ಇತ್ತೀಚಿನ ದಿನಗಳಲ್ಲಿ ಪ್ರಪಂಚಾದ್ಯಂತ ಎಲ್ಲಡೆಯೂ, ಎಲ್ಲರಲ್ಲಿಯೂ ಗಂಡಸಲ್ಲಾಗಲೀ, ಹೆಂಗಸರಲ್ಲಾಗಲೀ ಕಾಣಬಹುದಾದ ಮತ್ತು ಕಾಡಬಹುದಾದ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಥೂಲಕಾಯ(obesity) ಎಂದರೆ ತಪ್ಪಾಗಲಾದರು. ಈ ಸ್ಥೂಲಕಾಯಕ್ಕೆ ಮುಖ್ಯವಾದ ಕಾರಣವೇ ನಮ್ಮ ಆಹಾರ ಪದ್ದತಿ ಎಂದರೆ ನಿಜಕ್ಕೂ ಆಶ್ಚರ್ಯವಾಗಬಹುದು. ನಮಗೆ ತಿಳಿದಂತೆ ನಮ್ಮ ಅಜ್ಜ, ಅಜ್ಜಿಯರು ಶತಾಯುಷಿಗಳಾಗಿದ್ದರು ಇಲ್ಲವೇ ಕನಿಷ್ಟ ಪಕ್ಷ ಎಂಬತ್ತಕ್ಕೂ ಹೆಚ್ಚಿನ ವಯಸ್ಸಿನವರೆಗೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ತುಂಬು ಜೀವನ ನಡೆಸಿದ್ದರು. ಇನ್ನು ನಮ್ಮ ಪುರಾಣ ಶಾಸ್ತ್ರಗಳಲ್ಲಿ ಓದಿ ತಿಳಿದಿರುವ ಪ್ರಕಾರ ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಯಾವುದೇ ಆರೋಗ್ಯದ ಸಮಸ್ಯೆಗಳಿಲ್ಲದೆ ಸುಖಃಮಯ ಜೀವನ ನಡೆಸಿದ್ದರು. ಅವರ ಈ ದೀರ್ಘಾಯುಷ್ಯದ ಮತ್ತು ಆರೋಗ್ಯದ ಗುಟ್ಟೇನು ಎಂದು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಅದು ಬಹಳ ಸರಳ ಮತ್ತು ಅಷ್ಟೇ ಸುಂದರವಾಗಿದೆ.
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಒಳ್ಳೆಯ ಆಧ್ಯಾತ್ಮಿಕ ಚಿಂತನೆ, ಸಾತ್ವಿಕ ಮತ್ತು ಶಕ್ತಿದಾಯಕ ಹಿತ ಮಿತ ಆಹಾರವೇ ಅವರ ಈ ಸಾಧನೆಗಳಿಗೆ ಸಹಕಾರಿಯಾಗಿತ್ತು. ಅದಕ್ಕಾಗಿಯೇ ನಮ್ಮ ಜಾನಪದದಲ್ಲಿ ಒಂದು ನಾನ್ನುಡಿಯೇ ಇದೆ.
ಒಂದು ಹೊತ್ತು ಉಂಡವ ಯೋಗಿ
ಎರಡು ಹೊತ್ತು ಉಂಡವ ಭೋಗಿ
ಮೂರು ಹೊತ್ತು ಉಂಡವ ರೋಗಿ
ನಾಲ್ಕು ಹೊತ್ತು ಉಂಡವನನ್ನು ಎತ್ತುಕೊಂಡು ಹೋಗಿ
ಅಂದರೆ ಒಪ್ಪತ್ತು ಊಟ ಮಾಡುವವರು ಊಟಕ್ಕೆ ಗಮನವನ್ನು ಕೊಡದೆ ಸಾಧನೆಗಳನ್ನು ಮಾಡುತ್ತಾ ಯೋಗಿಗಳಾಗುತ್ತಾರೆ. ಇನ್ನು ಎರಡು ಹೊತ್ತು ಉಣ್ಣುವವರು ಲೌಕಿಕ ಸುಖಃಗಳಿಗೆ ಒತ್ತು ಕೊಟ್ಟು ಭೋಗಿಗಳು ಎನಿಸಿಕೊಳ್ಳುತ್ತಾರ. ಇನ್ನು ಮೂರು ಹೊತ್ತು ತಿನ್ನುವವರು ತಿನ್ನುವುದರಲ್ಲಿಯೇ ಮಗ್ನರಾಗಿ ಯಾವುದೇ ಸಾಧನೆ ಮಾಡಲಾಗದೇ ರೋಗಿಗಳಾಗುವ ಸಂಭವವಿರುತ್ತದೆ. ಇನ್ನು ನಾಲ್ಕು ಹೊತ್ತು ತಿನ್ನುವವರಿಗೆ ಹೇಳುವುದೇ ಬೇಡ. ಅವರ ಗಮನವೆಲ್ಲಾ ಊಟದ ಕಡೇಯೇ ಇರುವುದರಿಂದ ಒಂದಲ್ಲಾ ಒಂದು ರೋಗಕ್ಕೆ ತುತ್ತಾಗಿ ಅತೀ ಬೇಗನೇ ಮರಣ ಹೊಂದುವ ಸಂಭವವೇ ಹೆಚ್ಚಾಗಿರುತ್ತದೆ ಎನ್ನುವುದು ಮೇಲಿನ ನಾನ್ನುಡಿಯ ಅರ್ಥ.
ಆದರೆ ನಾವು ಇಂದು ಸೇವಿಸುತ್ತಿರುವ ಆಹಾರ ನಮ್ಮ ದೇಹಕ್ಕೆ ನಿಜಕ್ಕೂ ಪೂರಕವಾಗಿರದೇ, ಮಾರಕವಾಗಿದೆ. ನಾವು ಸೇವಿಸುತ್ತಿರುವ ಆಹಾರದಲ್ಲಿ ಯಾವುದೇ ಸತ್ವವಿರದೇ ಗಿಡ ಮರಗಳಿಗೆ ಹಾಕುವ ಗೊಬ್ಬರದ ರೂಪದಲ್ಲಿ ಹಾಕುವ ರಾಸಾಯನಿಕಗಳು ತರಕಾರಿಗಳು, ಹಣ್ಣುಗಳು ದವಸ ಧಾನ್ಯಗಳೊಳಗೆ ಸೇರಿ ಅದರ ಮುಖಾಂತ ದೇಹಕ್ಕೆ ನೇರವಾಗಿ ಸೇರಿ, ಚಿಕ್ಕ ವಯಸ್ಸಿನಲ್ಲಿಯೇ ನಾನಾರೀತಿಯ ಅನಾರೋಗ್ಯಕ್ಕೆ ತುತ್ತು ಮಾಡುತ್ತಿವೆ. ಇನ್ನು ನಾವು ಬಳಸುವ ಎಣ್ಣೆಗಳು ನೈಸರ್ಗಿಕವಾಗಿದೇ, ಪೆಟ್ರೋಲಿಯಂ ಉತ್ಪನ್ನದ ತ್ರಾಜ್ಯವಾದ ಲಿಕ್ವಿಡ್ ಪ್ಯಾರಾಫೀನ್ ನೇರವಾಗಿ ನಮ್ಮ ದೇಹಕ್ಕೆ ಸೇರಿ ಸಣ್ಣ ವಯಸ್ಸಿನಲ್ಲಿಯೇ ಸಂದು ನೋವು ಕೀಲು ನೋವಿಗೆ ತುತ್ತಾಗಿ ನಡೆಯಲಾರದ ಸ್ಥಿತಿಯನ್ನು ತಲುಪಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.
ನಮ್ಮ ಸನಾತನ ಧರ್ಮದ ಋಷಿಮುನಿಗಳು ಮತ್ತು ನಮ್ಮ ಪೂರ್ವಜರು ಆಹಾರದ ಪದ್ದತಿಯ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳವರಾಗಿದ್ದು ಸಂಪ್ರದಾಯ ಮತ್ತು ಸಂಸ್ಕಾರ ರೂಪದಲ್ಲಿ ಕೆಲವೊಂದು ಆಚರಣಾ ಪದ್ದತಿಗಳನ್ನು ರೂಢಿಗೆ ತಂದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.
ನಾವು ಸೇವಿಸುವ ಆಹಾರ ರುಚಿ ರುಚಿಯಾಗಿರಬೇಕು, ಬಣ್ಣ ಬಣ್ಣದ್ದಾಗಿರಬೇಕು ಅದು ಹೊಟ್ಟೆ ತುಂಬುವಂತಿರ ಬೇಕು ಎಂದು ಬಯಸಿದಲ್ಲಿ ನಾವು ನಮ್ಮ ಕೈಯ್ಯಾರೆ ಅನಾರೋಗ್ಯವನ್ನು ತಂದುಕೊಳ್ಳುತ್ತಿದ್ದೇವೆ ಎಂದರ್ಥ.
ನಾವು ಸೇವಿಸುವ ಆಹಾರವು ಪಂಚಪ್ರಾಣಗಳಿಗೆ ಹಿತವಾಗಿ, ಶಕ್ತಿದಾಯಕವಾಗಿ ಮತ್ತು ಮಿತವಾಗಿರ ಬೇಕೇ ಹೊರತು ರುಚಿಗೆ ಪ್ರಾಮುಖ್ಯತೆ ಕೊಡುವುದಲ್ಲ.
You should earn the food ಎನ್ನುವ ಮಾತಿದೆ. ಅಂದರೆ ಅದು ಕೇವಲ ದುಡಿದು ತಿನ್ನು ಎನ್ನುವ ಮಾತಲ್ಲದೇ, ದೇಹವನ್ನು ದಂಡಿಸಿ ತಿನ್ನೂ ಎನ್ನುವ ಅರ್ಥವೂ ಬರುತ್ತದೆ.
ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ ।
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ॥
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ ।
ಜೀರ್ಣಿಸದ ಋಣಶೇಷ – ಮಂಕುತಿಮ್ಮ ॥ ೭೪೮ ॥
ಊಟ ಮಾಡಲು ಕುಳಿತಾಗ ನಿನಗೆ ನೀನು ಒಂದು ಪ್ರಶ್ನೆ ಹಾಕಿಕೊ, ಅನ್ನ ಬೇಯಿಸಿದ ನೀರು ನಿನ್ನ ದುಡಿತದ ಬೆವರಿನದೋ ಅಥವ ಅನ್ಯರ ಕಣ್ಣೀರಿನದೋ? ತಿನ್ನು ನೀನು ಜಗಕೆ ನೀಡಿದಷ್ಟು. ಹೆಚ್ಚಾದದ್ದು ಜೀರ್ಣಿಸದ ಋಣಶೇಷ. – ಮಂಕುತಿಮ್ಮ
ನಮ್ಮ ಹಿರಿಯರು ಸೇವಿಸುತ್ತಿದ್ದ ಆಹಾರ ಪದ್ದತಿ ಹೇಗಿತ್ತೆಂದರೆ, ಅವರು ಆಹಾರಕ್ಕೆ ಸರಿಸಮನಾಗಿ ಅಮೃತ ಸಮಾನವಾದ ನೀರನ್ನು ಬಳಸುತ್ತಿದ್ದರು ಅದಕ್ಕೆ ಹಾಸಿಗೆ ರೂಪವನ್ನು ಕೊಡುತ್ತಿದ್ದರು . ಅಮೃತೋಪ ಸ್ತರಣಮಸಿ ಎನ್ನುವ ಹಾಗೆ ಊಟ ಮಾಡುವ ಮೊದಲು ಸಾಕಷ್ಟು ನೀರನ್ನು ಕುಡಿದ ನಂತರ ಆಹಾರ ಸೇವಿಸಬೇಕೇ ಹೊರತು, ಊಟದ ಮಧ್ಯದಲ್ಲಿ ನೀರನ್ನು ಕುಡಿಯಬಾರದು. ಪುನಃ ಊಟವಾದ ನಂತರ ಸಾಕಷ್ಟು ನೀರನ್ನು ಕುಡಿದು ಉಪಸ್ತರಣ ಅಂದರೆ ಹೊದಿಕೆಯ ರೂಪವನ್ನು ಕೊಡುತ್ತಿದ್ದರು.
ಇನ್ನು ಋಷಿಮುನಿಗಳು ಮತ್ತು ಸನ್ಯಾಸಿಗಳು ಪ್ರತೀ ದಿನವೂ ಕೇವಲ ಐದು ತುತ್ತು ಆಹಾರ ಮಾತ್ರ ಸೇವಿಸುತ್ತಿದ್ದರು. ಇಂದಿಗೂ ಸಹಾ ಸಂನ್ಯಾಸ ದೀಕ್ಷೆ ಪಡೆದ ಅನೇಕ ಸ್ವಾಮಿಗಳು ಇದೇ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ.
ಐದು ಪ್ರಾಣಗಳಿಗೆ ಒಂದೊಂದು ತುತ್ತಿನ ರೂಪದಲ್ಲಿ ಐದು ತುತ್ತು ಆಹಾರವನ್ನು ಸೇವಿಸ ಬೇಕು. ಹಾಗೇ ಪ್ರತೀ ತುತ್ತನ್ನು ಸೇವಿಸುವಾಗಲೂ ಆಯಾಯಾ ಪ್ರಾಣ ದೇವತೆಗಳಿಗೆ ನಮಸ್ಕರಿಸಿ ಆ ತುತ್ತನ್ನು ಸ್ವೀಕರಿಸಬೇಕು.
ಈ ಐದು ತುತ್ತುಗಳೆಂದರೆ,
- ಪ್ರಾಣಾಯ ಸ್ವಾಹಾ,
- ಅಪಾನಾಯ ಸ್ವಾಹಾ,
- ವ್ಯಾನಾಯ ಸ್ವಾಹಾ,
- ಉದಾನಾಯ ಸ್ವಾಹಾ
- ಸಮಾನಾಯ ಸ್ವಾಹಾ ಎಂದು ಹೇಳುತ್ತಾ ಐದು ತುತ್ತು ಸ್ವೀಕರಿಸುತ್ತಾರೆ. ದೇವರ ಪೂಜೆ ಮಾಡುವಾಗ ದೇವರಿಗೆ ನೈವೇದ್ಯವನ್ನು ಅರ್ಪಿಸುವಾಗಲೂ ಇದೇ ಐದು ಮಂತ್ರಗಳನ್ನು ಉಚ್ಚರಿಸಿಸುತ್ತೇವೆ.
ಇನ್ನು ಆವರು ಸೇವಿಸುವ ಐದು ತುತ್ತು ಅನ್ನವು ಸಂಪೂರ್ಣವಾಗಿ ಸಾತ್ವಿಕವಾಗಿದ್ದು ಆ ಐದು ತುತ್ತು ಅನ್ನಕ್ಕೆ ಒಳ್ಳೆಯ ದೇಸೀ ಹಸುವಿನ ತುಪ್ಪವನ್ನು ಸೇರಿಸಿ ಉಪ್ಪು, ಹುಳಿ ಖಾರ ಏನು ಇಲ್ಲದೆ ಹಾಗೆ ಸೇವಿಸುತ್ತಿದ್ದರು. ಸ್ವಾಹಾ ಎಂದರೆ ನಮಸ್ಕಾರ ಎಂದರ್ಥ. ಹೀಗೆ ಪ್ರಾಣಗಳನ್ನು ನೆನೆಸಿಕೊಳ್ಳುತ್ತಾ ಅವರಿಗೆ ನಮಸ್ಕರಿಸುತ್ತಾ ಒಂದೊಂದು ತುತ್ತನ್ನು ಸೇವಿಸುತ್ತಾ ನಿಜವಾದ ಅಗ್ನಿಹೋತ್ರವನ್ನು ಪಾಲಿಸುತ್ತಿದ್ದರು. ಇಷ್ಟೇ ಅವರ ದೈನಂದಿನ ಆಹಾರವಾಗಿರುತ್ತಿತ್ತು. ಆದರೆ ಕಾಲ ಬದಲಾದ ನಂತರ ಈ ಐದು ತುತ್ತುಗಳು ಸಾಂಕೇತಿಕವಾಗಿ ಐದು ಅಗುಳುಗಳಾಗಿ ಮಾರ್ಪಟ್ಟು ಚಿತ್ರಾವತಿಯ ಸಮಯದಲ್ಲಿ ಮೊದಲು ಐದು ಅಗುಳನ್ನು ಸ್ವೀಕರಿಸಿ ನಂತರ ಮೃಷ್ಟಾನ್ನ ಭೋಜನ ಮಾಡುವ ಪದ್ದತಿ ರೂಢಿಗೆ ಬಂದಿದೆ.
ಇನ್ನು ಆ ಐದು ತುತ್ತಿನ ಮಹತ್ವವೇನು ಎಂಬುದನ್ನು ಕೂಲಂಕುಶವಾಗಿ ತಿಳಿಯೋಣ.
ನಾವು ಮಾಡುವ ಊಟವೆಂದರೆ ಅದು ಯಜ್ಞಕ್ಕೆ ಆಹುತಿ ನೀಡಿದಂತೆ
ಮೊದಲನೆಯ ತುತ್ತು ಪ್ರಾಣಾಯ ಸ್ವಾಹಾ
ಈ ಆಹುತಿಯನ್ನು ಪ್ರಾಣದೇವತೆಗೆ ಅರ್ಪಣೆ , ಪ್ರಾಣ ದೇವತೆಯೂ ತೃಪ್ತಿ ಪಡುತ್ತದೆ ಪ್ರಾಣವು ತೃಪ್ತಿಪಟ್ಟಾಗ ಶರೀರದಲ್ಲಿರುವ ಕಣ್ಣುಗಳು ತೃಪ್ತಿ ಪಡುತ್ತವೆ ಕಣ್ಣುಗಳ ಲೋಕ ದೇವತೆಯಾದ ಸೂರ್ಯದೇವನು ತೃಪ್ತಿ ಪಡುತ್ತಾನೆ ಸೂರ್ಯನು ತೃಪ್ತನಾದಾಗ ಸೂರ್ಯನಿರುವ ದ್ಯುಲೋಕವೇ ತೃಪ್ತವಾಗುತ್ತದೆ . ದ್ಯುಲೋಕ ತೃಪ್ತ ವಾದಾಗ ಸೂರ್ಯ ಮತ್ತು ದ್ಯು ಲೋಕ ಆಶ್ರಯ ನೀಡಿದ ಎಲ್ಲವೂ ತೃಪ್ತ ವಾಗುತ್ತದೆ.
ಎರಡನೆಯ ತುತ್ತು ವ್ಯಾನಾಯ ಸ್ವಾಹಾ
ಎಂದು ಹೇಳುವ ಮೂಲಕ ಆಹಾರವನ್ನು ಬಾಯಿಯಲ್ಲಿ ಹೋಮ ಮಾಡಿದಾಗ ಶರೀರದಲ್ಲಿರುವ ವ್ಯಾನವು ತೃಪ್ತಿಯಾಗುತ್ತದೆ ,ವ್ಯಾನವು ತೃಪ್ತಿ ಪಟ್ಟಾಗ ಶರೀರದಲ್ಲಿರುವ ಕಿವಿಗಳು ತೃಪ್ತಿ ಪಡುತ್ತವೆ . ಕಿವಿಗಳು ತೃಪ್ತಿ ಪಟ್ಟಾಗ ಕಿವಿಗಳ ಲೋಕ ದೇವತೆಯಾದ ಸೋಮರಾಜನು ತೃಪ್ತಿ ಪಡುತ್ತಾನೆ ಸೋಮ ದೇವತೆ ತೃಪ್ತಿ ಗೊಂಡಾಗ ದೂರಪ್ರದೇಶದ ದಿಗ್ದೇವತೆಗಳು ತೃಪ್ತಿ ಪಡುತ್ತಾರೆ. ಆಗ ಸೋಮದೇವತೆ ಮತ್ತು ದಿಗ್ ದೇವತೆಗಳು ಆಶ್ರಯ ನೀಡಿದ ಎಲ್ಲವೂ ತೃಪ್ತ ವಾಗುತ್ತವೆ.
ಮೂರನೆಯ ತುತ್ತು ಅಪಾನಾಯ ಸ್ವಾಹಾ
ಎಂದು ಹೇಳುತ್ತಾ ಬಾಯಿಯಲ್ಲಿ ಆಹಾರವನ್ನು ಆಹುತಿ ನೀಡಿದಾಗ ಶರೀರದಲ್ಲಿರುವ ಅಪಾನ ದೇವತೆಯ ತೃಪ್ತಿ ಪಡುತ್ತದೆ ಶರೀರದಲ್ಲಿರುವ ವಾಕ್ ತೃಪ್ತಿ ಪಡುತ್ತದೆ. ವಾಕ್ ತೃಪ್ತಿಪಟ್ಟಾಗ ಲೋಕ ದೇವತೆಯಾದ ನಮ್ಮಭೂಮಿ ಎಂಬ ಅಗ್ನಿ ಖಂಡವು ತೃಪ್ತಿ ಪಡುತ್ತದೆ. ಭೂಮಿ ತೃಪ್ತ ವಾದಾಗ ಇಡಿಯ ದ್ಯುಲೋಕದಲ್ಲಿರುವ ಸಮಸ್ತ ಭೂಮಿಗಳು ತೃಪ್ತಿ ಪಡುತ್ತವೆ. ಆಗ ನಮ್ಮ ಭೂಮಿ ಮತ್ತು ಜಗತ್ತಿನ ಎಲ್ಲ ಭೂಮಿಗಳು ಯಾವುದಕ್ಕೆಲ್ಲ ಆಶ್ರಯ ನೀಡಿದ್ದಾವೆಯೋ ಅವೆಲ್ಲಕ್ಕೂ ತೃಪ್ತಿ ಲಭಿಸುತ್ತದೆ.
ನಾಲ್ಕನೆಯ ತುತ್ತು ಸಮಾನಾಯ ಸ್ವಾಹಾ
ಎಂದು ಹೇಳುತ್ತಾ ಆಹಾರವನ್ನು ಬಾಯಿಯಲ್ಲಿ ಹೋಮ ಮಾಡಿದಾಗ ಶರೀರದಲ್ಲಿರುವ ಸಮಾನ ದೇವತೆಯು ತೃಪ್ತಿ ಪಡುತ್ತದೆ ಆಗ ಶರೀರದಲ್ಲಿರುವ ಮನಸ್ಸು ತೃಪ್ತಿ ಪಡುತ್ತದೆ ಮನಸ್ಸು ತೃಪ್ತವಾದಾಗ ಇಂದ್ರ ಶಕ್ತಿಯ ಪರ್ಜನ್ಯ ಎಂಬ ಲೋಕ ದೇವತೆಗೆ ತೃಪ್ತಿಯಾಗುತ್ತದೆ ಪರ್ಜನ್ಯವು ತೃಪ್ತಿ ಆದಾಗ ಇಡಿಯ ದ್ಯುಲೋಕವನ್ನೇ ವ್ಯಾಪಿಸಿದ ವಿದ್ಯುತ್ತು ತೃಪ್ತ ವಾಗುತ್ತದೆ . ಆಗ ಪರ್ಜನ್ಯ ಮತ್ತು ವಿದ್ಯುತ್ತನ್ನು ಆಶ್ರಯಿಸಿದ ಎಲ್ಲವೂ ತೃಪ್ತಿಗೊಳ್ಳುತ್ತದೆ.
ಐದನೆಯ ತುತ್ತು ಉದಾನಾಯ ಸ್ವಾಹಾ
ಎಂದು ಹೇಳುತ್ತಾ ಆಹಾರವನ್ನು ಬಾಯಿಯಲ್ಲಿ ಹೋಮ ಮಾಡಿದಾಗ ನಮ್ಮ ಶರೀರದಲ್ಲಿರುವ ಉದಾನವು ತೃಪ್ತ ವಾಗುತ್ತದೆ ಆಗ ಶರೀರದಲ್ಲಿರುವ ಚರ್ಮವು ತೃಪ್ತವಾಗುತ್ತದೆ . ಚರ್ಮ ತೃಪ್ತಿ ಗೊಂಡಾಗ ಅದರ ಲೋಕ ದೇವತೆಯಾದ ವಾಯುವು ಪ್ರಾಪ್ತವಾಗುತ್ತದೆ. ವಾಯು ತೃಪ್ತಿಗೊಂಡಾಗ ಆಕಾಶವು ತೃಪ್ತಿ ತಾಳುತ್ತದೆ ಆಗ ವಾಯು ಮತ್ತು ಆಕಾಶಗಳು ಆಶ್ರಯ ನೀಡಿದ ಎಲ್ಲದಕ್ಕೂ.
ಈ ಐದು ಪಂಚಪ್ರಾಣದ ಕೆಲಸವೇನೆಂದರೆ,
- ಪ್ರಾಣ: ಉಸಿರನ್ನು ತಿಳಿದುಕೊಳ್ಳುವುದು ,ಇದು ನಮ್ಮ ಅಳಿವು ಉಳುವಿಗಾಗಿ
- ಅಪಾನ : ಉಸಿರನ್ನು ವಿಸರ್ಜಿಸುವುದು ಅಪಾನ ಶರೀರದ ಎಲ್ಲ ಬಗೆಯ ವಿಸರ್ಜನವು ಅಪಾನ
- ವ್ಯಾನ : ಉಸಿರನ್ನು ಬಿಗಿ ಹಿಡಿಯುವುದು ವ್ಯಾನ ,ನಮ್ಮ ದೇಹ ಕಷ್ಟದ ಕೆಲಸವನ್ನು ಮಾಡುವಾಗ ನಮಗೆ ಉಸಿರು ಬಿಗಿ ಹಿಡಿದು ಸಹಾಯ ಮಾಡುತ್ತದೆ
- ಉದಾನ: ದೇಹದ ಕಾಂತಿ , ಉತ್ಸಾಹದ ಭಾವನೆ ಜ್ಞಾನ ಸಾಧನ ಇವೆಲ್ಲವೂ ಉದಾನದ ಕಾರ್ಯ ,ಶಕ್ತಿ ಸಂಚಯ ಕೂಡಾ
- ಸಮಾನ: ನಾವು ತಿಂದ ಆಹಾರತಿಂದ ಅನ್ನರಸವನ್ನು ಶರೀರದ ಎಲ್ಲ ಅವಯವಗಳ ಜೀವಕಣಗಳಿಗೆ ಸಮಾನ ವಿತರಣೆ ಮಾಡುವ ಶಕ್ತಿಯೇ ಸಮಾನ ಇವೇ ನಮ್ಮ ಶರೀರದಲ್ಲಿರುವ ಪಂಚ ಪ್ರಾಣಗಳು
ಈ ಐದು ತುತ್ತುಗಳ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ಊಟಕ್ಕೆ ಕುಳಿತಾಗ ಮೊದಲು ಐದು ತುತ್ತನ್ನು ದೇಹಕ್ಕೆ ಆಹುತಿಯಾಗಿ ಅನ್ನಕ್ಕೆ ತುಪ್ಪ ಕಲಿಸಿ ತಿನ್ನುವುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹಿತ ಮಿತವಾಗಿ ಆಹಾರವನ್ನು ಸ್ವೀಕರಿಸಿ ಆರೋಗ್ಯಕವಾಗಿ ಸಂತೃಪ್ತ ಜೀವನ ಮತ್ತು ದೀರ್ಘಾಯಸ್ಸನ್ನು ಪಡೆಯುವಂತಾಗೋಣ.
ಇನ್ನು ಲಂಘನಂ ಪರಮೌಷಧಂ ಎಂಬುದನ್ನು ಸಾಧಾರಣವಾಗಿ ನಮ್ಮ ಮನೆಗಳಲ್ಲಿ ನಮ್ಮ ಹಿರಿಯರು ಆಡುವುದನ್ನು ಕೇಳಿರುತ್ತೇವೆ. ಈ ವಾಕ್ಯ ಕೇವಲ ಪರಿಹಾಸ್ಯವಲ್ಲದೇ, ವಾಸ್ತವಿಕವಾಗಿ ಕಟು ಸತ್ಯದ ಮಾತಾಗಿದೆ. ಉಪವಾಸವಿರುವುದು ನಮ್ಮ ದೇಹಾರೋಗ್ಯಕ್ಕೆ ಪೂರಕವಾದ ಒಂದು ಪ್ರಕ್ರಿಯೆ. ಹಾಗಾಗಿಯೇ ನಮ್ಮ ಪೂರ್ವಜರು ನಿಯಮಿತವಾಗಿ ಉಪವಾಸಗಳನ್ನು ವೃತಾಚರಣೆಯ ರೂಪಗಳಲ್ಲಿ ರೂಢಿಗೆ ತಂದಿದ್ದರು. ಏಕಾದಶಿ, ಸಂಕಷ್ಟ ಹರ ಚರ್ತುರ್ಥಿಯಂದು ನಿಟ್ಟುಪವಾಸ. ನವರಾತ್ರಿ, ಸೋಮವಾರ, ಶುಕ್ರವಾರ, ಶನಿವಾರಗಳಂದು ಒಪ್ಪತ್ತು ಊಟ ಮಾಡುವ ಪದ್ದತಿ ಇಂದಿಗೂ ಹಲವರ ಮನೆಗಳಲ್ಲಿ ರೂಢಿಯಲ್ಲಿದೆ.
ಈ ರೀತಿಯಾಗಿ ಉಪವಾಸ ಮಾಡುವುದು ಮೇಲ್ನೋಟಕ್ಕೆ ಮೌಢ್ಯವಾಗಿ ಕಂಡರೂ ಇದು ನಿಜಕ್ಕೂ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಹೊಂದಿದೆ ಎಂಬುದಾಗಿ ವೈಜ್ಞಾನಿಕವಾಗಿಯೂ ಸಾಭೀತಾಗಿದೆ. ಹಲವು ರೋಗಗಳಿಗೆ ಉಪವಾಸವೇ ದಿವ್ಯೌಷಧ. ಅದರಲ್ಲೂ ಅಜೀರ್ಣ ಸಂಬಂಧದ ಸಮಸ್ಯೆಗಳಿಗೆ ಉಪವಾಸ ಇಲ್ಲವೇ ಮಿತ ಆಹಾರ ಅನಿವಾರ್ಯವೇ ಸರಿ. ವಾರಕ್ಕೊಮ್ಮೆಯೋ ಅಥವಾ ಹದಿನೈದು ದಿನಕ್ಕೊಮ್ಮೆಯೋ ಇಲ್ಲವೇ ವಿಶೇಷ ದಿನಗಳಂದು ಉಪವಾಸ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಚನ ಕ್ರಿಯೆಗೆ ಸಹಕಾರಿಯಲ್ಲದೇ ಉಪವಾಸ ಮಾಡಿ ದೇಹ ಬಳಲಿ ನಿತ್ರಾಣ ಸ್ಥಿತಿಗೆ ತಲುಪಿದಾಗ ದೇಹದ ಸಮತೋಲನ ಕಾಪಾಡಿಕೊಳ್ಳಲು ಈಗಾಲೇ ನಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಹೆಚ್ಚಾಗಿ ಶೇಖರಣೆಯಾಗಿದ್ದ ಕೊಬ್ಬಿನ ಅಂಶ ಕರಗುವುದರ ಮೂಲಕ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅದೇ ರೀತಿ ದೇಹದಲ್ಲಿರುವ ಮಲಿನ ವಸ್ತುಗಳನ್ನು ದೇಹ ಹೊರ ಹಾಕುತ್ತದೆ. ಉಪವಾಸ ಮಾಡುವುದು ಆರಂಭದಲ್ಲಿ ತುಸು ತ್ರಾಸ ಎನಿಸಿದರೂ ಕ್ರಮೇಣ ಅಭ್ಯಾಸವಾದಂತೆಲ್ಲಾ ದೇಹ ಅದಕ್ಕೆ ಹೊಂದಿಕೊಳ್ಳುವ ಮುಖಾಂತರ ಸಹಜ ಪ್ರಕ್ರಿಯೆಯಾಗುತ್ತದೆ.
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವಿಸುವುದು ಮಾರಕ ಹಾಗಾಗಿ ಯಾವಾಗಲೂ ಮಿತವಾಗಿಯೇ ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳೋಣ. ಅಕಸ್ಮಾತ್ ಹಬ್ಬ ಹರಿದಿನಗಳು, ಶ್ರಾದ್ಧ ಕರ್ಮಾದಿ ದಿನಗಳಂದು ಬಾಯಿ ಚಪಲಕ್ಕೆ ಹೆಚ್ಚಿನ ಆಹಾರ ಸೇವಿಸಿದಲ್ಲಿ ರಾತ್ರಿ ಹೊತ್ತಿನ ಊಟವನ್ನು ಬಿಡುವುದರ ಮೂಲಕವೋ ಇಲ್ಲವೇ ಲಘು ಆಹಾರವನ್ನು ಸೇವಿಸುವ ಮೂಲಕವೋ ಸಮತೋಲನವನ್ನು ಪಡೆದುಕೊಳ್ಳಬಹುದಾಗಿದೆ. ಆಹಾರವೆಂದರೆ ಕೇವಲ ಅಕ್ಕಿ, ರಾಗಿ, ಗೋಧಿಗಳಿಗೇ ಮೀಸಲಾಗಿಡದೇ, ನಿಯಮಿತವಾಗಿ ಹಣ್ಣು ಹಂಪಲುಗಳು, ಹಸೀ ತರಕಾರಿಗಳು ಮತ್ತು ದ್ರವಾಹಾರಗಳನ್ನೂ ಸೇವಿಸುವ ಪದ್ದತಿಯನ್ನು ರೂಢಿಮಾಡಿಕೊಳ್ಳಬೇಕು. ಇನ್ನು ನಾವು ಸೇವಿಸುವ ಆಹಾರಕ್ಕೆ ಸರಿಸಮನಾಗಿ ನಿಯಮಿತವಾಗಿ ವ್ಯಾಯಾಮಗಳನ್ನಾಗಲೀ ಇಲ್ಲವೇ ಯೋಗಸನ ಮಾಡುವುದೂ ಸಹಾ ನಮ್ಮ ಸಧೃಢ ಆರೋಗ್ಯಕ್ಕೆ ಪೂರಕವಾಗುತ್ತದೆ. ಹಾಗಾಗಿ ಇನ್ನು ತಡಾ ಮಾಡದೇ, ಹಿತ ಮಿತ ಆಹಾರ ಪದ್ದತಿಯನ್ನು ಇಂದಿನಿಂದಲೇ ರೂಢಿಗೆ ತರೋಣ ಸಧೃಢರಾಗಿ ದೀರ್ಘಾಯಸ್ಸನ್ನು ಪಡೆಯುವಂತವರಾಗೋಣ.
ಏನಂತಿರೀ?
ನಿಮ್ಮವನೇ ಉಮಾಸುತ
ಸೂಚನೆ: ಗೆಳೆಯ ನರಹರಿ ವಾಟ್ಸಾಪ್ಪಿನಲ್ಲಿ ಶ್ರೀಯುತ ಪದ್ಮನಾಭ ಭಟ್ ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ವೀಣಾ ಜೋಶಿಯವರು ಬರೆದಿದ್ದ ಈ ಲೇಖನವನ್ನು ಕಳುಹಿಸಿದ್ದ. ಲೇಖನದ ವಿಷಯ ಬಹಳ ಮಹತ್ವ ಪೂರ್ಣವಾಗಿದ್ದ ಕಾರಣ. ಮೂಲ ಲೇಖನಕ್ಕೆ ನನ್ನ ವಯಕ್ತಿಕ ಅನುಭವದ ಮೂಲಕ ನನ್ನದೇ ಶೈಲಿಯಲ್ಲಿ ವ್ಯಾಖ್ಯಾನ ಬರೆದಿದ್ದೇನಾದರೂ ಇದರ ಸಂಪೂರ್ಣ ಶ್ರೇಯ ಮೂಲ ಲೇಖಕರಿಗೇ ಸಲ್ಲುತ್ತದೆ.
ಧನ್ಯವಾದಗಳು 🙏 ಆಹಾರ ಪದ್ಧತಿ ಮತ್ತು ಆನುಮಾರ್ಗಿಕ ಆಹಾರ ಸೇವನೆಯ ವೈಚಾರಿಕತೆ ಮತ್ತು ವೈಶಿಷ್ಟ್ಯಗಳನ್ನು ಸವಿವರವಾಗಿ ತಿಳಿಸಿದ್ದೀರಿ. ಮಂತ್ರಾಲಯದ ರಾಯರ ಸೇವಕರ ವಾಟ್ಸಾಪ್ ಗ್ರೂಪ್ ನಲ್ಲಿ ಸ್ನೇಹಿತರೊಬ್ಬರು ನೀನು ಉಲ್ಲೇಖಿಸಿದ ಈ ಲೇಖನವನ್ನು ಹಂಚಿಕೊಂಡಿದ್ದರು ಅದನ್ನೇ ನಿನಗೆ ಕಳುಹಿಸಿದ್ದೆ. ಇಲ್ಲಿ ನನ್ನ ಪಾತ್ರ ಚಿಕ್ಕದು.
LikeLiked by 1 person