ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಚಿರೋಟಿಯನ್ನು ಮನೆಯಲ್ಲಿಯೇ ಸಾಂಪ್ರದಾಯಕವಾಗಿ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 10-12 ಚಿರೋಟಿಗಳನ್ನು ಮಾಡಲು ಬೇಕಾಗುವಂತಹ ಸಾಮಗ್ರಿಗಳು
• ಚಿರೋಟಿ ರವೆ – 1 ಬಟ್ಟಲು
• ಅಕ್ಕಿ ಹಿಟ್ಟು – 1/2 ಬಟ್ಟಲು
• ಸಕ್ಕರೆ ಪುಡಿ – 1 ಬಟ್ಟಲು
• ತುಪ್ಪ – 2-3 ಚಮಚ
ಚಿರೋಟಿ ಮಾಡುವ ವಿಧಾನ :
ಮೊದಲನೇ ಹಂತ ಹಿಟ್ಟನ್ನು ಸಿದ್ದ ಮಾಡಿಕೊಳ್ಳುವ ವಿಧಾನ
• ಅಗಲವಾದ ಪಾತ್ರೆಯಲ್ಲಿ ಚಿರೋಟಿ ರವೆಯನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಚಪಾತಿ ಹಿಟ್ಟನ್ನು ಕಲೆಸಿಕೊಳ್ಳುವ ರೀತಿಯಲ್ಲಿ ಕಲೆಸಿಕೊಳ್ಳಬೇಕು.
• ಕಲೆಸಿಕೊಂಡ ಹಿಟ್ಟನ್ನು ಚೆನ್ನಾಗಿ ನಾದಿದ ಮೇಲೆ ಸ್ವಲ್ಪ ಕಾಲ ನೆನೆಯಲು ಬಿಡಬೇಕು.
ಎರಡನೆಯ ಹಂತವಾದ ಸಾಟಿಯನ್ನು ತಯಾರಿಸಿಕೊಳ್ಳುವ ವಿಧಾನ
• ಅಗಲವಾದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿಕೊಂಡು ಹಳದಿ ಬಣ್ಣ ಬಿಳಿಯ ಬಣ್ಣಕ್ಕೆ ತಿರುಗುವ ತನಕ ತೀಡಬೇಕು.
• ಬಣ್ಣ ಬದಲಿಸಿದ ತುಪ್ಪಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಿ, ಕೇಕ್ ಮೇಲೆ ಹಾಕುವ ಕ್ರೀಂ ನಂತೆ ಆಗುವವರೆಗೂ ಕಲೆಸಬೇಕು.
ಮೂರನೇಯ ಹಂತ
• ಕಲೆಸಿ ಇಟ್ಟಿದ್ದ ಚಿರೋಟಿ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿ ರೀತಿಯಲ್ಲಿ ಲಟ್ಟಿಸಿಕೊಳ್ಳಬೇಕು.
• ಲಟ್ಟಿಸಿಕೊಂಡ ಚಪಾತಿಯ ಮೇಲೆ ಸಾಟಿಗೆ ಎಂದು ತಯಾರಿಸಿಟ್ಟು ಕೊಂಡಿದ್ದ ಕ್ರೀಂ ಅನ್ನು ಚೆನ್ನಾಗಿ ಬಳೆದು ಅದರ ಮೇಲೆ ಮತ್ತೊಂದು ಪದರದ ಚಪಾತಿಯನ್ನು ಇಟ್ಟು ಕ್ರೀಂ ಬಳಿದು ಒಟ್ಟು ನಾಲ್ಕು ಪದರಗಳಿಗೆ ಕ್ರೀಂ ಬಳೆದುಕೊಳ್ಳಬೇಕು.
• ನಾಲ್ಕು ಪದರಗಳಿಗೆ ಕ್ರೀಂ ಬಳಿದ ನಂತರ ಅದನ್ನು ಚೆನ್ನಾಗಿ ಸುರಳಿಯಾಕಾರದಲ್ಲಿ ಸುತ್ತಿಕೊಂಡು ಸ್ವಲ್ಪ ಗಟ್ಟಿಯಾಗಿ ನಾದಿದ ನಂತರ ಎರಡೂ ತುದಿಗಳನ್ನು ಮಡಚಿ, ಚಾಕುವಿನ ಸಹಾಯದಿಂದ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು.
• ಸಣ್ಣದಾಗಿ ಮಾಡಿಟ್ಟು ಕೊಂಡಿದ್ದ ತುಂಡನ್ನು ಅಂಗೈಯ್ಯಿಗೆ ತೆಗೆದುಕೊಂಡು ಹೆಬ್ಬೆಟ್ಟುಗಳಿಂದ ಮಧ್ಯ ಭಾಗದಿಂದ ಚಕ್ಕುಲಿಯಾಕಾರ ಬರುವಷ್ಟರ ಮಟ್ಟಿಗೆ ಅಗಲ ಮಾಡಿಕೊಳ್ಳಬೇಕು.
• ಬಾಣಲಿಯಲ್ಲಿ ಕರಿಯಲು ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಿದ್ಧ ಪಡಿಸಿಟ್ಟು ಕೊಂಡಿದ್ದ ಚಿರೋಟಿಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಟ್ಟು ಒಂದು ಸೌಟಿನ ಸಹಾಯದಿಂದ ಮಧ್ಯಭಾಗದಲ್ಲಿ ಕರಿದ ಎಣ್ಣೆಗಳನ್ನು ಹಾಕುತ್ತಿದ್ದಲ್ಲಿ ನಿಧಾನವಾಗಿ ಚಿರೋಟಿ ಪದರ ಪದರವಾಗಿ ಅರಳುತ್ತದೆ .
• ಪದರ ಪದರವಾಗಿ ಅರಳಿದ ಚಿರೋಟಿಯನ್ನು ಸ್ವಲ್ಪ ಹೊತ್ತು ಆರಿದ ನಂತರ ಅದಕ್ಕೆ ಸಕ್ಕರೆ ಪುಡಿ ಉದುರಿಸಿದಲ್ಲಿ ಬಿಸಿ ಬಿಸಿಯಾದ, ಗರಿಗರಿಯಾದ ಮತ್ತು ರುಚಿ ರುಚಿಯಾದ ಚಿರೋಟಿ ಸವಿಯಲು ಸಿದ್ದ.
ಬಿಸಿಬಿಸಿಯಾದ, ರುಚಿ ರುಚಿಯಾದ, ಗರಿಗರಿಯದ ಚಿರೋಟಿ ಮಾಡುವುದನ್ನು ಈ ಈ ವೀಡೀಯೋ ಮೂಲಕವೂ ನೋಡಿ ಕಲಿಯಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಹಿಂದಿನ ಕಾಲದಲ್ಲಿ ಮದುವೆ ಮುಂಜಿಗಳಲ್ಲಿ ಚಿರೋಟಿ ಊಟ ಹಾಕಿಸಿವುದೇ ದೊಡ್ಡಸ್ತಿಕೆ ಎನ್ನುವಂತಿತ್ತು. ಆದರೆ ಇಂದು ಮನೆಯಲ್ಲಿಯೇ ಬಿಸಿ ಬಿಸಿಯಾದ, ಗರಿಗರಿಯಾದ ಮತ್ತು ರುಚಿ ರುಚಿಯಾದ ಚಿರೋಟಿಯನ್ನು ಮಾಡಿ ತಿನ್ನಬಹುದಾಗಿದೆ. ಈ ಚಿರೋಟಿಗೆ ಬಿಸಿ ಬಿಸಿಯಾದ ಬಾದಾಮಿ ಹಾಲು ಮತ್ತು ಸಕ್ಕರೆ ಪುಡಿಯನ್ನು ಬೆರೆಸಿಕೊಂಡು ಸವಿಯುವುದನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಚೆಂದ.
#ಅನ್ನಪೂರ್ಣ
#ಚಿರೋಟಿ
#ಏನಂತೀರೀ