ಎಲ್ಲರಿಗೂ ಗೊತ್ತಿರುವಂತೆ ಅಮೇರಿಕಾದ ಜನರಲ್ ಮೋಟಾರ್ಸ್ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಪುರಾತನವಾದ ಮತ್ತು ಅಷ್ಟೇ ದೊಡ್ಡ ಹೆಸರನ್ನು ಗಳಿಸಿದೆ. ಆ ಕಂಪನಿಯ ವಾಹನಗಳನ್ನು ಹೊಂದಲು ಇಂದಿಗೂ ಜನ ಹೆಮ್ಮೆ ಪಡುತ್ತಾರೆ. ಆದರೆ ಆಂತಹ ಜನರಲ್ ಮೋಟಾರ್ಸ್ ಕಂಪನಿಯನ್ನೇ ಒಂದು ವೆನಿಲ್ಲಾ ಐಸ್ ಕ್ರೀಮ್ ಗೊಂದಲಕ್ಕೀಡು ಮಾಡಿದಂತಹ ಜನರಲ್ ಮೋಟಾರ್ಸ್ ಗ್ರಾಹಕ ಮತ್ತು ಅದರ ಗ್ರಾಹಕ-ಆರೈಕೆ ಕಾರ್ಯನಿರ್ವಾಹಕರ ನಡುವೆ ನಡೆದ ಒಂದು ನೈಜ ರೋಚಕವಾದ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಅದೊಂದು ದಿನ ಜನರಲ್ ಮೋಟಾರ್ಸ್‌ನ ಕಂಪನಿಯ ಫಾನ್ಟಿಯಾಕ್ ಕಾರನ್ನು ಕೊಂಡ ಗ್ರಾಹಕರೊಬ್ಬರು ಈ ರೀತಿಯಾದ ದೂರನ್ನು ದಾಖಲಿಸುತ್ತಾರೆ.
ಇತ್ತೀಚೆಗೆ ನಾನು ನಿಮ್ಮ ಕಂಪೆನಿಯ ಫಾನ್ಟಿಯಾಕ್ ಕಾರನ್ನು ಕೊಂಡುಕೊಂಡಿದ್ದೇನೆ ಮತ್ತು ಒಂದು ರೀತಿಯ ವಿಚಿತ್ರವಾದ ಸಮಸ್ಯೆಯನ್ನು ಅನುಭವಿಸುತ್ತಿದ್ದೇನೆ. ಈ ಕುರಿತಂತೆ ಈ ಮೊದಲೇ ನಿಮಗೆ ದೂರನ್ನು ಇತ್ತಿದ್ದೇನಾದರೂ ನಿಮ್ಮಿಂದ ಇದುವರೆವಿಗೂ ಯಾವುದೇ ಉತ್ತರ ಬಾರದ ಕಾರಣ ನಾನು ನಿಮಗೆ ಎರಡನೇ ಬಾರಿಗೆ ದೂರನ್ನು ಸಲ್ಲಿಸುತ್ತಿದ್ದೇನೆ. ನಿಮಗೆ ಈ ಸಮಸ್ಯೆ ವಿಚಿತ್ರವಾಗಿ ಕಂಡಿರಬಹುದಾದ್ದರಿಂದಾಗಿ ನೀವು ಉತ್ತರಿಸದಿದ್ದಕ್ಕಾಗಿ ನಾನು ನಿಮ್ಮನ್ನು ದೂಷಿಸುವುದಿಲ್ಲವಾದರೂ ಮತ್ತೊಮ್ಮೆ ನನ್ನ ಸಮಸ್ಯೆಯನ್ನು ನಿಮಗೆ ವಿವರಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಪ್ರತೀ ದಿನ ರಾತ್ರಿ ಊಟವಾದ ನಂತರ ಐಸ್-ಕ್ರೀಮ್ ತಿನ್ನುವ ಆಭ್ಯಾಸವನ್ನು ಮಾಡಿಕೊಂಡಿದ್ದೇವೆ. ಹಾಗಾಗಿ ಪ್ರತೀ ದಿನವೂ ನಮ್ಮ ಮನೆಯ ಸಮೀಪದ ಐಸ್ ಕ್ರೀಂ ಅಂಗಡಿಯಲ್ಲಿ ಒಂದೊಂದು ಬಗೆಯ ಐಸ್ ಕ್ರೀಂ ಕೊಂಡು ತಿನ್ನುತ್ತೇವೆ.
ವಿಚಿತ್ರವೆಂದರೇ, ನಾವು ವೆನಿಲ್ಲಾ ಐಸ್‌ಕ್ರೀಮ್ ಖರೀದಿಸಿ ಸವಿದು ಅಂಗಡಿಯಿಂದ ಮನೆಗೆ ಹಿಂದಿರುಗಲು ಪ್ರಯತ್ನಿಸಿದರೆ, ನನ್ನ ಕಾರು ಪ್ರಾರಂಭವಾಗುವುದಿಲ್ಲ. ಆದರೇ, ನಾನು ಬೇರೆ ಯಾವುದೇ ರುಚಿಯ ಐಸ್ ಕ್ರೀಮ್ ತಿಂದ ನಂತರ, ಕಾರು ಸುಲಭವಾಗಿ ಪ್ರಾರಂಭವಾಗುತ್ತದೆ. ನಿಮಗೆ ಈ ಸಮಸ್ಯೆ ವಿಚಿತ್ರವೆನಿಸಿದರೂ ಒಬ್ಬ ಗ್ರಾಹಕನಾಗಿ ನನಗೆ ತೊಂಬಾ ತೊಂದರೆಯಾಗುತ್ತಿರುವ ಕಾರಣ, ತಾವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅತೀ ಶೀಘ್ರವಾಗಿ ಪರಿಹಾರವನ್ನು ಸೂಚಿಸಬೇಕಾಗಿ ಕೋರುತ್ತೇನೆ ಎಂದು ಬರೆದಿದ್ದರು. ಫಾನ್ಟಿಯಾಕ್ ಕಾರ್ ಅಧಿಕಾರಿಗಳಿಗೆ ಈ ಸಮಸ್ಯೆ ಅರ್ಥವಾಗದಿದ್ದರೂ, ಇದು ಖಂಡಿತವಾಗಿಯೂ ನಮ್ಮ ಕಾರಿನ ಸಮಸ್ಯೆಯಲ್ಲ ಎಂದೆನಿಸಿದರೂ ಗ್ರಾಹಕರ ಸೇವೆಯನ್ನು ಪರಿಗಣಿಸಿ, ಪ್ರತ್ಯಕ್ಷಿಸಿ ನೋಡಿದರೂ ಪ್ರಾಮಾಣಿಸಿ ನೋಡು ಎನ್ನುವಂತೆ ತಮ್ಮ ನುರಿತ ಎಂಜಿನಿಯರ್ ಒಬ್ಬರನ್ನು ಈ ಸಮಸ್ಯೆಯನ್ನು ಪರೀಕ್ಷಿಸಲು ಕಳುಹಿಸಿದರು.
ಈ ಸಮಸ್ಯೆಯನ್ನು ಪರೀಕ್ಷಿಸಲು ಗ್ರಾಹಕರ ಮನೆಗೆ ಬಂದ ಎಂಜೀನಿಯರ್, ಅವರೊಡನೆಯೇ ರಾತ್ರಿ ಊಟ ಮುಗಿಸಿದ ನಂತರ ಅವರ ಪ್ರತೀದಿನ ರೂಢಿಯಂತೆ ಎಲ್ಲರೂ ಸೇರಿ ಅದೇ ಕಾರಿನಲ್ಲಿ ಐಸ್ ಕ್ರೀಮ್ ಅಂಗಡಿಗೆ ಬಂದು, ವೆನಿಲ್ಲಾ ಐಸ್ ಕ್ರೀಮ್ ತಿಂದು ಕಾರಿನಲ್ಲಿ ಕುಳಿತು, ಕಾರ್ ಆರಂಭಿಸಲು ಪ್ರಯತ್ನಿಸಿದರೆ ಕಾರ್ ಶೀಘ್ರವಾಗಿ ಆರಂಭವಾಗಲೇ ಇಲ್ಲ. ಬಹಳ ಸಮಯದ ನಂತರ ಕಾರ್ ಆರಂಭವಾಗಿ ಸುರಕ್ಷಿತವಾಗಿ ಮನೆ ಸೇರಿಕೊಂಡರು.
ಇದೇ ರೀತಿಯ ಪರೀಕ್ಷೇ ಮುಂದಿನ ಎರಡು ಮೂರು ದಿನಗಳು ಮುಂದವರೆದು, ಮೊದಲ ದಿನ ಚಾಕೊಲೇಟ್ ಐಸ್ ಕ್ರೀಂ ತಿಂದ ದಿನ ಕಾರು ಸುಲಭವಾಗಿ ಪ್ರಾರಂಭವಾಗಿತ್ತು. ಎರಡನೇ ರಾತ್ರಿ, ಅವರು ಸ್ಟ್ರಾಬೆರಿ ತಿಂದಾಗಲೂ ಕಾರ್ ಯಾವುದೇ ರೀತಿಯ ತೊಂದರೆ ಕೊಡಲಿಲ್ಲ. ಮೂರನೇ ದಿನ ಪರೀಕ್ಷೆಗೆಂದು ಮತ್ತೆ ವೆನಿಲ್ಲಾ ಐಸ್ ಕ್ರೀಂ ತಿಂದು ಕಾರನ್ನು ಆರಂಭಿಸಿದರೆ, ಯಥಾ ಪ್ರಕಾರ ಕಾರ್ ಕೈ ಕೊಟ್ಟಿತು.
ಈಗ ಎಂಜಿನಿಯರ್ಗೆ ಒಂದು ರೀತಿಯ ಪೀಕಲಾಟ ಉಂಟಾಯಿತು. ಆತ ಬಹಳ ತಾಳ್ಮೆವಂತ ಮತ್ತು ತಾರ್ಕಿಕ ಮನುಷ್ಯನಾಗಿರುವುದರಿಂದ ಆತನಿಗೆ ತಮ್ಮ ಕಾರಿಗೂ ಮತ್ತು ವೆನಿಲ್ಲಾ ಐಸ್ ಕ್ರೀಂಗೆ ಅಲರ್ಜಿಯನ್ನು ಹೊಂದಿದೆಯೆಂದು ನಂಬಲು ಸಾಧ್ಯವಿಲ್ಲವಾದರೂ ಗ್ರಾಹಕರಿಗೆ ನೇರವಾಗಿ ತಿಳಿಸಲು ಇಚ್ಚಿಸದೇ, ನಯವಾಗಿ ಇಲ್ಲಿ ಏನೋ ಗಹನವಾದ ಸಮಸ್ಯೆ ಇರುವ ಕಾರಣ ಇದನ್ನು ಪರಿಹರಿಸಲು ನನಗೆ ಇನ್ನೋ ಸ್ವಲ್ಪ ಕಾಲಾವಕಾಶ ಮತ್ತು ನಿಮ್ಮ ಸಹಾಯ ಅವಶ್ಯಕತೆ ಇದೆ. ಹಾಗಾಗಿ ನೀವು ನಮ್ಮೊಂದಿಗೆ ಸಹಕರಿಸಬೇಕೆಂದು ಗ್ರಾಹಕರನ್ನು ಕೇಳಿಕೊಂಡನು. ಆತನ ನಡುವಳಿಕೆ ಮತ್ತು ಸಭ್ಯತೆಯನ್ನು ಮೆಚ್ಚಿದ ಗ್ರಾಹಕರೂ ಸಮಯ ಮತ್ತು ಸಹಕಾರವನ್ನು ನೀಡಲು ಒಪ್ಪಿದರು. ಅಂದಿನಿಂದ ಆತ ಪ್ರತೀ ದಿನ, ಕಾರ್ ಓಡಿಸುತ್ತಿದ್ದ ಸಮಯ, ಅಂಗಡಿಯಲ್ಲಿ ಇರುತ್ತಿದ್ದ ಸಮಯ, ಪೆಟ್ರೋಲ್ ವಿವರಗಳು ಗಾಡಿ ಹಿಂದಕ್ಕೆ, ಮುಂದಕ್ಕೆ ಓಡಿಸುವ ಸಮಯ ಹೀಗೆ ಎಲ್ಲವನ್ನೂ ವಿಸ್ತೃತವಾಗಿ ಬೆರೆದುಕೊಂಡು ಅದನ್ನು ಕೂಲಂಕೂಶವಾಗಿ ಪರೀಕ್ಷಿಸತೊಡಗಿದನು.
ಈ ರೀತಿಯ ಕೂಲಂಕುಶದ ಪರೀಕ್ಷಾ ಸಮಯದಲ್ಲಿ ಅತನಿಗೊಂದು ಒಂದು ಸುಳಿವು ಸಿಕ್ಕಿತು. ಅದೇನೆಂದರೆ, ಬೇರೆಲ್ಲಾ ಪರಿಮಳದ ಐಸ್ ಕ್ರೀಂ ಕೊಳ್ಳುವುದಕ್ಕಿಂತಲೂ ಕಡಿಮೆ ಸಮಯದಲ್ಲಿ ವೆನಿಲ್ಲಾ ಐಸ್ ಕ್ರೀಂ ತೆಗೆದುಕೊಂಡು ಬರುತ್ತಿದ್ದರು. ವೆನ್ನಿಲ್ಲಾ ಐಸ್ ಕ್ರೀಂ ಖರೀದಿಯ ಸಮಯ ಮತ್ತು ಕಾರಿಗೆ ಹಿಂದಿರುಗುವ ಸಮಯ ಉಳಿದ ಪರಿಮಳದ ಐಸ್ ಕ್ರೀಂ ಖರೀದಿಯ ಸಮಯಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತಿದ್ದರು. ಈ ರೀತಿಯ ವೆತ್ಯಾಸ ಏಕಾಗಿರಬಹುದು ಎಂದು ಅಂಗಡಿಯ ವಿನ್ಯಾಸವನ್ನು ಗಮನಿಸಿದಾಗ, ಆ ಅಂಗಡಿಯಲ್ಲಿ ವೆನಿಲ್ಲಾ ಐಸ್ ಕ್ರೀಂ ಅತ್ಯಂತ ಜನಪ್ರಿಯ ಪರಿಮಳವಾಗಿದ್ದ ಪರಿಣಾಮ ಗ್ರಾಹಕರಿಗೆ ತ್ವರಿತವಾಗಿ ವಿತರಿಸಲು ಅನುಕೂಲವಾಗುವಂತೆ ಅಂಗಡಿಯ ಮುಂದೆಯೇ ಸುಲಭವಾಗಿ ಸಿಗುವಂತೆ ಇಟ್ಟಿದ್ದರು. ಉಳಿದ ಎಲ್ಲಾ ರುಚಿಗಳನ್ನು ಅಂಗಡಿಯ ಹಿಂಭಾಗದಲ್ಲಿ ಬೇರೆ ಕೌಂಟರ್‌ನಲ್ಲಿ ಇರಿಸಲಾಗಿತ್ತು. ಹಾಗಾಗಿ ಆ ಪರಿಮಳದ ಐಸ್ ಕ್ರೀಂ ವಿತರಿಸಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದರು.
ಆ ಚುರುಕಾದ ಎಂಜಿನಿಯರಿಗೆ, ಹೆಚ್ಚಿನ ಸಮಯ ತೆಗೆದುಕೊಂಡಾಗ ಕಾರ್ ಸುಲಭವಾಗಿ ಆರಂಭವಾಗುವುದಕ್ಕೂ ಮತ್ತು ಕಡಿಮೆ ಸಮಯ ತೆಗೆದುಕೊಂಡಾಗ ಕಾರು ಪ್ರಾರಂಭವಾಗದಿರುವುದಕ್ಕೂ ಇದ್ದ ಸಮಸ್ಯೆ ಸಮಯವೇ ಹೊರತು ವೆನಿಲ್ಲಾ ಐಸ್ ಕ್ರೀಂ ಅಲ್ಲ ಎಂಬ ತೀರ್ಮಾನಕ್ಕೆ ಬಂದು ಮತ್ತೆ ತನ್ನ ಎಂಜಿನಿಯರ್ ಬುದ್ಧಿಮತ್ತೆಗೆ ಕೆಲಸಕೊಟ್ಟು ತನ್ನ ಆಟೋಮೊಬೈಲ್ಸ್ ಇಂಜೀನಿಯರೀಗ್ ಓದಿದ್ದನ್ನು ಓರೆಗೆ ಹಚ್ಚಿದಾಗ ತಿಳಿದು ಬಂದ ಸಮಸ್ಯೆಯೇ ಎಂಜೀನ್ ಏರ್ ಲಾಕ್.
ಅಂಗಡಿಯವರು ಬೇರೆ ಬೇರೆ ಪರಿಮಳದ ಐಸ್ ಕ್ರೀಂ ಕೊಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದರಿಂದ ಎಂಜಿನ್ ಸುಲಭವಾಗಿ ಆರಂಭವಾಗುತ್ತಿತ್ತು. ಆದರೆ ವೆನಿಲ್ಲಾ ಐಸಿ ಕ್ರೀಂ ಅನ್ನು ಮುಂದಿನ ಕೌಂಟರಿನಲ್ಲಿಂದಲೇ ಕ್ಷಣ ಮಾತ್ರದಲ್ಲಿ ಕೊಡುತ್ತಿದ್ದರಿಂದ ಕಡಿಮೆ ಸಮಯ ತೆಗೆದುಕೊಳ್ಳುತ್ತಿದ್ದರಿಂದ ಅವರು ಕಾರಿಗೆ ಹಿಂದಿರುಗುವ ಸಮಯಕ್ಕೆ ಇನ್ನೂ ಇಂಜಿನ್ ಬಿಸಿಯಾಗಿರುತ್ತಿದ್ದ ಕಾರಣ ಏರ್ ಲಾಕ್ ಕರಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದ ಕಾರಣ ಕಾರ್ ಸುಲಭವಾಗಿ ಆರಂಭವಾಗುತ್ತಿರಲಿಲ್ಲ.
ಆರಂಭದಲ್ಲಿ ಎಲ್ಲಾ ಸಮಸ್ಯೆಗಳು ಗಹನವಾಗಿ ಮತ್ತು ವಿಚಿತ್ರವಾಗಿ ಬೆಟ್ಟದಷ್ಟು ಎತ್ತರವಾಗಿ ಕಂಡರೂ, ಸರಿಯಾಗಿ ಗಮನ ಹರಿಸಿ ತಾಳ್ಮೆಯಿಂದ ಪರೀಕ್ಷಿಸಿದಲ್ಲಿ ಆ ಸಮಸ್ಯೆಗಳು ನಾವು ತಿಳಿದದ್ದಕ್ಕಿಂತಲು ಸರಳವಾಗಿರುತ್ತದೆ ಮತ್ತು ಆ ಜಟಿಲ ಸಮಸ್ಯೆಗಳು ನಿವಾರಣೆಯಾದಾಗ ಮನಸ್ಸಿಗೆ ನಿರಾಳವಾಗಿ ಒಂದು ರೀತಿಯ ಮುದವನ್ನು ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ ನಿಜವಾಗಿಯೂ ಮುಖ್ಯವಾಗುವುದು ನಮ್ಮ ಏಕಾಗ್ರತೆ, ತಾಳ್ಮೆ, ಕೇಂದ್ರೀಕೃತ ಗಮನ ಮತ್ತು ನಮ್ಮ ಬುದ್ಧಿವಂತಿಕೆ.
ಇದರಿಂದ ನಾವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶವೆಂದರೇ, ಯಾವುದೇ ಸಮಸ್ಯೆ ಅದು ಎಷ್ಟೇ ತಮಾಷೆಯಾಗಿ ಅಥವಾ ವಿಚಿತ್ರವಾಗಿ ಕಂಡರೂ ಅದನ್ನು ಎಂದಿಗೂ ಕಡಿಮೆ ಅಂದಾಜು ಮಾಡದೇ, ಹುಟ್ಟಿಸಿದವನು ಹುಲ್ಲು ಮೇಯಿಸಲಾರ ಎಂಬಂತೆ ಸ್ವಲ್ಪ ತಾಳ್ಮೆ ವಹಿಸಿ ಪ್ರಯತ್ನಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳಿಗೂ ನಿಶ್ವಿತವಾಗಿಯೂ ಪರಿಹಾರವಿದೆ.
ನಾವು ಗೆದ್ದೇ ಗೆಲ್ತೀವೀ, ನಾವು ಗೆದ್ದೇ ಗೆಲ್ತೀವೀ,
ನಾವು ಗೆದ್ದೇ ಗೆಲ್ತಿವಿ. ಒಂದು ದಿನಾ..
ನಮ್ಮಲೀ ಛಲವಿದೇ.. ನಮ್ಮಲೀ ಬಲವಿದೇ..
ನಾವು ಗೆದ್ದೇ ಗೆಲ್ತಿವಿ. ಒಂದು ದಿನಾ..
ಯಶಸ್ಸು ಎನ್ನುವುದು ಲಾಂಗ್ ಜಂಪ್ ಅಥವಾ ಹೈ ಜಂಪ್ ರೀತಿಯಲ್ಲ ಅದು ಒಂದು ರೀತಿಯ ದೀರ್ಘ ನಡಿಗೆಯ ಹೆಜ್ಜೆಗಳಂತೆ ನೇರ, ದಿಟ್ಟ ಮತ್ತು ನಿರಂತರ. ಮರಳಿ ಯತ್ನವ ಮಾಡು. ಮರಳಿ ಯತ್ನವ ಮಾಡು. ಸೋಲೆಂಬುದು ಕೊನೆಯಲ್ಲ. ಅದುವೆ ಗೆಲುವಿನ ಮೆಟ್ಟಿಲು.
ಏನಂತೀರೀ?
ನಮ್ಮ ಮಲ್ಲಿಕಾ ಚಿಕ್ಕಮ್ಮನವರು ಕಳುಹಿಸಿದ ಈ ವ್ಯಾಟ್ಶಾಪ್ ಆಂಗ್ಲ ಸಂದೇಶ ಬಹಳ ಅರ್ಥಪೂರ್ಣವಾಗಿತ್ತು ಮತ್ತು ನನ್ನ ಮನಸ್ಸಿಗೆ ತುಂಬಾ ಹಿಡಿಸಿದ್ದರಿಂದ ಅದನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದೇನೆ.