ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಳವಾಗಿ ಹೇಳಬೇಕೆಂದರೆ RSS, ಬಹುಶಃ ಈ ಸಂಘಟನೆಯ ಹೆಸರನ್ನು ಕೇಳದ ಕೇಳದ ಭಾರತೀಯರೇಕೇ? ವಿಶ್ವ ಮಟ್ಟದ ನಾಯಕರುಗಳೇ ಇಲ್ಲಾ ಎಂದು ಹೇಳಿದರು ಅತಿಶಯವಲ್ಲ. ಸೆಪ್ಟಂಬರ್ 27 1925 ಭಾನುವಾರ, ವಿಕ್ರಮ ನಾಮ ಸಂವತ್ಸರದ ದಕ್ಷಿಣಾಯನದ ಶರದ್ ಋತು ವಿಶೇಷವಾಗಿ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದ ಮೋಹಿತೇವಾಡ ಎಂಬ ಮೈದಾನದಲ್ಲಿ ಹತ್ತಾರು ಮಕ್ಕಳೊಂದಿಗೆ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರಿಂದ ಆರಂಭವಾದ ಸಂಘ 98 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ 2025 ಕ್ಕೆ 100 ವರ್ಷಗಳನ್ನು ಸಂಪೂರ್ಣಗೊಳಿಸಲಿದೆ. ಅಂತಹ ಸಂಘದ ಕಿರುಪರಿಚಯ ಇದೋ ನಿಮಗಾಗಿ
ಏಪ್ರಿಲ್ 1, 1889 ಯುಗಾದಿಯ ದಿನದಂದು ರಂದು ಮಹಾರಾಷ್ಟ್ರದ ಬೋಧನ್ ಎಂಬ ಊರಿನಲ್ಲಿ ಜನಿಸಿದ ಕೇಶವ ಬಲಿರಾಮ ಹೆಡಗೇವಾರ್ ಅವರು ನಂತರದ ದಿನಗಳಲ್ಲಿ ನಾಗಪುರದಲ್ಲಿ ನೆಲಸಿ ಆವರು ವಿದ್ಯಾರ್ಥಿಯಾಗಿರುವಾಗಲೇ, ಲೋಕನಾಯಕ್ ಆನೆ ಮತ್ತು ಬಾಬಾಸಾಹೇಬ್ ಪ್ರಾಂಜಪೆಯವರ ಸಂಪರ್ಕ ದೊರೆತು, ಅದಾಗಲೇ ಸ್ವಾತ್ರಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಡಾ ಮುಂಜೆ ಮತ್ತು ಲೋಕಮಾನ್ಯ ತಿಲಕರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಇದರ ಜೊತೆಯಲ್ಲಿಯೇ ಸ್ವಾಮಿ ವಿವೇಕಾನಂದರು, ಸಾವರ್ಕರ್ ಮತ್ತು ಯೋಗಿ ಅರವಿಂದರ ಕೃತಿಗಳು ಮತ್ತು ಬರವಣಿಗೆಯಿಂದ ಹೆಚ್ಚು ಪ್ರಭಾವಿತರಾಗಿರಾಗಿ ಅಪಾರವಾದ ದೇಶಭಕ್ತಿ ಅವರಲ್ಲಿ ಜಾಗೃತವಾಗಿರುತ್ತದೆ. ಇದರ ಜೊತೆ ಜೊತೆಯಲ್ಲಿಯೇ ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯ ಗುಡ್ಡಗಾಡಿನ ಮಕ್ಕಳನ್ನು ಒಗ್ಗೂಡಿಸಿ ಸ್ವಯಂಸೇವಕ ಸೈನ್ಯವನ್ನು ರಚಿಸಿ ಮೊಘಲರನ್ನು ಮೆಟ್ಟಿ ನಿಂತು ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದ್ದ ಸಂಗತಿ ಮತ್ತು ಚಾಪೇಕರ್ ಸಹೋದರರು ಕಟ್ಟಿದ ತರುಣರ ಸಂಘಗಳು ಅವರಿಗೆ ಸದಾ ಸ್ಪೂರ್ತಿಯನ್ನು ನೀಡಿರುತ್ತದೆ.
ಹಾಗಾಗಿ ಅವರು ಶಾಲೆಯಲ್ಲಿದ್ದಾಗಲೇ ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ದಬ್ಬಾಳಿಕೆಯನ್ನು ಮತ್ತು ದಾಸ್ಯ ಪದ್ದತಿಯನ್ನು ಕಟುವಾಗಿ ವಿರೋಧಿಸುತ್ತಲೇ ಬರುತ್ತಾರೆ. ಲೋಕಮಾನ್ಯ ತಿಲಕರ ಆಕ್ರಮಣಕಾರಿ ಮತ್ತು ಸ್ಫೋಟಕ ಬರಹಗಳು ಮತ್ತು ಅವರ ಕೇಸರಿ ಪತ್ರಿಕೆಗಳಿಂದ, ಕ್ರಾಂತಿಕಾರಿ ಭಯೋತ್ಪಾದಕರು ನಡೆಸಿದ ಚಟುವಟಿಕೆಗಳು ಅವರ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿರುತ್ತದೆ. 1914 ರಲ್ಲಿ ತಿಲಕ್ ಅವರು ಮಂಡಾಲಯದ ಜೈಲಿನಿಂದ ಬಿಡುಗಡೆಯಾದಾಗ, ಯುವಕ ಕೇಶವ ಅವರನ್ನು ಭೇಟಿ ಮಾಡಿ ಅವರೊಂದಿಗೆ ಅಂದು ನಡೆಯುತ್ತಿದ್ದ ರಾಜಕೀಯ ಚಳುವಳಿಯ ಬಗ್ಗೆ ಚರ್ಚೆ ನಡೆಸಿರುತ್ತಾರೆ.
ಇವೆಲ್ಲದರ ನಡುವೆಯೇ ತಮ್ಮ ವಿದ್ಯಾಭ್ಯಾಸವನ್ನು ಉನ್ನತ ಶ್ರೇಣಿಯಲ್ಲಿಯೇ ಮುಂದುವರೆಸಿ, ನಂತರ ದೂರದ ಕಲ್ಕತ್ತಾಕ್ಕೆ ತೆರಳಿ ಅಲ್ಲಿ ವೈದ್ಯಕೀಯ ಪದವಿ ಪಡೆದು ಅಧಿಕೃತವಾಗಿ ಡಾಕ್ಟರ್ ಆಗುತ್ತಾರೆ. ಆಗಿನ ಕಾಲದಲ್ಲಿ ಡಾಕ್ಟರ್ ಮತ್ತು ಬ್ಯಾರಿಸ್ಟರ್ ಪದವಿ ಪಡೆದವರು ಹೇರಳವಾಗಿ ಹಣ ಸಂಪಾದನೆ ಮಾಡಿ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಮಾನ ಪಡೆಯುತ್ತಿದ್ದದ್ದು ಸಹಜವಾಗಿದ್ದರೂ ಡಾ.ಜೀ ಹಣದ ಹಿಂದೆ ಹೋಗದೇ ತಮ್ಮ ದೇಶದ ಸ್ವಾತಂತ್ರ ಚಳುವಳಿಗಳಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಶಿವಾಜೀ ಮಹರಾಜರು ಮತ್ತು ಸಾವರ್ಕರ್ ಅವರಿಂದ ಪ್ರೇರಿತರಾದ ಕಾರಣ ಅವರಲ್ಲಿ ಕ್ರಾಂತಿಕಾರಿ ಮನೋಭಾವನೆ ಬೆಳೆದು ಅದೇ ನಿಲುವುಗಳನ್ನು ತಳೆದಿದ್ದ ಅನುಶೀಲನ ಸಮಿತಿ, ಜುಗಂತರ್ ಮುಂತಾದ ಸಂಘಟನೆಗಳ ಆಕರ್ಷಣೆಗೆ ಹೆಡ್ಗೆವಾರ್ ಸೆಳೆಯಲ್ಪಟ್ಟರು. ರಾಮಪ್ರಸಾದ್ ಬಿಸ್ಮಿಲ್ಲಾರಂತಹ ಕ್ರಾಂತಿಕಾರಿಗಳ ಸಂಪರ್ಕ ಅವರಿಗಿತ್ತು.
ವೈದ್ಯಕೀಯ ಪದವಿ ಪಡೆದು ಕಲ್ಕತ್ತಾದಿಂದ ನಾಗಪುರಕ್ಕೆ ಹಿಂದಿರುಗಿದ ಹೆಡ್ಗೇವಾರ್ ಅವರು 1919-20ರ ಆಸುಪಾಸಿನಲ್ಲಿ ಮತ್ತೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ಬಂದು, ತಿಲಕ್ ವಾದಿ ಕಾಂಗ್ರೆಸ್ಸಿನ ಕಾರ್ಯಕರ್ತರಾಗುತ್ತಾರೆ. ಅದೇ ಸಮಯದಲ್ಲೇ ಅಂದಿನ ಕ್ರಾಂಗ್ರೇಸ್ ಹಿರಿಯ ನಾಯಕರಾಗಿದ್ದ ಶ್ರೀ ಬಿ. ಎಸ್. ಮೂಂಜೆಯವರ ಪರಿಚಯವೂ ಆಗಿ ಅವರಿಂದ ಹಿಂದೂ ಧರ್ಮತತ್ವಶಾಸ್ತ್ರದ ಬಗ್ಗೆ ಅಪಾರವಾದ ಜ್ಞಾನವನ್ನು ಪಡೆಯುತ್ತಾರೆ. 1920 ರ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಕಾಂಗ್ರೇಸ್ ಸಹಕಾರ್ಯದರ್ಶಿಯಾಗಿದ್ದ ಹೆಡ್ಗೇವಾರ್ ತಮ್ಮ ಭಾರತ್ ಸ್ವಯಂ ಸೇವಕ್ ಮಂಡಲ್ ಎಂಬ 1200 ಪೂರ್ಣಾವಧಿ ಸ್ವಯಂ ಸೇವಕರ ಪಡೆಯೊಂದಿಗೆ ಅವಿಶ್ರಾಂತವಾಗಿ ದುಡಿದ ಪರಿಣಾಮ ಇಡೀ ಅಧಿವೇಶನದ ಅತ್ಯಂತ ಯಶಸ್ವಿಯಾಗಿ ನಡೆಯಲ್ಪಡುತ್ತದೆ.
ಈ ಅಧಿವೇಶನದ ನಂತರ ಡಾ.ಜೀ ಅವರ ಹೆಸರು ಕಾಂಗ್ರೇಸ್ಸಿನಲ್ಲಿ ಅತ್ಯಂತ ಜನಪ್ರಿಯವಾಗಿದ್ದಲ್ಲದೇ, ತಿಲಕ್ ಸ್ವರಾಜ್ಯ ಫಂಡ್ ನ ಸದಸ್ಯರಾಗುವುದಲ್ಲದೇ, ಗಾಂಧಿಯವರು ಬ್ರಿಟೀಷರ ವಿರುದ್ಧ ದೇಶಾದ್ಯಂತ ಆರಂಭಿಸಿದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ, ರಾಜದ್ರೋಹದ ಆರೋಪದ ಮೇಲೆ 1921ರಲ್ಲಿ ಒಂದು ವರ್ಷದ ಸೆರೆಮನೆಯ ವಾಸವನ್ನು ಅನುಭವಿಸುತ್ತಾರೆ. ತಿಲಕರ ಮರಣದ ನಂತರ ಗಾಂಧಿಯವರು ಸ್ವಾತ್ರಂತ್ರ್ಯ ಹೋರಾಟದಲ್ಲಿ ಮುಂಚೂಣಿಯಾಗಿ ಚಳುವಳಿಯ ಚುಕ್ಕಾಣಿ ಹಿಡಿದು ಅಹಿಂಸಾ ಮಾರ್ಗವನ್ನು ಅನುಸರಿಸತೊಡಗುವುದರೊಂದಿಗೆ ಕಾಂಗ್ರೆಸ್ಸಿನ ಉಗ್ರಗಾಮಿ ಹಂತವೂ ಭಾಗಶಃ ಕೊನೆಯ ಹಂತವನ್ನು ತಲುಪುತ್ತದೆ. ಗಾಂಧೀಜಿಯವರು ದೇಶದ ಏಕತೆಗಾಗಿ ಹಿಂದೂ-ಮುಸ್ಲಿಂ ಐಕ್ಯತೆ ಬಹಳ ಮುಖ್ಯ ಎಂದು ಪ್ರತಿಪಾದಿಸುತ್ತಿರುತ್ತಾರೆ. ಅದಕ್ಕೆ ಪೂರಕ ಎನ್ನುವಂತೆ ಅದೇ ಸಮಯದಲ್ಲೇ ನಾಗ್ಪುರದಲ್ಲಿ ನಡೆದ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದಲ್ಲಿ ಖಿಲಾಫತ್ ಆಂದೋಲನದ ಜೊತೆಗೆ ಗೋಹತ್ಯೆ ನಿಷೇಧದ ವಿಷಯವನ್ನೂ ತೆಗೆದುಕೊಳ್ಳಬೇಕೆಂದು ಹೆಡ್ಗೇವಾರ್ ಮತ್ತು ಕೆಲ ನಾಯಕರು ಒತ್ತಾಯಿಸಿದಾಗ, ಇದು ಹಿಂದೂ-ಮುಸ್ಲಿಂ ಐಕ್ಯತೆಗೆ ಅಪಾಯವನ್ನುಂಟುಮಾಡುತ್ತದೆ ಎಂಬ ಕಾರಣ ಒಡ್ಡಿದ ಗಾಂಧಿ ಹೆಡ್ಗೇವಾರರ ಬೇಡಿಕೆಗಳನ್ನು ತಿರಸ್ಕರಿಸಿದ್ದು ಮತ್ತು ಅನಗತ್ಯವಾಗಿ ಮುಸಲ್ಮಾನರ ತುಷ್ಟೀಕರಣ ನಡೆಸಲು ಮುಂದಾಗಿದ್ದು ಹೆಡ್ಗೇವಾರ್ ಅಲ್ಲದೇ, ಅಂದಿನ ಬಹುತೇಕ ಕಾಂಗ್ರೇಸ್ ನಾಯಕರಿಗೆ ಬೇಸರ ಉಂಟು ಮಾಡುತ್ತದೆ. ಗಾಂಧಿ ಯವರು ದೇಶದ ಏಕತೆ ಎಂಬ ಹೆಸರಿನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬ ಮಂತ್ರವನ್ನು ಜಪಿಸುತ್ತಿದ್ದರೆ, ಇದಾವುದಕ್ಕೂ ಸೊಪ್ಪು ಹಾಕದ ಮುಸ್ಲಿಮ್ಮರು ಸ್ವಾತ್ರಂತ್ಯ ಚಳುವಳಿಯಲ್ಲಿ ನಿರಾಸಕ್ತಿ ತೋರಿಸುವುದು ಅನೇಕ ಹಿಂದೂ ನಾಯಕರುಗಳಿಗೆ ಬೇಸರವನ್ನು ಉಂಟು ಮಾಡುತ್ತದೆ.
ಇದೇ ಸಮಯದಲ್ಲೇ ಕಾಕೋರಿ ಎಂಬ ಪ್ರದೇಶದಲ್ಲಿ ರೈಲಿನ ದರೋಡೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವು ಎಲ್ಲಾ ಪೋಲಿಸ್ ಹುದ್ದೆಗಳು ಮತ್ತು ಮ್ಯಾಜಿಸ್ಟ್ರೇಟ್ ಹುದ್ದೆಗಳಿಗೆ ಮುಸ್ಲಿಂ ಅಧಿಕಾರಿಗಳನ್ನು ನೇಮಿಸಿ ಅವರ ಮೂಲಕ ವಿಚಾರಣೆ ನಡೆಸಿ ಆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಕ್ರಾಂತಿಕಾರಿಗಳಿಗೆ ನೇಣು ಅಥವಾ ಕ್ರೂರ ಶಿಕ್ಷೆಗೆ ಗುರಿಪಡಿಸುವ ಮೂಲಕ ದೇಶದ ಹಿಂದೂ ಮುಸ್ಲಿಮ್ಮರಲ್ಲಿ ಒಡಕನ್ನು ತರಲು ಪ್ರಯತ್ನಿಸುತ್ತದೆ. ಅದೇ ರೀತಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ, ಹಿಂದೂಗಳನ್ನು ಒಗ್ಗೂಡುವುದು ದೇಶವಿರೋಧಿ ಕೆಲಸ ಎನಿಸುತ್ತಿದೆ ಎಂದು ಯಾವಾಗ ಕಾಂಗ್ರೇಸ್ ಭಾವಿಸುತ್ತದೇಯೋ ಆಗ ಹತಾಶರಾದ ಡಾ.ಜೀ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಲ್ಲದೇ, ತಮ್ಮದೇ ಆದ ಒಂದು ವೈಶಿಷ್ಟ್ಯ ಪೂರ್ಣವಾದ ಸಂಘವನ್ನು ಕಟ್ಟಲು ನಿರ್ಧರಿಸುತ್ತಾರೆ.
ಈ ಎಲ್ಲ ಹಿನ್ನೆಲೆಗಳಲ್ಲಿ ತೀವ್ರವಾಗಿ ಚಿಂತಿಸಿದ ಡಾ.ಜೀ ಭಾರತದಲ್ಲಿ ಹಿಂದೂಗಳ ಮೇಲೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ದೌರ್ಜನ್ಯ ನಡೆಯುತ್ತಲೇ ಇದ್ದರೂ ತಮ್ಮ ಸಹಿಷ್ಣುತಾ ಗುಣದಿಂದಾಗಿ ಸಹಿಸಿಕೊಂಡು ಹೋಗುತ್ತಿದ್ದದ್ದು ಮತ್ತು ಹಿಂದೂಗಳಲ್ಲಿದ್ದ ವರ್ಗೀಕೃತ ಸಮಾಜ, ಅಸ್ಪೃಶ್ಯತೆ ಮುಂತಾದವುಗಳೆನೆಲ್ಲಾ ತೊಡೆದು ಹಾಕಲು ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ, ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಒಂದು ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸಬೇಕು ಎಂದು ನಿರ್ಧರಿಸಿ ಅಂಡಮಾನಿನ ಕಾಲಾಪಾನಿಯಿಂದ ರತ್ನಗಿರಿಯ ಕಾರಾಗೃಹದಲ್ಲಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಭೇಟಿ ಮಾಡಿ ಅವರ ಅಶೀರ್ವಾದದೊಂದಿಗೆ, ಹಿಂದೂಸ್ಥಾನವು ಹಿಂದೂಗಳ ದೇಶವಾಗಿರುವುದರಿಂದ ಈ ದೇಶದ ಭವಿಷ್ಯವನ್ನು ಹಿಂದೂಗಳೇ ನಿರ್ಧರಿಸಬೇಕು ಎಂಬ ಧೃಢ ಸಂಕಲ್ಪದಿಂದ, ಸೆಪ್ಟಂಬರ್ 27 1925 ಭಾನುವಾರ, ವಿಕ್ರಮ ನಾಮ ಸಂವತ್ಸರದ ವಿಜಯದಶಮಿಯಂದು ನಾಗಪುರದ ಮೋಹಿತೇವಾಡ ಎಂಬ ಸ್ಥಳದಲ್ಲಿ ಶಿವಾಜಿ ಮಹಾರಾಜರಿಂದ ಪ್ರೇರೇಪಿಸಲ್ಪಟ್ಟು 10-12 ಹುಡುಗರನ್ನು ಒಟ್ಟು ಗೂಡಿಸಿ ಅವರಿಗೆ ಆಟವನ್ನು ಆಡಿಸುವ ಮೂಲಕ ಅಧಿಕೃತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭಿಸುತ್ತಾರೆ.
ನಾಗಪುರದಲ್ಲಿ ಕೆಲ ವರ್ಷಗಳ ಕಾಲ ಪ್ರತೀ ದಿನವೂ ಒಂದು ಘಂಟೆಗಳ ಕಾಲ ಹತ್ತಾರು ಸ್ವಯಂ ಸೇವಕರು ಜಾತಿ ಬೇಧಗಳ ಹಂಗಿಲ್ಲದೇ, ಒಂದಾಗಿ ಆಟ, ವ್ಯಾಯಾಮದ ಜೊತೆ ದೇಶ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಚರ್ಚೆ ನಡೆಸುತ್ತಾ ಸಂಘ ಯಶಸ್ವಿಯಾದ ನಂತರ ಈ ರೀತಿಯ ಸಂಘ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ತನ್ನ ಶಾಖೆಯನ್ನು ಹೊಂದಿರಬೇಕು ಎಂಬ ಆಶಯದಿಂದ ಎಲ್ಲಾ ಕಡೆಯಲ್ಲೂ ವಿಸ್ತಾರವಾಗುತ್ತಾ ನೋಡ ನೋಡುತ್ತಿದ್ದಂತೆಯೇ ದೇಶಾದ್ಯಂತ ಸಾವಿರಾರು ಶಾಖೆಗಳಾಗಿ ವಿಸ್ತರಿಸಲ್ಪಡುತ್ತದೆ. ವಾರ್ಧಾದಲ್ಲಿ ನಡೆಯುತ್ತಿದ್ದ ಸಂಘದ ಶಿಬಿರವೊಂದಕ್ಕೆ ಶ್ರೀ ಜಮ್ನಾಲಾಲ್ ಬಜಾಜ್ ಅವರೊಂದಿಗೆ ಭೇಟಿ ನೀಡಿದ ಮಹಾತ್ಮಾ ಗಾಂಧಿಯವರು ಸ್ವಯಂಸೇವಕರ ಶಿಸ್ತು, ಅಸ್ಪೃಶ್ಯತೆಯ ಸಂಪೂರ್ಣ ಅನುಪಸ್ಥಿತಿ ಮತ್ತು ಕಠಿಣ ಸರಳತೆಯಿಂದ ಬಹಳ ಪ್ರಭಾವಿತರಾಗಿ ಸಂಘದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಈ ರೀತಿಯಾಗಿ ಕಾಂಗ್ರೇಸ್ ಪಕ್ಷದಲ್ಲಿ ಸಾಧಿಸಲಾಗಲಿಲ್ಲ ಎಂದು ಪಶ್ಚಾತ್ತಾಪ ಪಟ್ಟಿದ್ದರು ಎನ್ನುವುದು ಗಮನಾರ್ಹವಾಗಿದೆ.
ಅಂದು ಆರಂಭಿಸಿದ ಸಂಘ ಡಾ.ಜೀ ಅವರ ನಿಧನದ ನಂತರ ಗುರುಜೀ (ಮಾಧವ ಸದಾಶಿವ ಗೋಳ್ವಾಲ್ಕರ್) ಅವರ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತಲೇ ಹೋಗಿ ಆಲದ ಮರದ ಟಿಸಿಲುಗಳಂತೆ ಸಮಾಜದ ವಿವಿಧ ಸ್ಥರಗಳಲ್ಲಿ ವಿವಿಧ ಶ್ರೇಣಿಗಳಲ್ಲಿ 500ಕ್ಕೂ ಹೆಚ್ಚಿನ ವಿವಿಧ ಸಂಘಟನೆಗಳ ಹೆಸರಿನಲ್ಲಿ ಕೆಲಸ ಮಾಡುತ್ತಾ ಇಂದು ಸಂಘಪರಿವಾರವಾಗಿ ಮಾರ್ಪಟ್ಟಿದೆ. ದೇಶದ ಪ್ರತಿಯೊಂದು ಸಮಸ್ಯೆಗಳಿಗೂ ಸಂಘದ ಪಡೆಯಿಂದ ಪರಿಹಾರವನ್ನು ಯಾಚಿಸುವಂತೆ ಆಗಿರುವುದು ಸುಲಭದ ಮಾತೇನಲ್ಲ. ದೇಶದ ಯಾವುದೇ ಮೂಲೆಗಳಲ್ಲಿ ವಿಪತ್ತು ಸಂಭವಿಸಿದರೂ ಕೆಲವೇ ಕ್ಷಣಗಳಲ್ಲಿ ಸಂಘದ ಸ್ವಯಂಸೇವಕರು ಆಯಾಯಾ ಸ್ಥಳಕ್ಕೆ ತಲುಪಿ ನಿಸ್ವಾರ್ಥವಾಗಿ ಸೇವೆಸಲ್ಲಿರುವು ಪ್ರಕ್ತಿಯೆಯನ್ನು ಸಂಘವನ್ನು ವಿರೋಧಿಸುವವರು ಅಲ್ಲಗಳೆಯಲಾರರು. ಆರಂಭದಲ್ಲಿ ಕೇವಲ ಪುರುಷರಿಗಷ್ಟೇ ಸೀಮಿತವಾಗಿದ್ದ ಸಂಘ ನಂತರದ ದಿನಗಳಲ್ಲಿ ಸೇವಿಕಾ ಸಮಿತಿಯ ಹೆಸರಿನಲ್ಲಿ ಹೆಣ್ಣುಮಕ್ಕಳಲ್ಲೂ ರಾಷ್ಟ್ರೀಯತೆಯ ಭಾವ ಮತ್ತು ಶಿಸ್ತನ್ನು ಕಲಿಸಲಾರಂಭಿಸಿದೆ.
ಸಂಘ ಕಾರ್ಯಗಳು ಈಗ ಕೇವಲ ಭಾರತವಲ್ಲದೇ ವಿದೇಶಗಳಲ್ಲಿಯೂ ವಿಸ್ತಾರಗೊಂಡಿದೆಯಲ್ಲದೇ ಸದ್ಯಕ್ಕೆ ಸಂಘದಿಂದ ಶಿಕ್ಷಣ ಪಡೆದ ಸಾವಿರಾರು ಶಾಸಕರು, ನೂರಾರು ಸಾಂಸದರು, ಹತ್ತಾರು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯಪಾಲರು, ಉಪರಾಷ್ಟ್ರತಿ ಮತ್ತು ರಾಷ್ಟ್ರಪತಿಗಳಷ್ಟೇ ಅಲ್ಲದೇ ದೇಶದ ಪ್ರಧಾನ ಮಂತ್ರಿಗಳು ಸಂಘದ ಸ್ವಯಂಸೇವಕರೇ ಆಗಿರುವುದು ಗಮನಾರ್ಹವಾಗಿದೆ.
ಒಂಭತ್ತು ದಶಕಗಳ ಸಂಘದ ಬೆಳವಣಿಗೆ ಸುಲಭವಾಗಿರದೇ ನಾನಾರೀತಿಯ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಬೆಳೆದು ಬಂದಿದೆ. ಬ್ರಿಟೀಷ್ ಸರ್ಕಾರವಲ್ಲದೇ ಸ್ವಾತಂತ್ರ್ಯಾ ನಂತರ ಹಲವಾರು ಸಮಯಗಳಲ್ಲಿ ಸಂಘವನ್ನು ನಿಷೇಧ ಮಾಡಲು ಹುನ್ನಾರ ನಡೆಸಿದರೂ, ಅಗ್ನಿಪರೀಕ್ಷೆಯಲ್ಲಿ ಸೀತಾ ಮಾತೆ ಪವಿತ್ರಳಂತೆ ಹೊರಬಂದಂತೆ ಸಂಘವೂ ಸಹಾ ಕಾನೂನಾತ್ಮಕ ಹೋರಾಟಗಳನ್ನು ಎದುರಿಸಿ ತನ್ನ ಮೇಲೆ ಬಂದಿದ್ದ ಎಲ್ಲಾ ಆರೋಪಗಳೂ ನಿರಾಧಾರವಾದದ್ದು ಎನ್ನುವುದನ್ನು ತೋರಿಸುವ ಮೂಲಕ ತನ್ನ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡಲು ಸಂಘ ಮತ್ತು ಸಂಘ ಪರಿವಾರ ಸಮರ್ಥವಾಗಿದೆ. ಇದೇ ಕಾರಣದಿಂದಲೇ ಇಂದಿಗೂ ಭಾರತದಲ್ಲಿ ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ಧತೆಗಳು ಮುಂದುವರಿದುಕೊಂಡು ಹೋಗಲು ಸಂಘದ ಪಾತ್ರ ಮಹತ್ತವಾಗಿದೆ ಎಂದು ಪರಮ ವಿರೋಧಿಗಳೂ ಒಪ್ಪುವುದೇ ಸಂಘದ ನಿಜವಾದ ಕಳಸ ಪ್ರಾಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ