ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಉದ್ದಿನ ಕಡುಬು ಮತ್ತು ರುಚಿಕರ ಹಾಗೂ ಜೀರ್ಣಕಾರಿ ಶುಂಠಿ ಚೆಟ್ನಿಯನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 25-30 ಉದ್ದಿನ ಕಡುಬುಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
• ಉದ್ದಿನ ಬೇಳೆ – 1 ಪಾವು
• ಇಡ್ಲಿ ತರಿ – 2 ಪಾವು
• ಕಡಲೇಬೇಳೆ – 1/2 ಬಟ್ಟಲು
• ಹೆಸರುಬೇಳೆ – 1/೪ ಬಟ್ಟಲು
• ಜೀರಿಗೆ – 1/2 ಚಮಚ
• ಮೆಣಸು – 1/2 ಚಮಚ
• ತೆಂಗಿನ ಕಾಯಿ ಚೂರು – 1/2 ಚಿಪ್ಪು
• ಕತ್ತರಿಸಿದ ಮೆಣಸಿನಕಾಯಿ – 4-6
• ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
• ಕತ್ತರಿಸಿದ ಕರಿಬೇವಿನ ಸೊಪ್ಪು -6-8 ಚಮಚ
• ತುರಿದ ಶುಂಠಿ – 1 ಚಮಚ
• ರುಚಿಗೆ ತಕ್ಕಷ್ಟು ಉಪ್ಪು
• ಬಾಳೇ ಎಲೆ – 3-4
ಉದ್ದಿನ ಕಡುಬು ಮಾಡಲು ಹಿಟ್ಟನ್ನು ತಯಾರಿಸುವ ವಿಧಾನ :
- ಉದ್ದಿನ ಕಡುಬು ಮಾಡುವ ಹಿಂದಿನ ದಿನವೇ ಸುಮಾರು 2-3 ಗಂಟೆಗಳ ಕಾಲ ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿಡಿ
ಚೆನ್ನಾಗಿ ನೆಂದ ಉದ್ದಿನ ಬೇಳೆಯನ್ನು ಒರಳು ಕಲ್ಲು ಇಲ್ಲವೇ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು - ಇಡ್ಲಿ ತರಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರನ್ನು ಬಸಿದು, ರುಬ್ಬಿಕೊಂಡ ಉದ್ದಿನ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲೆಸಿ ರಾತ್ರಿ ಇಡೀ ಹುದುಗು ಬರಲು ಬಿಡಬೇಕು
ಉದ್ದಿನ ಕಡುಬುಗಳನ್ನು ತಯಾರಿಸುವ ವಿಧಾನ :
- ಹಿಂದಿನ ದಿನ ರಾತ್ರಿಯೇ ರುಬ್ಬಿಟ್ಟುಕೊಂಡು ಚೆನ್ನಾಗಿ ಹುದುಗು ಬಂದಿರುವ ಇಡ್ಲಿ ಹಿಟ್ಟಿಗೆ ಕತ್ತರಿಸಿದ ಕಾಯಿ ಚೂರುಗಳು, ಪುಡಿಮಾಡಿದ ಕಾಳು ಮೆಣಸು, ಜೀರಿಗೆ, ತುರಿದ ಶುಂಠಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಚೆನ್ನಾಗಿ ಗಟ್ಟಿಯಾಗಿ ಇಡ್ಲಿಯ ಹದಕ್ಕೆ ಕಲೆಸಿಕೊಳ್ಳಬೇಕು.
- ಬಾಳೆ ಎಲೆಗಳನ್ನು ಸಣ್ಣ ಸಣ್ಣ ಭಾಗಗಳಾಗಿ ಕತ್ತರಿಸಿಕೊಂಡು ಅದನ್ನು ಚೆನ್ನಾಗಿ ತೊಳೆದು ಸ್ವಲ್ಪ ಎಣ್ಣೆ ಸವರಿ ಸಿದ್ಧ ಪಡಿಸಿಟ್ಟು ಕೊಂಡಿರುವ ಉದ್ದಿನ ಕಡುಬಿನ ಹಿಟ್ಟನ್ನು ಅದರೊಳಗೆ ಹಾಕಿ ಎಲೆಯನ್ನು ಮಡಿಚಿ ಇಡ್ಲೀ ಪಾತ್ರೆಯೊಳಗೆ ಇಡಬೇಕು.
- ಸುಮಾರು ಹತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದಲ್ಲಿ ರುಚಿ ರುಚಿಯಾದ ಬಿಸಿ ಬಿಸಿಯಾದ ಉದ್ದಿನ ಕಡುಬು ಸಿದ್ದ.
- ಶುಂಠಿ ಚೆಟ್ನಿಯನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
ಶುಂಠಿ ಚೆಟ್ನಿಯನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
• ಉದ್ದಿನ ಬೇಳೆ – 3-4 ಚಮಚ
• ಪುಡಿ ಮಾದಿದ ಬೆಲ್ಲ – 1/4 ಬಟ್ಟಲು
• ಹುಣಸೇ ಹಣ್ಣು – 50 ಗ್ರಾಂ ಬಟ್ಟಲು
• ಬ್ಯಾಡಗೀ ಮೆನಸಿನಕಾಯಿ – 8-10
• ತೆಂಗಿನ ಕಾಯಿ ಚೂರು – 1/2 ಚಿಪ್ಪು
• ಕತ್ತರಿಸಿದ ಮೆಣಸಿನಕಾಯಿ – 4-6
• ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
• ಕತ್ತರಿಸಿದ ಕರಿಬೇವಿನ ಸೊಪ್ಪು -6-8 ಚಮಚ
• ತುರಿದ ಶುಂಠಿ – 1-2 ಇಂಚಿನಷ್ಟು
• ಆಡುಗೆ ಎಣ್ಣೆ – 1-2 ಚಮಚ
• ಚಿಟುಕೆ ಇಂಗು
• ರುಚಿಗೆ ತಕ್ಕಷ್ಟು ಉಪ್ಪು
ಶುಂಠಿ ಚೆಟ್ನಿಯನ್ನು ತಯಾರಿಸುವ ವಿಧಾನ :
- ಬಾಣಲೆಗೆ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಕೆಂಪಗಾಗುವಷ್ಟು ಹುರಿದುಕೊಳ್ಳಬೇಕು.
- ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ ನಮ್ಮ ಖಾರಕ್ಕೆ ಅನುಗುಣವಾಗಿ ಬ್ಯಾಡಗಿ ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಬೇಕು.
- ಈಗ ತೆಂಗಿನ ಕಾಯಿ, ಹುರಿದಿಟ್ಟು ಕೊಂಡಿದ್ದ ಉದ್ದಿನ ಬೇಳೆ ಮತ್ತು ಬಾಡಿಸಿಕೊಂಡ ಇತರೇ ಎಲ್ಲಾ ಪದಾರ್ಥಗಳೊಂದಿಗೆ, ಬೆಲ್ಲ, ಹುಣಸೇ ಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.
- ಸಣ್ಣ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಅದಕ್ಕೆ ಚಿಟುಕಿ ಇಂಗು ಮತ್ತು ಸಾಸಿವೆ ಹಾಕಿ ಚಟಪಟ ಸಿಡಿಸಿದ ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ಸೇರಿಸಿದಲ್ಲಿ ರುಚಿ ರುಚಿಯಾದ ಮತ್ತು ಘಮ ಘಮವಾದ ಶುಂಠಿ ಚೆಟ್ನಿ ಸಿದ್ದ.
ಆದಾಗಲೇ ಸಿದ್ದ ಪಡಿಸಿ ಕೊಂಡಿದ್ದ ಬಿಸಿ ಬಿಸಿ ಉದ್ದಿನ ಕಡುಬಿನೊಂದಿಗೆ ಶುಂಠಿ ಚೆಟ್ನಿಯೊಂದಿಗೆ ನೆಂಚಿಕೊಂಡು ತಿನ್ನಲು ಬಲು ಮಜವಾಗಿರುತ್ತದೆ.
ಬಿಸಿ ಬಿಸಿಯಾದ ಉದ್ದಿನ ಕಡುಬಿನ ಜೊತೆಗೆ ರುಚಿಕರವಾದ ಶುಂಠಿ ಚೆಟ್ನಿಯನ್ನು ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಸಾಂಪ್ರದಾಯಕ ಅಡುಗೆಯಾದ ಉದ್ದಿನ ಕಡುಬನ್ನು ಕೇವಲ ತಿಂಡಿಯಾಗಿ ಅಲ್ಲದೇ ಭೀಮನ ಅಮಾವಾಸ್ಯೆ, ನಾಗರ ಪಂಚಮಿ ಮತ್ತು ಗಣೇಶ ಚರ್ತುಥಿಗಳಂದು ವಿಶೇಷವಾಗಿ ನೈವೇದ್ಯಕ್ಕೂ ಬಳೆಸುತ್ತಾರೆ. ಈ ಉದ್ದಿನಕಡಬನ್ನು ಯಾವುದೇ ಎಣ್ಣೆ ಬಳೆಸದೇ ಕೇವಲ ಹಬೆಯಲ್ಲಿಯೇ ಬೇಯಿಸುವುದರಿಂದ ಇದು ಆರೋಗ್ಯಕರವೂ ಹೌದು. ಇನ್ನು ಶುಂಠಿ ಚೆಟ್ನಿ ಆರೋಗ್ಯಕ್ಕೂ ಉತ್ತಮ ಮತ್ತು ಪಚನಕ್ರಿಯೆಗೆ ಸಹಕರಿಸುತ್ತದೆ. ಈ ಶುಂಠಿ ಚೆಟ್ನಿಯನ್ನು ಉದ್ದಿನ ಕಡುಬು ಅಲ್ಲದೇ, ದೋಸೆ, ಚಪಾತಿ ಮತ್ತು ಅನ್ನದ ಜೊತೆಗೂ ಕಲೆಸಿಕೊಂಡು ತಿನ್ನಲು ಮಜವಾಗಿರುತ್ತದೆ.
ಈ ಆಹಾರ ವಿಧಾನವನ್ನು ತಿಳಿಸಿಕೊಟ್ಟ ಬೆಂಗಳೂರಿನ ತಿಂಡ್ಲು ಗ್ರಾಮದ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
#ಅನ್ನಪೂರ್ಣ
#ಉದ್ದಿನಕಡುಬು
#ಶುಂಠಿಚೆಟ್ನಿ
#ಏನಂತೀರೀ