸಿಹಿತಿಂಡಿಯನ್ನು ತಯಾರಿಸುವ ವೇಳೆ ಥಟ್ ಅಂತಾ ನೆನಪಾಗೋದೇ ಜಾಮೂನು. ಅಂಗಡಿಯಲ್ಲಿ ಸಿಗುವ instant jamun mix ತಂದು ಮಾಡುವ ಬದಲು ಮನೆಯಲ್ಲಿಯೇ ಇರುವ ಬಾಳೇಹಣ್ಣು ಮತ್ತು ಉದ್ದಿನಬೇಳೆ ಬಳಸಿ ಅತ್ಯಂತ ರುಚಿಕರವಾದ ಬಾಳೇಹಣ್ಣಿನ ಜಾಮೂನು ತಯಾರಿಸುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದು ಕೊಳ್ಳೋಣ.
ಸುಮಾರು 20-30 ಬಾಳೇಹಣ್ಣಿನ ಜಾಮೂನು ಮಾಡಲು ಬೇಕಾಗುವ ಸಾಮಗ್ರಿಗಳು
- ಉದ್ದಿನ ಬೇಳೆ – 1 ಬಟ್ಟಲು
- ಸಕ್ಕರೆ – 2 ಬಟ್ಟಲು
- ಏಲಕ್ಕಿ ಪುಡಿ – 1/4 ಚಮಚ
- ಕಚ್ಚಾ ಪಚ್ಚಬಾಳೆ 5-6
- ಕರಿಯಲು ಅಡುಗೆ ಎಣ್ಣೆ
ಬಾಳೇಹಣ್ಣಿನ ಜಾಮೂನು ತಯಾರಿಸುವ ವಿಧಾನ :
- ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಟ್ಟು ಕೊಳ್ಳಬೇಕು
- ನೆನೆಸಿಟ್ಟ ಉದ್ದಿನ ಬೇಳೆಯನ್ನು ಮಿಕ್ಸಿ ಇಲ್ಲವೇ ಗ್ರೈಂಡರಿನಲ್ಲಿ ನುಣ್ಣಗೆ ಇಡ್ಲಿಗೆ ರುಬ್ಬಿಕೊಳ್ಳುವಂತೆ ರುಬ್ಬಿಟ್ಟುಕೊಳ್ಳಬೇಕು.
- ಒಂದು ಅಗಲವಾದ ಗಟ್ಟಿ ತಳದ ಪಾತ್ರೆಗಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಎರಡು ಬಟ್ಟಲು ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಪಾಕ ಬರುವವರೆಗೂ ಕುದಿಸಿಕೊಳ್ಳಬೇಕು
- ಈ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಬೆರೆಸಿ ಅದು ಆರಲು ಬಿಡಬೇಕು.
- ಸಿಪ್ಪೆ ಸುಲಿದ ಕಚಾ ಪಚ್ಚಬಾಳೆಹಣ್ಣುಗಳನ್ನು ಮಧ್ಯಮಗಾತ್ರದ ಬಿಲ್ಲೆ ಆಕಾರದಲ್ಲಿ ಕತ್ತರಿಸಿಕೊಂಡು ರುಬ್ಬಿಟ್ಟುಕೊಂಡ ಉದ್ದಿನಬೇಳೆ ಹಿಟ್ಟಿನಲ್ಲಿ ಕಲೆಸಿಕೊಳ್ಳಬೇಕು
- ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಒಲೆಯ ಉರಿಯನ್ನು ಸಣ್ಣದಾಗಿ ಮಾಡಿ, ಉದ್ದಿನಹಿಟ್ಟಿನಲ್ಲಿ ಅದ್ದಿದ ಬಾಳೇಹಣ್ಣುಗಳನ್ನು ಹಾಕಿ ಚೆನ್ನಾಗಿ ಕೆಂಪಗೆ ಬರುವವರೆಗೂ ಕರಿದು ಸ್ವಲ್ಪ ಆರಲು ಬಿಡಬೇಕು.
- ಆರಿದ ಕರಿದ ಜಾಮೂನುಗಳನ್ನು ಸಕ್ಕರೆ ಪಾಕದಲ್ಲಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳಷ್ಟು ನೆನೆಸಿಟ್ಟಲ್ಲಿ ರುಚಿಕರವಾದ, ಸ್ವಾದಿಷ್ಟವಾದ ಬಾಳೆಹಣ್ಣಿನ ಜಾಮೂನು ಸವಿಯಲು ಸಿದ್ಧ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಇಡ್ಲೀ ಮಾಡಲು ರುಬ್ಬಿಟ್ಟುಕೊಂಡ ಉದ್ದಿನ ಹಿಟ್ಟಿನಲ್ಲೂ ಹುದುಗು ಬರುವ ಮುನ್ನಾ ಈ ಜಾಮೂನು ಮಾಡಲು ಬಳೆಸಿಕೊಳ್ಳಬಹುದು. ಪಚ್ಚಬಾಳೇ ಬದಲಿಗೆ ನೇಂದ್ರ ಬಾಳೆಯನ್ನು ಬಳೆಸಿದಲ್ಲಿ ರುಚಿಯೂ ಚೆನ್ನಾಗಿರುತ್ತದೆ ಮತ್ತು ಜಾಮೂನಿನ ಗಾತ್ರವೂ ದೊಡ್ಡದಾಗಿರುತ್ತದೆ.
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಶೈಲಾ ಅನಂತರಾಮು ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
#ನಳಪಾಕ
#ಬಾಳೇಹಣ್ಣಿನ_ಜಾಮೂನು
#ಜಾಮೂನು
#ಏನಂತೀರೀ
ಅರೇ ವಾಹ್…I want to try..Thenkyousoomuch..
LikeLiked by 1 person
ಮನೆಯಲ್ಲಿ ಮಾಡಿ ನೋಡಿ ನಿಮ್ಮ ಅನುಭವವನ್ನು ತಿಳಿಸಿ
LikeLike