ಅವಕಾಶವಾದಿಗಳು

ಕರ್ನಾಟಕದ ರಾಜಾಧಾನಿಯಾದ ಬೆಂಗಳೂರು ಒಂದು ರೀತಿಯ ಮಾಯಾನಗರಿಯೇ ಹೌದು. ಭಾರತದ ವಾಣಿಜ್ಯ ನಗರಿ ಮುಂಬೈ ಮತ್ತು ರಾಜಧಾನಿ ದೆಹಲಿಯ ನಂತರದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಹಾಗಾಗೀಯೇ ಪ್ರತೀ ದಿನ ಈ ನಗರಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯಕ್ಕಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಬಂದು ಹೋಗುತ್ತಿದ್ದರೂ, ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಕೈಬೀಸಿ ಕರೆಯುವ ಏಕೈಕ ನಗರ ಎಂಬ ಹೆಗ್ಗಳಿಕೆಯೂ ನಮ್ಮ ಬೆಂಗಳೂರಿನದ್ದೇ.

kemp

ಕ್ರಿ.ಶ. 1573ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿತವಾದ ಈ ಬೆಂಗಳೂರು ನಗರ ಈ ಪರಿಯಾಗಿ ಬೆಳೆಯಬಹುದು ಎಂದು ಅಂದೇ ಕಲ್ಪನೆ ಮಾಡಿಕೊಂಡಿದ್ದ ಕೆಂಪೇಗೌಡರು ಅಂದಿನ ಕಾಲಕ್ಕೆ ಬೆಂಗಳೂರಿನ ಹೊರವಲಯಗಳಾಗಿ ನಾಲ್ಕು ಗೋಪುರಗಳನ್ನು ನಿರ್ಮಿಸಿ ನಗರ ಇದಕ್ಕಿಂದ ಹೆಚ್ಚಾಗಿ ಯಾವ ಕಾರಣಕ್ಕೂ ಬೆಳೆಯಬಾರದು ಎಂದಿದ್ದರಂತೆ. ಆದರೆ ಅವರಂದು ನಿರ್ಮಿಸಿದ್ದ ಗಡಿ ಗೋಪುರಗಳು ಇಂದು ಬೆಂಗಳೂರಿನ ಹೃದಯಭಾಗವಾಗಿದ್ದು ಅದಕ್ಕಿಂತ ಅದೆಷ್ಟೋ ಪಟ್ಟು ಬೆಳೆದು ಬಿಟ್ಟಿದೆ ಮತ್ತು ನಿರಂತರವಾಗಿ ಬೆಳೆಯುತ್ತಲೇ ಇದೆ. ದೇವನಹಳ್ಳಿಯಿಂದ ಹೊಸೂರಿನವರೆಗೆ, ಹೊಸಕೋಟೆಯಿಂದ ನೆಲಮಂಗಲ ದಾಟಿ ಕುಣಿಗಲ್ ವರೆಗೂ ಒಂದು ಕಡೆಯಾದರೇ, ಮತ್ತೊಂದೆಡೆ ಬಿಡದಿ ದಾಟಿ ರಾಮನಗರವೂ ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಭಾಗವಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುವಂತಾಗಿದೆ.

ನೂರಾರು ಕೆರೆಗಳು ಮತ್ತು ಹತ್ತಾರು ದೊಡ್ಡ ಉದ್ಯಾನವನಗಳಿಂದ ಕೂಡಿದ್ದು ಉದ್ಯಾನ ನಗರೀ ಎಂದೇ ಖ್ಯಾತವಾಗಿದ್ದ ಬೆಂಗಳೂರಿನಲ್ಲಿ ಇಂದು ಮೊದಲಿನಷ್ಟು ಕೆರೆ ಕಟ್ಟೆಗಳು ಇಲ್ಲದಿದ್ದರೂ ಇಂದಿಗೂ ಸಹಾ ಅಲ್ಪ ಸ್ವಲ್ಪ ಇರುವ ಹಸಿರಿನಿಂದಾಗಿ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಇನ್ನು ಇಲ್ಲಿನ ಜನರಾದ ಕನ್ನಡಿಗರ ಬಳಿ ಬಾಯಾರಿ, ಕುಡಿಯಲು ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನೂ ಕೊಡುವಂತಹ ಔದಾರ್ಯವಂತರು ಮತ್ತು ತಮ್ಮ ಕನ್ನಡವನ್ನೂ ಬದಿಗಿಟ್ಟು ಆಯಾಯಾ ಭಾಷೆಯಲ್ಲಿಯೇ ಉತ್ತರಿಸುವ ಭಾಷಾ ಅಭಿಮಾನವಿಲ್ಲದವರು. ಹಾಗಾಗಿಯೇ ಈ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚು

ದೇಶದಲ್ಲಿಯೇ ಅತ್ಯಂತ ಹೆಚ್ಚಾಗಿ ಡಿಪ್ಲಮೋ, ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜುಗಳು ಇರುವುದು ಬೆಂಗಳೂರಿನಲ್ಲಿಯೇ. ಇನ್ನು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ಇನಿಸ್ಟಿಟ್ಯೂಟ್, ಜೆ.ಎನ್.ಸಿ, ಜಿಕೆವಿಕೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್)ಗಳಂತಹ ವಿದ್ಯಾಸಂಸ್ಥೆಗಳು ಇಲ್ಲಿರುವ ಕಾರಣ ದೇಶ ವಿದೇಶಗಳಿಂದಲೂ ಜ್ಞಾನಾರ್ಜನೆಗಾಗಿ ಪ್ರತೀವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ.

ದೇಶದ ಸಾರ್ವಜನಿಕ ಉದ್ದಿಮೆಗಳಾದ, ಐಟಿಐ, ಹೆಚ್.ಎಂ.ಟಿ. ಬಿಇಎಲ್, ಹೆಚ್.ಏ.ಎಲ್ , ಬಿ.ಹೆಚ್.ಇ.ಎಲ್ ಬಿಇಎಂಎಲ್ ಗಳಿಂದ ಹಿಡಿದು ಜಗತ್ತಿನ ಮಾಹಿತಿ ತಂತ್ರಜ್ಞಾನ ದಿಗ್ಗಜರಾದ ಇನ್ಫೋಸಿಸಿ, ವಿಪ್ರೋ, ಟಿಸಿಎಸ್ ನಂತಹ ನೂರಾರು ಸ್ವದೇಶೀ ಕಂಪನಿಗಳ ಜೊತೆಗೆ, ಸಿಸ್ಕೋ, ಹನಿವೆಲ್, ಅಕ್ಸೆಂಚರ್ ಮುಂತಾದ ಸಾವಿರಾರು ಬಹುರಾಷ್ಟ್ರೀಯ ದೊಡ್ಡ ಮತ್ತು ಸಣ್ಣ ಸಣ್ಣ ಕಂಪನಿಗಳೂ ಬೆಂಗಳೂರಿನಲ್ಲಿ ತಮ್ಮ ಶಾಖೆಯನ್ನು ಹೊಂದುವುದು ತಮ್ಮ ಘನತೆ ಎಂದು ಭಾವಿಸಿದ್ದರಿಂದ ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧವಾಗಿದೆ ನಮ್ಮ ಬೆಂಗಳೂರು ನಗರ.

ಸದಾಕಾಲವೂ ಉಷ್ಣವಲಯದ ವಾತಾವರಣವಿರುವ ಈ ನಗರದಲ್ಲಿ ಕಾಲಕಾಲಕ್ಕೆ ತಕ್ಕಷ್ಟು ಮಳೆ, ಬೇಸಿಗೆಗಾಲದಲ್ಲಿ ತಂಪಾಗಿ ತಾಪಮಾನವು 20 ರಿಂದ 36 ಡಿಗ್ರಿಯಿದ್ದು, , ಚಳಿಗಾಲದಲ್ಲಿ ಬೆಚ್ಚಗೆ 16 ರಿಂದ 27 ಡಿಗ್ರಿಯಾಗಿರುವ ಸುಂದರ ವಾತಾವರಣದಿಂದಾಗಿ ನಿವೃತ್ತಿ ಹೊಂದಿದವರ ಸ್ವರ್ಗ ಎಂದೇ ಕರೆಯುವುದರಿಂದ ನಾನಾ ಉನ್ನತ ಹುದ್ದೆಯಲ್ಲಿರುವವರು, ಕ್ರೀಡಾಪಟುಗಳು, ಚಲನಚಿತ್ರನಟರುಗಳು, ರಾಜಕಾರಣಿಗಳು, ನ್ಯಾಯಾಧೀಶರುಗಳು ತಮ್ಮ ನಿವೃತ್ತಿ ಹೊಂದಿದ ನಂತರ ಬೆಂಗಳೂರಿನಲ್ಲಿಯೇ ಐಶಾರಾಮ್ಯವಾಗಿ ಜೀವನ ನಡೆಸಲು ಬಯಸುತ್ತಿದ್ದಾರೆ.

ನಗರ ಈ ಪರಿಯಾಗಿ ಬೆಳೆಯುತ್ತಿದ್ದಂತೆಯೇ ನಮ್ಮ ಕಲೆ, ಸಂಸ್ಕೃತಿ ನಮ್ಮ ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟು ತಮಿಳರು, ತೆಲುಗರು, ಮಲಯಾಳಿಗಳು ಬೆಂಗಳೂರಿನತ್ತ ಧಾವಿಸಿ ಒಂದೊಂದು ಬಡಾವಣೆಗಳನ್ನು ಆಕ್ರಮಿಸಿತೊಡಗಿದರು. ಬೆಂಗಳೂರು ದಂಡು ಮತ್ತು ಸುತ್ತಮುತ್ತಲಿನ ಪ್ರಾಂತ್ಯ ತಮಿಳರು ಆಕ್ರಮಿಸಿಕೊಂಡರೆ, ಕೋರಮಂಗಲ, ಬೊಮ್ಮನಹಳ್ಳಿ ಒಂದು ಕಡೆಯಾದರೆ, ವೈಟ್ ಫೀಲ್ಡ್, ಯಲಹಂಕ ಸುತ್ತಮುತ್ತಲಿನ ಸಾವಿರಾರು ಎಕರೆ ಜಮೀನುಗಳು ಆಂದ್ರಾದ ರೆಡ್ಡಿಗಳ ಪಾಲಾದವು. ಅಕ್ಕೀಪೇಟೆ, ಬಳೇ ಪೇಟೆ, ತಿಗರಳ ಪೇಟೆ, ಚಿಕ್ಕಪೇಟೆ ಎಂಬು ವಾಣಿಜ್ಯ ಪ್ರದೇಶಗಳಲ್ಲಿ ಸದ್ದಿಲ್ಲದೆ ಮಾರ್ವಾಡಿಗಳ ಪಾಲಾದದ್ದು ಕನ್ನಡಿಗರ ಗಮನಕ್ಕೇ ಬರಲೇ ಇಲ್ಲ. ಹೊರಗಿನಿಂದ ಬಂದವರೆಲ್ಲರೂ ನಮ್ಮ ಬಂಧು ಬಾಂಧವರೆನೋ ಎನ್ನುವಷ್ಟರ ಮಟ್ಟಿಗೆ ಆದರ ಆತಿಥ್ಯಗಳಿಂದ ಬರಮಾಡಿಕೊಂಡು ಇದ್ದದ್ದನ್ನೆಲ್ಲವನ್ನೂ ಅವರಿಗೆ ಕೊಟ್ಟು ಅವರದ್ದೇ ಜಾಗದಲ್ಲಿ ದೊಡ್ಡ ದೊಡ್ದ ಗಗನಚುಂಬಿ ಕಟ್ಟಗಳು ಏಳಲಾರಂಭಿಸಿವು. ಈ ಕಟ್ಟಡಗಳ ಕೂಲಿ ಕೆಲಸಕ್ಕಾಗಿ ದೂರದ ರಾಜಸ್ಥಾನ ಮತ್ತು ಬಿಹಾರದಿಂದ ಲಕ್ಷಾಂತರ ಕಾರ್ಮಿಕರು ಬೆಂಗಳೂರಿಗೆ ಬಂದು ಕೈತುಂಬಾ ಕೆಲಸ , ಜೇಬು ತುಂಬಾ ಹಣ, ಹೊಟ್ಟೆ ತುಂಬಾ ಊಟ ಮತ್ತು ಕಣ್ತುಂಬಾ ನಿದ್ದೆಯನ್ನು ಕಾಣುವಂತಾಗಿದ್ದಲ್ಲದೇ ಹೆಚ್ಚಿನ ಹಣವನ್ನು ಉಳಿಸಿ ಊರಿಗೂ ಕಳುಹಿಸತೊಡಗಿದರು. ಇನ್ನು ಈ ಗಗನ ಚುಂಬಿ ಕಟ್ಟಡಗಳನ್ನು ರಕ್ಷಿಸುವವ ಕಾರ್ಯಕ್ಕೆ ಒರಿಸ್ಸಾದವರು ಹಿಂಡುಗಟ್ಟಲೆ ಬಂದರು.

ಹೀಗೆ ಎಗ್ಗಿಲ್ಲದೇ ವಲಸಿಗರು ಬಂದ ಕಾರಣ ಬೆಂಗಳೂರಿನ ಸಂಸ್ಕೃತಿಯೆಲ್ಲವೂ ಮಾಯವಾಗಿ ದೇಶದ ಹತ್ತು ಹಲವಾರು ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳೂ ಸಮ್ಮಿಲನಗೊಂಡು ಕಾಸ್ಮೊಪಾಲಿಟನ್ ಸಿಟಿ ಎಂದಾಗಿದ್ದಲ್ಲದೇ, ಈ ನಗರ ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ನಗರವಾಗಿ ಕೆಲವೇ ದಿನಗಳಲ್ಲಿ ಪರಿವರ್ತಿತವಾಗತೊಡಗಿತು.

ಇನ್ನು ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ ಗಳಂತಹ ಆಕರ್ಷಣೀಯ ತಾಣಗಳು ಹಳೆಯದಾಗಿ ಹೋಗಿ ನಗರಾದ್ಯಂತ ಎಲ್ಲೆಂದರಲ್ಲಿ ಮಾಲ್ ಗಳು ತಲೆ ಎತ್ತಿ, ಅಲ್ಲಿ ಮಲ್ಟೀಪ್ಲೆಕ್ಸ್ ಸಿನಿಮಾಗಳು, ಪಬ್ ಗಳು, ಡಿಸ್ಕೋಥೆಕ್ಗಳು ತುಂಬಿ ಹೋಗಿ ಉದ್ಯಾನನಗರಿ ಕ್ರಮೇಣ ಪಬ್ ನಗರಿಯಾಗಿ ಮಾರ್ಪಾಟಾಗಿದ್ದು ವಿಪರ್ಯಾಯವೇ ಸರಿ.

ಯಾವಾಗ ಈ ಮಾಲ್ಗಳು ಬಂದವೋ ಆಗಲೇ ನಮ್ಮ ಇಡ್ಲೀ ಸಾಂಬಾರ್, ಚೆಟ್ನಿ ರಾಗಿ ಮುದ್ದೆ ಬಸ್ಸಾರುಗಳ ಹೋಟೆಲ್ಗಳು ಮಾಯವಾಗಿ ಮಾಲ್ಗಳ ಫುಡ್ ಕೋರ್ಟ್ಗಳಲ್ಲಿ ವಿವಿಧ ಬಗೆಯ ಅಂತರಾಷ್ಟ್ರೀಯ ಖಾದ್ಯಗಳ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಪೀಜ್ಜಾ ಹಟ್, ಕಾರ್ನಗಳ ಔಟ್ ಲೆಟ್ ತಲೆ ಎತ್ತಿದವು. ಈ ಎಲ್ಲಾ ಔಟ್ಲೆಟ್ಗಳಲ್ಲಿ ಬಾಣಸಿಗರಾಗಿ ಮತ್ತು ಸಹಾಯಕರಾಗಿ ಪೂರ್ವಾಂಚಲದವರು ಬೆಂಗಳೂರಿಗೆ ಬರುವುದರ ಜೊತೆಗೆ ಅವರೊಂದಿಗೆ ಬಗೆ ಬಗೆಯ ಚೈನೀಸ್ ಖಾದ್ಯಗಳು ಮೋಮೊಸ್ಗಳನ್ನು ಕನ್ನಡಿಗರಿಗೆ ಪರಿಚಯಿಸಿ ಮಧ್ಯರಾತ್ರಿ ಎರಡುಗಂಟೆಯಾದರೂ ಯುವಜನಾಂಗ ಈ ಎಲ್ಲಾ ಅಡ್ಡಾಗಳಲ್ಲಿ ಅಲೆದಾಡುವ ಮೂಲಕ ಬೆಂಗಳೂರಿನ ರಾತ್ರಿ ಜೀವನವನ್ನು ಮೋಜು ಮಾಡ ತೊಡಗಿದರು.

ಈ ರೀತಿಯಾಗಿ ದೇಶದ ಎಲ್ಲಾ ಜನರಿಗೂ ನಮ್ಮ ಬೆಂಗಳೂರು ಆಶ್ರಯ ತಾಣವಾದರೇ ಇನ್ನು ನಮ್ಮದೇ ಕರ್ನಾಟಕದ ಹಳ್ಳಿಗಳಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೇ ಬರದೇ ಯಾವಾಗ ಕೃಷಿ ಮತ್ತು ಹೈನೋದ್ಯಮಕ್ಕೆ ಹೊಡೆತ ಬಿತ್ತೋ ಆಗ ಅಲ್ಲಿಯವರೂ ತಮ್ಮ ತಮ್ಮ ಹಳ್ಳಿ ಬಿಟ್ಟು ಬೆಂಗಳೂರಿನ ಗಾರ್ಮೆಂಟ್ಸುಗಳಲ್ಲಿ ದುಡಿಯತೊಡಗಿದರು. ಇನ್ನು ಎಲ್ಲವೂ ಚೆನ್ನಾಗಿಯೇ ಇದ್ದರೂ ಮೈಮುರಿದು ದುಡಿಯಲಾಗದ ಸೋಮಾರಿಗಳಿಗೂ ಬೆಂಗಳೂರಿನಲ್ಲಿ ಅವರವರ ಇಚ್ಛೆಗೆ ಅನುಗುಣವಾದ ಕೆಲಸ ಕಾರ್ಯ ಮಾಡಿಕೊಂಡಿದ್ದವರೆಲ್ಲರಿಗೂ ಬೆಂಗಳೂರು ಸ್ವರ್ಗವಾಗಿತ್ತು.

bang2

ಆದರೆ ಯಾವಾಗ ಈ ಕೂರೋನಾ ಎಂಬ ಮಹಾಮಾರಿ ಜಗತ್ತನ್ನೇ ಆವರಿಸಿಕೊಂಡಿತೋ ಆಗಾ ಸರ್ಕಾರವೂ ಮುನ್ನೆಚ್ಚರಿಕೆಯ ಕ್ರಮವಾಗಿ ಲಾಕ್ ಡೌನ್ ಘೋಷಿಸಿ ಎಲ್ಲರೂ ದಯವಿಟ್ಟು ತಮ್ಮ ಮನೆಗಳಿಂದ ಹೊರಬರದಿರುವ ಮೂಲಕ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಿ ಎಂದು ಕೋರಿತಲ್ಲದೇ. ಪಡಿತರ ವ್ಯವಸ್ಥೆಗಳ ಮೂಲಕ ಆವರಿಗೆ ದಿನಸಿಗಳ ವ್ಯವಸ್ಥೆಯನ್ನೂ ಮಾಡಿತು. ಸರ್ಕಾರವಲ್ಲದೇ ಅನೇಕ ಸಂಘ ಸಂಸ್ಥೆಗಳು, ಸ್ಥಳೀಯ ಮಾಜೀ, ಭಾವೀ, ಹಾಲೀ ಪಾಲಿಕೆ ಸದಸ್ಯರುಗಳು, ಶಾಸಕರು, ಸಾಂಸರದರೆಲ್ಲರೂ ಅವರವರ ಕೈಲಾದ ಮಟ್ಟಿಗಿನ ಸಹಾಯವನ್ನೂ ಮಾಡುವ ಮೂಲಕ ಈ ವಲಸೇ ಕಾರ್ಮಿಕರು ಬೆಂಗಳೂರನ್ನು ಬಿಟ್ಟು ಹೊರ ಹೋಗದಂತೆ ಆರಂಭದಲ್ಲಿ ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆದರು.

ನಮ್ಮವರಿಗೆ ಹೇಳಿದ್ದರ ಹೊರತಾಗಿ ಮಾಡುವುದರಲ್ಲಿಯೇ ಏನೋ ಖುಷಿ. ಹಾಗಾಗಿ ಹೊರಗೆಲ್ಲೂ ಹೋಗಬೇಡಿ ಎಂದು ಪದೇ ಪದೇ ಎಚ್ಚರಿಸಿದರೂ ಅಂಡಲೆಯುವುದನ್ನು ಬಿಡಲೇ ಇಲ್ಲ. ಇನ್ನು ಸರ್ಕಾರ ಕೆಲ ರಾಜಕಾರಣಿಗಳ ಒತ್ತಡದ ಮೇಲೆ ಯಾವಾಗ ಅಂತರಾಜ್ಯ ಗಡಿಗಳನ್ನು ತೆರೆದರೋ ಕೂಡಲೇ ಕೂರೋನಾ ಮಹಾಮಾರಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರಣಕೇಕೆ ಹಾಕತೊಡಗಿತು. ದಿನೇ ದಿನೇ ಸಾವಿರಾರು ಪ್ರಕರಣಗಳು ದಾಖಲಾಗ ತೊಡಗಿದವೋ ಈ ಎಲ್ಲಾ ವಲಸಿಗರಿಗೂ ಬೆಂಗಳೂರು ಬೇಡದ ನಗರವಾಗಿ ಸರ್ಗವಾಗಿದ್ದ ನಗರ ಇದ್ದಕ್ಕಿದ್ದಂತೆಯೇ ಅವರಿಗೆ ನರಕವಾಗಿ‌ ಕಾಣತೊಡಗಿತು.

ಅದೇ ಭಯದಲ್ಲೇ ಆವರೆಲ್ಲರೂ ಬೆಂಗಳೂರನ್ನು ತ್ಯಜಿಸಿ ತಮ್ಮ ಊರಿನತ್ತ ಮುಖ ಮಾಡುತ್ತಿದ್ದಾರೆ. ಇಲ್ಲಿದ್ದು ಸಾಯುವ ಬದಲು ನಮ್ಮ ಊರಿನಲ್ಲೇ ಹಾಯಾಗಿ ಇರೋಣ ಎನ್ನುವ ತೀರ್ಮಾನ ಅವರದ್ದು. ಈ ಬೆಂಗಳೂರು ಸಾಕು, ಇಲ್ಲಿನ ಜೀವನಾನೂ ಸಾಕು, ಬದುಕಿದ್ರೆ ಬಸ್ ಸ್ಟಾಂಡಿನಲ್ಲಿ ಬಾಳೆ ಹಣ್ಣು ಅಥವಾ ಬಟಾಣಿ ಮಾರಿಕೊಂಡು ನಮ್ಮೂರಲ್ಲೇ ಬದುಕೋಣ ಎಂದು ಬೆಂಗಳೂರಿನಿಂದ ಗುಳೆ ಹೋಗಿತ್ತಿರುವ ಮಂದಿಯೆಲ್ಲಾ ಹೇಳುತ್ತಿದ್ದಾರೆ. ಹೀಗೆ ತಮ್ಮ ಹೊಟ್ಟೆ ಬಟ್ಟೆಗಾಗಿ, ಇನ್ನೂ ಹಲವರು ತಮ್ಮ ತೆವಲಿಗಾಗಿ ವಿವಿದೆಡೆಯಿಂದ ಬೆಂಗಳೂರಿಗೆ ಬಂದಿದ್ದವರು ಈಗ ಗಂಟು ಮೂಟೆ ಕಟ್ಟಿಕೊಂಡುಈ ಬೆಂಗಳೂರಿನ ಸಹವಾಸ ಸಾಕಪ್ಪ ಸಾಕು ಎಂದು ಲಾರಿ, ಕ್ಯಾಂಟರ್ ಅಥವಾ ಸ್ವಂತ ವಾಹನದಲ್ಲೇ ತೆರಳುವಾಗ ಬೆಂಗಳೂರನ್ನೂ ಮತ್ತು ಬೆಂಗಳೂರಿಗರನ್ನು ಬಾಯಿಗೆ ಬಂದ ಹಾಗೆ ಕ್ಯಾಕರಿಸಿ ಉಗಿದು ಹೋಗುತ್ತಿರುವುದು ಎಷ್ಟು ಸರಿ?

ತಮ್ಮ ಊರಿನಲ್ಲಿ ಕೆಲಸವಿಲ್ಲ ಎಂದೇ ಸ್ವಯಂಪ್ರೇರಿತವಾಗಿ ಇವರೆಲ್ಲಾ ಬೆಂಗಳೂರಿಗೆ ಬಂದಿದ್ದರೇ ಹೊರತು, ಬೆಂಗಳೂರಿಗರು ಇವರನ್ನೇನು ರತ್ನಕಂಬಳಿ ಹಾಸಿ ಕರೆದಿರಲಿಲ್ಲ ಅಲ್ಲವೇ? ಈಗ ಸಂಕಷ್ಟ ಇದೆ ನಿಜ ಮುಂದೆ ಸರಿ ಹೋಗಿಯೇ ತೀರುತ್ತದೆ. ಆದರೆ ಅವರಿಗೆ ಕಷ್ಟ ಇದ್ದಾಗ ಕೈ ಹಿಡಿದು ಕೈತುಂಬಾ ಕೆಲಸ, ಸಂಬಳ, ಹೊಟ್ಟೇ ತುಂಬಾ ಊಟ ಕಣ್ತುಂಬದ ಹೊತೆ ಸುಖಃ ನಿದ್ರೆಯನ್ನು ಕೊಟ್ಟಿತ್ತೋ ಈಗ ಅದೇ ನಗರ ಅವರಿಗೆ ಬೇಡವಾಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಕೂರೋನಾ ಕೇವಲ ಬೆಂಗಳೂರಿಗೆ ಮಾತ್ರಾ ವಕ್ಕರಿಸಿಲ್ಲ. ಪ್ರಪಂಚಾದ್ಯಂತ ಹರಡಿದೆ. ಸದ್ಯಕ್ಕೆ ನಗರ ಮಟ್ಟದಲ್ಲಿ ಮಾತ್ರವೇ ಇರುವ ಈ ಕೂರೋನಾ ಈಗ ಈ ರೀತಿಯಾಗಿ ಗುಳೇ ಹೋಗುತ್ತಿರುವವರ ಮೂಲಕ ಹಳ್ಳಿಗಾಡಿಗೂ ಹರಡಿದಲ್ಲಿ ಅದಕ್ಕೆ ಯಾರು ಹೊಣೆ? ಇವಾಗ ಇಲ್ಲಿ ಬದುಕುವುದು ಕಷ್ಟ ಆಗಿರಬಹುದು ನಿಜ. ಆದರೇ ಸುಮ್ಮನೇ ಕೆಲ ಕಾಲ ಇಲ್ಲಿಯೇ ಇದ್ದು ಪರಿಸ್ಥಿತಿ ಸರಿಹೋದ ಮೇಲೇ ತಮ್ಮ ಊರಿಗಳಿಗೆ ಹೋಗಬಹುತಿದ್ದಲ್ಲವೇ? ಈ ರೀತಿಯಾದ ನಿರ್ಧಾರದ ಹಿಂದೆ, ಆಡಳಿತ ಪಕ್ಷಕ್ಕೆ ಕೆಟ್ಟ ಹೆಸರು ತರಲು ಕೆಲ ರಾಜಕೀಯ ಪಕ್ಷಗಳು ಮಾಡುತ್ತಿರುವ ಹುನ್ನಾರವೂ ಇರಬಹುದು. ಆಸರೆಗಾಗಿ ಹುಟ್ಟೂರಿಗೆ ಹೋಗುವ ಜನ ಪುನಃ ಬೆಂಗಳೂರಿಗೆ ಹಿಂದಿರುಗುವುದಿಲ್ಲ ಎಂಬದನ್ನು ಹೇಗೆ ನಂಬಲು ಸಾಧ್ಯ?

bang1

ಈಗ ಸ್ವಯಂ ಪ್ರೇರಿತವಾಗಿಯೋ ಇಲ್ಲವೇ ಯಾರದ್ದೋ ಕುಮ್ಮಕ್ಕಿನಿಂದಾಗಿಯೋ ಬೆಂಗಳೂರಿನ ಸಹವಾಸ ಸಾಕು, ಯಾರಿಗೆ ಬೇಕು ಈ ಬೆಂಗಳೂರು? ಅನ್ನೋ ದುರಹಂಕಾರದ ಮಾತಾನಾಡಿ ಗುಳೇ ಹೋಗುತ್ತಿರುವ ಜನ ಮತ್ತೆ ಬೆಂಗಳೂರಿಗೆ ಹಿಂದಿರುಗುವ ಮನಸ್ಸು ಮಾಡಿದಲ್ಲಿ ಒಬ್ಬ ಕನ್ನಡಿಗನಾಗಿ, ಕನ್ನಡಿಗರ ಪರೋಪಕಾರ ಮತ್ತು ಅತಿಥಿ ಸತ್ಕಾರ್ಯದ ಔದಾರ್ಯವನ್ನೂ ಈ ಬಾರಿ ಮರೆತು ದಯವಿಟ್ಟು ನೀವು ಮತ್ತೆ ಕರ್ನಾಟಕಕ್ಕೇ ಅದರಲ್ಲೂ ಬೆಂಗಳೂರಿಗೆ ಪುನಃ ಬರಲೇ ಬೇಡಿ ಎಂದೇ ಕೇಳಿಕೊಳ್ಳುತ್ತೇನೆ. ನಿಮಗೆ ಬೇಕಾದಾಗ ಬೆಂಗಳೂರು ಬೇಕು. ಅದೇ ಸಂಕಷ್ಟ ಇದ್ದಾಗ ಬೆಂಗಳೂರು ಬೇಡ ಎನ್ನುವುದಾದರೆ, ನಿಮ್ಮಂತಹ ಅವಕಾಶವಾದಿಗಳ ಅಗತ್ಯ ನಮಗೂ ಇಲ್ಲ. a friend in need is a friend indeed ಎನ್ನುವ ಆಂಗ್ಲ ನಾಣ್ಣುಡಿಯಂತೆ ಕಷ್ಟದ ಸಮಯದಲ್ಲಿ ಸಹಾಯ ಮಾಡುವವನೇ, ನಿಜವಾಗಿಯೂ ಅವಲಂಬಿಸಬಹುದಾದ ವ್ಯಕ್ತಿ ಆದರೆ ಆ ರೀತಿಯಾಗಿ ಅಂತಹ ಆವಲಂಭಿಸುವ ವ್ಯಕ್ತಿಗಳು ನೀವಲ್ಲ ಎಂದು ನೀವೀಗ ಗುಳೇ ಹೋಗುವ ಮೂಲಕ ಸಾಭೀತುಪಡಿಸಿದ್ದೀರಿ. ಹಾಗಾಗಿ ಒಬ್ಬ ಕನ್ನಡಿಗರಾಗಿ ಅವರೆಂದೂ ಬೆಂಗಳೂರಿಗೆ ಮರಳುವುದಿರಲಿ, ಬೆಂಗಳೂರಿನತ್ತ ತಲೆ ಹಾಕಿಯೂ ಮಲಗಬೇಡಿ ಎಂದೇ ಖಡಾ ಖಂಡಿತವಾಗಿ ಎಚ್ಚರಿಸೋಣ. ನಮಗೆ ನಮ್ಮ ಬೆಂಗಳೂರಿನ ಬಗ್ಗೆ ಹೆಮ್ಮೆ ಇದೆ. ನಮ್ಮ ಬೆಂಗಳೂರು ನಮ್ಮ ಹೆಮ್ಮೆ. ಹಾಗಾಗಿ ಬೆಂಗಳೂರಿನಲ್ಲಿಯೇ ಇರೋಣ.

ಏನಂತೀರೀ?

2 thoughts on “ಅವಕಾಶವಾದಿಗಳು

  1. ಬೆಂಗಳೂರಿನ ಬಗ್ಗೆ ತಮ್ಮ ಲೇಖನ ಇಂದಿನ ವಿದ್ಯಮಾನಕ್ಕೆ ಸರಿಯಾಗಿದೆ. ತಾವು ಹೇಳಿರುವ ಎಲ್ಲ ವಿಷಯಗಳೂ ವಾಸ್ತವಾಂಶಗಳಿಂದ ಕೂಡಿದೆ. ಬೆಂಗಳೂರಿನಲ್ಲಿ ಕನ್ನಡಗರಿಗಿಂತ ಬೇರೆ ಭಾಷಿಕರೇ ಹೆಚ್ಚಾಗಿ ಕಾಣುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕೇವಲ 33% ಮಾತ್ರ ಎಂದು ತಿಳಿದುಬಂದಿದೆ. ‘ಕನ್ನಡಿಗರ ಬಳಿ ಬಾಯಾರ ನೀರು ಕೇಳಿದರೆ ನೀರಿನ ಜೊತೆಗೆ ಬೆಲ್ಲವನ್ನೂ ಕೊಡುವ ಔದಾರ್ಯವಂತರು, ಮತ್ತು ತಮ್ಮ ಕನ್ನಡವನ್ನೂ ಬದಿಗಿಟ್ಟು ಆಯಾ ಭಾಷೆಯಲ್ಲೇ ಉತ್ತರ ನೀಡುವ ಭಾಷಾಭಿಮಾನವಿಲ್ಲದವರು’ ಎಂದು ನೀವು ಹೇಳಿರುವುದು ನಿಜ. ಹಿಂದೆ ಟಿ.ಪಿ.ಕೈಲಾಸಂ ಅವರು ಇಂಗ್ಲೇಂಡಿಗೆ ಹೋಗಿದ್ದಾಗ ಭಾರತೀಯರೆಲ್ಲರೂ ಒಂದು ಕಡೆ ಸೇರಿ ಪಾರ್ಟಿ ಮಾಡುತ್ತಿದ್ದರಂತೆ. ಆಗ ಒಬ್ಬ ಹುಡುಗ ಬಂದು ಕೈಲಾಸಂ ಅವರನ್ನು ಸಾರ್, ಇಲ್ಲಿ ಭಾರತೀಯರೆಲ್ಲರೂ ಪಾರ್ಟಿ ಮಾಡುತ್ತಿದ್ದಾರೆ, ಇದರಲ್ಲಿ ಕನ್ನಡಿಗರು ಯಾರು ಅಂತ ಹೇಗೆ ಕಂಡುಹಿಡಿಯುವುದು ಅಂತ ಕೇಳಿದ. ಆಗ ಕೈಲಾಸಂ ” ನೋಡ್ ಮಗು, ಇಲ್ಲಿ ಹಾಲ್ನಲ್ಲಿ ಒಂದು ರೌಂಡ್ ಹೋಗಿ ಬಾ. ಯಾರು ಹಿಂದಿಯವರ ಜೊತೆ ಹಿಂದಿಯ‌ಲ್ಲಿ, ಗುಜತಾತಿನವರ ಜೊತೆ ಗುಜರಾತಿಯಲ್ಲಿ, ತೆಲುಗುನವರ ಜೊತೆ ತೆಲುಗಿನಲ್ಲಿ, ತಮಿಳಿನವರ ಜೊತೆ ತಮಿಳಿನಲ್ಲಿ ಮಲೆಯಾಳಿಗಳ ಜೊತೆ ಮಲೆಯಾಳದಲ್ಲಿ ಮತ್ತು ಕನ್ನಡದವರ ಜೊತೆ ಇಂಗ್ಲೀಷಿನಲ್ಲಿ ಮಾತನಾಡ್ತಿರುತ್ತಾರೋ ಅವರೇ ಕನ್ನಡಿಗರು” ಅಂದರಂತೆ. ಒಟ್ಟಿನಲ್ಲಿ ನಿಮ್ಮ ಲೇಖನ ಅರ್ಥಪೂರ್ಣವಾಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s