ತಿರುನಲ್ವೇಲಿ ಹಲ್ವಾ ಹರಿಸಿಂಗ್

ಐತಿಹಾಸಿಕವಾಗಿ ತಮಿಳುನಾಡಿನ ತಿರುನೆಲ್ವೇಲಿ ಒಂದು ಪ್ರಾಚೀನ ನಗರ. ಸುಮಾರು 2000 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ ಇತಿಹಾಸ ಈ ನಗರಕ್ಕಿದೆ. ತಾಮಿರಭರಣಿ ನದಿಯ ತಟದಲ್ಲಿರುವ ಈ ಪಟ್ಟಣ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚ್ಚಿ ಮತ್ತು ಸೇಲಂ ಹೊರತು ಪಡಿಸಿದರೆ ತಮಿಳು ನಾಡಿನ ಆರನೇ ಅತಿದೊಡ್ಡ ಪುರಸಭೆ ಹೊಂದಿರುವ ನಗರವಾಗಿದೆ. ಇದನ್ನು ಆರಂಭಿಕ ಕಾಲದಲ್ಲಿ ಪಾಂಡ್ಯರು, ಆನಂತರ ಚೋಳರು ಪುನಃ ಪಾಂಡ್ಯರ ಆಳ್ವಿಕೆ ಕಂಡು ಕೆಲ ಕಾಲ ನಮ್ಮ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಬ್ರಿಟಿಷರು 1797 ರಿಂದ 1801 ರವರೆಗೆ ತೀವ್ರತರವಾಗಿ ಯುದ್ಧ ನಡೆಸಿ ತಿರುನಲ್ವೇಲಿಯ ಪಾಳೆಯಗಾರಾಗಿದ್ದ ವೀರಪಾಂಡ್ಯ ಕಟ್ಟಬೊಮ್ಮನ್ ನೇತೃತ್ವದ ಸೈನಿಕರನ್ನು ಮಣಿಸಿ ಈ ಪಟ್ಟಣವನ್ನು ವಶಪಡಿಸಿಕೊಂಡಿದ್ದರು.

hari4

ಇಂತಹ ಐತಿಹಾಸಿಕ ಹಿನ್ನಲೆಯುಳ್ಳ ತಿರುನಲ್ವೇಲಿ ಪಟ್ಟಣ 19ನೇ ಶತಮಾನದಿಂದ ಈಚಿನ ದಿನಗಳಲ್ಲಿ ಅಲ್ಲಿನ ಇರುಟ್ಟು ಕಡೈ (ಕತ್ತಲೆಯ ಅಂಗಡಿ)ಯಲ್ಲಿ ತಯಾರಾಗುತ್ತಿದ್ದ ಹಲ್ವಾದ ಮುಖಾಂತರ ವಿಶ್ವವಿಖ್ಯಾತವಾಗಿತ್ತು ಎಂದರೆ ಅಚ್ಚರಿ ಪಡಬೇಕಾಗುತ್ತದೆ. ರಾಜಸ್ಥಾನದ ಮೂಲದ ಶ್ರೀ ಆರ್ ಕೃಷ್ಣ ಸಿಂಗ್ ಅವರು 1900 ರಲ್ಲಿ ತಿರುನೆಲ್ವೇಲಿ ಪಟ್ಟಣಕ್ಕೆ ವಲಸೆ ಬಂದು ಅಲ್ಲಿಯ ತಿರುನಗರದ ನೆಲ್ಲೈಪ್ಪರ್ ದೇವಸ್ಥಾನದ ಬಳಿ ಒಂದು ಸಣ್ಣ ಸಿಹಿ ತಿಂಡಿಗಳ ಅಂಗಡಿಯನ್ನು ಆರಂಭಿಸಿದರು. ನಂತರ ಅವರ ಮಗ ಕೆ. ಬಿಜಿಲಿ ಸಿಂಗ್ ಮುಂದುವರಿಸಿಕೊಂಡು ಹೋಗಿ ಇಲ್ಲಿಯವರೆಗೂ ಶ್ರೀ ಹರಿಸಿಂಗ್ ಎಂಬುವರು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಸಾಂಪ್ರದಾಯಿಕವಾಗಿ ಮತ್ತು ಪಾರಂಪರಿಕವಾಗಿ ಅಲ್ಲಿನ ತಾಮಿರಭರಣಿ ನದಿಯ ತಾಮ್ರ ಮತ್ತು ಇತರೇ ಖನಿಜಯುಕ್ತ ನೀರಿನೊಂದಿಗೆ ಗೋಧಿ, ಶುದ್ಧ ತುಪ್ಪ, ಸಕ್ಕರೆಗಳ ಜೊತೆಗೆ ದ್ರಾಕ್ಷಿ, ಗೋಡಂಬಿ. ಬಾದಾಮಿಗಳ ಹದವಾದ ಮಿಶ್ರಣದೊಂದಿಗೆ ತಯಾರಿಸುತ್ತಿದ್ದ ಬಣ್ಣ ಬಣ್ಣದ ಹಲ್ವಾ ಈ ಅಂಗಡಿಯ ಪ್ರಮುಖ ಆಕರ್ಷಣೆ. ಇಷ್ಟು ಪ್ರಖ್ಯಾತವಾಗಿರುವ ಅಂಗಡಿ ಬಹಳ ವಿಶಾಲವಾಗಿ ಮತ್ತು ಆಕರ್ಷಣೀಯವಾಗಿ ಇರಬಹುದು ಎಂದು ಊಹಿಸಿದರೆ ತಪ್ಪಾಗುತ್ತದೆ. ಆರಂಭದಿಂದಲೂ ಸಂಜೆಯಿಂದ ರಾತ್ರಿಯ ವರೆಗೂ ಕೇವಲ ಜೀರೋ ಕ್ಯಾಂಡಲ್ ಬಲ್ಬ್ ಅಡಿಯಲ್ಲಿ ತಮ್ಮ ವ್ಯಾಪಾರ ಮಾಡುತ್ತಿದ್ದರಿಂದ ಈ ಅಂಗಡಿಗೆ ಜನರು ಇರುಟ್ಟು ಕಡೈ (ಕತ್ತಲೆಯ ಅಂಗಡಿ) ಎಂದು ಪ್ರೀತಿಯಿಂದ ಕರೆಯಲಾರಂಭಿಸಿದರು.

ನಮ್ಮ ಕಡೆ ಹೆಂಡತಿಯರು ಕೋಪಗೊಂಡಿದ್ದಲ್ಲಿ, ಗಂಡಂದಿರು ಸಂಜೆ ಕಛೇರಿಯಿಂದ ಮನೆಗೆ ಹಿಂದಿರುಗುವಾಗ ಮೈಸೂರ್ ಪಾಕ್ ಮತ್ತು ಎರಡು ಮೊಳ ಮಲ್ಲಿಗೆ ಹೂವನ್ನು ಖರೀದಿಸಿ ತಂದು ತಮ್ಮ ಪತ್ನಿಯರನ್ನು ರಮಿಸುವಂತೆ, ತಮಿಳುನಾಡಿನಲ್ಲಿ ಮೈಸೂರು ಪಾಕ್ ಜಾಗದಲ್ಲಿ ತಿರುನಲ್ವೇಲಿ ಹಲ್ವಾ ಆಕ್ರಮಿಸಿಕೊಂಡಿದೆ. ಹಾಗಾಗಿ ಆಲ್ಲಿನ ಆಡು ಭಾಷೆಯಲ್ಲಿ ಮೋಸ ಎನ್ನುವ ಪದಕ್ಕೆ ಅನ್ವರ್ಥವಾಗಿ ತಿರುನಲ್ವೇಲಿ ಹಲ್ವಾ ಪದವನ್ನು ಬಳಸುವಷ್ಟು ರೂಢಿಯಾಗಿ ಹೋಗಿದೆ. ನಮ್ಮಲ್ಲಿ ಸೂರ್ಯಂಗೇ ಟಾರ್ಚಾ ಎನ್ನುವಂತೆ ತಮಿಳುನಾಡಿನಲ್ಲಿ ತಿರುನಲ್ವೇನಿಗೇ ಹಲ್ವಾ ಕೋಡ್ತಿಯಾ? ಎನ್ನುವಷ್ಟರ ಮಟ್ಟಿಗೆ ಈ ಹಲ್ವಾ ಪ್ರಖ್ಯಾತವಾಗಿದೆ.

ಯಾವುದೇ ಪದಾರ್ಥಗಳು ಪ್ರಖ್ಯಾತವಾಯಿತೆಂದರೆ ಅದೇ ರೀತಿಯ ನಕಲೀ ಪದಾರ್ಥಗಳು ಕೂಡಲೇ ಮಾರುಕಟ್ಟೆಯಲ್ಲಿ ಲಭಿಸುವಂತೆ ತಿರುನಲ್ವೇಲಿ ಮತ್ತು ತಮಿಳುನಾಡಿನಾದ್ಯಂತ ಹಲ್ವಾ ಮಾಡುವ ಅನೇಕ ಅಂಗಡಿಗಳು ತೆರೆದುಕೊಂಡರೂ, ಇರಟ್ಟು ಕಡೆಯ ಹರಿಸಿಂಗ್ ಅವರ ಹಲ್ವಾದ ರುಚಿ ಅನನ್ಯವಾಗಿರುತ್ತದೆ. ಅಲ್ಲಿ ಖರೀದಿಸಿದ ಅರ್ಧ ಕೆಜಿ ಹಲ್ವಾವನ್ನು ಸುಮಾರು 24 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಸಂರಕ್ಷಿಸಿ ಮಾರನೆಯ ದಿನ ಅದನ್ನು ಪರೀಕ್ಷಿಸಿದಲ್ಲಿ ಆ ಹಲ್ವಾದ ಮೇಲೆ ಒಂದು ದೊಡ್ಡ ಪದರದಲ್ಲಿ ಶುದ್ಧ ತುಪ್ಪದ ಸಂಗ್ರಹವಾಗಿರುತ್ತದೆ ಮತ್ತು ಪುನಃ ಆ ಹಲ್ವಾವನ್ನು ಬಿಸಿ ಮಾಡಿದಲ್ಲಿ ಅದು ನಿಧಾನವಾಗಿ ಹೀರಲ್ಪಡುತ್ತದೆ. ಆದರೆ ಅದೇ ನಗರದ ಇತರೇ ಪ್ರಸಿದ್ಧ ಅಂಗಡಿಗಳಿಂದ ಖರೀದಿಸಿದ ಹಲ್ವಾದಲ್ಲಿ ಈ ರೀತಿಯಾದ ಪರಿಶುದ್ಧತೆಯನ್ನು ಕಾಣವುದು ಅಸಾಧ್ಯದ ಮಾತಾಗಿದೆ. ಅಧಿಕ ಲಾಭ ಗಳಿಸುವ ಭರದಲ್ಲಿ ಬಹುತೇಕರು ಗುಣಮಟ್ಟದಲ್ಲಿ ರಾಜಿಯಾಗಿ, ಶುದ್ಧ ತುಪ್ಪದ ಬದಲಾಗಿ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಗಳನ್ನು ಬಳಸುವುದರಿಂದ ಇರಟ್ಟು ಕಡೆಯ ಹಲ್ವಾದ ರುಚಿಯನ್ನು ಅಲ್ಲಿ ಕಾಣಲಾಗದಾಗಿದೆ.

ಎಷ್ಟೇ ಬೇಡಿಕೆ ಇದ್ದರೂ ಸಹಾ ಈ ಅಂಗಡಿಯು ಪ್ರತೀದಿನ ಸಂಜೆ 5.30 ರ ಹೊತ್ತಿಗೆ ಆರಂಭವಾಗಿ ರಾತ್ರಿ 8.00 ರ ವರೆಗೆ ಮಾತ್ರವೇ ತೆರೆದಿರುತ್ತದೆ. ಕೇವಲ ತಿರುನಲ್ವೇಲಿ ನಗರಸ್ಥರಲ್ಲದೇ, ದೇಶ ವಿದೇಶಗಳಿಂದಲೂ ಗ್ರಾಹಕರು ಇಲ್ಲಿಗೆ ಆಗಮಿಸಿ ಶಾಂತ ಚಿತ್ತದಿಂದ ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಂತು ಹಲ್ವಾ ಖರೀಧಿಸುವುದು ಈ ಅಂಗಡಿಯ ಹೆಗ್ಗಳಿಕೆ. ದಸರಾ, ದೀಪಾವಳಿ ಮತ್ತು ಪೊಂಗಲ್ ಮುಂತಾದ ವಿಶೇಷ ಸಂದರ್ಭಗಳಲ್ಲಿ ಜನರ ನೂಕು ನುಗ್ಗಲು ಹೆಚ್ಚಾಗಿ ಪೋಲೀಸರು ಲಾಠಿ ಚಾರ್ಜ್ ಮಾಡಿದ ಉದಾಹರಣೆಗಳೂ ಉಂಟು. ಇಂತಹ ವಿಶೇಷ ಸಂದರ್ಭಗಳಲ್ಲಿ ತಮ್ಮ ಹಲ್ವಾ ಎಲ್ಲಾ ಗ್ರಾಹಕರಿಗೂ ಲಭ್ಯವಾಗಲೀ ಎಂಬ ದೃಷ್ಟಿಯಿಂದ ಪಡಿತರ ವಿತರಣಾ ವಿಧಾನವನ್ನು ಅನುಸರಿಸುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿಯಲ್ಪಟ್ಟಿದೆ.

ಈ ಅಂಗಡಿ ಇಷ್ಟು ಪ್ರಖ್ಯಾತವಾಗಿದ್ದರೂ ಅದರ ಮಾಲೀಕರು ತಮ್ಮ ವ್ಯವಹಾರವನ್ನು ಹೆಚ್ಚಿಸಲು ಇತರರೊಂದಿಗೆ ಸ್ಪರ್ಧಿಸಲು ಎಂದಿಗೂ ಆಶಿಸಲಿಲ್ಲ. ಬದಲಾಗಿ ಅವರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಸದಾಕಾಲವೂ ಕಾಪಾಡಿ ಕೊಳ್ಳುವ ಮೂಲಕ ಗ್ರಾಹಕರು ಬೇರೇ ಅಂಗಡಿಗಳಿಗೆ ಹೋಗದಂತೆ ತಡೆಯುವುದರಲ್ಲಿ ಯಶಸ್ವಿಯಾದ ಕಾರಣ ಗ್ರಾಹಕರನ್ನು ಆಕರ್ಷಿಸಲು ತಮ್ಮ ಅಂಗಡಿಯ ರೂಪುರೇಷೆಗಳನ್ನು ಎಂದಿಗೂ ಅವರು ಬದಲಾಯಿಸಲಿಲ್ಲ. ಇನ್ನು ಅವರು ತಮ್ಮ ಹಲ್ವಾವನ್ನು ಇತರೇ ಅಂಗಡಿಗಳಂತೆ ಬಣ್ಣ ಬಣ್ಣದ ಅಕರ್ಷಕ ಕಾಗದ ಅಥವಾ ಡಬ್ಬಿಗಳಲ್ಲಿ ಕಟ್ಟಿಕೊಡದೇ, ಇಂದಿಗೂ ಪಾಲಿಥೀನ್ ಹಾಳೆಯಲ್ಲಿ (ಇತ್ತೀಚೆಗೆ ಪಾಲೀಥೀನ್ ಬದಲಾಗಿ ಬಾಳೇ ಎಲೆಯನ್ನು ಬಳಸಲಾರಂಭಿಸಿದ್ದರು) ಹಲ್ವಾವನ್ನು ಇಟ್ಟು ಅದರ ಮೇಲೆ ಸಾಮಾನ್ಯ ಹೋಟೆಲ್ಲುಗಳಲ್ಲಿ ಇಡ್ಲೀ ವಡೆಯನ್ನು ನ್ಯೂಸ್ ಪೇಪರ್ನಲ್ಲಿ ಕಟ್ಟಿ ಕೊಡುವಂತೆಯೇ ಇಲ್ಲಿ ನೀಡುತ್ತಾರಾದರೂ ಅದರ ರುಚಿಗೆ ಮಾರು ಹೋದ ಜನರು ಇಂದಿಗೂ ಮುಗಿಬಿದ್ದು ಹಲ್ವಾ ಖರೀದಿಸುತ್ತಾರೆ.

hari1

ಇಷ್ಟೆಲ್ಲಾ ಖ್ಯಾತಿಯನ್ನು ಹೊಂದಿದ್ದ ಅಂಗಡಿಯ ಪ್ರಸ್ತುತ ಮಾಲಿಕರಾಗಿದ್ದ ಶ್ರೀ ಹರಿಸಿಂಗ್ (80 ವರ್ಷ) ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹತ್ತಿರದ ಆಸ್ಪತ್ರೆಗೆ ಸೇರಿಸಿ ಅವರನ್ನು ಪರೀಕ್ಷಿಸಿದಾಗ ಅವರಿಗೆ ಮತ್ತು ಅವರ ಅಳಿಯನಿಗೂ ಸಹ ಕೋವಿಡ್ -19 ಸೋಂಕು ತಗುಲಿರುವುದು ಧೃಢ ಪಟ್ಟಿದೆ. ಈ ವಿಷಯ ತಿಳಿದ ಹರಿಸಿಂಗ್ ಅವರಿಗೆ ಆಘಾತವಾಗಿ ಜೂನ್ 25, 2020ರ ಬೆಳಿಗ್ಗೆ ಅದೇ ಅಸ್ಪತ್ರೆಯ ಕಿಟಕಿಗೆ ನೇಣು ಹಾಕಿಕೊಂಡು ಮೃತಪಟ್ಟಿರುವುದು ನಿಜಕ್ಕೂ ದುಃಖವಾದ ಸಂಗತಿ. ಈ ರೀತಿಯ ಅಕಾಲಿಕ ಆಘಾತಕಾರಿ ಮರಣದ ಕುರಿತು ಸ್ಥಳೀಯ ಪೋಲಿಸರು ತನಿಖೆ ನಡೆಸುತ್ತಿದ್ದು ಅವರ ಸಾವಿನ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿಯಬೇಕಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಕೋರೋಣ.

ಕೂರೋನಾ ಸಾಂಕ್ರಾಮಿಕ ಮಾರಿ ಭುಗಿಲೆದ್ದಾಗಿನಿಂದಲೂ, ಕೋವಿಡ್ -19 ಸೋಂಕು ತಗುಲಿರುವುದು ಧೃಢ ಪಟ್ಟಿರುವ ಎಲ್ಲಾ ರೋಗಿಗಳು ಸಾವನ್ನಪ್ಪುವುದಿಲ್ಲ ಎಂದು ವೈದ್ಯರುಗಳು ಸತತವಾಗಿ ತಿಳಿ ಹೇಳುತ್ತಿದ್ದಾರೆ ಮತ್ತು ಸೂಕ್ತಸಮಯದಲ್ಲಿ ಸೂಕ್ತರೀತಿಯ ಚಿಕಿತ್ಸೆಯಿಂದ ಲಕ್ಷಾಂತರ ರೋಗಿಗಳು ಕೂರೋನಾ ಮುಕ್ತರಾಗಿರುವ ವಿಷಯಗಳು ತಿಳಿದಿದ್ದರೂ, ಅನೇಕ ರೋಗಿಗಳು ಅನಗತ್ಯದ ಭಯದಿಂದ ಈ ರೀತಿಯಾಗಿ ಅಂತ್ಯಕಾಣುತ್ತಿರುವುದು ನಿಜಕ್ಕೂ ದುಃಖಕರ. ಹಲ್ವಾ ಹರಿ ಸಿಂಗ್ ಅವರ ಈ ಅಕಾಲಿಕ ಮರಣ ಉಳಿದೆಲ್ಲಾ ಕೂರೋನಾ ರೋಗಿಗಳಿಗೆ ಎಚ್ಚರಿಕೆಯ ಪಾಠವಾಗಲೀ ಮತ್ತು ಕೂರೋನಾದಿಂದ ಹಲವಾರು ರೋಗಿಗಳು ಗುಣಮುಖರಾಗಿರುವ ವಿಷಯವನ್ನು ಎಲ್ಲರಿಗೂ ಪ್ರಚರಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ತಡೆಯೋಣ. ಹರಿಸಿಂಗ್ ಅವರ ದುಃಖ ತಪ್ತ ಕುಟುಂಬ ಈ ಆಘಾತದಿಂದ ಆದಷ್ಟೂ ಬೇಗನೆ ಹೊರಬಂದು ಇರುಟ್ಟು ಕಡೈ ಪುನಃ ತನ್ನ ಎಂದಿನ ಗತವೈಭವಕ್ಕೆ ಮರಳಲಿ ಎಂದು ಆಶೀಸೋಣ.

ಏನಂತೀರೀ?

4 thoughts on “ತಿರುನಲ್ವೇಲಿ ಹಲ್ವಾ ಹರಿಸಿಂಗ್

  1. ಹೆಚ್ಚಿನ ಸಂಶೋಧನೆ ಮಾಡಿ, ವಿಷಯಗಳನ್ನು ಕಲೆ ಹಾಕಿ ನಮಗೆ ಮುಟ್ಟಿಸಿದ್ದೀರಿ. ಧನ್ಯವಾದಗಳು. ಹಲ್ವಾ ಹರಿಸಿಂಗ್ ಅವರ ಕುಟುಂಬದವರು ಪುನಹ ತಮ್ಮ ವ್ಯಾಪಾರದಲ್ಲಿ ಯಶಸ್ವಿಯಾಗಿ ತೊಡಗಲೆಂದು ಆಶಿಸೋಣ.

    Liked by 1 person

  2. Yes Sri.. I have been to his shop.. Really it was tasty and fresh.. Very unfortunate to know his life ends like this.. Pray for his family to give strength…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s