ಮನೆಯಲ್ಲಿರುವ ಹಿರಿಯರು

ajji6ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ ನಾನು ಸಹಾ ಹೋಗುವುದಿಲ್ಲ!  ಎಂದು ಅಜ್ಜಿಯನ್ನು ಒತ್ತಾಯ ಪಡಿಸಿದಳು.

ನೋಡು ಪಾಪು. ಅಜ್ಜಿಗೆ ಮಾಲ್‌ನಲ್ಲಿ ಎಲ್ಲಾ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿಲ್ಲ. ಅವರಿಗೆ
ಎಸ್ಕಲೇಟರ್ ಬಳಸಿದ ಅಭ್ಯಾಸವಿಲ್ಲ. ಅಜ್ಜಿ ದೇವಸ್ಥಾನದ ಹೊರತಾಗಿ ಬೇರೆಲ್ಲೂ ಹೋಗಲು ಇಚ್ಚಿಸುವುದಿಲ್ಲ ಎಂದಳು ಎಂದಳು ಸೊಸೆ.

ajj5ಹೌದು ಪುಟ್ಟಾ, ಅಮ್ಮಾ ಹೇಳ್ತಿರೋದು ಸರಿ ಎಂದು ಅಜ್ಜಿಯೂ ಸಹಾ ಧನಿಗೂಡಿಸಿದರೂ, ಮೊಮ್ಮಗಳು ಮಾತ್ರಾ ತನ್ನ ನಿರ್ಧಾರಕ್ಕೆ ಅಚಲವಾಗಿದ್ದಳು.ಅಜ್ಜಿ ಜೊತೆಗಿಲ್ಲದಿದ್ದರೆ ಮಾಲ್‌ಗೆ ನಾನೂ ಬರುವುದಿಲ್ಲ ಎಂದು ಹೇಳಿದಾಗ ಹತ್ತು ವರ್ಷದ ಮೊಮ್ಮಗಳ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರು ಅಜ್ಜಿ.

Vector girl helping old woman

ಅಜ್ಜಿ ಮಾಲ್ ಗೆ ಬರಲು ಒಪ್ಪಿಕೊಂಡಿದ್ದು ಮೊಮ್ಮಗಳಿಗೆ ತುಂಬಾ ಖುಷಿಯಾಗಿ ಅಜ್ಜಿ ಮಾಲ್ ಗೆ ಹೋಗೋದಕ್ಕೆ ಇನ್ನು ಸ್ವಲ್ಪ ಸಮಯವಿದೆ. ಅಷ್ಟರೊಳಗೆ ನಾವಿಬ್ಬರೂ ಒಂದು ಸಣ್ಣದಾದ ಆಟವನ್ನು ಆಡೋಣ ಎಂದು ಹೇಳಿ ಆಜ್ಜಿಯನ್ನು ತನ್ನ ಕೋಣೆಯೊಳಗೆ ಕರೆದುಕೊಂಡು ಹೋಗಿ ಅಲ್ಲಿ ಎರಡು ಸಮಾನಾಂತರ ರೇಖೆಗಳನ್ನು ಎಳೆದಳು. ಅಜ್ಜಿ ಇಲ್ಲಿ ಬನ್ನಿ ಎಂದು ತನ್ನ ಪಕ್ಕದಲ್ಲಿ ಅಜ್ಜಿಯನ್ನು ನಿಲ್ಲಿಸಿಕೊಂಡು ಅಜ್ಜೀ ನಾವೀಗ ಹಕ್ಕಿಯ ಆಟವನ್ನು ಆಡುತ್ತಿದ್ದೇವೆ. ನೋಡಿ ಈಗ ಒಂದು ಕಾಲನ್ನು ಈ ಗೆರೆಯೊಳಗೆ ಇಟ್ಟು ಕೊಂಡು ಇನ್ನೊಂದು ಕಾಲನ್ನು ಇನ್ನೊಂದು ಕಾಲನ್ನು ಮೂರು ಇಂಚುಗಳಷ್ಟು ಮೇಲಕ್ಕೆತ್ತಿ ಇಡಿ ನಂತರ ಹೀಗೇ ಮತ್ತೊಂದು ಕಾಲಿನಲ್ಲೂ ಮಾಡಬೇಕೆಂದು ತಿಳಿಸಿದಾಗ ಆರಂಭದಲ್ಲಿ ತುಸು ತ್ರಾಸದಾಯಕವೆನಿಸಿದರೂ, ಕೆಲವೇ ನಿಮಿಷಗಳಲ್ಲಿ ಅಜ್ಜಿ ಮೊಮ್ಮಗಳ ಸರಿ ಸಮನಾಗಿ ಆಟವಾಡುತ್ತಿದ್ದಂತೆಯೇ, ಪುಟ್ಟಾ ಹೋರಡೋಣವೇ? ಎಂದಾಗಲೇ ಅಜ್ಜಿ ಮೊಮ್ಮಗಳು ಆಟ ನಿಲ್ಲಿಸಿದ್ದು.

ಹಾಂ ಅಪ್ಪಾ! ಒಂದೇ ನಿಮಿಷ ನನ್ನ ಬ್ಯಾಗ್ ತೆಗೆದುಕೊಂಡು ಬರ್ತೀನಿ ! ಎಂದು ತನ್ನ ಸಣ್ಣ ಬ್ಯಾಗಿನೊಳಗೆ ಅದೇನೋ ಹಾಕಿಕೊಂಡು ನಡೀರೀ ಅಜ್ಜೀ ಎಂದು ಅಜ್ಜಿಯ ಕೈ ಹಿಡಿದುಕೊಂಡು ಕಾರ್ ಹತ್ತಿ ಕುಳಿತರು.

ಮನೆಯಿಂದ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಅವರೆಲ್ಲರೂ ಮಾಲ್ ತಲುಪಿದಾಗ ಈ ಅಜ್ಜಿ ಅದು ಹೇಗೆ ಎಸ್ಕಲೇಟರ್ ಹತ್ತುತ್ತಾರೆ? ಎಂದು ಮಗ ಸೊಸೆ ಯೋಚಿಸುತ್ತಿರುವಾಗಲೇ, ಮೂಮ್ಮಗಳು ಅಜ್ಜಿಯನ್ನು ಅಜ್ಜೀ ಪಕ್ಷಿಯ ಆಟವನ್ನು ಇದರ ಮೇಲೆ ಆಡೋಣ ಎಂದ ಕೂಡಲೇ, ಅಜ್ಜಿ ತನ್ನ ಬಲಗಾಲನ್ನು ಮೇಲಕ್ಕೆತ್ತಿ ಅದನ್ನು ಚಲಿಸುವ ಮೆಟ್ಟಿಲಿನ ಮೇಲಿಟ್ಟು, ತನ್ನ ಎಡಗಾಲನ್ನು ಮೂರು ಇಂಚುಗಳಷ್ಟು ಮೇಲಕ್ಕೆತ್ತಿ ಮುಂದೆ ಚಲಿಸುವ ಮೆಟ್ಟಿಲಿನ ಮೇಲೆ ಸುಲಭವಾಗಿ ಇಟ್ಟಿದ್ದನ್ನು ನೋಡಿ ಮಗ ಮತ್ತು ಸೊಸೆಯರನ್ನು ಆಶ್ಚರ್ಯಗೊಳಿಸಿತು. ನೋಡ ನೋಡುತ್ತಿದ್ದಂತೆಯೇ ಅಜ್ಜಿ ಮತ್ತು ಮೊಮ್ಮಗಳು ಎಸ್ಕಲೇಟರ್‌ನಲ್ಲಿ ಮಹಡಿಯ ಮೇಲೆ ಹತ್ತಿ ಗಂಡ ಹೆಂಡತಿ ಅದಾವುದೋ ಅಂಗಡಿಯನ್ನು ಹೊಕ್ಕಾಗ, ಇವರಿಬ್ಬರೂ ಹಲವಾರು ಬಾರಿ ಎಸ್ಕಲೇಟರ್ ನಲ್ಲಿ ಮೇಲೆ ಕೆಳಗೆ ಹತ್ತಿ ಇಳಿದು ಚೆನ್ನಾಗಿ ಮೋಜು ಮಾಡಿದರು.

ajji3ಆದಾದ ನಂತರ ಸಿನಿಮಾ ನೋಡಲು ಥಿಯೇಟರ್‌ ಒಳಗೆ ಹೋದಾಗ, ಅಲ್ಲಿನ ಏಸಿ ಯಿಂದಾಗಿ ಅಜ್ಜಿ ನಡುಗುತ್ತಿದ್ದದ್ದನ್ನು ಕಂಡ ಮೊಮ್ಮಗಳು ಕೂಡಲೇ ತನ್ನ ಬ್ಯಾಗಿನಿಂದ ಶಾಲನ್ನು ತೆಗೆದು ಅಜ್ಜಿಗೆ ಹೊದಿಸಿ ಮುಗುಳ್ನಗೆ ಬೀರಿದಳು. ಮೊಮ್ಮಗಳು ಇಂತಹದ್ದಕ್ಕೆಲ್ಲಾ ಸಿದ್ಧವಾಗಿಯೇ ಬಂದ್ದಿದ್ದಳು!

ಸಿನಿಮಾ ಮುಗಿಸಿಕೊಂಡು ಅಲ್ಲಿಯೇ ಇದ್ದ ರೆಸ್ಟೋರೆಂಟ್ ಗೆ ಹೋದಾಗ ಅಮ್ಮಾ ನಿಮಗೇನು ಆರ್ಡರ್ ಮಾಡಲಿ? ಎಂದು ಕೇಳಿದ ಕೂಡಲೇ ಮೊಮ್ಮಗಳು ಅಜ್ಜಿಯ ಕೈಗೆ ಮೆನು ಕಾರ್ಡ್ ಕೊಟ್ಟು ಅಜ್ಜಿ ನಿಮಗೂ ಓದಲು ಬರುತ್ತದೆ. ನಿಮಗೇನು ಬೇಕು ಅಂತ ನೋಡಿ ಹೇಳಿ ಎಂದು ಹೇಳಿ ಅಜ್ಜೀ ಮೊಮ್ಮಗಳು ಕೆಲ ಕಾಲ ನಿರ್ಧರಿಸಿ ಆವರಿಗೆ ಏನು ಬೇಕೋ ಅದನ್ನು ಆರ್ಡರ್ ಮಾಡಿ ತಂದ ಆಹಾರವನ್ನು ಸವಿದರು.

ಊಟದ ನಂತರ ಅಜ್ಜಿ ಮತ್ತು ಮೊಮ್ಮಗಳು ಅಲ್ಲಿಯೇ ಇದ್ದ ವೀಡಿಯೋ ಪಾರ್ಲರ್ ನಲ್ಲಿ ಕೆಲವು ವಿಡಿಯೋ ಗೇಮ್‌ಗಳನ್ನು ಆಡಿ ಸುಸ್ತಾದ ನಂತರ ಅಜ್ಜಿ ಶೌಚಾಲಯಕ್ಕೆ ಹೋದಾಗ ಮಗ ತನ್ನ ಮಗಳನ್ನು ಕರೆದು ನನ್ನ ತಾಯಿಯ ಬಗ್ಗೆ ಮಗನಾಗಿ ನನಗೇ ಗೊತ್ತಿಲ್ಲದಿದ್ದದ್ದು ಇಷ್ಟು ಸಣ್ಣ ವಯಸ್ಸಿನ ಹುಡುಗಿಯಾದ ನಿನಗೆ ಹೇಗೆ ತಿಳಿಯಿತು? ಎಂದು ಕೇಳಿದಾಗ

ajji2ಅಪ್ಪಾ…., ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ಯುವಾಗ ಹಾಲಿನ ಬಾಟಲ್, ಡೈಪರ್ಗಳು, ಒಂದೆರಡು ಹೆಚ್ಚಿನ ಬಟ್ಟೆಗಳನ್ನು ಕೊಂಡೆಯ್ಯುವುದಿಲ್ಲವೇ? ಅದನ್ನೇ ಹಿರಿಯರನ್ನು ಹೊರಗೆ ಕರೆದ್ಯೊಯ್ಯುವಾಗ ಬಳಸಿಕೊಳ್ಳಬಾರದೇಕೇ? ಹಿರಿಯರು ಎಂದ ಕೂಡಲೇ, ಅವರನ್ನು ಕೇವಲ ದೇವಸ್ಥಾನ ಮದುವೆ ಮುಂಜಿಗಳಿಗಷ್ಟೇ ಏಕೆ ಸೀಮಿತಗೊಳಿಸಬೇಕು? ಅವರಿಗೂ ತಮ್ಮ ಕುಟುಂಬದೊಡನೆ ಸುತ್ತಾಡಬೇಕು ಕುಟುಂಬದೊಂದಿಗೆ ಆನಂದಿಸಿ, ಹೊರಗೆ ಹೋಗಿ, ಮೋಜು ಮಾಡ ಬೇಕು ಎಂಬ ಆಸೆಗಳು ಇರುತ್ತವೆಯಾದರು ಅವರು ಸ್ವಾಭಿಮಾನದಿಂದಾಗಿ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಇಚ್ಚಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಮಕ್ಕಳಾದ ನಾವು ಸುಮ್ಮನಾಗದೇ, ಅವರನ್ನು ಸ್ವಲ್ಪ ಒತ್ತಾಯ ಮಾಡಿಯಾದರೂ ಕರೆದುಕೊಂಡು ಹೋದಾಗ ಖಂಡಿತವಾಗಿಯೂ ಅವರಿಗೆ ಸಂತೋಷವಾಗುತ್ತದೆ. ಅದನ್ನೇ ನಾವಿಂದು ಅಜ್ಜಿಯಲ್ಲಿ ನೋಡಿದೆವು ಎನ್ನುತ್ತಾಳೆ.

ಹತ್ತು ವಯಸ್ಸಿನ ತನ್ನ ಮಗಳಿಗೆ ಏನೂ ಗೊತ್ತಾಗದು ಆಕೆಯಿನ್ನೂ ಚಿಕ್ಕವಳು ಆಕೆ ಮುಗ್ಧೆ ಎಂದೆಲ್ಲಾ ತಿಳಿದಿದ್ದ ತಂದೆಯು ಮಗಳ ಮಾತಿನಿಂದ ಮೂಕವಿಸ್ಮಿತರಾಗಿದ್ದಲ್ಲದೇ, ತನ್ನ ಮಗಳಿಂದ ತಾನು ಪಾಠ ಕಲಿತೆನೆಂಬ ಖುಷಿಯಿಂದ ಮಗಳನ್ನು ಅಪ್ಪಿಕೊಂಡು ಮುದ್ದಾಡಿದನು.

ಬಹುತೇಕ ಮಕ್ಕಳು ಸ್ವಲ್ಪ ದೊಡ್ಡವರಾಗಿ ದುಡಿಯಲು ಆರಂಭಿಸಿದ ಕೂಡಲೇ ತಮಗೇ ಎಲ್ಲವೂ ಗೊತ್ತು. ಎಂಬ ಅಹಂ ಅವರಲ್ಲಿ ಮೂಡಿರುತ್ತದೆ. ಅದರಲ್ಲೂ ವಯಸ್ಸಾದ ಪೋಷಕರ ಬಗ್ಗೆ ಅವರ ಇಚ್ಚೆಗಳ ಬಗ್ಗೆ ತಿಳಿಯದಿದ್ದರೂ ಎಲ್ಲವೂ ತಮಗೆ ತಿಳಿದಿದೆ ಎಂದೇ ಭಾವಿಸುತ್ತಿರುತ್ತಾರಾದರು ಅದು ನಿಜವಾಗಿರದೇ, ಭ್ರಮಾಲೋಕದಲ್ಲಿ ತೇಲಾಡುತ್ತಿರುತ್ತಾರೆ.

ajji4ಇದನ್ನೇ Generation Gap ಅಥವಾ ಪೀಳಿಗೆಯ ಅಂತರ ಎನ್ನಬಹುದಾಗಿದೆ. ಹಾಗಾಗಿ ಎಷ್ಟೇ ಕೆಲಸ ಕಾರ್ಯಗಳ ಮಧ್ಯೆ ಮಗ್ನರಾಗಿದ್ದರೂ, ದಯವಿಟ್ಟು ತಮ್ಮ ಮನೆಯಲ್ಲಿರುವ ಹಿರಿಯರಿಗಾಗಿ ಸ್ವಲ್ಪ ಸಮಯ ಕೊಡಿ ಅವರ ಇಚ್ಚೆಗಳನ್ನು ಕೇಳಿ ಅದನ್ನು ಕಾರ್ಯಗತ ಮಾಡಿದಾಗಲೇ ನಿಜವಾದ ತೃಪ್ತಿ ಸಿಗುತ್ತದೆ. ಪೋಷಕರೇನೂ ಇಂದ್ರ ಚಂದ್ರ ದೇವೇಂದ್ರನನ್ನು ತಂದು ಕೊಡಿ ಎಂದು ಕೇಳುವುದಿಲ್ಲ. ಅವರಿಗೆ ತಮ್ಮ ಕುಟುಂಬದ ಸದಸ್ಯರು ತಮ್ಮೊಂದಿಗೆ ಚೆಂದವಾಗಿ ಮಾತನಾಡಿಕೊಂಡು ಅವರೇನೂ ಮಾಡುತ್ತಾರೋ ಅವರೇನು ತಿನ್ನುತ್ತಾರೋ ಅವರೆಲ್ಲಿಗೆ ಹೋಗುತ್ತಾರೋ ಅಲ್ಲಿಗೆ ಅವರೊಂದಿಗೆ ಕರೆದು ಕೊಂಡು ಹೋದರೂ ಸಾಕು. ಅವರಿಗೆ ಮಾನಸಿಕವಾಗಿ ನೆಮ್ಮದಿ ದೊರೆತು ಇನ್ನೂ ಕೆಲಕಾಲ ನೆಮ್ಮದಿಯ ಜೀವನ ನಡೆಸುತ್ತಾರೆ. ನಿಜ ಹೇಳಬೇಕೆಂದರೆ ಹಿರಿಯರು ಮನೆಯಲ್ಲಿ ಇರುವುದೇ ಒಂದು ಆಸ್ತಿ. ಹಿರಿಯರು ಇರುವಾಗ ಅವರಿಂದ ಆದಷ್ಟು ಸಂಸ್ಕಾರ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಇಡೀ ಕುಟುಂಬದವರು ಕಲಿಯಬಹುದಾಗಿದೆ. ಮಕ್ಕಳಿಗಾಗಿಯೇ ಎಲ್ಲಾ ಆಸೆಗಳನ್ನೂ ಪಕ್ಕಕ್ಕಿಟ್ಟು ಅವರ ಶ್ರೇಯಕ್ಕಾಗಿಯೇ ಇಡೀ ಜೀವನವನ್ನು ತೇಯ್ದವರನ್ನು ಮಕ್ಕಳೇ ಸರಿಯಾಗಿ ನೋಡಿಕೊಳ್ಳದೇ ಹೋದಲ್ಲಿ ಮುಂದೆ ಆದೇ ರೀತಿಯ ಕಷ್ಟವನ್ನು ಅವರ ಮಕ್ಕಳಿಂದ ಅನುಭವಿಸುವ ಸಂಭವವೇ ಹೆಚ್ಚು. ಏಕೆಂದರೆ ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯರೇ ಮೊದಲ ಗುರುಗಳು ಅಲ್ಲವೇ?

ಇದ್ದಾಗ ತಂದೆ  ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದೇ, ಸತ್ತಾಗ ಅತ್ತು ಕರೆದು, ನೂರಾರು ಜನರನ್ನು ಕರೆಸಿ ಭಕ್ಷ ಭೋಜನವನ್ನು ಹಾಕಿಸಿದರೆ ಮತ್ತೆ ಎದ್ದು ಬರುವವರೇ ನಮ್ಮನ್ನು ಹೆತ್ತವರು?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s