ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅನೇಕ ಕ್ರಾಂತಿಕಾರಿಗಳ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ಗೆದ್ದಲು ಶ್ರಮವಹಿಸಿ ಕಟ್ಟಿದ ಹುತ್ತದಲ್ಲಿ ಹಾವು ಸೇರಿಕೊಳ್ಳುವಂತೆ ಅಂದಿನ ಬಹುತೇಕ ಕಾಂಗ್ರೇಸ್ ನಾಯಕರ ವಿರೋಧದ ನಡುವೆಯೂ ಮಹಾತ್ಮಾಗಾಂಧಿಯವರ ಮೇಲೆ ಒತ್ತಡ ಹೇರಿದ ನೆಹರು ಸ್ವತ್ರಂತ್ರ್ಯ ಭಾರತದ ಪ್ರಪ್ರಥಮ ಪ್ರಧಾನಿಯಾದದ್ದು ಈಗ ಇತಿಹಾಸ. ಸ್ವತಂತ್ರ್ಯ ಬಂದಾಗಲಿಂದಲೂ ತೊಂಬತ್ತರ ದಶಕದವರೆಗೂ ನೆಹರೂ ಕುಟುಂಬವೇ ನಕಲಿ ಗಾಂಧಿ ಹೆಸರಿನಲ್ಲಿ ಅಧಿಕಾರವನ್ನು ಅನುಭವಿಸಿ ನಂತರ ಮೂರು ಅವಧಿಗಳಲ್ಲಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಹಿಂಬದಿಯ ಆಡಳಿತ ನಡೆಸಿ ದೇಶವನ್ನು ಕೊಳ್ಳೆ ಹೊಡೆದದ್ದು ಎಲ್ಲರಿಗೂ ತಿಳಿದ ವಿಷಯ. ಹಗರಣ ಮತ್ತು ಕಾಂಗ್ರೇಸ್ ಎರಡೂ ಒಂದು ರೀತಿಯ ಸಮಾನಾಂತರ ಅರ್ಥಬರುವ ಪದಗಳು ಎಂದರೂ ತಪ್ಪಾಗಲಾರದು. ಈ ದೇಶದಲ್ಲಿ ನಡೆದ ಹಗರಣಗಳಲ್ಲಿ ನೆಹರು ಮತ್ತವರ ನಕಲೀ ಗಾಂಧೀ ಕುಟುಂಬದ ಕೈವಾಡವನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಮುಂಡ್ರಾ ಹಗರಣ – 1951
ಕಲ್ಕತ್ತಾದ ಕೈಗಾರಿಕೋದ್ಯಮಿ ಹರಿದಾಸ್ ಮುಂಡ್ರಾ ಪ್ರಕರಣ ಸ್ವತಂತ್ರ ಭಾರತದಲ್ಲಿ ಬೆಳಕಿಗೆ ಬಂದ ಮೊತ್ತ ಮೊದಲ ದೊಡ್ಡ ಹಗರಣವೆಂದು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಈ ಹಗರಣದಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರೂ ಅವರ ಕೈವಾಡವಿತ್ತು ಎಂದೂ ನಂಬಲಾಗಿದೆ. ಎಲ್‌ಐಸಿ ಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ಒಂದು ಕೋಟಿಗೂ ಅಧಿಕ ಹಣವನ್ನು ಸರ್ಕಾರ ಮುಂದ್ರಾ ಒಡೆತನದ ಖಾಸಗೀ ಕಂಪೆನಿಯ ಷೇರುಗಳನ್ನು ಅವುಗಳ ಮೌಲ್ಯಕ್ಕಿಂತ ಹೆಚ್ಚಿಗೆ ಹಣ ಪಾವತಿಸಿ ಕೊಂಡು ಕೊಳ್ಳುವ ಮೂಲಕ ಎಲ್‌ಐಸಿಗೆ ಅಂದಿನ ಕಾಲದಲ್ಲಿಯೇ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿತ್ತು. ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಅಳಿಯ ಮತ್ತು ಮಾಜೀ ಪ್ರಧಾನಿ ಇಂದಿರಾ ಗಾಂಧಿಯವರ ಪತಿಯಾಗಿದ್ದ ಫಿರೋಜ್ ಗಾಂಧಿಯವರೇ ಈ ಪ್ರಕರಣವನ್ನು ಬಹಿರಂಗಪಡಿಸಿದರು. ನೆಹರೂ ಬಲಗೈ ಭಂಟರಾಗಿದ್ದ ಅಂದಿನ ಹಣಕಾಸು ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರ ಹೆಸರು ಈ ಪ್ರಕರಣದ ಕಳಂಕಿತರಲ್ಲಿ ಪ್ರಮುಖವಾಗಿ ಕೇಳಿಬಂದ ಕಾರಣ ನೆಹರು ಅವರು ಈ ಪ್ರಕರಣವನ್ನು ಬಹಳ ಗೌಪ್ಯವಾಗಿ ವ್ಯವಹರಿಸಲು ಬಯಸಿದ್ದರಾದರೂ ಅದು ಫಲಕಾರಿಯಾಗದೇ ಅಂತಿಮವಾಗಿ ಟಿ.ಟಿ.ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡುವುದರ ಮೂಲಕ ಆ ಪ್ರಕರಣ ಹಳ್ಳ ಹಿಡಿಯಿತು.
ನಾಗರ್ವಾಲಾ ಹಗರಣ – 1971
ಮಾಜಿ ಸೇನಾ ನಾಯಕ ರುಸ್ತೋಮ್ ಸೊಹ್ರಾಬ್ ನಗರ್ವಾಲಾ, ಹೊಸದಿಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್‍ನಲ್ಲಿರುವ ಬೃಹತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮೇ 24, 1971 ರಂದು ಶ್ರೀಮತಿ ಇಂದಿರಾ ಗಾಂಧಿಯವರ ಕಚೇರಿಯಿಂದ ಕರೆಮಾಡಿ ಬಾಂಗ್ಲಾದೇಶದ ಮಿಷನ್‍ಗಾಗಿ, ನಮಗೆ ಅಗತ್ಯವಾಗಿ 60 ಲಕ್ಷ ರೂಪಾಯಿ ಬೇಕಾಗಿದೆ. ಹಾಗಾಗಿ ನೀವು ಈ ಕೂಡಲೇ ರಹಸ್ಯವಾಗಿ ಅಷ್ಟು ಹಣವನ್ನು ಪ್ರಧಾನ ಮಂತ್ರಿಗಳ ಮನೆಗೆ ತಲುಪಿಸಬೇಕು ಎಂದು ಮುಖ್ಯ ಕ್ಯಾಷಿಯರ್ ಪ್ರಕಾಶ್ ಮಲ್ಹೋತ್ರಾರವರಿಗೆ ತಿಳಿಸುತ್ತಾರೆ. ಪ್ರಧಾನ ಮಂತ್ರಿಗಳ ಆದೇಶದಂತೆ 60 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡ ಹೋದ ಕ್ಯಾಷಿಯರ್ ಪ್ರಕಾಶ್ ಮಲ್ಹೋತ್ರಾ ಅಂದಿನಿಂದ ಇಂದಿನವರೆಗೂ ನಾಪತ್ತೆಯಾಗುತ್ತಾರೆ.
ಈ ಪ್ರಕರಣದಲ್ಲಿ 60 ಲಕ್ಷ ದೋಚಿದ್ದಾರೆ ಎಂದು ಆರೋಪಿಸಿ ನಾಗವಾಲ್‍ನನ್ನು ಬಂಧಿಸಿ ತಿಹಾರ್ ಜೈಲಿಗೆ ಹಾಕಿ, ನಂತರ ಆತನಿಗೆ ಆರೋಗ್ಯದ ಸಮಸ್ಯೆಯ ನೆಪವೊಡ್ಡಿ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಿ ಮಾರ್ಚ್ 2 ರಂದು ಆತ ಮರಣ ಹೊಂದುತ್ತಾನೆ.ಆದೇ ರೀತಿ ನವೆಂಬರ್ 20, 1971 ರಂದು ಆ ತನಿಖೆಯ ನೇತೃತ್ವ ವಹಿಸಿದ್ದ ಯುವ ಪೆÇಲೀಸ್ ಅಧಿಕಾರಿ ಕಶ್ಯಪ್, ಮಧುಚಂದ್ರಕ್ಕೆ ಹೋಗುತ್ತಿರುವಾಗ ಕಾರು ಅಪಘಾತದಲ್ಲಿ ನಿಗೂಢವಾಗಿ ಮರಣ ಹೊಂದುತ್ತಾರೆ. ಆದಲ್ಲದೇ ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಗಳೂ ಒಂದಲ್ಲಾ ಒಂದಿ ರೀತಿಯಾಗಿ ನಿಗೂಢವಾಗಿ ಸಾವನ್ನಪ್ಪುವ ಮೂಲಕ ಈ ಹಗರಣ ಅಂತ್ಯಕಾಣದೇ ಹೋಗುತ್ತದೆ.
ಮಾರುತಿ ಹಗರಣ – 1973
ಇಂದಿರಾಗಾಂಧಿಯವರ ಎರಡನೆಯ ಮಗ ಸಂಜಯ್ ಗಾಂಧಿ ಯಾವುದೇ ಕೆಲಸವಿಲ್ಲದೆ ಅಂಡುಪಿರ್ಕಿಯಾಗಿ ಅಲೆಯುತ್ತಿದ್ದಾಗ ಆತನಿಗೆ ಒಂದು ನೆಲೆ ಕೊಡಲು ಪ್ರಾರಂಭಿಸಿದ ಮಾರುತಿ ಕಾರು ಕಂಪನಿ ಅರಂಭವಾಗುವ ಮೊದಲೇ, ಹಗರಣವಾಗಿ ಅದರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಂಪೂರ್ಣ ಕುಟುಂಬ ಭಾಗಿಯಾಗಿದೆ ಎಂದು ಕುಖ್ಯಾತವಾಯಿತು. ಕೇವಲ 25,000 ರೂಪಾಯಿಗಳಿಗೆ 1973 ರಲ್ಲಿ ಸಂಜಯ್ ಗಾಂಧಿಯವರು ನಾಲ್ಕು ಜನ ಪ್ರಯಾಣಿಕರ ಕಾರು ನಿರ್ಮಿಸಲು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಪರವಾನಗಿ ಕೊಟ್ಟಿದ್ದನ್ನು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ವಿರೋಧಿಸಿದ್ದಾಗ ಭಾವನಾತ್ಮಕ ಅಂಶಗಳ ಭಾಷಣ ಮಾಡಿ ಇಂದಿರಾ ಎಲ್ಲರ ಬಾಯಿ ಮುಚ್ಚಿಸಿದ್ದರು. ವಾಹನಗಳ ಕುರಿತಂತೆ ಯಾವುದೇ ತಾಂತ್ರಿಕ ಅರ್ಹತೆಗಳು ಇಲ್ಲದಿದ್ದರೂ, ಇನ್ನೂ ಭಾರತೀಯ ನಾಗರೀಕತೆಯನ್ನು ಹೊಂದಿರದ ಇಂದಿರಾಗಾಂಧಿಯವರ ಹಿರಿಯ ವಿದೇಶೀ ಸೊಸೆ ಸೋನಿಯಾ ಗಾಂಧಿಯನ್ನು ಮಾರುತಿ ಟೆಕ್ನಿಕಲ್ ಸರ್ವೀಸಸ್ ಪ್ರೈ ಲಿಮಿಟೆಡ್ ಕಂಪನಿಯ ಎಂಡಿಯನ್ನಾಗಿ ಮಾಡಲಾಗಿತ್ತು. ತೆರಿಗೆಗಳು, ನಿಧಿಗಳು ಮತ್ತು ಭೂಮಿಗೆ ಸಂಬಂಧಿಸಿದಂತೆ ಆ ಕಂಪನಿಯು ಇಂದಿರಾ ಸರ್ಕಾರದಿಂದ ಅನೇಕ ವಿನಾಯಿತಿಗಳನ್ನು ಪಡೆಯಿತಾದರೂ ಒಂದೇ ಒಂದು ಕಾರನ್ನು ತಯಾರಿಸಲು ಸಾಧ್ಯವಾಗದೇ ಆ ಕಂಪನಿಯನ್ನು 1977 ರಲ್ಲಿ ನಿಲ್ಲಿಸಲಾಯಿತು. ಅಷ್ಟರಲ್ಲಾಗಲೇ ಆ ಕಂಪನಿಯ ಸ್ವತ್ತಲ್ಲವೂ ಅವರ ಖಾಸತಿ ಒಡೆತನಕ್ಕೆ ಬಂದು ಅದನ್ನು ಮುಂದೆ ಜಪಾನ್ ಸಹಯೋಗದಲ್ಲಿ ಆರಂಭವಾದ ಮಾರುತಿ ಉದ್ಯೋಗ್ ಕಂಪನಿಗೆ ಕೋಟ್ಯಾಂತರ ರೂಪಾಯಿಗಳಿಗೆ ಮಾರಿಕೊಂಡರು.
ಬೋಫೋರ್ಸ್ ಹಗರಣ – 1990-2014
ಈ ಹಗರಣವು ರಾಜೀವ್ ಗಾಂಧಿ ಅವರ ಕುಟುಂಬವನ್ನು ಬಿಟ್ಟು ಬಿಡದೇ 1990ರ ದಶಕದಲ್ಲಿ ಕಾಡಿದ್ದಲ್ಲದೇ, ರಸ್ತೆ ರಸ್ತೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಗಲೀ ಗಲೀಮೇ ಶೋರ್ ಹೈ ರಾಜೀವ್ ಗಾಂಧಿ ಚೋರ್ ಹೈ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ Mr.Clean ವ್ಯಕ್ತಿತ್ವವನ್ನು ತೀವ್ರವಾಗಿ ಆಘಾತಗೊಳಿಸಿತು. ರಾಜೀವ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರಿಗೆ ಸ್ವೀಡಿಷ್ ಫಿರಂಗಿ ತಯಾರಕ ಬೋಫೋರ್ಸ್ 64 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಿರುವ ಪರಿಣಾಮವಾಗಿಯೇ ಭಾರತೀಯ ಸೇನೆಯಲ್ಲಿ ಬೋಫೋರ್ಸ್ ಕಂಪನಿಯ 155 ಎಂಎಂ ಹೊವಿಟ್ಜರ್ ಬಂದೂಕುಗಳನ್ನು ಖರೀಧಿಸಲಾಗಿತ್ತು. ಈ ಪ್ರಕರಣದಲ್ಲಿ ಇಟಲಿಯ ಉದ್ಯಮಿ ಮತ್ತು ಗಾಂಧಿ ಕುಟುಂಬಕ್ಕೆ ಹತ್ತಿರವಾದ ಒಟ್ಟಾವಿಯೊ ಕ್ವಾಟ್ರೊಚಿ ಮೂಲಕ ಅಪಾರವಾದ ಲಂಚ ಸಂದಾಯವಾಗಿತ್ತು ಎಂಬುದು ಮನೆಮಾತಾಗಿತ್ತು.
ನ್ಯಾಷನಲ್ ಹೆರಾಲ್ಡ್ ಕೇಸ್ -2011
ಅಸೋಸಿಯೇಟೆಡ್ ಜರ್ನಲ್ಸ್(ಎಜಿಎಲ್) ಸಂಸ್ಥೆಯನ್ನು ಜವಹಾರ್ ಲಾಲ್ ನೆಹರು ಅವರು 1937ರ ನವೆಂಬರ್ 20 ರಂದು 5 ಸಾವಿರ ಸ್ವಾತಂತ್ರ್ಯ ಹೋರಾಟಗಾರರ ಸಹಕಾರದಿಂದ ಈ ಸಾರ್ವಜನಿಕ ಕಂಪೆನಿ ಸ್ಥಾಪಿಸಿ ಉರ್ದು ಆವೃತ್ತಿಯ ಕ್ವಾಮಿ ಆವಾಜ್ ಹಾಗೂ ಇಂಗ್ಲಿಷ್ ಆವೃತ್ತಿಯ ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗಳನ್ನು ಆರಂಭಿಸಿದ್ದಲ್ಲದೇ, ನವದೆಹಲಿ, ಲಕ್ನೋ, ಭೋಪಾಲ್, ಮುಂಬೈ, ಇಂದೋರ್ ನಗರದಲ್ಲಿ ಪತ್ರಿಕಾ ಕಛೇರಿಗೆ ಸರ್ಕಾರದ ವತಿಯಿಂದ ಜಮೀನು ಮಂಜೂರು ಮಾಡಿಸಿಕೊಂಡಿದ್ದಲ್ಲದೇ ಈ ಸಂಸ್ಥೆಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿತ್ತು.
90ರ ದಶಕದಲ್ಲಿ ಈ ಎಜೆಎಲ್ ಸಂಸ್ಥೆಗೆ ಕಾಂಗ್ರೆಸ್ ಪಕ್ಷದ ನಿಧಿಯಿಂದ 90 ಕೋಟಿ ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ನಂತರ 2011ರಲ್ಲಿ ಆ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂಬ ಎಜೆಎಲ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಮೋತಿ ಲಾಲ್ ವೋರಾ ಅವರ ಹೇಳಿಕೆಯನ್ಚಯ ಆ ಸಾಲವನ್ನು ಮನ್ನಾಮಾಡಿ ಎಜೆಎಲ್ ಸಂಸ್ಥೆಯ ಸಮಸ್ಥ ಆಸ್ತಿಯನ್ನು ರಾಹುಲ್ ಗಾಂಧಿ, ಸೋನಿಯಾಗಾಂಧಿ ಮೋತಿಲಾಲ್ ವೋರಾ ಸುಮನ್ ದುಬೆ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಸಹಭಾಗಿತ್ವದಲ್ಲಿದ್ದ ಯಂಗ್ ಇಂಡಿಯನ್ ಸಂಸ್ಥೆಗೆ ವರ್ಗಾಯಿಸಲಾಯಿತು. ಸ್ವತಂತ್ರ್ಯ ಸೇನಾನಿಗಳ ದೇಣಿಗೆಯಿಂದ ಆರಂಭವಾದ ಎಜೆಎಲ್ ಸಂಸ್ಥೆಯ ಸದ್ಯದ ಸ್ವತ್ತುಗಳ ಮೌಲ್ಯ 5 ಸಾವಿರ ಕೋಟಿಗೂ ಅಧಿಕ ಮೌಲ್ಯದ ಹಣ ಅತ್ಯಂತ ಸುಲಭವಾಗಿ ನಕಲೀ ಗಾಂಧಿಗಳು ಕೈ ವಶ ಮಾಡಿಕೊಂಡಿದ್ದರ ವಿರುದ್ಧವಾಗಿ ಸುಬ್ರಹ್ಮಣ್ಯ ಸ್ವಾಮಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸದ್ಯಕ್ಕೆ ಸೋನಿಯಾ ಮತ್ತು ರಾಹುಲ್ ಇಂದಿಗೂ ಬೇಲ್ ಮೇಲೆ ಹೊರಗಡೆ ತಿರುಗಾಡುತ್ತಿದ್ದಾರೆ.
ವಾದ್ರಾ-ಡಿಎಲ್ಎಫ್ ಹಗರಣ – 2012
ಸೋನಿಯಾಗಾಂಧಿಯವರ ಪುತ್ರಿ ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ಅವರ ರಿಯಲ್ ಎಸ್ಟೇಟ್ ವ್ಯವಹಾರದ ಹಗರಣಗಳು ನೂರಾರು. ಅದರಲ್ಲಿ ಪ್ರಮುಖವಾದದ್ದು ಎಂದರೆ ಹರ್ಯಾಣದ ಕಾಂಗ್ರೇಸ್ ಸರ್ಕಾರದ ಭೂಪಿಂದರ್ ಹೂಡಾ ಸರಕಾರದಿಂದ ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಸಂಸ್ಥೆ, ಗುರ್ಗಾಂವ್‌ನ ಮನೆಸರದಲ್ಲಿ 3.5 ಎಕರೆ ಭೂಮಿಯನ್ನು ಕೇವಲ ಕೇವಲ 15 ಕೋಟಿಗೆ ಖರೀದಿಸಿ ನಂತರ ಹೂಡಾ ಸರ್ಕಾರದ ಭೂ ಬಳಕೆ ಬದಲಾವಣೆ (ಸಿಎಲ್‌ಯು) ಹಾಗೂ ಇತರ ಅನುಮತಿ ಪಡೆದ ನಂತರ 2008ರಲ್ಲಿ ಡಿಎಲ್‌ಎಫ್ ಕಂಪನಿಗೆ ಭೂಮಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿತ್ತು. ಗುರ್ಗಾಂವ್‌ನ ಶಿಕೋಪುರ್‌ನಲ್ಲಿ ವಿವಾದಿತ ಭೂಮಿಗೆ ವಾದ್ರಾ ಅನುಮತಿ ಪಡೆದ ಸಂದರ್ಭದಲ್ಲಿ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆ ರಾಜ್ಯದಲ್ಲಿ ನಿಗದಿ ಪಡಿಸಿರುವ ಮಿತಿಗಿಂತ ಹೆಚ್ಚು ಭೂಮಿಯನ್ನು ಹೊಂದಿತ್ತು ಎಂದು ಹರಿಯಾಣಾ ಸರಕಾರದ ಹಿರಿಯ ಅಧಿಕಾರಿಗಳು ನಡೆಸಿದ್ದ ಮತ್ತೊಂದು ತನಿಖೆಯಿಂದಲೂ ತಿಳಿದುಬಂದಿದೆ.
ಇದಲ್ಲದೇ ರಾಬರ್ಟ್ ವಾದ್ರಾ ಅವರು ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್‌ನಿಂದ 65 ಕೋಟಿ ಬಡ್ಡಿರಹಿತ ಸಾಲವನ್ನು ತೆಗೆದುಕೊಂಡಿದ್ದಾರೆ ಈ ರೀತಿ ಡಿಎಲ್ಎಫ್ ಕಂಪನಿ ಬಡ್ಡಿ ರಹಿತ ಹಣವನ್ನು ಕೊಟ್ಟಿರುವ ಹಿಂದೆಯೂ ರಾಜಕೀಯ ಲಾಭಗಳನ್ನು ಪಡೆಯುವ ಉದ್ದೇಶ ಇದೆ ಎನ್ನುವ ಆರೋಪದಡಿಯಲ್ಲಿ ದಾವೆ ಹೂಡಲಾಯಿತಾದರೂ ಹೂಡಾ ಸರ್ಕಾರ ಈ ಎಲ್ಲಾ ಭೂಹಗರಣಗಳಲ್ಲಿಯೂ ಕ್ಲೀನ್ ಚಿಟ್ ನೀಡಿತಾದರೂ ಸದ್ಯದ ಸರ್ಕಾರ ಈ ತನಿಖೆಯನ್ನು ಪುನರ್ ಆರಂಭಿಸಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಚಾಪರ್ ಹಗರಣ – 2013
2013 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಿಐಪಿಗಳ ಪ್ರಯಾಣಕ್ಕಾಗಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಪ್ರಪಂಚದ ದೊಡ್ಡ ದೊಡ್ಡ ಸಂಸ್ಥೆಗಳ ಜೊತೆ ವ್ಯವಹಾರ ನಡೆಸುತಿದ್ದಾಗ ಅಂದಿನ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಇಟಾಲಿಯನ್ ಚಾಪರ್ ಕಂಪನಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯಿಂದಲೇ 36 ಬಿಲಿಯನ್ ರೂಪಾಯಿ ಮೌಲ್ಯದ ಒಪ್ಪಂದದಡಿಯಲ್ಲಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವಂತೆ ಒಪ್ಪಂದ ಮಾಡಿಕೊಳ್ಳಲಾಯಿತು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಗೆ ಸಹಕರಿಸಲೆಂದೇ 6000 ಅಡಿಗಳಷ್ಟು ಎತ್ತರದಲ್ಲಿ ಹಾರಬೇಕಾಗಿದ್ದ ಹೆಲಿಕ್ಯಾಪ್ಟರ್ ಬದಲಾಗಿ ಕೇವಲ 4500 ಅಡಿಗಳ ಎತ್ತರ ಹಾರುವ ಸಾಮಥ್ಯವಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಖರೀದಿಸಿದ್ದರ ಹಿಂದೆ ಸಾಕಷ್ಟು ಲಂಚದ ಹಣದ ಅವ್ಯವಹಾರ ನಡೆದಿದೆ ಮತ್ತು ಈ ವಿಐಪಿ ಚಾಪರ್ ಖರೀದಿಯ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಇಟಲಿಯ ನ್ಯಾಯಾಲಯದಲ್ಲಿ 2008 ರ ಮಾರ್ಚ್ 15 ರಂದು ಬರೆದ ಟಿಪ್ಪಣಿ ಸೂಚಿಸಿದೆ.
ಹೀಗೆ ಹೇಳುತ್ತಾ ಹೋದರೇ ಇಂತಹ ನೂರಾರು ಹಗರಣಗಳನ್ನು ನೆಹರು ಕುಟುಂಬ ಮತ್ತು ಕಾಂಗ್ರೇಸ್ಸಿಗರು ನಡೆಸಿದ ಪರಿಣಾಮವಾಗಿಯೇ ಭಾರತದೇಶ ಈ ರೀತಿಯಲ್ಲಿದೆ ಎಂದರೆ ತಪ್ಪಾಗಲಾರದು. ಇಷ್ಟೆಲ್ಲಾ ಹಗರಣಗಳ ತಮ್ಮ ಮೂಗಿನಡಿಯಲ್ಲಿಯೇ ನಡೆದಿದ್ದರೂ ತಾನು ಕಳ್ಳ ಪರರ ನಂಬ ಎನ್ನುವಂತೆ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿತೋರಿಸುತ್ತಿರುವ ಕಾಂಗ್ರೇಸ್ಸಿಗರಿಗೆ ನಿಜವಾಗಿಯೂ ನೈತಿಕ ಹಕ್ಕಿದೆಯೇ ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ
ಏನಂತೀರೀ?