ಆವತಿ ತಿಮ್ಮರಾಯಸ್ವಾಮಿ ಬೆಟ್ಟ

ತಿರುಪತಿ ತಿಮ್ಮಪ್ಪ ಬಹುಶಃ ಭಾರತಾದ್ಯಂತ ಅತ್ಯಂತ ಹೆಚ್ಚಿನ ಭಕ್ತರನ್ನು ಹೊಂದಿರುವ ದೇವರು ಎಂದರೂ ತಪ್ಪಾಗಲಾರದು. ಅದಕ್ಕೇ ಏನೋ? ದೇಶ ವಿದೇಶಗಳಿಂದ ಈ ಸಪ್ತಗಿರಿವಾಸನ ದರ್ಶನ ಪಡೆಯಲು ಪ್ರತಿನಿತ್ಯವೂ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತಾದಿಗಳು ತಿರುಪತಿಗೆ ಆಗಮಿಸುತ್ತಾರೆ. ಆದರೆ ಎಲ್ಲರಿಗೂ ಆ ತಿರುಪತಿ ತಿಮ್ಮಪ್ಪನ ದರ್ಶನದ ಭಾಗ್ಯ ಪಡೆಯಲು ಅನುಕೂಲವಾಗದ ಕಾರಣ ದೇಶದ ಬಹುತೇಕ ಹಳ್ಳಿಗಳು, ಪಟ್ಟಣಗಳು ಮತ್ತು ವಿದೇಶಗಳಲ್ಲಿಯೂ ವೆಂಕಟೇಶ್ವರಸ್ವಾಮಿಯ ದೇವಾಲಯಗಳನ್ನು ಕಟ್ಟಿಸಿ ಅಲ್ಲಿ ಸ್ವಾಮಿಯ ದರ್ಶನದ ಭಾಗ್ಯವನ್ನು ಕರುಣಿಸಿದ್ದಾರೆ.  ಅದೇ ರೀತಿ ಬೆಂಗಳೂರಿನ ಸುತ್ತ ಮುತ್ತಲಿನ ಜನರಿಗೆ 250 ಕಿಮೀ  ದೂರದಲ್ಲಿರುವ ತಿರುಪತಿಗೆ ಹೋಗಿ ಗಂಟೆಗಟ್ಟಲೆ ಸರದಿಯ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರ್ಶನವನ್ನು ಪಡೆಯಲು ಸಾಧ್ಯವಾಗದೇ ಹೋದಲ್ಲಿ, ಬೆಂಗಳೂರಿನಿಂದ ಕೇವಲ ೪೦ ಕಿಮೀ ದೂರವಿರುವ ಸುಮಾರು ಒಂದು ಗಂಟೆಯ ಅವಧಿಯಲ್ಲಿ ತಲುಪುಬಹುದಾದ ಆವತಿ ತಿಮ್ಮರಾಯನ ಸ್ವಾಮಿಯ ದೇವಾಲಯವನ್ನು ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಸ್ಥಾಪಿಸಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸಿದ್ದಾರೆ. ಅಂತಹ ಪವಿತ್ರ ಶ್ರೀಕ್ಷೇತ್ರದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.

ಬೆಂಗಳೂರಿನ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ಡಾಣದ ದಾರಿಯಲ್ಲೇ ಸಾಗಿ ದೇವನಹಳ್ಳಿ ಮತ್ತು ನಂದಿ ಕ್ರಾಸ್ ದಾಟಿ ಸುಮಾರು ೩ ಕಿಮೀ ದೂರ ಕ್ರಮಿಸುತ್ತಿದ್ದಂತೆಯೇ  ನಾಡ ಪ್ರಭು ಕೆಂಪೇಗೌಡರು ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತವಾಗಿರುವ ಆವತಿ ಮೇಲು ಸೇತುವೆ ಎದುರಾಗುತ್ತದೆ. ಮೇಲು ಸೇತುವೆಯನ್ನು ಏರದೇ ಪಕ್ಕದಲ್ಲೇ ಇರುವ ಸರ್ವಿಸ್ ರಸ್ತೆಯ ಮಾರ್ಗವಾಗಿ ಸಂಚರಿಸಿ, ಸುಮಾರು ಅರ್ಥ ಕಿಮೀ ದೂರ ಕ್ರಮಿಸಿದಲ್ಲಿ ತಿಮ್ಮರಾಯನ ಸ್ವಾಮಿ ದೊಡ್ಡದಾದ ಕಮಾನನ್ನು ದಾಟಿ ಕೋಡಗುರ್ಕಿ ಗ್ರಾಮದತ್ತ ಹಳ್ಳಿಯ ಸಣ್ಣ ರಸ್ತೆಯಲ್ಲಿ ಒಂದೆರದು ಕಿಮೀ ದೂರ ಕ್ರಮಿಸುತ್ತಿದ್ದಂತೆಯೇ ವಿಶಾಲವಾದ ಬೆಟ್ಟಗುಡ್ಡಗಳು ಅದರ ತಪ್ಪಪಲ್ಲೇ ಇರುವ ಕೆರೆ, ಕೆರೆಯ ಪಕ್ಕದಲ್ಲೇ ಇರುವ ದ್ರಾಕ್ಶಿ ಮತ್ತು ವಿವಿಧ ತರಕಾರಿಗಳ ತೋಟಗಳು ನಮ್ಮ ಹೃನ್ಮನಗಳಿಗೆ ಮುದವನ್ನು ನೀಡುತ್ತವೆ. ಅವೆಲ್ಲವನ್ನೂ ದಾಟುತ್ತಿದ್ದಂತೆಯೇ ಬಲಗಡೆಯಲ್ಲಿ ತಿಮ್ಮರಾಯನ ಸ್ವಾಮೀ ಬೆಟ್ಟಕ್ಕೆ ದಾರಿ ಎಂಬ ಫಲಕವನ್ನೇ ಆಧರಿಸಿ ಸುಮಾರು ಒಂದು ಕಿಮೀ ದೂರ ಕ್ರಮಿಸಿದಲ್ಲಿ ಇತಿಹಾಸ ಪ್ರಸಿದ್ಧ ತಿಮ್ಮರಾಯನ ಸ್ವಾಮಿಯ ದೇವಾಲಯ ಕಾಣಿಸುತ್ತದೆ.  ದೇವಸ್ಥಾನದ ವರೆಗೂ ವಾಹನದಲ್ಲಿ ಹೋಗುವಂತೆ ಅಚ್ಚುಕಟ್ಟಾದ ರಸ್ತೆಯ ಸೌಲಭ್ಯವಿದೆ.

ಈ ಮೊದಲೇ ತಿಳಿಸಿದಂತೆ  ತಿರುಮಲ ತಿರುಪತಿಯಲ್ಲಿ ಇರುವ ಏಳು ಬೆಟ್ಟಗಳಂತೆ ಇಲ್ಲಿಯೂ ಸಹಾ ದಿವ್ಯಗಿರಿ, ಬ್ರಹ್ಮಗಿರಿ, ನಂದಿಗಿರಿ, ವಿಷ್ಟುಗಿರಿ, ಸ್ಕಂದಗಿರಿ, ಗೌತಮಗಿರಿ, ಕುಕ್ಕುಟಗಿರಿ ಎಂಬ  ಸಪ್ತಗಿರಿಗಳಿದ್ದು ದೇವನಹಳ್ಳಿಯ ಕೋಡಗುರ್ಕಿ ಬಳಿಯ ಗೌತಮಗಿರಿಯಲ್ಲಿ ತಿಮ್ಮರಾಯಸ್ವಾಮಿ ದೇವಾಲಯವಿದೆ. ಪೌರಾಣಿಕವಾಗಿ ಹೇಳಬೇಕೆಂದರೆ ಇದೇ ಬೆಟ್ಟದಲ್ಲಿ ಇರುವ ಗುಹೆಯೊಂದರಲ್ಲಿ ಗೌತಮ ಋಷಿಗಳು ತಪಸ್ಸು ಮಾಡಿದ ಕಾರಣ ಈ ಬೆಟ್ಟಕ್ಕೆ ಗೌತಮಗಿರಿ ಎಂಬ ಹೆಸರು ಬಂದಿದೆ ಎಂದೂ ಇಲ್ಲಿನ ವೆಂಕಟೇಶ್ವರಸ್ವಾಮಿಯನ್ನು ಗೌತಮ ಋಷಿಗಳೇ  ಪ್ರತಿಷ್ಠಾಪನೆ ಮಾಡಿದರೆಂದು ಕೆಲವು ಹಿರಿಯರು ಹೇಳುತ್ತಾರಾದರೂ  ಗುಹೆಯ ಹೊರತಾಗಿ ಅದಕ್ಕೆ ಯಾವುದೇ ಪುರಾವೆಗಳು ಇಲ್ಲವಾಗಿದೆ.

ಇನ್ನು ಐತಿಹಾಸಿಕವಾಗಿ ಹೇಳಬೇಕೆಂದರೆ 14ನೇ ಶತಮಾನದ ಅಂತ್ಯಭಾಗದಲ್ಲಿ ಕಂಚಿ ಬಳಿಯ ಯಣಮಂಜಿ ಪುತ್ತೂರಿನ ಪಾಳೇಗಾರರಾಗಿದ್ದ ರಣ ಬೈರೇಗೌಡ ಮತ್ತು ಸೋದರರು ಅಲ್ಲಿನ ನಡೆದ ಕ್ಷಿಪ್ರರಾಜಕೀಯ ಕ್ರಾಂತಿಯಿಂದಾಗಿ ನಿರಾಶ್ರಿತರಾದಾಗ ಅವರು  ಎತ್ತಿನಬಂಡಿಗಳಲ್ಲಿ ವಲಸೆ ಬಂದು ಈ ಆವತಿ ಗ್ರಾಮದಲ್ಲಿ ನೆಲಸಿದರಂತೆ. ಮುಂದೆ ಬೆಂಗಳೂರಿನ ನಿರ್ಮಾತನಾದ ಕೆಂಪೇಗೌಡರು ಇದೇ ವಂಶದ ಕುಡಿಯೇ ಹೌದು. ಈ ಬೆಟ್ಟದ ತಪ್ಪಲಿನಲ್ಲಿಯೇ ನೆಲಸಿದ್ದ ರಣಬೈರೇಗೌಡ ಮತ್ತವರ ಸಹೊದರರಿಗೆ ಈ ಪ್ರದೇಶದಲ್ಲಿಯೇ ಏಳು ಕೊಪ್ಪರಿಗೆ ತುಂಬಿದ ನಿಧಿ ಮತ್ತು ಭೂದೇವಿ ಶ್ರೀದೇವಿ ಸಹಿತ ಚನ್ನಕೇಶವ ಸ್ವಾಮಿ ಜತೆಗೆ ವೇಣುಗೋಪಾಲನ ವಿಗ್ರಹ ದೊರೆಕಿತಂತೆ. ತಮಗೆ ಆಶ್ರಯ ನೀಡಿದ ಬೆಟ್ಟದ ಮೇಲೆ ದೇವಾಲಯವನ್ನು ಕಟ್ಟಿಸಿ ಅಲ್ಲಿ ತಮಗೆ ಸಿಕ್ಕ  ತಿಮ್ಮರಾಯಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿ ನಂತರ ದೇವನಹಳ್ಳಿಯ ಕೋಟೆ ಬಳಿ  ಶ್ರೀವೇಣುಗೋಪಾಲಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು ಎಂದು ಬಲ್ಲವರು ತಿಳಿಸುತ್ತಾರೆ, ಈ ಎರಡೂ ದೇವಸ್ಥಾನಗಳ ವಿಗ್ರಹಗಳ ನಡುವ ಬಹಳ ಸಾಮ್ಯತೆ ಕಂಡು ಬರುವ ಕಾರಣ ಇದನ್ನೇ  ಪುರಾವೆ ಎಂದು ನಂಬ ಬಹುದಾಗಿದೆ.

ಹೀಗೆ  ಐನೂರು ವರ್ಷಗಳಿಗೂ ಹೆಚ್ಚಿನ  ಪ್ರಾಚೀನತೆ ಹೊಂದಿರುವ ಈ ದೇವಾಲಯ ಗೌತಮ ಗಿರಿಯ ಸುತ್ತಲೂ ವಿವಿಧ ಗಿರಿ ಶ್ರೇಣಿಗಳು ಒಳಗೊಂಡಿದ್ದು. ಬೆಟ್ಟದ ಮೇಲಿರುವ ಚಕ್ರತಿರ್ಥ, ಶಂಖು ತೀರ್ಥ, ಮತ್ತು ಲಕ್ಷ್ಮೀತಿರ್ಥ ದೋಣಿಗಳು ನೋಡುಗರಿಗೆ ವಿಸ್ಮಯದ ತಾಣವಾಗಿದೆ. ಇಲ್ಲಿಂದ ನಂದಿ ಬೆಟ್ಟದ ವಿಹಂಗಮ ನೋಟ ರಮಣೀಯವಾಗಿದೆ.

ದೇವಾಲಯದ ಹೊರಗೋಡೆಗಳ ಮೇಲೆ ದಶಾವತಾರ, ಶ್ರೀಕೃಷ್ಣನ ಬಾಲ ಲೀಲೆಗಳ  ಉಬ್ಬು ಶಿಲೆಗಲ ಕೆತ್ತನೆಯಿಂದ ಗಮನ ಸೆಳೆದರೆ, ಪ್ರಾಚೀನ ದ್ರಾವಿಡ ಶೈಲಿಯಲ್ಲಿರುವ ಗರ್ಭಗುಡಿ, ಸುಖನಾಸಿ, ನವರಮ್ಗ ಮತ್ತು ಮುಖಮಂಟಪ ನೋಡಲು ಅದ್ಭುತವಾಗಿದೆ. ಗರ್ಭಗುಡಿಯಲ್ಲಿ ಗರುಡಪೀಠದ ಮೇಲೆ ಸುಮಾರು ೬ ಅಡಿಗಳಷ್ಟು ಎತ್ತರದ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ  ಶಂಖ ಚಕ್ರ, ಗಧಾಧಾರಿಯಾಗಿ ವರದ ಹಸ್ತನಾಗಿ ಸುಂದರ ಪ್ರಭಾವಳಿಯ ಮಧ್ಯದಲ್ಲಿ ಮಂದಸ್ಮಿತ ತಿಮ್ಮರಾಯ ಸ್ವಾಮಿಯ ಮೂರ್ತಿ ನಿಜಕ್ಕೂ ನಯನ ಮನೋಹರವಾಗಿದೆ.

ಗರ್ಭಗುಡಿಯಲ್ಲಿ ಕೇವಲ ತಿಮ್ಮರಾಯ ಸ್ವಾಮಿ ಮಾತ್ರ ಇದ್ದು ಅವನ ಜೊತೆ ಲಕ್ಷ್ಮೀ ಇಲ್ಲದಿದ್ದದನ್ನು ಗಮನಿಸಿ ಸುಮಾರು ಮೂರ್ನಾಲು ತಲಮಾರುಗಳು ಹಿಂದೆ ನವರಂಗದ ಬಲ ಭಾಗದಲ್ಲಿ ಚತುರ್ಭುಜೆ ಗಜಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ  ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದರು.

ಪ್ರತಿನಿತ್ಯವೂ ಇಲ್ಲಿ ಸಾಂಗೋಪಾಂಗವಾಗಿ ವೈಷ್ಣವ ರೀತಿಯಲ್ಲಿ  ಪೂಜೆ ಪುನಸ್ಕಾರಗಳು ನಡೆಯುತ್ತವೆ. ಪ್ರತೀ ಶನಿವಾರ  ಯುಗಾದಿ ಮತ್ತಿತರ ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಶ್ರಾವಣ ಮಾಸದ ಎಲ್ಲಾ ಶನಿವಾರಗಳಂದು ಬೆಳಗ್ಗೆ 4 ಗಂಟೆಗೆ ದೇವರಿಗೆ ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ, ವಿವಿಧ ಹೂಗಳಿಂದ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಹೀಗೆ ವಿಶೇಷ ಆಲಂಕೃತನಾದ ಸ್ವಾಮಿಯ ದರ್ಶನವನ್ನು ಪಡೆದು ಕೃತಾರ್ಥರಾಗಲು  ಅಕ್ಕ ಪಕ್ಕದ ಹಳ್ಳಿಗಳಲ್ಲದೇ ರಾಜ್ಯ ಮತ್ತು ಹೊರರಾಜ್ಯಗಳಲ್ಲಿಯೂ ನೆಲಸಿರುವ  ಈ ದೇವರ ಒಕ್ಕಲು ಭಕ್ತಾದಿಗಳು  ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ಒಂದು ರೀತಿಯ ಜಾತ್ರೆಯ ವಾತಾವರಣವನ್ನು ನಿರ್ಮಿಸುತ್ತಾರೆ. ಇಂತಹ ಹಬ್ಬ ಹರಿದಿನಗಳಲ್ಲಿ  ನಡೆಯುವ ವಿಶೇಷ ಪೂಜೆಗಳಿಗೆ ಆಗಮಿಸುವ ಭಕ್ತರು ತಮ್ಮ ಇಷ್ಟ್ಟಾರ್ಥಪ್ರಾಪ್ತಿಗಾಗಿ ಹರೆಕೆಗಳನ್ನು ಕಟ್ಟಿ ಅವರ ಹರಕೆ ತೀರಿದ ನಂತರ ಪೂಜೆ ಸಲ್ಲಿಸುತ್ತಾರೆ. ಇನ್ನೂ ಅನೇಕರು ದೇವರಿಗೆ ಶ್ರದ್ಧಾ ಭಕ್ತಿಯಿಂದ ನೈವೇದ್ಯವನ್ನು ತಯಾರಿಸಿ ಅದನ್ನು ಭಗವಂತನಿಗೆ ಅರ್ಪಿಸಿ ನಂತರ ಅದನ್ನೇ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಹಂಚಿ ಧನ್ಯತೆಯನ್ನು ಪಡೆಯುವುದನ್ನು ಇಲ್ಲಿ ಕಾಣ ಬಹುದಾಗಿದೆ.  ಇದಲ್ಲದೇ ಆಗ್ಗಾಗ್ಗೆ ಈ ದೇವಸ್ಥಾನದಲ್ಲಿ ವಿವಾಹದಂತಹ ಮಂಗಳ ಕಾರ್ಯಗಳು ನಡೆಯುತ್ತವೆ.  ಇನ್ನು ಇಲ್ಲಿಗೆ ಆಗಮಿಸಿಸುವ ಪ್ರತಿಯೊಬ್ಬ ಭಕ್ತಾದಿಗಳಿಗೂ ವರ್ಷಪೂರ್ತಿ ಪ್ರತಿನಿತ್ಯವೂ ದಾಸೋಹ ನಡೆಯುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ಇಲ್ಲಿ ನಡೆಯುವ ದಾಸೋಸ ಈ ದೇವಸ್ಥಾನದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಶಾಲಾ ಮಕ್ಕಳಿಗೆ ಪ್ರಮುಖ ಆಹಾರವಾಗಿದೆ ಎನ್ನುವುದು ನಿಜಕ್ಕೂ ಗಮನಾರ್ಹವಾಗಿದೆ.

ಶ್ರಾವಣ ಮಾಸದ ಅಷ್ಟೂ ಶನಿವಾರಗಳಂದು ಇಲ್ಲಿ ನಡೆಯುವ  ಜಾತ್ರೆಯಲ್ಲಿ  ಬಣ್ಣ ಬಣ್ಣದ ಬೊಂಬೆಗಳನ್ನು ಮಾರುವವರು, ಬಳೆಯನ್ನು ತೊಡಿಸುವ ಬಳೆಗಾರರು ಒಂದೆಡೆಯಾದರೇ, ಅಣ್ಣಾ ಚೆಪ್ಪಲಿ ಇಲ್ಲೇ ಬಿಟ್ಟು ಪೂಜೇ ಸಾಮಾನು ತೆಗೆದು ಕೊಳ್ರೀ ಅಂತ ಸಾಲು ಸಾಲಾಗಿ ಹಣ್ಣು, ಕಾಯಿ, ಕರ್ಪೂರ ಮತ್ತು ಊದುಕಡ್ಡಿ ವ್ಯಾಪಾರ ಮಾಡುವವರ ದಂಬಾಲು ಕಣ್ಣಿಗೆ ಬೀಳುತ್ತದೆ. ಅವರೆಲ್ಲರನ್ನೂ ದಾಟಿ ದೇವರ ದರ್ಶನ ಮಾಡಿ ಪುನಃ ಅದೇ ಸ್ಥಳಕ್ಕೆ ಬಂದರೆ ಕಡಲೇಪುರಿ, ಬೆಂಡು ಬತ್ತಾಸು ಕಲ್ಯಾಣಸೇವೆ, ಖಾರಾ ಸೇವೆ, ಬಗೆ ಬಗೆಯ ಸಿಹಿತಿನಿಸುಗಳನ್ನು ಮಾರುವವರ ಬಳಿ ಕಡಲೇ ಪುರಿಕೊಂಡು ಅದರ ಜೊತೆಯಲ್ಲಿ ದೇವರಿಗೆ ಅರ್ಪಿಸಿದ ತೆಂಗಿನ ಕಾಯಿ ಮತ್ತು ಬಾಳೇ ಹಣ್ಣಿನ ಪ್ರಸಾದವನ್ನು ಮರದ ಕೆಳಗೆ ಕುಳಿತು ತಿನ್ನುವುದರ ಆನಂದ ಹೇಳುವುದಕ್ಕಿಂತಲು ಅನುಭವಿಸಿದರೇ ಮಹದಾನಂದವಾಗುತ್ತದೆ.

ಇದೇ ಬೆಟ್ಟದ ತಪ್ಪಲಿನಲ್ಲಿ ಸುಮಾರು ೧೫೦ ಮೆಟ್ಟಿಲುಗಳನ್ನು ಇಳಿದಲ್ಲಿ  ಯಾಜ್ಞವಲ್ಕ್ಯ ಆಶ್ರಮವಿದೆ. ಈ  ಆಶ್ರಮದ ಪಕ್ಕದಲ್ಲಿಯೇ ಕಲ್ಯಾಣಿ ಇದೆ. ಎರಡು ಬಂಡೆಗಳ ಮಧ್ಯೆ ಇರುವ ಈ ಕಲ್ಯಾಣಿ ಮೇಲಿನಿಂದ ನೋಡಿದಲ್ಲಿ ಚಕ್ರದಾಕಾರದಲ್ಲಿ ಇರುವ ಕಾರಣ ಇದಕ್ಕೆ  ಚಕ್ರ ತೀರ್ಥ (ಚಕ್ರ ದೋಣಿ) ಎಂದು ಕರೆಯಲಾಗುತ್ತದೆ.   ವರ್ಷದ ೩೬೫ ದಿನಗಳ ಕಾಲವೂ ಅಲ್ಲಿ ನೀರು ಇದ್ದು ಒಂದು ಕಾಲದಲ್ಲಿ ಸ್ನಾನಕ್ಕೆ ಮತ್ತು ಕುಡಿಯಲು ಯೋಗ್ಯವಾಗಿತ್ತಂತೆ. ಈಗ ಸೂಕ್ತವಾದ ನಿರ್ವಹಣೆ ಇಲ್ಲದ ಕಾರಣ ಪಾಚಿ ಕಟ್ಟಿ ಹಸಿರು ಮಯವಾಗಿದ್ದು ಆಶ್ರಮದ ಸ್ವಚ್ಚತೆ ಇದೇ ನೀರನ್ನು ಬಳಸಿಕೊಳ್ಳಲಾಗುತ್ತದೆ. ಸುಮಾರು ವರ್ಷಗಳ ಇತಿಹಾಸವಿರುವ ಈ ಆಶ್ರಮಕ್ಕೆ ಅದರದ್ದೇ ಆದ ಭಕ್ತಾದಿಗಳು ಇದ್ದು ಇತ್ತೀಚೆಗೆ ಸಾಂಸದರ ನಿಧಿಯ ಸಹಾಯದಿಂದ ವಿಶಾಲವಾದ ಪ್ರಾಂಗಣದ ಜೊತೆಯಲ್ಲೇ  ಪಾಕಶಾಲೆ, ಶೌಚಾಲಯವನ್ನು ಕಟ್ಟಿಸಿದ್ದಾರೆ.  ಪ್ರತೀವರ್ಷವೂ ಸಂಕ್ರಾಂತಿ, ಶಿವರಾತ್ರಿ, ಶ್ರಾವಣ ಮಾಸದಲ್ಲಿ ಸಮಯದಲ್ಲಿ ಇಲ್ಲಿ‌ ವಿಶೇಷವಾದ ಪೂಜೆಗಳನ್ನು  ನಡೆಸುತ್ತಾರಲ್ಲದೇ, ಪ್ರತೀವರ್ಷವು ಸಾಮೂಹಿಕ ಉಪನಯನವನ್ನು ಮಾಡುವುದಲ್ಲದೇ ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳಿಗೆ ವೇದ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ವೇದಾಧ್ಯಯನದ ಜೊತೆ ನಮ್ಮ ಸನಾತನ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಹೇಳಿಕೊಡುತ್ತಿರುವುದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯವೇ ಸರಿ.  ಹಬ್ಬ ಹರಿದಿನಗಳಲ್ಲಿ ಸುತ್ತ ಮುತ್ತಲಿನ ಪ್ರಸಿದ್ದ ಕಲಾವಿದರಿಂದ ಸಂಗೀತ, ನೃತ್ಯ, ಗಮಕ, ಹರಿಕಥೆಗಳನ್ನು ಏರ್ಪಡಿಸುತ್ತಾರೆ.  ಶ್ರಾವಣ ಮಾಸದ ಮೊದಲ ಶನಿವಾರದಂದು  ಈ ಯಾಜ್ಞವಲ್ಕ್ಯ ಆಶ್ರಮದಲ್ಲಿ ನಡೆಯುವ ವಿಶೇಷ ಪೂಜೆಗೆ ನೂರಾರು ಭಕ್ತಾದಿಗಳು ದೂರ ದೂರದಿಂದ ಆಗಮಿಸಿ ಪೂಜೆಯನ್ನು ಸಲ್ಲಿಸಿ ಇಲ್ಲಿ ನಡೆಯುವ  ಸಂತರ್ಪಣೆಗೆ ಯಥಾಶಕ್ತಿ ಸಹಾಯ ಮಾಡಿ ಕೃತಾರ್ಥರಾಗುತ್ತಾರೆ

ಯಾಜ್ಞವಲ್ಕ್ಯ ಆಶ್ರಮದಿಂದ ಕೂಗಳತೆಯ ದೂರದಲ್ಲೇ  ಪುರಾತನ ಕಾಲದ ಗವಿ ಇದ್ದು ಈ  ಗವಿಯಿಂದ ತಿರುಪತಿಗೆ ಸುರಂಗಮಾರ್ಗ ಇದೆ ಎಂಬ ಪ್ರತೀತಿಯೂ ಇದೆ. ಗವಿಯಲ್ಲಿಯೇ ಗೌತಮ ಋಷಿಗಳು ತಪಸ್ಸು ಮಾಡಿದರೆಂದೂ ಹೇಳಲಾಗುತ್ತದೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಶಂಖು ತೀರ್ಥವಿದ್ದು (ಶಂಖು ದೋಣೆ) ಇಲ್ಲಿ ವರ್ಷವಿಡೀ ನೀರು ಇರುತ್ತದೆ. ಮಳೆಗಾಲದಲ್ಲಿ ಅನೇಕ ಬಾರಿ ನೀರು ಇಲ್ಲಿಂದ  ಉಕ್ಕಿ ಹರಿಯುತ್ತದೆ ಎಂದು ಸ್ಥಳೀಯರು ತಿಳಿಸುತ್ತಾರೆ.   ಇತ್ತಿಚಿನ ವರ್ಷದ ವರೆಗೂ ಈ ಶಂಖು ತೀರ್ಥದ ನೀರು ಕುಡಿಯಲು ಯೋಗ್ಯವಾಗಿದ್ದು ಅದರೊಳಗೆ ಇಳಿಯುವುದಕ್ಕಾಗಿ ಕಿರಿದಾದ ಮೆಟ್ಟಿಲುಗಳು ಮತ್ತು ಹಿಡಿದುಕೊಳ್ಳಲು ಸರಪಳಿಯನ್ನು ಅಳವಡಿಸಲಾಗಿತ್ತು. ಈಗ ಸೂಕ್ತವಾದ ನಿರ್ವಹಣೆ ಇಲ್ಲದ  ಕಾರಣ ಸರಪಳಿಗಳು ಕಾಣದಾಗಿದ್ದು ನೀರು ಸಹಾ ಪಾಚಿಕಟ್ಟಿ ಪಾಳು ಬಿದ್ದಂತೆ ಆಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.  ಇಲ್ಲಿಂದ ಸ್ವಲ್ಪ ದೂರದಲ್ಲೇ ಸುಮಾರು ಎರಡು ಅಡಿ ವ್ಯಾಸವಿರುವ ಕೈಗೇ ನೀರು ಸಿಗಬಹುದಾಗಿದ್ದಂತಹ ಲಕ್ಷ್ಮೀ ತೀರ್ಥ (ಲಕ್ಷ್ಮೀ ದೋಣೆ) ಇದ್ದು ಇಲ್ಲಿಯೂ ಸಹಾ ಮಳೆಗಾಲದಲ್ಲಿ ನೀರು ಉಕ್ಕಿ ಹೊರಚೆಲ್ಲುತ್ತದೆ. ಈ ಪವಿತ್ರ ನೀರನ್ನು ಪ್ರೋಕ್ಷಿಸಿಕೊಂಡರೆ ಒಳ್ಳೆಯದಾಗುತ್ತದೆ ಎನ್ನುವುದು ಸ್ಥಳೀಯದ ನಂಬಿಕೆಯಾಗಿದೆ.

ಇದೇ ಬೆಟ್ಟದ ತಪ್ಪಲಿನಲ್ಲಿ ಬಯಲಾಂಜನೇಯ ೮-೧೦ ಅಡಿಯಷ್ಟು ದೊಡ್ಡದಾದ ಆಂಜನೇಯ  ಸ್ವಾಮಿಯ ವಿಗ್ರಹವಿದ್ದು ಇತ್ತೀಚೆಗೆ ಸ್ಥಳೀಯ ಭಕ್ತಾದಿಗಳ ನೆರವಿನೊಂದಿಗೆ  ಅದಕ್ಕೊಂದು ಸಣ್ಣದಾದ ಗುಡಿಯೊಂದನ್ನು ಕಟ್ಟಿ ಸೌಗಂಧಿಕಾ ಪುಷ್ಸ್ಪದ  ಶ್ರೀ ಆಂಜನೇಯ ಸ್ವಾಮಿ ಎಂಬ ಹೆಸರನ್ನು ಬರೆಸಿದ್ದಾರಾದರೂ ಈ ಆಂಜನೇಯಸ್ವಾಮೀ ವಿಗ್ರಹದ  ಕುರಿತಾಗಿ  ಹೆಚ್ಚಿನ ಮಾಹಿತಿ ಇಲ್ಲವಾಗಿದೆ. ಪ್ರತಿನಿತ್ಯವೂ ಸ್ಥಳೀಯ ವಯೋವೃದ್ಧರೊಬ್ಬರು  ಯಥಾಶಕ್ತಿ ಪೂಜೆ ನಡೆಸಿಕೊಂಡು ಹೋಗುತ್ತಿದ್ದಾರೆ.

ಇದುವರೆಗೂ ತಿಮ್ಮರಾಯನ ಸ್ವಾಮಿಯ ಬೆಟ್ಟವನ್ನು ಪೌರಾಣಿಕ, ಐತಿಹಾಸಿಕ ಹಿನ್ನಲೆಯುಳ್ಳ ಧಾರ್ಮಿಕ ಕ್ಷೇತ್ರವಾಗಿ ನೋಡಿದರೆ, ಇನ್ನು ಗಂಡದೆಯ ಗುಂಡಿಗೆಯ  ಚಾರಣಿಗರಿಗಂತೂ ಹೇಳಿ ಮಾಡಿಸಿದ ಸ್ಥಳವಾಗಿದೆ   ಎಂದರೂ ಅತಿಶಯವಲ್ಲ. ಅಷ್ಟೇನೂ ಕಡಿದಾಗಿರದ ಸ್ವಲ್ಪ ಎಚ್ಚರ ವಹಿಸಿ ಸುಲಭವಾಗಿ ಚಾರಣ ಮಾಡಬಹುದಾದ ತಿಮ್ಮರಾಯನ ಸ್ವಾಮಿಯ ಬೆಟ್ಟದ ತುತ್ತ ತುದಿ ಏರುತ್ತಿದ್ದಂತೆಯೇ,  ನಂದೀ ಬೆಟ್ಟದ ಅಕ್ಕ ಪಕ್ಕದ  ಸಾಲು ಸಾಲು ಬೆಟ್ಟ ಗುಡ್ಡಗಳ ವಿಹಂಗಮ ನೋಟ ಮನ ಸೆಳೆಯುವುದಲ್ಲದೇ ಬೆಟ್ಟದ ತುದಿಯಲ್ಲಿರುವ ನೀರಿನ ಸೆಲೆಗಳು ಮತ್ತು ಅದರ ಸುತ್ತಮುತ್ತಲಿನ ಹಸಿರು ವಾತಾವರಣ ಮನಸ್ಸಿಗೆ ಆನಂದವನ್ನು ನೀಡುತ್ತದೆ. ಅಷ್ಟು ಎತ್ತರಕ್ಕೆ ಏರಿದಾಗ ಅಲ್ಲಿನ  ಪ್ರಶಾಂತವಾದ ಗಾಳಿ ನಮಗೇ ಅರಿವಿಲ್ಲದಂತೆ  ಧ್ಯಾನಾವಸ್ಥೆಗೆ ಕರೆದೊಯ್ಯುತ್ತದೆ. ವಾರಾಂತ್ಯದಲ್ಲಿ ಹತ್ತಾರು ಚಾರಣಿಗರು ಈ ಪ್ರದೇಶಕ್ಕೆ ಬಂದು ಬೆವರು ಸುರಿಸಿ ಬೆಟ್ಟವನ್ನೇರಿ ಇಲ್ಲಿನ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ.

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬೆಂಗಳೂರಿಗೆ ಅತ್ಯಂತ ಸಮೀಪದಲ್ಲೇ ಅತ್ಯಂತ ರಮಣೀಯವಾದ ಬೆಟ್ಟ ಗುಡ್ಡಗಳು ಮತ್ತು ನೀರಿನ ಸೆಲೆ ಇರುವ ಸುಂದರವಾದ ಪ್ರಕೃತಿ ತಾಣವಾಗಿರುವ ಕಾರಣ, ಇಲ್ಲಿಯ ಪ್ರಕೃತಿ ಸೊಬಗು ಮತ್ತು ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಲ್ಲಿ ಅದನ್ನು ಸೆರೆ ಹಿಡಿದು ಪ್ರೇಕ್ಷಕರ ಕಣ್ತುಂಬಿಸುವ ಸುವರ್ಣಾವಕಾಶವನ್ನು ನಮ್ಮ ಚಿತ್ರರಂಗ ಬಿಡುತ್ತದೆಯೇ? ಹಾಗಾಗಿ ಈ ಈ ತಿಮ್ಮರಾಯನಸ್ವಾಮಿ ಬೆಟ್ಟದ ರಮಣೀಯ ಕ್ಷೇತ್ರ  ಅನೇಕ ಚಲನಚಿತ್ರಗಳು ಮತ್ತು ಧಾರಾವಾಹಿಗಳ ಶೂಟಿಂಗ್‌ ಸ್ಪಾಟ್‌ ಅಗಿಯೂ  ಗಮನ ಸೆಳೆಯುತ್ತದಲ್ಲದೇ ಈಗಾಗಲೇ ನೂರಾರು ಚಿತ್ರಗಳು ಮತ್ತು ಧಾರಾವಾಹಿಗಳು ಇಲ್ಲಿ ಚಿತ್ರೀಕರಿಸಲ್ಪಟ್ಟಿದೆ.

ಇಂತಹ ಧಾರ್ಮಿಕ ಕ್ಷೇತ್ರಗಳ ಮಹಿಮೆಯನ್ನು ಅರಿಯದ ಕೆಲ ಕಾಲೇಜಿನ ಹುಡುಗ ಹುಡುಗಿಯರು ಕಾಲೇಜಿಗೆ ಬಂಕ್ ಮಾಡಿ ಇಲ್ಲಿನ ಬೆಟ್ಟದ ಮೇಲಿರುವ ಬಂಡೆಗಳ ಮರೆಯಲ್ಲಿ ಕುಳಿತು ತಮ್ಮ ತೆವಲುಗಳನ್ನು ತೀರಿಸಿಕೊಂಡರೆ, ಇನ್ನೂ ಕೆಲವು ಪುಂಡರು ಡ್ರಗ್ಸ್ ಸೇವಿಸಿ  ಇಲ್ಲಿನ ಪಾವಿತ್ರಗೆ ಭಂಗ ತರತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ. ಹಗಲು ಹೊತ್ತಿನಲ್ಲಿ ಈ ರೀತಿಯಾಗಿ ಕಾಲೇಜು ಯುವಕ ಯುವತಿಯರ ಸರಸ ಸಲ್ಲಾಪಗಳ ತಾಣವಾದರೆ,  ಸಂಜೆಯಾಗುತ್ತಲೇ ಸುತ್ತ ಮುತ್ತಲ ಹಳ್ಳಿಯ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗುತ್ತದೆ. ಸುತ್ತಮುತ್ತಲ ಪುಂಡರು ಮದ್ಯದ ಬಾಟಲಿಗಳು ಹಾಗೂ ಆಹಾರದ ಪೊಟ್ಟಣಗಳೊಂದಿಗೆ ಬಂದು ಮೋಜು ಮಸ್ತಿ ಮಾಡಿ ಬೆಟ್ಟವನ್ನು ಗಬ್ಬೆಬ್ಬಿಸಿ ಹೋಗುವುದಲ್ಲದೇ, ಕುಡಿದ ಮತ್ತಿನಲ್ಲಿ ಮಧ್ಯದ ಬಾಟೆಲ್ಲುಗಳನ್ನು ಎಲ್ಲೆಂದರಲ್ಲಿ ಒಡೆದು ಹಾಕುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಇವೆಲ್ಲವುಗಳ ಹೊರತಾಗಿಯೂ ಕುಟುಂಬ ಸಮೇತರಾಗಿ ಬೆಂಗಳೂರಿನ ಸಮೀಪದಲ್ಲಿಯೇ ಅರ್ಧ ದಿನಗಳನ್ನು ಆರಾಮವಾಗಿ ಭಕ್ತಿ ಭಾವ ಮತ್ತು ಮನಸ್ಸಿಗೆ ಮುದ ನೀಡುವಂತಹ ಈ ಪುಣ್ಯಕ್ಷೇತ್ರಕ್ಕೆಭೇಟಿ ನೀಡಿದಲ್ಲಿ ನಗರದ ಜಂಜಾಟಗಳಿಂದ ಕೆಲವು ಗಂಟೆಗಳ ಕಾಲ ನೆಮ್ಮದಿಯಾಗಿ ಕಾಲ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ.

ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಸೂರ್ಯ ಹುಟ್ಟುವ ಮೊದಲೇ ಚಾರಣ ಮಾಡಿ ಸೂರ್ಯೋದಯವನ್ನು ಬೆಟ್ಟದ ತುದಿಯಿಂದಲೇ ನೋಡಿ ಆನಂದಿಸಿ  ತಿಮ್ಮರಾಯ ಸ್ವಾಮಿಯ ದರ್ಶನವನ್ನು ಪಡೆದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತಿರೀ ತಾನೇ?

ಏನಂತೀರೀ?

ನಿಮ್ಮವನೇ ಉಮಾಸುತ

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: