ಭಾರತದ ದೇಶದಲ್ಲಿ ಅದೋಂದು ಸಣ್ಣ ಗ್ರಾಮ. ಆ ಗ್ರಾಮದಲ್ಲೊಬ್ಬ ವೃದ್ದ ದಂಪತಿಗಳು ವಾಸಿಸುತ್ತಿದ್ದರು. ಮನೆಯ ಹತ್ತಿರವೇ ನದಿಯೊಂದು ಹರಿಯುತ್ತಿದ್ದ ಕಾರಣ ಅವರ ಭಾವಿಯಲ್ಲಿ ಕೇವಲ 10 ಅಡಿಗಳ ಆಳದಲ್ಲಿಯೇ ನೀರಿದ್ದರಿಂದ ಅವರ ಮನೆಯ ಸುತ್ತಲೂ ಮಾವು, ತೆಂಗು, ಹಲಸಿನ ಮರಗಳಲ್ಲದೇ ದಿನ ನಿತ್ಯ ಪೂಜೆಗೆ ಬೇಕಾಗುವಂತಹ ಹೂವಿನ ಗಿಡಗಳಲ್ಲದೇ, ಮನೆಗೆ ಅವಶ್ಯಕವಾಗಿದ್ದ ತರಕಾರಿಗಳನ್ನೂ ತಮ್ಮ ಕೈತೋಟದಲ್ಲಿಯೇ ಬೆಳೆಯುತ್ತಾ ಆನಂದಮಯ ಜೀವನವನ್ನು ನಡೆಸುತ್ತಿದ್ದರು.
ಇದಲ್ಲದೇ ಅವರ ಬಳಿ ಭತ್ತ ಬೆಳೆಯುವ ಫಲವತ್ತದ ಸಾಕಷ್ಟು ಗದ್ದೆಯಿದ್ದು ಜೀವನಕ್ಕೇನೂ ಕೊರತೆ ಇರರಲಿಲ್ಲವಾದರೂ, ಸದಾಕಾಲವೂ ಕಚ್ಚೆ ಪಂಚೆ ಉಟ್ಟುಕೊಂಡು ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದರು. ಅವರ ಪತ್ನಿಯೂ ಸಹಾ ಒಂಬತ್ತು ಗಜದ ಸೀರೆಯನ್ನು ಧರಿಸುತ್ತಾ ಬಹಳ ಶ್ರದ್ಧಾ ಭಕ್ತಿಯುಳ್ಳ ಆಸ್ತಿಕರಾಗಿದ್ದರು. ವೇದ ಮತ್ತು ಪುರಾಣಗಳನ್ನು ಚೆನ್ನಾಗಿ ತಿಳಿದು ಕೊಂಡು ಊರಿನ ಎಲ್ಲಾ ಶುಭ ಮತ್ತು ಆಶುಭ ಕಾರ್ಯಗಲು ಇವರ ಪೌರೋಹಿತ್ಯದಲ್ಲಿಯೇ ನಡೆಯುತ್ತಿತ್ತು. ಆವರೆಂದೂ ಇಷ್ಟು ಕೊಡಿ ಅಷ್ಟು ಕೊಡಿ ಎಂದು ಯಾರನ್ನೂ ಕೇಳಿದವರಲ್ಲಾ. ಊರಿನವರು ಕೊಟ್ಟಷ್ಟೇ ದಕ್ಷಿಣಿಗೆ ತೃತ್ಪಿಹೊಂದುತ್ತಿದ್ದರಲ್ಲದೇ, ಸಹಾಕಾಲವೂ ಎಲ್ಲರೀಗೂ ಒಳ್ಳೆಯದಾಗಲೀ ಎಂದೇ ಹರಸುತ್ತಿದ್ದರು. ಆ ಕಾರಣದಿಂದಾಗಿ ಊರಿನ ಎಲ್ಲರೂ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು.
ಅವರ ಏಕೈಕ ಪುತ್ರ ಮೋಹನ್ ಬಹಳ ಬುದ್ಧಿವಂತ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾದ ಕ್ಯಾಲೀಫೋರ್ನಿಯಾಕ್ಕೆ ಹೋದವನು ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡು ಸಂಸಾರವಂದಿಗನಾಗಿ ತನ್ನ ಪತ್ನಿ ಮತ್ತು 11 ವರ್ಷದ ಮಗನೊಂಡಿಗೆ ವಾಸಿಸುತ್ತಿದ್ದನು.
ತಂದೆ ತಾಯಿಯರಿಬ್ಬರೂ ಸದಾಕಾಲವೂ ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದ ಕಾರಣ, ಕ್ಯಾಲಿಫೋರ್ನಿಯಾದಲ್ಲಿಯೇ ಜನಿಸಿದ ಆ 11 ವರ್ಷದ ಪೋರನಿಎ ತಂದೆ ತಾಯಿಯರ ನಿಜವಾದ ಪ್ರೀತಿವಾತ್ಸಲ್ಯಗಳಿಂದ ವಂಚಿತನಾಗಿ ಕಂಪ್ಯೂಟರ್ ಮತ್ತು ಟಿವಿ ಆಟಗಳಲ್ಲಿಯೇ ತನ್ನ ಕಾಲ ಕಳೆಯುತ್ತಿದ್ದ. ಇದಕ್ಕಿಂತಲೂ ಹೆಚ್ಚಾಗಿ ಆ ಹುಡುಗ, ಹುಟ್ಟಿನಿಂದಲೂ ಶ್ವಾಸಕೋಶ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ. ಅಲ್ಲಿನ ವೈದ್ಯರುಗಳೂ ಸಹಾ ಹುಡುಗನನ್ನು ಕೂಲಕುಂಶವಾಗಿ ಪರೀಕ್ಷಿಸಿ, ಹುಡುಗನ ಶ್ವಾಸಕೋಶ ಕುಗ್ಗುತ್ತಿದೆಯಾದ ಕಾರಣ ಅವನಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಮತ್ತು ಅದಕ್ಕೆ ಬಹಳ ಖರ್ಚಾಗುತ್ತದೆ ಎಂದು ತಿಳಿಸಿದ್ದರು. ಗಂಡ ಹೆಂಡತಿಯರಿಬ್ಬರೂ ತಮ್ಮ ವೃತ್ತಿಜೀವನದ ಕಡೆಯೇ ಗಮನ ಹರಿಸಿದ್ದ ಕಾರಣ, ಭಾರತದಲ್ಲಿದ್ದ ಅವರ ವೃದ್ಧ ತಂದೆತಾಯಿಯರು ಮೊಮ್ಮಗನನ್ನು ನೋಡಲು ಕಾತರದಿಂದ ಸಾಕಷ್ಟು ಬಾರೀ ಕೋರಿಕೊಂಡಿದ್ದರೂ ಆ ದಂಪತಿಗಳಿಗೆ ಭಾರತಕ್ಕೆ ಬರಲೂ ಸಾಧ್ಯವಾಗಿರಲಿಲ್ಲ. ಸಾಧ್ಯವಾಗಿರಲಿಲ್ಲ ಎನ್ನುವುದಕ್ಕಿಂತ ಅವರು ಭಾರತಕ್ಕೆ ಬರಲು ಮನಸ್ಸು ಮಾಡಿರಲಿಲ್ಲ ಎಂದರೇ ಸೂಕ್ತವಾಗುತ್ತದೆ.
ತಮ್ಮ ಮಗ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನಾ ತನ್ನ ತಾತಾ ಅಜ್ಜಿಯರನ್ನೊಮ್ಮೆ ನೋಡಿ ಬಿಡಲಿ ಎಂದು ನಿರ್ಧರಿದ್ದರಿಂದ ಅವರೆಲ್ಲರೂ ಆ ಬೇಸಿಗೆಯಲ್ಲಿ ಭಾರತಕ್ಕೆ ಬರುತ್ತಾರೆ. ಅನೇಕ ವರ್ಷಗಳ ನಂತರ ತಮ್ಮ ಮಗ ಸೊಸೆಯನ್ನು ನೋಡುತ್ತಿದ್ದರೂ ಆ ವೃದ್ಧ ದಂಪತಿಗಳ ಗಮನವೆಲ್ಲಾ ಮೊತ್ತ ಮೊದಲ ಬಾರಿಗೆ ತಮ್ಮ ಊರಿಗೆ ಬರುತ್ತಿದ್ದ ತಮ್ಮ ಮೊಮ್ಮಗನ ಕಡೆಗೆ ಇತ್ತು ಎಂದು ಹೇಳಬೇಕಿಲ್ಲ.
ಮೊಮ್ಮಗ ಸ್ಯಾಮ್ (ಸಂಪತ್)ನಿಗೂ ತಾತಾ ಅಜ್ಜಿಯರನ್ನು ನೋಡಿದ ಕೂಡಲೇ ಅತ್ಯಾನಂದವಾಯಿತು. ನಿಜ ಹೇಳಬೇಕೆಂದರೆ, ನಿಜವಾದ ಪ್ರೀತಿ ವಾತ್ಸಲ್ಯದ ಸುಖಃ ಮತ್ತು ಸಂತೋಷ ಹೇಗೆ ಇರುತ್ತದೆ ಎಂಬುದನ್ನು ಮೊತ್ತ ಮೊದಲಬಾರಿಗೆ ಆತ ತನ್ನ ಅಜ್ಜಿ ಮತ್ತು ತಾತನಲ್ಲಿ ಕಂಡು ಬಹಳ ಸಂಭ್ರಮದಲ್ಲಿ ತೇಲಾಡತೊಡಾಗಿದನು.
ತಾತಾ ತನ್ನ ಮೊಮ್ಮಗನಿಗೇ ಪ್ರತಿ ದಿನ ಬೆಳಿಗ್ಗೆ ಒಂದೊಂದು ಶ್ಲೋಕಗಳನ್ನು ಕಲಿಸಿ ಕೊಡುತ್ತಿದ್ದರೇ, ಮೊಮ್ಮಗನೂ ಸಹಾ ಅತ್ಯಂತ ಶ್ರಧ್ಧೆಯಿಂದ ಅತೀ ಶೀಘ್ರದಲ್ಲೇ ತಾತಾ ಹೇಳಿ ಕೊಟ್ಟ ಶ್ಲೋಕಗಳನ್ನೆಲ್ಲಾ ಕಲಿಯುತ್ತಿದ್ದದ್ದು ತಾತನಿಗೆ ಖುಷಿ ಕೊಡುತ್ತಿತ್ತು ಮತ್ತು ಅದನ್ನು ತನ್ನ ಊರಿನ ಎಲ್ಲರ ಬಳಿಯಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ತಾತಾ ಎಲ್ಲಿಗೇ ಹೋದರೂ ಅವರನ್ನು ಹಿಂಬಾಲಿಸುತ್ತಾ ಒಂದು ರೀತಿಯಲ್ಲಿ ಮೊಮ್ಮಗ ತಾತನ ಬಾಲವಾಗಿ ಹೋಗಿದ್ದ ಎಂದರೂ ತಪ್ಪಾಗಲಾರದು. ತಾತನ ಜೊತೆ ದೇವಸ್ಥಾನ, ಹೊಲ ಗದ್ದೆಗಳಿಗೆ ಹೋಗಿ ಅಲ್ಲಿಯ ಸ್ವಚ್ಚಂದ ಪರಿಸರವನ್ನು ಅತ್ಯಂತ ಸಂತೋಷದಿಂದ ಆನಂದಿಸತೊಡಗಿದ.
ಇನ್ನು ಮೊಮ್ಮಗನನಿಗೆ ಅವನ ಅಜ್ಜಿಯ ಆರೈಕೆಗಳಿಗೇನೂ ಕಡಿಮೆ ಇರಲಿಲ್ಲ ಪ್ರತೀ ದಿನ ಬೆಳಿಗ್ಗೆ ಕ್ಯಾರೆಟ್ ಜ್ಯೂಸ್ ಕೊಡುವುದರೊಂದಿಗೆ ಅವರ ದಿನಚರಿ ಆರಂಭವಾದರೆ, ಮನೆಯಲ್ಲಿಯೇ ಕರೆದ ಗಟ್ಟಿಯಾದ ಹಾಲು, ಅದರಿಂದ ಮಾಡಿದ ಗಟ್ಟಿ ಮೊಸರು, ಹಸನಾದ ಬೆಣ್ಣೆ, ಶುದ್ಧವಾದ ತುಪ್ಪದಿಂದ ಮಾಡಿದ ಕುರುಕಲು ತಿಂಡಿಗಳು ಬಗೆ ಬಗೆಯ ಸಿಹಿ ತಿಂಡಿಗಳಿಂದ ಮೊಮ್ಮಗ ಸಂತುಷ್ಟನಾಗಿದ್ದ. ಅಜ್ಜಿಯ ಜೊತೆ ಹಸುಗಳನ್ನು ಹೊಳೆಯುವುದು, ಸೊರ್ ಸೊರ್ ಎಂದು ನೊರೆ ಹಾಲನ್ನು ಕರೆಯುವಾಗ ಅಜ್ಜಿಯ ಸೆರಗನ್ನೇ ಹಿಡುದುಕೊಂಡು ಸಂಭ್ರಮಿಸುತ್ತಿದ್ದಲ್ಲದೇ, ಸಂಜೆ ದೀಪ ಹತ್ತಿಸಿದ ನಂತರ ಅಜ್ಜಿ ಹೇಳುತ್ತಿದ್ದ ದೇವರ ನಾಮ ಮತ್ತು ಭಜನೆಗಳನ್ನೂ ಸ್ಯಾಮ್ ಅತೀ ಶೀಘ್ರದಲ್ಲಿಯೇ ಕಲಿತು ಕೊಂಡಿದ್ದ.
ಆಷ್ಟರಲ್ಲಾಗಲೇ ಅತನಿಗೆ ಅಕ್ಕ ಪಕ್ಕದ ಹುಡುಗರು ಪರಿಚಯವಾಗಿದ್ದರು. ಅವರ ಜೊತೆ ನದಿಗೆ ಹೋಗಿ ಈಜತೊಡಗಿದ. ತಮ್ಮ ತೋಟದಲ್ಲಿ ಮರಕೋತಿ ಆಟ, ಗೋಲಿ, ಬುಗುರಿ, ಕಬ್ಬಡಿ ಹೀಗೆ ವೀಡಿಯೋ ಗೇಮ್ ಗಳ ಹೊರತಾಗಿಯೂ ಇತರೇ ಆಟಗಳು ಇವೇ ಎಂಬುದನ್ನು ಆತ ತನ್ನ ಗೆಳೆಯರನ್ನು ನೋಡಿ ಕಲಿತು ಕೊಂಡಿದ್ದ. ಕೆಲವೇ ಕೆಲವು ದಿನಗಳಲ್ಲಿ ತಾತನ ಜೊತೆ ತಾತನಷ್ಟೇ ಗಟ್ಟಿ ಧ್ವನಿಯಲ್ಲಿ ಅವರಷ್ಟೇ ಸ್ಪಷ್ಟ ಉಚ್ಚಾರಗಳೊಂದಿಗೆ ಮಂತ್ರಗಳನ್ನು ಹೇಳತೊಡಗಿದ. ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಅವನಿಗೇ ಅರಿವಿಲ್ಲದಂತೆ ಆತನ ಶ್ವಾಸಕೋಶಗಳು ವಿಸ್ತರಿಸಲು ಪ್ರಾರಂಭಿಸಿದ್ದವು. ತಾತನ ಮನೆಗೆ ಬಂದಾಗಲಿಂದಲೂ ಆತನಿಗೆ ಹಿಂದಿನಂತೆ ಉಸಿರಾಟದ ಯಾವುದೇ ಸಮಸ್ಯೆಗಳಿರಲಿಲ್ಲ. ಹುಡುಗರೊಂದಿಗಿನ ಈಜು ಅವನ ತೋಳುಗಳಿಗೆ ಸಾಕಷ್ಟು ಶಕ್ತಿಯನ್ನು ನೀಡಿತ್ತು. ಎಲ್ಲಾ ಹುಡುಗರಂತೇ ಇವನೂ ಸಹಾ ನದಿಯ ನೀರಿಗೆ ಧುಮುಕಿ, ಉಳಿದ ಹುಡುಗರಂತೆಯೇ ವೇಗವಾಗಿ ಈಜುತ್ತಿದ್ದ. ಈಗ ಅವನು ಕೋತಿಯಂತೆ ಇತರ ಹುಡುಗರೊಂದಿಗೆ ಮರಗಳಿಂದ ಮರಕ್ಕೆ, ಕೊಂಬೆಗಳನ್ನು ಹಿಡಿದುಕೊಂಡು ನಿರಾಯಾಸವಾಗಿ ಹಾರುತ್ತಿದ್ದ.
ಯಾವುದೇ ಸಮಸ್ಯೆಗಳು ಎದುರಾದರೂ ಅಚ್ಚುತಾ, ಅನಂತಾ, ಗೋವಿಂದಾ ಎಂದು ಭಕ್ತಿಯಿಂದ ಪ್ರಾರ್ಥಿಸಿದರೆ ಬಂದ ಕಷ್ಟಗಳೆಲ್ಲವೂ ಸುಲಭವಾಗಿ ಪರಿಹಾರವಾಗುತ್ತದೆ ಎಂಬ ತನ್ನ ಅಜ್ಜಿಯ ಮಾತೇ ಅವನಿಗೆ ವೇದವಾಕ್ಯವಾಗಿ. Oh my God, Oh my God, ಎನ್ನುತ್ತಿದ್ದವ ಈಗ ಸದಾಕಾಲವೂ, ಅಚ್ಚುತಾ, ಅನಂತಾ, ಗೋವಿಂದಾ ನಾಮ ಸ್ಮರಣೆ ಮಾಡುತ್ತಿದ್ದ.
ಮೋಹನ್ ದಂಪತಿಗಳ ರಜೆ ಮುಗಿದಿತ್ತು ಅವರು ಅಮೇರಿಕಾಕ್ಕೆ ಹಿಂದಿರಿಗಲು ಬಯಸಿದರು. ತಂದೆ, ತಾಯಿಯರ ಒತ್ತಾಯದ ಮೇರೆಗೆ ಅತ್ಯಂತ ಸಂತೋಷವಾಗಿ ಕಾಲಕಳೆಯುತ್ತಿದ್ದ ಸ್ಯಾಮನನ್ನು ಇನ್ನೂ ಕೆಲವು ದಿನಗಳ ಮಟ್ಟಿಗೆ ಇಲ್ಲಿಯೇ ಬಿಟ್ಟಿರಲು ನಿರ್ಧರಿಸಿ, ಇಲ್ಲಿಂದ ವಿಮಾನದಲ್ಲಿ ಹತ್ತಿಸಿ ಕೂರಿಸಿದರೆ ಕ್ಯಾಲಿಫೋರ್ನಿಯಾದಲ್ಲಿ ಅವರು ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದಾಗ ಸ್ಯಾಮ್ ಆನಂದಕ್ಕೆ ಪಾರವೇ ಇರಲಿಲ್ಲ.
ಮಗ ಮತ್ತು ಸೊಸೆ ಹಿಂದಿರುಗಿದ ಮೇಲೆ, ಮೊಮ್ಮಗನ ಆರೈಕೆ ಇನ್ನೂ ಹೆಚ್ಚಾಯಿತು ಅಜ್ಜಿಯ ಕ್ಯಾರೆಟ್ ಜ್ಯೂಸ್ಸ್, ಕೆನೆ ಭರಿತ ಹಾಲು, ಹುಡುಗರೊಡನೆ ನೈಸರ್ಗಿಕ ವ್ಯಾಯಾಮ, ತಾತನ ಜೊತೆ ಗಟ್ಟಿಯಾಗಿ ವೇದ ಪಾರಾಯಣ ಮತ್ತು ಅವರ ಜೊತೆ ಹೊಲ ಗದ್ದೆಗಳಲ್ಲಿನ ತಾಜಾ ಗಾಳಿಯ ಉಸಿರಾಟ ಅವನ ಆರೋಗ್ಯವನ್ನು ಸುಧಾರಿಸಿತ್ತು. ಅಪ್ಪಾ ಕೊಟ್ಟಿದ್ದ ಒಂದು ತಿಂಗಳುಗಳ ಗಡುವು ಮುಗಿದು ಭಾರವಾದ ಹೃದಯದಿಂದ, ಒಲ್ಲದ ಮನಸ್ಸಿನಿಂದಲೇ ಮುಂದಿನ ವರ್ಷ ಖಂಡಿತವಾಗಿಯೂ ಬರುತ್ತೇನೆ ಎಂದು ವಾಗ್ದಾನ ಮಾಡಿ ಅಮೇರಿಕಾದ ವಿಮಾನ ಹತ್ತಿದ್ದ. ಅಜ್ಜಿಯೂ ಮುದ್ದಿನ ಮೊಮ್ಮಗನಿಗಾಗಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಕಳುಹಿಸಿದ್ದರು.
ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣ ತಲುಪುತ್ತೇವೆ ಎಂದು ಪೈಲೆಟ್ ಹೇಳಿದ್ದು ಸ್ಯಾಮ್ ಕಿವಿಗೆ ಬಿದ್ದ ಕೆಲವೇ ಕೆಲವು ನಿಮಿಷಗಳಲ್ಲಿಯೇ ವಿಮಾನದ ಹೊರಗಿನ ಗುಡುಗು ಮತ್ತು ಮಿಂಚು ವಿಮಾನವನ್ನು ನಡುಗುವಂತೆ ಮಾಡಿತು. ವಿಮಾನ ಇದ್ದಕ್ಕಿದ್ದಂತೆಯೇ ಅಲ್ಲಾಡತೊಡಗಿ ಎಲ್ಲಾ ಪ್ರಯಾಣಿಕರೂ ಗಾಭರಿಯಾಗತೊಡಗಿದರು. ವಿಮಾನವೂ ಕೂಡಾ ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಎಲ್ಲರಿಗೂ ಉಸಿರಾಟದ ತೊಂದರೆಯಾಗಿ ಆಮ್ಲಜನಕದ ಮುಖವಾಡಗಳು ಕೆಳಗಿಳಿದವು. ಗಗನ ಸಖಿಯರು ಅತ್ತಿಂದಿತ್ತ ಗಾಭರಿಯಿಂದ ಓಡಾಡುತ್ತಾ ಎಲ್ಲರಿಗೂ ಸೀಟ್ ಬೆಲ್ಡ್ ಮತ್ತು ಮುಖವಾಡಗಳನ್ನು ಧರಿಸಿ ನೆಮ್ಮದಿಯಿಂದ ಇರಿ ಎಂದು ಹೇಳುತ್ತಾ ಹರಸಾಹಸ ಪಡುತ್ತಿದ್ದರಾದರೂ, ಅಲ್ಲಿ ಭೀತಿಯ ವಾತವಾರಣವಿತ್ತು. ಎಲ್ಲರೂ ಪ್ರಾಣ ಭಯಭೀತರಾಗಿ ಅಳುತ್ತಿದ್ದರು.
ಅರೇ ವಿಮಾನಕ್ಕೇನಾಯಿತು? ಸ್ಯಾಮ್ ಕ್ಷೇಮವಾಗಿ ಅಪ್ಪ ಅಮ್ಮಂದಿರ ಮಡಿಲಿಗೆ ಸೇರಿದನೇ? ಈ ಕುತೂಹಲ ಮುಂದಿನ ಸಂಚಿಕೆಯಲ್ಲಿ
.
ಅಲ್ಲಿಯ ವರೆಗೂ ಅಚ್ಚುತಾ ಅನಂತಾ ಗೋವಿಂದಾ ಎಂದು ಭಗವಂತನ ನಾಮ ಸ್ಮರಣೆ ಮಾಡುತ್ತಿರೀ
ಏನಂತೀರಿ?
ತುಂಬಾ ಸ್ವಾರಸ್ಯಕರವಾಗಿದ್ದು, ಕುತೂಹಲವನ್ನು ಕಾದಿರಿಸಲಾಗಿದೆ. ಒಂದೇ ಕಂತಿನಲ್ಲಿ ನೀಡಿದ್ದರೆ ಚೆನ್ನಾಗಿತ್ತು.
LikeLiked by 1 person
ಈ ಕುತೂಹಲ ದಯವಿಟ್ಟು ನಾಳೆವರೆಗೂ ಇರಲಿ ಸರ್
LikeLike