ನನಗೆ ಬುದ್ದಿ ತಿಳಿದು ಬರುವ ಹೊತ್ತಿಗೆ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು ಮನೆಗೆ ಬರುತ್ತಿದ್ದ ನಂದೀ ಬ್ರಾಂಡ್ ಪ್ರಜಾವಾಣಿ ಅಂದಿಗೂ ಇಂದಿಗೂ ಕಾಂಗ್ರೇಸ್ ಮುಖವಾಣಿಯಾಗಿಯೇ ಇದ್ದ ಕಾರಣ ಅಲ್ಲಿ ಪ್ರಕಟವಾಗುತ್ತಿದ್ದದ್ದನ್ನೇ ಜೋಡಿಸಿ ಕೊಂಡು ಓದಿ ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ, ದೇಶದಲ್ಲಿ ಚುನಾವಣೆ ನಡೆದು ಎಲ್ಲಾ ವಿರೋಧ ಪಕ್ಷಗಳೂ ಒಮ್ಮತವಾಗಿ ಜನತಾಪಕ್ಷದ ಅಡಿಯಲ್ಲಿ ಅಭೂತಪೂರ್ವವಾಗಿ ಜಯಿಸಿ ಬಂದು ಒಂದು ಕಾಲದಲ್ಲಿ ಇಂದಿರಾ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜೀ ದೇಸಾಯಿ ದೇಶದ ಪ್ರಪ್ರಥಮ ಕಾಂಗ್ರೇಸ್ಸೇತರ ಪ್ರಧಾನ ಮಂತ್ರಿಗಳಾದರು. ಅವರ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ಮಧು ದಂಡವತೆ, ಚರಣ್ ಸಿಂಗ್ ಮುಂತಾದ ಘಟಾನುಘಟಿಗಳು ಮಂತ್ರಿಗಳಾದಾಗಲಿಂದಲೂ ಕೇಳಿ ಬರುತ್ತಿರುವ ಒಂದೇ ಒಂದು ಅರೋಪ ನೆಹರು ವಂಶ ಮತ್ತು ಕಾಂಗ್ರೇಸ್ ನಾಯಕರುಗಳು ಈ ದೇಶವನ್ನು ಲೂಟಿ ಮಾಡಿ ಕೋಟ್ಯಾಂತರ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಶೇಖರಿಸಿಟ್ಟಿದೆ.
ಅಂದಿನಿಂದ ಇಂದಿಗೆ ಸುಮಾರು 45 ವರ್ಷಗಳು ಕಳೆದಿವೆ. ಗಂಗಾ ಯಮುನಾ ಸಿಂಧು ಕಾವೇರಿ ಮುಂತಾದ ದೇಶದ ವಿವಿಧ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆಯಾದರೂ, ಇದುವರೆವಿಗೂ ಈ ನಕಲೀ ಗಾಂಧಿಗಳ ಮತ್ತು ಕಾಂಗ್ರೇಸ್ ನಾಯಕರುಗಳ ಮೇಲಿನ ಆರೋಪ ಒಂದೂ ಪೂರ್ಣಗೊಂಡಿಲ್ಲ ಎನ್ನುವುದು ವಿಪರ್ಯಾಸವಲ್ಲವೇ?
ಇಂದಿರಾಗಾಂಧಿಯವರ ಮರಣದೊಂದಿಗೆ ಅವರ ಮೇಲಿದ್ದ ಎಲ್ಲಾ ಹಗರಣಗಳಿಗೂ ಹಳ್ಳ ಹಿಡಿದಿಹೋದ ಮತ್ತು ಸರಿಯಾಗಿ ನೆನಪಿಲ್ಲದ ಕಾರಣ, ರಾಜೀವ್ ಗಾಂಧಿ ಆಡಳಿತದಿಂದ ಇತ್ತೀಚಿನವರೆಗೂ ನಡೆದ ಹಗರಣಗಳ ಕುರಿತಂತೆ ಕಣ್ಣು ಹಾಯಿಸೋಣ.
ಕೇವಲ ಇಂದಿರಾಗಾಂಧಿಯವರ ಪುತ್ರ ಎಂಬ ಕಾರಣಕ್ಕಾಗಿಯೇ, ಇಂದಿರಾಗಾಂಧಿಯವರ ಹತ್ಯೆಯಾದ ಸೂತಕ ಕಳೆಯುವ ಮುನ್ನವೇ ಪ್ರಧಾನಿಯಾದ ರಾಜೀವ್ ಆರಂಭದಲ್ಲಿ ಮಿಸ್ಟರ್ ಕ್ಲೀನ್ ಎಂಬ ಹೆಸರು ಗಳಿಸಲು ಪ್ರಯತ್ನಿಸಿದರಾದರೂ ಕಾಂಗ್ರೇಸ್ ಎಂಬ ನಾಯಿಯ ಬಾಲ ಸದಾ ಡೊಂಕು ಎಂಬಂತೆ ಅವರ ಆಳ್ವಿಕೆಯಲ್ಲಿ ಸೇನೆಗೆ ಖರೀದಿಸಿದ ಬೋಫೋರ್ಸ್ ಫಿರಂಗಿಗಳಲ್ಲಿ ಅಂದಿನ ಕಾಲಕ್ಕೇ ರಾಜೀವ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರಿಗೆ ಸ್ವೀಡಿಷ್ ಫಿರಂಗಿ ತಯಾರಕ ಬೋಫೋರ್ಸ್ 64 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಿರುವ ಪರಿಣಾಮವಾಗಿಯೇ ಭಾರತೀಯ ಸೇನೆಯಲ್ಲಿ ಬೋಫೋರ್ಸ್ ಕಂಪನಿಯ 155 ಎಂಎಂ ಹೊವಿಟ್ಜರ್ ಬಂದೂಕುಗಳನ್ನು ಖರೀಧಿಸಲಾಗಿತ್ತು. ಈ ಪ್ರಕರಣದಲ್ಲಿ ಇಟಲಿಯ ಉದ್ಯಮಿ ಮತ್ತು ಗಾಂಧಿ ಕುಟುಂಬಕ್ಕೆ ಹತ್ತಿರವಾದ ಒಟ್ಟಾವಿಯೊ ಕ್ವಾಟ್ರೊಚಿ ಮೂಲಕ ಅಪಾರವಾದ ಲಂಚ ಸಂದಾಯವಾಗಿತ್ತು ಎಂಬುದು ಮನೆಮಾತಾಗಿತ್ತು. ರಾಜೀವ್ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ.ಸಿಂಗ್ ಇದೇ ಪ್ರಕರಣವನ್ನೇ ತೋರಿಸುತ್ತಾ ಪ್ರಧಾನಮಂತ್ರಿಗಳಾದರೇ ವಿನಃ ಸುಮಾರು 35 ವರ್ಷಗಳು ಕಳೆದರೂ, ಅದರ ಆಪಾದಿತರಲ್ಲಿ ಹೆಚ್ಚಿನವರು ಈ ಲೋಕದಲ್ಲಿ ಉಳಿದಿಲ್ಲವಾದರೂ, ಕಾಂಗ್ರೆಸ್ಸಿಗೆ ಬೆಂಬಿಡದ ಭೂತವಾಗಿ ಕಾಡುತ್ತಿದೆಯಾದರೂ ಇಂದಿಗೂ ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎನ್ನುವುದು ಸತ್ಯ.
ನ್ಯಾಷನಲ್ ಹೆರಾಲ್ಡ್ : ಬಿಜೆಪಿ ರಾಜ್ಯಸಭಾ ಸಂಸದರಾದ ಶ್ರೀ ಸುಬ್ರಮಣ್ಯಂ ಸ್ವಾಮಿ ಅವರ ವಯಕ್ತಿಕ ಆಸಕ್ತಿಯಿಂದಾಗಿ ಈ ಪ್ರಕರಣ ಇನ್ನೂ ಜೀವಂತವಾಗಿದ್ದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ನಾಲ್ಕೈದು ಹಿರಿಯ ಕಾಂಗ್ರೇಸ್ ನಾಯಕರು 5 ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳನ್ನು ಅತ್ಯಂತ ಸುಲಭವಾಗಿ ಕೈ ವಶ ಮಾಡಿಕೊಂಡಿದ್ದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಲಿದ್ದು, ಸದ್ಯಕ್ಕೆ ಸೋನಿಯಾ ಮತ್ತು ರಾಹುಲ್ ಇಂದಿಗೂ ಬೇಲ್ ಮೇಲೆ ಹೊರಗಡೆ ತಿರುಗಾಡುತ್ತಿದ್ದಾರೆ.
ವಾದ್ರಾ-ಡಿಎಲ್ಎಫ್ ಹಗರಣ : ಸೋನಿಯಾಗಾಂಧಿಯವರ ಪುತ್ರಿ ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ಅವರ ರಿಯಲ್ ಎಸ್ಟೇಟ್ ವ್ಯವಹಾರದ ಹಗರಣಗಳು ನೂರಾರು. ಹರ್ಯಾಣದ ಕಾಂಗ್ರೇಸ್ಸಿನ ಭೂಪಿಂದರ್ ಹೂಡಾ ಸರಕಾರದಿಂದ ಅತ್ಯಂತ ಕಡಿಮೆ ಬೆಲೆಗಳಿಗೆ ಜಾಗವನ್ನು ಖರೀದಿಸಿ ನಂತರ ಹೂಡಾ ಸರ್ಕಾರದ ಭೂ ಬಳಕೆ ಬದಲಾವಣೆ (ಸಿಎಲ್‌ಯು) ಹಾಗೂ ಇತರ ಅನುಮತಿ ಪಡೆದ ನಂತರ 2008ರಲ್ಲಿ ಡಿಎಲ್‌ಎಫ್ ಕಂಪನಿಗೆ ಅದೇ ಭೂಮಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾದಿದ ಆರೋಪವಿದೆ.
ಇದಲ್ಲದೇ ರಾಬರ್ಟ್ ವಾದ್ರಾ ಅವರು ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್‌ನಿಂದ 65 ಕೋಟಿ ಬಡ್ಡಿರಹಿತ ಸಾಲವನ್ನು ತೆಗೆದುಕೊಂಡಿದ್ದಾರೆ ಈ ರೀತಿ ಡಿಎಲ್ಎಫ್ ಕಂಪನಿ ಬಡ್ಡಿ ರಹಿತ ಹಣವನ್ನು ಕೊಟ್ಟಿರುವ ಹಿಂದೆಯೂ ರಾಜಕೀಯ ಲಾಭಗಳನ್ನು ಪಡೆಯುವ ಉದ್ದೇಶ ಇದೆ ಎನ್ನುವ ಆರೋಪದಡಿಯಲ್ಲಿ ದಾವೆ ಹೂಡಲಾಯಿತಾದರೂ ಹೂಡಾ ಸರ್ಕಾರ ಈ ಎಲ್ಲಾ ಭೂಹಗರಣಗಳಲ್ಲಿಯೂ ಕ್ಲೀನ್ ಚಿಟ್ ನೀಡಿತಾದರೂ ಸದ್ಯದ ಸರ್ಕಾರ ಈ ತನಿಖೆಯನ್ನು ಪುನರ್ ಆರಂಭಿಸಿದ್ದರೂ ರಾಬರ್ಟ್ ವಾದ್ರ ಧಿಮ್ಮಲೆ ರಂಗಾ ಎಂದು ಮೀಸೆ ತಿರುತಿಸುತ್ತಲೇ ಓಡಾಡುತ್ತಿದ್ದಾನೆ.
ಚಿದಂಬರಂ ಕುಟುಂಬ : ತಮಿಳುನಾಡು ಮೂಲದ ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತೀ ಚಿದಂಬರಂ ಅವರ ಹೆಸರುಗಳು ಏರ್ಸೆಲ್-ಮಾಕ್ಸಿಸ್, ಐ ಎನ್ ಎಕ್ಸ್ ಮೀಡಿಯಾ, 14 ದೇಶಗಳಲ್ಲಿ ಅಕ್ರಮ ಸಂಪತ್ತು ಹೀಗೆ ಹಲವು ಪ್ರಕರಣಗಳಲ್ಲಿ ತಳುಕು ಹಾಕಿಕೊಂಡು ಒಂದಷ್ಟು ತಿಂಗಳುಗಳ ಕಾಲ ತಿಹಾರ್ ಜೈಲಿನಲ್ಲಿ ಮುದ್ದೇ ಮುರಿದರೂ, ಈ ಪ್ರಕ್ರರಣದ ತನಿಖೆ ಇನ್ನೂ ಆಮೆಗತಿಯಲ್ಲಿದ್ದು, ರಾಜಕೀಯ ಅಗತ್ಯಗಳಿರುವಾಗ ಮಾತ್ರ ಸದ್ದು ಮಾಡುತ್ತಾ ಉಳಿದಂತೆಲ್ಲಾ ತಣ್ಣಗಾಗಿ ರಾಜ್ಯಸಭಾ ಸದದ್ಯರಾಗಿ ಚಿದಂಬರಂ ಮತ್ತು ಲೋಕಸಭಾ ಸದಸ್ಯರಾಗಿ ಕಾರ್ತೀ ಆರಾಮಾಗಿ ಓಡಾಡಿಕೊಂಡಿದ್ದಾರೆ.
ಅಹ್ಮದ್ ಪಟೇಲ್ : ಸೋನಿಯಾ ಗಾಂಧಿಯ ಪರಮಾಪ್ತರಾದ ಅಹ್ಮದ್ ಪಟೇಲ್ ಮತ್ತು ಅವರ ಅಳಿಯನ ಹೆಸರು ಸ್ಟರ್ಲಿಂಗ್ ಬಯೋಟೆಕ್ ನ 5000 ಕೋಟಿ ಸಾಲ ವಂಚನೆ-ಲಂಚ ಪ್ರಕರಣ ಇನ್ನೂ ತನಿಖಾ ಹಂತದಲ್ಲೇ ಇದೆ. ಗುಜರಾತ್ ಚುನಾವಣೆ ಮತ್ತು ಲೋಕಸಭಾ ಸಮಯದಲ್ಲಿ ಸ್ವಲ್ಪ ಸದ್ದು ಮಾಡಿ ಈಗ ತಣ್ಣಗಿದ್ದದ್ದು ಕಳೆದ ವಾರ ಇಡಿ ಧಾಳಿಮಾಡಿ ಕೆಲ ಪ್ರಮುಖ ದಾಖಲೆಗಳ ಜೊತೆಗೆ ಮಾಜೀ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಲೆಟರ್ ಹೆಡ್ ಸಹಾ ದೊರೆತಿರುವುದು ಪ್ರಕರಣಕ್ಕೆ ಒಂದು ಚೂರು ಟ್ವಿಸ್ಟ್ ಕಂಡಿರುವುದು ಹೌದಾದರೂ ಅನೇಕ ವರ್ಷಗಳಿಂದ ತಣ್ಣಗೆಯೇ ಇದೆ.
NDTV : ಎಡಪಂಥೀಯ ಧೋರಣೆ ಹೊಂದಿರುವ ಮತ್ತು ಸದಾಕಾಲವೂ ಕಾಂಗ್ರೇಸ್ಸನ್ನು ಪೋಷಿಸಿಕೊಂಡು ಬಂದಿರುವ ದೇಶದ ಪ್ರಖ್ಯಾತ ಮಾಧ್ಯಮ ಸಂಸ್ಥೆಯಾದ NDTV ಮತ್ತದರ ಮುಖ್ಯಸ್ಥ ಪ್ರಣಯ್ ರಾಯ್ ಅವರ ಮೇಲೆ 5000 ಕೋಟಿ ರೂಪಾಯಿಗಳ ಅಕ್ರಮ ಹಣ ಹಸ್ತಾಂತರದ ಆಪಾದನೆ ಇದ್ದು ಇದರಲ್ಲಿಯೂ ಸಹಾ ಪಿ.ಚಿದಂಬರಂ ಸೇರಿದಂತೆ ಹಲವು ಖ್ಯಾತ ನಾಮರ ಹೆಸರುಗಳು ತಳುಕು ಹಾಕಿಕೊಂಡಿವೆ. ಆರಂಭದಲ್ಲಿ ಆರ್ಭಟಿಸಿದ ಈ ಪ್ರಕರಣವೂ ಕೂಡ ಸದ್ಯಕ್ಕೆ ಆಮೆಗತಿಯಲ್ಲಿದ್ದು, ರಾಜಕೀಯ ಅಗತ್ಯಗಳಿರುವಾಗಲೆಲ್ಲಾ ಸದ್ದು ಮಾಡುತ್ತಾ ಮತ್ತೆ ಕೋಲ್ಡ್ ಸ್ಟೋರೇಜ್ ಸೇರುತ್ತಿರುವುದು ಸುಳ್ಳಲ್ಲ.
ಆಗಸ್ಟಾ ವೆಸ್ಟ್ ಲ್ಯಾಂಡ್ : 2013 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಿಐಪಿಗಳ ಪ್ರಯಾಣಕ್ಕಾಗಿ 12 AW-101 ಹೆಲಿಕಾಫ್ಟರ್ ಖರೀದಿಯಲ್ಲಿ ಬೊಕ್ಕಸಕ್ಕೆ 2666 ಕೋಟಿ ರೂಪಾಯಿ ನಷ್ಟ ಆಗಿದೆ ಎಂಬ ಆರೋಪವಿದ್ದು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಇಟಾಲಿಯನ್ ಚಾಪರ್ ಕಂಪನಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯಿಂದಲೇ 36 ಬಿಲಿಯನ್ ರೂಪಾಯಿ ಮೌಲ್ಯದ ಒಪ್ಪಂದದಡಿಯಲ್ಲಿ ಅನೇಕ ರಕ್ಷಣಾ ನಿಯಗಳನ್ನು ಗಾಳಿಗೆ ತೂರಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಯಿತು.ಈ ವ್ಯವಹಾರದ ಹಿಂದೆ ಸಾಕಷ್ಟು ಲಂಚದ ವಹಿವಾಟು ನಡೆದಿದ್ದು ಇದರ ಹಿಂದೆ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಇಟಲಿಯ ನ್ಯಾಯಾಲಯದಲ್ಲಿ 2008 ರ ಮಾರ್ಚ್ 15 ರಂದು ಬರೆದ ಟಿಪ್ಪಣಿ ಸೂಚಿಸಿದೆ. ಇದರ ಹಿನ್ನೆಲೆಯಲ್ಲಿ ನಿವೃತ್ತ ಏರ್ ಚೀಫ್ ಮಾರ್ಷಲ್ ಎಸ್ ಪಿ ತ್ಯಾಗಿ ಅವರ ಮೇಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆಯಾದರೂ, ಮುಂದಿನ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಯಾರಿಗೂ ತಿಳಿದಿಲ್ಲ.
ಕಾಮನ್ ವೆಲ್ತ್ ಗೇಮ್ಸ್ : 2010ರ ಕಾಮನ್ ವೆಲ್ತ್ ಗೇಮ್ಸ್ ಗುತ್ತಿಗೆ ಹಗರಣದಲ್ಲಿ ಕಾಂಗ್ರೇಸ್ ನಾಯಕ ಸುರೇಶ್ ಕಲ್ಮಾಡಿ ವಿರುದ್ಧ ಸಾವಿರಾರು ರೂಪಾಯಿಗಳ ಅವ್ಯವಹಾರದ ಆರೋಪ ಬಂದು ಸಾಮಾನ್ಯ ಜನರಿಗೂ ಅವ್ಯವಹಾರ ಅಂಗೈಯಲ್ಲಿಯೇ ಹುಣ್ಣು ಕಾಣುತ್ತಿದ್ದರೂ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಪಾರ್ಲಿಮೆಂಟರಿ ಸಮಿತಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು ನಂತರ ಎಲ್ಲರ ಒತ್ತಾಯದ ಮೇರೆಗೆ ಈ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಯಾಗಿದ್ದರೂ ವಿಚಾರಣೆ ಯಾವ ಹಂತದಲ್ಲಿದೇ ಎಂದು ಆ ಭಗವಂತನೇ ಬಲ್ಲ.
ಆದರ್ಶ : ಮುಂಬೈಯಲ್ಲಿ ನಡೆದ ಈ ಹಗರಣದಲ್ಲಿ ಅಂದಿನ ಮಹಾರಾಷ್ಟ್ರದ ಮುಖ್ಯ ಮಂತ್ರಿ ಅಶೋಕ್ ಚೌಹಾನ್ ಈ ಬಹುಮಹಡಿ ಕಟ್ಟುವ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟು ಅದರ ಪ್ರತಿಫಲವಾಗಿ ಕೆಲ ಫ್ಲಾಟ್ಗಳನ್ನು ಉಡುಗೊರೆ ಪಡೆದ ಆಪಾದನೆ ಸದ್ದು ಮಾದಿದ್ದ ಕಾರಣ ಮುಖ್ಯಮಂತ್ರಿ ಪದವಿಗೆ 2010ರಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. 2015 ರಲ್ಲಿ ಮೋದಿ ಸರಕಾರ ಬಂದ ರಾಜ್ಯಪಾಲರು ಪ್ರಕರಣವನ್ನು ಸಿಬಿಐ ಒಪ್ಪಿಸಿದ್ದರೂ ಅದನ್ನು ಮಹಾರಾಷ್ಟ್ರ ಹೈಕೋರ್ಟ್ ರದ್ದುಮಾಡಿದೆ ಈ ಪ್ರಕರಣ ಇನ್ನೂ ಹಗ್ಗ ಜಗ್ಗಾಟದಲ್ಲಿಯೇ ಮುಂದುವರೆದಿದೆ.
2G: ದೇಶದಲ್ಲಿ ಅಲ್ಲಿಯವರೆಗೆ ಕಂಡೂ ಕೇಳರಿಯದಿದ್ದ ಕೋಟ್ಯಾಂತರ ರೂಪಾಯಿಗಳ ಮೊಬೈಲ್ ತರಂಗಾಂತರಗಳ ಹಗರಣದ ಅಡಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಡಿಎಂಕೆ ಪಕ್ಷದ ಎ. ರಾಜಾ ಮತ್ತು ಕನಿಮೋಳಿ ಆವರ ಮೇಲೆ ಆರೋಪ ಬಂದು ಅವರಿಬ್ಬರು ಹಲವಾರು ವರ್ಷಗಳ ಕಾಲ ಸೆರೆಮನೆಯವಾಸವನ್ನೂ ಅನುಭಬಿಸಿಯೂ ಆಗಿತ್ತು. ಅದೇನೂ ಮಾಯೆ ನಡೆಯಿತೋ? ಯಾವ ಕಾಣದ ಕೈಗಳ ಪ್ರಭಾವದಿಂದಾಗಿಯೋ ಏನೋ? ಅಂತಹ ಪ್ರಕರಣವೇ ನಡೆದಿಲ್ಲ ಎಂಬ ತೀರ್ಮಾನ ಹೊರಬಿದ್ದ ನಂತರ ದೇಶವಾಸಿಗಳಿಗೆ ನ್ಯಾಯಾಂಗ ತನಿಖೆಯ ಮೇಲೆಯೇ ನಂಬಿಕೆ ಹೋದದ್ದು ಸುಳ್ಳಲ್ಲ. ಸದ್ಯಕ್ಕೆ ಸಿಬಿಐ, ಈ ಪ್ರಕರಣದಲ್ಲಿ ಮರು ಅಪೀಲು ಹೋಗಲು ಕಾನೂನು ಇಲಾಖೆಯ ಅನುಮತಿ ಪಡೆದುಕೊಂಡಿದ್ದು, ತಮಿಳುನಾಡಿನ ರಾಜಕೀಯ ನಾಯಕರ ಮೇಲೆ ತನ್ನದೊಂದು ಹಿಡಿತ ಉಳಿಸಿಕೊಳ್ಳಲು ಮಾತ್ರವೇ ಕೇಂದ್ರ ಸರಕಾರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದ ಹಾಗೆ ಕಾಣುತ್ತಿದೆ.
ಬಹು ಕೋಟಿ ಕಲ್ಲಿದ್ದಲು ಹಗರಣ: ಜಾರ್ಖಂಡ್ ರಾಜ್ಯದ ರಾಜಹರಾ ಉತ್ತರ ಕಲ್ಲಿದ್ದಲು ಗಣಿಯನ್ನು ಕೋಲ್ಕತಾ ಮೂಲದ ಖಾಸಗಿ ಕಂಪನಿಯೊಂದಕ್ಕೆ ಭ್ರಷ್ಟ ಹಾದಿಯಲ್ಲಿ ನೀಡಿದ್ದಕ್ಕಾಗಿ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಢಾ, ಅಂದಿನ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳ ಶಾಮೀಲು ತನಿಖೆಯಲ್ಲಿ ಬೆಳಕೆಗೆ ಬಂದು ಅವರೆಲ್ಲರಿಗೂ ಸೆರೆಮನೆಯ ಪಾಲಾಗುವ ಮೂಲಕ ಅಂದಿನ ಕಲ್ಲಿದ್ದಲು ಖಾತೆಯನ್ನು ಹೊಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೂಗಿನ ಅಡಿಯಲ್ಲೇ ನಡೆದ ಈ ಬಹುಕೋಟಿ ಹಗರಣದಲ್ಲಿ ಅವರನ್ನು ನಿರ್ದೋಷಿ ಎಂದು ನ್ಯಾಯಾಲಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಹೀಗೆ ಹೇಳುತ್ತಾ ಹೋದರೇ ಇಂತಹ ನೂರಾರು ಹಗರಣಗಳು ನಕಲೀ ಗಾಂಧಿ ಕುಟುಂಬ ಮತ್ತು ಕಾಂಗ್ರೇಸ್ಸಿಗರ ಮೇಲೆ ಇದ್ದರೂ ರಾಜೀವ್ ಗಾಂಧಿ ಅಧಿಕಾರದ ನಂತರ ಬಂದ ಯಾವುದೇ ಕಾಂಗ್ರೇಸ್ಸೆತರ ಸರ್ಕಾರಗಳು ಇದರ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸಿ ಒಂದು ತಾರ್ಕಿಕ ಅಂತ್ಯವನ್ನು ನೀಡುವುದರಲ್ಲಿ ವಿಫಲವಾಗಿದೆ ಎಂದೇ ಹೇಳಬಹುದು.
ದೇಶದಲ್ಲಿ ಕೂರೋನಾ ಮಹಾಮಾರಿ ಮತ್ತು ನೆರೆರಾಷ್ಟ್ರಗಳಾದ ಪಾಪೀಸ್ಥಾನ, ಚೀನಾ ಮತ್ತು ನೇಪಾಳಗಳು ಗಡಿಯಲ್ಲಿ ಕೆಲ ತಿಕ್ಕಾಟಗಳು ನಡೆದ ಪರಿಣಾಮ ನಮ್ಮ ಸೈನಿಕರ ಬಲಿದಾನದ ಕುರಿತಂತೆ ದೇಶಾದ್ಯಂತ ಆರೋಪ ಪ್ರತ್ಯಾರೋಪ ನಡೆಯುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ ವಾದ್ರ ಗಾಂಧಿ, ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಮತ್ತವರ ಪಟಾಲಂ ಒಂದಿಷ್ಟು ಟ್ವೀಟ್ ಗಳ ಜೊತೆ ವೀಡೀಯೋಗಳನ್ನು ಹೊರತಂದಿದ್ದೇ ತಡಾ ಕೇಂದ್ರ ಸರ್ಕಾರ ಪ್ರಿಯಾಂಕಾಳಿಗೆ ಅಂದಿನ ಕಾಂಗ್ರೇಸ್ ಸರ್ಕಾರ ನೀದಿದ್ದ ಸರ್ಕಾರೀ ಬಂಗಲೆಯನ್ನು ಖಾಲಿ ಮಾಡಲು ಸೂಚಿಸಿದೆಯಲ್ಲದೇ, ಈ ನಕಲೀ ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿರುವುದು ಒಂದು ರೀತಿಯ ದ್ವೇಷದ ರಾಜಕೀಯ ಎಂಬುದಾಗಿಯೇ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಗಳ ವಿರುದ್ಧ ಆದಾಯ ತೆರಿಗೆ ವಂಚನೆ ಹಾಗೂ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯಂತಹ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್-ಸಚಿವಾಲಯ ಸಮಿತಿಯನ್ನು ರಚಿಸಿದೆ. ಗೃಹ ಸಚಿವಾಲಯದ ವಕ್ತಾರರ ಪ್ರಕಾರ ಈ ನಕಲೀ ಗಾಂಧಿ ಕುಟುಂಬಗಳು ನಡೆದಿಕೊಂಡು ಬಂದಿರುವ ಟ್ರಸ್ಟ್‌ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ),ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ)ಕಾಯ್ದೆಗಳಂತಹ ಕಾನೂನುಗಳ ಉಲ್ಲಂಘನೆಗಳು ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಕೇಂದ್ರ ಸರಕಾರದ ಈ ಪ್ರಯತ್ನ ಶ್ಲಾಘನೀಯವಾದರೂ, ಈ ಎಲ್ಲಾ ಪ್ರಕರಣಗಳ ತನಿಖೆಗೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಅವುಗಳಿಗೆಲ್ಲಾ ಒಂದು ತಾರ್ಕಿಕ ಅಂತ್ಯವನ್ನು ಕಾಣಿಸಿ ತಪ್ಪುಮಾಡಿದವರಿಗೆ ಶಿಕ್ಷೆ ಕೊಡಿಸಿದಲ್ಲಿ ಪ್ರಜೆಗಳಿಗೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಅದರ ಹೊರತಾಗಿ ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ತಕ್ಕಂತೆ ಆದಾಯ ತೆರಿಗೆ ಇಲಾಖೆ, ಸಿಬಿಐ, ಎನ್ಫೋರ್ಸ್ ಮೆಂಟ್ ಡೈರೆಕ್ಟೋರೇಟ್ ಎಂಬ ಮೂರು ಶಕ್ತಿಶಾಲಿ ಅಸ್ತ್ರಗಳನ್ನು ಬಳೆಸುತ್ತಾ ಸುಮ್ಮನೆ ಆರಂಭ ಶೂರತ್ವ ತೋರಿಸಿ ವಿರೋಧಿಗಳನ್ನು ಸುಮ್ಮನಾಗಿಸುವ Adjustment politics ಎಂದೇ ಜನ ನಂಬುವಂತಾಗುತ್ತದೆ
ಇದಕ್ಕೆ ಡಿ.ಕೆ. ಶಿವಕುಮಾರ್ ಪ್ರಕರಣವೇ ಸಾಕ್ಷಿ. ಮೂವತು ವರ್ಷಗಳ ಹಿಂದೆ ಕನಕಪುರದಿಂದ ಬರೀಗೈಯಲ್ಲಿ ಬಂದು ಇಂದು ಸಾವಿರಾರು ಕೋಟಿಗಳ ಸರದಾರನಾಗಿರುವುದು ಕಣ್ಣಿಗೆ ರಾಚುತ್ತಿದ್ದರೂ, ಕೆಲ ದಿನಗಳ ಕಾಲ ಸೆರೆಮನೆಗೆ ತಳ್ಳಿ ಕಡೆಗೆ ಅನಾರೋಗ್ಯದ ಮೇಲೆ ಬೇಲ್ ಪಡೆದು ಇಂದು ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಪದವಿಯನ್ನೇರಿದರೂ ಅವರ ಮೇಲಿನ ತನಿಖೆ ಅಂತ್ಯ ಕಂಡಿಲ್ಲ. ಡಿಕೆಶಿ ತಪ್ಪು ಮಾಡಿರಬಹುದು ಇಲ್ಲವೇ ಮಾದಿಲ್ಲದಿರಬಹುದು ಆದರೆ ಅದಕ್ಕೊಂದು ತಾರ್ಕಿಕ ಅಂತ್ಯವನ್ನು ಹಾಡಬೇಕ್ಲಲ್ಲವೇ?
ನಿಜಕ್ಕೂ ಹೇಳಬೇಕೆಂದರೆ ಈ ಇಳೀ ವಯಸ್ಸಿನಲ್ಲಿಯೂ ಡಾ. ಸುಬ್ರಮಣ್ಯಂ ಸ್ವಾಮಿಯವರು ಮಾತ್ರಾ ಏಕಾಂಗಿಯಾಗಿ ನಿಸ್ವಾರ್ಥವಾಗಿ ಸರಕಾರ ಅಥವಾ ತನಿಖಾ ಸಂಸ್ಥೆಗಳಿಗಿಂತಲೂ ಹೆಚ್ಚಾಗಿ ಮತ್ತು ತೀವ್ರಗತಿಯಲ್ಲಿ ಕೆಲಸಮಾಡುತ್ತಿರುವುದು ಮಾತ್ರ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ನಾನು ಚಿಕ್ಕವನಿದ್ದಾಗಲೂ ಕಾಂಗ್ರೇಸ್ ಮತ್ತು ನಕಲೀ ಗಾಂಧಿಗಳ ಹಗರಣಗಳನ್ನೇ ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಎಲ್ಲಾ ಕಾಂಗ್ರೇಸ್ಸೇತರ ಸರ್ಕಾರಗಳೂ, ಕಾಂಗ್ರೆಸ್ಸಿನ ಹೆಸರಲ್ಲಿರುವ ಎಲ್ಲಾ ಹಗರಣಗಳಿಗೂ ಅಂತ್ಯ ತೋರಿಸುವ ಬದಲು ತಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಹೊರತೆಗೆದು ಬೆದರಿಸಲು ಬಳಸುವ ಬೆದರು ಬೊಂಬೆಗಳಾಗಿ ಬಳಸಿಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದು ಒಂದು ರೀತಿಯಲ್ಲಿ ತೋಳ ಬಂತು ತೋಳ ಎನ್ನುವ ಕಥೆಯಾಗದಿರಲಿ. ತನಿಖೆಗಳು ಚುರುಕಾಗಿ ನಿಜವಾದ ತಪ್ಪಿತಸ್ಥರಿಗೆ ಅತೀ ಶೀಘ್ರದಲ್ಲಿಯೇ ಶಿಕ್ಷೆಯಾಗಲಿ.
ಏನಂತೀರೀ?