ಚಿರಂಜೀವಿ

ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು ನಿಮಗೆ ಈಗಾಗಲೇ ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿದಿದೆ. ಕನ್ನಡ ಚಿತ್ರರಂಗದಲ್ಲಿ ಸ್ವಸಾಮರ್ಥ್ಯದಿಂದ ತಮ್ಮ ಪ್ರತಿಭೆಯ ಮೂಲಕ ಮತ್ತು ಸಜ್ಜನಿಕೆಯ ಮೂಲಕ ಮೇಲೆ ಬಂದ ಶಕ್ತಿಪ್ರಸಾದ್ ಅವರ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಸಾಯುವ ವಯಸ್ಸಲ್ಲದ ವಯಸ್ಸಿನಲ್ಲಿ ಕೇವಲ 39 ವರ್ಷಕ್ಕೇ ಅಕಾಲಿಕವಾಗಿ ಮತ್ತೆ ಬಾರದ ಲೋಕಕ್ಕೆ ಶಾಶ್ವತವಾಗಿ ಪಯಣಿಸಿರುವುದು ನಿಜಕ್ಕೂ ದುಃಖಕರವಾದ ವಿಷಯವಾದರೂ ಚಿರಂಜೀವಿ ಸರ್ಜಾನ ಅಕಾಲಿಕ ಮರಣ ಅನೇಕ ಚಿತ್ರನಟರಿಗೆ ಹಾಗು ಅವರಂತೆ ಆಗಬೇಕು ಎಂದು ಹಪಾಹಪಿಸುವ ಅನೇಕ ಯುವಕರಿಗೆ ಜೀವನದ ಪಾಠವನ್ನು ಕಲಿಸುವಂತಿದೆ ಎಂದರೆ ತಪ್ಪಾಗಲಾರದು.

chiru7

ಚಿತ್ರರಂಗ ಚಿರಂಜೀವಿ ಸರ್ಜಾಗೆ ಹೊಸದೇನಲ್ಲ. ಅವರ ಇಡೀ ಕುಟುಂಬವೇ ಕನ್ನಡ ಚಿತ್ರರಂಗವೇಕೆ? ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರುವಾಸಿಯಾದ ದೊಡ್ಡ ಮನೆತನ. ಅವರ ಅಜ್ಜ ಶಕ್ತಿ ಪ್ರಸಾದ್ ರಾಜಕುಮಾರ್ ಅವರ ಬ್ಯಾನರಿನ್ನ ಖಾಯಂ ಖಳನಟ. ಮಾವ ಅರ್ಜುನ್ ಸರ್ಜಾ ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ ತಮ್ಮ ನಟನೆ ಮತ್ತು ದೇಹದಾಢ್ಯದಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹೆಸರುವಾಸಿಯಾದ ನಟ, ನಿರ್ದೇಶಕ ಮತ್ತು ನಿರ್ಮಾಕಪರೂ ಹೌದು. ಆವರ ಧರ್ಮಪತ್ನಿ ಆಶಾರಾಣಿಯೂ ಸಹಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿದ್ದಲ್ಲದೆ, ಹಿರಿಯ ನಟ ರಾಜೇಶ್ ಅವರ ಮಗಳೂ ಕೂಡಾ. ಅವರ ಮತ್ತೊಬ್ಬ ಸೋದರ ಮಾವ ದಿ. ಕಿಶೋರ್ ಸರ್ಜಾ ಒಳ್ಳೆಯ ನಿರ್ದೇಶಕ ಎಂದು ಹೆಸರು ಮಾಡಿದ್ದರು. ಇನ್ನು ತಮ್ಮ ಧೃವ ಸರ್ಜಾ ಖ್ಯಾತ ನಟನಾದರೆ, ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಘನಾ ರಾಜ್ ಸಹಾ ಬಹುಭಾಷಾ ಚಿತ್ರನಟಿ ಮತ್ತು ಆಕೆಯ ಪೋಷಕರಾದ ಶ್ರೀಮತಿ ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಸಹಾ ಚಿತ್ರರಂಗದಲ್ಲಿ ಖ್ಯಾತರಾದವರೇ.

chiru7

ಹೀಗೆ ಚಲನಚಿತ್ರರಂಗದ ಕುಟುಂಬದಲ್ಲೇ 17 ಅಕ್ಟೋಬರ್ 1984ರಂದು ಬೆಂಗಳೂರಿನಲ್ಲಿಯೇ ಜನಿಸಿ, ತಮ್ಮ ಇಡೀ ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಗಿಸಿ ಒಂದು ರೀತಿಯ ಪಕ್ಕಾ ಬೆಂಗಳೂರಿನ ಲೋಕಲ್ ಬಾಯ್ ಎಂದರೂ ತಪ್ಪಾಗಲಾರದು. ಚಿತ್ರರಂಗದ ನಂಟಿನಿಂದಾಗಿ ನಟನಾಗುವ ಮೊದಲು ತಮ್ಮ ಮಾವಂದಿರೊಂದಿಗೆ ಸಹ ನಿರ್ದೇಶಕರರಾಗಿ ತೆರೆಯ ಹಿಂದಿನಿಂದಲೇ ಚಿತ್ರರಂಗದ ಆ, ಆ, ಇ, ಈ… ಕಲಿತು ಮಾವ ಕಿಶೋರ್ ಸರ್ಜಾ ನಿರ್ದೇಶನದ ವಾಯುಪುತ್ರ ಸಿನಿಮಾದ ಮೂಲಕವೇ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಗಂಡೆದೆ, ಚಿರು, ವರದನಾಯಕ, ಚಂದ್ರಲೇಖ, ಆಟಗಾರ, ರುದ್ರತಾಂಡವ, ರಾಮಲೀಲಾ ಹೀಗೆ 22ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಲ್ಲದೇ ಇನ್ನೂ ಮೂರ್ನಾಲ್ಕು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಹು ಬೇಡಿಕೆಯ ನಟನಾಗಿದ್ದರು. ಅವರ ಇಡೀ ಕುಟುಂಬವೇ ಹನುಮಂತನ ಭಕ್ತರಾಗಿದ್ದು ಅವರ ಸಿನಿಮಾಗಳ ಒಂದಾದರೂ ದೃಶ್ಯಗಳಲ್ಲಿ ಅಥವಾ ಹಾಡುಗಳಲ್ಲಿ ಆಂಜನೇಯನನ್ನು ನೆನೆಪಿಸಿಕೊಳ್ಳುವಂತಹ ಆಸ್ತಿಕ ಮತ್ತು ಅಜಾತು ಶತ್ರುವಾಗಿದ್ದರು.

chiru6

ಚಿತ್ರರಂಗದ ಮತ್ತೊಂದು ಕುಟುಂಬದ ಕುಡಿಯಾದ ಮತ್ತು ತಮ್ಮ ಜೊತೆಯಲ್ಲೇ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದ ಮೇಘನಾ ರಾಜ್ ಅವರನ್ನು ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸುತ್ತಿದ್ದರೂ ಯಾವುದೇ ಗಾಸಿಪ್ಪಿಗೆ ಒಳಗಾಗದೇ, 2018ರಲ್ಲಿ ಈ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ದತಿಗಳಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಮೇಘನಾರಾಜ್ ಈಗ 4 ತಿಂಗಳ ಗರ್ಭಿಣಿಯಾಗಿದ್ದಾರೆ ಆದರೆ ಆ ಮುದ್ದು ಕಂದನನ್ನು ನೋಡುವ ಮೊದಲೇ ಚಿರಂಜೀವಿ ಇಹಲೋಕ ತ್ಯಜಿಸುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿ.

39 ವರ್ಷಕ್ಕೇ ಹೃದಯಾಘಾತದಿಂದ ಸಾವು ಎಂದರೆ ನಿಜವಾಗಿಯೂ ನಂಬಲು ಆಸಾಧ್ಯ. ಅದರಲ್ಲೂ ಶಕ್ತಿಪ್ರಸಾದ್ ಅವರ ಕುಟಂಬವಿಡೀ ಅಂಗಸಾಧನೆ ಮಾಡಿದವರು ಮತ್ತು ಕಟ್ಟು ಮಸ್ತು ದೇಹವನ್ನು ಹೊಂದಿದವರೇ ಆಗಿದ್ದರು. ಶಕ್ತಿ ಪ್ರಸಾದ್ ಕನ್ನಡ ಚಿತ್ರ ರಂಗ ಪ್ರವೇಶಿಸುವ ಮೊದಲು ಕೋಟೇ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದವರು ಮತ್ತು ಗರಡಿ ಮನೆಯಲ್ಲಿ ಪಳಗಿದ್ದವರು. ಹಾಗಾಗಿ ಅವರ ಮಗ ಅರ್ಜುನ್ ಸರ್ಜಾ ಒಳಗೊಂಡತೆ, ಚಿರಂಜೀವಿ, ಧೃವ ಎಲ್ಲರೂ ಸಹಾ ಕಟ್ಟು ಮಸ್ತಾದ ದೇಹ ಹೊಂದಿದ್ದರೂ ಹೃದಯಾಘಾತದಿಂದ ಸಾವು ಸಂಭವಿಸಿದೆ ಎನ್ನುವುದು ನಂಬಲು ಕಷ್ಟಸಾಧ್ಯವೇ ಸರಿ.

ಚಿತ್ರನಟರ ಜೀವನ ಎಂದರೆ ಐಶಾರಾಮ್ಯ ಜೀವನ ನಡೆಸುವವರು ಎಂದು ತಿಳಿದವರೇ ಹೆಚ್ಚು. ನಿಜ ಹೇಳ ಬೇಕೆಂದರೆ ಸೆಲೆಬ್ರಿಟಿಗಳ ಜೀವನ ಮೇಲೇಲ್ಲಾ ಥಳುಕು, ಒಳಗೆಲ್ಲಾ ಹುಳುಕು ಎನ್ನುವ ವಾತವರಣವೇ ಹೆಚ್ಚು. ಒಂದು ಚಿತ್ರ ಹಿಟ್ ಆದರೆ ಮತ್ತೊಂದು ಮಗದೊಂದು ಚಿತ್ರ ಹಿಟ್ ಆಗಲೇ ಬೇಕು ಎನ್ನುವ ಹಪಾಹಪಿಯಲ್ಲಿರುತ್ತಾರೆ. ಒಂದು ಚಿತ್ರ ಅಕಸ್ಮಾತ್ ಸೋಲಾಯಿತು ಎಂದರೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿ ತಮ್ಮ ಜೀವನವೇ ಹಾಳಾಗಿ ಹೋಯಿತೇನೋ ಅನ್ನುವಷ್ಟರ ಮಟ್ಟಿಗೆ ಒತ್ತಡಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ಹೋಗಿರುವ ಉದಾಹಣೆಗಳು ನಮ್ಮ ಕಣ್ಣ ಮುಂದಿವೆ. ಇವಲ್ಲಕ್ಕಿಂತಲೂ ಹೆಚ್ಚಾಗಿ ತಮ್ಮ ಬಳಿ ಹಣ ಸೇರುತ್ತಲೇ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಮತ್ತೊಂದು ಆಘಾತಕಾರಿ ವಿಷಯ. ದುಡ್ದಿಲ್ಲದಿದ್ದಾಗ ರಸ್ತೆಯ ಬದಿಯ ಚಿತ್ರಾನ್ನ ತಿಂದೂ ಜೀವನದಲ್ಲಿ ಮುಂದೆ ಬರಬೇಕು ಎಂದು ಮೆಟ್ಟಿ ನಿಲ್ಲುವವರು, ಕೈಯ್ಯಲ್ಲಿ ಒಂದು ಚೂರು ದುಡ್ದು ಓಡಾಡ ತೊಡಗಿದರೆ‌ ಸಾಕು, ಆಕಾಶದಿಂದ ಉದುರಿ ಬಿದ್ದವರ ತರಹ, ಐಶಾರಾಮ್ಯದ ಜೀವನದ, ಆಹಾರ ಪದ್ಧತಿಗಳು, ಮೋಜು ಮಸ್ತಿಗಳನ್ನು ರೂಢಿಸಿಕೊಂಡು ಆರೋಗ್ಯದ ಕಡೆ ಗಮನ ಹರಿಸುವುದನ್ನು ಮರೆಯುತ್ತಾರೆ. ಹೇಗೂ ದುಡ್ಡು ಖರ್ಚು ಮಾಡಿದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಏನು ಬೇಕಾದರೂ ಗುಣಪಡಿಸಿಕೊಳ್ಳಬಹುದು ಎಂಬ ಧೋರಣೆಗೆ ಅವರಲ್ಲಿ ಮನೆಮಾಡಿರುತ್ತದೆ. ವೈದ್ಯರು ಕೊಡುವ ಔಷಧೋಪಚಾರಗಳು ಮಾತ್ರೆಗಳು ಕ್ಷಣಿಕವಾಗಿ ತಾತ್ಕಾಲಿಕವಾದ ಪರಿಣಾಮವನ್ನು ಬೀರಬಲ್ಲದೇ ಹೊರತಾಗಿ, ಅವು ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಆ ಕ್ಷಣದಲ್ಲಿ ಅವರಿಗೆ ಬಾರದಾಗಿರುತ್ತದೆ.

ಇನ್ನು ಸಿನಿಮಾಗಳಲ್ಲಿ ಪಾತ್ರಕ್ಕೆ ತಕ್ಕಂತೆ ದಿಢೀರ್ ಎಂದು ಸಣ್ಣಗಾಗುವುದು ಮತ್ತು ದಿಢೀರ್ ಎಂದು ದಪ್ಪಗಾಗುವ ಚಾಳಿ ಬಹುತೇಕ ಸಿನಿಮಾ ನಟರಿಗಿರುತ್ತದೆ. ಇದಕ್ಕೆ ಸರ್ಜಾ ಸಹೋದರರೂ ಹೊರತಾಗಿರಲಿಲ್ಲ. There is no short cut for success ಎನ್ನುವಂತೆ ದೇಹವನ್ನು ದಂಡಿಸುವುದಾಗಲೀ ಅಥವಾ ಬೆಳೆಸುವುದಾಗಲೀ ಅರೋಗ್ಯಕರವಾಗಿ ನೈಸರ್ಗಿಕವಾಗಿ ಇರಬೇಕೇ ಹೊರತು, ಯಾವುದೋ ಸ್ಟೀರಾಯ್ಡ್ ಇಲ್ಲವೇ ಸಪ್ಲಿಮೆಂಟ್ಗಳನ್ನು ಸೇವಿಸಿ ದಿಢೀರ್ ಆಗಿ ದೇಹವನ್ನು ದಂಡಿಸುವುದು ತಾತ್ಕಾಲಿಕವಾಗಿ ಫಲಿತಾಂಶವನ್ನು ನೀಡಬಲ್ಲದೇ ಹೊರತು ದೀರ್ಘಕಾಲದಲ್ಲಿ ಅದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ ಎನ್ನುವುದಕ್ಕೆ ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸತ್ತು ಹೋದ ಚಿರಂಜೀವಿ ಸರ್ಜಾನೇ ಸಾಕ್ಷಿ.

ಸಾವಿಲ್ಲದ ಮನೆಯಲ್ಲಿ ಸಾಸಿವೇ ಕಾಳು ತೆಗೆದುಕೊಂಡು ಬಾ ಎನ್ನುವಂತೆ ಸಾವು ಎಲ್ಲರ ಮನೆಯಲ್ಲಿ ಆಗುತ್ತದೆಯಾದರೂ, ಇನ್ನೂ ಬಾಳಿ ಬೆಳಗ ಬೇಕದ ಇಷ್ಟು ಸಣ್ಣ ವಯಸ್ಸಿನಲ್ಲಿ ಅದೂ ಅಜ್ಜಿ, ತಂದೆ, ತಾಯಿಯರು ಇರವಾಗಲೇ ಮಕ್ಕಳು ಅಗಲಿಹೋದಲ್ಲಿ ಆ ದುಃಖವನ್ನು ಸಹಿಸುವುದು ನಿಜಕ್ಕೂ ಕಷ್ಟವೇ ಸರಿ. ಪುತ್ರ ಶೋಕ ನಿರಂತರಮ್ ಎನ್ನುವಂತೆ, ಮಗ ತಮ್ಮ ಅಂತ್ಯಸಂಸ್ಕಾರ ಮಾಡುತ್ತಾನೆ ಎಂದು ನಂಬಿದ್ದ ತಂದೆ ತಾಯಿಯರಿಗೆ, ತಂದೆಯೇ ಮಗನ ಅಂತ್ಯ ಸಂಸ್ಕಾರ ಮಾಡುವ ದುರ್ವಿಧಿ ನಿಜಕ್ಕೂ ದುಃಖಕರ ಮತ್ತು ಅಂತಹ ದುರ್ವಿಧಿ ಯಾವ ಪೋಷಕರಿಗೂ ಬಾರದಿರಲಿ.

chiru4

ಈ ಜೀವನ ನಶ್ವರ. ನೆನ್ನೆ ಯಾರೋ ಹೋಗಿದ್ದರು. ಇಂದು ಚಿರಂಜೀವಿ ಸರ್ಜಾ ವಿಧಿವಶರಾಗಿದ್ದಾರೆ. ನಾಳೆ ಮತ್ತೊಬ್ಬರ ಸರದಿ. ಹೀಗೆ ನಾವೆಲ್ಲರೂ ಸರದಿಯಲ್ಲಿ ನಮ್ಮ ಪಾಲಿನ ಅಂತಿಮ ದಿನಗಳಿಗೆ ಕಾಯುತ್ತಿರುವವರೇ. ವ್ಯಕ್ತಿಗಳು ಗತರಾದಾಗ ಕೆಲವು ದಿನಗಳ ಕಾಲ ಅವರ ನೆನಪಿನಲ್ಲಿರುತ್ತಾರೆ. ಆದಾದನಂತರ ಎಲ್ಲರೂ ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಮಗ್ನರಾಗಿ ಯಾರು ಸತ್ತರು? ಹೇಗೆ ಸತ್ತರು? ಎಂಬೆಲ್ಲವನ್ನೂ ಈ ಸಮಾಜ ಅಷ್ಟೇ ಬೇಗ ಮರೆತು ಬಿಡುತ್ತದೆ ಎಂಬುದು ವಾಸ್ತವ ಸತ್ಯ. ಹಾಗಾಗಿ ಇರುವಷ್ಟು ದಿನ ಸುಖಃವಾಗಿ ಸಂತೋಷದಿಂದ ಆರಾಮವಾದ ಜೀವನ ನಡೆಸೋಣ. ನಾವು ಇದ್ದರೂ , ಇಲ್ಲದಿದ್ದರೂ ಈ ಸಮಾಜ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಲೇ ಇರುತ್ತದೆ. ಹಾಗಾಗಿ ಧಾವಂತದ ಬದುಕಿಗೆ ಸ್ವಲ್ಪ ಕಡಿವಾಣ ಹಾಕಿ ನೆಮ್ಮದಿಯಿಂದ ಎಲ್ಲರೊಂದಿಗೆ ಸ್ನೇಹ-ಪ್ರೀತಿಯಿಂದಿದ್ದು ತುಂಬು ಜೀವನ ನಡೆಸೋಣ. ಸಾವಿಗೆ ವಯಸ್ಸು ಮತ್ತು ಸಮಯ ಎಂಬುದಿಲ್ಲ. ಚಿರಂಜೀವಿ ಎಂಬುದೂ ಕೂಡ ಕೇವಲ ಒಂದು ಹೆಸರಾಯಿತೇ ಹೊರತು ಅವನಿಗೆ ಮೃತ್ಯುವನ್ನು ಜಯಿಸುವುದಿರಲೀ, ದೀರ್ಘಾಯಸ್ಸನ್ನೂ ಕೊಡಲಿಲ್ಲ ಎನ್ನುವುದು ಜೀವನದ ವಾಸ್ತವದ ಕಠು ಸತ್ಯ. ಬಾಳಿ ಬದುಕುವ ವಯಸ್ಸಿಗೆ ಬಾರದ ಲೋಕಕ್ಕೆ ಪಯಣಿಸಿದ ಚಿರಂಜೀವಿಯ ಆತ್ಮಕ್ಕೆ ಆ ಭಗವಂತ ಶಾಂತಿ ಕರುಣಿಸಲಿ. ದುಃಖ ತಪ್ತ ಕುಟುಂಬ ವರ್ಗಕ್ಕೆ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಮೇಘನಾ ರಾಜ್ ಒಡಲಲ್ಲಿ ಅರಳುತ್ತಿರುವ ಕಂದನ ರೂಪದಲ್ಲಿ ಚಿರಂಜೀವಿ ಸರ್ಜಾ ಮತ್ತೊಮ್ಮೆ ಮರು ಹುಟ್ಟು ಪಡೆದು ಪ್ರಜ್ವಲಿಸಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?

5 thoughts on “ಚಿರಂಜೀವಿ

  1. ಕಾಲನದೂತರು ಕಾಲ್ಪಿಡೆಳೆವಾಗ ತಾಳುತಾಳೆಂದರೆ ತಾಳುವರೇ, ಯಮದೂತರಿಗೆ ಕಿಂಚಿತ್ತೂ ಧಯೆಯಿಲ್ಲ ಎಂದಿದ್ದಾರೆ ಹಿರಿಯರು .. ಪುನರಪಿ ಜನನಂ ಪುನರಪಿ ಮರಣಂ ಇದುವೇ ಜೀವನ. ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ ಎಂದು ಬದುಕಬೇಕಷ್ಟೇ…

    Liked by 1 person

  2. ಈ ಜೀವನದ ಒಂದೇ ಒಂದು ಸತ್ಯ ಹಾಗು ಒಂದೇ ನಿಶ್ಚಿತ ಘಟನೆ, ಅದು ಮರಣ!
    ಹೇಗೆ ಮತ್ತು ಯಾವಾಗ ಬರುವುದು ಅನಿಶ್ಚಿತ.
    ಬದುಕು ಸಾಗಿಸ ಬೇಕು ಮುನ್ನಡೆಯ ಬೇಕು,
    ಅಳಿದವರ‌ ನೆನೆಯ ಬೇಕು
    ಉಳಿದವರಿಗಾಗಿ ಬಾಳ ಬೇಕು.
    ಇದನ್ನು ಅರಿತರೆ ದೇಹ ಮನಸ್ಸು ಜೀವನದ ಕಾಲಕ್ಕೆ ಹೊಂದಿಕೊಂಡು ಮುನ್ನಡೆ ಯುವುದು,
    ಇಲ್ಲದಿದ್ದರೆ ದೇಹ ಮುನ್ನಡೆ ಯುವುದು ಮನಸ್ಸು ಆ ಕಾಲದ ಚಿತ್ತದ ಕೊರಗಿನಲ್ಲಿ ಕಳೆದು ಹೋಗುವುದು.
    ಆಯಿಕೆ ‌ನಮ್ಮ ಕೈಯಲ್ಲಿ ಇದೆ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s