ಅಚ್ಚುತಾ ಅನಂತಾ ಗೋವಿಂದಾ. ಭಾಗ-2

ಇಡೀ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಗಿದ್ದಾಗ ಸ್ಯಾಮ್ ಕೂಡ ಕೆಲ ಕಾಲ ಗಲಿಬಿಲಿಗೊಂಡಿದ್ದ. ಅದೇ ಸಮಯದಲ್ಲಿ ಸ್ಯಾಮ್ ಗೆ ಯಾವುದೇ ಸಮಸ್ಯೆಗಳು ಎದುರಾದರೂ ಅಚ್ಚುತಾ, ಅನಂತಾ, ಗೋವಿಂದಾ ಎಂದು ಭಕ್ತಿಯಿಂದ ಪ್ರಾರ್ಥಿಸಿದರೆ ಬಂದ ಕಷ್ಟಗಳೆಲ್ಲವೂ ಸುಲಭವಾಗಿ ಪರಿಹಾರವಾಗುತ್ತದೆ ಎಂದು  ತನ್ನ ಅಜ್ಜಿ ಹೇಳಿಕೊಟ್ಟ ದಿವ್ಯ ಮಂತ್ರ ನೆನಪಾಯಿತು. ಕೂಡಲೇ ಎದ್ದು ನಿಂತು ಎತ್ತರದ ಧ್ವನಿಯಲ್ಲಿ  ಎಲ್ಲರೂ ಇಲ್ಲಿ ಸ್ವಲ್ಪ ಗಮನವಿಟ್ಟು ಕೇಳಿ, ಅನಗತ್ಯವಾಗಿ ಭಯ ಪಡದಿರಿ. ನನ್ನ ಬಳಿ ಅದಕ್ಕೆ ಪರಿಹಾರವಿದೆ ಮತ್ತು ನಾನು ಜಪಿಸುವುದನ್ನು ನೀವೂ ಸಹಾ ಪುನರಾವರ್ತಿಸಿ. ಭಗವಂತನ ನಾಮ ಸ್ಮರಣೆಯಿಂದ ನಾವು  ಸುರಕ್ಷಿತವಾಗಿ ನಮ್ಮ ನಮ್ಮ ನೆಲೆಯನ್ನು ತಲುಪುತ್ತೇವೆ ಎಂದು ಹೇಳಿ,

ಅಚ್ಚುತಾ ಅನಂತಾ ಗೋವಿಂದಾ, ಎಂದು ಭಗವಂತನ ನಾಮ ಸ್ಮರಣೆ ಮಾಡತೊಡಗಿದ. ಕೆಲವರು ಇಂತಹ ಸಮಯದಲ್ಲಿ ಇದೇನು ಹುಚ್ಚಾಟ ಎಂದು ಭಾವಿಸಿದರೆ ಇನ್ನೂ ಕೆಲವರು  ಮುಳುಗುತ್ತಿರುವಾಗ ಒಂದು ಸಣ್ಣ ಒಣಹುಲ್ಲೂ ಸಹ ರಕ್ಷಿಸಬಹುದು ಎಂದು ಭಾವಿಸಿ ಅವರೂ ಸಹಾ ಅಚ್ಚುತಾ ಅನಂತಾ ಗೋವಿಂದಾ ಎಂದು ನಾಮಸ್ಮರಣೆ ಮಾಡತೊಡಗಿದರು ಕೆಲವೇ ನಿಮಿಷಗಳಲ್ಲಿ ಇಡೀ ವಿಮಾನದ ಬಹುತೇಕರು ಅನಗತ್ಯ ಭಯ ಪಡುವುದನ್ನು ನಿಲ್ಲಿಸಿ  ಭಗವಂತನ ಧ್ಯಾನದಲ್ಲಿ ತೊಡಗಿದರು.

ಬಾಲಕ ಸ್ಯಾಮ್ ನ ಈ ಸಮಯ ಪ್ರಜ್ಞೆ ಗಗನ ಸಖಿಯರಿಗೆ ಮೆಚ್ಚುಗೆಯಾಗಿ ಅವನನ್ನು ಅಭಿನಂದಿಸಲು ಬಂದಾಗ, ಸ್ಯಾಮ್ ಅವರಿಗೆ ಒಂದು ಪಕ್ಷಿಯ ಚಿತ್ರವೊಂದನ್ನು ಬರೆದು ಅದರ ಮೇಲೆ ಅಚ್ಚುತಾ ಅನಂತಾ ಗೋವಿಂದಾ ಎಂದು ಬರೆದು ದಯವಿಟ್ಟು ಇದನ್ನು ಪೈಲೆಟ್ ಅವರಿಗೆ ಕೊಟ್ಟು ಅವರಿಗೂ ಧ್ಯಾನಿಸಲು ತಿಳಿಸಿ ಎಂದ. ಗಗನ ಸಖಿಯರೂ ಅವನನ್ನು ಅನುಸರಿಸಿ  ಅದನ್ನು ಸರಿಯಾಗಿ ಕ್ಯಾಪ್ಟನ್‌ಗೆ ತಲುಪಿಸಿದರು.

ಕ್ಯಾಪ್ಟನ್ ಕೂಡಾ ಅಚ್ಚುತಾ ಅನಂತಾ ಗೋವಿಂದಾ ಎಂದು ಕೆಲ ಕಾಲ ಸ್ಮರಿಸುತ್ತಿದ್ದಂತೆಯೇ ಅಲ್ಲೊಂದು ವಿಚಿತ್ರವಾದ ಘಟನೆ ಸಂಭವಿಸಿತು. ಇದ್ದಕ್ಕಿದ್ದಂತೆಯೇ ವಿಮಾನದ ಮುಂದೆ ಬಿಳೀ ಬಣ್ಣದ ಕುತ್ತಿಗೆ ಹೊಂದಿದ್ದ ದೊಡ್ಡ ಹಕ್ಕಿಯೊಂದ್ದು  ವಿಮಾನದ ಮುಂದೆ  ರೆಕ್ಕೆ ಬೀಸುತ್ತಾ, ನನ್ನನ್ನು ಹಿಂಬಾಲಿಸು ಎಂದು ಹೇಳಿದ ಹಾಗೆ ಆಯಿತು. ಪೈಲೆಟ್ ಕೂಡಾ ಮರುಮಾತಿಲ್ಲದೇ ಪಕ್ಷಿಯ ವೇಗವನ್ನು ಮತ್ತದರ ಪಥವನ್ನು ಅನುಸರಿಸತೊಡಗಿದ. ಹೊರಗೆ ಕತ್ತಲಾಗಿದ್ದರೂ ವಿಮಾನದ ಬೆಳಕಿನಲ್ಲಿ ಆತನಿಗೆ ಪಕ್ಷಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು ಹಾಗಾಗಿ ಆತ ನಿಧಾನವಾಗಿ ಪಕ್ಷಿಯನ್ನು ಹಿಂಬಾಲಿಸತೊಡಗಿದನು.

ಅಷ್ಟರಲ್ಲಾಗಲೇ  ವಿಮಾನ  ಸಂಪರ್ಕ  ಕಳೆದುಹೋದ ಸುದ್ದಿ, ಪ್ರಯಾಣಿಕರ ಸಂಬಂಧಿಕರೆಲ್ಲರಿಗೂ ತಲುಪಿ ಅವರೆಲ್ಲರೂ  ಭಯಭೀತರಾಗಿ ಎಲ್ಲರೂ ಸುರಕ್ಷಿತವಾಗಿ ಹಿಂದಿರುಗವಂತೆ ಮಾಡೂ ಭಗವಂತ ಎಂದು ಪ್ರಾರ್ಥಿಸುತ್ತಿದ್ದರು. ಸ್ಯಾಮ್‌ನ ಪೋಷಕರು ಸಹಾ ಹತ್ತಿರದ  ದೇವಾಲಯಕ್ಕೆ ತೆರಳಿ ತಮ್ಮ ಮಗನ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಲ್ಲದೇ, ಭಾರತಕ್ಕೆ ಕರೆ ಮಾಡಿ ವಿಷಯ ತಿಳಿಸಿ ಅವರಿಗೂ ಪ್ರಾರ್ಥಿಸಲು ಕೇಳಿಕೊಂಡಿದ್ದರು. ಆಗ ಅಜ್ಜಿಯವರು, ಭಯಭೀತರಾಗಬೇಡಿ ನಮ್ಮ  ಗುರುವಾಯೂರಪ್ಪನ ಕೃಪೆಯಿಂದಾಗಿ ಎಲ್ಲರೂ ಸುರಕ್ಷಿತವಾಗಿ ತಲುಪುತ್ತಾರೆ ಎಂದು ಹೇಳಿದ್ದು ಮೋಹನ್ ದಂಪತಿಗಳಿಗೆ ತುಸು ಸಮಾಧಾನ ತಂದಿತ್ತು

ಇತ್ತ ವಿಮಾನದಲ್ಲಿ ನಿರಂತರವಾಗಿ ಅಚ್ಚುತಾ ಅನಂತಾ ಗೋವಿಂದಾ ಸ್ಮರಣೆ ನಡೆಯುತ್ತಲೇ ಇತ್ತು. ವಿಮಾನದ ಮುಂದೆ ಹಾರುತ್ತಿದ್ದ ಹಕ್ಕಿ ಇದ್ದಕ್ಕಿದ್ದಂತೆಯೇ ತನ್ನ ರೆಕ್ಕೆಗಳನ್ನು ಬಡಿಯುತ್ತಾ ಕೆಳಗೆ ಇಳಿಯುತ್ತಾ ವಿಮಾನವನ್ನು ಇಲ್ಲಿಯೇ ಇಳಿಸು ಎನ್ನುವಂತೆ ಸೂಚನೆ ಕೊಡತೊಡಗಿತು. ಪೈಲೆಟ್ ಅದರ ಸೂಚನೆಯಂತೆ ನಿಧಾನವಾಗಿ ವಿಮಾನವನ್ನು ಕೆಳಗೆ ಇಳಿಸತೊಡಗಿದ. ಆ ಪ್ರದೇಶ ಹಡ್ಸನ್ ನದಿಪಾತ್ರವಾಗಿದ್ದು ಚಳಿಗಾಲದಿಂದಾಗಿ ಇಡೀ ನದಿ ಹಿಮವಾಗಿ ಗಟ್ಟಿಯಾಗಿತ್ತು. ಇದೇ ಸುರಕ್ಷಿತ ಪ್ರದೇಶ ಎಂದು ನಿರ್ಧರಿಸಿ, ತುರ್ತು ನಿರ್ಗಮನದ ಮೂಲಕ ಎಲ್ಲಾ ಪ್ರಯಾಣಿಕರನ್ನೂ ಪ್ಯಾರಾಚೂಟ್ ಮುಖಾಂತಾರ ಸುರಕ್ಷಿತವಾಗಿ ಭೂಮಿಗೆ ತಲುಪಿಸಿದರು. ಹಡ್ಸನ್ ನದಿಯಲ್ಲಿ ವಿಮಾನ ಇಳಿಯುವ ಈ ಅದ್ಭುತ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಜನರು ಸಂಖ್ಯೆಯ ಜನರು ಓಡಿ ಬಂದಿದ್ದರು.

jet

ಈ ಭರದಲ್ಲಿ  ಪೈಲೆಟ್ ತನಗೆ ದಾರಿ ದೀಪವಾಗಿದ್ದ  ಪಕ್ಷಿಯನ್ನು ಹುಡುಕಲು ಪ್ರಯತ್ನಿಸಿದರೆ, ಪಕ್ಷಿಯು ಅವನ ಕಣ್ಣಿಗೆ ಗೋಚರಿಸಿದೇ ಅದೃಶ್ಯವಾಗಿತ್ತು.  ಹಾಗೂ ಹೀಗೂ ಮಾಡಿ ವಿಮಾನವನ್ನು ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ ನಂತರ ಎಲ್ಲರೂ ಆತನ ಸಮಯಪ್ರಜ್ಞೆ, ಚಾಕಚಕ್ಯತೆ ಮತ್ತು ಎಲ್ಲರ ಪ್ರಾಣವನ್ನು ಉಳಿಸಿದ್ದಿದ್ದಕ್ಕಾಗಿ ಕೊಂಡಾಡತೊಡಗಿದರು.

ಪ್ರಯಾಣಿಕರು, ಪೈಲೆಟ್ ಮತ್ತು ಗನನಸಖಿಯರಾದಿ ಎಲ್ಲರೂ ಸ್ಯಾಮ್ ನಿಗೆ ಧನ್ಯವಾದಗಳನ್ನು ಅರ್ಪಿಸಲು ಮುಂದಾಗಿದ್ದರು. ಪೈಲೆಟ್ ಸ್ಯಾಮ್ ನನ್ನು ಕರೆದು ಧನ್ಯವಾದವನ್ನು ಅರ್ಪಿಸಿ ತನಗೆ ದಾರಿ ದೀಪವಾದ ಬಿಳೀ ಕುತ್ತಿಗೆಯ ದೈತ್ಯ ಹಕ್ಕಿಯೊಂದರ ಬಗ್ಗೆ ಹೇಳುತ್ತಿದ್ದಂತೆಯೇ.

ಸ್ಯಾಮ್ ಬಾಯಿಯಿಂದ ಹೊರಟ ಉದ್ಗಾರ  ಓಹ್! ಗರುಡ. ಗುರುವಾಯೂರಪ್ಪನ ವಾಹನ.

ಸ್ಯಾಮ್ ಹೇಳಿದ್ದು ಅವರಿಗೆ ಆರ್ಥವಾಗದಿದ್ದರೂ ಕೆಲವರು ಹೌದು, ಹೌದು ಕೆಲವೊಂದು ಬಾರೀ ಸೂಪರ್ ಪವರ್ ನಮ್ಮನ್ನು ರಕ್ಷಿಸುತ್ತದೆ ಅದು ಹೇಗೆ ಏಕೆ ಎಂದು ಮಾತ್ರಾ ಹೇಳಲಾಗದು ಎಂದು ನೆಮ್ಮದಿಯ ಉಸಿರನ್ನು ಬಿಟ್ಟರು.

ಮಗ ಸುರಕ್ಷಿತವಾಗಿ ಎಲ್ಲರನ್ನೂ ಕಾಪಾಡಿದ ಸುದ್ದಿ ಕೇಳಿ ಮೋಹನ್ ದಂಪತಿಗಳಿಗೂ ಖುಷಿಯಾಯಿತು. ಇದೇ ವಿಷಯವನ್ನು ಅಜ್ಜಿ ತಾತರಿಗೆ ಮುಟ್ಟಿಸಿದಾಗ ಅವರೂ ಸಹಾ ತಮ್ಮ ಮನೆದೇವರಾದ ಗುರುವಾಯೂರಪ್ಪನಿಗೆ ತುಪ್ಪದ ದೀಪ ಹಚ್ಚಿ ನಮಸ್ಕರಿಸಲು ಮರೆಯಲಿಲ್ಲ. ಅದಾದ ಕೆಲವು ದಿನಗಳ ನಂತರ ಚಿಕಿತ್ಸೆಯ ತಪಾಸಣೆಗೆಂದು ವೈದ್ಯರ ಬಳಿ ಮಗನನ್ನು ಕರೆದುಕೊಂಡು ಹೋದಾಗ ಅವರಿಗೆ ಅಚ್ಚರಿಯ ಸಂಗತಿ ಕೇಳಿಬಂತು ಸ್ಯಾಮ್ ಶ್ವಾಶಕೋಶ ಸಂಪೂರ್ಣವಾಗಿ ಆರೋಗ್ಯವಾಗಿದ್ದು ಅತನಿಗೆ ಯಾವುದೇ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಇದು ನಿಜಕ್ಕೂ ಒಂದು ರೀತಿಯ ಪವಾಡ ಎಂದು ವೈದ್ಯರು ಹೇಳಿದರೆ, ಸ್ಯಾಮ್ ಮಾತ್ರಾ ಇದೆಲ್ಲವೂ ಭಗವಂತನ ಕೃಪೆ ಮತ್ತು ನಮ್ಮ ತಾತಾ ಅಜ್ಜಿಯರ ಅಶೀರ್ವಾದ ಎಂದು ಬಲವಾಗಿ ನಂಬಿದ.

ಮಗ ಆರೋಗ್ಯಕರವಾಗಿ  ಮತ್ತು ಬಲಶಾಲಿಯಾಗಿದ್ದನ್ನು ನೋಡಿ ಮೋಹನ್ ದಂಪತಿಗಳಿಗೂ ಬಹಳ ಸಂತೋಷವಾಯಿತು. ಇದೇ ಖುಷಿಯಲ್ಲಿ ಮಗನಿಗೆ ನಿನಗೇನು ಬೇಕು ಕೇಳು ನಾವು ನೆರೆವೇರಿಸಿಕೊಡಲು ಸಿದ್ಧರಿದ್ದೇವೆ ಎಂದಾಗ, ಸ್ಯಾಮ್ ಬಾಯಿಯಿಂದ ಹೊರಟ ಮಾತು ಅವರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು

ಸ್ಯಾಮ್ ಬಹಳ ಧೃಢ ನಿರ್ಧಾರದಿಂದ ನನ್ನನ್ನು ಪುನಃ ಭಾರತಕ್ಕೆ ಕಳುಹಿಸಿಬಿಡಿ ನಾನು ತಾತನಂತೆಯೇ ಪುರೋಹಿತನಾಗಲು ಬಯಸುತ್ತೇನೆ ಎಂದಿದ್ದ.

ಅಮೇರಿಕಾ ನನ್ನ ಜನ್ಮ ಭೂಮಿಯೇ ಹೌದಾದರೂ ನನಗೆ ಮರುಜನ್ಮ ನೀಡಿದ್ದು ನನ್ನ ಭಾರತವೇ. ನನ್ನ ಆರೋಗ್ಯ ಸುಧಾರಿಸಿದ್ದು ಅಲ್ಲಿಯ ಹವಾಮಾನ ಮತ್ತು ಅಲ್ಲಿಯ ನನ್ನ ಅಭ್ಯಾಸ ಮತ್ತು ದಿನಚರಿ. ಹಾಗಾಗಿ ನಾನು ಅದನ್ನೇ ಮುಂದುವರಿಸಲು ಇಚ್ಚಿಸುತ್ತೇನೆ ಎಂದಾಗ ಮಗನ ಮೇಲಿನ ಮಮಕಾರದಿಂದ ಮರುಮಾತಿಲ್ಲದೇ ಮೋಹನ್ ದಂಪತಿಗಳು ಒಪ್ಪಿಕೊಳಲ್ಲೇ ಬೇಕಾಯಿತು.

purohitಕೆಲವೇ ಕೆಲವು ದಿನಗಳಲ್ಲಿ ಸ್ಯಾಮ್ ಭಾರತದ ತನ್ನ ತಾತಾ ಅಜ್ಜಿಯ ಮನೆಗೆ ಹಿಂದಿರುಗಿ, ತಾತನ ಆಶ್ರಯದಲ್ಲಿಯೇ ಶಾಸ್ತ್ರಕ್ತವಾಗಿ ವೇದಾಧ್ಯಯನ, ಜ್ಯೋತಿಷ್ಯ ಮತ್ತು ಆಗಮಶಾಸ್ತ್ರಗಳನ್ನು ಅಧ್ಯಯನ ಮಾಡಿ ಬಹು ಬೇಗನೇ ಘನಪಾಠಿ ಎನ್ನಿಸಿಕೊಂಡ. ಅವನ ಖ್ಯಾತಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೂ ಹರಡೀ ಎಲ್ಲರೂ ತಮ್ಮ ಧರ್ಮಶಾಸ್ತ್ರಗಳ ಜಿಜ್ಞಾಸೆಯ ಪರಿಹಾರಕ್ಕೆ ಮತ್ತು ತಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಈ  ಸಂಪತ್ ಶಾಸ್ತ್ರಿಗಳನ್ನೇ ಅನುಸರಿಸತೊಡಗಿದರು. ಸಂಪತ್ ಶಾಸ್ತ್ರಿಯೂ ಕೂಡ ತನ್ನ ತಾತನಂತೆಯೇ ಸದಾಕಾಲವೂ ಮಂದ ಸ್ಮಿತನಾಗಿದ್ದು ಯಾರನ್ನೂ ಯಾವುದಕ್ಕೂ ಬೇಡದೇ ಕಾಡದೇ ಅವರು ಕೊಟ್ಟಷ್ಟನ್ನೇ ತೆಗೆದುಕೊಂಡು ಆಚಾರ, ವಿಚಾರ, ಧರ್ಮ, ಶಾಸ್ತ್ರ ಸಂಪ್ರದಾಯಗಳಿಗೆ ಯಾವುದೇ ಚ್ಯುತಿ ಬಾರದಂತೆ   ನಿಜವಾಗಿಯೂ ಪುರವನ್ನು ಕಾಪಾಡುವ ಪುರೋಹಿತನಾದ (ಪುರ+ಹಿತ). ಮೊಮ್ಮಗನ ಈ ಪರಿಯ ರೂಪಾಂತರ ಮತ್ತು ಬೆಳೆವಣಿಗೆ ತಾತಾ ಅಜ್ಜಿಯರಿಗೆ ಅಚ್ಚರಿಯನ್ನು ತಂದಿತ್ತಲ್ಲದೇ ತಮ್ಮ ವಯೋಸಹಜವಾಗಿ ಗತಿಸಿದಾಗಲೂ ಅವರಿಗೆ ನೆಮ್ಮದಿಯಿತ್ತು

ಕೆಲವರ್ಷಗಳ ಕಾಲ ಅಮೇರೀಕಾದಲ್ಲಿಯೇ ಇದ್ದ ಮೋಹನ್ ದಂಪತಿಗಳೂ ಸಹಾ ಮಗನೊಂದಿಗೆ ಇರಲು ಇಚ್ಚಿಸಿ, ಅಮೇರಿಕಾದಲ್ಲಿ ಇದ್ದ ತಮ್ಮೆಲ್ಲಾ ಆಸ್ತಿ ಪಾಸ್ತಿಗಳನ್ನು ಮಾರಿ ತಮ್ಮ ಊರಿಗೆ ಹಿಂದಿರುಗಿದರು. ಗಳಿಸಿದ ಹಣದಿಂದ ತಮ್ಮ ಜಮೀನಿನ ಅಕ್ಕಪಕ್ಕದಲ್ಲಿದ್ದ ಜಮೀನನ್ನು ಖರೀದಿಸಿ ಅಲ್ಲೊಂದು ಸುಂದರವಾದ ಗೋಶಾಲೆಯನ್ನು ನಿರ್ಮಿಸಿ ಅದನ್ನು ದಂಪತಿಗಳು ನೋಡಿಕೊಳ್ಳುತ್ತಾ, ತಮ್ಮ ಮಗ, ಸೊಸೆ ಮತ್ತು ಮ್ಮೊಮ್ಮಕ್ಕಳೊಂದಿಗೆ ಆರೋಗ್ಯವಾಗಿ,  ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಯಾವ ವ್ಯಕ್ತಿಯು ತನ್ನ ಕೆಲಸದಲ್ಲಿ ಪ್ರಾಮಾಣಿಕನಾಗಿರುತ್ತಾನೆಯೋ ಅವನನ್ನು  ಖಂಡಿತವಾಗಿಯೂ ದೇವರು ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜೀವನದಲ್ಲಿ ಸುಖಃ ಶಾಂತಿ ಮತ್ತು ನೆಮ್ಮದಿಯಾಗಿ ಇರಲು ಐಷಾರಾಮ್ಯದ ವಿದೇಶೀ ಜೀವನವೇ ಅವಶ್ಯಕವಿಲ್ಲ. ಸನಾತನ ಪದ್ದತಿಯಿಂದಲೂ ನೆಮ್ಮದಿಯಾದ ಜೀವನವನ್ನು ನಡೆಸಬಹುದು.

ಸಂಕಟ ಬಂದಾಗ ಮಾತ್ರವೇ, ವೆಂಕಟರಮಣ ಎನ್ನದೇ, ದೇವರ ಮೇಲೆ ಸದಾಕಾಲವೂ ನಂಬಿಕೆ ಇಟ್ಟು ಶ್ರಧ್ಧೆ ಮತ್ತು ಭಕ್ತಿಯಿಂದ ಅವನನ್ನು ಪ್ರಾರ್ಥಿಸಿದರೆ, ಆ ಭಗವಂತ ಖಂಡಿತವಾಗಿಯೂ ನಮ್ಮನ್ನು ಯಾವುದೋ ಒಂದು ರೀತಿಯಲ್ಲಿ ಬಂದು ರಕ್ಷಿಸಿಯೇ ತೀರುತ್ತಾನೆ.

ಏನಂತೀರೀ?

ಸೂಚನೆ : ಈ ಲೇಖನ ಬಹಳ ಹಿಂದೆ ವಾಟ್ಯಾಪ್ನಲ್ಲಿ ಓದಿದ್ದ ಆಂಗ್ಲ ಸಂದೇಶದ ಒಂದು ವಿಸ್ತೃತ ಆವೃತ್ತಿಯಾಗಿದೆ. ಹಾಗಾಗಿ ಈ ಲೇಖನದ ಬಹುಪಾಲು ಶ್ರೇಯ ಮೂಲ ಅನಾಮಿಕ ಲೇಖಕರಿಗೇ ಸಲ್ಲುತ್ತದೆ.

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s