ಮನೆಯಲ್ಲಿ ಮಕ್ಕಳು ತಿನ್ನಲು ಏನಾದರೂ ಆರೋಗ್ಯಕರವಾದ ಕುರುಕಲು ತಿಂಡಿ ಬಯಸಿದಲ್ಲಿ, ದಿಢೀರ್ ಆಗಿ ಕೇವಲ ಬೆಲ್ಲ, ಕಡಲೇಕಾಯಿ ಮತ್ತು ತುಪ್ಪ ಉಪಯೋಗಿಸಿ ಆರೋಗ್ಯಕರವಾದ ಮತ್ತು ಪೌಷ್ಟಿಕರವಾದ ಕಡಲೆಕಾಯಿ ಮಿಠಾಯಿ (ಚಿಕ್ಕಿ)ಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 15-20 ಕಡಲೇಕಾಯಿ ಮಿಠಾಯಿಯನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕಡಲೇಕಾಯಿ ಬೀಜ – 1 ಬಟ್ಟಲು
- ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು
- ಗೊಡಂಬಿ – 10-15
- ಬಾದಾಮಿ – 10-15
- ಏಲಕ್ಕಿ – 1/2 ಚಮಚ
- ತುಪ್ಪಾ 2-3 ಚಮಚ
ಕಡಲೇಕಾಯಿ ಮಿಠಾಯಿ (ಚಿಕ್ಕಿ) ತಯಾರಿಸುವ ವಿಧಾನ
- ಮೊದಲು ಒಂದು ಗಟ್ಟಿ ತಳದ ಅಗಲವಾದ ಬಾಣಲೆಯನ್ನು ತೆಗೆದುಕೊಂಡು ಒಲೆಯ ಮೇಲಿಟ್ಟು ಅದರಲ್ಲಿ ಕಡಲೆಕಾಯಿ ಬೀಜವನ್ನು ಚೆನ್ನಾಗಿ ಕೆಂಪಗೆ ಆಗುವಂತೆ ಹುರಿದುಕೊಳ್ಳಬೇಕು.
- ಅದೇ ಬಾಣಲೆಗೆ ಗೊಂಡಂಬಿ ಮತ್ತು ಬಾದಾಮಿಯನ್ನೂ ಹಾಕಿಕೊಂಡು ಸ್ವಲ್ಪ ಹುರಿದುಕೊಂಡು ಅದನ್ನು ಚಾಕುವಿನ ಸಹಾಯದಿಂದ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಕೊಳ್ಳಬೇಕು.
- ಕಡಲೇಕಾಯಿ ಬೀಜ ಸ್ವಲ್ಪ ಆರಿದ ನಂತರ ಅದರ ಮೇಲಿನ ಹೊಟ್ಟನ್ನು ಹೊಸಕಿ ಸಣ್ಣ ಸಣ್ಣ ಬೇಳೆಯ ರೂಪವಾಗಿ ಮಾಡಿಟ್ಟು ಕೊಳ್ಳಬೇಕು.
- ಅದೇ ಬೆಲ್ಲದ ಪುಡಿಯನ್ನ ಹಾಕಿ ಅದಕ್ಕೆ ಸ್ವಲ್ಪವೇ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬೆಲ್ಲದ ಪಾಕವನ್ನು ತಯಾರಿಸಿಕೊಳ್ಳಬೇಕು.
- ಈಗ ಕುದಿಯುತ್ತಿರುವ ಪಾಕಕ್ಕೆ ರುಚಿ ಹೆಚ್ಚಿಸಲು ಎರಡು ಚಮಚ ತುಪ್ಪವನ್ನು ಸೇರಿಸಬೇಕು.
- ಬೆಲ್ಲದ ಪಾಕ ಗಟ್ಟಿಯಾಗುವವರೆಗೂ ತಳ ಸೀಯದಂತೆ ಕೈಯಾಡಿಸುತ್ತಾಲೇ ಇರಬೇಕು.
- ಒಂದು ಸಣ್ಣ ಬಟ್ಟಲಿನಲ್ಲಿನ ನೀರಿನಲ್ಲಿ ಬೆಲ್ಲದ ಪಾಕದ ಒಂದು ಹನಿಯನ್ನು ಹಾಕಿದಲ್ಲಿ ಅದು ಕರಗದೇ ಗಟ್ಟಿಯಾಗಿ ತಳದಲ್ಲಿ ಕುಳಿತುಕೊಂಡಲ್ಲಿ ಪಾಕ ಸಿದ್ಧವಾಗಿದೆ ಎಂದರ್ಥ.
- ಈಗ ಘಂ ಎಂದು ಸುವಾಸನೆ ಬರಲೆಂದು ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿ ನಂತರ ನಿಧಾನವಾಗಿ ಹುರಿದ ಕಡಲೆಕಾಯಿ ಬೀಜ, ಗೋಡಂಬಿ, ಬಾದಾಮಿಯನ್ನು ಸೇರಿಸಿ ಹಾಕಿ 2-3 ನಿಮಿಷಗಳಷ್ಟು ಕೈಯಾಡಿಸಿದರೆ ಬಿಸಿ ಬಿಸಿ ಕಡಲೇಕಾಯಿ ಮಿಠಾಯಿಯ ಮಿಶ್ರಣ ಸಿಧ್ದ.
- ಒಂದು ಅಗಲವಾದ ತಟ್ಟೆಯನ್ನು ತೆರೆದುಕೊಂಡು ಅದಕ್ಕೆ ಒಂದು ಚೂರು ತುಪ್ಪವನ್ನು ಸವರಿ ಅದರಲ್ಲಿ ಕುದಿಸಿದ ಮಿಶ್ರಣವನ್ನು ತಟ್ಟೆಗೆ ಹಾಕಿ ಸ್ವಲ್ಪ ಹಸಿ ಬಿಸಿ ಇದ್ದಾಗಲೇ, ಚಾಕುವಿಗೆ ತುಪ್ಪ ಸವರಿ ನಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿದರೆ, ರುಚಿ ರುಚಿಯಾದ ಬಿಸಿ ಬಿಸಿಯದ ಕಡಲೇಕಾಯಿ ಮಿಠಾಯಿ ಅರ್ಥಾತ್ ಚಿಕ್ಕಿ ಸಿದ್ದ.
ಕಡಲೇಕಾಯಿ ಮಿಠಾಯಿ(ಚಿಕ್ಕಿ) ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ
ಏನಂತೀರೀ?
ಮನದಾಳದ ಮಾತು : ಕ್ಯಾಲೋರಿ ಗಮನದಲ್ಲಿಟ್ಟು ಕೊಂಡು ಆರೋಗ್ಯಕರವಾದ ಕುರುಕಲು ತಿನ್ನಲು ಬಯಸುವವರಿಗೆ ಕಡಲೇಕಾಯಿ ಮಿಠಾಯಿ ಒಂದು ರುಚಿಕರವಾದ ಬಲವರ್ಧಕ ಮಿಠಾಯಿ. ದೇಹಕ್ಕೆ ಶಕ್ತಿ ನೀಡುವ ಕಾರ್ಬೋಹೈಡ್ರೆಟ್ಸ್ ಗಳು ಮೂಳೆಗೆ ಮತ್ತು ಹಲ್ಲುಗಳ ಸದೃಢತೆಗೆ ಅಗತ್ಯವಾದ ಕ್ಯಾಲ್ಸಿಯಂ ಮೆಗ್ನೀಷಿಯಂ, ವಿಟಮಿನ್ ಇ. ಬಿ. ಸಿ.ಗಳು ಸಹಾ ಇದರಲ್ಲಿವೆ. ಇನ್ನು ಬೆಲ್ಲ ಬಳಸಿಕೊಂಡು ತಯಾರಿಸುವ ಕಾರಣ ಅಬಾಲವೃದ್ಧರಾಧಿಯಾಗಿ ಎಲ್ಲರೂ ಸವಿಯಬಹುದು. ನಾವು ಚಿಕ್ಕವರಿದ್ದಾಗ ಶಾಲೆಗೆ ಹೋಗುವಾಗ ನಮ್ಮಮ್ಮ ಕೊಡುತ್ತಿದ್ದ ಇದೇ ಕಡಲೇ ಕಾಯಿ ಮಿಠಾಯಿಯನ್ನೇ ಸವಿಯುತ್ತಾ ಕೈಬಾಯಿ ಅಂಟು ಮಾಡಿಕೊಳ್ಳುತ್ತಿದ್ದ ನೆನಪು ಇನ್ನೂ ಹಚ್ಚಹಸುರಾಗಿಯೇ ಇದೆ.