ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು ಇಡೀ‌ ಊರನ್ನೇ ತಮಿಳುಮಯವನ್ನಾಗಿಸಿದರು. ಕೇವಲ ಹೊಟ್ಟೆಪಾಡಿನ ಕೆಲಸಕ್ಕಾಗಿ ಬಂದ ಬಹುತೇಕರು ಮೂಲತಃ ದಲಿತರೇನಲ್ಲ. ಏಕೆಂದರೆ ಎಲ್ಲಾ ತಮಿಳರು‌ ದಲಿತರಲ್ಲ. ನಮ್ಮ ಅಕ್ಕ ಪಕ್ಕದಲ್ಲಿ ನಾವೊಬ್ಬರೇ ಕನ್ನಡಿಗರು ಉಳಿದವರೆಲ್ಲರೂ ತಮಿಳರೇ ಆಗಿದ್ದ ಕಾರಣ, ಬಾಲ್ಯದಿಂದಲೂ ನಾನು ಅವರುಗಳ ಮನೆಗಳಲ್ಲಿ ಆಡಿ ಬೆಳೆದಿದ್ದೆ. ಸರ್ಕಾರದ ಮೀಸಲಾತಿಯ ಫಲಾನುಭವಿಗಳಾಗುವ ಸಲುವಾಗಿಯೇ ಪ್ರಾಯಶಃ ಅವರೆಲ್ಲರೂ ಸರ್ಕಾರೀ ದಾಖಾಲಾತಿಗಳಲ್ಲಿ ಅವರು ದಲಿತರೆಂದು ದಾಖಲಿಸಿ ಸಕಲ ಸರ್ಕಾರೀ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು.

ಬ್ರಿಟೀಶರು ಅಲ್ಲಿದ್ದ ಚಿನ್ನವನ್ನೆಲ್ಲಾ ಬಡಿದು ಬಾಯಿಗೆ ಹಾಕಿಕೊಂಡು ಕೇವಲ ಉಪ್ಪಿನಕಾಯಿಯಷ್ಟನ್ನೇ ಉಳಿಸಿ ಹೋಗಿದ್ದ ಪರಿಣಾಮ ಎಂಭತ್ತರ ದಶಕದಲ್ಲಿ ಗಣಿಗಳಲ್ಲಿ ಚಿನ್ನದ ‌ಅದಿರಿನ ಉತ್ಪತ್ತಿ ಕಡಿಮೆಯಾಗಿ, ಎಲ್ಲರ ಸಂಪಾದನೆ ಕಡಿಮೆಯಾದಾಗ ಜೀವನ ನಡೆಸುವುದು ಕಷ್ಟವಾಗ ತೊಡಗಿತು. ಕುಡಿತದ ಚಟಗಾರರು ಕಳ್ಳತನದ ಅಡ್ಡ ದಾರಿ ಹಿಡಿದರೆ, ಇಂತಹ ಸುವರ್ಣಾವಕಾಶವನ್ನು ಬಳಸಿಕೊಂಡ ಕ್ರೈಸ್ತ ಮಿಶನರಿಗಳು ಅಲ್ಲಿನ ಹೆಂಗಸರುಗಳಿಗೆ ಹಾಲಿನ ಪುಡಿ‌, ಅಲ್ಪ‌ ಸ್ವಲ್ಪ ರೇಷನ್ ಮತ್ತು ಪುಡಿಗಾಸಿನ ಆಸೆ ತೋರಿಸಿ ನಿಧಾನವಾಗಿ ಅವರುಗಳ ಮನೆಗಳಲ್ಲಿ ಗುಂಪು ಗುಂಪಾಗಿ ಬಂದು ಪ್ರಾರ್ಥನೆ ಮಾಡುತ್ತಾ ಸದ್ದಿಲ್ಲದೇ ಕ್ರೈಸ್ತರನ್ನಾಗಿ ಮತಾಂತರ ಮಾಡಿದ್ದೇ ಗೊತ್ತಾಗಲಿಲ್ಲ. ಶಾಂತಿ, ಪದ್ಮ, ರವೀ, ವಿನೋದ್ ಮುಂತಾದ ಹಳೆಯ ಹೆಸರುಗಳು ಹಾಗೆಯೇ ಉಳಿದರೂ ನವಜಾತ ಶಿಶುಗಳಿಗೆ ಮೇರಿ, ಜಾನ್‌, ಕೆನಡಿ, ಜಾರ್ಜ್ ಹೆಸರುಗಳನ್ನಿಟ್ಟಾಗಲೇ ಅವರು ಕ್ರೈಸ್ತ ಮತಕ್ಕೆ ಮತಾಂತರವಾದದ್ದು ತಿಳಿಯುತ್ತಿತ್ತು.
ನೀವೇಕೆ ಕ್ರೈಸ್ತ ಧರ್ಮಕ್ಕೆ ಮತಾಂತರವಾದಿರಿ ಎಂದು ಕೇಳಿದ್ದಕ್ಕೆ, ಹಿಂದೂಧರ್ಮದಲ್ಲಿ ದಲಿತರೆಂಬ ಕೀಳಿರಿಮೆಯಿಂದಾಗಿ ನಾವೆಲ್ಲಾ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದೇವೆ ಎಂಬ ಸಬೂಬು. ಹೀಗೆ ನಾನಾ ಆಮಿಷಕ್ಕೆ ಒಳಗಾಗಿ ಹಿಂದೂ ಧರ್ಮದಿಂದ ಕ್ರೈಸ್ತರಾಗಿ ಮತಾಂತರ ಹೊಂದಿದ್ದರೂ ಅವರು ಹಿಂದೂ ಧರ್ಮಾಧಾರಿತವಾಗಿ ಗಳಿಸಿಕೊಂಡಿದ್ದ ಮೀಸಲಾತಿ ಸೌಲಭ್ಯವನ್ನು ಎಗ್ಗಿಲ್ಲದೇ ಉಪಯೋಗಿಸಿಕೊಂದು ಸರ್ಕಾರೀ ನೌಕರಿಗಳನ್ನು ಗಳಿಸಿದ್ದಲ್ಲದೇ ನೋಡ ನೋಡತ್ತಿದ್ದಂತೆಯೇ ಅಲ್ಲಿಯೂ ಭಡ್ತಿ ಪಡೆದು ಅಧಿಕಾರಿಗಳಾಗಿ ಮೆರೆಯ ತೊಡಗಿದಾಗ, ನನ್ನಲ್ಲಿ ಕಾಡುತ್ತಿದ್ದ ಪ್ರಶ್ನೆಯೆಂದರೆ, ಹಿಂದೂ ಧರ್ಮವನ್ನು ಧಿಕ್ಕರಿಸಿ, ಅನ್ಯ ಮತಕ್ಕೆ ಮತಾಂತರ ಹೊಂದಿದ ಕೂಡಲೇ ಹಣೆಗೆ ಕುಂಕುಮ ಇಡುವುದು, ತಾಳಿ ಕಟ್ಟಿಕೊಳ್ಳುವುದು ಎಲ್ಲವನ್ನೂ ಧಿಕ್ಕರಿಸಿದವರು, ಹೆಸರುಗಳನ್ನು ಬದಲಿಸಿಕೊಂಡವರು ಮೀಸಲಾತಿಯನ್ನು ಮಾತ್ರಾ ಎಕೆ ಧಿಕ್ಕರಿಸುವುದಿಲ್ಲ? ಮನೆಯಲ್ಲಿ, ಸ್ನೇಹಿತರೊಂದಿಗೆ ಮತ್ತು ಅನೇಕ ಚರ್ಚೆಗಳಲ್ಲಿ ಈ ಕುರಿತಂತೆ ವಿಚಾರ ಮಂಡಿಸಿದ್ದೆನಾದರೂ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂದು ಸುಮ್ಮನಾಗ ಬೇಕಾಗಿತ್ತು.

ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರದ ಕಾನೂನು ಮಂತ್ರಿಗಳಾದ ಶ್ರೀ ರವಿಶಂಕರ್ ಪ್ರಸಾದ್ ಅವರು ದಲಿತರು ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದಲ್ಲಿ ಅಂತವರಿಗೆ ಇನ್ನು ಯಾವುದೇ ಮೀಸಲಾತಿ ಸೌಲಭ್ಯ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದಾಗ ಬಹಳ ವರ್ಷಗಳಿಂದ ಕಾಡುತ್ತಿದ್ದ ಜಿಜ್ಞಾಸೆಗೆ ಮುಕ್ತಿ ಕೊಟ್ಟಿತು ಎಂದರೂ ತಪ್ಪಾಗಲಾರದು.

ರಾಜ್ಯಸಭೆಯಲ್ಲಿ ಹಾಗೆಯೇ ಉತ್ತರವನ್ನು ಮುಂದುವರಿಸಿ ಮತಾಂತರ ಹೊಂದಿದ ದಲಿತರು, ಮೀಸಲು ಕ್ಷೇತ್ರದಿಂದ ಲೋಕಸಭೆ ಅಥವಾ ವಿಧಾನ ಸಭೆಗೆ ಸ್ಪರ್ಧಿಸಲು ಅವಕಾಶವಿಲ್ಲ ಹಾಗೂ ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಪಡೆಯುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಬೆನ್ನಲ್ಲೇ, ಸಂವಿಧಾನದ ಆದೇಶದ ಪ್ಯಾರಾ 3ರ ಪ್ರಕಾರ ಹಿಂದೂ, ಸಿಖ್, ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮವನ್ನು ಒಪ್ಪಿಕೊಳ್ಳುವವರು ಪರಿಶಿಷ್ಟ ಜಾತಿ ಸದಸ್ಯ ಎನಿಸಿಕೊಳ್ಳುವುದಿಲ್ಲ ಎಂದು ಹೇಳಿದದ್ದು ಸ್ವಲ್ಪ ಸರಾಗವಾಗಿ ಪಾಯಸ ಕುಡಿಯುತ್ತಿದ್ದಾಗ ಗಂಟಲು ಸಿಕ್ಕಿಕೊಂಡ ಅನುಭವದ ಹಾಗಾಯ್ತು.

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವ ದಲಿತರು ಹಾಗೂ ಹಿಂದೂ, ಸಿಖ್ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ದಲಿತರ ನಡುವೆ ವ್ಯತ್ಯಾಸವಿದೆ ಎಂದು ಯಾವ ಭಾವನೆಯಿಂದ ಹೇಳಿದರು ಎಂದು ಅರ್ಥವಾಗಲಿಲ್ಲ. ಬಹುಶಃ ಸಿಖ್ ಮತ್ತು ಬೌದ್ಧ ಧರ್ಮದ ಮೂಲ ಭಾರತವೇ ಆಗಿರುವುದರಿಂದ ಮತ್ತು ಹಿಂದೂ ಧರ್ಮಕ್ಕೆ ಸಾಮ್ಯವಿರುವುದರಿಂದ ಅವುಗಳಿಗೆ ವಿನಾಯಿತಿ ಕೊಟ್ಟಿರಬಹುದು.

ಈಗ ಕಾಲ ಬದಲಾಗಿದೆ. ಹಿಂದೂ ಅಂತ ಹೇಳಿಕೊಳ್ಳುವುದೇ ಅವಮಾನ ಎಂದು ಧರ್ಮವನ್ನು ಧಿಕ್ಕರಿಸಿ ಬೌದ್ಧ ಮತಕ್ಕೆ ಮತಾಂತರವಾದರೂ ಮೂಲ ಹಿಂದೂ ಧರ್ಮದ‌ ದಲಿತ‌ ಮೀಸಲಾತಿಯನ್ನು ಅನುಭವಿಸುವವರು ಧರ್ಮದ್ರೋಹಿಗಳಲ್ಲವೇ?

ಕರ್ನಾಟಕದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದುಗಳು ಬೌದ್ಧ ಧರ್ಮಕ್ಕೆ ಮತಾಂತರವಾಗಿರುವ ಮತ್ತು ಬೌದ್ಧ ದರ್ಮಕ್ಕೆ ಮತಾಂತರವಾಗಿಯೂ, ಹಿಂದೂ ದಲಿತ ಮೀಸಲಾತಿಯಂತೆ ಸಕಲ ಸೌಲಭ್ಯಗಳನ್ನು ಪಡೆದು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಮೆರೆಯುತ್ತಿರುವುದರ ಅರಿವಾಗುತ್ತಿಲ್ಲವೇ ಎಂದು ಗೊಂದಲ ಮೂಡುತ್ತಿದೆ.

ಮೂಲತಃ ಕೊಡವ ಜನಾಂಗದ ಶ್ರೀಮತಿ ಪ್ರೇಮ ಕಾರ್ಯಪ್ಪ ಕಾಂಗ್ರೇಸ್ಸಿನ ಮಹಾನಗರ ಸಭಾ ಸದಸ್ಯೆಯಾಗಿ ನಂತರ ಬೆಂಗಳೂರು ಮೇಯರ್ ಆಗಿದ್ದಲ್ಲದೇ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯೂ ಆಗಿದ್ದವರು, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಅಲ್ಪಸಂಖ್ಯಾತರ ಕೋಟಾ ಮೀಸಲಾತಿ ಪಡೆಯುವ ಸಲುವಾಗಿ ಬೌದ್ಧ ಧರ್ಮಕ್ಕೆ ಮತಾಂತರವಾಗುವ ಮೂಲಕ ನಿಜವಾಗಿಯೂ ಅಲ್ಪ ಸಂಖ್ಯಾತ ಬೌದ್ಧರಿಗೆ ಸಿಗಬೇಕಾಗಿದ್ದ ಮೀಸಲಾತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದು ಹಚ್ಚ ಹಸಿರಾಗಿರುವಾಗಲೇ ಬಿಜೆಪಿಯಿಂದ ಒಮ್ಮೆ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದ ಶ್ರೀಮತಿ ವೈದೇಹಿಯವರ ಸ್ವಕ್ಷೇತ್ರ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಾಗ ಅದರ ಲಾಭವನ್ನು ಪಡೆಯಲು ಪ್ರೇಮ ಕಾರ್ಯಪ್ಪನವರನ್ನೇ ಅನುಸರಿಸಿ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರೂ ವಿವಿಧ ಕಾರಣಗಳಿಂದಾಗಿ ಚುನಾವಣೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

ಇನ್ನು 9 ಬಾರಿ ದಲಿತರ ಗುರುಮಿಟ್ಕಲ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಲ್ಲದೇ ಒಂದು ಬಾರಿ ಗುಲ್ಬರ್ಗಾ ಮೀಸಲು ಲೋಕಸಭಾ ಕ್ಷೇತ್ರದ ಸಾಂಸದರಾಗಿಯೂ ಪ್ರಸ್ತುತ ರಾಜಸಭೆಯ ಕಾಂಗ್ರೇಸ್ ನಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಮತ್ತು ಗುರುಮಿಟ್ಕಲ್ ಎರಡು ಬಾರಿ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಸಹಾ ರಾಜಕೀಯವಾಗಿ ಹಿಂದೂ ದಲಿತರಾದರೂ, ಹಿಂದೂ ಧರ್ಮವನ್ನು ಧಿಕ್ಕರಿಸಿ ಬೌದ್ಧ ಧರ್ಮಕ್ಕೆ ಮತಾಂತರವಾದವರೇ ಆಗಿರುವುದು ವಿಪರ್ಯಾಸವೇ ಸರಿ.

ನನ್ನ ಜೊತೆಯಲ್ಲಿಯೇ ಸಹಪಾಠಿಗಳಾಗಿದ್ದ ಕ್ರೈಸ್ತರು ಸಹಾ ದಲಿತ ಮೀಸಲಾತಿಯಡಿಯಲ್ಲಿ ಇಂಜಿನೀಯರ್ ಮತ್ತು ಡಾಕ್ಟರ್ ಸಹಾ ಆಗಿ ಉನ್ನತ ಪದವಿಯನ್ನು ಅನುಭವಿಸುತ್ತಿದ್ದಾರೆ. ನಮ್ಮ ಮನೆ ಕಟ್ಟಲು ಗುಲ್ಬರ್ಗಾ ಕಡೆಯಿಂದ ಬಂದಿದ್ದ ಕೂಲಿ ಆಳುಗಳು ದಲಿತರಾಗಿದ್ದರೂ ಕ್ರೈಸ್ತರಾಗಿ ಮತಾಂತರವಾಗಿದ್ದ ಕಾರಣ ಆಯುಧ ಪೂಜೆಯಲ್ಲಿ ಭಾಗವಹಿಸದೇ ದೂರ ಉಳಿದಿರುವಂತಹ ಪ್ರಸಂಗಗಳನ್ನು ಕಣ್ಣಾರೆ ಕಂಡಿದ್ದೇನೆ.

ಇವೆಲ್ಲವೂ ನನ್ನ ಸೀಮಿತ ಜ್ಞಾನದಲ್ಲಿ ತಿಳಿದಿರುವ ವಿಷಯಗಳಷ್ಟೇ. ಖಂಡಿತವಾಗಿಯೂ ದೇಶಾದ್ಯಂತ ಇಂತಹ ಲಕ್ಷಾಂತರ ವ್ಯಕ್ತಿಗಳು ಮೀಸಲಾತಿಯ ದುರುಪಯೋಗ ಪಡೆದುಕೊಂಡಿರುವುದಂತೂ ಸತ್ಯ. ಹಾಗಾಗಿ, ಈ ಕಾಯ್ದೆ, ಕೇವಲ ಕ್ರೈಸ್ತ ಮತ್ತು ಮುಸಲ್ಮಾನರಿಗಷ್ಟೇ ಮೀಸಲಾಗಿಡದೇ ಹಿಂದೂ ಧರ್ಮ ದಲಿತರು ಯಾವುದೇ ಹಿಂದೂಯೇತರ ಧರ್ಮಕ್ಕೆ ಮತಾಂತರ ಹೊಂದಿದ್ದರೆ, ಅಂತಹವರಿಗೆ ದಲಿತ ಮೀಸಲಾತಿ ದೊರೆಯದಂತೆ ನೋಡಿಕೊಳ್ಳುವ ಜವಾಬ್ಧಾರಿ ಸರ್ಕಾರದ್ದೇ ಆಗಿದೆ.

ಕೆಲಸಕ್ಕೆ ಕರೀಬೇಡಿ‌ ಊಟಕ್ಕೆ ಮರೀಬೇಡಿ ಅನ್ನುವ ಇಂತಹವರಿಂದಾಗಿಯೇ ನಿಜವಾದ ದಲಿತರು ಇಂದಿಗೂ ಯಥಾಸ್ಥಿತಿಯಲ್ಲಿಯೇ ಇದ್ದಾರೆ. ಈ ಖೂಳರು ಮಾತ್ರಾ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹತ್ತಾರು‌ ತಲೆಮಾರುಗಳಿಗೆ ಆಗುವಷ್ಟು ಆಸ್ತಿಯನ್ನು ಮಾಡಿ‌ ಮೆರೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಅಲ್ಲವೇ?

ನಾನೊಬ್ಬ ಹಿಂದೂ ಎಂದು ಗರ್ವದಿಂದ ಹೇಳಿಕೊಳ್ಳಲು ಅವಮಾನ ಎಂದು ತಮ್ಮ ರಾಜಕೀಯ ತೆವಲಿಗೆ ಅನ್ಯ ಮತಕ್ಕೆ ಮತಾಂತರಗೊಂಡವರಿಗೇಕೆ ಹಿಂದೂ ದಲಿತರ ಮೀಸಲಾಗಿ ಸೌಲಭ್ಯ ಕೊಡಬೇಕು?ಬದಲಾವಣೆ ಜಗದ ನಿಯಮ. ಅದರಂತೆ ಈ‌ ಕಾನೂನು ದುರುಪಯೋಗ ಆಗುತ್ತಿರುವುದನ್ನು ಈಗಲೂ ತಡೆದು, ನಿಜವಾದ ಹಿಂದೂ ದಲಿತರಿಗೆ ಅನುಕೂಲ ಆಗುವಂತಾಗಲಿ ಎನ್ನುವದಷ್ಟೇ ಈ ಲೇಖನದ ಉದ್ದೇಶ.

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ದಲಿತರು ಮತ್ತು ಮತಾಂತರ

  1. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಎಲ್ಲಿಯವರೆಗೆ ನಮ್ಮಲ್ಲಿ ಜಾತಿ ಧರ್ಗಳು ಸಂಪೂರ್ಣವಾಗಿ ಸರ್ವನಾಶವಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ನಮ್ಮೆಲ್ಲರ ನಡುವೆ ಸಮಸಮಾಜವು ಜಾತ್ಯತೀತವಾಗಿ ಜನ್ಮತಾಳಲು ಸಾಧ್ಯವೇ ಇಲ್ಲ ಅಲ್ಲವೇ!

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    Liked by 1 person

  2. ಎಲ್ಲಿಯವರೆಗೆ ದರ್ಶನಿಕರು ಸಮ ಸಮಾಜದ ಆಡಳಿತಗಾರರು ಹೇಳುವಂತೆ ಪಂಚ ಮಂತ್ರಗಳು ಪಂಚಮಯಗಳು ಪಂಚಮೌಲ್ಯಗಳು ರತ್ನತ್ರಯಗಳು ಹೇಳುವಂತೆ ಜಾತ್ಯಾತೀತ ವರ್ಗತೀತ ಧರ್ಮತೀತ ವರ್ಣತೀರ್ಥ ಸಮಾಜವು ಜನ್ಮ ತಾಳಿ ನಾವು ನಾವೆಲ್ಲರೂ ಒಂದಾಗಿ ಚೆನ್ನಾಗಿ ಕೂಡಿ ಕಲೆತು ಬೆರೆತು ಬಾಳಿ ಬದುಕುವುದಿಲ್ಲವೋ ಅಲ್ಲಿಯವರೆಗೂ ಈ ಅಸ್ಪೃಶ್ಯತಾ ಆಚರಣೆ ಅತ್ಯಾಚಾರ ಅನಾಚಾರ ದುರಾಚಾರ ದಬ್ಬಾಳಿಕೆ ದೌರ್ಜನ್ಯ ಹಿಂಸೆ ಕ್ರೌರ್ಯ ದುಷ್ಕೃತ್ಯ ಈ ಈ ಯಾವುದೂ ಶತಶತಮಾನಗಳು ಕಳೆದರೂ ಮನುಷ್ಯ ಮನುಷ್ಯನ ನಡುವೆ ಸಾಮರಸ್ಯ ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆ jayakumarcsj@gmail.com

    Like

Leave a comment