ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ ನಮ್ಮಲ್ಲಿ 33 ಕೋಟಿಗೂ ಅಧಿಕ ದೇವರುಗಳು ಇದ್ದಾರೆ ಮತ್ತು ಪ್ರತಿಯೊಬ್ಬ ದೇವರಿಗೂ ಅದರದ್ದೇ ಅದ ಶಕ್ತಿ ಸಾಮರ್ಥ್ಯಗಳಿವೆ ಎಂದು ನಂಬಿರುವ ಕಾರಣ ಆವರವರ ನಂಬಿಕೆ ಮತ್ತು ಭಕ್ತಿಗಳ ಅನುಗುಣವಾಗಿರುವ ಭಕ್ತ ಸಮೂಹವಿದೆ. ಹಾಗಿದ್ದಲ್ಲಿ ನಿಜವಾಗಿಯೂ ದೇವರಿದ್ದಾನೆಯೇ? ಎಂದು ಕೇಳಿದರೆ ಅದನ್ನು ಪ್ರತ್ಯಕ್ಷವಾಗಿ ನೋಡಿದವರು ಇಲ್ಲದ ಕಾರಣ ಸೂಕ್ತವಾದ ಉತ್ತರವನ್ನು ಕೊಡುವುದು ಕಷ್ಟವಾದರೂ, ದೈವೀ ಶಕ್ತಿ ಎಂಬ ಅಗೋಚರವಾದ ಅನುಭವವನ್ನು ಅನೇಕರು ಅನುಭವಿಸಿದ್ದಾರೆ. ಹಾಗಾಗಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ತಮ್ಮ ತಮ್ಮ ಕಲ್ಪನೆಗೆ ಅನುಗುಣವಾದ ರೂಪಗಳನ್ನು ಭಗವಂತನಿಗೆ ಕೊಟ್ಟು ಅವುಗಳನ್ನು ಮೂರ್ತಿರೂಪದಲ್ಲಿ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿದ್ದೇವೆ. ನಮ್ಮ ದೇವರುಗಳು ಸರ್ವಾಂತರ್ಯಾಮಿಯಾಗಿ ಎಲ್ಲಾ ಕಡೆಯಲ್ಲಿಯೂ ಇರುವಾಗ ಅವನಿಗೊಂದು ಪ್ರತ್ಯೇಕ ದೇವಾಲಯಗಳೇಕೆ? ಎಂದು ವಾದಿಸುವವರಿಗೇನೂ ಕಡಿಮೆ ಇಲ್ಲ
ನಿಜಕ್ಕೂ ಹೇಳಬೇಕೆಂದರೆ ನಮ್ಮ ಪೂರ್ವಜರು ದೇವಾಲಯಗಳನ್ನು ಶಕ್ತಿ ಮತ್ತು ಶ್ರದ್ಧಾ ಕೇಂದ್ರಗಳಾಗಿ ನಿರ್ಮಿಸಿದ್ದರು. ಜನರನ್ನು ಧಾರ್ಮಿಕವಾಗಿ ಒಂದು ನಿರ್ಧಿಷ್ಟ ಸಮಯದಲ್ಲಿ ಒಗ್ಗೂಡಿಸುವ ಕೇಂದ್ರಗಳಾಗಿಸಿದ್ದರು. ಆಲ್ಲಿಗೆ ಬರುವ ಭಕ್ತಾದಿಗಳಿಗೆ ಒಂದು ಮನಸ್ಸು ಶುದ್ಧವಾಗುತ್ತದೆ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಸ್ಥಳದ ಮಹಿಮೆಯಿಂದ ಭಕ್ತರಿಗೆ ಧನಾತ್ಮಕ ಚಿಂತನಾ ಶಕ್ತಿ ಸಿಗುತ್ತಿತ್ತು ಮತ್ತು ಅವನ ಆಚಾರ-ವಿಚಾರ-ಉಚ್ಚಾರಗಳು ಶುದ್ಧವಾಗುತ್ತಿದ್ದವು.
ಹಾಗಾಗಿ ದೇವಾಲಯಗಳನ್ನು ನಿರ್ಮಿಸುವಾಗ ಸ್ಥಳೀಯ ಪರಿಸರ, ಹವಾಗುಣ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದಾಗಿ ಅನುಗುಣವಾಗಿ ಅದ್ಭುತ ವಾಸ್ತುಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಹಾಗೆ ದೇವಾಲಯಗಳ ಗರ್ಭಗುಡಿ, ಕಂಬಗಳು ಗೋಪುರ ಮತ್ತು ಕಳಸಗಳು ಕಾಂತೀಯ ಹಾಗೂ ವಿದ್ಯುತ್ ತರಂಗಗಳನ್ನು ಉತ್ಪತ್ತಿಸುತ್ತವೆ ಈ ತರಂಗಾಂತರಗಳು ದೇವಾಯಗಳಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಇನ್ನು ದೇವರ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಅವುಗಳಿಗೆ ಪ್ರಾಣಪ್ರತಿಷ್ಠಾಪನೆ ಮಾಡುವ ಮೂಲಕ ಆ ಜಾಗದಲ್ಲಿ ಕಾಂತೀಯ ಶಕ್ತಿ ಹೆಚ್ಚಾಗಿ ಕೇಂದ್ರಿತವಾಗಿರುವಂತೆ ಮಾಡುತ್ತಿದ್ದರ ಪರಿಣಾಮ ಗರ್ಗಗೃಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರುತ್ತಿತ್ತು.
ಇನ್ನು ದೇವಸ್ಥಾನದ ದಿಕ್ಕು, ರಾಜಗೋಪುರ ಮತ್ತು ದೇವಾಲಯದಲ್ಲಿ ನೆಲಕ್ಕೆ ಬಳಸಲಾಗುವ ಹಾಸುಗಲ್ಲುಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿದ್ದು ಅವೂ ಸಹಾ ಧನಾತ್ಮಕ ತರಂಗಾಂತರಗಳು ಪ್ರವಹಿಸುವಂತೆ ಮಾಡುವುದಲ್ಲದೇ ಭಕ್ತಾದಿಗಳ ಏಕಾಗ್ರತೆಯನ್ನು ಮತ್ತು ಶಾಂತಿಯನ್ನು ಕೊಡಲು ಸಹಕರಿಸುತ್ತಿದ್ದವು.
ದೇವಸ್ಥಾನದಲ್ಲಿ ಪೂಜೆಯ ನಂತರ ಕೊಡುವ ತೀರ್ಥ ಮತ್ತು ಪ್ರಸಾದಗಳಲ್ಲಿಯೂ ಸಹಾ ಔಷಧೀಯ ಗುಣಗಳಿಂದ ಭರಿತವಾಗಿರುತ್ತದೆ. ತಾಮ್ರದ ಕಳಸದಲ್ಲಿ, ಪಚ್ಚ ಕರ್ಪೂರ, ತುಳಸಿದಳ ಬೆರೆಸಿದಂತಹ ಔಷಧೀಯ ಗುಣಗಳಿರುವ ತೀರ್ಥ ನಿಜಕ್ಕೂ ಆರೋಗ್ಯವೇ ಹೌದು. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆ ಮತ್ತು ಉದ್ದರಣೆಯ ಮೂಲಕ ಸ್ವೀಕರಿಸುವ ತೀರ್ಥವು ವಾತ, ಪಿತ್ತ ಕಫ ಎಂಬ ತ್ರಿದೋಷಗಳನ್ನು ನಿವಾರಿಸಲು ಸಹಾಯ ಮಾಡಿದರೆ, ತುಳಸಿದಳವು ಜಿಹ್ವಾ ಶಕ್ತಿಯನ್ನು ಕ್ರಿಯಾತ್ಮಕವಾಗಿಡುತ್ತದೆ. ಪ್ರಸಾದ ರೂಪದಲ್ಲಿ ಕೊಡುವ ಬೆಲ್ಲದ ಪಾಯಸ, ಮೆಣಸು, ಜೀರಿಗೆ, ಕಾಯಿ, ಅಕ್ಕಿ ಮತ್ತು ಹೆಸರು ಬೇಳೆಗಳಿಂದ ಕೂಡಿದ ಪಂಚಾನ್ನ(ಪೊಂಗಲ್) ಆರೋಗ್ಯಕ್ಕೆ ಉತ್ತಮವಾದದ್ದು.
ಮಂಗಳಾರತಿಯ ಸಮಯದಲ್ಲಿ ಮಾಡುವ ಘಂಟಾನಾದದ ತರಂಗಗಳು ಭಕ್ತಾದಿಗಳಲ್ಲಿ ಧನಾತ್ಮಕ ಕಂಪನಗಳನ್ನು ಜಾಗೃತಗೊಳಿಸಿದರೆ, ಕರ್ಪೂರದಾರತಿಯಿಂದ ಏಕಾಗ್ರತೆ ಹೆಚ್ಚಿಸುವುದಲ್ಲದೇ, ಆರತಿಯಿಂದ ಬಿಸಿಯಾದ ಕೈಗಳನ್ನು ಕಣ್ಣುಗಳಿಗೆ ಸ್ಪರ್ಶಿಸುವುದರಿಂದ ಸ್ಪರ್ಶಜ್ಞಾನ ಕ್ರಿಯಾತ್ಮಕವಾಗಿರುತ್ತದೆ ಮತ್ತು ಪಂಚೇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಇನ್ನು ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತು ಹಾಕಿದಾಗ ಭಕ್ತಾದಿಗಳ ಇಂದ್ರಿಯಗಳು ದೇವಾಲಯದ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಎಂದು ವೇದವಿಜ್ಞಾನ ಹೇಳುತ್ತದೆ.
ನಮ್ಮ ಪೂರ್ವಜರು ಬಹುತೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ದಟ್ಟವಾದ ಕಾಡುಗಳಲ್ಲಿ ಕಡಿದಾದ ಬೆಟ್ಟದ ತುತ್ತ ತುದಿಯಲ್ಲಿ ನಿರ್ಮಿಸುತ್ತಿದ್ದ ಹಿಂದೆಯೂ ಒಂದು ಕಾರಣವಿತ್ತು. ಆ ಗೊಂಡಾರಣ್ಯದಲ್ಲಿದ್ದ ಭಗವಂತನ ದರ್ಶನ ಮಾಡಲು ಈ ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಮಡಿ ಹುಡಿಯಿಂದ ತಮ್ಮೆಲ್ಲಾ ಕಷ್ಟಗಳನ್ನು ಮರೆತು ಭಗವಂತನ ಸಂಕೀರ್ತನೆ ಮಾಡುತ್ತಾ ಭಕ್ತಿ ಪರವಶರಾಗಿ ಭಗವಂತನ ಧ್ಯಾನವನ್ನೇ ಮಾಡುತ್ತಲೇ ಬೆಟ್ಟವನ್ನು ಹತ್ತಲಿ ಎನ್ನುವುದು ನಮ್ಮ ಪೂರ್ವಜರ ಭಾವನೆಯಾಗಿತ್ತು. ಇನ್ನು ಆ ರೀತಿಯಲ್ಲಿ ಚಾರಣ ಮಾಡುವಾಗ ಮನಸ್ಸು ಮತ್ತು ದೇಹ ಎರಡಕ್ಕೂ ಸಾಕಷ್ಟು ಪರಿಶ್ರಮ ದೊರೆತು ಅಂತಿಮವಾಗಿ ಭಗವಂತನ ದರ್ಶನ ಮಾಡಿದಾಗ ದೊರೆಯುತ್ತಿದ್ದ ಆನಂದವೇ ಬೇರೆ. ಆ ಕಾಡಿನಲ್ಲಿ ಬರೀ ಕಾಲಿನಲ್ಲಿ ಹೋಗುತ್ತಿದ್ದಾಗ ಅಲ್ಲಿದ್ದ ಅನೇಕ ಔಷಧೀಯ ಸಸ್ಯಗಳಿಂದ ಅತ್ಯುತ್ತಮ ಆಮ್ಲಜನಕ ಅವರ ದಣಿವನ್ನು ನಿವಾರಿಸುತ್ತಿದ್ದಲ್ಲದೇ ಅವರ ಅನೇಕ ಖಾಯಿಲೆಗಳು ಪರೋಕ್ಷವಾಗಿ ನಿವಾರಣೆಯಾಗುತ್ತಿತ್ತು. ನಾವು ಎಷ್ಟೇ ದೊಡ್ಡವರಾದರೂ ದೇವರ ಮುಂದೆ ಇನ್ನೂ ಸಣ್ಣವರೇ ಎಂಬ ಸಂಕೇತವಾಗಿಯೂ ದೇವಾಲಯಗಳನ್ನು ಎತ್ತರದ ಸ್ಥಾನಗಳಲ್ಲಿ ನಿರ್ಮಿಸುತ್ತಿದ್ದರು. ಇನ್ನು ದೇವಸ್ಥಾನಗಳಲ್ಲಿ ದೇವರಿಗೆ ಶಿರಬಾಗಿ ಸಾಷ್ಟಾಂಗ ನಮಸ್ಕರಿಸುವ ಮೂಲಕ ನಮ್ಮಲ್ಲಿರುವ ಅಹಂ ದೂರವಾಗಿಸಲಿ ಎನ್ನುವುದು ನಮ್ಮ ಹಿರಿಯರ ಭಾವನೆಯಾಗಿತ್ತು. ಇನ್ನು ಹಬ್ಬ ಹರಿದಿನಗಳು ಮತ್ತು ವಿಶೇಷ ದಿನಗಳಂದು ದೇವಾಲಗಳಲ್ಲಿ ನಡೆಸುತ್ತಿದ್ದ ಹರಿಕಥೆ, ಸಂಗೀತ, ನೃತ್ಯ ಭಜನಾ ಸಂಕೀರ್ತನಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳಿಗೆ ಮನೋರಂಜನೆಯೊಂದಿಗೆ ನೆಮ್ಮದಿಯನ್ನು ಕೊಡುತ್ತಿದ್ದದ್ದಲ್ಲದೇ ಭಕ್ತಾದಿಗಳ ಭೌದ್ಧಿಕ ಮಟ್ಟವನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದ್ದವು.
ದಿನ ಕಳೆದಂತೆಲ್ಲಾ ಈ ತೀರ್ಥಕ್ಷೇತ್ರಗಳನ್ನು ಅಲ್ಲಿಯ ಆಡಳಿತ ಮಂಡಳಿಗಳು ಮತ್ತು ರಾಜಕೀಯ ಧುರೀಣರು ಪ್ರಸಿದ್ಧ ಯಾತ್ರಾ ಸ್ಥಳಗಳನ್ನಾಗಿ ಪರಿವರ್ತಿಸಿ ಶ್ರದ್ಧಾಕೇಂದ್ರಗಳ ಬದಲಾಗಿ ಆದಾಯ ತರುವ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾಡು ಮೇಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನಾಗಿ ಪರಿವರ್ತಿಸಿ ಪರಿಸರದ ಹಾನಿಗೆ ಕಾರಣೀಭೂತರಾಗಿ ನಮ್ಮ ಪೂರ್ವಜರ ಮೂಲ ಆಶಯಕ್ಕೇ ಕೊಳ್ಳಿ ಇಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ದೇವರ ಧ್ಯಾನ ಮಾಡುತ್ತಾ ಶ್ರಮದಿಂದ ಬೆವರು ಸುರಿಸಿ ಮೆಟ್ಟಲುಗಳನ್ನು ಹತ್ತಿ ದೇವರ ದರ್ಶನ ಮಾಡುವಾಗ ದೊರೆಯುವ ಆನಂದ ಬೆಟ್ಟಗಳನ್ನು ಕಡಿದು ರಸ್ತೆಗಳನ್ನು ಮಾಡಿ ತುತ್ತ ತುದಿಯವರೆಗೆ ನೇರವಾಗಿ ವಾಹನದ ಮೂಲಕ ತಲುಪಿದಾಗ ಇಲ್ಲವೇ ರೋಪ್ ಟ್ರೈನ್ ಮೂಲಕ ಆರಾಮವಾಗಿ ದೇವರ ದರ್ಶನ ಮಾಡಿದಲ್ಲಿ ಅಂತಹ ಸಾರ್ಥಕತೆ ದೊರೆಯದು ಎಂದೇ ನನ್ನ ಭಾವನೆ.
ಇನ್ನು ದೇವಸ್ಥಾನಗಳ ಪುನರುಜ್ಜೀವನದ ಹೆಸರಿನಲ್ಲಿ ನಮ್ಮ ಪೂರ್ವಜರು ಸ್ಥಳೀಯ ಪರಿಸರ ಸಂಪ್ರದಾಯ ಮತ್ತು ಹವಾಮಾನಗಳಿಗೆ ಅನುಗುಣವಾಗಿ ನಿರ್ಮಿಸಿದ್ದ ವಾಸ್ತುಶಿಲ್ಪಗಳ ಬದಲಾಗಿ ಕರಾವಳಿ ಮಾದರಿಯ ದೇವಾಲಯಗಳನ್ನು ನಿರ್ಮಿಸುತ್ತಿರುವುದು ಸರಿಯಾದ ನಿರ್ಣಯವಲ್ಲ ಎಂದೇ ನನ್ನ ಭಾವನೆ. ದೇವಾಲಯ ನಿರ್ಮಿಸುವಾಗ ಸ್ಥಳೀಯ ಇತಿಹಾಸ ಮತ್ತು ಸಂಶೋಧಕರ ಸಲಹೆ ತೆಗೆದುಕೊಳ್ಳುವುದಕ್ಕಿಂತ, ಕರಾವಳಿ ಪ್ರಾಂತ್ಯದ ಅಷ್ಟ ಮಂಗಳ ಪ್ರವೀಣರು ಮತ್ತು ವಾಸ್ತು ಶಿಲ್ಪಿಗಳ ಸಲಹೆಯ ಮೇಲೆ ದೇವಸ್ಥಾನ ನಿರ್ಮಿಸುತ್ತಿರುವುದು ಮತ್ತು ಅದಕ್ಕೆ ಅನುಗಣವಾಗಿ ನದೀ ಪಾತ್ರಗಳನ್ನು ಬದಲಿಸುವುದು, ಭಕ್ತಾದಿಗಳು ಉಳಿದುಕೊಳ್ಳಲು ಯಾತ್ರಿನಿವಾಸ ನಿರ್ಮಿಸುವ ಭರದಲ್ಲಿ ಕಾಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ಬೆಳೆಸುತ್ತಿರುವುದು ಮತ್ತು ತೀರ್ಥಕ್ಷೇತ್ರಗಳೆಂಬುದನ್ನು ಮರೆತು ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಂದಾಗಿ ಜನರಿಗೆ ತೀರ್ಥಕ್ಷೇತ್ರಗಳ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆ ಮೂಡುತ್ತಿರುವುದು ನಿಜಕ್ಕೂ ದುಃಖಕರವೇ ಸರಿ.
ದೇವಾಲಯಗಳೆಂಬ ಶ್ರದ್ಧಾ ಕೇಂದ್ರಗಳು ನಮ್ಮ ಹಿಂದೂ ಧರ್ಮದ ಸಿದ್ಧಾಂತ ಮತ್ತು ಪೂರ್ವಜರ ದೂರದೃಷ್ಟಿಯ ಬುನಾದಿಯ ಮೇಲೆ ನಿಂತಿದೆ ಎಂಬುದನ್ನು ಮರೆತು, ಕಾಟಾಚಾರಕ್ಕೆ ದೇವಸ್ಥಾನಕ್ಕೋ ಇಲ್ಲವೇ ತೀರ್ಥಕ್ಷೇತ್ರಗಳಿಗೆ ಹೋಗುವುದರಿಂದ ನಮ್ಮ ಹಿಂದು ಧರ್ಮವನ್ನು ಸಂರಕ್ಷಣೆ ಮಾಡುವುದು ಸಾಧ್ಯ ಇಲ್ಲದ ಮಾತಾಗಿದೆ. ಮೊದಲು ನಾವುಗಳು ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಬೇಕು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ ವಸ್ತ್ರಸಂಹಿತೆಯೊಂದಿಗೆ ಅಲ್ಲಿಯ ಶಾಸ್ತ್ರ, ಸಂಪ್ರದಾಯಗಳ ಅನುಗುಣವಾಗಿ ನಡೆದುಕೊಂಡಲ್ಲಿ ಮಾತ್ರವೇ ನಾವು ನಮ್ಮ ಧರ್ಮವನ್ನು ಸಂರಕ್ಷಣೆ ಮಾಡಲು ಸುಲಭವಾಗುತ್ತದೆ. ಇಲ್ಲದೇ ಹೋದಲ್ಲಿ ನಮ್ಮ ಹಿಂದು ಧಾರ್ಮಿಕ ಪುಣ್ಯಕ್ಷೇತ್ರಗಳು ಕೇವಲ ಪ್ರವಾಸಿ ತಾಣವಾಗಿ ಸರ್ಕಾರಕ್ಕೆ ಆದಯ ತರುವ ತಾಣಗಳಾಗಿ ಹೋಗುತ್ತದೆ.
ಏನಂತೀರೀ?
ಸರ್ ಅದ್ಭುತವಾದ ಬರವಣಿಗೆ. ದೇವಾಲಯದ ಪರಿಕಲ್ಪನೆ, ಅದರ ಸ್ಥಾನದ ಪ್ರಾಮುಖ್ಯತೆ, ದೇವಾಲಯದಲ್ಲಿ ಅನುಭವಿಸಲು ಸಿಗುವ ಸಾತ್ವಿಕ ಕಂಪನ, ನೆಮ್ಮದಿ ಎಲ್ಲವನ್ನೂ ಸೊಗಸಾಗಿ ವಿವರಿಸಿದ್ದೀರ. ಇಂದು ಕುಕ್ಕೆ, ಕೊಲ್ಲೂರು, ತಿರುಪತಿ ಸರ್ಕಾರಕ್ಕೆ ಬೊಕ್ಕಸ ತುಂಬಿಸುವ ಕೇಂದ್ರಗಳಾಗಿವೆ. ಉದಾಹರಣೆಗೆ ಕುಕ್ಕೆಯಲ್ಲಿ ಈ ಹಿಂದೆ ಅಂದರೆ 20 ವರ್ಷಗಳ ಕೆಳಗೆ ನಡೆಯುತ್ತಿದ್ದ ಸರ್ಪಸಂಸ್ಕಾರ ಏಳು ದಿನ ನಡೆಯುತ್ತಿತ್ತು ಅದಕ್ಕೆ ಅದರದೇ ಆದ ನಿಯಮಗಳು ಇದ್ದವು. ಆದರೆ ಇಂದು ಯಾರ ಹತ್ತಿರವೂ ಸಮಯ ಇಲ್ಲ ಮತ್ತು ಸರ್ಕಾರಕ್ಕೆ ದುಡ್ಡು ಮುಖ್ಯವೇ ಹೊರತು ಧಾರ್ಮಿಕ ಕಟ್ಟುನಿಟ್ಟಿನ ಆಚರಣೆಗಳು ಅಲ್ಲ ಹಾಗಾಗಿ ಇಂದು ಕೇವಲ ಒಂದೇ ದಿನಕ್ಕೆ ಸರ್ಪ ಸಂಸ್ಕಾರ ಮಾಡಿಕೊಂಡು ಜನರು ತಮ್ಮ ಊರಿಗೆ ಮರುಳುತ್ತಾರೆ. ಇನ್ನೂ ಸಮಸ್ಯೆಗಳು ಬಗೆಹರಿಯದ್ದಿದ್ದರೆ ದೇವರಿಗೆ, ಭಟ್ಟರಿಗೆ ಮತ್ತು ಕೊನೆಯಲ್ಲಿ ಅಪ್ಪ ಅಮ್ಮನಿಗೆ ಬೈಯುತ್ತಾರೆ. ಇಂತಹಾ ಸಮಯದಲ್ಲಿ ನಿಮ್ಮ ಈ ಬರವಣಿಗೆ ನಿಜಕ್ಕೂ ಸ್ವಾಗತಾರ್ಹ
ಧನ್ಯವಾದಗಳು
🙏🙏🙏
LikeLike
ಧನ್ಯವಾದಗಳು. ಲೇಖನದಲ್ಲಿಯೇ ತಿಳಿಸಿದಂತೆ ಈ ಲೇಖನಕ್ಕೆ ನೀವೇ ಸ್ಪೂರ್ತಿ.
LikeLike
[…] ಹಿಂದಿನ ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ… ಲೇಖನದಲ್ಲಿ ವಿವರಿಸಿರುವಂತೆ ನಮ್ಮ […]
LikeLike