ಕರ್ನಾಟಕಾದ್ಯಂತ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಬಿಳಿ ಹೋಳಿಗೆ ಮತ್ತು ಇಂದಿನ ಕಾಲಕ್ಕೆ ಅನುಗುಣವಾಗಿ ಮಾವಿನ ಹಣ್ಣಿನ ಗೊಜ್ಜನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 10-12 ಬಿಳೀ ಹೋಳಿಗೆಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
• ಅಕ್ಕಿ ಹಿಟ್ಟು – 2 ಬಟ್ಟಲು
• ಮೈದಾ ಹಿಟ್ಟು – 1 ಬಟ್ಟಲು
• ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ – 1 ಚಮಚ
• ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
• ಕತ್ತರಿಸಿದ ಕರಿಬೇವಿನ ಸೊಪ್ಪು -1 ಚಮಚ
• ರುಚಿಗೆ ತಕ್ಕಷ್ಟು ಉಪ್ಪು
• ಅಡುಗೆ ಎಣ್ಣೆ – 1 ಬಟ್ಟಲು
ಬಿಳೀ ಹೋಳಿಗೆಗಳನ್ನು ತಯಾರಿಸಲು ಹೂರಣದ ಹಿಟ್ಟನ್ನು ತಯಾರಿಸುವ ವಿಧಾನ :
- ಒಲೆಯ ಮೇಲೆ ಅಗಲವಾದ ಗಟ್ಟಿ ತಳದ ಪಾತ್ರೆಯಲ್ಲಿ ಸುಮಾರು ನಾಲ್ಕು ಲೋಟದಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
- ಕುದಿಯುತ್ತಿರುವ ನೀರಿಗೆ ಎರಡು ಹನಿ ಎಣ್ಣೆ, ಶುಂಠಿ ಹಸೀಮೆಣಸಿನಕಾಯಿ ಪೇಸ್ಟ್ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
- ನೀರು ಕುದಿಯುತ್ತಿರುವಾಗಲೇ ಒಲೆಯ ಉರಿಯನ್ನು ಕಡಿಮೆ ಮಾಡಿ ಅಕ್ಕಿಹಿಟ್ಟನ್ನು ನಿಧಾನವಾಗಿ ಅದಕ್ಕೆ ಸೇರಿಸಿ ಗಂಟಿಲ್ಲದ್ದಂತೆ ಚೆನ್ನಾಗಿ ಉಕ್ಕರಿಸಿಕೊಂಡು ಹಿಟ್ಟು ಗಟ್ಟಿಯಾದ ಮೇಲೆ ಸ್ವಲ್ಪ ಹೊತ್ತು ಆರಲು ಬಿಡಬೇಕು. ಹಿಟ್ಟು ಚೆನ್ನಾಗಿ ಆರಿದ ನಂತರ ಅದಕ್ಕೆ ನಾಲ್ಕೈದು ಚಮಚ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ನಾದಬೇಕು.
- ನಾದಿದ ಹಿಟ್ಟನ್ನು ಸಣ್ಣ ಸಣ್ಣ ನಿಂಬೇ ಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.
ಬಿಳೀ ಹೋಳಿಗೆಗಳನ್ನು ತಯಾರಿಸಲು ಕನಕದ ಹಿಟ್ಟನ್ನು ತಯಾರಿಸುವ ವಿಧಾನ :
- ಮೈದಾಹಿಟ್ಟನ್ನು ಅಗಲವಾದ ಪಾತ್ರೆಗೆ ಹಾಕಿಕೊಂಡು ಆದಕ್ಕೆ ಸ್ವಲ್ಪ ನೀರನ್ನು ಬೆರಿಸಿ ಗಟ್ಟಿಯಾಗಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲೆಸಿ ಇಟ್ಟುಕೊಳ್ಳಬೇಕು.
- ಕಲೆಸಿದ ಹಿಟ್ಟನ್ನು ಸ್ವಲ್ಪ ಸುಮಾರು ಒಂದು ಗಂಟೆಗಳ ಕಾಲ ನೆಯಲು ಬಿಟ್ಟು ನಂತರ ಸಣ್ಣ ನಿಂಬೇ ಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು
ಬಿಳೀ ಹೋಳಿಗೆಗಳನ್ನು ತಯಾರಿಸಲು ಹೂರಣದ ಹಿಟ್ಟನ್ನು ತಯಾರಿಸುವ ವಿಧಾನ :
- ಸಣ್ಣ ಉಂಡೆಗಳಾಗಿ ಮಾಡಿಕೊಂಡಿದ್ದ ಕನಕದ ಉಂಡೆ (ಮೈದಾ ಹಿಟ್ಟಿನ ಉಂಡೆ)ಯನ್ನು ಅಂಗೈಯ್ಯಲ್ಲಿ ಅಗಲ ಮಾಡಿಕೊಂಡು ಅದರರೊಳಗೆ ಹೂರಣದ ಉಂಡೆ (ಉಕ್ಕರಿಸಿದ ಅಕ್ಕಿ ಹಿಟ್ಟಿನ ಉಂಡೆ)ಯನ್ನು ಇಟ್ಟು ಮೋದಕದ ರೀತಿಯಲ್ಲಿ ಮಡಿಚಿಟ್ಟು ಕೊಳ್ಳಬೇಕು
- ಈಗ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿಕೊಂಡು ಮೋದಕ ರೀತಿಯ ಉಂಡೆಗಳನ್ನು ಚಪಾತಿಯ ರೀತಿಯಲ್ಲಿ ಲಟ್ಟಿಸಿಕೊಳ್ಳಬೇಕು
ಒಲೆಯ ಮೇಲೆ ಕಾವಲಿಯನ್ನು ಇಟ್ಟು ಕಾವಲಿ ಚೆನ್ನಾಗಿ ಕಾದ ನಂತರ ಲಟ್ಟಿಸಿದ ಹೋಳಿಗೆಯನ್ನು ಕಾವಲಿಯ ಮೇಲೆ ಹಾಕಿ - ಸ್ವಲ್ಪ ಎಣ್ಣೆಯನ್ನು ಸವರೀ ಎರಡು ಬದಿಯಲ್ಲಿಯೂ ಕೆಂಪಗಾಗುವಂತೆ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿಯಾದ ಬಿಳೀ ಹೋಳಿಗೆ ಸಿದ್ಧ.
ಮಾವಿನ ಗೊಜ್ಜನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
- ಸಾಸಿವೆ – 1/4 ಚಮಚ
- ಬ್ಯಾಡಗೀ ಮೆನಸಿನಕಾಯಿ – 8-10
- ಪುಡಿ ಮಾಡಿದ ಬೆಲ್ಲ – 1/4 ಬಟ್ಟಲು
- ತೆಂಗಿನ ಕಾಯಿ ತುರಿ – 1 ಬಟ್ಟಲು
- ರಸಭರಿತ ಮಾವಿನಹಣ್ಣು – 3-4
- ಕತ್ತರಿಸಿದ ಮೆಣಸಿನಕಾಯಿ – 4-6
- ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
- ಕತ್ತರಿಸಿದ ಕರಿಬೇವಿನ ಸೊಪ್ಪು -6-8 ಚಮಚ
- ಚಿಟುಕೆ ಅರಿಶಿನ
- ಚಿಟುಕೆ ಇಂಗು
- ಕೊಬ್ಬರೀ ಎಣ್ಣೆ – 1/4 ಬಟ್ಟಲು
- ರುಚಿಗೆ ತಕ್ಕಷ್ಟು ಉಪ್ಪು
ಮಾವಿನ ಗೊಜ್ಜನ್ನು ತಯಾರಿಸುವ ವಿಧಾನ :
- ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಚಿಪ್ಪೆಯನ್ನು ತೆಗೆದು ಚೆನ್ನಾಗಿ ರಸಬರುವಂತೆ ಒಂದು ಪಾತ್ರೆಯಲ್ಲಿ ಹಿಂಡಿಕೊಳ್ಳಿ
ತೆಂಗಿನ ತುರಿ, ಒಣಮೆಣಸಿನಕಾಯಿ ಮತ್ತು ಸಾಸಿವೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಚೆಟ್ನಿಯ ರೂಪದಲ್ಲಿ ರುಬ್ಬಿಕೊಳ್ಳಿ - ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಕೊಬ್ಬರೀ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿದ ನಂತರ ಚಿಟಿಕಿ ಇಂಗು ಮತ್ತು ಕತ್ತರಿಸಿದ ಒಣಮೆಣಸಿನಕಾಯಿ ಹಾಕಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ
- ಈಗ ರುಬ್ಬಿಕೊಂಡಿದ್ದ ಮಸಾಲೆಯನ್ನು ಬಾಣಲೆಗೆ ಹಾಕಿ ಹಸೀ ಹೋಗುವರೆಗೂ ಬಾಡಿಸಿಕೊಳ್ಳಿ
- ಕುದಿಯುತ್ತಿರುವ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಬೆಲ್ಲ, ಕತ್ತರಿಸಿದ ಕರಿಬೇವು ಮತ್ತು ಕೊತ್ತಂಬರೀ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ
- ಕುದಿಯುತ್ತಿರುವ ಮಿಶ್ರಣಕ್ಕೆ ಕಿವಿಚಿಕೊಂಡಿದ್ದ ಮಾವಿನ ಹಣ್ಣಿನ ರಸವನ್ನು ಸೇರಿಸಿ ಒಂದು ನಿಮಿಷ ಕಾಯಿಸಿದಲ್ಲಿ ರುಚಿ ರುಚಿಯದ ಘಮ ಘಮವಾದ ಮಾವಿನ ಹಣ್ಣಿನ ಗೊಜ್ಜು ಸಿದ್ಧ.
ಆದಾಗಲೇ ಸಿದ್ದ ಪಡಿಸಿ ಕೊಂಡಿದ್ದ ಬಿಸಿ ಬಿಸಿಯಾದ ಬಿಳೀ ಹೋಳಿಗೆಯೊಂದಿಗೆ ಈಗ ತಯಾರಿಸಿದ ಮಾವಿನ ಹಣ್ಣಿನ ಗೊಜ್ಜನ್ನು ನೆಂಚಿಕೊಂಡು ತಿನ್ನಲು ಬಲು ಮಜವಾಗಿರುತ್ತದೆ.
ಬಿಸಿ ಬಿಸಿಯಾದ ಬಿಳೀ ಹೋಳಿಗೆ ಜೊತೆಗೆ ರುಚಿಕರವಾದ ಮಾವಿನ ಹಣ್ಣಿನ ಗೊಜ್ಜನ್ನು ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಮಾವಿನ ಹಣ್ಣಿನ ಕಾಲದಲ್ಲಿ ಈ ರೀತಿಯಾಗಿ ಮಾವಿನ ಹಣ್ಣಿನ ಗೊಜ್ಜನ್ನು ತಯಾರಿಸಿಟ್ಟುಕೊಂಡು ಸುಮಾರು ಮೂರ್ನಾಲ್ಕು ದಿನಗಳ ಕಾಲ, ಪೂರಿ, ದೋಸೆ, ಚಪಾತಿ,ಅಲ್ಲದೇ ರಾಗಿ ಮುದ್ದೆ ಮತ್ತು ಅನ್ನದ ಜೊತೆಯೂ ಕಲೆಸಿಕೊಂಡು ತಿನ್ನಬಹುದಾಗಿದೆ. ಇನ್ನು ಅಕ್ಕಿ ಹಿಟ್ಟಿನ್ನು ಉಕ್ಕರಿಸಿಕೊಂಡು ಮಾಡಿದ ಬಿಳೀ ಹೋಳಿಗೆ ಎರಡು ಬಾರಿ ಬೇಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
ಈ ಆಹಾರ ವಿಧಾನವನ್ನು ಸಾವಕಾಶವಾಗಿ ನಮಗೆ ಮಾಡಿ ತೋರಿಸಿಕೊಟ್ಟ ಬೆಂಗಳೂರಿನ ದೊಡ್ಡಬೊಮ್ಮಸಂದ್ರ ನಿವಾಸಿ ಶ್ರೀಯುತ ಆರ್. ಆನಂದ್ ಅವರಿಗೆ ಅವರಿಗೆ ನಮ್ಮ ಏನಂತೀರೀ YouTube ಛಾನೆಲ್ಲಿನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
#ಅನ್ನಪೂರ್ಣ
#ಬಿಳೀಹೋಳಿಗೆ
#ಮಾವಿನಹಣ್ಣಿನ_ಗೊಜ್ಜು
#ಏನಂತೀರೀ