ದೇವಸ್ಥಾನಗಳ ದಾಸೋಹ

ನನ್ನ ಹಿಂದಿನ ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ ಲೇಖನದಲ್ಲಿ ವಿವರಿಸಿರುವಂತೆ ನಮ್ಮ ಪೂರ್ವಜರು ದೇವಾಲಯಗಳನ್ನು ದಟ್ಟವಾದ ಕಾಡು ಮೇಡುಗಳಲ್ಲಿ, ಎತ್ತರದ ಬೆಟ್ಟಗಳ ಮೇಲೆ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರು. ಆಗೆಲ್ಲಾ ಈಗಿನಂತೆ ವಾಹನಗಳ ಸೌಕರ್ಯವಿರದಿದ್ದ ಕಾರಣ ಭಕ್ತಾದಿಗಳು ಶ್ರದ್ಧಾ ಭಕ್ತಿಗಳಿಂದ ವಾರಾನು ಗಟ್ಟಲೆ, ಇನ್ನೂ ಕೆಲವರು ತಿಂಗಳಾನುಗಟ್ಟಲೆ ನಡೆದುಕೊಂಡೇ ಕಾಡು ಮೇಡುಗಳು, ಹಳ್ಳ ಕೊಳ್ಳಗಳನ್ನು ದಾಟಿ ದೇವರ ದರ್ಶನಕ್ಕೆಂದು ಪುಣ್ಯಕ್ಷೇತ್ರಗಳಿಗೆ ಬಂದು ನಾಲ್ಕೈದು ದಿನಗಳು ಅಲ್ಲಿಯೇ ತಂಗಿ ಮನಸೋ ಇಚ್ಚೆ ದೇವರ ದರ್ಶನ ಪಡೆದು ಪುನಃ ತಮ್ಮ ಸ್ವಕ್ಷೇತ್ರಗಳಿಗೆ ಹಿಂದಿರುಗುತ್ತಿದ್ದರು.

ಹೀಗೆ ಬಹಳ ಶ್ರದ್ಧೆಯಿಂದ ಬರುವ ಭಕ್ತರನ್ನು ಆ ದೇವಾಲಯಗಳೂ ಸಹಾ ಇವರು ನಮ್ಮ ದೇವಾಲಯಕ್ಕೆ ಆದಾಯ ತರುವವರು ಎಂದು ಭಾವಿಸದೇ ಅವರೆಲ್ಲರೂ ನಮ್ಮ ದೇವಾಲಯಕ್ಕೆ ಬಂದ ಬಂಧುಗಳು ಮತ್ತು ಅತಿಥಿಗಳು ಎಂದೆಣಿಸಿ ಯತಾಶಕ್ತಿ ಸತ್ಕಾರ ಸತ್ಕಾರ ಮಾಡುವ ಸಲುವಾಗಿಯೇ ದೇವಸ್ಥಾನಗಳಲ್ಲಿ ದಾಸೋಹದ ಪದ್ದತಿ ಆರಂಭವಾಯಿತು ಎಂದರೂ ತಪ್ಪಾಗಲಾರದು. ಬೆಳಿಗ್ಗೆ ಮತ್ತು ಸಂಜೆ ದೇವರುಗಳಿಗೆ ನಡೆಯುತ್ತಿದ್ದ ಪೂಜೆಗಳ ನೈವೇದ್ಯವನ್ನೇ ಬಂದ ಭಕ್ತಾದಿಗಳಿಗೆ ಮತ್ತು ದೇವಾಲಯದ ಆಡಳಿತ ಮಂಡಳಿ ಭಕ್ತಿಯಿಂದ ಸ್ವೀಕರಿಸಿ ಪಾವನರಾಗುತ್ತಿದ್ದರು. ಕ್ರಮೇಣ ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಅವರಿಗೆ ರುಚಿಕಟ್ಟಾದ ಊಟೋಪಚಾರಗಳು, ಸೂಕ್ತವಾದ ವಸತಿ ವ್ಯವಸ್ಥೆ, ಮತ್ತಿತರ ವ್ಯವಸ್ಥೆಗಳನ್ನು ದೇವಾಲಯಗಳು ಕಲ್ಪಿಸಿಕೊಟ್ಟ ಮೇಲಂತೂ ದೇವಾಲಯಗಳು ಒಂದು ರೀತಿಯ ಪ್ರವಾಸೀ ಕೇಂದ್ರಗಳಾಗಿ ಹೋದವು ಎಂದರೆ ತಪ್ಪಾಗಲಾರದು.

Screenshot 2020-07-01 at 2.49.40 PMಈಗಂತೂ ಜನರು ತೀರ್ಥಯಾತ್ರೆಯನ್ನು ಹೇಗೆ ನಿರ್ಧರಿಸುತ್ತಾರೆಂದರೆ,   ಎಂದರೆ ಶುಕ್ರವಾರ ಒಂದು ದಿವಸ ರಜೆ ಹಾಕಿ ಬೆಳ್ಳಂ ಬೆಳಿಗ್ಗೆ ಹೊರಟು ಬಿಸಿಲು ಏರುವ ಮೊದಲೇ ಶ್ರವಣಬೆಳಗೋಳದ ಬೆಟ್ಟ ಹತ್ತಿ ಗೊಮ್ಮಟೇಶ್ವರನ ದರ್ಶನ ಪಡೆದು ಅಲ್ಲಿಯೇ ಹೋಟೆಲ್ ಒಂದರಲ್ಲಿ ತಿಂಡಿ ತಿಂದು ಮಧ್ಯಾಹ್ನದ ಹೊತ್ತಿಗೆ ಬೇಲೂರು ತಲುಪಿ ಚೆನ್ನಕೇಶವನ ದರ್ಶನಪಡೆದು ಅಲ್ಲಿಯ ದೇವಸ್ಥಾನದಲ್ಲಿಯೇ ಊಟ ಮುಗಿಸಿ, ಸಂಜೆ ಕತ್ತಲಾಗುವ ಹೊತ್ತಿಗೆ ಹೊರನಾಡು ಸೇರಿಕೊಂಡು ರಾತ್ರಿಯೇ ಅನ್ನಪೂರ್ಣೆಯ ದರ್ಶನ ಮಾಡಿ ಗಡದ್ದಾಗಿ ಊಟ ಮುಗಿಸಿ ಶನಿವಾರ ಬೆಳಿಗ್ಗೆ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ದೇವಸ್ಥಾನದಲ್ಲಿಯೇ ಬೆಳಗಿನ ಉಪಹಾರ ಮುಗಿಸಿ, ಶೃಂಗೇರಿಯತ್ತ ಪ್ರಯಾಣ ಬೆಳೆಸಿ, ಊಟದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿ ಮಟ ಮಟ ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಮುಗಿಸಿಕೊಂಡು ದೇವಸ್ಥಾನದ ಹಿಂದಿನ ಭೋಜನಶಾಲೆಯಲ್ಲಿ ಭೂರಿ ಭೋಜನವನ್ನು ಮುಗಿಸಿ, ಅಲ್ಲಿಂದ ಹೊರಡು ಸೂರ್ಯ ಮುಳುಗುವುದರೊಳಗೇ ಧರ್ಮಸ್ಥಳ ತಲುಪಿ ರೂಮ್ ಗಿಟ್ಟಿಸಿಕೊಂಡು ಕೈಕಾಲು ಮುಖ ತೊಳೆದು ಮಂಜುನಾಥನ ದರ್ಶನ ಪಡೆದು ದೇವಸ್ಥಾನದ ಸುತ್ತಮುತ್ತಲಿನ ಅಂಗಡಿಗಳಲ್ಲಿ ಬಳೆ, ಕಾಶೀದಾರ ಮಕ್ಕಳಿಗೆ ಆಟಿಕೆ ಕೊಡಿಸಿ ಊಟದ ಸಮಯಕ್ಕೆ ಸರಿಯಾಗಿ ಅನ್ನಪೂರ್ಣ ಭೋಜನಶಾಲೆಗೆ ಹೋಗಿ, ಯಥೇಚ್ಚವಾಗಿ ಇಂಗು-ತೆಂಗು ಹಾಕಿದ ಸಾರನ್ನವನ್ನು ಸೊರ್ ಸೊರ್ ಎಂದು ತಿಂದು ಕೈಗೆ ನೀರು ಮಜ್ಜಿಗೆ ಹಾಕಿಸಿಕೊಂಡು ಕುಡಿದು ಸಂತೃಪ್ತವಾಗಿ ಊಟ ಮುಗಿಸಿ, ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಿ ಬೆಳಗ್ಗೆ ಡಡಬಡ ಎಂದು ಎದ್ದು ದೇವಾಲಯದಲ್ಲಿ ಜನದಟ್ಟಣೆ ಇಲ್ಲದಿದ್ದಲ್ಲಿ ಮತ್ತೊಮ್ಮೆ ದರ್ಶನ ಪಡೆದು ಅಲ್ಲಿಯ ಹೋಟೇಲ್ ಒಂದರಲ್ಲಿ ಬನ್ಸ್, ಗೋಳಿಬಜೆ ಮತ್ತು ಖಾರದ ಅವಲಕ್ಕಿ ತಿಂದೋ ಇಲ್ಲವೇ ನೇರವಾಗಿ ಸೌತಡ್ಕಕ್ಕೆ ಬಂದು ಬಯಲು ವಿಷ್ನೇಶ್ವರನ ದರ್ಶನ ಪಡೆದು ಅಲ್ಲಿನ ಅರ್ಚಕರಿಗೆ ಹಲ್ಲು ಗಿಂಜಿ ಅಲ್ಲಿಯೇ ತಿಂಡಿ ಮುಗಿಸಿ ನೇರವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿ, ದೇವಸ್ಥಾನದ ಕುಮಾರಧಾರ ನದಿಯಲ್ಲಿ ಕೈಕಾಲು ತೊಳೆದು, ಭಯ ಭಕ್ತಿಯಿಂದ ದೇವರ ದರ್ಶನ ಮುಗಿಸಿ ಸಮಯವಿದ್ದರೇ ಶಂಕರ ಮಠದ ಮಧ್ಯಾಹ್ನದ ಊಟಕ್ಕೆ ಕಾಯ್ದು, ಸಮಯವಿಲ್ಲದಿದ್ದರೇ, ದೇವಸ್ಥಾನದ ದರ್ಮದರ್ಶನ ಭೋಜನಾಲಯದಲ್ಲಿಯೇ ಊಟ ಮುಗಿಸಿ ಕಾರ್ ಹತ್ತಿ, ಸಂಜೆ ಯಡೆಯೂರು ಮತ್ತು ಕುಣಿಗಲ್ ನಡುವೆ ಸಾಲು ಸಾಲಾಗಿ ಸಿಗುವ ಹೋಟೆಲ್ಗಳಲ್ಲಿ ಕಾಫೀ ಕುಡಿದು ಮತ್ತೆ ಕಾರ್ ಹತ್ತಿದರೆ ರಾತ್ರಿ 7-8ರ ಹೊತ್ತಿಗೆ ಉಸ್ಸಪ್ಪಾ ಎಂದ ಮನೆಗೆ ಹಿಂದಿರುಗುವ ಮೂಲಕ ನಮ್ಮ ವಾರಂತ್ಯದ ತೀರ್ಥಯಾತ್ರೆ ಮುಗಿದಿರುತ್ತದೆ. ನಿಜವಾಗಿಯೂ ಯೋಚಿಸಿ ನೋಡಿದಲ್ಲಿ ಇಲ್ಲಿ ಭಕ್ತಿಯಿಂದ ಭಗವಂತನ ದರ್ಶನಕ್ಕಿಂತಲೂ ದೇವಸ್ಥಾನದ ಊಟ ತಿಂಡಿಗಳ ಸಮಯಕ್ಕೆ ಸರಿಯಾಗಿ ಹಾಜರಾಗಿ ಸಮಯವಿದ್ದಲ್ಲಿ ದೇವರ ದರ್ಶನ ಮಾಡಿ ತೀರ್ಥ-ಪ್ರಸಾದಕ್ಕೇ ಮೀಸಲಾಗಿರಿಸಿದ ಯಾತ್ರೇ ಯಾಗಿರುತ್ತದೆ ಎಂದರೂ ತಪ್ಪಾಗಲಾರದು.

ಇನ್ನು ಮಾರನೆಯದಿವಸ ಅಕ್ಕ ಪಕ್ಕದವರ ಮನೆಗೆ ಮತ್ತು ಕಛೇರಿಯಲ್ಲಿ ದೇವಸ್ಥಾನ ತೀರ್ಥ ಪ್ರಸಾದಗಳನ್ನು ವಿತರಿಸುವಾಗಲೂ ದೇವರ ದರ್ಶನ ಚೆನ್ನಾಗಿ ಆಯ್ತೇ ಎಂದು ವಿಚಾರಿಸುತ್ತಿದ್ದರೂ, ಹೂಂ ದೇವರ ದರ್ಶನ ಏನೋ ಚೆನ್ನಾಗಿಯೇ ಆಯ್ತು. ನಾವು ಹೋರನಾಡು ಬಿಡೋದಕ್ಕೆ ಬೆಳೆಗ್ಗೆ ಸ್ವಲ್ಪ ತಡ ಆಯ್ತು ನೋಡಿ ಅಲ್ಲಿಂದ ಶೃಂಗೇರಿ ಸ್ವಲ್ಪ ಘಾಟ್ ಸೆಕ್ಷೆನ್ನು ಹಾಗಾಗಿ ನಿಧಾನವಾಗಿ ಗಾಡಿ ಓಡಿಸ್ಬೇಕಾಗತ್ತೆ ಗಂಟೆನೂ ಹನ್ನೆರಡೂ ವರೆ ಒಂದಾಗ್ತ ಬಂದಿತ್ತು. ಎಲ್ಲಿ ಊಟ ಮುಗಿದು ಹೋಗತ್ತೋ ಅಂತಾ ನಮಗೆಲ್ಲಾ ಪೇಚಾಟ. ಸರಿಯಾಗಿ ಶೃಂಗೇರಿ ತಲುಪಿದಾಗ ಒಂದೂ ವರೆಯಾಗಿತ್ತು. ಅಲ್ಲೇ ಕಾರ್ ಪಾರ್ಕ್ ಮಾಡಿ ದಡಬಡಾ ಅಂತಾ ತುಂಗಾ ನದಿಯಲ್ಲಿ ಕೈಕಾಲು ತೊಳೆದುಕೊಂಡು ಬೇಗ ಬೇಗನೆ ಭೋಜನಶಾಲೆಗೆ ಹೋಗಿ ಬಿಸಿ ಬಿಸಿ ಅನ್ನ ಹುಳಿ ಬಾಯಿಗೆ ಬಿತ್ತೂ ನೋಡಿ ಅಗ್ಲೇ ಬದುಕಿದೆಯಾ ಬಡ ಜೀವ ಅನ್ನಿಸ್ತು ಕಣ್ರೀ. ನಿಧಾನವಾಗಿ ಊಟ ಮುಗಿಸಿ ದೇವಸ್ಥಾನಕ್ಕೆ ಬಂದು ಕಟಕಟೆಯಲ್ಲಿಯೇ ಶಾರದಾಂಬೆಯ ದರ್ಶನ ಮಾಡಿದ್ವೀ ನೋಡಿ ಅಂತ ಹೇಳೋದನ್ನಾ ನಾನೇ ಕಿವಿಯಾರೆ ಕೇಳಿದ್ದೀನಿ. ಇಲ್ಲಿ ಅವರಿಗೆ ದೇವರ ದರ್ಶನಕ್ಕಿಂತಲೂ ಊಟದ ಚಿಂತೆನೇ ಆಗಿತ್ತು.

Screenshot 2020-07-01 at 2.56.44 PMಅಯ್ಯೋ ಈ ಕಡೇ ಹೋಗಿದ್ರಾ, ಮುಂದಿನ ಸಲಾ ಉಡುಪಿ,ಕಟೀಲ್, ಆನೆಗುಡ್ಡೆ, ಮುರುಡೇಶ್ವರ, ಇಡುಗುಂಜಿ, ಕೊಲ್ಲೂರು, ಕಮಲಶಿಲೆಗಳ ಕಡೆ ಹೋಗಿ ಬನ್ನಿ, ಬೆಳಿಗ್ಗೇನೇ ಹೊರಟು ಸಂಜೆ ಹೊತ್ತಿಗೆ ಉಡುಪಿ ತಲುಪಿ ಅಲ್ಲಿ ಆಷ್ಟ ಮಠಗಳು ಮತ್ತು ಅನಂತೇಶ್ವರ ದೇವಾಯಗಳ ದರ್ಶನ ಪಡೆದು ಅಲ್ಲಿ ರಾತ್ರಿ ಊಟ ಮುಗಿಸಿಕೊಂಡು, ಬೆಳಿಗ್ಗೆ ಕಟೀಲ್ ಇಲ್ಲವೇ ಆನೇಗುಡ್ಡೆಯಲ್ಲಿ ಊಟ ಮಾಡಿ ತುಂಬಾ ಚೆನ್ನಾಗಿರುತ್ತದೆ. ಹಾಗೇ ನೇರವಾಗಿ ಇಡುಗುಂಜಿ ಗಣಪತಿಯ ದರ್ಶನ ಮಾಡಿಕೊಂಡು ಸೂಯಾಸ್ತಕ್ಕೆ ಸರಿಯಾಗಿ ಮುರುಡೇಶ್ವರದ ಬೀಚ್ನಲ್ಲಿ ಆಟ ಆಡಿಕೊಂಡು ರಾತ್ರಿ ಅಲ್ಲಿಯೇ ಹಾಲ್ಟ್ ಆಗಿ ದೇವಸ್ಥಾನದಲ್ಲಿಯೇ ಊಟ ಮಾಡಿ ಮಾರನೇಯ ದಿನ ಬೆಳಿಗ್ಗೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿಕೊಂಡು ಮಧ್ಯಾಹ್ನ ಕಮಲಶಿಲೆಗೆ ಬನ್ನಿ. ಅಲ್ಲಿಯ ಆದರಾತಿಥ್ಯಾ ಏನು ಕೇಳ್ತೀರೀ? ದುರ್ಗಾಂಬಾ ಟ್ರಾವೆಲ್ಸ್ ಅವರು ಪಾರಪತ್ಯೆಯಲ್ಲಿ ತುಂಬಾನೇ ಚೆನ್ನಾಗಿ ಊಟ ಹಾಕ್ತಾರೆ. ಬ್ರಾಹ್ಮಣರ ಪಂಕ್ತಿಗೆ ಹೋದ್ರಂತೂ ಯಾವುದೇ ಸಮಾರಂಭಕ್ಕೂ ಕಡಿಮೆ ಇಲ್ಲದಂತೆ ಅದೇನು ವಿಚಾರಣೆ ಅಂತೀರೀ, ಎರೆಡೆರಡು ಸಲಾ ಸಾರು, ಹುಳಿ ಅಲ್ಲದೇ ಮಜ್ಜಿಗೇ ಹುಳೀನೂ ಮಾಡಿರ್ತಾರ್ರೀ, ಜೊತೆಗೆ ನೆಂಚಿಕೊಳ್ಳುವುದಕ್ಕೆ ಬಜ್ಜಿ ಬೊಂಡಾ ಇಲ್ಲವೇ ಆಂಬೋಡೇ, ನಾವು ಹೋಗಿದ್ದಾಗ ಬಿಸಿ ಬಿಸಿ ಮೆಣಸಿನಕಾಯಿ ಬೋಂಡಾ ಮಾಡಿದ್ರು. ನಾನು ಯಾವತ್ತೂ ಪಾಯ್ಸಾ ತಿಂದೇ ಇರೋಳು ಅಲ್ಲಿ ಎರಡು ಸೌಟ್ ಪಾಯ್ಸ ತಿಂದು ಬಿಟ್ಟೇ. ಕಡೆಯಲ್ಲಿ ಬಲವಂತ ಮಾಡಿ ತಣ್ಣಗಿರುತ್ತದೆ ಅಂತಾ ಅನ್ನಾ ಮೊಸರು ಹಾಕಿದ್ದಲ್ಲದೇ, ಕುಡಿಯುವುದಕ್ಕೆ ರುಚಿಯಾದ ಶುಂಠಿ ಒಗ್ಗರಣೆಯ ಮಜ್ಜಿಗೆ ಬಡಿಸ್ತಾರೆ ಕಣ್ರೀ. ಮುಂದಿನ ಸಲಾ ತಪ್ಪದೇ ಹೋಗಿಊಟ ಮಾಡೋದು ಮರೀ ಬೇಡ್ರೀ ಎಂದು ರಾಗವಾಗಿ ಹೇಳಿ, ದೇವರ ಪ್ರಸಾದ ಲಭ್ಯವಿದ್ರೇನೇ ಸಿಗೋದು ಅಂತ ದಾರ್ಶನಿಕರ ಹಾಗೆ ಹೇಳಿ ಮತ್ತೊಂದು ಪ್ರವಾಸಕ್ಕೆ ಆಸೆ ತೋರಿಸುವುದಲ್ಲದೇ, ಇಲ್ಲಿಯೂ ಸಹಾ ದೇವರ ಬಗ್ಗೆ ವರ್ಣಿಸುವುದಕ್ಕಿಂತ ಊಟೋಪಚಾರಗಳಿಗೇ ಮಹತ್ವ ಕೊಡುವುದು ಸೋಜಿಗವೇ ಸರಿ.

ಈ ಎಲ್ಲಾ ಶ್ರೀ ಕ್ಷೇತ್ರಗಳ ದೇವಸ್ಥಾನಗಳ ಆಡಳಿತ ಮಂಡಳಿಗಳೂ ಭಕ್ತಾದಿಗಳ ಊಟೋಪಚಾರಗಳ ಬಗ್ಗೆಯ ನಿರೀಕ್ಷೆಗೆ ಒಂದು ಚೂರೂ ಕುಂದು ಬಾರದಂತೆ ಎಚ್ಚರವಹಿಸಿ, ಪುಣ್ಯಕ್ಷೇತ್ರಗಳಿಗೆ ಬಂದವರಾರೂ ಹೊಟ್ಟೆ ಹಸಿದು ಕೊಂಡಿರದಂತೆ ಕಾಲ ಕಾಲಕ್ಕೆ ಅನುಗುಣವಾಗಿ ಶುಚಿ ರುಚಿಯಾದ ಆಡುಗೆಗಳನ್ನು ಪ್ರಸಾದ ರೂಪದಲ್ಲಿ ಬಡಿಸುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಅನುಕರಣಿಯ.

dharmastalaಲೆಕ್ಕಕ್ಕೆಂದು ಕೇವಲ ಧರ್ಮಸ್ಥಳವನ್ನೇ ತೆಗೆದುಕೊಂಡಲ್ಲಿ ಪ್ರತೀ ದಿನ ಅಲ್ಲಿಗೆ 25 ಸಾವಿರದಿಂದ 50 ಸಾವಿರ ಜನ ಮಂಜುನಥ ಸ್ವಾಮಿಯ ದರ್ಶನಕ್ಕಾಗಿ ಬರುತ್ತಾರೆ. ಇನ್ನೂ ಲಕ್ಷದೀಪೋತ್ಸವ, ಸಾಮೂಹಿಕ ವಿವಾಹ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಒಂದು ಲಕ್ಷ ಅಥವಾ ಅದಕ್ಕೂ ಅಧಿಕ ಜನರು ಬರುತ್ತಾರೆ. ಅವರೆಲ್ಲರಿಗೂ 19800 ಅಡಿಗಳಷ್ಟು ದೊಡ್ಡದಾದ, ಸುಮಾರು 9 ಸಾಲುಗಳುಳ್ಳ, ಪ್ರತೀ ಸಾಲಿನಲ್ಲಿ 400 ಜನರು ಕೂರಬಹುದಾದಂತಹ ವಿಸ್ತರಣದ ವಿಶಾಲವಾದ ಅನ್ನಪೂರ್ಣ ಭೋಜನಾಲಯವನ್ನು ಕಟ್ಟಿಸಲಾಗಿದೆ

ಇಲ್ಲಿಯ ಭೋಜನ ಶಾಲೆಯಲ್ಲಿ ನೂರಾರು ಬಾಣಸಿಗರು ಶುವಿರ್ಭೂತರಾಗಿ ಬೆಳಿಗ್ಗೆ 5:00 ಗಂಟೆಗೆಲ್ಲಾ ತಮ್ಮ ಕೆಲಸವನ್ನು ಆರಂಭಿಸುತ್ತಾರೆ. ಪ್ರತೀ ದಿನ 4500 5000 ಯಷ್ಟು ಅಕ್ಕಿಯನ್ನು ಆಧುನಿಕ ರೀತಿಯಲ್ಲಿ ಹಬೆಯ ಸಹಾಯದಿಂದ ಶುಚಿಯಾಗಿ ಅನ್ನ ತಯಾರಿಸುವುದಕ್ಕೆ ಬಳೆಸುವುದಲ್ಲದೇ, 3000 – 3500 ಕೇಜಿಯನ್ನು ತರಕಾರಿಗಳನ್ನು ಹುಳಿ ಮತ್ತು ಪಲ್ಯ ಮಾಡಲು ಬಳಸುತ್ತಾರೆ. ಇನ್ನು ತೆಂಗಿನಕಾಯಿ ವಿಚಾರಕ್ಕೆ ಬಂದರೆ 1000-1200 ತೆಂಗಿನಕಾಯಿಯನ್ನು ಅಡುಗೆಗೆ ಇಲ್ಲಿ ಪ್ರತೀ ದಿನ ಬಳಸಲಾಗುತ್ತದೆ, ಸಾಧಾರಣವಾಗಿ ಮನೆಗಳಲ್ಲಿ ಹುಳಿ ಮಾಡಲು ಹುಳಿ ಪುಡಿಯನ್ನು ಚಮಚದ ಲೆಕ್ಕದಲ್ಲಿ ಹಾಕಿದರೆ, ಇಲ್ಲಿ ಬಕಿಟ್ ಲೆಕ್ಕದಲ್ಲಿ ಹುಳಿಪುಡಿಯನ್ನು ಹಾಕಲಾಗುತ್ತದೆ. ಪ್ರತೀದಿನ 4000 ಲೀಟರ್ ನಷ್ಟು ಸಾರನ್ನು ಮಾಡಲಾಗುತ್ತದೆ. ಇಲ್ಲಿಯ ಒಂದು ದಿನದ ಅಡುಗೆ ಸುಮಾರು 400 ಮದುವೆಯ ಅಡುಗೆಗೆ ಸಮನಾಗಿರುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿಯಲ್ಪಟ್ಟಿದೆ.

ಹೆಚ್ಚು ಕಡಿಮೆ ಕರ್ನಾಟಕದ ಬಹುತೇಕ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅಲ್ಲಿಗೆ ಬರುವ ಭಕ್ತಾದಿಗಳ ಅನುಗುಣವಾಗಿ ಇದೇ ರೀತಿಯಾಗಿ ಶುಚಿ ರುಚಿಯಾಗಿ ಆಹಾರವನ್ನು ತಯಾರಿಸುವುದಲ್ಲದೇ, ಯಥೇಚ್ಛವಾಗಿ ಕೈತುಂಬಾ ಬಡಿಸುವುದು ನಿಜಕ್ಕೂ ಅವರ್ಣನೀಯ. ಇನ್ನು ಭಕ್ತಾದಿಗಳು ಅವರ ಪರಿಶ್ರಮಕ್ಕೆ ಬೆಲೆ ಕೊಟ್ಟು ದೇವರ ಪ್ರಸಾದವನ್ನು ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಂಡು ಒಂದು ಚೂರು ಚೆಲ್ಲದೇ ತಿನ್ನುವುದು ಅಭಿನಂದನಾರ್ಹ.

ಇನ್ನೂ ಗಮನಿಸಬೇಕಾದ ಅಂಶವೆಂದರೆ ಬಹುತೇಕ ಭಕ್ತಾದಿಗಳು ಹಾಗೇ ಸುಮ್ಮನೇ ಬರೀ ಕೈಯ್ಯಲ್ಲಿ ಈ ತೀರ್ಥಕ್ಷೇತ್ರಗಳಿಗೆ ಬರದೇ, ತಮ್ಮ ಕೈಲಾದ ಮಟ್ಟಿಗೆ ತಮ್ಮಲ್ಲಿ ಬೆಳೆದ ದವಸ ಧಾನ್ಯಗಳನ್ನೋ, ತೆಂಗು, ತರಕಾರಿಗಳನ್ನು ದೇವಾಲಯಗಳಿಗೆ ಭಕ್ತಿಯ ರೂಪದಲ್ಲಿ ಕೊಡುತ್ತಾರೆ. ಪದರ್ಥದ ರೂಪದಲ್ಲಿ ಕೊಡಲಾಗದವರು ತಮ್ಮ ಕೈಲಾದ ಮಟ್ಟಿನ ಹಣವನ್ನು ದೇವಾಲಯಗಳ ಹುಂಡಿಗಳಲ್ಲಿ ಹಾಕುವ ಮೂಲಕ ಈ ದಾಸೋಹವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಕಾರಣೀಭೂತರಾಗಿದ್ದಾರೆ. ಮುಂದಿನ ಬಾರೀ ಈ ದೇವಸ್ಥಾನಗಳಿಗೆ ಹೋದಾಗ, ಊಟದ ಚಿಂತೆಯನ್ನು ತುಸು ಬದಿಗಿತ್ತು, ಲಗುಬಗನೆ ದೇವರ ದರ್ಶನದ ಮಾಡದೇ, ಒಂದು ದಿನವಾಗದಿದ್ದರೂ, ಕನಿಷ್ಟ ಪಕ್ಷ ಒಂದೆರಡು ಗಂಟೆಯಾದರು ನಿರಾಳವಾಗಿ ನೆಮ್ಮದಿಯಾಗಿ ದೇವರ ದರ್ಶನ ಮಾಡಿ ಅಲ್ಲಿಯ ಸ್ಥಳ ಪುರಾಣಗಳನ್ನು ತಿಳಿದು ದೇವಸ್ಥಾನದ ಧನಾತ್ಮಕ ಶಕ್ತಿ ನಮ್ಮಲ್ಲಿ ಪ್ರಹರಿಸುವತ್ತ ಗಮನ ಹರಿಸೋಣ. ಏಕೆಂದರೆ, ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಮತ್ತು ಈ ಎಲ್ಲಾ ದೇವಾಲಯಗಳೂ ಬಂದ ಭಕ್ತಾದಿಗಳನ್ನು ಹಸಿವಿನಿಂದ ಕಳುಹಿಸಲಾರರು ಅಲ್ವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s