ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಕೆಲದಿನಗಳ ಹಿಂದೆ ಜಯನಗರದ ಕುರಿತಾಗಿ ತಿಳಿದುಕೊಂಡಿದ್ದೆವು. ಇಂದು ಅದೇ ಜಯನಗರಕ್ಕೇ ಹೊಂದಿಕೊಂಡೇ ಇರುವಂವಹ ಜಗತ್ಪ್ರಸಿದ್ದವಾದ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಇತಿಹಾಸದ ಬಗ್ಗೆ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಇತಿಹಾಸವನ್ನು ಈ ವೀಡಿಯೂ ಮೂಲಕವೂ ತಿಳಿಯಬಹುದಾಗಿದೆ

ಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿ ಅಥವಾ ಊರಿಗೆ ಹೋದಾಗ ಆ ಊರಿನ ಮುಂಭಾಗದಲ್ಲೇ ಅಂಜನಿ ಪುತ್ರ ಆಂಜನೇಯ ಸ್ವಾಮಿಯ ದೇವಾಲಯವನ್ನು ನೋಡುತ್ತೇವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ವಾಯುಪುತ್ರ, ಪ್ರಭು ಶ್ರೀ ರಾಮನ ಪರಮಭಕ್ತ ರಘುವೀರ ಸಮರ್ಥ ಬಹಳ ವಿಶಿಷ್ಠವಾದ ಸ್ಥಾನಮಾನವನ್ನು ಗಳಿಸಿರುವ ದೇವರು ಎಂದರು ತಪ್ಪಾಗಲಾರದು. ಮಹಾನ್ ಶಕ್ತಿವಂತ ಎಂದೇ ಪ್ರಖ್ಯಾತನಾದ ಆಂಜನೇಯಸ್ವಾಮಿಯ ದೇವಾಲಯವಿದ್ದಲ್ಲಿ ಆತ ದುಷ್ಟರಿಂದ ತಮ್ಮ ಊರುಗಳನ್ನು ಸದಾಕಾಲವೂ ಕಾಯುತ್ತಾನೆ ಎಂಬ ನಂಬಿಕೆ ಇರುವ ಕಾರಣ ಬಹುತೇಕ  ಊರುಗಳಲ್ಲಿ ಇಂದಿಗೂ ಊರ ಮುಂಬಾಗಲಿನಲ್ಲಿ ಆಂಜನೇಯನ ಗುಡಿಗಳನ್ನೋ ಇಲ್ಲವೇ ಬೃಹತ್ತಾದ ಆಂಜನೇಯನ ವಿಗ್ರಹಗಳನ್ನು ಕಾಣಬಹುದಾಗಿದೆ.

ಹೀಗೆ ಹೊಸಾ ಹೊಸಾ ಬಡಾವಣೆ ಜಯನಗರ  ಬೆಳೆಯುತ್ತಿದ್ದಂತೆಯೇ ಅದರ ಅಕ್ಕ ಪಕ್ಕದಲ್ಲೇ ಹೊಲಗದ್ದೆ ಇದ್ದ ಪ್ರದೇಶಗಳೂ ನೋಡ ನೋಡುತ್ತಿದ್ದಂತೆಯೇ ಕೆಲವೇ ವರ್ಷಗಳಲ್ಲಿ ಬಡಾವಣೆಗಳಾಗಿ ಮಾರ್ಪಟ್ಟವು. ಇದೇ ರೀತಿ ಅರವತ್ತರ ದಶಕಗಳಲ್ಲಿ ಮಾರೇನ ಹಳ್ಳಿ, ಬಲಭಾಗಕ್ಕೆ ಸಾರಕ್ಕಿ, ಮುಂದೆ ತಾಯಪ್ಪನ ಹಳ್ಳಿ, ಅದರ ಪಕ್ಕದಲ್ಲಿ ಗುರಪ್ಪನ ಪಾಳ್ಯ – ಹೀಗೆ ಹೆಚ್ಚು ರಾಗಿ ಬೆಳೆಯುತ್ತಿದ್ದ ಗ್ರಾಮೀಣ ಪ್ರದೇಶಗಳೆಲ್ಲವೂ ಸೇರಿಕೊಂಡು ಜಯನಗರದ ಒಂಭತ್ತನೆಯ ಬಡಾವಣೆಯಾಗಿ ಸೇರ್ಪಡೆಯಾಗಿ ಹೋಯಿತು. ಆದರೆ ತಾಯಪ್ಪನ ಹಳ್ಳಿಯ ಜನರು ಮಾತ್ರ ತಮ್ಮ ಬಡಾವಣೆ ತಮ್ಮನ್ನು ಚೆನ್ನಾಗಿ ಪೋಷಿಸಿದ ತಾಯಪ್ಪನವರ ಹೆಸರನ್ನೇ ಇಡಬೇಕೆಂದು ಆಗ್ರಹಿಸಿದ ಕಾರಣ, ಜಯನಗರ ಟಿ ಬ್ಲಾಕ್ ಆಗಿ ಹಾವೂ ಸಾಯಬಾರದು ಕೋಲು ಮುರಿಯಬಾರದು ಎಂಬಂತಾಯಿತು.

1969 ರಲ್ಲಿ ಅಲ್ಲೊಂದು ದೊಡ್ಡ ಗುಡ್ಡ ಅದರ ಪಕ್ಕದಲ್ಲಿಯೇ ಒಂದು ಅಂಟಿಕೊಂಡು ಇದ್ದ 3 ಬೃಹತ್ ಬಂಡೆಗಳು ಅಲ್ಲಿದ್ದವು. ಮಕ್ಕಳು ಗುಡ್ಡದ ತಳದಲ್ಲಿ ಆಟವಾಡುತ್ತಿದ್ದರೆ, ಇನ್ನೂ ಕೆಲ ಯುವಕರು ಆ ಗುಡ್ದ ಏರಿ ಇಳಿಯುವ ಸಾಹಸ ಮಾಡುತ್ತಿದ್ದರು. ಇಂತಹ ಗುಡ್ಡಕ್ಕೆ ಕಣ್ಣು ಹಾಕಿದ ಕ್ರಿಶ್ಚಿಯನ್ನರು ಅಲ್ಲೊಂದು ಚರ್ಚ್ ನಿರ್ಮಿಸಲು ಹೊಂಚು ಹಾಕುತ್ತಿದ್ದರೆ, ಮುಸ್ಲಿಮರು ಇಲ್ಲೊಂದು ನಮಾಜ್ ಮಿನಾರ್ ನಿರ್ಮಿಸಿ ಜಾಗಾ ಕಬ್ಜಾ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎಂದು ಯೋಚನೆ ಮಾಡುತ್ತಿರುವುದನ್ನು ತಿಳಿದುಕೊಂಡ ಸ್ಥಳೀಯ ಹಿಂದೂಗಳು ಅದೊಂದು ಶುಭ ದಿನದಂದು ಆ ಗುಡ್ದದ ಮೇಲೊಂದು ದಿಢೀರ್ ಎಂದು ಸಣ್ಣ ಆಂಜನೇಯನ ವಿಗ್ರಹವನ್ನು ಸ್ಥಾಪಿಸಿ ಆ ಜಾಗದ ಮೇಲೆ ತಮ್ಮ ಹಕ್ಕನ್ನು ಪ್ರತಿಷ್ಠಾಪಿಸಿಯೇ ಬಿಟ್ಟರು.

ಆದಾಗಲೇ ಮೈಸೂರು ಹೌಸಿಂಗ್ ಬೋರ್ಡ್ ಇಲ್ಲಿ ಮನೆಗಳನ್ನು ಕಟ್ಟಿಸಿ ಹಂಚಿಕೆ ಮಾಡಿದ್ದ ಕಾರಣ ಸರ್ಕಾರಿ, ಸಾರ್ವಜನಿಕ ವಲಯದ ಕಾರ್ಖಾನೆ ಹಾಗೂ ಬ್ಯಾಂಕುಗಳು ಮತ್ತು ಇನ್ಶ್ಯೂರೆನ್ಸ್ ಕಂಪನಿಗಳಲ್ಲಿ ಕೆಲಸಮಾಡುತ್ತಿದ್ದವರಲ್ಲದೇ, ಹೆಚ್.ಎ.ಎಲ್. ಹಾಗೂ ಮೈಕೋ ಕಂಪನಿಗಳ ಕೆಲಸಗಾರರೂ ಅದಾಗಲೇ ಅಲ್ಲಿ ಮನೆಗಳನ್ನು ಮಾಡಿದ್ದರು. ಈ ಮೂಲಕವಾದರೂ ತಮ್ಮ ಅವಶ್ಯಕತೆಗೆ ಒಂದು ಧಾರ್ಮಿಕ ಶ್ರದ್ಧಾ ಆರಂಭವಾಯಿತಲ್ಲಾ ಎಂದು ಸಂತೋಷ ಪಟ್ಟು ಈ ರಾಗಿಗುಡ್ಡದ ಮೇಲಿದ್ದ ಮೂಲ ಆಂಜನೇಯನ ವಿಗ್ರಹಕ್ಕೆ ವ್ಯವಸ್ಥಿತವಾಗಿ ಪೂಜೆ ಪುನಸ್ಕಾರಗಳನ್ನು ನಡೆದುಕೊಂಡು ಅನುಕೂಲ ಮಾಡಿಕೊಡುವ ಮೂಲಕ ಆಲ್ಲೊಂದು ಶಾಶ್ವತವಾದ ಪುಟ್ಟ ದೇವಸ್ಥಾನ ನಿರ್ಮಾಣವಾಯಿತು.

ಈ ಗುಡ್ಡಕ್ಕೆ ರಾಗಿಗುಡ್ಡ ಎಂದು ಹೆಸರು ಬರಲು ಸಹಾ ಒಂದು ದಂತಕಥೆಯಿದೆ. ಬಹಳ ಹಿಂದೆ ಆ ಜಾಗದಲ್ಲೆಲ್ಲಾ ಹೇರಳವಾಗಿ ರಾಗಿ ಬೆಳೆದು ಕಣ ಮಾಡಿ ಗುಡ್ಡದ ಎತ್ತರೆತ್ತರಕ್ಕೆ ರಾಗಿಯ ರಾಶಿಯನ್ನು ಹಾಕುತ್ತಿದ್ದರಂತೆ. ಹಾಗೆ ರಾಗಿಯನ್ನು ಹೇರಿದ್ದ ಕಣದ ಬಳಿ ಭಿಕ್ಷೆಗೆ ಬಂದ ಮೂರು ಭೈರಾಗಿಗಳಿಗೆ ಸೊಸೆಯೊಬ್ಬಳು ಯಥೇಚ್ಛವಾಗಿ ರಾಗಿಯನ್ನು ದಾನ ಮಾಡಿದಳಂತೆ, ಸೊಸೆ ದನರಾಳಿಯಾಗಿ ದಾನ ಮಾಡಿದ್ದಕ್ಕೆ ಅವಳ ಅತ್ತೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಕೋಪ ಗೊಂಡ ಅ ಭೈರಾಗಿಗಳು ಈ ರಾಗಿಯ ರಾಶಿ ಗುಡ್ಡವಾಗಲಿ ಎಂದು ಶಪಿಸಿದ್ದಲ್ಲದೇ, ತಾವೂ ಸಹಾ ಅಲ್ಲಿಯೇ ಕಲ್ಲಾಗಿ ಹೋದರಂತೆ ಹಾಗಾಗಿ ಅಲ್ಲೊಂದು ದೊಡ್ಡ ಗುಡ್ಡ ಅದರ ಕೆಳಗಡೆಯೇ 3 ದೊಡ್ಡ ಗಾತ್ರದ ಕಲ್ಲಿನ ಬಂಡೆ ಇಂದಿಗೂ ಕಾಣಬಹುದಾಗಿದೆ. ಹೀಗೆ ರಾಗಿಯ ರಾಶಿ ಗುಡ್ಡವಾಗಿ ಪರಿವರ್ತನೆಯಾದ ಕಾರಣ ಅದನ್ನು ಅಲ್ಲಿಯ ಜನರು ರಾಗಿಗುಡ್ಡ ಎಂದೇ ಕರೆಯಲಾರಂಭಿಸಿದರು.

ಇಂತಹ ರಾಗಿಗುಡ್ಡದ ಮೇಲೆ ನಿರ್ಮಾಣವಾದ ಹನುಮಂತನ ದೇವಸ್ಥಾನ 1972 ರಲ್ಲಿ ಅಧಿಕೃತವಾಗಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಎಂದು ನೋಂದಾವಣೆ ಮಾಡಿಸಿ ಅಲ್ಲಿ ಒಂದೊಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದಾಗ ಬಹುತೇಕ ಸ್ಥಳೀಯರು ತನ, ಮನ, ಧನ ಸಹಾಯದ ಜೊತೆಗೆ ಶ್ರಮದಾನದ ಮೂಲಕ ಅಲ್ಲೊಂದು ಸುಂದರವಾದ ದೇವಾಲಯ ನಿರ್ಮಾಣ ಮಾಡಿದ್ದಲ್ಲದೇ, ಗುಡ್ಡವನ್ನು ಸುಲಭವಾಗಿ ಹತ್ತುವ ಸಲುವಾಗಿ 108 ಮೆಟ್ಟಿಲುಗಳನ್ನೂ ನಿರ್ಮಿಸಲಾಯಿತು. ನೋಡ ನೋಡುತ್ತಿದ್ದಂತೆಯೇ ಕೆಲವೇ ವರ್ಷಗಳಲ್ಲಿ ಈ ದೇವಸ್ಥಾನದ ಖ್ಯಾತಿ ಎಲ್ಲಾ ಕಡೆಯಲ್ಲೂ ಹರಡಿತು. 1978ರ ಸಮಯದಲ್ಲಿ ಅಲ್ಲಿ ನಡೆಡ ವಿಶೇಷ ಹೋಮ ಹವನ ಕಾರ್ಯಕ್ರಮದಲ್ಲಿ ಸ್ವತಃ ನಾನೇ ಭಾಗಿಯಾಗಿದ್ದ ಸುಂದರವಾದ ಸವಿನೆನಪು ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿದೆ.

ಸುಮಾರು ಐದಾರು ಎಕರೆಯ ವಿಶಾಲವಾದ ಪ್ರದೇಶದಲ್ಲಿ ಭವ್ಯವಾಗಿ ತಲೆ ಎತ್ತಿದ್ದ ರಾಗೀ ಗುಡ್ಡದ ದೇವಸ್ಥಾನದ ಪ್ರಸಾದ ಮತ್ತು ಅಲ್ಲಿನ ಸ್ವಯಂಸೇವಕರ ಸೇವೆ ನಿಜಕ್ಕೂ ಅನನ್ಯ ಮತ್ತು ಅನುಕರಣೀಯ. ಅಂದಿನ ಕಾಲಕ್ಕೇ ಸಾವಿರಾರು ಜನರು ಸೇರಿದ್ದ ಆ ಕಾರ್ಯಕ್ರಮದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಪೂಜೆ ಪುನಸ್ಕಾರಗಳು, ಪ್ರಸಾದ ವಿತರಣೆ ಮತ್ತು ಎಲ್ಲದ್ದಕ್ಕಿಂತಲೂ ಮನಸ್ಸಿಗೆ ಹಿಡಿಸಿದ್ದು ಅಲ್ಲಿನ ಪಾದರಕ್ಷಣೆಯ ನಿರ್ವಹಣೆ. ಅಷ್ಟು ಜನರು ಸೇರಿರುವ ಸಮಾರಂಭದಲ್ಲಿ ಪಾದರಕ್ಷೆಗಳು ಕಳೆದುಹೋಗದಂತೆ ಮತ್ತು ಎಲ್ಲೆಂದರಲ್ಲಿ ಬಿಡದಂತೆ ಎಲ್ಲರಿಗೂ ಒಂದೊಂದು ಚೀಲದಲ್ಲಿ ಪಾದರಕ್ಷೆಗಳನ್ನು ಹಾಕಿಸಿ ಅವರಿಗೆ ಒಂದು ಟೋಕನ್ ನೀಡಿ, ದೇವರ ದರ್ಶನದ ನಂತರ ಟೋಕನ್ ಹಿಂದಿರುಗಿಸಿದಾಗ ಅವರಿಗೆ ಪಾದರಕ್ಷೆಗಳನ್ನು ಹಿಂದಿರಿಗಿಸುವಂತಹ ವ್ಯವಸ್ಥೆಯನ್ನು ಸಂಪೂರ್ಣವಾಗಿ, ಅದೂ ಉಚಿತವಾಗಿ ಅಂದೇ ಮಾಡಿ ತೋರಿಸಿ ಇಂದಿಗೂ ಉಳಿದೆಲ್ಲಾ ದೇವಸ್ಥಾನಗಳಿಗೆ ಮಾದರಿಯಾಗಿದ್ದಾರೆ ಎಂದರು ತಪ್ಪಾಗಲಾರದು.

ವರ್ಷಕಳೆದಂತೆಲ್ಲಾ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಅಗಣಿತವಾಗಿ ಅವರ ಸಕಾಲಿಕ ನೆರವಿನಿಂದಾಗಿ ಕೇವಲ ಮೂಲ ಆಂಜನೇಯ ಹಾಗೂ ಪ್ರವೇಶದ್ವಾರದ ಗಣೇಶ ವಿಗ್ರಹಗಳಷ್ಟೇ ಇದ್ದ ರಾಗಿಗುಡ್ಡದ ಆಂಜನೇಯ ದೇವಸ್ಥಾನದಲ್ಲಿ ಕಾಲಾಂತರದಲ್ಲಿ ಸೀತೆ, ಲಕ್ಷ್ಮಣರೊಡಗೂಡಿದ ಶ್ರೀರಾಮ, ಈಶ್ವರ ಲಿಂಗ, ಶ್ರೀ ರಾಜರಾಜೇಶ್ವರಿ, ಮಹಾವಲ್ಲಭ ಗಣಪತಿ, ನವಗ್ರಹಗಳ ದೇವಾಲಯಗಳು ಸೇರಿಕೊಂಡು ಅದು ದೇವಾಲಗಳ ಸಮುಚ್ಛಯವಾಯಿತು. ಅದರ ಜೊತೆ ದೊಡ್ಡದಾದ ಆಂಜನೇಯನ ವಿಗ್ರಹವೂ ಸ್ಥಾಪನೆಯಾಯಿತಲ್ಲದೇ, ವಯಸ್ಸಾದವರು ಮೆಟ್ಟಿಲುಗಳನ್ನು ಹತ್ತಲು ಕಷ್ಟ ಪಡುತ್ತಿದ್ದದ್ದನ್ನು ಗಮನಿಸಿ, ವಿದ್ಯುಚ್ಛಾಲಿತ ಲಿಫ್ಟ್ ಸಹ ಅಳವಡಿಸಲಾಗಿದೆ.

ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ನ ನೆರವಿನಿಂದಾಗಿ ದೇವಾಸ್ಥಾನದ ಸುತ್ತಮುತ್ತಲ ಜಾಗವೂ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಲಿಗೆ ಸೇರಿದ ನಂತರ ಸೇವಾ ಕಾರ್ಯಗಳು ಸುಗಮವಾಗಿ ಸಾಗಲು ಕೇವಲ ಹುಂಡೀ ಹಣವನ್ನೇ ನೆಚ್ಚಿಕೊಳ್ಳದೇ, ಆರ್ಥಿಕವಾಗಿ ಸ್ವಾಲಂಭಿಗಳಾಗಲೂ ದೇವಸ್ಥಾನದ ಪಕ್ಕದಲ್ಲಿಯೇ ಮಿನಿ ಹಾಲ್ ಮತ್ತು ಕಲ್ಯಾಣ ಮಂಟಪವನ್ನು ಕಟ್ಟಿ ಅದರ ಬಾಡಿಗೆಯನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಯಿತು. ಪ್ರತೀ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ, ಸಂಕಷ್ಟ ಹರ ಚತುರ್ಥಿಗಳಲ್ಲದೇ, ಡಿಸೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಹನುಮಜ್ಜಯಂತಿ, ರಾಮನವಮಿ ಮತ್ತು ಸಕಲ ಹಿಂದೂ ಹಬ್ಬಗಳ ಆಚರಣೆಯನ್ನು ಆರಂಭಿಸಲಾಯಿತು. ಸುತ್ತ ಮುತ್ತಲಿನ ಬಡ ಮಕ್ಕಳಿಗಾಗಿ ಪ್ರೌಢಶಾಲೆಯನ್ನು ಆರಂಭಿಸಲಾಯಿತಲ್ಲದೇ, ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರಂಭಿಸಿದ ಉಚಿತ ಸಂಜೆ ತರಗತಿಗಳು ಬಹಳ ಜನಪ್ರಿಯವಾಯಿತು. ಸುತ್ತಮುತ್ತಲಿನ ಜನರ ಆರೋಗ್ಯದ ದೃಷ್ಠಿಯಿಂದಾಗಿ ಮುಂಜಾನೆ ಹಾಗೂ ಸಂಜೆ ಯೋಗ ತರಗತಿಗಳ ಜೊತೆ ಉಚಿತವಾದ ಚಿಕಿತ್ಸಾಲಯಗಳು ಆರಂಭವಾದವು. ಆಸ್ತಿಕ ಭಕ್ತಮಹಾಶಯರ ಆಭೀಪ್ಸೆಯಂತೆ ಸಂಸ್ಕೃತ ಮತ್ತು ವೇದ ಪಾಠಗಳನ್ನು ಆರಂಭಿಸಿದ್ದಲ್ಲದೇ, ಸಂಜೆಯ ಸಮಯದಲ್ಲಿ ಧಾರ್ಮಿಕ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ದೇವಸ್ಥಾನಕ್ಕೆ ಬರುವ ಪ್ರತೀ ಭಕ್ತರಿಗೆ ಅತ್ಯಂತ ಶುಚಿರುಚಿಯಾದ ಪ್ರಸಾದವನ್ನು (ಅದರಲ್ಲೂ ಪುಳಿಯೋಗರೆ) ಹಂಚುತ್ತಾರಲ್ಲದೇ, ಶನಿವಾರ ಮಧ್ಯಾಹ್ನ ದಾಸೋಹದ ವ್ಯವಸ್ಥೆಯನ್ನೂ ಆರಂಭಿಸುವ ಮೂಲಕ ಇಂದು ಕೇವಲ ಒಂದು ದೇವಾಲಯವಾಗಿಲ್ಲದೇ, ಹಿಂದೂ ಆಸ್ತಿಕರ ಸಮಗ್ರ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆಯಾಗಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಮಕ್ಕಳೊಂದಿಗೆ ಈ ದೇವಸ್ಥಾನಕ್ಕೆ ಆಗಮಿಸಿದರೆ, ಮಕ್ಕಳ ಮನಸ್ಸಿಗೆ ಮುದ ನೀಡುವ ಹನುಮಾನ್ ಧಾರಾ ಅರ್ಥಾತ್ ನೀರಿನ ಕಾರಂಜಿ ಈ ದೇವಾಲಯಕ್ಕೆ ಒಂದು ಮೆರಗು ನೀಡುವುದಲ್ಲದೇ, ಸಂಜೆ ಹೊತ್ತಿನಲ್ಲಿ ಇದಕ್ಕೆ ಅಳವಡಿಸಿರುವ ವಿದ್ಯುತ್ ದೀಪಗಳು ಭಕ್ತರಿಗೆ ಉಲ್ಲಾಸವನ್ನು ಉಂಟು ಮಾಡುತ್ತದೆ. ಇನ್ನು ಅದರ ಮೇಲೆ ಇಡೀ ಗುಡ್ಡವನ್ನೇ ತನ್ನ ಹೆಗಲ ಮೇಲೆ ಹೊತ್ತಿಕೊಂಡಿರುವಂತಹ ಗರುಡನ ಪ್ರತಿಮೆ ನಿಜಕ್ಕೂ ನಯನ ಮನೋಹರವಾಗಿದೆ. ಅದರ ಪಕ್ಕದಲ್ಲಿಯೇ ಮಕ್ಕಳು ಆಟವಾಡುವಂತಹ ಜಾರುಬಂಡೆ, ಎತಂ-ಬೂತ ಮಕ್ಕಳಿಗೆ ಸಂತಸವನ್ನು ಮಾಡುತ್ತದೆ.

ಇಲ್ಲಿ ಇರುವ ಪರ್ಣ ಕುಟೀರ ವಿರಕ್ತಮಂದಿರವನ್ನು ಹೋಲುವಂತಹ ಸ್ಥಳವಾಗಿದೆ. ಯಜ್ಞ, ಯಾಗ, ಹೋಮ ಮತ್ತು ವಿಶೇಷ ಪೂಜೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಇಲ್ಲಿರುವ ಕೃತಕವಾದ ಸಣ್ಣ ಜಲಪಾತ, ಈ ಕುಟೀರ ಸೌಂದರ್ಯವನ್ನು ಹಚ್ಚಿಸುವುದಲ್ಲದೇ ನೈಸರ್ಗಿಕವಾದ ಹಿತಾನುಭವನ್ನು ಕೊಡುತ್ತದೆ.

ರಾಗಿಗುಡ್ಡ ಹೆಸರು ಬರಲು ಕಾರಣವಾದ ಕಥೆಯ ಅಂತ್ಯದಲ್ಲಿ ಆ ಮೂರು ಭೈರಾಗಿಗಳು ಕಲ್ಲು ಬಂಡೆಯಾದರು ಎಂದಿದೆಯಲ್ಲಾ ಅದೇ 32 ಅಡಿ ಎತ್ತರದ ಏಕಶಿಲೆಯ ಬಂಡೆಗಳಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರನ್ನು ಅತ್ಯಂತ ಸುಂದರವಾಗಿ ದೇವಸ್ಥಾನದ ಆಡಳಿತ ಮಂಡಲಿ ಕೆತ್ತಿಸಿದ್ದಾರೆ. ಬಹುಶಃ 32 ಅಡಿಗಳಷ್ಟು ಎತ್ತರದ ತ್ರಿಮೂರ್ತಿಗಳು ಒಂದೇ ವೇದಿಕೆಯಲ್ಲಿ ಒಟ್ಟಿಗೆ ರಾಗಿಗುಡ್ಡದಲ್ಲಿ ಮಾತ್ರ ಕಾಣಬಹುದಾಗಿದೆ ಎಂದರೂ ಅತಿಶಯವಲ್ಲ.

ದೇವಸ್ಥಾನಗಳಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ವಿಶೇಷ ಪೂಜೆಗಳನ್ನು ನಡೆಸುವ ಉದ್ದೇಶಕ್ಕಾಗಿ ಉತ್ತಮವಾದ ಸಭಾಂಗಣವನ್ನು ಅತ್ಯಂತ ಅಂದವಾಗಿ ಇಲ್ಲಿ ನಿರ್ಮಿಸಲಾಗಿದೆ.

ಈ ದೇವಾಲಯದ ಸಂಪೂರ್ಣ ನೀರಿನ ಅಗತ್ಯಗಳಿಗಾಗಿ ಒಂದು ಸುಂದರ ಪುಷ್ಕರಣಿಯನ್ನು ಇಲ್ಲಿ ಕಾಣಬಹುದಾಗಿದೆ.

ದೇವರಿಗೆ ಪ್ರತಿನಿತ್ಯವೂ ಅಭಿಷೇಕ ಮಾಡಲು ಹೊರಗಿನಿಂದ ಹಾಲನ್ನು ತರಿಸುವ ಬದಲು ಇಲ್ಲಿಯೇ ಸುಮಾರು 30 ಕ್ಕೂ ಹೆಚ್ಚು ಹಸುಗಳಿರುವ ಗೋಶಾಲೆಯನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿರುವ ದೇಶೀ ತಳಿಗಳ ಹಸುಗಳ ಹಾಲನ್ನು ದೇವರ ಅಭಿಷೇಕಕ್ಕೆ ಬಳಸಲಾಗುವುದಲ್ಲದೇ ಹೆಚ್ಚಿನ ಹಾಲನ್ನು ಶಿಶುವಿಹಾರದ ಮಕ್ಕಳಿಗೆ ಕುಡಿಯಲು ಕೊಡಲಾಗುತ್ತದೆ. ಒಟ್ಟಿನಲ್ಲಿ ಕಳೆದ ಐವತ್ತು ವರ್ಷಗಳ ಹಿಂದೆ ಸಣ್ಣದಾಗಿ ಕಟ್ಟಲಾದ ದೇವಸ್ಥಾನ ಇಂದು ಇಡೀ ಪ್ರದೇಶವನ್ನೆಲ್ಲಾ ಹರಡಿಕ್ಕೊಂಡು ಒಂದು ರೀತಿಯ ಹೈಟೆಕ್ ದೇವಸ್ಥಾನವಾಗಿ ಮಾರ್ಪಾಟಾಗಿರುವುದು ಗಮನಾರ್ಹವಾಗಿದೆ.

ಈ ದೇವಾಲಯ ಇಷ್ಟರ ಮಟ್ಟಿಗೆ ಶ್ರೇಯೋಭಿವೃದ್ಧಿಯನ್ನು‌ ಕಾಣಲು ಹೆಬ್ಬೂರಿನ, ಶ್ರೀ ಕಾಮಾಕ್ಷೀ ಶಾರಾದಾಂಬಾ ಪೀಠದ ನಿಕಟಪೂರ್ವ ಗುರುಗಳಾದ ಶ್ರೀ ಶ್ರೀ ಶ್ರೀ ನಾರಾಯಣಾಶ್ರಮ ಸ್ವಾಮೀಜಿಗಳ ಕೊಡುಗೆ ಅಪಾರ ಎಂದರೂ ತಪ್ಪಾಗಲಾರದು. ಪೂರ್ವಾಶ್ರಮದಲ್ಲಿ ಗಣಪತಿ ಸೋಮಯಾಜಿಗಳಾಗಿದ್ದ ಶ್ರೀಯುತರು ಈ ದೇವಾಲಯದ ಪ್ರಧಾನ ಅರ್ಚಕರಾಗಿ ಬಹಳ ವರ್ಷಗಳ ಕಾಲ ಭಗವಂತನ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ನಗರದಿಂದ ಇಲ್ಲಿಗೆ ಬರಲು ಅನೇಕ ಬಸ್ ಸೌಕರ್ಯಗಳು ಇಲ್ಲಿದೆಯಲ್ಲದೇ, ಜಯನಗರ ಬಸ್ ನಿಲ್ದಾಣದಿಂದ ಆಟೋನಲ್ಲಿ ಬಂದರೆ ಮಿನಿಮಮ್ ಚಾರ್ಚ್ ಅಗುವಷ್ಟು ಹತ್ತಿರದಲ್ಲಿದೆ.

ವಿಶೇಷ ದಿನಗಳ ಹೊರತಾಗಿ ಪ್ರತಿದಿನವೂ ದೇವಾಲಯವು
ಬೆಳಿಗ್ಗೆ 08: 00-11: 30 ರ ವರೆಗೆ ಮತ್ತು ಸಂಜೆ 05: 00-08: 30 ರಿಂದ ತೆರೆದಿರುತ್ತದೆ
ಶನಿವಾರ ಮತ್ತು ಭಾನುವಾರ ಕ್ರಮವಾಗಿ ಮಧ್ಯಾಹ್ನ 12:30 ಮತ್ತು ರಾತ್ರಿ 09:00 ರವರೆಗೆ ತೆರೆದಿರುತ್ತದೆ.

ಬೆಳಿಗ್ಗೆ 11:00 ರಿಂದ 11: 30 ರ ವರೆಗೆ
ಸಂಜೆ 08: 00 ರಿಂದ 08: 30 ರ ವರೆಗೆ ಮಹಾಮಂಗಳಾರತಿ ಮಾಡಲಾಗುತ್ತದೆ.

ಇಷ್ಟೆಲ್ಲಾ ರೋಚಕವಾದ ಮಾಹಿತಿಗಳು ಸಿಕ್ಕ ಮೇಲೆ ಇನ್ನೇಕ ತಡಾ ಸ್ವಲ್ಪ ಸಮಯ ಮಾಡಿಕೊಂಡು ರಾಗಿಗುಡ್ಡದ ಪ್ರಸನ್ನ ವೀರಾಂಜನೇಯ ದೇವಾಲಯಕ್ಕೆ ಭೇಟಿ ನೀಡಿ, ಹನುಮಂತನ ಆದಿಯಾಗಿ ಸಕಲ ದೇವರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

  1. ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಡುವ ಮೂಲಕ ತಿಲಿಯಬಯಸುವ ಆಸ್ತಿಕ ಬಂದೂಗಳಿಗೆ ಹೆಚ್ಚು ಉಪಯುಕ್ತ ಮಾಹಿತಿಯನ್ನು ತಿಳಿಯಬಡಿಸಿದ ಶ್ರೀ ಕಂಠ ಅಣ್ಣ ನಿಗೆ ಧನ್ಯವಾದಗಳು.

    1983-1985 ರಲ್ಲಿ ನಮ್ಮ ತಂದೆ ಅರಕೆರೆ ಮೈ,ಕೋ ಲೇಔಟ್ ನಲ್ಲಿ ಮನೆ ಕಟ್ಟಲು ಪ್ರರಂಭ ಮಾಡಿದರು.

    ಬೆಂಗಳೂರು ಹಾಗ ಇಷ್ಟು ಬೆಳಿದಿರಲ್ಲಿಲ್ಲ, ಡೈರಿ ಸರ್ಕಲ್ ನಿಂದ ಆಚೆಗೆ ‌‌ ಪ್ರರಂಭವಾದರೆ ನೀಲಗಿರಿ ಹಾಗೂ ಸಾರ್ವೆ ತೋಪು ಗಳು, ಮಧ್ಯೆ ಅಲ್ಲೋ ಇಲ್ಲೋ ಮನೆಗಳು ಹೊಸ ಕಟ್ಟಡ ನಿರ್ಮಾಣ, ಈಗಲೂ ನನಗೆ ನೆನಪಿದೆ ಜಿ.ಡಿ ಮರ ( ಜೆ.ಪಿ.ನಗರ ೩ ಹಂತ) ದಾಟಿದರೆ ಮುಂದೆ ಬರಿ ಹೊಲ ಗದ್ದೆಗಳು, ದ್ರಾಕ್ಷಿ ತೋಟ, ಮುಂತಾದವುಗಳು.

    ನಮ್ಮ ಮನೆಯಿಂದ ೩ ಕಿ.ಮೀ ದೂರದ ರಾಗಿಗುಡ್ಡದ ದೇವಾಲಯದ ಗೋಪುರ ಹಾಗೂ ಬಂಡೆ ಸ್ಪಷ್ಟವಾಗಿ ಕಾಣುತ್ತಿತ್ತು. ಈಗಾಗಿ ನನಗೆ ಕುತೂಹಲ.
    ದೂರದಿಂದ ಕಾಣುತ್ತಿದ್ದ ರಾಗಿಗುಡ್ಡ ದೇವಾಲಯ ಎಂದಿಗಾದರೂ ನಾನು ಅಲ್ಲಿಗೆ ಹೋಗಿ ನೋಡಬೇಕೆಂದು ಆಸೆ.
    ಆ ಆಸೆಯು ಫಲ ನನಗೆ ಈಡೇರಿತು, ಅಂದಿನಿಂದ ಇಂದಿನವರೆಗೂ ನನಗೆ ರಾಗಿಗುಡ್ಡ ದೇವಸ್ಥಾನ ಅನನ್ಯ ಸಂಬಂಧ ಹೊಂದಿದೆ, ಪ್ರಶಾಂತತೆ, ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಲ್ಲಿ ಬಿಡುವಿಲ್ಲದ ಕಾರ್ಯಕ್ರಮಳು ಕಾಣಬಹುದು.
    ರಾಗಿಗುಡ್ಡದ ಇನ್ನೊಂದು ವಿಶೇಷತೆ ಏನೆಂದರೆ ಅಲ್ಲಿ ಸಿಗುವ ಪ್ರಸಾದ ಅದರಲ್ಲೂ ಪುಳಿಯೊಗರೆ ಅಷ್ಟು ಚೆನ್ನಾಗಿ ರುತ್ತದೆ, ಅದು ಸಹ ಕೊಡುವವರು ಸಹ ಕೈ ತುಂಬಾ ಹಾಕಿ ಕೊಡುತ್ತಾರೆ, ಹಾಗೆಯೇ ಟಿಪನ್ ಕ್ಯಾರಿಯರ್ ತುಂಬಿಸಿ ಮನೆ ಮಂದಿಗೆ ಪ್ರಸಾದವನ್ನು ತೆಗೆದುಕೊಂಡು ಹೋಗುವವರು ಇದ್ದಾರೆ.
    ಎಷ್ಟೋ ಬಾರಿ ಅಲ್ಲಿ ಅನ್ಯ ಧರ್ಮೀಯರು ಪ್ರಸಾದ ಸ್ವೀಕರಿಸಿದ್ದು ನಾನು ನೋಡಿದ್ದೇನೆ.

    ಇನ್ನೊಂದು ವಿಶೇಷವಾಗಿ ಅಲ್ಲಿ ನೆಡೆಯುವ ಉಪನ್ಯಾಸಗಳು, ಅದರಲ್ಲೂ ಪ್ರಸಿದ್ಧ ಉಪನ್ಯಾಸಕರನ್ನು ಕರೆಸಿ ಉಪನ್ಯಾಸ ನೀಡಲು ಬರುತ್ತಾರೆ ಎಂದು ತಿಳಿದರೆ ಸಾಕು, ದೂರದಿಂದ ಉಪನ್ಯಾಸ ಕೇಳಲು ಅಧ್ಯಾತ್ಮಿಕ ಬಂದುಗಳು ಬರುತ್ತಾರೆ, ಅದರಲ್ಲೂ ಬನ್ನಂಜೆ ಗೋವಿಂದಾಚಾರ್ಯರು, ಶ್ರೀ ರಾಮಕೃಷ್ಣ ಮಠದ ಸ್ವಾಮಿಗಳು, ಉಡುಪಿ ಮಠದ ಸ್ವಾಮಿಗಳು, ಚಿನ್ಮಯ ನಂದ ಮಿಷನ್ ಸ್ವಾಮಿಗಳು , ಹೆಬ್ಬೂರಿನ ಸ್ವಾಮಿಗಳು, ಬೇಲಿ ಮಠದ ಸ್ವಾಮಿಗಳು ಹೀಗೆ ಹಲವಾರು ಗುರುಗಳು ಉಪನ್ಯಾಸಕ್ಕೆ ನೀಡಲು ಬರುತ್ತಾರೆ ಎಂದರೆ ಆ ದಿನ ಅಲ್ಲಿ ಕೂರಲು ಬಿಡಿ ನಿಲ್ಲಲು ಸಹ ಆಗುವುದಿಲ್ಲ. ಹಾಗೇಯೇ ವಿದ್ವಾಂಸರ, ಸಂಗೀತ ಪ್ರಿಯರಿಗೆ ಹಾಡುಗಳು ಯಾವುದಾದರೂ ಒಂದು ಕಾರ್ಯಕ್ರಮ ನಡೆಯುತ್ತದೆ.

    ಇಂದಿಗೂ ಸಹ ಉಪನ್ಯಾಸ ಮುಂದುವರೆದು ಆಸ್ತಿಕ ಭಕ್ತರು ಉಪನ್ಯಾಸ ಕೇಳಲು ಬರುತ್ತಾರೆ.

    ಹಿಂದೆ ಅಲ್ಲಿ ‌ನವರಾತ್ತಿಯ ಸಂದರ್ಭದಲ್ಲಿ ೯ ದಿನಗಳು ಸಹ ಹೋಮ ಹವನಗಳನ್ನು ದೂರದಿಂದಲ್ಲು ಋತ್ವಿಕರು ಆಗಮಿಸಿ ಕಾರ್ಯಕ್ರಮಗಳನ್ನು ಶ್ರದ್ಧೆಯಿಂದ ನಡೆಸುತ್ತಾರೆ. ಆ ಸಂದರ್ಭದಲ್ಲಿ ಎಲ್ಲಾ ಭಕ್ತರಿಗೂ ಅನ್ನ ಸಂತಪರ್ಣೆಯು ನೆಡೆಯುತ್ತದೆ,

    ಹಾಗೆಯೇ ಶ್ರಾವಣ ಮಾಸ, ಹನುಮಾನ್ ಜಯಂತಿ ಸಂದರ್ಭದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಕಾರ್ಯಗಳನ್ನು ನೆರೆವೆರುತ್ತದೆ.

    ಅಲ್ಲಿ ಅಕ್ಕಿಯ ರೂಪದಲ್ಲಿ ಸೇವೆಯು ಮಾಡುವ ಭಕ್ತರು ಅನ್ನಪೂರ್ಣಾ ವಿಗ್ರಹ ಕ್ಕೆ ಹಾಕುವ ಅಕ್ಕಿಯು , ಪ್ರತಿ ಶನಿವಾರದಂದು ಬರುವ ಎಲ್ಲಾ ಭಕ್ತರಿಗೆ ಊಟದ ಪ್ರಸಾದ ಸಿಗುತ್ತದೆ.

    ಸಂಜೆಯು ಶ್ರೀ ಆಂಜನೇಯಸ್ವಾಮಿ ಸನ್ನಿದಾನದಲ್ಲಿ ಭಕ್ರರು ಭಜನೆ ನಡೆಯುತ್ತದೆ.

    ಕಳೆದ ವರ್ಷ ನನ್ನ ತಮ್ಮನ ಮಗನಿಗೆ ಉಪನಯನವು ನಾವು ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಭಗವತ್ಕೃಪೆಯಿಂದ ನೆರೆವೆರಿತ್ತು, ಕಾರಣ ನನಗೆ ಬಾಲ್ಯದಿಂದಲೂ ಆ ಸನ್ನಿದಾನ ಒಂದು ರೀತಿಯಲ್ಲಿ ಅವಿನಾಭಾವದ ಸಂಬಂಧ.

    ಇತ್ತೀಚೆಗೆ ರಾಗಿಗುಡ್ಡದ ಸಮೀಪ ಅಪಾರ್ಟ್ಮೆಂಟ್, ಮಾಲ್ ಗಳು, ತಲೆ ಎತ್ತಿ ನಿಂತಿದೆ, ಆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊದಲಿನ ರೀತಿಯ ವಾತಾವರಣ ಮರೆಯಾಗಿ ಕಾಣಬಹುದು,

    ಏನೇ ಆದರೂ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯ ಭಕ್ತರಸಂಖ್ಯೆ ಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಾಣಬಹುದು.

    ಬೆಂಗಳೂರಿನ ಇಂದಿಗೂ ಸಹ ಆನೇಕ ಪ್ರಸಿದ್ಧ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗಾಲಿ ಆಂಜನೇಯಸ್ವಾಮಿ, ಮಹಾಲಕ್ಷ್ಮಿ ಲೇಓೌಟ ಪ್ರಸನ್ನ ಆಂಜನೇಯಸ್ವಾಮಿ, ಕಾರ್ಯ ಸಿದ್ದಿ ಆಂಜನೇಯ, ಬಾನಸವಾಡಿಯ ಆಂಜನೇಯ ಹೀಗೆ ಹಲವಾರು ಮಂದಿರಗಳು ಶನಿವಾರದಂದು ಆಂಜನೇಯಸ್ವಾಮಿಗೆ ತುಳಸಿ, ವಿಲೇದಲೆ, ಹೂವಿನ ಹಾಗೆ ವಡೆ ಅಲಂಕಾರ ‌ದಿಂದ ಸ್ವಾಮಿಯ ಸೇವೆ ಸಲ್ಲಿಸುತ್ತಾ ಭಕ್ತರ ಮನೋಭಿಷ್ಟ ಪ್ರಾರ್ಥನೆ ನೆರೆವೆರಿಸುತ್ತ, ಇಂದಿಗೂ ಸ್ವಾಮಿಯ ಚಿರಂಜೀವಿಯಾಗಿ ನಮ್ಮ ಎಲ್ಲಾರ ಪಾಲಿಗೆ ಸಂಜೀವನಿಯಾಗಿ ಶ್ರೀ ಆಂಜನೇಯಸ್ವಾಮಿ ಕೃಪ ಕಟಾಕ್ಷಾಕ್ಕೆ ಪಾತ್ರಾರಾಗೋಣ.

    ಜೈ ಶ್ರೀ ರಾಮ. 🙏🙏

    ಆಂಜನೇಯಸ್ವಾಮಿಯ ಮಹಿಮೆಯನ್ನು ತುಳಸಿದಾಸರು ತಮ್ಮ ಹನುಮಾನ್ ಚಾಲೀಸ ದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ.

    ಒಮ್ಮೆ ತಳಸಿದಾಸರ ಬಗ್ಗೆ ತಿಳಿದುಕೊಂಡು ಅಲ್ಲಿಯ ಮುಸ್ಲಿಂ ರಾಜ ತನ್ನ ಅರಮನೆಗೆ ಕರೆಯಿಸಿ ಕೋಂಡು ಚಮತ್ಕಾರ ಮಾಡಲು ಕೇಳಿದ, ಆದರೆ ತುಳಿಸಿದಾಸರು ಇದು ತನ್ನಿಂದ ಸಾದ್ಯವಿಲ್ಲ ಅದು ಶ್ರೀ ರಾಮನೇ ಮಾತ್ರ ಮಾಡಲು ಸಾಧ್ಯ ಎಂದು ತಿಳಿಸಿದಾಗ, ಕೋಪಗೊಂಡ ಆ ರಾಜನು ತುಳಸಿದಾಸರನ್ನು ತನ್ನ ಸೆರೆಮನೆಯಲ್ಲಿ ಕಳುಹಿಸಿದ, ೪೦ ದಿನಗಳ ಕಾಲ ತುಳಸಿದಾಸರು ಸೆರೆಮನೆಯಲ್ಲಿ ರಚಿತವಾದ ಹನುಮಾನ್ ಚಾಲಿಸ್ ವನ್ನು ಮುಗಿಸಿವ ಹಂತಕ್ಕೆ ತಲುಪಿತು, ಅಲ್ಲಿ ಎಲ್ಲೆಲ್ಲಿದೋ ವಾನರ ಸೇನಾ ಬಂದು ಅರಮನೆಯ ಸುತ್ತ ಮುತ್ತ ಸೈನಿಕರನ್ನು ಕಂಗಲಾಗಿ ದಿಕ್ಕ ಪಾಲಾಗಿ ಓಡಿದರು.

    ರಾಜನಿಗೆ ತನ್ನ ತಪ್ಪು ಅರಿವಾಗಿ ತುಳಿಸಿದಾಸರ ಹತ್ತಿರ ಬಂದು ಕ್ಷಮೆ ಕೇಳಿದ, ಈ ರೀತಿಯಲ್ಲಿ ಆಂಜನೇಯಸ್ವಾಮಿಯ ಶಕ್ತಿಯು ಅಪಾರ.

    ತುಳಸಿದಾಸರು ರಚಿಸಿದ ಹನುಮಾನ್ ಚಾಲೀಸಾ ದಲ್ಲಿ ಶ್ರೀ ಹರಿಯ ದಾಸ ನನೆಂದು ತಿಳಿಸುತ್ತಾರೆ.
    ಬನ್ನಿ ಒಮ್ಮೆ ಹನುಮಾನ್ ಚಾಲೀಸ್ ವನ್ನು ಪಠಣ ಮಾಡೋಣವಲ್ಲವೆ.

    ದೋಹಾ

    ಶ್ರೀ ಗುರು ಚರಣ ಸರೋಜ ರಜ
    ನಿಜಮನ ಮುಕುರ ಸುಧಾರಿ
    ವರಣೌ ರಘುವರ ವಿಮಲ ಯಶ
    ಜೋ ದಾಯಕ ಫಲಚಾರಿ!!

    ಬುದ್ಧಿಹೀನ ತನು ಜಾನಿಕೇ
    ಸುಮಿರೌ ಪವನಕುಮಾರ
    ಬಲ ಬುದ್ಧಿ ವಿದ್ಯಾ ದೇಹು ಮೋಹಿ
    ಹರಹು ಕಲೇಶ ವಿಕಾರ ||

    ದೋಹಾ

    ಶ್ರೀ ಗುರು ಚರಣ ಸರೋಜ ರಜ
    ನಿಜಮನ ಮುಕುರ ಸುಧಾರಿ
    ವರಣೌ ರಘುವರ ವಿಮಲ ಯಶ
    ಜೋ ದಾಯಕ ಫಲಚಾರಿ ||

    ಬುದ್ಧಿಹೀನ ತನು ಜಾನಿಕೇ
    ಸುಮಿರೌ ಪವನಕುಮಾರ
    ಬಲ ಬುದ್ಧಿ ವಿದ್ಯಾ ದೇಹು ಮೋಹಿ
    ಹರಹು ಕಲೇಶ ವಿಕಾರ ||

    ಚೌಪಾಈ-
    ಜಯ ಹನುಮಾನ ಜ್ಞಾನಗುಣಸಾಗರ |
    ಜಯ ಕಪೀಶ ತಿಹು ಲೋಕ ಉಜಾಗರ || ೧ ||

    ರಾಮದೂತ ಅತುಲಿತ ಬಲಧಾಮಾ |
    ಅಂಜನಿಪುತ್ರ ಪವನಸುತ ನಾಮಾ || ೨ ||

    ಮಹಾವೀರ ವಿಕ್ರಮ ಬಜರಂಗೀ |
    ಕುಮತಿ ನಿವಾರ ಸುಮತಿ ಕೇ ಸಂಗೀ || ೩ ||

    ಕಂಚನ ವರಣ ವಿರಾಜ ಸುವೇಶಾ |
    ಕಾನನ ಕುಂಡಲ ಕುಂಚಿತ ಕೇಶಾ || ೪ ||

    ಹಾಥ ವಜ್ರ ಔರು ಧ್ವಜಾ ವಿರಾಜೈ |
    ಕಾಂಧೇ ಮೂಂಜ ಜನೇವೂ ಸಾಜೈ || ೫ ||

    ಶಂಕರ ಸುವನ ಕೇಸರೀನಂದನ |
    ತೇಜ ಪ್ರತಾಪ ಮಹಾ ಜಗವಂದನ || ೬ ||

    ವಿದ್ಯಾವಾನ ಗುಣೀ ಅತಿಚಾತುರ |
    ರಾಮ ಕಾಜ ಕರಿವೇ ಕೋ ಆತುರ || ೭ ||

    ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
    ರಾಮ ಲಖನ ಸೀತಾ ಮನ ಬಸಿಯಾ || ೮ ||

    ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ |
    ವಿಕಟರೂಪ ಧರಿ ಲಂಕ ಜರಾವಾ || ೯ ||

    ಭೀಮರೂಪ ಧರಿ ಅಸುರ ಸಂಹಾರೇ |
    ರಾಮಚಂದ್ರ ಕೇ ಕಾಜ ಸಂವಾರೇ || ೧೦ ||

    ಲಾಯ ಸಂಜೀವನ ಲಖನ ಜಿಯಾಯೇ |
    ಶ್ರೀರಘುವೀರ ಹರಷಿ ವುರ ಲಾಯೇ || ೧೧ ||

    ರಘುಪತಿ ಕೀನ್ಹೀ ಬಹುತ ಬಡಾಯೀ |
    ತುಮ ಮಮ ಪ್ರಿಯ ಭರತ ಸಮ ಭಾಯೀ || ೧೨ ||

    ಸಹಸ ವದನ ತುಮ್ಹರೋ ಯಶ ಗಾವೈ |
    ಅಸ ಕಹಿ ಶ್ರೀಪತಿ ಕಂಠ ಲಗಾವೈ || ೧೩ ||

    ಸನಕಾದಿಕ ಬ್ರಹ್ಮಾದಿ ಮುನೀಶಾ |
    ನಾರದ ಶಾರದ ಸಹಿತ ಅಹೀಶಾ || ೧೪ ||

    ಯಮ ಕುಬೇರ ದಿಗಪಾಲ ಜಹಾಂ ತೇ |
    ಕವಿ ಕೋವಿದ ಕಹಿ ಸಕೇ ಕಹಾಂ ತೇ || ೧೫ ||

    ತುಮ ಉಪಕಾರ ಸುಗ್ರೀವಹಿ ಕೀನ್ಹಾ |
    ರಾಮ ಮಿಲಾಯ ರಾಜ ಪದ ದೀನ್ಹಾ || ೧೬ ||

    ತುಮ್ಹರೋ ಮಂತ್ರ ವಿಭೀಷಣ ಮಾನಾ |
    ಲಂಕೇಶ್ವರ ಭಯ ಸಬ ಜಗ ಜಾನಾ || ೧೭ ||

    ಯುಗ ಸಹಸ್ರ ಯೋಜನ ಪರ ಭಾನೂ |
    ಲೀಲ್ಯೋ ತಾಹಿ ಮಧುರ ಫಲ ಜಾನೂ || ೧೮ ||

    ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
    ಜಲಧಿ ಲಾಂಘಿ ಗಯೇ ಅಚರಜ ನಾಹೀ || ೧೯ ||

    ದುರ್ಗಮ ಕಾಜ ಜಗತ ಕೇ ಜೇತೇ |
    ಸುಗಮ ಅನುಗ್ರಹ ತುಮ್ಹರೇ ತೇತೇ || ೨೦ ||

    ರಾಮ ದುವಾರೇ ತುಮ ರಖವಾರೇ |
    ಹೋತ ನ ಆಜ್ಞಾ ಬಿನು ಪೈಸಾರೇ || ೨೧ ||

    ಸಬ ಸುಖ ಲಹೈ ತುಮ್ಹಾರೀ ಶರಣಾ |
    ತುಮ ರಕ್ಷಕ ಕಾಹೂ ಕೋ ಡರನಾ || ೨೨ ||

    ಆಪನ ತೇಜ ಸಂಹಾರೋ ಆಪೈ |
    ತೀನೋಂ ಲೋಕ ಹಾಂಕ ತೇಂ ಕಾಂಪೈ || ೨೩ ||

    ಭೂತ ಪಿಶಾಚ ನಿಕಟ ನಹಿಂ ಆವೈ |
    ಮಹಾವೀರ ಜಬ ನಾಮ ಸುನಾವೈ || ೨೪ ||

    ನಾಸೈ ರೋಗ ಹರೈ ಸಬ ಪೀರಾ |
    ಜಪತ ನಿರಂತರ ಹನುಮತ ವೀರಾ || ೨೫ ||

    ಸಂಕಟಸೇ ಹನುಮಾನ ಛುಡಾವೈ |
    ಮನ ಕ್ರಮ ವಚನ ಧ್ಯಾನ ಜೋ ಲಾವೈ || ೨೬ ||

    ಸಬ ಪರ ರಾಮ ತಪಸ್ವೀ ರಾಜಾ |
    ತಿನ ಕೇ ಕಾಜ ಸಕಲ ತುಮ ಸಾಜಾ || ೨೭ ||

    ಔರ ಮನೋರಥ ಜೋ ಕೋಯೀ ಲಾವೈ |
    ತಾಸು ಅಮಿತ ಜೀವನ ಫಲ ಪಾವೈ || ೨೮ || [** ಸೋಯಿ **]

    ಚಾರೋಂ ಯುಗ ಪ್ರತಾಪ ತುಮ್ಹಾರಾ |
    ಹೈ ಪರಸಿದ್ಧ ಜಗತ ಉಜಿಯಾರಾ || ೨೯ ||

    ಸಾಧುಸಂತಕೇ ತುಮ ರಖವಾರೇ |
    ಅಸುರ ನಿಕಂದನ ರಾಮ ದುಲಾರೇ || ೩೦ ||

    ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ |
    ಅಸವರ ದೀನ್ಹ ಜಾನಕೀ ಮಾತಾ || ೩೧ ||

    ರಾಮ ರಸಾಯನ ತುಮ್ಹರೇ ಪಾಸಾ |
    ಸದಾ ರಹೋ ರಘುಪತಿ ಕೇ ದಾಸಾ || ೩೨ ||

    ತುಮ್ಹರೇ ಭಜನ ರಾಮ ಕೋ ಪಾವೈ |
    ಜನ್ಮ ಜನ್ಮ ಕೇ ದುಖ ಬಿಸರಾವೈ || ೩೩ ||

    ಅಂತಕಾಲ ರಘುಪತಿ ಪುರ ಜಾಯೀ | [** ರಘುವರ **]
    ಜಹಾಂ ಜನ್ಮಿ ಹರಿಭಕ್ತ ಕಹಾಯೀ || ೩೪ ||

    ಔರ ದೇವತಾ ಚಿತ್ತ ನ ಧರಯೀ |
    ಹನುಮತ ಸೇಯಿ ಸರ್ವಸುಖಕರಯೀ || ೩೫ ||

    ಸಂಕಟ ಹರೈ ಮಿಟೈ ಸಬ ಪೀರಾ |
    ಜೋ ಸುಮಿರೈ ಹನುಮತ ಬಲವೀರಾ || ೩೬ ||

    ಜೈ ಜೈ ಜೈ ಹನುಮಾನ ಗೋಸಾಯೀ |
    ಕೃಪಾ ಕರಹು ಗುರು ದೇವ ಕೀ ನಾಯೀ || ೩೭ ||

    ಯಹ ಶತವಾರ ಪಾಠ ಕರ ಜೋಯೀ |
    ಛೂಟಹಿ ಬಂದಿ ಮಹಾಸುಖ ಹೋಯೀ || ೩೮ ||

    ಜೋ ಯಹ ಪಢೈ ಹನುಮಾನ ಚಾಲೀಸಾ |
    ಹೋಯ ಸಿದ್ಧಿ ಸಾಖೀ ಗೌರೀಸಾ || ೩೯ ||

    ತುಲಸೀದಾಸ ಸದಾ ಹರಿ ಚೇರಾ |
    ಕೀಜೈ ನಾಥ ಹೃದಯ ಮಹ ಡೇರಾ || ೪೦ ||

    ದೋಹಾ
    ಪವನತನಯ ಸಂಕಟ ಹರಣ
    ಮಂಗಳ ಮೂರತಿ ರೂಪ ||
    ರಾಮ ಲಖನ ಸೀತಾ ಸಹಿತ
    ಹೃದಯ ಬಸಹು ಸುರ ಭೂಪ !

    ಓಂ ತತ್ ಸತ್ 🙏🙏

    ಶ್ರೀ ರಾಮಕೃಷ್ಣಾಪರ್ಣ ಮಸ್ತು. 🙏🙏

    ಆರ್. ಸುದರ್ಶನ

    Liked by 1 person

Leave a comment