ಲತಾ ಭಗವಾನ್ ಖರೆ, ಕಲಿಯುಗದ ಸತ್ಯವಾನ್ ಸಾವಿತ್ರಿ

ನಾವು ನಮ್ಮ ಪುರಾಣದಲ್ಲಿ ತನ್ನ ಗಂಡನ ಪ್ರಾಣವನ್ನು ಉಳಿಸಿಕೊಳ್ಳಲು ಯಮಧರ್ಮರಾಯನನ್ನೇ ಎದಿರು ಹಾಕಿಕೊಂಡ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಕೇಳಿದ್ದೇವೆ. ಈಗಿನ ಕಾಲದಲ್ಲಿಯೂ ತನ್ನ ಗಂಡನ ಆರೋಗ್ಯದ ಸಲುವಾಗಿ ತನ್ನನ್ನೇ ತಾನು ಫಣಕ್ಕಿಟ್ಟುಕೊಂಡು ತನ್ನ ಗಂಡನ ಜೀವನವನ್ನು ಉಳಿಸಿಕೊಂಡ ಮತ್ತು ಇಂದಿನ ಯುವಜನತೆಗೆ ಮಾದರಿಯಾಗವಲ್ಲ ಶ್ರೀಮತಿ ಲತಾ ಭಗವಾನ್ ಖರೆಯ ಸಾಹಸಗಾಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅದು 2013ರ ಸಮಯ. ಮಹಾರಾಷ್ಟ್ರದ ಬುಲ್ದಾನ ಜೆಲ್ಲೆಯ ಸಣ್ಣ ಗ್ರಾಮವೊಂದರಲ್ಲಿ 68 ವರ್ಷದ ಭಗವಾನ್ ಖರೆ ಮತ್ತು ಮತ್ತು 67 ವರ್ಷದ ಆತನ ಹೆಂಡತಿ ಲತಾ ದಂಪತಿಗಳು ವಾಸಿಸುತ್ತಿದ್ದರು. ಭಗವಾನ್ ಖರೆ ಅನೇಕ ವರ್ಷಗಳ ಕಾಲ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿ ನಿವೃತ್ತಿಯಾದ ನಂತರ ಗಂಡ ಮತ್ತು ಹೆಂಡತಿಯರಿಬ್ಬರೂ ಅದೇ ಊರಿನಲ್ಲಿ ಕೂಲೀ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇದ್ದ ಮನೆಯೂ ಸಹಾ ತಮ್ಮ ಮೂರು ಹೆನ್ಣು ಮಕ್ಕಳ ಮದುವೆಯ ಸಮಯಕ್ಕೆ ಮಾಡಿಕೊಂಡಿದ್ದ ಸಾಲಕ್ಕಾಗಿ ಮಾದಿದ್ದ ಕಾರಣ ಸಣ್ಣ ಗುಡಿಸಲಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು.

ಅದೊಮ್ಮೆ ಹೊಲದಲ್ಲಿ ಕೆಲಸ ಮಾಡುವಾಗ ಇದ್ದಕ್ಕಿಂದ್ದಂತಯೇ ಭಗವಾನ್ ಕುಸಿದು ಬಿದ್ದಾಗ ಗಾಭರಿಗೊಂಡ ಲತಾ ಎಲ್ಲರ ಸಹಾಯದಿಂದ ಹತ್ತಿರದ ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದಳು. ಖರೆಯವರನ್ನು ಪರೀಕ್ಷಿಸಿದ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಈ ಸೋಂಕಿನ ಚಿಕಿತ್ಸೆಕೊಡಲಾಗದ ಕಾರಣ ನಗರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಾಗ ಲತಾ ಖರೆಗೆ ಕಕ್ಕಾಬಿಕ್ಕಿಯಾಗಿ ಕಡೆಗೆ ಅಕ್ಕ ಪಕ್ಕದವರನ್ನು ಮತ್ತು ಸಂಬಂಧಿಕರನ್ನು ಕಾಡಿ ಬೇಡಿ ಒಂದಿಷ್ಟು ಹಣವನ್ನು ಸಾಲ ಮಾಡಿ ಸಮೀಪದ ಬಾರಾಮತಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಭಗವಾನ್ ಖರೆಯನ್ನು ದಾಖಲಿಸಿದಳು.

ಖಾಸಗೀ ಆಸ್ಪತ್ರೆ ಎಂದ ಮೇಲೆ ಆ ಪರೀಕ್ಷೆ, ಈ ಪರೀಕ್ಷೆ ಎಂದು ನಾನಾ ರೀತಿಯ ಪರೀಕ್ಷೆಗಳನ್ನು ಮಾಡಿದ ನಂತರ ನಿಮ್ಮ ಮನೆಯವರಿಗೆ ತಗುಲಿರುವ ಈ ಸೋಂಕಿನ ಚಿಕಿತ್ಸೆಗಾಗಿ ಬಹಳ ಖರ್ಚಾಗುತ್ತದೆ. ಹಾಗಾಗಿ ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಉಳಿದದ್ದನ್ನು ಭಗವಂತನ ಮೇಲೆ ಬಿಡೋಣ ಎಂದು ಕಡ್ಡಿ ತುಂಡು ಮಾಡಿದ ಹಾಗೇ ಹೇಳಿದಾಗ ಲತಾ ಖರೆಗೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ ಆಗಿ, ಅಯ್ಯೋ ರಾಮ, ಅಷ್ಟೋಂದು ಹಣವನ್ನು ಎಲ್ಲಿಂದ ಹೊಂಚುವುದು? ಯಾರನ್ನು ಕೇಳುವುದು? ಈಗಾಗಲೇ ನೆಂಟರಿಷ್ಟರಲ್ಲಿ ಕಾಡಿ ಬೇಡಿ ಹಣವನ್ನು ತಂದು ಸುರಿದಾಗಿದೆ ಎಂದು ಯೋಚಿಸಿದಳು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವಂತೆ ತನ್ನ ಹೆಣ್ಣುಮಕ್ಕಳ ಬಳಿ ಹಣ ಕೇಳಲು ಆಕೆಗೆ ಮನಸ್ಸು ಬರಲಿಲ್ಲ. ತನ್ನ ಚೀಲವನ್ನು ನೋಡಿಕೊಂಡರೇ ಕೇವಲ ಹತ್ತೇ ಹತ್ತು ರೂಪಾಯಿಯ ಒಂದು ನೋಟು ಇತ್ತು ಮತ್ತು ಹೊಟ್ಟೆಯೂ ಹಸಿದಿತ್ತು.

ಆಸ್ಪತ್ರೆಯ ಹತ್ತಿರಲ್ಲಿಯೇ ಇದ್ದ ಸಣ್ಣ ಅಂಗಡಿಗೆ ಹೋಗಿ ಒಂದು ಸಮೋಸ ಖರೀದಿಸಿ ಗಬ ಗಬನೆ ತಿಂದು, ಸಮೋಸ ಇಟ್ಟು ಕೊಟ್ಟಿದ್ದ ಕಾಗದದ ತುಂಡಿನಲ್ಲಿಯೇ ಒರೆಸಿಕೊಳ್ಳಲು ಹೋದಾಗ, ಆ ಕಾಗದದ ತುಂಡಿನಲ್ಲಿ ಚಂದನೆಯ ಜಾಹೀರಾತೊಂದನ್ನು ನೋಡಿ ಆಕರ್ಷಿತಳಾಗಿ, ಅನಕ್ಷರಸ್ಥೆಯಾದ ಕಾರಣ ಅಂಗಡಿಯಲ್ಲಿದ್ದ ಸಣ್ಣ ಹುಡುಗನಿಗೊಬ್ಬನಿಗೆ ಓದಿ ತಿಳಿಸಲು ಕೋರಿಕೊಂಡಳು. ಆ ಹುಡುಗ ತನಗೆ ಗೊತ್ತಿದ್ದರಲ್ಲಿಯೇ ಜೋಡಿಸಿಕೊಂಡು ಓದಿ,

ಅಜ್ಜೀ, ನಾಳೆ ಈ ಬಾರಾಮತಿ ಊರಿನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮ್ಯಾರಥಾನ್ ಓಟದ ಸ್ಪರ್ಧೆ ಇದೆ. ಗೆದ್ದವರಿಗೆ ನಗದು ಬಹುಮಾನವನ್ನು ಕೊಡುತ್ತಾರಂತೇ ಎಂದ. ನಗದು ಬಹುಮಾನ ಎಂದ ಕೂಡಲೇ ಲತಾ ಖರೆ ಕಿವಿ ಚುರುಕಾಗಿ ಎಷ್ಟು ದೂರ ಓಡಬೇಕು? ಎಷ್ಟು ನಗದು ಬಹುಮಾನ? ಎಂದು ಕೇಳಬೇಕು ಎನಿಸಿದರೂ ಸುಮ್ಮನೆ ಓಟದ ಸ್ಪರ್ಧೆ ಇರುವ ಸ್ಥಳದ ವಿಳಾಸವನ್ನು ತಿಳಿದುಕೊಂಡಳು.

ಮಾರನೆಯ ದಿನ ಬೆಳಿಗ್ಗೆಯೇ ಎದ್ದು ಪ್ರಾಥರ್ವಿಧಿಗಳನ್ನು ಮುಗಿಸಿ ದೇವರ ಪ್ರಾರ್ಥನೆ ಮಾಡಿ, ಓಟದ ಸ್ಪರ್ಥೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಆಯೋಜಕರ ಬಳಿ ತನ್ನ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿಕೊಂಡಳು. ಆ ಹೊತ್ತಿಗಾಗಲೇ ಹಲವಾರು ಹದಿಹರೆಯದ ವೃತ್ತಿಪರ ಓಟಗಾರರು, ದೂರದ ಓಟಕ್ಕೆ ಅನುಕೂಲವಾಗುವಂತೆ ಬಟ್ಟೆಗಳನ್ನು ಧರಿಸಿ ಸ್ಪೋರ್ಟ್ಸ್ ಶೂ ಹಾಕಿಕೊಂಡು ಬಂದಿದ್ದರು. ಆದರೆ ಲತಾ ಖರೇ ಪಕ್ಕಾ ಮರಾಠೀ ಹೆಂಗಸರಂತೆ ಕೈ ಮಗ್ಗದ ಸೀರೆಯನ್ನು ಕಚ್ಚೆಯಂತೆ ಉಟ್ಟುಕೊಂಡು ಬರೀ ಗಾಲಿನಲ್ಲಿ ಬಂದಿದ್ದನ್ನು ನೋಡಿದ ಆಯೋಜಕರು ವಯೋಮಿತಿಯ ನೆಪವೊಡ್ಡಿ ಆಕೆಯನ್ನು ಸ್ಪರ್ಧೆಯಲ್ಲಿ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆದರೆ ಲತಾ ಖರೇ ತನ್ನ ಪರಿಸ್ಥಿತಿಯನ್ನು ತಿಳಿಸಿ, ಕಣ್ಣೀರು ಸುರಿಸಿ, ಆಯೋಜಕರ ಕಾಲಿಗೆ ಬೀಳಲು ಹೋದಾಗ, ಆಕೆಯ ಶ್ರದ್ಧೆ ಮತ್ತು ಆಸಕ್ತಿಯನ್ನು ಗಮನಿಸಿ ಸ್ಪರ್ಧೆಯ ವಯೋಮಾನದ ನಿಯಮಗಳನ್ನು ಮೀರಿ ಆಕೆಗೊಂದು ಅವಕಾಶವನ್ನು ನೀಡಲು ಒಪ್ಪಿ, ಆಕೆಯ ಹೆಸರನ್ನು ಸ್ಪರ್ಧೆಗೆ ನೊಂದಾಯಿಸಿಕೊಂಡರು.

WhatsApp Image 2020-07-02 at 11.50.55 PMಮ್ಯಾರಥಾನ್ ಓಟಕ್ಕೆ ಭರ್ಜರಿಯಾಗಿ ತಯಾರಾಗಿ ಬಂದಿದ್ದ ನೂರಾರು ಜನ ಮೂರು ಕಿಲೋ ಮೀಟರ್ ಒಡಲು ಸಿದ್ಧವಾಗಿದ್ದರು. ಲತಾ ಅಜ್ಜಿ ಜೀವಮಾನದಲ್ಲೆಂದೂ ಅಷ್ಟು ದೂರ ಓಡಿರಲೇ ಇಲ್ಲ. ಆದರೆ ಪರಿಸ್ಥಿತಿ ಆಕೆಯನ್ನು ಓಡುವಂತೆ ಮಾಡಿತ್ತು. ಭಗವಂತನನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಳ್ಳುತ್ತಾ, ಸೆರಗನ್ನು ತಲೆಗೆ ಸುತ್ತಿಕೊಂಡು ಬರೀ ಕಾಲಿನಲ್ಲಿ ಓಡಲು ಆರಂಭಿಸಿಯೇ ಬಿಟ್ಟರು. ಬಿಸಿಲಿನ ಝಳಕ್ಕೆ ಕಾಲು ಸುಡುತ್ತಿದ್ದರೂ ಆಕೆಗೆ ಲಕ್ಷವಿರಲಿಲ್ಲ. ಈ ಇಳೀ ವಯಸ್ಸಿನಲ್ಲಿಯೂ 16 ರ ಯುವತಿಯಂತೆ ದುಃಖ ಭರಿತ ಕಣ್ಗಳೊಡನೇ ಉತ್ಸಾಹ ಭರಿತವಾಗಿ ಆಕೆ ಓಡುತ್ತಿದ್ದನ್ನು ರಸ್ತೆಯ ಬದಿಯಲ್ಲಿ ನಿಂತು ನೋಡುತ್ತಿದ್ದ ಸಾವಿರಾರು ಮಂದಿ ಬೆರಗಾಗಿದ್ದಲ್ಲದೇ ಜೈಕಾರ ಹಾಕುತ್ತಾ ಚಪ್ಪಾಳೆ ಹೊಡೆಯುತ್ತಾ ಅಜ್ಜಿಯ ಈ ಪರಿಯ ಉತ್ಸಾಹವನ್ನು ಪ್ರೋತ್ಸಾಹಿಸತೊಡಗಿದರು. ಇದರ ಜೊತೆಯಲ್ಲಿ ಆಕೆಯೊಂದಿಗೆ ಓಡುತ್ತಿದ್ದವರೂ ಸಹಾ ಆಕೆಗೆ ದಾರಿ ಮಾಡಿಕೊಟ್ಟರು. ಅವರೆಲ್ಲರ ಜೈಕಾರದ ಫಲವೋ, ಭಗವಂತನ ಅನುಗ್ರಹವೋ, ಒಟ್ಟಿನಲ್ಲಿ ಆಕೆ ತನ್ನ ಛಲದಿಂದ ಆ ಓಟದ ಸ್ಪರ್ಧೆಯಲ್ಲಿ ವಿಜೇತಳಾದಾಗ ಅಕೆಗೆ ಸ್ವರ್ಗಕ್ಕೆ ಮೂರೇ ಗೇಣು.

WhatsApp Image 2020-07-02 at 11.50.22 PMಆಯೋಜಕರು ಸ್ಪರ್ಧೆಯಲ್ಲಿ ಗೆದ್ದದ್ದಕ್ಕಾಗಿ ಟ್ರೋಫಿ ಮತ್ತು ಪ್ರಮಾಣ ಪತ್ರ ಕೊಟ್ಟರೇ ಅಕೆಗೆ ನಗದು ಬಹುಮಾನವಾದ 5,000 ರೂಪಾಯಿಗಳದ್ದೇ ಚಿಂತೆ. ಅಯೋಜಕರು ನಗದನ್ನು ಕೈಗಿಡುತ್ತಿದ್ದಂತೆಯೇ ಆಕೆಗೆ ಪ್ರಪಂಚವನ್ನೇ ಗೆದ್ದಷ್ಟು ಸಂತೋಷ. ಕೂಡಲೇ ಆ ಹಣವನ್ನು ಆಸ್ಪತ್ರೆಗೆ ಕಟ್ಟಿ ತನ್ನ ಗಂಡನ ಪ್ರಾಣವನ್ನು ಉಳಿಸಿಬೇಕೆಂದು ಹೊರಡುತ್ತಿದ್ದಂತೆಯೇ, ಟಿವಿ ಕ್ಯಾಮೆರಾ ಹಿಡಿದು ಬಂದ ಪತ್ರಿಕೋದ್ಯಮಿಯೊಬ್ಬ ಅಜ್ಜೀ ಈ ಓಟದ ಸ್ಪರ್ಧೆಗೆ ಪಾಲ್ಗೊಳ್ಳಲು ನಿಮಗೇ ಎನು ಸ್ಪೂರ್ತಿ ಎಂದು ಕೇಳಿದಾಗ ಲತಾ ಖರೇ, ಅತ್ಯಂತ ಮುಗ್ಧವಾಗಿ ನಗುತ್ತಾ ಕಂದಾ ನನಗೆ ಇದು ಓಟದ ಸ್ಪರ್ಧೆಯಾಗಿರಲಿಲ್ಲ. ಇದು ನನ್ನ ಗಂಡನ ಜೀವನ್ಮರಣದ ಸ್ಪರ್ಧೆ. ಹಾಗಾಗಿ ನನಗೆ ಓಡುವಾಗಲೆಲ್ಲಾ ಬಾಡಿ ಹೋಗಿದ್ದ ನನ್ನ ಗಂಡನ ಮುಖವೇ ನನ್ನ ಕಣ್ಣ ಮುಂದೆ ಬರುತ್ತಿತ್ತು. ಆತನನ್ನೇ ನೆನಪಿಸಿಕೊಳ್ಳುತ್ತಾ ಓಡಿದೆ. ನಾನು ಈ ಟ್ರೋಫಿಗಾಗಿ ಓಡಿದ್ದಲ್ಲ. ನನಗೆ ನಗದು ಬಹುಮಾನಕ್ಕಾಗಿ ಎಂದು ಹೇಳಿ ತಡ ಮಾಡದೇ ಆಸ್ಪತ್ರೆಗೆ ಧಾವಿಸಿದಳು.

ಟಿವಿಯಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಲತಾ ಭಗವಾನ್ ಖರೇ ದಿನಬೆಳಗಾಗುವಷ್ಟರಲ್ಲಿ ದೇಶದಾದ್ಯಂತ ಪರಿಚಿತಳಾಗಿ ಹೋದರು. ಇದೇ ಸುದ್ದಿ ಬಿಬಿಸಿಯವರಿಗೆ ತಿಳಿದು ಅವರೂ ಸಹಾ ಆಕೆಯ ಕುರಿತು ಮಾಡಿದ ಒಂದು ಚೆಂದನೆಯ ಕಾರ್ಯಕ್ರಮ ಆಕೆಯ ಸಾಹಸಗಾಥೆ ವಿಶ್ವವಿಖ್ಯತವಾಗಿ ಆಕೆಯ ಪತಿಯ ವೈದ್ಯಕೀಯ ಸಹಾಯಕ್ಕಾಗಿ ಅನೇಕ ಜನರು ಮುಂದೇ ಬಂದು ಭಗವಾನ್ ಖರೆಯವರಿಗೆ ಸೂಕ್ತ ಚಿಕಿತ್ಸೆ ದೊರೆತು ಕೆಲವೇ ಕೆಲವು ದಿನಗಳಲ್ಲಿ ಗುಣಮುಖರಾಗಿ ಮನೆಗೆ ಹಿಂದಿರುಗಿದರು. ಹೀಗೆ ಲತಾ ಭಗವಾನ್ ಖರೆ ತನ್ನ ಛಲದಿಂದ ತನ್ನ ಗಂಡನ ಪ್ರಾಣ ಉಳಿಸಿಕೊಂಡ ಕಲಿಯುಗದ ಸಾವಿತ್ರಿ ಎನಿಸಿಕೊಂಡಳು.

WhatsApp Image 2020-07-02 at 11.51.14 PMಆದಾದ ನಂತರ ಆಕೆ ಅನೇಕ ಓಟದ ಸ್ಪರ್ಥೆಗಳಲ್ಲಿ ಭಾಗವಹಿಸಿ ಹತ್ತಾರು ಬಹುಮಾನಗಳನ್ನು ಗೆದ್ದಿದ್ದಲ್ಲದೇ, ಬಂದ ದುಡ್ಡಿನಿಂದ ಮತ್ತು ಕೆಲವು ಪ್ರಾಯೋಜಕರ ಸಹಾಯದಿಂದ ಸ್ವಂತದ್ದೊಂದು ಮನೆ ಕಟ್ಟಿಸಿಕೊಂಡಿದ್ದಲ್ಲದೇ ತನ್ನ ಪತಿಯೂ ಉತ್ತಮ ಚಿಕಿತ್ಸೆ ಕೊಡಿಸಿದ್ದಾರೆ. ಸಾಧಾರಣ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಹೆಂಗಸು ಈಗ ಎಲ್ಲೆಡೆಯಲ್ಲಿಯೂ ಸೆಲೆಬ್ರಿಟಿ ಆಗಿ ಹೋಗಿದ್ದಾರೆ. ಈಕೆಯ ಈ ಸಾಹಸಮಯ ಸಾಧನೆ ಮರಾಠಿ ಬೆಳ್ಳಿ ತೆರೆಯಮೇಲೆ ಬಿಡುಗಡೆಯಾಗಿ ಜನಪ್ರಿಯವಾಗಿದೆ.

ಮೊದಲ ಬಾರಿ ಸ್ಪರ್ಧೆಯಲ್ಲಿ ಆಕೆಗೆ ದಕ್ಕಿದ ಬಹುಮಾನ ಕೇವಲ 5000 ರೂಪಾಯಿಗಳೇ ಆಗಿದ್ದರೂ ಆ ಸಮಯದಲ್ಲಿ ಆಕೆಗೆ ಅದು ದೊಡ್ಡ ಮೊತ್ತವಾಗಿತ್ತು ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಜೀವನದ ಬಗ್ಗೆ ಆತ್ಮವಿಶ್ವಾಸವನ್ನೇ ಕಳೆದುಕೊಂಡವರಿಗೆ ಲತಾ ಭಗವಾನ್ ಖರೆಯವರ ಈ ಓಟ ಸ್ಪೂರ್ತಿಯಾಗಿದೆ. ಸಾಧನೆಗೆ ವಯಸ್ಸಿನ ಹಂಗಿಲ್ಲ. ಮುಂದೆ ಗುರಿ ಹಿಂದೆ ಛಲ ಇದ್ದಲ್ಲಿ ಹಿಡಿದ ಕೆಲಸವನ್ನು ಸಾಧಿಸಿಯೇ ತೀರಬಹುದೆಂಬುದಕ್ಕೇ ಲತಾ ಭಗವಾನ್ ಖರೆ ಜ್ವಲಂತ ಸಾಕ್ಷಿಯಾಗಿ ಇಂದಿನ ಯುವ ಪೀಳಿಗೆಗೆ ಪ್ರೇರಣಾದಾಯರಾಗಿದ್ದಾರೆ.

ಏನಂತೀರೀ?

ಈ ಸಾಹಸಗಾಥೆಯನ್ನು ಬಹಳ ಹಿಂದೆಯೇ ಓದಿದ್ದನಾದರೂ ಈ ಪ್ರಸಂಗವನ್ನು ಮತ್ತೊಮ್ಮೆ ನೆನಪಿಸಿ, ನಿಮ್ಮೆಲ್ಲರೊಂದಿಗೆ ಲೇಖನದ ಮೂಲಕ ಹಂಚಿಕೊಳ್ಳಲು ಪ್ರೋತ್ಸಾಹಿಸಿದ ಆತ್ಮೀಯ ಸ್ನೇಹಿತೆ ಅನುಪಮಾ ರೆಹಮನ್ ಅವರಿಗೆ ಅಭಾರಿಯಾಗಿದ್ದೇನೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s