ಹೃದಯ ಶ್ರೀಮಂತಿಕೆ

bus2

ದಿನವಿಡೀ ಕಛೇರಿಯಲ್ಲಿ ಕೆಲಸ ಮಾಡಿದ ನಂತರ ಸುಸ್ತಾಗಿ ಸಂಜೆ ಮನೆಗೆ ಹೋಗಬೇಕೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ವಿಪರೀತ ಜನಸಂದಣಿಯಿಂದಾಗಿ ಒಂದೆರಡು ಬಸ್ಸುಗಳು ನಮ್ಮ ನಿಲ್ದಾಣದಲ್ಲಿ ನಿಲ್ಲಿಸದೇ ಹಾಗೇ ಹೊರಟು ಹೋದವು. ಆದಾದ ಕೆಲವು ಸಮಯದ ನಂತರ ಬಂದ ಮೂರನೇ ಬಸ್ಸಿನಲ್ಲಿಯೂ ಸಾಕಷ್ಟು ಜನರಿದ್ದರು. ಅದಾಗಲೇ ಸಾಕಷ್ಟು ಸಮಯವಾಗಿದ್ದರಿಂದ ಮಾತ್ತು ಬಸ್ಸಿಗೆ ಕಾದೂ ಕಾದೂ ಸುಸ್ತಾದ ಪರಿಣಾಮ ವಿಧಿ ಇಲ್ಲದೇ ಹಾಗೂ ಹೀಗೂ ಮಾಡಿಕೊಂಡು ಬಸ್ಸನ್ನೇರಿ ಒಂದು ಕಂಬಕ್ಕೆ ಒರಗಿ ನಿಂತು ಕೊಂಡೆ.

bus3

ಅಲ್ಲಿಂದ ಸ್ವಲ್ಪ ದೂರ ಪ್ರಯಾಣಿಸುತ್ತಲೇ ನಿಲ್ದಾಣವೊಂದರಲ್ಲಿ ಬಸ್ ನಿಂತಾಗ ಅದಾಗಲೇ ಸೀಟಿನಲ್ಲಿ ಆಸೀನರಾಗಿದ್ದ ಪ್ರಯಾಣಿಕರೊಬ್ಬರು ಬಸ್ಸಿನಿಂದ ಇಳಿದಾಗ ಆ ಖಾಲಿ ಸೀಟಿನ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು ಆ ಸೀಟಿನಲ್ಲಿ ಕುಳಿತುಕೊಳ್ಳದೇ ಅವರ ಪಕ್ಕದಲ್ಲೇ ಕಂಬಕ್ಕೆ ಒರಗಿ ನಿಂತಿದ್ದ ನನಗೆ ಕುಳಿತುಕೊಳ್ಳಲು ಹೇಳಿದಾಗ ನನಗೆ ಆಶ್ಚರ್ಯ ಮತ್ತು ಮುಜುಗರವಾಯಿತಾದರೂ, ಬಹುಶಃ ಅವರು ಮುಂದಿನ ನಿಲ್ಡಾಣದಲ್ಲಿ ಇಳಿಯ ಬಹುದಾದ ಕಾರಣ ನನಗೆ ಸೀಟ್ ನೀಡುತ್ತಿದ್ದಾರೆ ಎಂದು ಭಾವಿಸಿ ನಾನು ಆ ಸೀಟಿನಲ್ಲಿ ಕುಳಿತು, ಧನ್ಯತಾ ಭಾವದಿಂದ ಅವರಿಗೆ ಧನ್ಯವಾದಗಳನ್ನು ಹೇಳಿದೆ. ಅದಕ್ಕೆ ಅವರೂ ಸಹಾ ಸಣ್ಣದಾಗಿ ನಗುತ್ತಲೇ, ಪ್ರತಿವಂದಿಸಿ ಮುಂದಿನ ಸೀಟಿನೆಡೆಗೆ ನಿಂತು ಕೊಂಡರು. ನಾನೂ ಉಸ್ಸಪ್ಪಾ ಎಂದು ಉಸಿರು ಬಿಡುತ್ತಾ, ವಾವ್! ಇದೇ ಅಲ್ಲವೇ ನಮ್ಮ ಸಂಸ್ಕೃತಿ. ಈಗಿನ ಕಾಲದಲ್ಲೂ ಇಂತಹವರು ಇರೋದರಿಂದಲೇ ಈ ದೇಶದಲ್ಲಿ ಇನ್ನೂ ಚೆನ್ನಾಗಿ ಮಳೆ ಬೆಳೆ ಆಗ್ತಾ ಇರೋದು ಎಂದು ಮನಸ್ಸಿನಲ್ಲೇ ಯೋಚಿಸತೊಡಗಿದೆ.

bus1

ಮುಂದಿನ ನಿಲ್ದಾಣದಲ್ಲಿಯೂ ಸಹಾ ಅವರು ನಿಂತಿದ್ದ ಸೀಟಿನ ಪಕ್ಕದ ವ್ಯಕ್ತಿಯೊಬ್ಬರು ಬಸ್ಸಿನಿಂದ ಇಳಿದಾಗ, ಯಥಾ ಪ್ರಕಾರ ಆ ವ್ಯಕ್ತಿ ಆ ಖಾಲೀ ಸೀಟಿನಲ್ಲಿ ಕೂರದೇ ತಮ್ಮ ಸ್ಥಾನವನ್ನು ಇನ್ನೊಬ್ಬರಿಗೆ ನೀಡಿದರು. ಹೀಗೆ ಇಡೀ ಪ್ರಯಾಣದಲ್ಲಿ ಮೂರ್ನಾಲ್ಕು ಬಾರಿ ಇದೇ ರೀತಿ ಪುನರಾವರ್ತನೆ ಆದಾಗ ನನಗೆ ಬಹಳ ಕುತೂಹಲವೆನಿಸಿ ಆ ವ್ಯಕ್ತಿಯನ್ನು ಸೂಕ್ಶ್ಮವಾಗಿ ಗಮನಿಸಗೊಡಗಿದೆ.

ಆತ ಗರಿಗೆದರಿದ ಕೂದಲುಗಳು, ಮಾಸಿದ ಬಟ್ಟೆ ಧರಿಸಿಕೊಂಡು, ಸಾಧಾರಣವಾದ ಚಪ್ಪಲಿಯನ್ನು ಕಾಲಿಗೆ ಧರಿಸಿರುವ ಸಾಮಾನ್ಯ ಕೆಲಸಗಾರನಂತೆ ಕಾಣುತ್ತಿದ್ದು ಅವರೂ ಸಹಾ ನನ್ನಂತೆಯೇ ಯಾವುದೋ ಕಛೇರಿಯಲ್ಲಿ ಕಷ್ಟು ಪಟ್ಟು ದುಡಿದು ಬರುತ್ತಿರುವವ ಹಾಗೆ ಕಂಡರು. ಬಸ್ ಕೊನೆಯ ನಿಲ್ದಾಣದಲ್ಲಿ ನಿಂತಾಗಾ ನಾವೆಲ್ಲರೂ ಒಟ್ಟಿಗೇ ಇಳಿಯಲೇ ಬೇಕಾದಾಗ, ಕುತೂಹಲ ತಡೆಯಲಾರದೇ, ಆ ವ್ಯಕ್ತಿಯನ್ನು ಮಾತನಾಡಿಸಿಯೇ ಬಿಟ್ಟೆ.

bus5

ನೀವು ಪ್ರತೀ ಬಾರಿಯೂ ನಿಮಗೆ ಸಿಕ್ಕ ಖಾಲಿ ಸೀಟನ್ನು ಮತ್ತೊಬ್ಬರಿಗೆ ಕೊಡುತ್ತಾ ಇದ್ದದ್ದನ್ನು ನಾನು ಸೂಕ್ಷ್ಮವಾಗಿ ಗಮನಿಸಿದೆ. ಆ ರೀತಿಯಾಗಿ ಮಾಡಲು ಕಾರಣವೇನು? ಎಂದು ಕೇಳಿದಾಗ ಅವರ ಉತ್ತರ ನನಗೆ ಆಶ್ಚರ್ಯ ತಂದಿತಲ್ಲದೇ ಮೂಕವಿಸ್ಮಿತನನ್ನಾಗಿ ಮಾಡಿಸಿತು ಎಂದರೂ ಅಚ್ಚರಿಯೇನಲ್ಲ.

ನೋಡೀ ಸ್ವಾಮೀ, ನಾನು ಬಹಳಷ್ಟು ಬಡ ಕುಟುಂಬದಲ್ಲಿ ಜನಿಸಿದ ಕಾರಣ, ಚಿಕ್ಕವಯಸ್ಸಿನಲ್ಲಿ ಹೆಚ್ಚು ಓದಲು ಆಗಲಿಲ್ಲ. ಹಾಗಾಗಿ ನನಗೆ ನಿಮ್ಮಷ್ಟು ವಿದ್ಯಾ ಬುದ್ಧಿ ಇಲ್ಲದ ಕಾರಣ ಸಣ್ಣ ಕಾರ್ಖಾನೆಯೊಂದರೆಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುವಾಗ ನನಗೆ ಯಾರಿಗೂ ಹಣದ ರೂಪದಲ್ಲಿ ಏನನ್ನೂ ಕೊಡಲು ಸಾಧ್ಯವಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು.

bus4

ಆದರೆ, ದಿನವಿಡೀ ದುಡಿದ ನಂತರವೂ ಇನ್ನೂ ಹೆಚ್ಚು ಕಾಲ ನಿಂತು ಕೊಳ್ಳುವ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದೊಮ್ಮೆ ಇದೇ ರೀತಿಯಾಗಿ ಬಸ್ಸಿನಲ್ಲಿ ಸೀಟ್ ಸಿಗದೇ ನಿಂತಿದ್ದಾಗ ಖಾಲಿಯಾದ ಸೀಟನ್ನು ಪಕ್ಕದಲ್ಲಿ ಬಹಳ ಆಯಾಸವಾಗಿ ಕಾಣುತ್ತಿದ್ದಂತಹ ವ್ಯಕ್ತಿಯೊಬ್ಬರಿಗೆ ಬಿಟ್ಟು ಕೊಟ್ಟಾಗ ಅವರು ಧನ್ಯತಾ ಪೂರ್ವಕವಾಗಿ ನನಗೆ ಧನ್ಯವಾದಗಳನ್ನು ಹೇಳಿದಾಗ ಆ ಕ್ಷಣದಲ್ಲಿ ನಾನು ಅವರಿಗೆ ಏನನ್ನೋ ಕೊಟ್ಟೇ ಎನ್ನುವ ತೃಪ್ತಿ ನನ್ನ ಮನದಲ್ಲಿ ಮೊದಲ ಬಾರಿಗೆ ಮೂಡಿದ್ದಲ್ಲದೇ ಮುಖದಲ್ಲಿಯೂ ನನಗೇ ಅರಿವಿಲ್ಲದಂತೆಯೇ ಮಂದಹಾಸ ಮೂಡಿದ್ದಲ್ಲದೇ ನಾನು ಮತ್ತಷ್ಟು ದೂರ ನಿಲ್ಲಬಲ್ಲೆ ಎಂಬ ಆತ್ಮ ಸ್ಥೈರ್ಯವನ್ನು ತಂದು ಕೊಟ್ಟಿತು. ಒಂದೆರಡು ದಿನ ಇದೇ ರೀತಿಯಾಗಿ ಮಾಡಿದಾಗ ನನಗೆ ಮತ್ತಷ್ಟು ಮಗದಷ್ಟು ತೃಪ್ತಿ ಸಿಗಲು ಆರಂಭಿಸಿದಾಗ, ಇದನ್ನೇ ಪ್ರತಿ ದಿನವೂ ಮುಂದುವರೆಸಿಕೊಂಡು ಹೊಗಬೇಕೆಂದು ನಿರ್ಧರಿಸಿ ಸುಮಾರು ವರ್ಷಗಳಿಂದ ಪ್ರತಿ ದಿನವೂ ನಾನು ಈ ಕೆಲಸವನ್ನು ಮಾಡುವ ಮೂಲಕ ಸಾವಿರಾರು ಜನರ ಶುಭಹಾರೈಕೆಗಳನ್ನು ಗಳಿಸಿರುವ ಖುಷಿ ಇದೆ ಎಂದಾಗ ಅವರ ಮುಖದಲ್ಲಿ ಆದ ಬದಲಾವಣೆ ನಿಜಕ್ಕೂ ಅನನ್ಯ ಮತ್ತು ಅವರ್ಣನೀಯ.

ಕೈ ತುಂಬಾ ಹಣ, ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಉಳಿತಾಯ, ಸುಂದರವಾದ ಬಣ್ಣ ಬಣ್ಣ ಬಟ್ಟೆಗಳನ್ನು ಧರಿಸಿ, ದುಬಾರಿಯಾದ ಗ್ಯಾಜೆಟ್‌ಗಳನ್ನು ಧರಿಸಿಕೊಂಡು ಐಷಾರಾಮ್ಯವಾಗಿ ಇರುವವರೋ ಇಲ್ಲವೇ ಹತ್ತು ಹಲವಾರು ಪದವಿಗಳನ್ನು ಪಡೆಯುವ ಮೂಲಕ ಶ್ರೀಮಂತಿಕೆಯಿಂದ ಸಂತೋಷದಿಂದ ಇರಬಹುದು ಎಂದು ಭಾವಿಸುವವರೇ ಹೆಚ್ಚಾಗಿರುವಾಗ, ಪ್ರತಿ ದಿನವೂ ಯಾವುದೇ ಖರ್ಚಿಲ್ಲದೇ ಮತ್ತೊಬ್ಬರನ್ನು ಸಂತೋಷವಾಗಿರಲು ಹೃದಯವೈಶಾಲ್ಯತೆಯಿಂದ ಮಾಡುವ ಈ ಒಂದು ಸಣ್ಣ ಕ್ರಿಯೆಯೇ ನಿಜಕ್ಕೂ ಹೆಚ್ಚಾಗಿ ಶ್ರೀಮಂತಿಕೆಯಾಗಿ ಕಾಣಿಸುತ್ತದೆ ಎಂದೆನಿಸಿದ್ದು ಸುಳ್ಳಲ್ಲ.

ಈ ವ್ಯಕ್ತಿಯ ಈ ರೀತಿಯ ನಿಸ್ವಾರ್ಥ ಸೇವೆ, ತ್ರೇತಾಯುಗದಲ್ಲಿ ರಾಮನಿಗಾಗಿ ಕಾಯುತ್ತಿದ್ದ ಶಬರಿ ತನ್ನ ಎಂಜಿಲು ಹಣ್ಣುಗಳನ್ನು ಕೊಟ್ಟು ರಾಮನ ಹಸಿವನ್ನು ನಿವಾರಿದ್ದಳು.ಬಾಲ್ಯದ ಗೆಳೆಯ ಶ್ರೀಕೃಷ್ಣನ ಬಳಿ ಸಹಾಯ ಕೇಳಿರೆಂದು ಹೆಂಡತಿಯ ಬಲವಂತದಿಂದ ಶಲ್ಯದಲ್ಲಿ ಮೂರು ಹಿಡಿ ಅವಲಕ್ಕಿ ಕಟ್ಟಿಕೊಂಡು ಶ್ರೀಕೃಷ್ಣನ ಮನೆಗೆ ಬಂದು ಅವನ ಆದರಾತಿಥ್ಯಕ್ಕೆ ಮಾರುಹೋಗಿ ಏನನ್ನೂ ಕೇಳದೇ ಹಿಂದಿರುಗಿದ ಕುಚೇಲನನ್ನು ನೆನಪಿಸುವಂತಾಯಿತು.

ಯಾವುದೇ ಪ್ರಶಂಸೆ ಅಥವಾ ಕೃತಜ್ಞತೆಯ ರೂಪದಲ್ಲಿ ಪ್ರತಿ ನಿರೀಕ್ಷೆಯೊಂದಿಗೆ ಮಾಡುವ ಸಹಾಯ ಅಥವಾ ನೀಡುವ ಉಡುಗೊರೆ ಅದು ಸಹಾಯ ಅಥವಾ ಉಡುಗೊರೆ ಎನಿಸಿಕೊಳ್ಳದೇ ಕೊಡು/ತೆಗೆದುಕೋ ಎನ್ನುವ ಶುದ್ಧ ವ್ಯಾಪಾರವಾಗುತ್ತದೆ. ನಮಗೆ ಎಲ್ಲವನ್ನು ಭಗವಂತನೇ ಕೊಟ್ಟಿರುವುದು ಅವನ ಮುಂದೆ ನಮ್ಮದೇನೂ ಇಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದಿರುವೆವು ಸುಮ್ಮನೆ ಎಂಬ ಮಾತು ತಿಳಿದಿದ್ದರೂ, ಇಂದಿನವರು ದೇವಾಲಯದಲ್ಲಿ ಒಂದು ಗಂಟೆಯನ್ನೋ, ಇಲ್ಲವೇ ವಿದ್ಯುತ್ ದೀಪವನ್ನೂ ಇಲ್ಲವೇ ಫ್ಯಾನ್ ಕೊಟ್ಟು ಅದರ ಮೇಲೆ ಅಷ್ಟು ದೊಡ್ಡದಾಗಿ ದಾನಿಗಳು ಎಂದು ಬರೆಸಿಕೊಳ್ಳುತ್ತಾರೆ. ಮದುವೆ ಮುಂಜಿ, ನಾಮಕರಣ, ಹುಟ್ಟಿದ ಹಬ್ಬಗಳಿಗೆ ಹೋಗಿ ಸಣ್ಣದಾದ ಉಡುಗೊರೆಯೊಂದನ್ನು ನೀಡಿ ಹೊಟ್ಟೆ ಬಿರಿಯುವಷ್ಟು ತಿನ್ನುವುದಲ್ಲದೇ, ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಪ್ರತಿ ಉಡುಗೊರೆಯನ್ನಾಗಿ (ರಿಟನ್ ಗಿಫ್ಟ್) ಏನು ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟು ಕೊಳ್ಳುವುದನ್ನು ನೋಡಿದಾಗ ಈ ಕೆಳಗಿನ ಶುಭಾಷಿತ ನೆನಪಾಗುತ್ತದೆ.

ಪರೋಪಕಾರಾಯ ಫಲಂತಿ ವೃಕ್ಷಾ:, ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ:, ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಾಗಿಯೇ ವೃಕ್ಷಗಳು ಫಲವನ್ನು ನೀಡುತ್ತದೆ. ನದಿಗಳು ಹರಿಯುತ್ತವೆ, ಹಸುವು ಹಾಲನ್ನು ಕೊಡುತ್ತದೆ. ಅದರಂತೆ ಪರೋಪಕಾರಕ್ಕಾಗಿಯೇ ನಮ್ಮೀ ಶರೀರವಿರುವುದು ಎನ್ನುವುದು ಈ ಶುಭಾಷಿತದ ಅರ್ಥ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಾವು ಮತ್ತೊಬ್ಬರಿಗೆ ಬಲಗೈಯ್ಯಲ್ಲಿ ಕೊಟ್ಟಿದ್ದು ನಮ್ಮ ಎಡಗೈಗೂ ತಿಳಿಯಬಾರದು. ನಾವು ಮಾಡುವ ಪ್ರತಿಯೊಂದು ಕೆಲಸ-ಕಾರ್ಯ, ದಾನ-ಧರ್ಮದಲ್ಲಿ ಮತ್ತೊಬ್ಬರಿಂದ ಯಾವುದೇ ನಿರೀಕ್ಷೆ ಮಾಡದೇ ನಿಸ್ವಾರ್ಥವಾಗಿ ಈ ರೀತಿಯಾಗಿ ಅಗತ್ಯ ಇರುವವರಿಗೆ ಹೃದಯ ಶ್ರೀಮಂತಿಕೆಯಿಂದ ಸಹಾಯ ಮಾಡುವುದೇ ನಿಜವಾದ ಶ್ರೀಮಂತಿಕೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ವಾಟ್ಸಾಪ್ ನಲ್ಲಿ ಒದಿದ ಆಂಗ್ಲ ಸಂದೇಶವೊಂದರ ಭಾವಾನುಭವಾಗಿದೆ.

ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ

ವಿದ್ಯೆ, ವಿವೇಕಕಿಂತಲೂ, ಧರ್ಮವೇ ಹೆಚ್ಚು ಎಂದು ದೇಶ ಮತ್ತು ಧರ್ಮದ ನಡುವಿನ ಅಂತರ ತಿಳಿಯದ 6 ಹೆಣ್ಣು ಮಕ್ಕಳಿಂದಾಗಿ ಇಡೀ ರಾಜ್ಯಕ್ಕೇ ಕೆಟ್ಟ ಹೆಸರು ತರುತ್ತಿರುವ ಈ ಸಂಧರ್ಭದಲ್ಲಿ 9 ದಶಕಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿಯೂ ತನ್ನ ವಿವೇಕ ಕಳೆದುಕೊಳ್ಳದೇ ವಿದ್ಯೆ ಕಲಿತು ಇಡೀ ಸಮಾಜವನ್ನೇ ಬದಲಾಯಿಸಿದಂತಹ  ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಹೃದಯಸ್ಪರ್ಶಿ ಕಥೆಯೊಂದರ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

doctor1ಅದು 1943, ಹುಬ್ಬಳ್ಳಿಯ ಮೂಲದ 22 ವರ್ಷದ ಯುವ ವೈದ್ಯರಾಗಿದ್ದ ಡಾ. ಆರ್. ಎಚ್. ಕುಲಕರ್ಣಿಯವರು ಮಹಾರಾಷ್ಟ್ರ-ಕರ್ನಾಟಕ ಗಡಿ ಸಮೀಪದ ಚಂದ್‌ಗಢ ಗ್ರಾಮದ ಸರ್ಕಾರೀ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ದಟ್ಟ ಅರಣ್ಯಗಳ ನಡುವಿದ್ದ ಆ ಊರು ತೀರಾ ಕುಗ್ರಾಮವೆಂದರೂ ತಪ್ಪಾಗದು. ಅದೊಂದು ಮಳೆಗಾಲದ ಸಮಯದಲ್ಲಿ ಹೊರಗೆ ಭಾರೀ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದ ಕಾರಣ, ಬೆಚ್ಚಗೆ ಕಂಬಳಿಯೊಂದನ್ನು ಹೊದ್ದಿಕೊಂಡು ಡಾ ಕುಲಕರ್ಣಿ ಪುಸ್ತಕವೊಂದನ್ನು ಓದುತ್ತಿದ್ದರು. ಇದ್ದಕ್ಕಿದ್ದಂತೆ, ಅವರ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುವ ಶಬ್ದ ಕೇಳಿ, ಅರೇ ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎಂದು ಯೋಚಿಸಿ, ಒಂದು ಕ್ಷಣ ಭಯವಾದರೂ, ಅದಕ್ಕೆ ಅಂಜದೇ, ಅವರು ಬಾಗಿಲು ತೆರೆದು ನೋಡಿದರೆ, ಕೈಯ್ಯಲ್ಲಿ ದೊಣ್ಣೆ ಹಿಡಿದು ಮುಖ ಮುಚ್ಚಿಕೊಂಡಿದ್ದ ನಾಲ್ಕು ಜನ ದಾಂಡಿಗರು ಮರಾಠಿಭಾಷೆಯಲ್ಲಿ ವೈದ್ಯರೇ, ನಿಮ್ಮ ವೈದ್ಯಕೀಯ ಚೀಲದೊಂದಿಗೆ ಈ ಕೂಡಲೇ ಹೊರಡಿ ಎಂದು ಆಜ್ಞಾಪಿಸುತ್ತಾರೆ.

ತಲೆ ಗಟ್ಟಿಗಿದೆ ಎಂದು ಬಂಡೆಗೆ ಚೆಚ್ಚಿಕೊಂಡರೆ ನಮ್ಮ ತಲೆಗೇ ಪೆಟ್ಟಾಗುತ್ತದೆಯೇ ಹೊರತು ಬಂಡೆ ಕಲ್ಲಿಗೆ ಏನೂ ಆಗುವುದಿಲ್ಲ ಎಂಬುದಾಗಿ ಯೋಚಿಸಿದ ಆ ವೈದ್ಯರು. ಸದ್ದಿಲ್ಲದೆ ತಮ್ಮ ಚೀಲವನ್ನು ತೆಗೆದುಕೊಂಡು ಅವರು ತಂದಿದ್ದ ವಾಹನದಲ್ಲಿ ಕುಳಿತುಕೊಳ್ಳುತ್ತಾರೆ, ಹಾಗೆ ಹೋಗುವ ದಾರಿಯಲ್ಲಿ ಭಯದಿಂದಲೇ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ಕೇಳಿದ್ದಕ್ಕೆ ಉತ್ತರ ಸಿಗದಿದ್ದಾಗ ಮೌನವಾಗುತ್ತಾರೆ. ಸುಮಾರು ಒಂದೂವರೆ ಗಂಟೆಗಳ ಸುದೀರ್ಘ ಪಯಣದ ನಂತರ ಆ ವಾಹನ ಒಂದು ಕಡೆ ನಿಂತಾಗ ಆ ಕಡು ಕತ್ತಲೆಯಲ್ಲಿ ಲಾಟೀನಿನ ಬೆಳಕಿನಲ್ಲಿ ವೈದ್ಯರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗುತ್ತಾರೆ. ಆಲ್ಲೊಂದು ಮಂಚದ ಮೇಲೆ ತುಂಬು ಗರ್ಭಿಣಿಯೊಬ್ಬಳು ಮಲಗಿದ್ದು ಅವರಳ ಆರೈಕೆಗೆಂದು ಆಕೆಯ ಪಕ್ಕದಲ್ಲಿ ಹಣ್ಣು ಹಣ್ಣು ಮುದುಕಿಯೊಬ್ಬರು ಕುಳಿತಿರುತ್ತಾರೆ. ವೈದ್ಯರು ಅಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡುಕೊಳ್ಳುವಷ್ಟರಲ್ಲಿಯೇ ಆ ಅಜ್ಜಿ ವೈದ್ಯರೇ ಹೆರಿಗೆಯ ಬೇನೆಯಿಂದ ಬಹಳ ನರಳುತ್ತಿದ್ದಾಳೆ. ದಯವಿಟ್ಟು ಸುಸೂತ್ರವಾಗಿ ಹೆರಿಗೆ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಬೇಡಿಕೊಳ್ಳುತ್ತಾಳೆ.

doc2ಆಗಷ್ಟೇ ವೈದ್ಯಕೀಯ ಪದವಿಯನ್ನು ಮುಗಿಸಿ ಕೆಲಸಕ್ಕೆ ಸೇರಿದ್ದ ಕಾರಣ ಅವರು ಎಂದೂ ಹೆರಿಗೆಯನ್ನು ಮಾಡಿಸಿದ ಅನುಭವ ಇಲ್ಲದಿದ್ದರೂ, ನೋವಿನಿಂದ ನರಳುತ್ತಿದ್ದ ಆ ಹುಡುಗಿಯನ್ನು ನೋಡಿ ವೈದ್ಯರ ಮನಸ್ಸು ಕರಗಿ ಆ ಹುಡುಗಿಗೆ ಸಹಾಯ ಮಾಡಲು ನಿರ್ಧರಿಸಿ ಆಕೆಯ ನೋವನ್ನು ಮರೆಸುವ ಸಲುವಾಗಿ ತಂಗೀ, ನೀನು ಯಾರು? ಇಲ್ಲಿಗೆ ಹೇಗೆ ಬಂದೇ ಎಂದು ಕೇಳುತ್ತಾರೆ.

ಡಾಕ್ಟರ್, ಇಲ್ಲಿಯ ದೊಡ್ಡ ಜಮೀನ್ದಾರರ ಮಗಳು. ನನಗೆ ಈ ನೋವನ್ನು ತಡೆಯಲಾಗುತ್ತಿಲ್ಲ ಮತ್ತು ನನಗೆ ಬದುಕಲು ಇಷ್ಟವಿಲ್ಲ ಎಂದು ನೊವಿನಿಂದಲೇ ಹೇಳುತ್ತಲೇ ತನ್ನ ವೃತ್ತಾಂತವನ್ನು ವೈದ್ಯರ ಬಳಿ ಬಿಚ್ಚಿಡುತ್ತಾಳೆ. ತನ್ನ ಹುಟ್ಟೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಆವರ ಊರಿನಲ್ಲಿ ಪ್ರೌಢಶಿಕ್ಷಣದ ಶಾಲೆ ಇಲ್ಲದ ಕಾರಣ ದೂರದ ಊರಿಗೆ ಓದಲು ಫೋಷಕರು ಕಳುಹಿಸಿದರೆ, ಸಹಪಾಠಿಯೊಬ್ಬನ ಕುಟಿಲತೆಯಿಂದ ಆಕೆ ಗರ್ಭಿಣಿಯಾಗಿ ಆ ವಿಷಯ ತಿಳಿದ ತಕ್ಷಣವೇ ಆ ಹುಡುಗ ಊರು ಬಿಟ್ಟು ಓಡಿ ಹೋದಾಗ ವಿಧಿ ಇಲ್ಲದೇ ಆ ವಿಷಯವನ್ನು ತಂದೆ ತಾಯಿಗಳಿಗೆ ತಿಳಿಸಿದಾಗ, ಅವರು ಸಮಾಜಕ್ಕೆ ಹೆದರಿ ಆ ಹುಡುಗಿಯನ್ನು ಅಂತಹ ಹಳ್ಳಿಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ತಿಳಿಸುತ್ತಾಳೆ.

ವೈದ್ಯಕೀಯಶಾಸ್ತ್ರವನ್ನು ಓದುವಾಗ ಹೆರಿಗೆ ಮಾಡಿಸುವುದನ್ನು ಹೇಳಿಕೊಟ್ಟಿದ್ದನ್ನೇ ನೆನಪಿಸಿಕೊಂಡು ಡಾ.ಕುಲಕರ್ಣಿ ಯವರು ಭಗವಂತನ ಮೇಲೆ ಭಾರ ಹೇರಿ ಹಾಗೂ ಹೀಗೂ ಪ್ರಯತ್ನಿಸಿ ಹೆರಿಗೆ ಮಾಡಿಸಿದರೂ, ಹುಟ್ಟಿದ ತಕ್ಷಣ ಅಳಬೇಕಾದ ಆ ಮಗು ಅಳದೇ ಹೋದಾಗ ಒಂದು ರೀತಿಯ ಭಯ ಉಂಟಾಗುತ್ತದೆ. ತನಗೆ ಹುಟ್ಟಿದ ಹೆಣ್ಣು ಮಗು ಅಳದೇ ಹೋದದ್ದನ್ನು ಮನಗಂಡ ಆ ಹುಡುಗಿ, ಅವಳು ಹೇಣ್ಣೇ! ಸಾಯಲಿ ಬಿಡಿ. ಇಲ್ಲದಿದ್ದರೇ ನನ್ನಂತೆಯೇ ದುರದೃಷ್ಟಕರ ಜೀವನ ನಡೆಸಬೇಕಾಗುತ್ತದೆ ಎಂದು ಬಿಕ್ಕಳಿಸುತ್ತಾಳೆ.

ಆದರೆ ಛಲ ಬಿಡದ ಡಾ. ಕುಲಕರ್ಣಿಯವರು ಮಗುವನ್ನು ತಲೆ ಕೆಳಗೆ ಹಿಡಿದು ಮೇಲೆ ಕೇಳಗೆ ಆಡಿಸಿ ಬೆನ್ನಿನ ಮೇಲೆ ಸಣ್ಣಗೆ ಗುದ್ದಿ ಹಾಗೂ ಹೀಗೂ ಮಾಡಿ ಮಗು ಅಳಲಾರಂಭಿಸಿದಾಗ ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಅಷ್ಟೆಲ್ಲಾ ಸತತ ಪ್ರಯತ್ನದಿಂದ ಹೆರಿಗೆಯನ್ನು ಮಾಡಿಸಿ ಕೊಠಡಿಯಿಂದ ಹೊರಬಂದು ಮನೆಗೆ ಹೊರಡಲು ಅನುವಾದ ವೈದ್ಯರ ಕೈಯ್ಯಿಗೆ 100 ರೂಪಾಯಿಗಳನ್ನು ಕೊಡುತ್ತಾರೆ. ನಿಜ ಹೇಳಬೇಕೆಂದರೆ ಅಂದಿನ ಕಾಲಕ್ಕೆ 100 ರೂಪಾಯಿ ಬಹಳ ದೊಡ್ಡ ಮೊತ್ತವಾಘಿತ್ತು ಏಕೆಂದರೆ, ಆ ವೈದ್ಯರಿಗೆ ತಿಂಗಳ ಸಂಬಳವೇ ₹75 ರೂಪಾಯಿಗಳಿತ್ತು. ಕೈಯ್ಯಲ್ಲಿ ಹಣವನ್ನು ಪಡೆದ ನಂತರ ಒಂದು ಕ್ಷಣ ಯೋಚಿಸಿ ಅದೇನನ್ನೋ ಮರೆತೆ ಎಂದು ಮತ್ತೆ ಆ ಹೆರಿಗೆಮಾಡಿಸಿದ ಕೋಣೆಗೆ ಹೋಗಿ ತಮಗೆ ಕೊಟ್ಟಿದ್ದ ಆ 100 ರೂಪಾಯಿಯನ್ನು ಹುಟ್ಟಿದ ಮಗುವಿನ ಕೈಗೆ ನೀಡಿ ಜೀವನದಲ್ಲಿ ಕೆಲವೊಮ್ಮೆ ಇಂತಹ ಅಹಿತಕರ ಘಟನೆಗಳು ನಮ್ಮ ಕೈ ಮೀರಿ ನಡೆದು ಹೋಗುತ್ತದೆ. ಅದಕ್ಕಾಗಿ ದಯವಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಳ್ಳದಿರು. ಒಬ್ಬ ಅಣ್ಣನಾಗಿ ಹೇಳಬೇಕೆಂದರೆ, ಸಾಧ್ಯವಾದರೆ ಪುಣೆಯ ನರ್ಸಿಂಗ್ ಕಾಲೇಜಿಗೆ ಹೋಗು ಅಲ್ಲಿ ನನ್ನ ಸ್ನೇಹಿತನಾದ ಡಾ. ಆಪ್ಟೆ ಯವರನ್ನು ಕಂಡು ಡಾ.ಆರ್.ಎಚ್.ಕುಲಕರ್ಣಿ ಕಳುಹಿಸಿದ್ದಾರೆಂದು ಹೇಳು. ಅವರು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತಾರೆ ಎಂದು ತಾಯಿ ಮತ್ತು ಮಗುವಿನ ತಲೆಯ ಮೇಲೆ ಆಶೀರ್ವಾದ ಪೂರ್ವಾಕವಾಗಿ ಹರಸಿ ತಮ್ಮ ಮನೆಗೆ ಮರಳುತ್ತಾರೆ.

doct3ಈ ಘಟನೆ ನಡೆದು ಸುಮಾರು ವರ್ಷಗಳ ನಂತರ ಡಾ.ಆರ್.ಎಚ್.ಕುಲಕರ್ಣಿ ಅವರು ಅಂದಿನ ಕಾಲದಲ್ಲೇ ಸ್ತ್ರೀ ಪ್ರಸೂತಿ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಲ್ಲದೇ, ಔರಂಗಾಬಾದಿನಲಿ ನಡೆಯುತ್ತಿದ್ದ ವೈದ್ಯಕೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೋಗಿರುತ್ತಾರೆ. ಆ ವೇದಿಕೆಯಲ್ಲಿ ಡಾ. ಚಂದ್ರ ಎಂಬ ತರುಣಿ ಅತ್ಯಂತ ಮನೋಜ್ಞವಾಗಿ ತನ್ನ ವಿಷಯವನ್ನು ಮಂಡಿಸಿದ್ದು ಕುಲಕರ್ಣಿಯವರಿಗೆ ಮೆಚ್ಚುಗೆಯಾಗಿ ಇನ್ನೇನು ಆಕೆ ವೇದಿಕಯಿಂದ ಕೆಳಗೆ ಇಳಿಯ ಬೇಕು ಎನ್ನುವಷ್ಟರಲ್ಲಿ ಯಾರೋ ಡಾ.ಕುಲಕರ್ಣಿಯವರನ್ನು ಹೆಸರಿಟ್ಟು ಜೋರಾಗಿ ಕರೆದದ್ದನ್ನು ಕೇಳಿಸಿಕೊಂಡ ಡಾ. ಚಂದ್ರಾ ಮತ್ತೆ ಕುಲಕರ್ಣಿಯವರ ಬಳಿಗೆ ಹೋಗಿ ಕ್ಷಮಿಸಿ ಸರ್, ನೀವು ಎಂದಾದರೂ ಚಂದಗಢಕ್ಕೆ ಹೋಗಿದ್ದೀರಾ? ಎಂದು ಕೇಳುತ್ತಾಳೆ.

ಸ್ವಲ್ಪ ಹೊತ್ತು ನೆನಪಿಸಿಕೊಂಡು ಹೌದು ಬಹಳ ವರ್ಷಗಳ ಹಿಂದೆ ಹೋಗಿದ್ದೆ ಎಂದು ಹೇಳುತ್ತಾರೆ.

ಅದನ್ನು ಕೇಳಿದ ತಕ್ಷಣವೇ ಮುಖವನ್ನು ಅರಳಿಸಿಕೊಂಡ ಡಾ. ಚಂದ್ರಾ ಸರ್, ನೀವಿಂದು ನಮ್ಮ ಮನೆಗೆ ಖಂಡಿತವಾಗಿಯೂ ಬರಲೇ ಬೇಕು ಎಂದು ವಿನಂತಿಸಿಕೊಳ್ಳುತ್ತಾಳೆ.

ಪುಟ್ಟೀ ನಾನು ನಿನ್ನನ್ನು ಮೊದಲ ಬಾರಿ ನೋಡುತ್ತಿದ್ದೇನೆ. ನೀನು ಮಾಡಿದ ಭಾಷಣ, ನಿನ್ನ ಜ್ಞಾನ ಮತ್ತು ಸಂಶೋಧನೆಯನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಇವತ್ತು ನಾನು ನಿನ್ನೊಂದಿಗೆ ಬರಲು ಸಾಧ್ಯವಿಲ್ಲ. ಮುಂದೊಮ್ಮೆ ನೋಡೋಣ ಎನ್ನುತ್ತಾರೆ.

ಸರ್ ದಯವಿಟ್ಟು ಹಾಗೆನ್ನದಿರಿ. ನೀವು ನಮ್ಮ ಮನೆಗೆ ಬಂದರೆ ಅದು ಕುಚೇಲ ಮನೆಗೆ ಶ್ರೀಕೃಷ್ಣ ಬಂದಂತಾಗುತ್ತದೆ ಎಂದು ಪರಿ ಪರಿಯಾಗಿ ಕೇಳಿಕೊಂಡಾಗ ಆಕೆಯ ಒತ್ತಾಯಕ್ಕೆ ಮಣಿದ ಡಾ. ಕುಲಕರ್ಣಿಯವರು ಡಾ.ಚಂದ್ರಾ ಅವರ ಮನೆಗೆ ಹೋಗುತ್ತಲೇ, ಅಮ್ಮಾ ನಮ್ಮ ಮನೆಗೆ ಯಾರು ಬಂದಿದ್ದಾರೆ ನೋಡು! ಎಂದು ಗೇಟಿನ ಬಳಿಯಿಂದಲೇ ಸಂಭ್ರಮದಿಂದ ಕೂಗಿ ಕೊಂಡಾಗ, ಡಾ.ಚಂದ್ರಾಳ ತಾಯಿ ಹೊರಗೆ ಬಂದು ಎದುರಿಗಿದ್ದ ಡಾ.ಕುಲಕರ್ಣಿಯನ್ನು ನೋಡಿದ ಕೂಡಲೇ, ತನ್ನ ಕಣ್ಣನ್ನೇ ನಂಬಲಾಗದೇ, ಗದ್ಗತಿಳಾಗಿ ಕಣ್ಣೀರು ತುಂಬಿಕೊಂಡು ಅವಳಿಗೇ ಅರಿವಿಲ್ಲದಂತೆ ಡಾ, ಕುಲಕರ್ಣಿಯವರ ಪಾದಕ್ಕೆ ಎರಗುತ್ತಾಳೆ.

ಪರಿಚಯವೇ ಇಲ್ಲದ ಮನೆಗೆ ಬಂದು ಈ ರೀತಿಯ ಸ್ವಾಗತವನ್ನು ನೋಡಿ ಅಚ್ಚರಿಗೊಂಡ ಕುಲಕರ್ಣಿಯವರು ಏನಾಗ್ತಿದೆ ಇಲ್ಲಿ ಎಂದು ಕೇಳಬೇಕು ಎನ್ನುವಷ್ಟರಲ್ಲಿಯೇ, ತನ್ನ ಸೆರಗಿನಿಂದ ಕಣ್ಣನ್ನು ಒರೆಸಿಕೊಂಡ ಆಕೆ, ಅಣ್ಣಾ, ಸುಮಾರು 22-25 ವರ್ಷಗಳ ಹಿಂದೆ, ಚಂದ್ರಗಢದ ಹಳ್ಳಿಯಲ್ಲಿ ಮಧ್ಯರಾತ್ರಿಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದವಳೊಬ್ಬಳಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ಹುಡುಗಿಯೇ ನಾನು. ನೀವು ಹೇಳಿದಂತೆಯೇ, ನಾನು ಪೂನಾಕ್ಕೆ ಹೋಗಿ ನಿಮ್ಮ ಸ್ನೇಹಿತರ ಸಲಹೆಯಂತೆ ನರ್ಸಿಂಗ್ ಕೋರ್ಸ್ ಮಾಡಿ ಸ್ಟಾಫ್ ನರ್ಸ್ ಆಗಿ ಸ್ವಾಭಿಮಾನಿಯಾಗಿ ನನ್ನ ಕಾಲ್ಗಳ ಮೇಲೆ ನಾನೇ ನಿಲ್ಲುವಂತಾದೆ.

ನಂತರ ನನ್ನ ಮಗಳನ್ನು ಚೆನ್ನಾಗಿ ಓದಿಸಿದ್ದಲ್ಲದೇ, ನಿಮ್ಮನ್ನೇ ಆದರ್ಶವಾಗಿಟ್ಟು ಕೊಂಡು ಅಕೆಗೆ ಪರಿಗಣಿಸಿ ಸ್ತ್ರೀರೋಗ ತಜ್ಞರನ್ನಾಗಿ ಮಾಡಿದೆ. ಆ ರಾತ್ರಿ ನಿಮ್ಮ ಕೈಯಲ್ಲಿ ಹುಟ್ಟಿದವಳೇ ನನ್ನ ಮಗಳು ಚಂದ್ರಾ ಎಂದಾಗ ಡಾ. ಕುಲಕರ್ಣಿಯವರಿಗೂ ಅಚ್ಚರಿಯ ಜೊತೆ ಸಂತೋಷವಾಗಿದ್ದಲ್ಲದೇ, ಅದು ಸರಿ ಚಂದ್ರಾ ನನ್ನ ಪರಿಚಯವೇ ಇಲ್ಲದಿದ್ದ ನೀನು ನನ್ನನ್ನು ಹೇಗೆ ಗುರುತಿಸಿದೆ ಎಂದು ಆಶ್ಚರ್ಯದಿಂದ ಕೇಳುತ್ತಾರೆ.

ಸರ್. ನಾನು ಹುಟ್ಟಿದಾಗಲಿಂದಲೂ ಪ್ರತೀ ದಿನವೂ ಅಮ್ಮಾ ನಿಮ್ಮ ಹೆಸರನ್ನು ಹೇಳುತ್ತಲೇ ಇರುತ್ತಾಳೆ. ದೇವರ ಪೂಜೆ ತಪ್ಪ ಬಹುದು ಆದರೆ ನಿಮ್ಮ ನಾಮದ ಜಪವನ್ನು ಅಮ್ಮ ನಿಲ್ಲಿಸುವುದಿಲ್ಲ. ವೇದಿಕೆಯ ಮೇಲೆ ನಿಮ್ಮ ಹೆಸರನ್ನು ಸಂಪೂಣವಾಗಿ ಕರೆದಾಗ ಅದು ನೀವೇ ಎಂದು ಗೊತ್ತಾಯಿತು ಎನ್ನುತ್ತಾಳೆ ಚಂದ್ರ.

ಆಗ ಮಾತನ್ನು ಮುಂದುವರೆಸಿದ ಚಂದ್ರಳ ತಾಯಿ, ಸಾರ್, ನಿಮ್ಮ ಹೆಸರು ರಾಮಚಂದ್ರ.  ಹಾಗಾಗಿ ನಿಮ್ಮ ಹೆಸರಿನ್ನೇ ಸಣ್ಣದಾಗಿಸಿ ನಾನು ನನ್ನ ಮಗಳಿಗೆ ಚಂದ್ರ ಎಂದು ನಾಮಕರಣ ಮಾಡಿದ್ದೇನೆ. ಅವಳೂ ಸಹಾ ಇಲ್ಲಿನ ಸುತ್ತ ಮುತ್ತಲಿನ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ನಿಮ್ಮ ಆದರ್ಶ ಗುಣಗಳನ್ನೇ ಪಾಲಿಸಿಕೊಂಡು ಬರುತ್ತಿದ್ದಾಳೆ ಎಂದಾಗ ಡಾ. ಕುಲಕರ್ಣಿಯವರಿಗೂ ಅರಿವಿಲ್ಲದಂತೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

RHKUlkarniಅಂದ ಹಾಗೆ ಆ ಡಾ. ಆರ್. ಹೆಚ್. ಕುಲಕರ್ಣಿ ಅವರು ಬೇರೆ ಯಾರೂ ಆಗಿರದೇ, ಪ್ರಸಕ್ತ ಹೆಸರಾಂತ ಲೇಖಕಿ, ಸಮಾಜ ಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿ ಅವರ ತಂದೆಯವರು.

ನೂಲಿನಂತೆ ಸೀರೆ ತಾಯಿಯಂತೆ ಮಗಳು ಎನ್ನುವಂತೆ ಸಮಾಜ ಸೇವೆ ಎನ್ನುವುದು ಸುಧಾ ಮೂರ್ತಿಯವರಿಗೆ ತಂದೆಯಿಂದ ಬಂದಿದೆ ಎಂದರೂ ತಪ್ಪಾಗದು ಅಲ್ವೇ? ಈ ಪ್ರಸಂಗದಿಂದ ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ ಎನ್ನುವ ಮಾತು ಎಷ್ಟು ಸರಿ ಎಂಬುದರ ಅರಿವಾಗುವುದಲ್ಲದೇ, ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳಸಿದರೆ ಸಮಾಜ ಹೇಗೆ ಉದ್ದಾರವಾಗುತ್ತದೆ ಎಂಬುದಕ್ಕೆ ಈ ಪ್ರಸಂಗವೇ ಜ್ವಲಂತ ಸಾಕ್ಷಿಯಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ನಂಬಿಕೆ ಮತ್ತು ಆತ್ಮವಿಶ್ವಾಸ

begger1

ಅದೊಮ್ಮೆ ಭಿಕ್ಷುಕನೊಬ್ಬ ರೈಲಿನಲ್ಲಿ ಹಾಗೆಯೇ ಭಿಕ್ಷೆ ಬೇಡುತ್ತಿರುವಾಗ ಸೂಟು ಬೂಟುಗಳನ್ನು ಧರಿಸಿದ್ದ ಒಬ್ಬ ಗಣ್ಯವ್ಯಕ್ತಿಯನ್ನು ನೋಡಿ ಈ ವ್ಯಕ್ತಿ ಬಹಳ ಶ್ರೀಮಂತನಾಗಿರಬೇಕು. ಅವನ ಬಳಿ ಬಿಕ್ಷೆ ಬೇಡಿದಲ್ಲಿ ಆತ ಖಂಡಿತವಾಗಿಯೂ ತುಂಬಾ ಹಣವನ್ನು ಕೊಡುತ್ತಾನೆ ಎಂದು ಭಾವಿಸಿ ಆ ವ್ಯಕ್ತಿಯ ಬಳಿ ಹೋಗಿ ಭಿಕ್ಷೆಯನ್ನು ಕೇಳಿದನು.

ಆ ವ್ಯಕ್ತಿ ಭಿಕ್ಷುಕನನ್ನು ಒಮ್ಮೆ ಮೇಲಿಂದ ಕೆಳಗಿನವರೆಗೂ ನೋಡಿ, ನೀವು ಹೀಗೆ ಯಾವಾಗಲೂ ಜನರಿಂದ ಭಿಕ್ಷೆ ಕೇಳುತ್ತಲೇ ಇರುತ್ತೀರಿ. ಆದರೆ ನೀವು ಯಾರಿಗಾದರೂ ಏನನ್ನಾದರೂ ಒಮ್ಮೆ ನೀಡಿದ್ದೀರಾ? ಎಂದು ಕೇಳಿದರು. ಅಯ್ಯೋ ಸ್ವಾಮೀ, ನಾನು ಬಡವ ಮತ್ತು ಭಿಕ್ಷುಕ. ನಾನೇ ಬೇರೆಯವರ ಬಳಿ ಕಾಡೀ ಬೇಡಿ ನನ್ನ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದೇನೆ. ನಾನು ಬೇರೆಯವರಿಗೆ ಹೇಗೆ ಏನನ್ನಾದರೂ ಕೊಡಲು ಸಾಧ್ಯ? ಎಂದು ವಿನಮ್ರನಾಗಿ ಹೇಳಿತ್ತಾನೆ.

train2

ನೀವು ಯಾರಿಗೂ ಏನನ್ನೂ ಕೊಡಲು ಸಾಧ್ಯವಾಗದಿದ್ದಲ್ಲಿ, ನಿಮಗೆ ಯಾರಿಂದಲು ಏನನ್ನೂ ಕೇಳುವ ಹಕ್ಕಿಲ್ಲ ಎಂದು ಭಾವಿಸುವ ಉದ್ಯಮಿ ನಾನು. ನೀವು ನನಗೆ ಏನನ್ನಾದರೂ ನೀಡಿದಲ್ಲಿ ಅದಕ್ಕೆ ಪ್ರತಿಯಾಗಿ ನಾನು ಸಹಾ ನಿಮಗೆ ಏನಾದರೂ ನೀಡಬಲ್ಲೆ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ. ಅದೇ ಸಮಯಕ್ಕೆ ಆ ವ್ಯಕ್ತಿ ತಲುಪಬೇಕಾಗಿದ್ದ ನಿಲ್ದಾಣ ಬಂದ ಕಾರಣ ಆತ ರೈಲಿನಿಂದ ಕೆಳಗಿಳಿದು ಹೊರಟು ಹೋಗುತ್ತಾರೆ.

ಆ ವ್ಯಕ್ತಿ ಹೇಳಿದ ವಿಷಯ ಭಿಕ್ಷುಕನ ಹೃದಯವನ್ನು ನಾಟಿದ್ದಲ್ಲದೇ ಅದೇ ಕುರಿತಂತೆ ಗಹನವಾಗಿ ಯೋಚಿಸಲಾಂಭಿಸುತ್ತಾನೆ. ಕಡೆಗೆ ಯಾರಿಂದಲಾದರೂ ಏನನ್ನಾದರು ಭಿಕ್ಷೆಯ ರೂಪದಲ್ಲಿ ಪಡೆದಾಗ ಅದಕ್ಕೆ ಪ್ರತಿಯಾಗಿ ಖಂಡಿತವಾಗಿಯೂ ಏನನ್ನಾದರೂ ಕೊಡಲೇ ಬೇಕೆಂದು ತೀರ್ಮಾನಿಸುತ್ತಾನಾದರು, ಅವನಿಗೆ ಏನು ಕೊಡಬಹುದು ಎಂಬುದರ ಅರಿವಿಲ್ಲದೇ, ಒಂದೆರಡು ದಿನಗಳ ಕಾಲ ಭಿಕ್ಷೆಯನ್ನೇ ಬೇಡುವುದನ್ನು ನಿಲ್ಲಿಸಿಬಿಡುತ್ತಾನೆ.

flower

ಅದೇ ಯೋಚನೆಯಲ್ಲಿಯೇ ರೈಲ್ವೇ ನಿಲ್ದಾಣದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ, ನಿಲ್ದಾಣದ ಅಕ್ಕ ಪಕ್ಕದಲ್ಲಿ ಸುಂದರವಾಗಿ ಅರಳಿರುವ ಹೂವುಗಳು ಅವನ ಕಣ್ಣುಗಳಿಗೆ ಬೀಳುತ್ತಿದ್ದಂತೆಯೇ ಅವನಿಗೇ ಅರಿವಿಲ್ಲದಂತೆ ಆತನ ಮುಖದಲ್ಲಿ ಮಂದಹಾಸ ಬೀರುತ್ತದೆ. ಕೂಡಲೇ, ಆತ ಕೆಲವೊಂದು ಹೂಗಳನ್ನು ಕಿತ್ತು ತನ್ನ ಕೈಗಳಲ್ಲಿ ಹಿಡಿದುಕೊಂಡು ಪುನಃ ಬಿಕ್ಷೆ ಬೇಡಲು ಆರಂಭಿಸುತ್ತಾನೆ, ಈ ಬಾರಿ ಆತನಿಗೆ ಭಿಕ್ಷೆ ನೀಡಿದವರಿಗೆ ಪ್ರತಿಯಾಗಿ ಕೆಲವು ಸುಂದರ ಹೂವುಗಳನ್ನು ನೀಡಲಾರಂಭಿಸುತ್ತಾನೆ. ಆ ಹೂವುಗಳನ್ನು ಪಡೆದವರು ಸಂತೋಷ ಪಡುವುದನ್ನು ನೋಡಿ ಭಿಕ್ಷುಕನಿಗೆ ಒಂದು ರೀತಿಯ ಆನಂದವಾಗುತ್ತದೆ. ಇದೇ ಆಭ್ಯಾಸ ಪ್ರತಿದಿನವೂ ರೂಢಿಯಾಗಿ ಹೋಗುತ್ತದೆ. ನೀಡಿದ ಭಿಕ್ಷೆಗೆ ಪ್ರತಿಯಾಗಿ ಸುಂದರವಾದ ಹೂವುಗಳನ್ನು ಪಡೆಯುತ್ತಿದ್ದ ಕಾರಣ ಬಹಳಷ್ಟು ಜನರು ಅವನಿಗೆ ಭಿಕ್ಷೆ ಕೊಡಲಾರಂಭಿಸುತ್ತಾರೆ. ತನ್ನ ಬಳಿ ಹೂವುಗಳು ಇರುವವರೆಗೂ ಭಿಕ್ಷೆ ಬೇಡುವುದು ಹೂಗಳೆಲ್ಲವೂ ಖಾಲಿಯಾದಾಗ ಸುಮ್ಮನಿರುವುದೇ ಅಭ್ಯಾಸವಾಗಿ ಹೋಗುತ್ತದೆ.

ಅದೊಂದು ದಿನ ಆತ ಹಾಗೆಯೇ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದಾಗ, ಆ ಹಿಂದೆ ಕಂಡಿದ್ದ ಉದ್ಯಮಿಯನ್ನು ನೋಡಿ ಹರ್ಷಿತನಾಗಿ, ಆತನ ಬಳಿ ಹೋಗಿ, ಸ್ವಾಮೀ ನಾನಿಂದು ನೀವು ಕೊಡುವ ಭಿಕ್ಷೆಗೆ ಪ್ರತಿಯಾಗಿ ಈ ಹೂವುಗಳನ್ನು ಕೊಡುತ್ತಿದ್ದೇನೆ ಎಂದು ಹೇಳಿದಾಗ, ಆವ್ಯಕ್ತಿಯು ಆತನಿಗೆ ಸ್ವಲ್ಪ ಹಣವನ್ನು ನೀಡಿ ಅದಕ್ಕೆ ಪ್ರತಿಯಾಗಿ ಕೆಲವು ಹೂವುಗಳನ್ನು ಪಡೆದದ್ದಲ್ಲದೇ ತಾನು ಹೇಳಿದ್ದನ್ನು ಯಥಾವತ್ತಾಗಿ ಭಿಕ್ಷುಕನು ಜಾರಿಗೆ ತಂದಿದ್ದನ್ನು ಕಂಡು ಸಂತಸ ಪಡುತ್ತಾ, ಮಾತನ್ನು ಮುಂದುವರೆಸಿ, ವಾವ್!! ನೀವೀಗ ಭಿಕ್ಷುಕರಾಗಿರದೇ, ನನ್ನಂತೆಯೇ ನೀವು ಸಹಾ ಉದ್ಯಮಿಗಳಾಗಿರುವುದನ್ನು ನೋಡಿ ನನಗೆ ಬಹಳ ಆನಂದವಾಗಿದೆ ಎಂದು ಹೇಳಿ ತನ್ನ ನಿಲ್ದಾಣ ಬಂದಾಗ ಯಥಾ ಪ್ರಕಾರ ರೈಲನ್ನು ಇಳಿದು ಹೋಗುತ್ತಾರೆ.

ಭಿಕ್ಷುಕನಿಗೆ ಮತ್ತೊಮ್ಮೆ, ಆ ವ್ಯಕ್ತಿಯು ಹೇಳಿದ ಮಾತುಗಳು ಮತ್ತೆ ಹೃದಯಕ್ಕೆ ಆಳವಾಗಿ ನಾಟಿದ್ದಲ್ಲದೇ, ಮತ್ತೆ ಮತ್ತೆ ಆ ವ್ಯಕ್ತಿಯು ಹೇಳಿದ್ದನ್ನೇ ಮನಸ್ಸಿನಲ್ಲಿ ಮನನ ಮಾಡುತ್ತಲೇ ಹೋದಾಗ ಥಟ್ ಅಂತಾ ಅತನ ಮನಸ್ಸಿನಲ್ಲೊಂದು ಆಲೋಚನೆ ಹೊಳೆದು, ಕೂಡಲೇ ರೈಲಿನಿಂದ ಇಳಿದು ಸಂತೋಷದಿಂದ ಏರು ಧನಿಯಲ್ಲಿ ಇನ್ನು ಮುಂದೆ ನಾನು ಭಿಕ್ಷುಕನಲ್ಲಾ! ನಾನೀಗ ಉದ್ಯಮಿ!. ನಾನೂ ಕೂಡಾ ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಶ್ರೀಮಂತನಾಗಿ ಸಮಾಜದಲ್ಲಿ ಸಂಭಾವಿತ ಗಣ್ಯವ್ಯಕ್ತಿಯಾಗುತ್ತೇನೆ ಎಂದು ಎಂದು ಕೂಗುವುದನ್ನು ಕೇಳಿಸಿಕೊಂಡ ನಿಲ್ದಾಣದಲ್ಲಿದ್ದ ಪ್ರಯಾಣಿಕರು, ಬಹುಶಃ ಈ ಭಿಕ್ಷುಕನಿಗೆ ಹುಚ್ಚು ಹಿಡಿದಿದೆ ಎಂದೇ ಭಾವಿಸುತ್ತಾರೆ.

ಆದಾದ ನಂತರ ಆ ಭಿಕ್ಷುಕ ಆ ರೈಲ್ವೇ ನಿಲ್ಡಾಣದಲ್ಲಿ ಕಾಣಿಸುವುದೇ ಇಲ್ಲ. ಬಹುಶಃ ಆತ ಹುಚ್ಚನಾಗಿ ಊರೂರು ಅಲೆಯುತ್ತಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ಸುಮಾರು ಮೂರ್ನಾಲ್ಕು ವರ್ಷಗಳ ನಂತರ ಸೂಟು ಬೂಟು ಧರಿಸಿದ ಇಬ್ಬರು ಅಚಾನಕ್ಕಾಗಿ ರೈಲಿನಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ನೋಡಿದಾಗ, ಒಬ್ಬರು ಕೈ ಜೋಡಿಸಿ ಮತ್ತೊಬ್ಬರಿಗೆ ನಮಸ್ಕರಿಸಿ, ಸರ್ ನೀವು ನನ್ನನ್ನು ಗುರುತಿಸುತ್ತೀರಾ? ಎಂದು ಕೇಳುತ್ತಾನೆ.

ಆಗ ಆ ಸಹಪ್ರಯಾಣಿಕರು, ಕ್ಷಮಿಸಿ. ನನಗೆ ನಿಮ್ಮ ಪರಿಚಯವಿಲ್ಲ ಇದೇ ಮೊದಲ ಬಾರಿಗೆ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ ಎಂದಾಗ, ಆಗ ಮೊದಲನೆಯವರು ಸರ್ ದಯವಿಟ್ಟು ಮತ್ತೊಮ್ಮೆ ನೆನಪಿಸಿಕೊಳ್ಳಿ ನಾವಿಬ್ಬರೂ ಮೂರನೇ ಬಾರಿಗೆ ಭೇಟಿಯಾಗುತ್ತಿದ್ದೇವೆ ಎಂದಾಗ, ಆ ಎರಡನೆಯ ವ್ಯಕ್ತಿಗೆ ಆಶ್ಚರ್ಯವಾಗಿ, ಕ್ಷಮಿಸಿ ನನಗೆ ಸರಿಯಾಗಿ ನೆನಪಿಲ್ಲ. ನಾವು ಈ ಮೊದಲು ಎಲ್ಲಿ ಮತ್ತು ಯಾವಾಗ ಭೇಟಿಯಾಗಿದ್ದೆವು ಎಂದು ತಿಳಿಸಬಹುದೇ? ಎಂದು ಕೇಳುತ್ತಾರೆ.

flower2

ಈಗ ಮೊದಲ ವ್ಯಕ್ತಿ ಮುಗುಳ್ನಕ್ಕು, ಸರಿ ನಾವಿಬ್ಬರೂ ಈ ಮೊದಲು ಒಂದೇ ರೈಲಿನಲ್ಲಿ ಎರಡು ಬಾರಿ ಭೇಟಿಯಾಗಿದ್ದೆವು. ನಾನು ಜೀವನದಲ್ಲಿ ಏನು ಮಾಡಬೇಕು ಎಂದು ನಮ್ಮ ಮೊದಲ ಭೇಟಿಯಲ್ಲಿ ತಿಳಿಸಿದ ಅದೇ ಭಿಕ್ಷುಕ ನಾನು. ನಂತರ ನಮ್ಮ ಎರಡನೇ ಭೇಟಿಯಲ್ಲಿ ನಾನು ನಿಜವಾಗಿಯೂ ಯಾರೆಂಬುದನ್ನು ನನಗೆ ಮನನವಾಗುವಂತೆ ತಿಳಿಸಿದಿರಿ. ಮುಂದೆ ಸ್ಪಷ್ಟ ಗುರಿ,‌ ಹಿಂದೆ ನಿಮ್ಮಂತಹ ದಿಟ್ಟ ಗುರುವನ್ನು‌ ಮನಸ್ಸಿನಲ್ಲಿಯೇ ಆರಾಧಿಸುತ್ತಾ, ನಿಮ್ಮನ್ನು ದ್ರೋಣಾಚಾರ್ಯರಂತೆ ನನ್ನನ್ನು ಏಕಲವ್ಯ ಎಂದು ಭಾವಿಸಿಕೊಂಡ ಪರಿಣಾಮವಾಗಿ ನಾನಿಂದು ಈ ಬಹಳ ದೊಡ್ಡ ಹೂವಿನ ವ್ಯಾಪಾರಿಯಾಗಿದ್ದೇನೆ ಮತ್ತು ಅದೇ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಗರಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸುತ್ತಾರೆ.

ನಮ್ಮ ಮೊದಲ ಭೇಟಿಯಲ್ಲಿ ನೀವು ನನಗೆ ಪ್ರಕೃತಿಯ ನಿಯಮದಂತೆ ನಾವು ಏನಾದರೂ ನೀಡಿದಲ್ಲಿ ಮಾತ್ರವೇ ಮತ್ತೊಬ್ಬರಿಂದ ನಾವು ಏನಾದರೂ ಪಡೆಯಲು ಅರ್ಹರಾಗುತ್ತೇವೆ ಎಂಬುದನ್ನು ತಿಳಿಸಿದಿರಿ. ನನ್ನ ಜೀವನದಲ್ಲಿ ಅದು ಗಂಭಿರವಾದ ಪರಿಣಾಮವನ್ನು ಬೀರಿತಾದರೂ ನಾನು ಭಿಕ್ಷುಕನಾಗಿಯೇ ಮುಂದುವರೆದನಾದರೂ ಅಲ್ಲಿಂದ ಮೇಲೆ ಏರುವ ಪ್ರಯತ್ನವನ್ನೇ ಮಾಡಲಿಲ್ಲ.

ಅದೇೆ ಎರಡನೇ ಬಾರಿ ನಿಮ್ಮನ್ನು ಭೇಟಿ ಮಾಡಿದಾಗ ನೀವು ನನ್ನನ್ನು ಭಿಕ್ಷುಕ ಎಂದು ಭಾವಿಸದೇ ನನ್ನನ್ನು ವ್ಯಾಪಾರಿ ಎಂದು ಗುರುತಿಸಿರಿ. ಅಂದಿನಿಂದ ನನ್ನ ಬಗ್ಗೆ ನನಗಿದ್ದ ದೃಷ್ಟಿಕೋನವೇ ಬದಲಾಯಿತು. ನನ್ನ ಬಗ್ಗೆ ಆ ನಿಮ್ಮ ವಿಶ್ವಾಸ ನನಗೆ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದ್ದಲ್ಲದೇ ನೀವು ಹೇಳಿದ್ದನ್ನೇ ನಾನು ಸಾಧಿಸಿ ತೋರಿಸಲು ನಿರ್ಧರಿ ಆ ಕ್ಷಣದಿಂದಲೇ ಭಿಕ್ಷೆ ಬೇಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ನಾನು ಭಿಕ್ಷುಕನಲ್ಲಾ. ನಾನು ಹೂವಿನ ವ್ಯಾಪಾರಿ ಎಂದು ನಿರ್ಧರಿಸಿ, ಮಾರನೆಯ ದಿನದಿಂದಲೇ, ಸಣ್ಣದಾಗಿ ಹೂವಿನ ವ್ಯಾಪಾರ ಆರಂಭಿಸಿ ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಪಟ್ಟ ಕಾರಣ, ನಾನಿಂದು ಯಶಸ್ವಿಯಾದ ಹೂವಿನ ವ್ಯಾಪಾರಿಯಾಗಿದ್ದೀನಿ. ಹಾಗಾಗಿ ನಾನು ನಿಮಗೆ ಸದಾ ಚಿರಋಣಿಯಾಗಿದ್ದೇನೆ ಎಂದು ಆನಂದ ಭಾಷ್ಪವನ್ನು ಸುರಿಸುತ್ತಾ ಪರಸ್ಪರ ಅಪ್ಪಿಕೊಳ್ಳುತ್ತಾರೆ

ಭಿಕ್ಷುಕನು ತನ್ನನ್ನು ಭಿಕ್ಷುಕನನ್ನಾಗಿಯೇ ಪರಿಗಣಿಸಿದ್ದ ಕಾರಣ ಆತ ಭಿಕ್ಷುಕನಾಗಿಯೇ ಭಿಕ್ಷೆ ಬೇಡುತ್ತಲೇ ಇದ್ದ. ಯಾವಾಗ ತನ್ನನ್ನು ತಾನು ವ್ಯಾಪಾರಿ ಎಂದು ಪರಿಗಣಿಸಿದನೋ ಅಂದಿನಿಂದ ಆತ ವ್ಯಾಪಾರಿಯಾಗಿ ಬದಲಾಗಿ ಯಶಸ್ವಿಯಾಗಿ ಹೋದ. ಎಲ್ಲಿಯವರೆಗೂ ತನ್ನ ಸಾಮರ್ಥ್ಯವನ್ನು ಅರಿವಿಲ್ಲದೇ ಮಾಡುವ ಕೆಲಸವನ್ನೇ ಮುಂದುವರೆಸುತ್ತಿರುತ್ತಾರೋ ಅಲ್ಲಿಯವರೆಗೂ ಆತ ಮುಂದುವರೆಯುವುದಿಲ್ಲ. ತ್ರೇತಾಯುಗದಲ್ಲೂ ಹನುಮಂತನ ಶಕ್ತಿಯನ್ನು ಜಾಂಬವಂತ ನೆನಪಿಸಿದಾಗಲೇ, ಆಂಜನೇಯ ಸಮುದ್ರ ಲಂಘನ ಮಾಡಿದ್ದು. ದ್ವಾಪರಯುಗದಲ್ಲಿ ಕೃಷ್ಣ ಅರಳೀ ಎಲೆಯನ್ನು ಸೀಳಿ ಅಕ್ಕ ಪಕ್ಕದಲ್ಲಿ ಎಸೆದಾಗಲೇ ಜರಾಸಂಧನ ವಧೆಯಾಗಿದ್ದು ಮತ್ತು ಕೃಷ್ಣ ತೊಡೆ ತಟ್ಟಿ ತೋರಿಸಿದಾಗಲೇ ಭೀಮ ಧುರ್ಯೋಧನನ್ನು ವಧಿಸಿದ್ದು. ನಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಂಬಿಕೆ ಮತ್ತು ಆತ್ಮವಿಶ್ವಾಸ ಇದ್ದರೆ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಗೆಳೆಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶವೊಂದರ ಭಾವಾನುವಾದ

ನಿರೀಕ್ಷೆ

krishna1ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಉತ್ತಮ ಗುರು ಶಿಷ್ಯರು ಅಥವಾ ಪರಮಾಪ್ತ ಸ್ನೇಹಿತರು ಯಾರು? ಎಂದು ಕೇಳಿದರೆ ಎಲ್ಲರೂ ಥಟ್ ಅಂತಾ ಹೇಳುವುದು ಕೃಷ್ಣಾ ಮತ್ತು ಅರ್ಜುನ ಜೋಡಿಯನ್ನೇ. ಅದೇ ರೀತಿ ದಾನ ಶೂರ ಯಾರು? ಎಂದು ಕೇಳಿದ ತಕ್ಷಣ ಕರ್ಣನ ಹೆಸರೇ ಕಣ್ಣ ಮುಂದೆ ಬರುತ್ತದೆ. ಅದೊಮ್ಮೆ ಕೃಷ್ಣ ಮತ್ತು ಅರ್ಜುನ ಅರ್ಜುನರಿಬ್ಬರು  ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ,ಕರ್ಣನನ್ನೇಕೆ ಅಪ್ರತಿಮ ದಾನಿಯೆಂದು ಏಕೆ ಪರಿಗಣಿಸಬೇಕು?  ನಮ್ಮ ಪಾಂಡವರಲ್ಲಿ ಅಂತಹವರಿಲ್ಲವೇ? ಎಂದು ಪರೋಕ್ಷವಾಗಿ ತನ್ನನ್ನೇಕೆ ಪರಿಗಣಿಸುತ್ತಿಲ್ಲ ಎಂದು ಕೇಳುತ್ತಾನೆ. ಅರ್ಜುನ ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಲೇ ಪೀಡಿಸುತ್ತಿರುವುದನ್ನು ಸಹಿಸಿಕೊಳ್ಳುತ್ತಲೇ ಹೋದ ಕೃಷ್ಣ ಕಡೆಗೆ ಇದಕ್ಕೊಂದು ಪ್ರಾತ್ಯಕ್ಷಿಕವಾಗಿಯೇ ಪರಿಹಾರ ಸೂಚಿಸಬೇಕೆಂದು ಕರ್ಣನನ್ನು ಅಲ್ಲಿಗೆ ಬರಲು ಹೇಳಿ ಕಳಿಸಿದ.

ಕೃಷ್ಣ ಹೇಳಿ ಕಳಿಸಿದ್ದಾನೆ ಎಂದ ಮೇಲೆ ಕುತೂಹಲದಿಂದ ಕರ್ಣನೂ ಅಲ್ಲಿಗೆ ಬಂದಾಗ ಅಲ್ಲಿದ್ದ ಎರಡು ಬೆಟ್ಟವನ್ನು ಚಿನ್ನಮಯವನ್ನಾಗಿಸಿದ ಕೃಷ್ಣ, ಮೊದಲು ಅರ್ಜುನನನ್ನು ಕರೆದು, ಈ ಎರಡೂ ಚಿನ್ನದ ಗ್ರಾಮಸ್ಥರಿಗೆ ವಿತರಿಸಬೇಕು. ಆದರೆ ಅದರಲ್ಲಿ ಒಂದು ಚೂರೂ ಉಳಿಸಬಾರದು ಮತ್ತು ಯಾರಿಗೂ ಸಿಗಲಿಲ್ಲ ಎಂದು ಬೇಸರ ತರಬಾರದು ಎಂದು ಹೇಳಿ ಕಳುಹಿಸಿದ.

ಇಷ್ಟೇ ತಾನೇ, ಎಂದು ಹುಂಬತನದಿಂದ ಅಲ್ಲಿಯೇ ಸಮೀಪದ ಹಳ್ಳಿಗೆ ಹೋದಾಗ ಅವನನ್ನು ಗುರುತಿಸಿದ ಎಲ್ಲರು ವಂದಿಸಿದರು. ಕೂಡಲೇ ಆತ ಅಲ್ಲಿಯ ಡಂಗರ ಹೊಡೆಯುವವರನ್ನು ಕರೆಸಿ ಅರ್ಜುನ ಪ್ರತಿಯೊಬ್ಬ ಗ್ರಾಮಸ್ಥರಿಗೂ ಚಿನ್ನವನ್ನು ದಾನ ಮಾಡುತ್ತಿರುವ ಕಾರಣ, ಪ್ರತಿಯೊಬ್ಬರೂ ಅಲ್ಲಿ ಕಾಣುತ್ತಿರುವ ಗುಡ್ಡದ ಬಳಿ ಬರುವಂತೆ ಹೇಳಿಕಳುಹಿಸಿದ. ಚಿನ್ನವನ್ನು ದಾನ ಕೊಡುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಆ ಕೂಡಲೇ ಆ ಗುಡ್ಡದ ಬಳಿ ಬಂದಿದ್ದಲ್ಲದೇ, ಅರ್ಜುನನ್ನು ಮನಸೋ ಇಚ್ಚೆ ಹಾಡಿ ಹೊಗಳುತ್ತಾ ಹೋದಂತೆ ಅರ್ಜುನ ಹಿರಿ ಹಿರಿ ಹಿಗ್ಗಿದ.

arjunaಗ್ರಾಮಸ್ಥರೆಲ್ಲರೂ ಬಂದ ಕೂಡಲೇ ಅರ್ಜುನನು ಹಗಲೂ ರಾತ್ರಿ ಎನ್ನದೇ ಬೆಟ್ಟದಿಂದ ಬಂಗಾರವನ್ನು ಬಗೆದೂ ಬಗೆದೂ ಕೊಡುತ್ತಲೇ ಹೋದ. ಗ್ರಾಮಸ್ಥರು ಮನಸೋ ಇಚ್ಚೆ ಬಂಗಾರವನ್ನು ಪಡೆದುಕೊಂಡು ಹೊದರು ಬೆಟ್ಟ ಕಿಂಚಿತ್ತೂ ಕಡಿಮೆಯಾಗಲಿಲ್ಲ.

ಅರ್ಜುನ ಬಂಗಾರವನ್ನು ದಾನ ಕೊಡುತ್ತಿರುವ ವಿಷಯ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ ಹರಡುತ್ತಲೇ ಅಕ್ಕ ಪಕ್ಕದ ಹಳ್ಳಿಯವರಿಗೆಲ್ಲಾ ತಲುಪಿ ಅವರುಗಳು ಸಹಾ ಓಡೋಡಿ ಬಂದು ದಾನಕ್ಕಾಗಿ ಸರದಿ ಸಾಲಿನಲ್ಲಿ ನಿಲುತ್ತಲೇ ಹೋದರು. ಅದಾಗಲೇ ದಣಿದಿದ್ದ ಅರ್ಜುನನಿಗೆ ಅವರುಗಳ ಹೊಗಳಿಕೆ ಮತ್ತಷ್ಟು ಉತ್ತೇಜನ ತರುತ್ತಿದ್ದ ಕಾರಣ ತನ್ನ ಆಯಾಸವನ್ನು ಲೆಕ್ಕಿಸದೇ ಕೃಷ್ಣ ಮುಂದೆ ಸೋಲಬಾರದು ಎಂಬ ಅಹಂಕಾರದಿಂದ ದಾನವನ್ನು ನಿಲ್ಲಿಸದೇ ಮುಂದುವರಿಸುತ್ತಲೇ ಹೋದ.

ತದ ನಂತರ ಕರ್ಣನನ್ನು ಕರೆದ ಕೃಷ್ಣಾ ಮತ್ತೆರಡು ಚಿನ್ನದ ಪರ್ವತಗಳನ್ನು ತೋರಿಸಿ ಮತ್ತದೇ ನಿಯಮವನ್ನು ತಿಳಿಸಿ ಈ ಬೆಟ್ಟದಲ್ಲಿ ಒಂದು ಚೂರೂ ಉಳಿಸದೇ ಮತ್ತು ಯಾರಿಗೂ ಸಿಗಲಿಲ್ಲ ಎಂದು ಬೇಸರ ತರಿಸದೇ ಪ್ರತಿ ಭಾಗವನ್ನು ದಾನ ಮಾಡಲು ತಿಳಿಸಿದ.

karnaಕೃಷ್ಣನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡ ಕರ್ಣ ಕೃಷ್ಣನಿಗೆ ಪ್ರತಿವಂದಿಸಿ ಕೂಡಲೇ ಬೆಟ್ಟದ ಮತ್ತೊಂದು ಭಾಗದ ಹಳ್ಳಿಗೆ ಹೋಗಿ ಅಲ್ಲಿನ ಗ್ರಾಮಸ್ಥರನ್ನು ಕರೆದು, ನೋಡೀ, ಆ ಎರಡು ಚಿನ್ನದ ಬೆಟ್ಟಗಳು ನಿಮ್ಮದು, ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿ ಸುಮ್ಮನೆ ಕೃಷ್ಣನ ಬಳಿ ಬಂದು ನೀವು ಹೇಳಿದ ಕೆಲಸ ಮುಗಿಯುತು ಎಂದು ಹೇಳಿ ವಂದಿಸಿ ತನ್ನ ಪಾಡಿಗೆ ತಾನು ಹೊರಟೇ ಬಿಟ್ಟ.

ಕರ್ಣನ ಈ ಅಲೋಚನೆ ತನಗೇಕೆ ಬರಲಿಲ್ಲ? ಎಂದು ಅರ್ಜುನ ಗರಬಡಿದವನಂತೆ ಅಲ್ಲಿಯೇ ಮೂಕವಿಸ್ಮಿತನಾಗಿ ಅಲ್ಲಿಯೇ ನಿಂತಿದ್ದನ್ನು ಗಮನಿಸಿದ ಕೃಷ್ಣ, ಹಾಗೆಯೇ ಮುಗುಳ್ನಕ್ಕು ನೋಡಿದೆಯಾ ಅರ್ಜುನ ಕರ್ಣನನ್ನು ಜನರು ದಾನ ಶೂರನೆಂದು ಏಕೆ ಕರೆಯುತ್ತಾರೆ ಎಂದು ತಿಳಿಯಿತೇ? ಎಂದು ಕೇಳಿದ.

ಆದರೆ ಕರ್ಣನ ಮುಂದೆ ತನಗಾದ ಸೋಲನ್ನು ಅರಗಿಸಿಕೊಳ್ಳಲಾಗದೇ ಅಹಂಕಾರದಿಂದ ಬುಸು ಬುಸುಗುಟ್ಟುತ್ತಿದ್ದ ಅರ್ಜುನನಿಗೆ ತನ್ನ ತಪ್ಪಿನ ಅರಿವೇ ಆಗಿರಲಿಲ್ಲ. ಆಗ ಮಾತನ್ನು ಮುಂದುವರಿಸಿದ ಕೃಷ್ಣಾ, ನೋಡು ಅರ್ಜುನ, ನೀನು ದಾನ ಕೊಡುವ ಮೊದಲು ಹುಂಬತನದಿಂದ ಎಲ್ಲರಿಗೂ ನೀನು ದಾನ ಕೊಡುತ್ತಿರುವ ವಿಷಯವನ್ನು ಡಂಗೂರ ಹೊಡಿಸಿ ತಿಳಿಸಿದೆ. ಆ ಚಿನ್ನದ ಬೆಟ್ಟವನ್ನು ನಾನು ಸೃಷ್ಟಿ ಮಾಡಿ ಕೊಟ್ಟಿದ್ದರು, ದಾನವನ್ನು ಪಡೆದವರೆಲ್ಲರೂ ನಿನ್ನನ್ನು ದಾನ ಶೂರ ಎಂದು ಹೊಗಳಲಿ ಎಂದು ನಿರೀಕ್ಷಿಸಿದೆ. ಹಾಗಾಗಿ ನೀನು ಎಷ್ಟು ದಾನ ಮಾಡಿದರೂ ಅದು ನಿನಗೆ ದಕ್ಕದೇ ಹೋಗಿದ್ದಲ್ಲದೇ, ನೀನು ಎಷ್ಟು ದಾನ ಮಾಡಿದರೂ ಬೆಟ್ಟ ಕಿಂಚಿತ್ತೂ ಕಡಿಮೆ ಆಗಲಿಲ್ಲ. ನೀನು ವಿನಾಕಾರಣ ಆಯಾಸ ಪಟ್ಟೆ.

ಆದರೆ ಅದೇ ಕರ್ಣನಿಗೆ ದಾನದಿಂದ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಹಾಗಾಗಿ ಆತನಿಗೆ ತನಗೆ ವಹಿಸಿದ ಕೆಲಸವನ್ನು ಸುಲಭವಾಗಿ ಮುಗಿಸಬೇಕು ಎಂಬುದಷ್ಟೇ ಆತನ ತಲೆಯಲ್ಲಿ ಇದ್ದ ಕಾರಣ, ಯಾವುದೇ ಹಾರಾಟ ಚೀರಾಟವಿಲ್ಲದೇ, ಗ್ರಾಮಸ್ಥರನ್ನು ಕರೆದು ತಾನು ಯಾರೆಂದೂ ತಿಳಿಸದೇ ಆ ಚಿನ್ನದ ಬೆಟ್ಟವನ್ನು ಸರಿ ಸಮನಾಗಿ ಹಂಚಿಕೊಳ್ಳಲು ತಿಳಿಸಿದ್ದಲ್ಲದೇ, ತಾನು ಮಾಡಿದ ದಾನಕ್ಕಾಗಿ ಅಲ್ಲಿನ ಜನರು ತನ್ನನ್ನು ಹಾಡಿ ಹೊಗಳಲಿ ಎಂಬ ಕಿಂಚಿತ್ತೂ ನಿರೀಕ್ಷೆ ಇಲ್ಲದೇ, ಅಲ್ಲಿಂದ ಶೀಘ್ರವಾಗಿ ನನ್ನ ಬಳಿಗೆ ಬಂದು ವಹಿಸಿದ್ದ ಕೆಲಸವನ್ನು ಮುಗಿಸಿದೆ ಎಂದು ವಂದಿಸಿ ಹೋಗಿ ಬಿಟ್ಟ.

ಯಾವುದೇ ಪ್ರಶಂಸೆ ಅಥವಾ ಕೃತಜ್ಞತೆಯ ರೂಪದಲ್ಲಿ ಪ್ರತಿ ನಿರೀಕ್ಷೆಯೊಂದಿಗೆ ಮಾಡುವ ಉಪಕಾರ ಅಥವಾ ನೀಡುವ ಉಡುಗೊರೆ ಅದು ಉಪಕಾರ ಅಥವಾ ಉಡುಗೊರೆ ಎನಿಸಿಕೊಳ್ಳುವುದಿಲ್ಲ. ಅದು ಶುದ್ಧ ವ್ಯಾಪಾರವಾಗುತ್ತದೆ ಎಂದು ತಿಳಿಸಿದ.

ಭಗವಂತನೇ ನಮಗೆಲ್ಲವನ್ನೂ ಕೊಟ್ಟಿರುವುದು ಅವನ ಮುಂದೆ ನಮ್ಮದೇನೂ ಇಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದಿರುವೆವು ಸುಮ್ಮನೆ ಎಂಬ ಮಾತು ತಿಳಿದಿದ್ದರೂ, ಇಂದಿನವರು ದೇವಾಲಯದಲ್ಲಿ ತಾವು ಇಷ್ಟು ಕೊಟ್ಟು ಅಷ್ಟು ದೊಡ್ಡದಾಗಿ ದಾನಿಗಳು ಎಂದು ಬರೆಸಿಕೊಳ್ಳುತ್ತಾರೆ. ಮದುವೆ ಮುಂಜಿ, ನಾಮಕರಣ, ಹುಟ್ಟಿದ ಹಬ್ಬಗಳಿಗೆ ಹೊಗಿ ಸಣ್ಣ ಉಡುಗೊರೆಯೊಂದನ್ನು ನೀಡಿ ಹೊಟ್ಟೆ ಬಿರಿಯುವಷ್ಟು ತಿಂದುಂಡು ಅವರು ಪ್ರತಿ ಉಡುಗೊರೆಯನ್ನಾಗಿ (ರಿಟನ್ ಗಿಫ್ಟ್) ಏನು ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟು ಕೊಳ್ಳುವುದನ್ನು ನೋಡಿದಾಗ ಈ ಕೆಳಗಿನ ಶುಭಾಷಿತ ನೆನಪಾಗುತ್ತದೆ.

ಪರೋಪಕಾರಾಯ ಫಲಂತಿ ವೃಕ್ಷಾ:, ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ:, ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಾಗಿಯೇ ವೃಕ್ಷಗಳು ಫಲವನ್ನು ನೀಡುತ್ತದೆ. ನದಿಗಳು ಹರಿಯುತ್ತವೆ, ಹಸುವು ಹಾಲನ್ನು ಕೊಡುತ್ತದೆ. ಅದರಂತೆ ಪರೋಪಕಾರಕ್ಕಾಗಿಯೇ ನಮ್ಮೀ ಶರೀರವಿರುವುದು ಎನ್ನುವುದು ಈ ಶುಭಾಷಿತದ ಅರ್ಥ ತಿಳಿದಿದ್ದರೂ, ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬ ಮಾತು ಗೊತ್ತಿದ್ದರೂ, ನಾವು ಮಾಡುವ ಪ್ರತಿಯೊಂದು ಕೆಲಸ-ಕಾರ್ಯ, ದಾನ-ಧರ್ಮದಲ್ಲಿ ಮತ್ತೊಪ್ಪರಿಂದ ನಿರೀಕ್ಷೆ ಪಡುವುದು ಸರಿಯಲ್ಲ.

ಅಂದು ದ್ವಾಪರ ಯುಗದಲ್ಲಿ ಕೃಷ್ಣ  ಅರ್ಜುನನಿಗೆ ಹೇಳಿದ ಮಾತು ಇಂದಿಗೂ ಸಹಾ ಅಕ್ಷರಶಃ ಅನ್ವಯವಾಗುತ್ತದೆ ಅಲ್ಲವೇ?

expectationಆಸೆಯೇ ದುಃಖಕ್ಕೆ ಮೂಲ. ಹಾಗಾಗಿ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸದೇ ಇರುವುದೇ ಸಂತೋಷಕ್ಕೆ ರಹದಾರಿ. 

ಏನಂತೀರಿ?

ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ

ಟೀ.. ಚಾಯ್… ಕಾಪೀ.. ಕಾಪೀ…

co2

ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ.

ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ ಒಂದು ಗುಟುಕನ್ನು ಸವಿದು ಕಾಫಿಯ ಘಮಲು ಬಹಳ ಚೆನ್ನಾಗಿದ್ದರಿಂದ ಅವನನ್ನು ಹಾಗೆಯೇ ಅಭಿನಂದಿಸಿ ಎಷ್ಟಪ್ಪಾ ಕೊಡಬೇಕು? ಎಂದು ಕೇಳುತ್ತಾರೆ. ಆಗ ಆ ಕಾಫೀ ಮಾರುವವನು ಸರ್ 20 ರೂಪಾಯಿಗಳನ್ನು ಕೊಡಿ ಎಂದಾಗ, ತಮ್ಮ ಪರ್ಸಿನಿಂದ 200 ರೂಪಾಯಿಯ ನೋಟೊಂದನ್ನು ಆತನಿಗೆ ಕೊಡುತ್ತಾರೆ.

cof4

ಸರ್ ಚಿಲ್ಲರೇ ಇಲ್ಲವೇ? ಎಂದು ಕೇಳಿ, ತನ್ನ ಕೈನಿಂದ ಕಾಫಿಯ ಕೆಟಲನ್ನು ಇಳಿಸಿ ಚಿಲ್ಲರೆಗಾಗಿ ಶರ್ಟಿನ ಜೇಬನ್ನೆಲ್ಲಾ ತಡಗಾಡುವ ಸಮಯದಲ್ಲಿ ರೈಲು ಹೊರಡಲು ಅನುವಾದಾಗ, ಲಗುಬಗನೇ ಚಿಲ್ಲರೆಯನ್ನು ಕೊಡದೆಯೇ ಚಲಿಸುತ್ತಿದ್ದ ರೈಲನಿಂದ ಇಳಿದು ಕಿಟಕಿಯಿಂದ ಚಿಲ್ಲರೆ ಕೊಡಲು ಪ್ರಯತ್ನಿಸಿದನಾದರೂ, ಇವರ ಬೋಗಿ ಇಂಜಿನ್ನಿನ ಪಕ್ಕದಲ್ಲೇ ಇದ್ದ ಕಾರಣ ಚಿಲ್ಲರೆಯನ್ನು ಪಡೆದುಕೊಳ್ಳಲು ರಾಯರಿಗೆ ಸಾಧ್ಯವಾಗಲಿಲ್ಲ. ಕಾಫೀ ಚಟದ ನೆಪದಲ್ಲಿ ಚಿಲ್ಲರೆ ಇದೆಯೋ ಎನ್ನುವುದನ್ನೂ ಗಮನಿಸದೇ ಅನ್ಯಾಯವಾಗಿ ಬೆಳ್ಳಂಬೆಳಿಗ್ಗೆಯೇ 180 ರೂಪಾಯಿಗಳನ್ನು ಕಳೆದುಕೊಂಡನಲ್ಲಾ ಎಂದು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾರೆ.

ಕಾಫೀ ಕುಡಿಯುತ್ತಲೇ ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ, ಇಷ್ಟು ವಯಸ್ಸಾಗಿ ಅನುಭವ ಪಡೆದಿದ್ದರೂ, ಈ ರೀತಿಯಾಗಿ ದುಡ್ಡನ್ನು ಕಳೆದುಕೊಂಡಿರಲ್ಲಾ. ಕಾಫಿ ಕುಡಿಯುವ ಮೊದಲೇ ಹಣವನ್ನೇಕೆ ಕೊಡಬೇಕಿತ್ತು ಎಂದು ಮೂದಲಿಸಿದಾಗ, ಹೇ ಇದರಲ್ಲಿ ನನ್ನದು ಮತ್ತು ಅವನದ್ದೇನೂ ತಪ್ಪಿಲ್ಲ. ಆತ ಬೇಕೇಂದೇನೂ ಚಿಲ್ಲರೇ ಕೊಡದೇ ಓಡಿ ಹೋಗಲಿಲ್ಲ. ರೈಲು ವೇಗವಾಗಿ ಚಲಿಸಿದ ಕಾರಣ ಹೀಗಾಯಿತು. 180 ರೂಪಾಯಿಗಳೇನು ಹೆಚ್ಚಿನ ನಷ್ಟವೇನಿಲ್ಲ ಎಂದು ಸಮಜಾಯಿಸಿ ಕೊಡಲು ಪ್ರಯತ್ನಿಸುತ್ತಾರೆ.

ಆದರೆ ಗಂಡನ ತಪ್ಪನ್ನು ಸದಾಕಾಲವು ಎತ್ತಿ ಆಡಲು ಸಿದ್ಧವಿರುವ ಪತ್ನಿಯರಂತೆ ರಾಯರ ಪತ್ನಿಯೂ ನಮ್ಮ ಹತ್ತಿರ ಪೈಸೆ ಪೈಸೆಗೂ ಲೆಖ್ಖಾ ಕೇಳುತ್ತೀರಿ. ಹೀಗೆ ಹೊರಗೆಲ್ಲೋ ಕಳೆದುಕೊಳ್ಳುತ್ತೀರಿ. ಬೆಳಗಿನಿಂದ ಹತ್ತಾರು ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ ಪ್ರತಿಯೊಂದು ರೈಲಿನಲ್ಲಿಯೂ ನಿಮ್ಮಂತಹ ಹತ್ತಾರು ಬಕರಾಗಳು ಸಿಕ್ಕರೂ ಸಾಕು ಅವನಿಗೆ ಕಾಫೀ ಮಾರಿದ ಹಣಕ್ಕಿಂತಲೂ ಹೆಚಿನ ಹಣವನ್ನು ಸಂಪಾದಿಸಿಬಿಡುತ್ತಾನೆ ಎಂದು ಕುಹಕವಾಡುತ್ತಾರೆ.

ನೋಡಮ್ಮಾ ನಾವು ಜನರನ್ನು ನಂಬಬೇಕು, ರೈಲು ಇದ್ದಕ್ಕಿದ್ದಂತೆಯೇ ಆರಂಭವಾದರೆ ಅವನು ತಾನೇ ಏನು ಮಾಡಬಲ್ಲ? ಅವನು ನಮ್ಮ ಹಣದಲ್ಲಿ ಎಷ್ಟು ದಿನ ತಾನೇ ಬದುಕುತ್ತಾನೆ? ಎಂದು ಶಾಂತ ಚಿತ್ತದಲ್ಲಿ ರಾಯರು ಹೇಳುತ್ತಿದ್ದರೆ, ಅವರ ಪತ್ನಿ ದಿನಕ್ಕೆ ನಿಮ್ಮಂತಹ ನಾಲ್ಕು ಜನರು ಸಿಕ್ಕರೆ ಸಾಕು ಅವರು ಚೆನ್ನಾಗಿಯೇ ಬದುಕುತ್ತಾನೆ ಎಂದು ದುರುಗುಟ್ಟಿ ನೋಡುತ್ತಾರೆ.

ಅಲ್ಲಿಂದ ಮುಂದೆ ರೈಲು ವೇಗವಾಗಿ ಹೋಗುತ್ತಾ ನೋಡ ನೋಡುತ್ತಿದ್ದಂತೆಯೇ, ಮುಂದಿನ ನಿಲ್ದಾಣವಾದ ಅಣ್ಣಾವರಂ ದಾಟಿದರೂ ರಾಯರ ಮಡದಿಯ ಬುಸುಗುಟ್ಟುವಿಕೆ ಕಡಿಮೆ ಯಾಗಿರಲಿಲ್ಲ. ಎಲ್ಲಿಯವರೆಗೂ ನಿಮ್ಮಂತಹ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಲೇ ಇರುತ್ತಾರೆ. ನೀವು ಸುಖಾ ಸುಮ್ಮನೇ ಎಲ್ಲರನ್ನೂ ನಂಬಿ ಮೋಸಹೋಗುತ್ತೀರಿ ಎಂದು ಹೇಳುತ್ತಲೇ ಹೋದರೂ ರಾಯರು ಬಿಡು ಮಾರಾಯ್ತೀ, ಅವರು ಬಡವರು! ನಮ್ಮ ಹಣದಿಂದ ಅರಮನೆಯನ್ನೇನು ಕಟ್ಟಲು ಸಾಧ್ಯವೇ? ಎಂದು ಸಮಾಧಾನಪಡಿಸಲು ಪ್ರಯತ್ನಿಸುತ್ನಿಸಿದರಾದರು ಆಕೆಯ ಕೋಪ ಇನ್ನೂ ಇಳಿದಿರಲಿಲ್ಲ. ಅಷ್ಟರಲ್ಲಿ ಇಡೀ ಬೋಗಿ ತುಂಬಿಕೊಂಡು ಅನೇಕರು ನಿಂತು ಕೊಂಡು ಪ್ರಯಾಣಿಸುವಷ್ಟು ಭರ್ತಿಯಾಗಿತ್ತು.

ರಾಯರು ಕಿಟಕಿಯಿಂದ ರೈಲಿನೊಂದಿಗೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಗಿಡಮರಗಳನ್ನೂ ಮತ್ತು ಹೊಲ ಗದ್ದೆಗಳನ್ನು ನೋಡುತ್ತಾ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದರೆ, ಅಕ್ಕ ಪಕ್ಕದ ಸಹ ಪ್ರಯಾಣಿಕರು ಇವರನ್ನು ಕಂಡು ಅವರವರ ಭಾವಕ್ಕೆ ತಕ್ಕಂತೆ ಊಹಿಸಿಕೊಂಡು ರಾಯರನು ಮೌಲ್ಯಮಾಪನ ಮಾಡುತ್ತಿದ್ದರು. ಕೆಲವರು ರಾಯರನ್ನು ಮೂರ್ಖರೆಂದು ಭಾವಿಸುತ್ತಿದ್ದರೆ ಇನ್ನೂ ಕೆಲವರು ಸಹಾನುಭೂತಿ ಮತ್ತು ಕರುಣೆಯಿಂದ ನೋಡುತ್ತಿದ್ದರು. ಇನ್ನೂ ಕೆಲವರು ಗಂಡ ಹೆಂಡತಿಯ ಮುನಿಸನ್ನು ಕಂಡು ಉಚಿತ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದರು.

cof5

ರೈಲು ಪೀತಾಪುರದ ಹೊರವಲಯವನ್ನು ತಲುಪುವ ಹೊತ್ತಿಗೆ, ಎಲ್ಲರೂ ಆ ಘಟನೆಯನ್ನು ಮರೆತು ತಮ್ಮ ತಮ್ಮ ಪಾಡಿಗೆ ಇರುವಾಗಲೇ, ಅಷ್ಟು ಜನರ ಮಧ್ಯೆ ಒಬ್ಬ ಚಿಗುರು ಮೀಸೆಯ ಹದಿ ಹರೆಯದ ಹುಡುಗ ಟೀ.. ಚಾಯ್… ಕಾಪೀ.. ಕಾಪೀ… ಎನ್ನುತ್ತಲೇ, ರಾಯರ ಬಳಿ ಬಂದು “ಸರ್, ಎರಡು ಕಾಫಿ ಖರೀದಿಸಿ 200 ರೂಪಾಯಿ ನೋಟು ಕೊಟ್ಟಿದ್ದು ನೀವೇನಾ? ಎಂದಾಗ, ರಾಯರು ಒಂದು ಕ್ಷಣ ಆನಂದಿತರಾದರೂ, ಅರೇ ನನಗೆ ಕಾಫಿ ಕೊಟ್ಟಿದ್ದು ವಯಸ್ಸಾದ ವ್ಯಕ್ತಿಯಲ್ಲವೇ? ಈತನಲ್ಲ ಎಂದೆನಿಸಿದರೂ, ಹೌದಪ್ಪಾ, ನಾನೇ 200 ರೂಪಾಯಿ ನೋಟೊಂದನ್ನು ಕಾಫಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ನೀಡಿ ಚಿಲ್ಲರೆ ಸ್ವೀಕರಿಸುವ ಮುನ್ನವೇ ರೈಲು ಹೊರಟು ಹೋಯಿತು ಎಂದು ಹೇಳುತ್ತಾರೆ.

ಅದು ಸರೀ, ಸ್ವಾಮೀ, ಟುನಿ ನಿಲ್ದಾಣದಲ್ಲಿ ಕಾಫಿ ಕುಡಿದ ವ್ಯಕ್ತಿನೀವೇನಾ? ಎಂದು ಮತ್ತೊಮ್ಮೆ ಆ ಹುಡುಗ ಕೇಳಿದಾಗ, ನಾನು ಯಾಕೆ ಸುಳ್ಳು ಹೇಳಲೀ? ಬೇಕಾದರೆ ಇವರೆಲ್ಲರನ್ನೂ ಕೇಳು ಎಂದು ಅಕ್ಕ ಪಕ್ಕದವರತ್ತ ಕೈ ತೋರಿಸುತ್ತಾರೆ.

ಇಲ್ಲ! ಇಲ್ಲ ಸ್ವಾಮೀ! ನಾನು ನಿನ್ನನ್ನು ಅನುಮಾನಿಸುತ್ತಿಲ್ಲ ಆದರೆ ನಾನು ಚಿಲ್ಲರೆ ಕೊಡ ಬೇಕಾದ ವ್ಯಕ್ತಿ ನೀವೇನಾ? ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮನ್ನು ಪದೇ ಪದೇ ಕೇಳಿದೆ ಕ್ಷಮಿಸಿ ಎಂದು ಹೇಳುತ್ತಾ ತನ್ನ ಜೇಬಿನಿಂದ 180 ರೂಪಾಯಿಗಳ ಚಿಲ್ಲರೆಯನ್ನು ತೆಗೆದು ರಾಯರ ಕೈಗಿಡುತ್ತಾನೆ

ರಾಯರಿಗೆ ಒಂದು ಕಡೇ ಸಂತೋಷ ಮತ್ತೊಂದು ಕಡೆ ಆಶ್ಚರ್ಯದಿಂದ ನೀನು ಯಾರಪ್ಪಾ? ಎಂದು ಕೇಳಿದರು. ಸ್ವಾಮೀ ನಾನು ಅವರ ಮಗ. ಟುನಿ ನಿಲ್ಡಾಣದಲ್ಲಿ ರೈಲು ಹೆಚ್ಚಿನ ಹೊತ್ತು ನಿಲ್ಲದ ಕಾರಣ, ಪ್ರತಿ ದಿನವೂ ಈ ರೀತಿಯ ಒಂದು ಅಥವಾ ಎರಡು ಘಟನೆಗಳು ಟುನಿ ನಿಲ್ದಾಣದಲ್ಲಿ ನಡೆಯುತ್ತವೆ. ಚಿಲ್ಲರೆ ಕೊಡುವಾಗ ಇಲ್ಲವೇ ಪಡೆಯುವಾಗ ರೈಲು ಪ್ರಾರಂಭವಾಗುತ್ತದೆ. ಎಷ್ಟೋ ಬಾರಿ ನಾವು ಸಹಾ ಹಣವನ್ನೂ ಕಳೆದುಕೊಳ್ಳುತ್ತೇವೆ.

ಅದಕ್ಕಾಗಿಯೇ, ನಾನು ಸಹಾ ಅದೇ ರೈಲಿನಲ್ಲಿ ಕಾಫೀ ಟೀ ಮಾರುತ್ತಾ ಇರುತ್ತೇನೆ. ನಮ್ಮ ತಂದೆ ರೈಲಿನಿಂದ ಇಳಿದ ನಂತರ ನನಗೆ ಕರೆ ಮಾಡಿ ಚಿಲ್ಲರೆ ಕೊಡಬೇಕಾದ ವಿವರ ವ್ಯಕ್ತಿಯ ವಿವರದ ಜೊತೆಗೆ ಭೋಗಿ ಮತ್ತು ಸೀಟ್ ವಿವರಗಳನ್ನು ತಿಳಿಸುತ್ತಾರೆ. ನಾನು ಹಾಗೆಯೇ ಕಾಫೀ, ಟೀ ಮಾರುತ್ತಲೇ ಬೋಗಿಯಿಂದ ಬೋಗಿಯಾನ್ನು ದಾಟುತ್ತಾ. ಚಿಲ್ಲರೆಯನ್ನು ಕೊಟ್ಟು ಮುಂದಿನ ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲಿನಲ್ಲಿ ಪುನಃ ಟುನಿಗೆ ಮರಳುತ್ತೇನೆ. ನಮಗೆ ಬೇರೆಯವರು ದುಡ್ಡು ಕೊಡದಿದ್ದರೂ ಪರವಾಗಿಲ್ಲ. ಆದರೆ ನಾವು ಬೇರೆಯವರ ಹಣದ ಋಣದಲ್ಲಿ ಇರಬಾರದು ಎಂದು ನಮ್ಮ ತಂದೆ ನಂಬಿರುವ ಕಾರಣ, ನಾವಿಬ್ಬರೂ ಈ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎನ್ನುತ್ತಾ, ಸರಿ ಸಾರ್ ನಾನು ಬರುತ್ತೇನೆ ಎನ್ನುತ್ತಾನೆ.

ಅವನ ಉತ್ತರಿಂದ ಆಶ್ಚರ್ಯಚಕಿತರಾದ ರಾಯರು ಏನಪ್ಪಾ ನೀನು ಓದುತ್ತಿಲ್ಲವೇ? ಎಂದಾಗ, ಹೌದು ಸಾರ್, ನಾನು ಹತ್ತನೇ ತರಗತಿಯನ್ನು ಓದುತ್ತಿದ್ದೇನೆ, ನಾನು ಬೆಳಿಗ್ಗೆ ಅಪ್ಪನೊಂದಿಗೆ ಈ ರೀತಿಯಾಗಿ ಸಹಾಯ ಮಾಡಿದರೆ, ನನ್ನ ಅಣ್ಣ ಮಧ್ಯಾಹ್ನ ತಂದೆಗೆ ಸಹಾಯ ಮಾಡುತ್ತಾನೆ ಎಂದು ಹೇಳಿದಾಗ, ಇಂತಹ ಸಂಸ್ಕಾರವನ್ನು ಕಲಿಸಿರುವ ನಿಮ್ಮ ತಂದೆಯೊಂದಿಗೆ ಮಾತನಾಡ ಬೇಕು ಎನಿಸಿದೆ, ದಯವಿಟ್ಟು ಕರೆ ಮಾಡಿಕೊಡುವೆಯಾ? ಎಂದು ಹೇಳಿದಾಗ ಆ ಹುಡುಗ ಬಹಳ ಮುಜುಗರದಿಂದಲೇ ತನ್ನ ತಂದೆಗೆ ಕರೆ ಮಾಡಿ ಮೊದಲು ಚಿಲ್ಲರೆ ಕೊಟ್ಟ ವಿಷಯವನ್ನು ತಿಳಿಸಿ, ನಂತರ ರಾಯರು ಅವರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿ ಫೋನನ್ನು ರಾಯರ ಕೈಗಿಡುತ್ತಾನೆ.

ಸ್ವಾಮೀ, ನಿಮ್ಮ ಮಗ 200 ರೂ.ಗಳ ನೋಟಿಗೆ ಚಿಲ್ಲರೆ ಕೊಟ್ಟಿದ್ದಾನೆ. ನಿಮ್ಮೀ ಪ್ರಾಮಾಣಿಕತೆಗೆ ನಾನು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಲುವಾಗಿ ನಾನು ನಿಮ್ಮೊಂದಿಗೆ ಮಾತನಾಡಲು ಇಚ್ಚಿಸಿದೆ. ನೀವು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಅವರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿರುವುದು ನನಗೆ ನನಗೆ ತುಂಬಾ ಸಂತೋಷವಾಗಿದೆ. ಹಾಗಾಗಿ ನಾನು ನಿಮ್ಮ ಇಡೀ ಕುಟುಂಬವನ್ನು ಅಭಿನಂದಿಸುತ್ತೇನೆ ಎನ್ನುತ್ತಾರೆ.

ಸರ್ ನಿಮ್ಮೀ ಅಭಿಮಾನಕ್ಕೆ ತುಂಬಾ ಸಂತೋಷವಾಗುತ್ತದೆ. ನಾನು ಕೇವಲ ಐದನೇ ತರಗತಿಯವರೆಗೆ ಮಾತ್ರ ಓದಿರಬಹುದು ಆದರೆ ಆ ದಿನಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಜೀವನದ ಮೌಲ್ಯಗಳನ್ನು ಪಂಚತಂತ್ರ ಸಣ್ಣ ಸಣ್ಣ ಕಥೆಗಳ ಮೂಲಕ ನಮಗೆ ಕಲಿಸಿಕೊಡಲಾಗುತ್ತಿತ್ತು. ಪಠ್ಯಪುಸ್ತಕಗಳಲ್ಲಿಯೂ ಸಹ ಪ್ರಾಮಾಣಿಕತೆ ಮತ್ತು ಸಮಗ್ರತೆಯಂತಹ ಮೌಲ್ಯಗಳನ್ನು ಬಲಪಡಿಸುವಂತಹ ವಿಷಯಗಳನ್ನು ಹೊಂದಿದ್ದವು ಆದರಿಂದಗಿಯೇ ನಮಗೆ ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ವ್ಯತ್ಯಾಸ ತಿಳಿಯುವುದರಲ್ಲಿ ಸಹಕಾರಿಯಾಗಿದೆ. ಆ ತತ್ವಗಳೇ ಇಂದಿಗೂ ನಮಗೆ ಪ್ರಾಮಾಣಿಕ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿದೆ. ದುರಾದೃಷ್ಟವಶಾತ್ ಇಂದಿನ ಶಾಲೆಗಳ ಶಿಕ್ಷಣದಲ್ಲಿ ಅಂತಹ ಮೌಲ್ಯಗಳನ್ನು ಕಲಿಸಿಕೊಡುತ್ತಿಲ್ಲ. ಜೀವನದ ಮೌಲ್ಯಕ್ಕಿಂತಲು ಅಂಕಗಳ ಬೆನ್ನೆತ್ತಿ ಹೋಗುತ್ತಿರುವುದು ನಿಜಕ್ಕೂ ಬೇಸವಾಗುತ್ತಿದೆ.

ನನ್ನ ಮಕ್ಕಳು ಮನೆಯಲ್ಲಿ ಓದುತ್ತಿದ್ದಾಗ, ಅದನ್ನು ಕೇಳಿಸಿಕೊಂಡಿದ್ದೇನೆ. ಅವರ ಪಠ್ಯಕ್ರಮದಲ್ಲಿ ನೈತಿಕ ಕಥೆಗಳು, ಸ್ಫೂರ್ತಿದಾಯಕ ಕವನಗಳು, ಪಂಚತಂತ್ರ, ರಾಜರತ್ನಂ ಅವರ ಮಕ್ಕಳ ಕಥೆಗಳ ಬದಲಾಗಿ, ಮೌಲ್ಯವಿಲ್ಲದ ಗೊಡ್ಡು ವಿಷಯಗಳನ್ನು ಕಲಿಯುತ್ತಿರುವುದನ್ನು ಗಮನಿಸಿದ್ದೇನೆ. ಅದಕ್ಕಾಗಿಯೇ ನನಗೆ ತಿಳಿದಿರುವ ಕೆಲವು ಮೌಲ್ಯಗಳನ್ನು ಕಲಿಸಿಕೊಡುವ ಸಲುವಾಗಿ ನಾನು ಈ ರೀತಿಯ ಸರಳ ಕಾರ್ಯಗಳನ್ನು ಅವರಿಂದ ಮಾಡಿಸುತ್ತೇನೆ.

ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆ ಕಾಫೀ ಮಾರಾಟಗಾರನ ದೂರದೃಷ್ಟಿ ಮತ್ತು ಅದನ್ನು ಅನೂಚಾನಾಗಿ ಪಾಲಿಸುತ್ತಿರುವ ಅವರ ಮಕ್ಕಳ ಕುರಿತಾಗಿ ಆಶ್ಚರ್ಯಚಕಿತರಾಗಿ ಅಭಿನಂದನಾಪೂರ್ವಕವಾಗಿ ಆ ಹುಡುಗನ ಬೆನ್ನನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ ಒಂದು ಕ್ಷಣ ಇಂಗು ತಿಂದ ಮಂಗನಂತಾದರೂ ನಂತರ ಸಾವರಿಸಿಕೊಂಡು ರಾಯರತ್ತ ಕ್ಷಮೆಯಾಚಿಸುವ ರೀತಿಯಲ್ಲಿ ದೇಶಾವರಿ ನಗೆ ಬೀರಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.

ಬಂದ ಕೆಲಸವನ್ನು ಮುಗಿಸಿಕೊಂಡ ಹುಡುಗ ಇದಾವುದಕ್ಕೂ ತಲೆ ಕೆಡಸಿಕೊಳ್ಳದೇ ತನ್ನ ಪಾಡಿಗೆ ತಾನು ರೈಲಿನಿಂದ ಇಳಿದು ಹೋಗುತ್ತಿದ್ದಂತೆಯೇ, ಮನಸ್ಸಿನಲ್ಲಿಯೇ ಆ ಹುಡುಗನ ಸಂಸ್ಕಾರಕ್ಕೆ ವಂದಿಸುತ್ತಾ, ಇಂತಹ ಕಲಿಯುಗದಲ್ಲೂ ಈ ರೀತಿಯ ಪ್ರಾಮಾಣಿಕರು ಸದಾಚಾರವನ್ನು ಪಾಲಿಸುತ್ತಿರುವುದರಿಂದಲೇ ಧರ್ಮವು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕೊಂಡು ನಿಟ್ಟುಸಿರು ಬಿಟ್ಟರೆ, ಅದುವರೆವಿಗೂ ಈ ಘಟನೆಯ ಬಗ್ಗೆ ತಲಾ ತಟ್ಟಿ ಮಾತನಾಡುತ್ತಿದ್ದ ಸಹಪ್ರಯಾಣಿಕರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಗರ ಬಡಿದವರಂತೆ, ಈಗಲೂ ಇಂತಹ ಸಹೃದಯದವರು ಇದ್ದಾರೆಯೇ? ಎಂದು ಮಾತನಾಡಿಕೊಂಡರು.

ಇದೇ ಅಲ್ಲವೇ ನಮ್ಮ ಧರ್ಮ, ಇದನ್ನೇ ಅಲ್ಲವೇ ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದು ಮತ್ತು ಇದನ್ನೇ ಅಲ್ಲವೇ ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸಿ ಕೊಡಬೇಕಾಗಿರುವುದು.

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಮತ್ತು ತೆಲುಗಿನ ಖ್ಯಾತ ಬರಹಗಾರಾದ ಶ್ರೀ ಜೆ.ಪಿ.ಶರ್ಮಾ ಅವರ ಲೇಖನವೊಂದರ ಭಾವಾನುವಾದವಾಗಿದೆ.

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಗಂಡ, ಹೆಂಡತಿ ಮತ್ತು ಮುದ್ದಾದ ಮಗಳು ಇದ್ದ ಅದೊಂದು ಸುಂದರವಾದ ಕುಟುಂಬ. ಒಬ್ಬಳೇ ಮಗಳಾಗಿದ್ದರಿಂದ ಬಹಳ ಮುದ್ದಿನಿಂದಲೇ ಗಿಣಿ ಸಾಕುವಂತೆ ಸಾಕಿ ಸಲಹಿದ್ದರು. ನೋಡ ನೋಡುತ್ತಿದ್ದಂತೆಯೇ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆಯೇ ಅವಳಿಗೊಂದು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ನಿರ್ಧರಿಸಿ ತಮ್ಮ ಬಂಧು ಮಿತ್ರರೊಂದಿಗೆ ತಮ್ಮ ಮಗಳಿಗೆ ಅನುರೂಪವಾದಂತಹ ಸಂಬಂಧವಿದ್ದರೆ ತಿಳಿಸಿ ಎಂದೂ ಸೂಚಿಸಿದ್ದರು.

ಅಲ್ಲಿ ಮತ್ತೊಂದು ಸುಂದರ ಸುಸಂಸ್ಕೃತ ಸುಖೀ ಕುಟುಂಬದವರೊಬ್ಬರೂ ಸಹಾ ಅವರ ವಿದ್ಯಾವಂತ, ವಿವೇಕವಂತ ಮಗನಿಗೂ ಸಂಬಂಧವನ್ನು ಹುಡುಕುತ್ತಿದ್ದರು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಎರಡೂ ಕುಟಂಬಕ್ಕೂ ಪರಿಚಯವಿದ್ದವರೊಬ್ಬರು ಆ ಎರಡೂ ಕುಟುಂಬವನ್ನು ಪರಿಚಯಿಸಿ ಒಗ್ಗೂಡಿಸಿದ ಪರಿಣಾಮ ಆ ಮನೆಯ ಮಧುಮಗಳು ಈ ಮನೆಯ ಮಧುಮಗನೊಂದಿಗೆ ವಿವಾಹವಾಗಿ ಎರಡೂ ಕುಟುಂಬಗಳು ಒಂದಾದವು.

lawyer

ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ ನಿಜವಾಗಿಯೂ ಮಧುಚಂದ್ರದಂತೆಯೇ ಇದ್ದು, ನವದಂಪತಿಗಳು ಬಹಳ ಅನ್ಯೋನ್ಯವಾಗಿದ್ದರು. ಅತ್ತೆ ಮತ್ತು ಮಾವ ಸಹಾ ಮಕ್ಕಳು ಈಗ ತಾನೇ ಮದುವೆಯಾಗಿದ್ದಾರೆ ಅವರಿಗಿಷ್ಟ ಬಂದಂತೆ ಇರಲಿ ಎಂದು ಯಾವುದೇ ರೀತಿಯ ತೊಂದರೆ ಕೊಡುತ್ತಿರಲಿಲ್ಲ. ಇಡೀ ವಾರ ತನ್ನ ಗಂಡನ ಮನೆಯಲ್ಲಿ ಇರುವಾಗ ಸಂತೋಷದಿಂದ ಇರುತ್ತಿದ್ದ ಹೆಂಡತಿ ವಾರಾಂತ್ಯದಲ್ಲಿ ಅಮ್ಮನ ಮನೆಗೆ ಹೋಗಿ ಬಂದ ನಂತರ ಅದೇಕೋ ಏನೋ ಗೊಂದಲಕ್ಕೆ ಬಿದ್ದವಳಂತೆ ಅನ್ಯಮನಸ್ಕಳಾಗಿರುತ್ತಿದ್ದದ್ದನ್ನು ಗಮನಿಸಿದ ತಾಯಿ ಮತ್ತು ಮಗ ಹೊಸದಾಗಿ ಮದುವೆಯಾಗಿ ತವರು ಮನೆ ಬಿಟ್ಟು ಬಂದಿರುವ ಕಾರಣ ಹೀಗಾಗುತ್ತಿರಬಹುದು. ನಂತರದ ದಿನಗಳಲ್ಲಿ ಇವೆಲ್ಲವೂ ಸರಿ ಹೋಗಬಹುದು ಎಂದೇ ಭಾವಿಸಿದ್ದರು.

ಅದೊಂದು ದಿನ ತಾಯಿ ಹೊಸದಾಗಿ ಮದುವೆಯಾಗಿದ್ದ ಮಗಳನ್ನು ತಮ್ಮ ಪರಿಚಯವಿದ್ದ ವಕೀಲರ ಬಳಿ ಕರೆದುಕೊಂಡು ಹೋಗಿ, ವಕೀಲರೇ ನಮ್ಮ ಮಗಳಿಗೆ ವಿಚ್ಚೇದನ ಕೊಡಿಸಿ ಎಂದು ಕೇಳಿಕೊಳ್ಳುತ್ತಾಳೆ. ವಕೀಲರೂ ಸಹಾ ಅ ಮದುವೆಗೆ ಹೋಗಿ ನವದಂಪತಿಗಳಿಗೆ ಆಶೀರ್ವದಿಸಿದ್ದ ಕಾರಣ ಅವರಿಗೆ ಬಹಳ ಅಚ್ಚರಿಯಾಗಿ,

ಏನಮ್ಮಾ ನಿನ್ನ ಗಂಡ ನಿನಗೆ ಹೊಡೆಯುತ್ತಾನಾ ?
ನಿನ್ನ ಗಂಡನಿಗೆ ನಿನ್ನ ಮೇಲೇ ಪ್ರೀತಿ ಇಲ್ಲವೇ? ಬೇರೆ ಯಾವುದಾದರು ಅನೈತಿಕ ಸಂಬಂಧವಿದೆಯೇ?
ನಿಮ್ಮ ಅತ್ತೆ ಮಾವ ಏನಾದರೂ ಹಿಂಸಿಸುತ್ತಿದ್ದಾರಾ?
ಅವರು ನಿಮ್ಮ ತವರಿನಿಂದ ವರದಕ್ಷಿಣೆ ಏನಾದರೂ ತರಲು ಒತ್ತಾಯ ಮಾಡುತ್ತಿದ್ದಾರಾ?
ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಲೇ ಹೋದಾಗ
ಎಲ್ಲದ್ದಕ್ಕೂ ಇಲ್ಲ, ಇಲ್ಲ, ಇಲ್ಲಾ.. ಎಂದೇ ಹೇಳುತ್ತಿದ್ದರೆ

ಇದರ ಮಧ್ಯೆ ಬಾಯಿ ಹಾಕಿದ ತಾಯಿ, ನನ್ನ ಮಗಳು ಅವರ ಗಂಡನ ಮನೆಯಲ್ಲಿ ತುಂಬಾ ಕಷ್ಟ ಪಡುತ್ತಿದ್ದಾಳೆ. ಅವರೆಲ್ಲರೂ ಅವಳಿಗೆ ತುಂಬಾನೇ ಹಿಂಸಿಸುತ್ತಿದ್ದಾರೆ ಎಂದು ಸ್ವಲ್ಪ ಜೋರಾಗಿ ಹೇಳಿದ್ದನ್ನು ಗಮನಿಸಿದ ವಕೀಲರು ಬಿಡೀ ಅಮ್ಮಾ.. ನಿಮ್ಮ ಮಗಳ ಸಮಸ್ಯೆ ಅರ್ಥವಾಯಿತು. ಆ ಸಮಸ್ಯೆಯನ್ನು ಬಗೆ ಹರಿಸುವ ಮೊದಲು ಕೆಲವೊಂದು ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸಿ ಎಂದು ಹೇಳುತ್ತಲೇ,

ನಿಮ್ಮ ಮನೆಯಲ್ಲಿ ನೀವೇ ಆಡುಗೆ ಮಾಡ್ತೀರಲ್ವಾ? ಹಾಗೆ ಅಡುಗೆ ಮಾಡುವಾಗ ನೀವು ಎಷ್ಟು ಸಲಾ ಕೈ ಆಡಿಸುತ್ತೀರೀ? ಎಂದು ಕೇಳಿದರು.

ಹೌದು ಸರ್ ನಾನೇ ಅಡುಗೆ ಮಾಡ್ತೀನಿ. ಅಡುಗೆ ಮಾಡುವಾಗ ತಳ ಹಿಡಿಯದಿರಲಿ ಎಂದು ಕೈ ಆಡಿಸಿ ನಂತರ ಕೈ ಆಡಿಸುವುದಿಲ್ಲ ಎಂದರು.

ಹಾಗೆ ಕೈಯ್ಯಾಡಿಸಿದರೇ ಏನಾಗುತ್ತದೆ? ಎಂದು ಕೇಳಿದ ಮರು ಪ್ರಶ್ನೆಗೆ

ಹುಡುಗಿಯ ತಾಯಿ ಇಲ್ಲಾ ಸರ್ ಹಾಗೆ ಪದೇ ಪದೇ ಕೈಯ್ಯಾಡಿಸುತ್ತಿದ್ದಲ್ಲಿ ಅಡುಗೆ ಹಳಸಿಹೋಗುತ್ತದೆ ಎಂದರು.

amma

ಅಮ್ಮಾ ಇದೇ ಕೆಲಸವನ್ನು ನೀವು ನಿಮ್ಮ ಮಗಳ ಜೀವನದಲ್ಲಿಯೂ ಅಳವಡಿಸಿಕೊಂಡಲ್ಲಿ ಆಕೆಯ ಜೀವನ ಹಸನಾಗಿ ಇರುತ್ತದೆ. ಹೌದು ನಿಜ ನಿಮ್ಮ ಒಬ್ಬಳೇ ಮಗಳನ್ನು ಬಹಳ ಮುದ್ದಿನಿಂದ ಸಾಕಿ ಸಲಹಿದ್ದೀರಿ. ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಆಕೆಯ ಪಾದಗಳು ಸವೆದು ಹೋಗಬಹುದು ಎನ್ನುವಷ್ಟರ ಮಟ್ಟಿಗೆ ಸಾಕಿ ಸಲಹಿದ್ದೀರಿ. ಆಕೆಗೆ ಒಳ್ಳೆಯ ವಿದ್ಯೆ, ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಕಲಿಸಿದ್ದೀರಿ. ನೀವೀಗ ಅರ್ಥ ಮಾಡಿ ಕೊಳ್ಳಬೇಕಾದ ಸತ್ಯವೇನೆಂದರೆ ಮದುವೆಗೆ ಮುಂಚೆ ಆಕೆ ನಿಮ್ಮ ಮಗಳು. ಮದುವೆ ಆದ ನಂತರ ಆಕೆ ಮತ್ತೊಬ್ಬರ ಮನೆಯ ಸೊಸೆ. ಅಲ್ಲಿ ಆಕೆಗೆ ಅದ ಜವಾಬ್ಧಾರಿಗಳು ಇರುತ್ತವೆ. ಸಣ್ಣ ಮಗು ಆರಂಭದಲ್ಲಿ ನಡಿಗೆ ಕಲಿಯುವಾಗ ಬಿದ್ದು ಎದ್ದು ನಂತರ ತನ್ನ ಪಾಡಿಗೆ ನಡಿಗೆಯನ್ನು ಕಲಿತು ಕೊಳ್ಳುತ್ತದೆ. ಮಗು ಬೀಳುತ್ತದೆ ಎಂದು ಅದನ್ನು ಕಂಕಳಲ್ಲಿ ಎತ್ತಿಕೊಂಡೇ ಹೋಗುತ್ತಿದ್ದಲ್ಲಿ ಅದು ಎಂದಿಗೂ ಸ್ವತಂತ್ರ್ಯವಾಗಿ ನಡಿಗೆಯನ್ನು ಕಲಿಯುವುದೇ ಇಲ್ಲ ಅಲ್ಲವೇ?.

ಆರಂಭದಲ್ಲಿ ಅದು ಆಕೆಗೆ ಗಂಡನ ಮನೆ ಎನಿಸಿದರು ಕ್ರಮೇಣ ಅದು ಆಕೆಯ ಮನೆಯೇ ಅಗುತ್ತದೆ. ಕೆಲ ವರ್ಷಗಳ ಹಿಂದೆ ನೀವೂ ಅದೇ ರೀತಿಯಲ್ಲಿಯೇ ಗಂಡನ ಮನೆಗೆ ಬಂದು ಎಲ್ಲವನ್ನೂ ಕಲಿತುಕೊಂಡಿರಲಿಲ್ಲವೇ? ಅದೇ ರೀತಿಯಲ್ಲಿ ಆಕೆಯೂ ಕೆಲ ದಿನಗಳಲ್ಲಿ ಕಲಿತುಕೊಳ್ಳುತ್ತಾಳೆ. ಆಕೆ ಖುದ್ದಾಗಿ ನಿಮ್ಮ ಬಳಿ ಯಾವುದಾದರೂ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಮಾತ್ರವೇ ಅದಕ್ಕೆ ಸೂಕ್ತವಾದ ಪರಿಹಾರ ನೀಡಬೇಕಷ್ಟೇ ಹೊರತು, ಅನಾವಶ್ಯಕವಾಗಿ ಆಕೆಯ ಸಂಸಾರದಲ್ಲಿ ಮೂಗು ತೂರಿಸಿಕೊಂಡು ಹೋದಲ್ಲಿ, ಅವಳು ತನ್ನ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಸಂಸಾರ ಒಡೆದು ಹೋಗಿ ಆಕೆ ಖಿನ್ನತೆಗೆ ಹೋಗುವ ಸಾಧ್ಯತೆಯೂ ಇದೆ.

atte2

ಮದುವೆಯಾಗಿ ಕೇವಲ ಮೂರ್ನಾಲ್ಕು ತಿಂಗಳುಗಳಾಗಿವೆ. ಆಕೆ ಅವಳ ಗಂಡನ ಮನೆಯವರ ನಡುವಳಿಕೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಹೊಂದಿಕೊಂಡು ಹೋಗಲು ಸಮಯಾವಕಾಶ ಕೊಡಬೇಕೇ ಹೊರತು, ಅವಳಿಗೆ ಈ ರೀತಿಯಾಗಿ ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಬೇಡಿ, ಸಂಬಂಧವನ್ನು ಒಗ್ಗೂಡಿಸಲು ಪ್ರಯತ್ನಿಸಬೇಕೇ ಹೊರತು ಸಂಬಂದ ಒಡೆಯುವ ಕೆಲಸವನ್ನು ದಯವಿಟ್ಟು ಮಾಡಬೇಡಿ ನಿಮಗೆ ಮತ್ತು ನಿಮ್ಮ ಮಗಳಿಗೆ ಶುಭವಾಗಲಿ ಎಂದು ಹೇಳಿ ಕಳುಹಿಸಿದರು.

ಇನ್ನು ಹೊಸದಾಗಿ ಹೆಣ್ಣು ಮಗಳದ್ದೂ ಒಂದಷ್ಟು ಜವಾಬ್ಧಾರಿ ಇರುತ್ತದೆ. ಆಕೆ ಹೇಗೆ ತನ್ನ ಗಂಡನ ಮನೆಯವರನ್ನು ಅರ್ಥಮಾಡಿಕೊಳ್ಳುತ್ತಾಳೋ ಹಾಗೆಯೇ ಆಕೆಯ ಪತಿಯೂ ತನ್ನ ಮನೆಯವರನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಡಬೇಕು. ಒಬ್ಬರ ಬಗ್ಗೆ ಮತ್ತೊಬ್ಬರ ಅಭಿಪ್ರಾಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕಾರಣ, ಆಕೆ ತಾನೇ ತನ್ನ ಮನೆಯವರ ಬಗ್ಗೆ ಆಭಿಪ್ರಾಯಗಳನ್ನು ಕಟ್ಟಿಕೊಡುವ ಮೂಲಕ ತಪ್ಪು ಸಂದೇಶ ರವಾನಿಸಬಾರದು.

WhatsApp Image 2021-08-01 at 11.27.17 PM

ಹೊಸಾ ಮಧುಮಗಳನ್ನು ನೆನಪಿಸಿಕೊಂಡಾಗ ಈ ಚಿತ್ರದಲ್ಲಿ ಧ್ಯಾನ್ಯಗಳನ್ನು ತುಂಬಿದ್ದ ಡಬ್ಬದಲ್ಲಿ ಸಿಕ್ಕಿಕೊಂಡ ಇಲಿ ಮರಿಯ ಕಥೆ ನೆನಪಾಗುತ್ತದೆ ಅಲ್ಲೊಂದು ಇಲಿ ಮರಿ ಧಾನ್ಯಗಳಿಂದ ತುಂಬಿದ ಡಬ್ಬದೊಳಗೆ ಹೋದ ತಕ್ಷಣ ತನ್ನಷ್ಟು ಸುಖೀ ಯಾರೋ ಇಲ್ಲಾ ಎಂದು ಭಾವಿಸಿ ಬೇರಾವುದನ್ನೂ ಯೋಚಿಸದೇ ತನ್ನಷ್ಟಕ್ಕೆ ತಾನು ಸದ್ದಿಲ್ಲದೇ ಧಾನ್ಯಗಳನ್ನು ತಿನ್ನತೊಡಗಿತು. ಡಬ್ಬಿಯಲ್ಲಿ ಧಾನ್ಯ ಕಡಿಮೆ ಯಾಗುತ್ತಿದ್ದಂತೆಯೇ ಅದಕ್ಕೆ ಅರಿವಿಲ್ಲದೆಯೇ ಅದು ಡಬ್ಬದಲ್ಲಿ ಬಂಧಿಯಾಗಿ ಹೊರ ಬರಲು ಗೊತ್ತಾಗದೇ ಪರದಾಡತೊಡಗಿತು.

ತವರಿನ ಬೆಂಬಲ ತನಗೆ ಸದಾಕಾಲವೂ ಇರುತ್ತದೆ ಎಂದು ಭಾವಿಸಿದ ಗಂಡನ ಮನೆಗೆ ಹೋದ ಮಗಳು ಆರಂಭದಲ್ಲಿ ತನ್ನ ಗಂಡನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳನ್ನೂ ತನ್ನ ತಾಯಿಯ ಮನೆಗೆ ಹೇಳುತ್ತಲೇ ಹೋಗುವ ಮುಖಾಂತರ ಆಕೆಗೇ ಅರಿವಿಲ್ಲದಂತೆಯೇ ದಬ್ಬದಲ್ಲಿ ಸಿಕ್ಕಿಕೊಂಡ ಇಲಿ ಮರಿಯಂತೆ ತಾನೇ ಸಿಕ್ಕಿ ಹಾಕಿಕೊಂಡು ಹೊರಬರಲಾಗದೇ ಒದ್ದಾಡುವಂತಹ ಪರಿಸ್ಥಿತಿ ತಂದುಕೊಳ್ಳುತ್ತಾಳೆ.

ಅತ್ತ ದರಿ ಇತ್ತ ಪುಲಿ ಎನ್ನುವಂತೆ ಅತ್ತ ತವರನ್ನು ಬಿಡಲಾಗದೇ ಇತ್ತ ಗಂಡನ ಮನೆಯಲ್ಲಿಯೂ ಹೊಂದಿಕೊಳ್ಳಲಾಗದೇ ವಿಲಿ ವಿಲಿ ಒದ್ದಾಡುವಂತಾಗುತ್ತದೆ. ಈ ಪರದಾಟ ಕೆಲವೊಮ್ಮೆ ಅತಿರೇಕಕ್ಕೂ ಹೋದಂತಹ ಉದಾಹರಣೆಗಳು ಹಲವಾರಿವೆ. ಹಾಗಾಗಿ ತಾಯಂದಿರು ತಮ್ಮ ಮಗಳ ಮೇಲೆ ಪ್ರೀತಿ ಇರಬೇಕೆಯೇ ಹೊರತು, ಅತೀಯಾದ ಕರಡಿ ಪ್ರೀತಿಯಿಂದ ಮಗಳ ಬಾಳಿನಲ್ಲಿ ಖಳನಾಯಕಿಯಾಗಬಾರದು. ಅದೇ ರೀತಿ ಮಗಳಿಗೂ ಸಹಾ ತವರಿನ ಮೇಲೆ ಪ್ರೀತಿ ಇರಬೇಕೇ ಹೊರತು, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತನ್ನು ಸದಾಕಾಲವೂ ಮನಸ್ಸಿನಲ್ಲಿಟ್ಟು ಕೊಂಡು ತನ್ನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ತನ್ನ ಜೀವನವನ್ನು ಸರಿ ದಾರಿಗೆ ಕೊಂಡೊಯ್ಯುವ ಮೂಲಕ ಹೋದ ಮನೆಗೂ, ತನ್ನ ತವರಿಗೂ ಕೀರ್ತಿ ತರುವಂತಾಗಬೇಕು.

ಏನಂತೀರಿ?
ನಿಮ್ಮವನೇ ಉಮಾಸುತ

ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು

graduationಅವನೊಬ್ಬ ಅಸಾಧಾರಣ ಹುಡುಗನಾಗಿದ್ದ. ಓದಿನಲ್ಲಂತೂ ಸದಾಕಾಲವೂ ಚುರುಕು. ಗಣಿತ ಮತ್ತು ವಿಜ್ಞಾನದಲ್ಲಂತೂ ಸದಾಕಾಲವೂ 100% ಅಂಕಗಳನ್ನು ಗಳಿಸುತ್ತಿದ್ದ ಕಾರಣ ಸಹಜವಾಗಿ ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿದ್ದಲ್ಲದೇ ಅಲ್ಲೂ ಸಹಾ ಅತ್ಯುತ್ತಮ ಅಂಕಗಳನ್ನು ಗಳಿಸಿ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ ಒಂದರಲ್ಲಿ ಎಂಬಿಎ ಪದವಿಯ ನಂತರ ಆರಂಕಿಯ ಸಂಬಳದ ಉದ್ಯೋಗವನ್ನು ಗಿಟ್ಟಿಸಿ ಅಲ್ಲಿಯೇ ನೆಲೆಸಿದ.

banglowಕೆಲವು ವರ್ಷಗಳ ನಂತರ ಕರ್ನಾಟಕ್ಕೆ ಬಂದು, ಮನೆಯವರು ನೋಡಿದ ಕನ್ನಡತಿಯನ್ನೇ ವಿವಾಹವಾಗಿ ಅಮೇರಿಕಾದಲ್ಲಿ 5 ಕೊಠಡಿಗಳು ಇರುವಂತಹ ದೊಡ್ಡದಾದ ಮನೆ ಮತ್ತು ಐಷಾರಾಮಿ ಕಾರುಗಳನ್ನು ಕಂತಿಯನಲ್ಲಿ ಖರೀದಿಸಿದ್ದ. ಅವರಿಬ್ಬರ ಸುಖ ದಾಂಪತ್ಯದ ಕುರುಹಾಗಿ ಆರತಿಗೊಬ್ಬಳು ಮಗಳು ಮತ್ತು ಕೀರ್ತಿಗೊಬ್ಬ ಮಗನೊಂದಿಗೆ ಅತ್ಯಂತ ಆರಾಮಾಗಿ ಜೀವಿಸತೊಡಗಿದ. ತಮ್ಮ ಮಗ ಅಮೇರಿಕಾದಲ್ಲಿ ಇದ್ದಾನೆಂದು ಆವರ ಪೋಷಕರು ಎಲ್ಲರ ಮುಂದೇ ಮಗನ ಬುದ್ಧಿ ಮತ್ತೆಯ ಬಗ್ಗೆ ಕೊಂಡಾಡಿಕೊಂಡಿದ್ದರೇ, ಉಳಿದವರು ತಮ್ಮ ಮಕ್ಕಳೂ ಅದೇ ರೀತಿ ಆಗಬೇಕೆಂದು ಇಚ್ಚೆ ಪಟ್ಟಿದ್ದರು.

ಆದರೆ ಇತ್ತೀಚೆಗೆ ಕೋವಿಡ್ ನಿಂದಾಗಿ ಇಡೀ ವಿಶ್ವವೇ ಲಾಕ್ಡೌನ್ ಆದಾಗ ಇದ್ದಕ್ಕಿದ್ದಂತೆಯೇ, ಅದೊಂದು ದಿನ ತನ್ನ ಹೆಂಡತಿ ಮತ್ತು ಮಕ್ಕಳನ್ನು ಗುಂಡಿಕ್ಕಿ ಕೊಂದಿದ್ದಲ್ಲದೇ ತಾನೂ ಸಹಾ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯವನ್ನು ತರಿಸಿತ್ತು. ಅಂತಹ ಸುಂದರವಾದ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದೇನಾಗಿತ್ತು ಎಂದು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ಸೈಕಾಲಜಿ ಅವರ ಪ್ರಕರಣವನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿದಾಗ ಅದು ಎಲ್ಲರಿಗೂ ಅಚ್ಚರಿಯನ್ನು ತರಿಸಿತ್ತು.

susideಸಂಶೋಧಕರು ಆ ಯುವಕನ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗಿ ಆತನ ಆತ್ಮಹತ್ಯೆ ಹಿಂದಿರಬಹುದಾದ ಕಾರಣವನ್ನು ವಿಚಾರಿಸಿದಾಗ ತಿಳಿದ ಬಂದ ವಿಷಯವೇನೆಂದರೆ, ಕೋವಿಡ್ನಿಂದಾಗಿ ಅಮೆರಿಕದ ಕೆಲವು ಸಾಫ್ಟ್ ವೇರ್ ಕಂಪನಿಗಳು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಬಹುತೇಕ ಕಂಪನಿಯ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿರದ ಕಾರಣ ಸುಮಾರು ತಿಂಗಳುಗಳ ಕಾಲ ಆತನಿಗೆ ಕೆಲಸ ಸಿಗದೇ ಹೋದಾಗ, ಕೈಯಲ್ಲಿರುವ ಹಣವೆಲ್ಲಾ ಖರ್ಚಾಗಿ ಹೋಗಿ ಮನೆ, ಕಾರ್ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಕಟ್ಟಲು ಕಷ್ಟವಾಗುತ್ತಿತ್ತು. ಆರಂಭದಲ್ಲಿ ಒಂದೆರಡು ಕೆಲಸದ ಅವಕಾಶಗಳು ದೊರೆತರೂ, ಆ ಕಂಪನಿಗಳು ಆತನಿಗೆ ಹಿಂದಿನಷ್ಟು ಸಂಬಳ ಕೊಡಲು ಸಾಧ್ಯವಿಲ್ಲ ಎಂದಾಗ ಅಂತಹ ಕೆಲಸಗಳಿಗೆ ಆತ ಸೇರಿಕೊಂಡಿರಲಿಲ್ಲ. ನಂತರ ಆತ ಎಂತಹ ಕೆಲಸವೇ ಆಗಲಿ ಎಷ್ಟೇ ಸಂಬಳವೇ ಆಗಲೀ ಕೆಲಸ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿಗೆ ಬಂದಾಗ ಆತನಿಗೆ ಕೆಲಸವೇ ಸಿಗದೇ ಹೋದಾಗ ಮಾನಸಿಕ ಖಿನ್ನತೆಗೆ ಓಳಗಾಗಿ ಹೋದ. ಇದೇ ಸಮಯ್ದಲ್ಲಿ ಕಾರ್ ಮತ್ತು ಮನೆಯ ಕಂತನ್ನು ಕಟ್ಟಿಲ್ಲದ ಕಾರಣ ಎರಡನ್ನೂ ಮುಟ್ಟುಗೋಲು ಹಾಕಿಕೊಂಡಾಗ ಆಕಾಶವೇ ಕಳಚಿ ಬಿತ್ತು ಎಂದು ಕೊಂಡು ಆತ್ಮಹತ್ಯೆಯೇ ಅಂತಿಮ ಪರಿಹಾರ ಎಂದು ನಿರ್ಧರಿಸಿ, ಮೊದಲು ತನ್ನ ಹೆಂಡತಿ ನಂತರ ಮುದ್ದಾದ ಅಮಾಯಕ ಮಕ್ಕಳನ್ನು ಗುಂಡಿಕ್ಕಿ ಕೊಂದು ನಂತರ ಸ್ವತಃ ಗುಂಡನ್ನು ಹಾರಿಸಿಕೊಂಡು ಮೃತಪಟ್ಟಿದ್ದ.

ಆತ ಶೈಕ್ಷಣಿಕವಾಗಿ ನಿಜಕ್ಕೂ ಅಪ್ರತಿಮನಿದ್ದರೂ, ಪರಿಸ್ಥಿತಿಯ ವೈಫಲ್ಯಗಳನ್ನು ನಿಭಾಯಿಸಲು ಅವನಿಗೆ ತಿಳಿದಿರಲಿಲ್ಲ. ಶಿಕ್ಷಣ ಪದ್ದತಿಯಲ್ಲಿಯೂ ಸಹಾ ಆತನಿಗೆ ಜೀವನದ ಕಲೆಯ ಬಗ್ಗೆ ಯಾವುದೇ ತರಬೇತಿ ನೀಡಲಾಗಿರಲಿಲ್ಲ. ಕೇವಲ ಹೇಳಿಕೊಟ್ಟಿದ್ದನ್ನು ಉರು ಹೊಡೆದದ್ದನ್ನು ಪರೀಕ್ಶೆಯಲ್ಲಿ ಕಕ್ಕಿ ಅದರಿಂದ ಉತ್ತಮ ಅಂಕಗಳನ್ನು ಗಳಿಸಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಐದಾರಂಕಿಯ ಸಂಬಳದ ಕೆಲವನ್ನು ಗಿಟ್ಟಿಸಿಕೊಂಡು ಕಂತಿನಲ್ಲಿ ಕಾರು ಬಂಗಲೆಗಳನ್ನು ಕೊಂಡು ಕೊಂಡು ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡುವುದೇ ಜೀವನ ಎಂದು ಕೊಂಡಿದ್ದ ಕಾರಣ ಒಂದು ಸುಂದರವಾದ ಕುಟುಂಬ ನಾಶವಾಗಬೇಕಾಯಿತು.

ಹಾಗಾದರೇ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದಾಗಿತ್ತು ಎಂದು ಯೋಚಿಸಿದಾಗ ತಿಳಿದು ಬಂದ ಅಂಶಗಳೆಂದರೆ,

  • ಪ್ರತಿದಿನ ಮುಂಜಾನೆ ಉದಯಿಸುವ ಸೂರ್ಯ, ಮಧ್ಯಾಹ್ನದ ವೇಳೆ ಅತ್ಯಂತ ಪ್ರಕಾಶಮಾನವಾಗಿ ಪ್ರಜ್ವಲಿಸಿ, ಸಂಜೆಯ ಹೊತ್ತಿಗೆ ನಿಧಾನವಾಗಿ ಮುಳುಗುವಂತೆಯೇ ನಮ್ಮ ಜೀವನ ಎಂಬುದರ ಪರಿವೆ ಎಲ್ಲರಿಗೂ ಇರಬೇಕು. ಜೀವನದಲ್ಲಿ ಎಷ್ಟು ಕ್ಷಿಪ್ರಗತಿಯಲ್ಲಿ ಗಳಿಸುತ್ತೇವೆಯೋ, ಅದೇ ವೇಗದಲ್ಲಿಯೇ ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕಳೆದುಕೊಳ್ಳುತ್ತೇವೆ ಎಂಬ ಪರಿಜ್ಞಾನ ನಮಗಿರಬೇಕು. ಜಗತ್ತಿನ ಆರ್ಥಿಕ ಪರಿಸ್ಥಿತಿ ಯಾವಾಗಲೂ ಒಂದೇ ರೀತಿಯಾಗಿರದೇ ಅದು ಏಳು ಬೀಳುಗಳನ್ನುಕಾಣುತ್ತಲೇ ಇರುತ್ತದೆ ಅದನ್ನು ಎದುರಿಸುವಂತಹ ಮಾನಸಿಕ ಧೈರ್ಯವನ್ನು ಹೊಂದಿರುವುದು ಅತ್ಯಾವಶ್ಯಕ.
  • ಯಶಸ್ಸನ್ನು ಅನುಭವಿಸಲು ಹೇಗೆ ಸಿದ್ಧರಿರುತ್ತೇವೆಯೋ ಹಾಗೆಯೇ, ವೈಫಲ್ಯಗಳನ್ನು ನಿಭಾಯಿಸಲು ಸೂಕ್ತವಾದ ರೀತಿಯಲ್ಲಿ ತಯಾರಾಗಿರುವುದೋ ಇಲ್ಲವೇ ತರಬೇತಿ ಪಡೆದಿರುವುದು ಉತ್ತಮ ಯಶಸ್ಸಿನ ಭಾಗವಾಗಿದೆ.
  • ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವ ನಮ್ಮ ಹಿಂದಿನ ನಾಣ್ಣುಡಿ ಉಪಯೋಗಕ್ಕೆ ಬಾರದೇ ಕೇವಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತು ವಾಸ್ತವಕ್ಕೆ ಹತ್ತಿರವಾಗಿದೆ.
    ಹಾಗಾಗಿ ಪ್ರತೀ ಪೋಷಕರೂ  ತಮ್ಮ ಮಕ್ಕಳಿಗೆ ಉರು ಹೊಡೆದು ಅಂಕಗಳಿಸುವುದೇ ಜೀವನದ ಧ್ಯೇಯ ಎನ್ನುವುದನ್ನು ಕಲಿಸದೇ, ಇಂತಹ ಸಂಧರ್ಭಗಳಲ್ಲಿ ಬದುಕಿನ ವೈಫಲ್ಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನೂ ತಮ್ಮ ಮಕ್ಕಳಿಗೆ ಕಲಿಸಿದಾಗಲೇ ಜೀವನದ ಮೌಲ್ಯಗಳು ಹೆಚ್ಚುತ್ತವೆ.
  • ಉನ್ನತ ಮಟ್ಟದ ವಿಜ್ಞಾನ ಮತ್ತು ಗಣಿತವನ್ನು ಕಲಿಯುವಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯಕಾರಿಯಾದರೂ, ಅದರ ಜೊತೆಗೆ ಸಾಮಾಜಿಕ ಪರಿಜ್ಞಾನ ಮತ್ತು ಇತಿಹಾಸವನ್ನು ಅಭ್ಯಾಸ ಮಾಡುವುದರಿಂದ ಪ್ರತಿ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಮತ್ತು ನಮ್ಮ ಹಿಂದಿನವರು ಅದನ್ನು ಹೇಗೆ ನಿಭಾಯಿಸಿದ್ದರು ಎಂಬುದು ತಿಳಿಯುತ್ತದೆ.
  • ಕೇವಲ ಹಣಕ್ಕಾಗಿ ಕೆಲಸ ಮಾಡುವುದನ್ನು ಕಲಿಸುವ ಬದಲು ಹಣದ ಮೌಲ್ಯ ಮತ್ತು ಕಡಿಮೆ ಹಣವಿದ್ದಾಗಲೂ ಹೇಗೆ ಜೀವನವನ್ನು ನಿಭಾಯಿಸಬಹುದು ಎಂಬುದನ್ನು ಕಲಿಸುವುದು ಇಂದಿನ್ಗ ಪರಿಸ್ಥಿತಿಗೆ ಅತ್ಯುತ್ತಮವಾಗಿದೆ.
  • panchaಇದನ್ನೇ ನಮ್ಮ ಹಿಂದಿನವರು ಪಂಚತಂತ್ರ ಕಥೆಗಳು ಮತ್ತು ಪುರಾಣ ಪುರುಷರ ಜೀವನ ಚರಿತ್ರೆಯ ಮೂಲಕ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದರು.
  • ನಮ್ಮ ಮನೆಯಲ್ಲಿ ಅಮ್ಮಂದಿರು ತಮಗೆ ಸಿಕ್ಕ ಹಣದಲ್ಲಿ ಅಷ್ಟೋ ಇಷ್ಟು ಹಣವನ್ನು ಸಾಸಿವೇ, ಜೀರಿಗೆ ಡಭ್ಬದಲ್ಲಿ ಜತನದಿಂದ ಎತ್ತಿಟ್ಟು ಅವಶ್ಯಕತೆ ಬಂದಾಗ ಉಪಯೋಗಿಸಿಕೊಳ್ಳುತ್ತಿದ್ದರು.
  • ಕೈಯ್ಯಲ್ಲಿ ಹಣವಿದ್ದಾಗ ಮಜಾ ಉಡಾಯಿಸದೇ, ಭೂಮಿ, ಬೆಳ್ಖಿ ,  ಬಂಗಾರಗಳಂತಹ ಸ್ಥಿರಾಸ್ತಿಗಳ ಮೇಲೆ ವಿನಿಯೋಗಿಸಿ ಅವಶ್ಯಕತೆ ಇದ್ದಾಗ ಅದನ್ನು ಮಾರಿಯಾದರೂ ಜೀವಿಸಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದರು.

ದುರಾದೃಷ್ಟವಷಾತ್ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಇಂದಿನ ಯುವಜನಾಂಗಕ್ಕೆ ನಮ್ಮ ಹಿರಿಯರ ಹಾಕಿಕೊಟ್ಟ ಜೀವನ ಶೈಲಿಯು ಒಗ್ಗಿ ಬರದೇ, ಪಾಶ್ಚಿಮಾತ್ಯದ ದಿಢೀರ್ ಜೀವನಕ್ಕೆ ಮಾರು ಹೋಗಿರುವ ಕಾರಣದಿಂದಾಗಿಯೇ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ ಎಂದರೂ ತಪ್ಪಾಗಲಾರದು.

ಹಿಂದೆಲ್ಲಾ 8 ವರ್ಷಗಳ ವರೆವಿಗೂ ಅಮ್ಮನ ಸೆರಗಿನಂಚಿನಲ್ಲಿಯೇ ಹಾಲು ಕುಡಿಯುತ್ತಿದ ಮಗು ನಂತರ 16 ವರ್ಷಗಳ ಕಾಲ ವಿಧ್ಯಾಭ್ಯಾಸ ಪಡೆದು ಉದ್ಯೋಗವನ್ನು ಗಿಟ್ಟಿಸಿ ಒಂದೆರಡು ವರ್ಷಗಳ ನಂತರ ಮದುವೆಯಾಗಿ ಮಕ್ಕಳಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ಮನೆ ಮಠವನ್ನು ಕಟ್ಟಿಸಿಕೊಂಡು 50-60ರ ಆಸುಪಾಸಿನಲ್ಲಿ ಮಕ್ಕಳ ಮದುವೆ ಮಾಡಿ ನಿವೃತ್ತರಾಗ್ಗಿ ನೆಮ್ಮಯಿಂದ ಮೊಮ್ಮಕ್ಕಳೊಂದಿಗೆ ರಾಮಾ ಕೃಷ್ಣಾ ಗೋವಿಂದಾ ಎಂದು ಜೀವನ ನಡೆಸುತ್ತಿದ್ದರು.

ಆದರೆ ಇಂದು ಎಲ್ಲವೂ ದಿಢೀರ್ ಪ್ರಪಂಚ. ಇವತ್ತು ಹಾಕಿದ ಬೀಜ ಮಾರನೇ ದಿನವೇ ಮೊಳಕೆಯೊಡೆದು ಒಂದು ವಾರದೊಳಗೇ ಫಲ ನೀಡಬೇಕೆಂದು ಬಯಸುತ್ತಿರುವುದೇ ಅಚ್ಚರಿ ಮೂಡಿಸುತ್ತದೆ ಇಂದು 25-30 ವರ್ಷಗಳಿಗೇ ಉನ್ನತ ಮಟ್ಟದ ಹುದ್ದೆಯನ್ನು ಪಡೆದು ಲಕ್ಷಾಂತರ ಹಣವನ್ನು ಸಂಪಾದಿಸಿ ಕೆಲಸದ ಒತ್ತಡಗಳನ್ನು ನಿಭಾಯಿಸಲಗದೇ30ಕ್ಕೆಲ್ಲಾ ತಲೆಯ ಕೂದಲೆಲ್ಲಾ ಉದುರಿಕೊಂಡು ಅಧಿಕ ರಕ್ತದೊತ್ತಡ, ಮದುಮೇಹ ಮತ್ತು ಹೃದಯಸಂಬಂಧಿತ ಖಾಯಿಲೆಗಳಿಗೆ ತುತ್ತಾಗಿ ೪೦ಕ್ಕೆಲ್ಲಾ ಇಹಲೋಕ ತ್ಯಜಿಸುವಷ್ಟರ ಮಟ್ಟಿಗೆ ಬಂದಿರುವುದು ಇಜಕ್ಕೂ ದುಃಖಕರವಾಗಿದೆ.

ಯಶಸ್ಸು ನಮಗೆ ಕ್ಷಣಿಕ ಸುಖಃವನ್ನು ಕೊಡುತ್ತದಾದರೂ, ವೈಫಲ್ಯವು ಬದುಕಿನ ಪಾಠವನ್ನು ಕಲಿಸುತ್ತದೆ. ಹಾಗಾಗಿ ಯಶಸ್ಸು ಗಳಿಸಿದಾಗ ಹಿಗ್ಗದೇ, ವೈಫಲ್ಯ ಬಂದಾಗ ಕುಗ್ಗದ ರೀತಿಯಲ್ಲಿ ಸಮಚಿತ್ತದಲ್ಲಿ ಜೀವನ ನಡೆಸುವತ್ತ ಹರಿಸೋಣ ನಮ್ಮ ಚಿತ್ತ

ಏನಂತೀರೀ?
ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ

ವರ್ಕ್ ಫ್ರಂ ಹೋಮ್

ಶಂಕರ ದೂರದ  ಹಾಸನದ ಜಿಲ್ಲೆಯ ಸಣ್ಣದೊಂದು ಗ್ರಾಮದಲ್ಲಿ ಹುಟ್ಟಿ ಅಲ್ಲಿಯೇ ತನ್ನ ವಿದ್ಯಾಭ್ಯಾಸವನ್ನೆಲ್ಲವನ್ನೂ ಮುಗಿಸಿದವ. ಇದ್ದ ಸಣ್ಣ ಸಾಗುವಳಿ ಅವರ ಜೀವನಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು  ಅರಂಭದಲ್ಲಿ  ಅವರಿವರ ಕೈಕಾಲು ಹಿಡಿದು ಸಣ್ಣ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ನಂತರ ತನ್ನ ಸ್ವಸಾಮರ್ಥ್ಯದಿಂದ ಬೇಗನೇ ಮೇಲೆ ಬಂದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಐದಂಕಿಯ ಸಂಬಳ ಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಾನೆ. ಬದುಕಿನಲ್ಲಿ ಎಷ್ಟೇ ಮೇಲಕ್ಕೆ ಏರಿದ್ದರೂ  ತನ್ನ ಹುಟ್ಟೂರು ತಂದೆ ತಾಯಿ, ತಾತಾ ಅಜ್ಜಿಯರನ್ನು ಮರೆಯದ ಶಂಕರ ಪ್ರತೀ ತಿಂಗಳೂ ತನ್ನ ಸಂಬಳದಲ್ಲಿ ಊರಿಗೆ ಹಣವನ್ನು ಕಳುಹಿಸಿ  ತನ್ನ ಪೋಷಕರನ್ನು ತನ್ನ ಕೈಲಾದ ಮಟ್ಟಿಗೆ ಉತ್ತಮವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿರುತ್ತಾನೆ.

ಹಿರಿಯರೆಲ್ಲರೂ ಸೇರಿ ಶಂಕರನಿಗೆ ಮದುವೆ ಮಾಡಿ ಇಬ್ಬರು ಮುದ್ದಾದ  ಮಕ್ಕಳ ತಂದೆಯಾಗುತ್ತಾನೆ. ಅಗಾಗಾ ಊರಿನಿಂದ ತಾತ ಅಜ್ಜಿ ಇಲ್ಲವೇ ಅಪ್ಪಾ ಅಮ್ಮಾ ಸಹಾ ಬೆಂಗಳೂರಿಗೆ ಬಂದು ಕೆಲದಿನಗಳ ಕಾಲ ಇದ್ದು ಹೋಗುತ್ತಿದ್ದ ಕಾರಣ,  ಎರಡು ಕೊಠಡಿಗಳುಳ್ಳ ಒಂದು ಬಾಡಿಗೆ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುತ್ತಾರೆ. ಬೆಳಿಗ್ಗೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ತಿಂಡಿ ತಿಂದು ಊಟದ ಡಬ್ಬಿ ಹಿಡಿದು ಕಛೇರಿಗೆ ಹೊರಟನೆಂದರೆ ಇನ್ನು ಮನೆಗೆ ಹಿಂದಿರುಗುತ್ತಿದ್ದದ್ದು ರಾತ್ರಿಯೇ.  ಎಲ್ಲಿಗಾದರೂ ಹೋಗಬೇಕಾದರೇ, ಕುಟುಂಬದೊಡನೆ ನೆಮ್ಮದಿಯಾಗಿ ಕಾಲ ಕಳೆಯಲೂ ಸಹಾ  ವಾರಾಂತ್ಯಕ್ಕೆ ಕಾಯ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಯಂತಹ ಯಾಂತ್ರೀಕೃತ ಜೀವನಕ್ಕೆ ಒಗ್ಗಿ ಹೋಗಿರುತ್ತಾರೆ.

work1ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಪ್ರಪಂಚಾದ್ಯಂತ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡು ಇಡೀ ಪ್ರಪಂಚವೇ ಲಾಕ್ಟೌನ್ ಆಗಿ ಹೋದಾಗ, ಶಂಕರನೂ ಮನೆಯಿಂದಲೇ ಕೆಲಸವನ್ನು ಮಾಡಲು ಆರಂಭಿಸುತ್ತಾನೆ.  ಆರಂಭದಲ್ಲಿ ಈ ಲಾಕ್ಡೌನ್ ಎಲ್ಲವೂ  ಒಂದೆರಡು ವಾರಗಳ ಮಟ್ಟಿಗೆ ಎಂದು ಭಾವಿಸಿದ್ದವರ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿ  ತಿಂಗಳಾನುಗಟ್ಟಲೇ ಲಾಕ್ಡೌನ್ ಆದಾಗಾ ವೃಥಾ ಸುಮ್ಮನೇ ಇಲ್ಲೇಕೆ ಬಾಡಿಗೆ ಮನೆಯಲ್ಲಿ ಇರುವುದು ಎಂದುಕೊಂಡು  ಮನೆ ಖಾಲಿ ಮಾಡಿ ಸಂಸಾರ ಸಮೇತ ಊರಿಗೆ ಹೋಗಿಬಿಡುತ್ತಾನೆ. 

ajjiಮೊಬೈಲ್ ಕ್ರಾಂತಿಯಿಂದಾಗಿ ಎಲ್ಲೆಡೆಯೂ  ಸುಲಭವಾಗಿ ಮೊಬೈಲ್ ಬಳಸ ಬಹುದಾದ ಕಾರಣ ಶಂಕರನೂ ತನ್ನ ಹಳ್ಳಿಯ ಮನೆಯಿಂದಲೇ ನೆಮ್ಮದಿಯಾಗಿ Work from home ಮಾಡಲು ಆರಂಭಿಸುತ್ತಾನೆ.   ನಗರದ ಕಲುಷಿತ ವಾತಾವರಣದ ಜಂಜಾಟದಿಂದ ಬೇಸತ್ತು ಹೋಗಿದ್ದವರಿಗೆ ಇಡೀ ಕುಟುಂಬವೇ ತಿಂಗಾಳನುಗಟ್ಟಲೇ ಒಟ್ಟಾಗಿ ಕಳೆಯುವ ಸೌಭಾಗ್ಯ ಕೊರೋನಾ ಮಾಹಾಮಾರಿಯಿಂದಾಗಿ ಬಂದೊದಗಿರುತ್ತದೆ.  ಚಿಕ್ಕ ಮಕ್ಕಳೂ ಸಹಾ ತಾತಾ ಅಜ್ಜಿ, ಮುತ್ತಾತ, ಮುತ್ತಜ್ಜಿಯವರ ಆರೈಕೆಯಲ್ಲಿ ಪ್ರಕೃತಿಯ ಸೌಂದರ್ಯದೊಂದಿಗೆ ಊರಿನ ಹೊಲ ಗದ್ದೆ, ಕೆರೆ, ಭಾವಿ, ಹತ್ತಾರು ದೇವಸ್ಥಾನಗಳು, ದೇವಸ್ಥಾನದ ಮುಂದಿನ ಕಲ್ಯಾಣಿ ಹೀಗೆ ಎಲ್ಲವನ್ನೂ ಅಹ್ವಾದಿಸುತ್ತಾ ಅಲ್ಲಿನ ವಾತಾವರಣಕ್ಕೆ ಬಲು ಬೇಗನೇ ಒಗ್ಗಿ ಹೊಗುತ್ತಾರೆ.   ಅಗೊಮ್ಮೆಈಗೊಮ್ಮೆ ನೆಟ್ ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆಯ ಹೊರತಾಗಿಯೂ ತನ್ನ ಕಛೇರಿಯ ಕೆಲಸ ಸುಗಮವಾಗಿ ಸಾಗುತ್ತಾ ತಿಂಗಳು ಕಳೆಯುವ ಹೊತ್ತಿಗೇ  ಸಂಬಳ ಬ್ಯಾಂಕಿಗೆ ಜಮೆಯಾಗುತ್ತಿರುತ್ತದೆ. ತಿಂಗಳಿಗೊಮ್ಮೆ ಇಲ್ಲವೇ ಎರಡು ಬಾರಿ ಹತ್ತಿರದ ಪಟ್ಟಣಕ್ಕೆ ಹೋಗಿ ಮನೆಗೆ ಅಗತ್ಯವಿದ್ದಂತಹ ಸಾಮಾನುಗಳನ್ನು ಶಂಕರ ತರುತ್ತಿರುತ್ತಾನೆ.  ಮೊಮ್ಮಕ್ಕಳು, ಮರಿ ಮಕ್ಕಳು ಬಂದಿರುವ ಕಾರಣ  ಅವರ ಆಟ ಪಾಠಗಳ ನಡುವಿನಲ್ಲಿ ಅವರಿಗಿದ್ದ ಸಣ್ಣ ಪುಟ್ಟ ಕೈನೋವು, ಮಂಡೀ ನೋವು ಸೊಂಟ ನೋವು ಮುಂತಾದವುಗಳ ನೆನಪಿಗೇ ಬಾರದೇ, ಮಗ ಸೊಸೆ ಮಕ್ಕಳಿಗೆ ಬೇಕಾದಂತಹ ರುಚಿ ರುಚಿಯಾದ  ಅಡುಗೆಗಳನ್ನು ಮಾಡಿಕೊಂಡು ಸವಿಯುತ್ತಾ ನೆಮ್ಮದಿಯಿಂದ ತುಂಬು ಕುಟುಂಬ ಜೀವನವನ್ನು ಸಾಗಿಸುತ್ತಿರುತ್ತದೆ.

ಅದೊಮ್ಮೆ ಶಂಕರ ತನ್ನ ಮ್ಯಾನೇಜರ್ ನೊಂದಿಗೆ ಮೀಟಿಂಗ್ ನಲ್ಲಿ ಇದ್ದಾಗ ಮುತ್ತಜ್ಜಿಯ ಜೊತೆ ಆಟವಾಡುತ್ತಿದ್ದ ಮಕ್ಕಳು ವಿಪರೀತ ಗಲಾಟೆ ಮಾಡುತ್ತಿರುವುದು ಶಂಕರನಿಗೂ ಮತ್ತು ಅವನ ಮ್ಯಾನೇಜರಿಗೂ ಸ್ವಲ್ಪ ಮುಜುಗರ ತರುತ್ತದೆ. ಕೂಡಲೇ. ತನ್ನ ಮೀಟಿಂಗ್ ಮೈಕ್ ಮ್ಯೂಟ್ ಮಾಡಿ ಅಜ್ಜೀ, ಸ್ವಲ್ಪ ಗಲಾಟೆ ಕಡಿಮೆ ಮಾಡ್ತೀರಾ? ನಾನು ಕಾಲಲ್ಲಿ ಇದ್ದೀನಿ. ನನಗೆ ತೊಂದರೆ ಆಗುತ್ತಿದೆ ಎನ್ನುತ್ತಾನೆ ಶಂಕರ.

work2ಊರಿನಿಂದ ಬಂದಾಗಲಿಂದಲೂ ಲ್ಯಾಪ್ ಟ್ಯಾಪ್ ಮುಂದೆಯೇ ಕುಳಿತುಕೊಂಡು ಪಟ ಪಟನೇ ಕೀಲಿಗಳನ್ನು ಒತ್ತುತ್ತಾ ಅಗ್ಗಾಗ್ಗೆ ಕಿವಿಗೆ ಹೆಡ್ ಸೆಟ್ ಹಾಕಿಕೊಂಡು ಗಂಟೆ ಗಟ್ಟಲೇ ಮಾತನಾಡುತ್ತಿರುವ ಮೊಮ್ಮಗನ ಕೆಲಸದ ಬಗ್ಗೆ ಅಜ್ಜಿಗೂ ಬಹಳಷ್ಟು ಕುತೂಹಲವಿರುತ್ತದೆ.  ಇದೇ ಸಮಯ ಎಂದು ಕೊಂಡು ತನ್ನ ಮೊಮ್ಮಗ ಅದೇನು ಮಾಡುತ್ತಿದ್ದಾನೆ ಎಂದು ಕಂಪ್ಯೂಟರ್ ಮುಂದೆ  ಮುಖ ಚಾಚಿದ ಅಜ್ಜಿ, ಆ ಕಡೆಯಲ್ಲಿದ್ದ ವ್ಯಕ್ತಿಯನ್ನು ನೋಡಿ ಅವರು ಯಾರು? ಎಂದು ಕೇಳುತ್ತಾರೆ. ಅದಕ್ಕೆ ಶಂಕರ, ಅವರು ನಮ್ಮ ಮ್ಯಾನೇಜರ್, ನೀವೀಗ ಸುಮ್ಮನೇ ಹೊರಡಿ ಎಂದಾಗ, ನಾನು ನಿಮ್ಮ ಮ್ಯಾನೇಜರ್ ಬಳಿ ಮಾತನಾಡಬಹುದೇ? ಎಂದು ಕೇಳುತ್ತಾಳೆ.  ಅಜ್ಜಿಯ ವರಾತ ನೋಡಿ ಮುಜುಗರಕ್ಕೊಳಗಾದ ಶಂಕರ, ಅಜ್ಜೀ ನಾನು ಕೆಲಸ ಮಾಡುತ್ತಿದ್ದೇನೆ. ನೀವು ಹೀಗೆಲ್ಲಾ ಚಿಕ್ಕ ಮಕ್ಕಳ ರೀತಿಯಲ್ಲಿ ತೊಂದರೆ ಕೊಡಬಾರದು ಎನ್ನುತ್ತಿರುವಾಗಲೇ, ಅಜ್ಜೀ ಸಂಜ್ಞೆಯಲ್ಲಿಯೇ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಮ್ಯಾನೇಜರ್ ಅವರಿಗೆ ತಿಳಿಸುತ್ತಾಳೆ.

ಇದನ್ನೆಲ್ಲಾ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಶಂಕರನ ಮ್ಯಾನೇಜರ್ ಸಹಾ,  ಒಂದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ  ಎಂದು ನಿರ್ಧರಿಸಿ, ಶಂಕರ್, ನಿಮ್ಮ ಅಜ್ಜಿಯವರಿಗೆ ಮಾತನಾಡುವ ಅವಕಾಶ ಕೊಡಿ ಎಂದಾಗ, ಶಂಕರಿಗೆ ಆಶ್ಚರ್ಯ ಮತ್ತು ಭಯವೂ ಆಗುತ್ತದೆ. ಅಯ್ಯೋ ನಮ್ಮಜ್ಜಿ ಏನು ಮಾತನಾಡಿ ಬಿಡುತ್ತಾರೋ ಎಂಬ ಕಳವಳವಿದ್ದರೂ  ಅತ್ತ ದರಿ ಇತ್ತ ಪುಲಿ ಎಂಬಂತೆ ಮೇಲಧಿಕಾರಿಯ ಆದೇಶದಂತೆ ಅಜ್ಜೀ ಒಂದು ನಿಮಿಷ ಮಾತನಾಡಿ ಬಿಡಿ ಎನ್ನುತ್ತಾನೆ.

ಸರಿ ಸರಿ ಎಂದು ತನ್ನ ತಲೆಯ ಮುಂದೆ ಚಾಚಿದ್ದ ಕೂದಲನ್ನು ಸರಿಪಡಿಸಿಕೊಂಡು ನಮಸ್ಕಾರ ಎಂದು ಎರಡೂ ಕೈಗಳಿಂದ ನಮಸ್ಕರಿಸಿ, ಚಿಕ್ಕದಾಗಿ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ ಅಜ್ಜಿ.ಆದಕ್ಕೆ ಪ್ರತಿಯಾಗಿ ಮ್ಯಾನೇಜರ್ ಸಹಾ ಪ್ರತಿವಂದಿಸುತ್ತಾರೆ.

ಆಗ ಅಜ್ಜೀ ನೋಡೀ ಇವ್ರೇ, ನೀವೇಕೋ ತುಂಬಾ ಒತ್ತಡದಲ್ಲಿ ಇದ್ದೀರಿ ಮತ್ತು ಉದ್ವೇಗದಿಂದ ಕೆಲದ ಮಾಡುತ್ತಿದ್ದೀರಿ ಎಂದೆನಿಸುತ್ತದೆ ಎಂದಾಗ, ಹೌದು ನಾವು ಬಹಳ ಮುಖ್ಯವಾದ ಮಾತುಕತೆಯಲ್ಲಿದ್ದೆವು. ನೀವೂ ಮತ್ತು ನಿಮ್ಮ ಮೊಮ್ಮಕ್ಕಳ ಗಲಾಟೆಯಿಂದಾಗಿ ನಮ್ಮ ಕೆಲಸದ ಏಕಾಗ್ರತೆಗೆ ಭಂಗವಾಗುತ್ತಿದೆ ಎನ್ನುತ್ತಾರೆ.

ಅದನ್ನು ಕೇಳಿ ನಸು ನಕ್ಕ ಅಜ್ಜೀ, ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನಾನು ಸಹಾಯ ಮಾಡಬಹುದೇ? ಎಂದಾಗ, ಶಂಕರ, ಅಜ್ಜೀ ಎಂದು ಕೈ ಜಗ್ಗಿದ್ದನ್ನು ಗಮನಿಸಿದ ಮ್ಯಾನೇಜರ್, ಶಂಕರ್, allow her to talk ಎನ್ನುತ್ತಾರೆ.

katte3ಆಗ ಅ ಅಜ್ಜಿ ನೋಡಪ್ಪಾ ನಮ್ಮ ಊರಿನ ಮುಂದೆ ಒಂದು  ಅರಳೀ ಕಟ್ಟೆ ಇದೆ. ಊರಿನ ಜನರು ಅಲ್ಲಿಗೆ, ಶುದ್ಧ ಗಾಳಿ,  ನೆಮ್ಮದಿ ಮತ್ತು ಶಾಂತಿಗಾಗಿ ಕೆಲ ಸಮಯ ಬಂದು ಕೂರುತ್ತಾರೆ. ಅದೇ ಮರದಲ್ಲಿಯೇ ನೂರಾರು ಹಕ್ಕಿಗಳೂ ಆಶ್ರಯ ಪಡೆದಿವೆ. ಅವುಗಳು ಸಹಾ ಚಿಲಿಪಿಲಿ ಗುಟ್ಟುತ್ತಿರುತ್ತವೆ. ಅದೊಮ್ಮೆ ಯುವನೊಬ್ಬ ನೆಮ್ಮದಿಯಿಂದ ವಿಶ್ರಾಂತಿ ಪಡೆಯಲು ಮರದ ಕೆಳಗೆ ಕುಳಿತಿದ್ದಾಗ ಹಕ್ಕಿಗಳ ಕಲರವದಿಂದ ವಿಮುಖನಾಗಿ ಹಕ್ಕಿಯನ್ನು ಓಡಿಸಲು ಕಲ್ಲನ್ನು ತೂರುತ್ತಾನೆ. ಆತ ತೂರಿದ ಕಲ್ಲಿನ ರಭಸಕ್ಕೆ ನೂರಾರು ಹಕ್ಕಿಗಳು ಒಮ್ಮಿಂದೊಮ್ಮೆಲ್ಲೇ ಆಗಸದತ್ತ ಹಾರಿದಾಗ ಹಕ್ಕಿಗಳ ಕಲರವ ಇನ್ನೂ ಹೆಚ್ಚಾಗುತ್ತದೆ. ಆಗ ಅದರಲ್ಲಿದ್ದ ಒಂದು ಹಿರಿಯ ಹಕ್ಕಿ ಆ ಯುವಕನ ಬಳಿ ಬಂದು, ನೀವು ನಮ್ಮ ಗೂಡಿನ ಬಳಿ ಬಂದು ವಿಶ್ರಾಂತಿ ಪಡೆಯುತ್ತಿದ್ದೀರಿ. ಹಾಗಾಗಿ ನಾವು ನಿಮ್ಮನ್ನು ಇಲ್ಲಿಂದ ದೂರ ಹೋಗಿ ಎಂದು ಹೇಳುವುದಿಲ್ಲ. ಬದಲಾಗಿ ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವ ಮನೋಭಾವನೆಯನ್ನು ಬೆಳಸಿಕೊಂಡಲ್ಲಿ ನೀವೂ ಸಹಾ  ನಮ್ಮೊಂದಿಗೆ ಸಹಬಾಳ್ವೆ ನಡೆಸ ಬಹುದು ಎನ್ನುತ್ತದೆ.

katte2ಆರಂಭದಲ್ಲಿ ಹಕ್ಕಿಯ ಮಾತು ಆ ಯುವಕನಿಗೆ ಸರಿ ಎನಿಸದಿದ್ದರೂ, ಕಲ್ಲಿನ ರಭಸಕ್ಕೆ ಹಾರಿ ಹೋಗಿದ್ದ ಹಕ್ಕಿಗಳೆಲ್ಲವೂ  ಒಂದೊಂದಾಗಿ ಆದೇ ಮರಕ್ಕೆ ಹಿಂದಿರುಗಿ ತಮ್ಮ ಪಾಡಿಗೆ ಇರಲು ತೊಡಗುತ್ತವೆ. ಆ ಯುವಕನಿಗೆ ಆಲ್ಲಿಯ ಪರಿಸರ ತನ್ನದೆನಿಸಿಕೊಳ್ಳುತ್ತಾ ಹೋದಂತೆಲ್ಲಾ, ಹಕ್ಕಿಗಳ ಕಲರವ ಕಿವಿಗೆ ಬೀಳುವುದೇ ಇಲ್ಲ. ನೆಮ್ಮದಿಯಿಂದ ವಿಶ್ರಾಂತಿಗೆ ಜಾರುತ್ತಾನೆ. ಹಾಗೆಂದ ಮಾತ್ರಕ್ಕೆ ಹಕ್ಕಿಗಳು ಕೆಲರವ ನಿಲ್ಲಿಸಿತು ಎಂದಲ್ಲಾ. ಆ ಯುವಕ ಅವುಗಳೊಂದಿಗೆ  ಸಹಬಾಳ್ವೆ ನಡೆಸುವ ಮನಸ್ಥಿತಿಯನ್ನು ಬೆಳಸಿಕೊಂಡ ಎಂದರ್ಥ ಎಂದು ಹೇಳಿ ನಿಟ್ಟುಸಿರು ಬಿಟ್ಟ ಅಜ್ಜಿ,

houseಇದು ನಮ್ಮ ಮನೆ ನಮ್ಮ ಗೂಡು. ಇಲ್ಲಿ ನಮ್ಮ ಸಂಸಾರ ಸುಖದಿಂದ ನಡೆಸಿ ಕೊಂಡು ಹೋಗುತ್ತಿದ್ದೇವೆ ಈ ಕೊರೋನಾ ಎಂಬ ಮಹಾಮಾರಿಯ ಪರಿಸ್ಥಿತಿಯನ್ನು ನಾನೂ ಸಹಾ ಅರ್ಥ ಮಾಡಿಕೊಂಡಿದ್ದೇನೆ. ಅದರಿಂದಾಗಿ ಕಛೇರಿಗೆ ಹೋಗಲಾಗುತ್ತಿಲ್ಲ, ಹಾಗೆಂದ ಮಾತ್ರಕ್ಕೆ ಕೆಲಸವನ್ನೇ ನಿಲ್ಲಿಸಿದರೆ, ಜೀವನ ನಡೆಯಲಾಗದು.  ನಮ್ಮ ಕೆಲಸದತ್ತ ಏಕಾಗ್ರತೆಯನ್ನು ಹೆಚ್ಚಿಸಿಕೊಂಡಲ್ಲಿ  ಅಕ್ಕ ಪಕ್ಕದ ಗಲಾಟೆಗಳ ಕಡೆ ಗಮನವೂ ತಂತಾನೇ ಕಡಿಮೆಯಾಗುತ್ತದೆ ನಿಮ್ಮ ಕೆಲಸವು ಸುಗಮವಾಗಿ ಸಾಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.

ಅಕಸ್ಮಾತ್ ನಾವೇನಾದರೂ ನಿಮ್ಮ ಕಚೇರಿಗೆ ಬಂದಲ್ಲಿ ನಿಮ್ಮ ಕಛೇರಿಯ ರೀತಿ ರಿವಾಜುಗಳಿಗೆ ಅನುಗುಣವಾಗಿಯೇ ನಾವು ವರ್ತಿಸುತ್ತೇವೆ. ಅದೇ ರೀತಿ, ನೀವೂ ಸಹಾ ಕಚೇರಿಯ ಕೆಲಸಕ್ಕಾಗಿ  ನಮ್ಮ ಮನೆಯನ್ನು ಬಳಸುತ್ತಿರುವಾಗ, ನಮ್ಮ ಮನೆಯ ಪರಿಸ್ಥಿತಿಯನ್ನು  ಅರ್ಥ ಮಾಡಿಕೊಂದು ಆದಕ್ಕೆ ತಕ್ಕಂತೆ ವರ್ತಿಸುವುದು ಉತ್ತಮ.

ಮನೆಯಿಂದ ಕೆಲಸ ಮಾಡುವುದು ತಪ್ಪಲ್ಲ. ಆದರೆ ಅದಕ್ಕಾಗಿ ಕುಟುಂಬದ ಸದಸ್ಯರ ತ್ಯಾಗವನ್ನು ಹತ್ತಿಕುವುದಾಗಲೀ ಅಥವಾ  ಬಲಿ ಕೊಡಲಾಗದು. ನಮಗೂ  ನಿಮ್ಮ ಸಮಸ್ಯೆಗಳು ಮತ್ತು ಒತ್ತಡ ಅರಿವಿದೆ. ಹಾಗಾಗಿ ನಾವೂ ಸಹಾ ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಹಳಷ್ಟು ಬದಲಾಯಿಸಿ ಕೊಂಡಿದ್ದೇವೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರಿ ಈ ರೀತಿ ಸಮಸ್ಯೆಗಳು ಉದ್ಭವವಾಗುತ್ತದೆ. ಅದಕ್ಕೆ ಮತ್ತಷ್ಟು ಉದ್ವೇಗಕ್ಕೆ ಒಳಗಾಗದೇ ಆ ಕಡೆ ಚಿತ್ತವನ್ನು ಹರಿಸದೇ,  ಶಾಂತಿಯಿಂದ ಕೆಲಸವನ್ನು ಮುಂದುವರೆಸಬಹುದಲ್ಲವೇ? ಎಂದು ಹೇಳಿದ ಅಜ್ಜಿ, ಏನಪ್ಪಾ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯೇ? ಎಂದು ಮುಗ್ಧ ನಗೆಯನ್ನು ಚೆಲ್ಲಿದರು.

ಆರಂಭದಲ್ಲಿ ಆಜ್ಜಿಯ ಮಾತುಗಳನ್ನು ತಾತ್ಸಾರದಿಂದಲೇ ಕೇಳುತ್ತಿದ್ದ ಆ ಮ್ಯಾನೇಜರ್ ಕ್ರಮೇಣ ಅಜ್ಜಿಯ Crisis Management Skills ಮಾತುಗಳಿಗೆ ಮಾರು ಹೋಗಿ ತೆರೆದ ಬಾಯಿ ಮುಚ್ಚದೇ ಕೇಳುತ್ತಲೇ ಹೋದರು.  ಅಜ್ಜಿಯ ಮಾತು ಮುಗಿಯುತ್ತಿದ್ದಂತೆಯೇ, ಎರಡೂ ಕೈಗಳಿಂದ  ಜೋರಾಗಿ ಚಪ್ಪಾಳೆ ತಟ್ಟೀ, ಅಜ್ಜೀ ನೀವು ಹೇಳಿರುವುದು 100 ಕ್ಕೆ 100 ರಷ್ಟು ಸರಿಯಾಗಿದೆ. ನಿಮ್ಮ ಅನುಭವದ ಮುಂದೆ ನಮ್ಮದೇನಿದೆ.  ಖಂಡಿತವಾಗಿಯೂ ನೀವು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತೇನೆ ಮತ್ತು ಈ ಸುಂದರ ಪಾಠವನ್ನು ದೇಶ ವಿದೇಶಗಳಲ್ಲಿ ಇರುವ ನಮ್ಮ ಇಡೀ ಕಛೇರಿಯ ಸಿಬ್ಬಂಧಿಗಳಿಗೆ ಅಳವಡಿಸಿಕೊಳ್ಳಲು ಹೇಳುತ್ತೇನೆ ಎಂದು ಕೈ ಮುಗಿದು ವಂದಿಸಿದರು. ನಂತರ ಶಂಕರನತ್ತ ತಿರುಗಿ. ಶಂಕರ್ ನಮ್ಮ ಮುಂದಿನ ಬಾರಿಯ  All hands meeting ನಲ್ಲಿ ನಿಮ್ಮ ಅಜ್ಜಿಗೆ ಒಂದು Award ಕೊಡಬೇಕೆಂದು  ನಾನು recommend ಮಾಡುತ್ತೇನೆ ಎಂದರು.

ajji2ಅಜ್ಜೀ ಏನು ಮಾತಾಡ್ತಾರೋ ಎಂಬ ಆತಂಕದಲ್ಲಿದ್ದ ಶಂಕರನಿಗೆ ಅಜ್ಜಿಗೆ Award ಬಂದ ವಿಷಯ ಕೇಳಿ  ಆನಂದದಿಂದ, ಅವನಿಗೇ ಅರಿವಿಲ್ಲದಂತೆ ಅಜ್ಜಿಯನ್ನು ಪ್ರೀತಿಯಿಂದ  ಅಪ್ಪಿಕೊಂಡು ಮುತ್ತನ್ನು ಕೊಟ್ಟಿದ್ದಲ್ಲದೇ, ಆಕೆಯ ಪಾಂಡಿತ್ಯಕ್ಕೆ ಮಾರುಹೋಗಿ ಗೌರವದಿಂದ ಆಕೆಯ ಕಾಲಿಗೆರಗಿ  ಆಶೀರ್ವಾದ ಪಡೆಯುವುದನ್ನು ಮರೆಯಲಿಲ್ಲ.

Shankara Shocks, Ajji Rocks.  ಅದಕ್ಕೇ ಹೇಳೋದು ವಯಸ್ಸಾದವರು  ನಮ್ಮ ಮನೆಗಳಲ್ಲಿ ಸದಕಾಲವೂ ಇರ್ಬೇಕು ಅಂತಾ..

ಏನಂತೀರೀ?

ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ  ಓದಿದ್ದ ಸಣ್ಣ ಎಳೆಯೊಂದನ್ನು ನಮ್ಮ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಭಾವಾನುವಾದ ಮಾಡಿದ್ದೇನೆ.

ಕೋಯಾ-ಪಾಯ

ಅರೇ ಇದೇನಿದು! ಇದು ಯಾವ ಭಾಷೆಯ ಶೀರ್ಷಿಕೆ? ಅಂತಾ ಯೋಚಿಸ್ತಿದ್ದೀರಾ? ಇದು ಸರಳ ಸಂಸ್ಕೃತ ಭಾಷೆಯ ಪದ. ಕೋಯ ಎಂದರೆ ಕಳೆದು ಹೋದದ್ದು ಮತ್ತು ಪಾಯ ಎಂದರೆ ಸಿಕ್ಕಿದ್ದು ಅಂದರೆ ಕಳೆದುಕೊಂಡದ್ದು ಸಿಕ್ಕಿದೆ ಎಂದರ್ಧ. ದೇವರ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆಯೇ ಮಾತನಾಡಿ ದೇವಾಲಯದಿಂದ ಹೊರ ಬಂದ ಕೂಡಲೇ ದೇವರ ಶಕ್ತಿಯ (ಪವಾಡ) ಅನುಭವ ಪಡೆದ ಸರಳ ಸುಂದರ ಪ್ರಸಂಗ ಇದೋ ನಿಮಗಾಗಿ.

shiva

ಪ್ರತೀ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ನಮ್ಮ ವಿದ್ಯಾರಣ್ಯಪುರದ ಸನಾತನ ವೇದ ಪಾಠಶಾಲೆಯ ವತಿಯಿಂದ ತಿಂಗಳ ಮಾಸಶಿವರಾತ್ರಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಬಹಳ ಸುಂದರವಾಗಿ ಆಚರಿಸುವ ಪದ್ದತಿ ರೂಢಿಯಲ್ಲಿದೆ. ಮೊನ್ನೆ ಅದೇ ರೀತಿಯ ಮಾಸಶಿವರಾತ್ರಿಯ ಪೂಜೆಗೆ ಹೋಗಿ, ಪೂಜಾ ಕೈಂಕರ್ಯವೆಲ್ಲವನ್ನೂ ಮುಗಿಸಿಕೊಂಡು ಪ್ರಸಾದವನ್ನೂ ಸ್ವೀಕರಿಸಿ ಅಂದಿನ ಸತ್ಸಂಗದಲ್ಲಿ ಉಪನಿಷತ್ತಿನ ಬಗ್ಗೆ ಅತ್ಯಂತ ಸರಳವಾಗಿ, ಅಷ್ಟೇ ಮನೋಜ್ಞವಾಗಿ ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟ ನಮ್ಮ ವೇದಪಾಠಶಾಲೆಯ ವಿದ್ಯಾರ್ಥಿಗಳು ಮತ್ತು ವಯಕ್ತಿಕವಾಗಿ ಬಹಳ ವರ್ಷಗಳಿಂದ ಆತ್ಮೀಯರಾದವರೊಂದಿಗೆ ಮಾತಾನಾಡುತ್ತಾ ಏ ಕರೋನಾದ ಗೀರೋನಾ ಯಾವುದು ಇಲ್ಲಾ ರೀ.. ಅದೆಲ್ಲಾ ಈ ಭ್ರಷ್ಟ ರಾಜಕಾರಣಿಗಳು ಮತ್ತು ಆಸ್ಪತ್ರೆಯವರು ದುಡ್ಡು ಹೊಡೆಯಲು ಮಾಡುತ್ತಿರುವ ಹುನ್ನಾರ ಎಂಬುದನ್ನು ಹೀಗೇ ಯಾರೋ ನನಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಕ್ಕೆ ನನ್ನ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೆವು.

mobile

ಹೌದು ನಿಜ. ಕೊರೋನ ಮತ್ತು ದೇವರು ಎರಡೂ ಸಹಾ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರೆಡೂ ಇಲ್ಲಾ ಎಂದೂ ಸ್ಪಷ್ಟವಾಗಿ ಹೇಳಲಾಗದು. ಎರಡೂ ಸಹಾ ತಮ್ಮ ತಮ್ಮ ಅಸ್ತಿತ್ವವನ್ನು ಮತ್ತು ಪ್ರಭಾವವನ್ನು ಅಗೋಚರವಾಗಿ ಮೂಡಿಸಿವೆ. ಕೊರೋನ ಎಂಬ ವೈರಾಣು ಇಲ್ಲದೇ ಇದ್ದಿದ್ದಲ್ಲಿ ಏಕಾಏಕಿ ಪ್ರಪಂಚಾದ್ಯಂತ 28 ಲಕ್ಷಕ್ಕೂ ಅಧಿಕ ಜನರು ಸಾಯುತ್ತಿರಲಿಲ್ಲ ಅದೇ ರೀತಿ ಭಗವಂತನೇ ಇಲ್ಲ ಎಂದಾದಲ್ಲಿ ಆತನ ನಂಬಿದವರಿಗೆ ಆಗುವ ದಿವ್ಯಾನುಭವವೇ ಇರುತ್ತಿರಲಿಲ್ಲ. ಹೀಗೆ ಅವರವರ ಭಾವಕ್ಕೆ ಅವರವರ ಭಕುತಿ. ಎಂಬುದಾಗಿ ಅವರಿಗೆ ವಿವರಿಸಿದೆ ಎಂದದ್ದಕ್ಕೆ ಅವರೂ ಸಹಾ ಸಹಮೋದನೆ ನೀಡುತ್ತಿದ್ದಾಗಲೇ ಎಲ್ಲರೂ ಹೊರಡುವ ಸಮಯವಾದಾಗ ಹಾಗೆಯೇ ಪೂಜೆ ನೆಡೆದ ಸ್ಥಳವನ್ನು ಒಮ್ಮೆ ಕಣ್ಣಾಡಿಸಿ ಏನಾದರೂ ಬಿಟ್ಟಿದ್ದೇವೆಯೇ ಎಂದು ನೋಡುತ್ತಿದ್ದಾಗಲೇ. ನಮ್ಮ ಮತ್ತೊಬ್ಬ ಆತ್ಮೀಯ ಸ್ನೇಹಿತರಿಗೆ ಸ್ಮಾರ್ಟ್ ಫೋನ್ ಒಂದು ಕಣ್ಣಿಗೆ ಬಿತ್ತು. ಯಾರೋ ನಮ್ಮ ಪಾಠಶಾಲೆಯ ವಿದ್ಯಾರ್ಥಿಗಳೋ ಇಲ್ಲವೇ ಪೂಜೆಗೆ ಬಂದಿದ್ದ ಭಕ್ತಾದಿಗಳು ಬಿಟ್ಟು ಹೋಗಿರಬಹುದು ಎಂದು ತಿಳಿದು ಅದರಲ್ಲಿ last dialed No. ಗಳನ್ನು ನೋಡಿದಾಗ ನನ್ನ ಪರಿಚಯಿಸ್ಥರದ್ದೇ ಮೊಬೈಲ್ ಎಂದು ತಿಳಿದು ಹಾಗೇ ಮನೆಗೆ ಹೊಗುವಾಗ ಅವರ ಮನೆಗೆ ತಲುಪಿಸಿ ಹೋದರಾಯ್ತು ಎಂದು ತೀರ್ಮಾನಿಸಿ ಮೊಬೈಲ್ ನನ್ನ ಬಳಿಯೇ ಇಟ್ಟುಕೊಂಡೆ.

ಅಷ್ಟರಲ್ಲಿ ಅದೇ ಮೊಬೈಲಿಗೆ ಕರೆಯೊಂದು ಬಂದು ಅದನ್ನು ನನ್ನ ಗೆಳೆಯರು ಸ್ವೀಕರಿಸಿದಾಗ ಸರ್, ನನ್ನ ಮೊಬೈಲ್ ಕಳೆದುಹೋಗಿದೆ ದಯವಿಟ್ಟು ಅದನ್ನು ಹಿಂದಿರುಗಿಸುವಿರಾ ಎಂದು ಅತ್ತ ಕಡೆಯಿಂದ ವಿನಮ್ರಿಸಿಕೊಂಡಾಗ, ನನ್ನ ಗೆಳೆಯರು ಮೊಬೈಲ್ ನನ್ನ ಬಳಿ ಇದೆಯೆಂದೂ ನಾನೇ ಅವರ ಮನೆಗೆ ಬಂದು ತಲುಪಿಸುತ್ತೇನೆ ಎಂದು ತಿಳಿಸಿದರು. ಅದಕ್ಕವರು. ಅಯ್ಯೋ ಸುಮ್ಮನೇ ಅವರಿಗೇಕೆ ತೊಂದರೆ, ಈ ಕೂಡಲೇ ನನ್ನ ಮಗನನ್ನು ಕಳುಹಿಸುತ್ತೇನೆ. ಅವನ ಕೈಯ್ಯಲ್ಲಿ ಕೊಟ್ಟು ಕಳುಹಿಸಿ. ಎಂದಾಗ ಸರಿ ಹಾಗೇ ಆಗಲಿ ನಾವು ಇಲ್ಲೇ ದೇವಸ್ಥಾನದ ಆವರಣದಲ್ಲೇ ಇರುತ್ತೇವೆ ಎಂದು ತಿಳಿಸಿ ದೇವಸ್ಥಾನದ ಹೊರಗೆ ಚಪ್ಪಲಿ ಹಾಕಿಕೊಳ್ಳಲು ಬಂದೆವು.

cs

ದೇವಸ್ಥಾನದ ಒಂದು ಬದಿಯಲ್ಲಿರುವ ಚಪ್ಪಲಿ ಸ್ಟಾಂಡಿನಲ್ಲಿ ಬಿಟ್ಟಿದ್ದ ನನ್ನ ಚಪ್ಪಲಿ ಆ ಸ್ಥಳದಲ್ಲಿ ಕಾಣುತ್ತಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ತಡಕಾಡಿದಾಗ ಮತ್ತೊಂದು ಮೂಲೆಯಲ್ಲಿ ನನ್ನ ಚಪ್ಪಲಿ ಕಾಣಿಸಿದಾಗ ಅರೇ, ಸ್ಟಾಂಡಿನಲ್ಲಿ ಬಿಟ್ಟಿದ್ದ ಚಪ್ಪಲಿ ಇಲ್ಲಿಗೆ ಹೇಗೇ ಬಂತಪ್ಪಾ? ಎಂದು ಉದ್ಗಾರ ತೆಗೆದು, ಬಹುಶಃ ಯಾರೋ ತಮ್ಮ ಚಪ್ಪಲಿ ತೆಗೆಯುವ ಬರದಲ್ಲಿ ನನ್ನ ಚಪ್ಪಲಿಯನ್ನು ಈ ರೀತಿ ಮೂಲೆಗೆ ಎಸೆದಿರಬಹುದು ಎಂದು ಭಾವಿಸಿ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡ ತಕ್ಷಣವೇ, ಅದು ನನ್ನ ಚಪ್ಪಲಿಯಲ್ಲ ಎಂದು ತಿಳಿದು ಬಂದಿತು. ಛೇ.. ಯಾರೋ ತಿಳಿಯದೇ ಒಂದೇ ರೀತಿಯಿದ್ದ ನನ್ನ ಚಪ್ಪಲಿಯನ್ನು ಅವರ ಚಪ್ಪಲಿ ಎಂದು ಭಾವಿಸಿ ಹಾಕಿಕೊಂಡು ಹೋಗಿರಬಹುದು. ಬೇರೆಯವರ ಚಪ್ಪಲಿ ಹಾಕಿಕೊಳ್ಳುವುದು ಸರಿಯಲ್ಲ ಎಂದು ಹೇಳಿ ಹಾಗೇ ಸ್ನೇಹಿತರೊಂದಿಗೆ ಮಾತನಾಡುತ್ತಾ ಮೊಬೈಲ್ ತೆಗೆದುಕೊಂಡು ಹೋಗಲು ಬರುವ ಹುಡುಗನಿಗಾಗಿ ಕಾಯುತ್ತಾ ದೇವಸ್ಥಾನದ ಮುಂದೆಯೇ ನಿಂತೆವು.

ಗೆಳೆಯರೊಂದಿಗೆ ಮಾತನಾಡುತ್ತಿದ್ದರೂ ಮನಸ್ಸಿನಲ್ಲಿ ಛೇ.. ಕೆಲವೇ ದಿನಗಳ ಹಿಂದೆ ತೆಗೆದು ಕೊಂಡ ಚಪ್ಪಲಿ ಕಳೆದು ಹೋಗಬೇಕೇ? ಅದೂ ಈಗ ಕೆಲಸ ಇಲ್ಲದ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಅನಗತ್ಯವಾಗಿ ಮತ್ತೊಂದು ಹೊಸಾ ಚಪ್ಪಲಿ ಖರೀದಿಸಬೇಕೇ? ಎಂದು ಯೋಚಿಸುತ್ತಿದ್ದ ಹಾಗೆ ಚಪ್ಪಲಿ ಕಳೆದು ಕೊಂಡರೆ ಹಿಡಿದ ಶಾಪ ಹೋಗುತ್ತದೆ ಎಂದು ಅಮ್ಮಾ ಹೇಳುತ್ತಿದ್ದದ್ದು ನೆನಪಾಗಿ ನನಗೆ ನಾನೇ ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಆ ಹುಡುಗ ಬಂದು ಅಂಕಲ್ ಅಪ್ಪನ ಮೊಬೈಲ್ ಕೊಡೀ ಎಂದಾಗ ಅವನಿಗೆ ಮೊಬೈಲ್ ಕೊಟ್ಟು ಇನ್ನೇನು ಮನೆಗೆ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಮುಚ್ಚಿದ್ದ ದೇವಸ್ಥಾನದ ಮುಂದೆ ಬಂದವರೊಬ್ಬರು ತಮ್ಮ ಪಾದರಕ್ಷೆಗಳನ್ನು ಕಳಚಿ ದೇವರಿಗೆ ಕೈ ಮುಗಿಯುತ್ತಿದ್ದನ್ನು ಗಮನಿಸಿದೆ.

cp

ಹಾಗೇ ಸುಮ್ಮನೆ ಅವರತ್ತ ಕಣ್ಣಾಡಿಸಿದರೆ ಅವರು ಬಿಟ್ಟಿದ್ದ ಚಪ್ಪಲಿ ನನ್ನದೇ ರೀತಿಯದ್ದಾಗಿತ್ತು. ಕೂಡಲೇ ಅಲ್ಲಿಗೆ ಹೋಗಿ ಅದನ್ನೊಮ್ಮೆ ಕಾಲಿಗೆ ಹಾಕಿಕೊಂಡು ನೋಡಿದರೆ ಏನಾಶ್ಚರ್ಯ ಆ ಚಪ್ಪಲಿ ನನ್ನದೇ ಆಗಿರಬೇಕೇ?. ನಾನು ಯಾವ ಚಪ್ಪಲಿಯನ್ನು ಕೆಳೆದುಕೊಂಡೇ ಎಂದು ಭಾವಿಸಿದ್ದೆನೋ ಅದೇ ಚಪ್ಪಲಿ ಕಳೆದು ಕೊಂಡ ಜಾಗದಲ್ಲಿಯೇ ಕೆಲವೇ ಕೆಲವು ಕ್ಷಣಗಳಲ್ಲಿ ನನಗೆ ಸಿಕ್ಕಿ ಬಿಟ್ಟಿತ್ತು.

ಅದೇ ಸಂತೋಷದಲ್ಲಿ ಕೂಡಲೇ ಏನು ಸ್ವಾಮೀ, ಈ ಚಪ್ಪಲಿ ನಿಮ್ಮ ಬಳಿ ಹೇಗೆ ಬಂದಿತು? ಎಂದು ಕೇಳಿದೆ. ಅದಕ್ಕವರು, ಈ ಸ್ವಲ್ಪ ಮುಂಚೆ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗಿದ್ದೆ. ಅದೇಕೋ ಏನೋ ದೇವರ ದರ್ಶನ ಮಾಡಿದ ಸಮಾಧಾನವಾಗಿರಲಿಲ್ಲ. ಅದಕ್ಕೇ ಈಗ ಮತ್ತೊಮ್ಮೆ ದೇವರಿಗೆ ಕೈ ಮುಗಿಯುವಾ ಎಂದು ಮತ್ತೆ ಬಂದೇ ಎಂದರು. ಅದು ಸರಿ ನೀವು ಚಪ್ಪಲಿ ಹಾಕಿಕೊಂಡಾಗ ಅದು ನಿಮ್ಮ ಚಪ್ಪಲಿಯಲ್ಲಾ ಎಂದು ಗೊತ್ತಾಗಲಿಲ್ಲವೇ ಎಂದು ಕೇಳಿದಾಗ. ದಯವಿಟ್ಟು ಕ್ಷಮಿಸಿ. ನನಗೂ ವಯಸ್ಸಾಗಿದೆ. ಒಂದೇ ರೀತಿಯ ಚಪ್ಪಲಿಯಾಗಿದ್ದರಿಂದ ನನಗೂ ಗೊತ್ತಾಗಲಿಲ್ಲ ಎಂದು ಕೈ ಮುಗಿದರು. ಬಹುಶಃ ದೇವರ ದರ್ಶನವಾದ ನಂತರ ಅವರಿಗೇ ಅರಿವಿಲ್ಲದಂತೆಯೇ ಒಂದೇ ರೀತಿ ಇದ್ದ ನನ್ನ ಚಪ್ಪಲಿಯನ್ನು ಅವರು ಹಾಕಿಕೊಂಡು ಹೋಗಿದ್ದರು.

ಕೆಲವೇ ನಿಮಿಷಗಳ ಹಿಂದೆಯಷ್ಟೇ ಕಣ್ಣಿಗೆ ಕಾಣದ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದ್ದೆವು. ನನ್ನ ಚಪ್ಪಲಿ ಕಳೆದು ಹೋಗಿದ್ದಾಗ ಅಯ್ಯೋ ದೇವರೇ ನನ್ನ ಚಪ್ಪಲಿಯೇ ಕಳೆದುಹೋಗಬೇಕೇ? ಎಂದು ದೇವರಲ್ಲಿ ಮೊರೆ ಹೋಗಿದ್ದೆ. ಈಗ ಚಪ್ಪಲಿ ಸಿಕ್ಕ ನಂತರ ನನ್ನ ಮನಸ್ಸಿನಲ್ಲಿ ಮೂಡಿದ್ದೇನೆಂದರೆ ಬಹುಶಃ ನನ್ನ ಚಪ್ಪಲಿ ಮರಳಿ ನನಗೇ ಸಿಗಲೆಂದೇ ದೇವರು ಮೊಬೈಲ್ ಹಿಂದಿರಿಗಿಸುವ ನೆಪದಲ್ಲಿ ನನ್ನನ್ನು ಅಲ್ಲಿಯೇ ಕಾಯಿಸಿದನೇ? ಇಲ್ಲವೇ ಮತ್ತೊಬ್ಬರ ಚಪ್ಪಲಿ ಹಾಕಿಕೊಂಡು ಹೋಗಿದ್ದರ ಅರಿವಿಲ್ಲದವರು, ಮತ್ತೊಮ್ಮೆ ದೇವಸ್ಥಾನಕ್ಕೆ ಮರಳಿ ಬರುವಂತೆ ಪ್ರೇರಣೆ ನೀಡಿದನೇ?

ಬಹುಶಃ ಪೂಜೆ ಮುಗಿದ ನಂತರ ಯಾರಿಗೂ ಕಾಯುವ ಪ್ರಮೇಯವಿಲ್ಲದಿದ್ದಲ್ಲಿ, ನನ್ನ ಚಪ್ಪಲಿ ಕಾಣದಿದ್ದಾಗ ನನ್ನ ದುರ್ವಿಧಿಗೆ ನನ್ನನ್ನೇ ನಾನು ಶಪಿಸಿಕೊಂಡು ಹೋಗಿಬಿಡುತ್ತಿದೆ. ನನ್ನ ಚಪ್ಪಲಿ ಅದೇ ಸ್ಥಾನಕ್ಕೆ ಮರಳಿ ಬಂದ್ದಿದ್ದರೂ ಅದನ್ನು ದಕ್ಕಿಸಿಕೊಳ್ಳಲು ನಾನು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ.

ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂಬ ದಾಸರ ವಾಣಿಯಂತೆ, ಸುಖಾ ಸುಮ್ಮನೆ ದೇವರ ಅಸ್ತಿತ್ವ ಮತ್ತು ಅಸ್ಮಿತೆಗಳ ಬಗ್ಗೆ ನಿರರ್ಥಕ ವಿತಂಡ ವಾದಗಳನ್ನು ಮಾಡುತ್ತಾ ಎಲ್ಲರ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಾ ವಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಬದಲು, ನಿಷ್ಕಲ್ಮಶವಾಗಿ ಆ ಭಗವಂತನನ್ನು ಧ್ಯಾನ ಮಾಡೋಣ. ಫಲಾ ಫಲಗಳನ್ನು ನೀಡುವುದನ್ನು ಆ ಭಗವಂತನಿಗೇ ಬಿಟ್ಟು ಬಿಡೋಣ. ನಂಬಿ ಕೆಟ್ಟವರು ಇಲ್ಲವೋ ಶ್ರೀ ಹರಿಯೇ ನಿನ ನಾಮವ ಜಪಿಸಿದವರು, ನಂಬಿ ಕೆಟ್ಟವರು ಇಲ್ಲವೋ ಎನ್ನುವಂತೆ ಭಗವಂತನನ್ನು ನಂಬಿದವರಿಗೆ ಎಂದೂ ಕೆಡುಕಾಗದು ಎಂಬುದಕ್ಕೆ ಈ ಅಧ್ಭುತ ಪ್ರಸಂಗವೇ ಜ್ವಲಂತ ಸಾಕ್ಷಿಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ