ಬೇಲಿಯೇ ಎದ್ದು ಹೊಲವನ್ನು ಮೇಯ್ದರೇ ಕಾಯುವವರು ಯಾರು?

ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಗೊಳಿಸಿದ ಕೂಡಲೇ ಕೂರೋನ ಮಹಾಮಾರಿ ತಾಂಡವವಾಡುತ್ತಾ ಹತ್ತಾರು ಜನರನ್ನು ಬಲಿತೆಗೆದುಕೊಂಡದ್ದನ್ನು ನೋಡುತ್ತಲೇ ಭಯಭೀತರಾಗಿರುವ ರಾಜ್ಯದ ಜನತೆಗೆ ಸದ್ದಿಲ್ಲದೇ, ನೆನ್ನೆ ಸಂಜೆ ಬಹುಕೋಟಿ ಹಗರಣವಾದ ಐಎಂಎ ಪ್ರಕರಣದಲ್ಲಿ ಆರೋಪಿಯಾಗಿ, ಜೈಲು ಶಿಕ್ಷೆ ಅನುಭವಿಸಿದ್ದ ಹಿರಿಯ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಲೇ ಒಂದು ರೀತಿಯ ದುಃಖ, ಸಂತಾಪ ಸೂಚಿಸುತ್ತಿದ್ದರೆ,ಮತ್ತೆ ಹಲವರು ಆಕ್ರೋಶದ ನಿಟ್ಟಿಸಿರು ಬಿಡುತ್ತಿದ್ದಾರೆ.

vs41992ರ ಬ್ಯಾಚ್‌ ಕೆಎಎಸ್‌ ಅಧಿಕಾರಿಯಾಗಿ ಸರ್ಕಾರಿ ಸೇವೆ ಆರಂಭಿಸಿದ ವಿಜಯಶಂಕರ್‌ ಅವರು, ಸೇವಾ ಹಿರಿತನ ಆಧಾರದಡಿ ಐಎಎಸ್‌ ಅಧಿಕಾರಿಯಾಗಿ ಭಡ್ತಿ ಹೊಂದಿದ್ದರು. ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿದ್ದ ವೇಳೆ ಒಂದಷ್ಟು ಜನಪರ ಸೇವೆಯ ಮೂಲಕ ಒಳ್ಳೆಯ ಹೆಸರನ್ನು ಗಳಿಸಿದ್ದನ್ನು ಗಮನಿಸಿದ ಸರ್ಕಾರ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನಾಗಿ ನಿಯೋಜನೆ ಮಾಡಿತ್ತು. ಹೊಸದರಲ್ಲಿ ಅಗಸ ಗೋಣೀ ಚೀಲವನ್ನು ಎತ್ತಿ ಎತ್ತಿ ಒಗೆಯುತ್ತಾನೆ ಎನ್ನುವಂತೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗವನ್ನು ಕಬಳಿಸಿದ್ದನ್ನು ಗಮನಿಸಿ ಅದನ್ನು ಸರ್ಕಾರದ ಪರ ವಶಪಡಿಸಿಕೊಳ್ಳುವ ಮೂಲಕ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಹೆಗ್ಗಳಿಕೆ ಅವರದ್ದಾಗಿತ್ತು. ಹಾಗಾಗಿ ಇಂತಹ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರೆ ಪರಿಹಾರ ಸಿಗಬಹುದು ಎಂಬ ನಂಬಿಕೆ ಇಟ್ಟುಕೊಂಡು ಬರುತ್ತಿದ್ದ ಸಾರ್ವಜನಿಕರೊಂದಿಗೂ ಉತ್ತಮವಾದ ಬಾಂಧವ್ಯವನ್ನೇ ಅವರು ಹೊಂದಿದ್ದರು. ಹಾಗಾಗಿ ಕೆಲವೇ ಕೆಲವು ದಿನಗಳಲ್ಲಿ ಅವರೊಬ್ಬ ಜನಾನುರಾಗಿ ಜಿಲ್ಲಾಧಿಕಾರಿ ಎಂಬ ಖ್ಯಾತಿ ಗಳಿಸಿದರು.

ಇನ್ನೇನು ಎರಡು ಮೂರು ವರ್ಷಗಳ ಕಾಲ ಹೀಗೆಯೇ ಕಾರ್ಯನಿರ್ವಹಿಸಿಕೊಂಡು ಯಶಸ್ವಿಯ ಉತ್ತುಂಗದ ತುತ್ತತುದಿಯಲ್ಲಿಯೇ ಇರುವಾಗಲೇ ನಿವೃತ್ತಿ ಹೊಂದಿ ನೆಮ್ಮದಿಯ ಜೀವನವನ್ನು ನಡೆಸುವಂತಿದ್ದರೆ, ಈ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. ಜೀವನದಲ್ಲಿ ಬಹಳ ಕಷ್ಟಪಟ್ಟು ಅನೇಕ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ ಕಠಿಣ ಪರಿಶ್ರಮದ ಮೂಲಕ ಈ ರೀತಿಯ ಎತ್ತರದ ಸ್ಥಾನಪಡೆದು ಹತ್ತಾರು ಜನರಿಗೆ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಾ ಸಮಾಜದಲ್ಲಿ ಬದಲಾವಣೆ ತಂದು ಎಲ್ಲರಿಗೂ ಮಾರ್ಗದರ್ಶಿಗಳಾಗಬೇಕಿದ್ದ ವಿಜಯಶಂಕರರಿಗೆ ತಮ್ಮ ನಿವೃತ್ತಿಯ ಅಂಚಿನಲ್ಲಿ ನಡೆದೋದ ಆ ಒಂದು ಹಗರಣ ಅವರು ಅಷ್ಟು ವರ್ಷ ತಮ್ಮ ವೃತ್ತಿಜೀವನವದಲ್ಲಿ ಗಳಿಸಿದ ಮಾನವನ್ನು ಹರಾಜು ಹಾಕಿದ್ದಲ್ಲದೇ ಅಂತಿಮವಾಗಿ ಅಕಾಲಿಕವಾಗಿ ಜೀವನವನ್ನೇ ಕಳೆದುಕೊಂಡು ಹೋಗಬೇಕಾಗಿ ಬಂದದ್ದು ನಿಜಕ್ಕೂ ದುರಂತವೇ ಸರಿ.

vs3ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಒಂದೆರಡು ವಾರಗಳಲ್ಲಿಯೇ ಕೋಟ್ಯಾಂತರ ವ್ಯವಹಾರ ಮಾಡಿದ್ದ ಬೆಂಗಳೂರು ಮೂಲದ ಐಎಂಎ ಎಂಬ ಚಿನ್ನಾಭರಣದ ಕಂಪನಿಯ ಹಣಕಾಸು ಅವ್ಯವಹಾರದ ಬಗ್ಗೆ ಅನುಮಾನಿಸಿದ್ದ ಆರ್‌ಬಿಐ, 2018ರಲ್ಲಿ ರಾಜ್ಯ ಸರ್ಕಾರಕ್ಕೆ ಆ ಕಂಪನಿಯ ವ್ಯವಹಾರದ ಕುರಿತು ವಿಚಾರಣೆ ನಡೆಸುವಂತೆ ಸೂಚಿಸಿತ್ತು. ಆದಾಗಲೇ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಪ್ರಖ್ಯಾತರಾಗಿ ಆ ಸಂದರ್ಭದಲ್ಲಿ ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್‌ ಅವರಿಗೆ ಈ ವಂಚನೆ ಪ್ರಕರಣದ ತನಿಖಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತು. ಆ ವೇಳೆಯಲ್ಲಿ IMA ಸಂಸ್ಥೆಯು ಸಾವಿರಾರು ಅಮಾಯಕ ಹೂಡಿಕೆದಾರರಿಗೆ ಅಧಿಕ ಬಡ್ಡಿ ನೀಡುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಆರಂಭದಲ್ಲಿ ಗ್ರಾಹಕರಿಗೆ ನಂಬಿಕೆ ಹುಟ್ಟಿಸಿದರೂ ನಂತರ ಅವರಿಗೆ ಮೋಸ ಮತ್ತು ವಂಚನೆ ಮಾಡಿದ್ದನ್ನು ವಿಚಾರಣೆಯ ಸಮಯದಲ್ಲಿ ಗ್ರಹಿಸಿದ ವಿಜಯಶಂಕರ್, ಆ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಐಎಂಎ ಕಂಪನಿ ಮಾಲೀಕ ಮನ್ಸೂರ್‌ ಜತೆ ಅವ್ಯವಹಾರ ಕುದುರಿಸಿ, ಖಾನ್‌ ಪರವಾಗಿ ವರದಿ ಸಲ್ಲಿಸಲು ಸುಮಾರು 5 ಕೋಟಿ ಹಣವನ್ನು ಲಂಚಚನ್ನಾಗಿ ಕೊಡಲು ಬೇಡಿಕೆ ಇಟ್ಟು ಕೊನೆಗೆ ಹಗ್ಗಜಗ್ಗಾಟದ ಪರಿಣಾಮವಾಗಿ 1.5 ಕೋಟಿ ರೂ ಲಂಚ ಪಡೆದ ವಿಜಯಶಂಕರ್‌ ಐಎಂಎ ಕಂಪನಿಯ ಹಣಕಾಸು ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಲ್ಲವೂ ಕಾನೂನು  ಪ್ರಕಾರ ಕ್ರಮಬದ್ಧವಾಗಿದೆ ಎಂಬ ಕ್ಲಿನ್‌ಚಿಟ್‌ ನೀಡಿ ತಿಪ್ಪೇ ಸಾರಿಸಿದ್ದರು.

vs1ಆದರೆ ಇದ್ದಕ್ಕಿಂದ್ದಂತಯೇ ಒಂದು ದಿನ ಐಎಂಎ ಕಂಪನಿಯ ಮನ್ಸೂರ್ ತನ್ನ ಎಲ್ಲಾ ಕಛೇರಿಗಳಿಗೂ ಬೀಗ ಜಡಿದು ಯಾರಿಗೂ ಹೇಳದೇ ವಿದೇಶಕ್ಕೆ ಫಲಾಯನ ಮಾಡಿದಾಗಲೇ ಮತ್ತೊಮ್ಮೆ ಈ ಪ್ರಕರಣಕ್ಕೆ ಮರುಜೀವ ಬಂದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡಿದ್ದಕ್ಕೆ ಮತ್ತು ಮನ್ಸೂರ್ ಅಲಿಖಾನ್ ನಿಂದ ಕೋಟ್ಯಾಂತರ ರೂಪಾಯಿಗಳ ಲಂಚವನ್ನು ಪಡೆದದ್ದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾದ ಹಿನ್ನಲೆಯಲ್ಲಿ ವಿಜಯಶಂಕರ್ ಅವರು ಸಸ್ಪೆಂಡ್ ಆಗಿದ್ದಲ್ಲದೇ ಕೆಲಕಾಲ ಜೈಲುವಾಸವನ್ನು ಅನುಭವಿಸಿದ್ದರು. ತನ್ನ ಅಧಿಕಾರದ ಇಳೀ ವಯಸ್ಸಿನಲ್ಲಿ ಈ ರೀತಿಯಾಗಿ ಸಿಕ್ಕಿ ಹಾಕಿಕೊಂಡಿದ್ದಕ್ಕೆ ತೀವ್ರವಾಗಿ ನೊಂದಿದ್ದ ಅವರು, ಈ ರೀತಿಯ ಅಪಮಾನ ಮತ್ತು ಅವಮಾನದಿಂದಾಗಿ ಕೆಲ ತಿಂಗಳುಗಳಿಂದ ಯಾರ ಬಳಿಯೂ ಸರಿಯಾಗಿ ಮಾತನಾಡದೇ ಖಿನ್ನತೆಗೆ ಒಳಗಾಗಿದ್ದರು. ನೆನ್ನೆ ಸಂಜೆ ಸುಮಾರು 7 ಘಂಟೆಯ ಆಸುಪಾಸಿನಲ್ಲಿ ತಮ್ಮ ಜಯನಗರದ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಹೊರೆಗೆ ಹೋಗಿ, ಕೇವಲ ಅವರ ಪತ್ನಿ ಇದ್ದ ಸಂದರ್ಭದಲ್ಲಿ ತಮ್ಮ ಮನೆಯ ಮೇಲಿನ ಕೊಠಡಿಯಿಂದ ಎಷ್ಟು ಹೊತ್ತಾದರೂ ಹೊರಗೆ ಬಾರದಿದ್ದದ್ದನ್ನು ಗಮನಿಸಿ, ಗಾಭರಿಯಿಂದ ಪೋಲಿಸರಿಗೆ ಕರೆಮಾದಿ ಅವರ ಸಮಕ್ಷಮದಲ್ಲಿ ಕೊಠಡಿಯ ಬಾಗಿಲನ್ನು ಒಡೆದಾಗ ತಮ್ಮ ಕೊಠಡಿಯ ಫ್ಯಾನ್ ಪಕ್ಕದ ಉಕ್ಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿಜಯಶಂಕರ್​​ ಪತ್ತೆಯಾಗುವ ಮೂಲಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಇದು ಆತ್ಮಹತ್ಯೆಯೋ?, ಕುಟುಂಬ ಕಲಹವೋ? ಇಲ್ಲವೇ ಇದರ ಹಿಂದೆ ಯಾವುದಾದರೂ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆಯೋ?, ಎಂದು ತನಿಖೆಯ ಮೂಲಕವೇ ತಿಳಿಯಬೇಕಾಗಿದೆ. ಈ ಸಾವಿನ ಮೂಲಕ IMA ತನಿಖಾ ಪ್ರಕರಣ ಹಳ್ಳ ಹಿಡಿಯದೇ, ತನಿಖೆ ಇನ್ನಷ್ಟೂ ಚುರುಕುಗೊಂಡು ಹಣ ಕಳೆದುಕೊಂಡಿರುವ ಸಾವಿರಾರು ಜನರಿಗೆ ಆದಷ್ಟು ಶೀಘ್ರವೇ ಪರಿಹಾರ ಸಿಕ್ಕಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ.

ಈ ಲೇಖನ ಓದುತ್ತಿದ್ದಂತೆಯೇ ಹಲವಾರು ಜನರು ಸಾವನ್ನೂ ಈ ರೀತಿಯಾಗಿ ಸಂಭ್ರಮಿಸ ಬೇಕಿತ್ತೇ? ಸತ್ತನಂತರ ಕೆಲವು ಒಳ್ಳೆಯ ಮಾತನಾಡಬಹುತಿದ್ದಲ್ಲವೇ ಎಂದು ಮುಗಿ ಬೀಳುತ್ತಾರೆ ಎಂದು ನಾನು ಬಲ್ಲೆ. ಆದರೆ ಒಬ್ಬ ವ್ಯಕ್ತಿ ಸತ್ತ ಎಂದ ಮಾತ್ರಕ್ಕೇ ಆತ ನಿರಾಪರಾಧಿಯಾಗುವುದಿಲ್ಲ ಅಲ್ಲವೇ? ನಿಜ ಹೇಳಬೇಕೆಂದರೆ, ಭ್ರಷ್ಟಾಚಾರ ಅಥವಾ ಅವ್ಯವಹಾರದ ಪ್ರಕರಣಗಳು ಬೆಳಕಿಗೆ ಬಂದಾಕ್ಷಣ ಎಲ್ಲರೂ ದೂರುವುದು ರಾಜಕಾರಣಿಗಳನ್ನೇ. ಆದರೆ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಲು ಇಂತಹ ಬೇಲಿ ಎದ್ದು ಹೊಲ ಮೇಯುವ ಅಧಿಕಾರಿಗಳೇ ಕಾರಣ ಎಂಬುವುದನ್ನು ಹೇಳುವದಷ್ಟೇ ನನ್ನ ಉದ್ದೇಶ. ವಯಕ್ತಿಕವಾಗಿ ನನಗೆ ವಿಜಯಶಂಕರ್ ಅವರ ಅಕಾಲಿಕ ಮರಣಕ್ಕೆ ಸಂತಾಪವಿದೆ ಮತ್ತು ಭಗವಂತ ಅವರ ಆತ್ಮಕ್ಕೆ ಶಾಂತಿಕೊಡಲಿ ಮತ್ತು ಅವರ ಕುಟುಂಬಕ್ಕೆ ವಿಜಯಶಂಕರ್ ಅವರ ಅಗಲಿಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ಕೋರುತ್ತೇನೆ. ತನಿಖಾಧಿಕಾರಿಗಳು ಆದಷ್ಟೂ ಬೇಗನೇ ಸೂಕ್ತ ರೀತಿಯಲ್ಲಿ ತನಿಖೆಯನ್ನು ನಡೆಸಿ ವಿಜಯಶಂಕರ್ ಅವರ ಸಾವಿನ ಹಿಂದಿನ ಸತ್ಯವನ್ನು ಹೊರಗೆಳೆಯಬೇಕು ಮತ್ತು ಈ ರೀತಿಯ ಅನ್ಯಾಯ, ಅಕ್ರಮಗಳ ಪರಂಪರೆಯನ್ನು ನಿಲ್ಲಿಸಬೇಕು ಎಂದು ಈ ಮೂಲಕ ಕೋರುತ್ತೇನೆ.

ಈ ಆತ್ಮಹತ್ಯೆ ನಮ್ಮ ದೇಶದ ಎಲ್ಲಾ ಐಎಎಸ್, ಐಪಿಎಸ್ ಮತ್ತು ಆ ರೀತಿಯ ಉನ್ನತ ಅಧಿಕಾರದಲ್ಲಿರುವವರಿಗೆ ಎಚ್ಚರಿಕೆಯ ಘಂಟೆಯಾಗಬೇಕು. ಕಠಿಣ ಪರಿಶ್ರಮದ ಮೂಲಕ ಗಳಿಸಿದ ಈ ಉನ್ನತ ಸ್ಥಾನ, ಹತ್ತಾರು ಜನರಿಗೆ ಸಹಾಯ ಮಾಡುವಂತಾಗಬೇಕು. ಅಕಸ್ಮಾತ್ ಆ ರೀತಿ ಸೇವೆ ಸಲ್ಲಿಸಲಾಗದಿದ್ದರೂ ಜನರಿಗೆ ದ್ರೋಹ ಬಗೆಯದಂತಾಗಬಾರದು. ಬಂಡವಾಳಶಾಹಿಗಳು, ವ್ಯಾಪಾರಿಗಳು ಮತ್ತು ರಾಜಕಾರಣಿಗಳ ಜೊತೆ ಸೇರಿ ಅವರು ನೀಡುವ ಎಂಜಲು ಕಾಸಿಗೆ ಆಸೆ ಪಟ್ಟು, ಅವರ ಅನುಕೂಲಕ್ಕಾಗಿ ಕಾನೂನುಬಾಹಿರವಾಗಿ ಅವಕಾಶ ಮಾಡಿಕೊಟ್ಟು, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಬಾವಿಸಿದರೇ, ಕಳ್ಳನ ಹೆಂಡತಿ ಯಾವತ್ತಿಗೂ ಮುಂ….! ಎನ್ನುವಂತೆ ಒಂದಲ್ಲಾ ಒಂದು ದಿನ ಈ ರೀತಿಯಾಗಿ ಸಿಕ್ಕಿ ಬಿದ್ದು ಅಪಮಾನ ಮತ್ತು ಅವಮಾನಗಳನ್ನು ಅನುಭವಿಸಬೇಕಾಗಬಹುದಲ್ಲದೇ, ಈ ರೀತಿಯ ದುರ್ಬಲ ಮನಸ್ಸಿನವರು ಅಕಾಲಿಕವಾಗಿ ಪ್ರಾಣವನ್ನೂ ಕಳೆದುಕೊಳ್ಳುವ ಪ್ರಮೇಯ ಬರುತ್ತದೆ. ಹರ್ಷದ ಕೂಳಿಗೆ ಆಸೆ ಪಟ್ಟು ಕರ್ತವ್ಯಪಾಲನೆ ಮತ್ತು ಪ್ರಾಮಾಣಿಕತೆಯನ್ನು ಬದಿಗಿಟ್ಟರೆ, ಈ ರೀತಿಯಾಗಿ ವರ್ಷದ ಕೂಳನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s