ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

vk7ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಗಳ ಸಂಗಮದಲ್ಲಿ ಸಮುದ್ರ ತಟದಿಂದ ಸುಮಾರು 500ಮೀ ದೂರ ಇರುವ ಬಂಡೆಯನ್ನು ನೋಡಿ ಅಲ್ಲಿಗೆ ಕರೆದೊಯ್ಯುವಂತೆ ಅಲ್ಲಿಯೇ ಇದ್ದ ದೋಣಿಯವರನ್ನು ಕೇಳಿಕೊಳ್ಳುತ್ತಾರೆ. ಆ ಸಮಯದಲ್ಲಿ ಭೋರ್ಗರೆಯುತ್ತಿದ್ದ ಸಮುದ್ರ ಅಲೆಗಳನ್ನು ಕಂಡು ಈ ಸಮಯದಲ್ಲಿ ದೋಣಿಯನ್ನು ಚಲಾಯಿಸುವುದು ಅಪಾಯಕರ ಎಂದಾಗ, ಅಲ್ಲಿನ ನಾವಿಕರ ಎಚ್ಚರಿಕೆಗೂ ಗಮನ ಹರಿಸದೇ, ತಾವೇ ಧೈರ್ಯದಿಂದ ಸಮುದ್ರಕ್ಕೆ ದುಮುಕಿ ಈಜಿಕೊಂಡು ಆ ಬೃಹತ್ ಬಂಡೆಯನ್ನು ತಲುಪುತ್ತಾರೆ. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಸುಮಾರು 3 ದಿನಗಳ ಕಾಲ ಹಸಿವು, ನಿದ್ರೆ ನೀರಡಿಕೆಯಿಲ್ಲದೇ, ಧ್ಯಾನವನ್ನು ಮಾಡಿ, ಜ್ಞಾನೋದಯವನ್ನು ಪಡೆದು, ಮಾನವೀಯತೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಸಂಕಲ್ಪವನ್ನು ತೆಗೆದುಕೊಳ್ಳುತ್ತಾರೆ.

ಆ ರೀತಿ ಸಂಕಲ್ಪ ಮಾಡಿದ ಸ್ವಾಮಿ ವಿವೇಕಾನಂದರು 1893 ರ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ, ನನ್ನ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣವನ್ನು ಆರಂಭಿಸಿ ಅಲ್ಲಿ ನೆರೆದಿದ್ದ ಸಭಿಕರನ್ನೆಲ್ಲಾ ಮಂತ್ರ ಮುಗ್ಧರನ್ನಾಗಿಸಿ ಭಾರತ, ಹಿಂದೂ ಧರ್ಮ, ಯೋಗ, ವೇದಾಂತದ ಮತ್ತು ಭಾರತೀಯ ತತ್ವಶಾಸ್ತ್ರಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನವರಿ 1962 ರಲ್ಲಿ, ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಅವರು ಜ್ಞಾನೋದಯ ಪಡೆದ ಕನ್ಯಾಕುಮಾರಿಯ ಆ ಬೃಹತ್ ಬಂಡೆಯ ಮೇಲೆ ಸ್ವಾಮೀಜಿಯವರ ಸ್ಮಾರಕವೊಂದನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿದರು. ಈ ರೀತಿಯ ಮಹಾಸಂಕಲ್ಪವನ್ನು ನೆರೆವೇರಿಸಲು ಅಂದಿನ ಮದ್ರಾಸಿನ ಶ್ರೀ ರಾಮಕೃಷ್ಣ ಮಿಷನ್ ಅವರು ಸ್ಥಳ ಪರಿಶೀಲನೆಗೆ ಬಂದಾಗ ಈ ಸುಂದರ ಪರಿಕಲ್ಪನೆಯ ವಿರುದ್ಧ ಸ್ಥಳೀಯ ಕ್ಯಾಥೊಲಿಕ್ ಮೀನುಗಾರರ ಸಂಘವು ಉಗ್ರವಾಗಿ ಪ್ರತಿಭಟನೆ ನಡೆಸಿತಲ್ಲದೇ, ಆ ಬಂಡೆಯ ಮೇಲೊಂದು ದೊಡ್ಡದಾದ ಶಿಲುಬೆಯನ್ನು ಪ್ರತಿಷ್ಟಾಪನೆ ಮಾಡಲು ಹೊಂಚು ಹಾಕಿತು. ಇದರಿಂದ ಕೆಲ ಸಮಯ ಆ ಪ್ರದೇಶದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ ಆ ಸ್ಥಳವನ್ನು ನಿಷೇಧಿತ ಸ್ಥಳವೆಂದು ಗುರುತಿಸಿ, ಶಸ್ತ್ರಸಜ್ಜಿತ ಕಾವಲುಗಾರರನ್ನು ಅಲ್ಲಿಗೆ ಗಸ್ತು ಹಾಕುವಂತರ ಪರಿಸ್ಥಿತಿ ಬಂದೊದಗಿತ್ತು. ಹಿಂದೂಗಳ ಸತತ ಹೋರಾಟದ ಫಲವಾಗಿ ಜನವರಿ 17, 1963 ರಂದು ಸರ್ಕಾರವು ಅಲ್ಲಿಗೆ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಲು ಅನುಮತಿ ಕೊಡಲಾಯಿತು.

ನಿಜ ಹೇಳಬೇಕೆಂದರೆ, ಈ ಹೋರಾಟ ಮತುತ್ ಸ್ಮಾರಕದ ಹಿಂದಿನ ಸಂಪೂರ್ಣ ಶ್ರೇಯ ಶ್ರೀ ಏಕನಾಥ ರಾಮಕೃಷ್ಣ ರಾನಡೆ ಅವರಿಗೆ ಸಲ್ಲ ಬೇಕು ಎಂದರೆ ತಪ್ಪಾಗಲಾರದು. ಶ್ರೀ ಏಕನಾಥ ರಾನಡೆಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಪ್ರಚಾರಕರಾಗಿದ್ದಲ್ಲದೇ,ಸ್ವಾಮೀಜಿಗಳ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರೊಬ್ಬ ಪ್ರಖ್ಯಾತ ಭಾರತೀಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಧಾರಕರಾಗಿದ್ದರು. ಅವರ ನೇತೃತ್ವದಲ್ಲೇ, ವಿವೇಕಾನಂದ ರಾಕ್ ಮೆಮೋರಿಯಲ್ ಆರ್ಗನೈಸಿಂಗ್ ಕಮಿಟಿಯನ್ನು ಸ್ಥಾಪಿಸಲಾಯಿತು. ವಿವೇಕಾನಂದ ಶಿಲಾ ಸ್ಮಾರಕವು ರಾಷ್ಟ್ರೀಯ ಸ್ಮಾರಕ ಎಂದೇ ಜನರ ಮುಂದೆ ಬಿಂಬಿಸಿದ ಶ್ರೀ ರಾನಡೆಯವರು ಇದರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯರ ಕೊದುಗೆ ಇರಬೇಕೆಂದು ನಿರ್ಧರಿಸಿ, ಪ್ರತೀ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಲ್ಲದೇ, ಇನ್ನೂ ಹೆಚ್ಚಿನ ಧನಸಹಾಯಕ್ಕಾಗಿ ಒಂದು ರೂಪಾಯಿಯ ಪೋಸ್ಟ್ ಕಾರ್ಡ್ ಮಾದರಿಯನ್ನು ಅಚ್ಚು ಹಾಕಿಸಿ ದೇಶಾದ್ಯಂತ ಜನಸಾಮಾನ್ಯರಿಂದ ದೇಣಿಗೆಗಳನ್ನು ಸಂಗ್ರಹಿಸಿದರು. ಇಂತಹ ಪವಿತ್ರ ಕಾರ್ಯಕ್ಕಾಗಿ ಮೊದಲ ದೇಣಿಗೆಯನ್ನು ವಿಶ್ವಹಿಂದೂಪರಿಷತ್ತಿನ ಸ್ಥಾಪಕರಾದ ಪೂಜ್ಯ ಶ್ರೀ ಚಿನ್ಮಯಾನಂದರಿಂದ ಸಂಗ್ರಹಿಸುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.

ಒಂದು ಕಡೆ ಹಣ ಸಂಗ್ರಹದ ಆಭಿಯಾನ ನಡೆಯುತ್ತಿದ್ದರೆ ಮತ್ತೊಂದೆದೆ ಇಂತಹ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕಟ್ಟಡ ಕಟ್ಟಲು ಕಾರ್ಮಿಕರು ಎಲ್ಲವನ್ನೂ ಹೊಂಚುವುದು ಸುಲಭವಾಗಿರಲಿಲ್ಲ. ಇದೆಲ್ಲದರ ಮಧ್ಯೆ, ಈ ಕಾರ್ಯಕ್ಕೆ ತಡೆಯೊಡ್ಡಲು ಅಂದಿನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾಗಿದ್ದ ಹುಮಾಯೂನ್ ಕಬೀರ್ ಮತ್ತು ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಮಿಂಜೂರ್ ಭಕ್ತವತ್ಸಲಂ ನಾನಾರೀತಿಯ ರಾಜಕೀಯ ಒತ್ತಡಗಳನ್ನು ಹೇರುವುದರಲ್ಲಿ ಸಫಲವಾಗುತ್ತಿದ್ದಂತೆಯೇ ಸ್ಮಾರಕದ ನಿರ್ಮಾಣ ಕೊಂಚ ತಡವಾಗತೊಡಗಿತು. ಆಗ ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಲಹೆಯಂತೆ ರಾನಡೆಯವರು, ಈ ಸ್ಮಾರಕ ನಿರ್ಮಾಣದ ಫಲವಾಗಿ ಸುಮಾರು 323 ಸಂಸತ್ ಸದಸ್ಯರ ಸಹಿಯನ್ನು ಸಂಗ್ರಹಿಸುವ ಹೊತ್ತಿಗೆ ಲಾಲ್ ಬಹದ್ದೂರು ವಿವಾದಾತ್ಮಕವಾಗಿ ನಿಧನರಾಗಿ, ಭಾರತದ ಪ್ರಧಾನ ಮಂತ್ರಿಯ ಸ್ಥಾನವನ್ನು ಶ್ರೀಮತಿ. ಇಂದಿರಾ ಗಾಂಧಿಯವರು ಅಲಂಕರಿಸಿದ್ದರು. ಪಕ್ಷಾತೀತವಾಗಿ ಇಷ್ಟೊಂದು ಸಾಂಸದರ ಬೆಂಬಲವಿದ್ದ ಯೋಜನೆಯನ್ನು ವಿಧಿ ಇಲ್ಲದೇ ಅನುಮೋದಿಸಲೇ ಬೇಕಾಯಿತು. ನಂತರ ಸ್ಮಾರಕದ ಕೆಲಸ ಚುರುಕುಗೊಂಡು ವಿವೇಕಾನಂದ ಶಿಲಾ ಸ್ಮಾರಕದ ನಿರ್ಮಾಣವು 1970 ರಲ್ಲಿ ಆರು ವರ್ಷಗಳ ಧಾಖಲೆಯ ಅವಧಿಯಲ್ಲಿ ಸುಮಾರು 650 ನುರಿತ ಕುಶಲಕರ್ಮಿಗಳು ಮತ್ತು ಕಾರ್ಮಿಕರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಸಮರ್ಪಣೆಯ ಶ್ರಮದೊಂದಿಗೆ ಸಂಪೂರ್ಣವಾದಾಗ, ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರಿ ವಿ.ವಿ.ಗಿರಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಶ್ರೀಕರುಣಾನಿಧಿಯವರ ಅಮೃತಹಸ್ತದಿಂದ 2 ನೇ ಸೆಪ್ಟೆಂಬರ್, 1970 ರಂದು ಲೋಕಾರ್ಪಣೆಗೊಂಡಾಗ ಇಡೀ ದೇಶವಾಸಿಗಳು ಸಂಭ್ರಮಗೊಂಡಿದ್ದರು.

ಈ ಭವ್ಯವಾದ ಸ್ಮಾರಕವು ಭಾರತದ ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪ ಶೈಲಿಯ ಮಿಶ್ರಣವಾಗಿ ಅದರಲ್ಲೂ ವಿಶೇಷವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಾಸ್ತುಶಿಲ್ಪದ ಸಮ್ಮಿಳನವಾಗಿದೆ ಎನ್ನಬಹುದಾಗಿದೆ. ಸ್ಮಾರಕ ಮಂಟಪವು ಕೊಲ್ಕಾತ್ತಾದ ಬೇಲೂರಿನಲ್ಲಿರುವ ಶ್ರೀ ರಾಮಕೃಷ್ಣ ಮಠವನ್ನು ಹೋಲುತ್ತದೆ. ಇನ್ನು ಅದರ ಪ್ರವೇಶ ದ್ವಾರದ ವಿನ್ಯಾಸವು ಅಜಂತಾ ಮತ್ತು ಎಲ್ಲೋರ ವಾಸ್ತುಶಿಲ್ಪ ಶೈಲಿಗಳನ್ನು ಒಳಗೊಂಡಿದೆ. ಖ್ಯಾತ ಶಿಲ್ಪಿಗಳಾಗಿದ್ದ ಶ್ರೀ ಸೀತಾರಾಮ್ ಎಸ್. ಆರ್ಟೆಯವರ ನೇತೃತ್ವದಲ್ಲಿ ಅಲ್ಲಿನ ಪ್ರಮುಖ ಆಕರ್ಷಣೆಯಾದ, ಪರಿವ್ರಾಜಕ ಭಂಗಿಯಲ್ಲಿ ನಿಂತಿರುವ ಸ್ವಾಮಿ ವಿವೇಕಾನಂದರ ಜೀವಿತ ಗಾತ್ರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೇವಿ ಕನ್ಯಾ ಕುಮಾರಿಯ ಪವಿತ್ರ ಪಾದಗಳ ಸ್ಪರ್ಶವಾಗಿರುವ ಕಾರಣ ಈ ಬೃಹತ್ ಬಂಡೆಯನ್ನು ಶ್ರೀಪಾದ ಪರೈ ಎಂದೂ ಕರೆಯಲಾಗುತ್ತದೆ. ವಾಸ್ತವದಲ್ಲಿ ಅಲ್ಲಿರುವ ಕಲ್ಲಿನ ಬಣ್ಣವು ಕಂದು ಬಣ್ಣದಿಂದ ಕೂಡಿದ್ದು ಅದು ಮಾನವ ಹೆಜ್ಜೆಯ ಗುರುತಿನಂತೆ ಕಾಣುವುದರಿಂದ ಅದನ್ನು ಶ್ರೀ ಪಾದಂ ಎಂದು ಕರೆಯಲಾಗುತ್ತದೆ ಹಾಗಾಗಿ ಆ ಪವಿತ್ರ ಸ್ಥಳದಲ್ಲಿ ಶ್ರೀ ಪಾದಪರೈ ಮಂಟಪ’ ಎಂಬ ದೇವಾಲಯವನ್ನು ನಿರ್ಮಿಸಲಾಗಿದೆ.

ಸ್ಮಾರಕದೊಳಗೆ ಎರಡು ಪ್ರಮುಖ ರಚನೆಗಳಾಗಿ ವಿಭವಿಸಿದ್ದು, ಅದರಲ್ಲಿ ಮುಖ್ಯವಾಗಿ ಚೌಕಾಕಾರದಲ್ಲಿರುವ ಗರ್ಭ ಗ್ರಹದ ಒಳಪ್ರಾಕಾರ ಮತ್ತು ಹೊರಪ್ರಾಕಾರದ ಇರುವ ಶ್ರೀಪಾದ ಮಂಟಪವಾದರೆ, ಮತ್ತೊಂದು, ಸ್ವಾಮೀಜಿಯ ಗೌರವಾರ್ಥವಾಗಿ ನಿರ್ಮಿಸಲಾಗಿರುವ ವಿವೇಕಾನಂದ ಮಂಟಪವಾಗಿದೆ. ಈ ಮಂಟಪದಲ್ಲಿರುವ ಧ್ಯಾನ ಮಂಟಪ ಮತ್ತು ಸಭಾ ಮಂಟಪವನ್ನು ನಿರ್ಮಿಸಲಾಗಿದೆ. ಧ್ಯಾನ ಮಂದಿರದ ವಿನ್ಯಾಸವು ಭಾರತದ ದೇವಾಲಯದ ವಾಸ್ತುಶಿಲ್ಪದ ವಿವಿಧ ಶೈಲಿಗಳ ಸಮ್ಮೀಳಿತವಾಗಿದೆ. ಇಲ್ಲಿಗೆ ಬರುವ ಸಂದರ್ಶಕರಿಗೆ ಶಾಂತವಾಗಿ ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಮತ್ತು ಧ್ಯಾನ ಮಾಡಲು ಅನುಕೂಲವಾಗುವಂತೆ 6 ಕೊಠಡಿಗಳನ್ನು ಹೊಂದಿದೆ. ಇನ್ನು ಸಭಾ ಮಂಟಪವು ಎಲ್ಲರೂ ಕುಳಿತು ಕೊಳ್ಳುವಂತಹ ವಿಶಾಲವಾಗಿದ್ದು, ಪ್ರತಿಮಾ ಮಂಟಪ ಎಂಬ ಪ್ರತಿಮೆ ವಿಭಾಗವನ್ನು ಒಳಗೊಂಡಿದ್ದು, ಸಭಾಂಗಣವನ್ನು ಒಳಗೊಂಡ ಕಾರಿಡಾರ್ ಮತ್ತು ಹೊರಗಿನ ಪ್ರಾಂಗಣವನ್ನು ಒಳಗೊಂಡಿದೆ. ಸ್ವಾಮಿಯವರ ಪ್ರತಿಮೆಯ ದೃಷ್ಟಿ ನೇರವಾಗಿ ಶ್ರೀಪಾದದ ಮೇಲೆ ಬೀಳುವ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಗಮನಾರ್ಹವಾಗಿದ್ದು ಪ್ರತಿಯೊಬ್ಬ ಭಾರತೀಯರೂ ಖಂಡಿತವಾಗಿಯೂ ನೋಡಲೇ ಬೇಕಾದಂತಹ ಪ್ರೇಕ್ಷಣೀಯ ಮತ್ತು ಪುಣ್ಯಕ್ಷೇತ್ರವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ.

ಖ್ಯಾತ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಉಪಾಸನೆ ಚಿತ್ರದ ಹಾಡಿನಲ್ಲಿರುವ ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿಯ ಈ ಬೃಹತ್ ಮತ್ತು ಭವ್ಯವಾದ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಪ್ರತಿದಿನವೂ ಸಾವಿರಾರು ಪ್ರವಾಸಿಗರು ಇಲ್ಲಿನ ಸಮುದ್ರ ತೀರದಿಂದ ಸುಮಾರು ೨ ನಿಮಿಷದ ದೋಣಿಯ ಪ್ರಯಾಣದ ಮೂಲಕ ಇಲ್ಲಿಗೆ ಬಂದು ತಲುಪಬಹುದಾಗಿದೆ. ಈ ಸ್ಮಾರಕವು ವರ್ಷವಿಡೀ ಬೆಳಿಗ್ಗೆ 7.00 ರಿಂದ ಸಂಜೆ 5.00 ರವರೆಗೆ ಸಂದರ್ಶಕರ ಭೇಟಿಗೆ ಅವಕಾಶವಿದ್ದು ಇದಕ್ಕೆ ಅತ್ಯಲ್ಪ ಪ್ರವೇಶ ಶುಲ್ಕವಾದ ರೂ. 10/-ನ್ನು ನಿಗಧಿಪಡಿಸಿದ್ದು ಇನ್ನು ಕ್ಯಾಮೆರಾ ಬಳಸುವುದಕ್ಕೆ ರೂ. 10/- ಮತ್ತು ವಿಡಿಯೋ ಚಿತ್ರೀಕರಣಕ್ಕೆ ರೂ. 50/- ಪಾವತಿಸಬೇಕಾಗುತ್ತದೆ.

ಭಾರತದ ತುತ್ತ ತುದಿಯ ಪ್ರದೇಶವಾದ ಕನ್ಯಾಕುಮಾರಿಗೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಂದಲು ಬಸ್ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಇನ್ನು ವಿಮಾನದ ಮೂಲಕ ಇಲ್ಲಿಗೆ ಬರಲು ಇಚ್ಚಿಸುವರು ಕನ್ಯಾಕುಮಾರಿಯಿಂದ ಕೇವಲ 67 ಕಿಮೀ ದೂರದಲ್ಲಿರುವ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ ಇಲ್ಲವೇ ಖಾಸಗೀ ವಾಹನಗಳ ಮೂಲಕ ತಲುಪಬಹುದಾಗಿದೆ.

ಇಷ್ಟೆಲ್ಲಾ ವಿವರಗಳನ್ನು ತಿಳಿದುಕೊಂಡ ಮೇಲೆ ಇನ್ನೇಕೆ ತಡಾ, ಸಮಯ ಮಾಡಿಕೊಂಡು ನಮ್ಮ ರಾಷ್ಟ್ರೀಯ ಸ್ಮಾರಕಗಳಲ್ಲಿ ಒಂದಾದ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕವನ್ನು ನೋಡಿಕೊಂಡು ದೇಶಭಕ್ತಿಯ ಸ್ವಾಭಿಮಾನವನ್ನು ತುಂಬಿಕೊಳ್ಳೋಣ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಸಂಪಮಾಸ ಪತ್ರಿಕೆಯ ಸೆಪ್ಟೆಂಬರ್ ತಿಂಗಳಲ್ಲಿ ಈ ಲೇಖನ ಪ್ರಕಟವಾಗಿದೆ.

3 thoughts on “ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

  1. ಉತ್ತಮವಾಗಿ ಮೂಡಿ ಬಂದಿದೆ ಶ್ರೀ.🙏🏻🙏🏻

    ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದರೆ ಅದು ಭಾರತದ ಚರಿತ್ರೆಯನ್ನು ಓದಿದ್ದಂತೆ ಎಂದು ಮಹಾನಿಯರು ಹೇಳುತ್ತಾರೆ.
    ಪ್ರಮುಖವಾಗಿ ಯುವ ಜನರನ್ನು ನಿದ್ರೆಯಿಂದ ಎಚ್ಚರಿಸಿದಂತೆ.
    ಎಂತ ನಾಸ್ತಿಕನು ಸಹ ವಿವೇಕಾನಂದರ ಮಾತಿಗೆ ತಲೇ ಬಾಗಲೇ ಬೇಕು.

    ಒಮ್ಮೆ ವಿವೇಕಾನಂದರು ಮಂಗಳ್ ಸಿಂಗ್ ಎಂಬ ರಾಜನ ಆಹ್ವಾನದ ಮೆರೆಗೆ ಅರಮನೆಗೆ ಹೋಗುತ್ತಾರೆ, ಆ ರಾಜ ಇಂಗ್ಲಿಷ್ ರ ವಿಚಾರಧಾರೆಗೆ ಒಳಪಟ್ಟಿರುತ್ತಾನೆ, ವಿವೇಕಾನಂದರನ್ನು ಪ್ರಶ್ನೆ ಕೇಳುತ್ತಾ, ನಾನು ಮೂರ್ತಿ ಪೂಜೆ ಯಲ್ಲಿ ನಂಬಿಕೆ ಇಲ್ಲ, ಇದು ಬರಿ ಕಲ್ಲು ನಿಂದ ಕೆತ್ತಿರುವುದು, ಇದು ಯಾವುದೇ ಪ್ರಯೋಜನವಿಲ್ಲ ಎಂದು
    ಸ್ವಾಮಿಜಿಗೆ ಪ್ರಶ್ನೆ ಕೇಳುತ್ತಾನೆ. ತಕ್ಷಣ ವಿವೇಕನಂದರು ಅಲ್ಲಿ ನಿಂತಿರುವ ಮಂತ್ರಿ ಯನ್ನು ಕರೆದು, ಅಲ್ಲಿ‌ ಭಾವ ಚಿತ್ರವನ್ನು ತೋರಿಸಿ ಅದನ್ನು ತರುವಂತೆ ಸೂಚಿಸಿ, ಆ ಭಾವ ಚಿತ್ರದಲ್ಲಿ ಇರುವ ವ್ಯಕ್ತಿ ಯಾರೆಂದು ಮಂತ್ರಿಯನ್ನು ಕೇಳುತ್ತಾರೆ, ಆತ ಮಹಾರಾಜನ ತಂದೆ ಎಂದು ಉತ್ತರ ಕೋಡುತ್ತಾನೆ, ಆ ಚಿತ್ರ ವನ್ನು ನೋಡಿ ಆ ಚಿತ್ರ ದ ಮೇಲೆ ಉಗಳುವಂತೆ ಮಂತ್ರಿಗೆ ಸೂಚಿಸುತ್ತಾರೆ ಅಲ್ಲಿ ನೆರೆದಿದ್ದ ರಾಜನಿಗೆ, ಆಸ್ಥಾನದ ಜನರು ದಿಗಿಲು ಬಡಿದವರಂತೆ ನಿಲ್ಲುತ್ತಾರೆ, ಸ್ವಾಮಿಜಿ ಮತ್ತೊಮ್ಮೆ ಅದು ಬರೀ ಕಾಗದದಿಂದ ‌ಬರೆದಿರುವ ವರ್ಣ ಚಿತ್ರ , ಅದು ನಿಮ್ಮ ರಾಜನಲ್ಲ ಎಂದು ಹೇಳುತ್ತಾರೆ, ನಂತರ ರಾಜನನ್ನು ಉದ್ದೇಶಿಸಿ ಹೇಳುತ್ತಾರೆ, ಜನರು ಆ ವಿಗ್ರಹವನ್ನು ನೋಡಿ ಕಲ್ಲು ಎಂಬ ಭಾವನೆಯಿಂದ ಪೂಜೆ ಮಾಡುವುದಿಲ್ಲ, ಅದು ಬರೀ ಕಲ್ಲು ಅಲ್ಲ ಅದು ಜನರಿಗೆ ಸಾಕ್ಷತ್ ದೇವರನ್ನು ಕಾಣುತ್ತಾರೆ ಎಂದು ರಾಜನಿಗೆ ವಿವರಿಸುತ್ತಾರೆ, ನಂತರ ರಾಜನಿಗೆ ತನ್ನ ತಪ್ಪು ಅರಿವಾಗಿ ಕ್ಷಮೆ ಕೇಳುತ್ತಾನೆ.

    ನೊಬೆಲ್ ಪ್ರಶಸ್ತಿ ವಿಜೇತ ಫ್ರಾನ್ಸ್ ದೇಶದ ರೊಮ್ಯಾಲ್ ರೊಲೊ ಒಮ್ಮೆ ರಷ್ಯಾಕ್ಕೆ ಹೋದಾಗ ರಷ್ಯಾದ ಅಧ್ಯಕ್ಷರು ಅವರನ್ನು ಆತ್ಮೀಯರಾಗಿ ಕಾಣುತ್ತಾರೆ, ನೀಮಗೆನಾದರೂ ಬೇಕೆಂದರೆ ಕೇಳಿ ಎನ್ನಲು, ಅದಕ್ಕೆ ರೊಮ್ಯಾಲ್ ರೊಲೊ ನಿಮಗೆ ‌ಎನಾದರೂ ಕೊಡ ಬೇಕಾದರೂ ಅನಿಸಿದರೆ ನೀವು ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ರಷ್ಯಾದ ಭಾಷೆ ಅನುವಾದ ಮಾಡಿ ಎಂದರಂತೆ.

    ಇಂದು ನಾವು ಪಡೆಯುತ್ತಿರುವ ಶಿಕ್ಷಣ ಯಾವ ಮಕ್ಕಳು ಸಹ ತನ್ನ ಎಳಿಗೆ ಅಥವಾ ಶಿಲ್ಪ ನಿರ್ಮಿಸಲು ಅವಕಾಶಗಳು ಕಾಣುವುದಿಲ್ಲ.
    ನೀವೆನಾದರೂ‌ ಸ್ವತಂತ್ರ ನಂತರ ನಮ್ಮ ದೇಶದಲ್ಲಿ ವಿದ್ಯ ಮಂತ್ರಿ ಗಳು ಯಾರು ಎಂದು ಅವಲೋಕಿಸಿದಾಗ ಹೆಚ್ಚಿನ ವರು ಹಿಂದು ವಿರೋಧಿಗಳು, ಆವರು ರಚಿಸಿದ ಪಠ್ಯ ಪುಸ್ತಕ ಗಳು ಮಕ್ಕಳಿಗೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿಯ ಯಾವುದು ಕಾಣುವುದಿಲ್ಲ.

    ಸ್ವಾಮಿ ವಿವೇಕಾನಂದರನ್ನು ಶಿಕ್ಷಣ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ತಿಳಿಸಿ ಎಂದು ಕೇಳಿದಾಗ ಅವರ ಉತ್ತರಿಸುತ್ತಾರೆ, “Education is the manifestation of perfection which is already in man” ಎಂದರಂತೆ

    ಸ್ವಾಮಿ ವಿವೇಕಾನಂದರು ಅಮೆರಿಕ ಹೋಗುವ ಮುನ್ನ ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಿರಲಿಲ್ಲ, ಬಡತನ, ವಿದ್ಯಾವಂತರ ಸಂಖ್ಯೆಯು ಕಡಿಮೆ, ದೇಶದ ಉದ್ದಗಲಕ್ಕೂ ಸಂಚರಿಸಿ ಕನ್ಯಾಕುಮಾರಿಗೆ ಬರುತ್ತಾರೆ, ಅಲ್ಲಿ ಕಡಲ ತೀರದಲ್ಲಿ ನಿಂತು ದೂರದಲ್ಲಿ ಕಾಣುವ ಬಂಡೆ ಕಡೆಗೆ ಹೋಗಲು ಅಲ್ಲಿ ದೋಣಿ ನಡೆಸುವರನ್ನು ಕೇಳುತ್ತಾರೆ, ಆದರೆ ದೋಣಿ ನಡೆಸುವನು‌ ಹಣ ಕೇಳುತ್ತಾನೆ, ಆದರೆ ಮೊದಲೇ ಪರಿವರ್ಜಕ ಸನ್ಯಾಸಿಗೆ ಹಣ ಎಲ್ಲಿಂದ ಬಂತು, ನೋಡು ನೋಡುತ್ತಿದಂತೆ ಯಾವುದೇ ಲೆಕ್ಕಿಸದೆ ಸಮುದ್ರ ಕ್ಕೆ ಧುಮುಕಿ ಈಜೆ ದೂರದಲ್ಲಿ ಕಾಣುವ ಬಂಡೆಗಳ ತಲುಪಿ ಅಲ್ಲಿ ಸತತ ಮೂರು ದಿನಗಳ ಅನ್ನ ಆಹಾರ ವಿಲ್ಲದೆ ಹಗಲು ರಾತ್ರಿಗಳ ದೀರ್ಘ ವಾದ ಧ್ಯಾನದಲ್ಲಿ ತೊಡಗುತ್ತಾರೆ. ಭಾರತದ ಸಮಗ್ರ ವಾದ ಚಿತ್ರ ಅವರ ಮುಂದೆ ಕಾಣಿಸುತ್ತದೆ. ಮುಂದೆ ಮಾಡಬಹುದಾದ ಕಾರ್ಯಗಳನ್ನು ಚಿಂತಕ ಸುತ್ತಾ ತನ್ನಿಂದ ಏನು ಮಾಡಬೇಕೆಂದು ಅವರಿಗೆ ಗೋಚರಿಸುತ್ತದೆ.
    ಅಮೇರಿಕಾದ ಸರ್ವ ಧರ್ಮಗಳ ಸಮ್ಮೇಳನದ ಭಾಗವಹಿಸಲು ತಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

    ಅಮೆರಿಕದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ, ವಿಶ್ವ ವಿಜೇತರಾಗಿ ಭಾರತಕ್ಕೆ ಬಂದು ಮೊತ್ತ ಮೊದಲು ಭಾರತದ ಮಣ್ಣನು ಸ್ಪರ್ಶಿಸಿ ಅದರ ಮೇಲೆ ಹೋರಲಾಡಿ ತಮ್ಮ ಕಣ್ಣುಗಳಿಂದ ದಾರಕಾರ ಅಶೃ ದಾರೆಯನ್ನು ಸುರಿಸಿ, ಭಾರತದ ಕಣಕಣವು ನನ್ನ ಲ್ಲಿ ಅಂತರ್ಗತವಾಗಿ ಅರಿತಾಡುತ್ತಿದೆ ಎಂದು ಅಂತರಾಳದ ಮಾತನ್ನು ತಿಳಿಸುತ್ತಾರೆ.

    ಸ್ವಾಮಿ ವಿವೇಕಾನಂದ ಕಾಲವಾದ ನಂತರ ೧೯೭೦ ರಲ್ಲಿ ಕನ್ಯಾ ಕುಮಾರಿಯಲ್ಲಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿ ವಿವೇಕಾನಂದರ
    ಪ್ರತಿಮೆ ಮಾಡಲು ಶ್ರೀ ಏಕನಾಥ ರಾನಡೆ ಅವರಿಗೂ ಹಾಗೂ ಅಂದಿನ ಪ್ರಧಾನಿ ಮಂತ್ರಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ಶ್ರಮ ಮೆಚತಕ್ಕದು, ಇಲ್ಲವಾದರೆ ಇಷ್ಟು ವತ್ತಿಗೆ ಅದು ಅನ್ಯ ಧರ್ಮೀಯರ ಪಾಲು ಆಗುತ್ತಿತ್ತು.

    ಇಂದು ಒಂದು ಕಡೆ ನಮ್ಮ ದೇಶದ ಸಂಸ್ಕೃತಿಯ ನಾಶ ಮಾಡಲು ಸಂಚು ನಡೆಸುವರು, ಇನ್ನೊಂದು ಕಡೆ ನಮ್ಮ ಲ್ಲಿ ಇದ್ದು ಕೊಂಡು ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರು, ಇವರ ನಡುವೆ ನಮ್ಮ ತನವನ್ನು ಗಟ್ಟಿ ಗೊಳಿಸಿ ನಮ್ಮ ಸನಾತನ ಧರ್ಮವನ್ನು ವಿಶ್ವ ದಾದ್ಯಂತ ಪಸರಿಸಿ, ವಿವೇಕಾನಂದರ ವಿಚಾರ ಧಾರೆಯನ್ನು ತಿಳಿಸುವ ಮೂಲಕ ನಾವು ಮುಂದುವರಿಯೊಣ.

    ಜೈ ಭಾರತ ಮಾತ ಕೀ ಜೈ 🙏🏻🙏🏻

    ಆರ್. ಸುದರ್ಶನ

    Like

  2. ಧನ್ಯವಾದ ಗಳು. ಖಂಡಿತವಾಗಿಯೂ ಇದು ಸಲ್ಲ ಬೇಕಾಗಿರುವುದು ಶ್ರೀ ರಾಮಕೃಷ್ಣ ಆಶ್ರಮದ ಸಂಪರ್ಕ ಬಂದದ್ದರಿಂದ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s