ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

vk7ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಗಳ ಸಂಗಮದಲ್ಲಿ ಸಮುದ್ರ ತಟದಿಂದ ಸುಮಾರು 500ಮೀ ದೂರ ಇರುವ ಬಂಡೆಯನ್ನು ನೋಡಿ ಅಲ್ಲಿಗೆ ಕರೆದೊಯ್ಯುವಂತೆ ಅಲ್ಲಿಯೇ ಇದ್ದ ದೋಣಿಯವರನ್ನು ಕೇಳಿಕೊಳ್ಳುತ್ತಾರೆ. ಆ ಸಮಯದಲ್ಲಿ ಭೋರ್ಗರೆಯುತ್ತಿದ್ದ ಸಮುದ್ರ ಅಲೆಗಳನ್ನು ಕಂಡು ಈ ಸಮಯದಲ್ಲಿ ದೋಣಿಯನ್ನು ಚಲಾಯಿಸುವುದು ಅಪಾಯಕರ ಎಂದಾಗ, ಅಲ್ಲಿನ ನಾವಿಕರ ಎಚ್ಚರಿಕೆಗೂ ಗಮನ ಹರಿಸದೇ, ತಾವೇ ಧೈರ್ಯದಿಂದ ಸಮುದ್ರಕ್ಕೆ ದುಮುಕಿ ಈಜಿಕೊಂಡು ಆ ಬೃಹತ್ ಬಂಡೆಯನ್ನು ತಲುಪುತ್ತಾರೆ. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಸುಮಾರು 3 ದಿನಗಳ ಕಾಲ ಹಸಿವು, ನಿದ್ರೆ ನೀರಡಿಕೆಯಿಲ್ಲದೇ, ಧ್ಯಾನವನ್ನು ಮಾಡಿ, ಜ್ಞಾನೋದಯವನ್ನು ಪಡೆದು, ಮಾನವೀಯತೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಸಂಕಲ್ಪವನ್ನು ತೆಗೆದುಕೊಳ್ಳುತ್ತಾರೆ.

ಆ ರೀತಿ ಸಂಕಲ್ಪ ಮಾಡಿದ ಸ್ವಾಮಿ ವಿವೇಕಾನಂದರು 1893 ರ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ, ನನ್ನ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣವನ್ನು ಆರಂಭಿಸಿ ಅಲ್ಲಿ ನೆರೆದಿದ್ದ ಸಭಿಕರನ್ನೆಲ್ಲಾ ಮಂತ್ರ ಮುಗ್ಧರನ್ನಾಗಿಸಿ ಭಾರತ, ಹಿಂದೂ ಧರ್ಮ, ಯೋಗ, ವೇದಾಂತದ ಮತ್ತು ಭಾರತೀಯ ತತ್ವಶಾಸ್ತ್ರಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನವರಿ 1962 ರಲ್ಲಿ, ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಅವರು ಜ್ಞಾನೋದಯ ಪಡೆದ ಕನ್ಯಾಕುಮಾರಿಯ ಆ ಬೃಹತ್ ಬಂಡೆಯ ಮೇಲೆ ಸ್ವಾಮೀಜಿಯವರ ಸ್ಮಾರಕವೊಂದನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿದರು. ಈ ರೀತಿಯ ಮಹಾಸಂಕಲ್ಪವನ್ನು ನೆರೆವೇರಿಸಲು ಅಂದಿನ ಮದ್ರಾಸಿನ ಶ್ರೀ ರಾಮಕೃಷ್ಣ ಮಿಷನ್ ಅವರು ಸ್ಥಳ ಪರಿಶೀಲನೆಗೆ ಬಂದಾಗ ಈ ಸುಂದರ ಪರಿಕಲ್ಪನೆಯ ವಿರುದ್ಧ ಸ್ಥಳೀಯ ಕ್ಯಾಥೊಲಿಕ್ ಮೀನುಗಾರರ ಸಂಘವು ಉಗ್ರವಾಗಿ ಪ್ರತಿಭಟನೆ ನಡೆಸಿತಲ್ಲದೇ, ಆ ಬಂಡೆಯ ಮೇಲೊಂದು ದೊಡ್ಡದಾದ ಶಿಲುಬೆಯನ್ನು ಪ್ರತಿಷ್ಟಾಪನೆ ಮಾಡಲು ಹೊಂಚು ಹಾಕಿತು. ಇದರಿಂದ ಕೆಲ ಸಮಯ ಆ ಪ್ರದೇಶದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ ಆ ಸ್ಥಳವನ್ನು ನಿಷೇಧಿತ ಸ್ಥಳವೆಂದು ಗುರುತಿಸಿ, ಶಸ್ತ್ರಸಜ್ಜಿತ ಕಾವಲುಗಾರರನ್ನು ಅಲ್ಲಿಗೆ ಗಸ್ತು ಹಾಕುವಂತರ ಪರಿಸ್ಥಿತಿ ಬಂದೊದಗಿತ್ತು. ಹಿಂದೂಗಳ ಸತತ ಹೋರಾಟದ ಫಲವಾಗಿ ಜನವರಿ 17, 1963 ರಂದು ಸರ್ಕಾರವು ಅಲ್ಲಿಗೆ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಲು ಅನುಮತಿ ಕೊಡಲಾಯಿತು.

ನಿಜ ಹೇಳಬೇಕೆಂದರೆ, ಈ ಹೋರಾಟ ಮತುತ್ ಸ್ಮಾರಕದ ಹಿಂದಿನ ಸಂಪೂರ್ಣ ಶ್ರೇಯ ಶ್ರೀ ಏಕನಾಥ ರಾಮಕೃಷ್ಣ ರಾನಡೆ ಅವರಿಗೆ ಸಲ್ಲ ಬೇಕು ಎಂದರೆ ತಪ್ಪಾಗಲಾರದು. ಶ್ರೀ ಏಕನಾಥ ರಾನಡೆಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಪ್ರಚಾರಕರಾಗಿದ್ದಲ್ಲದೇ,ಸ್ವಾಮೀಜಿಗಳ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರೊಬ್ಬ ಪ್ರಖ್ಯಾತ ಭಾರತೀಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಧಾರಕರಾಗಿದ್ದರು. ಅವರ ನೇತೃತ್ವದಲ್ಲೇ, ವಿವೇಕಾನಂದ ರಾಕ್ ಮೆಮೋರಿಯಲ್ ಆರ್ಗನೈಸಿಂಗ್ ಕಮಿಟಿಯನ್ನು ಸ್ಥಾಪಿಸಲಾಯಿತು. ವಿವೇಕಾನಂದ ಶಿಲಾ ಸ್ಮಾರಕವು ರಾಷ್ಟ್ರೀಯ ಸ್ಮಾರಕ ಎಂದೇ ಜನರ ಮುಂದೆ ಬಿಂಬಿಸಿದ ಶ್ರೀ ರಾನಡೆಯವರು ಇದರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯರ ಕೊದುಗೆ ಇರಬೇಕೆಂದು ನಿರ್ಧರಿಸಿ, ಪ್ರತೀ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಲ್ಲದೇ, ಇನ್ನೂ ಹೆಚ್ಚಿನ ಧನಸಹಾಯಕ್ಕಾಗಿ ಒಂದು ರೂಪಾಯಿಯ ಪೋಸ್ಟ್ ಕಾರ್ಡ್ ಮಾದರಿಯನ್ನು ಅಚ್ಚು ಹಾಕಿಸಿ ದೇಶಾದ್ಯಂತ ಜನಸಾಮಾನ್ಯರಿಂದ ದೇಣಿಗೆಗಳನ್ನು ಸಂಗ್ರಹಿಸಿದರು. ಇಂತಹ ಪವಿತ್ರ ಕಾರ್ಯಕ್ಕಾಗಿ ಮೊದಲ ದೇಣಿಗೆಯನ್ನು ವಿಶ್ವಹಿಂದೂಪರಿಷತ್ತಿನ ಸ್ಥಾಪಕರಾದ ಪೂಜ್ಯ ಶ್ರೀ ಚಿನ್ಮಯಾನಂದರಿಂದ ಸಂಗ್ರಹಿಸುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.

ಒಂದು ಕಡೆ ಹಣ ಸಂಗ್ರಹದ ಆಭಿಯಾನ ನಡೆಯುತ್ತಿದ್ದರೆ ಮತ್ತೊಂದೆದೆ ಇಂತಹ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕಟ್ಟಡ ಕಟ್ಟಲು ಕಾರ್ಮಿಕರು ಎಲ್ಲವನ್ನೂ ಹೊಂಚುವುದು ಸುಲಭವಾಗಿರಲಿಲ್ಲ. ಇದೆಲ್ಲದರ ಮಧ್ಯೆ, ಈ ಕಾರ್ಯಕ್ಕೆ ತಡೆಯೊಡ್ಡಲು ಅಂದಿನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾಗಿದ್ದ ಹುಮಾಯೂನ್ ಕಬೀರ್ ಮತ್ತು ಮದ್ರಾಸ್ ರಾಜ್ಯದ ಮುಖ್ಯಮಂತ್ರಿ ಮಿಂಜೂರ್ ಭಕ್ತವತ್ಸಲಂ ನಾನಾರೀತಿಯ ರಾಜಕೀಯ ಒತ್ತಡಗಳನ್ನು ಹೇರುವುದರಲ್ಲಿ ಸಫಲವಾಗುತ್ತಿದ್ದಂತೆಯೇ ಸ್ಮಾರಕದ ನಿರ್ಮಾಣ ಕೊಂಚ ತಡವಾಗತೊಡಗಿತು. ಆಗ ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಲಹೆಯಂತೆ ರಾನಡೆಯವರು, ಈ ಸ್ಮಾರಕ ನಿರ್ಮಾಣದ ಫಲವಾಗಿ ಸುಮಾರು 323 ಸಂಸತ್ ಸದಸ್ಯರ ಸಹಿಯನ್ನು ಸಂಗ್ರಹಿಸುವ ಹೊತ್ತಿಗೆ ಲಾಲ್ ಬಹದ್ದೂರು ವಿವಾದಾತ್ಮಕವಾಗಿ ನಿಧನರಾಗಿ, ಭಾರತದ ಪ್ರಧಾನ ಮಂತ್ರಿಯ ಸ್ಥಾನವನ್ನು ಶ್ರೀಮತಿ. ಇಂದಿರಾ ಗಾಂಧಿಯವರು ಅಲಂಕರಿಸಿದ್ದರು. ಪಕ್ಷಾತೀತವಾಗಿ ಇಷ್ಟೊಂದು ಸಾಂಸದರ ಬೆಂಬಲವಿದ್ದ ಯೋಜನೆಯನ್ನು ವಿಧಿ ಇಲ್ಲದೇ ಅನುಮೋದಿಸಲೇ ಬೇಕಾಯಿತು. ನಂತರ ಸ್ಮಾರಕದ ಕೆಲಸ ಚುರುಕುಗೊಂಡು ವಿವೇಕಾನಂದ ಶಿಲಾ ಸ್ಮಾರಕದ ನಿರ್ಮಾಣವು 1970 ರಲ್ಲಿ ಆರು ವರ್ಷಗಳ ಧಾಖಲೆಯ ಅವಧಿಯಲ್ಲಿ ಸುಮಾರು 650 ನುರಿತ ಕುಶಲಕರ್ಮಿಗಳು ಮತ್ತು ಕಾರ್ಮಿಕರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಸಮರ್ಪಣೆಯ ಶ್ರಮದೊಂದಿಗೆ ಸಂಪೂರ್ಣವಾದಾಗ, ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರಿ ವಿ.ವಿ.ಗಿರಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಶ್ರೀಕರುಣಾನಿಧಿಯವರ ಅಮೃತಹಸ್ತದಿಂದ 2 ನೇ ಸೆಪ್ಟೆಂಬರ್, 1970 ರಂದು ಲೋಕಾರ್ಪಣೆಗೊಂಡಾಗ ಇಡೀ ದೇಶವಾಸಿಗಳು ಸಂಭ್ರಮಗೊಂಡಿದ್ದರು.

ಈ ಭವ್ಯವಾದ ಸ್ಮಾರಕವು ಭಾರತದ ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪ ಶೈಲಿಯ ಮಿಶ್ರಣವಾಗಿ ಅದರಲ್ಲೂ ವಿಶೇಷವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಾಸ್ತುಶಿಲ್ಪದ ಸಮ್ಮಿಳನವಾಗಿದೆ ಎನ್ನಬಹುದಾಗಿದೆ. ಸ್ಮಾರಕ ಮಂಟಪವು ಕೊಲ್ಕಾತ್ತಾದ ಬೇಲೂರಿನಲ್ಲಿರುವ ಶ್ರೀ ರಾಮಕೃಷ್ಣ ಮಠವನ್ನು ಹೋಲುತ್ತದೆ. ಇನ್ನು ಅದರ ಪ್ರವೇಶ ದ್ವಾರದ ವಿನ್ಯಾಸವು ಅಜಂತಾ ಮತ್ತು ಎಲ್ಲೋರ ವಾಸ್ತುಶಿಲ್ಪ ಶೈಲಿಗಳನ್ನು ಒಳಗೊಂಡಿದೆ. ಖ್ಯಾತ ಶಿಲ್ಪಿಗಳಾಗಿದ್ದ ಶ್ರೀ ಸೀತಾರಾಮ್ ಎಸ್. ಆರ್ಟೆಯವರ ನೇತೃತ್ವದಲ್ಲಿ ಅಲ್ಲಿನ ಪ್ರಮುಖ ಆಕರ್ಷಣೆಯಾದ, ಪರಿವ್ರಾಜಕ ಭಂಗಿಯಲ್ಲಿ ನಿಂತಿರುವ ಸ್ವಾಮಿ ವಿವೇಕಾನಂದರ ಜೀವಿತ ಗಾತ್ರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೇವಿ ಕನ್ಯಾ ಕುಮಾರಿಯ ಪವಿತ್ರ ಪಾದಗಳ ಸ್ಪರ್ಶವಾಗಿರುವ ಕಾರಣ ಈ ಬೃಹತ್ ಬಂಡೆಯನ್ನು ಶ್ರೀಪಾದ ಪರೈ ಎಂದೂ ಕರೆಯಲಾಗುತ್ತದೆ. ವಾಸ್ತವದಲ್ಲಿ ಅಲ್ಲಿರುವ ಕಲ್ಲಿನ ಬಣ್ಣವು ಕಂದು ಬಣ್ಣದಿಂದ ಕೂಡಿದ್ದು ಅದು ಮಾನವ ಹೆಜ್ಜೆಯ ಗುರುತಿನಂತೆ ಕಾಣುವುದರಿಂದ ಅದನ್ನು ಶ್ರೀ ಪಾದಂ ಎಂದು ಕರೆಯಲಾಗುತ್ತದೆ ಹಾಗಾಗಿ ಆ ಪವಿತ್ರ ಸ್ಥಳದಲ್ಲಿ ಶ್ರೀ ಪಾದಪರೈ ಮಂಟಪ’ ಎಂಬ ದೇವಾಲಯವನ್ನು ನಿರ್ಮಿಸಲಾಗಿದೆ.

ಸ್ಮಾರಕದೊಳಗೆ ಎರಡು ಪ್ರಮುಖ ರಚನೆಗಳಾಗಿ ವಿಭವಿಸಿದ್ದು, ಅದರಲ್ಲಿ ಮುಖ್ಯವಾಗಿ ಚೌಕಾಕಾರದಲ್ಲಿರುವ ಗರ್ಭ ಗ್ರಹದ ಒಳಪ್ರಾಕಾರ ಮತ್ತು ಹೊರಪ್ರಾಕಾರದ ಇರುವ ಶ್ರೀಪಾದ ಮಂಟಪವಾದರೆ, ಮತ್ತೊಂದು, ಸ್ವಾಮೀಜಿಯ ಗೌರವಾರ್ಥವಾಗಿ ನಿರ್ಮಿಸಲಾಗಿರುವ ವಿವೇಕಾನಂದ ಮಂಟಪವಾಗಿದೆ. ಈ ಮಂಟಪದಲ್ಲಿರುವ ಧ್ಯಾನ ಮಂಟಪ ಮತ್ತು ಸಭಾ ಮಂಟಪವನ್ನು ನಿರ್ಮಿಸಲಾಗಿದೆ. ಧ್ಯಾನ ಮಂದಿರದ ವಿನ್ಯಾಸವು ಭಾರತದ ದೇವಾಲಯದ ವಾಸ್ತುಶಿಲ್ಪದ ವಿವಿಧ ಶೈಲಿಗಳ ಸಮ್ಮೀಳಿತವಾಗಿದೆ. ಇಲ್ಲಿಗೆ ಬರುವ ಸಂದರ್ಶಕರಿಗೆ ಶಾಂತವಾಗಿ ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಮತ್ತು ಧ್ಯಾನ ಮಾಡಲು ಅನುಕೂಲವಾಗುವಂತೆ 6 ಕೊಠಡಿಗಳನ್ನು ಹೊಂದಿದೆ. ಇನ್ನು ಸಭಾ ಮಂಟಪವು ಎಲ್ಲರೂ ಕುಳಿತು ಕೊಳ್ಳುವಂತಹ ವಿಶಾಲವಾಗಿದ್ದು, ಪ್ರತಿಮಾ ಮಂಟಪ ಎಂಬ ಪ್ರತಿಮೆ ವಿಭಾಗವನ್ನು ಒಳಗೊಂಡಿದ್ದು, ಸಭಾಂಗಣವನ್ನು ಒಳಗೊಂಡ ಕಾರಿಡಾರ್ ಮತ್ತು ಹೊರಗಿನ ಪ್ರಾಂಗಣವನ್ನು ಒಳಗೊಂಡಿದೆ. ಸ್ವಾಮಿಯವರ ಪ್ರತಿಮೆಯ ದೃಷ್ಟಿ ನೇರವಾಗಿ ಶ್ರೀಪಾದದ ಮೇಲೆ ಬೀಳುವ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಗಮನಾರ್ಹವಾಗಿದ್ದು ಪ್ರತಿಯೊಬ್ಬ ಭಾರತೀಯರೂ ಖಂಡಿತವಾಗಿಯೂ ನೋಡಲೇ ಬೇಕಾದಂತಹ ಪ್ರೇಕ್ಷಣೀಯ ಮತ್ತು ಪುಣ್ಯಕ್ಷೇತ್ರವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ.

ಖ್ಯಾತ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಉಪಾಸನೆ ಚಿತ್ರದ ಹಾಡಿನಲ್ಲಿರುವ ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿಯ ಈ ಬೃಹತ್ ಮತ್ತು ಭವ್ಯವಾದ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಪ್ರತಿದಿನವೂ ಸಾವಿರಾರು ಪ್ರವಾಸಿಗರು ಇಲ್ಲಿನ ಸಮುದ್ರ ತೀರದಿಂದ ಸುಮಾರು ೨ ನಿಮಿಷದ ದೋಣಿಯ ಪ್ರಯಾಣದ ಮೂಲಕ ಇಲ್ಲಿಗೆ ಬಂದು ತಲುಪಬಹುದಾಗಿದೆ. ಈ ಸ್ಮಾರಕವು ವರ್ಷವಿಡೀ ಬೆಳಿಗ್ಗೆ 7.00 ರಿಂದ ಸಂಜೆ 5.00 ರವರೆಗೆ ಸಂದರ್ಶಕರ ಭೇಟಿಗೆ ಅವಕಾಶವಿದ್ದು ಇದಕ್ಕೆ ಅತ್ಯಲ್ಪ ಪ್ರವೇಶ ಶುಲ್ಕವಾದ ರೂ. 10/-ನ್ನು ನಿಗಧಿಪಡಿಸಿದ್ದು ಇನ್ನು ಕ್ಯಾಮೆರಾ ಬಳಸುವುದಕ್ಕೆ ರೂ. 10/- ಮತ್ತು ವಿಡಿಯೋ ಚಿತ್ರೀಕರಣಕ್ಕೆ ರೂ. 50/- ಪಾವತಿಸಬೇಕಾಗುತ್ತದೆ.

ಭಾರತದ ತುತ್ತ ತುದಿಯ ಪ್ರದೇಶವಾದ ಕನ್ಯಾಕುಮಾರಿಗೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಂದಲು ಬಸ್ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಇನ್ನು ವಿಮಾನದ ಮೂಲಕ ಇಲ್ಲಿಗೆ ಬರಲು ಇಚ್ಚಿಸುವರು ಕನ್ಯಾಕುಮಾರಿಯಿಂದ ಕೇವಲ 67 ಕಿಮೀ ದೂರದಲ್ಲಿರುವ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ ಇಲ್ಲವೇ ಖಾಸಗೀ ವಾಹನಗಳ ಮೂಲಕ ತಲುಪಬಹುದಾಗಿದೆ.

ಇಷ್ಟೆಲ್ಲಾ ವಿವರಗಳನ್ನು ತಿಳಿದುಕೊಂಡ ಮೇಲೆ ಇನ್ನೇಕೆ ತಡಾ, ಸಮಯ ಮಾಡಿಕೊಂಡು ನಮ್ಮ ರಾಷ್ಟ್ರೀಯ ಸ್ಮಾರಕಗಳಲ್ಲಿ ಒಂದಾದ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕವನ್ನು ನೋಡಿಕೊಂಡು ದೇಶಭಕ್ತಿಯ ಸ್ವಾಭಿಮಾನವನ್ನು ತುಂಬಿಕೊಳ್ಳೋಣ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಸಂಪಮಾಸ ಪತ್ರಿಕೆಯ ಸೆಪ್ಟೆಂಬರ್ ತಿಂಗಳಲ್ಲಿ ಈ ಲೇಖನ ಪ್ರಕಟವಾಗಿದೆ.

ಅಖಂಡ ಭಾರತದ ವಿಭಜನೆ

ಅಖಂಡ ಭಾರತದ ವಿಭಜನೆ ಎಂಬ ಶೀರ್ಷಿಕೆ ಓದಿದ ತಕ್ಷಣವೇ ನಮಗೆ ನೆನಪಾಗೋದೇ 1947ರಲ್ಲಿ ಬ್ರಿಟೀಷರು ಧರ್ಮಾಧಾರಿತವಾಗಿ ಭಾರತ ಮತ್ತು ಪಾಕೀಸ್ಥಾನದ ವಿಭಜನೆ ಮಾಡಿಹೋಗಿದ್ದೇ ನೆನಪಾಗುತ್ತದೆ. ಆದರೆ ನಿಜ ಹೇಳಬೇಕೆಂದರೆ ಬ್ರಿಟಿಷರು ಭಾರತದಿಂದ ಸಂಪೂರ್ಣವಾಗಿ ಕಾಲು ಕೀಳುವ ಮೊದಲು ಕಡೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಬ್ರಿಟಿಷರು ತಾವು ಆಳುತ್ತಿದ್ದ ಬೇರೆ ಯಾವುದೇ ರಾಷ್ಟ್ರವನ್ನು ವಿಭಜನೆ ಮಾಡದಿದ್ದರೂ, ಭಾರತವನ್ನು ಮಾತ್ರಾ ಇಷ್ಟೊಂದು ಬಾರಿ ವಿಭಜನೆ ಮಾಡುವ ಮುಖಾಂತರ ಭಾರತ ದೇಶ ಏಷ್ಯಾ ಮತ್ತು ಪ್ರಪಂಚದಲ್ಲಿ ಅತ್ಯಂತ ಪ್ರಭಲ ರಾಷ್ಟ್ರವಾಗುವುದನ್ನು ತಪ್ಪಿಸಿದ್ದಾರೆ ಎಂದರೂ ತಪ್ಪಾಗದು.

18ನೇ ಶತಮಾನದ ಮಧ್ಯದ ವರೆಗೂ ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ವಿಸ್ತರಿಸಿತ್ತು. 1857 ರಲ್ಲಿ ಭಾರತದ ವಿಸ್ತೀರ್ಣ 83 ಲಕ್ಷ ಚದರ ಕಿಲೋಮೀಟರ್ ಇತ್ತು. ಪ್ರಸ್ತುತ ಅದು ಕೇವಲ 33 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣವಾಗಿದೆ. 1857 ರಿಂದ 1947 ರವರೆಗೆ, ಭಾರತವು ಅನೇಕ ಬಾರಿ ಬಾಹ್ಯ ಶಕ್ತಿಗಳಿಂದ ನಾನಾ ಕಾರಣಗಳಿಗೆ ವಿಭಜನೆಯಾಯಿತು. ಅಫ್ಘಾನಿಸ್ತಾನವನ್ನು 1876 ರಲ್ಲಿ ಭಾರತದಿಂದ, 1904 ರಲ್ಲಿ ನೇಪಾಳ, 1906 ರಲ್ಲಿ ಭೂತಾನ್, 1907 ರಲ್ಲಿ ಟಿಬೆಟ್, 1935 ರಲ್ಲಿ ಶ್ರೀಲಂಕಾ, 1937 ರಲ್ಲಿ ಮ್ಯಾನ್ಮಾರ್ ಮತ್ತು 1947 ರಲ್ಲಿ ಪಾಕಿಸ್ತಾನವನ್ನು ಬೇರ್ಪಡಿಸಲಾಯಿತು.

afghan

1876 ರಲ್ಲಿ ಅಫ್ಘಾನಿಸ್ತಾನದ ಉದಯ

ಅಫ್ಘಾನಿಸ್ತಾನದ ಪ್ರಾಚೀನ ಹೆಸರು ಉಪಗಣಸ್ಥಾನ ಮತ್ತು ಕಂದಹಾರ್‌ನ ಗಾಂಧಾರ. ಅಫ್ಘಾನಿಸ್ತಾನ ಶೈವ ದೇಶವಾಗಿತ್ತು. ಮಹಾಭಾರತದಲ್ಲಿ ಕೌರವರ ತಾಯಿ ಗಾಂಧಾರಿ ಮತ್ತು ಮಾವ ಶಕುನಿ ಇದೇ ಗಾಂಧಾರ ಪ್ರದೇಶದವರೇ. ಶಹಜಹಾನ್ ಆಳ್ವಿಕೆಯವರೆಗೂ ಕಂದಹಾರ್ ಅಂದರೆ ಗಾಂಧಾರದ ವಿವರಣೆ ಕಂಡು ಬರುತ್ತದಲ್ಲದೇ ಭಾರತದ ಒಂದು ಭಾಗವಾಗಿತ್ತು. ಗ್ರೀಸ್ ದೇಶದ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಮೊದಲು ಭಾರತವನ್ನು ಪ್ರವೇಶಿಸಿದ್ದೇ ಅಫ್ಗಾನಿಸ್ಥಾನದ ಮುಖಾಂತರವೇ. 1876 ರಲ್ಲಿ ರಷ್ಯಾ ಮತ್ತು ಬ್ರಿಟನ್ ನಡುವೆ ಗಂಡಮಕ್ ಒಪ್ಪಂದದ ಪ್ರಕಾರ ಅಫ್ಘಾನಿಸ್ತಾನ ಪ್ರತ್ಯೇಕ ದೇಶವನ್ನಾಗಿ ಬೇರ್ಪಡಿಸಲಾಯಿತು.

nepal

1904 ರಲ್ಲಿ ನೇಪಾಳದ ಉದಯ

ನೇಪಾಳವನ್ನು ಪ್ರಾಚೀನ ಕಾಲದಲ್ಲಿ ದೇವಧರ್ ಎಂದು ಕರೆಯಲಾಗುತ್ತಿತ್ತು. ಭಗವಾನ್ ಬುದ್ಧನು ಲುಂಬಿನಿಯಲ್ಲಿ ಜನಿಸಿದರೆ ಪ್ರಭು ಶ್ರೀರಾಮ ಚಂದ್ರನ ಹೆಂಡತಿ ಸೀತಾದೇವಿ ಜನಿಸಿದ್ದು ಇಂದು ನೇಪಾಳದಲ್ಲಿರುವ ಜನಕಪುರದಲ್ಲಿ. ಚಕ್ರವರ್ತಿ ಅಶೋಕ ಮತ್ತು ಸಮುದ್ರಗುಪ್ತನ ಆಳ್ವಿಕೆಯಲ್ಲಿ ನೇಪಾಳ ಭಾರತದ ಅವಿಭಾಜ್ಯ ಅಂಗವಾಗಿತ್ತು. 1904 ರಲ್ಲಿ ಬ್ರಿಟಿಷರು ನೇಪಾಳವನ್ನು ಪ್ರತ್ಯೇಕ ದೇಶವನ್ನಾಗಿ ವಿಭಜನೆ ಮಾಡಿದಾಗ, ನೇಪಾಳ ವಿಶ್ವದ ಪ್ರಪ್ರಥಮ ಹಿಂದೂ ರಾಷ್ಟ್ರ ಎಂದು ಕರೆದು ಕೊಂಡಿತು. ನೇಪಾಳದ ರಾಜನನ್ನು ಇತ್ತೀಚಿನವರೆಗೂ ನೇಪಾಳದ ನರೇಶ ಎಂದೇ ಸಂಭೋಧಿಸಲಾಗುತ್ತಿತ್ತು. ನೇಪಾಳದಲ್ಲಿ ಇಂದಿಗೂ 81% ಹಿಂದುಗಳು ಮತ್ತು 9% ಬೌದ್ಧರಿದ್ದಾರೆ. 1951 ರಲ್ಲಿ, ನೇಪಾಳದ ಮಹಾರಾಜ ತ್ರಿಭುವನ್ ಸಿಂಗ್ ಅವರು ನೇಪಾಳವನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಆಗಿನ ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಮನವಿ ಮಾಡಿದರು. ದುರಾದೃಷ್ಟವಷಾತ್ ದೂರದೃಷ್ಟಿಯ ಕೊರತೆಯಿಂದ ಅದಾಗಲೇ ಕಾಶ್ಮೀರದಲ್ಲೂ ಇದೇ ತಪ್ಪನ್ನು ಮಾಡಿ ಇಂದಿಗೂ ಮಗ್ಗುಲ ಮುಳ್ಳಾಗಿರಿಸಿ ಹೋದ ಜವಾಹರಲಾಲ್ ನೆಹರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಈಗ ಕಮ್ಯೂನಿಷ್ಟ್ ಆಳ್ವಿಕೆಗೆ ಒಳಗಾಗಿ ನೇಪಾಳ ಹಿಂದೂ ರಾಷ್ಟ್ರದಿಂದ ಜಾತ್ಯಾತೀತ ರಾಷ್ಟ್ರವಾಗಿ ಮಾರ್ಪಟ್ಟು ಭಯೋತ್ಪಾದಕರು ಭಾರತಕ್ಕೆ ನುಸುಳಲು ರಾಜಮಾರ್ಗವಾಗಿರುವುದು ದುರಾದೃಷ್ಟಕರವಾಗಿದೆ.

bhutan

1906 ರಲ್ಲಿ ಭೂತಾನ್ ಉದಯ
ಭೂತಾನ್ ಎಂಬುದು ಸಂಸ್ಕೃತ ಪದವಾದ ಭು ಉತ್ತನ್ ನಿಂದ ಬಂದಿದೆ, ಇದರರ್ಥ ಎತ್ತರದ ಭೂಮಿ ಎಂಬುದಾಗಿದೆ. 1906 ರಲ್ಲಿ ಬ್ರಿಟಿಷರು ಭೂತಾನ್ ಪ್ರದೇಶವನ್ನು ಭಾರತದಿಂದ ಬೇರ್ಪಡಿಸಿ ಪ್ರತ್ಯೇಕ ದೇಶವೆಂದು ಗುರುತಿಸಲಾಯಿತು. ಇಂದಿಗೂ ಇಲ್ಲಿ ರಾಜನ ಆಡಳಿತವಿದ್ದು ಪ್ರಪಂಚದಲ್ಲೇ ಅತ್ಯಂತ ಪರಿಸರ ಪ್ರೇಮಿ ದೇಶ ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ಹವಾಮಾನ ಪ್ರಪಂಚದ ಉಳಿದೆಲ್ಲಾ ದೇಶಗಳಿಗಿಂತಲೂ ಅತ್ಯಂತ ಶುದ್ಧವಾಗಿದೆ.

tibet

1907 ರಲ್ಲಿ ಟಿಬೆಟ್ ಉದಯ
ಟಿಬೆಟ್‌ನ ಪ್ರಾಚೀನ ಹೆಸರು ತ್ರಿವಿಷ್ಟಂ ಎಂದಾಗಿದೆ. 1907 ರಲ್ಲಿ ಚೀನಿಯರು ಮತ್ತು ಬ್ರಿಟಿಷರ ನಡುವಿನ ಒಪ್ಪಂದದ ನಂತರ ಟಿಬೆಟನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಚೀನಾಕ್ಕೂ ಮತ್ತು ಮತ್ತೊಂದು ಭಾಗವನ್ನು ಲಾಮಾ ಅವರಿಗೆ ನೀಡಲಾಯಿತು. 1950ರಲ್ಲಿ ಚೀನಾ ದೇಶ ಟಿಬೆಟ್ಟಿನ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಂಡ ಪರಿಣಾಮ ದಲೈಲಾಮ ಆಶ್ರಯ ಕೋರಿ ಭಾರತಕ್ಕೆ ಬಂದಾಗ ಹಿಮಾಚಲ ಪ್ರದೇಶದ ಧರ್ಮಶಾಲ ಮತ್ತು ಕರ್ನಾಟಕದ ಕೊಡಗಿನ ಬಳಿ ಟಿಬೆಟ್ಟಿಯನ್ನರಿಗೆ ಆಶ್ರಯ ಕೊಡಲಾಗಿದೆ. 1954 ರಲ್ಲಿ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಮತ್ತೆ ತಮ್ಮ ಅಲಿಪ್ತ ನೀತಿ ಮತ್ತು ವಿಶ್ವ ನಾಯಕನಾಗುವ ಉಮೇದಿನಿಂದ ಇಡೀ ಟಿಬೆಟ್ ಚೀನಾದ ಭಾಗ ಎಂದು ಘೋಷಿಸುವ ಮೂಲಕ ಚೀನಾ ಭಾರತದ ಗಡಿಯಾಗುವಂತೆ ಮಾಡುವ ಮೂಲಕ ಮತ್ತೊಮ್ಮೆ ಎಡವಿದರು.

srilanka

1935 ರಲ್ಲಿ ಶ್ರೀಲಂಕಾ ಉದಯ
1935 ರಲ್ಲಿ ಬ್ರಿಟಿಷರು ಶ್ರೀಲಂಕಾವನ್ನು ಭಾರತದಿಂದ ಬೇರ್ಪಡಿಸಿದರು. ಶ್ರೀಲಂಕಾದ ಹಳೆಯ ಹೆಸರು ಸಿಂಹಳ ಎಂದಿದ್ದು ನಂತರ ಬ್ರಿಟೀಷರು ಅದನ್ನು ಸಿಲೋನ್ ಎಂದು ಮರುನಾಮಕರಣ ಮಾಡಿದ್ದರು. ರಾಮಾಯಣ ಕಾಲದಲ್ಲಿ ಲಂಕೆಯನ್ನು ರಾವಣ ಆಳುತ್ತಿದ್ದು ಸೀತಾ ಮಾತೆಯನ್ನು ಲಂಕೆಯ ಆಶೋಕವನದಲ್ಲಿ ಬಂಧಿಸಿಟ್ಟಿದ್ದು ನಮಗೆಲ್ಲರಿಗೂ ತಿಳಿದಿರುವ ವಿಷವಷ್ಟೇ. ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ಶ್ರೀಲಂಕಾದ ಹೆಸರು ತಾಮ್ರಪರ್ಣಿ ಎಂದಿದ್ದು ಚಕ್ರವರ್ತಿ ಅಶೋಕನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರ ಬೌದ್ಧ ಧರ್ಮ ಪ್ರಚಾರಕ್ಕಾಗಿ ಶ್ರೀಲಂಕಾಗೆ ಹೋಗಿ ಅಲ್ಲಿ ಬೌದ್ಧ ಧರ್ಮವನ್ನು ಪಸರಿದರು. ಇಂದಿಗೂ ಸಹಾ ಭಾರತದ ನಕ್ಷೆ ಬಿಡಿಸಿ ಎಂದರೆ ಪತಿಯೊಂದು ಸಣ್ಣ ಮಗುವೂ ಭಾರತದ ನಕ್ಷೆಯ ಕೆಳಗೆ ಶ್ರೀಲಂಕಾ ನಕ್ಷೆಯನ್ನೂ ಬಿಡಿಸುವ ಮೂಲಕ ಅದು ಅಖಂಡ ಭಾರತದ ಒಂದು ಭಾಗವಾಗಿದೆ ಎಂದೇ ಸಕಲ ಭಾರತೀಯರ ಮನದಲ್ಲಿ ಅಚ್ಚೊತ್ತಿದೆ.

barma

1937 ರಲ್ಲಿ ಮ್ಯಾನ್ಮಾರ್ (ಬರ್ಮಾ)ದ ಉದಯ
ಮ್ಯಾನ್ಮಾರ್ (ಬರ್ಮ) ದ ಪ್ರಾಚೀನ ಹೆಸರು ಬ್ರಹ್ಮದೇಶ. .ಪ್ರಾಚೀನ ಕಾಲದಲ್ಲಿ, ಹಿಂದೂ ರಾಜ ಆನಂದವ್ರತ ಈ ಪ್ರದೇಶವನ್ನು ಆಳುತ್ತಿದ್ದ. ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಪ್ರಖರವನ್ನು ಪಡೆದದ್ದೇ ಬರ್ಮಾದ ರಂಗೂನಿನಲ್ಲಿ. ಇದನ್ನು ಮನಗಂಡೇ 1937 ರಲ್ಲಿ, ಮ್ಯಾನ್ಮಾರ್ ಅಂದರೆ ಬರ್ಮಾ ಕ್ಕೆ ಪ್ರತ್ಯೇಕ ದೇಶದ ಮಾನ್ಯತೆಯನ್ನು ಬ್ರಿಟಿಷರು ನೀಡುವ ಮುಖಾಂತರ ಅದನ್ನು ಭಾರತದಿಂದ ಬೇರ್ಪಡಿಸಿದರೂ ನೇತಾಜಿ ಸುಭಾಷರು ತಮ್ಮ ಆಜಾದ್ ಹಿಂದ್ ಫೌಜ್ ಕಟ್ಟುವಾಗ ಅತ್ಯಂತ ಹೆಚ್ಚಿನ ಸೈನಿಕರನ್ನು ಬರ್ಮಾದಿಂದಲೇ ಸೇರಿಸಿಕೊಂಡಿದ್ದರು.

pakistan

1947 ರಲ್ಲಿ ಪಾಕಿಸ್ತಾನದ ಉದಯ
ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಲು ಮುಂದಾದಾಗ ಭಾರತದ ಪ್ರಧಾನಿಗಳು ಯಾರಗಬೇಕೆಂಬ ಜಿಜ್ಞಾಸೆ ಮೂಡಿತ್ತು. ಸ್ವಾತ್ರ್ಯಂತ್ಯ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಮುಸ್ಲಿಂ ಲೀಗ್ ಎರಡೂ ಸಹಾ ಜಂಟಿಯಾಗಿ ಹೋರಾಡಿದ್ದ ಕಾರಣ ಉಭಯ ಪಕ್ಷಗಳೂ ಪ್ರಧಾನಿ ಪಟ್ಟ ತಮಗೇ ಸೇರ ಬೇಕೆಂದು ಪಟ್ಟು ಹಿಡಿದಾಗ ಮತ್ತದೇ ನೆಹರು ಅಧಿಕಾರದ ಆಸೆಯಿಂದಾಗಿ, 1940 ರಿಂದಲೂ ಧರ್ಮದ ಆಧಾರದ ಮೇಲೆ ಪ್ರತ್ಯೇಕ ದೇಶವನ್ನು ಬೇಡಿಕೆ ಮಾಡುತ್ತಿದ್ದ ಮೊಹಮ್ಮದ್ ಅಲಿ ಜಿನ್ನಾರವರ ಒತ್ತಾಸೆಯನ್ಣೇ ಮುಂದಿಟ್ಟು ಕೊಂಡು ಲಾರ್ಡ್ ಮೌಂಟ್ ಬ್ಯಾಟನ್ನಿನೊಂದಿಗಿದ್ದ ಸ್ನೇಹದಿಂದ , ಆಗಸ್ಟ್ 14, 1947 ರಂದು ಬ್ರಿಟಿಷರಿಂದ ಭಾರತದ ವಿಭಜನೆಯನ್ನು ಮತ್ತೊಮ್ಮೆ ಮಾಡಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಿತು. 1971 ರಲ್ಲಿ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಮುಂದಾಳತ್ವದಲ್ಲಿ ಪೂರ್ವ ಪಾಕಿಸ್ಥಾನ ಪಾಕಿಸ್ತಾನದಿಂದ ಸಂಪೂರ್ಣವಾಗಿ ವಿಭಜಿಸಿ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬರುವ ಮೂಲಕ ಭಾರತಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎಂಬ ಎರಡು ಮುಸ್ಲಿಂ ರಾಷ್ಟ್ರಗಳು ಮಗ್ಗಲ ಮುಳ್ಳಾಗುವಂತಾಯಿತು.

ಇವಿಷ್ಟೂ ಭಾರತದ ವಿಭಜನೆಯಾದರೆ, ಏಷ್ಯಾದ ಇನ್ನೂ ಅನೇಕ ರಾಷ್ಟ್ರಗಳು ಇಂದಿಗೂ ನಮ್ಮ ಸನಾತನ ಧರ್ಮವನ್ನು ತಮ್ಮ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿವೆ ಅಂತಹ ರಾಷ್ಟ್ರಗಳ ಬಗ್ಗೆಯೂ ಸ್ವಲ್ಪ ಗಮನ ಹರಿಸೋಣ.

thailand

ಥೈಲ್ಯಾಂಡ್
ಥೈಲ್ಯಾಂಡ್ ದೇಶದ ಸಮುದ್ರ ಇಂದಿಗೂ ನಮ್ಮ ಅಂಡಮಾನ್ ಮತ್ತು ನಿಕೋಬಾರ್ ಗಡಿಗೆ ಹೊಂದಿಕೊಂಡಿದೆ. ಥೈಲ್ಯಾಂಡನ್ನು 1939 ರವರೆಗೆ ಸಿಯಾಮ್ ಎಂದು ಕರೆಯಲಾಗುತ್ತಿತ್ತು. ಅದರ ಪ್ರಮುಖ ನಗರಗಳು ಅಯೋಧ್ಯೆ, ಶ್ರೀ ವಿಜಯ್ ಇತ್ಯಾದಿ. ಶ್ಯಾಮ್‌ನಲ್ಲಿ ಬೌದ್ಧ ದೇವಾಲಯಗಳ ನಿರ್ಮಾಣವು ಮೂರನೇ ಶತಮಾನದಲ್ಲಿ ಆರಂಭವಾಯಿತು. ಇಂದಿಗೂ ಈ ದೇಶದಲ್ಲಿ ಅನೇಕ ಶಿವ ದೇವಾಲಯಗಳಿವೆ. ಥೈಲ್ಯಾಂಡ್ ಬ್ಯಾಂಕಾಕ್ ರಾಜಧಾನಿ ನೂರಾರು ಹಿಂದೂ ದೇವಾಲಯಗಳನ್ನು ಹೊಂದಿದೆ. ಅಲ್ಲಿ ಇಂದಿಗೂ ಗಣೇಶ ಮತ್ತು ಸರಸ್ವತಿಯನ್ನು ತಮ್ಮ ತಮ್ಮ ಮನೆಗಳ ಮುಂದೆ ತುಳಸೀ ಕಟ್ಟೆಯ ರೂಪದಲ್ಲಿ ಇಟ್ಟು ಪೂಜೆ ಮಾಡುತ್ತಾರೆ.

combodia

ಕಾಂಬೋಡಿಯಾ
ಕಾಂಬೋಡಿಯಾ ಕಾಂಬೋಜ್ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಒಂದು ಕಾಲದಲ್ಲಿ ಇದೂ ಸಹಾ ಅಖಂಡ ಭಾರತದ ಅವಿಭಾಜ್ಯ ಅಂಗವಾಗಿತ್ತು. ಭಾರತೀಯ ಮೂಲದ ಕೌಂಡಿನ್ಯ ರಾಜವಂಶವು ಮೊದಲ ಶತಮಾನದಿಂದಲೇ ಇಲ್ಲಿ ಆಳ್ವಿಕೆ ನಡೆಸಿತು. ಇಲ್ಲಿನ ಜನರು ಶಿವ, ವಿಷ್ಣು ಮತ್ತು ಬುದ್ಧನನ್ನು ಪೂಜಿಸುತ್ತಿದ್ದರು. ಇಲ್ಲಿನ ರಾಷ್ಟ್ರೀಯ ಭಾಷೆ ಸಂಸ್ಕೃತವಾಗಿತ್ತು. ಇಂದಿಗೂ ಕಾಂಬೋಡಿಯಾದಲ್ಲಿ, ಭಾರತೀಯ ತಿಂಗಳುಗಳಾದ ಚೆಟ್, ವಿಶಾಖ್, ಅಸಧಾ ಎಂಬ ಹೆಸರುಗಳನ್ನು ಬಳಸಲಾಗುತ್ತದೆ. ವಿಶ್ವವಿಖ್ಯಾತ ಅಂಕೋರ್ವಾತ್ ದೇವಸ್ಥಾನವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ, ಇದನ್ನು ಹಿಂದೂ ರಾಜ ಸೂರ್ಯದೇವ್ ವರ್ಮನ್ ನಿರ್ಮಿಸಿದ್ದಾರೆ. ದೇವಾಲಯದ ಗೋಡೆಗಳಲ್ಲಿ ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಚಿತ್ರಗಳಿವೆ. ಅಂಕೋರ್ವತ್ ನ ಪ್ರಾಚೀನ ಹೆಸರು ಯಶೋಧರಪುರ.

viatnam

ವಿಯೆಟ್ನಾಂ
ವಿಯೆಟ್ನಾಂನ ಪ್ರಾಚೀನ ಹೆಸರು ಚಂಪದೇಶ್ ಮತ್ತು ಅದರ ಪ್ರಮುಖ ನಗರಗಳು ಇಂದ್ರಾಪುರ, ಅಮರಾವತಿ ಮತ್ತು ವಿಜಯ್. ಇಲ್ಲಿ ಇಂದಿಗೂ ಅನೇಕ ಶಿವ, ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿ ದೇವಸ್ಥಾನಗಳನ್ನು ಇಲ್ಲಿ ಕಾಣ ಬಹುದಾಗಿದೆ. ಇಲ್ಲಿನ ಜನರು ಮೂಲತಃ ಶೈವರಾಗಿದ್ದಕಾರಣ ಚಮ್ ಎಂದು ಕರೆಯಲ್ಪಟ್ಟರು ಮತ್ತು ಅವರು ಪರಮಶಿವನನ್ನು ಪೂಜಿಸುತ್ತಾರೆ.

malysia

ಮಲೇಷ್ಯಾ
ಮಲೇಷ್ಯಾದ ಪ್ರಾಚೀನ ಹೆಸರು ಮಲಯ ದೇಶ, ಇದು ಸಂಸ್ಕೃತ ಪದ, ಅಂದರೆ ಪರ್ವತಗಳ ಭೂಮಿ. ಮಲೇಷ್ಯಾವನ್ನು ರಾಮಾಯಣ ಮತ್ತು ರಘುವಂಶಂನಲ್ಲಿ ಕೂಡ ವಿವರಿಸಲಾಗಿದೆ. ಶೈವ ಧರ್ಮವನ್ನು ಮಲಯದಲ್ಲಿ ಆಚರಿಸಲಾಯಿತು. ದುರ್ಗಾ ದೇವಿಯನ್ನು ಮತ್ತು ಗಣೇಶನನ್ನು ಪೂಜಿಸಲಾಯಿತು. ಇಲ್ಲಿ ಮುಖ್ಯ ಲಿಪಿ ಬ್ರಾಹ್ಮಿ ಮತ್ತು ಸಂಸ್ಕೃತ ಮುಖ್ಯ ಭಾಷೆಗಳಾಗಿದ್ದು ತಮಿಳು ಇಲ್ಲಿನ ಎರಡನೇ ಮುಖ್ಯ ಭಾಷೆಯಾಗಿದೆ.

indonasia

ಇಂಡೋನೇಷ್ಯಾ
ಇಂಡೋನೇಷ್ಯಾದ ಪುರಾತನ ಹೆಸರು ದೀಪಂತರ ಭಾರತ. ಇದನ್ನು ಪುರಾಣಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ದೀಪಂತರ ಭಾರತ ಎಂದರೆ ಭಾರತದಾದ್ಯಂತ ಸಾಗರ. ಇದು ಹಿಂದೂ ರಾಜರ ರಾಜ್ಯವಾಗಿತ್ತು. ಅತಿದೊಡ್ಡ ಶಿವ ದೇವಾಲಯವೂ ಸಹಾ ಜಾವಾ ದ್ವೀಪದಲ್ಲಿತ್ತು. ಅಲ್ಲಿನ ಅನೇಕ ದೇವಾಲಯಗಳಲ್ಲಿ ಮುಖ್ಯವಾಗಿ ರಾಮ ಮತ್ತು ಶ್ರೀಕೃಷ್ಣನೊಂದಿಗೆ ಕೆತ್ತನೆ ಮಾಡಿರುವುದನ್ನು ಕಾಣಬಹುದಾಗಿದೆ. ಭುವನಕೋಶವು ಸಂಸ್ಕೃತದ 525 ಪದ್ಯಗಳನ್ನು ಹೊಂದಿರುವ ಅತ್ಯಂತ ಹಳೆಯ ಪುಸ್ತಕವಾಗಿದೆ.

ಸದ್ಯ ಮುಸ್ಲಿಂ ದೇಶವಾಗಿರುವ ಇಂಡೋನೇಷ್ಯಾದ ನೋಟಿನ ಮೇಲೆ ಗಣೇಶನ ಚಿತ್ರವಿದೆ ಮತ್ತು ಅಲ್ಲಿನ ಪ್ರಮುಖ ಸಂಸ್ಥೆಗಳ ಹೆಸರುಗಳು ಅಥವಾ ಮೋಟೋಗಳು ಇಂದಿಗೂ ಸಂಸ್ಕೃತದಲ್ಲಿರುವುದು ಗಮನಾರ್ಹವಾಗಿದೆ.

 • ಇಂಡೋನೇಷಿಯನ್ ಪೊಲೀಸ್ ಅಕಾಡೆಮಿ – ಧರ್ಮ ಬಿಜಾಕ್ಷನ ಕ್ಷತ್ರಿಯ
 • ಇಂಡೋನೇಷ್ಯಾ ರಾಷ್ಟ್ರೀಯ ಸಶಸ್ತ್ರ ಪಡೆಗಳು – ತ್ರಿ ಧರ್ಮ ಏಕ್ ಕರ್ಮ
 • ಇಂಡೋನೇಷ್ಯಾ ಏರ್ಲೈನ್ಸ್ – ಗರುನ್ ಏರ್ಲೈನ್ಸ್
 • ಇಂಡೋನೇಷ್ಯಾ ಗೃಹ ವ್ಯವಹಾರಗಳ ಸಚಿವಾಲಯ – ಚರಕ್ ಭುವನ್
 • ಇಂಡೋನೇಷ್ಯಾ ಹಣಕಾಸು ಸಚಿವಾಲಯ – ನಾಗರ್ ಧನ್ ರಕ್ಷ
 • ಇಂಡೋನೇಷ್ಯಾ ಸುಪ್ರೀಂ ಕೋರ್ಟ್ – ಧರ್ಮ ಯುಕ್ತಿ

ಈ ರೀತಿಯಾದ ಭವ್ಯವಾದ ಸಂಸ್ಕೃತಿ ನಮ್ಮ ದೇಶ ಮತ್ತು ನಮ್ಮ ಸನಾತನ ಸಂಸ್ಕೃತಿಯ ಹಿರಿಮೆ ಮತ್ತು ಗರಿಮೆಯಾಗಿದೆ. ಇದನ್ನು ಮನನ ಮಾಡಿಕೊಂಡು ಹೆಮ್ಮೆಯಿಂದ ಸಕಲ ಭಾರತೀಯರಿಗೂ ಮತ್ತು ಸನಾತನ ಧರ್ಮದವರಿಗೆ ತಲುಪಿಸುವ ಜವಾಭ್ಧಾರಿ ನಮ್ಮ ಮತ್ತು ನಿಮ್ಮ ಮೇಲಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ಸಾಮಾಜಿಕ ಜಾಲತಾಣದಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ ಇದಾಗಿದೆ.

ಜೂನ್ 25, 1975 ಲೋಕತಂತ್ರ ಕರಾಳ ದಿನ

ಆದು 1975ರ ಸಮಯ ನಾನಾಗ ಕೇವಲ 5 ವರ್ಷದ ಬಾಲಕ ಆಗ ತಾನೇ ನಾವು ಬೆಂಗಳೂರಿನ ಮಲ್ಲೇಶ್ವರದ ರೈಲ್ವೇ ಸ್ಟೇಷನ್ ಬಳಿಯಿಂದ ನೆಲಮಂಗಲದ ಬ್ರಾಹ್ಮಣರ ಬೀದಿಯ ಮನೆಗೆ ವರ್ಗವಾಗಿ ಮಲ್ಲೇಶ್ವರ ಶಿಶುವಿಹಾರದಿಂದ ನೆಲಮಂಗಲದ ಪೇಟೇ ಬೀದಿಯಲ್ಲಿದ್ದ ಸರ್ಕಾರೀ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಮನೆಯಲ್ಲಿ ಅದಾಗಲೇ ಅಮ್ಮ ಅಕ್ಷರಾಭ್ಯಾಸವನ್ನು ಚೆನ್ನಾಗಿಯೇ ಮಾಡಿಸಿದ್ದರಿಂದ ಆಗ ಮನೆಗೆ ಬರುತ್ತಿದ್ದ ಪತ್ರಿಕೆಯ ದೊಡ್ಡ ದೊಡ್ಡ ಅಕ್ಷರದ ಶೀರ್ಷಿಕೆ ಗಳನ್ನು ಮತ್ತು ಕಡೆಯ ಪುಟದ ಕ್ರೀಡಾ ವರದಿಗಳನ್ನು ಓದಿ ಅರ್ಥೈಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೆ.

1975ರ ಜೂನ್ 25 ಸಂಜೆ ನಮ್ಮ ತಂದೆಯವರು ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ಯಥಾಪ್ರಕಾರ ಮನೆಗೆ ಬಂದವರೇ, ರೇಡಿಯೋದಲ್ಲಿ ಪ್ರಸಾರವಾದ ವಾರ್ತೆಯನ್ನು ಕೇಳಿ ದಿಗ್ರ್ಭಾಂತರಾಗಿ ನಮ್ಮ ಬೀದಿಯ ಅಕ್ಕ ಪಕ್ಕದವರೊಂದಿಗೆ ಇಂದಿರಾಗಾಂಧಿ ದೇಶದಲ್ಲೆ Emergency ಜಾರಿಗೆ ತಂದಿದ್ದಾಳಂತೇ.. ಜಯಪ್ರಕಾಶ್ ನಾರಾಯಣ್, ಮೊರಾರ್ಜಿ, ವಾಜಪೇಯಿ, ಅದ್ವಾಣಿ, ಮಧು ದಂಡವತೆ ಮುಂತಾದ ರಾಷ್ಟ್ರ ನಾಯಕರುಗಳನ್ನೆಲ್ಲಾ ಬಂಧಿಸಿ ಜೈಲಿಗೆ ಅಟ್ಟಿದ್ದಾರಂತೆ ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಕೇಳಿಸುತ್ತಿದ್ದಾದರೂ ನನಗೆ ಅದಾವುದೂ ಅರ್ಥವಾಗುತ್ತಿರಲಿಲ್ಲ. ಅರ್ಥವಾಗುವ ವಯಸ್ಸೂ ನನ್ನದಾಗಿರಲಿಲ್ಲ.

ಮಾರನೇಯ ದಿನ ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂಬ ಶೀರ್ಷಿಕೆಯ ಅಡಿಯಲ್ಲೇ, ದೇಶದ ಮೇಲೇ ಈ ರೀತಿಯಾದ ಧಮನಕಾರಿಯಾದ ತುರ್ತುಪರಿಸ್ಥಿತಿ ಹೇರಿರುವುದು ಭಾರತದ ಇತಿಹಾಸದ ಕರಾಳ ದಿನ ಎಂದು ವಿರೋಧಪಕ್ಷಗಳು ಆರೋಪಿಸಿವೆ ಎಂದು ಸಣ್ಣ ಅಕ್ಷರಗಳಲ್ಲಿ ಮುದ್ರಿತವಾಗಿದ್ದನ್ನೂ ಓದಿದ್ದೆ.

ಇದೆಲ್ಲವೂ ಆಗಿ ಸ್ವಲ್ಪ ದಿನಗಳ ನಂತರ ಮನೆಯಲ್ಲಿ ಮತ್ತು ಹೊರಗೆ ಅವರಿವರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿ ಅರ್ಥ ಮಾಡಿಕೊಂಡಿದ್ದೇನೆಂದರೆ, 1975ರ ಜೂನ್ 12ರಂದು ಅಲಹಾಬಾದ್‌ ಹೈಕೋರ್ಟ್ ಇಂದಿರಾ ಗಾಂಧಿ ವಿರುದ್ಧ ನೀಡಿದ್ದ ತೀರ್ಪನ್ನು ವಿರೋಧಿಸುವ ಸಲುವಾಗಿ ದೇಶದ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು, ಜೂನ್ 25ರಂದು ಇಡೀ ದೇಶಾದ್ಯಂತ ರೇಡಿಯೋ ಮೂಲಕ ಸ್ವತಃ ತಮ್ಮ ಧನಿಯಲ್ಲಿಯೇ ತುರ್ತು ಪರಿಸ್ಥಿತಿ ಹೇರಲಾಗಿರುವ ವಿಷಯವನ್ನು ತಿಳಿಸಿದ್ದರು.

ಈ ಪ್ರಕ್ರಿಯೆ ಸುಮಾರು ಎರಡು ವರ್ಷಗಳು ಅಂದರೆ, 1977ರ ಮಾರ್ಚ್ 21ರವರೆಗೆ ಮುಂದುವರೆದಿತ್ತು. ಆ ದಿನಗಳಲ್ಲಿ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅವರು ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರ ಶಿಫಾರಸ್ಸಿನ ಮೇರೆಗೆ ಯಾವುದೇ ರೀತಿಯ ಚಕಾರವನ್ನೆತ್ತದೇ, ದೇಶದ ಸಂವಿಧಾನದ 352 ರ ಅಡಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಹೇರಲು ಅನುವು ಮಾಡಿಕೊಟ್ಟಿದ್ದರು.

CJ

ಇಂದಿರಾ ಗಾಂಧಿಯವರ ಈ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದಲ್ಲದೇ, ಇದರ ವಿರುದ್ದ ಎಲ್ಲ ಕಡೆಯಲ್ಲಿಯೂ ಜನರು ಪ್ರತಿಭಟನೆಗಳು ನಡೆಸುತ್ತಿದ್ದದ್ದನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೆವು. ಇದರ ಪ್ರತಿಯಾಗಿ ಸರ್ಕಾರದ ವಿರುದ್ಧ ಯಾವುದೇ ಬಹಿರಂಗ ಹೇಳಿಕೆಗಳನ್ನು ಕೊಟ್ಟವರನ್ನೂ ಅಥವಾ ಪ್ರತಿಭಟನೆಗಳನ್ನು ನಡೆಸುವವರನ್ನೂ, ಪತ್ರಿಕೆಗಳಲ್ಲಿ ಲೇಖನವನ್ನು ಬರೆದು ಜನರನ್ನು ಜಾಗೃತಿ ಗೊಳಿಸುವವರನ್ನು ಮುಲಾಜಿಲ್ಲದೇ ಯಾವುದೇ ರೀತಿಯ ತನಿಖೆಗಳು ಇಲ್ಲದೇ ಬಂಧಿಸಿ ಸೆರೆಮನೆಗೆ ಕಳುಹಿಸುತ್ತಿದ್ದರು. ಇದಕ್ಕೆ ಮುಂಜಾಗ್ರತಾ ಕ್ರಮ ಎಂಬು ಬಿಂಬಿಸಿ, ರಾಜ್ಯ ಮತ್ತು ರಾಷ್ಟ್ರದ ಬಹುತೇಕ ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಅದರಲ್ಲಿ ಬಹುತೇಕರನ್ನು ಅಂದಿಗೆ ಇಂದಿರಾಗಾಂಧಿಯವರ ಪರಮ ನೆಚ್ಚಿನ ಭಂಟರಾಗಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಕರ್ನಾಟಕದ ರಾಜಧಾನಿ ಬೆಂಗಳೂರಿನ ಸೆಂಟ್ರಲ್ ಜೈಲಿಗೆ ವರ್ಗಾವಣಿ ಮಾಡಿದ್ದನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೆ.

ಇವಿಷ್ಟೇ ಆಗಿದ್ದರೆ, ತುರ್ತು ಪರಿಸ್ಥಿತಿಯ ಕುರಿತಾದ ಲೇಖನ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಮನೆಗೆ ಬಂದು ಹೋಗುವವರ ಸಂಖ್ಯೆ ತುಂಬಾ ಹೆಚ್ಚಾಗಿದ್ದ ಕಾರಣ ನೆಲಮಂಗಲದಲ್ಲಿ ನಮ್ಮ ಮನೆಯನ್ನು ಬ್ರಾಹ್ಮಣರ ಬೀದಿಯಿಂದ ಮಾರ್ಕೆಟ್ ಬಳಿಯಿದ್ದ ಉರ್ದು ಶಾಲೆಯ ಪಕ್ಕದಲ್ಲಿದ್ದ ಊರ ಶಾನುಭೋಗರಾಗಿದ್ದ ನಾಗೇಶ ಶಾಸ್ತ್ರಿಗಳ ವಿಶಾಲವಾದ ಮನೆಗೆ ಬದಲಾವಣೆ ಮಾಡಿದ್ದೆವು. ಮನೆ ಒಂದು ರೀತಿಯ ಓಣಿಯಂತಿದ್ದರೂ ವಿಶಾಲವಾಗಿತ್ತು. ಹಜಾರ, ಮೂರ್ನಾಲ್ಕು ಕೋಣೆಗಳು ಇದ್ದು ಮನೆಗೆ ಹತ್ತು ಹದಿನೈದು ಮಂದಿ ಬಂದರೂ ಸುಲಭವಾಗಿ ಸಂಭಾಳಿಸಬಹುದಾಗಿತ್ತು. ನಮ್ಮ ಮನೆಯ ಮಾಲಿಕರಾದ ಶ್ರೀ ನಾಗೇಶ ಶಾಸ್ತ್ರಿಗಳು ಸಮಾಜದಲ್ಲಿ ಧುರೀಣರೂ ಮತ್ತು ಕೋರ್ಟು ಕಛೇರಿಗಳ ಕುರಿತಾಗಿ ಬಹಳ ತಿಳಿದುಕೊಂಡು ಅರ್ಜಿಗಳನ್ನೆಲ್ಲಾ ಬರೆದು ಕೊಡುತ್ತಿದ್ದರಿಂದ ಸದಾಕಾಲವೂ ಅವರ ಜನಜಂಗುಳಿಯಿಂದ ಅವರ ಮನೆ ಗಿಜಿ ಗಿಜಿ ಗುಟ್ಟುತ್ತಿತ್ತು. ಹಾಗಾಗಿ ದೇಶದ ಆಗು ಹೋಗುಗಳ ಕುರಿತಾಗಿ ನಡೆಯುತ್ತಿದ ಪರ ಮತ್ತು ವಿರೋಧ ಚರ್ಚೆಗಳು ಅನಾಯಾಸವಾಗಿ ನನ್ನ ಕಿವಿಗೆ ಬೀಳುತ್ತಿತ್ತು.

ಹೇಳೀ ಕೇಳಿ ನಮ್ಮದು ಸಂಘದ ಮನೆ. ಮನೆಯಲ್ಲಿ ಅಪ್ಪಾ, ಚಿಕ್ಕಪ್ಪಂದಿರೂ ಎಲ್ಲರೂ ಸಂಘದ ನಿಷ್ಟಾವಂತ ಸ್ವಯಂಸೇವಕರೇ ಹಾಗಾಗಿ ನನಗೆ ಬುದ್ದಿ ತಿಳಿದು ಸುಮಾರು 3 ವರ್ಷಗಳು ಇದ್ದಾಗಲೇ ಚಿಕ್ಕಪ್ಪ ಬೆಂಗಳೂರಿನ ಶ್ರೀರಾಮ ಪುರದ ಶ್ರೀರಾಮ್ ಶಾಖೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಅಲ್ಲಿ ಇಂದಿನ ಶಿಕ್ಷಣ ಮಂತ್ರಿಗಾಳಾಗಿರುವ ಶ್ರೀ ಸುರೇಶ್ ಕುಮಾರ್ ಮತ್ತು ನಮ್ಮ ಮುರಳೀ ಚಿಕ್ಕಪ್ಪನವರೆಲ್ಲಾ ಸಹವರ್ತಿಗಳು. ಮುಂದೆ ನಾವು ನೆಲಮಂಗಲಕ್ಕೆ ವರ್ಗವಾದಾಗ ಬಸ್ ನಿಲ್ದಾಣದ ಹಿಂದೆ ನಡೆಯುತ್ತಿದ್ದ ಸಾಯಂ ಶಾಖೆಗೆ ನಾನು ಪ್ರತಿನಿತ್ಯವೂ ಹೋಗುತ್ತಿದ್ದರೆ, ಅಲ್ಲೇ ನಡೆಯುತ್ತಿದ್ದ ರಾತೀ ಶಾಖೆಗೆ ನಮ್ಮ ತಂದೆಯವರು ತಪ್ಪದೇ ಹೋಗುತ್ತಿದ್ದರು. ನಾನು ಸಾಯಂಶಾಖೆಯಲ್ಲಿ ಹಾಡು ಶ್ಲೋಕ, ಪ್ರಾರ್ಥನೆಗಳನ್ನು ಹೇಳಿಕೊಡುತ್ತಿದ್ದರೆ, ರಾತ್ರಿಯ ಶಾಖೆಯಲ್ಲಿ ನಮ್ಮ ತಂದೆಯವರಿಗೂ ಅದೇ ಜವಾಬ್ಧಾರಿ ಇದ್ದದ್ದು ವಿಶೇಷವಾಗಿತ್ತು.

ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಕಾರಣ, ಇದ್ದಕ್ಕಿದ್ದಂತೆ ಅಘೋಷಿತವಾಗಿ ಬಹಿರಂಗವಾಗಿ ಸಂಘದ ಶಾಖೆಗಳು ನಿಂತು ಹೋದವು. ಕೆಲ ವಾರಗಳ ನಂತರ ರಾತ್ರಿ ರಹಸ್ಯವಾಗಿ ಸಂಘದ ಸ್ವಯಂಸೇವಕರೊಬ್ಬರ ನೆಲಮಾಳಿಗೆಯಲ್ಲಿ ಶಾಖೆ ನಡೆಯಲಾರಂಭಿಸಿತು. ತಂದೆಯವರು ಪ್ರತಿನಿತ್ಯವೂ ಅಲ್ಲಿಗೆ ಹೊಗುತ್ತಿದ್ದರೆ, ಅಗೊಮ್ಮೆ ಈಗೊಮ್ಮೆ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಚೆನ್ನಾಗಿಯೇ ನೆನಪಿದೆ. ಸ್ವಲ್ಪ ಯೋಗಾಭ್ಯಾಸ ಮಾಡಿ ನಂತರ ಅದೇ ತುರ್ತುಪರಿಸ್ಥಿತಿಯ ಬಗ್ಗೆಯೇ ಗಾಢವಾದ ಚರ್ಚೆಗಳು ನಡೆಸಿ ಪ್ರಾರ್ಥನೆ ಮಾಡಿ ಬರುತ್ತಿದ್ದದ್ದು ರೂಢಿಯಾಗಿತ್ತು.

ಇದಾದ ಕೆಲ ದಿನಗಳಲ್ಲೇ ರಾತ್ರೀ ಶಾಖೆ ಮುಗಿದ ನಂತರ ನಮ್ಮ ತಂದೆಯವರ ಜೊತೆಯಲ್ಲಿ ಮನೆಗೆ ವಾರಕ್ಕೆ ಇಬ್ಬರು ಇಲ್ಲವೋ ಮೂವರು ನಮ್ಮ ಮನೆಗೆ ಬರತೊಡಗಿದರು. ಅಪ್ಪಾ ಮತ್ತು ಅಮ್ಮ ಅವರನ್ನು ನಮಗೆ ಈಶ್ವರ್ ಮಾವ, ವಾಮನ್ ಮಾವ, ಕೇಳಪ್ಪನ್ ಮಾವ ಎಂದು ಪರಿಚಯಿಸಿಕೊಟ್ಟಿದ್ದು ನಮಗೆ ಸ್ಪಷ್ಟವಾಗಿ ನೆನಪಿದೆ. ಸುಮಾರು ಎರಡು ಮೂರು ದಿನಗಳ ಕಾಲ ನಮ್ಮ ಮನೆಯ ಸಂಬಂಧೀಕರಂತೆಯೇ ನಮಗೆಲ್ಲಾ ಕಥೆಗಳನ್ನು ಹೇಳಿ ನಮ್ಮೊಡನೆ ಸಹಜವಾಗಿಯೇ ಇರುತ್ತಿದ್ದವರು ನಾನು ರಾತ್ರಿ ಮಲಗಿ ಬೆಳಗೆ ಏಳುವಷ್ಟರಲ್ಲಿ ಇದ್ದಕ್ಕಿದ್ದಂತಯೇ ಕಾಣೆಯಾಗಿರುತ್ತಿದ್ದರು. ಅಮ್ಮಾ ವಾಮನ್ ಮಾವಾ ಎಲ್ಲಿ ಎಂದರೆ, ಅವರು ರಾತ್ರಿ ಊರಿಗೆ ಹೊರಟು ಹೋದರು ಎಂದಷ್ಟೇ ಹೇಳುತ್ತಿದ್ದರು.

lorry

ಈ ರೀತಿ ಅನೇಕರು ನಮ್ಮ ಮನೆಗೆ ಬಂದು ಹೋಗುವುದು ಸಹಜವಾಗಿ ಹೋದ ಕಾರಣ ನಾನು ಸಹಾ ಅದರ ಬಗ್ಗೆ ಕೇಳುವುದನ್ನೇ ಬಿಟ್ಟು ಬಿಟ್ಟೆ. ಅದಾದ ನಂತರ ಕೆಲವು ದಿನಗಳ ನಂತರ ತಿಳಿದು ಬಂದ ವಿಷಯವೇನೆಂದರೆ ಅವರೆಲ್ಲರೂ ಸಂಘದ ಅನ್ಯಾನ್ಯ ಜವಾಬ್ಧಾರಿಯಲ್ಲಿದ್ದ ಹಿರಿಯರಾಗಿದ್ದು ಸರ್ಕಾರ ಅವರನ್ನು ವಿನಾಕಾರಣ ಬಂಧಿಸುತ್ತಿದ್ದ ಕಾರಣ, ಅವರೆಲ್ಲರೂ ಹೀಗೆ ಪೋಲಿಸರ ಕಣ್ತಪ್ಪಿಸಿಕೊಂಡು ನಮ್ಮ ಮನೆಗಳಲ್ಲಿ ಕೆಲದಿನಗಳು ಇದ್ದು ರಾತ್ರೀ ನೆಲಮಂಗಲದಿಂದ ಹಾಸನ, ಮಂಗಳೂರು, ಶಿವಮೊಗ್ಗ ಅರಸೀಕೆರೆ ಕಡೆಗೆ ಹೋಗುತ್ತಿದ್ದ ಲಾರಿಗಳಲ್ಲಿ ಸಂಚರಿಸಿ ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳುತ್ತಿದ್ದರು. ರಾತ್ರಿ ಎಲ್ಲರೂ ಒಟ್ಟಿಗೆ ಊಟಮಾಡಿ ನಾವೆಲ್ಲಾ ಮಲಗಿದ ನಂತರ ನಮ್ಮ ತಂದೆಯವರು ಅಂತಹ ಕಾರ್ಯಕರ್ತರನ್ನು ಲಾರಿಗಳಿಗೆ ಸುರಕ್ಷಿತವಾಗಿ ಹತ್ತಿಸಿ ಮನೆಗೆ ಬರುತ್ತಿದ್ದರು. ಹಾಗೆ ಹತ್ತಿಸಿ ಕಳುಹಿಸಿದ ಅನೇಕರು ಮುಂದೇ, ಶಿವಮೊಗ್ಗದಲ್ಲೋ ಇಲ್ಲವೇ ಮಂಗಳೂರಿನಲ್ಲಿಯೇ ಪೋಲೀಸರ ಕೈಗೆ ಸಿಕ್ಕಿಕೊಂಡ ವಿಷಯ ಅನೇಕ ದಿನಗಳ ನಂತರ ನಮಗೆ ತಿಳಿದು ಬೇಸರವಾಗುತ್ತಿತ್ತು.

np

ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ಕಾರಣ ಸರ್ಕಾರದ ವಿರುದ್ಧ ಬರೆಯುವ ಪತ್ರಿಕಾ ಸಂಪಾದಕರನ್ನು ಬಂಧಿಸಿ ಪತ್ರಿಕೆಗಳ ಪ್ರಸಾರವನ್ನು ತಡೆಹಿಡಿಯುವ ಧಮನಕಾರಿ ಸಂಗತಿಗಳು ನಡೆಯುತ್ತಿತ್ತು. ಹಾಗಾಗಿ ಸತ್ಯ ಸಂಗತಿಗಳೆಲ್ಲವೂ ಮರೆ ಮಾಚಿ ಸರ್ಕಾರದ ಪರವಾದ ಸಂಗತಿಗಳನ್ನು ಪ್ರಕಟಿಸುತ್ತಿದ್ದ ಪ್ರಜಾವಾಣಿಯನ್ನೇ ಓದಬೇಕಾದ ಅನಿವಾರ್ಯ ಪರಿಸ್ಥಿತಿ ನಮಗಿತ್ತು. ಆದರೂ ಸಹಾ ಸಂಘದ ಕಡೆಯಿಂದ ಪಾಕ್ಶಿಕವಾಗಿ ಪ್ರಕಟವಾಗುತ್ತಿದ್ದ ಕಹಳೆ ಪತ್ರಿಕೆಯಲ್ಲಿ ವಸ್ತುನಿಷ್ಟವಾದ ವಿಷಯಗಳನ್ನು ತಿಳಿದುಕೊಳ್ಳ ಬಹುದಾಗಿತ್ತು. ದುರಾದೃಷ್ಟವಾಶಾತ್ ಇಂತಹ ಪತ್ರಿಕೆಗಳನ್ನು ಬಹಿರಂಗವಾಗಿ ಪ್ರಕಟಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇದನ್ನು ಗುಪ್ತವಾಗಿ ತಲುಪಿಸುವ ವ್ಯವಸ್ಥೆಯ ಭಾಗವಾಗಿ ನಮ್ಮ ಚಿಕ್ಕಪ್ಪನವರು ಇದ್ದರು. ರಾತ್ರಿ ಕತ್ತಲಾದ ನಂತರ ಬೆಂಗಳೂರಿನ ಶ್ರೀರಾಮ ಪುರದಿಂದ ಸೈಕಲ್ಲಿನಲ್ಲಿ ನೆಲಮಂಗಲ ದಾರಿಯಲ್ಲಿ ಇರುವ ಹಿಮಾಲಯ ಡ್ರಗ್ ಕಂಪನಿಯ ಮಾಕಳಿ ಬಳಿಗೆ ಬಂದು ಅಲ್ಲಿ ರಾತ್ರಿ ಅದೆಷ್ಟೋ ಸಮಯಕ್ಕೆ ಬರುತ್ತಿದ್ದ ಕಹಳೆ ಪತ್ರಿಕೆಯನ್ನು ತೆಗೆದುಕೊಂಡು ಮತ್ತೆ ಯಶವಂತಪುರ, ರಾಜಾಜೀನಗರ ಮತ್ತು ಮಲ್ಲೇಶ್ವರ ಭಾಗದ ಕೆಲವು ಮನೆಗಳಿಗೆ ತಲುಪಿಸಿ ಮನೆಗೆ ಹಿಂದಿರುಗುವಾಗ ಬೆಳಕು ಹರಿದಿರುತ್ತಿತ್ತು. ಕೆಲವೊಮ್ಮೆ ಇದೇ ಪ್ರಕ್ರಿಯೆಯ ಭಾಗವಾಗಿ ದೊಡ್ಡಬಳ್ಳಾಪುರಕ್ಕೂ ಹೋಗಿ ಪತ್ರಿಕೆಗಳನ್ನು ಪಡೆದುಕೊಂಡು ಗುಪ್ತವಾಗಿ ವಿತರಿಸಿರುವ ಉದಾಹರಣೆಯನ್ನೂ ಪ್ರತ್ಯಕ್ಶ್ಯವಾಗಿ ನೋಡಿದ್ದೇನೆ.

77ರಲ್ಲಿ ತುರ್ತುಪರಿಸ್ಥಿತಿ ಹಿಂದೆಗೆದುಕೊಂಡ ನಂತರ ದೇಶದ ಎಲ್ಲಾ ವಿರೋಧಪಕ್ಷಗಳೂ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಜನತಾ ಪರಿವಾರವಾಗಿ ಚುನಾವಣೆಯನ್ನು ಎದುರಿಸಿದಾಗ ನಮ್ಮ ಮನೆಯಲ್ಲಿ ಮತ್ತದೇ ಚಟುವಟಿಕೆಗಳು ಗರಿಗೆದರಿಕೊಂಡಿದ್ದವು. ಅಪ್ಪಾ ಮತ್ತು ಚಿಕ್ಕಪ್ಪ ಜನತಾಪಕ್ಷದ ಪರವಾಗಿ ಗೋಡೆಗಳ ಬರಹ, ಪೋಸ್ಟರ್ ಅಂಟಿಸುವುದು, ಬ್ಯಾನರ್ ಕಟ್ಟುವುದೆಲ್ಲವನ್ನು ನೋಡಿದ್ದ ನಮಗೆ ಜನತಾ ಎನ್ನುವ ಬ್ರಾಂಡ್ ಮನದಲ್ಲಿ ಅಚ್ಚೊತ್ತಿತ್ತು. ಮನೆಯ ಮುಂದೆಯೇ ಇದ್ದ ಸರ್ಕಾರೀ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯುತ್ತಿದ್ದಾಗ ಜನತಾಪಕ್ಷಕ್ಕೆ ಓಟು ಕಾಂಗ್ರೇಸಿಗೆ ಏಟು ಎಂದು ಕಿರುಚಿದ್ದ ನನಗೆ ಯಾರೋ ಕಾಂಗ್ರೇಸ್ ಪುಢಾರಿ ಒದೆ ಕೊಟ್ಟಿದ್ದೂ ನನೆಪಿದೆ.

janata

ಇಂದಿರಾಗಾಂಧಿಯವರ ಸರ್ವಾಧಿಕಾರೀ ಧೋರಣೆಯನ್ನು ಇಡೀ ದೇಶದ ಜನ ಖಂಡಿಸಿ ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಪ್ರಪಥಮ ಬಾರಿಗೆ ಕಾಂಗ್ರೇಸ್ಸೇತರ ಸರ್ಕಾರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ ಸಿಹಿ ಹಂಚಿ ಸಂಭ್ರಮಿಸಿದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದಾದ ನಂತರ ಎಲ್ಲೆಡೆಯಲ್ಲೂ ಜನತಾ ಬಜಾರ್, ಜನತಾ ಮಾರ್ಕೆಟ್, ಜನತಾ ಹೋಟೇಲ್ ಗಳು ಆರಂಭವಾದಾಗ, ಬೆಂಗಳೂರಿಗೆ ಅಪ್ಪನೊಂದಿಗೆ ಬಂದಾಗ ಬಲವಂತ ಮಾಡಿ ಮಲ್ಲೇಶ್ವರದ 8ನೇ ಅಡ್ಡತತೆಯ ಜನತಾ ಹೋಟೆಲ್ಲಿಗೆ ಹೋಗಿ ಮಸಾಲೇ ದೋಸೆ ಜಾಮೂನ್ ತಿಂದು ಅದು ನಮ್ಮದೇ ಹೋಟೆಲ್ ಏನೋ ಎನ್ನುವಂತೆ ಸಂಭ್ರಮಿಸಿದ್ದೂ ಮನಸ್ಸಿನಿಂದ ಮಾಸಿಲ್ಲ.

ತುರ್ತು ಪರಿಸ್ಥಿತಿ ಹೇರಿ ದೇಶವನ್ನು ಕರಾಳ ಪರಿಸ್ಥಿತಿಗೆ ದೂಡಿದ್ದು ಇಂದಿಗೆ ಸರಿಯಾಗಿ 46 ವರ್ಷಗಳ ಹಿಂದೆ ಎಂಬ ವಿಷಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ತಿಳಿದಾಗ ಅಂದು ನಡೆದಿದ್ದ ಎಲ್ಲಾ ವಿಷಯಗಳೂ ಸ್ಮೃತಿ ಪಟಲದ ಮುಂದೆ ಹಾದು ಹೋಯಿತು. ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ದೇಶದ ಹಿತ ದೃಷ್ಟಿಯಿಂದ ಈ ರೀತಿಯಾದ ನಿಸ್ವಾರ್ಥವಾದ ಚಟುವಟಿಕೆಗಳು ದೇಶಾದ್ಯಂತ ಅನೇಕ ಸಂಘದ ಸ್ವಯಂಸೇವಕರ ಮನೆಗಳಲ್ಲಿ ನಡೆದ ಪರಿಣಾಮವಾಗಿಯೇ ಇಂದು ನಮ್ಮ ದೇಶದ ರಾಷ್ಟ್ರಪತಿಗಳು ಉಪರಾಷ್ಟ್ರಪತಿಗಳು, ದೇಶದ ಪ್ರಧಾನ ಮಂತ್ರಿಗಳು, ವಿವಿಧ ಮಂತ್ರಿಗಳು ಮತ್ತು ಹತ್ತಾರು ರಾಜ್ಯಗಳ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿ ಸಂಘದ ಸ್ವಯಂಸೇವಕರನ್ನು ಕಾಣುವಂತಹ ಪರಿಸ್ಥಿತಿ ಮೂಡಿದೆ ಎಂದರೂ ಅತಿಶಯೋಕ್ತಿಯೇನಲ್ಲ.

ಏನಂತೀರೀ?

ನಿಮ್ಮವನೇ ಉಮಾಸುತ

ಹಾರುವ ಸಿಖ್, ಮಿಲ್ಕಾ ಸಿಂಗ್

ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಭಾರತದ ಪರ 31ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ 1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಇದೇ ಓಟಗಾರ, ಸಾಕಷ್ಟು ಅನುಭವವಿಲ್ಲದ ಕಾರಣ ಅಷ್ಟೆನೂ ಸಾಧನೆ ಮಾಡಲಾಗದಿದ್ದರೂ, ಆ ಕ್ರೀಡಾಕೂಟದಿಂದ ಕಲಿತು, ಮುಂದಿನ ನಾಲ್ಕು ವರ್ಷಗಳಷ್ಟರಲ್ಲಿ ವಿಶ್ವದ ನಾನಾ ಕಡೆಯಲ್ಲಿ ನಡೆದ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಎಲ್ಲರಿಗೂ ಬಹಳ ಪೈಪೋಟಿ ನೀಡಿ ಅನೇಕ ಪ್ರಶಸ್ತಿಗಳನ್ನು ಚಾಚಿದ್ದರಿಂದ ಆತನ ಮೇಲೆ ಬಹಳಷ್ಟು ಭರವಸೆಗಳೊಂದಿಗೆ ನಿರೀಕ್ಷೆಯೂ ಸಹಾ ಹೆಚ್ಚಾಗಿತ್ತು.

ರೋಮ್ ನ ಆ ಒಲಿಂಪಿಕ್ಸ್‌ ಕ್ರೀಡಾಕೂಟದ 400 ಮೀಟರ್‌ ಓಟದ ಆರಂಭಿಕ ಸುತ್ತಿನಲ್ಲಿ ಆತ ಮೀಟರ್‌ ಓಟವನ್ನು 47.6 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ, 2ನೇ ಸ್ಥಾನ ಗಳಿಸಿದ್ದ. ಮುಂದಿನ ಸುತ್ತಿನಲ್ಲಿ 46.5 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ತನ್ನದೇ ದಾಖಲೆಯನ್ನು ಉತ್ತಮಗೊಳಿಸಿ ಮತ್ತೆ ೨ನೇ ಸ್ಥಾನ ಗಳಿಸಿದ್ದ.

ಸೆಮಿಫೈನಲ್‌ ಸುತ್ತಿನಲ್ಲಿ ತಮ್ಮ ಓಟದ ಓಘವನ್ನು ಮತ್ತಷ್ಟೂ ತೀವ್ರಗೊಳಿಸಿ 45.9 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೂಅನೇ ಬಾರಿಗೆ 2ನೇ ಸ್ಥಾನಗಳಿಸುವ ಮೂಲಕ ನೆರೆದಿದ್ದ ಎಲ್ಲಾ ಕ್ರೀಡಾಸಕ್ತರ ಗಮನವನ್ನು ಸೆಳೆದಿದ್ದಲ್ಲದೇ, ಭಾರತಕ್ಕೆ ಮೊದಲ ಬಾರಿಗೆ ಓಲಂಪಿಕ್ಸ್ ನಲ್ಲಿ ವಯಕ್ತಿಯವಾಗಿ ಪದಕವನ್ನು ತರುವ ಭರವಸೆ ಮೂಡಿಸಿದ್ದ.

ಅಂತಿಮ ಸುತ್ತಾದ ಫೈನಲ್ಸಿನಲ್ಲಿ ಡಂ! ಎಂದು ಪಿಸ್ತೂಲಿನ ಸದ್ದಾಗುತ್ತಿದ್ದಂತೆಯೇ ಧುಮ್ಮಿಕ್ಕಿ ಭೋರ್ಗರೆಯುವ ಜಲಧಾರೆಯಂತೆ ಗಾಳಿಯಲ್ಲಿ ಹಾರಿಕೊಂಡು ಶರವೇಗದಲ್ಲಿ ಓಡುತ್ತಿದ್ದ ನಮ್ಮ ಭಾರತೀಯ ಆಟಗಾರ ಆರಂಭದ 250 ಮೀಟರ್ ದೂರದ ವರೆಗೂ ತನ್ನ ಪ್ರತಿಸ್ಪರ್ಥಿಗಳಿಗಿಂತಲೂ ಬಹಳವಾಗಿ ಮುಂಚೂಣಿಯಲ್ಲಿರುವ ಮೂಲಕ ಅಗ್ರಸ್ಥಾನದಲ್ಲಿದ್ದಾಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಈ ಬಾರಿ ಚಿನ್ನ ಭಾರತದ್ದೇ ಎಂಬ ಆಶಾಭಾವನೆ ಮೂಡಿತ್ತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಮುಂದೆ ನಡೆದದ್ದೇ ಇತಿಹಾಸ.

ಅದಾಗಲೇ ಬಹಳಷ್ಟು ಮುಂದಿದ್ದ ಆ ಆಟಗಾರ ಒಂದು ಕ್ಷಣ ಮೈಮರೆತು ತನ್ನ ವೇಗದ ಗತಿಯನ್ನು ತುಸು ನಿಧಾನ ಮಾಡಿ ಹಿಂದಿರುಗಿ ನೋಡಿದ್ದೇ ತಪ್ಪಾಗಿ ಹೋಯಿತು. ಕಣ್ಣಿನ ರೆಪ್ಪೆ ಮಿಟುಕಿಸಿ ತೆಗೆಯುವಷ್ಟರಲ್ಲಿ ಅವರ ಪ್ರತಿಸ್ಪರ್ಧಿಗಳು ಅವರನ್ನು ಹಿಂದಿಕ್ಕಿ ಓಡತೊಡಗಿದ್ದರು. ಪರಿಸ್ಥಿತಿ ಅರಿವಾಗಿದ್ದೇ ತಡಾ ನಮ್ಮ ಓಟಗಾರ ಶಕ್ತಿಮೀರಿ ಓಡಿದರೂ, ಇತರೆ ಪ್ರತಿಸ್ಪರ್ಧಿಗಳು ಆತನನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಧಾವಿಸಿಯಾಗಿತ್ತು

milkha1

ಅಂತಿಮವಾಗಿ ಒಟಿಸ್‌ ಡೇವಿಸ್‌ ಮತ್ತು ಕಾರ್ಲ್‌ ಕೌಫ್ಮನ್‌ 44.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ ಜೊತೆ ಜೊತೆಯಲ್ಲಿಯೇ ನಮ್ಮ ಓಟಗಾರನೂ 45.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಆ ಪಂದ್ಯಕ್ಕೆ ರೋಚಕತೆಯನ್ನು ತಂದಿಟ್ಟಿದ್ದರು. ಮೊದಲ ಎರಡು ಸ್ಥಾನಗಳು ನಿರ್ವಿವಾದವಾಗಿ ನಿಶ್ಚಿತಗೊಂಡರೂ, ಮೂರನೇ ಸ್ಥಾನವನ್ನು ನಿರ್ಧರಿಸಲು ತೀರ್ಪುಗಾರರು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು. ಹಲವಾರು ಬಾರೀ ವೀಡೀಯೋ ಗಳನ್ನು ನೋಡಿ ಅಂತಿಮವಾಗಿ ಮಾಲ್ಕಮ್‌ ಸ್ಪೆನ್ಸ್‌ಗಿಂತ ಕೇವಲ 0.1 ಸೆಕೆಂಡಷ್ಟು ತಡವಾಗಿ, ಅಂದರೆ, 45.6 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಕಾರಣ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ನಮ್ಮ ದೇಶದ ಓಟಗಾರ ಕೆಲ ಕ್ಷಣಗಳ ಕಾಲ ಮೈಮರೆತದ್ದಕ್ಕಾಗಿ ಸೂಜಿ ಮೊನಚಿನಷ್ಟು ಅಂತರದಲ್ಲಿ ಪದಕವನ್ನು ತಪ್ಪಿಸಿಕೊಂಡು,ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡರೂ ಒಲಂಪಿಕ್ಸ್ ನಲ್ಲಿ ಭಾರತದ ಪರ ಇತಿಹಾಸವನ್ನು ಸೃಷ್ಟಿಸಿಯಾಗಿತ್ತು. ಈ ರೀತಿಯ ವಿರೋಚಿತ ಸೋಲಿನ ಮೂಲಕವೇ ಜಗತ ಪ್ರಸಿದ್ಧರಾದವರೇ, ನಮ್ಮ ದೇಶ ಕಂಡ ಅತ್ಯಂತ ವೇಗದ ಓಟಗಾರ, ಹಾರುವ ಸಿಖ್ ಎಂದೇ ಖ್ಯಾತಿ ಹೊಂದಿದ್ದಂತಹ ಶ್ರಿ ಮಿಲ್ಕಾ ಸಿಂಗ್.

ಮುಂದೇ, 1984ರ ಲಾಸ್‌ ಏಂಜೆಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಗದ ರಾಣಿ ಪಿ. ಟಿ. ಉಷಾ ಮಿಲ್ಖಾ ಸಿಂಗ್‌ರಿಗಿಂತಲೂ ಉತ್ತಮ ಸಾಧನೆ ಮಾಡಿದರೂ, 400 ಮೀಟರ್‌ ಹರ್ಡ್‌ಲ್ಸ್‌ ಸ್ಪರ್ಧೆಯಲ್ಲಿ ಮಿಲ್ಕಾ ಸಿಂಗರಂತೆಯೇ, ಕೇವಲ ಸೆಕೆಂಡಿಗೆ 1/100ರ ಅಂತರದಲ್ಲಿ ಕಂಚಿನ ಪದಕ ಕಳೆದು ಕೊಂಡು ಮತ್ತೊಮ್ಮೆ ಅದೇ ರೀತಿಯ ಇತಿಹಾಸವನ್ನು ನಿರ್ಮಿಸಿದ್ದರು.

milka5

ಪ್ರಸ್ತುತ ಪಾಕಿಸ್ತಾನದಲ್ಲಿರುವ ಗೋವಿಂದಪುರದಲ್ಲಿ 20ನೇ ನವೆಂಬರ್ 1929ರಂದು ಮಿಲ್ಖಾಸಿಂಗ್ ಜನಿಸಿದರು. ಸ್ವಾತಂತ್ರ್ಯಾನಂತರ ವಿಭಜನೆಯ ಸಮಯದಲ್ಲಿ ಮುಲ್ತಾನಿನಿಂದ ಭಾರತಕ್ಕೆ ರೈಲಿನಲ್ಲಿ ಲಕ್ಷಾಂತರ ಹಿಂದೂಗಳು ಹಿಂದಿರುಗುತ್ತಿದ್ದ ಸಮಯದಲ್ಲಿ ನಡೆದ ಮಾರಣ ಹೋಮದಲ್ಲಿ ತನ್ನ ಕಣ್ಣಮುಂದೆಯೇ ತನ್ನ ಹೆತ್ತವರು ಮತ್ತು ಮೂವರು ಸಹೋದರರ ಹತ್ಯೆ ಮಿಲ್ಕಾರವರನ್ನು ಧೃತಿಗೆಡಿಸಿತ್ತು. ನಂತರ ಭಾರತದ ಮಿಲಿಟರಿ ಟ್ರಕ್‌ನಲ್ಲಿ ಫಿರೋಜ್‌ಪುರಕ್ಕೆ ಬಂದಿಳಿದಾಗ ಅವರಿನ್ನೂ ಸಣ್ಣ ವಯಸ್ಸಿನ ಹುಡುಗ, ಹಾಗಾಗಿ ಕೆಲ ದಿನಗಳ ಕಾಲ ಅದೇ ಸೈನಿಕರ ಬೂಟುಗಳನ್ನು ಪಾಲೀಶ್ ಮಾಡಿ ಹೊಟ್ಟೆ ಹೊರೆಯುತ್ತಾರೆ. ಎಷ್ಟೋ ದಿನಗಳು ತಿನ್ನಲು ಏನೂ ಸಿಗದಿದ್ದಾಗ, ಹೊಟ್ಟೆ ಪಾಡಿಗೆ ಸಣ್ಣ ಪುಟ್ಟ ಕಳ್ಳತನವನ್ನೂ ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಆ ಅನಾಥ ಮಿಲ್ಕಾ ಸಿಂಗ್ ಅವರಿಗಿರುತ್ತದೆ.

milka4

ನಂತರ ಸತತ ಎರಡು ವಿಫಲ ಸೇನಾ ನೇಮಕಾತಿಯ ಪ್ರಯತ್ನಗಳ ನಂತರ, ಅಂತಿಮವಾಗಿ ಮಿಲ್ಕಾ ಸಿಕಂದರಾಬಾದ್‌ನ ಇಎಂಇಗೆ ಸೇರಿಕೊಳ್ಳುತ್ತಾರೆ, ಅಲ್ಲಿ ಗೋಲ್ಕೊಂಡ ಕೋಟೆಯ ನೆರಳಿನಲ್ಲಿ ಅವರ ಅಭ್ಯಾಸ ಆರಂಭವಾಗುತ್ತದೆ. ಅಲ್ಲಿನ ಕ್ರೀಡಾಪಟುತ್ವವನ್ನು ಮೊದಲ ಬಾರಿಗೆ ಗುರುತಿಸಿದ ಸೇನೆಯ ತರಬೇತುದಾರ ಹವಾಲ್ದಾರ್ ಗುರುದೇವ್ ಸಿಂಗ್ 6 ಮೈಲಿ ಓಟಕ್ಕಾಗಿ ಆಯ್ಕೆ ಮಾಡಿದ 500 ಜನರಲ್ಲಿ ಮೊದಲ 10 ಮಂದಿಯ ಪಟ್ಟಿಯಲ್ಲಿ ಮಿಲ್ಕಾಸಿಂಗ್ ಅವರ ಹೆಸರು ಇರುತ್ತದೆ.

ನಂತರ ನೋಡ ನೋಡುತ್ತಿದ್ದಂತೆಯೇ ಇಂಟರ್-ಸರ್ವೀಸಸ್ ಮೀಟ್‌ಗಳಲ್ಲಿ ಸ್ಪರ್ಧೆಯಲ್ಲಿ ಪದಕಗಳ ಕೊಳ್ಳೆ ಹೊಡೆಯುತ್ತಾ, 1956ರ ಹೊತ್ತಿಗೆ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಭಾರತದ 400 ಮೀಟರ್ ಓಟಗಾರರಾಗಿ ಮೈದಾನಕ್ಕೆ ಇಳಿಯವಷ್ಟು ಎತ್ತರಕ್ಕೆ ಬೆಳೆದಿರುತ್ತಾರೆ. ನಾನು ಹುಟ್ಟಿರುವುದಕ್ಕೇ ಓಡುವುದಕ್ಕಾಗಿ ಎಂದು ಭಾವಿಸಿ, ಸಾಧ್ಯವಾದಷ್ಟೂ ವೇಗವಾಗಿ ಓಡಬೇಕೆಂಬ ಮಹತ್ವಾಕಾಂಕ್ಷೆಯಿಂದಾಗಿ, ಗೆಲ್ಲುವ ಗೀಳಿನಿಂದ ಒಂದೊಂದೇ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸತೊಡುಗುತ್ತಾರೆ.

ಒಬ್ಬ ಅಥ್ಲೀಟ್‌ ಆಗಿ ಮಿಲ್ಕಾ ಸಿಂಗ್‌ರ ಪಾಲಿಗೆ 1958ರಿಂದ 1962ರ ಅವಧಿಯು ಸುವರ್ಣ ಯುಗ ಎಂದೇ ಹೇಳಬಹುದಾಗಿದೆ,

milka3

1958ರಲ್ಲಿ ಬ್ರಿಟನ್ನಿನ ವೇಲ್ಸ್‌ ರಾಜಧಾನಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ 46.16 ಸೆಕೆಂಡ್‌ಗಳಲ್ಲಿ 400 ಮೀಟರ್‌ ಓಟ ಮುಗಿಸಿ ಸ್ವರ್ಣ ಪದಕ ಗೆಲ್ಲುವ ಮೂಲಕ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿ ಎಲ್ಲರ ಗಮನ ಸೆಳೆಯುತ್ತಾರೆ, ಅದೇ ಸಮಯದಲ್ಲಿಯೇ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ, ದೇಶ ಇಬ್ಭಾಗದ ಸಮಯದಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದಾಗಿ ಪಾಕೀಸ್ಥಾನಕ್ಕೆ ಹೋಗಲು ಮಿಲ್ಕಾ ಸಿಂಗ್ ನಿರಾಕರಿಸುತ್ತಾರೆ. ವಯಕ್ತಿಕ ಕಾರಣಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಂದ ಅವರು ಸ್ಪರ್ಧಿಸಲು ಹಿಂಜರಿದಲ್ಲಿ, ರಾಜಕೀಯ ಅಡ್ಡ ಪರಿಣಾಮಗಳ ಕುರಿತಂತೆ ಅಂದಿನ ಪ್ರಧಾನಿಗಳಾಗಿದ್ದ ನೆಹರುವರು ವಿವರಿಸಿದ ನಂತರ ಮಿಲ್ಕಾ ಸಿಂಗ್‌ ಆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಲ್ಲದೇ, ಅಲ್ಲಿ ತಮ್ಮ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ್ದಲ್ಲದೇ, ಪಾಕೀಸ್ಥಾನದ ಅಂದಿನ ಪ್ರಬಲ ಕ್ರೀಡಾಪಟು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದದ್ದನ್ನು ಕಂಡಪಾಕಿಸ್ತಾನದ ಸರ್ವಾಧಿಕಾರಿ ಆಡಳಿತಗಾರ ಜನರಲ್ ಅಯೂಬ್ ಖಾನ್ ಮಿಲ್ಕಾ ಸಿಂಗರಿಗೆ ವೇಗವಾಗಿ ಚಲಿಸುವ,ಹಾರುವ ಸಿಖ್ (ಫ್ಲೈಯಿಂಗ್ ಸಿಖ್) ಈ ಹೆಸರನ್ನು ನೀಡುವ ಮೂಲಕ ಗೌರವ ಸಲ್ಲಿಸುತ್ತಾರೆ.

1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಮಿಲ್ಕಾ ಸಿಂಗ್ ಚಿನ್ನದ ಪದಕ ಗೆದ್ದಿದ್ದರು. 1962ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಮತ್ತು 4X400 ರಿಲೇ ವಿಭಾಗದಲ್ಲಿಯೂ ಇಂಥದ್ದೇ ಸಾಧನೆಯನ್ನು ಮಾಡುವ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿಯೇ ಏಷ್ಯಾದ ಅತ್ಯುತ್ತಮ ಓಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.

milka2

ಇದರ ಮಧ್ಯೆ ಅಂದಿನ ಭಾರತದ ಮಹಿಳಾ ವಾಲಿಬಾಲ್ ತಂಡದ ನಾಯಕಿಯಾಗಿದ್ದ ನಿರ್ಮಲ್ ಕೌರ್ ಅವರನ್ನು ವಿವಾಹವಾಗಿ ಅವರಿಬ್ಬರ ಸುಂದರ ದಾಂಪತ್ಯದ ಫಲವಾಗಿ, ಮೋನಾ ಸಿಂಗ್, ಅಲೀಜಾ ಗ್ರೋವರ್ ಮತ್ತು ಸೋನಿಯಾ ಸಾನ್‌ವಲ್ಕಾ ಎಂಬ ಮೂವರು ಪುತ್ರಿಯರೊಂದಿಗೆ ಜೀವ್ ಮಿಲ್ಖಾ ಸಿಂಗ್ ಹೆಸರಿನ ಮಗ ಜನಿಸುತ್ತಾನೆ. ತಂದೆಯಂತೆಯೇ ಮಗನು ಸಹಾ ಕ್ರೀಡಾಳುವಾಗಿದ್ದು ಭಾರತದ ಪರ ಖ್ಯಾತವೃತ್ತಿಪರ ಗಾಲ್ಫ್ ಆಟಗಾರರಾಗಿದ್ದಾರೆ.

ಮಿಲ್ಕಾ ಸಿಂಗ್ ಅವರ ಕ್ರೀಡಾಸಾಧನೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿದೆಯಲ್ಲದೇ, ಶ್ರೀಯುತರಿಗೆ 1959 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆವರ ಪುತ್ರ ಜೀವ್ ಸಹಾ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷವಾಗಿದೆ. ಮಿಲ್ಕಾ ಸಿಂಗ್ ಅವರ ಜೀವನ ಆಧರಿಸಿದ ಭಾಗ್ ಮಿಲ್ಕಾ ಭಾಗ್ ಎಂಬ ಚಲನಚಿತ್ರ 2013ರಲ್ಲಿ ತೆರೆಕಂಡು ಅವರ ಸಾಧನೆಗಳು ಇಂದಿನ ಅನೇಕ ಯುವ ಜನರಿಗೆ ತಿಳಿಯುವಂತಾಗಿ ಪ್ರೇರಣೆಯಾಗಿದೆ.

ವಯಸ್ಸು 90ನ್ನು ದಾಟಿದ್ದರೂ ಉತ್ತಮರೀತಿಯ ದೈಹಿಕ ಪರಿಶ್ರಮದಿಂದಾಗಿ ಸದಾಕಾಲವೂ ಬಹಳ ಚಟುವಟಿಕೆಯಿಂದಾಗಿ ಕೂಡಿದವರಾಗಿ ಕೇವಲ 60ರ ವಯಸ್ಸಿನಂತೆ ಕಾಣುತ್ತಿದ್ದರು. ದೇಶದಲ್ಲಿ ಯಾರೇ ಎಲ್ಲಿಗೇ ಯಾವುದೇ ಸಮಾರಂಭಕ್ಕೆ ಕರೆದಲ್ಲಿ ಯಾವುದೇ ಹಮ್ಮು ಬಿಮ್ಮಿಲ್ಲದೇ ಭಾಗವಹಿಸಿ ಯುವಕರಿಗೆ ಶಿಸ್ತು ಸಂಯಮ, ದೇಶ ಭಕ್ತಿ, ಕ್ರೀಡಾಸಕ್ತಿಗಳ ಬಗ್ಗೆ ಹುರಿದುಂಬಿಸುತ್ತಿದ್ದಂತಹ ಬಹಳ ಸರಳ ಸಜ್ಜನ ವ್ಯಕ್ತಿಯಾಗಿದ್ದರು.

ಕೆಲವು ವಾರಗಳ ಹಿಂದೆ ಪತಿ ಪತ್ನಿ ಇಬ್ಬರೂ ಸಹಾ ಕೋವಿಡ್ ಮಹಾಮಾರಿಗೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದುರಾದೃಷ್ಟವಶಾತ್ ವಯಸ್ಸಾಗಿದ್ದ ಕಾರಣ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದ ಆವರ ಪತ್ನಿ ನಿರ್ಮಲ್ ಕೌರ್ ಕಳೆದ ವಾರ ಚಂಡೀಗಡದಲ್ಲಿ ನಿಧನಹೊಂದಿದರೆ, ಅವರನ್ನೇ ಹಿಂಬಾಲಿಸಿದ ಮಿಲ್ಕಾ ಸಿಂಗ್ ಅವರು ಸಹಾ ಶುಕ್ರವಾರ ಜೂನ್ 18ರ ತಡರಾತ್ರಿ ಕೊವಿಡ್ ಸೋಂಕಿನಿಂದಾಗಿ ನಿಧನರಾಗುವ ಮೂಲಕ ಈ ದೇಶ ಕಂಡ ಅತ್ಯುತ್ತಮ ಚಾಂಪಿಯನ್ ಒಬ್ಬರನ್ನು ಕಳೆದುಕೊಂಡಿದೆ ಎಂದರೂ ತಪ್ಪಾಗಲಾರದು.

ದೇಶವಿಭಜನೆಯಲ್ಲಿ ತನ್ನ ಕುಟುಂಬ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಯುವಕನೊಬ್ಬ ತನ್ನ ಅಚಲವಾದ ನಂಬಿಕೆ, ನಿರಂತರ ಸಾಧನೆಗಳಿಂದ ಎಲ್ಲವನ್ನೂ ಮೆಟ್ಟೆ ನಿಂತು ಹೇಗೆ ಅಂತರಾಷ್ಟ್ರೀಯ ಮಟ್ಟದವರೆಗೂ ಏರಬಹುದು ಎಂಬುದನ್ನು ಸಾಧಿಸಿ ತೋರಿಸಿದ ಹಾರುವ ಸಿಖ್ ಮಿಲ್ಕಾ ಸಿಂಗ್ ಅವರಿಗೆ ನಮ್ಮೆಲ್ಲರ ಪರವಾಗಿ ತುಂಬು ಹೃದಯದ ಶ್ರದ್ಧಾಂಜಲಿಯನ್ನು ಸಲ್ಲಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಲಕ್ಷದ್ವೀಪ

lak5

ಹೆಸರೇ ಸೂಚಿಸುವಂತೆ ಅದೊಂದು ದ್ವೀಪಗಳ ಸಮೂಹ. ಭಾರತದ ಅರಬ್ಬೀ ಸಮುದ್ರದಲ್ಲಿ ಸುಮಾರು 36 ಹವಳದ ಬಂಡೆಗಳ ಉಷ್ಣವಲಯದ ದ್ವೀಪಸಮೂಹವೇ ಲಕ್ಷದ್ವೀಪ. ದೇಶದ ಅತ್ಯಂತ ಪ್ರಾಚೀನವಾದ, ನೈಸರ್ಗಿಕವಾದ ಸುಂದರವಾದ ಮತ್ತು ಆಷ್ಟೇ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ, ಕನ್ನಡಿಯಂತಹ ನೀರಿನಲ್ಲಿ ಕಣ್ಣು ಕೋರೈಸುವ ಹವಳದ ಬಂಡೆಗಳು, ಬೆಳ್ಳಿಯ ಬಣ್ಣದಲ್ಲಿ ಪ್ರಜ್ವಲಿಸುವ ಕರಾವಳಿ ತೀರಗಳು ಈ ದ್ವೀಪ ಸಮೂಹಗಳಲ್ಲಿ ಇದ್ದು, ಭಾರತದಲ್ಲೇ ಅತ್ಯಂತ ಸ್ವಚ್ಚ ಕರಾವಳಿ ತೀರ ಎಂದೇ ಖ್ಯಾತಿ ಪಡೆದಿರುವ ಕಾರಣ, ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ತಮ್ಮ ರಜಾದಿನಗಳನ್ನು ಇಲ್ಲಿ ಕಳೆಯಲು ಬಯಸುತ್ತಾರೆ.

lak8

ವಿಮಾನ ಮತ್ತು ಸಮುದ್ರ ಮಾರ್ಗದ ಮೂಲಕ ಮಾತ್ರವೇ ಸಂಪರ್ಕ ಹೊಂದಿರುವ ಈ ದ್ವೀಪಕ್ಕೆ ತಲುಪಲು ಕೇರಳದ ಕೊಚ್ಚಿನ್ (ಸಮುದ್ರ ಮಾರ್ಗ 496 Kms) ಮತ್ತು ಕರ್ನಾಟಕದ ಮಂಗಳೂರು (ಸಮುದ್ರ ಮಾರ್ಗ 365 km) ಅತ್ಯಂತ ಪ್ರಮುಖವಾದ ಸ್ಥಳಗಳಾಗಿವೆ. ಈ ದ್ವೀಪ ಸಮೂಹದಲ್ಲಿ ಸುಮಾರು 97% ದಟ್ಟವಾದ ಕಾಡಿನಿಂದ ಆವರಿಸಿದ್ದು ಬಹುತೇಕ ಭಾಗಗಳು ರಕ್ಷಿತ ವಲಯಕ್ಕೆ ಸೇರಿದ್ದು ಕೇವಲ ಕೆಲವೇ ಭೂಭಾಗಗಳಲ್ಲಿ ಜನ ಸಾಂದ್ರತೆ ಇದೆ. ಇಲ್ಲಿನ 95% ರಷ್ಟು ನಿವಾಸಿಗಳು ಸಂರಕ್ಷಿಸಲಾದ ಬುಡಕಟ್ಟು ಪಂಗಡಗಳಿಗೆ ಸೇರಿದ್ದು, ಕೇವಲ 11 ದ್ವೀಪಗಳಲ್ಲಿ ಮಾತ್ರವೇ ಜನವಸತಿ ಇದೆ.

ಆನಾದಿ ಕಾಲದಿಂದಲೂ ಭಾರತ ಭೂಭಾಗವಾಗಿಯೇ ಇರುವ ಈ ದ್ವೀಪ ಸಮೂಹದಲ್ಲಿ ಸದ್ಯದ ಪ್ರಕಾರ ಸುಮಾರು 70,000 ಜನರು ವಾಸಿಸುತ್ತಿದ್ದು, ಅವರಲ್ಲಿ 2.7% ಹಿಂದೂಗಳು, 0.5%,ಕ್ರಿಶ್ಚಿಯನ್ನರು 0.01% ಸಿಖ್ಖರು, 0.02% ಬೌದ್ಧರು, 0.02% ಜೈನರು ಇದ್ದರೆ, 96.5% ರಷ್ಟು ಮುಸ್ಲಿಮರು ಇಲ್ಲಿದ್ದಾರೆ. ಈ ದ್ವೀಪಗಳಲ್ಲಿ ಮಲಯಾಳಂ, ಜೆಸ್ಸೆರಿ (ದ್ವಿಪ್ ಭಾಷೆ) ಮತ್ತು ಮಹಲ್ ಭಾಷೆಗಳನ್ನು ಮಾತನಾಡುತ್ತಾರೆ. ಇನ್ನು ಉತ್ತರ ದ್ವೀಪಗಳ ಜನರು ಅರ್ವಿಯನ್ನು ಹೋಲುವ ತಮಿಳು ಮತ್ತು ಅರೇಬಿಕ್ ಪ್ರಭಾವದಿಂದ ಕೂಡಿದ ಮಲಯಾಳಂನ ಉಪಭಾಷೆಯನ್ನು ಮಾತನಾಡುತ್ತಾರೆ.

lak4

ಸುಮಾರು 5ನೇ ಶತಮಾನದವರೆಗೂ ಹಿಂದೂ ಬುಡಕಟ್ಟಿಗೆ ಸೇರಿದವರೇ ಇದ್ದಿದ್ದು ನಂತರ 5-6ನೇ ಶತಮಾನದಲ್ಲಿ ಅಲ್ಲಿಗೆ ಬೌದ್ಧರು ಆಗಮಿಸಿ ನಿಧಾನವಾಗಿ ನೆಲೆಗೊಳ್ಳುತ್ತಾರೆ. 7ನೇ ಶತಮಾನದ ಹೊತ್ತಿಗೆ ಇಸ್ಲಾಂ ಧರ್ಮ ಅಲ್ಲಿಗೆ ಪ್ರವೇಶಿಸಿದ ಬಳಿಕ ನಿಧಾನವಾಗಿ ಆ ದ್ವೀಪಗಳ ಜನರು ವಿವಿಧ ಕಾರಣಗಳಿಂದಾಗಿ ಮುಸಲ್ಮಾನರಾಗಿ ಮತಾಂತರ ಗೊಂಡು ಮುಸ್ಲಿಂ ಬಾಹುಳ್ಯ ದ್ವೀಪವಾಗುತ್ತದೆ. 1468 ರಲ್ಲಿ ಈ ದ್ವೀಪಕ್ಕೆ ಪ್ರವೇಶಿಸಿದ ಪೋರ್ಚುಗೀಸರು ಅಲ್ಲಿಯ ಜನರಿಗೆ ತೆಂಗಿನ ನಾರಿನ ಉತ್ಪಾದನೆ ಕಲಿಸುವ ಮೂಲಕ ಸ್ವಲ್ಪ ಮಟ್ಟಿಗಿನ ಆಧುನಿಕ ಜಗತ್ತನ್ನು ಪರಿಚಯಿಸಿದರೆ ನಂತರ ಬ್ರಿಟಿಷರೂ ಈ ದ್ವೀಪಗಳನ್ನು ಬಹಳಷ್ಟು ಕಾಲ ಆಳ್ವಿಕೆ ನಡೆಸುತ್ತಾರೆ. ಅಗಟ್ಟಿ, ಅಮಿನಿ, ಅನ್ಡ್ರೊಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ಪೇನಿ, ಕವರತ್ತಿ, ಕಿಲ್ತಾನ್, ಮಿನಿಕಾಯ್ ಮುಂತಾದ ದ್ವೀಪಗಳು ಹೆಚ್ಚಿನ ರೀತಿಯಾಗಿ ಅಭಿವೃದ್ಧಿಯನ್ನು ಕಂಡಿದ್ದು ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಎನಿಸಿದೆ ಎಂದರೂ ಅತಿಶಯೋಕ್ತಿ ಏನಲ್ಲ.

lak3

ಇಂತಹ ದ್ವೀಪಕ್ಕೆ ಭಾರತ ಸರ್ಕಾರ ನವಂಬರ್ 2, 1956ರಲ್ಲಿ ಪ್ರತ್ಯೇಕವಾದ ಅಸ್ತಿತ್ವವನ್ನು ನೀಡಿದ್ದಲ್ಲದೇ, ಮೈಸೂರು ರಾಜ್ಯದಿಂದ ಕರ್ನಾಟಕ ಎಂಬ ಹೆಸರನ್ನು ಬದಲಿಸಿದ ನವಂಬರ್ 1,1973 ರಂದೇ ಈ ದ್ವೀಪಕ್ಕೆ ಲಕ್ಷದ್ವೀಪ ಎಂದು ಅಧಿಕೃತವಾಗಿ ಹೆಸರಿಸಲಾಯಿತಲ್ಲದೇ ಇದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿತು.

ಸುಮಾರು 70 ಸಾವಿರದ ಆಸುಪಾಸಿನಲ್ಲಿ ಇರುವ ಈ ದ್ವೀಪ ಸಮೂಹದ ಜನರನ್ನು ಪ್ರತಿನಿಧಿಸಲು ಕೇವಲ ಓರ್ವ ಸಂಸದರಿದ್ದು ಉಳಿದ ಆಡಳಿತವೆಲ್ಲವೂ ಪಂಚಾಯತ್ ವ್ಯವಸ್ಥೆಯ ಮುಖಾಂತರವೇ ನಡೆಯುತ್ತದೆ. ಜನರು ತಮ್ಮ ಮತ ಚಲಾಯಿಸಿ ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಸ್ಥಳೀಯ ಆಡಳಿತ ನಡೆಸಲಾಗುತ್ತದೆ ಉಳಿದದ್ದೆಲ್ಲವೂ, ಐಪಿಎಸ್ ಅಥವಾ ಐಎಎಸ್ ಮಟ್ಟದ ಅಧಿಕಾರಿಗಳನ್ನೇ ಇಲ್ಲಿನ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡುವುದು ಅಂದಿನಿಂದಲೂ ನಡೆದುಕೊಂಡ ಬಂದಿರುವ ಸಂಪ್ರದಾಯವಾಗಿದೆ. ಇಲ್ಲಿನ ಜನರು ತಮ್ಮೆಲ್ಲಾ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ವಿದ್ಯಾಭ್ಯಾಸಗಳಿಗೆ ಕೇರಳ ಅಥವಾ ಕರ್ನಾಟಕದ ಕರಾವಳಿ ಪ್ರದೇಶವನ್ನೇ ಆಶ್ರಯಿಸುತ್ತಾರೆ. 90ರ ದಶಕದಲ್ಲಿ ಇಲ್ಲಿನ ಸಾಂಸದರಾಗಿದ್ದ ಶ್ರೀ ಪಿ ಎಂ ಸಯೀದ್ ಅವರು ತಮ್ಮ ಉನ್ನತ ವ್ಯಾಸಂಗವನ್ನು ಮಂಗಳೂರಿನಲ್ಲಿ ಮಾಡಿದ್ದ ಕಾರಣ ಅವರಿಗೆ ಕನ್ನಡ ಭಾಷೆಯು ಸುಲಲಿತವಾಗಿ ಬರುತ್ತಿದ್ದದ್ದಲ್ಲದೇ ಲೋಕಸಭೆಯಲ್ಲೂ ಅವರೊಮ್ಮೆ ಅಪರೂಪಕ್ಕೆ ಕನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು.

ಸಾಮಾನ್ಯವಾಗಿ ಇಲ್ಲಿನ ಆಡಳಿತ ಅಧಿಕಾರಿಗಳಾಗಿ ಬರುತ್ತಿದ್ದ ಐಪಿಎಸ್ ಅಥವಾ ಐಎಎಸ್ ಮಟ್ಟದ ಅಧಿಕಾರಿಗಳು ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರದೇ ರೂಡಿಯಲ್ಲಿದ್ದ ಪದ್ದತಿಗಳನ್ನೇ ಮುಂದುವರೆಸಿಕೊಂಡು ಹೋಗುತ್ತಾ, ಇಲ್ಲಿನ ಸುಂದರ ಪ್ರಕೃತಿ ತಾಣಗಳಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಾ ಇಲ್ಲಿನವರಿಗೆ ಅಚ್ಚು ಮೆಚ್ಚಾಗಿಯೇ ಇರುತ್ತಿದ್ದರು. ಒಂದು ವರ್ಷದ ಹಿಂದೆ ಲಕ್ಷದ್ವೀಪದಲ್ಲಿ ಭಾರತದ ಇಂಟಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿ ಹೆಸರು ಮಾಡಿದ್ದ ದಿನೇಶ್ವರ್ ಶರ್ಮಾ ಅವರು ಆಡಳಿತ ಅಧಿಕಾರಿಯಾಗಿ ಇದೇ ರೀತಿಯಲ್ಲೇ ಜನ ಮೆಚ್ಚುವಂತೆ ಕೆಲಸ ನಿರ್ವಹಿಸಿ ನಿವೃತ್ತಿಯಾದ ನಂತರ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ಮೊತ್ತ ಮೊದಲ ಬಾರಿಗೆ ರಾಜಕೀಯ ಹಿನ್ನಲೆಯ ಎಲ್‌ ಜೆ ಪ್ರಫುಲ್‌ ಪಟೇಲ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದಾಗಲೇ ಎಲ್ಲರ ಹುಬ್ಬೇರಿತ್ತು. ಪ್ರಫುಲ್ ಪಟೇಲ್ ಈ ಹಿಂದೆ ಗುಜರಾತಿನಲ್ಲಿ ನರೇಂದ್ರ ಮೋದಿಯವರ ಮಂತ್ರಿಮಂಡಲದಲ್ಲಿ ಅಮಿತ್ ಶಾ ಅವರು ಕೊಲೆ ಆಪಾದನೆ ಮೇರಿಗೆ ಜೈಲು ಸೇರಿದ್ದಾಗ ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.

ಆರಂಭದ ಕೆಲ ತಿಂಗಳುಗಳ ಕಾಲ ಇಲ್ಲಿನ ಪದ್ದತಿಗಳನ್ನು ಅಧ್ಯಯನ ಮಾಡಿದ ಪ್ರಫುಲ್ ಪಟೇಲ್ ಹವಾಯಿ ದ್ಚೀಪ ಮತ್ತು ಮಾಲ್ಡೀವ್ಸ್ ಗಿಂತಲೂ ಒಂದು ಕೈ ಹೆಚ್ಚೇ ಇರುವ ಈ ಸುಂದರ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಸಲುವಾಗಿ ಈಗಾಗಲೇ ದೇಶದಲ್ಲಿದ್ದ ಕಾನೂನುಗಳನ್ನೇ ಒಟ್ಟುಗೂಡಿಸಿ ಲಕ್ಷದ್ವೀಪ ಡೆವಲಪ್‌ಮೆಂಟ್‌ ಅಥಾರಿಟಿಯ ರೆಗ್ಯುಲೇಶನ್‌ ಜಾರಿಗೆ ತರಲು ಯೋಚಿಸಿದ್ದೇ ತಡಾ ಇಡೀ ಲಕ್ಷದ್ವೀಪದ ಜನ ಬೆಚ್ಚಿ ಬೆರಗಾದರು. ಅಭಿವೃದ್ಧಿಯ ಹೆಸರಿನಲ್ಲಿ ಕೇವಲ 36 ಕಿವೀ ವಿಸ್ತೀರ್ಣವಿರುವ ಈ ಪ್ರದೇಶದಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸುವ ಸಲುವಾಗಿ ಬಹುತೇಕ ಕಾಡುಗಳನ್ನು ಕಡಿಯುವ ಮೂಲಕ ಇಲ್ಲಿನ ದ್ವೀಪವಾಸಿಗಳ ಜನ ಜೀವನವನ್ನು ಮತ್ತು ಸಾಂಪ್ರದಾಯಿಕ ಕಸುಬುಗಳನ್ನು ನಾಶ ಮಾಡಲಿದೆ ಎಂದು ಜನರು ಕಳವಳಗೊಂಡಿದ್ದಾರೆ.

 • ಇದಷ್ಟೇ ಅಲ್ಲದೇ ಆಡಳಿತಾತ್ಮಕವಾಗಿಯೂ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರುವುದು ಅಲ್ಲಿನ ಜನರಿಗೆ ಮುಜುಗರವನ್ನುಂಟು ಮಾಡಿದೆ. ಕೇರಳ ರಾಜ್ಯದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಈ ಭೂ ಭಾಗದಲ್ಲಿ ಇಸ್ಲಾಂ ಮಲಯಾಳಿಗಳೇ ಹೆಚ್ಚಾಗಿದ್ದು ಅವರ ಪ್ರಮುಖ ಆಹಾರವಾದ ದನದ ಮಾಂಸ, ತರಕಾರಿ, ಸೊಪ್ಪುಗಳಲ್ಲವನ್ನೂ ಕೇರಳ ಇಲ್ಲವೇ ಕರ್ನಾಟಕದ ಕರಾವಳಿ ಪ್ರದೇಶದಿಂದ ಆಮದು ಮಾಡಿಕೊಳ್ಳಬೇಕು. ಹೀಗೆ ಆಮದು ಮಾಡಿಕೊಂಡಾಗ ಆ ಮಾಂಸ ತಾಜಾವಾಗಿರದ ಕಾರಣ, ಇಲ್ಲಿಯ ಶಾಲಾ ಮಕ್ಕಳ ಊಟದಲ್ಲಿ ಕೋಳಿ ಮತ್ತು ದನದ ಮಾಂಸದ ಬದಲಾಗಿ ಅಲ್ಲಿಯೇ ತಾಜಾವಾಗಿಯೇ ಸಿಗುವ ಮೀನು ಮತ್ತು ಮೊಟ್ಟೆಗಳನ್ನು ಕೊಡುವ ನಿರ್ಧಾರ ಮಾಡಿದ್ದಲ್ಲದೇ, Animal preservation regulation ಎಂಬ ಈಗಾಗಲೇ ಇದ್ದ ಕಾನೂನನ್ನು ಜಾರಿಗೆ ತರುವ ಮೂಲಕ ಮಾಂಸಕ್ಕಾಗಿ ದನವನ್ನು ಕಡಿಯುವುದನ್ನು ತಡೆಗಟ್ಟಲು ಮುಂದಾಗಿದ್ದೇ ತಡಾ, ಬಹು ಸಂಖ್ಯಾತ ಮುಸ್ಲಿಮರಿಗೆ ದನದ ಮಾಂಸವನ್ನು ತಿನ್ನದಂತೆ ಮಾಡುವ ಮೂಲಕ ಬಲವಂತವಾಗಿ ಹಿಂದುತ್ವವನ್ನು ಹೇರಲಾಗುತ್ತಿದೆ ಎಂಬ ಹುಯಿಲನ್ನು ಎಬ್ಬಿಸಿದರು.
 • ಇನ್ನು ಈಗಾಗಲೇ ಭಾರತದ ಬಹುತೇಕ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇರುವಂತೆಯೇ ಇಲ್ಲಿನ ಸ್ಥಳಿಯ ಚುನಾವಣೆಯಲ್ಲಿಯೂ ಸ್ಪರ್ಧಿಸುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮುಂದಾದ ಪರಿಣಾಮ, ಈಗಾಗಲೇ ಮೂರ್ನಾಲ್ಕು ಹೆಂಡತಿಯರಿಂದ ಹತ್ತಾರು ಮಕ್ಕಳನ್ನು ಹೊಂದಿದ್ದಂತಹ ಸ್ಥಳೀಯ ಮುಖಂಡರ ಬುಡಕ್ಕೇ ಬೆಂಕಿ ಬಿದ್ದಂತಾಗಿದೆ.
 • ಸಮುದ್ರ ಮಥ್ಯದಲ್ಲಿರುವ ಮತ್ತು ಭಾರತದ ಅನೇಕ ನೌಕಾ ಕೇಂದ್ರಗಳ ಶಾಖೆಗಳು ಅಲ್ಲಿರುವ ಕಾರಣ ದೇಶದ ಹಿತದೃಷ್ಟಿಯಿಂದಾಗಿ ಸಮಾಜ ವಿರೋಧಿ ಚಟುವಟಿಕೆ ತಡೆ (ಪಿಎಎಸ್‌ಎ Prevention of Anti-Social Activities Act -PASA) ಕಾಯ್ದೆ ಜಾರಿಗೆ ಮಾಡಿದಾಗ, ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಅಪರಾಧ ಸಂಖ್ಯೆ ಕಡಿಮೆ ಇರುವಾಗ ಇಂತಹ ಕಾನೂನು ಏಕೆ? ಎಂಬುದು ಇಲ್ಲಿಯ ಜನರ ಆಕ್ರೋಶವಾಗಿದೆ.
 • ಇನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಕಾನೂನಾತ್ಮಕವಾಗಿಯೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧವಾಗಿಯೂ ಅಲ್ಲಿಯ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ಗಳು
  ವರಾತ ತೆಗೆಯುತ್ತಿದ್ದಾರೆ.
 • ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅದುವರೆವಿಗೂ ಲಕ್ಷದ್ವೀಪದಲ್ಲಿ ನಿಷೇಧವಿದ್ದ ಮದ್ಯದ ಮಾರಾಟವನ್ನು ತೆರವುಗೊಳಿಸಿದ್ದೂ ಸಹಾ ಅಲ್ಲಿನ ಮುಸ್ಲಿಂ ಧಾರ್ಮಿಕ ಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ.
 • ಅದುವರೆವಿಗೂ ಪ್ರವಾಸೋದ್ಯಮಕ್ಕೆ ಕೇರಳದ ಕೊಚ್ಚಿನ್ ನಿಂದಲೇ ಹಡುಗು ಮತ್ತು ವಿಮಾನಗಳ ಹಾರಾಟವಿದ್ದುದ್ದರ ಜೊತೆಗೆ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ದೃಷ್ಟಿ ಕೋನದಿಂದ ಮಂಗಳೂರಿನಿಂದಲೂ ಸಂಪರ್ಕವನ್ನು ಏರ್ಪಡಿಸಲು ಮುಂದಾಗಿದ್ದು ಕೇರಳಿಗರ ಕೋಪವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

lak2

ಈ ಎಲ್ಲಾ ಕಾರಣಗಳಿಂದಾಗಿಯೇ ಈ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಗುಲ್ಲೆಬ್ಬಿಸಿದ್ದ ರೀತಿಯಲ್ಲಿಯೇ ಅನೇಕ ನಿವೃತ್ತ ಅಧಿಕಾರಿಗಳು (ಎಡಪಂತೀಯರು ಎಂದು ವಿಶೇಷವಾಗಿ ಹೇಳಬೇಕಿಲ್ಲವೇನೋ) ಸಂಸದರು ಮತ್ತು ಚಲನಚಿತ್ರ ಗಣ್ಯರೆಲ್ಲರೂ ಒಟ್ಟಾಗಿ Save Lakshadweep ಎಂಬ ಆಂದೋಲನವನ್ನು ಶುರು ಮಾಡಿರುವುದಲ್ಲದೇ ಈ ಉದ್ದೇಶಿತ ಯೋಜನೆಯಿಂದ ಲಕ್ಷದ್ವೀಪದ ಮೂಲ ಸ್ವರೂಪವೇ ಬದಲಾಗಿ, ಅಲ್ಲಿನ ಬುಡಕಟ್ಟು ಮತ್ತು ಅವರ ನೆಲೆ ಅರಣ್ಯ ನಾಶವಾಗುವುದಲ್ಲದೇ, ಅಲ್ಲಿನ ಜನಜೀವನವನ್ನು ಸಂಪೂರ್ಣ ನಾಶಮಾಡಲಿದೆ. ಹಾಗಾಗಿ ಈ ಉದ್ಧೇಶಿತ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಎಂದಿನಂತೆ ಲೂಟಿಯನ್ಸ್ ಮಾಧ್ಯಮದವರ ಕುಮ್ಮಕ್ಕೂ ಇರುವ ಕಾರಣ ಕಳೆದ ಎರಡು ವಾರಗಳಿಂದ ಇದೇ ವಿಷಯ ಟ್ವಿಟ್ಟರಿನಲ್ಲಿಯೂ ಟ್ರೆಂಡಿಗ್ಗಿನಲ್ಲಿದೆ.

ಉರಿಯುವುದಕ್ಕೆ ತುಪ್ಪಾ ಸುರಿಯುವಂತೆ ಅಲ್ಲಿನ ಸ್ಥಳೀಯರನ್ನು ಎತ್ತಿಕಟ್ಟಿರುವ ಕೆಲವು ಬುದ್ದಿಜೀವಿಗಳು ಇಂತಹ ಮಹಾಮಾರಿಯ ಸಂಧರ್ಭದಲ್ಲಿ ಸರಣಿ ಉಪವಾಸ ಸತ್ಯಾಗ್ರಹವನ್ನು ಅರಂಭಿಸಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ದಂಗೆ ಏಳುವಂತೆ ಪ್ರಚೋದಿಸುತ್ತಿರುವುದಲ್ಲದೇ, ಪ್ರತಿಭಟನೆಯನ್ನು ಹೇಗಾದರೂ ಹಿಂಸಾರೂಪಕ್ಕೆ ಪರಿವರ್ತಿಸಿ ಇದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಭಾರತಕ್ಕೆ ಕೆಟ್ಟ ಹೆಸರನ್ನು ತರಲು ಕಟಿಬದ್ಧವಾಗಿ ನಿಂತಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಅಪ್ಪಾ ಹಾಕಿದ ಆಲದ ಮರ ಎಂದು ಕಳೆದ ಎಪ್ಪತ್ತು ವರ್ಷಗಳಿಂದಲೂ ಸರಿಯಾದ ರೀತಿಯ ಅಭಿವೃದ್ಧಿ ಕಾಣದ ಈ ದ್ವೀಪಗಳಿಗೆ ವಿಶ್ವಮಾನ್ಯತೆಯನ್ನು ತಂದು ಕೊಡಲು ಮುಂದಾಗಿರುವ ಈ ಯೋಜನೆ ದಿನದಿಂದ ದಿನಕ್ಕೆ ಕೋಮುವಾದದ ಬಣ್ಣಕ್ಕೆ ತಿರುಗುತ್ತಾ ಹೋಗಿರುವುದು ನಿಜಕ್ಕೂ ವಿಷಾಧನೀಯವೇ ಸರಿ. ಬದಲಾವಣೆ ಎನ್ನುವುದು ಜಗದ ನಿಯಮ. ನೀರು ಹರಿಯುತ್ತಿದ್ದಾಗಲೇ ಶುದ್ಧವಾಗಿರುವುದು. ನಿಂತ ನೀರೇ ಕೊಳೆತು ನಾರುವುದು ಎಂಬ ನಿತ್ಯ ಸತ್ಯ ಕೆಲವರ ಸೈದ್ಧಾಂತಿಕ ವಿರೋಧಾಭಾಸಗಳ ನಡುವೆ ಕಾಣೆಯಾಗಿ ಹೋಗುತ್ತಿರುವುದು ವಿಷಾಧನೀಯವೇ ಸರಿ.

ಧರ್ಮಾಧಾರಿತವಾಗಿ ದೇಶದಲ್ಲಿ ಜನಸಂಖ್ಯೆಯ ಅಸಮಾನತೆ ಹೀಗಯೇ ಮುಂದುವರಿದಲ್ಲಿ, ಸಂವಿಧಾನ ನಗಣ್ಯವಾಗಿ, ಅಭಿವೃದ್ಧಿ, ಎನ್ನುವುದು ಹೇಗೆ ಮರೀಚಿಕೆ ಆಗುತ್ತದೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ಜ್ವಲಂತ ಉದಾಹರಣೆಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ಸಿವಿಲ್ ಇಂಜೀನಿಯರಿಂಗ್ ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಅಧೂತ್ ಮೋಹಿತ್ ಎಂಬುವರ ಲೇಖನದ ಭಾವಾರ್ಥವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ನಾನು ಬ್ರಾಹ್ಮಣನಲ್ಲ, ನಾನು ಮರಾಠಿಗ. ಆದರೂ ಕಳೆದ ಕೆಲವು ವರ್ಷಗಳಿಂದ ನನ್ನ ಅವಲೋಕನಗಳನ್ನು ಆಧರಿಸಿ ಇದಕ್ಕೆ ಸೂಕ್ತವಾದ ಉತ್ತರವನ್ನು ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ.

ಇಂದಿನ ಭಾರತದಲ್ಲಿ ಬ್ರಾಹ್ಮಣನಾಗಿರುವುದು ಎಂದರೆ 1930ರ ಜರ್ಮನಿಯಲ್ಲಿ ಯಹೂದಿಗಳಿದ್ದಂತೆ. ಜರ್ಮನಿಯ ಜನಸಂಖ್ಯೆಗೆ ಹೋಲಿಸಿದರೆ, ಯಹೂದಿಗಳ ಶೇಕಡಾವಾರು ಸಂಖ್ಯೆ ಬಹಳಷ್ಟು ಕಡಿಮೆ ಇದ್ದರೂ, ಜರ್ಮನ್ನರಿಗೆ ತಮ್ಮೆಲ್ಲಾ ಸಮಸ್ಯೆಗಳಿರೂ ಯಹೂದಿಗಳೇ ಕಾರಣರು ಎಂಬ ಭಾವನೆಯಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಬ್ರಾಹ್ಮಣರ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಭಾರತದ ಜನಸಂಖ್ಯೆಯಲ್ಲಿ ಕೇವಲ 2% ಜನರಿದ್ದರೂ ಬ್ರಾಹ್ಮಣರನ್ನು ಭಾರತದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅನಾವಶ್ಯಕವಾಗಿ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ

ಎಲ್ಲಾ ಬ್ರಾಹ್ಮಣರೂ ಸಹ ಶ್ರೀಮಂತರು ಅಥವಾ ಶಕ್ತಿಶಾಲಿಗಳಲ್ಲ. ಅವರಲ್ಲಿ ಹೆಚ್ಚಿನವರು ಎಲ್ಲರಂತೆ ಮಧ್ಯಮ ವರ್ಗದವರು ಮತ್ತು ಅನೇಕರು ಕಡು ಬಡತನದ ರೇಖೆಗಿಂತಲೂ ಅತ್ಯಂತ ಕಡಿಮೆ ಸ್ಥಿತಿಯಲ್ಲಿ ಇದ್ದಾರೆ. ಅಂತಹವರು, ಮದುವೆ, ಮುಂಜಿ ನಾಮಕರಣ, ತಿಥಿ ಮುಂತಾದ ಧಾರ್ಮಿಕ ಸಮಾರಂಭಗಳಲ್ಲಿ ಪೌರೋಹಿತ್ಯ ಮತ್ತು ಅಡುಗೆ ಮಾಡಿಕೊಂಡು ಸ್ವಾಭಿಮಾನಿಗಳಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ.

ಬ್ರಾಹ್ಮಣರಿಗೆ ಯಾವುದೇ ಮೀಸಲಾತಿ ಇಲ್ಲ ( ಇತ್ತೀಚೆಗೆ ಸರ್ಕಾರ ಕೊಟ್ಟಿರುವ 10% ಮೀಸಲಾತಿ ಎಲ್ಲಾ ಸವರ್ಣೀಯರಿಗೂ ಅನ್ವಯವಾಗುತ್ತದೆಯೇ ಹೊರತೂ, ಕೇವಲ ಬ್ರಾಹ್ಮಣರಿಗೆ ಮಾತ್ರವೇ ಮೀಸಲಾಗಿಲ್ಲ) ಅವರಿಗೆ ಸರ್ಕಾರದಿಂದ ಯಾವುದೇ ವಿಶೇಷ ಸಬ್ಸಿಡಿಗಳನ್ನು ನೀಡಲಾಗುವುದಿಲ್ಲ. ಆದರೂ ಎಲ್ಲದಕ್ಕೂ ಅವರನ್ನು ದೂಷಿಸಲಾಗುತ್ತದೆ.

ಜರ್ಮನಿಯಲ್ಲಿ ಎಲ್ಲದಕ್ಕೂ ಯಹೂದಿಗಳನ್ನೇ ಬಲಿಪಶುಗಳನ್ನಾಗಿ ಮಾಡುತ್ತಿದ್ದಂತೆ, ಭಾರತದಲ್ಲಿಯೂ ಕಮ್ಯುನಿಸ್ಟರು, ಇಸ್ಲಾಮಿಕ್ ಆಮೂಲಾಗ್ರರು ಮತ್ತು ಎಲ್ಲಾ ಹಿಂದೂ ವಿರೋಧಿ ಗುಂಪುಗಳು ಮತ್ತು ಕೆಲ ಸ್ವಯಂ ಘೋಷಿತ ಬುದ್ಧಿಜೀವಿಗಳು ನಿರಂತರವಾಗಿ ಬ್ರಾಹ್ಮಣರನ್ನು ವಿನಾಕಾರಣ ದ್ವೇಷಿಸುತ್ತಾರೆ ಮತ್ತು ದೂಷಿಸುತ್ತಾರೆ

ಏಳನೇ ಶತಮಾನದಲ್ಲಿ ಬೌದ್ಧರ ಅಹಿಂಸಾ ಪರಮೋಧರ್ಮಃ ಎಂಬುದಕ್ಕೆ ಮನಸೋತು ಮತ್ತು ಹಿಂದೂ ಧರ್ಮದಲ್ಲಿದ್ದ ಕಠುವಾದ ಆಚರಣೆಗಳಿಂದ ಬೇಸರಗೊಂಡ ಹಲವು ಬೌದ್ಧ ಧರ್ಮಕ್ಕೆ ಮತಾಂತರವಾಗಿ ಸನಾತನ ಧರ್ಮ ಅವನತಿಯ ಹಾದಿಯಲ್ಲಿ ಇದ್ದಾಗ, ಕೇರಳದ ಬ್ರಾಹ್ಮಣ, ವೈದಿಕ ಧರ್ಮಕ್ಕೆ ಸೇರಿದ ಆದಿ ಶಂಕರಾಚಾರ್ಯರು ತಮ್ಮ ಅಪಾರವಾದ ಪಾಂಡಿತ್ಯ, ಇಚ್ಛಾಶಕ್ತಿ, ಬುದ್ಧಿವಂತಿಕೆ ಮತ್ತು ಚರ್ಚಾ ಶಕ್ತಿಯಿಂದಾಗಿ ಎಲ್ಲರನ್ನೂ ಸೋಲಿಸಿ ಸರ್ವಜ್ಞ ಪೀಠವನ್ನೇರಿ, ದೇಶದ ನಾಲ್ಕೂ ಕಡೆಯಲ್ಲಿಯೂ ಧಾರ್ಮಿಕ ಶಕ್ತಿ ಕೇಂದ್ರಗಳನ್ನು ಆರಂಭಿಸಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.

ಅದಲ್ಲದೇ ನಿರಂಕುಶವಾಗಿ 1000 ವರ್ಷಗಳ ಕಾಲ ಹಿಂದೂ ಧರ್ಮದ ಮೇಲೆ ಅಕ್ರಮ ಮಾಡಿದ ಇಸ್ಲಾಮಿಕ್ ಆಕ್ರಮಣಕಾರನ್ನು ಮತ್ತು 300 ವರ್ಷಕ್ಕೂ ಅಧಿಕ ಕಾಲ ಬ್ರಿಟಿಷ್ ವಸಾಹತುಶಾಹಿಗಳ ಗುಲಾಮಗಿರಗಳ ಸತತ ಧಾಳಿಯ ನಡುವೆಯೂ, ಸನಾತನ ಅಮೂಲ್ಯ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು, ಬ್ರಹ್ಮ ಸೂತ್ರಗಳು, ಭಗವದ್ಗೀತೆಯ ಜ್ಞಾನವನ್ನು ಸಂರಕ್ಷಿಸಿ ಉಳಿಸಿದವರೇ ಬ್ರಾಹ್ಮಣರು. ಉಳಿದೆಲ್ಲಾ ಜಾತಿಯ ಹಿಂದೂಗಳು ನಮ್ಮ ಧರ್ಮವನ್ನು ಉಳಿಸಲು ಹೋರಾಡಿದರೆ, ವೇದ ಧರ್ಮದ ಮೂಲ ಗ್ರಂಥಗಳು ಮತ್ತು ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಉಳಿಸಿದವರು ಬ್ರಾಹ್ಮಣರು ಎನ್ನುವುದು ಸತ್ಯ.

ಜಗತ್ತಿನ ಬಹುತೇಕ ಭಾಷೆಗಳ ಮೂಲ ಭಾಷೆಯಾದ ಸಂಸ್ಕೃತ ಭಾಷೆಯನ್ನು ಜೀವಂತವಾಗಿರಿಸಿದ್ದ (ಮತ್ತು ಇನ್ನೂ ಇಟ್ಟುಕೊಂಡಿರುವ) ಬ್ರಾಹ್ಮಣರು, ಮೊಘಲ್ ಸಾಮ್ರಾಜ್ಯವನ್ನು ನಾಶಪಡಿಸಿ ಮರಾಠಾ ಸಾಮ್ರಾಜ್ಯವನ್ನು ಅಷ್ಟು ದೊಡ್ಡದಾಗಿ ವಿಸ್ತರಿಸಿದ ಬಾಜಿರಾವ್ ಪೇಶ್ವೆಯವರೂ ಸಹಾ ಬ್ರಾಹ್ಮಣರೇ ಆಗಿದ್ದರು ಎನ್ನುವುದು ಗಮನಾರ್ಹ.

ಬಹುಶಃ ಬ್ರಾಹ್ಮಣರಿಲ್ಲದಿದ್ದರೆ, ವೇದ ನಾಗರಿಕತೆಯು ಪರ್ಷಿಯನ್, ಗ್ರೀಕ್, ಈಜಿಪ್ಟಿನ, ರೋಮನ್ ಮತ್ತು ಇತರ ಅನೇಕ ನಾಗರಿಕತೆಗಳಂತೆ ಸತ್ತುಹೋಗುತ್ತಿತ್ತು. ಹಾಗಾಗಿ ಬ್ರಾಹ್ಮಣರೇ ಪ್ರಾಚೀನ ವೈದಿಕ ನಾಗರಿಕತೆಗೆ ನಮ್ಮನ್ನು ಸಂಪರ್ಕಿಸುವ ಕೊಂಡಿಗಳಾಗಿದ್ದರು ಎಂದರೂ ಅತಿಶಯವಲ್ಲ.

ಇಂಗ್ಲಿಷ್ನಲ್ಲಿ To kill a snake, cut it’s head off ಅಂದರೆ ಹಾವನ್ನು ಕೊಲ್ಲ ಬೇಕೆಂದರೆ ಅದರ ತಲೆಯನ್ನು ಮೊದಲು ಕತ್ತರಿಸಿ ಎಂಬ ಗಾದೆಯ ಮಾತಿನಂತೆ, ಭಾರತದಲ್ಲಿ ಹಿಂದೂ ಧರ್ಮವನ್ನು ಅಳಿಸಲು ಬುದ್ಧಿವಂತರಾದ ಬ್ರಾಹ್ಮಣರನ್ನು ನಾಶಮಾಡಬೇಕು ಎಂಬುದನ್ನು ಅತ್ಯಂತ ಶೀಘ್ರವಾಗಿ ಬ್ರಿಟೀಶರು ಮನಗಂಡಿದ್ದರು. ಈಗ ಅದನ್ನೇ, ಭಾರತದ ಹಿಂದೂ ವಿರೋಧಿ ಶಕ್ತಿಗಳು 40 ರ ದಶಕದಲ್ಲಿ ಯಹೂದಿಗಳ ವಿರುದ್ಧ ಧಾಳಿ ಮಾಡಿದ ನಾಜಿಗಳಂತೆಯೇ ಇಂದು ಬ್ರಾಹ್ಮಣರು ಮೇಲೆ ಬಿದ್ದಿದ್ದಾರೆ.

ಇದಕ್ಕೆ ಪುರಾವೆ ಎಂಬಂತೆ ಕೆಳಜಾತಿಯವರು ಬ್ರಾಹ್ಮಣರಿಂದ ಅತ್ಯಂತ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬ ಕಟ್ಟು ಕಥೆಯನ್ನು ತೇಲಿಬಿಟ್ಟರು. ನಿಜ ಹೇಳಬೇಕೆಂದರೆ, ನಾನು ಜಾತಿ ತಾರತಮ್ಯವನ್ನು ವಿರೋಧಿಸುತ್ತೇನೆ. ಆದರೆ, ನಿಜವಾದ ಚರಿತ್ರೆಯಲ್ಲಿ ಹಿಂದೂಗಳು, ಬೌದ್ಧರು, ಜೈನರು ಇಸ್ಲಾಮಿಕ್ ಆಡಳಿತಗಾರರಿಂದ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದಾರೆಯೇ ಹೊರತು, ಇಸ್ಲಾಮಿಕ್ ಆಕ್ರಮಣಕಾರರಂತೆ ಬ್ರಾಹ್ಮಣರು ಎಂದಿಗೂ ಯಾರೊಬ್ಬರ ವಿರುದ್ಧವೂ ನರಮೇಧ ಅಭಿಯಾನವನ್ನು ನಡೆಸಲಿಲ್ಲ. ಯಾವುದೇ ಧಾರ್ಮಿಕ ಕಟ್ಟಡಗಳನ್ನು ಹಾಳು ಮಾಡುವುದಿರಲಿ, ಕನಿಷ್ಟ ಪಕ್ಷ ಒಂದು ಚೂರು ಭಿನ್ನಗೊಳಿಸಿದ ಯಾವುದೇ ಇತಿಹಾಸವಿಲ್ಲ.

2500 ವರ್ಷಗಳ ಹಿಂದಿನ ವೈದಿಕ ಕಾಲದಲ್ಲಿ ಮಾತ್ರ ಬ್ರಾಹ್ಮಣರು ಪ್ರಭಲಾಗಿದ್ದಿರ ಬಹುದು ಅದರೆ ಕ್ರಿ.ಪೂ 500 ರಲ್ಲಿ ಬೌದ್ಧಧರ್ಮದ ಆರಂಭವಾದ ನಂತರದ, ಭಾರತೀಯರು ಬ್ರಾಹ್ಮಣರ ಸಂಪ್ರದಾಯಗಳನ್ನು ಧಿಕ್ಕರಿಸಿ, ನಿಧಾನವಾಗಿ ಬೌದ್ಧಧರ್ಮಕ್ಕೆ ಮತಾಂತರವಾಗ ತೊಡಗಿದರು.

8 ನೇ ಶತಮಾನದವರೆಗೆ ಶಂಕರಾಚಾರ್ಯರು ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವವರೆಗೂ ಬೌದ್ಧಧರ್ಮವೇ ಭಾರತ ಮತ್ತು ಸುತ್ತಮುತ್ತಲ ವಿದೇಶಗಳಲ್ಲಿಯೂ ಬಹುಸಂಖ್ಯಾತ ಧರ್ಮವಾಗಿತ್ತು.

ಅದಾಗಿ 200 ವರ್ಷಗಳ ನಂತರ ಇಸ್ಲಾಮಿಕ್ ಆಕ್ರಮಣಗಳು ಪ್ರಾರಂಭವಾಗಿ ಉತ್ತರದಿಂದ ದಕ್ಷಿಣದ ವರೆಗೂ ಭಾರತದ ಬಹುಭಾಗ ಇಸ್ಲಾಮಿಕ್ ಆಡಳಿತಗಾರರ ದೌರ್ಜನ್ಯಕ್ಕೆ ಒಳಗಾಗಿತ್ತು. ಮೊಘಲ್ ಸಾಮ್ರಾಜ್ಯದ ಇನ್ನೇನೂ ಅಂತ್ಯವಾಗುತ್ತದೆ ಎನ್ನುವಷ್ಟರಲ್ಲಿ ಯೂರೋಪಿಯನ್ನರ ಹಿಡಿತಕ್ಕೆ ಒಳಗಾಗಿ ಅದರಲ್ಲೂ ಬ್ರಿಟಿಷರ ವಸಾಹತುಗಳಗಿ ಮಾರ್ಪಾಟಾಗಿತ್ತು.

ನಂದರ ದುರಾಡಳಿಕ್ಕೆ ವಿರೋಧವಾಗಿ ಚಂದ್ರಗುಪ್ತನೆಂಬ ಸಾಮಾನ್ಯರ ಬೆನ್ನುಲುಬಾಗಿ‌ನಿಂತು ನಂದರ ವಂಶವನ್ನು ನಿರ್ನಾಮಗೊಳಿಸಿ‌ ಮೌರ್ಯ ವಂಶ ಸ್ಥಾಪಿಸಿದವರು ಇಂದಿಗೂ ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದೇ ಖ್ಯಾತಿ ಪಡೆದ ಚಾಣಕ್ಯ.

ಉತ್ತರದಲ್ಲೆಲ್ಲಾ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ, ದಕ್ಷಿಣದ ಕಡೆ ದಂಡೆತ್ತಿ ಬರುತ್ತಿದ್ದ ಮೊಘಲರನ್ನು ಸಾಧಾರಣ ಪಾಳೆಯಗಾರರಾಗಿದ್ದ ಹಕ್ಕ-ಬುಕ್ಕರ ಬೆಂಬಲಕ್ಕೆ ನಿಂತು ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯರು.

ಚಾಣಕ್ಯ ಮತ್ತು ವಿದ್ಯಾರಣ್ಯರು ಮನಸ್ಸು ಮಾಡಿದ್ದಲ್ಲಿ ತಾವೇ ರಾಜರಾಗಬಹುದಿತ್ತಾದರೂ, ಅವರೆಂದೂ ಆ ದುರಾಸೆ ಪಡಲಿಲ್ಲ. ಅವರು King ಆಗುವುದಕ್ಕಿಂತಲೂ King Maker ಆಗುವುದಕ್ಕೇ ಇಚ್ಚೆ ಪಟ್ಟು, ರಾಜ್ಯ ಸ್ಥಾಪನೆಯಾಗಿ ಸುಸ್ಥಿರವಾದ ಕೂಡಲೇ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿರತರಾದರು.

ಇತಿಹಾಸದ ಈ ಎಲ್ಲಾ ಉದಾಹರಣೆಗಳನ್ನು ಅವಲೋಕಿಸಿದರೆ, ಭಾರತದಲ್ಲಿ ಕಳೆದ 1000 ವರ್ಷಗಳಿಂದ ಬ್ರಾಹ್ಮಣರು ಭಾರತದಲ್ಲಿ ಎಂದೂ ಪ್ರಭಲವಾಗಿ ಅಧಿಕಾರದಲ್ಲಿ ಇರಲೇ ಇಲ್ಲ. ಎಲ್ಲಾ ರಾಜಕೀಯ, ಆರ್ಥಿಕ ಮತ್ತು ಆಡಳಿತ ಅಧಿಕಾರಗಳು ಇಸ್ಲಾಮಿಕ್ ಚಕ್ರವರ್ತಿಗಳಿಂದ ಬ್ರಿಟಿಷರರಿಗೆ ಹಸ್ತಾಂತರವಾಗಿ ನಂತರ ಪ್ರಜಾಪ್ರಭುತ್ವದ ಆಡಳಿತಕ್ಕೆ ಒಳಗಾಯಿತು. ಹಾಗಾಗಿ ಇಂದಿನ ಭಾರತದಲ್ಲಿ ಹೆಚ್ಚಿನ ಬಡತನ ಮತ್ತು ಅಸಮಾನತೆಗಳು ವಸಾಹತುಶಾಹಿ ಮತ್ತು ಬಂಡವಾಳಶಾಹಿಗಳ ಕೊಡುಗೆಯಾಗಿದೆ. ಅವರು ಸೃಷ್ಟಿಸಿದ ಪರಿಸ್ಥಿತಿಗಳಿಗೆ ಬ್ರಾಹ್ಮಣರನ್ನು ಸುಖಾ ಸುಮ್ಮನೆ ಏಕೆ ದೂಷಿಸಲಾಗುತ್ತದೆ ? ಎಂದು ತಿಳಿಯದಾಗಿದೆ.

ಸ್ವಾತ್ರಂತ್ರ್ಯಾನಂತರವಂತೂ ಬ್ರಾಹ್ಮಣರು ತಮ್ಮ ಸ್ವಂತ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಇತರರು ಬ್ರಾಹ್ಮಣರ ಬಗ್ಗೆ ಏನು ಆಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಕನಿಷ್ಠ ತಲೆಕೆಡಿಸಿಕೊಳ್ಳದೇ, ತಮ್ಮ ಬುದ್ಧಿ ಶಕ್ತಿ, ಕಠಿಣ ಪರಿಶ್ರಮದಿಂದ ವಿಶ್ವಾದ್ಯಂತ ಯಶಸ್ವಿಯಾಗಿದ್ದಾರೆ. ಎಪ್ಪತ್ತರ ದಶಕದಲ್ಲಿ ಉಳುವವನಿಗೇ ಭೂಮಿ ಎಂಬ ಕಾನೂನು ಬಂದಾಗಲಂತೂ ಅತ್ಯಂತ ಹೆಚ್ಚಿನ ಭೂಮಿಯನ್ನು ಕಳೆದುಕೊಂಡವರು ಬ್ರಾಹ್ಮಣರೇ. ಹಿಂದಿನ ದಿನದವರೆಗೂ ನೂರಾರು ಎಕರೆ ಜಮೀನ್ದಾರರಾಗಿದ್ದವರು ಏಕಾ ಏಕಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದರೂ, ಯಾವುದೇ ರೀತಿಯ ಪ್ರತಿಭಟನೆಯಾಗಲೀ, ಹೋರಾಟವನ್ನಾಗಲೀ ಮಾಡದೇ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಜೀವನ ನಡೆಸತೊಡಗಿದರು.

ಈ‌ ಕ್ಷಣಕ್ಕೂ, ವಿಶ್ವದ ಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ ಮೈಕ್ರೋಸಾಫ್ಟ್ , ಗೂಗಲ್, ಇನ್ಫೋಸಿಸ್ ಇನ್ನು ಮುಂತಾದ ಕಂಪನಿಗಳಲ್ಲಿ ಬ್ರಾಹ್ಮಣರೇ ಪ್ರಮುಖ ಸ್ಥಾನಗಳಲ್ಲಿದ್ದರೂ, ಅವರೆಂದೂ ಜಾತಿವಾದಿಗಳಾಗಿಲ್ಲ. ತಮ್ಮ ಜಾತಿಯವರಿಗೆ ಪ್ರಾಮುಖ್ಯತೆಯನ್ನೂ ನೀಡಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಇನ್ನು ಹೊಸ ಪೀಳಿಗೆಯ ಬ್ರಾಹ್ಮಣ ಯುವಕರಂತೂ ಈ ಜಂಜಾಟಗಳಿಂದ ಬೇಸತ್ತು, ತಮ್ಮ ಬುದ್ಧಿವಂತಿಗೆ ಮತ್ತು ಕಠಿಣ ಪರಿಶ್ರಮದಿಂದ ಇಂದು ವಿಶ್ವದ ವಿವಿಧ ಮೂಲೆಗಳಿಗೆ ವಲಸೆ ಹೋಗಿದ್ದಾರೆ ಮತ್ತು ತಮ್ಮ ಪರಿಣತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನಗಳನ್ನು ಪಡೆದಿದ್ದಾರೆ. When you are in Rom, be lika a Roman ಎನ್ನುವಂತೆ ಎಲ್ಲೆಡೆಯೂ ಬ್ರಾಹ್ಮಣರು ತಾಳ್ಮೆ ಮತ್ತು ಶಾಂತಿಯಿಂದ ಜೀವಿಸುವುದಲ್ಲದೇ ಸನ್ನಡತೆಗೆ ಹೆಸರುವಾಸಿಯಾಗಿದ್ದಾರೆ.

ಈಗ ಹೇಳಿ,

ಶತ ಶತಮಾನಗಳ ಹಿಂದೆ ಆಗಿರಬಹುದಾಗಿದ್ದ ತಪ್ಪುಗಳಿಗೆ ಈ ಪರಿಯಾಗಿ ಇಂದಿಗೂ ಬ್ರಾಹ್ಮಣರನ್ನು ದೂಷಿಸುವುದು ಮತ್ತು ದ್ವೇಷಿಸುವುದು ಎಷ್ಟು ಸರಿ?

ಮೀಸಲಾತಿಯ ಹಂಗಿಲ್ಲದೇ, ಸ್ಚಶಕ್ತಿಯಿಂದ ಉದ್ದಾರವಾಗಿರೋದು ತಪ್ಪಾ?

ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಎನ್ನುವುದು ಬರೀ ಬಾಯಿ ಮಾತಾ?

ನಾವೂ ಬದುಕೋಣ. ಎಲ್ಲರನ್ನೂ ಬಾಳಲು ಬಿಡೋಣ. ಎಷ್ಟಾದರೂ ನಮ್ಮದು ವಸುಧೈವ ಕುಟುಂಬಕಂ ಅಲ್ಲವೇ? ಎನ್ನುತ್ತಲೇ, ಬ್ರಾಹ್ಮಣರನ್ನು ದೂರ ಮಾಡಿದರೆ ಸಮಾಜದಲ್ಲಿ ಸಮಾನತೆ ಹೇಗೆ ಸಾಧ್ಯ?

ಏನಂತೀರೀ?
ನಿಮ್ಮವನೇ ಉಮಾಸುತ

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಹಿಂದೆಲ್ಲಾ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವುದಕ್ಕೆ ನಡಿಗೆಯೇ ಮೂಲವಾಗಿದ್ದು ನಂತರದ ದಿನಗಳಲ್ಲಿ ಎತ್ತಿನ ಗಾಡಿಗಳು ಜನರನ್ನು ಮತ್ತು ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದರು. ಇನ್ನು ಕೆಲವರು ಸೈಕಲ್ ಮುಖಾಂತರ ಒಂದಿಬ್ಬರು ಪ್ರಯಾಣಿಸುತ್ತಿದ್ದಾಗ ಒಂದಕ್ಕಿಂತಲು ಹೆಚ್ಚಿನ ಜನರನ್ನು ಆರಾಮದಾಯಕವಾಗಿ ಪ್ರಯಾಣಿಸುವ ಸಲುವಾಗಿ ಕುದುರೇ ಗಾಡಿಗಳನ್ನು ಬಳಸಲು ಅರಂಭಿಸಿದರು ಇವು ಜಟಕಾಗಾಡಿಗಳು, ಟಾಂಗ, ಜಟ್ಕಾ (ಉರ್ದು ಭಾಷೆಯಿಂದ ಬಂದಿರುವ ಪದ) ಎಂದೇ ನಾಡಿನಾದ್ಯಂತ ಪ್ರಖ್ಯಾತವಾಯಿತು.

cylle_rikshwa

ಎತ್ತಿನಗಾಡಿ ಮತ್ತು ಕುದುರೇ ಗಾಡಿಗಳನ್ನು ಸಂಭಾಳಿಸುವುದು ಬಹಳ ತ್ರಾಸದಾಯಕ ಮತ್ತು ಪ್ರಾಣಿಗಳಿಗೇಕೆ ತೊಂದರೆ ಕೊಡುವುದು ಎಂದು ನಿರ್ಧರಿಸಿ ಮೋಟಾರು ವಾಹನಗಳ ಆವಿಷ್ಕಾರವಾಗಿ ಬಸ್, ಲಾರಿ, ಕಾರುಗಳು ದ್ವಿಚಕ್ರವಾಹನಗಳು ಯೂರೋಪಿನಲ್ಲಿ ಜನಪ್ರಿಯವಾಗ ತೊಡಗಿದಂತೆ ಭಾರತಕ್ಕೂ ಆಮದಾಯಿತು. ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನುವಂತೆ ಇವೆಲ್ಲವೂ ಸಿರಿವಂತರ ಪಾಲಾಗಿ ಬಡವರಿಗೆ ಮರೀಚಿಕೆಯೇ ಆಗಿತ್ತು. ಹಾಗಾಗಿ ಜನ ಸಾಮಾನ್ಯರು ಸೈಕಲ್, ಸೈಕಲ್ ರಿಕ್ಷಾ, ಜಟಕಾಗಾಡಿಗಳು ಮತ್ತು ಅಲ್ಲೊಂದು ಇಲ್ಲೊಂದು ಬರುತ್ತಿದ್ದ ಸಾರ್ವಜನಿಕ ಬಸ್ ಗಳನ್ನೇ ಅವಲಂಭಿಸಿದ್ದರು. ದುರಾದೃಷ್ಟವಷಾತ್ ಉಳಿದ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರಿನ ರಸ್ತೆಗಳು ಬಹಳಷ್ಟು ಉಬ್ಬು ತಗ್ಗುಗಳು ಇದ್ದದ್ದರಿಂದ ಬೆಂಗಳೂರಿನಲ್ಲಿ ಸೈಕಲ್ ರಿಕ್ಷಾ ಬಳಸುವುದು ಸರಿಯಾದ ಮಾರ್ಗವಾಗಿರದೇ ಜಟಕಾ ಗಾಡಿಯೇ ಪ್ರಮುಖವಾದ ಸಾರ್ವಜನಿಕ ಪ್ರಯಾಣಿಕರ ವಾಹನವಾಗಿತ್ತು.

jatka

1949 ರಲ್ಲಿ ಬೆಂಗಳೂರಿನಲ್ಲಿದ್ದ ಹಳೆಯ ಅಷ್ಟೂ ಪೇಟೆಗಳ ಪುರಸಭೆಗಳು ಮತ್ತು ಕಂಟೋನ್ಮೆಂಟ್ ಎಲ್ಲವೂ ವಿಲೀನಗೊಂಡು ಬೆಂಗಳೂರು ಮಹಾನಗರವಾಗಿ, 1950ರ ನವೆಂಬರ್‌ನಲ್ಲಿ ನಡೆದ ಕಾರ್ಪೋರೇಷನ್ ಚುನಾವಣೆ ನಡೆದು ಬೆಂಗಳೂರಿನ ಮೊತ್ತ ಮೊದಲ ಚುನಾಯಿತ ಮೇಯರ್ ಆಗಿ ಶ್ರೀ ಎನ್. ಕೇಶವ ಅಯ್ಯಂಗಾರ್ ಅವರು ಆಯ್ಕೆಯಾದರು. ಆಗ ಮೇಯರ್ ಅವರು ಭಾರತದ ಉಳಿದ ನಗರಗಳಲ್ಲಿದ್ದ ಯಾಂತ್ರಿಕೃತ ತ್ರಿಚಕ್ರ ರಿಕ್ಷಾಗಳನ್ನು (ಆಟೋ) ಪರಿಚಯಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಅದುವರೆವಿಗೂ ನಗರದಾದ್ಯಾಂತ ಅತ್ಯಂತ ಕಡಿಮೆ ಶುಲ್ಕದ ಜನಪ್ರಿಯ ಪರ್ಯಾಯ ಸಾರಿಗೆ ವಿಧಾನವಾಗಿದ್ದ ಅನೇಕ ಜಟಕಾ ಮಾಲಿಕರು ಈ ಪ್ರಸ್ತಾಪಕ್ಕೆ ತೀವ್ರವಾದ ಆಕ್ಷೇಪದ ಜೊತೆಗೆ ವಿರೋಧ ಮತ್ತು ಪ್ರತಿಭಟನೆಯನ್ನೂ ನಡೆಸಿದರು.

ಆಗ ಜಟಕಾ ಒಕ್ಕೂಟಗಳು ಮತ್ತು ವಕೀಲರನ್ನು ಒಟ್ಟುಗೂಡಿಸಿ ಸಂಧಾನದ ಮಾತುಕತೆಗಳನ್ನು ನಡೆಸಿದ್ದಲ್ಲದೇ, ಈ ವಿಷಯದ ಕುರಿತು ತಜ್ಞರ ಸಹಕಾರದೊಂದಿಗೆ ಅಧ್ಯಯನವನ್ನೂ ನಡೆಸಿ, ಮಧ್ಯಮ ವರ್ಗದವರ ಅನುಕೂಲವನ್ನು ಮನದಲ್ಲಿಟ್ಟುಕೊಂಡು ಪರೀಕ್ಷಾರ್ಥವಾಗಿ ಕೆಲವೇ ಕೆಲವು ಯಾಂತ್ರಿಕೃತ ವಾಹನಗಳ ಪರವಾಗಿ ತೀರ್ಪು ನೀಡಿದ್ದಲ್ಲದೇ, ಇಡೀ ನಗರಾದ್ಯಂತ 10 ಆಟೋರಿಕ್ಷಾಗಳಿಗೆ ಪರವಾನಗಿ ನೀಡುವಂತೆ ಅಂದಿನ ಕಾರ್ಪೊರೇಷನ್ ಆಯುಕ್ತರಿಗೆ ಆದೇಶ ನೀಡಿದರು, ಮೇಯರ್ ಅವರೇ ಖುದ್ದಾಗಿ ಅಸ್ಥೆವಹಿಸಿ ಆದೇಶ ಹೊರಡಿಸಿದ ಕಾರಣ, ಬೆಂಗಳೂರು ನಗರದಲ್ಲಿ ಪ್ರಪ್ರಥಮವಾಗಿ 1950ರ ಡಿಸೆಂಬರ್‌ನಲ್ಲಿ ಮೊದಲ ತ್ರಿಚಕ್ರ ವಾಹನಗಳು ನಗರದ ರಸ್ತೆಗಳಿಗೆ ಇಳಿಯುವ ಮೂಲಕ ಇತಿಹಾಸ ನಿರ್ಮಾಣವಾಯಿತು.

auto

ಭಾರತದ ಅಟೋಮೊಬೈಲ್ಸ್ ರಾಜಧಾನಿ ಪೂನಾದಲ್ಲಿ ತಯಾರಿಸಲಾಗಿದ್ದ, ಸ್ಕೂಟರಿನ ಹಿಂಭಾಗಕ್ಕೆ ಇಬ್ಬರು ಪ್ರಯಾಣಿಕರು ಸುಖಃಕರವಾಗಿ ಕೂರುವಂತೆ ವಿನ್ಯಾಸಗೊಳಿಸಲಾಗಿದ್ದ ಹಸಿರು ಮತ್ತು ಹಳದಿ ಬಣ್ಣದ ತ್ರಿಚಕ್ರದ ಹೊಸ ಆಟೋರಿಕ್ಷಾಗಳನ್ನು ಬೆಂಗಳೂರಿಗರು ಬಹಳ ಉತ್ಸಾಹದಿಂದಲೇ ಸ್ವಾಗತಿಸಿದರು. ಅಂದಿನ ಕಾರ್ಪೊರೇಷನ್ ಕಟ್ಟಡದಲ್ಲಿ ಶ್ರೀಯುತ ಕೇಶವ ಅಯ್ಯಂಗಾರ್ ಅವರೇ ಸ್ವತಃ ಆಟೋವೊಂದನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಆಟೋವಿನ ಮೊದಲ ಪ್ರಯಾಣದಲ್ಲಿ ಇಟಲಿಯ ಹೆಣ್ಣುಮಗಳನ್ನು ಮದುವೆಯಾಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಅಯ್ಯಂಗರರೇ ಸ್ವಯಂಪ್ರೇರಿತವಾಗಿ ಕೂರಿಸಿಕೊಂಡು ಬಳೇಪೇಟೆಯಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಸತ್ಕರಿಸಿ ಕಳುಹಿಸುವ ಮೂಲಕ ವಿದ್ಯುಕ್ತವಾಗಿ ಆಟೋರಿಕ್ಷಾವನ್ನು ಬೆಂಗಳೂರಿನಲ್ಲಿ ಉಧ್ಘಾಟನೆ ಮಾಡಿದ್ದರು. ನಂತರದ ದಿನಗಳಲ್ಲಿ ಪುನಃ ಸುಮಾರು 40 ಆಟೋಗಳಿಗೆ ಅನುಮತಿ ನೀಡಲಾಯಿತು. 1980ರವರೆಗೂ ಆಟೋವಿನಲ್ಲಿ ಕೇವಲ ಇಬ್ಬರು ಪ್ರಯಾಣಿಕರನ್ನು ಮಾತ್ರವೇ ಕೂರಿಸಿಕೊಂಡು ಹೋಗಲು ಅನುಮತಿ ನೀಡಲಾಗಿತ್ತು.

rikshaw3

ದಿನೇ ದಿನೇ ಆಟೋರಿಕ್ಷಾಗಳು ಸಾರ್ವಜನಿಕ ಬಸ್ಸಿನ ಹೊರತಾಗಿ ಪ್ರಯಾಣಿಕರ ಜನಪ್ರಿಯ ಸಾರಿಗೆ ವ್ಯವಸ್ಥೆಯಾಗಿ ಮಾರ್ಪಾಟಾಯಿತು. ಬ್ಯಾಂಕುಗಳು ಮತ್ತು ಸಹಕಾರ ಸಂಘಗಳೂ ಕಡಿಮೆ ಬಡ್ಡಿಯ ದರದಲ್ಲಿ ಆಟೋ ಕೊಳ್ಳಲು ಸಾಲ ಕೊಡಲು ಆರಂಭಿಸಿದ ಕಾರಣ, ಕುದುರೇ ಗಾಡಿಗಳ ನಿರ್ವಹಣೆ ಬಹಳ ತ್ರಾಸವಾಗುತ್ತಿದ್ದದ್ದನ್ನು ಗಮನಿಸಿದ ಜಟಕಾ ಓಡಿಸುತ್ತಿದ್ದ ಬಹುತೇಕರು ಆಟೋಗಳನ್ನು ಕೊಂಡು ತಮ್ಮ ಜೀವನ ನಡೆಸಲಾರಂಭಿಸಿದರು. ನಂತರದ ದಿನಗಳಲ್ಲಿ ಆಟೋ ಲಕ್ಷಾಂತರ ಜನರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಸಾವಿರಾರು ಕುಟುಂಬಗಳ ಆಧಾರಸ್ಥಂಭವಾಗಿದ್ದು ಈಗ ಇತಿಹಾಸ.

ಕೆಲ ವರ್ಷಗಳ ನಂತರ ಆಟೊಗಳ ಬಣ್ಣ ಕ್ರಮೇಣ ಹಳದಿ ಬಣ್ಣದ ಪಟ್ಟಿಯೊಂದಿಗೆ ಕಪ್ಪು ಬಣ್ಣಕ್ಕೆ ಬದಲಾಯಿತು. ಅರಂಭದ ದಿನಗಳಲ್ಲಿ ಇಂದಿನಿಂತೆ ಮೀಟರ್ ಗಳ ವ್ಯವಸ್ಥೆ ಇಲ್ಲದಿದ್ದ ಕಾರಣ ಎಲ್ಲವೂ ಬಾಯಿಮಾತಿನ ವ್ಯವಹಾರಕ್ಕೆ ಸೀಮಿತವಾಗಿದ್ದು 1972ರ ಹೊತ್ತಿಗೆ ಯೆಂಕೆ ಡ್ಯಾಶ್‌ಬೋರ್ಡ್‌ನ ಕೆಳಗೆ ಮತ್ತು ಬ್ರೇಕ್ ಪೆಡಲ್‌ಗಿಂತ ಮೇಲೆ ಆಟೋರಿಕ್ಷಾ ಮೀಟರ್ ಗಳನ್ನು ಅಳವಡಿಸಲಾಯಿತು. ಇದನ್ನು ಕಾಲು ಮೀಟರ್ ಎಂದು ಆಗ ಕರೆಯಲಾಗುತ್ತಿತ್ತು. 1980ರ ದಶಕದಲ್ಲಿ, ಫ್ಳಾಗ್ ಮೀಟರ್ ಅನ್ನು ಪರಿಚಯಿಸಲಾದರೂ ಅದರಲ್ಲಿ ಸುಲಭವಾಗಿ ಮೋಸ ಮಾಡಲು ಅವಕಾಶ ಇದ್ದ ಕಾರಣ, ಕೆಲವು ವರ್ಷಗಳ ಹಿಂದೆ ಡಿಜಿಟಲ್ ಮೀಟರ್ ಗಳಿಗೆ ಬದಲಾಯಿಸಲಾಗಿದೆ.

rikshaw2

1990 ರ ದಶಕದವರೆಗೆ ಆಟೋಗಳನ್ನು ಓಡಿಸಲು ಪೆಟ್ರೋಲ್ ಹೊರತಾಗಿ ಪರ್ಯಾಯ ಇಂಧನವಾಗಿ ಸೀಮೆಎಣ್ಣೆಯನ್ನು ಮತ್ತು ಅಡುಗೆ ಅನಿಲಗಳೊಂದಿಗೆ ಪ್ರಯತ್ನಿಸಲಾಯಿತು. ಕೆಲ ಆಟೋಚಾಲಕರ ದುರಾಲೋಚನೆಯಿಂದ ಪೆಟ್ರೋಲ್ ಜೊತೆ ಸೀಮೇಎಣ್ಣೆ ಕಲಬೆರಕೆ ಮಾಡಿ ಪರಿಸರವನ್ನು ಹಾಳು ಮಾಡುತ್ತಿದ್ದದ್ದನ್ನು ಗಮನಿಸಿ, ಪೋಲೀಸರು ಅಂತಹ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಂಡ ಪರಿಣಾಮ ಅಂತಹ ದುಷ್ಕೃತ್ಯಗಳು ಬಹುತೇಕ ಕಡಿಮೆಯಾಗಿದೆ. 2000 ರ ನಂತರ ಅಧಿಕೃತವಾಗಿ ಪೆಟ್ರೋಲ್ ಆಟೋಗಳೊಂದಿಗೆ, ಡೀಸೆಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ಆಧಾರಿತ, ಸುಧಾರಿತ ಆಟೋಗಳು ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ, ಆಟೋವಿನ ಬಣ್ಣವೂ ಹಳದಿ ಮತ್ತು ಹಸಿರು ಬಣ್ಣಕ್ಕೆ ಬದಲಾಗಿದೆ. ಕರೆದೆಡೆಗೆ ಬರಲಾರರು, ಮೀಟರ್ ಮೇಲೆ ಹೆಚ್ವಿನ ಹಣ‌ ಕೇಳುತ್ತಾರೆ ಎಂಬ ಆರೋಪಗಳಿದ್ದರೂ, ಬೆಂಗಳೂರು ನಗರದಲ್ಲಿ ಇಂದಿಗೂ ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ರಸ್ತೆಗಳಲ್ಲಿ ಓಡಾಡುತ್ತಿವೆ ಎನ್ನುವುದು ಗಮನಾರ್ಹವಾಗಿದೆ.

ಇತ್ತೀಚಿನ ದಿನಗಳಲ್ಲಿ ಓಲಾ ಊಬರ್ ಗಳೂ ಸಹಾ ಸುಖಃಕರ ಪರ್ಯಾಯ ಸಾರಿಗೆ ವ್ಯವಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರೂ, ಮಧ್ಯಮ ವರ್ಗದವರಿಗೆ ಇನ್ನೂ ಕೈಗೆಟುಕುವ ಬೆಲೆಯಲ್ಲಿರುವ ಕಾರಣ ಇಂದಿಗೂ ಸಹಾ ಜನಸಾಮಾನ್ಯರಿಗೆ ಆಟೋ ಬಗ್ಗೆಯೇ ಹೆಚ್ಚಿನ ಒಲವಿದೆ. ಅದೂ ಅಲ್ಲದೇ, ಅನೇಕ ಕನ್ನಡ ಚಿತ್ರಗಳ ವಿವಿಧ ನಾಯಕರುಗಳು ಆಟೋ ಚಾಲಕರ ಪಾತ್ರಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಕಾರಣ ಇಂದಿಗೂ ಆಯಾಯಾ ನಟರುಗಳ ಅಭಿಮಾನಿಗಳಿಗೆ ಆಟೋವಿನಲ್ಲಿ ಪ್ರಯಾಣ ಮಾಡುವುದು, ತಮ್ಮ ನೆಚ್ಚಿನ ನಾಯಕನ ಗಾಡಿಯಲ್ಲೇ ಹೋಗುವಂತೆ ಭಾಸವಾಗುವಂತಾಗುವ ಕಾರಣ ಇನ್ನೂ ಆಟೋಗಳ ಕ್ರೇಜ್ ಹಾಗೆಯೇ ಇದೆ ಎಂದರೂ ತಪ್ಪಾಗದು. ಇನ್ನೂ ಆಟೋ ಹಿಂದೆ ಬರೆದಿರುವಂತಹ ಬರಹಗಳಂತೂ ಭಗ್ನ ಪ್ರೇಮಿಗಳಿಗೆ ಅದು ತಮ್ಮದೇ ಅನುಭವದ ಪಾಠವೇನೋ, ಎಂಬಂತಿರುವ ಕಾರಣ ಆಟೋಗಳು ಇನ್ನೂ ಪ್ರಸ್ತುತವೆನಿಸಿದೆ ಎಂದರೂ ತಪ್ಪಾಗಲಾರದು. ಇಂದಿಗೂ ಕನ್ನಡ ರಾಜ್ಯೋತ್ಸವ ಮತ್ತು ರಾಮನವಮಿ ಹಬ್ಬವನ್ನು ಸಾರ್ವಜನಿಕವಾಗಿ ಅದ್ದೂರಿಯಾಗಿ ಆಟೋ ಚಾಲಕರುಗಳು ಆಚರಿಸುವ ಮೂಲಕ ಒಂದು ರೀತಿಯ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. Old is always gold ಎನ್ನುವಂತೆ 70 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಆಟೋ ಅಂದು,‌ಇಂದೂ ಮುಂದೆಯೂ ಒಂದು ರೀತಿಯಲ್ಲಿ ಬಡವರ ರಾಜರಥ ಎಂದರೂ ಅತಿಶಯವಿಲ್ಲ.

ಏನಂತೀರೀ?

ನಿಮ್ಮವನೇ ಉಮಾಸುತ

ಕವಲೇ ದುರ್ಗ

kv1

ಶಿವಮೊಗ್ಗ ಹೇಳಿ ಕೇಳಿ ಮಲೆನಾಡಿನ ಪ್ರದೇಶ ವರ್ಷದ 365 ದಿನಗಳು ಹಚ್ಚ ಹಸಿರಾಗಿರುವಂತಹ ಸುಂದರ ಪ್ರಕೃತಿಯ ತಾಣ. ಶಿವಮೊಗ್ಗದಿಂದ ಸುಮಾರು 80 ಕಿಮೀ ಮತ್ತು ತೀರ್ಥಹಳ್ಳಿಯಿ೦ದ ಸುಮಾರು 18 ಕಿ.ಮಿ ದೂರದಲ್ಲಿರುವ ಸುಂದರ ಪ್ರಕೃತಿ ತಾಣ ಮತ್ತು ಐತಿಹಾಸಿಕ ಪ್ರದೇಶವೇ ಕವಲೇ ದುರ್ಗ. ತೀರ್ಥಹಳ್ಳಿಯಿಂದ ಆಗುಂಬೆಯತ್ತ ಹೋಗುವ ಹಾದಿಯಲ್ಲಿ ಸುಮಾರು ಆರು ಕಿ.ಮೀ ದಲ್ಲಿ ಸಿಗುವ ಬಿಳ್ ಕೊಪ್ಪ ಎನ್ನುವ ಸ್ಥಳದಿಂದ ಬಲಕ್ಕೆ ತಿರುಗಿ ಸುಮಾರು 10 ಕಿ.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿದರೆ ಕವಲೇ ದುರ್ಗದ ಬುಡವನ್ನು ತಲುಪಬಹುದಾಗಿದೆ. ಇಲ್ಲಿಯೇ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಸರಿ ಸುಮಾರು 2-3 ಕಿಮೀ ದೂರ ಕಾಲ್ನಡಿಗೆಯಲ್ಲಿ ಗದ್ದೆಗಳ ಬದುವಿನ ಮೇಲೆ ನಡೆದುಕೊಂಡು ಹೋದಲ್ಲಿ ಕವಲೇ ದುರ್ಗದ ಕೋಟೆಯ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

kv5

ಸಹ್ಯಾದ್ರಿ ಬೆಟ್ಟಗಳ ಮಡಿಲಲ್ಲಿ 9ನೇ ಶತಮಾನದ ಹಿಂದೆ ವಿಜಯ ನಗರದ ಸಾಮಂತರಾಗಿದ್ದ ಕೆಳದಿಯ ಸಂಸ್ಥಾನದ ಅರಸು ವೆಂಕಟಪ್ಪ ನಾಯಕ (ಕ್ರಿ.ಶ. 1582-1679) ತನ್ನ ಆಡಳಿತಾವಧಿಯಲ್ಲಿ ಕಟ್ಟಿದರು ಎನ್ನಲಾದ ಸುಂದರವಾದ ಕವಲೇ ದುರ್ಗ ಕೋಟೆ ಕಾಣಸಿಗುತ್ತದೆ. ಇದು ಕೆಳದಿ ಸಂಸ್ಥಾನದ ನಾಲ್ಕನೆಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಅಂದಿನ ಕಾಲದಲ್ಲಿ ಇದನ್ನು ಭುವನ ಗಿರಿ ದುರ್ಗ ಹಾಗೂ ಕೌಲೆ ದುರ್ಗ ಎ೦ದೂ ಕರೆಯಲ್ಪಡುತ್ತಿತ್ತು. ಸಾಂಸ್ಕೃತಿಕವಾಗಿ ಹೇಳಬೇಕೆಂದರೆ ಕವಲೇದುರ್ಗ ಎನ್ನುವುದು ಕಾವಲು ದುರ್ಗ ಎಂಬ ಹೆಸರಿನ ಅಪಭ್ರಂಶವಾಗಿದೆ ಎನ್ನಲಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣವಾಗಿದೆ. ಮೊದಲು ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗ ನಂತರ ಭುವನಗಿರಿ ದುರ್ಗ ಸಂಸ್ಥಾನವಾಗಿ ಮಾರ್ಪಟ್ಟಿದ್ದಕ್ಕೆ ಒಂದು ಭಯಂಕರ ಯುದ್ಧದ ಹಿನ್ನಲೆಯಿದೆ.

ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೋಟೆ ಕೊತ್ತಲ ನಿರ್ಮಿಸಿ ರಾಜ್ಯಭಾರವನ್ನು ನಡೆಸುತ್ತಿದ್ದ ಸಮಯದಲ್ಲಿ ಈ ಕವಲೇದುರ್ಗದ ಗಿರಿ ಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಸಹೋದರರ ಪಾಳೇಗಾರಿಯಲ್ಲಿರುತ್ತದೆ. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಅದಕ್ಕೆ ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು ಎಂದು ಇತಿಹಾಸದಲ್ಲಿ ದಾಖಾಲಾಗಿದೆ. ಈ ಮಲ್ಲವ ವಂಶದಲ್ಲಿ ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮಾಜಿಯವರು ಪ್ರಖ್ಯಾತರಾಗಿದ್ದರು. ಅದರಲ್ಲೂ ರಾಣಿ ವೀರಮ್ಮಾಜಿಯವರು ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿರುವುದು ಗಮನಾರ್ಹವಾದ ಅಂಶಯವಾಗಿದೆ. ಇದೇ ವಿಷಯವಾಗಿಯೇ ಮೊಘಲ್ ದೊರೆ ಔರಂಗಜೇಬನನ್ನು ಎದುರು ಹಾಕಿಕೊಂಡು ಅವನೊಂದಿಗೆ ಯುದ್ಧದಲ್ಲಿ ಜಯಿಸಿದ ಕೀರ್ತಿಯೂ ರಾಣಿ ಚೆನ್ನಮ್ಮಾಜಿಯವರದ್ದಾಗಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ್ಯವನ್ನು ಆಕ್ರಮಿಸಿಕೊಂಡಿದ್ದ ಹೈದರಾಲಿ ಮತ್ತು ಅವನ ಮಗ ಟಿಪ್ಪೂ ಸುಲ್ತಾನ್ ಈ ಕವಲೇ ದುರ್ಗದ ಮೇಲೆ ಧಾಳಿ ನಡೆಸಿ ಸಾಕಷ್ಟು ಹಾನಿಮಾಡುವುದರಲ್ಲಿ ಯಶಸ್ವಿಯಾಗಿದ್ದದ್ದು ದುರದೃಷ್ಟಕರವಾಗಿದೆ.

9ನೇ ಶತಮಾನದಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತಾದರೂ, 14 ನೇ ಶತಮಾನದಲ್ಲಿ ಚೆಲುವರಂಗಪ್ಪನಿಂದ ನವೀಕರಿಸಲ್ಪಟ್ಟು ಹೆಚ್ಚಿನ ಮೆರಗನ್ನು ಪಡೆದಿತ್ತು. ಆದಾದ ನಂತರ ವಿಜಯಯನಗರ ಅರಸರ ಸಾಮಂತರಾಗಿದ್ದು, ವಿಜಯನಗರದ ಪತನಗೊಂಡ ನಂತರ ಸ್ವತಂತ್ರರಾದ ಕೆಳದಿಯ ನಾಯಕರ ಭದ್ರಕೋಟೆಯಾಗಿ ವೆಂಕಟಪ್ಪ ನಾಯಕನು ಇಲ್ಲಿ ಸುಂದರವಾದ ಅರಮನೆಯೊಂದನ್ನು ಕಟ್ಟಿಸಿದ್ದಲ್ಲದೇ ಈ ಪ್ರದೇಶವನ್ನುಅಗ್ರಹಾರವನ್ನಾಗಿಸಿದರು. ಇಲ್ಲಿ ಮತ್ತಿನ ಮಠ ಎಂಬ ಶೃಂಗೇರಿ ಮಠದ ಉಪಮಠ, ಒಂದು ಸುಭದ್ರವಾದ ಖಜಾನೆ, ಒಂದು ಬೃಹತ್ತಾದ ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಹತ್ತಾರು ಸುಂದರವಾದ ಕೊಳಗಳನ್ನು ನಿರ್ಮಿಸಿದರು. ಕೆಳದಿ ಸಂಸ್ಥಾನದ ಈ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಇಂದಿಗೂ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದಿದೆ.

ಬಹಳಷ್ಟು ಜನರಿಗೆ ತಿಳಿದಿಲ್ಲದ ಒಂದು ಸಂಗತಿ ಎಂದರೆ ಇಕ್ಕೇರಿಯ ವೆಂಕಟಪ್ಪ ನಾಯಕರು ತಾವು ಸಣ್ಣವರಿದ್ದಾಗ ಓದಿ ನಲಿದು ಕುಪ್ಪಳಿಸಿದ ವಿಜಯನಗರದ ರಾಜಧಾನಿ ಹಂಪಿಯ ಒಂದು ಪ್ರತಿರೂಪ ಮಾಡಲು ಆರಿಸಿಕೊಂಡ ಸ್ಥಳವೇ ಭುವನಗಿರಿದುರ್ಗ ಅಂದರೆ ಕವಲೇದುರ್ಗಾ ಕೋಟೆ.

kv14

ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆ ಹೇಗೆ ಇದೆಯೋ ಹಾಗೆ ಇದು ಮೂರು ಸುತ್ತಿನ ಕೋಟೆಯಾಗಿದ್ದು, ಚಿತ್ರದುರ್ಗದ ರೀತಿಯಲ್ಲಿಯೇ ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯ ರೇಖೆಗಳನ್ನು ಅನುಸರಿಸಿ ಬೃಹತ್ ಗಾತ್ರದ ಪೆಡಸುಕಲ್ಲುಗಳನ್ನೇ ಇಟ್ಟಿಗೆಗಳ ರೀತಿಯಲ್ಲಿ ಬಳಸಿಕೊಂಡು ನಿರ್ಮಿಸಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಮಹಾದ್ವಾರವಿದ್ದು ಅದರ ಎರಡೂ ಬದಿಯಲ್ಲಿಯೂ ಸೈನಿಕರ ರಕ್ಷಣಾ ಕೊಠಡಿಗಳನ್ನು ಕಾಣಬಹುದಾಗಿದೆ. ಕೋಟೆಯ ಮದ್ಯದಲ್ಲಿ ದೇವಾಲಯಗಳು, ಮತ್ತು ಒಂದು ಪಾಳುಬಿದ್ದ ಅರಮನೆಯ ಪಳಿಯುಳಿಕೆಯನ್ನು ಕಾಣಬಹುದಾಗಿದೆ.

kv2ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ

ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಈ ದುರ್ಗದ ತುತ್ತ ತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಾಲಯವಿದೆ. ಈ ದೇವಸ್ಥಾನದ ಗರ್ಭಗೃಹದೊಳಗೆ ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯಂತೆ. ಇದರ ಎದುರಿಗೆ ಒಂದು ನಂದಿಮಂಟಪ ಮತ್ತು ಮುಖಮಂಟಪವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳ ಮುಂದೆ ಒಂದು ಧ್ವಜಸ್ತಂಭವನ್ನು ಕಾಣಬಹುದಾದರೆ, ಇಲ್ಲಿ ಮಾತ್ರ ಎರಡು ಧ್ವಜಸ್ತಂಭವಿರುವುದು ಕವಲೇದುರ್ಗದ ವಿಶೇಷವಾಗಿದೆ. ದೇವಸ್ಥಾನದ ಸಮೀಪವೇ, ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಶೇಖರಿಸಲು ಉಪಯೋಗಿಸುತ್ತಿದ್ದ ಬಾವಿಯನ್ನು ಈ ದುರ್ಗದಲ್ಲಿ ಕಾಣಬಹುದಾಗಿದ್ದು ಇದನ್ನು ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಇಂದಿಗೂ ಕರೆಯಲಾಗುತ್ತದೆ.

kv10

ಈ ದೇವಾಲಯದಿಂದ ಸ್ವಲ್ಪ ದೂರ ಬಂದರೆ, ಈ ಕೋಟೆಯಲ್ಲಿ ಇದ್ದಿದ್ದ ಅರಮನೆಯ ಕುರುಹಾಗಿ ವಿಶಾಲವಾದ ಅಡಿಪಾಯವನ್ನು ಕಾಣಬಹುದಾಗಿದೆ. ಪುರಾತತ್ವ ಇಲಾಖೆಯವರು ನಡೆಸಿದ ಇತ್ತೀಚಿನ ಉತ್ಖನನದಿಂದ, ಇಲ್ಲಿ ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು, ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ, ಅಡಿಗೆ ಕೋಣೆ ಮತ್ತು ಅಂದಿನ ಕಾಲದಲ್ಲಿಯೇ ಕಲ್ಲಿನ ಐದು ಕಡೆ ಜ್ವಾಲೆಗಳನ್ನು ಹೊರಸೂಸಿ ಉರಿಯುವ ಒಲೆ, ಉತ್ತಮವಾದ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದ್ದ ಕಲ್ಲಿನ ಸ್ನಾನದ ಕೋಣೆ, ಅದಲ್ಲದೇ ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟವನ್ನು ಇಲ್ಲಿ ಕಾಣಬಹುದಾಗಿದೆ. . ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಈ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಬಹುತೇಕವಾಗಿ ಪಾಳುಬಿದ್ದಿರುವ ಈ ಅರಮನೆಯ ಸೂರೆಲ್ಲಾ ಕುಸಿದು ಹೋಗಿದ್ದು, ಆಕಾಶವೇ ಛಾವಣಿಯಾಗಿದೆ. ಇಲ್ಲಿನ ಪಾಳು ಬಿದ್ದಿರುವ ಅನೇಕ ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಸುಂದರ ನೋಟವನ್ನು ಇಲ್ಲಿಂದ ನೋಡುವುದನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಹೆಚ್ಚು ಆಪ್ಯಾಯಮಾನವೆನಿಸುತ್ತದೆ.

kv17

ಕವಲೇದುರ್ಗದಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಇಲ್ಲಿರುವ ಏಳು ಕೆರೆಗಳು. ಬಹುಶಃ ಕೆಳದಿಯ ಅರಸರು ಆರಾಧಿಸುತ್ತಿದ್ದ ಏಳು ಹೆಡೆಯ ನಾಗದೇವರಿಂದಲೋ ಏನೂ ಅವರಿಗೆ ಏಳರ ಮೇಲೆ ವಿಶೇಷ ಮಮಕಾರದಿಂದಲೇ ಇಲ್ಲಿ ಏಳು ಕೆರೆಗಳನ್ನು ಕಟ್ಟಿಸಿದ್ದಾರೆ. ಈ ಎಲ್ಲಾ ಕೆರೆಗಳಲ್ಲಿ ಅತ್ಯಂತ ಹಿತಾನುಭವ ನೀಡುವುದು ತಿಮ್ಮಣ್ಣನಾಯಕರ ಕೆರೆ ಎಂದರೆ ತಪ್ಪಾಗಲಾರದು. ಸುಮಾರು ಹದಿನೆಂಟು ಎಕರೆ ವಿಸ್ತೀರ್ಣದ ಈ ಕೆರೆ, ಹಕ್ಕಿಗಳ ಚಿಲಿಪಿಲಿ ಕಲರವದಿಂದ, ಮೀನುಗಳ ಮುಳುಗಾಟದಿಂದ, ಆ ಮೀನುಗಳನ್ನು ಹಿಡಿಯಲು ಬರುವ ಕೊಕ್ಕರೆಗಳ ಹಿಂಡಿನಿಂದ ಎಲ್ಲರ ಗಮನವನ್ನು ಸೆಳೆಯುತ್ತದೆ. ಕೆರೆಯ ಏರಿಯ ಮೇಲೆ ನಡೆದಾಡುವಾಗ ಕೆರೆಯಿಂದ ಬೀಸುವ ತಣ್ಣನೆಯ ಗಾಳಿ ಮತ್ತು ನೀರಿನಲ್ಲಿರುವ ಜಲಚರಗಳ ಧನಿ ಮೈ ಮನಗಳಿಗೆ ಮುದವನ್ನು ನೀಡುತ್ತದೆ.

kv8

ಅತ್ಯಂತ ನೈಸರ್ಗಿಕವಾಗಿ ತಗ್ಗುಪ್ರದೇಶಗಳಲ್ಲಿ ಈ ಕೆರೆಗಳನ್ನು ನಿರ್ಮಿಸಿರುವುದಲ್ಲದೇ, ಎತ್ತರದ ಪ್ರದೇಶಗಳಿಂದ ಮಳೆಯ ನೀರು ಸುಲಭವಾಗಿ ಈ ಕೆರೆಗೆ ಹರಿಯುವಂತೆ ಅಂದಿನ ಕಾಲದಲ್ಲಿಯೇ ಮಳೆ ನೀರು ಕೋಯ್ಲು ಪದ್ದತಿಯನ್ನು ಇಲ್ಲಿ ಅಳವಡಿಸಿಕೊಂಡಿರುವುದು ವಿಶೇಷವಾಗಿದೆಯಲ್ಲದೇ, ಎತ್ತರದ ಪ್ರದೇಶಗಳಲ್ಲಿ ನೀರಿನ ಇಂಗು ಗುಂಡಿಗಳನ್ನು ತೋಡಿರುವ ಮೂಲಕ ಅಲ್ಲಿ ಬಿದ್ದ ಮಳೆಯ ನೀರು ಅಲ್ಲಿಯೇ ಭೂಮಿಯೊಳಗೆ ಹೋಗುವ ಕಾರಣ ವರ್ಷವಿಡೀ ಇಲ್ಲಿನ ಕೆರೆಗಳ ನೀರು ಬತ್ತದಿರುವುದು ಗಮನಾರ್ಹವಾಗಿದೆ.

kv11

ಇದೇ ಕೋಟೆಯಲ್ಲಿ ಶೃಂಗೇರಿಯ ಶಾಖಾಮಠವಲ್ಲದೇ, ಕೆಳದಿ ಅರಸರೇ ನಿರ್ಮಿಸಿದ ವೀರಶೈವ ಮಠವೂ ಇಲ್ಲಿದೆ. ಮಠದಿಂದ ಸುಮಾರು ಒಂದು ಕಿ.ಮೀ. ಮುಂದೆ ಎತ್ತರವಾಗಿ ಏರಿದರೆ ಕೋಟೆಯ ಮುಖ್ಯದ್ವಾರ ಸಿಗುತ್ತದೆ. ಮಹಾದ್ವಾರ ಪ್ರವೇಶಿಸುತ್ತಿದ್ದಂತೆಯೇ ಚಿತ್ರದುರ್ಗದ ಮಾದರಿಯಲ್ಲಿಯೇ ಸುಮಾರು 50-60 ಅಡಿ ಎತ್ತರದ ಗೋಡೆಗಳನ್ನು ನೋಡಬಹುದು. ಈ ಗೋಡೆಯ ಮೇಲೆ ಅಂದಿನ ಕಾಲದ ಚಿತ್ರಕಲೆಯನ್ನು ಕಾಣಬಹುದಾಗಿದೆ. ಹಿಂದಿನ ದ್ವಾರದಲ್ಲಿದ್ದಂತೆಯೇ ಇಲ್ಲಿಯೂ ಸಹಾ ಕಾವಲುಗಾರರು ಉಳಿದುಕೊಳ್ಳಲು ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಈ ಎರಡನೇ ಮಹಾದ್ವಾರದಲ್ಲೂ ಕಾಣಬಹುದಾಗಿದೆ. ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳ ಮತ್ತು ಅದಕ್ಕೆ ಅಂಟಿಕೊಂಡೇ ಇರುವ ಸುಮಾರು 6 ಅಡಿ ಎತ್ತರದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ಇಲ್ಲಿ ಕಾಣಬಹುದಾಗಿದೆ.

kv16

ಮೂರನೇ ಮಹಾದ್ವಾರದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ. ಇಲ್ಲೊಂದು ದೊಡ್ಡದಾದ ಸುರಂಗ ಮಾರ್ಗವಿದ್ದು ಶತ್ರುಗಳ ಆಕ್ರಮಣ ಅಥವಾ ಯಾವುದೇ ವಿಪತ್ತಿನ ಪರಿಸ್ಥಿತಿಯಲ್ಲಿ ಇಲ್ಲಿಂದ ಸುಮಾರು ನಾಲ್ಕೈದು ಕಿಮೀ ದೂರದ ಸುರಕ್ಷಿತ ಪ್ರದೇಶಕ್ಕೆ ತಪ್ಪಿಸಿಕೊಂಡು ಹೋಗಬಹುದಾದ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಈಗ ಆ ಸುರಂಗದೊಳಗೆ ದೊಡ್ಡ ದೊಡ್ಡ ಬಾವಲಿಗಳು ತುಂಬಿಕೊಂಡಿರುವ ಕಾರಣ ಅಪಾಯಕಾರಿಯಾಗಿದ್ದು ಅದರೊಳಗೆ ಹೋಗುವುದನ್ನು ನಿಷೇಥಿಸಲಾಗಿದೆ.

ಈ ದಟ್ಟ ಅರಣ್ಯದ ನಡುವೆ ನಿರ್ಮಿಸಲಾಗಿದ್ದ ಆನೆಯ ಲಾಯದ ಕುರುಹು. ಬಹುಶಃ ಆನೆಗಳಿಗೆ ನೀರುಣಿಸಲು ಬೋಗುಣಿಯ ರೂಪದಲ್ಲಿರುವ ದೊಡ್ಡ ದೊಡ್ಡದಾದ ನೀರಿನ ತೊಟ್ಟಿಗಳು ನೋಡಲು ನಯನ ಮನೋಹರವಾಗಿದೆ. ಕವಲೇದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಇದನ್ನು ಕಸದ ತೊಟ್ಟಿಯ ರೂಪದಲ್ಲಿ ಕಸಗಳನ್ನು ಹಾಕಿ ಹಾಳುಮಾಡುತ್ತಿರುವುದು ನಿಜಕ್ಕೂ ಶೋಚನೀಯವೆನಿಸುತ್ತದೆ.

kv6

ಸಂಪೂರ್ಣ ಹಸಿರಿನಿಂದ ಆವೃತವಾಗಿರುವ ಈ ಕವಲೆದುರ್ಗದ ಕೋಟೆ ಎಷ್ಟು ಪ್ರಶಾಂತವಾಗಿರುತ್ತದೆಂದರೆ, ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಅದರ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ ಇಲ್ಲಿಯದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ವಿಹಂಗಮ ನೋಟವನ್ನು ಸವಿಯಲು ಬರುವವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣ ಇಲ್ಲಿನ ಪ್ರಶಾಂತತೆಗೆ ಭಂಗವುಂಟಾಗಿದೆಯಲ್ಲದೇ, ಪ್ರವಾಸಿಗರು ತರುವ ಊಟ, ತಿಂಡಿ ಮತ್ತು ನೀರಿನ ಬಾಟೆಲಿ ಮತ್ತು ಮದ್ಯದ ಬಾಟಲುಗಳ ತ್ರಾಜ್ಯಗಳು ಎಲ್ಲೆಂದರಲ್ಲಿ ಬಿಸಾಡಿರುವ ಕಾರಣ ಪರಿಸರವೆಲ್ಲಾ ಹಾಳಾಗುತ್ತಿದ್ದು, ಇಲ್ಲಿನ ಸ್ವಚ್ಚತೆಯತ್ತ ಸ್ಥಳೀಯ ಆಡಳಿತ ಮಂಡಳಿ ಸ್ವಲ್ಪ ಗಮನ ಹರಿಸಬೇಕಾಗಿದೆ.

ವರ್ಷವಿಡೀ ಇಲ್ಲಿ ಒಂದಲ್ಲಾ ಒಂದು ಸಿನಿಮಾದ ಚಿತ್ರೀಕರಣ ಇಲ್ಲಿ ನಡೆಯುತ್ತಿರುತ್ತಲೇ ಇರುತ್ತದೆ. ನಾವೆಲ್ಲಾ ಬಾಲ್ಯದಲ್ಲಿ ನೋಡಿದ ಅರ್ಜುನ್ ಸರ್ಜಾ ಅಭಿನಯಯದ ಮಕ್ಕಳ ಚಿತ್ರ ಸಿಂಹದಮರಿ ಸೈನ್ಯ ಚಿತ್ರೀಕರಣ ನಡೆದದ್ದೂ ಇದೇ ಕವಲೆದುರ್ಗದಲ್ಲಿಯೇ.

ಇವೆಲ್ಲವನ್ನೂ ಬದಿಗಿಟ್ಟು ಸುಂದರ ಪ್ರಕೃತಿಯತಾಣವನ್ನು ಸವಿಯಲು ಬಯಸುವವರು ಮತ್ತು ದೇಹದಲ್ಲಿ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿಯಲು ಕಸುವಿದ್ದವರು ನಿಜಕ್ಕೂ ಐತಿಹಾಸಿಕವಾಗಿಯೂ ಮತ್ತು ಪ್ರಕೃತಿಯ ರಮ್ಯತಾಣವನ್ನು ಆಹ್ವಾದಿಸಲು ಹೇಳಿ ಮಾಡಿದಂತಹ ಈ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಇಡೀ ಕವಲೇದುರ್ಗವನ್ನು ಸುತ್ತಾಡಲು ಸುಮಾರು ಏಳೆಂಟು ಗಂಟೆಗಳು ಬೇಕಾಗುವ ಕಾರಣ ಬೆಳ್ಳಂಬೆಳಿಗ್ಗೆಯೇ, ಬಿಸಿಲು ಏರುವುದಕ್ಕೆ ಮುಂಚೆಯೇ ಇಲ್ಲಿಗೆ ತಿಂಡಿ ತಿನಿಸು ಮತ್ತು ಕುಡಿಯುವ ನೀರಿನೊಂದಿಗೆ ಬರುವುದು ಉತ್ತಮವಾಗಿದೆ.

ಇನ್ನೇಕ ತಡಾ ಸಮಯ ಮಾಡಿಕೊಂಡು ಈ ಕವಲೇ ದುರ್ಗಕ್ಕೆ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರಲ್ವಾ?

ಏನಂತೀರೀ?

ನಿಮ್ಮವನೇ ಉಮಾಸುತ

ಈ ಲೇಖನಕ್ಕೆ ಸುಂದರವಾದ ಚಿತ್ರಗಳನ್ನು ಒದಗಿಸಿದ ಆತ್ಮೀಯರಾದ ಶ್ರೀಯುತ ಜಯಸಿಂಹ ಅವರಿಗೆ ಹೃತ್ಪೂರ್ವಕ ವಂದನೆಗಳು

ಕುಂಭಲ್ ಘಡ್ ಭಾರತದ ಮಹಾ ಗೋಡೆ

k1

ವಿಶ್ವದ ಅತಿ ಉದ್ದದ ಗೋಡೆ ಎಂದ ತಕ್ಷಣ ಥಟ್ ಅಂತಾ ನೆನಪಾಗೋದೇ, ಚೀನಾ ದೇಶದ ಮಹಾಗೋಡೆ. ಆದರೇ, ಅದೇ ರೀತಿಯಲ್ಲಿರುವ ಮತ್ತೊಂದು ಮಹಾನ್ ಗೋಡೆ ಚೀನಾ ಗೋಡೆಗಿಂತಲೂ ಕಡಿಮೆ ಸಮಯದಲ್ಲಿ ನಿರ್ಮಾಣವಾದ, ಇಂದಿಗೂ ಅತ್ಯಂತ ಗಟ್ಟಿ ಮುಟ್ಟಾಗಿ, ವೈಭವೋಪೇತವಾಗಿ ಮತ್ತು ವಾಸ್ತು ಶಿಲ್ಪದಲ್ಲಿ ಚೀನಾ ಗೋಡೆಗೂ ಸಡ್ಡು ಹೊಡೆಯಬಲ್ಲಂತಹ ಮತ್ತೊಂದು ಉದ್ದನೆಯ ಗೋಡೆ ನಮ್ಮ ದೇಶದಲ್ಲಿ ಎನ್ನುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ.

k2

ಹೇಳೀ ಕೇಳಿ ರಾಜಸ್ಥಾನ ಮರುಭೂಮಿ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿರುವ, ಹೆಚ್ಚು ಜನಸಂದಣಿ ಇಲ್ಲದ ಕಾರಣ, ಉತ್ತರದಿಂದ ದೆಹಲಿಯ ಸುಲ್ತಾನರ ಆಕ್ರಮಣಕ್ಕೆ ಆಗ್ಗಿಂದ್ದಾಗ್ಗೆ ತುತ್ತಾಗುತ್ತಿದ್ದದ್ದನ್ನು ತಡೆಯಲೆಂದೇ, 15 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಗೋಡೆಯು ರಾಜಸ್ಥಾನದ ಮರುಭೂಮಿಯಲ್ಲಿರುವ ಹದಿಮೂರು ಎತ್ತರದ ಅರಾವಳಿ ಬೆಟ್ಟ- ಕಣಿವೆಗಳ ನಡುವೆ ಭಯ ಹುಟ್ಟಿಸುವ ಕಾಡಿನ ಮಧ್ಯೆ ಹೆಬ್ಬಾವಿನಂತೆ ಮಲಗಿರುವ ಈ ಮಹಾ ಕೋಟೆ ಮೇವಾಡ ರಜಪೂತರ ಸಾಹಸ ಹಾಗೂ ಶೌರ್ಯದ ಕುರುಹಾಗಿ ಇಂದಿಗೂ ನಮ್ಮ ಮುಂದಿದೆ. ಸುಮಾರು 36 ಕಿಮಿ ಉದ್ದದ ಈ ಮಹಾಗೋಡೆಯ ಮಧ್ಯೆ ಮಡಿಕೆಗಳನ್ನು ಜೋಡಿಸಿಟ್ಟಿರುವಂತೆ ಕಾಣುವುದರಿಂದ ಇದನ್ನು ಕುಂಭಳಘಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮೂರು ಪ್ರಕಾರಗಳ ಕೋಟೆಗಳನ್ನು ಭಾರತಾದ್ಯಂತ ಕಾಣ ಬಹುದಾಗಿದೆ. ಆ ಮೂರೂ ಪ್ರಕಾರಗಳಾದ ವನದುರ್ಗ, ಗಿರಿದುರ್ಗ ಹಾಗೂ ನೆಲದುರ್ಗದ ಮೂರು ಪ್ರಕಾರಗಳನ್ನೂ ಈ ಕುಂಭಲ್ಘಡಲ್ಲಿಯೇ ನೋಡಬಹುದಾಗಿರುವುದು ಗಮನಾರ್ಹವಾಗಿದೆ.

k4

14ನೇ ಶತಮಾನದ ಅಂತ್ಯದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಉತ್ತರದಿಂದ ದಕ್ಷಿಣದ ಕಡೆ ದಾಳಿ ನಡೆಸಿಕೊಂಡು ಬರುವಾಗ, ರಾಜಸ್ಥಾನದ ಬಹುತೇಕ ಭಾಗವನ್ನು ಆಕ್ರಮಿಸಿ ಮೇವಾಡ್ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದದ್ದು ಒಂದು ಕಡೆಯಾದರೆ, ಗುಜರಾತಿನ ಅರಸರು ಸಹಾ ಅಗ್ಗಿಂದ್ದಾಗೆ ಮೇವಾಡದೊಂದಿಗೆ ಕಾಲು ಕೆರೆದುಕೊಂಡು ಯುದ್ದಕ್ಕೆ ಬರುತ್ತಿದ್ದರು. ಇವರಿಬ್ಬರನ್ನೂ ಎದುರಿಸಬೇಕೆಂದರೆ, ಗಡಿ ಭಾಗದಲ್ಲಿ ಒಂದು ಬಲಿಷ್ಠ ಕೋಟೆಯ ಅವಶ್ಯಕತೆ ಇದ್ದದ್ದನು ಮನಗಂಡ ಮಹಾರಾಜ ರಾಣ ಕುಂಭ ಈ ಧಾಳಿಯಿಂದ ಮೇವಾಡವನ್ನು ರಕ್ಷಿಸುವ ಸಲುವಾಗಿ ಒಂದು ಉದ್ದನೆಯ ಗೋಡೆಯನ್ನು ನಿರ್ಮಿಸಿ, ಯಾವುದೇ ರಜಪೂತ ರಾಜರು ತಮ್ಮ ಅರಮನೆಗಳು ಅಸುರಕ್ಷಿತ ಎಂದು ಭಾವಿಸಿದಲ್ಲಿ ಈ ಬೃಹತ್ ಗೋಡೆಯೊಂದಿಗಿರುವ ಕೋಟೆಗಳಲ್ಲಿ ಆಶ್ರಯ ಪಡೆಯಬಹುದೆಂಬ ಕಲ್ಪನೆಯೊಂದಿಗೆ ಮೇವಾಡ್ ಪ್ರದೇಶವನ್ನು ಮಾರ್ವಾಡ್ ನಿಂದ ಬೇರ್ಪಡಿಸಲು ಈ ಬೃಹತ್ ಗೋಡೆಯನ್ನು ಸಹ ನಿರ್ಮಿಸಿ ಶತ್ರುಗಳಿಂದ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡಿದ್ದಲ್ಲದೇ, ಈ ಪ್ರದೇಶಕ್ಕೆ ಸಮೃದ್ಧಿ ಮತ್ತು ಪ್ರಗತಿಯನ್ನು ತಂದುಕೊಟ್ಟರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹವಾದ ಅಂಶವೆಂದರೆ, ಚೀನಾ ಮಹಾ ಗೋಡೆಯನ್ನು ಕಟ್ಟಲು ಸುಮಾರು 1,800 ವರ್ಷಗಳಷ್ಟು ಸಮಯ ತೆಗೆದುಕೊಂಡರೆ, ಕುಂಭಳ್ ಘಡ್ ಮಹಾ ಗೋಡೆಯನ್ನು ಕೇವಲ 15 ವರ್ಷಗಳಲ್ಲಿ ಕಟ್ಟಿ ಮುಗಿಸಲಾಯಿತು ಎಂದರೆ ನಮ್ಮವರ ವೃತ್ತಿಪರತೆಯನ್ನು ಎತ್ತಿ ಹಿಡಿಯುತ್ತದೆ.

k3

ಈ ಕೋಟೆ ಕಟ್ಟಿದ್ದರ ಹಿಂದಿರುವ ಕತೆಯೇ ರೋಚಕ ಮತ್ತು ಹೃದಯವಿದ್ರಾವಕವಾಗಿದೆ. ಈ ಮೊದಲು ರಾಣಾ ಕುಂಭಾ ಅವರು ಈ ಕೋಟೆಯನ್ನು ಇಲ್ಲಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಕೆಲಿವಾಡದಲ್ಲಿ ಕೋಟೆಯನ್ನು ನಿರ್ಮಿಸಲು ಬಯಸಿ ಅಲ್ಲಿ ಕೋಟೆಯನ್ನು ಕಟ್ಟಲು ಅನೇಕ ಬಾರೀ ಪ್ರಯತ್ನಿದರೂ, ಒಂದಲ್ಲಾ ಒಂದು ಕಾರಣಕ್ಕೆ ಕೋಟೆ ಮಧ್ಯದಲ್ಲಿ ಕುಸಿಯುತ್ತಿದ್ದನ್ನು ಕಂಡು ವಿಚಲಿತರಾಗಿ ಇದಕ್ಕೊಂದು ಪರಿಹಾರವನ್ನು ಸೂಚಿಸುವಂತೆ ತಮ್ಮ ಗುರುಗಳಲ್ಲಿ ಕೇಳಿಕೊಳ್ಳುತ್ತಾರೆ. ಸಂತರು ಆ ಪ್ರದೇಶಕ್ಕೆ ಬಂದು ಕೂಲಂಕುಶವಾಗಿ ಪರಿಶೀಲಿಸಿ, ಈ ಕೋಟೆಯು ನಿರ್ವಿಘ್ನವಾಗಿ ನಿರ್ಮಾಣವಾಗಲೂ ಒಂದು ನರಬಲಿಯ ಅಗತ್ಯವಿದೆ ಎಂದು ಸೂಚಿಸುತ್ತಾರೆ. ಆ ರೀತಿಯಾಗಿ ನರಬಲಿಯಾಗಲು ಯಾರೂ ಸಹಾ ಸ್ವಯಂಪ್ರೇರಿತವಾಗಿ ಮುಂದಾಗದಿದ್ದಾಗ, ಸಂತರು ಇರುವುದೇ ಲೋಕ ಕಲ್ಯಾಣಕ್ಕಾಗಿ ಎಂದು ಹೇಳಿ ಇಂತಹ ಮಹತ್ಕಾರ್ಯದಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಳ್ಳುವುದಾಗಿ ಹೇಳಿ, ನಾನು ಬೆಟ್ಟವನ್ನು ಏರಿ ಮೊದಲು ನಿಲ್ಲುವ ಸ್ಥಳದಲ್ಲಿ ಕೋಟೆಯ ಮುಖ್ಯ ದ್ವಾರವನ್ನು ನಿರ್ಮಿಸಬೇಕು. ನಂತರ ಅಲ್ಲಿಂದ ಮುಂದೆ ಹೋಗಿ ಎರಡನೇ ನಿಂತು ದೇಹ ತ್ಯಾಗ ಮಾಡಿದ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಬೇಕು. ನನ್ನ ದೇಹ ಬಿದ್ದ ಜಾಗವು ಈ ದೊಡ್ಡ ಗೋಡೆಯ ಕೊನೆಯ ಹಂತವಾಗಿರುತ್ತದೆ ಎಂದು ತಿಳಿಸಿದರು. ಮಹಾರಾಜರು ಒಲ್ಲದ ಮನಸ್ಸಿನೊಂದಿಗೆ ಸಂತರು ಹೇಳಿದಂತೆಯೇ ಸಂತರನ್ನು ಹಿಂಬಾಲಿಸಿ ಆ ಎಲ್ಲಾ ಪ್ರದೇಶಗಳನ್ನು ಗುರುತು ಮಾಡಿಕೊಂಡು ಸಂತರ ಆಜ್ಞೆಯಂತೆಯೇ ಕೋಟೆಯನ್ನು ನಿರ್ವಿಘ್ನವಾಗಿ ಕಟ್ಟಿ ಲೋಕಾರ್ಪಣೆ ಮಾಡುತ್ತಾರೆ ಎನ್ನುತ್ತದೆ ಇತಿಹಾಸದ ಪುಟಗಳು.

ರಾಣ ಕುಂಭರ ಆಸ್ಥಾನದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿಗಳು, ಸಿದ್ಧಾಂತಿಗಳು ಮತ್ತು ಲೇಖಕರಲ್ಲಿ ಒಬ್ಬರಾಗಿದ್ದ ಮಂದನ್ ಎನ್ನುವರು ಸಮುದ್ರ ಮಟ್ಟದಿಂದ ಸುಮಾರು 3,600 ಅಡಿ ಎತ್ತರದ ಬೆಟ್ಟದ ಮೇಲೆ ಸುಂದರವಾಗಿ ವಿನ್ಯಾಸಗೊಳಿಸಿರುವ ಈ ಕೋಟೆಯ ಮುಖ್ಯ ಗೋಡೆಯು, ಹಾವಿನಂತೆ ಅಂಕುಡೊಂಕಾಗಿದ್ದು ಅದನ್ನು ಏರುತ್ತಾ ಹೋದರೆ, ಮೋಡಗಳನ್ನೇ ನೇರವಾಗಿ ತಲುಪುವಂತೆ ಭಾಸವಾಗುವಂತಿದೆ. . ಈ ಕೋಟೆಯಲ್ಲಿ 15 ಅಡಿ ದಪ್ಪದ ಮುಂಭಾಗದ ಗೋಡೆಗಳಿದ್ದು, ಕೋಟೆಯನ್ನು ಪ್ರವೇಶಿಸುತ್ತಿದ್ದಂತೆಯೇ ಗಟ್ಟಿಮುಟ್ಟಾದ ಬುರುಜುಗಳು ರಜಪೂತ ಪ್ರಾಬಲ್ಯವನ್ನು ಎತ್ತಿ ತೋರುವುದಲ್ಲದೇ, ಬೆಟ್ಟದ ತುದಿಗೆ ಹೋಗುವ ಕೋಟೆಯ ಅಂಕು ಡೊಂಕಿನ ರಸ್ತೆಗಳು ಸುಮಾರು ನಾಲ್ಕು ಕುದುರೆ ಸವಾರರು ಒಟ್ಟಿಗೆ ಪ್ರಯಾಣ ಮಾಡಬಹುದಾದಷ್ಟು ವಿಸ್ತಾರವಾಗಿದ್ದು ಏರಿಳಿತ ಮತ್ತು ಅನೇಕ ತೀಕ್ಷ್ಣವಾದ ತಿರುವುಗಳಿಂದ ಕೂಡಿವೆ. ಈ ರಸ್ತೆಯ ಏರಿಳಿತ ಮತ್ತು ತಿರುವುಗಳಿಂದಾಗಿ ಶತ್ರು ಸೈನ್ಯದ ಆನೆಗಳು ಮತ್ತು ಕುದುರೆಗಳು ಆ ಪ್ರದೇಶದಲ್ಲಿ ವೇಗವಾಗಿ ಮತ್ತು ಸರಾಗವಾಗಿ ಹೋಗ ಬಾರದೆಂಬ ಉದ್ದೇಶದಿಂದಾಗಿಯೇ ಹಾಗೆ ನಿರ್ಮಾಣ ಮಾಡಲಾಗಿದೆ. ಅದೂ ಅಲ್ಲದೇ ಶತ್ರುಗಳ ಅರಿವಿಗೇ ಬಾರದಂತೇ ಅನೇಕ ಸ್ಥಳಗಳಲ್ಲಿ ಬುದ್ಧಿವಂತ ಬಲೆಗಳನ್ನು ಸಹಾ ನಿರ್ಮಿಸಿರುವುದು ಈ ಕೋಟೆಯ ವಿಸ್ಮಯಗಳಲ್ಲಿ ಒಂದಾಗಿದೆ. ಈ ಕೋಟೆಗೆ ಒಟ್ಟು ಮುಖ್ಯದ್ವಾರಗಳಿದ್ದು ಹಾತಿ ಪೋಲ್, ಹನುಮಾನ್ ಪೋಲ್ ಮತ್ತು ರಾಮ್ ಪೋಲ್ ಪ್ರಮುಖ ದ್ವಾರಗಳಾಗಿವೆ. ಸ್ಥಳೀಯ ಆಡು ಭಾಷೆಯಲ್ಲಿ ‘ಪೋಲ್’ ಎಂದರೆ ಮುಖ್ಯ ದ್ವಾರ ಎಂದರ್ಥವಿದೆ.

ಇನ್ನು ಸುರಕ್ಷತೆಯ ಭಾಗವಾಗಿ, ಕೋಟೆಯ ಗೋಡೆಗಳ ಮಧ್ಯೆ ಎರಡು ಕಡೆ ಚಿಕ್ಕ ಬಾಗಿಲುಗಳಿದ್ದು, ಇದು ಅಪಾಯದ ಸಮಯದಲ್ಲಿ ಜನರ ಅವಶ್ಯಕತೆ ಪೂರೈಸುವುದಕ್ಕಾಗಿ (ನಮ್ಮ ಚಿತ್ರದುರ್ಗದ ಒನಕೆ ಒಬ್ಬವ್ವನ ಕಿಂಡಿಯಂತೆ) ಬಳಸಲಾಗುತ್ತಿತ್ತು. ಜೊತೆಗೆ ಶತೃಗಳ ಆಕ್ರಮಣದ ಕಾಲದಲ್ಲಿ ಅಥವಾ ಕ್ಲಿಷ್ಟಕರ ಸಮಯದಲ್ಲಿ ಅರಸರು ತಪ್ಪಿಸಿಕೊಳ್ಳೋದಕ್ಕಾಗಿಯೇ, ಕೋಟೆಯೊಳಗೆ ಸರಿ ಸುಮಾರು 5 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗವಿದ್ದು ಅದರ ಮೂಲಕ ಅರಸರುಗಳು ಸುರಕ್ಷಿತವಾಗಿ ತಪ್ಪಿಸಿಕೊಳ್ಳಬಹುದಾಗಿರುವುದು ಈ ಕೋಟೆಯ ವಿಶೇಷತೆಗಳಲ್ಲಿ ಒಂದಾಗಿದೆ.

ಶತ್ರುಗಳು ಮೇವಾಡದ ಮೇಲೆ ದಾಳಿ ಮಾಡಿದ ಸಮಯದಲ್ಲಿ ಚಿತ್ತೋರ್ ಘಡ ಮತ್ತು ರಣತಂಬೋರ್ ಗಿಂತ ಈ ಕುಂಭಲ್ಘಡ್ ಹೆಚ್ಚು ಭದ್ರತೆಯನ್ನು ಒದಗಿಸುತ್ತಿದ್ದ ಕಾರಣ, ಈ ಕುಂಭಲ್ ಘಡ್ ಕೋಟೆ ಕೆಲ ಸಮಯ ಮೇವಾಡದ ರಾಜಧಾನಿಯಾಗಿದ್ದ ಕಾರಣ, ಮೇವಾಡದ ಅರಸರು ಅಲ್ಲಿಗೆ ಬಂದು ನೆಲೆಸುತ್ತಿದ್ದರು. ಯುದ್ದದ ಸಮಯದಲ್ಲಿ ಈ ಕೋಟೆಯ ಒಳಗೆ ಅಂದಿನ ರಾಜಸ್ಥಾನದ ಅರ್ಧದಷ್ಟು ಜನ ಬಂದು ಆಶ್ರಯ ಪಡೆದುಕೊಳ್ಳುತ್ತಿದ್ದರು ಎಂದರೆ ಈ ಕೋಟೆಯ ಅಗಾಧತೆ ಎಷ್ಟಿತ್ತು ಎಂಬುದನ್ನು ಉಹಿಸಿಕೊಳ್ಳಬಹುದಾಗಿದೆ.

ಆ ಕಾಲದಲ್ಲಿ ದೆಹಲಿ ಸುಲ್ತಾನರು ಎಷ್ಟೇ ಬಲಶಾಲಿಗಳಾಗಿದ್ದರೂ ಅವರ ಬಳಿ ಫಿರಂಗಿಗಳು ಇಲ್ಲದಿದ್ದರಿಂದ ಈ ಕೋಟೆಯನ್ನು ಗೆಲ್ಲಲು ಅವರಿಂದ ಸಾಧ್ಯವಾಗಿರಲೇ ಇಲ್ಲ ಎಂಬುದು ಗಮನಾರ್ಹವಾದ ಅಂಶವಾಗಿದೆ. ಮಾಳ್ವದ ಅರಸ ರಾಣಕುಂಭ ಆಡಳಿತ ಕಾಲವನ್ನು ಮಾಳ್ವದ ಪಾಲಿನ ಸುವರ್ಣ ಯುಗ ಎಂದೇ ಹೇಳಲಾಗುತ್ತದೆ. ತನ್ನ ಕಾಲಘಟ್ಟದಲ್ಲಿ ರಾಣಾಕುಂಭ ಸುಮಾರು ಎಂಬತ್ತಕ್ಕೂ ಅಧಿಕ ಕೋಟೆಗಳನ್ನು ನವೀಕರಿಸಿದ ಹಾಗೂ ನಿರ್ಮಾಣ ಮಾಡಿದ್ದಲ್ಲದೇ, ಸುಮಾರು 34 ಹೊಸ ಕೋಟೆಗಳನ್ನು ಹೊಸದಾಗಿ ನಿರ್ಮಿಸಿದ ಕೀರ್ತಿಯೂ ರಾಣ ಕುಂಭನದ್ದಾಗಿದೆ. ಅಂದಿನ ಕಾಲದಲ್ಲಿ ರಾಜನ ಪರಾಕ್ರಮವನ್ನು ಆತ ಎಷ್ಟು ಕೋಟೆಗಳ ಮೇಲೆ ಹಿಡಿತ ಸಾಧಿಸಿದ್ದ ಎನ್ನುವುದರ ಮೇಲೆ ಅಳೆಯಲಾಗುತ್ತಿದ್ದರಿಂದ ನಿಸ್ಸಂದೇಹವಾಗಿ ರಾಣಾಕುಂಭ ಮೇವಾಡದ ಪ್ರಭಾವೀ ರಾಜ ಎಂದೇ ಇಂದಿಗೂ ಪ್ರಖ್ಯಾತರಾಗಿದ್ದಾರೆ.

ಭಾರತದ ಇತಿಹಾಸದಲ್ಲಿ ಮೊಘಲರ ಸರಿ ಸಮನಾಗಿ ತನ್ನ ಜೀವನ ಪರ್ಯಂತವೂ ಹೋರಾಡಿದ ರಜಪೂತ ಅರಸರಲ್ಲೇ ಅತ್ಯಂತ ಪ್ರಭಾವಿ, ಶೂರ ಎನಿಸಿಕೊಂಡಿದ್ದ ಮಹಾರಾಣಾ ಪ್ರತಾಪ ಜನ್ಮಸ್ಥಾನವೂ ಇದೇ ಕುಂಬಳ್ ಘಡ ಎನ್ನುವುದು ಈ ಸ್ಥಳದ ಮತ್ತೊಂದು ವಿಶೇಷವಾಗಿದೆ. ದೆಹಲಿಯ ಸುಲ್ತಾನ ಅಕ್ಬರ್ ಸಾಕಷ್ಟು ರಜಪೂತರನ್ನು ಸೋಲಿಸಿದರೂ ಮಹಾರಾಣ ಪ್ರತಾಪ ಮಾತ್ರ ತನ್ನಿಡೀ ಜೀವನದಲ್ಲಿ ಅಕ್ಬರನಿಗೆ ಕೊಂಚವೂ ಸೊಪ್ಪು ಹಾಕದೇ, ತನ್ನ ಜೀವಿತಾವಧಿಯ ಪೂರಾ ಅಕ್ಬರನ ವಿರುದ್ದವೇ ಹೋರಾಟ ಮಾಡಿದ.

ಹಲ್ದಿಘಾಟ್ ಯುದ್ದದಲ್ಲಿ ಅಕ್ಬರ್ ಮಹಾರಾಣನ ವಿರುದ್ಧ ಮೇಲುಗೈ ಸಾಧಿಸಿದರೂ, ರಾಣಾ ಪ್ರತಾಪ್ ಅಕ್ಬರನಿಗೆ ಶರಣಾಗದೇ, ಅಲ್ಲಿಂದ ತಪ್ಪಿಸಿಕೊಂಡು ಇದೇ, ಕುಂಭಳ್ ಘಡದಲ್ಲಿ ಕೆಲ ಕಾಲ ಆಶ್ರಯ ಪಡೆದಿದ್ದರು. ಒಂದು ಹಂತದಲ್ಲಿ ಅಕ್ಬರ್ ಈ ಕೋಟೆಯನ್ನು ಮೋಸದಿಂದ ವಶಪಡಿಸಿಕೊಂಡಾಗ, ಕುಂಭಳ್ ಘಡವನ್ನು ವಿಧಿ ಇಲ್ಲದೇ, ತೊರೆದ ರಾಣಾ ಪ್ರತಾಪ್ ಸ್ವಲ್ಪ ಸಮಯದ ಬಳಿಕ ಅನೇಕ ರಜಪೂತ ರಾಜರುಗಳನ್ನುಒಗ್ಗೂಡಿಸಿ ಮತ್ತೆ ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡದ್ದು ಈಗ ಇತಿಹಾಸ.

k5

ಈ ಕೋಟೆಯಲ್ಲಿ ರಾಣಾ ಕುಂಭ ನಿರ್ಮಿಸಿರುವ ಶಿವನ ದೇಗುಲ ಮತ್ತು ಜೈನ ಮಂದಿರ ವಾಸ್ತುಶಿಲ್ಪದ ಅಗರವಾಗಿದೆ. ಇಪ್ಪತ್ನಾಲ್ಕು ಶಿಲಾ ಕಂಬಗಳಿಂದ ಅತ್ಯಂತ ಸುಂದರವಾಗಿ ಕಟ್ಟಲಾಗಿರುವ ನೀಲಕಂಠ ದೇವಾಲಯದಲ್ಲಿರುವ ಐದು ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಲಿಂಗವನ್ನು ನೋಡಲು ಎರಡು ಕಣ್ಗಳು ಸಾಲದು ಎಂದರೂ ಅತಿಶಯೋಕ್ತಿಯೇನಲ್ಲ. ಈ ದೇವಾಲಯದಲ್ಲಿನ ಶಿಲಾ ಕೆತ್ತನೆಗಳು, ಒಂದನ್ನೊಂದು ಮೀರಿಸುತ್ತವೆ. ಬ್ರಹ್ಮ ವಿಷ್ಣು ಮಹೇಶ್ವರನ ಕೆತ್ತನೆಗಳು ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತವೆ. ಇದರ ಜೊತೆಯಲ್ಲಿಯೇ ಐವತ್ತೆರಡು ಶಿಖರಗಳನ್ನು ಹೊಂದಿರುವ ಜೈನ ಭವನ ಕುಂಭಳ್ ಘಡದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೂ ತಪ್ಪಾಗಲಾರದು. ವಿಸ್ತಾರವಾದ ಅಂಗಳವನ್ನು ಹೊಂದಿರುವ ವಿಶಾಲವಾದ ಮತ್ತು ಅಷ್ಟೇ ಸುಂದರ ಕೆತ್ತನೆಯ ಶಿಲಾ ಕಂಬಗಳಿರುವ ಈ ಜೈನ ಭವನದ ಪ್ರಾಕಾರದ ಒಳಗಿರುವ ಗೋಪುರದಲ್ಲಿರುವ ಹಿಂದೂ ದೇವಾನು ದೇವತೆಗಳ ಕೆತ್ತನೆಗಳು ಮತ್ತು ಈ ಭವನದ ಹೊರ ಭಾಗದಲ್ಲಿ ಕಲ್ಲಿನಲ್ಲಿ ನಿರ್ಮಿಸಲಾಗಿರುವ ಪರದೆ ಈ ಭವನದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

k1

ರಾಜಾಸ್ಥಾನದ ಸರೋವರಗಳ ನಗರ ಉದಯಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕುಂಭಲ್ ಘಡ್ ರಸ್ತೆಯ ಮುಖಾಂತರ ಸುಮಾರು 2-3 ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾಗಿದೆ. ಉದಯಪುರದಿಂದ ಒಂದು ದಿನದ ಪ್ರವಾಸಕ್ಕೆ ಕುಂಭಳ್ ಘಡ್ ಉತ್ತಮ ಆಯ್ಕೆಯಾಗಿದೆ. ಉದಯಪುರದಿಂದ ಕುಂಭಳ್ ಘಡ್ ಕೋಟೆಯ ಕೆಲ್ವಾರ ಗ್ರಾಮಕ್ಕೆ ಸಾಕಷ್ಟು ಬಸ್ಸುಗಳು ಲಭ್ಯವಿದ್ದು ಸುಮಾರು 100/- ರೂಗಳ ವೆಚ್ಚದಲ್ಲಿ ಮೂರು ಗಂಟೆಗಳಲ್ಲಿ ತಲುಪಬಹುದಾಗಿದೆ. ಇದಲ್ಲದೇ ಸ್ಥಳೀಯ ಟ್ರಾವೆಲ್ಸ್ ಗಳ ಮುಖಾಂತರ ಅನುಕೂಲಕ್ಕೆ ತಕ್ಕಂತೆ ಕಾರು ಇಲ್ಲವೇ ಮಿನಿ ವ್ಯಾನ್ ಗಳನ್ನು ಬಾಡಿಗೆ ತೆಗೆದುಕೊಂಡು ಸಹಾ ಈ ಕುಂಭಳ್ ಘಡ್ ನೋಡಿಕೊಂಡು ಬರಬಹುದಾಗಿದೆ.

ಇಷ್ಟೆಲ್ಲಾ ಸವಿವರವಾಗಿ ತಿಳಿಸಿದ ಮೇಲೆ ಇನ್ನೇಕ ತಡಾ ಸಮಯ ಮಾಡಿಕೊಂಡು ಪ್ರತ್ಯಕ್ಷವಾಗಿ ನೋಡಿದರೂ ಪ್ರಾಮಾಣಿಸಿನೋಡು ಎನ್ನುವಂತೆ ಕುಂಭಲ್ ಘಡ್ ಕೋಟೆಗೆ ಹೋಗಿ ಇಲ್ಲಿ ಓದಿದ್ದೆಲ್ಲವನ್ನೂ ಕಣ್ಗುಂಬಿಸಿಕೊಳ್ತೀರಿ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ