ಕಹಿಕಷಾಯವದೆಂದು, ಕಾರಚೂರ್ಣಮಾದೆಂದು|
ಸಿಹಿಯ ಲೇಹ್ಯಮದೆಂದು ನಿನಗೆ ಹಿತವಹುದೋ||
ವಿಹಿತ ಗೈವನು ವೈದ್ಯ ನೀನಲ್ಲ, ರೋಗಿ ನೀಂ|
ಗ್ರಹಿಸು ವಿಧಿಯೌಷದವ – ಮರುಳ ಮುನಿಯ||
ಎಂದು ಡಿ.ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗ ಭಾಗ-೨ ಅಥವಾ ಮಂಕುತಿಮ್ಮನ ತಮ್ಮ ಎಂದು ಕರೆದ ಗ್ರಂಥದಲ್ಲಿ ಬರೆದಿದ್ದಾರೆ.
ಈ ಸಮಯದಲ್ಲಿ ವೈದ್ಯರಿಗೆ ಸಂಬಂಧಿಸಿದ ಪದ್ಯವನ್ನೇಕೆ ಹೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ಹೌದು ಕಾರಣವಿದೆ. ಖ್ಯಾತ ಆಯುರ್ವೇದ ಪಂಡಿತ ಕ್ಯಾನ್ಸರ್ ಅಂತಹ ಮಾರಣಾಂತಿಕ ರೋಗಕ್ಕೆ ರಾಮಬಾಣದಂತಹ ಔಷದವನ್ನು ನೀಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ನರಸೀಪುರ ಗ್ರಾಮದ 80 ವರ್ಷದ ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿಯವರು ಜೂನ್ 24, 2020, ಬುಧವಾರದ ತಡರಾತ್ರಿಯಲ್ಲಿ ವಯೋಸಹಜ ಹೃದಯಾಘಾತದಿಂದ ಸಾವನ್ನಪ್ಪಿರುವುದು ನಿಜಕ್ಕೂ ವಿಷಾಧನೀಯವೇ ಸರಿ.
ಅಲೋಪತಿ ಚಿಕಿತ್ಸೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ತಿಂಗಳಾನು ಗಟ್ಟಲೆ ಚಿಕಿತ್ಸೆ ಮಾಡಿದರು ಖಚಿತವಾಗಿ ಗುಣಪಡಿಸಲಾಗದ ಕ್ಯಾನ್ಸರ್ ಎಂಬ ಮಹಾಮಾರಿಗೆ ಕೇವಲ 100-200/- ರೂಪಾಯಿಗಳಷ್ಟು ಅತಿ ಕಡಿಮೆ ದರದಲ್ಲಿ ನಾಟಿ ಔಷಧಿ ನೀಡುತ್ತಿದ್ದ ಶ್ರೀ ನಾರಾಯಣ ಮೂರ್ತಿ ಅವರ ಬಳಿ ಚಿಕಿತ್ಸೆ ಪಡೆಯಲು ದೇಶವಿದೇಶಗಳಿಂದಲೂ ಸಾವಿರಾರು ರೋಗಿಗಳು ಅವರ ಮನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ವಂಶಪಾರಂಪರ್ಯವಾಗಿ ಸುಮಾರು 800 ವರ್ಷಗಳ ಹಿಂದಿನಿಂದಲೂ ಅವರ ಕುಟುಂಬಕ್ಕೆ ಆಯುರ್ವೇದ ಸಿದ್ದಹಸ್ತವಾಗಿತ್ತು. ಅದೇ ಪಾರಂಪರ್ಯವನ್ನು ಶ್ರೀ ನಾರಾಯಣಮೂರ್ತಿಗಳೂ ಸುಮಾರು 40 ವರ್ಷಗಳಿಂದ ತಮ್ಮ ಸ್ವಗ್ರಾಮ ನರಸೀಪುರದಲ್ಲಿ ನಾಟಿ ಔಷಧಿ ನೀಡುತ್ತಿದ್ದರು. ಆರಂಭದಲ್ಲಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದವರು, ನೋಡ ನೋಡುತ್ತಿದ್ದಂತೆಯೇ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದೂ ಮತ್ತು ಔಷದಿಗಳ ಅಗತ್ಯವಸ್ತುಗಳ ಬೆಲೆಯೂ ಹೆಚ್ಚಿದ ಪರಿಣಾಮ ನಂತರ ಕೇವಲ 100 ರೂ. ಪಡೆದು ಚಿಕಿತ್ಸೆ ನೀಡಲಾರಂಭಿಸಿದರು. ಕಿಡ್ನಿಯಲ್ಲಿ ಕಲ್ಲು, ಮಧುಮೇಹ, ಹೃದಯಸಂಬಂಧಿ ಸಮಸ್ಯೆ, ಗ್ಯಾಂಗ್ರಿನ್, ಗರ್ಭಕೋಶದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಮುಂತಾದ ಮಾರಣಾಂತಿಕ ರೋಗಗಳಿಗೆ ಇವರು ನೀಡುತ್ತಿದ್ದ ಔಷಧಿ ಪರಿಣಾಮಕಾರಿಯಾಗಿದ್ದರಿಂದ ಇವರ ವೈದ್ಯಕೀಯ ಪದ್ದತಿ ಬಹಳ ಪ್ರಸಿದ್ಧಿ ಪಡೆದಿತ್ತು.
ಅವರು ವಾರದಲ್ಲಿ ಗುರುವಾರ ಮತ್ತು ಭಾನುವಾರ 7 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಕೊನೆಯ ರೋಗಿಯವರೆಗೆ ಚಿಕಿತ್ಸೆಕೊಡುತ್ತಿದ್ದರಲ್ಲದೇ ಉಳಿದ ದಿನಗಳಲ್ಲಿ ತಮ್ಮ ಮನೆಯ ಹಿಂಭಾಗದ ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳ ಬೇರುಗಳು ಮತ್ತು ತೊಗಟೆಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಶ್ಯವಿರುವ ಔಷಧವನ್ನು ತಯಾರಿಸುತ್ತಿದ್ದರು.
ನೂರಾರು ಖಾಯಿಲೆಗಳಿಗೆ ತಮ್ಮ ಪರಂಪರಾಗತ ನಾಟಿ ವೈದ್ಯಕೀಯದ ಮೂಲಕ ಯಶಸ್ವಿಯಾಗಿ ಸಾವಿರಾರು ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಪಡಿಸುತ್ತಿದ್ದ ಶ್ರೀ ನಾರಾಯಣಮೂರ್ತಿಗಳ ಸಮಾಜಸೇವೆಯನ್ನು ಗುರುತಿಸಿದ ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್, ಇವರೊಬ್ಬ ಅಪರೂಪದ ವೈದ್ಯಕೀಯ ಪದ್ದತಿಯ ಮೂಲಕ ಚಿಕಿತ್ಸೆ ನೀಡುವ ಅನನ್ಯವಾದ ವ್ಯಕ್ತಿ ಎಂದು ಜಗತ್ತಿಗೆ ಪರಿಚಯಿಸಿದರೆ, 2000ದ ಆಸುಪಾಸಿನಲ್ಲಿ ಆಯುರ್ವೇದ ಆರ್ಟ್ ಆಫ್ ಬೀಯಿಂಗ್ ಎಂಬ ಸಾಕ್ಷಾ ಚಿತ್ರದ ಮೂಲಕ ನಾರಾಯಣಮೂರ್ತಿಗಳ ಈ ವಿಶಿಷ್ಟ ಸಾಧನೆಯು ವಿಶ್ವದೆಲ್ಲಡೆಯಲ್ಲಿಯೂ ಪಸರಿಸಲು ಸಹಾಯವಾಯಿತು.
ಈ ರೀತಿಯಾಗಿ ಜನರಿಂದ ಜನರಿಗೆ ಆಡು ಮಾತಿನಲ್ಲಿಯೇ ಪ್ರಚಾರವಾಗಿ ಪ್ರತೀ ಗುರುವಾರ ಮತ್ತು ಭಾನುವಾರ ದೇಶದ ವಿದೇಶದ ವಿವಿಧ ಮೂಲೆಯಿಂದ ಚಿಕಿತ್ಸೆಗಾಗಿ ಅವರ ಮನೆಯ ಮುಂದೆ ನೂರಾರು ಜನರು ಸಾಲು ಗಟ್ಟುತ್ತಿದ್ದದ್ದಲ್ಲದೇ, ಇತ್ತೀಚಿನ ದಿನಗಳಲ್ಲಿ ಆ ಸಂಖ್ಯೆ 1500-2000ಕ್ಕೂ ಅಧಿಕವಾಗಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಗುರುವಾರ ಚಿಕಿತ್ಸೆ ಕೊಡುತ್ತಾರೆ ಎಂದರೆ, ಬುಧವಾರ ಬೆಳ್ಳಂಬೆಳ್ಳಿಗ್ಗೆಯಿಂದಲೇ ರೋಗಿಗಳು ಮತ್ತು ಅವರ ಸಂಬಂಧೀಕರು ಇವರ ಮನೆಯ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಾ, ಒಂದು ರೀತಿಯ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತಿತ್ತು ಎಂದರೇ ಎಲ್ಲರೂ ನಂಬಲೇಬೇಕು. ಔಷಧಿಗಳನ್ನು ತೆಗೆದುಕೊಳ್ಳಲು ರೋಗಿಯೇ ಬರಬೇಕೆಂದಿರಲಿಲ್ಲ. ರೋಗಿಗಳ ವೈದ್ಯಕೀಯ ರಿಪೋರ್ಟ್ನೊಂದಿಗೆ ಅವರ ಸಂಬಂಧಿಕರು ಬಂದರೂ ಅವರೊಡನೆ ಮಾತನಾಡಿ ಅಗತ್ಯವಿದ್ದಷ್ಟು ಮಾತ್ರವೇ ಔಷಧಿಯನ್ನು ಕೊಡುತ್ತಿದ್ದರು. ಅವರು ಒಮ್ಮೆ ಕೊಟ್ಟ ಔಷಧಿ ಸುಮರು 27 ದಿನಗಳ ಕಾಲ ಬರುತ್ತಿತ್ತು. ಅಲ್ಲದೆ, ರೋಗಿಗಳ ನೋವನ್ನು ಆಲಿಸುವುದರಲ್ಲಿ ಶಾಂತ ಚಿತ್ತ ಮತ್ತು ಸಹನಾಮೂರ್ತಿಗಳಾಗಿದ್ದ ಶ್ರೀ ನಾರಾಯಣ ಮೂರ್ತಿಗಳು ಔಷಧಿ ನೀಡುವ ಸಮಯದಲ್ಲಿ ಮಾತ್ರಾ ಕಟ್ಟುನಿಟ್ಟಾದ ವೈದ್ಯರಾಗಿದ್ದರು. ಬಹಳಷ್ಟು ರೋಗಿಗಳು ಒಟ್ಟಿಗೇ ಎರಡು ಮೂರು ತಿಂಗಳಿಗೆ ಆಗುವಷ್ಟು ಔಷಧಿಯನ್ನು ಕೊಡೀ ಇಲ್ಲವೇ ತಮ್ಮ ಸಂಬಂಧಿಕರಿಗೂ ಇದೇ ರೀತಿಯ ಖಾಯಿಲೆ ಇದೆ ಅವರಿಗೂ ಔಷಧಿ ಕೊಡಿ ಎಂದು ಕೇಳಿದರೆ, ಅಂಥಹವರಿಗೆ ಕಟ್ಟುನಿಟ್ಟಾಗಿ ಗದುರಿಸಿ ಕಳುಹಿಸಿದ ಉದಾಹಣೆಯೂ ಇತ್ತು. ಅವರಿಗೆ ತಾವು ತಯಾರಿಸಿದ ಔಷಧಿಯು ದುರ್ಬಳಕೆಯಾಗದೇ ಅವರಲ್ಲಿ ಬರುವ ಎಲ್ಲರಿಗೂ ಲಭ್ಯವಾಗಬೇಕು ಎಂಬುದಷ್ಟೇ ಅವರ ಇಚ್ಚೆಯಾಗಿತ್ತು. ಹಾಗಾಗಿ ಒಬ್ಬ ರೋಗಿಗೆ ಒಂದೇ ಔಷಧಿ ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ರೂಢಿಗೆ ತಂದಿದ್ದರು.
ಈ ರೀತಿಯಾಗಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರಾಗಿದ್ದ ನಾರಾಯಣ ಮೂರ್ತಿಯವರೂ ಸಹ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿತ್ತು. ಅದರಲ್ಲೂ ಅವರಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಾಣದ ಕೈಗಳು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಮುಖಾಂತರ ಪದೇ ಪದೇ ನೀಡುತ್ತಿದ್ದ ಕಿರುಕುಳದಿಂದಾಗಿ ಬೇಸತ್ತು ತಮ್ಮ ಈ ನಾಟಿ ವೈದ್ಯಕೀಯ ವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಅನೇಕ ಬಾರಿ ಎಲ್ಲರೊಡನೆಯೂ ನೊಂದು ಕೊಂಡು ಹೇಳಿಕೊಂಡಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಇವರು ತಮ್ಮ ಔಷಧಿಗಾಗಿ ಮರದ ಕಾಂಡ, ಬೇರು, ತೊಗಟೆಗಳನ್ನು ನಾಶಪಡಿಸುತ್ತಿರುವ ಆರೋಪ ಹೊರಿಸಿ, ಮೊಕದ್ದಮೆ ದಾಖಲಿಸುವ ಬೆದರಿಕೆ ಹೂಡಿದ್ದಾರೆಂಬ ವಿಷಯ ಅಂದಿನ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರಿಗೂ ತಲುಪಿ, ಶ್ರೀಯುತರ ಸಮಾಜಮುಖೀ ಸೇವೆಗಳನ್ನು ಅರಿತು ಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಅನೇಕ ವನೌಷಧಿ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಸಫಲರಾಗಿದ್ದರು.
ಕಳೆದ ಮಾರ್ಚ್ ತಿಂಗಳಿನಿಂದ ಕೂರೋನಾ ಮಾಹಾಮಾರಿ ವಿಶ್ವಾದ್ಯಂತ ಹರಡಿ ಎಲ್ಲೆಡೆಯಲ್ಲಿಯೂ ಲಾಕ್ ಡೌನ್ ಆದ ಪರಿಣಾಮ ವೈದ್ಯ ನಾರಾಯಣ ಮೂರ್ತಿಗಳೂ ತಾತ್ಕಾಲಿಕವಾಗಿ ತಮ್ಮ ಚಿಕಿತ್ಸೆಯನ್ನು ನಿಲ್ಲಿಸಿ, ಪರಿಸ್ಥಿತಿ ಎಲ್ಲವೂ ಸರಿಹೊಂದಿದ ನಂತರ ಚಿಕಿತ್ಸೆ ಮುಂದುವರಿಸುವುದಾಗಿ ಆಶ್ವಾಸನೆ ನೀಡಿದ್ದರು. ಅದರೆ ಆ ಭಗವಂತನಿಗೆ ಅವರು ಚಿಕಿತ್ಸೆಯನ್ನು ಮುಂದುವರಿಸುವುದು ಇಚ್ಚೆಯಿಲ್ಲದಿದ್ದ ಕಾರಣ ನೆನ್ನೆ ಸಂಜೆ ಅವರನ್ನು ತನ್ನ ಬಳಿಗೆ ಶಾಶ್ವತವಾಗಿ ಕರೆದುಕೊಂಡಿದ್ದಾನೆ. ಅದೃಷ್ಟವಷಾತ್ ಅವರ ಮಗನೂ ಸಹಾ ತಮ್ಮ ತಂದೆಯವರಿಂದ ಈ ವಂಶಪಾರಂಪರ್ಯ ವೈದ್ಯಕೀಯ ವಿದ್ಯೆಯನ್ನು ಕಲಿತು ಅವರ ಜೊತೆಯಲ್ಲಿಯೇ ಔಷಧಗಳನ್ನು ಕೊಡುವುದರಲ್ಲಿ ತಂದೆಯವರಿಗೆ ಸಹಕರಿಸುತ್ತಿದ್ದ ಕಾರಣ, ಈ ಪರಂಪರೆ ಇನ್ನೂ ಸಹಾ ಮುಂದುವರೆಯುವ ಭರವಸೆ ಇರುವುದು ಅನೇಕ ರೋಗಿಗಳ ಮುಖದಲ್ಲಿ ಆಶಾಕಿರಣ ಮೂಡಿಸಿದೆ.
ಈ ಸ್ಥಳಕ್ಕೆ ಹೋಗಲು ಇಚ್ಚಿಸುವವರು ಶಿವಮೊಗ್ಗ ದಿಂದ ಸಾಗರ ಮಾರ್ಗದ ಬಸ್ಸಿನಲ್ಲಿ ಸುಮಾರು 45 ಕಿ.ಮಿ. ದೂರದಲ್ಲಿರುವ ಆನಂದ ಪುರ ಎಂಬಲ್ಲಿ ಇಳಿದು ಅಲ್ಲಿಂದ ಆಟೋ ಅಥವಾ ಸ್ಥಳೀಯ ಬಸ್ನಲ್ಲಿ ಶಿಕಾರಿಪುರ ಮಾರ್ಗವಾಗಿ ಸುಮಾರು 10 ಕಿ.ಮಿ. ತಲುಪಿದರೆ ನರಸೀಪುರ ಸಿಗುತ್ತದೆ. ಅಲ್ಲಿಂದ ಸುಮಾರು ಒಂದು ಕಿ.ಮಿ. ದೂರ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರೆ ವೈದ್ಯರ ಮನೆ ಸಿಗುತ್ತದೆ. ಇವರ ಔಷಧಿಗಳು ಪ್ರಸಿದ್ಧವಾಗುತ್ತಿದ್ದಂತೆಯೇ ಇವರ ಔಷಧಿಗಳನ್ನೇ ನಕಲೀ ಮಾಡುವ ವೈದ್ಯರಗಳ ಸಂಖ್ಯೆಯೂ ಅಲ್ಲಿ ಹೆಚ್ಚಾಗಿಯೇ ಇದೆ. ನಾವು ಅವರ ಶಿಷ್ಯಂದಿರು ಎಂದು ಹೇಳುತ್ತಾ ಬೇಸ್ತು ಬೀಳಿಸುವವರಿಂದ ಸ್ವಲ್ಪ ಜಾಗ್ರತೆ ವಹಿಸುವುದು ಒಳಿತು.
ಯಾರಿಂದಲೂ ಏನನ್ನೂ ಪ್ರತಿಯಾಗಿ ಇಚ್ಛಿಸದೆ, ಎಲ್ಲಾ ಮಾಧ್ಯಮ ಜಗತ್ತಿನಿಂದಲೂ ಬಹುದೂರ ಎಲೆ ಮರೆಕಾಯಿಯಂತೆ ಉಳಿದು ತಮ್ಮ ಪಾಡಿಗೆ ತಾವು ಅದಷ್ಟೂ ಕಡಿಮೆ ಬೆಲೆಯಲ್ಲಿ ನೂರಾರು ಖಾಯಿಲೆಗಳಿಗೆ ಔಷಧಿಗಳನ್ನು ನೀಡುತ್ತಿದ್ದ ವೈದ್ಯೋ ನಾರಾಯಣೋ ಹರಿಃ ಎಂಬುವುದಕ್ಕೆ ಅಕ್ಷರಶಃ ಉದಾಹರಣೆಯಾಗಿದ್ದ ಶ್ರೀ ನಾರಾಯಣಮೂರ್ತಿಗಳ ಅಕಾಲಿಕ ಅಗಲಿಕೆ ಸಮಾಜಕ್ಕೆ ನಿಜಕ್ಕೂ ತುಂಬಲಾದದ ನಷ್ಟವೇ ಸರಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಮತ್ತು ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದಷ್ಟೇ ನಾವು ನೀವು ಕೇಳಿಕೊಳ್ಳೋಣ.
ಶೀತ, ನೆಗಡಿ, ಜ್ವರ ಹೀಗೆ ಕೂತರೇ ನಿಂತರೇ ಡಾಕ್ಟರ್ ಬಳಿ ಓಡಿ ಹೋಗಿ, ಹತ್ತಾರು ದಿನಗಳ ಕಾಲ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಖರ್ಚು ಮಾಡುವ ಬದಲು ನಮ್ಮ ಪಾರಂಪರಿಕ ಮನೆಯೌಷಧ ಮತ್ತು ಆಯುರ್ವೇದ ಚಿಕಿತ್ಸೆಯನ್ನು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ಆರೋಗ್ಯವಾಗಿ ಸದೃಢರಾಗಿರೋಣ ಮತ್ತು ಶಕ್ತಿಯುತ ಭಾರತವನ್ನು ಕಟ್ಟೋಣ.
ಏನಂತೀರೀ?