ಅನಾನಸ್ ಆಸೆಪಟ್ಟು ಅವಸಾನವಾದ ಆನೆ (ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು)

ಈ ರಾಜ್ಯದ ಜನ ಹೆಮ್ಮೆಯಿಂದ ತಮ್ಮ ತಾಯ್ನಾಡಿನ ಬಗ್ಗೆ ಹೇಳಿಕೊಳ್ಳುವುದು ನಮ್ಮದು ದೇವರ ನಾಡು ಎಂದು ಅದಕ್ಕೂ ಒಂದು ಹೆಜ್ಜೆ ಮುಂದೇ ಹೋಗಿ ನಮ್ಮದು ಅಕ್ಷರಸ್ಥರ ನಾಡು ಎಂದು. ಅಂತಹ ಅಕ್ಷರಸ್ಥ ದೇವರ ನಾಡಿನಲ್ಲಿ ಮನುಷ್ಯನ ದುರಾಸೆಯ ಫಲವಾಗಿ ತುಂಬು ಗರ್ಭಿಣಿ ಆನೆಯೊಂದು ಹತವಾಗಿರುವುದು ನಿಜಕ್ಕೂ ಅಮಾನವೀಯ ಮತ್ತು ಅಕ್ಷಮ್ಯ ಅಪರಾಧವೇ ಸರಿ. ಸಕಲ ಪ್ರಾಣಿ ಸಂಕುಲಗಳು ಕಾಡಿನಲ್ಲಿ ಸ್ವಚ್ಚಂದವಾಗಿ ವಿಹರಿಸಿಕೊಂಡು ತಮ್ಮ ಪಾಡಿಗೆ ತಾವು ಸುಖಃವಾಗಿದ್ದವು. ತನ್ನ ದುರಾಸೆಗಾಗಿ ಮನುಷ್ಯರು ಆ ಕಾಡುಗಳನ್ನು ನಾಶ ಮಾಡಿ ನಾಡನ್ನು ಕಟ್ಟಿ ಕೊಂಡ ಪರಿಣಾಮ ಕಾಡು ಪ್ರಾಣಿಗಳು ಅಕ್ಷರಶಃ ಅನಾಥವಾದವು ಎಂದರೂ ತಪ್ಪಾಗಲಾರದು. ತನ್ನ ದೈನಂದಿನ ಆಹಾರಕ್ಕಾಗಿ ಕಾಡಿನಲ್ಲಿ ಏನೂ ಸಿಗದಿದ್ದಾಗ ಅನಿವಾರ್ಯವಾಗಿ ನಾಡಿನತ್ತಲೇ ಬರುವಂತಹ ಪರಿಸ್ಥಿತಿಯನ್ನು ಮಾನವನೇ ನಿರ್ಮಿಸಿದ ಎಂದರೂ ತಪ್ಪಾಗಲಾರದು.

ಹೀಗೆ ಕಾಡು ಪ್ರಾಣಿಗಳು ತಾನು ಬೆಳೆದ ಬೆಳೆಗಳನ್ನು ಏಕಾ ಏಕಿ ನಾಶ ಮಾಡುವುದನ್ನು ಸಹಿಸದ ಮನುಷ್ಯ ಕಾಡು ಪ್ರಾಣಿಗಳಿಂದ ತನ್ನ ಬೆಳೆಗಳನ್ನು ರಕ್ಷಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ಮಾಡಲಾರಂಭಿಸಿದನು. ಕೆಲವರು ತಮ್ಮ ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಂಡರೆ ಇನ್ನೂ ತಾಂತ್ರಿಕವಾಗಿ ಮುಂದುವರೆದಂತಹ ಜನರು ತಮ್ಮ ಬೇಲಿಗಳಿಗೆ ಸಣ್ಣ ಪ್ರಮಾಣದ ವಿದ್ಯುತ್ ಪ್ರವಹಿಸುವಂತೆ ಮಾಡಿ ಬೇಲಿಯನ್ನು ಮುಟ್ಟಿದವರಿಗೆ ಸಣ್ಣದಾದ ವಿದ್ಯುತ್ ಶಾಕ್ ತಾಗಿ ಜಮೀನಿನ ಒಳಗಡೆ ಬಾರದಂತೆ ತಡೆದರಾದರೂ, ಕೆಲವೊಮ್ಮೆ ತಾಂತ್ರಿಕ ದೋಷದ ಪರಿಣಾಮವಾಗಿ ಭಾರಿ ಪ್ರಮಾಣದ ವಿದ್ಯುತ್ ಪ್ರವಹಿಸಿ ಪ್ರಾಣಹಾನಿಗಳಾದ ಉದಾಹರಣೆಯನ್ನು ನೆನಪಿಸುವಂತೆ ಕೆಲ ದಿನಗಳ ಹಿಂದೆ ಕೇರಳದ ಮಲಪ್ಪುರಂ ಬಳಿಯ ವೆಲ್ಲಿಯಾರ್ ನದಿಯ ತಟದಲ್ಲಿ ರುವ ಕಾಡಿನ ಪಕ್ಕದಲ್ಲಿರುವ ಗ್ರಾಮದಲ್ಲಿ ನಡೆದು ಆಹಾರವನ್ನು ಅರಸಿಕೊಂಡು ನಾಡಿಗೆ ಬಂದಿದ್ದ ತುಂಬು ಗರ್ಭಿಣಿ ಆನೆ, ಸ್ಪೋಟಕ ತುಂಬಿದ್ದ ಅನಾನಸ್ಸಿಗೆ ಆಸೆಪಟ್ಟು ಅವಸಾನವಾದ ಹೃದಯವಿದ್ರಾವಕ ಘಟನೆ ನಡೆದಿದೆ.

ele2ಅರಂಭದಲ್ಲಿ ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದು ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ತಾನು ಗ್ರಾಮದ ಬೀದಿಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಕೆಲ ಕಿಡಿಗೇಡಿಗಳು ಆನೆಗೆ ಅನಾನಸ್ ಆಸೆಯನ್ನು ತೋರಿಸಿ, ಮಾತು ಬಾರದ ಮುಗ್ಧ ಆನೆ ಸೊಂಡಲಿನಿಂದ ಅನಾನಸ್ ತೆಗೆದುಕೊಂಡು ತನ್ನ ಬಾಯಿಯೊಳಗೆ ಇಟ್ಟಾಕ್ಷಣವೇ, ಕಿಡಿಗೇಡಿಗಳು ಆ ಅನಾನಸ್ ಹಣ್ಣಿನಲ್ಲಿ ರಹಸ್ಯವಾಗಿ ಇಟ್ಟಿದ್ದ ಪಟಾಕಿ ಡಂ ಎಂದು ಸ್ಪೋಟವಾಗಿ ಆನೆಯ ಬಾಯಿ ಛಿದ್ರವಾಗಿ ಬಾಯಿಯ ತುಂಬಾ ರಕ್ತಸ್ರಾವವಾಗಿವುದನ್ನು ನೋಡಿ ವಿಕೃತ ಆನಂದ ಪಟ್ಟಿದ್ದಾರೆ ಆ ಕಿಡಿಗೇಡಿಗಳು ಎಂದು ಹೇಳಾಲಾದರೂ, ನಂತರ ತಿಳಿದು ಬಂದ ವಿಷಯವೇನೆಂದರೆ, ಮೇ 27 ರಂದು ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಯಲ್ಲಿರುವ ಸೈಲೆಂಟ್ ವ್ಯಾಲೀ ನ್ಯಾಷನಲ್ ಪಾರ್ಕ್ ಪ್ರದೇಶದ ಗರ್ಭಿಣಿ ಆನೆಯೊಂದು ಆಹಾರವನ್ನರಸಿಕೊಂಡು ಗ್ರಾಮದ ತೋಟವೊಂದಕ್ಕೆ ನುಗ್ಗಿದೆ. ತೋಟಕ್ಕೆ ನುಗ್ಗುವ ಕಾಡಾನೆಗಳ ಹಾವಳಿಯನ್ನು ತಡೆಯುವ ಸಲುವಾಗಿ ಆ ತೋಟದ ಮಾಲಿಕರು ರಹಸ್ಯವಾಗಿ ಅನಾನಸ್ ಹಣ್ಣಿನಲ್ಲಿ ಸ್ಪೋಟಕಗಳನ್ನು ಹುದುಗಿಟ್ಟಿದ್ದರು. ಮನುಷ್ಯರ ಈ ಕುಕೃತ್ಯವನ್ನರಿಯದ ಮುಗ್ಧ ಆನೆ ನಿಜವಾದ ಹಣ್ಣೆಂದು ಭಾವಿಸಿ ಹಣ್ಣನ್ನು ತನ್ನ ಬಾಯೊಳಗಿಟ್ಟು ಕಚ್ಚಿದೊಡನೆಯೇ, ಹಣ್ಣಿನೊಳಗಿಟ್ಟಿದ್ದ ಸ್ಪೋಟಕ, ಸ್ಫೋಟಗೊಂಡು ಆನೆಯ ದವಡೆ ಮತ್ತು ನಾಲಿಗಳು ಛಿದ್ರ ಛಿದ್ರವಾಗಿದೆ. ಬಾಯಿಯಲ್ಲಾದ ನೋವನ್ನು ತಡೆಯಲಾರದೇ, ಘೀಳುಡುತ್ತಾ ಹಳ್ಳಿಯ ಸುತ್ತಲೂ ಓಡಾಡಿದೆಯಾದರೂ, ಅಂತಹ ನೋವಿನಲ್ಲೂ ಯಾರಿಗೂ ತೊಂದರೆ ನೀಡಿಲ್ಲ ಮತ್ತು ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಯನ್ನೂ ನಷ್ಟ ಮಾಡಲಿಲ್ಲ ಎಂಬುದು ಗಮನಿಸಬೇಕಾದಂತಹ ಅಂಶ.

elephantಒಂದು ಕಡೆ ಪಟಾಕಿಯ ಸ್ಪೋಟದಿಂದಾದ ಗಾಯದ ನೋವು ಇನ್ನೊಂದೆಡೆ ಏನನ್ನೂ ತಿನ್ನಲಾಗದೇ ಹಸಿವು, ಮತ್ತೊಂದೆಡೆ ಗಾಯದ ಮೇಲೆ ಕೂರುವ ನೊಣಗಳು ಮತ್ತು ಇತರ ಕೀಟಗಳ ಬಾಧೆಯನ್ನು ತಾಳಲಾರದೇ, ಕಡೆಗೆ ವೆಲ್ಲಿಯಾರ್ ನದಿಯಡೆಗೆ ಸಾಗಿ ನದಿಯ ಮಧ್ಯದಲ್ಲಿಯೇ ಏನನ್ನೂ ಸೇವಿಸದೇ ಎರಡು ಮೂರು ದಿನಗಳು ಅಲ್ಲಿಯೇ ನಿಂತು ಕಡೆಗೆ ಮೃತಪಟ್ಟಿದೆ. ಈ ವಿಷಯ ತಿಳಿದ ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಕೆಲವು ಪಳಗಿದ ಆನೆಗಳ ಮೂಲಕ ಗರ್ಭಿಣಿ ಆನೆಯನ್ನು ನದಿಯಿಂದ ಹೊರ ತರಲು ಭಾರೀ ಪ್ರಯತ್ನಿಸಿದರೂ ಫಲಕಾರಿಯಾಗದೇ, ಇನ್ನೂ ಭೂಮಿಯನ್ನೇ ಕಾಣದೇ ಗರ್ಭದಲ್ಲೇ ಇದ್ದ ಮರಿಯಾನೆಯ ಸಮೇತ ಆ ಹೆಣ್ಣು ಆನೆ ಮೃತಪಟ್ಟಿರುವುದು ನಿಜಕ್ಕೂ ಧಾರುಣ ಮತ್ತು ಮನುಷ್ಯನ ಕ್ರೌರ್ಯಕ್ಕೆ ಮೂಕ ಸಾಕ್ಷಿಯಾಗಿದೆ. ಅರಣ್ಯ ಇಲಾಖೆ ಆನೆಯ ಮೃತದೇಹವನ್ನು ಟ್ರಕ್ ನಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ele4ಮಲಪ್ಪುರಂ ಜಿಲ್ಲೆಯ ಅರಣ್ಯ ಅಧಿಕಾರಿಯೊಬ್ಬರು ಈ ಭೀಕರ ಘಟನೆಯ ವಿವರಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳುವ ವರೆಗೂ ಈ ದುರಂತದ ಘಟನೆ ಬೆಳಕಿಗೆ ಬಂದಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೃದಯವಿದ್ರಾವಕ ಘಟನೆ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತು ಕೊಂಡ ಕೇರಳದ ಮುಖ್ಯಮಂತ್ರಿ ಯಥಾಪ್ರಕಾರ, ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಹಳೆಯ ಹೇಳಿಕೆಯನ್ನು ನೀಡಿ ಸುಮ್ಮನಾಗಿದ್ದಾರೆ. ಕಾನೂನಾತ್ಮಕವಾಗಿ ಆ ತೋಟದ ಮಾಲಿಕರನ್ನು ಕೆಲವು ದಿನಗಳ ಕಾಲ ಬಂಧಿಸುವಂತೆ ನಾಟಕ ಮಾಡಿ ಜನ ಮಾನಸದಲ್ಲಿ ಈ ವಿಷಯ ಮರೆಯಾಗುತ್ತಿದ್ದಂತೆಯೇ ಆರೋಪಿಯನ್ನು ಬಿಟ್ಟು ಕಳುಹಿಸಿಕೊಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ

ಆನೆಯ ಸಾವಿಗೆ ಕಾರಣರಾದವರನ್ನು ಶಿಕ್ಷಿಸುವುದರಿಂದ ಮುಂದೆ ಈ ರೀತಿಯ ಪ್ರಕರಣಗಳು ನಡೆಯುವ ಸಾಧ್ಯತೆಗಳು ಕಡಿಮೆಯಾಗಬಹುದು ಎಂದು ನಂಬಲಾಗಿದೆಯಾದರೂ ಇಂತಹ ಮೂಕಪ್ರಾಣಿಗಳ ಸಾವುಗಳು ಬಯಲಿಗೆ ಬಾರದಂತಹ ಘಟನೆಗಳು ನೂರಾರಿವೆ. ಈಗಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಅಪರಾಧಿಗಳು ಶಿಕ್ಷೆಯನ್ನು ಅನುಭವಿಸದೇ ಜಾರಿಕೊಳ್ಳುವ ಸಂಭವವೇ ಹೆಚ್ಚಾಗಿದೆ.

ನಮ್ಮ ದೇಶದಲ್ಲಿ ವನ್ಯಜೀವಿಯ ಕೊಂದ ಅಪರಾಧಕ್ಕೆ ಕೊಡುವ ಶಿಕ್ಷೆ ತೀರಾ ಸಣ್ಣದ್ದಾಗಿದ್ದು ದೀರ್ಘ ಜೈಲು ಶಿಕ್ಷೆಯನ್ನು ವಿಧಿಸುವುದಿಲ್ಲ. ಖುಲ್ಲಂ ಖುಲ್ಲಾಂಲ್ಲಾಗಿ ಸಲ್ಮಾನ್ ಖಾನ್ ನೇತೃತ್ವದಲ್ಲಿ ಜಿಂಕೆಯ ಭೇಟಿಯಾದ ಹಿಂದೀ ಚಿತ್ರರಂಗದ ನಟ ನಟಿಯರಿಗೆ ಕೊಟ್ಟ ತೀರ್ಪಿನಲ್ಲಿ ಅದು ಸಾಭೀತಾಗಿ ಅಪಹಾಸ್ಯವಾಗಿದ್ದು ಈಗ ಇತಿಹಾಸ.

ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ವನ್ಯಜೀವಿಯನ್ನು ಬೆದರಿಸುವಿಕೆ/ ಹತ್ಯೆಯ ಉದ್ದೇಶಗಳೊಂದಿಗೆ ತಳುಕು ಹಾಗಿಕೊಂಡಿರುವ ಕಾರಣ ಆರೋಪಿಗೆ ಕೇವಲ ಕಠಿಣ ಶಿಕ್ಷೆಯನ್ನಲ್ಲದೇ ಆತನ ಆಸ್ತಿ ಪಾಸ್ತಿಗಳನ್ನು ಸರ್ಕಾರ ಜಪ್ತು ಮಾಡಿಕೊಂಡು ಆತ ಮತ್ತವನ ಕುಟುಂಬ ಆ ಗರ್ಭಿಣಿ ಆನೆಯಂತೆ ಆಸ್ತಿ ಮತ್ತು ಅಸರೆ ಕಳೆದುಕೊಂಡು ಆಹಾರಕ್ಕಾಗಿ ಅಲೆದಾಡುವಂತಾದಾಗಲೇ ಆ ತಾಯಿ ಮತ್ತು ಹೊಟ್ಟೆಯಲ್ಲಿದ್ದ ಕಂದ ಅನುಭವಿಸಿದ ನೋವು ಅವರಿಗೆ ತಿಳಿದಂತಾಗುತ್ತದೆ.

ele6ಹಾಗಂತ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದೇನೂ ನನ್ನ ವಾದವಲ್ಲ. ಮುಗ್ಧ ಪ್ರಾಣಿಗಳ ಕೊಲೆಗಾರರಿಗೆ ಕಂಡಲ್ಲಿ ಗುಂಡು ಅಥವ ಮರಣ ದಂಡನೆ ಪರಿಹಾರವೂ ಅಲ್ಲವಾದರೂ, ಇಂದು ತಾಯಿ ಮತ್ತು ಹುಟ್ಟಲಿರುವ ಮಗುವನ್ನು ಈ ರೀತಿಯಾಗಿ ಅಮಾನುಷವಾಗಿ ಕೊಲ್ಲಲ್ಪಟ್ಟ ಇಂತಹ ಅಪರೂಪದ ಸಂದರ್ಭವನ್ನು ಬಳಸಿಕೊಂಡು  ಒಂದು ಕಠಿಣ ಕ್ರಮವನ್ನು ಜಾರಿಗೆ ತಂದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗುವಂತೆ ಮಾಡಬೇಕು ಎನ್ನುವುದಷ್ಟೇ ನನ್ನ ಅಭಿಪ್ರಾಯವಾಗಿದೆ. ಅಂತಹ ಕಠಿಣ ಕ್ರಮವನ್ನು ಜರುಗಿಸುವ ಇಚ್ಚಾಶಕ್ತಿಹೊಂದಿರುವ ಅಧಿಕಾರ ವರ್ಗ ಮತ್ತು ರಾಜಕೀಯ ನಾಯಕರ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ, ಇಡೀ ದೇಶಕ್ಕೇ ಕೂರೋನಾ ಹಬ್ಬಿಸಲು ಕಾರಣೀಭೂತರಾದ ಮತ್ತು ಕೂರೋನಾ ತಡೆಗಟ್ಟಲು ಶ್ರಮಿಸುತ್ತಿದ್ದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೈದ ಒಂದು ಕೋಮಿನವರನ್ನು ಕೆಲ ಮತಾಂಧ ಮತ್ತು ಭ್ರಷ್ಟ ರಾಜಕಾರಣಿಗಳ ಕೃಪಾಶೀರ್ವಾದದಿಂದಾಗಿ ಕಠಿಣ ರೀತಿಯಿಂದ ಶಿಕ್ಷಿಸಿದ ಇಂದು ಸಾವಿರಾರು ಜನರಿಗೆ ಕೂರೋನಾ ಸಾಂಕ್ರಾಮಿಕ ರೋಗ ಹರಡಿದ ರೀತಿ ಮುಂದೆಯೂ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆಗಳಿವೆ. ಹಾಗಾಗಿ ಕಬ್ಬಿಣ ಕಾಯ್ದಾಗಲೇ ಬಗ್ಗಿಸಬೇಕು ಎನ್ನುವಂತೆ ಇಂತಹ ಅತ್ಯುತ್ತಮ ಅವಕಾಶವನ್ನು ಹಾಳು ಮಾಡಿಕೊಳ್ಳದೇ, ಸದುಪಯೋಗ ಪಡಿಸಿಕೊಂಡು ಕಠಿಣ ಕಾನೂನನ್ನು ತರುವ ಅವಶ್ಯಕತೆ ಇದೆ.

ಈ ಸಮಯದಲ್ಲಿ 70ರ ದಶಕದಲ್ಲಿ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ.ರಾಜಕುಮಾರ್ ಅವರು ಹಾಡಿದ ಯಾರೇ ಕೂಗಾಡಲಿ ಹಾಡಿನಲ್ಲಿ ಬರುವ ಒಂದು ಸಾಲು ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು ಉಪಕಾರ ಮಾಡಲಾರ, ಬದುಕಿದರೆ ಸಹಿಸಲಾರ ಎಂಬುದು ಅಕ್ಷರಶಃ ನಿಜ ಎಂದು ಈ ಘಟನೆ ನೆನಪಿಗೆ ತರುತ್ತದೆ. ಈ ಮೂಕ ಪ್ರಾಣಿಗಳು ಮನುಷ್ಯರ ಧುರಳತೆಯನ್ನು ಅರಿಯದೆ ಅವರು ಏನು ಕೊಟ್ಟರೂ ಅನುಮಾನಿಸದೇ ತಿನ್ನಲು ಹೋದ ಪರಿಣಾಮವೇ ಈ ದುರ್ಘಟನೆ ಸಂಭವಿಸಿದೆ. ಮಾನವ ತನ್ನ ದುರಾಸೆಯಾಗಿ ಈಗಾಗಲೇ ಕಾಡು ಮತ್ತು ಕಾಡು ಪ್ರಾಣಿಗಳನ್ನು ನಾಶ ಮಾಡಿ ಪರಿಸರದಲ್ಲಿ ಮಾಡಿದ ಅಸಮಾನತೆಯಿಂದಾಗಿ ನಾನಾರೀತಿಯ ನೈಸರ್ಗಿಕ ಅವಘಡಗಳು ಸಂಭವಿಸುತ್ತಿರುವುದು ತಿಳಿದಿದ್ದರೂ ಮತ್ತೊಮ್ಮೆ ನಂಬಿದವರ ಕತ್ತು ಕುಯ್ಯುವುದು ಸಜ್ಜನರನ್ನ ಗೋಳುಹುಯ್ದುಕೊಳ್ಳುವುದನ್ನೇ ತನ್ನ ಹುಟ್ಟುಗುಣವನ್ನಾಗಿ ಮಾಡಿಕೊಂಡಿರುವ ಮಾನವ ಮತ್ತೊಮ್ಮೆ ತನ್ನ ದುಷ್ಟ ಬುದ್ಧಿಯಿಂದ ಅನಾನಾಸ್ ಆಸೆ ತೋರಿಸಿ ಆನೆಯ ಅವಸಾನಕ್ಕೆ ಕಾರಣವಾಗಿರುವುದು ಅಕ್ಷಮ್ಯ ಅಪರಾಧವಾಗಿದೆ 😥

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s