ಉತ್ತರ ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯವನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 10-12 ಬಟ್ಟಲು ಕಡುಬುಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
• ಜೋಳದ ಹಿಟ್ಟು – 1 ಬಟ್ಟಲು
• ಜೀರಿಗೆ – 1/2 ಚಮಚ
• ಚಿಟುಕೆ ಇಂಗು
• ರುಚಿಗೆ ತಕ್ಕಷ್ಟು ಉಪ್ಪು
ಬಟ್ಟಲು ಕಡುಬುಗಳನ್ನು ತಯಾರಿಸುವ ವಿಧಾನ :
- ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿಕೊಳ್ಳಿ
- ಜೋಳದ ಹಿಟ್ಟಿಗೆ, ಜೀರಿಗೆ,ಚಿಟುಕಿ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದಕ್ಕೆ ಬಿಸಿನೀರನ್ನು ಸೇರಿಸಿಕೊಂಡು ರೊಟ್ಟಿ ಹಿಟ್ಟಿನ ಹದಕ್ಕೆ ಬರುವಂತೆ ಕಲೆಸಿಕೊಳ್ಳಿ.
- ಕಲೆಸಿಕೊಂಡ ಹಿಟ್ಟನ್ನು ಚೆನ್ನಾಗಿ ನಾದಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ
- ಸಣ್ಣ ಉಂಡೆಗಳನ್ನು ಕೈಗಳಲ್ಲಿ ತಂಬಿಟ್ಟು ಬಟ್ಟಲು ಮಾಡಿಕೊಳ್ಳುವಂತೆ ಮಾಡಿಕೊಂಡು ಕುದಿಯುತ್ತಿರುವ ನೀರಿನಲ್ಲಿ ಮೂರ್ನಾಲ್ಕು ನಿಮಿಷಗಳಷ್ಟು ಬೇಯಿಸಿದಲ್ಲಿ ಬಟ್ಟಲು ಕಡುಬು ಸಿದ್ಧ.
ಮುದ್ದಿ ಪಲ್ಯ ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
- ಕಡಲೇ ಕಾಯಿ ಬೀಜ – 1 ಬಟ್ಟಲು
- ತೊಗರೀ ಬೇಳೆ – 1 ಬಟ್ಟಲು
- ಕಡಲೇ ಹಿಟ್ಟು – 1 ಬಟ್ಟಲು
- ಪುಡಿ ಮಾಡಿದ ಬೆಲ್ಲ – 1/4 ಬಟ್ಟಲು
- ಜೀರಿಗೆ – 1/2 ಚಮಚ
- ಹುಣಸೇ ಹಣ್ಣು – 2 ಚಮಚ
- ಮೆಂತ್ಯದ ಸೊಪ್ಪು – 1 ಬಟ್ಟಲು
- ಕಾಯಿ ತುರಿ – 1 ಬಟ್ಟಲು
- ಹಸೀ ಮೆಣಸಿನಕಾಯಿ – 3-4
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವಂತಹ ಸಾಮಗ್ರಿಗಳು
• ಅಡುಗೆ ಎಣ್ಣೆ – ೩-೪ ಚಮಚ
• ಸಾಸಿವೆ – 1/2 ಚಮಚ
• ಚಿಟುಕೆ ಇಂಗು
ಮುದ್ದಿ ಪಲ್ಯವನ್ನು ತಯಾರಿಸುವ ವಿಧಾನ :
- ಕುಕ್ಕರಿನಲ್ಲಿ ತೊಳೆದ ಮೆಂತ್ಯದ ಸೊಪ್ಪು ತೊಗರೀಬೇಳೆ ಮತ್ತು ಕಡಲೇಕಾಯಿ ಬೀಜವನ್ನು ಹಾಕಿ ಸುಮಾರು ಮೂರು ಸೀಟಿ ಬರುವಷ್ಟು ಹೊತ್ತು ಬೇಯಿಸಿಕೊಳ್ಳಬೇಕು.
- ಕಾಯಿ ತುರಿ, ಹಸೀಮೆಣಸಿನಕಾಯಿ ಮತ್ತು ಜೀರಿಗೆಯನ್ನು ಮಿಕ್ಸಿಯಲ್ಲಿ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
- ಹುಣಸೇ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟುಕೊಂಡು ಹುಣಸೇ ಹುಳಿಯನ್ನು ತಯಾರಿಸಿ ಅದಕ್ಕೆ ಕಡಲೇ ಹಿಟ್ಟನ್ನು ಗಂಟಿಲ್ಲದಂತೆ ಕಲೆಸಿಕೊಂಡು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಂಡಿದ್ದರ ಜೊತೆಗೆ ಸೇರಿಸಿಕೊಳ್ಳಬೇಕು
- ಈಗ ಕುಕ್ಕರಿಗೆ ಬೆಲ್ಲವನ್ನು ಸೇರಿಸಿ ಒಂದು ಕುದಿ ಬರುತ್ತಿದ್ದಂತಯೇ ಅದಕ್ಕೆ ರುಬ್ಬಿಟ್ಟುಕೊಂಡಿದ್ದ ಮಿಶ್ರಣವನ್ನು ಸೇರಿಸಬೇಕು
- ಕುದಿಯುತ್ತಿರುವ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದಕ್ಕೆ ಮತ್ತೊಂದು ಬಾಣಲೆಯಲ್ಲಿ ಬ್ಯಾಡಿಗೆ ಮೆಣಸಿನಕಾಯಿ, ಸಾಸಿವೆ ಮತ್ತು ಇಂಗನ್ನು ಸೇರಿಸಿ ಮಾಡಿಟ್ಟು ಕೊಂಡಿದ್ದ ಒಗ್ಗರಣೆಯನ್ನು ಸೇರಿಸಿ ನಾಲ್ಕೈದು ನಿಮಿಷಗಳಷ್ಟು ಕುದಿಸಿದಲ್ಲಿ ರುಚಿ ರುಚಿಯಾದ, ಬಿಸಿಬಿಸಿಯಾದ ಮುದ್ದಿ ಪಲ್ಯ ಸವಿಯಲು ಸಿದ್ದ.
ಆದಾಗಲೇ ಸಿದ್ದ ಪಡಿಸಿಟ್ಟು ಕೊಂಡಿದ್ದ ಬಟ್ಟಲು ಕಡುಬಿನೊಂದಿಗೆ ಬಿಸಿ ಬಿಸಿ ಮುದ್ದಿ ಪಲ್ಯ ನೆಂಚಿಕೊಂಡು ತಿನ್ನಲು ಬಲು ಮಜವಾಗಿರುತ್ತದೆ.
ಬಿಸಿ ಬಿಸಿಯಾದ ಮುದ್ದಿ ಪಲ್ಯದೊಂದಿಗೆ ಬಟ್ಟಲು ಕಡುಬನ್ನು ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಉತ್ತರ ಕರ್ನಾಟಕದ ಸಾಂಪ್ರದಾಯಕ ಅಡುಗೆಯಾದ ಬಟ್ಟಲು ಕಡುಬನ್ನು ಕೇವಲ ತಿಂಡಿಯಾಗಿ ಅಲ್ಲದೇ ಶ್ರಾವಣ ಮಾಸದ ಶನಿವಾರದಂದು ಲಕ್ಷ್ಮೀಪೂಜೆಯ ಸಮಯದಲ್ಲಿ ನೈವೇದ್ಯಕ್ಕೂ ಬಳೆಸುತ್ತಾರೆ. ಈ ಬಟ್ಟಲು ಕಡುಬು ಯಾವುದೇ ಎಣ್ಣೆ ಬಳೆಸದೇ ಕೇವಲ ನೀರಿನಲ್ಲಿಯೇ ಬೇಯಿಸುವುದರಿಂದ ಇದು ಆರೋಗ್ಯಕರವೂ ಹೌದು. ಇನ್ನು ಮುದ್ದೀ ಪಲ್ಯ ಜೋಳದ ರೊಟ್ಟಿ ಇಲ್ಲವೇ ಅನ್ನದ ಜೊತೆಯೂ ತಿನ್ನಲು ಮಜವಾಗಿರುತ್ತದೆ.
ಈ ಆಹಾರ ವಿಧಾನವನ್ನು ತಿಳಿಸಿಕೊಟ್ಟ ಬೆಂಗಳೂರಿನ ಹೆಸರುಘಟ್ಟದ ಶ್ರೀಮತಿ ಮುಕ್ತಾ ಕುಲಕರ್ಣಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
#ಅನ್ನಪೂರ್ಣ
#ಬಟ್ಟಲುಕಡುಬು
#ಮುದ್ದಿಪಲ್ಲೆ
#ಏನಂತೀರೀ