ಜನರ ಆಡುಭಾಷೆಯಲ್ಲಿ ಎಳ್ಳಿಕಾಯಿ, ದೊಡ್ಲೀಕಾಯಿ ಎಂದು ಕರೆಸಿಕೊಳ್ಳುವ
ಹೇರಳೇಕಾಯಿ ಆಯುರ್ವೇದದಲ್ಲಿ ಹಲವು ಕಾಯಿಲೆಗಳಿಗೆ ದಿವ್ಯೌಷಧಿಯಾಗಿದೆ. ವಿಟಮಿನ್ ಸಿ ಆಗರವಾಗಿರುವ ಹೇರಳೇಕಾಯಿಯ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ರಕ್ತ ಪರಿಶುದ್ಧಗೊಳ್ಳುವುದಲ್ಲದೆ ಲಿವರ್ನ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹಾನಿಕಾರಕ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೇರಳೇಕಾಯಿಯನ್ನು ನಮ್ಮ ಆಹಾರ ಪದ್ದತ್ತಿಯಲ್ಲಿ ಚಿತ್ರಾನ್ನ, ಉಪ್ಪಿನಕಾಯಿ, ಗೊಜ್ಜು ಹೀಗೇ ನಾನಾರೂಪದಲ್ಲಿ ಬಳೆಸುತ್ತೇವೆ. ಇಂದು ನಮ್ಮ ನಳಪಾಕ ಮಾಲಿಕೆಯಲ್ಲಿ ಹೇರಳೇಕಾಯಿ ಗೊಜ್ಜನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ.
ಹೇರಳೇಕಾಯಿ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು
- ಹೇರಳೇ ಕಾಯಿ – 2-3
- ಕಡಲೇಬೇಳೆ – 1 ಚಮಚ
- ಉದ್ದಿನಬೇಳೆ – 1 ಚಮಚ
- ಬೆಲ್ಲ- ½ ಅಚ್ಚು
- ಒಣಕೊಬ್ಬರಿ/ತೆಂಗಿನ ಕಾಯಿ ತುರಿ 50 ಗ್ರಾಂ
- ಒಣಮೆಣಸಿನಕಾಯಿ – 5-6
- ಕಾಳು ಮೆಣಸು – 4-6
- ಸಾಸಿವೆ – 1 ಚಮಚ
- ಚಿಟುಕಿ ಅರಿಶಿನ
- ಚಿಟುಕಿ ಇಂಗು
- ಹುಣಸೇಹಣ್ಣು ನಿಂಬೇ ಗಾತ್ರ
- ರುಚಿಗೆ ತಕ್ಕಷ್ಟು ಉಪ್ಪು
- ಒಗ್ಗರಣೆಗೆ ಸ್ವಲ್ಪ ಎಣ್ಣೆ
- ಕರಿಬೇವು – 8-10 ಎಲೆಗಳು
- ಕತ್ತರಿಸಿದ ಕೊತ್ತಂಬರಿ – 1 ಚಮಚ
ಹೇರಳೇಕಾಯಿ ಗೊಜ್ಜು ಮಾಡುವ ವಿಧಾನ
- ಹೇರಳೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ
- ಒಂದು ಬಾಣಲೆಗೆ ಉದ್ದಿನಬೇಳೆ,ಕಡಲೆಬೇಳೆ,ಮೆಣಸಿನ ಕಾಳು,ಒಣಮೆಣಸಿನಕಾಯಿ ಮತ್ತು ಕೊಬ್ಬರಿಯನ್ನು ಒಂದಾದ ನಂತರ ಒಂದನ್ನು ಹಾಕಿಕೊಂಡು ಚೆನ್ನಾಗಿ ಕೆಂಪಗೆ ಬರುವ ಹಾಗೆ ಹುರಿದುಕೊಳ್ಳಿ
- ಹುರಿದ ಪದಾರ್ಥಗಳು ಆರಿದ ನಂತರ ನುಣ್ಣಗೆ ಪುಡಿ ಮಾಡಿಮಾಡಿಕೊಳ್ಳಿ
- ಪುನಃ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿ,ಚಿಟಿಕೆ ಅರಿಶಿನ ಮತ್ತು ಇಂಗನ್ನು ಸೇರಿಸಿ ಅದಕ್ಕೆ ಸಣ್ಣಗೆ ಹೆಚ್ಚಿದ ಹೇರಳೇಕಾಯನ್ನು ಹಾಕಿ ಚೆನ್ನಾಗಿ ಹಸೀ ಹೋಗುವವರೆಗೂ ಹುರಿಯಿರಿ
- ಈಗ ಹುಣಸೇಹುಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ಕುದಿಯಲು ಬಿಡಿ.
- ಕುದಿಯುತ್ತಿರುವ ಮಿಶ್ರಣಕ್ಕೆ ಪುಡಿ ಬೆಲ್ಲವನ್ನು ಸೇರಿಸಿ ಮತ್ತು ಮಾಡಿಕೊಂಡಿರುವ ಮಸಾಲೆ ಪುಡಿಯನ್ನು ಸೇರಿಸಿ ನಾಲ್ಕೈದು ನಿಮಿಷಗಳಷ್ಟು ಕುದಿಸಿ ಅದರ ಮೇಲೆ ಅಲಂಕರಿಕವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿದಲ್ಲಿ ರುಚಿ ರುಚಿಯಾದ ಹುಳಿಯಾದ ಮತ್ತು ಅಷ್ಟೇ ಒಗುರಾದ ಮತ್ತು ಸಿಹಿಯಾದ ಹೇರಳೇಕಾಯಿ ಗೊಜ್ಜು ಸಿದ್ಧ.
ಈ ಹೇರಳೇಕಾಯಿ ಗೊಜ್ಜನ್ನು ದೋಸೆ, ಚಪಾತಿ ಜೊತೆ ನೆಂಚಿ ಕೊಂಡು ತಿನ್ನಲು ಮಜವಾಗಿರುತ್ತದೆ. ರಾಗಿ ಮುದ್ದೆ ಹೇರಳೇಕಾಯಿ ಗೊಜ್ಜು ಕಾಂಬಿನೇಷನ್ ನಿಜಕ್ಕೂ ಸೂಪರ್!!
ರುಚಿಕರವಾದ ಹೇರಳೇಕಾಯಿ ಗೊಜ್ಜನ್ನು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ
ಏನಂತೀರೀ?
ಮನದಾಳದ ಮಾತು : ಅನೇಕ ಔಷಧೀಯ ಗುಣವುವುಳ್ಳ ಹೇರಳೇಕಾಯಿಗೊಜ್ಜು ಬಾಣಂತೀಯರ ಅಚ್ಚುಮೆಚ್ಚು. ಈ ಹೇರಳೆ ಗೊಚ್ಚು ಬಾಣಂತೀಯರ ದೇಹದ ಶಾಖವನ್ನು ಹೆಚ್ಚಿಸಿ ಸದಾಕಾಲವೂ ಮೈ ಬೆಚ್ಚಗಿರಿಸುತ್ತದೆ. ಇದೇ ಕಾರಣಕ್ಕಾಗಿಯೇ ಹೇರಳೇಕಾಯಿ ಉಪ್ಪಿನ ಕಾಯಿಯನ್ನೂ ಬಾಣಂತಿಯರಿಗೆ ಬಡಿಸುತ್ತಾರೆ. ಹೇರಳೇಕಾಯಿ ಬದಲಾಗಿ ಒಳ್ಳೆಯ ಕಿತ್ತಳೇ ಹಣ್ಣಿನ ಸಿಪ್ಪೆಯನ್ನೂ ಬಳಸಿಯೂ ರುಚಿಕರವಾದ ಗೊಜ್ಜನ್ನು ತಯಾರಿಸಬಹುದಾಗಿದೆ.