ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು

ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ಲಿನ ಅಜಿತ್ ಹನುಮಕ್ಕನವರ್ ಅವರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಎಲ್ಲರೂ ಕರೆ ನೀಡುತ್ತಿದ್ದಾರಲ್ಲಾ ಅದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಸೋಕಾಲ್ಡ್ ಬುದ್ಧಿವಂತ(??) ನಟ ಎಂದು ಕೊಂಡಿರುವ ಉಪೇಂದ್ರ ಅವರನ್ನು ಕೇಳಿದಾಗ, ಯಥಾ ಪ್ರಕಾರ ತಮ್ಮ ಸಿನಿಮಾಗಳ ಸಂಭಾಷಣೆಯಂತೆ ಇದೆಲ್ಲಾ ಯಾರೋ ದಡ್ಡರು ಆಡುವ ಮಾತು ನಾವುಗಳು ಚೀನೀ ವಸ್ತುಗಳನ್ನು ಹಾಗೆಲ್ಲಾ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಇದೆಲ್ಲಾ ಭ್ರಷ್ಟರಾಜಕಾರಣಿಗಳ ಹುನ್ನಾರ. ಅದಕ್ಕಾಗಿ ನಮ್ಮ ಪ್ರಜಾಕೀಯದ ವ್ಯವಸ್ಥೆ ಬರಬೇಕೆಂದು ಓತಪ್ರೋತಾವಾಗಿ ಕಾರ್ಯಸಾಧುವಾಗದ ಮತ್ತು ಕೇಳಿದ ಪ್ರಶ್ನೆಗೆ ಒಂದು ಚೂರೂ ಸಂಬಂಧವಿರದ ಹಾಗೇ ಏನನ್ನೋ ಹೇಳುತ್ತಾ ತಿಪ್ಪೇ ಸಾರಿಸಿಬಿಟ್ಟರು.

WhatsApp Image 2020-06-18 at 8.36.06 PMಇನ್ನು ದೇಶದ ಎರಡನೇ ದೊಡ್ದ ಪಕ್ಷವಾದ ಕಾಂಗ್ರೇಸ್ ಪಕ್ಷದ ವಕ್ತಾರರು ಮತ್ತವರ ಪಕ್ಷದ ಪ್ರಧಾನ ವಿದೂಷಕ ಗಡಿಯಲ್ಲಿ ಆಗುತ್ತಿರುವ ಪ್ರಕ್ಷಬ್ಧ ಪರಿಸ್ಥಿತಿಗೆ ಭಾರತೀಯ ಸೈನಿಕರದ್ದೇ ತಪ್ಪು. ನಮ್ಮವರೇ ಕಾಲು ಕೆರೆದು ಚೀನಿಯರ ಮೇಲೆ ಜಗಳಕ್ಕೇ ಏಕೆ ಹೋಗಬೇಕಿತ್ತು? ಎಂದು ಕೇಳಿದರೆ, ವಿದೂಷಕ ಅವರದ್ದೇ ಕಾಲದಲ್ಲಾದ ಮಿಲಿಟರಿ ಒಪ್ಪಂದದ ಅರಿವಿಲ್ಲದೇ, ಪೆದ್ದು ಪೆದ್ದಾಗಿ ಶಸ್ತ್ರಾಸ್ತ್ರಗಳಿಲ್ಲದೆ ನಮ್ಮ ಸೈನಿಕರು ಗಡಿಯಲ್ಲಿ ಏಕೆ ಆಕ್ರಮಣ ಮಾಡಬೇಕು? ಎಂದು ಪ್ರಧಾನಿಗಳನ್ನು ಟ್ವಿಟರ್ ಮೂಲಕ ಕೇಳುವ ಮೂಲಕ ಮತ್ತೊಮ್ಮೆ ಭಾರತೀಯರ ಮುಂದೆ ಅಪಹಾಸ್ಯಕ್ಕೆ ಈಡಾದರು. ಇನ್ನು ದೇಶದ ಬಗ್ಗೆ ಯಾವಾಗಲೂ ಕಮ್ಮಿ ನಿಷ್ಠೆ ಹೊಂದಿರುವ ಕಮ್ಯೂನಿಷ್ಟರು ನಮ್ಮದೇ ದೇಶದ ಸೈನಿಕರ ವಿರುದ್ಧ ದೇಶಾದ್ಯಂತ ಪ್ರತಿಭಟನೆಯನ್ನು ಮಾಡುವ ಮೂಲಕ ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಜಗಜ್ಜಾಹೀರಾತು ಮಾಡಿಕೊಳ್ಳಲು ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡರು ಎಂದರೆ ತಪ್ಪಾಗಲಾರದು.

ಲಡಾಕ್ಕಿನ ಗಾಲ್ವಾನ್ ಪ್ರದೇಶದಲ್ಲಿ ಅಮಾಯಕ 20 ಭಾರತೀಯ ಸೈನಿಕರನ್ನು ಬರ್ಬರವಾಗಿ ದೊಣ್ಣೆಗಳಿಂದ ಮತ್ತು ಕಲ್ಲುಗಳಿಂದ ಚೀನೀ ಸೈನಿಕರು ಹತ್ಯೆ ಮಾಡಿರುವುದು ಅಕಸ್ಮಿಕ ಅಥವಾ ಅದು ಗಡಿಪ್ರದೇಶಗಳಲ್ಲಿ ಸಹಜ ಪ್ರಕ್ರಿಯೆ ಎಂದು ಯಾರಾದರೂ ಭಾವಿಸಿದಲ್ಲಿ ಅದು ನಿಜಕ್ಕೂ ಅಕ್ಷಮ್ಯವೇ ಸರಿ. ಏಕೆಂದರೆ ಚೀನಾ ತನ್ನದೇ ಆದ ನಿಯಮಗಳಿಗೆ ಬದ್ಧವಾಗಿರುತ್ತದೇಯೇ ಹೊರತು, ಅದು ಶಾಂತಿಯನ್ನು ಎಂದೂ ಬಯಸುವುದಿಲ್ಲ. 1949ರಲ್ಲಿ ಸ್ವಾತಂತ್ರ ದೇಶವಾದ ಚೀನಾ ಸದಾಕಾಲವೂ ತನ್ನ ಗಡಿಯನ್ನು ವಿಸ್ತರಿಸಿಕೊಳ್ಳುವತ್ತಲೇ ಹೋಗುತ್ತಿದೆಯೇ ಹೊರತು ಅದೆಂದು ಸುಮ್ಮನಾಗಿಲ್ಲ. ನಮಗೆ ಸ್ವಾತ್ರಂತ್ರ್ಯ ಬಂದಾಗ ನಮ್ಮ ನೆರೆ ರಾಷ್ಟ್ರವಾಗಿ ಟಿಬೆಟ್ ಇತ್ತೇ ಹೊರತು ಚೀನಾವಲ್ಲ. ಟಿಬೆಟ್ಟನ್ನು ಅತ್ರಿಕ್ರಮಿಸಿ ಕೊಂಡ ಪರಿಣಾಮವಾಗಿ ಚೀನಾ ನಮ್ಮ ನೆರೆರಾಷ್ಟ್ರವಾಗಿದ್ದಲ್ಲದೇ, 1962ರಲ್ಲಿ ನೆಹರೂವನ್ನು ಪಂಚಶೀಲ ತತ್ವ ಎಂದು ಮರುಳು ಮಾಡುತ್ತಾ ಹಿಂದೀ ಚೀನೀ ಬಾಯಿ ಬಾಯಿ ಎನ್ನುತ್ತಲೇ ಸುಮಾರು ಒಂದು ತಿಂಗಳುಗಳಿಗೂ ಅಧಿಕ ಕಾಲ ಯುದ್ಧ ಮಾಡಿ ಲಕ್ಷಾಂತರ ಕಿಮೀ ಭಾರತೀಯ ನೆಲವನ್ನು ಆಕ್ರಮಿಸಿಕೊಂಡಿದ್ದು ಈಗ ಇತಿಹಾಸ.

ಇಂದು ಚೀನಾ ನಮ್ಮ ಮೇಲೆ ಈ ರೀತಿಯ ಆಕ್ರಮಣ ಮಾಡಲು ಕಾರಣಗಳೇನು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ

  • ಕೂರೂನಾ ಮಹಾಮಾರಿಯ ತವರೇ ಚೀನಾದ ವುಹಾನ್ ಪಟ್ಟಣವಾಗಿರುವುದರಿಂದ ಇಡೀ ವಿಶ್ವಕ್ಕೇ ಚೀನಾದ ಮೇಲೆ ಆಕ್ರೋಶವಿದೆ ಹಾಗಾಗಿ ಅದನ್ನು ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ದುಸ್ಸಾಹಸಕ್ಕೆ ಕೈಹಾಕಿದೆ
  • ಚೀನಾದಲ್ಲಿ ಆಗುತ್ತಿರುವ ಸಾಂಕ್ರಾಮಿಕ ರೋಗಗಳಿಂದ ಬೇಸತ್ತ ವಿಶ್ವದ ಹಲವಾರು ಬೃಹತ್ ಕಂಪನಿಗಳು ತಮ್ಮ ತಮ್ಮ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲು ಮುಂದಾಗಿರುವುದು ಸಹಾ ಚೀನಾಕ್ಕೆ ನುಂಗಲಾರದ ತುತ್ತಾಗಿದೆ.
  • ಇನ್ನು ಭಾರತ ದೇಶ POK ಮೇಲೆ ತನ್ನ ಅಧಿಪತ್ಯ ಸ್ಥಾಪಿಸಲು ಮುಂದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಅದು ಭಾರತದ ಪಾಲಾದಲ್ಲಿ ಈಗಾಗಲೇ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ತಾನು ನಿರ್ಮಿಸುತ್ತಿರುವ ಅಂತರಾಷ್ಟ್ರೀಯ ಹೆದ್ದಾರಿಗೆ ಮುಳುವಾಗಲಿದೆ ಎನ್ನುವುದು ಚೀನಾಕ್ಕೆ ಚೆನ್ನಾಯೇಗಿ ತಿಳಿದಿದೆ.
  • ಇನ್ನು ಭಾರತೀಯರ ಶ್ರದ್ಧಾ ಕೇಂದ್ರವಾದ ಕೈಲಾಸ ಪರ್ವತಕ್ಕೆ ಸದ್ಯಕ್ಕೆ ಚೀನಾದ ಮೂಲಕವೇ ದೂರದ ಪ್ರಯಾಣ ಬೆಳೆಸಬೇಕಿತ್ತು. ಈಗ ಭಾರತದೇಶ ಅದಕ್ಕೆ ಪರ್ಯಾಯವಾಗಿ ಉತ್ತರಾಖಂಡಿನ ಮೂಲಕ ಹೊಸಾ ಹತ್ತಿರದ ಮಾರ್ಗವನ್ನು ಗುರುತಿಸಿ ಅದನ್ನು ಈಗಾಗಲೇ ನಿರ್ಮಿಸಿರುವುದು ಚೀನಾದ ಕಣ್ಣನ್ನು ಕೆಂಪಾಗಿಸಿದೆ.
  • ಇನ್ನು ಕಳೆದ ವರ್ಷ ಭೂತಾನಿನ ಡೋಕ್ಲಾಮ್ ವಿವಾದದ ಸಂದರ್ಭದಲ್ಲಿ ಭಾರತದೇಶ ತೋರಿದ ದಿಟ್ಟತನ ಮತ್ತು ಎಂತಹ ಪರಿಸ್ಥಿತಿಗೂ ಹಿಂದಿನ ಸರ್ಕಾರಗಳಂತೆ ಬಗ್ಗದ ಕಠಿಣ ನಿಲುವುಗಳು ಚೀನಿಯರ ಮನಸ್ಥಿತಿಯನ್ನು ಕಂಗೆಡಿಸಿವೆ.

2014 ರಲ್ಲಿ ಪ್ರಥಮ ಬಾರಿಗೆ ಪ್ರಧಾನಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ಮೋದಿ ಸಾರ್ಕ್‌ ದೇಶಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ನೆರೆರಾಷ್ತ್ರಗಳೊಡನೆ ಮಿತ್ರುತ್ವ ಹೊಂದುವ ಇಂಗಿತವನ್ನು ತೋರಿಸುವ ಮೂಲಕ ಕೂಡಲೇ ಜನಪ್ರಿಯವಾಗಿ ಹೋದರು. ಇನ್ನು ತಮ್ಮ ಮೊದಲ ಪ್ರವಾಸವನ್ನು ಚೀನಾದ ಮೂಲಕ ಆರಂಭಿಸಿದದೇ ಸಣ್ಣ ರಾಷ್ಟ್ರಗಳಾದ ಭೂಟಾನ್, ವಿಯಟ್ನಾಂ ಮತ್ತು ನಂತರ ಶಕ್ತಿಶಾಲಿ ಮತ್ತು ಜಪಾನ್ ದೇಶಕ್ಕೆ ಭೇಟಿನೀಡಿದರು. ಸೂಕ್ಷ್ಮವಾಗಿ ಗಮನಿಸಿದರೆ ಈ ಎಲ್ಲಾ ದೇಶಗಳೂ ಚೀನಾದ ವಿರೋಧಿರಾಷ್ಟ್ರಗಳೇ. ಇದೂ ಸಹಾ ಚೀನಾ ದೇಶಕ್ಕೆ ನುಂಗಲಾರದ ತುತ್ತಾಗೀ ಸ್ವತಃ ಚೀನಾ ದೇಶದ ಅಧ್ಯಕ್ಷರೇ ಭಾರತಕ್ಕೆ ಭೇಟಿ ನೀಡುವ ಮೂಲಕ ಭಾರತದೊಂದಿಗೆ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುವ ಆಶೆಯನ್ನು ವ್ಯಕ್ತಪಡಿಸಿದ್ದು ಈಗ ಎಲ್ಲರಿಗೂ ತಿಳಿದಿರುವ ವಿಷಯ.

ಗಲ್ವಾನ್ ಪ್ರದೇಶದಲ್ಲಿ ಆದ ಆ 20 ಸೈನಿಕರ ಬರ್ಬರ ಹತ್ಯೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ದೇಶದ ಪ್ರಧಾನಿಗಳು ಈಗಾಗಲೇ ಹೇಳಿರುವುದರಿಂದ ಭಾರತೀಯರ ಮನಸ್ಸಿಗೆ ತುಸು ಸಮಾಧಾನಕರವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಪಾಕೀಸ್ಥಾನದ ವಿರುದ್ಧ ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಈ ಹಿಂದೆ ಅವರು ತೆಗೆದುಕೊಂಡ ಹಲವಾರು ಕಠಿಣ ನಿರ್ಧಾರಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಮತ್ತು ರಾಜಕೀಯ ವರ್ಗದವರಲ್ಲಿ ಮೋದಿಯವರ 56 ಇಂಚಿನ ಎದೆಯ ಬಗ್ಗೆ ಅಪಹಾಸ್ಯ ಮಾಡುತ್ತಿರುವವರನ್ನು ಯಾರೂ ಗಂಭೀರವಾಗಿ ಪರಿಗಣಿಸಿಸದೇ ಸರ್ಕಾರ ಮತ್ತು ದೇಶದ ಸೈನಿಕರ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.

ಚೀನಾ, ಪಾಕೀಸ್ಥಾನೀ ಭಯೋತ್ಪಾದಕರನ್ನು ಕಾಶ್ಮೀರದ ಮೂಲಕ ಭಾರತಕ್ಕೆ ನುಗ್ಗಿಸಲು ಒಂದೆಡೆ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ನೇಪಾಳದ ಮೂಲಕ ಗಡಿ ವಿವಾದದ ಖ್ಯಾತೆ ತೆಗೆಯುವಂತೆ ಮಾಡುವುದರಲ್ಲಿ ಸಫಲವಾಗಿದೆ. ಇನ್ನೊಂದೆಡೆ, ಬಾಂಗ್ಲಾ ದೇಶದೊಡನೆ ಉತ್ತಮ ಬಾಂಧವ್ಯ ಬೆಳೆಸುವ ಸಲುವಾಗಿ ಚೀನಾ-ಬಾಂಗ್ಲಾ ದೇಶಗಳ ನಡುವಣ ಆಮದು ಮತ್ತು ರಫ್ತಿನ ಸುಂಕವನ್ನು ಕಡಿಮೆ ಮಾಡುವ ಮೂಲಕ ಬಾಂಗ್ಲಾದೇಶವನ್ನು ಭಾರತ ವಿರುದ್ಧ ಎತ್ತಿ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದೆ.

ಪಾಕಿಸ್ತಾನದ ಪುನರಾವರ್ತಿತ ದೌರ್ಜನ್ಯಗಳ ಪರಿಣಾಮವಾಗಿ ನಮ್ಮ ಸರ್ಕಾರ, ನಮ್ಮ ಸೈನ್ಯಕ್ಕೆ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು? ಈ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಚೀನಾದ ಈ ಬೆದರಿಕೆಯನ್ನು ಹೇಗೆ ಎದುರಿಸುವುದು ಮತ್ತು ಫೈಟ್‌ಬ್ಯಾಕ್ ಪ್ರಾರಂಭಿಸಲು ಸರಿಯಾದ ಯುದ್ಧಭೂಮಿಯನ್ನು ಹೇಗೆ ಆರಿಸುವುದು ಎಂಬುದನ್ನು ನಿರ್ಣಯಿಸಲು ಸೂಕ್ತವಾದ ಮಾರ್ಗದರ್ಶನವನ್ನು ನೀಡುತ್ತಿರುವುದಲ್ಲದೇ, ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯ ನಿರ್ಣಯಗಳನ್ನು ಸೈನ್ಯಾಧಿಕಾರಿಗಳೇ ತೆಗೆದುಕೊಳ್ಳುವಂತೆ ಅದೇಶ ನೀಡಿರುವುದು ಉತ್ತಮ ಬೆಳವಣಿಯಾಗಿದೆ. ಸರ್ಕಾರವೂ ಸಹಾ ಯಾವುದೇ ರೀತಿಯ ಆತುರದ ಪ್ರತೀಕಾರಕ್ಕೆ ಮುಂದಾಗದೇ, ಜಗತ್ತಿನ ಮುಂದೆ ಚೀನಾ ಮತ್ತದರ ಗೆಳೆತನ ರಾಷ್ಟ್ರಗಳ ಕುಕೃತ್ಯವನ್ನು ಜಗ್ಗಜ್ಜಾಹೀರಾತು ಪಡಿಸುವುದರಲ್ಲಿ ಸಫಲವಾಗಿದೆ. ವಿದೇಶಾಂಗ ಸಚಿವರು ಉಭಯ ರಾಷ್ಟ್ರಗಳ ಜೊತೆ ಶಾಂತಿಸೌಹಾರ್ಧತೆಗಾಗಿ ಮಾತುಕಥೆಯಲ್ಲಿ ನಿರತವಾಗಿದ್ದರೆ, ರಕ್ಷಣಾ ಸಚಿವರು ಸೈನ್ಯಾಧಿಕಾರಿಗಳ ಜೊತೆ ಸದಾ ಮಾತುಕತೆ ನಡೆಸುತ್ತಾ ಸೈನ್ಯಕ್ಕೆ ನೈತಿಕ ಬೆಂಬಲವನ್ನು ಹೆಚ್ಚಿಸುತ್ತಿದ್ದಾರೆ.

WhatsApp Image 2020-06-19 at 8.35.42 AMಚೀನಾದ ಆಕ್ರಮಣಕ್ಕೆ ಪ್ರತಿಯಾಗಿ ರಾಜಕೀಯ ಮತ್ತು ಮಿಲಿಟರಿ ನಾಯಕರುಗಳ ಕಾರ್ಯತಂತ್ರ ಹೆಣೆಯುತ್ತಿದ್ದರೆ, ದೇಶವಾಸಿಗಳಾಗಿ ಈ ಹಂತದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಜವಾಬ್ಧಾರೀ ನಾಗರಿಕರಾಗಿ ನಾವು ಏನು ಮಾಡಬಹುದು ಎಂದರೆ, ಮೊದಲು ನಮ್ಮ ಸರ್ಕಾರ ಮತ್ತು ಸೈನ್ಯದ ವಿರುದ್ಧ ನಕಾರಾತ್ಮಕವಾಗಿ ಚಿಂತಿಸುವುದು ಮತ್ತು ಆ ನಕಾರಾತ್ಮವಾಗಿ ಮಾತನಾಡುವವರನ್ನು ಖಂಡಿಸುವುದು. ದೇಶಾದ್ಯಂತ ಚೀನಾದ ಆರ್ಥಿಕ ಹಿತಾಸಕ್ತಿಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಸಜ್ಜುಗೊಳಿಸುವುದು. ಈ ಪ್ರಯತ್ನದಲ್ಲಿ ಕೆಲವೊಮ್ಮೆ ಅಧಿಕ ಬೆಲೆಯನ್ನು ತೆರಲೂ ಬೇಕಾಗಬಹುದು.

ಮುಖ್ಯವಾಗಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ, ಚೀನಾದ ವಿರುದ್ಧದ ಆರ್ಥಿಕ ಯುದ್ಧಕ್ಕಾಗಿ ಮಾನಸಿಕವಾಗಿ ಪ್ರತಿಯೊಬ್ಬ ಭಾರತೀಯರನ್ನು ಸಿದ್ಧ ಗೊಳಿಸಬೇಕು. ಚೀನಾ ಉತ್ಪನ್ನಗಳನ್ನು ಕೊಳ್ಳುವುದನ್ನು ನಿಲ್ಲಿಸಿ ಅಂತಾ ಹೇಳಿದಾ ಕ್ಷಣ, ಈಗಾಗಲೇ ಬಳೆಸುತ್ತಿರುವ ವಸ್ತುಗಳನ್ನು ಬಿಸಾಕಿ ಅಂತ ಯಾರೂ ಹೇಳುತ್ತಿಲ್ಲ ಆದರೇ ಇನ್ನು ಮುಂದೆ ಹೊಸದನ್ನು ಖರೀದಿಸುವಾಗ ಚೀನೀ ವಸ್ತುಗಳಿಂದ ದೂರವಿರಿ ಎನ್ನುವ ಎಚ್ಚರಿಕೆಯ ಮಾತಷ್ಟೇ.

ಹೌದು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ನಾವು ಚೀನಾ ಜೊತೆ ಸದ್ಯಕ್ಕೆ ಸ್ಪರ್ಧೆ ಮಾಡೋದು ಸ್ವಲ್ಪ ಕಷ್ಟವೇ ಸರಿ. ಆದರೇ ದಿನನಿತ್ಯ ಬಳಕೆಯ ಸಾಮಾನುಗಳಾದ ಸೋಪು, ಬ್ರೆಷ್, ವಾಷಿಂಗ್ ಪೌಡರ್, ಫೇಸ್ ಕ್ರೀಂ ಬಳಸುವುದುದಕ್ಕೂ ಚೀನಾ ಉತ್ಪನ್ನಗಳೇಕೆ ಬೇಕು? ಎನ್ನುವುದೇ ನಮ್ಮ ವಾದ. ಈ ಎಲ್ಲಾ ಉತ್ಪನ್ನಗಳೂ ಸ್ವದೇಶದ್ದೇ ಆಗಿರಲಿ ಎನ್ನುವುದೇ ನಮ್ಮ ಆಗ್ರಹ.

ನಿಜವಾಗಿಯೂ ಈ ರೀತಿಯ ವ್ಯಾಪಾರ ಅಥವಾ ಉತ್ಪನ್ನಗಳ ಬಹಿಷ್ಕಾರದಿಂದ ಚೀನಾಕ್ಕೆ ಆರಂಭದಲ್ಲಿ ಯಾವುದೇ ತೊಂದರೆಯಾಗುವುದಿಲ್ಲವಾದರೂ ಭಾರತೀಯರಲ್ಲಿ ಸ್ವಾಭಿಮಾನದ ಕೆಚ್ಚನ್ನು ಬಡಿದೆಬ್ಬಿಸಿದಲ್ಲಿ ಖಂಡಿತವಾಗಿಯೂ ಸಹಕಾರಿಯಾಗುತ್ತದೆ ಎನ್ನುವುದಂತೂ ಸುಳ್ಳಲ್ಲ. ಅನೇಕ ಭಾರತೀಯ ಉದ್ಯಮಿಗಳೂ ಈ ರೀತಿಯ FMCG ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲು ಆರಂಭಿಸಿದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ ಮತ್ತು ನಿರುದ್ಯೋಗವೂ ಕಡಿಮೆಯಾಗುತ್ತದೆ.

130 ಕೋಟಿ ಜನಸಂಖ್ಯೆ ಇರುವ ಭಾರತ, ಚೀನಾ ಉತ್ಪನ್ನಗಳಿಗೆ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಇನ್ನು ಚೀನೀ ಉತ್ಪನ್ನಗಳು ಅಗ್ಗವಾಗಿರುವ ಕಾರಣದಿಂದಾಗಿಯೇ ಭಾರತೀಯರು ಕೊಳ್ಳಲು ಮುಂದಾಗುತ್ತಿದ್ದಾರೆ. ಹಾಗಾಗಿ ಸರ್ಕಾರವೂ ಕೂಡಾ ಚೀನಿ ಉತ್ಪನ್ನಗಳ ಆಮದಿಗೆ ಅಧಿಕ ಸುಂಕವನ್ನು ವಿಧಿಸಿದಲ್ಲಿ, ಪರೋಕ್ಷವಾಗಿ ಚೀನೀ ಉತ್ಪನ್ನಗಳ ಬೆಲೆ ಅಧಿಕವಾಗಿ ಜನರು ಸ್ಥಳೀಯ ಉತ್ಪನ್ನಗಳತ್ತ ಹರಿಸಬಹುದು ಚಿತ್ತ. ಈ ಬಹಿಷ್ಕಾರವು ಲಕ್ಷಾಂತರ ಭಾರತೀಯ ಗ್ರಾಹಕರನ್ನು ಆರಂಭದಲ್ಲಿ ನೋಯಿಸಬಹುದು. ಚೀನೀ ಉತ್ಪನ್ನಗಳಾದ, ಆಟಿಕೆಗಳು, ಟಿವಿ, ಮೊಬೈಲ್ ಫೋನ್ ಅಥವಾ ಔಷಧಿಗಳಾಗಿರಲೀ ಲಭ್ಯವಿರದೇ ಹೊದರೂ ಜಗತ್ತಿನಲ್ಲಿ ಭರಿಸಲಾಗದ ಆಮದು ಅಥವಾ ಉತ್ಪನ್ನಗಳಿಲ್ಲ. ಆದ್ದರಿಂದ, ನಾವು ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಿದರೆ, ಸ್ಥಳೀಯ ಉತ್ಪನ್ನಗಳು ಹೆಚ್ಚಾಗುವ ಸಮಯದವರೆಗೂ ಹೇಗೂ ಇತರ ದೇಶಗಳ ಉತ್ಪನ್ನಗಳು ಲಭ್ಯವಿರುತ್ತವೆ. ಒಮ್ಮೆ ಸ್ಥಳೀಯ ಉತ್ಪನ್ನಗಳು ಸಿದ್ಧವಾದಲ್ಲಿ ಅತ್ಯುತ್ತಮವಾದ ಗುಣಮಟ್ಟದ ವಸ್ತುಗಳು ಅಗ್ಗವಾಗಿ ಸ್ಥಳೀಯವಾಗೇ ಲಭಿಸುವುದಲ್ಲದೇ ಹೆಚ್ಚಿನ ಉದ್ಯೋಗಗಳು ಮತ್ತು ಆರ್ಥಿಕ ಚಟುವಟಿಕೆಗಳು ನಾವು ಸ್ಥಳೀಯ ಪೂರೈಕೆ ಸರಪಳಿಗಳನ್ನು ರಚಿಸಿದ ನಂತರ ಯಾವುದಾದರೂ ರೂಪದಲ್ಲಿ ಮರಳುತ್ತವೆ.

gal1ಇಂದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೇ, ದೇಶವನ್ನು ರಕ್ಷಿಸುವುದು ಕೇವಲ ಸೈನಿಕರ ಹೊಣೆಯೇ? ಅಥವಾ ಜವಾಬ್ಧಾರಿ ನಾಗರೀಕರಾಗಿ ಅದರಲ್ಲಿ ನಮ್ಮ ಪಾಲೂ ಇದೆಯೇ? ಈಗಾಗಲೇ ಆರ್ಥಿಕವಾಗಿ ಬಸವಳಿದಿರುವ ನಮ್ಮ ದೇಶಕ್ಕೆ ಯುದ್ಧ ಮತ್ತಷ್ಟೂ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಹಾಗಾಗಿ ಯುದ್ಧವು ಕೇವಲ ಗಡಿಗಳಿಗೆ ಮಾತ್ರ ಸೀಮಿತವಲ್ಲದೇ ಶತ್ರು ರಾಷ್ಟ್ರಗಳ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕವೂ ನಾವು ಚೀನಾವನ್ನು ಆರ್ಥಿಕವಾಗಿ ಬಗ್ಗು ಬಡಿಯಬಹುದಾಗಿದೆ.

ನಮ್ಮ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಅಮಾಯಕ ಸೈನಿಕರ ಬಲಿಕೊಡುವ ಬದಲು, ಕೆಲ ಕಾಲ ಮೊಬೈಲ್ ಫೋನ್ ಅಥವಾ ಔಷಧಿ ಉತ್ಪನ್ನಗಳಿಗೆ ಸ್ವಲ್ಪ ಹೆಚ್ಚು ಹಣವನ್ನು ಪಾವತಿಸುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ವೃದ್ಧಿಸಲು ಪ್ರಯತ್ನಿಸಬಹುದಲ್ಲವೇ? ಹಾಗಾಗಿ ನಾವೆಲರೂ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುವುದನ್ನು ಒಂದು ಬೃಹತ್ ಆಂದೋಲನವಾಗಿ ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಾಯ ಹೇರಬೇಕು.

ನಮ್ಮ ಸರ್ಕಾರವೂ ಈ ದಿಕ್ಕಿನಲ್ಲಿ ಧೃಢ ನಿರ್ಧಾರವನ್ನು ತಳೆದು ಅದರ ಮೊದಲ ಭಾಗವಾಗಿ 5 ಜಿ ಮೊಬೈಲ್ ನೆಟ್ವರ್ಕಿನಲ್ಲಿ ಚೀನೀ ಕಂಪನಿ ಹುವಾವೇ ಉತ್ಪನ್ನವನ್ನು ಧಿಕ್ಕರಿಸಿದೆ. ಮಹಾರಾಷ್ಟ್ರ ಸರ್ಕಾರವೂ ಇತ್ತೀಚೆಗೆ ಮಾಡಿಕೊಂಡ 5000 ಕೋಟಿ ವ್ಯವಹಾರವನ್ನು ನಿರ್ಬಂಧಿಸಿದೆ.

ಈಗಾಗಲೇ ಏಳು ಕೋಟಿ ವ್ಯಾಪಾರಿಗಳ ಒಕ್ಕೂಟವಾದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದೆಯಲ್ಲದೇ ಪ್ರಸ್ತುತ ಚೀನಾದಿಂದ ಆಮದು ಮಾಡಿಕೊಳ್ಳುವ ಸುಮಾರು 3,000 ಉತ್ಪನ್ನಗಳಾದ ಎಲೆಕ್ಟ್ರಾನಿಕ್ಸ್, ಗ್ರಾಹಕ ವಸ್ತುಗಳು, ಆಟಿಕೆಗಳು, ಪೀಠೋಪಕರಣಗಳು, ಜವಳಿ, ಪಾದರಕ್ಷೆಗಳು, ಅಡಿಗೆ ವಸ್ತುಗಳು, ಸಾಮಾನುಗಳು, ಆಹಾರ ಮತ್ತು ಕೈಗಡಿಯಾರಗಳಿಗೆ ಭಾರತೀಯ ಪರ್ಯಾಯಗಳನ್ನು ಹೊಂದಿವೆ ಎಂದು ಅದು ಹೇಳಿರುವುದು ನಿಜಕ್ಕೂ ಆಶಾಕಿರಣವಾಗಿದೆ. ಈ ರೀತಿಯಾಗಿ ಸಾರಾಸಗಟಾಗಿ ಚೀನೀ ಉತ್ಪನ್ನಗಳನ್ನು ಮತ್ತು ಸರಕುಗಳನ್ನು ಬಹಿಷ್ಕರಿಸಿ ಅವುಗಳ ಬದಲಾಗಿ ಭಾರತೀಯ ಉತ್ಪನ್ನಗಳನ್ನು ಬಳಸಿದಲ್ಲಿ ಈವರ್ಷಾದ್ಯಂತ್ಯದ ಹೊತ್ತಿಗೆ ಸುಮಾರು 1 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು (billion 13 ಶತಕೋಟಿಗಿಂತ ಹೆಚ್ಚು) ಆಮದನ್ನು ತಡೆದಂತಾಗಿ ದೇಶದ ಆರ್ಥಿಕತೆಯನ್ನು ಹೆಚ್ಚುಮಾಡುವುದರಲ್ಲಿ ಸಹಾಯಕಾರಿಯಾಗುತ್ತದೆ

WhatsApp Image 2020-06-17 at 8.04.58 PMಸಂಕ್ಷಿಪ್ತವಾಗಿ ಹೇಳುವುದಾದರೆ,#BoycottChineseProducts ಮೂಲಕ ಪರೋಕ್ಷವಾಗಿ ಪ್ರತಿಯೋಬ್ಬ ಭಾರತೀಯರೂ  ನಮ್ಮ ಸೈನಿಕರೊಂದಿಗಿದ್ದು 20 ಅಮಾಯಕ ಸೈನಿಕರನ್ನು ಬರ್ಬರವಾಗಿ ಕೊಂದ ಚೀನೀಯರ ವಿರುದ್ದ ಪ್ರತೀಕಾರವನ್ನು ತೀರಿಸಿದಂತಾಗುತ್ತದೆ. ಈ ಮಹತ್ಕಾರ್ಯದಲ್ಲಿ ನಾವಾಗಲೇ ಧುಮಿಕಿದ್ದೇವೆ. ನೀವೂ?

 

 

ಏನಂತೀರೀ?

#BoycottChineseProducts

#Boycott_China

2 thoughts on “ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು

  1. ವೋಟ್ ಹಾಕುವಾಗ ನೋಡಿಕೊಂಡು ಮಾಡಿ. .
    ಆವಾಗ ನೋಡಿಕೊಂಡು ಶಾಪಿಂಗ್ ಮಾಡುವ ಪ್ರಮೇಯ ಬರಲ್ಲಾ… ಪ್ರಜಾ ಕೀ ಯ ಎಂದು ಅಲ್ಲ .. ಯಾವುದೇ ಪಕ್ಷ ಆದರೂ ಸರಿ .. KYC know your candidates.. .. upendra ಅವರು ಯಾವುದೇ ರೀತಿ ಚೈನಾ ವಸ್ತುಗಳ ಖರೀದಿಸಿ ಎಂದು ಹೇಳಿಲ್ಲ…

    ಮಾರುಕಟ್ಟೆಗೆ ಯತ್ತೆಚ್ಚವಾಗಿ ಆಮದು ಮಾಡಿಕೊಂಡು ವೋಟ್ ಕೊಟ್ಟವ ಗೊತ್ತಿಲ್ಲದೆ ಒಂದು ಆಟಿಕೆ ಖರೀದಿಸಿದರೆ ದೇಶ ದ್ರೋಹಿ… ಮುಕ್ತ ಮಾರುಕಟ್ಟೆಗೆ ಸಹಿ ಮಾಡಿದ ನಮ್ಮ ಜನ ಪ್ರತಿನಿಧಿ ದೇಶ ಪ್ರೇಮಿಗಳು ಅಲ್ಲವೇ ?! ಸರಿಯಾಗಿ ಯೋಚಿಸಿ ಬರೆಯಿರಿ…
    ಚೀನಾ ವಸ್ತುಗಳ ಹಾಗೆ ಭ್ರಷ್ಟ ವ್ಯವಸ್ಥೆ ಬಹಿಷ್ಕಾರ ಮಾಡಿ ಎಂದು ಉಪೇಂದ್ರ ಹೇಳಿರುವುದು…!

    ಧನ್ಯವಾದ

    Liked by 1 person

    1. ಕೇಳಿದ ಪ್ರಶ್ನೆಗೂ ಅವರು ನೀಡಿದ ಉತ್ತರಕ್ಕೂ ಒಂದಕ್ಕೊಂದು ಸಂಬಂಧವೇ ಇರಲೇ ಇಲ್ಲ ಎನ್ನುವುದಂತೂ ಸತ್ಯ ಅಲ್ಲವೇ. ಕಳೆದು ಹೋದದಕ್ಜೆ ಚಿಂತಿಸಿ ಫಲವಿಲ್ಲ ಆದರೆ ಮುಂದೆ ಹಾಗಾಗದಂತೆ ತಡೆಯಲೆಂದೇ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದರೆ ಅಲ್ಲಿಯೂ ಪ್ರಜಾಕೀಯದ ಪ್ರಚಾರ ಮಾಡಿದ್ದು ಉದ್ದಟತನವಲ್ಲವೇ?

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s