ಈ ವಾರವಿಡೀ ದೇಶಾದ್ಯಂತ ಎರಡು ಹತ್ಯೆಯ ಬಗ್ಗೆಯೇ ಪರ ವಿರೋಧಗಳ ಚರ್ಚೆಗಳು ತೀವ್ರವಾಗಿ ನಡೆಯುತ್ತಲಿದೆ. ಸತ್ತವರಿಬ್ಬರೂ ಭಾರತೀಯರೇ. ಧರ್ಮದಲ್ಲಿ ನೋಡಿದರೆ ಒಬ್ಬ ಮುಸಲ್ಮಾನ ಮತ್ತೊಬ್ಬ ಹಿಂದೂ ಬ್ರಾಹ್ಮಣ. ಒಬ್ಬನ ಸಾವಿನ ಬಗ್ಗೆ ಸಂತಾಪ ವ್ಯಕ್ತ ಪಡಿಸುತ್ತಿದ್ದರೆ ಮತ್ತೊಬ್ಬನ ಸಾವನ್ನು ಸಂಭ್ರಮಿಸದಿದ್ದರೂ, ಅವನು ಸತ್ತ ರೀತಿಗೆ ಸಂತಸ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.
ವಾಸೀಂ ಬಾರಿ : ಹೆಸರೇ ಸೂಚಿಸುವಂತೆ ಆತ ಒಬ್ಬ ಮುಸಲ್ಮಾನ. ಅದರೇ ಬಹುತೇಕ ಕಾಶ್ಮೀರೀ ಮುಸಲ್ಮಾನರಂತೆ ಭಾರತದ ವಿರೋಧಿಯಾಗಿರದೇ ಅಪ್ಪಟ ದೇಶ ಪ್ರೇಮಿ. ತನ್ನ ಕುಲಬಾಂಧವರ ವಿರೋಧದ ಹೊರತಾಗಿಯೂ ಕಾಶ್ಮೀರದಲ್ಲಿ ತ್ರಿವರ್ಣ ದ್ವಜ ಹಾರಿಸಿದ್ದ ಸಾಹಸಿ. ತನ್ನ ಜೀವನೋಪಾಯಕ್ಕಾಗಿ ಕುಟುಂಬದೊಡನೆ ಬಟ್ಟೇ ವ್ಯಾಪಾರ ಮಾಡುತ್ತಿದ್ದಲ್ಲದೇ ಬಂಡಿಫೊರಾ ಜಿಲ್ಲೆಯ ಬಿಜೆಪಿ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದ. ಇವೆಷ್ಟೇ ಮತಾಂಧರಿಗೆ ಆತನನ್ನು ವಿರೋಧಿಸಲು ಸಾಕಾಯಿತು. ಮೊನ್ನೆ ಇದ್ದಕ್ಕಿಂದ್ದಂತಯೇ, ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉಗ್ರರು ಆತ ಬಟ್ಟೆ ಅಂಗಡಿಗೆ ಏಕಾ ಏಕಿ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಈ ಕೃತ್ಯದಲ್ಲಿ ವಾಸೀಮ್ ಬಾರಿ ಸ್ಥಳದಲ್ಲೇ ಮೃತಪಟ್ಟರೆ, ಆತನ ತಂದೆ ಬಶೀರ್ ಮತ್ತು ಸಹೋದರ ಉಮರ್ ಸುಲ್ತಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಭಯೋತ್ಪಾದಕರ ಈ ಹತ್ಯೆಯನ್ನು ಇಡೀ ಭಾರತೀಯರು ಒಕ್ಕೊರಿಲಿನಿಂದ ಖಂಡಿಸಿದ್ದಲ್ಲದೇ, ವಾಸೀಂ ಕುಟುಂಬದ ಸಾವಿನ ಸೂತಕವನ್ನು ಇಡೀ ಭಾರತೀಯರೆಲ್ಲರೂ ಅನುಭವಿಸಿದರು ಎಂದರೂ ತಪ್ಪಾಗಲಾರದು. ಈ ಪ್ರಕ್ರಿಯೆಯಲ್ಲಿ ಯಾರೂ ಸಹಾ ಸತ್ತವರು ಮುಸಲ್ಮಾನರು ಎಂದು ನೋಡಲಿಲ್ಲ ಬದಲಾಗಿ ಅವನನ್ನು ಒಬ್ಬ ಭಾರತ ಮಾತೆಯ ಸುಪುತ್ರ ಮತ್ತು ಅಪ್ರತಿಮ ಅಪ್ಪಟ ದೇಶಪ್ರೇಮಿ ಎಂದು ಕೊಂಡಾಡಿದರು. ಆತನ ಹತ್ಯೆ ಮಾಡಿದವರನ್ನು ಹಿಡಿದು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಗ್ರಹ ಪಡಿಸಿದರು.
ವಿಕಾಸ್ ದುಬೆ : ಈತನ ಹೆಸರು ಮತ್ತು ಉಪನಾಮವೇ ಸೂಚಿಸುವಂತೆ ಜನ್ಮತಃ ಹಿಂದು ಮತ್ತು ಬ್ರಾಹ್ಮಣ. ಜೀವನದಲ್ಲಿ ಆತನೆಂದೂ ಬ್ರಾಹ್ಮಣ್ಯತ್ವವನ್ನು ಪಾಲಿಸಲೇ ಇಲ್ಲ. ಆತನದ್ದೇನಿದ್ದರೂ ಹೋಡಿ, ಬಡಿ ಕಡಿ ಎಂಬ ರೌಡಿ ಗುಣ. ಆತನನ್ನು ವಿರೋಧಿಸಿದವರು ತನ್ನ ಕುಲಬಾಂಧವರೇ ಆಗಿದ್ದರೂ ಅವರನ್ನೂ ಹತ್ಯೆ ಮಾಡುತ್ತಾ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲು ಹವಣಿಸುತ್ತಿದ್ದವ. ಅನುಕೂಲಕ್ಕೆ ತಕ್ಕಂತೆ ಪಕ್ಷಗಳನ್ನು ಬದಲಿಸುತ್ತಾ, ದೇಶ ದ್ರೋಹ, ವಿದ್ವಂಸಕ ಕೃತ್ಯ, ದರೋಡೆ ಮತ್ತು ಹತ್ಯೆಗಳಂತಹ ಸಾಲು ಸಾಲು ಅಪರಾಧಗಳಲ್ಲಿ ಭಾಗಿಯಾಗಿ ಸುಮಾರು 62 ಮೊಕ್ಕದ್ದಮ್ಮೆಗಳನ್ನು ಮೈಮೇಲೆ ಎಳೆದುಕೊಂಡಿದ್ದ. ಕಳೆದವಾರ ಅವನನ್ನು ಬಂಧಿಸಲು ಹೋಗಿದ್ದ ಎಂಟು ಪೋಲಿಸರನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ. ಹಾಗೂ ಹೀಗೂ ಮಾಡಿ ಅವನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿ, ವಿಚಾರಣೆಗಾಗಿ ಉತ್ತರಪ್ರದೇಶಕ್ಕೆ ಪೋಲೀಸರ ಬೆಂಗಾವಲಿನಲ್ಲಿ ಕರೆತರುತ್ತಿದ್ದಾಗ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ತನ್ನ ಬೆಂಗಾವಲಿನ ಪೋಲೀಸರ ಬಂದೂಕನ್ನು ಕಸಿದುಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನದ ಚಕಮಕಿಯಲ್ಲಿ ಪೋಲೀಸರ ಗುಂಡಿಗೆ ಬಲಿಯದ.
ದುಬೆಯ ಹತ್ಯೆಯನ್ನು ರಾಜಕೀಯ ಹಿತಾಸಕ್ತಿಯಿಂದಾಗಿ ಕೆಲವೇ ಕೆಲವು ಮಂದಿ ವಿರೋಧಿಸಿದರೆ, ಆತನ ಸಾವಿನ ಕುರಿತಂತೆ ಸಂತಸ ವ್ಯಕ್ತಪಡಿಸಿದವರೇ ಹೆಚ್ಚು ಮಂದಿ. ಆತನ ತಾಯಿಯೂ ಒಳಗೊಂಡು ಯಾರೂ ಸಹಾ ಆತ ಬ್ರಾಹ್ಮಣ ಎಂದು ಬೆಂಬಲಿಸಲಿಲ್ಲ. ಹಿಂದೂವಿನ ಹತ್ಯೆಯಾಯಿತು ಎಂದು ಎಲ್ಲಿಯೂ ಬೊಬ್ಬೆ ಹೊಡೆದು ಟೌನ್ ಹಾಲ್ ಮುಂದೆ ರಂಪ ರಾಮಾಯಣ ಮಾಡಲಿಲ್ಲ. ಸೆರೆಮನೆಯಲ್ಲಿ ಬಂಧಿಯಾಗಿ ನ್ಯಾಯಾಂಗವನ್ನೇ ಅಣಕ ಮಾಡುತ್ತಾ ಸರ್ಕಾರದ ಹಣದಲ್ಲಿ ವರ್ಷಗಟ್ಟಲೇ ಮೋಜು ಮಾಡುತ್ತಾ ಕಾಲಕಳೆಯುವುದರ ಬದಲಾಗಿ ಏಕ್ ಮರ್ ದೋ ತುಕುಡ ಎನ್ನುವಂತೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವ ರೀತಿಯಲ್ಲಿ ಆತನನ್ನು ಪೋಲಿಸರು ಎನ್ ಕೌಂಟರ್ ಮಾಡಿದ್ದನ್ನು ಮೆಚ್ಚುತ್ತಿದ್ದಾರೆ. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತನ್ನ ಬೆನ್ನ ಹಿಂದೆ ಸಹಸ್ರಾರು ಜನರ ಬೆಂಬಲವಿದೆ ಕೊಚ್ಚಿಕೊಂಡಿದ್ದ ದುಬೆಗೆ ಇಂದು ಅತನ ಶವಯಾತ್ರೆಯ ಮೆರವಣಿಗೆ ಬಿಡಿ, ಅವನ ಶವವನ್ನೂ ಹೊರಲು ನಾಲ್ಕು ಜನರು ಸಿಗುವುದೂ ಕಷ್ಟವಾಗಿದೆ.
ಅಪರಾಧಕ್ಕೆ ಧರ್ಮವಿಲ್ಲ ಮತ್ತು ಜಾತಿಯ ಹಂಗಿಲ್ಲ. ತಪ್ಪು ಯಾರು ಮಾಡಿದರೂ ಅದು ತಪ್ಪೇ ಎನ್ನುವ ಮನಸ್ಥಿತಿಗೆ ಭಾರತೀಯರು ಬದಲಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಏನಂತೀರೀ?
ಈ ಲೇಖನ ಮುಖಪುಟದಲ್ಲಿ ಓದಿದ ಸಂದೇಶವೊಂದರಿಂದ ಪ್ರೇರಿತವಾಗಿದೆ.