ಐದು ರೂಪಾಯಿ ಡಾಕ್ಟರ್ ಶಂಕರೇಗೌಡ

ಇವತ್ತಿನ ದಿನ ಕಾಲದಲ್ಲಿ ದುಡಿಯುವ ಸಮಯದಲ್ಲಿ ಸರಿಯಾಗಿ ಎರಡು ಹೊತ್ತಿನ ಊಟ ಕಣ್ತುಂಬ ನಿದ್ದೆಯನ್ನೂ ಮಾಡದೇ, ಹೊಟ್ಟೆ ಬಟ್ಟೆ ಕಟ್ಟಿ ಅಷ್ಟೋ ಇಷ್ಟೋ ಉಳಿಸಿದ್ದನ್ನು ಒಂದು ಸಣ್ಣ ಖಾಯಿಲೆಯಿಂದ  ಹುಷಾರಾಗೋದಿಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯರನ್ನು ಬೈದು ಕೊಳ್ಳುತ್ತಲೇ,  ಲಕ್ಷಾಂತರ ರೂಪಾಯಿ ಹಣ ಆಸ್ಪತ್ರೆಗೆ ಕಟ್ಟಿ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ಇರುವಾಗ, ಮಣಿಪಾಲ್ ಅಂತಹ ಕಾಲೇಜಿನಲ್ಲಿ ಓದಿ ವೈದ್ಯಕೀಯ ಪದವಿಯನ್ನು ಪಡೆದು ದೇಶ ವಿದೇಶಗಳಲ್ಲಿ ಲಕ್ಷಾಂತರ ಹಣವನ್ನು ಸಂಪದಿಸಿ ನೆಮ್ಮದಿಯಾಗಿರುವ ಬದಲು ವೈದ್ಯೋ ನಾರಯಣೋ ಹರಿಃ ಎನ್ನುವುದನ್ನು ಅಕ್ಷರಶಃ ಪಾಲಿಸುವಂತೆ ಮಂಡ್ಯಾದ ಗ್ರಾಮೀಣ ಜನರಿಗೆ ದೇವರಂತೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ  ಐದು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯರಾದ ಡಾ. ಎಸ್‌. ಸಿ. ಶಂಕರೇಗೌಡವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಅವರ ಯಶೋಗಾಥೆಯನ್ನು ನಮ್ಮ  ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

shank1ಶಂಕರೇಗೌಡರು ಹುಟ್ಟಿದ್ದು ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ. ಬಾಲ್ಯದಿಂದಲೂ ಓದಿನಲ್ಲಿ ಚುರುಕಾಗಿದ್ದ ಶಂಕರೇ ಗೌಡರು ತಮ್ಮ  ವೈದ್ಯಕೀಯ ಶಿಕ್ಷಣವನ್ನು ಉಡುಪಿ ಮಣಿಪಾಲ್ ಕಾಲೇಜಿನಲ್ಲಿ ಪಡೆದು  ಇತರೇ ವೈದ್ಯರಂತೆ ವಿದೇಶಕ್ಕೆ ಫಲಾಯನ ಮಾಡಿಯೋ ಇಲ್ಲವೇ ತಮ್ಮದೇ ನರ್ಸಿಂಗ್ ಹೋಮ್ ಕಟ್ಟಿಸಿಕೊಂಡು ಲಕ್ಷ ಲಕ್ಷಗಟ್ಟಲೇ ಹಣವನ್ನು ಸಂಪಾದಿಸುವವರೇ ಹೆಚ್ಚಾಗಿರುವ ಕಾಲದಲ್ಲಿ  ಆರ್ಥಿಕ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಬಹುತೇಕರಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದನ್ನು ಮನಗಂಡು  ಸೂಕ್ತ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಸುಮ್ಮನಾಗದೇ ತಮ್ಮೂರಿನಿಂದ ಸುಮಾರು 12 ಕಿಮೀ ದೂರದ ಮಂಡ್ಯದಲ್ಲಿ 30 ವರ್ಷಗಳ ಹಿಂದೆ  ಸಣ್ಣದೊಂದು ಕ್ಲಿನಿಕ್ ಆರಂಭಿಸಿ ಚರ್ಮವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಕೈಗುಣ ಚೆನ್ನಾಗಿರುವ ಕಾರಣ ಕೇವಲ ಮಂಡ್ಯಾದ ರೋಗಿಗಳಲ್ಲದೇ, ದೂರದ ಬೆಂಗಳೂರು, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತಮಿಳುನಾಡು, ಒಡಿಶಾ ಮತ್ತು ಮುಂಬೈನಿಂದಲೂ ರೋಗಿಗಳು ಬರುತ್ತಾರೆ  ಎಂಬುದು ಅವರ ಹೆಗ್ಗಳಿಕೆಯಾಗಿದೆ.

ಹಾಗಾಗಿಯೇ ದೇಶದ ನಾನಾ ಭಾಗಗಳಿಂದ ಇವರ ಬಳಿ ಜನರು ಬಂದು ಚಿಕಿತ್ಸೆ ಪಡೆಯಲು ನಿತ್ಯ ನೂರಾರು ಜನ ಸಾಲುಗಟ್ಟಿ ನಿಲುತ್ತಾರೆ. ಕೇವಲ 5 ರೂಪಾಯಿಗಳಷ್ಟೇ ರೋಗಿಗಳಿಂದ ಹಣವನ್ನು ಪಡೆದರೂ ಇವರು ಬರೆದು ಕೊಡುವ ಔಷಧಿಗಳು ಕೂಡ ದುಬಾರಿಯಾಗಿರದೇ, ಕೇವಲ ನೂರರಿಂದ ಇನ್ನೂರು ರೂಪಾಯಿಯಲ್ಲೇ ಸಿಗುತ್ತದೆ. ಒಮ್ಮೆ ಇವರ ಬಳಿ ಬಂದು ಚಿಕಿತ್ಸೆ ಪಡೆದರೆ ಸಾಕು ಮತ್ತೆ ಮತ್ತೆ ಅವರ ಬಳಿ ಅಲೆಯುವ ಅವಶ್ಯಕತೆಯೂ ಇಲ್ಲ. ಅವರು ಒಮ್ಮೆ ನೀಡುವ ಔಷಧಿಯಿಂದಲೇ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದು  ಅವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ನಂಬಿಕೆಯಾಗಿರುವ ಕಾರಣ ದಿನೇ ದಿನೇ ಅವರ ಜನಪ್ರಿಯರಾಗುತ್ತಿದ್ದಾರೆ.

ಇವರ ಬರಿ ಚಿಕಿತ್ಸೆ ಪಡೆಯಲು ಯಾರದ್ದೇ ಶಿಫಾರಸ್ಸಾಗಲಿ ಹಂಗಾಗಲೀ ಇಲ್ಲವೇ ಇಲ್ಲವಾಗಿದೆ. ರೋಗಿಯು ಬಡವನಾಗಿರಲೀ, ಬಲ್ಲಿದನಾಗಿರಲೀ,  ರಾಜಕಾರಣಿಯಾಗಿರಲೀ, ಇಲ್ಲವೇ ಉದ್ಯಮಿಯಾಗಿರಲೇ ಅಥವಾ ಹಿರಿಯ  ಅಧಿಕಾರಿಯೇ ಆಗಿದ್ದರೂ  ಇವರ ಬಳಿ ಎಲ್ಲರೂ ಸಮಾನರೇ. ಎಲ್ಲರು ಸರದಿಯ ಸಾಲಿನಲ್ಲಿಯೇ ನಿಂತು ಕೊಂಡು ಸರದಿ  ಬಂದಾಗ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತಾರೆ. ಆದರೆ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಅಶಕ್ತರಿಗೆ ಪ್ರತ್ಯೇಕ ಸರತಿ ಸಾಲು ಇದೆ.  ಚಿಕಿತ್ಸೆಯ ನಂತರ ಎಲ್ಲರಿಂದಲೂ ಪಡೆಯುವುದು ಒಂದೇ ದರವಾದ್ದರಿಂದ ಅದೆಷ್ಟೋ ಜನರು ಮೂಗಿಗಿಂತ ಮೂಗಿನ ನತ್ತೇ ಭಾರ ಎನ್ನುವಂತೆ  ಇವರ ಚಿಕಿತ್ಸೆಯ ಹಣಕ್ಕಿಂತ ಇಲ್ಲಿಗೆ ಬರುವ ಬಸ್ ಚಾರ್ಜ ಹೆಚ್ಚಾಗಿರುತ್ತದೆ ಎಂದೇ ತಮಾಷೆ ಮಾಡುತ್ತಾರೆ.

shank3ಸಾಮಾನ್ಯವಾಗಿ ವೈದ್ಯರ ಚಿಕಿತ್ಸಾ ವೆಚ್ಚವನ್ನು ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನಿರ್ಧರಿಸುತ್ತದೆ. ಆದರೆ  ಶಂಕರೇ ಗೌಡರು ಇದಾವುದರ ಹಂಗಿಲ್ಲದೇ ತಮ್ಮ ಪಾಡಿಗೆ ತಾವು  ಸಂತೋಷದಿಂದ ಐದು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅನೇಕ ಬಾರಿ ತಮ್ಮ ಚಿಕಿತ್ಸೆಯ ದರವನ್ನು  ಹೆಚ್ಚಿಸಲು ಸಲಹೆ ನೀಡಿದರೂ ಅದಕ್ಕೆಲ್ಲಾ ಶಂಕರೇಗೌಡ್ರು ಸೊಪ್ಪೇ ಹಾಕದೇ, ಇನ್ನು ಅದಿಲ್ಲ ಇದಿಲ್ಲ ಎಂದು ಪದೇ ಪದೇ  ಒಂದಲ್ಲ ಒಂದು ಮುಷ್ಕರದಲ್ಲಿ ಭಾಗಿಗಳಾಗಿ ತಮ್ಮ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸುವ ವೈದ್ಯರಿಂದ ಸದಾಕಾಲವೂ ದೂರವಿದ್ದು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ರೋಗಿಗಳ ಚಿಕಿತ್ಸೆಗೆಂದೇ ವೈದ್ಯರಿರಬೇಕು. ರೋಗಿಗಳಿಗೆ ಚಿಕಿತ್ಸೆ ಕೊಡದ ವೈದ್ಯರು ಇಲ್ಲವೇ ರೋಗಿಗಳಿಂದ ಸುಲಿಗೆ ಮಾಡುವವರು ನಿಜವಾದ  ವೈದ್ಯರೇ ಅಲ್ಲಾ ಎಂದು ಎನ್ನುವುದು ಅವರ ಧ್ಯೇಯವಾಗಿದೆ. ನನಗೆ ನನ್ನ ವೈದ್ಯಕೀಯ ಸೇವೆಯಲ್ಲೇ ತೃಪ್ತಿ ಇದೆ. ಹಾಗಾಗಿ ನಾನು ಸದಾಕಾಲವು ಹೀಗೆಯೇ ಇದೇ ರೀತಿಯಲ್ಲಿಯೇ  ಮುಂದುವರೆಯುತ್ತೇನೆ  ಎನ್ನುತ್ತಾರೆ  ಡಾ.ಶಂಕರೇಗೌಡರು.

shank2ಡಾ. ಶಂಕರೇಗೌಡರು ವೃತ್ತಿಯಲ್ಲಿ ವೈದ್ಯರಾಗಿದ್ದರೇ, ಪ್ರವೃತ್ತಿಯಲ್ಲಿ ಅವರೊಬ್ಬ ಯಶಸ್ವಿ ರೈತರು ಮತ್ತು ಸಜ್ಜನಿಕೆಯ ರಾಜಕಾರಣಿಯೂ  ಆಗಿದ್ದಾರೆ. ತಮ್ಮ ಸ್ವಗ್ರಾಮ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಶಂಕರೇಗೌಡರು ಪ್ರತಿ ವರ್ಷ ನೂರಾರು ಟನ್ ಕಬ್ಬು ಮತ್ತು ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆಯುತ್ತಾರೆ. ಹಾಗಾಗಿಯೇ ಅವಾ ದೈನಂದಿನ ಚಟುವಟಿಕೆ ಉಳಿದವರಿಗಿಂತಲೂ ಸ್ವಲ್ಪ ವಿಭಿನ್ನವಾಗಿದೆ. ಮಂಡ್ಯದ ಬಂಡೀಗೌಡ ಮೂರನೇ ತಿರುವಿನಲ್ಲಿರುವ ಮನೆಯಲ್ಲಿ ವಾಸಿಸುವ ವೈದ್ಯರು,  ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಪ್ರಾಥಃರ್ವಿಧಗಳನ್ನು ಮುಗಿಸಿದ  ನಂತರ ಸುಮಾರು ಒಂದು ಗಂಟೆ ಕಾಲ ದಿನಪತ್ರಿಕೆಗಳ ಓದಿದ ಬಳಿಕ ಊರಿನಲ್ಲಿರುವ ತಮ್ಮ ಜಮೀನಿನಲ್ಲಿ ಇತರೇ ರೈತರಂತೆಯೇ ಸುಮಾರು ಎರಡು ಗಂಟೆ ಕಾಲ ಜಮೀನಿನಲ್ಲಿ ಬೇಸಾಯ ಮಾಡಿ ನಂತರ  ಅವರಿಗಾಗಿಯೇ ಅಲ್ಲೇ ಕಾಯುತ್ತಿರುವ  ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.

shank3ಆದಾದ ನಂತರ ಮನೆಗೆ ಬಂದು ಸ್ನಾನ ತಿಂಡಿ ಇಲ್ಲವೇ ಊಟವನ್ನೇ ಮುಗಿಸಿ ಚಿಕಿತ್ಸೆ ನೀಡಲು ಆರಂಭಿಸಿದರೆ ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇಿ ಇರುತ್ತಾರೆ. ಕೆ.ಆರ್.ರಸ್ತೆಯಲ್ಲಿರುವ ಆದಿಚುಂಚನಗಿರಿ ಬಿಲ್ಡಿಂಗ್ ನಲ್ಲಿ ತಮ್ಮ ಕ್ಲಿನಿಕ್ ಹೊಂದಿರುವ ವೈದ್ಯರು  ಇತರೇ ಕ್ಲಿನಿಕ್ಕಿನಂತೆ ಭಾರೀ  ಐಶಾರಾಮ್ಯವಾಗಿರದೇ ಸಾಧಾರಣವಾಗಿದ್ದರೂ ಅವರ ಕೈಗುಣ ಚೆನ್ನಾಗಿರುವ ಕಾರಣ ಜನರು ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಬಾರಿ ರೋಗಿಗಳು ಕ್ಲೀನಿಕ್ಕಿಗೆ ಬರಲೂ ಸಾಧ್ಯಾವಾದೇ ಇರುವ ಹೋಗುತ್ತಿರುವ ದಾರಿಯ ಮಧ್ಯದಲ್ಲಿ ಕೈ ಅಡ್ಡ ಹಾಕಿ ನಿಲ್ಲಿಸಿದರೆ, ಅಲ್ಲೇ ಯಾವುದೋ ಅಂಗಡಿಯ ಜಗುಲಿಯ ಮೇಲೆ ಕುಳಿತೋ ಇಲ್ಲವೇ  ರಸ್ತೆಯ ಪಕ್ಕದಲ್ಲಿ ನಿಂತೂ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಗುಣಪಡಿಸಲು ಸಾಧ್ಯವಾಗದ ಅನೇಕ ರೋಗಗಳನ್ನು ಗುಣಪಡಿಸಿರುವ ವೈದ್ಯರ ಬಳಿ ಒಂದು ಮೊಬೈಲ್ ಫೋನಾಗಲೀ, ಕಂಪ್ಯೂಟರ್ ಅಥವಾ ಇಂಟರ್ನೆಟ್ ಇಲ್ಲದಿರುವುದು ಅಚ್ಚರಿಯ ವಿಷಯವಾಗಿದೆ. ಅವರ ಕ್ಲಿನಿಕ್‌ನಲ್ಲಿ ಕೇವಲ ಒಂದು ದೂರವಾಣಿ ಇದ್ದು ಅದನ್ನೂ ಸಹಾ ಯಾವುದೇ ಸಹಾಯಕರು ಅಥವಾ ಕಾಂಪೌಂಡರ್ಗಳು ಇಲ್ಲದೇ ಅವೆಲ್ಲಾ ಕೆಲಸವನ್ನೂ ವೈದ್ಯರೇ ಸ್ವತಃ ನಿರ್ವಹಿಸುತ್ತಾರೆ.

ಈ ರೀತಿಯ ಸರಳ ಸಜ್ಜನರು ರಾಜಕೀಯಕ್ಕೆ ಬಂದಲ್ಲಿ ಹೆಚ್ಚಿನ ಸೇವೆ ಸಲ್ಲಿಸಬಹುದು ಎನ್ನುವ ಕಾರಣದಿಂದಾಗಿ, ತಮ್ಮ  ಕ್ಷೇತ್ರದ ಜನರ ಬಲವಂತಕ್ಕೆ ಮಣಿದು ಕಳೆದ ಜಿಲ್ಲಾ ಪಂಚಾಯತ್  ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡೂವರೆ ವರ್ಷಗಳ ಕಾಲ ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು. ಇದೇ  ಉತ್ಸಾಹದಲ್ಲಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿಯೂ ಪಕ್ಷೇತರರಾಗಿ ಸ್ಪರ್ಧಿಸಿ ಜನ ಬೆಂಬಲ ಸಿಗದೇ ಪರಾಭವಗೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಡಾ.ಶಂಕರೇಗೌಡ ಅವರು ಸಮಾಜಕ್ಕೆ ಸಲ್ಲಿಸಿದ ಈ ಅಸಾಧಾರಣವಾದ ಸೇವೆಗಾಗಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದಾರೆ

 • ಕಲ್ಪವೃಕ್ಷ ಟ್ರಸ್ಟ್ ಕರ್ನಾಟಕ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಿದೆ.
 • ಜೀ ಕನ್ನಡ ವಾಹಿನಿಯು 2019ರಲ್ಲಿ  ಹೆಮ್ಮೆಯ ಕನ್ನಡಿಗ  ಪ್ರಶಸ್ತಿ ನೀಡಿ ಗೌರವಿಸಿದೆ.
 • ಅವರ ನಿಸ್ವಾರ್ಥ ಕೆಲಸಕ್ಕಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಲೇಖನವನ್ನು ಬರೆದು  ಗೌರವ ಸಲ್ಲಿಸಿವೆ.

shank4ಕೊರೋನಾ ಮಹಾಮಾರಿಯ ಸಂಧರ್ಭದಲ್ಲಿಯೂ ಯಾವುದಕ್ಕೂ ಜಗ್ಗದೆ, ಕುಗ್ಗದೆ ನಿರಂತರವಾಗಿ ಎಂದಿನಂತೆ ಚಿಕಿತ್ಸೆ ನೀಡುತ್ತಲೇ ಇದ್ದರು. ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ  ವಿಶ್ರಾಂತಿ ದೃಷ್ಟಿಯಿಂದ ಮನೆಯಲ್ಲೇ ಕ್ಲಿನಿಕ್ ಮಾಡಿಕೊಂಡು ಬೆಳಿಗ್ಗೆ 8ರಿಂದ 9.30ರವರೆಗೆ ಹಾಗೂ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆವರೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಂದೆಲ್ಲಾ ಇವರು ಮನೆಗೆ ಬರುವವರೆಗೂ ಆತಂಕದಲ್ಲೇ ಇರುತ್ತಿದ್ದ ಶಂಕ್ರೇಗೌಡರ ಮಡದಿ ಮತ್ತು ಮಗಳಿಗೆ ಈಗ ವೈದ್ಯರು ಮನೆಯಲ್ಲೇ ಇದ್ದು ಚಿಕಿತ್ಸೆ  ಕೊಡುತ್ತಿರುವುದು ಅವರ ಮನೆಯವರಿಗೆ ತುಸು ನೆಮ್ಮದಿ ನೀಡಿದೆ.

ವರ್ಷದ 365 ದಿನವೂ ಬೇಸರಿಸಿಕೊಳ್ಳದೇ, ಇಷ್ಟು ತಡರಾತ್ರಿಯವರೆಗೂ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುತ್ತೀರಿ? ಎಂದು ಪ್ರಶ್ನಿಸಿದ್ದಕ್ಕೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾಗಿದ್ದ ಡಾ.ಕೆ.ಗೋವಿಂದ ಅವರೂ ಸಹಾ ಹೀಗೆಯೇ ಹಗಲಿರುಳು ಎನ್ನದೇ ಚಿಕಿತ್ಸೆ ಕೊಡುತ್ತಿದ್ದದ್ದೇ ನನಗೆ ಸ್ಫೂರ್ತಿ ಎನ್ನುತ್ತಾರೆ ಗೌಡರು.

ಈ ಮೊದಲೇ ಹೇಳಿದಂತೆ ವೈದ್ಯೋ ನಾರಯಣೋ ಹರಿಃ ಎಂದು ವೈದ್ಯರನ್ನು ದೇವರ ಸಮಾನ ಎಂದು  ಅನಾದಿ ಕಾಲದಿಂದಲೂ ನಂಬಿರುವವರಿಗೆ, ಇತ್ತೀಚಿಗೆ  ಎಲ್ಲೆಡೆಯೂ  ವಾಣಿಜ್ಯೀಕರಣವಾಗಿ  ಅನೇಕ ವೈದ್ಯರು ದುಬಾರಿ ಶುಲ್ಕವನ್ನು ವಿಧಿಸುವುದಲ್ಲದೇ, ಔಷಧಿ ಕಂಪನಿಗಳು ಮತ್ತು ಸುತ್ತಮುತ್ತಲಿನ ಮೆಡಿಕಲ್ ಸ್ಟೋರ್ಗಳೊಂದಿಗೆ ಶಾಮೀಲಾಗಿ, ಅವರು ಕೊಡುವ ಕಮಿಷನ್ ಆಸೆಗಾಗಿ ದುಬಾರೀ ಔಷಧಿಗಳನ್ನೇ ಬರೆಯುವ ದಿನಗಳಲ್ಲಿ,  ವೃತ್ತಿ ಗೌರವ  ಅದರ್ಶ ಮತ್ತು ತತ್ವಗಳನ್ನು ಉಳಿಸಿಕೊಂಡು ಗ್ರಾಮೀಣ ಜನರಿಗೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ  ಡಾ. ಶಂಕ್ರೇಗೌಡರು ಈಗ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾವೀ ವೈದ್ಯರಿಗೆ ಖಂಡಿತವಾಗಿಯೂ ಮಾದರಿಯಾಗಬಲ್ಲರು ಇಂತಹ ಮಾನವೀಯತೆ ಮತ್ತು ಸೇವಾ ಮನೋಭಾವನೆಯನ್ನು  ಹೊಂದಿರುವ ಶ್ರೀ ಡಾ. ಶಂಕರೇ ಗೌಡರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ಚರಣ್ ರಾಜ್

ದೂರದ ಬೆಳಗಾವಿಯ ಹುಡುಗ ಚಿತ್ರ ನಟನಾಗಬೇಕೆಂದು ಬೆಂಗಳೂರಿನ ಗಾಂಧಿನಗರದಲ್ಲಿ ಐದಾರು ವರ್ಷಗಳ ಕಾಲ ನಾನಾ ವಿಧದ ಕಷ್ಟ ಪಟ್ಟು ಸಣ್ಣ ಸಣ್ಣ ಪೋಷಕ ಪಾತ್ರಗಳ ಮೂಲಕ ಆರಂಭಿಸಿ ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿದ್ದ ಸಮಯದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಅಚಾನಕ್ಕಾಗಿ ಖಳನಾಯಕನಾಗಿ ಮಿಂಚಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗವಲ್ಲದೇ ಹಿಂದಿಯಲ್ಲೂ ಛಾಪು ಮೂಡಿಸಿದರು ಇಲ್ಲಿದೇ ನಮ್ಮನೇ ಅಲ್ಲಿ ಹೋದೆ ಸುಮ್ಮನೇ ಎನ್ನುವಂತೆ ಮತ್ತೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದು ಆಡು ಮುಟ್ಟದ ಸೂಪ್ಪಿಲ್ಲ ಇವರು ಮಾಡದ ಕೆಲಸವಿಲ್ಲ ಎನ್ನುವಂತೆ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿರುವ ನಮ್ಮ ಹೆಮ್ಮೆಯ ಕನ್ನಡಿಗ ಚರಣ್ ರಾಜ್ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ.

chaan2ಚರಣ್ ರಾಜ್ ಅವರು ದೂರದ ಬೆಳಗಾವಿ ಜಿಲ್ಲೆಯ ಬೊಮ್ಮಯಿ ಗ್ರಾಮದಲ್ಲಿನ ಸಾಮಿಲ್ ಮಾಲಿಕರೊಬ್ಬರ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೂ ಹಾಡು ನಟನೆಯಲ್ಲಿ ಚುರುಕಾಗಿದ್ದ ಚರಣ್ ಅವರು ತಮ್ಮ ಶಾಲಾದಿನಗಳಲ್ಲಿ ಶಾಲೆಯ ವಾರ್ಷಿಕೋತ್ಸವ ಅಥವಾ ಯಾವುದೇ ಸ್ಪರ್ಥೆಯಲ್ಲಿ ಭಾಗವಹಿಸಿದ್ದಾರೆ ಎಂದರೆ ಬಹುಮಾನ ಅವರಿಗೇ ಕಟ್ಟಿಟ್ಟ ಬುತ್ತಿ ಎನ್ನುವಷ್ಟರ ಮಟ್ಟಿಗೆ ಕೀರ್ತಿ ಪಡೆದಿರುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ಸೇರಿಕೊಂಡಾಗ ಅದೊಮ್ಮೆ ಗೆಳೆಯರೆಲ್ಲರೂ ನಿನಗೆ ನಾಯಕನಾಗುವ ಎಲ್ಲಾ ಅರ್ಹತೆ ಇರುವ ಕಾರಣ ನೀನೇಕೆ ಚಿತ್ರರಂಗದಲ್ಲಿ ನಟಿಸಲು ಪ್ರಯತ್ನಿಸಬಾರದು ಎಂದು ಹುರಿದುಂಬಿಸುತ್ತಿದ್ದಾಗ ಕುಚೋದ್ಯಕ್ಕೆಂದು ಗೆಳೆಯನೊಬ್ಬ ಈ ಮುಸುಡಿಗೆ ಯಾರು ಪಾತ್ರ ಕೊಡುತ್ತಾರೆ? ಎಂದು ಆಡಿಕೊಂಡಿದ್ದನ್ನೇ ಸವಾಲಾಗಿ ಸ್ವೀಕರಿಸಿ ಮನೆಯವರೆಲ್ಲರ ಮಾತುಗಳನ್ನೆಲ್ಲಾ ಧಿಕ್ಕರಿಸಿ ಅಪ್ಪನ ಸಾಮಿಲ್ ನಿಂದ 6000/-  ರೂಪಾಯಿಗಳನ್ನು ಕದ್ದು ಬೆಂಗಳೂರಿನ ಗಾಂಧಿನಗರಕ್ಕೆ ಬರುತ್ತಾರೆ.

ಕೂತು ತಿನ್ನುವವನಿಗೆ, ಕುಡಿಕೆ ಹೊನ್ನು ಸಾಲದು ಎನ್ನುವಂತೆ ಕೈಯ್ಯಲ್ಲಿ ಇದ್ದ ಹಣವೆಲ್ಲಾ ಖಾಲಿಯಾಗುತ್ತಾ ಹೋದಂತೆಲ್ಲಾ ಜೀವನಕ್ಕಾಗಿ ಸಂಜೆಯ ಹೊತ್ತು ಕ್ಯಾಬರೆ ಬಾರ್ ಗಳಲ್ಲಿ ಹಾಡುಗಳನ್ನು ಹಾಡುತ್ತಾ ಆರಂಭಿಸಿ ಬೆಂಗಳೂರಿನ ಅನೇಕ ಆರ್ಕೇಸ್ಟ್ರಾಗಳಲ್ಲಿ ಸಣ್ಣ ಪುಟ್ಟ ಸಭೆ ಸಮಾರಂಭಗಳು ಮದುವೆ ಮುಂಜಿಗಳಲ್ಲಿ ಹಾಡುತ್ತಾ, ಚಿಕ್ಕ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ ಜೀವನ ನಡೆಸುತ್ತಿದ್ದರೂ ಗಮನವೆಲ್ಲಾ ಗಾಂಧಿನಗರದತ್ತವೇ ಇದ್ದು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತದೆ. ಅದೃಷ್ಟವಷಾತ್ ತಮ್ಮ ರೂಂ ಮೇಟ್ ಅವರು ಸಿದ್ದಲಿಂಗಯ್ಯನವರು ತಮ್ಖ ಹೊಸಾ ಚಿತ್ರ ಪರಾಜಿತಕ್ಕೆ ನಟರ ಹುಡುಕಾಟದಲ್ಲಿದ್ದಾರೆ ಎಂಬುದನ್ನು ತಿಳಿದು ಅವರ ಮನೆಗೆ ಹೋಗಿ ತಮ್ಮ ಅಭಿನಯವನ್ನು ತೊರಿಸಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಸಫಲವಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲೇ ಇಲ್ಲ.

ಆರಂಭದಲ್ಲಿ ಸಣ್ಣ ಪುಟ್ಟಪಾತ್ರಗಳಲ್ಲಿ ನಂತರ ಪೋಷಕನಾಗಿ ಆನಂತರ ಖಳನಾಯಕನಾಗಿ, ಹಲವಾರು ಸಿನಿಮಾಗಳಲ್ಲಿ ನಟಿಸಿದ ನಂತರ ಆಶಾ ಸಿನಿಮಾದ ಮೂಲಕ ನಾಯಕನಾಗಿ ಭಡ್ತಿ ಪಡೆದದ್ದಲ್ಲದೇ, ಆನಂತರ ಆಫ್ರಿಕಾದ ಶೀಲಾ, ಗಂಧದಗುಡಿ ಭಾಗ2, ಅಣ್ಣಾವ್ರ ಮಕ್ಕಳು, ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ.

charan4ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿರುವ ಸಮಯದಲ್ಲೇ ತೆಲುಗಿನಲ್ಲಿ ನಾಯಕ ನಟರಷ್ಟೇ ಖ್ಯಾತಿ ಪಡೆದಿದ್ದ ವಿಜಯಶಾಂತಿ ಅವರ ಪ್ರತಿಘಟನ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಕರೆ ಬಂದಾಗ ಆರಂಭದಲ್ಲಿ ಇಲ್ಲಿ ನಾಯಕನಾಗಿರುವಾಗ ಮತ್ತೊಂದು ಭಾಷೆಯ ಚಿತ್ರರಂಗದಲ್ಲಿ ಖಳನಟನಾಗಿ ಅಭಿನಯಿಸ ಬೇಕೇ? ಎಂಬ ಜಿಜ್ಞಾಸೆ ಮನದಲ್ಲಿ ಮೂಡಿದಾಗ ಕಲಾವಿದರಾದವರು ಕೇವಲ ಒಂದು ಪಾತ್ರಕ್ಕೇ ಮೀಸಲಾಗಿರದೇ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸ ಬೇಕು ಎಂದು ನಿರ್ಧರಿಸಿ ಪರಭಾಷೆಯ ಚಿತ್ರದಲ್ಲೂ ಒಂದು ಕೈ ನೋಡೇ ಬಿಡೋಣ ಎಂದು ಪ್ರತಿಘಟನಾ ಚಿತ್ರದಲ್ಲಿ ನಟಿಸಿ, ಆ ಚಿತ್ರ ಯಶಸ್ವಿಯಗಿದ್ದೇ ತಡಾ ದಿನ ಬೆಳಗಾಗುವುದರೊಳಗೆ, ಚರಣ್ ರಾಜ್ ಆಂಧ್ರಾದ್ಯಂತ ಮನೆಮಾತಾಗಿದ್ದಲ್ಲದೇ, ಅವರ ಅದೃಷ್ಟ ಖುಲಾಯಿಸಿತು ಎಂದರೂ ತಪ್ಪಾಗದು. ಅ ಚಿತ್ರದ ಅವರ ನಟನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿದ ಮೇಲಂತೂ ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲೂ ಅವಕಾಶಗಳು ಹೇರಳವಾಗಿ ಸಿಗಲಾರಂಭಿಸಿತು.

chaan3ವಿಜಯಶಾಂತಿ ಅವರ ಬಹುತೇಕ ಚಿತ್ರಗಳಲ್ಲಂತೂ ಚರಣ್ ರಾಜ್ ಖಾಯಂ ನಟರಾಗಿದ್ದು. ನಮ್ ನಾಡು, ಗಡಿನಾಡು, ನೀತಿಕ್ಕು ತಂದನೈ ಮತ್ತು ಜಂಟಲ್ ಮ್ಯಾನ್  ಇಂದ್ರುಡು ಚಂದ್ರುಡು ಮತ್ತು ಕರ್ತವ್ಯಂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾಗುತ್ತಿದ್ದಂತೆಯೇ ರಜನೀಕಾಂತ್ ಅಭಿನಯದ ಫೂಲ್ ಬನೆ ಅಂಗಾರೇ ,ವೀರ,ಧರ್ಮ ಡೋರಾಯ್ ಮುಂತಾದ ಹಿಂದೀ ಚಿತ್ರಗಳಲ್ಲಿಯೂ ಆಭಿನಯಿಸುವ ಮೂಲಕ ಬಹು ಬಾಷಾಭಾಷಾ ನಟರೆನಿಸಿಕೊಂಡರು. ಈ ಎಲ್ಲಾ ಭಾಷೆಗಳಲ್ಲಿಯೂ ಕೇವಲ ನಟನೆಯಷ್ಟೇ ಅಲ್ಲದೇ ಆಯಾಯಾ ಭಾಷೆಗಳನ್ನೂ ಕಲಿತು ಅವರ ಪಾತ್ರಗಳಿಗೆ ಅವರೇ ಡಬ್ ಮಾಡಿದ್ದದ್ದು ಗಮನಾರ್ಹವಾಗಿತ್ತು.

ಕೇವಲ ಅಭಿನಯಕ್ಕೆ ಮಾತ್ರವೇ ತಮ್ಮನ್ನು ತಾವು ಸೀಮಿತಗೊಳಿಕೊಳ್ಳದ ಚರಣ್ ರಾಜ್ , ಹಿನ್ನಲೆ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ನಿರ್ಮಾಪಕರಾಗಿ, ನಿರ್ದೇಶಕರಾಗಿದ್ದಲ್ಲದೇ, ಬರಹಗಾರರಾಗಿಯೂ ತಮ್ಮ ಛಾಪನ್ನು ಮೂಡಿಸುವ ಮೂಲಕ ಪ್ರಸ್ತುತ ತೆಲುಗು, ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಬೇರೆ ಭಾಷೆಯಲ್ಲಿ ಎಷ್ಟೇ ಹೆಸರು ಮಾಡಿದರೂ ಸಮಯ ಸಿಕ್ಕಾಗಲೆಲ್ಲಾ ಚರಣ್ ರಾಜ್ ತಮ್ಮ ಕನ್ನಡ ಭಾಷೆಯ ಪ್ರೇಮದಿಂದಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹಣವನ್ನು ಹಾಕಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಲ್ಲದೇ ಇತ್ತೀಚಿನ ರಾಜಾಹುಲಿ, ಟಗರು ಮುಂತಾದ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

chaan1ಚರಣ್ ರಾಜ್ ಅವರಂತೆಯೇ ಅವಾ ಮಗ ತೇಜ್ ರಾಜ್ ಕೂಡಾ ತನ್ನ ತಂದೆಯಂತೆಯೇ ತಮಿಳು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ತಮಿಳು ಚಿತ್ರ 90ml ಯಶಸ್ವಿಯಾಗುತ್ತಿದ್ದಂತೆಯೇ, ಇನ್ನೂ ಮೂರ್ನಾಲ್ಕು ತಮಿಳು ಸಿನಿಮಾದಲ್ಲಿ‌ ಬಣ್ಣ ಹಚ್ಚಿವ ಮೂಲಕ ಕೈ ತುಂಬಾ ಕೆಲಸವಿದ್ದರೂ, ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೇಮದಿಂದಾಗಿ ಭರತ ಬಾಹುಬಲಿ ಎಂಬ ಕನ್ನಡ‌ ಸಿನಿಮಾದಲ್ಲಿ ತೇಜ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ.

charanಇನ್ನು ಕೊರೊನಾ ಸಮಯದಲ್ಲಿ ದಿನದ 24 ಗಂಟೆಯೂ ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಜೊತೆಗೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹೋಂ ಗಾರ್ಡ್​ಗಳು ಕೊರೊನಾ ವಾರಿಯರ್ಸ್​ಗಳಾಗಿ ಕೆಲಸ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಈ ಫ್ರೆಂಟ್‌ಲೈನ್ ವಾರಿಯರ್ಸ್​ಗಳಿಗೆ ಅನೇಕ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರೆ, ಅವರ ಜೊತೆ ಚರಣ್ ರಾಜ್ ಅವರೂ ಸಹಾ ಕೈ ಜೋಡಿಸಿ, ಬೆಂಗಳೂರಿನ ಚಿಕ್ಕ ಜಾಲ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ಹತ್ತು ಹಲವು ಪೊಲೀಸ್ ಠಾಣೆಗಳಿಗೆ ಸ್ವತಃ ಅವರೇ ತೆರಳಿ ಪೊಲೀಸ್ ಸಿಬ್ಬಂದಿಗೆ ಆಹಾರ ಕಿಟ್​ಗಳನ್ನು ವಿತರಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯೂ ನಗರದ 148 ಠಾಣೆಗಳಿಗೂ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಪೊಲೀಸರೂ ಕೂಡ ಮನುಷ್ಯರೇ. ಜನರು ಮಹಾಮಾರಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ, ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಗೌರವನ್ನು ಕೊಟ್ಟು ಜನರೂ ಸಹಾ ತಮ್ಮ ತಮ್ಮ ಮನೆಯಿಂದ ಹೊರಬಾರದಂತೆ ಜನರನ್ನು ಕೋರಿಕೊಂಡಿದ್ದರು.

ಹೀಗೆ ಎಲ್ಲೇ ಇರು ಹೇಗೇ ಇರು, ಎಂದೆಂದಿಗೂ ಕನ್ನಡಾವಾಗಿರು ಎನ್ನುವಂತೆ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿ ಭಾರತೀಯ ವಿವಿಧ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ, ತಮಗೆ ಮೊತ್ತ ಮೊದಲ ಬಾರಿಗೆ ಅಭಿನಯಿಸಲು ಅವಕಾಶ ಕೊಟ್ಟ ಶ್ರಿ ಸಿದ್ದಲಿಂಗಯ್ಯನವರನ್ನು ತಮ್ಮ ಗಾಡ್ ಫಾದರ್ ಎಂದು ಹೇಳಿಕೊಳ್ಳುತ್ತಲೇ, ಕನ್ನಡದ ತನ ಮತ್ತು ಕನ್ನಡದ ಕಂಪನ್ನು ದೇಶಾದ್ಯಂತ ತನ್ನ ಚಿತ್ರಗಳಲ್ಲಿ ಎತ್ತಿ ಮೆರೆಸುತ್ತಿರುವ ಕನ್ನಡಕ್ಕೆ ಗೌರವವನ್ನು ತಂದು ಕೊಟ್ಟಿರುವ ಚರಣ್ ರಾಜ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

ಸ್ನೇಕ್ ಶ್ಯಾಮ್

sh3ಮನುಷ್ಯ ಬುದ್ದಿವಂತನಾಗುತ್ತಾ ಹೋದಂತೆಲ್ಲಾ ನಾಗರಿಕತೆಯು ಬೆಳೆಯುತ್ತಾ ಹೋಗಿ ಅರಣ್ಯಗಳೆಲ್ಲಾ ನಾಶವಾಗಿ ಒಂದೊಂದೇ ಹಳ್ಳಿ ಮತ್ತು ಪಟ್ಟಣಗಳಾಗಿ ಮಾರ್ಪಾಡುತ್ತಾ ಹೋದಂತೆಲ್ಲಾ ಆರಣ್ಯವನ್ನೇ ಆಶ್ರಯಿಸಿದ್ದ ವನ್ಯಮೃಗಗಳು, ಸರೀಸೃಪಗಳು ಮತ್ತು ಪಶು ಪಕ್ಷಿಗಳು ದಿಕ್ಕಾಪಾಲಾಗಿವೆ. ಹಾಗಾಗಿಯೇ ಇಂದು ಅನೇಕ ಕಡೆಗಳಲ್ಲಿ ಹಾವುಗಳು ಮನೆಯ ಒಳಗೆ ಬರುವ ಉದಾಹರಣೆಗಳು ಇದ್ದು, ಹಾಗೆ ಹಾವು ಮನೆಯೊಳಗೆ ಬಂದೊಡನೆಯೇ ಅದು ಯಾವ ರೀತಿಯ ಹಾವು ವಿಷಪೂರಿತವೋ? ಇಲ್ಲಾ ವಿಷವಲ್ಲದ್ದೋ ಎಂದು ಯಾವುದನ್ನೂ ಯೋಚಿಸಿದೆ ಬಹಳಷ್ಟು ಮಂದಿ ಅದನ್ನು ಹೊಡೆದು ಸಾಯಿಸಲು ಪ್ರಯತ್ನಿಸುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಪರಿಸರ ಪ್ರೇಮಿಯಾಗಿ ನಗರಪ್ರದೇಶಗಳಲ್ಲಿ ಕಾಣಸಿಗುವ ಹಾವುಗಳನ್ನು ನಾಜೂಕಿನಿಂದ ಹಿಡಿದು ಅದನ್ನು ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಬಿಟ್ಟು ಬರುವ ಕಾಯಕವನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬರುತ್ತಿರುವ ಶ್ರೀ ಎಮ್. ಎಸ್ ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಸ್ನೇಕ್ ಶ್ಯಾಂ ಅವರ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಸ್ನೇಕ್ ಶ್ಯಾಮ್ ಅವರ ಪೂರ್ವಜರು ಮೂಲತಃ ಮೈಸೂರಿನ ಕೃಷ್ಣರಾಜನಗರದರಾದರೂ ಅವರ ತಂದೆ M.R.ಸುಬ್ಬರಾವ್ ಮತ್ತು ತಾಯಿ A. ನಾಗಲಕ್ಷ್ಮಿ ಮಿರ್ಲೆ ಅವರು ಮೈಸೂರಿನಲಲ್ಲೇ ನೆಲಸಿರುವ ಕಾರಣ 1967ರಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಶ್ಯಾಮ್ ಜನಿಸುತ್ತಾರೆ. ಹೇಳೀ ಕೇಳಿ ಅವರದ್ದು ಸಂಪದಾಯಸ್ಥ ಕುಟುಂಬವಾದರು ಶ್ಯಾಂ ಬಾಲ್ಯದಿಂದಲೂ ಓದಿಗಿಂತಲೂ ಇತರೇ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿಯುಳ್ಳ ಶ್ಯಾಂ ಬಹಳ ಚುರುಕಿನ ಮತ್ತು ಧೈರ್ಯಶಾಲಿಯ ಹುಡುಗ ಎನಿಸಿಕೊಂಡಿರುತ್ತಾನೆ. ಪಬ್ಲಿಕ್ ಟಿವಿಯ ಸಂಸ್ಥಾಪಕ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ H R ರಂಗನಾಥ್ ಅವರು ಶ್ಯಾಂ ಆವರ ಬಾಲ್ಯ ಸ್ನೇಹಿತ ಎನ್ನುವುದು ಗಮನಾರ್ಹವಾಗಿದೆ. ಚಿಕ್ಕಹುಡುಗನಿದ್ದಾಗಲಿಂದಲೂ ಮರ ಹತ್ತುವುದು ಬೇಲಿ ನೆಗೆಯುವುದು, ನೀರು ಕಂಡಲ್ಲಿ ಈಜಿಗೆ ಬೀಳುವುದು ಶ್ಯಾಂ ಅವರ ನೆಚ್ಚಿನ ಹವ್ಯಾಸ ಅದರ ಜೊತೆಗೇ ತೆಂಗಿನಗರಿಯನ್ನು ಸೀಳಿದ ಕಡ್ಡಿಗೆ ಜೀರುಗುಣಿಕೆ ಹಾಕಿ ಓತಿಕ್ಯಾತ ಹಿಡಿಯುವುದಾಲ್ಲಿ ಶ್ಯಾಮ್ ಎತ್ತಿದ ಕೈ.

sn6ಹೀಗೆ ಬೇಲಿಗಳ ಮಧ್ಯೆದಲ್ಲಿ ಅಡಗಿ ಕುಳಿತಿರುತ್ತಿದ್ದ ಓತಿಕ್ಯಾತಗಳನ್ನು ಗೆಳೆಯರೊಂದಿಗೆ ಹಿಡಿಯುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಹಾವೊಂದು ಕಾಣಿಸಿಕೊಂಡಾಗ, ಅವರ ಗೆಳೆಯರಲ್ಲಿ ಅನೇಕರು ಎದ್ದೆನೋ ಬಿದ್ದೇನೋ ಎಂದು ಓಡಿ ಹೋದರೆ, ಇನ್ನೂ ಕೆಲವರು ಆ ಹಾವಿನತ್ತ ಕೈಗೆ ಸಿಕ್ಕ ವಸ್ತುಗಳಲ್ಲಿ ಹೊಡೆದು ಕೊಂದು ಹಾಕಿ ಅಲ್ಲ್ ಇದ್ದ ಪುರ್ಲೆಗಳನ್ನು ಒಟ್ಟು ಗೂಡಿಸಿ ಬೆಂಕಿಹಾಕಿ ಹಾವನ್ನು ಸುಟ್ಟು ಹಾಕಿದಾಗ ಬಾಲಕ ಶ್ಯಾಂಗ್ ಬಹಳ ದುಖಃವಾಗುತ್ತದೆ. ಹಾವುಗಳು ಇರಬೇಕಾದ ಜಾಗದಲ್ಲಿ ನಾವು ವಾಸಿಸುತ್ತಾ ಹೀಗೆ ಅವುಗಳನ್ನು ಬಡಿದು ಕೊಂದು ಹಾಕುವುದು ಸರಿಯಲ್ಲ ಎಂದೆಣಿಸಿದ 10-12 ವರ್ಷದ ಹುಡುಗ ಅಂದಿನಿಂದ ಹಾವುಗಳನ್ನು ಚಾಕಚಕ್ಯತೆಯಿಂದ ಹಿಡಿದು ಗೋಣೀ ಚೀಲದಲ್ಲಿ ಹಾಕಿಕೊಂಡು ಅವುಗಳನ್ನು ದೂರದ ಸುರಕ್ಷಿತವಾದ ಅರಣ್ಯ ಪ್ರದೇಶಗಳಲ್ಲಿ ಬಿಟ್ಟು ಬರುವ ಹವ್ಯಾಸವನ್ನು ರೂಡಿಸಿಕೊಳ್ಳುತ್ತಾನೆ.

1981ರಲ್ಲಿ ಶ್ಯಾಮ್ ಮೊತ್ತ ಮೊದಲ ಬಾರಿಗೆ ಹಾವನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಅವರು ಆರಂಭಿಸಿದ ನಂತರ ಅವರ ಸುತ್ತಮುತ್ತಲಿನ ಪ್ರದೇಶದ ಯಾರದ್ದೇ ಮನೆಗಳಲ್ಲಿ ಹಾವು ಕಂಡು ಬಂದರೂ ಶ್ಯಾಂ ಅವರನ್ನು ಸಂಪರ್ಕಿಸಿದಾಗ ಕೊಂಚವೂ ಬೇಸರವಿಲ್ಲದೇ ತಮ್ಮದೇ ಸ್ವಂತ ಖರ್ಚಿನಲ್ಲಿ ಆ ಸ್ಥಳಕ್ಕೆ ಹೋಗಿ ಆರಂಭದಲ್ಲಿ ಸ್ಥಳೀಯವಾಗಿ ಸಿಗುವ ಬೆತ್ತ ಇಲ್ಲವೇ ಕೋಲುಗಳ ಸಹಾಯದಿಂದ ಹಿಡಿಯುತ್ತಿದ್ದವರು ನಂತರದ ದಿನಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಮಾನ್ಯ ತಂತಿಯ ಕೊಂಡಿ, ಹಳೆಯ ಕಿತ್ತುಹೋದ ಬ್ಯಾಡ್ಮಿಂಟನ್ ರಾಕೆಟ್ಗಳನ್ನು ಬಳಸಿ ಸುಲಭವಾಗಿ ಮತ್ತು ಸುರಕ್ಶಿತವಾಗಿ ಹಾವುಗಳಿಗೆ ಕೊಂಚವೂ ಏಟಾಗಂತೆ ಹಿಡಿದು ಜೊತೆಗೆ ತಂದಿದ್ದ ಚೀಲಾ ಅಥವಾ ಡಬ್ಬದೊಳಗೆ ಹಾಕಿಕೊಂಡು ನಂತರದ ದಿನಗಳಲ್ಲಿ ಅವುಗಳನ್ನು ಸುರಕ್ಷಿತವಾಗಿ ಊರಾಚೆಯ ಕಾಡಿನಲ್ಲಿ ಬಿಟ್ಟುಬರುವುದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಸ್ನೇಕ್ ಶ್ಯಾಂ ಎಂದೇ ಕರೆಯಲಾರಂಭಿಸಿ ಅದೇ ಹೆಸರಿನಲ್ಲಿಯೇ ಮೈಸೂರಿನಾದ್ಯಂತ ಜನಪ್ರಿಯರಾಗಿ ಹೋದರು.

ಆರಂಭದಲ್ಲಿ ಅವರು ಹಿಡಿದ ಹಾವುಗಳಿಗೆ ಲೆಖ್ಖವಿಲ್ಲದಿದ್ದರೂ 1997ರಿಂದ ಈಚೆಗೆ ಅವರು ಹಾವು ಹಿಡಿಯಲು ಹೋಗುವ ಕಡೆಗೆಲ್ಲಾ ತಮ್ಮೊಂದಿಗೆ ರಿಜಿಸ್ಟರ್ ಒಂದನ್ನು ಹಿಡಿದುಕೊಂಡು ಹೋಗಿ ಹಾವು ಹಿಡಿದ ಬಳಿಕ ತಾವು ಹಿಡಿದ ಹಾವಿನ ವಿವರ, ಎಲ್ಲಿ ಹಿಡಿದಿದ್ದು ಎಂದು ಹಿಡಿದಿದ್ದು ಎಂಬೆಲ್ಲಾ ವಿವರಗಳನ್ನು ನಮೂದಿಸಿ ಆ ಮನೆಯವರ ಸಹಿ ಪಡೆಯುವ ಮುಖಾಂತರ ಅದಕ್ಕೊಂದು ಅಧಿಕೃತ ದಾಖಲೆಯನ್ನು ಪಟ್ಟಿ ಮಾಡುತ್ತಾ ಹೋಗಿರುವುದು ಅಭಿನಂದನಾರ್ಹವಾಗಿದೆ. ಮೈಸೂರಿನ ಯಶೋದಾನಗರದ ಲೋಕೇಶ್ ಎಂಬುವರ ನೀರಿನ ಸಂಪಿನಲ್ಲಿದ್ದ ನಾಗರಹಾವೊಂದನ್ನು ಹಿಡಿಯುವ ಮೂಲಕ 30 ಸಾವಿರ ಹಾವುಗಳನ್ನು ಹಿಡಿದ ಖ್ಯಾತಿ ಪಡೆದಿದ್ದ ಶ್ಯಾಂ ಈಗ ಅಧಿಕೃತವಾಗಿಯೇ ಸುಮಾರು 40000 ಕ್ಕೂ ಅಧಿಕ- ಹಾವುಗಳನ್ನು ಹಿಡಿದಿರುವ ಶ್ಯಾಂ ಇನ್ನು ಆರಂಭದಲ್ಲಿ ಹಿಡಿದಿರುವ ಹಾವುಗಳನ್ನೂ ಸೇರಿಸಿದರೆ ಖಂಡಿತವಾಗಿಯೂ 50000/- ಹಾವುಗಳನ್ನು ಸಂರಕ್ಷಿಸಿರುವ ಖ್ಯಾತಿ ಶ್ಯಾಂ ಅವರದ್ದಾಗಿದೆ.

sn7ಇವರು ಕೇವಲ ಹಾವು ಹಿಡಿಯುವುದಷ್ಟೆ ಅಲ್ಲದೇ, ಅದರ ಜೊತೆಯಲ್ಲಿ ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆ ಅಥವಾ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ಕಾರ್ಯವನ್ನೂ ಮಾಡುತ್ತಾರೆ. ಎಲ್ಲಾ ಹಾವುಗಳೂ ವಿಷಕಾರಿಯಲ್ಲ ಎಂದು ತೋರಿಸಿ ಕೆಲವೊಮ್ಮೆ ಆಲ್ಲಿರುವವರ ಕೈಗೆ ಹಿಡಿದಿರುವ ಹಾವನ್ನು ನೀಡುವ ಮೂಲಕ ಅವರಲ್ಲಿದ್ದ ಭಯವನ್ನೂ ನಿವಾರಿಸುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್ ಆವರದ್ದಾಗಿದ್ದು, ಮೈಸೂರಿನಲ್ಲಿ ಅವರ ಹೆಸರನ್ನು ಕೇಳದವರೇ ವಿರಳ ಎಂದರೂ ಅತಿಶಯವಲ್ಲ.

ಹಾವು ಹಿಡಿಯುವುದು ಅವರ ಪ್ರವೃತ್ತಿಯಾದರೇ, ಜೀವನೋಪಾಯಕ್ಕಾಗಿ ಶಾಲಾ ಮಕ್ಕಳನ್ನು ತಮ್ಮ ಸ್ವಂತ ವಾಹನದಲ್ಲಿ ಶಾಲೆಗೆ ಬಿಡುವ ವೃತ್ತಿಯನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಷ್ಟು ಹಾವುಗಳನ್ನು ಹಿಡಿದರೂ ಎಲ್ಲಿಯೂ ಯಾರ ಬಳಿಯೂ ಹಣವನ್ನು ಕೇಳದೇ ಇರುವುದು ಅವರ ಹೆಗ್ಗಳಿಕೆಯಾಗಿದೆ. ಇತ್ತೀಚೆಗೆ ಕೆಲವರು ಬಲವಂತವಾಗಿ ಅವರ ಪರಿಶ್ರಮಕ್ಕಲ್ಲದಿದ್ದರೂ ಅವರ ವಾಹನದ ಇಂಧನದ ವೆಚ್ಚಕ್ಕೆಂದು ಕೈಲಾದ ಮಟ್ಟಿಗಿನ ಹಣವನ್ನು ಕೊಟ್ಟಲ್ಲಿ ಸಂಕೋಚದಿಂದ ಪ್ರೀತಿಪೂರ್ವಕ ಒತ್ತಾಯಕ್ಕೆ ಬಿದ್ದು ಸ್ವೀಕರಿಸುವಂತಾಗಿದೆ. ಇತ್ತೀಚೆಗೆ, ಮೈಸೂರಿನ ಅಧಿಕಾರಿಗಳು ಶ್ಯಾಮ್ ಅವರ ದೂರವಾಣಿ ಬಿಲ್‌ಗಳನ್ನು ಪಾವತಿಸುವ ಮೂಲಕ ಅವರ ಕೆಲವು ವೆಚ್ಚಗಳನ್ನು ಭರಿಸಲು ಮುಂದಾಗಿದ್ದಾರೆ.

ತರಬೇತಿ ಪಡೆದ ಹರ್ಪಿಟಾಲಜಿಸ್ಟ್ (ಉರಗತಜ್ಞ) ಅಲ್ಲದಿದ್ದರೂ, ಶ್ಯಾಂ ತಮ್ಮ ಅನುಭವದ ಮೂಲಕ ಹಾವುಗಳನ್ನು ರಕ್ಷಿಸಿ ಅವುಗಳಿಗೆ ಸುರಕ್ಷಿತ ಪ್ರದೇಶಗಳಲ್ಲಿ ಪುನರ್ವಸತಿ ಮಾಡುವುದಲ್ಲದೇ, ಹಾವುಗಳ ಬಗ್ಗೆ ಸಾರ್ವಜನಿಕರಿಗೆ ಸುಲಭವಾದ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಹಾವು ಕಡಿತಕ್ಕೆ ಒಳಗಾದವರಿಗೆ ಗಾಭರಿಗೆ ಒಳಗಾಗದ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವ, ಮತ್ತು ಕಚ್ಚಿನದ ಹಾವಿನ ಜಾತಿಯನ್ನು ಗುರುತಿಸುವ ತಿಳುವಳಿಕೆಯನ್ನು ನೀಡುವ ಮೂಲಕ ಹಾವಿನ ಬಗ್ಗೆ ಸಾರ್ವಜನಿಕರಿಗೆ ಭಯವನ್ನು ನೀಗಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ತಮ್ಮ ಹಿರಿಯರಿಂದ ಕೇಳಿ ತಿಳಿದಿರುವುದಲ್ಲದೇ, ತಮ್ಮ ಅಪಾರವಾದ ಅನುಭವದಿಂದ ಹಾವುಗಳ ಬಗೆಗಿನ ಅವರ ಜ್ಞಾನ ಹೆಚ್ಚಾಗಿದ್ದು, 28-30 ಸ್ಥಳೀಯ ಜಾತಿಯ ಹಾವುಗಳನ್ನು ಅವರು ಸುಲಭವಾಗಿ ಗುರುತಿಸಬಲ್ಲವರಾಗಿದ್ದಾರೆ. ಉರಗ ತಜ್ಞರಾದ ಶ್ರೀ ರೊಮುಲಸ್ ವಿಟೇಕರ್, ಜೆ.ಸಿ. ಡೇನಿಯಲ್ ಅಲ್ಲದೇ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರುಗಳ ಜೊತೆ ಮಾತು ಕಥೆಯಿಂದಲೂ ಮತ್ತು ಅವರ ಕೃತಿಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ. ಶ್ಯಾಮ್ ಅವರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನದ ಮೇಲೂ ಹಾವುಗಳ ವರ್ಣಚಿತ್ರಗಳನ್ನು ಬಿಡಿಸುವುದರ ಮೂಲಕ ಹಾವುಗಳ ಬಗ್ಗೆ ಅಪಾರದ ಅಭಿಮಾನವನ್ನು ತೋರಿಸಿರುವುದಲ್ಲದೇ, ಹಾವುಗಳು ಮನುಷ್ಯರಂತೆ ವಿಷಕಾರಿಯಲ್ಲ ಹಾಗಾಗಿ ಅವರ ಬಗ್ಗೆ ಕಾಳಜಿ ವಹಿಸಿ ಎಂಬ ಘೋಷ ವಾಕ್ಯವನ್ನೂ ಬರೆಸಿಕೊಂಡಿದ್ದಾರೆ

sn4ಶ್ಯಾಮ್ ಅವರ ಈ ಖ್ಯಾತಿ ಕೇವಲ ಮೈಸೂರಿಗಷ್ಟೇ ಸೀಮಿತವಾಗಿರದೇ ವ್ಯಾಪಕವಾಗಿ ಗುರುತಿಸಲ್ಪಟ್ಟ ಕಾರಣ, ನ್ಯಾಷನಲ್ ಜಿಯೋಗ್ರಾಫಿಕ್ ಛಾನೆಲ್ ತನ್ನ ಕ್ರೋಕ್ ಕ್ರಾನಿಕಲ್ಸ್ ಸ್ನೇಕ್ಸ್ ಕರ್ಮ ಆಕ್ಷನ್, ಎಂಬ ಎಂಬ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದ್ದರೇ, ಡಿಸ್ಕವರಿ ಚಾನೆಲ್‌ನಲ್ಲಿ ಅವರ ಕುರಿತಾದ ಕಾರ್ಯಕ್ರಮ ಪ್ರಸಾರವಾದ ನಂತರ ಸ್ನೇಕ್ ಶ್ಯಾಂ ವಿಶ್ವವಿಖ್ಯಾತರಾಗಿದ್ದಾರೆ. ಶ್ಯಾಂ ಅವರ ಈ ಶ್ಲಾಘನೀಯ ಕೆಲಸವನ್ನು ಮೆಚ್ಚಿ ರಾಜ್ಯಾದ್ಯಂತ ಅನೇಕ ಸಂಘಸಂಸ್ಥೆಗಳು ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಮೈಸೂರಿನ ನಗರಪಾಲಿಕೆಯೂ ಸಹಾ ಒಂದು ರಸ್ತೆಗೆ ಅವರ ಹೆಸರನ್ನಿಟ್ಟು ಗೌರವಿಸಿದೆ.

sn5ಹಾವುಗಳನ್ನು ಹಿಡಿಯುವದರ ಹೊರತಾಗಿಯೂ ಶ್ಯಾಮ್ ತಮ್ಮ ವಿಶಿಷ್ಟವಾದ ವೇಷ ಭೂಷಣಗಳೊಂದಿಗೆ ತುಸು ಅಬ್ಬರಕ್ಕೆ ಹೆಸರುವಾಸಿಯಾಗಿದ್ದಾರೆ. ತಲೆಯ ಮೇಲೊಂದು ಆಕರ್ಷಣಿಯವಾದ ಸೂರ್ಯನ ಟೋಪಿಯ ಜೊತೆಗೆ ನಾನಾ ಬಗೆಯ ಮಣಿಗಳ ಸರದ ಜೊತೆ ಹತ್ತೂ ಬೆರಳುಗಳಿಗೆ ಬಗೆ ಬಗೆಯ ರತ್ನಗಳ ಉಂಗುರಗಳನ್ನು ಧರಿಸಿ ಬಹಳ ವಿಚಿತ್ರ ಎನಿಸಿದರೂ ವೈಶಿಷ್ಟ್ಯವಾಗಿ ಕಾಣಿಸಿಕೊಳ್ಳುವುದು ಅವರ ಹವ್ಯಾಸಗಳಲ್ಲೊಂದಾಗಿದೆ. ಈ ರೀತಿಯ ಜನಪ್ರಿಯತೆಯಿಂದಾಗಿ 2013 ರಲ್ಲಿ ನಡೆದ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಆಯ್ಕೆಯಾದರೂ, 2018 ರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಸೋಲುವುದರ ಮೂಲಕ ಆವರ ರಾಜಕೀಯ ಜೀವನ
ಸದ್ಯಕ್ಕೆ ತಟಸ್ಥವಾಗಿದೆ.

sh1ಸ್ನೇಕ್ ಶ್ಯಾಂ ರವರಂತೆ ಅವರ ಪುತ್ರ ಸೂರ್ಯ ಕೀರ್ತಿಯೂ ಸಹಾ ತಂದೆಯವರ ಹಾದಿಯಲ್ಲಿ ನಡೆಯುತ್ತಿದ್ದು, ಮೊನ್ನೆ ದೀಪಾವಳಿ ಸಂಭ್ರಮದಲ್ಲಿದ್ದಾಗ ಮೈಸೂರು ನಗರದ ಹಲವು ಮನೆಗಳಲ್ಲಿ ಒಂದೇ ದಿನ 10ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಾಗ, ಹಬ್ಬದ ದಿನ ಎಂದೂ ಲೆಕ್ಕಿಸಿದ ಆ ಮನೆಗಳಿಂದ ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿರುವ  ಸೂರ್ಯ ಕೀರ್ತಿ ತಂದೆಗೆ ತಕ್ಕ ಮಗ ಎಂದೇ ಪ್ರಖ್ಯಾತರಾಗಿದ್ದಾರೆ

sn7ಆರಂಭದಲ್ಲಿ ಹುಂಬತನಕ್ಕೆಂದು ಹಾವುಗಳನ್ನು ಹಿಡಿಯಲಾರಂಭಿಸಿ ನಂತರ ಅದನ್ನೇ  ಪ್ರವೃತ್ತಿಯನ್ನಾಗಿಸಿಕೊಂಡ ಶ್ಯಾಂ ಅವರಿಗೆ ಕೆಲವು ಬಾರಿ ಹಾವುಗಳಿಂದ ಕಚ್ಚಿಸಿಕೊಂಡು ರೋಗನಿರೋಧ ಶಕ್ತಿಯನ್ನು ವೃದ್ಧಿಸಿಕೊಂಡಿದ್ದರೂ ಹಾವುಗಳನ್ನು ಹಿಡಿಯುವಾಗ ಹೆಚ್ಚಿನ ಕಾಳಜಿಯನ್ನು ವಹಿಸುವ ಅಗತ್ಯವಿದೆ. ವನ್ಯಜೀವಿ ಸಂರಕ್ಷಣಾಕಾರರಾಗಿರುವ, ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ಅವಿತು ಕೊಂಡಿರುವ ಹಾವುಗಳನ್ನು ನಿಸ್ವಾರ್ಥವಾಗಿ ಸೆರೆಹಿಡಿಯುವ ಶ್ಯಾಮ್ ಅವರನ್ನು ಈ ನಂಬರ್ ಮೂಲಕ 9448069399ವೂ ಸಂಪರ್ಕಿಸಬಹುದಾಗಿದೆ. ಹೀಗೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿಯಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸ್ನೇಕ್ ಶ್ಯಾಮ್ ನಿಸ್ಸಂದೇಹವಾಗಿಯೂ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

sri7ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ.  ವೇಗದ ಬೋಲರ್ಗಳೇನಿದ್ದರೂ  ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್  ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಜಾವಗಲ್ ಗ್ರಾಮದ ಮೂಲದವರಾದ ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ದಂಪತಿಗಳಿಗೆ. ಆಗಸ್ಟ್    31, 1969ರಲ್ಲಿ ಶ್ರೀನಾಥ್ ಅವರು ಜನಿಸುತ್ತಾರೆ. ವ್ಯವಹಾರಸ್ಥರಾಗಿದ್ದ ಅವರ ತಂದೆಯವರು ಮೈಸೂರಿನಲ್ಲೇ ನೆಲೆಸಿದ್ದ ಕಾರಣ, ಶ್ರೀನಾಥ್ ಅವರ ಬಾಲ್ಯವೆಲ್ಲಾ ಮೈಸೂರಿನಲ್ಲೇ ಆಗಿ ಮರಿಮಲ್ಲಪ್ಪ ಶಾಲೆಯಲ್ಲಿ ಅವರ ಪೌಢಶಿಕ್ಷಣ ಪಡೆಯುತ್ತಿರುವಾಗಲೇ ಶಾಲೆಯ ಕ್ರಿಕೆಟ್ ತಂಡದ ನಾಯಕರಾಗಿರುತ್ತಾರೆ. ಪೋಷಕರ ಆಸೆಯಂತೆ ಇಂಜೀನಿಯರಿಂಗ್ ಮೊದಲ 2 ವರ್ಷಗಳನ್ನು ಹಾಸನದ ಮಲ್ನಾಡ್ ಕಾಲೇಜಿನಲ್ಲಿ ನಡೆದು ನಂತರದ 2 ವರ್ಷಗಳು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜೀನಿಯರಿಂಗ್ ನಲ್ಲಿ ಪದವಿ ಮಾಡುತ್ತಿರುವಾಗಲೇ,  ಕ್ಲಬ್ ಕ್ರಿಕೆಟ್ ಆಡುತ್ತಿರುವಾಗ 6.3″ ಎತ್ತರದ ಈ ವೇಗದ ಬೌಲರ್ ಕರ್ನಾಟಕದ ಮತ್ತೊಬ್ಬ ಕನ್ನಡದ ಕಲಿಗಳಾದ ಶ್ರೀ ಗುಂಡಪ್ಪ ವಿಶ್ವನಾಥ್ ಅವರ ಕಣ್ಣಿಗೆ ಬಿದ್ದದ್ದೇ ತಡಾ ಕರ್ನಾಟಕದ ರಣಜೀ ತಂಡಕ್ಕೆ ಆಯ್ಕೆಯಾಗುತ್ತಾರೆ.

sri81989/90 ರಲ್ಲಿ ಕರ್ನಾಟಕ ತಂಡದ ಪರವಾಗಿ ಹೈದರಾಬಾದ್ ವಿರುದ್ಧ  ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ  ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭರವಸೆಯನ್ನು ಮೂಡಿಸುವುದಲ್ಲದೇ ಮುಂದಿನ ಆರು ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಋತುವನ್ನು ಮುಗಿಸಿ, ಎರಡನೇ ಋತುವಿನಲ್ಲಿ 20 ವಿಕೆಟ್ ಪಡೆಯುವಷ್ಟರಲ್ಲಿಯೇ ಭಾರತದ ಪರ  18, ಆಕ್ಟೋಬರ್ 1991ರಂದು ಪಾಕ್ ವಿರುದ್ಧ ಶಾರ್ಜಾದಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರೆ, ಅದೇ ವರ್ಷ

29  ಅಕ್ಟೋಬರ್ 1991ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ಭಾರತದ ಪರ ಮೊದಲ ಟೆಸ್ಟ್ ಆಡುತ್ತಾರೆ. ಭಾರತದ ತಂಡದಲ್ಲಿ ಅದಾಗಲೇ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಅವರುಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾರಣ ಬಹಳ ದಿನಗಳ ವರೆಗೂ ಶ್ರೀನಾಥ್ ಬೆಂಚು ಕಾಯಿಸುವ ಪರಿಸ್ಥಿತಿಯುಂಟಾಗುತ್ತದೆ.

sri4ಕಪಿಲ್ ದೇವ್ ಅವರ ನಿವೃತ್ತಿಯಾದ ನಂತರ ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಯ ತಂಡಕ್ಕೆ ಶ್ರೀನಾಥ್ ವೇಗದ ಬೌಲರ್ ಆಗಿ ಮೊದಲ  ಆಯ್ಕೆಯಾಗಿ ಪರಿಗಣಿಸಲ್ಪಡುವುದಲ್ಲದೇ,  ಕರ್ನಾಟಕದ ಮತ್ತೊಬ್ಬ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರ ಜೊತೆಯಲ್ಲಿ ಭಾರತದ ಪರ ಅತ್ಯುತ್ತಮ ವೇಗದ ಜೋಡಿ ಎನಿಸಿಸುತ್ತಾರೆ. ಅದೊಮ್ಮೆ ಭಾರತದ ತಂಡದಲ್ಲಿ ದ್ರಾವಿಡ್, ವಿಜಯ್ ಭಾರದ್ವಾಜ್, ಕುಂಬ್ಲೆ, ಜೋಷಿ, ವೆಂಕಿ, ದೊಡ್ಡಗಣೇಶ್  ಜೊತೆಯಲ್ಲಿ ಶ್ರೀನಾಥ್ ಹೀಗೆ  11ರ ಬಳಗದಲ್ಲಿ 5-6 ಕರ್ನಾಟಕದ ಆಟಗಾರೇ ಇದ್ದ ಸಂದರ್ಭದಲ್ಲಿಯೂ ಶ್ರೀನಾಥ್ ತಂಡದ ಪರ ಅವಿಭಾಜ್ಯ ಅಂಗವಾಗಿದ್ದರು.

ಅಂದೆಲ್ಲಾ ಭಾರತದ ಪಿಚ್‍ಗಳು ಹೆಚ್ಚಾಗಿ  ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತಿದ್ದ  ಕಾರಣ  ಆರಂಭದಲ್ಲಿ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆ ಎನಿಸಿದ್ದರೂ ನಂತರ ದಿನಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡು , ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್‍ಗಳನ್ನು ಪಡೆದರೆ, ಕರ್ನಾಟಕದ ಪರ . ಮೊದಲ ದರ್ಜೆ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆಯುವ ಮೂಲಕ ಎಲ್ಲಾ ವಿಧದ ಕ್ರಿಕೆಟ್ಟಿಗೂ ಸೈ ಎನಿಸಿಕೊಂಡರು.  ಬೌಲಿಂಗ್ ಜೊತೆಯಲ್ಲಿಯೇ ಕೆಳ ಹಂತದಲ್ಲಿ ಉತ್ತಮವಾದ ಹೊಡೆತಗಳೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುವ ಮೂಲಕ ಹತ್ತು ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.  ಚಂಡನ್ನು  ಅತ್ಯಂತ ಭರ್ಜರಿಯಾಗಿ ಬಾರಿಸುತ್ತಿದ್ದ ಕಾರಣ, ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟ್ಟರ್” ಅಗಿಯೂ  ನಿರ್ವಹಿಸಿರುವುದಲ್ಲದೇ, ಟೆಸ್ಟ್ ಪಂದ್ಯಗಳಲ್ಲಿ ಕೆಲವೊಮ್ಮೆ ನೈಟ್ ವಾಚ್ ಮೆನ್ ಆಗಿಯೂ ನಿಭಾಯಿಸಿದ್ದಾರೆ. ಕರ್ನಾಟಕ ಮತ್ತು  ಭಾರತದ ರಾಷ್ಟ್ರೀಯ ತಂಡವಲ್ಲದೇ,  ಇಂಗ್ಲೆಂಡಿನ  ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಸಾಧಾರಣವಾಗಿ ವೇಗದ ಬೌಲರ್ಗಳು 135-145ಕಿಮೀ ವೇಗದಲ್ಲಿ ಬೋಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, 1996 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಅವರು  ಗಂಟೆಗೆ 156 ಕಿ.ಮೀ ವೇಗದಲ್ಲಿ ಬೋಲಿಂಗ್ ಮಾಡಿದ್ದರೇ, ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ, ಗಂಟೆಗೆ 154.5 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿರುವುದು  ಭಾರತದ ಪರ ಇಂದಿಗೂ ಅತ್ಯಂತ ಮಾರಕದ ಬೌಲಿಂಗ್ ದಾಖಲೆಯಾಗಿದೆ.

sri5ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ಫಾರ್ಮಿನಲ್ಲಿ ಇರುವಾಗಲೇ, ತಮ್ಮ 30ನೇ ವಯಸ್ಸಿನಲ್ಲಿ  1999 ರಲ್ಲಿ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಕಾಕತಾಳೀಯವೆಂದರೆ ಅದೇ ದಿನ ಕನ್ನಡ ಮತ್ತೊಬ್ಬ ಕಲಿ ಅನಿಲ್ ಕುಂಬ್ಲೆಯವರೂ ವಿವಾಹವಾದರು. ದುರಾದೃಷ್ಟವಷಾತ್ ನಾನಾ ಕಾರಣಗಳಿಂದಾಗಿ ಅವರ ವೈವಾಹಿಕ ಜೀವನ ಯಶಸ್ವಿಯಾಗದೆ ತಮ್ಮ ಮೊದಲ ಪತ್ರಿಯವರಿಗೆ ವಿಚ್ಚೇದನ ನೀಡಿದನ ನಂತರ 2008 ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

ನೀಳಕಾಯದ ಸಸ್ಯಾಹಾರಿಯಾಗಿ ವೇಗದ ಬೌಲರ್ ಆಗಿದ್ದ ಶ್ರೀನಾಥ್ ವಿಪರೀತ ಕ್ರಿಕೆಟ್ ಆಡುತ್ತಿದ್ದ ಪರಿಣಾಮವಾಗಿ ರೊಟೇಟರ್ ಕಫ್ ಖಾಯಿಲೆಗೆ ತುತ್ತಾಗಿ  ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಾರ್ಚ್ 1997 ರಿಂದ ನವೆಂಬರ್ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು.  ಆದಾದ ನಂತರ ಶ್ರೀನಾಥ್ ಮತ್ತೆ ಅದೇ ರೀತಿಯಲ್ಲಿ  ಚಂಡನ್ನುಎಸೆಯಬಲ್ಲರೇ ಎಂಬ ಎಲ್ಲರ ಅನುಮಾನಕ್ಕೆ ಸಡ್ಡು ಹೊಡೆಯುವಂತೆ ಬೌಲಿಂಗ್ ಮಾಡುವ ಮುಖಾಂತರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. 2000ದ ನಂತರ ಭಾರತ ತಂಡಕ್ಕೆ  ಅಜಿತ್ ಅಗರ್ಕರ್, ಜಹೀರ್ ಖಾನ್ ರಂತಹ ವೇಗಿಗಳು ಸೇರಿಕೊಂಡಾಗ ನಿಧಾನವಾಗಿ ನೇಪತ್ಯಕ್ಕೆ ಸರಿಯ ತೊಡಗಿದ ಶ್ರೀನಾಥ್ 2002 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.  ಆದರೆ ಅಂದಿನ ತಂಡದ ನಾಯಕ ಸೌರವ್ ಗಂಗೂಲಿ  ಅವರ ಒತ್ತಾಯದ ಮೇರೆಗೆ  2003 ರ ವಿಶ್ವಕಪ್‌ನವರೆಗೂ ಏಕದಿನ ಪಂದ್ಯಗಳನ್ನು ಮುಂದುವರೆಸಿ, ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆದ 2003ರ ವಿಶ್ವಕಪ್ ಪಂದ್ಯಾಗಳಿಗಳ ನಂತರ   ಅವರು ಎಲ್ಲಾ ಪ್ರಕಾರದ ಕ್ರಿಕೆಟ್ಟಿನಿಂದ ನಿವೃತ್ತಿ ಘೋಷಿಸಿದರು.

sri2ತಮ್ಮ ನಿವೃತ್ತಿಯ ನಂತರ ಕೆಲ ಕಾಲ ವೀಕ್ಷಕ ವಿವರಣೆಕಾರರಾಗಿ ಗುರುತಿಸಿಕೊಂಡರೂ ನಂತರ ತಮ್ಮ ಸೌಮ್ಯ ಸ್ವಭಾವ ಮತ್ತು ಸನ್ನಡತೆ ಮತ್ತು ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಪಾರವಾದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಏಪ್ರಿಲ್ 2006 ರಲ್ಲಿ, ಶ್ರೀನಾಥ್ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನಿಂದ ಮ್ಯಾಚ್ ರೆಫರಿಯಾಗಿ ಆಯ್ಕೆಯಾಗಿದ್ದಲ್ಲದೇ, 2007 ರ ವಿಶ್ವಕಪ್ನಲ್ಲಿ ಸೇವೆ ಸಲ್ಲಿಸಿದರು. ಇದುವರೆಗೂ ಅವರು 35 ಟೆಸ್ಟ್ ಪಂದ್ಯಗಳು, 194 ODIಗಳು ಮತ್ತು 60 T20I ಗಳಲ್ಲಿ ರೆಫರಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರ್ಷಗಳ ಹಿಂದೆ ಅನಿಲ್ ಕುಂಬ್ಲೆ ಅವರ ಸಾರಥ್ಯದಲ್ಲಿ  ಶ್ರೀನಾಥ್  ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಲ್ಲದೇ  ಅವರ ಸಮಯದಲ್ಲೇ ಚಿನ್ನಸ್ವಾಮೀ ಕ್ರೀಡಾಂಗಣದ ನವೀಕರಣ ಮತ್ತು ನೆಲಮಂಗಲದ  ಬಳಿಯ ಆಲೂರಿನ ಮೈದಾನಗಳಲ್ಲದೇ ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಕ್ರೀಡಾಂಗಣಗಳು ಆರಂಭವಾಗಲು ಕಾರಣೀಭೂತರಾಗಿದ್ದಾರೆ.

ಶ್ರೀನಾಥ್ ಅವರ ಕೆಲವೊಂದು ದಾಖಲೆಗಳು ಈ ರೀತಿಯಾಗಿವೆ.

 • ಭಾರತದ ಪರ  ಏಕದಿನ ಪಂದ್ಯಾವಳಿಗಳಲ್ಲಿ 300  ವಿಕೆಟ್ ಪಡೆದ ಮೊದಲ ಆಟಗಾರ
 • ವೇಗದ ಬೌಲರ್ ಆಗಿ 1992, 1996, 1999 ಮತ್ತು 2003 ಹೀಗೆ  ಸತತವಾಗಿ 4 ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿರುವ ಏಕೈಕ ಭಾರತೀಯ ಆಟಗಾರ
 • ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್(44) ಕಬಳಿಸಿರುವ ಭಾರತೀಯ ಬೌಲರ್
 • ಕ್ರಿಕೆಟ್ಟಿನಲ್ಲಿ ಶ್ರೀನಾಥ್ ಅವರ ಕೊಡುಗೆಯನ್ನು ಮನ್ನಿಸಿ ಭಾರತ ಸರ್ಕಾರ  1999 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀನಾಥ್ ಅವರ ಕ್ರಿಕೆಟ್ ಬದುಕಿನ ಈ ಕೆಲವೊಂದು ರೋಚಕ ಘಟನೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಇರುತ್ತಾರೆ.

 • 1996 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿದ್ದ ಟೈಟಾನ್ ಕಪ್‌ ಪಂದ್ಯದಲ್ಲಿ ಗೆಲ್ಲಲು 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಮೊತ್ತ 164/8 ಆಗಿರುವಾಗ  88 ರನ್‌ಗಳಿಸಿ ಸಚಿನ್ ತೆಂಡೂಲ್ಕರ್ ಔಟಾದ ನಂತರ ಪಂದ್ಯ ಕೈಚೆಲ್ಲಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದಾಗ ಅನಿಲ್ ಕುಂಬ್ಲೆ ಅವರ ಜೊತೆ 9ನೇ ವಿಕೆಟ್ ಜೊತೆಯಾಟಕ್ಕೆ 52 ರನ್ ಸೇರಿಸಿದ ಶ್ರೀನಾಥ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 23 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿ  ಭಾರತ ತಂಡವನ್ನು ಫೈನಲ್‌ ತಲುಪಿಸಿದ್ದಲ್ಲದೇ, ರಾಜ್‌ಕೋಟ್‌ನಲ್ಲಿ ನಡೆದ ಫೈನಲ್ಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ತಂಡ ಪ್ರಶಸ್ತಿಯನ್ನು ಪಡೆಯುವುದರ ಕಾರಣೀಭೂತರಾದರು.
 • sri91999ರಲ್ಲಿ ದೆಹಲಿಯಲ್ಲಿ ನಡೆದ  ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೆ ಅದಾಗಲೇ 9 ವಿಕೆಟ್ ಪಡೆದಿದ್ದಾಗ ಮತ್ತೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ  ಶ್ರೀನಾಥ್ ಎಸೆತವೊಂದರಲ್ಲಿ ಪಾಕ್ ಆಟಗಾರ ಹೊಡೆದ ಚೆಂಡನ್ನು ಭಾರತದ ಆರಂಭಿಕ ಆಟಗಾರ ಸಡಗೊಪನ್ ರಮೇಶ್ ಹಿಡಿಯಲು ಪ್ರಯತ್ನಿಸಿದಾಗ, ಅನಿಲ್ ಕುಂಬ್ಳೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಲಿ ಎನ್ನುವ ಸದಾಶಯದಿಂದ  ಕ್ಯಾಚ್ ಹಿಡಿಯದಿರು ಎಂದು ಕೂಗಿದ್ದನ್ನು ಟಿವಿಯಲ್ಲಿ ಕೇಳಿ ಅಚ್ಚರಿ ಪಟ್ಟಿದ್ದೇವೆ. ನಂತರ ಎಲ್ಲಾ ಚೆಂಡುಗಳನ್ನು ವಿಕೆಟ್ ನಿಂದ ದೂರ ಎಸೆದ್ ತಮ್ಮ ಓವರ್ ಮುಗಿಸಿ ಮುಂದಿನ ಓವರಿನಲ್ಲಿ ಕುಂಬ್ಲೆ ಬೌಲಿಂಗಿನಲ್ಲಿ ವಾಸಿ ಅಕ್ರಮ್ ಔಟಾದಾಗ ಕುಂಬ್ಲೆ ಅವರನ್ನು ಭುಜದ ಮೇಲೆ ಎತ್ತಿ ಮೆರೆಸಾಡುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

12-13 ವರ್ಷಗಳ ಕಾಲ ಭಾರತದ ಪರ ಅಂತರಾಷ್ಟ್ರೀಯ ಪಂದ್ಯಗಳನ್ನು ದೇಶ ವಿದೇಶಗಳಲ್ಲಿ ಆಡಿದ ಶ್ರೀನಾಥ್, ವೇಗದ ಬೌಲರ್ ಆಗಿದ್ದರೂ ತಮ್ಮ ಇಡೀ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಎದುರಾಳಿ ತಂಡದ ವಿರುದ್ಧ ಕೋಪತಾಪಗಳನ್ನು ತೋರದೇ ಸಹನಾಮೂರ್ತಿಯಂತಿದ್ದು ವಿಶ್ವಾದ್ಯಂತ  ಕನ್ನಡಿಗರ ಸೌಮ್ಯತನವನ್ನು ಎತ್ತಿ ಮೆರೆಸಿದ ಜಾವಗಲ್ ಶ್ರೀನಾಥ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ಐಶಾರಾಮಿ ಕಾರುಗಳ ಮಾಲಿಕ ರಮೇಶ್ ಬಾಬು

ram3ಬೆಂಗಳೂರು ನಗರಕ್ಕೆ ದೇಶ ವಿದೇಶಗಳಿಂದ ಸರ್ಕಾರೀ ಅಥವಾ ಖಾಸಗೀ ಕೆಲಸಗಳಿಗೆಂದು ಬರುವ ಪ್ರಸಿದ್ಧ ವ್ಯಕ್ತಿಗಳು ಓಡಾಡುವುದಕ್ಕೆ ಐಶಾರಾಮಿ ಕಾರುಗಳನ್ನು ಬಳಸುವುದನ್ನು ನಾವೆಲ್ಲರೂ ಟಿವಿಯಲ್ಲಿಯೋ ಇಲ್ಲವೇ ಖುದ್ದಾಗಿ ನೋಡಿ ಸಂಭ್ರಮಿಸಿರುತ್ತೇವೆ. ವಾವ್ ಅಂತಹ ಕಾರುಗಳಲ್ಲಿ ಓಡಾಡುವವರೇ ಭಾಗ್ಯವಂತರು ಎಂದೇ ಭಾವಿಸಿರುತ್ತೇವೆ.  ನಿಜ ಹೇಳ್ಬೇಕು ಅಂದರೆ ಅಂತಹ ಐಶಾರಾಮೀ ಕಾರುಗಳ ಒಡೆಯ ನಮ್ಮ ನಿಮ್ಮಂತೆಯೇ  ಸಾಮಾನ್ಯ ಮಧ್ಯಮ ವರ್ಗದ ಕ್ಷೌರಿಕ ಕುಟುಂಬದಿಂದ ಬಂದು ತಮ್ಮ ಬುದ್ದಿವಂತಿಕೆ ಮತ್ತು ಕಾರ್ಯಕ್ಷಮತೆಯಿಂದ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಅಚ್ಚರಿ ಮೂಡಿಸುತ್ತದೆ ಅಲ್ಲವೇ?  ಹೌದು  ಅಂತಹ ಅದ್ಭುತ ವ್ಯಕ್ತಿಯಾದ ಶ್ರೀ ರಮೇಶ್ ಬಾಬು ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ರಮೇಶ್ ಬಾಬು ಅವರ ತಂದೆ ಗೋಪಾಲ್ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಸಣ್ಣದಾದ ಹೇರ್ ಕಟಿಂಗ್ ಅಂಗಡಿಯೊಂದನ್ನು ತಮ್ಮ ತಮ್ಮನೊಂದಿಗೆ ನಡೆಸಿಕೊಂಡು ಹೋಗುತ್ತಿದ್ದರು. ರಮೇಶ್ ಬಾಬು ಅವರಿಗೆ 7 ವರ್ಷ ವಯಸ್ಸಾಗಿರುವಾಗ 1979ರಲ್ಲಿ ದುರಾದೃಷ್ಟವಷಾತ್  ನಿಧನರಾದಾಗ,  ಅವರ ಮನೆಯನ್ನು ನಿಭಾಯಿಸಲು ಬಹಳವಾದ ಕಷ್ಟವಾಗುತ್ತದೆ.  ಪ್ರತೀ ದಿನ 5 ರೂಪಾಯಿ ಕೊಡುವ ಒಪ್ಪಂದದಂತೆ  ಅವರ ಅಂಗಡಿಯನ್ನು ಚಿಕ್ಕಪ್ಪನವರು ವಹಿಸಿಕೊಳ್ಳುತ್ತಾರೆ. ಅವರು ಕೊಡುವ ಐದು ರೂಪಾಯಿಗಳಲ್ಲಿ ರಮೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯರ ದೈನಂದಿನ ಅವಶ್ಯಕತೆಗಳು ಮತ್ತು ವಿದ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ  ಅವರ ತಾಯಿಯವರು ನಾಲ್ಕಾರು ಮನೆಗಳಲ್ಲಿ  ಮನೆಗೆಲಸ ಮಾಡಲು ಆರಂಭಿಸುತ್ತಾರೆ.

ತಾಯಿಯವರು ಕೆಲಸ ಮಾಡುತ್ತಿದ್ದ ಮನೆಯಾಕೆ ಉಡುಗೊರೆಯಾಗಿ ಕೊಡಿಸಿದ ಸೈಕಲ್ ಸಹಾಯದಿಂದ ಆ ಚಿಕ್ಕ ಹುಡುಗ ರಮೇಶ್ ಬೆಳ್ಳಂಬೆಳಿಗ್ಗೆ  ದಿನಪತ್ರಿಕೆಗಳು ಮತ್ತು ಹಾಲನ್ನು ಸರಬರಾಜು ಮಾಡುವ ಮೂಲಕ ತನ್ನ ತಾಯಿಯ ಹೊರೆಯನ್ನು ಸ್ವಲ್ಪ ಮಟ್ಟಿಗೆ  ಕಡಿಮೆ ಮಾಡುವುದಲ್ಲದೇ  ಹಾಗೂ ಹೀಗೂ ಹತ್ತನೇ ತರಗತಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಂಜೆ ಕಾಲೇಜಿನಲ್ಲಿ ಪಿಯುಸಿಗೆ  ಸೇರಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಅವರ ತಾಯಿಯವರಿಗೂ ಮತ್ತು  ಚಿಕ್ಕಪ್ಪನೊಡನೆ ವ್ಯಾವಹಾರಿಕವಾಗಿ ವೈಮನಸ್ಯ ಉಂಟಾಗಿ ಆವರು ಪ್ರತೀ ತಿಂಗಳೂ ನೀಡುತ್ತಿದ್ದ ಹಣವನ್ನು ನಿಲ್ಲಿಸಿದಾಗ ವಿಧಿ ಇಲ್ಲದೇ ರಮೇಶ್ ಅವರೇ ತಮ್ಮ ಅಂಗಡಿಯ ವ್ಯವಹಾರವನ್ನು ವಹಿಸಿಕೊಳ್ಳಲು ಮುಂದಾದಾಗ, ಅವರ ತಾಯಿ, ವ್ಯವಹಾರ  ಎಲ್ಲಾ ಬೇಡ ಮೊದಲು ಶಿಕ್ಷಣಕ್ಕೆ ಆದ್ಯತೆ ಕೊಡು ಎಂದು ಹೇಳಿದಾಗ,  ಬೆಳಿಗ್ಗೆ ತಾನು ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿಗೆ ಹೋಗಿ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ ಎಂಬ ಭವರವಸೆ ನೀಡಿ ಅಂದಿನಿಂದ  ರಮೇಶ್ ಬೆಳಿಗ್ಗೆ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂಜೆ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ.

1993ರಲ್ಲಿ ಅವರ ಚಿಕ್ಕಪ್ಪನವರು ಒಂದು ಚಿಕ್ಕ ಕಾರೊಂದನ್ನು ಕೊಂಡಾಗ, ತಾವೂ ಅವರಿಗಿಂತ ಏನು ಕಡಿಮೆ ಎಂದು ನಿರೂಪಿಸುವ ಸಲುವಾಗಿ ಅಲ್ಪ ಸ್ವಲ್ಪ ಉಳಿಸಿದ್ದ ಹಣದೊಂದಿಗೆ ಸ್ವಲ್ಪ ಕೈಸಾಲ ಮಾಡಿ  ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾನ್ ವಾಹನವನ್ನು ಕೊಂಡು ಬೀಗುತ್ತಾರೆ. ಆರಂಭದಲ್ಲಿ ಎಲ್ಲವೂ ಸರಿ ಇದ್ದು ನಂತರ   ಸಾಲದ ಕಂತನ್ನು ಕಟ್ಟುವ ಸಲುವಾಗಿ ತಮ್ಮ ತಾತನ ಆಸ್ತಿಯನ್ನು ಅಡಮಾನ ಇಡಬೇಕಾಗುತ್ತದೆ.  ಆರು ಸಾವಿರದ ಎಂಟು ನೂರು ರೂಪಾಯಿಗಳಷ್ಟು ಸಾಲದ ಬಡ್ಡಿ ಪಾವತಿಸಲು ಪರದಾಡುವಂತಹ ಪರಿಸ್ಥಿತಿ ಬಂದಿರುತ್ತದೆ.

ಇದೇ ಸಮಯದಲ್ಲಿಯೇ ಅವರ ಪಾಲಿಗೆ ಆವರ ತಾಯಿ ಕೆಲಸ ಮಾಡುತ್ತಿದ್ದ ಇಂಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೆಯಾಕೆ ನಂದಿನಿಯವರು ಬೆಂಬಲಕ್ಕೆ ನಿಲ್ಲುತ್ತಾರೆ. ಸುಮ್ಮನೇ ಕಾರನ್ನು ಮನೆಯ ಮುಂದೆ ನಿಲ್ಲಿಸುವ ಬದಲು ಅದನ್ನು ಬಾಡಿಗೆಗೆ ಓಡಿಸಿ ಅದರಿಂದ ಬಂದ ಹಣದಿಂದ ಸಾಲದ ಕಂತನ್ನು ತೀರಿಸು ಎಂದು ಹೇಳಿದ್ದಲ್ಲದೇ, ಅವರೇ ಕೆಲಸ ಮಾಡುತ್ತಿದ ಕಂಪನಿಯಲ್ಲಿ ಗುತ್ತಿಗೆಯನ್ನೂ ಕೊಡಿಸುತ್ತಾರೆ. ಹೀಗೆ 1994ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಟ್ರಾವೆಲ್ಸ್ ಏಜೆನ್ಸಿ 2004 ರಷ್ಟರಲ್ಲಿ 5-6 ಕಾರುಗಳನ್ನು ಹೊಂದುವ ಮಟ್ಟಕ್ಕೆ ಬೆಳಿದಿದ್ದರೂ ರಮೇಶ್ ಅವರು ತಮ್ಮ ತಮ್ಮ ಕ್ಷೌರಿಕ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ.

ವ್ಯವಹಾರದಲ್ಲಿ ಎಲ್ಲೆಡೆಯೂ ಪೈಪೋಟಿ  ಇದ್ದೇ ಇರುತ್ತದೆ. ತಾವು ಉಳಿದವರಿಗಿಂತಲೂ  ವಿಭಿನ್ನವಾಗಿ ಏನಾದರು ಮಾಡ ಬೇಕೆಂದು ಯೋಚಿಸುತ್ತಿರುವಾಗಲೇ ಎಲ್ಲರ ಬಳಿಯೂ ಚಿಕ್ಕ ಚಿಕ್ಕ ಕಾರುಗಳಿವೆ. ಅದೊಮ್ಮೆ ಯಾರೋ  ಮರ್ಸಿಡಿಸ್ ಕಾರನ್ನು ಬಾಡಿಗೆ ಕೇಳಿದಾಗ ಅದನ್ನು ಮತ್ತೊಬ್ಬರಿಂದ ಎರವಲು ಪಡೆದು ವ್ಯವಹಾರವನ್ನು ನಿಭಾಯಿಸಿದ್ದು ನೆನಪಾಗುತ್ತದೆ. ಜನರಿಗೆ ಹೊಚ್ಚ ಹೊಸಾ ಐಶಾರಾಮಿ ಕಾರನ್ನು ಬಾಡಿಗೆಗೆ ನೀಡಿದಲ್ಲಿ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು ಎಂದು ನಿರ್ಥರಿಸಿ, 2004 ರಲ್ಲಿ 40ಲಕ್ಷದ ಐಷಾರಾಮಿ ಕಾರೊಂದನ್ನು ಖದೀದಿಸಲು ಮುಂದಾದಾಗ, ಎಲ್ಲರೂ ದೊಡ್ಡ ತಪ್ಪು ಮಾಡುತ್ತಿದ್ದೀಯೇ, ಎಂದೇ ಎಚ್ಚರಿಸಿದರೂ, ದೊಡ್ಡದಾದ ವ್ಯವಹಾರದ ಅವಕಾಶವನ್ನು ಬಿಡಬಾರದು. ಹಾಗೊಮ್ಮೆ ಏನಾದರೂ ತಪ್ಪಾದಲ್ಲಿ ಅದೇ ಕಾರನ್ನು ಮಾರಾಟ ಮಾಡಿ ನಿಭಾಯಿಸೋಣ ಎಂಬ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ಹೊಚ್ಚ ಹೊಸ ಐಷಾರಾಮಿ ಕಾರನ್ನು ಬಾಡಿಗೆ ಕೊಡುವ Ramesh Tours & Travels, RTT ಸಂಸ್ಥೆಯನ್ನು ಭಂಡ ಧೈರ್ಯದಿಂದ ಆರಂಭಿಸುತ್ತಾರೆ.

ram4ನೀರಿಗೆ ಇಳಿದ ಮೇಲೆ ಛಳಿಯೇನು? ಬಿಸಿಲೇನು? ಎನ್ನುವಂತೆ  ವ್ಯಾಪಾರ ಮಾಡಲು ಸಿದ್ಧರಾದಾಗ,  ಅಪಾಯಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎನ್ನುವ ತತ್ವದಡಿಯಲ್ಲಿ ಅದುವರೆವಿಗೂ ಮರ್ಸಿಡಿಸ್, BMW, Audi, ಹೀಗೆ ಐದು ಮತ್ತು ಹತ್ತು ಆಸನಗಳ ಐಷಾರಾಮಿ ಕಾರುಗಳು ಇದ್ದರೂ ಅಂತಿಮವಾಗಿ ತಮ್ಮ ಹೆಮ್ಮೆ, ರೋಲ್ಸ್ ರಾಯ್ಸ್  2011 ರಲ್ಲಿ ಖರೀದಿಸಿದಾಗ, ಅಂತಹ  ದುಬಾರಿ ಕಾರನ್ನು ಖರೀದಿಸುವುದರ ವಿರುದ್ಧ ಮತ್ತೆ ಅನೇಕರು ಎಚ್ಚರಿಕೆ ನೀಡಿದರು. ವ್ಯವಹಾರದ ಗಂಧವೇ ಇಲ್ಲದಿದ್ದ 2004ರಲ್ಲಿಯೇ ಅಪಾಯವನ್ನು ತೆಗೆದುಕೊಂಡಿದ್ದೇನೆ. ಈಗ ತಕ್ಕ ಮಟ್ಟಿಗಿನ ವ್ಯವಹಾರ  ಜ್ಞಾನವಿದೆ ಧೈರ್ಯತೆಗೆದು ಕೊಂಡು  ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀಧಿಸಿದ ಕಾರು  ವರ್ಷಗಳ ನಂತರ  ಆದಕ್ಕೆ ಮಾಡಿದ ಸಾಲವೆಲ್ಲಾ ತೀರಿ, ಲಾಭವನ್ನು ಗಳಿಸಲು ಆರಂಭಿಸಿದಾಗ ತೆಗೆದುಕೊಂಡು ಶ್ರಮಕ್ಕೆ ಬೆಲೆ ಸಿಕ್ಕಂತಾಗಿತ್ತು.

ಪ್ರತಿಯೊಂದು ವ್ಯವಹಾರದಲ್ಲೂ ಸವಾಲುಗಳು ಮತ್ತು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಪ್ರತೀ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ ತಮ್ಮ ವಾಹನಗಳ ರಸ್ತೆ ತೆರಿಗೆಯೆಂದೇ, ಸುಮಾರು 3 ಕೋಟಿಗೂ ಅಧಿಕ ಹಣವನ್ನು ಪಾವತಿಸಬೇಕಾಗಿತ್ತು. ಅದನ್ನು ಹೊಂದಿಸಲು ಅವರು ತಮ್ಮ ಆಸ್ತಿಯ ದಾಖಲೆಗಳನ್ನು ಒತ್ತೆ ಇಟ್ಟು ಸಾಲ ಪಡೆದಿರುವುದಲ್ಲದೇ, ಅವರ ಮಡದಿಯ ಕೆಲವು ಆಭರಣಗಳನ್ನು ಒತ್ತೆ ಇಟ್ಟಿದ್ದರೂ ಅವೆಲ್ಲವೂ ವ್ಯವಹಾರಕ್ಕೆಂದು ಮಾಡಿದ ಖರ್ಚಾಗಿರುವ ಕಾರಣ ಅದನ್ನು ಮರಳಿ ಪಡೆಯುವ ಭರವಸೆ ಇದೆ ಎಂದು ನುಡಿಯುವಾಗ ಅವರ ಕಣ್ಗಳಲ್ಲಿದ್ದ ಕಾಂತಿ ನಿಜಕ್ಕೂ ವರ್ಣಿಸಲು ಆಸಾಧ್ಯವಾಗಿದೆ.

ram150ರ ಆಸುಪಾಸಿನಲ್ಲಿರುವ  ರಮೇಶ್ ಬಾಬು ಅವರ 400 ಸಾಮಾನ್ಯ ಕಾರುಗಳು ಮತ್ತು 120 ಟಾಪ್ ಎಂಡ್ ಐಷಾರಾಮಿ ಕಾರುಗಳ ಹೆಮ್ಮೆಯ ಮಾಲೀಕರಾಗಿದ್ದು ಕಾರ್ಪೊರೇಟ್ ದೈತ್ಯರಿಗೆ ಮತ್ತು ಸರ್ಕಾರೀ ಅತಿಥಿಗಳು ಅವಾ  ಐಷಾರಾಮಿ ವಾಹನಗಳ ಸೌಲಭ್ಯವನ್ನು ಪಡೆದಿದ್ದಾರೆ. ಈ ಪರಿಯಲ್ಲಿ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರೂ, ತಮ್ಮ ಕುಲವೃತ್ತಿಯನ್ನು ಮರೆಯದೇ, ಇಂದಿಗೂ ಸಹಾ ಬೆಂಗಳೂರಿನ  ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ತಮ್ಮ ಸಲೂನ್‌ನಲ್ಲಿ ವಾರಕ್ಕೆ 3 ದಿನಗಳ ಕಾಲ  ಕ್ಷೌರಿಕವೃತ್ತಿಯನ್ನು ಮಾಡುವುದನ್ನು ರೂಢಿಯಲ್ಲಿಟ್ಟಿಕೊಳ್ಳುವ ಮಟ್ಟಿಗೆ ವೃತ್ತಿಪರರಾಗಿದ್ದಾರೆ. ಮುಂದಿನ ಒಂದು  ದಶಕದಲ್ಲಿ ಸುಮಾರು 700 ಕಾರುಗಳನ್ನು ಹೊಂದುವ  ಸಂಕಲ್ಪವನ್ನು  ತೊಟ್ಟಿದ್ದಾರೆ. ಅವರ ವೃತ್ತಿಪರತೆ ಮತ್ತು ಕಠಿಣ ಪರಿಶ್ರಮವನ್ನು ನೋಡಿದಲ್ಲಿ  ಅವರ ಆಸೆ ಇನ್ನು ಬೇಗನೇ ಈಡೇರುವ ಭರವಸೆ ಎಲ್ಲರಿಗಿದೆ.

ram2ತಮ್ಮ ಕಂಪನಿಯ ಮೂಲಕ ದಿನದ 24 ಗಂಟೆಗಳು, ವರ್ಷದ 365 ದಿನಗಳು ಕಾರ್ಯನಿರ್ವಹಿಸುವುದಲ್ಲದೇ, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ನಿಯೋಗಗಳ ಎಲ್ಲಾ ರೀತಿಯ ವಾಹನಗಳ ಅವಶ್ಯಕತೆಗಳನ್ನು ನಿರ್ವಹಿಸಲು ವಿಶೇಷ ಸಮನ್ವಯ ಮತ್ತು ವ್ಯವಸ್ಥೆಗಳು ಅವರ ಬಳಿಯಲ್ಲಿದೆ. ಸೆಲ್ಫ್ ಡ್ರೈವ್ ಕಾರ್ ಗಳನ್ನೂ ಬಾಡಿಗೆ ಕೊಡಲು ಪರವಾನಗಿ ಪಡೆದಿರುವ  ಭಾರತದಲ್ಲಿನ ಕೆಲವೇ ಕಾರು ಬಾಡಿಗೆ ಕಂಪನಿಗಳಲ್ಲಿ ರಮೇಶ್ ಅವರ ಕಂಪನಿಯೂ ಒಂದಾಗಿದ್ದು, ತಮ್ಮ ಗ್ರಾಹಕರ ಪ್ರಯಾಣ ಮತ್ತು ಪ್ರವಾಸೋದ್ಯಮ ಅವಶ್ಯಕತೆಗಳಿಗೆ ನಿರ್ದಿಷ್ಟವಾದ ಪ್ರವಾಸಗಳನ್ನು ಸಹ ನಾವು ವಿನ್ಯಾಸಗೊಳಿಸುವ ಮೂಲಕ ದಿನೇ ದಿನೇ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ.

ram5ಅವರ ವಿನಮ್ರತೆ ಮತ್ತು ಕಠಿಣ ಪರಿಶ್ರಮದಿಂದ ಗಳಿಸಿರುವ  ಅಸಾಧಾರಣ ಯಶಸ್ಸಿನಿಂದಾಗಿ  ಅವರಿಗೆ ‘ಬಿಲೇನಿಯರ್ ಬಾರ್ಬರ್‘ ಎಂದೇ ಹೆಸರುವಾಸಿಯಾಗಿದ್ದಾರೆ.  ವರ್ಷಕ್ಕೆ 3.78 ಕೋಟಿ ರೂಪಾಯಿಗಳ ರಸ್ತೆ ತೆರಿಗೆಯನ್ನು ಕಟ್ಟುವಾಗಲೂ ಅವರು ತಮ್ಮ ಹೆಂಡತಿಯ ಆಭರಣಗಳು ಮತ್ತು  ಆಸ್ತಿಗಳನ್ನು ಅಡವು ಇಟ್ಟಿದ್ದಾರೆ  ಇಲ್ಲವೇ  ಮಾರಾಟ ಮಾಡಿದ್ದಾರೆಯೇ ಹೊರತು ಅವರೆಂದು ತಮ್ಮ ವಾಹನಗಳನ್ನು ಮಾರಿಲ್ಲ. ಇಂದಿಗೂ  ಅವರ ಬಳಿ  ಮೊತ್ತ ಮೊದಲ ಬಾರಿಗೆ ಖರೀದಿಸಿದ ಮಾರುತಿ ವ್ಯಾನ್ ಚಲಾಯಿವ ಸುಸ್ಥಿತಿಯಲ್ಲಿದೆ. ಗ್ರಾಹಕರೊಂದಿಗೆ ವಿನಮ್ರವಾಗಿ, ಕಷ್ಟಪಟ್ಟು ಕೆಲಸ ಮಾಡಿದಲ್ಲಿ  ಅದೃಷ್ಟವೂ ತಾನಾಗಿಯೇ ಕೈ ಹಿಡಿಯುತ್ತದೆ. ಅದೇ ಕೇವಲ ಅದೃಷ್ಟವನ್ನೇ ನೆಚ್ಚಿ ಕುಳಿತರೇ ಏನನ್ನು ಸಾಧಿಸಲಾಗದು ಎಂದು ಹೇಳಿರುವ ರಮೇಶ್ ಬಾಬು ನಮ್ಮ ಇಂದಿನ ಯುವಜನತೆಗೆ  ಜೀವಂತ  ದಂತಕಥೆಯಾಗಿರುವ ಮೂಲಕ . ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳಿಗಿದ್ದಾರೆ

ಏನಂತೀರೀ?

ನಿಮ್ಮವನೇ ಉಮಾಸುತ

ರಾಮಕೃಷ್ಣ ಹೆಗಡೆ

h6

ಕರ್ನಾಟಕ ಕಂಡ ಅತ್ಯಂತ ಚಾಣಕ್ಷ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದಂತಹ ಹಳ್ಳಿಯಿಂದ ದಿಲ್ಲಿಯವರೆಗೂ ಯುವಕರಿಂದ ವಯಸ್ಸಾದವರೂ ಇಷ್ಟಪಡುತ್ತಿದ್ದ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವುಗಳ ಮೂಲಕ ಇಂದಿಗೂ ರಾಜ್ಯದ ಜನಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೀ ರಾಮಕೃಷ್ಣ ಹೆಗಡೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಉತ್ತರಕರ್ನಾಟಕದ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕೃಷಿಕ ಕುಟುಂಬದ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ದಂಪತಿಗಳಿಗೆ 1926ರ ಅಗಸ್ಟ್ 29ರಂದು ರಾಮಕೃಷ್ಣ ಹೆಗಡೆಯವರು ಜನಿಸುತ್ತಾರೆ. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ರಾಮಕೃಷ್ಣರಿಗೆ ನಾಯಕತ್ವ ಎನ್ನುವುದು ರಕ್ತಗತವಾಗಿ ಬರುವುದಕ್ಕೆ ಅವರ ಮನೆಯ ವಾತಾವರಣವೂ ಕಾರಣವಾಗಿತ್ತು ಎಂದರೂ ಎಂದರೂ ತಪ್ಪಾಗದು. ಅವರು ತಂದೆಯವರು ಸ್ವಾತ್ರಂತ್ರ ಹೋರಾಟಗಾರಾಗಿದ್ದರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಅಂಟಿಕೊಂದ್ದಂತಹ ತೋಟದ ಮಧ್ಯೆಯಲ್ಲಿದ್ದ ಅವರ ಮನೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯತಾಣವಾಗಿತ್ತು. ಹಾಗಾಗಿಯೇ ಅವರ ಮನೆಗೆ ಪೋಲೀಸರ ಧಾಳಿ ಆಗ್ಗಿಂದ್ದಾಗೆ ನಡೆಯುತ್ತಿದ್ದವು.

h3

ಸ್ವಾತ್ರಂತ್ರ್ಯ ಹೋರಾಟಗಾರರನ್ನು ಮತ್ತು ಬ್ರಿಟೀಷರ ದಬ್ಬಾಳಿಕೆಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ರಾಮಕೃಷ್ಣರು ಚಿಕ್ಕಂದಿನಿಂದಲೇ, ಪತ್ರಕರ್ತರಾಗಬಯಸಿದ್ದರು. ಹಾಗಾಗಿಯೇ ಸಿರ್ಸಿಯ ಮಾರಿಕಾಂಬ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕೈಬರಹದ ಪತ್ರಿಕೆ ಹೂವಿನ ಸರಕ್ಕೆ ಲೇಖನ ಬರೆಯುತ್ತಿದ್ದರು. ಮುಂದೆ ಬನಾರಸ್ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಅವರ ಆಸೆಗಳನ್ನು ಪೂರೈಸಿಕೊಂಡಿದ್ದರು. ಕಾಶಿ ವಿದ್ಯಾಪೀಠದಲ್ಲಿ ಪದವಿ ಮುಗಿಸಿ ಅಲ್ಲಿಂದ ಲಕ್ನೋ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಗಿಸಿಕೊಂಡು ಕರ್ನಾಟಕಕ್ಕೆ ಮರಳಿ ವಕೀಲ ವೃತ್ತಿಯೊಂದಿಗೆ ಕೆಲಕಾಲ ಸಿರ್ಸಿಯ ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ನಂತರ ರಾಜಕೀಯದತ್ತ ಮುಖ ಮಾಡಿದ ಕಾರಣ ಪತ್ರಕರ್ತನಾಗದೇ ಹೋದದ್ದಕ್ಕೆ ಅವರಿಗೆ ವಿಷಾಧವಿತ್ತು.

h1

1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೆಗಡೆಯವರು ತಮ್ಮ 20ನೇ ವಯಸ್ಸಿನಲ್ಲಿಯೇ ರೈತ ಚಳುವಳಿಯ ರೂವಾರಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಹೆಗಡೆಯವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಮಂತ್ರಿಮಂಡಲಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ಜನಪ್ರಿಯರಾದರು. ಹೆಗಡೆ ಮತ್ತು ವೀರೇಂದ್ರ ಪಾಟೀಲರ ಜೋಡಿಯನ್ನು ಲವ-ಕುಶ ಜೋಡಿ ಎಂದೇ ಜನರು ಕರೆಯುತ್ತಿದ್ದರು.

1975ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಹೆಗಡೆಯವರು ಜೈಲುವಾಸಕ್ಕೆ ತಳ್ಳಲ್ಪಟ್ಟಾಗ, ಅಲ್ಲಿ ಅವರಿಗೆ ಹಿರಿಯ ನಾಯಕರಾದ ಜಯಪ್ರಕಾಶ ನಾರಾಯಣ್ ವಾಜಪೇಯಿ, ಮಧುದಂಡವತೆ, ಅಡ್ವಾಣಿ, ಚಂದ್ರಶೇಖರ್ ಮುಂತಾದ ಹಿರಿಯ ನಾಯಕರು ಬಹಳ ಹತ್ತಿರವಾಗಿ ಜೆಪಿಯವರ ನೇತೃತ್ವದಲ್ಲಿ ಆರಂಭಗೊಂಡ ಜನತಾ ಪಕ್ಷಕ್ಕೆ ಸೇರಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

h2

1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಜಂಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಅಲ್ಪ ಸಂಖ್ಯೆಯ ಕೊರತೆ ಇದ್ದಾಗ, ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಪ್ರಪ್ರಥಮವಾದ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯದಲ್ಲಿ ಕಾಡುತ್ತಿದ ಬರಕ್ಕೆ ಪರಿಹಾರವಾಗಿ ನೀರ್ ಸಾಬ್ ಎಂದೇ ಖ್ಯಾತಿಯಾದ ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಕೊಳವೇ ಭಾವಿಯನ್ನು ತೊಡಿಸಿ ಜನರ ದಾಹವನ್ನು ತೀರಿಸಿದ್ದಲ್ಲದೇ, ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಕೆಲವೇ ದಿನಗಳಲ್ಲಿ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡರು.

ಇದೇ ಜನಪ್ರಿಯತೆಯನ್ನೇ ರಾಜಕಿಯವಾಗಿ ಬಳಸಿಕೊಳ್ಳಲು ನಿರ್ಧರಿ, ವಿಧಾನಸಭೆಯನ್ನು ವಿಸರ್ಜಿಸಿ ಮುಂದೆ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಅಧಿಕಾರದ ಹಿಂದೆ ಜೋತು ಬೀಳುವ ಅನೇಕ ರಾಜಕಾರಣಿಗಳ ಮಧ್ಯೆ ಅಧಿಕಾರವೇ ಹೆಗಡೆವರನ್ನು ಹುಡಿಕಿಕೊಂಡು ಬರುವಷ್ಟು ಅದೃಷ್ಟಶಾಲಿಯಾಗಿದ್ದರು ಎಂದರೂ ತಪ್ಪಾಗದು. ಕುರ್ಚಿಗಾಗಿ ಬಡಿದಾಡುವ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ ಅವರ ಈ ನಡೆ ಸಾರ್ವಕಾಲಿಕವಾಗಿ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ, ಮತ್ತು ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 25 ರ ಮೀಸಲಾತಿ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ದೇಶದಲ್ಲಿಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ.

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಅವರ ಬೆನ್ನು ಬಿಡದ ಬೇತಾಳದಂತೆ ಕಾಡಿದವರೆಂದರೆ ಎ.ಕೆ.ಸುಬ್ಬಯ್ಯನವರು. ರಾಮಕೃಷ್ಣ ಹೆಗಡೆಯವರ ಮೊದಲ ಬಾರಿಗೆ ಮುಖ್ಯ ಮಂತ್ರಿಗಳಾಗಿದ್ದಾಗ ರೇವಜೀತು ಹಗರಣ ಹಾಗೂ ಅವರ ಮಗ ಭರತ್ ಹೆಗಡೆ ಶಾಮೀಲಾಗಿದ್ದ ಎನ್ನಲಾದ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕತ್ವಕ್ಕೆ ಕಪ್ಪು ಚುಕ್ಕಿ ಮೂಡಿಸಿದ್ದಲ್ಲದೇ, ಅವರ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾಗಿ ಅವರೆಲ್ಲರ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿ ರಾಜ್ಯಾದ್ಯಂತ ಮನೆ ಮಾತಾದರೆ, ಎರಡನೇ ಬಾರೀ ದೂರವಾಣಿ ಕದ್ದಾಲಿಕೆಯ ಹಗರಣದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆಯವರು ರಾಜ್ಯರಾಜಕೀಯದಿಂದ ದೂರ ಸರಿಯುವಂತಾಯಿತು.

h5

ತಮ್ಮ ರಾಜಕೀಯ ಅವಧಿಯಲ್ಲಿ ಮಂತ್ರಿಗಳಾಗಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ನಂತರ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ಎಂಬುದು ಅವರ ಹೆಗ್ಗಳಿಕೆಯಾಗಿದೆ. ರಾಜಕೀಯದ ಜೊತೆ ಜೊತೆಗೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳಲ್ಲಿಯೂ ಅಪಾರವಾದ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದ್ದರು. ಅದರ ಮುಂದು ವರೆದ ಭಾಗವಾಗಿಯೇ ಹೆಸರಘಟ್ಟದ ಬಳಿ ಖ್ಯಾತ ಒಡಿಸ್ಸೀ ನೃತ್ಯಗಾರ್ತಿ ಪ್ರೋತಿಮಾ ಬೇಡಿ ಅವರ ನೃತ್ಯಗ್ರಾಮಕ್ಕೆ ಸರ್ಕಾರಿ ಜಾಗವನ್ನು ನೀಡಿದ್ದರು. ಮತ್ತೊಬ್ಬ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್ ಅವರಿಗೂ ಹೆಗಡೆಯವರ ಕೃಪಾಶೀರ್ವಾದವಿತ್ತು ಎನ್ನುವುದು ಬಲ್ಲವರ ಮಾತಾಗಿದೆ. ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆಯವರು ಮರಣ ಮೃದಂಗ ಎನ್ನುವ ಸಿನಿಮಾ ಸೇರಿದಂತೆ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ, ರಾಜ್ಯದ ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಗೆ ಶೇಕಡಾ50 ರ ರಿಯಾಯಿತಿ ಮುಂತಾದ ಯೋಜನೆಗನ್ನು ತರುವುದರ ಮೂಲಕ ಕಲಾ ಪೋಷಕರೆನಿಸಿಕೊಂಡರು.

ಈ ದೇಶ ಪ್ರಜಾಪ್ರಭುತ್ವ ದೇಶ ಎನಿಸಿದರು ಅನೇಕ ರಾಜಕೀಯ ನಾಯಕರು ತಮ್ಮ ಕುಟುಂಬಸ್ಥರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡು ಅಧಿಕಾರ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳುವಾಗ ಇದಕ್ಕೆ ಅಪರಾಧ ಎನ್ನುವಂತಿದ್ದರು ಹೆಗಡೆಯವರು. ರಾಮಕೃಷ್ಣ ಹೆಗಡೆಯವರು ತಮ್ಮ ಕಾಲದಲ್ಲಿ ಹಲವಾರು ನಾಯಕರನ್ನು ಬೆಳಸಿ ಹೋದರು. ಪ್ರಸ್ತುತ ರಾಜಕಾರಣದಲ್ಲಿರುವ ಹಲವಾರು ನಾಯಕರುಗಳು ಹೆಗಡೆಯವರ ಗರುಡಿಯಿಂದ ಹೊರಬಂದಿರುವ ಶಿಷ್ಯರೇ. ಮಾಜೀ ಮುಖ್ಯ ಮಂತ್ರಿಗಳಾದ ಎಸ್. ಆರ್. ಬೊಮ್ಮಾಯಿ, ಸಿದ್ದರಾಮಯ್ಯ, ಬಿ.ಸೋಮಶೇಖರ್, ಆರ್. ವಿ. ದೇಶಪಾಂಡೆ, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಹೀಗೆ ಇನ್ನೂ ಅನೇಕ ನಾಯಕರುಗಳನ್ನು ಬೆಳೆಸಿದರು. ಹೆಗಡೆ ತಾವೊಬ್ಬರೇ ಬೆಳೆಯದೇ ಇತರರನ್ನೂ ಬೆಳೆಸಿ ಅವರವರ ಶಕ್ತಿ ಸಾಮರ್ಥ್ಯದ ಅನುಗುಣವಾಗಿ ಅವರಿಗೆ ಅಧಿಕಾರವನ್ನು ನೀಡಿ ಬೆಳಸಿದರು.

ಬಾಯಿಮಾತಿನಲ್ಲಿ ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ರಾಜಕೀಯ ನಾಯಕರೇ ಹೆಚ್ಚಾಗಿರುವ ಇಂದಿನ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆಯವರು ಅಪ್ಪಟವಾದ ಜಾತ್ಯತೀತರಾಗಿದ್ದರು ಎಂದರೆ ಅತಿಶಯವೆನಿಸಿದು. ಅವರೆಂದೂ ತಮ್ಮ ಸ್ವಜಾತಿಯಿಂದ ಗುರುತಿಸಿಕೊಳ್ಳಲೇ ಇಲ್ಲ, ಉತ್ತರ ಕರ್ನಾಟಕದ ಲಿಂಗಾಯಿತರ ನಾಯಕರೆಂದೇ ಪ್ರಸಿದ್ಧಿ ಪಡೆದಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನಿಗೂ ಸಹಾ ಅಂತರ್ಜಾತಿ ವಿವಾಹವನ್ನು ಮಾಡಿಸಿದ್ದದ್ದು ಗಮನಾರ್ಹವಾಗಿತ್ತು.

h4

ಬದಲಾದ ರಾಜಕೀಯದಲ್ಲಿ ಯಾರನ್ನು ಹೆಗಡೆಯವರು ಬೆನ್ನು ತಟ್ಟಿ ಬೆಳೆಸಿದ್ದರೋ ಅದೇ ನಾಯಕರು ತಮ್ಮ ಬೆಂಬಲಿಗರ ಮೂಲಕ ಹೆಗಡೆಯವರಿಗೆ ವಿಧಾನಸೌಧದ ಮುಂದೆ ಚೆಪ್ಪಲಿಯ ಸೇವೆಯನ್ನು ಮಾಡಿಸಿ ಅವಮಾನಿಸಿದ್ದಲ್ಲದೇ ಮುಂದೆ ಅವರಿಗೆ ಅಚಾನಕ್ಕಾಗಿ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗ ತಾವು ಕಟ್ಟಿದ ಪಕ್ಷದಂದಲೇ ಉಚ್ಚಾಟಿಸುವ ಮೂಲಕ ಹೆಗಡೆಯವರ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಿದಾಗ, ಸ್ವಪಕ್ಷೀಯರಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ಕೊರಗಿನಲ್ಲೇ 2004ರ ವರ್ಷದ ಜನವರಿ 12ರಂದು ನಿಧನರಾದರು.

ರಾಜಕಾರಣದಲ್ಲಿದ್ದು ಜನಾನುರಾಗಿಯಾಗಿ, ಜನತೆಯ ಕೈಗೆ ಆಡಳಿತ ನೀಡಿ, ಸದುದ್ದೇಶಗಳಿಂದ, ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾದ ಶ್ರೀ ರಾಮಕೃಷ್ಣ ಹೆಗಡೆ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

ಜೆ. ಹೆಚ್. ಪಟೇಲ್

pat6

ಜಯದೇವಪ್ಪ ಹಾಲಪ್ಪ ಪಟೇಲ್ ಕರ್ನಾಟಕ ಕಂಡ ಅತ್ಯಂತ ದಿಟ್ಟತನದ ಪ್ರಾಮಾಣಿಕ ರಾಜಕಾರಣಿ ರಾಜ್ಯದ ವಿವಿಧ ಖಾತೆಗಳ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಾಗಿದ್ದಲ್ಲದೇ, 15 ನೇ ಮುಖ್ಯಮಂತ್ರಿಯಾಗಿದ್ದವರು. ಸಮಾಜವಾದಿ ಹಿನ್ನಲೆಯ ಹೋರಾಟದಿಂದ ಬಂದು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ವಿರೋಧೀ ನಾಯಕರಾಗಿಯೇ ರಾಜ್ಯ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಶಿವಮೊಗ್ಗಾ ಸಾಂಸದರಾಗಿ ದೂರದ ದೆಹಲಿಯ ಸಂಸತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಎಲ್ಲೆಡೆಯೂ ಹರಡಿದ್ದವರು. ಸಂಗೀತ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀ ಜೆ ಹೆಚ್ ಪಟೇಲ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಜೆ.ಎಚ್‌.ಪಟೇಲರು ಅಕ್ಟೋಬರ್‌ 1 1930ರಲ್ಲಿ ಕಾಗಿನೂರಿನಲ್ಲಿ ಸಿರಿವಂತ ಕುಟಂಬದಲ್ಲೇ ಜನಿಸುತ್ತಾರೆ. ಬಾಲ್ಯದಿಂದಲೂ ಎಲ್ಲದರಲ್ಲೂ ಚುರುಕಾಗಿದ್ದ ಪಟೇಲರು ವಿಜ್ಞಾನದ ವಿದ್ಯಾರ್ಥಿಯಾಗಿ ಇಂಟರ್ಮೀಡಿಯಟ್ ವರೆಗೂ ದಾವಣಗೆರೆಯಲ್ಲಿ ಮುಗಿಸಿ, ತಮ್ಮ ವಿದ್ಯಾಭ್ಯಾಸದಲ್ಲಿ ರಾಜಕೀಯದ ವಿಷಯವೂ ಇದ್ದು ಅದರಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಬಿಎ ಓದುವುದಕ್ಕಾಗಿ ಮೈಸೂರು ಮಹಾರಾಜ ಕಾಲೇಜ್ ಸೇರಿಕೊಳ್ಳುತ್ತಾರೆ. ಪ್ರೌಢಶಾಲೆಯ ದಿನಗಳಲ್ಲಿಯೇ ಸಮಾಜವಾದದ ಪ್ರಭಾವಕ್ಕೆ ಒಳಗಾಗಿದ್ದ ಪಟೇಲರು 1947ರ ಸೆಪ್ಟೆಂಬರ್‌ 1ರಂದು ಮೈಸೂರು ಮಹಾರಾಜರ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕರೆ ಕೊಟ್ಟಿದ್ದ ‘ಮೈಸೂರು ಚಲೋ’ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಹೋರಾಟಕ್ಕೆ ಧುಮುಕುತ್ತಾರೆ.

ಆ ದಿನಗಳಲ್ಲಿ ಪಟೇಲರ ಊರಾದ ಕಾರಿಗನೂರು ಚಳವಳಿಗೆ ಕೇಂದ್ರವಾಗಿತ್ತು. ಹಾಗಾಗಿ ಚನ್ನಗಿರಿ ತಾಲ್ಲೂಕಿನ ಜನರು ಅತ್ಯಂತ ಉತ್ಸಾಹದಿಂದ ಕೇವಲ 18 ದಾಟಿರದ ತರುಣ ಪಟೇಲರ ನೇತೃತ್ವದಲ್ಲಿ ಸೆಪ್ಟೆಂಬರ್‌ 3 ರಂದು ಚನ್ನಗಿರಿಯಲ್ಲಿ ಸತ್ಯಾಗ್ರಹ ನಡೆಸುತ್ತಾರೆ. ಕಾಂಗ್ರೆಸ್‌ ಬಾವುಟವನ್ನು ಹಿಡಿದುಕೊಂಡು ಹೊರಟಿದ್ದ ಚಳುವಳಿಗಾರರ ಮೇಲೆ ಪೊಲೀಸರು ದಾಳಿ ನಡೆಸಿ ಅಲ್ಲಿದ್ದವರೆಲ್ಲರನ್ನೂ ಚೆಲ್ಲಾಪಿಲ್ಲಿಯಾಗುವಂತೆ ಹೊಡೆಯುತ್ತಿದ್ದಾಗ ಧೈರ್ಯವಂತ ಜೆ ಎಚ್‌ ಪಟೇಲರು ತಾಲ್ಲೂಕು ಕಚೇರಿಯ ಮೇಲೆ ಬಾವುಟ ಹಾರಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಿ, ಶಿವಮೊಗ್ಗದ ಜಿಲ್ಲಾ ಕಾರಾಗೃಹದಲ್ಲಿ ಎರಡು ದಿನಗಳ ಕಾಲ ವಿಚಾರಣೆ ನಡೆಸಿ, ನಂತರ ಮಂಡಗದ್ದೆ ಕಾರಾಗೃಹದಲ್ಲಿ ಮೂರು ತಿಂಗಳು ಕಾಲ ಸೆರೆಮನೆ ವಾಸವನ್ನು ಅನುಭವಿಸುವ ಮೂಲಕ ಅವರ ರಾಜಕೀಯ ಜೀವನ ಮತ್ತು ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುತ್ತದೆ. .

pat2

1951ನೇ ಇಸವಿಯ ಸಮಯದಲ್ಲಿ ಮೊದಲನೆಯ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕೆಂದು ಮೈಸೂರಿಗೆ ಸಮಾಜವಾದಿ ಪಕ್ಷದ ನಾಯಕರಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಆಗಮಿಸಿದ್ದಾಗ ಅವರ ಮಾತುಗಳಿಂದ ಪಟೇಲರು ಪ್ರಭಾವಕ್ಕೊಳಗಾಗುತ್ತಾರಾದರೂ, ಇದರ ಜೊತೆ ಜೊತೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, 1954ರಲ್ಲಿ ಬೆಳಗಾವಿಯಲ್ಲಿ ತಮ್ಮ ಎಲ್‌.ಎಲ್‌.ಬಿ. ಪದವಿ ಪಡೆದ್ದಲ್ಲದೇ ಅದೇ ವರ್ಷ ಮೇ ತಿಂಗಳಿನಲ್ಲಿ ಸರ್ವಮಂಗಳ ಅವರನ್ನು ವರಿಸುತ್ತಾರೆ.

1955ರಲ್ಲಿ ತಮ್ಮ ಸಹಪಾಠಿ ಶಂಕರನಾರಾಯಣ ಭಟ್ಟರ ಜೊತೆ ಶಿವಮೊಗ್ಗದಲ್ಲಿ ಕೆಲ ಕಾಲ ವಕೀಲಿ ವೃತ್ತಿಯನ್ನು ಆರಂಭಿಸುತ್ತಾರಾದರೂ ಅವರ ಆಸಕ್ತಿಯೆಲ್ಲಾ ರಾಜಕೀಯದತ್ತವೇ ಇದ್ದು, 1957ರ ನಂತರ ಕರ್ನಾಟಕದ ಸಮಾಜವಾದಿ ಪಕ್ಷದ ಜನನಾಯಕರಾಗಿದ್ದ ಶ್ರೀ ಶಾಂತವೇರಿ ಗೋಪಾಲಗೌಡರ ಜತೆಗೂಡಿ ವಿವಿಧ ಹೋರಾಟದಲ್ಲಿ ಭಾಗಿಯಾಗಿ, 1960ರ ತಾಲೂಕು ಬೋರ್ಡ್‌ ಚುನಾವಣೆಯಲ್ಲಿ ಬಸವಪಟ್ಟಣ ಕ್ಷೇತ್ರದಿಂದ ಚನ್ನಗಿರಿ ತಾಲೂಕು ಬೋರ್ಡ್‌ಗೆ ಚುನಾಯಿತರಾಗುತ್ತಾರೆ. ಇದೇ ಸಮಯದಲ್ಲಿಯೇ ಉಳುವವನಿಗೇ ಭೂಮಿ ಎಂದು ಆರಂಭವಾದ ಹೋರಾಟ, ಕಾಗೋಡು ಸತ್ಯಾಗ್ರಹ ಎಂದೇ ರಾಷ್ಟ್ರೀಯ ಸುದ್ದಿಯಾಗಿ ಭಾರತದ ಎಲ್ಲ ಕಡೆಗೂ ರಾಮ್ ಮನೋಹರ್ ಲೋಹಿಯಾ ಅವರ ನೇತೃತ್ವದಲ್ಲಿ ಚಳವಳಿ ಆರಂಭವಾದಾಗ ಸಮಾಜವಾದಿ ಪಕ್ಷದ ವತಿಯಿಂದ ನಡೆಸಿದ ಭೂ ಚಳುವಳಿಗಳಲ್ಲಿ ಜೆ.ಹೆಚ್‌. ಪಟೇಲರು ಭಾಗಿಯಾಗಿ ಎರಡು ಸಾರಿ ಸೆರೆಮನೆಯ ವಾಸವನ್ನು ಅನುಭವಿಸಿ ಹೊರಬರುವಷ್ಟರಲ್ಲಿ ಶಿವಮೊಗ್ಗಾ ಜಿಲ್ಲಾದ್ಯಂತ ಜನಪ್ರಿಯ ನಾಯಕರಾಗಿ ಮುನ್ನಲೆಗೆ ಬಂದಿರುತ್ತಾರೆ.

ಇದೇ ಜನಪ್ರಿಯತೆಯೇ ಅವರನ್ನು 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಿಸುತ್ತದೆ. ಸಾಂಸದರಾಗಿ ಲೋಕಸಭೆಯಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಲು ಆರಂಭಿಸಿದಾಗ ಅದಕ್ಕೆ ಇತರ ಸಾಂಸದರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದಾಗ, ಆಗಿನ ಲೋಕಸಭೆಯ ಅಧ್ಯಕ್ಷರಾಗಿದ್ದ ಶ್ರಿ ನೀಲಂ ಸಂಜೀವ ರೆಡ್ಡಿ ಅವರು ಪಟೇಲ್ ಅವರಪರ ನಿಂತು ಭಾಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಭಾರತೀಯ ಸಂಸತ್ತು ಜಾರಿಯಾದ 17 ವರ್ಷಗಳ ನಂತರ ಪ್ರಪ್ರಥಮವಾಗಿ ಸಾಂಸದರೊಬ್ಬರು ಪ್ರಾದೇಶಿಕ ಭಾರತೀಯ ಭಾಷೆಯಲ್ಲಿ ಮಾತನಾಡಿದ ಸದಸ್ಯರು ಎಂಬ ಹಿರಿಮೆ ಪಟೇಲದ್ದಾಗುತ್ತದೆ. ಇದಾದ ನಂತರ ಶ್ರೀ ಸಂಜೀವ ರೆಡ್ಡಿ ಅವರು ಯಾವುದೇ ಲೋಕಸಭೆಯ ಸದಸ್ಯರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಮಾತೃಭಾಷೆಯಲ್ಲಿ ಸಂಸತ್ತಿನಲ್ಲಿ ತಮ್ಮ ವಾದವನ್ನು ಮಂಡಿಸಬಹುದು ಎಂಬ ಅಧಿಕೃತ ಆದೇಶವನ್ನು ಹೊರಡಿಸಲು ನಮ್ಮ ಪಟೇಲರೇ ಪ್ರೇರೇಪಣೆಯಾಗುತ್ತಾರೆ. ಆದಾದ ನಂತರ ಅಂದಿನ ಗೃಹಮಂತ್ರಿಗಳಾಗಿದ್ದ ಶ್ರೀ ವೈ.ವಿ. ಚವ್ಹಾಣ್‌ ಅವರೊಡನೆ ಮಹಾಜನ ಆಯೋಗದ ಸಂಬಂಧವಾಗಿ ಕರ್ನಾಟಕದ ಪರವಾಗಿ ವಾಗ್ಯುದ್ಧ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗುವ ಮೂಲಕ ಕೆಲವೇ ಕೆಲವು ದಿನಗಳಲ್ಲಿ ಅವರು ಬಹು ಜನಪ್ರಿಯ ಲೋಕಸಭಾ ಸದಸ್ಯರಾಗುವುದಲ್ಲದೇ, ಡಾ.ಲೋಹಿಯ ಅವರ ಅಚ್ಚುಮೆಚ್ಚಿನ ಸಂಗಾತಿಯಾಗುತ್ತಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಯವರ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಕೊಂಡ ಪಟೇಲರು ಅದಕ್ಕಾಗಿ ಸೆರೆಮನೆಯ ವಾಸವನ್ನು ಅನುಭವಿಸುವ ಮೂಲಕ ಸಂಪೂರ್ಣ ಗಮನ ರಾಜ್ಯದತ್ತ ಹರಿಯುತ್ತದೆ. ತುರ್ತು ಪರಿಸ್ಥಿತಿಯ ನಂತರದ ವಿಧಾನ ಸಭಾ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಆಗ ರಾಜ್ಯದಲ್ಲಿ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುತ್ತಲಿದ್ದು,
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಟೇಲರು ಆರ್ಥಿಕ ಸ್ಥಿತಿ ಮತ್ತು ಅದರ ಗತಿಯ ಕುರಿತು ಮಾತನಾಡುತ್ತಾ ದೇಶದ ಆರ್ಥಿಕ ಸ್ಥಿತಿ, ಕರ್ನಾಟಕದ ಪರಿಸ್ಥಿತಿ, ಪಂಜಾಬ್ ರಾಜ್ಯದಲ್ಲಿ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳನ್ನು ನಿಖರ ಅಂಕಿ ಅಂಶಗಳ ಮೂಲಕ 3 ಗಂಟೆಗಳ ಕಾಲ ಮಾಡಿದ ಅಮೋಘ ಭಾಷಣ ಖುದ್ದು ಮುಖ್ಯಮಂತ್ರಿಗಳ ಗಮನ ಸೆಳೆದ ಪರಿಣಾಮ ಮಧ್ಯಾಹ್ನದ ಭೋಜನ ಸಮಯದಲ್ಲಿ ವಿರೋಧಪಕ್ಷದ ಮೊಗಸಾಲೆಗೆ ಬಂದ ದೇವರಾಜ ಅರಸರು ಪಟೇಲರನ್ನು ಅಭಿನಂದಿಸಿ ಅವರ ಭಾಷಣದಲ್ಲಿದ್ದ ಅಂಕಿ ಅಂಶಗಳ ನಕಲನ್ನು ಕೇಳಿ ಪಡೆದ್ದದ್ದಲ್ಲದೇ ಅಂದಿನ ಸಂಜೆಯ ಭೋಜನ ಕೂಟಕ್ಕೆ ಆಹ್ವಾನಿಸುತ್ತಾರೆ. ನಂತರ ಮುಂದೊಮ್ಮೆ ಅದೇ ಸ್ನೇಹದಿಂದ ತಮ್ಮ ಸಂಪುಟದಲ್ಲಿ ಮಂತ್ರಿಯಾಗುವಂತೆ ಅರಸರು ನೀಡಿದ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರಲ್ಲದೇ, ಅವರ ರಾಜಕೀಯ ಜೀವನಾದ್ಯಂತ ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ನಡೆಸಿದ್ದದ್ದು ಅವರ ಹೆಗ್ಗಳಿಗೆ.

pat4

83ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ಸರ್ಕಾರ ಬಂದಾಗ ಶ್ರೀ ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. 90ರ ದಶಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಜನತಾದಳದ ಸರ್ಕಾರ ಆಡಳಿತಕ್ಕೆ ಬಂದಾಗ ಅವರ ಮಂತ್ರಿಮಂಡಳದಲ್ಲಿ ಉಪಮುಖ್ಯಮಂತ್ರಿಯಾಗಿದ್ದಲ್ಲದೇ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಪೂರ್ಣಬಹುಮತ ಬಾರದೇ ಹೋದಾಗ, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವೇಗೌಡರು ಅಚಾನಕ್ಕಾಗಿ ಪ್ರಧಾನ ಮಂತ್ರಿಗಳಾದಾಗ ಸಹಜವಾಗಿಯೇ, ಜೆ. ಹೆಚ್ ಪಟೇಲರು 1996 ಮೇ 31 ರಂದು ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿ ಕಾಂಗ್ರೇಸ್ ಪಕ್ಷಕ್ಕೆ ಎಂದೂ ಭಾಗವಾಗದಿದ್ದ ರಾಜ್ಯದ ಮೊತ್ತ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿ ಪಟೇಲರದ್ದಾಗಿದೆ.

ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು 7 ಹೊಸ ಜಿಲ್ಲೆಗಳನ್ನು ಘೋಷಿಸಿದ್ದರು. 4,800 ಕೋಟಿ ವಿದೇಶಿ ಬಂಡವಾಳವನ್ನು ಹೂಡಿಕೆ ಮಾಡಲು ವಾತಾವರಣ ಸೃಷ್ಟಿಸಿದ್ದಲ್ಲದೇ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ,ವರುಣಾ, ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣಕ್ಕೆ ಆಧ್ಯತೆ ನೀಡಿದ್ದರು. ಕೂಡಲ ಸಂಗಮದ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದವರೂ ಪಟೇಲರೇ.

ಕರ್ನಾಟಕದಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿದ್ದಾಗ, ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟು, ಅಧಿಕ ವಿದ್ಯುತ್ ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ನಮ್ಮ ರಾಜ್ಯವೂ ಒಂದಾಯಿತು.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮಂತ್ರಿ ಮಂಡಲದ ಪ್ರತಿಯೊಬ್ಬ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎನ್ನುವುದಕ್ಕೆ ಈ ಉದಾರಣೆ ನೀಡಲೇ ಬೇಕು. ಪಟೇಲರ ಮಂತ್ರಿಮಂಡಲದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಮಲೆನಾಡಿನ ಗಾಂಧಿ ಎಂದೇ ಖ್ಯಾತಿ ಪಡೆದಿದ್ದ ಹೆಚ್ ಜಿ ಗೋವಿಂದೇಗೌಡರು ಲಕ್ಷಾಂತರ ಶಿಕ್ಷಕರ ನೇಮಕಾತಿಯ ಫೈಲ್ ಹಿಡಿದು ಪಟೇಲರ ಅನುಮತಿ ಕೇಳಲು ಬಂದಾಗಾ, ಗೌಡರೇ ಇಂತಹ ಉತ್ತಮ ಕೆಲಸಕ್ಕೆ ನನ್ನ ಅನುಮತಿ ಯಾಕೇ, ಧೈರ್ಯದಿಂದ ಮುಂದುವರೆಸಿ ಶಹಭಾಷ್ ಎಂದು ಬೆನ್ನು ತಟ್ಟಿದ್ದರು ಪಟೇಲರು.

pat3

ದುರಾದೃಷ್ಠವಷಾತ್ ಆ ಸ್ವಾತಂತ್ರ್ಯವೇ ಸ್ವೇಚ್ಛೆಯಾಗಿ ಕೆಲವು ಮಂತ್ರಿಗಳು, ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಪಟೇಲರಿಗೆ ಅಪಖ್ಯಾತಿಯನ್ನು ತಂದಿದ್ದಲ್ಲದೇ, ತಮ್ಮ ಪಕ್ಷದ 116 ಶಾಸಕರ ಪೈಕಿ 52 ಭಿನ್ನಮತೀಯ ಶಾಸಕರು ಪಟೇಲರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರೂ, ಪಟೇಲರೆಂದೂ ಭಿನ್ನಮತೀಯರನ್ನು ಕರೆದು ಮಾತನಾಡಿಸಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಹಾತೊರೆಯದೇ ಇದು ಅವರದ್ದೇ ಸರ್ಕಾರವಾಗಿದ್ದು, ಬೇಕಿದ್ದರೆ ಆ ಶಾಸಕರೇ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದು ಹಿರಿಯ ಸಚಿವರಾದ ಎಂ ಪಿ ಪ್ರಕಾಶ್ ಹಾಗೂ ನಾಣಯ್ಯನವರ ಮೂಲಕ ಸಂದೇಶ ರವಾನಿಸಿ ತಮ್ಮ ಕಾಯಕದಲ್ಲಿ ನಿರತರಾಗಿಬಿಟ್ಟರು. ಚುನಾವಣೆಗೆ ಇನ್ನೂ 6 ತಿಂಗಳುಗಳು ಬಾಕೀ ಇರುವಾಗಲೇ 1999ರ ಅಕ್ಟೋಬರ್ 7 ರಂದು ಸರ್ಕಾರವನ್ನು ವಿಸರ್ಜಿಸಿ ಒಟ್ಟು 1200 ದಿನಗಳಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

pat5

ನಂತರ ನಡೆದ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದಲೇ, ತಮ್ಮ ಬಹುಕಾಲದ ಗೆಳೆಯರಾದ ಜಾರ್ಜ್ ಫರ್ನಾಂಡೀಸ್ ಮತ್ತು ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಿಜೆಪಿಯ ಜತೆಗೆ ಹೊಂದಾಣಿಕೆಗೆ ಮಾಡಿಕೊಂಡು 1999ರ ವಿಧಾನಸಭಾ ಚುನಾವಣೆ ಎದುರಿಸಿ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ವಡ್ನಾಳ್ ರಾಜಣ್ಣ ಆವರ ವಿರುದ್ಧ ಸೋಲನ್ನಭಿಸಿ ರಾಜ್ಯದಲ್ಲಿ ಎಸ್. ಎಂ. ಕೃಷ್ಣಾರವರ ನೇತೃತ್ವದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ, ಕೃಷ್ಣರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವುದರೊಂದಿಗೆ ತಮ್ಮ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತಾರೆ. ಪಟೇಲರ ಆಗಮನವನ್ನು ದೂರದಿಂದಲೇ ಗಮನಿಸಿದ ಕೃಷ್ಣರವರು ವಿಧಾನ ಸೌಧದ ಮೆಟ್ಟಿಲುಗಳನ್ನು ಇಳಿದು ಬಂದು ಪಟೇಲರನ್ನು ಮಾತನಾಡಿಸಿ ನಿಮ್ಮಂತಹ ಹಿರಿಯರು ವಿಧಾನ ಸಭೆಯ ವಿರೋಧಪಕ್ಷದ ಸಾಲಿನಲ್ಲಿ ಇರಬೇಕಿತ್ತು ಎಂದು ಹೇಳಿದ್ದದ್ದು ಗಮನಾರ್ಹವಾಗಿತ್ತು.

ಪಟೇಲರು ಮಂತ್ರಿಯಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ, ಅವರು ಅಧಿಕಾರವನ್ನು ಕುಟುಂಬಕ್ಕಾಗಿ ದುರುಪಯೋಗ ಮಾಡಲಿಲ್ಲ. ತಮ್ಮ ಯಾವ ಮಕ್ಕಳನ್ನೂ ಚುನಾವಣೆಗೆ ನಿಲ್ಲಿಸಲು ಒಪ್ಪಲಿಲ್ಲ. ಸದಾ ಸ್ನೇಹಿತರೊಡನೆ ಮತ್ತು ಕುಟುಂಬದೊಡನೆ ಅತ್ಯಂತ ಮನಃಪೂರ್ವಕವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಮಕ್ಕಳ ಮೇಲಿನ ಪ್ರೀತಿಗಿಂತ ಮೊಮ್ಮಕ್ಕಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರ ಮೊಮ್ಮಗಳು ಸಣ್ಣ ವಯಸ್ಸಿನಲ್ಲಿಯೇ ಭಯಂಕರ ಖಾಯಿಲೆಯಿಂದಾಗಿ ಅಸುನೀಗಿದಾಗ ಬಹಳ ದಿನಗಳ ಕಾಲ ಪಟೇಲರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಎಂತಹ ವಿರೋಧಿಗಳನ್ನೂ ಅತ್ಯಂತ ವಿಶ್ವಾಸದಿಂದ ಕಾಣುತ್ತಿದ್ದ ಕಾರಣ ಅವರೊಬ್ಬ ಅಜಾತಶತ್ರುವಾಗಿದ್ದರು ಎಂದರೂ ಅತಿಶಯವಲ್ಲ.

ನೇರವ್ಯಕ್ತಿತ್ವ ಮತ್ತು ಹಾಸ್ಯ ಪ್ರವೃತ್ತಿ ಅವರಿಗೆ ಜನ್ಮಜಾತವಾಗಿ ಬಂದಿದ್ದು,ಅದರಿಂದಾಗಿ ಪಟೇಲರ ಸಾಧನೆಗಳು, ಸಮಾಜವಾದಿ ವಿಚಾರಧಾರೆಗಳು ಹಿನ್ನೆಲೆಗೆ ಸರಿದು ನಿಂತಿತು. ಪಟೇಲರು ಇದ್ದಾರೆ ಎಂದರೆ ಅಲ್ಲೊಂದು ನವಿರಾದ ಹಾಸ್ಯವಿರುತ್ತದೆ ಮತ್ತು ಅಷ್ಟೇ ಮೊನಚಾದ ಕುಟುಕುವಂತಹ ಉತ್ತರವಿರುತ್ತದೆ ಎನ್ನುವುದಕ್ಕೆ ಈ ಪ್ರಸಂಗವನ್ನು ಹೇಳಲೇ ಬೇಕು ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿ.ಮೀ ದೂರದಲ್ಲಿದ್ದ ಸೂಳೆ ಕೆರೆ ಎಂಬ ಹೆಸರು ಜನರಲ್ಲಿ ತಪ್ಪು ಭಾವನೆ ಕಲ್ಪಿಸುತ್ತದೆ ಎಂಬ ಕಾರಣ ನೀಡಿ ಈ ಕೆರೆಯನ್ನು ಶಾಂತಿ ಸಾಗರ ಎಂದು ಪುರರ್ನಾಮಕರಣ ಮಾಡಬೇಕೆಂಬ ಪ್ರಸ್ತಾಪನೆ ಇಡುತ್ತಾರೆ.

ಅವರ ಪ್ರಸ್ತಾವನೆಗೆ ಒಪ್ಪದ ಪಟೇಲರು, ಇರಲಿ ಬಿಡ್ರಿ. ಸೂಳೆ ಕೆರೆ ಅನ್ನೋ ಹೆಸರೇ ಇತಿಹಾಸ ಪ್ರಸಿದ್ಧವಾಗಿದೆ. ಈಗ ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿ ಇತಿಹಾಸವನ್ನು ತಿದ್ದಲಾಗದು ಎಂದಿದ್ದಲ್ಲದೇ, ಹಾಗೆಯೇ, ಮಾತನ್ನು ಮುಂದುವರೆಸಿ, ಒಬ್ಬ ಹೆಣ್ಣು ಮಗಳನ್ನು ಸೂಳೆಯ ಪಟ್ಟಕ್ಕೇರಿಸುವುದು ಯಾರು? ಈ ಸಮಾಜದ ದುರುಳ ಗಂಡಸರು ಮತ್ತು ಬಾಯಿ ಚಪಲ ಅತಿಯಾಗಿರುವ ಹೆಂಗಸರಲ್ಲವೇ? ಒಬ್ಬ ಹೆಣ್ಣಿಗೆ ಮೈ ಮಾರಿಕೊಳ್ಳುವುದನ್ನು ಅನಿವಾರ್ಯವಾಗುವಂತೆ ಮಾಡಿದ್ದು ಇದೇ ಸಮಾಜವಲ್ಲವೇ? ಈ ಸಮಾಜದ ಕಣ್ಣಲ್ಲಿ ಸೂಳೆ ಎನ್ನಿಸಿಕೊಂಡ ಆ ಹೆಣ್ಣು ಮಗಳು ಕೆರೆ ಕಟ್ಟಿಸುವ ಮೂಲಕ ಇಂದಿಗೂ ಸಹಾ ಲಕ್ಷಾಂತರ ಜನರ ನೆಮ್ಮದಿಗೆ ದಾರಿ ಮಾಡಿಕೊಟ್ಟಳು ಎಂದ್ದಲ್ಲಿ ಅದನ್ನೇಕೆ ತಪ್ಪೆಂದು ಭಾವಿಸಿ ಬದಲಿಸ ಬೇಕು? ಎಂದು ಕೇಳಿದ್ದರಂತೆ. ಇಂತಹ ಪಟೇಲರನ್ನು ಆಜ್ ತಕ್ ಎನ್ನುವ ಹಿಂದಿ ಛಾನೆಲ್ಲಿನಲ್ಲಿ ನಡೆಸಿದ ಸಂದರ್ಶನವನ್ನು ತಿರುಚಿ women and wine are my weakness ಅಂದರೆ ಮಾನಿನಿ ಮತ್ತು ಮದಿರೆ ನನ್ನ ದೌರ್ಬಲ್ಯ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆಂದು ವಿಕೃತವಾಗಿ ವರದಿ ಮಾಡಿ ಪಟೇಲರ ವ್ಯಕ್ತಿತ್ವಕ್ಕೆ ಕಳಂತ ತರುವುದರಲ್ಲಿ ಕೆಲ ಕಾಣದ ಕೈಗಳು ಸಫಲರಾಗಿದ್ದಂತೂ ಸುಳ್ಳಲ್ಲ.

ಪಟೇಲರ ಸರಳತೆಗೆ ಈ ಒಂದು ಪ್ರಸಂಗವನ್ನು ಹೇಳಲೇ ಬೇಕು. ಅದೊಮ್ಮೆ ಪಟೇಲರು ತಮ್ಮೂರಿನಲ್ಲಿ ಇದ್ದಾಗ, ಆ ಊರಿನ ಅತಿಯಾದ ಸಿನಿಮಾ ಪ್ರೇಮಿಯಾಗಿದ್ದ ಚಪ್ಪಲಿ ಹೊಲೆಯುವ ಹುಡುಗನೊಬ್ಬ ಪಟೇಲರ ಬಳಿ ಬಂದು, ಸಾಹೇಬ್ರೇ ಈ ಸಲ ನಮ್ಮೂರ ಜಾತ್ರೆಗೆ ಅಂಬರೀಷಣ್ಣ ಮತ್ತು ಅನಂತನಾಗ್ ಅವರನ್ನು ಕರೆಸಿ ಎಂಬ ಬೇಡಿಕೆಯಿಟ್ಟನಂತೆ. ಆ ಹುಡುಗನ ಮುಗ್ಧತೆಯನ್ನು ಮೆಚ್ಚಿದ ಪಟೇಲರು ಸುಮ್ಮನೇ ನಕ್ಕು ಆಯ್ತು ಹೋಗೋ ಎಂದವರು, ಕೊಟ್ಟ ಮಾತಿಗೆ ತಪ್ಪದೆ ಸುಮಾರು 1500 ಜನರಿರುವ ಕಾರಿಗನೂರಿನ ಜಾತ್ರೆಗೆ ಆ ಇಬ್ಬರು ನಟರನ್ನು ಕರೆತಂದಾಗ ಆ ಹುಡುಗನ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ.

pat1

ನೇರ ನಡೆ ಮತ್ತು ನುಡಿಗಳಿಂದ ಹಿಡಿದ ಕೆಲಸವನ್ನು ಮಾಡಿಯೇ ತೀರುತ್ತಿದ್ದ ಪಟೇಲರು 7 October 1999ರಂದು ತಮ್ಮ ವಯೋಸಹಜವಾಗಿ ನಿಧನರಾಗುವ ಮೂಲಕ ಸಮಾಜವಾದಿ ಮೂಲದ ಕೊಂಡಿಯೊಂದು ರಾಜ್ಯ ರಾಜಕಾರಣದಲ್ಲಿ ಮಿಂಚಿ ಮರೆಯಾಗುತ್ತದೆ. ಅವರ ಅಂತ್ಯ ಸಂಸ್ಕಾರಕ್ಕೆ, ಜಾರ್ಜ್ ಫೆರ್ನಾಂಡಿಸ್, ನಿತೇಶ್ ಕುಮಾರ್ ಮತ್ತು ಶರದ್ ಯಾದವ್, ದೂರದ ಬಿಹಾರ್ ನಿಂದ ಬಂದಿದ್ದದ್ದು ವಿಶೇಷವಾಗಿತ್ತು. ಪಟೇಲರು ನಮ್ಮ ನಾಡು ಕಂಡ ಅತ್ಯಂತ ಧೀಮಂತ ವ್ಯಕ್ತಿಯಾಗಿದ್ದಲ್ಲದೇ, ನಾಡು ಮತ್ತು ನುಡಿಯ ವಿಚಾರ ಬಂದಾಗ ಕೆಚ್ಚದೆಯಿಂದ ಎದುರಿಸಿ ಸೈ ಎನಿಸಿಕೊಂಡ ಜೆ. ಹೆಚ್. ಪಟೇಲರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಇನ್ಪೋಸಿಸ್ ಸುಧಾ ಮೂರ್ತಿ

sudha7ಇಂದಿನ ಕಾಲದಲ್ಲಿ  ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವವರೇ ಹೆಚ್ಚಾಗಿರುವಾಗ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿಯಾಗಿದ್ದರೂ ಸಾಮಾನ್ಯವಾದ  ಸೀರೇ ಉಟ್ಟುಗೊಂಡು ನಿರಾಭರಣೆಯಾಗಿ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಯಾವುದೇ ಪ್ರಚಾರದ ಗೀಳಿಲ್ಲದೇ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರಳ ಸಹನಾಮೂರ್ತಿ ಶ್ರೀಮತಿ ಸುಧಾಮೂರ್ತಿಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಸುಧಾಮೂರ್ತಿಯವರ ಪೂವಜರು  ಅವಿಭಜಿತ ಧಾರವಾಡ ಜಿಲ್ಲೆಯ ಶಿಗ್ಗಾಂವ್‌ (ಈಗ ಹಾವೇರಿ ಜಿಲ್ಲೆಯ ಭಾಗವಾಗಿದೆ) ಗ್ರಾಮದ ಕುಲಕರ್ಣಿ ಮನೆತನದವರು. ಅದೇ ಮನೆತನದವರಾದ ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು ಮತ್ತು  ಪ್ರಾಧ್ಯಾಪಕರಾದ ಶ್ರೀ ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಗಳಿಗೆ  1950 ರ ಆಗಸ್ಟ್‌ 19 ರಂದು ಜನಿಸಿದ ಹೆಣ್ಣು ಮಗುವಿಗೆ ಸುಧಾ ಕುಲಕರ್ಣಿ ಎಂದು ಹೆಸರಿಡುತ್ತಾರೆ.

ಸುಧಾ ಹೆಸರಿಗೆ ಅನ್ವರ್ಥದಂತೆ ಬಾಲ್ಯದಿಂದಲೂ ಅಮೃತದ ರೀತಿಯಂತೆಯೇ ಶುದ್ಧ ಮನಸ್ಸಿನ ಪ್ರಬುದ್ಧವಾದ ಚುರುಕಿನಿನ ಹುಡುಗಿಯಾಗಿರುತ್ತಾಳೆ. ಸುಧಾ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವೆಲ್ಲಾ ಕನ್ನಡ ಮಾಧ್ಯಮದಲ್ಲಿ ತಮ್ಮ  ಹುಟ್ಟೂರಾದ  ಶಿಗ್ಗಾಂವ್‍ನಲ್ಲಿ ನಡೆದು  1966ರಲ್ಲಿ ಹುಬ್ಬಳ್ಳಿಯ ನ್ಯೂ ಎಜ್ಯುಕೇಶನ್ ಸೊಸೈಟಿ ಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್‍ ನಲ್ಲಿ ಇಡೀ ಶಾಲೆಗೇ ಅತಿ ಹೆಚ್ಚು ಅಂಕಗಳನ್ನು ಪಡೆದು  ಎಸ್.ಎಸ್.ಎಲ್.ಸಿ ಯಲ್ಲಿ  ಉತ್ತೀರ್ಣರಾಗುತ್ತಾರೆ.

ತಮ್ಮ ಕುಟುಂಬದ ಬಹುತೇಕರು ವೈದ್ಯರಾಗಿದ್ದರೂ ಸುಧಾರವರು ಇಂಜಿನಿಯರಿಂಗ್  ಓದಲು ಇಚ್ಚಿಸಿ  ಹುಬ್ಬಳ್ಳಿಯ ಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್‍  ಕಾಲೇಜಿನಲ್ಲಿ  ಇಲೆಕ್ಟ್ರಿಕಲ್ ಇಂಜನಿಯರಿಂಗ್ ಸೇರಿಕೊಳ್ಳುತ್ತಾರೆ.  ಇಡೀ ಕಾಲೇಜಿನಲ್ಲಿ 599 ಹುಡುಗರಿದ್ದರೇ ಸುಧಾ ಕುಲಕರ್ಣಿಯೊಬ್ಬರೇ  ಹುಡುಗಿ.  ಇವೆಲ್ಲವುಗಳ ನಡುವೆಯೂ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎನ್ನುವ ಭಟ್ರ ಹಾಡಿನಂತೆ, ಇಡೀ ನಾಲ್ಕು ವರ್ಷಗಳಲ್ಲಿಯೂ ತರಗತಿಗೇ ಪ್ರಥಮವಾಗಿದ್ದು 1972ರಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿಕೊಂಡು 1974ರಲ್ಲಿ   ಕಂಪ್ಯೂಟರ್ ಸೈನ್ಯ್ ನಲ್ಲಿ ಪ್ರಥಮ ಸ್ಥಾನದೊಂದಿಗೆ  ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ ಎನಿಸಿಕೊಳ್ಳುತ್ತಾರೆ.

ಸುಧಾರವರು ತಮ್ಮ ಶಿಕ್ಷಣವನ್ನು ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದಾಗ, ಪೂನಾದ ಪ್ರತಿಷ್ಠಿತ ಆಟೋ ಕಂಪನಿ TELCO ನಲ್ಲಿ ಖಾಲಿ ಇರುವ ಹುದ್ದೆಯನ್ನು ಗಮನಿಸಿ ಅದಕ್ಕೆ ತಮ್ಮ ಅರ್ಜಿ ಹಾಕುತ್ತಿರುವ ಸಂದರ್ಭದಲ್ಲಿ  ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ  ಅರ್ಜಿ ಸಲ್ಲಿಸಬಾರದು ಎಂಬುದನ್ನು ಗಮನಿಸಿ, ಕೂಡಲೇ ಸಂಸ್ಥೆಯ  ಹಿರಿಯರಾದ JRD ಟಾಟಾರವರಿಗೆ  ಅವರ ಕಂಪನಿಯಲ್ಲಿನ ಲಿಂಗ ತಾರತಮ್ಯದ ಕುರಿತಂತೆ ಪತ್ರವೊಂದನ್ನು ಬರೆಯುತ್ತಾರೆ. ಸುಧಾರವರ  ಪತ್ರ JRD ಟಾಟಾ ರವರ ಕೈ ಸೇರಿ,  ಸುಧಾರವರ ತಾಂತ್ರಿಕ ಕೌಶಲ್ಯಗಳನ್ನು ಪರೀಕ್ಷಿಸುವ ಸಲುವಾಗಿ ಆಕೆಯನ್ನು  ಸಂದರ್ಶನ  ಮಾಡಿ  ಆ ಹುದ್ದೆಗೆ ಆಕೆ ಸಮರ್ಥಳಾಗಿದ್ದಲ್ಲಿ ನೇಮಿಸಿಕೊಳ್ಳಲು ತಮ್ಮ ಸಿಬ್ಬಂದಿಗೆ ನಿರ್ದೇಶಿಸುತ್ತಾರೆ. ಅದೇ ರೀತಿಯಲ್ಲೇ ಸುಧಾರವರು  ಸಂದರ್ಶನದಲ್ಲಿ ಉತ್ತಮವಾಗಿ ಉತ್ತರಿಸಿ  ಯಶಸ್ವಿಯಾಗಿ TELCOದಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡ ಮೊದಲ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕಗೆ ಪಾತ್ರರಾಗುತ್ತಾರೆ.

sudha4ಪುಣೆಯಲ್ಲಿ ಟೆಲ್ಕೋದಲ್ಲಿ ಕೆಲಸ ಮಾಡುತ್ತಿರುವಾಗಲೇ ಅವಿಭಜಿತ ಕೋಲಾರ ಜಿಲ್ಲೆಯ (ಸದ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವ)  ಶಿಡ್ಲಘಟ್ಟ ಮೂಲದ ಪ್ರತಿಭಾವಂತ ಮತ್ತು ಹಿರಿಯ ಸಹೋದ್ಯೋಗಿ ಶ್ರೀ ನಾರಾಯಣ ಮೂರ್ತಿಯವರ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಗುರು ಹಿರಿಯರ ಸಮ್ಮುಖದಲ್ಲಿ  ವಿವಾಹವಾಗುವ ಮೂಲಕ ಸುಧಾ ಕುಲಕರ್ಣಿವರು ಅಧಿಕೃತವಾಗಿ ಶ್ರೀಮತಿ ಸುಧಾ ಮೂರ್ತಿಯಾಗಿ ಭಡ್ತಿ ಪಡೆಯುತ್ತಾರೆ . ಬಲ್ಲವರಿಂದ ಕೇಳಿದ ಪ್ರಕಾರ ಇವರಿಬ್ಬರ ಮದುವೆಗೆ ಅಂದು ಆದ ಖರ್ಚು ಕೇವಲ 2000/- ಗಳು ಎಂದರೆ ಅವರ ಮದುವೆ  ಎಷ್ಟು ಸರಳ ರೀತಿಯಲ್ಲಿ ನಡೆದಿದ್ದಿರಬಹುದು ಎಂಬುದು  ಅರ್ಥವಾಗುತ್ತದೆ. ಇವರಿಬ್ಬರ ಸುಖೀ ದಾಂಪತ್ಯದ ಕುರುಹಾಗಿ ಅವರಿಗೆ ಅಕ್ಷತಾ ಮತ್ತು ರೋಹನ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

sudha2ಟೆಲ್ಕೋ ಸಂಸ್ಥೆಯ ನಂತರ ಪುಣೆಯ ವಾಲ್ಚಂದ್‌ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ನಲ್ಲಿ ಹಿರಿಯ ಸಿಸ್ಟಂ ಅನಾಲಿಸ್ಟ್‌ ಆಗಿ ಕೆಲಸ ನಿರ್ವಹಿಸಿ 1974-1981 ರವರೆಗೆ ಪುಣೆಯಲ್ಲಿ ನೆಲಸಿದ್ದ ಸುಧಾ ಮೂರ್ತಿಯವರು ನಂತರ ಮುಂಬೈನಲ್ಲಿ ನೆಲೆಸುತ್ತಾರೆ. ಶ್ರೀ ನಾರಾಯಣ ಮೂರ್ತಿಗಳು ತಮ್ಮ ಕೆಲಸದ ಮೇಲೆ ದೇಶ ವಿದೇಶಗಳಲ್ಲಿ ಸುತ್ತಾಡಿ ಅಂತಿಮವಾಗಿ ಬೇರೆಯವರ ಬಳಿ ಕೆಲಸಕ್ಕೆ ದುಡಿಯುವ ಬದಲು ತಮ್ಮದೇ ಆದ ಒಂದು ಸಂಸ್ಥೆಯನ್ನೇಕೆ ಸ್ಥಾಪಿಸಬಾರದು ಎಂದು ಯೋಚಿಸಿ 1996 ರಲ್ಲಿ ಮೂರ್ತಿಗಳು ತಮ್ಮ ಕೆಲ ಸ್ನೇಹಿತರೊಡನೆ ಸೇರಿಕೊಂಡು  ತಮ್ಮ ಮನೆಯ  ಸಣ್ಣದಾದ ಕಾರ್ ಗ್ಯಾರೇಜಿನಲ್ಲಿ  ಇನ್ಫೋಸಿಸ್‌ ಫೌಂಡೇಶನ್‌ನ್ನು   ಹುಟ್ಟು ಹಾಕಿದ ಸಂದರ್ಭದಲ್ಲಿ  ಸುಧಾಮೂರ್ತಿಯವರು ತಮ್ಮ ಉಳಿತಾಯದ ರೂ. 10,000 ವನ್ನು ಆರಂಭದ ದೇಣಿಗೆಯನ್ನಾಗಿ ನೀಡುವುದಲ್ಲದೇ, ಅಂದಿನಿಂದ ಇಂದಿನವರೆಗೂ ಆ ಸಂಸ್ಥೆಯ ಟ್ರಸ್ಟಿಯಾಗಿ ಮುಂದುವರಿದಿದ್ದಾರೆ. ಆರಂಭದಲ್ಲಿ ತಮ್ಮ ಪತಿರಾಯರೊಂದಿಗೆ ತಮ್ಮ ಸಂಸ್ಥೆಗಾಗಿ ವಿವಿಧ ಜವಾಬ್ಧಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡಿ ತಮ್ಮ ಸಂಸ್ಥೆ ಜಗತ್ಪ್ರಸಿದ್ಧವಾದ ನಂತರ ಹಂತ ಹಂತವಾಗಿ ಸಂಸ್ಥೆಯ ಜವಾಬ್ಧಾರಿಗಳಿಂದ ಹೊರಬಂದು ಸಮಾಜಮುಖೀ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ತಮಗೆ ಆರಂಭದಿಂದಲೂ ಇಷ್ಟವಿದ್ದ ಬೋಧನಾ ವೃತ್ತಿಯನ್ನು ಕೈಗೆ ಎತ್ತಿಕೊಂಡು ವಿದ್ಯಾರ್ಥಿಗಳಿಗೆ ಜ್ಞಾನ  ದಾಸೋಹ  ಮತ್ತು ತರಬೇತಿಯನ್ನು ಒದಗಿಸುವ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಿಕೆಯಾಗಿರುವುದರ  ಜೊತೆಗೆ ಕ್ರೈಸ್ಟ್‌ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆ ತಮ್ಮ ಅನುಭವವನ್ನೆಲ್ಲಾ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಅಕ್ಷರ ರೂಪಕ್ಕೆ ಇಳಿಸಿ ಹತ್ತಾರು ಪುಸ್ತಕಗಳನ್ನು ಬರೆಯುವ ಮೂಲಕ  ಅವರಲ್ಲಿದ್ದ ಲೇಖಕಿಯನ್ನು ಹೊರಜಗತ್ತಿಗೆ ಪರಿಚಯ ಮಾಡಿ ಕೊಟ್ಟಿದ್ದಾರೆ.

sudha3ನಂತರದ ದಿನಗಳಲ್ಲಿ  ಸುಧಾ ಮೂರ್ತಿಯವರು ಅನೇಕ ಸಮಾಜ ಸುಧಾರಣಾ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.  ಅದರಲ್ಲೂ  ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ,  ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರು ಜಾಗೃತಿಯನ್ನು ನಿರಂತರವಾಗಿ ಮೂಡಿಸುತ್ತಿದ್ದಾರೆ. ದೇಶದ ಪ್ರಧಾನಿಗಳು ಕರೆ ನೀಡಿದ ಸ್ವಚ್ಛ ಭಾರತದ ಅಭಿಯಾನಕ್ಕೆ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿದ್ದಲ್ಲದೇ, ಅದರ ಅಗತ್ಯತೆಯನ್ನು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಡುವ ಮೂಲಕ  ಜನರಿಗೆ  ಅರ್ಥಮಾಡಿಕೊಡುತ್ತಿದ್ದಾರೆ. ಅವರು ಶೌಚಾಲಯ  ಕಟ್ಟಿಸಿಕೊಟ್ಟ ಹಿಂದೆಯೂ ಒಂದು ರೋಚಕ ಕತೆಯಿದೆ. ಈಗಾಗಲೇ ತಿಳಿಸಿರುವಂತೆ  ಅವರು  ಇಂಜೀನಿಯರಿಂಗ್   ಇದೇ ಸಮಯದಲ್ಲಿ ಅವರ ಇಡೀ ಕಾಲೇಜಿನಲ್ಲಿ 599 ಹುಡುಗರಿದ್ದು ಸುಧಾ ಅವರೊಬ್ಬರೇ, ಹೆಣ್ಣುಮಗಳಿದ್ದ ಕಾರಣ ಆ ಕಾಲೇಜಿನಲ್ಲಿ ಮಹಿಳಾ ಶೌಚಾಲಯವೇ ಇರಲಿಲ್ಲವಂತೆ. ಹಾಗಾಗಿ ಅಂದು ತಮ್ಮ ಕಾಲೇಜಿನಲ್ಲಿ ತಾವು ಎದುರಿಸಿದ ಗಂಭೀರ ಸವಾಲನ್ನು ಮತ್ತಾವ ಹೆಣ್ಣುಮಕ್ಕಳೂ ಅನುಭವಿಸಬಾರದು ಎಂಬು ಧೃಢ ನಿರ್ಧಾರದಿಂದ ತಾವು ಇನ್ಫೋಸಿಸ್ ಅಧ್ಯಕ್ಷರಾದ ನಂತರ, ತಮ್ಮ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ  ಹೆಣ್ಣುಮಕ್ಕಳಿಗೆ 16,000 ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿರುವುದು ಗಮನಾರ್ಹವಾಗಿದೆ.

sudha6ತಮ್ಮ ಇನ್ಫೋಸಿಸ್ ಫೌಂಡೇಶನ್ ಮುಖಾಂತರ  ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ಅದಕ್ಕೆ ಪರಿಹಾರವನ್ನು ಕೊಡುವುದರಲ್ಲಿ ಸುಧಾ ಮೂರ್ತಿಯವರು ಅಗ್ರೇಸರರಾಗಿದ್ದಾರೆ. ಪ್ರವಾಹ, ಬರ ಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಳ್ಳುವುದಲ್ಲದೇ ನೂರಾರು ಹಳ್ಳಿಗಳಲ್ಲಿ ಸಾವಿರಾರು ಜನರಿಗೆ  ಪುನರ್ವಸತಿ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲದರ ಜೊತೆ ನಾನಾ ಕಾರಣಗಳಿಂದಾಗಿ  ವಿದ್ಯೆಯಿಂದ ವಂಚಿತರಾದವರಿಗೆ ಸೂಕ್ತವಾದ  ವಿದ್ಯೆಯನ್ನು ಕೊಡಿಸುವುದು ಆವರ ಮೆಚ್ಚಿನ ಕಾರ್ಯವಾಗಿದ್ದು ಈಗಾಗಲೇ ಸಾವಿರಾರು ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಂದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ online classesಗಾಗಿ  ಕಷ್ಟಪಡುತ್ತಿರುವ ಮಕ್ಕಳಿಗಾಗಿ ಲ್ಯಾಪ್‌ಟಾಪ್, ಇಂಟರ್ನೆಟ್ ಡಾಂಗಲ್ ಮತ್ತು ಒಂದು ವರ್ಷದ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅನೇಕ ಮಕ್ಕಳು  ಮನೆಯಲ್ಲಿಯೇ ತಮ್ಮ ಅಧ್ಯಯನವನ್ನು ಸುಗಮವಾಗಿ ಮುಂದುವರಿಸಲು ಸಹಕರಿಸಿದ್ದಾರೆ.

ತಮ್ಮೊಡನೆ ಒಡಹುಟ್ಟಿದ ಸಹೋದರಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರ ಪತಿಯಾದ ಶ್ರೀ ಗುರುರಾಜ ದೇಶಪಾಂಡೆ ಅವರ ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ದೇಶಪಾಂಡೆ ಪ್ರತಿಷ್ಠಾನ ಎಂಬ ವಿನೂತನ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣಭೂತರಾಗಿದ್ದಾರೆ.

sudha5ಇಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆಯೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಹಾಗಾಗಿ, ಪ್ರತಿ ವರ್ಷವೂ ಶ್ರಿ ರಾಘವೇಂದ್ರ ಸ್ವಾಮಿ ಆರಾಧೆನೆಯ ಸಮಯದಲ್ಲಿ  ಮುಂಜಾನೆ 4 ಗಂಟೆಗೆ ಮಠಕ್ಕೆ ಭೇಟಿ ನೀಡಿ ಅಲ್ಲಿನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಈ  ಸೇವೆಯಲ್ಲಿ ಪಾತ್ರೆ ತೊಳೆಯುವುದು,  ಮಠದಲ್ಲಿರುವ  ಕಪಾಟುಗಳ ಧೂಳನ್ನು ತೆಗೆಯುವುದು, ತರಕಾರಿಗಳನ್ನು ಕತ್ತರಿಸುವುದು, ಊಟವಾದ ನಂತರ ಗೋಮೆ ಹಚ್ಚಿ ನೆಲವನ್ನು ಸಾರಿಸಿ ಗುಡಿಸುವುದು ಹೀಗೆ ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂದು ತನು ಮನ ಧನದೊಂದಿಗೆ ತಮ್ಮನ್ನು ದೇವರ ಸೇವೆಗೆ ಅರ್ಪಿಸಿಕೊಳ್ಳುವುದು  ಅಭಿನಂದನೀಯ ಮತ್ತು ಅನುಕರಣೀಯವೂ ಆಗಿದೆ.

sudha1ಇಷ್ಟೆಲ್ಲಾ  ಸೇವೆ ಮತ್ತು ಸಾಧನೆಗಳಿಗಾಗಿ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಸುಧಾಮೂರ್ತಿಯವರು ಭಾಜನರಾಗಿದ್ದಾರೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

 • 1995ರಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ್ಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
 • 2000 ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
 • ಶಾಲೆ ಮಕ್ಕಳಿಗಾಗಿ ಕಂಪ್ಯೂಟರ್ ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ದೊರೆತಿದೆ.[೧೩]
 • 2002ರಲ್ಲಿ ರೇಡಿಯೊ ಸಿಟಿ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ವರ್ಷದ ಮಹಿಳೆ ಪ್ರಶಸ್ತಿ ಲಭಿಸಿದೆ,
 • ದೆಹಲಿಯ ಸಹಸ್ರಮಾನ ಮಹಿಳಾ ಶಿರೋಮಣಿ ಪ್ರಶಸ್ತಿ,
 • ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌,
 • ಶಿವಮೊಗ್ಗ ಕರ್ನಾಟಕ ಸಂಘದಿಂದ ಎಂ.ಕೆ. ಇಂದಿರಾ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ,
 • 2005ರಲ್ಲಿ ಇಂದೂರ್ ನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪ್ರಶಸ್ತಿ
 • 2006 ರಲ್ಲಿ ಭಾರತ ಸರಕಾರದ  ಪದ್ಮಶ್ರೀ ಪ್ರಶಸ್ತಿ ನೀಡಿದೆ
 • 2009 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ
 • ಬಸವಶ್ರೀ ಪ್ರಶಸ್ತಿ
 • ತುಮಕೂರು ಮತ್ತು ಗುಲಬರ್ಗ ವಿ.ವಿಯಲ್ಲದೇ ಇನ್ನೂ ಹತ್ತು ಹಲವಾರು ವಿಶ್ವವಿದ್ಯಾನಿಲಯಗಳು ಸುಧಾಮೂರ್ತಿಯವರಿಗೆ ಗೌರವ ಡಾಕ್ಟರೇಟ್‌ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

sudha8ಮಧ್ಯಮ ವರ್ಗದಲ್ಲಿ ಹುಟ್ಟಿ ತನ್ನ ಬುದ್ಧಿ ಶಕ್ತಿ ಮತ್ತು ಕಠಿಣ ಪರಿಶ್ರಮದಿಂದ ಕೋಟ್ಯಾಂತರ ಹಣವನ್ನು ಗಳಿಸಿದರೂ, ಒಂದು ಚೂರೂ ಅದರ ಹಮ್ಮು ಬಿಮ್ಮಿಲ್ಲದೇ, ಸರ್ವೇ ಸಾಮಾನ್ಯರಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ, ಹಣ ಮತ್ತು ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ. ಅದನ್ನು ಅದನ್ನು ಸಮಾಜಕ್ಕೆ ಅರ್ಪಿಸುವುದರಿಂದಲೇ ಸುಖಃ ಸಂತೋಷ ದೊರೆಯುತ್ತದೆ ಎನ್ನುವುದನ್ನು ತಮ್ಮ ಕಾರ್ಯಗಳಿಂದ ಮತ್ತೊಮ್ಮೆ ಮಗದೊಮ್ಮೆ ನಿರೂಪಿಸುತ್ತಿರುವ ಸೌಜನ್ಯದ ಮೂರ್ತಿ ಸುಧಾ ಮೂರ್ತಿಯವರು ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ರಚಿನ್ ರವೀಂದ್ರ

rac1ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ  ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್,  ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ  ಪರ ಆಡಿದ್ದಾರೆ.  ಅವರಲ್ಲರ ನಡುವೆ ರಚಿನ್ ರವೀಂದ್ರ  ವಿಶೇಷವಾಗಿದ್ದು  ಅದರ ಸಂಪೂರ್ಣ ವಿವರಗಳು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

jvaಬೆಂಗಳೂರು ಮೂಲದ ಕ್ಲಬ್ ಕ್ರಿಕೆಟರ್ ಆಗಿದ್ದ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಶ್ರೀ ರವೀಂದ್ರ ಕೃಷ್ಣಮೂರ್ತಿ ಮತ್ತು​ ​ದೀಪಾ ಕೃಷ್ಣಮೂರ್ತಿಯರು  ಉಜ್ವಲ ಭವಿಷ್ಯವನ್ನು ಅರಸುತ್ತಾ 1990ರಲ್ಲಿ ನ್ಯೂಜಿಲ್ಯಾಂಡಿಗೆ ಹೋಗಿ  ಅಂತಿಮವಾಗಿ ಅಲ್ಲಿಯೇ ನೆಲೆಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲದ್ದಕ್ಕಿಂತಲೂ ವಿಶೇಷವೆಂದರೆ,  ಬೆಂಗಳೂರಿನಲ್ಲಿ  ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಮತ್ತು ಕರ್ನಾಟಕದ ತಂಡದ ಮಾಜೀ ನಾಯಕ ಮತ್ತು ಕೋಚ್ ಆಗಿದ್ದ  ಜೆ ಅರುಣ್ ಕುಮಾರ್ (ಜ್ಯಾಕ್) ಅವರೊಂದಿಗೆ  ಸ್ಥಳೀಯ ಕ್ರಿಕೆಟ್ ಆಡಿದ್ದ ರವೀಂದ್ರ ಕೃಷ್ಣಮೂರ್ತಿ ಅವರು  ನ್ಯೂಜಿಲೆಂಡ್ ನಲ್ಲಿಯೂ ಸಹಾ ಕ್ರಿಕೆಟ್ಟಿಗೆ ಉತ್ತಮವಾದ ಪ್ರೋತ್ಸಾಹವಿದ್ದದ್ದರಿಂದ ವಿಲ್ಲಿಂಗ್ಟನ್ನಿನಲ್ಲಿ ಹಟ್ ಹಾಕ್ಸ್ ಎಂಬ ಕ್ರಿಕೆಟ್ ಕ್ಲಬ್‌ವೊಂದನ್ನು ಆರಂಭಿಸಿ ಅಲ್ಲಿನ ಪುಟ್ಟ ಮಕ್ಕಳಿಗೆ ತರಭೇತಿಯನ್ನು ನೀಡುತ್ತಲೇ ತಮ್ಮ ಕ್ರಿಕೆಟ್ ದಾಹವನ್ನು ನೀಗಿಸಿಕೊಳ್ಳುತ್ತಿರುತ್ತಾರೆ. 18 ನವೆಂಬರ್ 1999 ರಂದು ರವೀಂದ್ರ ದಂಪತಿಗಳ ಬಾಳಿನಲ್ಲಿ ಮಗನೊಬ್ಬ ಆಗಮನವಾಗುತ್ತದೆ.

sachinತಮ್ಮ ಮುದ್ದಿನ ಮಗನಿಗೆ ರಚಿನ್ ಎಂದು ವಿಭಿನ್ನವಾಗಿ ಹೆಸರಿಟ್ಟಾಗ ಹುಬ್ಬೇರಿಸಿದವರಿಗೇನು ಕಡಿಮೆ ಇಲ್ಲ,  ಆದರೆ ಆ ಹೆಸರಿನ ಹಿಂದಿನ ಗೂಢಾರ್ಥ ಮತ್ತು ಭಾವಾರ್ಥಗಳನ್ನು ತಿಳಿದ ನಂತರ ಎಲ್ಲರೂ ಸಮಾಧಾನ ಪಟ್ಟುಕೊಳ್ಳುತ್ತಾರೆ.  ಹೌದು, ರವೀಂದ್ರ ಕೃಷ್ಣಮೂರ್ತಿಗಳು ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದ ದಂತಕಥೆಯಾದ  ರಾಹುಲ್ ದ್ರಾವಿಡ್ ಮತ್ತು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳಲ್ಪಡುವ ಸಚಿನ್ ತೆಂಡೂಲ್ಕರ್  ಅವರ ಅಪ್ಪಟ ಅಭಿಮಾನಿ. ಹಾಗಾಗಿ ರವೀ ಅವರು  ರಾಹುಲ್ ದ್ರಾವಿಡ್ ಹೆಸರಿನ “ರ” (RA) ಮತ್ತು ಸಚಿನ್ ಹೆಸರಿನ “ಚಿನ್” (CHIN) ಎರಡನ್ನೂ ಸೇರಿಸಿ ರಚಿನ್ ಎಂದು ಹೆಸರಿಟ್ಟಿದ್ದರು, ಈಗ ಅದೇ ರಚಿನ್ ಬೆಳೆದು ದೊಡ್ಡವನಾಗಿ ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾಗಿ ಭಾರತ ತಂಡದ ಪರ ಅದರಲ್ಲೂ ಭಾರತದಲ್ಲೇ ಸರಣಿಯನ್ನು ಆಡುತ್ತಿರುವುದು ಹೆಚ್ಚಿನ ವಿಶೇಷವಾಗಿದೆ.

ra4ಮನೆಯಲ್ಲಿ ಕ್ರಿಕೆಟ್ ವಾತಾವರಣವಿದ್ದ ಕಾರಣ ರಚಿನ್ ಸಹಾ ತನ್ನ ತಂದೆಯಂತೆಯೇ ಕ್ರಿಕೆಟ್ಟಿನಲ್ಲಿ ಆಸಕ್ತಿ ಬೆಳಸಿಕೊಂಡು ತನ್ನ ತಂದೆಯ ಹಾದಿಯಲ್ಲೇ ಸಾಗಿದರು. ಬಾಲ್ಯದಿಂದಲೇ ತಮ್ಮದೇ ಆದ ಹಟ್ ಹಾಕ್ಸ್ ಕ್ಲಬ್ಬಿನಲ್ಲಿಯೇ ತರಭೇತಿಯನ್ನು ಆರಂಭಿಸಿ ನಂತರ ನ್ಯೂಜಿಲೆಂಡ್​ನಲ್ಲಿ ಪ್ರತಿಷ್ಠಿತ ಕ್ರಿಕೆಟ್ ಕ್ಪಬ್ಬುಗಳಲ್ಲಿ ಟ್ರೈನಿಂಗ್  ಪಡೆಯಲು ಆರಂಭಿಸಿದರು. ಬೇಸಿಗೆ ಸಮಯ ಚಿಕ್ಕಾಗಲೆಲ್ಲಾ ಭಾರತಕ್ಕೆ ಬಂದು ಇಲ್ಲಿಯೂ ಸಹಾ ಕ್ರಿಕೆಟ್ ಅಭ್ಯಾಸ ಮಾಡುತ್ತಾ ಸಾಂಪ್ರದಾಯಿಕ ಎಡಗೈ ಸ್ಪಿನ್ನರ್ ಆಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಹೊಡೀ ಬಡೀ ಎನ್ನುವ ಎಡಗೈ ದಾಂಡಿಗರಾಗಿ ರೂಪುಗೊಂಡಿದ್ದಲ್ಲದೇ, ತಮ್ಮ ಪ್ರತಿಭೆಯಿಂದಾಗಿ ರಚಿನ್ ಕಿವೀಸ್​ ಕಿರಿಯರ ತಂಡದಲ್ಲಿ ಸ್ಥಾನ ಪಡೆದು 2016ರ ಮತ್ತು 2018 ರ ಅಂಡರ್ -19 ಕ್ರಿಕೆಟ್  ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸುತ್ತಾರೆ.  ಈಗಾಗಲೇ ತಿಳಿಸಿದಂತೆ ತಮ್ಮ ತಂದೆಯವರ ಒಡನಾಡಿ  ಜಾವಗಲ್ ಶ್ರೀನಾಥ್ ಮತ್ತು ಅರುಣ್ ಕುಮಾರ್  ಅವರ ಜೊತೆ ಸಂಪರ್ಕದಲ್ಲಿ ಇದ್ದು ಅವರಿಂದಲು  ಆಗ್ಗಾಗ್ಗೆ ಕ್ರಿಕೆಟ್ ಸಲಹೆಗಳನ್ನು ಪಡೆದು ಉತ್ತಮ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.

rac2ಕಳೆದ ನಾಲ್ಕು ವರ್ಷಗಳಿಂದ ಆಂಧ್ರದ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ ಮತ್ತು ರವೀಂದ್ರ ಅವರ ಹಟ್ ಹಾಕ್ಸ್ ಕ್ಲಬ್  ನಡುವಿನ ಒಪ್ಪಂದದಂತೆ ರಚಿನ್ ರವೀಂದ್ರ  ಪ್ರತಿ ವರ್ಷವೂ ಭಾರತದಲ್ಲಿ ಈ ಕ್ಲಬ್ಬಿಗ್ಗೆ ಬಂದು ತರಭೇತಿ ಪಡೆಯುತ್ತಿರುವುದಲ್ಲದೇ ಆ ತಂಡದ ಪರವಾಗಿ  ಕ್ರಿಕೆಟ್ ಆಡುತ್ತಿರುವುದು ವಿಶೇಷವಾಗಿದೆ. ರಚಿನ್ ಒಬ್ಬ ಭರವಸೆಯ ಯುವ ಕ್ರಿಕೆಟಿಗನಾಗಿದ್ದು  ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ ಆಗಿ ದೀರ್ಘ ಕಾಲದ ವರೆಗೂ ಮಿಂಚುವ ಭರವಸೆ ಇದೆ ಎಂದು  ಆಂಧ್ರಪ್ರದೇಶ ಕ್ರಿಕೆಟ್ ಅಕಾಡೆಮಿಯ ಕೋಚ್‌ಗಳಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್ ಅವರು ಹೇಳುತ್ತಾರೆ.

ra3ಇಷ್ಟೆಲ್ಲಾ ಭರವಸೆಯನ್ನು ಮೂಡಿಸಿದ್ದ ರಚಿನ್ ಕಳೆದ ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಹಿರಿಯರ ತಂಡದಲ್ಲಿ ಅವಕಾಶ ಲಭಿಸಿತ್ತದೆ. ಇದುವರೆವಿಗೂ ನ್ಯೂಜಿಲೆಂಡ್ ಪರ 6 ಟಿ20 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿರುವುದಲ್ಲದೇ ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡಲು  ಸಿಕ್ಕ ಅವಕಾಶವನ್ನು ಉಪಯೀಗಿಸಿಕೊಂಡು ಇದುವರೆವಿಗೂ 47 ರನ್ ಬಾರಿಸುವ ಮೂಲಕ ಭರವಸೆಯ ಆಲ್ರೌಂಡರ್ ಆಗುವ ಲಕ್ಷಣವನ್ನು ಸಾಭೀತು ಪಡಿಸಿದ್ದಾನೆ. ಸಚಿನ್ ತೆಂಡೂಲ್ಕರ್ ಅವರನ್ನು ತನ್ನ ಬ್ಯಾಟಿಂಗ್ ಆರಾಧ್ಯ ದೈವ ಎಂದು ಉಲ್ಲೇಖಿಸಿರುವ ರಚಿನ್ ಅವರ ಆಟವನ್ನು ನೋಡುತ್ತಲೇ  ಬೆಳೆದ ನನಗೆ ಆಟವನ್ನು ಮುಂದುವರೆಸುತ್ತಲೇ ಹೋದಂತೆ ಸಚಿನ್ ಅವರ ಬಗ್ಗೆ ನನ್ನ ಅಭಿಮಾನವೂ ಬೆಳೆಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ra5ಭಾರತದ ವಿರುದ್ಧ ಮೊದಲ ಟಿ೨೦ ಪಂದದಲ್ಲಿ ನ್ಯೂಜಿಲೆಂಡ್ ಪರ 6ನೇ ಕ್ರಮಾಂಕದಲ್ಲಿ ಅಂತಿಮ ಓವರ್ನಲ್ಲಿ ಕಣಕ್ಕಿಳಿದ ಎಡಗೈ ಆಟಗಾರ ರಚಿನ್ 7 ರನ್​ಗಳಿಸಿದ್ದಾಗ ಮೊಹಮ್ಮದ್ ಸಿರಾಜ್​ ಎಸೆತದಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.  ತಂಡದಲ್ಲಿ ಸಾಕಷ್ಟು ಆಲ್ರೌಂಡರ್ಗಳು ಇರುವ ಕಾರಣ ಬೋಲಿಂಗ್ ಮಾಡಲು ಅವಕಾಶ ಸಿಗದಿದ್ದರೂ ಅತ್ಯುತ್ತಮವಾದ  ಕ್ಷೇತ್ರ ರಕ್ಷಣೆ ಮಾಡುವ ಮೂಲಕ ಪಂದ್ಯದುದ್ದಕ್ಕೂ ಗಮನ ಸೆಳೆಯುವ ಮೂಲಕ  ಅರೇ ಯಾರೀ ರಚಿನ್ ಎಂಬ ಕುತೂಹಲ ಮೂಡಿಸಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾಗ, ಆತ ನಮ್ಮ ಹೆಮ್ಮೆಯ ಕನ್ನಡಿಗ ಎಂದು ತಿಳಿದ ನಂತರವೇ ಈ ಲೇಖನಕ್ಕೆ ಪ್ರೇರಣಾದಾಕನಾಗಿರುವುದು ಗಮನಾರ್ಹ.

ಒಟ್ಟಿನಲ್ಲಿ ಇದುವರೆವಿಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಹಲವಾರು ಭಾರತೀಯ ಮೂಲದ ಆಟಗಾರರನ್ನು ನೋಡಿದ್ದ ನಮಗೆ  ಇದೀಗ ಬೆಂಗಳೂರು ಮೂಲದ ಕನ್ನಡಿಗನೇ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವುದು  ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.  ಕ್ರಿಕೆಟ್ ಆಟಗಾರರಾಗ ಬೇಕು ಎಂದು ಕನಸನ್ನು ಕಂಡಿದ್ದ ರವೀಂದ್ರ ಅವರಿಗೆ ಇದೀಗ ಅವರ ಮಗ  ಅಂತರಾಷ್ಟ್ರೀಯ ಆಟಗಾರನಾಗಿ ಈಡೇರಿಸುತ್ತಿರುವುದು ಅದರಲ್ಲೂ ನ್ಯೂಜಿಲೆಂಡ್ ಪರ ನಮ್ಮೂರಿನ ಹುಡುಗ ಆಡುತ್ತಿದ್ದಾನೆ ಎಂಬುದೇ ಪ್ರತಿಯೊಬ್ಬ ಕನ್ನಡಿಗರಿಗೂ ವಿಶೇಷವಾಗಿದೆ. ಎಲ್ಲೇ ಇರು ಹೇಗೇ ಇರು, ಎಂದೆದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯಾ.. ಕನ್ನಡವೇ ನಿತ್ಯ ಎನ್ನುವಂತೆ ತನ್ನ ಪ್ರತಿಭೆಯ ಮೂಲಕ ವಿಶ್ವ ಕ್ರಿಕೆಟ್ಟಿನಲ್ಲಿ  ಕನ್ನಡದ ಕಂಪನ್ನು ಹರಡುತ್ತಿರುವ ರಚಿನ್ ರವೀಂದ್ರ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ