ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ.

ಪ್ರತಿವರ್ಷ ಯುಗಾದಿ ಹಬ್ಬ ಕಳೆದ ನಂತರ ಹಾಸನ ಜಿಲ್ಲೆಯ ಸರಿಸುಮಾರು ಹಳ್ಳಿಗಳಲ್ಲಿ ಹಬ್ಬದ ವಾತಾವರಣ. ಸಂಕ್ರಾಂತಿಯ ಸುಗ್ಗಿ ಕಳೆದು, ಬೆಳೆದ ಫಸಲನ್ನು ಹದ ಮಾಡಿ ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು ಹೆಚ್ಚಾಗಿದ್ದನ್ನು ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಇಟ್ಟು ಕೊಂಡಿರುತ್ತಾರೆ. ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ನೀರಾವರಿಯ ಸೌಲಭ್ಯವಿಲ್ಲದ ಕಾರಣ ಹೆಚ್ಚಾಗಿ ಮಳೆಯ ನೀರನ್ನೇ ಆಶ್ರಯಿಸಿ ತಮ್ಮ ತಮ್ಮ ಜಮೀನಿನಲ್ಲಿ ಮುಂದಿನ ಬೇಸಾಯಕ್ಕೆ ಹದಗೊಳಿಸಲು ಮಳೆಯನ್ನೇ ಕಾಯುತ್ತಿರುವ ಸಂದರ್ಭದಲ್ಲಿ ತುಸು ವಿಶ್ರಾಂತರಾಗಿರುತ್ತಾರೆ. ಇಂದಿನ ಕಾಲದಂತೆ ಅಂದೆಲ್ಲಾ ದೂರದರ್ಶನ, ಚಲನಚಿತ್ರಗಳಂತಹ ಮನೋರಂಜನೆ ಇಲ್ಲದಿದ್ದ ಕಾಲದಲ್ಲಿ, ನಮ್ಮ ಪೂರ್ವಿಕರು ರಾಮನವಮಿ, ರಾಮಸಾಮ್ರಾಜ್ಯ ಪಟ್ಟಾಭಿಷೇಕ, ಹನುಮದ್ಜಯಂತಿ ಇಲ್ಲವೇ ಊರ ಹಬ್ಬಗಳ ಮುಖಾಂತರ ಎಲ್ಲರನ್ನೂ ಒಗ್ಗೂಡಿಸಿ ಅವರ ಮನಮುದಗೊಳಿಸುವಂತಹ ಭಜನೆ, ಸಂಗೀತ ಕಾರ್ಯಕ್ರಮಗಳು, ಹರಿಕಥೆ ಮತ್ತು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಸತ್ಸಂಪ್ರದಾಯವಿದೆ.

ಆದರಂತೆ ನನ್ನೂರು ಬಾಳಗಂಚಿ ಮತ್ತು ಸುತ್ತಮತ್ತಲಿನ ಹೊನ್ನಶೆಟ್ಟ ಹಳ್ಳಿ, ಹೊನ್ನಾದೇವಿಹಳ್ಳಿ, ಬ್ಯಾಡರಹಳ್ಳಿ, ಗೌಡರಹಳ್ಳಿ, ಅಂಕನಹಳ್ಳಿ, ಕಬ್ಬಳಿ, ಮೂಕಿಕೆರೆ ಮುಂತಾದ ಹದಿನಾರು ಊರುಗಳಲ್ಲಿ ಯುಗಾದಿ ಹಬ್ಬ ಕಳೆದ ನಂತರದ ಸುಮಾರು ಮೂರುವಾರಗಳ ಕಾಲ ಹಬ್ಬದ ಸಂಭ್ರಮದ ವಾತಾವರಣ. ಯುಗಾದಿ ಮುಗಿದ ಮೊದಲನೇ ಗುರುವಾರ ಸಾರಣೇ ಹಬ್ಬದ (ಮೊದಲನೇ ಕಂಬ) ಮುಖಾಂತರ ಹಬ್ಬದ ಸಂಭ್ರಮ ಶುರುವಾಗುತ್ತದೆ. ಅಂದಿನ ದಿನ ಊರಿನ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಶುಚಿಗೊಳಿಸುವುದರ ಮೂಲಕ ಇಡೀ ಊರನ್ನೂ ಶುಚಿಗೊಳಿಸಿ ಊರಿನ ಅಷ್ಟದಿಕ್ಕುಗಳಲ್ಲಿಯೂ ಮಾವಿನ ತಳಿರು ತೋರಣ ಕಟ್ಟುವ ಮೂಲಕ ಊರಿಗೆ ಹಬ್ಬದ ಕಳೆಯನ್ನು ಕಟ್ಟುತ್ತಾರೆ. ಅಂದು ಇಡೀ ಗ್ರಾಮಸ್ಥರು, ಗ್ರಾಮದೇವತೆ ಹೊನ್ನಾದೇವಿ ದೇವಾಲಯದ ಅರ್ಚಕರು ಮತ್ತು ಅರೆ, ಡೊಳ್ಳು. ತಮಟೆ ಮತ್ತು ನಾದಸ್ವರ ವಾದಕರೊಂದಿಗೆ ಊರಿನ ಈಶಾನ್ಯದಿಕ್ಕಿನಲ್ಲಿ ಸಂಪ್ರದಯದಂತೆ ಪೂಜೆ ಮಾಡಿ ಅಲ್ಲಿಂದ ಕೆಮ್ಮಣ್ಣು ತಂದು ಊರಿನ ದೇವಾಯವನ್ನು ಶುಚಿಗೊಳಿಸಿ ಸುದ್ದೆ ಕೆಮ್ಮಣ್ಣು ಸಾರಿಸಿ ಅಲಂಕರಿಸುವ ಮೂಲಕ ಅಧಿಕೃತವಾಗಿ ಊರ ಹಬ್ಬಕ್ಕೆ ನಾಂದಿ ಹಾಡಲಾಗುತ್ತದೆ. ಹಾಗೆ ಅಷ್ಟ ದಿಕ್ಕುಗಳಲ್ಲಿ ತೋರಣ ಕಟ್ಟಿದ ಮೇಲೆ ಊರಿನಲ್ಲಿ ಯಾವುದೇ ಮಡಿ ಮೈಲಿಗೆಗಳು ಆಗದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಹಬ್ಬ ಮುಗಿಯುವ ವರೆಗೂ ಇಡೀ ಊರಿನ ಒಳಗೆ ಯಾರೂ ಪಾದರಕ್ಷೆಗಳನ್ನು ಧರಿಸಿ ಓಡಾಡುವಂತಿಲ್ಲ ಮತ್ತು ಮಾಂಸಾಹಾರ ಸೇವಿಸುವಂತಿಲ್ಲ. ಅಂದಿನಿಂದ ಊರ ಹಬ್ಬ ಮುಗಿಯುವವರೆಗೂ ಪ್ರತೀ ದಿನ ಸಂಜೆ, ರಂಗ ಮಂಟಪದ ಹಿಂದೆ ಅಂದರೆ ಊರ ಒಳಗಿನ ಹೊನ್ನಮ್ಮನ ಗುಡಿಯ ಮುಂದೆ ಊರಿನ ಎಲ್ಲಾ ಗಂಡು ಮಕ್ಕಳು ಮತ್ತು ಹಿರಿಯರಾದಿ ತಮಟೆಗಳ ತಾಳಕ್ಕೆ ವಿಶೇಷ ಗತ್ತಿನಿಂದ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ರಂಗ ಕುಣಿಯುತ್ತಾರೆ. ತಮ್ಮ ಊರಿನ ಗಂಡಸರು ಮತ್ತು ಮಕ್ಕಳು ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ರಂಗ ಕುಣಿಯುವುದನ್ನು ನೋಡಲು ಊರ ಹೆಂಗಸರು ಮಕ್ಕಳು ಸುತ್ತುವರಿದಿರುವುದನ್ನು ವರ್ಣಿಸುವುದಕ್ಕಿಂತ ಕಣ್ತುಂಬ ನೋಡಿ ಆನಂದಿಸಬೇಕು.

ಇನ್ನು ಯುಗಾದಿ ಮುಗಿದ ಎರಡನೇ ಗುರುವಾರ ಚಪ್ಪರ ಶಾಸ್ತ್ರ (ಎರಡನೇ ಕಂಬ)ದ ಹಬ್ಬ. ಅಂದು ಊರಿನ ಒಳಗಿರುವ ಹೊನ್ನಾದೇವಿ ಉತ್ಸವ ಮೂರ್ತಿಯ ಗುಡಿ ಮತ್ತು ಊರಿನ ಮಧ್ಯಭಾಗದಲ್ಲಿರುವ ರಂಗ ಮಂಟಪಗಳನ್ನು ಶುಚಿಗೊಳಿಸಿ ಅದರ ಮುಂದೆ ಚಪ್ಪರವನ್ನು ಹಾಕುತ್ತಾರೆ ಮತ್ತು ಹಸಿರು ಹೊನ್ನಮ್ಮ ಮತ್ತು ಚೋಮಗಳನ್ನು ಗದ್ದಿಗೆ ಮೇಲೆ (ಪಟ್ಟಕ್ಕೆ) ಕೂರಿಸಿ ಅಂದು ಊರಿನ ಕುಂಬಾರರು ಹೊಸದಾಗಿ ತರಾರು ಮಾಡಿದ ಎರಡು ಮಡಿಕೆಗಳಲ್ಲಿ, ರಾಗಿ, ಭತ್ತ , ಹುರಳೀ, ಅವರೇ, ಹುಚ್ಚೆಳ್ಳು ಮುಂತಾದ ಕಾಳು ಮತ್ತು ಧ್ಯಾನ್ಯಗಳನ್ನು ಬಿತ್ತಲಾಗುತ್ತದೆ ಮತ್ತು ಇಡೀ ರಾತ್ರಿ ನಾಲ್ಕು ಜಾಮಗಳ ಪೂಜಾವಿಧಿವಿಧಾನಗಳು ನೆರೆವೇರುತ್ತದೆ.

ಇನ್ನು ಎರಡನೇ ಕಂಬ ಮುಗಿದ ಎರಡು ದಿನ ಕಳೆದ ನಂತರದ ಶನಿವಾರವೇ ಚೋಮನ ಹಬ್ಬ. ಹಬ್ಬಕ್ಕೆ ಎರಡು ದಿನಗಳ ಮುಂಚೆಯೇ ರಂಗ ಮಂಟಪದ ಮೇಲಿನ ಕಳಶವನ್ನು ತೆಗೆದು ಅದನ್ನು ಚೆನ್ನಾಗಿ ಶುಚಿಗೊಳಿಸಲಾಗಿರುತ್ತದೆ. ಚೋಮನ ಹಬ್ಬದ ಸಂಜೆ ಸೂರ್ಯಾಸ್ತಕ್ಕೆ ಸರಿಯಾಗಿ ಬಾಜಾಭಜಂತ್ರಿಯ ಸಮೇತ ಹೊನ್ನಾದೇವಿಯ ಅರ್ಚಕರು ರಂಗ ಮಂಟಪಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಎಲ್ಲರ ಸಮ್ಮುಖದಲ್ಲಿ ರಂಗಮಂಟಪ ಶಿಖರಮೇಲೆ ಕಳಸವನ್ನು ಇಡುವುದರ ಮೂಲಕ ಚೋಮನ ಹಬ್ಬಕ್ಕೆ ಚಾಲನೆ ಕೊಡುತ್ತಾರೆ.

ರಂಗ ಮಂಟಪಕ್ಕೆ ಕಳಶ ಇಡುತ್ತಿದ್ದಂತೆಯೇ, ಹಿಂದೆಲ್ಲಾ ಎತ್ತಿನಗಾಡಿಗಳು ಇರುತ್ತಿದ್ದವು ಈಗ ಟ್ರಾಕ್ಟರ್ ಮೇಲೆ ಪಲ್ಲಕ್ಕಿಯನ್ನು ಕಟ್ಟಲು ಅರಂಭಿಸಿದರೆ, ಊರಿನ ದೊಡ್ಡ ಹಟ್ಟಿಯಲ್ಲಿ ( ಹರಿಜನರ ಕೇರಿಯಲ್ಲಿ ) ಹೆಬ್ಬಾರಮ್ಮ ಮತ್ತು ಚಾವಟಿಯಮ್ಮನ ಪೂಜೆ ಶುರುವಾಗಿರುತ್ತದೆ (ಈ ಕುರಿತು ವಿಸ್ತೃತವಾಗಿ ಮತ್ತೊಂದು ಲೇಖನದಲ್ಲಿ ತಿಳಿಸುತ್ತೇನೆ). ಅದೇ ರೀತಿ ಎರಡನೇ ಕಂಬದ ದಿನ ಪಟ್ಟಕ್ಕೆ ಕೂರಿಸಿದ್ದ ಚೋಮನನ್ನು ಹೊರಲು ಊರಿನ ಅಕ್ಕಸಾಲಿಗರ ಕುಟುಂಬದ ಒಬ್ಬ ಸದಸ್ಯ ಮತ್ತು ಮತ್ತೊಂದು ಚೋಮನನ್ನು ಹೊರಲು ಸವಿತಾ ಜನಾಂಗ (ಕ್ಷೌರಿಕರು)ದ ಒಬ್ಬ ಸದಸ್ಯ ಇಡೀ ದಿನ ಮಡಿಯಿಂದ ಹೊಸದಾದ ಶುಭ್ರ ವೇಷಧಾರಿಗಳಾಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಿದ್ದರಾಗಿರುತ್ತಾರೆ. ಊರಿನ ಹೊನ್ನಾದೇವಿಯ ಒಕ್ಕಲಿನ ಪ್ರತೀ ಮನೆಯವರೂ ಶ್ರಧ್ದೆಯಿಂದ ದೇವಸ್ಥಾನಕ್ಕೆ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇಷ್ಟೆಲ್ಲಾ ಸಿದ್ಧವಾಗುವ ವೇಳೆಗೆ ಗಂಟೆ ರಾತ್ರಿ ಹನ್ನೆರಡು ಘಂಟೆಯಾಗಿರುತ್ತದೆ . ಅಷ್ಟು ಹೊತ್ತಿಗೆ ಅಕ್ಕ ಪಕ್ಕದ ಊರಿನವರೆಲ್ಲರೂ ಊಟ ಮುಗಿಸಿ ದೇವಸ್ಧಾನದ ಸುತ್ತ ಮುತ್ತ ಸೇರಲಾರಂಭಿಸಿರುತ್ತಾರೆ. ಹೆಂಗಳೆಯರು ಸೋಬಾನೇ ಹಾಡುತ್ತಿದ್ದರೆ ಇನ್ನು ಮಕ್ಕಳು ಜಾತ್ರೆಯ ಬೆಂಡು ಬತ್ತಾಸು ಈಗ ಗೋಬಿ ಮಂಚೂರಿ ತಿನ್ನುವುದರಲ್ಲಿ ಮಗ್ನರಾಗಿರುತ್ತಾರೆ. ಗಂಡು ಮಕ್ಕಳೆಲ್ಲಾ ದೊಡ್ಡ ಹಟ್ಟಿಯ ಮುಂದೆ ಚಾವಟೀ ಅಮ್ಮನ ಬರುವಿಕೆಗಾಗಿಯೇ ಕಾದು ನಿಂತು, ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುತ್ತಿರುತ್ತಾರೆ. ಅಷ್ಟು ಹೊತ್ತಿಗೆ, ಪಲ್ಲಕ್ಕಿಯ ಅಲಂಕಾರಮುಗಿದು, ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ನಾನಾ ರೀತಿಯ ಪುಷ್ಪಾಲಂಕಾರದಿಂದ ಅಲಂಕರಿಸಿ ಮೆರವಣಿಗೆ ಸಿದ್ದಗೊಳಿದ ತಕ್ಷಣ, ಊರಿನ ಮಡಿವಾಳರ ಹಿರಿಯ ಸದಸ್ಯ, ಸರ್ವೇ ಮರದ ತುಂಡಿಗೆ ಬಟ್ಟೆಯನ್ನು ಚೆನ್ನಾಗಿ ಸುತ್ತಿ ಅದನ್ನು ಎಣ್ಣೆಯಡಬ್ಬದಲ್ಲಿ ಅದ್ದಿ ಪತ್ತನ್ನು (ಪಂಜು) ಸಿದ್ದಗೊಳಿಸಿಕೊಂಡು ಉತ್ಸವ ಮೂರ್ತಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪತ್ತಿನಿಂದ ಆರತಿ ಬೆಳಗುತ್ತಿದ್ದಂತೆ ಅರ್ಚಕರು ಉತ್ಸವ ಮೂರ್ತಿಗೆ ಮಂಗಳಾರತಿ ಮಾಡುವ ಮೂಲಕ ಉತ್ಸವಕ್ಕೆ ಅಧಿಕೃತವಾಗಿ ಸಿದ್ದತೆ ದೇವರಿಗೆ ಸುಮಾರು ಮಧ್ಯರಾತ್ರಿ ಒಂದು ಗಂಟೆಯ ಹೊತ್ತಿಗೆ ಢಂ ಎಂದು ದೊಡ್ಡ ಹಟ್ಟಿಯ ಹೆಬ್ಬಾರಮ್ಮನ ಗುಡಿಯಿಂದ ಶಬ್ಧ ಬಂದಿತೆಂದರೆ ಸಾಕು ಇಡೀ ಊರು ಊರಿಗೇ ವಿದ್ಯುತ್ ಸಂಚಾರವಾದ ಹಾಗೆ ಆಗಿ ಎಲ್ಲರೂ ದಡಾ ಬಡಾ ಎಂದು ಎದ್ದು ನಿಂತು ಚಾವಟೀ ಅಮ್ಮನ ಬರುವಿಕೆಗಾಗಿ ಸಿದ್ಧರಾಗುತ್ತಾರೆ. ಜ್ವಾಲಾರ ಹೂವಿನಿಂದ ಅಲಂಕೃತಳಾದ ಚಾವಟೀ ಅಮ್ಮನನ್ನು ಎದೆಯ ಮೇಲೆ ಧರಿಸಿರುವ ಪೂಜಾರಿಯನ್ನು ನಾಲ್ಕಾರು ಜನ ಹಿಂದಿನಿಂದ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರೂ ಕಳೆದ ಹದಿನೈದು ದಿನಗಳಿಂದ ಕೇವಲ ದೇವಸ್ಥಾನದ ಮೂರು ಪಿಡಿಚೆ ಪ್ರಸಾದ ತಿಂದು ಬಹಳ ಶ್ರಧ್ಧಾ ಭಕ್ತಿಯಿಂದ ಇದ್ದರೂ, ಮೈಮೇಲೆ ಧರಿಸಿರುವ ದೇವಿಯ ಪ್ರಭಾವವೋ, ದೋಣ್ ಮತ್ತು ಡೊಳ್ಳಿನ ಶಬ್ಧಕ್ಕೋ ಅಥವಾ ಊರ ಗಂಡು ಮಕ್ಕಳ ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುವಿಕೆಯ ಪ್ರಭಾವವೋ ಎನೋ? ಕೈಯಲ್ಲಿ ಬೆಳ್ಳಿಯ ರೇಕನ್ನು ಸುತ್ತಿದ ನಾಗರ ಬೆತ್ತವನ್ನು ಹಿಡಿದು ಝಳುಪಿಸುತ್ತಾ ಆರ್ಭಟದಿಂದ ದೊಡ್ಡ ಹಟ್ಟಿ ಬಿಟ್ಟು ಹೊನ್ನಮ್ಮನ ಗುಡಿಯ ಬಳಿ ಬರುತ್ತಿದ್ದರೆ ಎಲ್ಲರೂ ಎದ್ದೆನೋ ಬಿದ್ದೆನೋ ಎಂದು ದಿಕ್ಕಾಪಲಾಗಿ ದೇವಸ್ಥಾನದ ಮುಂದಕ್ಕೆ ಓಡಿ ಹೋಗಿ ಹೊನ್ನಮ್ಮನ್ನ ದೇವಾಲಯದ ಮುಂದೆ ರಪ್ ರಪ್ ರಪ್ ಎಂದು ನೂರಾರು ತೆಂಗಿನ ಕಾಯಿಯ ಈಡುಗಾಯಿ ಹಾಕಿ ಚಾವಟಿ ಅಮ್ಮನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರೆ, ಉಳಿದವರು ಅಲ್ಯೋ ಅಲ್ಯೋ ಅಲ್ಯೋ ಎಂದು ಮತ್ತಷ್ಟೂ ಹುರಿದುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ಪ್ರೇರೇಪಿತವಾಗಿ ಕೆಲವೊಂದು ಬಾರಿ ಚಾವಟಿ ಅಮ್ಮ ಜನರ ಮೇಲೆ ಏರಿ ಹೋಗಿ ತನ್ನ ಬೆತ್ತದಿಂದ ಬಾರಿಸುವುದೂ ಉಂಟು. ಒಮ್ಮೆ ಹಾಗೆ ಯಾರಿಗಾದರೂ ಚಾವಟಿ ಅಮ್ಮನಿಂದ ಪೆಟ್ಟು ಬಿದ್ದಿತೆಂದರೆ ಆತನೋ ಇಲ್ಲವೇ ಆಕೆಯೋ ಎನೋ ತಪ್ಪು ಮಾಡಿರಬೇಕು ಇಲ್ಲವೇ ಮಡಿ ಮೈಲಿಗೆ ಇಲ್ಲವೇ ಆಚಾರ ವಿಚಾರಗಳಲ್ಲಿ ಲೋಪ ಎಸಗಿರಬೇಕೆಂಬ ಭಾವನೆ ಊರಿನವರಿಗಿದ್ದು ಹಾಗೆ ಪೆಟ್ಟು ತಿಂದವರು ನಂತರ ದೇವರಲ್ಲಿ ಕ್ಷಮಾಪಣೇ ಬೇಡುವ ಪರಿಪಾಠವಿದೆ.

ಹಾಗೆ ಈಡುಗಾಯಿಯಿಂದ ಶಾಂತವಾದ ಚಾವಟಿ ಅಮ್ಮಾ ಹೊನ್ನಾದೇವಿಯ ಗುಡಿಯ ಮುಂದೆ ನಿಂತು ಆರತಿ ಮಾಡಿಸಿಕೊಂಡು ಅದರ ಮುಂದೆ ಆ ಇಬ್ಬರೂ ಚೋಮನ ವೇಷಧಾರಿಗಳು ಮತ್ತು ಹಸಿರು ಮುಖ ಹೊತ್ತ ಹೊನ್ನಮ್ಮ ಸಹಿತ ಹಿಮ್ಮುಖವಾಗಿ ನಡೆದುಕೊಂಡು ಊರ ಮುಂದಿನ ಅರಳೀ ಕಟ್ಟೆಯತ್ತ ಸಾಗಿದರೆ, ಅದರೆ ಹಿಂದೆಯೇ ಸರ್ವಾಲಂಕೃತವಾದ ಪಲ್ಲಕ್ಕಿ ಸಾಗುತ್ತದೆ. ಊರ ತುಂಬಾ ಬಣ್ಣ ಬಣ್ಣದ ಸೀರಿಯಲ್ ಸೆಟ್ ಮತ್ತು ನಾನಾ ರೀತಿಯ ದೇವಾನು ದೇವತೆಗಳಿಂದ ಕಂಗೊಳಿಸುತ್ತಿರುತ್ತದೆ. ಹಬ್ಬಕ್ಕೆಂದೇ ವಿಶೇಷವಾಗಿ ನುಗ್ಗೇಹಳ್ಳಿಯಿಂದ ಮನೆಯಲ್ಲಿಯೇ ಪಟಾಕಿ ತಯಾರಿಸಿಕೊಂಡು ಬರುವ ಸಾಬರು ನಾನಾ ರೀತಿಯ ಬಾಣ ಬಿರುಸಿಗಳನ್ನು ಗಗನಕ್ಕೇರಿಸುತ್ತಾ , ನಾನಾ ರೀತಿಯ ಬಾಂಬ್ಗಳನ್ನು ಸಿಡಿಸುತ್ತಾ ಊರ ಹಬ್ಬಕ್ಕೆ ವಿಶೇಷ ಮೆರಗನ್ನು ತರುತ್ತಾರೆ.

ಹೀಗೆ ನಿಧಾನವಾಗಿ ತಮಟೆ, ನಾದಸ್ವರದೊಂದಿಗೆ ಊರ ಮುಂದಿನ ಅರಳಿಕಟ್ಟೆಯ ಬಳಿ ತಲುಪಿ ಅಲ್ಲಿ ಮಳೆ ಬೆಳೆ ಶಾಸ್ತ್ರ ಕೇಳುವ ಪರಿಪಾಠವಿದೆ. ಎರಡನೆಯ ಕಂಬದ ದಿನ ದೇವಸ್ಥಾನದಲ್ಲಿ ಮಡಕೆಯಲ್ಲಿ ಬಿತ್ತನೆ ಮಾಡಿದ್ದ ಧವಸ ಧಾನ್ಯಗಳ ಚಿರುರುವಿಕೆಯ ಮೇಲೆ ಆ ವರ್ಷದ ಊರಿನ ಬೆಳೆ ಅವಲಂಭಿವಾಗಿರುತ್ತದೆ ಎಂಬ ನಂಬಿಕೆ ಊರಿನ ಜನರಿಗಿರುತ್ತದೆ. ಅಲ್ಲಿ ಮಳೆ ಬೆಳೆ ಶಾಸ್ತ್ರ ಮುಗಿದು ಡಣ್ ಎಂದು ಶಬ್ಧ ಕೇಳಿಸುತ್ತಿದ್ದಂತೆಯೇ ಹಸಿರು ಮುಖದ ಹೊತ್ತಿರುವ ಹೊನ್ನಮ್ಮನ ಅರ್ಚಕರು, ಅವರ ಪರಿಚಾರಕಾರೂ, ಛತ್ರಿ ಹಿಡಿದ ವೀರಶೈವರೂ ರಭಸವಾಗಿ ಒಲಂಪಿಕ್ಸ್ ಕ್ರೀಡೆಗಿಂತಲೂ ಅಧಿಕ ವೇಗದಿಂದ ಓಡಿ ಬಂದು ಗುಡಿ ಸೇರುವುದನ್ನು ನೋಡುವುದೇ ಚೆಂದ. ನಂತರ ಪಲ್ಲಕ್ಕಿಯ ಮೇಲಿದ್ದ ಉತ್ಸವ ಮೂರ್ತಿಯನ್ನು ರಂಗ ಮಂಟಪದಲ್ಲಿ ಉಯ್ಯಾಲೆಮಣೆಯಲ್ಲಿ ಇಟ್ಟರೆ, ಚಾವಟಿ ಅಮ್ಮಾ ಊರಿನ ಒಳಗಿರುವ ಲಕ್ಷ್ಮೀ ನರಸಿಂಹ, ಶಂಭು ಲಿಂಗ, ಗಾಣಿಗರ ಹಟ್ಟಿಯ ಲಕ್ಷ್ಮೀ ದೇವಿ, ರಂಗ ಮಂಟಪದ ಮುಂದಿನ ಗಣೇಶನ ಗುಡಿಯ ಮಂದೆ ಹೋಗಿ ಆರತಿ ಬೆಳಗಿಸಿಕೊಂಡು ಊರ ಶಾನುಭೋಗರಾದ ನಮ್ಮ ಮನೆಯ ಮುಂದೆ ಬರುವ ಹೊತ್ತಿಗೆ ಶಾಂತ ಸ್ವರೂಪಳಾಗಿರುತ್ತಾಳೆ. ನಮ್ಮ ಮನೆಯ ಹೆಂಗಸರು ಮನೆಯ ಹಿರಿಯ ಮುತ್ತೈದೆಯ ನೇತೃತ್ವದಲ್ಲಿ ಹೆಬ್ಬಾರಮ್ಮ, ಚಾವಟಿಯಮ್ಮ ಮತ್ತು ಚೋಮಗಳಿಗೆ ಆರತಿ ಬೆಳಗಿ ಅವರಿಗೆಲ್ಲರಿಗೂ ಎಳನೀರು ಕೊಟ್ಟು ಈಡುಗಾಯಿ ಹೊಡೆಯುತ್ತಿದ್ದಂತೆ ಚಾವಟಿಯಮ್ಮ ತನ್ನ ಗುಡಿಗೆ ಹೋಗಿ ಸೇರಿಕೊಂಡರೆ, ಚೋಮ ವೇಷಧಾರಿಗಳು ಹೊನ್ನಮ್ಮನ ಗುಡಿಗೆ ಹೋಗಿ ತಮ್ಮ ವೇಷ ಕಳಸಿ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಾರೆ.

ಇಷ್ಟೆಲ್ಲಾ ಮುಗಿಯುತ್ತಿದ್ದಂತೆಯೇ ರಂಗ ಮಂಟಪದ ಮುಂದೆ ತೆಂಗಿನ ಗರಿಯ ಸೋಗೆಗಳಿಗೆ ಬೆಂಕಿಹಾಕಿ ಚರ್ಮದ ತಮಟೆಗಳನ್ನು ಹದವಾಗಿ ಕಾಯಿಸಿ, (ಈಗೆಲ್ಲಾ ಪಾಲೀಥೀನ್ ತಮಟೆಗಲು ಬಂದಿವೆಯಾದರೂ ಚರ್ಮದ ತಮಟೆಯ ನಾದ ಮುಂದೆ ಇವುಗಳು ಏನು ಇಲ್ಲ ಎನ್ನುವಂತಿದೆ) ಟ್ರಣ ಟ್ರಣ್ ಎನ್ನುತ್ತಿದ್ದಂತೆಯೇ ಅಬಾಲಾ ವೃಧ್ಧರಾದಿಯರೂ ಕೈಯಲ್ಲಿ ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ರಂಗ ಕುಣಿಯುವುದಕ್ಕೆ ಸಿದ್ದರಾಗಿರುತ್ತಾರೆ. ಸುಮಾರು ಹತ್ತು ಹದಿನೈದು ನಿಮಿಷ ವಿವಿಧ ಗತ್ತಿನಲ್ಲಿ ರಂಗ ಕುಣಿಯುತ್ತಿದ್ದಂತೆಯೇ ಅವರ ಆಯಸವನ್ನು ತಣಿಸಲು ಮತ್ತು ಅವರನ್ನು ಮನರಂಜಿಸಲು ವಿವಿಧ ವೇಷಗಳನ್ನು ಹೊತ್ತು ತಂದು ನಾನಾ ರೀತಿಯ ಹಾಸ್ಯ ಕುಚೇಷ್ಟೆಗಳಿಂದ ಐದು ಹತ್ತು ನಿಮಿಷ ಎಲ್ಲರನ್ನೂ ರಂಜಿಸುತ್ತಾರೆ. ಹಾಗೆ ಹಾಸ್ಯ ಕುಚೇಷ್ಟೆಗಳನ್ನು ಮಾಡುವ ಸಂಧರ್ಭದಲ್ಲಿ ಕೆಲವೊಂದು ಬಾರಿ ಗ್ರಾಮೀಣ ರೀತಿಯ ಅಶ್ಲೀಲಕ್ಕೆ ತಿರುಗಿ ಅಲ್ಲಿರುವ ಹೆಂಗಳೆಯರಿಗೆ ಮುಜುಗರ ತರುವ ಸಂದರ್ಭಗಳು ಉಂಟು ಹೀಗೆ ಸುಮಾರು ಒಂದು ಗಂಟೆಗಳ ಕಾಲ ರಂಗ ಕುಣಿಯುವುದು ಮತ್ತು ಹಾಸ್ಯಗಳನ್ನು ನೋಡುವಷ್ಟರಲ್ಲಿಯೇ ಮೂಡಣದಲ್ಲಿ ಉದಯನ ಆಗಮನದ ಸೂಚನೆಯನ್ನು ಪಕ್ಕದ ಗೌಡರ ಹಟ್ಟಿಯ ಹುಂಜ ಕೊಕ್ಕೊರುಕ್ಕೊ ಎಂದು ಸೂಚ್ಯವಾಗಿ ತೋರಿಸುತ್ತದೆ.

ಬೆಳಗಾಗುವಷ್ಟರಲ್ಲಿ ಊರಿನ ಗುಡಿಗೌಡ, ಶುಚಿರ್ಭೂತನಾಗಿ ಕಂಬಳಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಮತ್ತು ಹೊದ್ದುಕೊಂಡು ಹಣೆಗೆ ತಿಲಕ, ಕೈ ಕಾಲುಗಳಿಗೆ ಬಾಜೂ ಬಂದಿ, ಗೆಜ್ಜೆಗಳನ್ನು ಕಟ್ಟಿಕೊಂಡು ನೇಗಿಲುಧಾರಿಯಾಗಿ ರಂಗಮಂಟಪದ ಮುಂದೆ ಹೊನ್ನಾರು ಕಟ್ಟಲು ಸಿದ್ಧರಾಗುತ್ತಾರೆ. ಹಾಗೆ ತಂದ ನೇಗಿಲಿಗೆ ಊರಿನ ಬಡಿಗೇರರು ಅಂದರೆ ಮರ ಮುಟ್ಟು ಕೆಲಸ ಮಾಡುವ ಆಚಾರಿಗಳು ನೇಗಿಲನ್ನು ಬಂದೋಬಸ್ತು ಮಾಡಿದರೇ, ಊರಿನ ಕಮ್ಮಾರರು, ಅಂದರೆ ಕುಲುಮೆ ಕೆಲಸಮಾಡುವ ಆಚಾರಿಗಳು ನೇಗಿಲಿನ ತುದಿಯ ಲೋಹದ ಭಾಗವನ್ನು ಮೊನಚು ಮಾಡಿ ಸರಿಯಾದ ಉಳುಮೆಗೆ ಅನುವು ಮಾಡಿಕೊಡುತ್ತಾರೆ. ಇನ್ನು ಹಿಂದಿನ ರಾತ್ರಿ ಚೋಮನನ್ನು ಧರಿಸಿದ್ದವರು ಇಂದು ಮುಖಕ್ಕೆ ಕಪ್ಪು ಬಣ್ಣ ಬಳಿದು ಕೊಂಡು ಎತ್ತಿನ ಸಂಕೇತವಾಗಿ ನೇಗಿಲಿಗೆ ತಮ್ಮ ಹೆಗಲನ್ನು ಕೊಟ್ಟರೆ, ಗುಡಿಗೌಡ ಜೂಲ್ ಜೂಲ್ ಎಂದು ಸಾಂಕೇತಿಕವಾಗಿ ನೆಲವನ್ನು ಉತ್ತಿ ನಂತರ ಉತ್ತ ಜಾಗದಲ್ಲಿ ಲಡರ್ ಬಡರ್, ಲಡರ್ ಬಡರ್ ಎಂದು ಶಬ್ಧಮಾಡುತ್ತಾ ರಾಗಿ, ಬತ್ತ, ಅವರೇ ಕಾಳು ಹುರಳೀ ಕಾಳು ಮುಂತಾದ ಕಾಳುಗಳನ್ನು ಸಾಂಕೇತಿವಾಗಿ ಬಿತ್ತುವ ಮೂಲಕ ಅಧಿಕೃತವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಮುಂದಿನ ಬೆಳೆಗಾಗಿ ಊಳುಮೆಗೆ ಚಾಲನೆ ನೀಡುತ್ತಾರೆ. ಹೀಗೆ ಗುಡಿ ಗೌಡರಿಂದ ಸಾಂಕೇತಿಕವಾಗಿ ಅಧಿಕೃತವಾಗಿ ಉಳುಮೆಮಾಡಿದ ನಂತರವೇ ಸುತ್ತಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಬೇಸಾಯ ಆರಂಭಿಸುವ ಪರಿಪಾಠವಿದೆ.

ಹೊನ್ನಾರು ಕಟ್ಟಿದ ನಂತರ ತಮಟೆ ಮತ್ತು ನಾದಸ್ವರ ವಾದ್ಯಗಳೊಂದಿಗೆ ರಂಗಮಂಟಪಕ್ಕೆ ಮೂರು ಸುತ್ತು ಹಾಕಿ ಹೊನ್ನಮ್ಮನ ಗುಡಿಯಲ್ಲಿ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗದೊಂದಿಗೆ ಚೋಮನ ಹಬ್ಬ ಮುಗಿಸಿ, ಅಕ್ಕ ಪಕ್ಕದ ಊರಿನಿಂದ ಬಂದವರೆಲ್ಲರೂ ತಮ್ಮ ತಮ್ಮ ಊರಿಗೆ ತೆರಳಲು ಅನುವಾದರೆ, ಈ ಉತ್ಸವಕ್ಕಾಗಿ ಮಾಡಿದ ಖರ್ಚು ವೆಚ್ಚಗಳ ಲೆಕ್ಕಹಾಕಿ ಮುಂದಿನ ವರ್ಷ ಮತ್ತಷ್ಟೂ ಅದ್ದೂರಿಯಾಗಿ ಚೋಮನ ಹಬ್ಬವನ್ನು ಆಚರಿಸುವಂತಾಗಲು ಇಂದಿನಿಂದಲೇ ಹಣ ಸಂಗ್ರಹಣ ಮಾಡುವ ಕಾಯಕ ಆರಂಭವಾಗುತ್ತದೆ.

ಇಂದು ಎಲ್ಲರೂ ಊರಿನಲ್ಲಿ ಭಾವೈಕ್ಯತೆ, ಸಾಮರಸ್ಯದ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮ ಊರ ಹಬ್ಬದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ, ಎಲ್ಲರೂ ಒಗ್ಗೂಡಿ ನಾಡಿನ ಹಿತಕ್ಕಾಗಿ ಜನರ ಸುಖಕ್ಕಾಗಿ ಹಬ್ಬವನ್ನು ಆಚರಿಸುವ ಪದ್ದತಿಯನ್ನು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ರೂಡಿಯಲ್ಲಿ ತಂದಿರುವುದು ಶ್ಲಾಘನೀಯವೇ ಸರಿ.

ಮುಂದಿನ ಲೇಖನದಲ್ಲಿ ದೊಡ ಹಬ್ಬ ಹೊನ್ನಾದೇವಿ ಹಬ್ಬದ ಬಗ್ಗೆ ತಿಳಿಸುತ್ತೇನೆ. ಅಲ್ಲಿಯವರೆಗೆ ಆ ತಾಯಿ ಸ್ವರ್ಣಾಂಬ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ.

ಏನಂತೀರೀ?

ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀರಾಮ ನವಮಿ ಅಂದ್ರೇ ಪೂಜೆ ಜೊತೆ ಪ್ರಸಾದರೂಪದಲ್ಲಿ ಕೊಡುವ ಪಾನಕ, ಕೋಸಂಬರಿ, ನೀರು ಮಜ್ಜಿಗೆಯ ಗಮ್ಮತ್ತೇ ಬೇರೆ. ಇಡೀ ದಿನವೆಲ್ಲಾ ಇದನ್ನೇ ತಿಂದು ಕುಡಿದು ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ರಾಮನವಮಿ ಪಾನಕವೆಂದರೆ ನನಗೆ ಒಂದೆರಡು ರೋಚಕ ಅನುಭವಗಳು ನೆನಪಾಗುತ್ತದೆ. ಅಂತಹ ರಸಾನುಭವ ಇದೋ ನಿಮಗಾಗಿ.

ಆಗಿನ್ನೂ ಎಪ್ಪತ್ತರ ದಶಕ ನಾನಿನ್ನೂ ಸಣ್ಣ ಹುಡುಗ. ರಾಮನವಮಿಯಂದು ಅಮ್ಮಾ ಪಾನಕ, ಕೋಸಂಂಬರಿ, ಮಜ್ಜಿಗೆ ಎಲ್ಲಾ ಮಾಡಿದ್ದರು. ಪಾನಕಕ್ಕೆ ನಾಲ್ಕೈದು ಹನಿ ಪೈನಾಪಲ್ ಎಶೆನ್ಸ್ ಸೇರಿಸಿದ್ದ ಕಾರಣ ಪಾನಕದ ರುಚಿ ಮತ್ತಷ್ಟು ಹೆಚ್ಚಾಗಿದ್ದದ್ದು ನನಗೆ ಬಹಳ ಸೋಜಿಗವೆನಿಸಿತ್ತು. ಮನೆಗೆ ಮುತೈದೆಯರೆಲ್ಲಾ ಬಂದು ಹೋದ ನಂತರ ಅಡುಗೆ ಮನೆಗೆ ಹೋಗಿ ಮೇಲೆ ಇಟ್ಟಿದ್ದ ಸಣ್ಣದಾದ ಎಶೆನ್ಸ್ ಬಾಟೆಲನ್ನು ತೆಗೆದುಕೊಂಡು ಮುಚ್ಚಳ ತೆಗೆದು ಸೊರ್ ಎಂದು ಒಂದರ್ಧ ಮುಚ್ಚಲದಷ್ಟು ಎಶೆನ್ಸ್ ಹಾಕಿಕೊಳ್ಳುತ್ತಿದ್ದಂತೆಯೇ ಬಾಯಲೆಲ್ಲಾ ಒಂದು ರೀತಿಯ ಕಹಿ ಕಹಿ ಅನುಭವ, ಗಂಟಲು ಬೇರೆ ಉರಿಯ ತೊಡಗಿದಂತೆ ಕಿಟಾರ್ ಎಂದು ಕಿರುಚಿಕೊಂಡು ಬಾಟೆಲ್ ಬೀಳಿಸಿ ಬಾಯಿ ತೊಳೆದುಕೊಳ್ಳಲು ಬಚ್ಚಲು ಮನೆಗೆ ಓಡಿ ಹೋಗಿದ್ದೆ.

ಬಂದವರನ್ನು ವಿಚಾರಿಸಿಕೊಳ್ಳುತ್ತಿದ್ದ ಅಮ್ಮಾ ನಾನು ಕಿರಿಚಿದ್ದು ನೋಡಿ ಅಡುಗೆ ಮನೆಗೆ ಬಂದು ನೋಡಿದರೆ ಯಶೆನ್ಸ್ ಬಾಟಲ್ ಒಡೆದು ಗಾಜೆಲ್ಲಾ ಚೂರು ಚೂರಾಗಿದೆ. ಯಶೆನ್ಸ್ ಘಮಲು ಮನೆಯೆಲ್ಲಾ ಹರಡಿದೆ. ಅಷ್ಟರಲ್ಲಿ ಬಾಯಿ ಬಾಯಿ ಬಡಿದುಕೊಳ್ಳುತ್ತಾ, ಬಚ್ಚಲು ಮನೆಯಲ್ಲಿ ಬಾಯಿ ತೊಳೆದುಕೊಳ್ಳುತ್ತಿದ್ದ ನನ್ನನ್ನು ಗಮನಿಸಿ ಬೆನ್ನ ಮೇಲೆ ಗುದ್ದಿದ್ದರು. ಈ ಅಮ್ಮಂದಿರೇ ಹೀಗೆ ಮೊದಲು ಮಕ್ಕಳಿಗೆ ಒಂದು ಗುದ್ದು ಕೊಟ್ಟು ನಂತರವೇ ಸಂತೈಸುವುದು. ಸರಿ ಆಗಿದ್ದು ಆಗಿ ಹೋಗೋಯ್ತು ಸರಿಯಾಗಿ ಬಾಯಿ ತೊಳೆಸಿ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಒಂದು ಸಣ್ಣ ಬಟ್ಟಲಿಗೆ ಜೇನು ತುಪ್ಪ ಹಾಕಿಕೊಟ್ಟು ನಿಧಾನವಾಗಿ ನೆಕ್ಕಲು ಹೇಳಿದರು. ಜೇನುತುಪ್ಪ ಆದಾದ ನಂತರ ಸಕ್ಕರೆ ಸಂಜೆ ಹೊತ್ತಿಗೆ ಬೆಲ್ಲವನ್ನು ಸವಿದರೂ ಇಡೀ ದಿನ ಬಾಯಿಯ ಕಹಿ ಹೋಗಿರಲಿಲ್ಲ. ಇನ್ನು ಅಡುಗೆ ಮನೆಯನ್ನು ಎಷ್ಟೇ ಒರೆಸಿದ್ದರೂ ಮೂರ್ನಾಲ್ಕು ದಿನಗಳ ಕಾಲ ಯಶೆನ್ಸಿನ ಘಮಲು ಇಡೀ ಮನೆಯನ್ನೇ ಅವರಿಸಿ ಬಂದವರೆಲ್ಲರಿಗೂ ನನ್ನ ಪ್ರತಾಪವನ್ನು ಹೇಳುವಂತಾಗಿತ್ತು.

ಮತ್ತೊಂದು ಪ್ರಸಂಗ ನಡೆದದ್ದು ತೊಂಬತ್ತರ ದಶಕದಲ್ಲಿ. ನಾನಾಗ ಕಾಲೇಜಿನಲ್ಲಿದ್ದೆ.  ರಾಮ ನವಮಿ ಹಬ್ಬಕ್ಕೆ ಸರಿಯಾಗಿ ನಮ್ಮ ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದು  ಬೆಳಿಗ್ಗೆ ಮನೆಯಲ್ಲಿ   ಅಮ್ಮನಿಗೆ ಪಾನಕ, ಕೂಸಂಬರಿ, ರಸಾಯನ ಮತ್ತು ಹುಳಿಯವಲಕ್ಕಿ ತಯಾರು ಮಾಡುವುದರಲ್ಲಿ  ಸಹಾಯ ಮಾಡಿ ರಾಮ ನವಮಿ ಪೂಜೆ ಆದ ಪ್ರಸಾದ ಸ್ವೀಕರಿಸಿದ ನಂತರ ಅವುಗಳನ್ನು ದೊನ್ನೆಗಳಲ್ಲಿ ಹಾಕಿ ನನ್ನ ಪಾಡಿಗೆ ನಾನು ನನ್ನ ಕೋಣೆಯಲ್ಲಿ  ಓದು ಕೊಳ್ಳುತ್ತಿದ್ದೆನಾದರೂ, ಮನೆಗೆ ಬಂದು ಹೋಗುತ್ತಿದ್ದವರ ಮಾತು ನನ್ನ ಕಿವಿಯ ಮೇಲೆ ಬೀಳುತ್ತಿತ್ತು.

ನಮ್ಮ ಮನೆಯ ಹತ್ತಿರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ   ದಂಪತಿಗಳು ಮತ್ತವರ ಇಬ್ಬರು ಗಂಡು ಮಕ್ಕಳು ಬಾಡಿಗೆಗೆ ಹೊಸದಾಗಿ ಬಂದಿದ್ದರು.  ಹಬ್ಬದ ದಿನ ಮೇಷ್ಟ್ರು ನಮ್ಮ ಮನೆಯ ರಾಮನವಮಿಗೆ ಬಂದಿದ್ದವರು ಹಾಗೇ ಲೋಕಾಭಿರಾಮವಾಗಿ ಮಾತಾನಾಡುತ್ತಾ ಪ್ರಸಾದ ಎಲ್ಲ ಸ್ವೀಕರಿಸಿದ ನಂತರ ಎಲ್ಲಿ ಮನೆಯಲ್ಲಿ ಯಾರೂ ಕಾಣ್ತಾ ಇಲ್ಲವಲ್ಲಾ?  ಎಂದು ಕೇಳಿದಾಗ, ಮಗ ಒಳಗೆ  ಅವನ ಕೋಣೆಯಲ್ಲಿ ಓದುಕೊಳ್ಳುತ್ತಿದ್ದಾನೆ ಎಂದರು ನಮ್ಮ ಅಮ್ಮ.  ಓ ಹೌದೇ, ಎಂದು ಹೇಳಿ ಧಡಕ್ಕನೆ ನನ್ನ ರೂಮಿನೊಳಗೆ ನುಗ್ಗಿದ ಮೇಷ್ಟ್ರು, ರಾಮ ನವಮಿಯ ಶುಭಾಶಯಗಳು.  ಏನಯ್ಯಾ, ಹಬ್ಬದ ದಿನವೂ ಓದ್ತಾ ಇದ್ದೀಯಾ. ಭೇಷ್ ಭೇಷ್. ಚೆನ್ನಾಗಿ ಓದಬೇಕು ಎಂದು ಹೇಳಿ. ಸರಿ ಬಾ ನಮ್ಮ ಮನೆಯ ರಾಮನನ್ನು ನೋಡಿ ಬರುವಿಯಂತೆ ಎಂದರು.  ಮೇಷ್ಟ್ರೇ,  ಈಗ ಓದುತ್ತಾ ಇದ್ದೀನಿ. ಸ್ವಲ್ಪ ಸಮಯದ ನಂತರ ಬರ್ತೀನಿ ಅಂತಾ ಹೇಳಿದರೂ ಕೇಳದೆ, ಬಾರಯ್ಯಾ,  ನಿನ್ನ ಬಗ್ಗೆ ನನಗೆ ಗೊತ್ತಿಲ್ಲವಾ, ಅಮೇಲೆ ನೀನು ಏನೋ ಸಬೂಬು ಹೇಳಿಕೊಂಡು ಬರುವುದೇ ಇಲ್ಲ. ಬ್ರಹ್ಮಚಾರಿಗಳಿಗೆ ಪ್ರಸಾದ ಕೊಟ್ಟರೆ ಪುಣ್ಯ ಬರುತ್ತದೆ ಎಂದು ಹೇಳಿ ನನ್ನನ್ನು ಬಲವಂತ ಮಾಡಿಕೊಂಡು ಕರೆದು ಕೊಂಡು ಹೊರಟೇ ಬಿಟ್ಟರು. ನಮ್ಮ ಅಮ್ಮನೂ ಕೂಡಾ ವಯಸ್ಸಾದವರ ಹತ್ತಿರ ಅಷ್ಟೊಂದು ಹೇಳಿಸಿಕೊಳ್ಳಬಾರದು. ಬೇಗ ಹೋಗಿ ಬಂದು ಬಿಡು ಎಂದಾಗ. ಸರಿ ಎಂದು ಹಾಕಿಕೊಂಡಿದ್ದ ನಿಕ್ಕರ್ ಮೇಲೆಯೇ ಪಂಚೆ ಉಟ್ಟುಕೊಂಡು ಮೇಷ್ಟ್ರ ಮನೆಗೆ  ಹೋದೆ.

ಮೇಷ್ಟ್ರು ಬರುವುದನ್ನೇ ಕಾಯುತ್ತಿದ್ದ  ಅವರ ಮನೆಯಾಕೆ, ಓ ಬಂದ್ರಾ, ಒಂದೈದು ನಿಮಿಷ ಮಾತಾಡ್ತಾ ಇರಿ. ನಾನು ಪಕ್ಕದ ಮನೆಗೆ ಅರಿಶಿನ  ಕುಂಕುಮಕ್ಕೆ ಹೋಗಿ ಬಂದು  ಬಿಡ್ತೀನಿ ಎಂದು ಹೇಳಿ ಪಕ್ಕದ ಮನೆಗೆ ಹೊರಟೇ ಬಿಟ್ಟರು. ಸರಿ ನಾನು ಹತ್ತು ಹದಿನೈದು ನಿಮಿಷಗಳು ಕಾದರೂ ಮೇಡಂ ಅವರು ಬರಲಿಲ್ಲವಾದ್ದರಿಂದ ಸರಿ ಮೇಷ್ಟ್ರೇ, ಸ್ವಲ್ಪ ಹೊತ್ತಾದ ಮೇಲೆ ಬರ್ತೀನಿ ಎಂದು ಹೇಳಿ ದೇವರ ಮನೆಯ ರಾಮ ದೇವರಿಗೆ ನಮಸ್ಕರಿಸಿ ಹೊರಡಲು ಅನುವಾದೆ. ಹೇ.. ಇರಪ್ಪಾ ನಮ್ಮವಳು ಬಂದು ಬಿಡ್ತಾಳೆ.  ಒಂದು ನಿಮಿಷ ಇರು. ಪಾನಕ ತಂದು ಕೊಡ್ತೀನಿ. ಪಾನಕ ಕುಡಿದು ಮುಗಿಸುವಷ್ಟರಲ್ಲಿ ಅವಳು ಬಂದು ಬಿಡ್ತಾಳೆ ಎಂದು ಹೇಳಿ, ಅಡುಗೆ ಮನೆಯಿಂದ ಕೆಂಬಣ್ಣದ ಪಾನಕ ತಂದು ಕೈಗಿತ್ತು ಪಕ್ಕದಲ್ಲಿ  ಕುಳಿತು ಕುಡಿ ಎಂದರು. ಸರಿ ಪಾನಕ ಕುಡಿಯೋಣ ಎಂದು ಮೊದಲನೇ ಗುಟುಕನ್ನು ಬಾಯಿಗೆ ಹಾಕಿಕೊಂಡರೆ, ಅದು ಪಾನಕದ ರೀತಿಯಿಲ್ಲ. ಏನೂ ಒಂತಾರ  ಒಗರು ಓಗರು, ಕಹಿ, ಹುಳಿ ಎಲ್ಲರದರ ಸಮ್ಮಿಳನ. ಸರಿ ಮಾತನಾಡಿದರೆ ಸುಮ್ಮನೆ ತೊಂದರೆ ಸಿಕ್ಕಿ ಹಾಕಿ ಕೊಳ್ತೀನಿ ಅಂತ  ಪಾನಕದ ಲೋಟವನ್ನು ಪಕ್ಕಕ್ಕೆ ಇಟ್ಟೆ. ನಾನು ಹಾಗೆ ಕುಡಿಯದೇ ಇಟ್ಟಿದ್ದನ್ನು ನೋಡಿದ ಮೇಷ್ಟ್ರು, ಅರೇ ಪಾನಕಾನೇ ಕುಡಿಲಿಲ್ಲಾ. ಯಾಕೆ ಪಾನಕ ಸೇರಲ್ವಾ? ಅದಕ್ಕೆ ನಿಂಬೆ ಹಣ್ಣಿನ ಪಾನಕ ಬೇಡ ಅಂತಾ ರಸ್ನಾ  ಮಾಡಿಸಿದ್ದು. ಕುಡಿ ಕುಡಿ ಅಂತಾ ಬಲವಂತ ಮಾಡಿಸಿ ಪಾನಕ ಕುಡಿಸಿಯೇ ಬಿಟ್ಟರು. ಬಿಸಿ ತುಪ್ಪ ನುಂಗುವ ಹಾಗಿಲ್ಲ ಬಿಡುವ ಹಾಗಿಲ್ಲ ಎನ್ನುವ ಹಾಗೆ ಇದು ಪಾನಕ ಅಲ್ಲಾ ಅಂತಾ ಹೇಳುವುದಕ್ಕೇ ಆಗುತ್ತಿಲ್ಲಾ ಮತ್ತು  ಕುಡಿಯಲು ಆಗುತ್ತಿಲ್ಲ.  ಗಂಟಲೆಲ್ಲಾ ಉರಿ, ಹೊಟ್ಟೆ ತೊಳೆಸುತ್ತಿದೆ. ಏನೂ ಮಾಡದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಹಾಗೂ ಹೀಗೂ ಮಾಡಿ  ಅರ್ಧ ಲೋಟ ಕುಡಿಯುವಷ್ಟರಲ್ಲಿ ಮೇಡಂ ಅವರು ಬಂದು ನನ್ನನ್ನು ನೋಡಿ,  ಅಯ್ಯೋ  ಬೇಜಾರು ಮಾಡಿಕೊಳ್ಳಬೇಡಪ್ಪಾ ಸ್ವಲ್ಪ ತಡ ಆಗಿಹೋಯ್ತು.  ಇರು ಪಾನಕ ಕೋಸಂಬರಿ ಕೊಡ್ತೀನಿ ಅಂತ  ದೇವರ ಮನೆಗೆ ಹೋದ್ರು. ಅದಕ್ಕೆ ಅವರ ಯಜಮಾನರು ಬರೀ ಕೋಸಂಬರಿ ಕೊಡು. ಪಾನಕ ಆಗಲೇ ಕೊಟ್ಟಿದ್ದೀನಿ ಎಂದರು. ಹಾಂ ಪಾನಕ ಕೊಟ್ರಾ,  ಎಲ್ಲಿಂದ ಕೊಟ್ರೀ?  ಪಾನಕದ ಲೋಟಗಳೆಲ್ಲಾ ಇಲ್ಲೇ ಇದೆ ಎಂದಾಗ, ಅದೇ ಅಡುಗೆ ಮನೆಯಲ್ಲಿ ಒಲೆ ಪಕ್ಕದಲ್ಲಿದ್ದ ಪಾತ್ರೆಯಿಂದ ಲೋಟಕ್ಕೆ ಹಾಕಿ ಕೊಟ್ಟೆ ಎಂದರು ಮೇಷ್ಟ್ರು. ಅಯ್ಯೋ ಅದ್ಯಾಕ್ರೀ ಕೊಟ್ರೀ. ಅದು ಪಾನಕ ಅಲ್ಲಾ. ಅದು ಕೈ ನೀರು  ಅದ್ದುಕೊಳ್ಳುವ ಪಾತ್ರೆ. ಬಾತ್ ಕಲೆಸಿದ ಮೇಲೆ ಕೈ ತೊಳೆದುಕೊಂಡ ನೀರು ಎಂದು ನನಗೂ  ಕೇಳುವ ಹಾಗೆ ಹೇಳಿದೊಡನೆ,  ನನಗೆ ಹೊಟ್ಟೆ ತೊಳೆಸಿ, ವ್ಯಾಕ್ ಎಂದು ವಾಂತಿ ಮಾಡಿಕೊಳ್ಳಬೇಕೆನಿಸಿತು.  ಮಗೂ ಏನು ತಿಳಿದುಕೊಳ್ಳ ಬೇಡ. ಮೇಷ್ಟ್ರಿಗೆ ತಿಳಿಯದೇ ಕೊಟ್ಟು ಬಿಟ್ಟಿದ್ದಾರೆ  ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಮೇಷ್ಟರ ಮುಖದಲ್ಲಿ  ಸುಮ್ಮನೆ ಮನೆಯಲ್ಲಿ ಓದುತ್ತಿದ್ದ ಹುಡುಗನನ್ನು ಕರೆತಂದು ಈ ರೀತಿಯ ಪಜೀತಿಗೆ ಒಳಪಡಿಸಿದನಲ್ಲಾ ಎಂಬ ಪಶ್ಚಾತ್ತಾಪ ಎದ್ದು ಕಾಣುತ್ತಿತ್ತು. ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು.

ಎಪ್ಪತ್ತು ಎಪ್ಪತ್ತೆರಡು ವಯಸ್ಸಿನ ಮೇಷ್ಟ್ರಿಗೆ ಕಣ್ಣು  ಅಷ್ಟೊಂದು ಸರಿಯಾಗಿ ಕಾಣಿಸುತ್ತಿರಲಿಲ್ಲ. ಆವರು ಅದಾಗಲೇ ದಪ್ಪನೆಯ ಸೋಡಾ ಗ್ಲಾಸ್ ಕನ್ನಡಕ ಹಾಕಿಕೊಳ್ಳುತ್ತಿದ್ದರು.  ಅವರಿಗೆ ಮೇಡಂನವರು ದೇವರ ಮನೆಯಲ್ಲಿ ಪಾನಕ ಕೊಸಂಬರಿ ಇಟ್ಟಿರುವುದು ಗೊತ್ತಿರದೆ, ಅಡುಗೆ ಮನೆಯಲ್ಲಿ ಬಾತ್ ಕಲೆಸಿ  ಕೈ ಅದ್ದುಕೊಂಡು  ಬಣ್ಣವಾಗಿದ್ದ ನೀರನ್ನೇ ಪಾನಕ ಎಂದು ತಿಳಿದು ನನಗೆ ಕೊಟ್ಟುಬಿಟ್ಟಿದ್ದರು. ಸರಿ ಎದ್ದನೋ ಬಿದ್ದನೋ ಎನ್ನುವಂತೆ ಕೋಸಂಬರಿ ಪಾನಕ ತೆಗೆದುಕೊಂಡು ಅವರ ಮನೆಯಲ್ಲಿ ಏನನ್ನೂ ತಿನ್ನದೆ ಮನೆಗೆ ಬಂದು ವಾಂತಿ ಮಾಡಿದ ಮೇಲೆಯೇ ಸ್ವಲ್ಪ ಸಮಾಧಾನವಾಯಿತು. ಅಷ್ಟು ಹೊತ್ತಿಗೆ ನಮ್ಮ ತಂಗಿಯಂದಿರೂ ಮನೆಗೆ ಬಂದು ನೆಡೆದದ್ದೆಲ್ಲವನ್ನು ಕೇಳಿ ತಿಳಿದು ಹೊಟ್ಟೆ ತುಂಬಾ ನಕ್ಕಿದ್ದೇ ನಕ್ಕಿದ್ದು.  ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ  ಸಂಕಟ ಎನ್ನುವ ಪರಿಸ್ಥಿತಿ ನನ್ನದಾಗಿತ್ತು.  ಅವತ್ತು ಇಡೀ ದಿನ ಏನನ್ನೇ ತಿಂದರೂ ಅದೇ ಒಗರು ರುಚಿಯೇ ನನ್ನ ಮನಸ್ಸಿಗೆ ಬಂದು ಇಡೀ ದಿನ  ಸರಿಯಾಗಿ ತಿನ್ನಲೇ ಆಗಲಿಲ್ಲ.

ಅಂದಿನಿಂದ ಎಲ್ಲೇ ಹೋಗಲಿ,  ಪಾನಕ ಕೊಡ್ತಾ ಇದ್ರೇ ಅಥವಾ ರಾಮನವಮಿ ಬಂದ್ರೆ, ಈ ಪ್ರಸಂಗಗಳು ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತದೆ. ಅದಕ್ಕಾಗಿ ಈಗೆಲ್ಲಾ, ಅಕ್ಕ ಪಕ್ಕದವರು ಪಾನಕ  ಕುಡಿದ ಮೇಲೆಯೇ  ಅವರ ಮುಖ ನೋಡಿದ ಮೇಲೆಯೇ ನಾನು ಪಾನಕ ಕುಡಿಯುವುದು . ಅಂದಿನಿಂದ ಬೆಳ್ಳಗಿರುವುದು ಹಾಲಲ್ಲ ಎಂಬ ಗಾದೆ ಜೊತೆಗೆ  ಬಣ್ಣದ ನೀರೆಲ್ಲಾ ಪಾನಕವಲ್ಲ ಎಂದು ನಾನೇ ಜೋಡಿಸಿಕೊಂಡೆ. ಅದಕ್ಕೇ ಅಲ್ವೇ,
ನಮ್ಮ ಹಿರಿಯರು ಹೇಳಿರುವುದು ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಅಂತಾ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲಾ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಶ್ರೀ ರಾಮ ನವಮಿ

ಸಮಸ್ತ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಶೋತ್ತಮ, ದಶರಥ ಪುತ್ರ, ಶ್ರೀ ರಾಮಚಂದ್ರ ಪ್ರಭು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ತ್ರೇತಾಯುಗದಲ್ಲಿ ಸರಯೂ ನದಿ ತಟದ ಅಯೋಧ್ಯೆಯಲ್ಲಿ ಜನಿಸಿದ ದಿನ. ಈ ದಿನವನ್ನು ದೇಶಾದ್ಯಂತ ಭಕ್ತಿಭಾವದಿಂದ, ಶ್ರಧ್ಧಾ ಪೂರ್ವಕವಾಗಿ ಬಹಳ ಸಂಭ್ರಮದಿಂದ ಹಬ್ಬವಾಗಿ ಆಚರಿಸುತ್ತಾರೆ. ಕರ್ನಾಟಕದ ಬಹಳಷ್ಟು ಮನೆಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಅಂದರೆ ಯುಗಾದಿ ದಿನದಿಂದ ಮುಂದಿನ ಒಂಭತ್ತು ದಿನ ಅಂದರೆ ನವಮಿ, ರಾಮ ನವಮಿಯವರೆಗೆ ಪ್ರತೀ ದಿನ ರಾಮಾಯಣ ಪಾರಾಯಣ ಮಾಡಿ, ನವಮಿ ದಿನದಂದು ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಬಂಧು ಮಿತ್ರರ ಒಡಗೂಡಿ ರಾಮೋತ್ಸವ ಮಾಡಿ ಹಬ್ಬವನ್ನು ಆಚರಿಸುತ್ತಾರೆ.

ಉತ್ತರ ಕರ್ನಾಟಕದ ಕಡೆ ರಾಮ ನವಮಿಯಂದು ರಾಮನ ವಿಗ್ರಹವನ್ನು ತೊಟ್ಟಿಲಲ್ಲಿಟ್ಟು ಆರತಿ ಬೆಳಗಿ ಮನೆಯ ಹೆಂಗಳೆಯರೆಲ್ಲರೂ ತೊಟ್ಟಿಲು ತೂಗುವ ಸಂಪ್ರದಾಯವೂ ರೂಢಿಯಲ್ಲಿದೆ.

WhatsApp Image 2020-03-28 at 10.08.24 AM

ಇನ್ನು ದೇವಸ್ಥಾನ ಮತ್ತು ಸಾರ್ವಜನಿಕವಾಗಿ ರಾಮ, ಸೀತೆ, ಲಕ್ಷಣ ಮತ್ತು ಆಂಜನೇಯರನ್ನು ಒಳಗೊಂಡ ರಾಮ ಪಟ್ಟಾಭಿಷೇಕದ ವಿಗ್ರಹವನ್ನೋ ಇಲ್ಲವೇ ಫೋಟೋವನ್ನು ಇಟ್ಟು ಷೋಡಶೋಪಚಾರದಿಂದ ಪೂಜೆಮಾಡಿ ಊರ ತುಂಬಾ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ನಂತರ ನೆರೆದಿದ್ದ ಎಲ್ಲರಿಗೂ ಪಾನಕ ಕೋಸಂಬರಿ, ಹಣ್ಣಿನ ರಸಾಯನ ಮತ್ತು ಹುಳಿಯವಲಕ್ಕಿ (ಗೊಜ್ಜವಲಕ್ಕಿಯ) ಪ್ರಸಾದ ಹಂಚುವುದರೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಸಂಜೆ ಎಲ್ಲಾ ದೇವಾಲಯಗಳಲ್ಲಿ ರಾಮನ ಭಜನೆ, ಭಕ್ತಿಗೀತೆಗಳು ಇಲ್ಲವೇ ಸಂಗೀತ ಕಾರ್ಯಕ್ರಮದ ಮೂಲಕ ರಾಮನ ಧ್ಯಾನ ಮಾಡುತ್ತಾರೆ.

ಸಂಗೀತ ಪ್ರಿಯರಿಗಂತೂ ರಾಮ ನವಮಿ ಬಂದಿತೆಂದರೆ ಸಂಗೀತದ ರಸದೌತಣ. ದಕ್ಷಿಣ ಭಾರತದ ಬಹುತೇಕ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ರಾಮನಮಮಿ ಪೆಂಡಾಲ್ ಹಾಕಿಸಿ ರಾಮ ನವಮಿ ಸಂಗೀತ ಕಛೇರಿಗಳು ಕೆಲವು ಕಡೆ ವಾರಗಟ್ಟಲೆ ನಡೆದರೆ, ಹಲವಾರು ಕಡೆ ತಿಂಗಳುಗಟ್ಟಲೆ ಕಛೇರಿ ನಡೆಯುತ್ತದೆ. ಇಂತಹ ಸಭಾ ಕಛೇರಿಗಳಲ್ಲಿ ಹಾಡಲು ಅವಕಾಶ ಸಿಗುವುದೇ ಹೆಮ್ಮೆಯ ಸಂಗತಿ ಎಂದು ತಿಳಿದ ಹೆಸರಾಂತ ಸಂಗೀತಗಾರರು, ಅತ್ಯಂತ ಶ್ರಧ್ಧೆಯಿಂದ ತಿಂಗಳಾನು ಗಟ್ಟಲೆ ತಾಲೀಮ್ ನಡೆಸಿ ಅವಕಾಶ ಸಿಕ್ಕಂದು ಹೃದಯ ಬಿಚ್ಚಿ ಹಾಡುತ್ತಾ , ಸಂಗೀತರಸಿಕರ ಮನಸ್ಸನ್ನು ತಣಿಸುತ್ತಾರೆ. ಮೈಸೂರಿನ ಅರಮಮನೆಯ ಸಂಗೀತ ಕಛೇರಿ ಮತ್ತು ಬೆಂಗಳೂರಿನ ಚಾಮರಾಜಪೇಟೆ ರಾಮ ಸೇವಾ ಮಂಡಳಿಯವರ ರಾಮ ನವಮಿ ಸಂಗೀತ ಕಛೇರಿಗಳು ಹೆಸರುವಾಸಿಯಾಗಿವೆ.

ಇನ್ನು ಉತ್ತರ ಭಾರತದಲ್ಲಿ ಈ ಒಂಭತ್ತೂ ದಿನಗಳನ್ನು ನವರಾತ್ರಿ ಎಂದು ಕರೆದು ಬಹುತೇಕರು ಒಂಭತ್ತು ದಿನಗಳೂ ಉಪವಾಸ ವ್ರತ (ಬೆಳಗಿನಿಂದ ರಾತ್ರಿಯವರೆಗೂ ಉಪವಾಸ. ರಾತ್ರಿ ಫಲಾಹಾರ ಇಲ್ಲವೇ ಸ್ವಾತಿಕ ಆಹಾರ) ಮಾಡುತ್ತಾ ಅತ್ಯಂತ ಭಕ್ತಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ಇನ್ನು ನಮಮಿಯಂದು ರಾಮನ ಮೂರ್ತಿಗಳನ್ನು ಮತ್ತು ಮಕ್ಕಳಿಗೆ ರಾಮನ ವೇಷಭೂಷಣಗಳನ್ನು ತೊಡಿಸಿ ಬಾರೀ ಅದ್ದೂರಿಯಾಗಿ ನಗರಾದ್ಯಂತ ಬಾಜಾ ಭಜಂತ್ರಿಯೊಂದಿಗೆ ಊರ ತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸುತ್ತಾರೆ.

ನಮ್ಮ ಬಹುತೇಕ ಹಬ್ಬಗಳು ಮನೆಯ ನಾಲ್ಕು ಗೋಡೆಗಳ ಮಧ್ಯೆ ಕೇವಲ ಕುಟುಂಬಸ್ತರ ಸಮ್ಮುಖದಲ್ಲಿ ಆಚರಿಸಲ್ಪಟ್ಟರೆ, ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ರಾಮ ನವಮಿ ಹಬ್ಬಗಳು ಮಾತ್ರ ಇದಕ್ಕೆ ತದ್ವಿರುದ್ದವಾಗಿ ಯಾವುದೇ ಜಾತಿ, ಧರ್ಮ, ಭಾಷೆಗಳ ಗೊಡವೆಯಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು. ಕೂಲಿ ಕಾರ್ಮಿಕರು, ಆಟೋ ಡ್ರೈವರ್ಗಳು ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಹಣ ಸಂಗ್ರಹಣೆ ಮಾಡಿ ರಸ್ತೆ ಬದಿಯಲ್ಲೇ ತಳಿರು ತೋರಣ ಕಟ್ಟಿ ರಾಮನ ಫೋಟೋ ಇಟ್ಟು ಭಕ್ತಿಯಿಂದ ಶ್ರೀರಾಮನ ಪೂಜೆ ಮಾಡುತ್ತಾರೆ. ನಂತರ ಸುಡುವ ಬೇಸಿಗೆಯ ಬಿಸಿಲಿಗೆ ತಂಪು ಮಾಡುವಂತೆ ತಂಪಾದ ಬೇಲದ ಹಣ್ಣಿನ ಪಾನಕ. ಈಗ ಬೇಲದ ಹಣ್ಣು ಯಥೇಚ್ಚವಾಗಿ ಸಿಗದ ಕಾರಣ ನಿಂಬೇಹಣ್ಣು ಇಲ್ಲವೇ ಕರ್ಬೂಜ ಹಣ್ಣಿನ ಪಾನಕ. ಜೊತೆಗೆ ಕೊತ್ತಂಬರಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದ ನೀರು ಮಜ್ಜಿಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಇದರ ಜೊತೆ ಕಡಲೇ ಬೇಳೆ ಇಲ್ಲವೇ ಹೆಸರು ಬೇಳೆಯ ಜೊತೆಗೆ, ಸೌತೇಕಾಯಿ ಇಲ್ಲವೇ ಕ್ಯಾರೆಟ್ ತುರಿ ಬೆರೆಸಿ ರುಚಿ ಮತ್ತು ಘಂ ಎನ್ನುವ ಸುವಾಸನೆ ಬರಲು ಇಂಗು ಮತ್ತು ತೆಂಗಿನ ಒಗ್ಗರಣೆ ಹಾಕಿದ ಕೊಸಂಬರಿಯನ್ನು ಪ್ರಸಾದ ರೂಪದಲ್ಲಿ ಹಂಚಿ ಸಂಭ್ರಮದಿಂದ ಸಡಗದಿಂದ ರಾಮನವಮಿಯನ್ನು ಎಲ್ಲರೊಡಗೂಡಿ ಆಚರಿಸುವುದನ್ನು ಹೇಳುವುದಕ್ಕಿಂತ ಆ ಆಚರಣೆಯಲ್ಲಿ ಭಾಗಿಯಾಗಿ ಅದನ್ನು ಅನುಭವಿಸಿದರೇ ಸಿಗುವ ಮಜವೇ ಬೇರೆ.

ನಮ್ಮ ಸಹಿಷ್ಣುತೆಯೇ ನಮ್ಮ ದೌರ್ಬಲ್ಯವೆಂದು ತಿಳಿದು ನಮ್ಮ ದೇಶದ ಮೇಲೆ ಹಲವಾರು ವಿದೇಶಿಯರು ಆಕ್ರಮಣ ಮಾಡಿ ನಮ್ಮ ದೇವಾಲಯಗಳು, ಧಾರ್ಮಿಕ ಕೇಂದ್ರಗಳನ್ನು ನಾಶ ಪಡಿಸಿದ್ದಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಬದಲಾಯಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯನ್ನು ಪಡೆದಿದ್ದಾರೆ. ಅದರೆ ನಮ್ಮ ಸನಾತನ ಸಂಸ್ಕೃತಿಯ ತಳಹದಿ ಸುಭದ್ರವಾಗಿಗುವ ಕಾರಣ ಇಂದಿಗೂ ನಮ್ಮ ಆಚಾರ ವಿಚಾರಗಳು ಸಮಯ ಸಂಧರ್ಭಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾಗಿದ್ದರೂ ಮೂಲ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಚಾಚೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದೇವೆ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವ ಪೂರ್ಣವಾಗಿವೆ.

ಏನಂತೀರೀ?

ನಿಮ್ಮವನೇ ಉಮಾಸುತ.

ಪ್ರಭು ಶ್ರೀ ರಾಮನ 108 ಹೆಸರುಗಳು ಈ ರೀತಿಯಾಗಿವೆ.

 1. ಶ್ರೀರಾಮ
 2. ರಾಮಭದ್ರಾಯ
 3. ರಾಮಚಂದ್ರ
 4. ಶಶ್ವತಾಯ
 5. ರಾಜೀವಲೋಚನಾಯ
 6. ಶ್ರೀಮತೆ
 7. ರಾಜೇಂದ್ರಯ
 8. ರಘುಪುಂಗವಾಯ
 9. ಜನಕಿ ವಲ್ಲಭಯ
 10. ಜೈತ್ರಯ
 11. ಜಿತಾಮಿತ್ರಾಯ
 12. ಜನಾರ್ದನಾಯ
 13. ವಿಶ್ವಮಿತ್ರ ಪ್ರಿಯ
 14. ದಂತಾಯ
 15. ಶರಣಾತ್ರನಾ ತತ್ಪರಾಯ
 16. ಬಲಿಪ್ರಮಥನಾಯ
 17. ವಾಗ್ಮಿನ್
 18. ಸತ್ಯವಾಚೆ
 19. ಸತ್ಯವಿಕ್ರಮಯ
 20. ಸತ್ಯವ್ರತಾಯ
 21. ವ್ರತಾಧರಯ
 22. ಸದಾ ಹನುಮದಾಶ್ರಿತಾಯ
 23. ಕೌಸಲೆಯಾಯ
 24. ಖಾರಧ್ವಂಸಿನ್
 25. ವಿರಾಧವಪಾಂಡಿತಾಯ
 26. ವಿಭೀಷಣ ಪರಿತ್ರತ್ರ
 27. ಕೊದಂಡ ಖಂಡನಾಯ
 28. ಸಪ್ತತಲ ಪ್ರಭೇದ್ರೆ
 29. ದಶಗ್ರೀವ ಶಿರೋಹರಾಯ
 30. ಜಮದ್ಗನ್ಯಾ ಮಹಾದರಪಯ
 31. ತತಕಂತಕಾಯ
 32. ವೇದಾಂತ ಸರಯ
 33. ವೇದತ್ಮನೆ
 34. ಭಾವರೋಗಸ್ಯ ಭೇಷಜಯ
 35. ದುಷನಾತ್ರಿ ಶಿರೋಹಂತ್ರ
 36. ತ್ರಿಮೂರ್ತಾಯ
 37. ತ್ರಿಗುನಾತ್ಮಕಾಯ
 38. ತ್ರಿವಿಕ್ರಮಯ
 39. ತ್ರಿಲೋಕತ್ಮನೆ
 40. ಪುನ್ಯಾಚರಿತ್ರ ಕೀರ್ತನಾಯ ನಮಹ
 41. ತ್ರಿಲೋಕರಾಕ್ಷಕಾಯ
 42. ಧನ್ವೈನ್
 43. ದಂಡಕರನ್ಯ ಕಾರ್ತನಾಯ
 44. ಅಹಲ್ಯಾ ಶಾಪ ಶಮಾನಾಯ
 45. ಪಿಟ್ರು ಭಕ್ತಾಯ
 46. ವರ ಪ್ರದಾಯ
 47. ಜಿತೇಂದ್ರಯ್ಯ
 48. ಜಿತಕ್ರೋಧಯ
 49. ಜಿತಾಮಿತ್ರಾಯ
 50. ಜಗದ್ ಗುರವೆ
 51. ರಿಕ್ಷಾ ವನಾರ ಸಂಘಟೈನ್
 52. ಚಿತ್ರಕುಟ ಸಮಾಶ್ರಾಯ
 53. ಜಯಂತ ತ್ರಾನ ವರದಾಯ
 54. ಸುಮಿತ್ರ ಪುತ್ರ ಸೆವತಾಯ
 55. ಸರ್ವಾ ದೇವಧಿ ದೇವಯ
 56. ಮೃತರವನ ಜೀವನಾಯ
 57. ಮಾಯಮರಿಚ ಹಂತ್ರ
 58. ಮಹಾದೇವಯ
 59. ಮಹಾಭುಜಯ
 60. ಸರ್ವದೇವ ಸ್ಟುತಾಯ
 61. ಸೌಮ್ಯಾಯ
 62. ಬ್ರಹ್ಮಣ್ಯ
 63. ಮುನಿ ಸಂಸ್ತುತಾಯ
 64. ಮಹಾಯೋಗಿನ್
 65. ಮಹಾದಾರಾಯ
 66. ಸುಗ್ರಿವೆಪ್ಸಿತಾ ರಾಜಯದೇ
 67. ಸರ್ವ ಪುಣ್ಯಾಧಿ ಕಫಾಲಯ
 68. ಸ್ಮೃತಾ ಸರ್ವಘ ನಶನಾಯ
 69. ಆದಿಪುರುಷಾಯ
 70. ಪರಮಪುರುಷಾಯ
 71. ಮಹಾಪುರುಷಯ
 72. ಪುಣ್ಯೋದಯ
 73. ದಯಾಸರಾಯ
 74. ಪುರಾಣ ಪುರುಷೋತ್ತಮಯ
 75. ಸ್ಮಿತಾ ವಕ್ತ್ರಯ
 76. ಮಿತಾ ಭಾಶೈನ್
 77. ಪೂರ್ವ ಭಶಿನ್
 78. ರಾಘವಾಯ
 79. ಅನಂತ ಗುಣಗಂಭೀರ
 80. ಧಿರೋದತ್ತ ಗುಣತ್ತಮಯ
 81. ಮಾಯಾ ಮನುಷಾ ಚರಿತ್ರಾಯ
 82. ಮಹಾದೇವಡಿ ಪುಜಿತಾಯ
 83. ಸೆತುಕ್ರೈಟ್
 84. ಜೀತಾ ವರಶಾಯೆ
 85. ಸರ್ವ ತೀರ್ಥಮಯ
 86. ಹರಾಯೆ
 87. ಶ್ಯಾಮಂಗಯ
 88. ಸುಂದರಾಯ
 89. ಸುರಾಯ
 90. ಪಿತವಾಸಸ
 91. ಧನುರ್ಧರಾಯ
 92. ಸರ್ವ ಯಜ್ಞಾಧಿಪಯ
 93. ಯಜ್ವಿನ್
 94. ಜರಾಮರಣ ವರ್ಜಿತಾಯ
 95. ವಿಭೀಷಣ ಪ್ರತಿಷ್ಠಾತ್ರ
 96. ಸರ್ವಭಾರಣ ವರ್ಜಿತಾಯ
 97. ಪರಮತ್ಮನೆ
 98. ಪರಬ್ರಹ್ಮನೆ
 99. ಸಚಿದಾನಂದ ವಿಗ್ರಹಯ
 100. ಪರಸ್ಮಾಯಿ ಜ್ಯೋತಿಶೆ
 101. ಪರಸ್ಮಾಯಿ ಧಮ್ನೆ
 102. ಪರಕಾಶಾಯ
 103. ಪರತ್ಪಾರಾಯ
 104. ಪರೇಶಾಯ
 105. ಪರಕಾಯ
 106. ಪಾರಾಯ
 107. ಸರ್ವ ದೇವತ್ಮಕಾಯ
 108. ಪರಸ್ಮಾಯಿ

Time Bank, ಸಮಯದ ಬ್ಯಾಂಕು

ಮೊನ್ನೆ ಪರಿಚಯಸ್ತರೊಬ್ಬರ ಮನೆಗೆ ಹೋಗಿದ್ದೆ. ಹೀಗೇ ಅವರ ಬಳಿ ಮಾತಾನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ಸ್ವಿಡ್ವರ್ಲ್ಯಾಂಡಿನಲ್ಲಿ ಇರುವ ನಿಮ್ಮ ಮಗ ಹೇಗಿದ್ದಾರೆ ಎಂದು ಕೇಳಿದೆ. ಓ ಆವನಾ… ಹೂಂ ಈಗ ಚೆನ್ನಾಗಿದ್ದಾನೆ ಅಂದರು. ಓ ಅವನಾ.. ಎಂಬ ದೀರ್ಘ ಎಳೆದದ್ದು ನನಗೆ ಏನೂ ಸಮಸ್ಯೆ ಇರಬೇಕು ಎಂದು ತಿಳಿದು, ಯಾಕೆ ಏನಾಯ್ತು? ಎಲ್ಲಾ ಸರಿಯಾಗಿದೆ ತಾನೇ ಎಂದು ಮರು ಪ್ರಶ್ನಿಸಿದೆ. ಹೇ.. ಹೇ.. ಹಾಗೇನಿಲ್ಲಾ ಎಲ್ಲಾವೂ ಚೆನ್ನಾಗಿದೆ. ಒಂದೆರಡು ತಿಂಗಳ ಹಿಂದೆ ನಮ್ಮ ಮಗ ಅಲ್ಲಿ ತನ್ನ ಆಫೀಸಿಗೆ ಹತ್ತಿರದಲ್ಲೇ ಇರುವ ಹೊಸ ಮನೆಗೆ ಹೋದ. ಸಂಜೆ ಆಫೀಸ್ ಮುಗಿಸಿದ ನಂತರ ಮತ್ತು ವಾರಾಂತ್ಯದಲ್ಲಿ ನಮ್ಮ ಮಗ ಮನೆಯಲ್ಲಿ ಇರದೆ ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಇರುವುದನ್ನು ನೋಡಿ ಅವನ ಮನೆಯ ಮಾಲಿಕರಿಗೆ ಆಶ್ವರ್ಯವಾಗಿತ್ತಂತೆ. ಎರಡು ವಾರಗಳ ಹಿಂದೆ ನಮ್ಮ ಮಗ ಇದ್ದಕ್ಕಿದ್ದಂತಯೇ ಹುಷಾರು ತಪ್ಪಿ, ಏಳಲೂ ಆಗದೇ ಕೂರಲೂ ಆಗದೆ ಮನೆಯಲ್ಲಿಯೇ ಉಳಿದು ಬಿಟ್ಟಿದ್ದಾನೆ. ಇಡೀ ದಿನ ಮನೆಯಿಂದ ಹೊರಗೆ ಬಂದಿಲ್ಲದಿದ್ದನ್ನು ಗಮನಿಸಿದ ಅವರ ಮನೆಯ ಮಾಲಿಕರು ನಮ್ಮ ಮಗನ ಮನೆಗೆ ಬಂದು ನೋಡಿದಾಗ, ನಮ್ಮ ಮಗ ಹುಷಾರು ತಪ್ಪಿದ್ದನ್ನು ನೋಡಿ ಅವರ ಕಾರ್ನಲ್ಲಿಯೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿಸಿದ್ದಾರೆ. ಡಾಕ್ಟರ್ ನನ್ನ ಮಗನನ್ನು ಪರೀಕ್ಷಿಸಿ ವೈರಲ್ ಜ್ವರ ಬಂದಿರುವುದರಿಂದ ಎರಡು ಮೂರು ದಿನ ಆಸ್ಪತ್ರೆಯಲ್ಲಿಯೇ ಉಳಿಯಬೇಕು ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ಮನೆಯ ಮಾಲಿಕರಿಗೆ ಕಸಿವಿಸಿ. ಇದೊಳ್ಳೆ ಗ್ರಹಚಾರವಾಯಿತಲ್ಲಾ. ಇವನೋ ಬ್ರಹ್ಮಚಾರಿ ಇವನನ್ನು ನೋಡಿ ಕೊಳ್ಳಲು ಯಾರೂ ಇಲ್ಲ. ಸುಮ್ಮನೆ ಆಸ್ಪತ್ರೆಗೆ ಕರೆದು ಕೊಂಡು ಬಂದ ತಪ್ಪಿಗೆ ತಾವೇ ನೋಡಿಕೊಳ್ಳಬೇಕಾಯಿತಲ್ಲಾ ಎಂದು ಪರಿತಪಿಸುತ್ತಿರುವುದನ್ನು ಗಮನಿಸಿದ ನಮ್ಮ ಮಗ. ಸಾರ್ ನೀವೇನೂ ಯೋಚನೆ ಮಾಡಬೇಡಿ. ನನ್ನನ್ನು ನೋಡಿಕೊಳ್ಳಲು ಜನರಿದ್ದಾರೆ. ನನ್ನ ಟೈಮ್ ಬ್ಯಾಂಕ್ನಲ್ಲಿ ಸಾಕಷ್ತು ಪಾಯಿಂಟ್ ಇದೆ ಎಂದನಂತೆ. ಸುಮ್ಮನೆ ನಾನು ನನ್ನ ಅನಾರೋಗ್ಯದ ವಿಷಯವನ್ನು ನಮ್ಮ Time Bank Appನಲ್ಲಿ ತಿಳಿಸಿದರೆ ಆಯಿತು. ಸಹಾಯ ಮಾಡಲು ಸುಮಾರು ಜನ ಸದಸ್ಯರು ಬರುತ್ತಾರೆ ಎಂದನಂತೆ. ಹಾಗೆ update ಮಾಡಿದ ಗಂಟೆಯೊಳಗೆ ಒಂದಿಬ್ಬರು ಆಸ್ಪತ್ರೆಗೆ ಬಂದು ಇವನ ಆರೋಗ್ಯವನ್ನು ವಿಚಾರಿಸಿ, ಆವನಿಗೆ ಬೇಕಾಗಿರುವ ವ್ಯವಸ್ಥೆ ಮತ್ತು ಸೇವೆಗಳನ್ನು ವಿಚಾರಿಸಿ, ಮನೆಯ ಮಾಲಿಕರಿಗೆ ಧನ್ಯವಾದಗಳನ್ನು ತಿಳಿಸಿ, ತಾವು ಇನ್ನು ಹೊರಡಬಹುದು ಇವರು ಆಸ್ಪತ್ರೆಯಲ್ಲಿ ಇರುವವರೆಗೂ ನಾವೇ ನೋಡಿಕೊಳ್ಳುತ್ತೇವೆ ಎಂದರಂತೆ.

ಇದನ್ನು ಗಮನಿಸಿದ ಮನೆಯ ಮಾಲೀಕರು, ನಮ್ಮ ಮನೆಯ ಬಾಡಿಗೆದಾರ ಭಾರತೀಯ, ಅವನಿಗೆ ಸಹಾಯ ಮಾಡಲು ಬಂದಿರುವವರು ಸ್ಥಳಿಯರು ಹಾಗಾಗಿ ಕುತೂಹಲದಿಂದ ನಿಮ್ಮ ಪರಿಚಯ ಆಗಲಿಲ್ಲ. ನೀವೇನು ಇವರ ಸ್ನೇಹಿತರಾ? ಇಲ್ಲವೇ ಸಹೋದ್ಯೋಗಿಗಳಾ ಎಂದು ವಿಚಾರಿಸಿದಾಗ, ಇಲ್ಲಾ ಸಾರ್. ನಮಗೆ ಇವರ ಪರಿಚಯವಿಲ್ಲ. ಆದರೆ ಇವರು ನಮ್ಮ Time Bank ಸದಸ್ಯರು. ತಮ್ಮ ಸಂದಿಗ್ದ ಪರಿಸ್ಥಿತಿಯಲ್ಲಿ ತಮ್ಮ ಉಳಿತಾಯದ ಸಮಯವನ್ನು ಈಗ ತಮ್ಮ ಸೇವೆಗಾಗಿ ಬಳೆಸಿಕೊಳ್ಳುತ್ತಿದ್ದಾರೆ. ನಾವು ಇವರಿಗೆ ಸಹಾಯ ಮಾಡುತ್ತಾ ನಮ್ಮ ಪರಿಶ್ರಮದ ಸಮಯವನ್ನು ಸಮಯದ ಬ್ಯಾಂಕಿನಲ್ಲಿ ಜಮೆ ಮಾಡುತ್ತೇವೆ ಎಂದರಂತೆ ಎಂದು ತಿಳಿಸಿ, ಸಮಯ ಬ್ಯಾಂಕು ಎಂಬುದು ಒಂದು ಪರಸ್ಪರ-ಆಧಾರಿತ ಕೆಲಸದ ವ್ಯಾಪಾರ ವ್ಯವಸ್ಥೆಯಾಗಿದ್ದು ಇದರಲ್ಲಿ ಗಂಟೆಗಳ ಕರೆನ್ಸಿ ಇರುತ್ತದೆ. ಸಮಯ ಬ್ಯಾಂಕಿಂಗ್ನೊಂದಿಗೆ, ಒಂದು ಕೌಶಲ್ಯ ಹೊಂದಿದ ವ್ಯಕ್ತಿಯು ಬ್ಯಾಂಕುಗಳು ಮತ್ತು ಸೇವೆಗಳಿಗೆ ಪಾವತಿಸಬೇಕಾದ ಅಥವಾ ಪಾವತಿಸುವ ಬದಲು ಮತ್ತೊಂದು ಕೌಶಲ್ಯ ಸೆಟ್ನಲ್ಲಿ ಸಮಾನ ಸಮಯದ ಕೆಲಸಕ್ಕೆ ಕೆಲಸ ಮಾಡುವ ಸಮಯವನ್ನು ವಹಿಸಬಹುದು. ಇವರು ತಮ್ಮ ಬಿಡುವಿನ ವೇಳೆಯಲ್ಲಿ ಇತರರಿಗೆ ಸೇವೆ ಮಾಡಿದ್ದಾರೆ. ಹಾಗೆ ಸೇವೆ ಮಾಡಿದಷ್ಟು ಸಮಯವನ್ನು ನಮ್ಮಲ್ಲಿ ದಾಖಲಿಸಿದ್ದಾರೆ. ಈಗ ಅವರೇ ತೊಂದರೆಯಲ್ಲಿದ್ದಾಗ, ನಮ್ಮಂತಹ ಸದಸ್ಯರು ಅವರಲ್ಲಿದ್ದ ಕರೆನ್ಸಿಗೆ ತಕ್ಕಂತೆ ಅವರಿಗೆ ಬೇಕಾದ ಸೇವೆಗೆ ತಮ್ಮ ಉಳಿತಾಯದ ಸಮಯವನ್ನು ವಿನಿಯೋಗಿಸಿಕೊಳ್ಳಬಹುದು. ಇದೊಂದು ರೀತಿ ಪರಸ್ಪರ ಸೇವೆಯ ವಿನಿಮಯ ಮಾಡಿಕೊಳ್ಳುವ ಪದ್ದತಿ ಎಂದು ಸೂಕ್ಷ್ಮವಾಗಿ ವಿವರಿಸಿದ್ದಾನೆ. ಸದ್ಯ Time Bankನಿಂದಾಗಿ ನಮ್ಮ ಮಗ ಶೀಫ್ರವಾಗಿ ಗುಣಮುಖನಾಗಿ ಈಗ ಒಂದು ವಾರದ ಹಿಂದೆಯಿಂದ ಪುನಃ ಕೆಲಸಕ್ಕೆ ಹೋಗುತ್ತಿದ್ದಾನೆ ಎಂದು ತಿಳಿಸಿ ದೀರ್ಘ ನಿಟ್ಟುಸಿರು ಬಿಟ್ಟರು ಆ ಹಿರಿಯರು. ಮುಂದೆ ಹೀಗೆ ಆಗಬಾರದು ಎಂದು ಇನ್ನು ಎರಡು ಮೂರು ತಿಂಗಳ ಒಳಗೆ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ನಿನಗೆ ಗೊತ್ತಿರುವ ಯಾವುದಾದರೂ ಸಂಪ್ರದಾಯಸ್ತ, , ವಿದ್ಯಾವಂತ ಹುಡುಗಿ ಇದ್ದರೆ ತಿಳಿಸು ಎಂದು ಕೇಳಿಕೊಂಡರು. ಈಗ ನಾನು ನನ್ನ ಸಮಯವನ್ನು ಅವರ ಕುಟುಂಬಕ್ಕೆ ಅನುಗುಣವಾದ ಸೊಸೆಯನ್ನು ಹುಡುಕುವುದರಲ್ಲಿ ವಿನಿಯೋಗಿಸುತ್ತಿದ್ದೇನೆ.

ಮನೆಗೆ ಹಿಂತಿರುಗಿದ ನಂತರ ಕುತೂಹಲದಿಂದ ಸಮಯದ ಬ್ಯಾಂಕ್ (https://www.moneyland.ch/en/time-banking-currency-switzerland-guide) ಬಗ್ಗೆ ಅಂತರ್ಜಾಲದಲ್ಲಿ ಓದಿನೋಡಿದಾಗ, ಸಮಯ ಬ್ಯಾಂಕಿಂಗ್ ಹಿಂದಿನ ಕಲ್ಪನೆ ಬಹಳ ಸರಳವಾಗಿದೆ. ಒಬ್ಬ ವ್ಯಕ್ತಿ ಅಥವಾ ಘಟಕದ ಇನ್ನೊಂದು ಘಟಕದ ಸಮಯದ ಆಧಾರಿತ ಸೇವೆಯನ್ನು ಒದಗಿಸುತ್ತದೆ. ಈ ಸೇವೆ, ಐಟಿ ಸೇವೆಗಳು, ಸಮಾಲೋಚನೆ, ಶಿಶುಪಾಲನಾ, ಹೇರ್ ಡ್ರೆಸ್ಸಿಂಗ್, ತೋಟಗಾರಿಕೆ, ನಿರ್ಮಾಣ, ಪಾಠ ಅಥವಾ ಯಾವುದೇ ಸಮಯ ಆಧಾರಿತ ಸೇವೆಯನ್ನು ಒದಗಿಸುವ ಸಮಯವನ್ನು ಸಮಯ ಬ್ಯಾಂಕಿನಲ್ಲಿ ದಾಖಲಿಬಹುದಾಗಿದೆ. ಈ ರೀತಿಯಾಗಿ ಸಮಯ ಬ್ಯಾಂಕಿನಲ್ಲಿ ಸಂಗ್ರಹವಾದ ಸಮಯಗಳನ್ನು ಅಗತ್ಯವಿದ್ದಾಗ ಇತರ ವ್ಯಕ್ತಿಗಳಿಂದ ಸಮಯ-ಆಧಾರಿತ ಸೇವೆಗಳನ್ನು ಖರೀದಿಸಲು ಬಳಸಬಹುದಾಗಿದೆ.

ಸ್ವಿಜರ್ಲ್ಯಾಂಡಿನಲ್ಲಿ ಇಂತಹ ಪರ್ಯಾಯ ಕರೆನ್ಸಿಯ ದೀರ್ಘ ಸಂಪ್ರದಾಯಗಳೊಂದಿಗೆ, ಬ್ಯಾಂಕಿಂಗ್ ಮತ್ತು ಸಾಮಾಜಿಕ ಐಕಮತ್ಯವು ಹಲವಾರು ವರ್ಷಗಳಿಂದ ಜಾರಿಗೆಯಲ್ಲಿದೆ. . ದೇಶಾದ್ಯಂತ ಸುಮಾರು 40ಕ್ಕೂ ವಿಭಿನ್ನ ಸಮಯ ವಿನಿಮಯಗಳೊಂದಿಗೆ, ಈ ಕಾರ್ಯಕ್ರಮಗಳು ಸಮಯವನ್ನು ಗಳಿಸಲು ಮತ್ತು ಖರ್ಚು ಮಾಡಲು ಅವಕಾಶಗಳನ್ನು ಒದಗಿಸುತ್ತವೆ. ಸದಸ್ಯರು ಮಾಡಿದ ಸೇವೆಗಳ ಸಮಯಕ್ಕೆ ಬದಲಾಗಿ ಅವುಗಳನ್ನು ನಗದಾಗಿಯೂ ವಿನಿಮಯ ಮಾಡುವ ಅವಕಾಶವಿರುತ್ತದೆ. ಹಾಗಾಗಿ ಸ್ವಿಜರ್ಲ್ಯಾಂಡಿನ ಬಹುತೇಕರು ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಸೇವೆಯನ್ನು ಮಾಡಿ ಸಮಯದ ಬ್ಯಾಂಕ್ನಲ್ಲಿ ಜಮೆ ಮಾಡುತ್ತಿದ್ದಾರೆ. ಅನೇಕ ಸಶಕ್ತ ನಿವೃತ್ತದಾರರೂ ಇದರ ಉಪಯೋಗದಿಂದ ನಿವೃತ್ತಿಯಾದ ನಂತರವೂ ಹಣವನ್ನು ಗಳಿಸುತ್ತಿದ್ದಾರೆ.

ಈ ವಿಷಯವನ್ನು ಓದುತ್ತಿದ್ದಾಗ, ಅರೇ ಭಾರತೀಯರಾದ ನಮಗೆ ಇದೇನೂ ಹೋಸದಲ್ಲ. ವಸುದೈವ ಕುಟುಂಬಕಂ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುವುದೇ ನಮ್ಮ ಮೂಲ ಮಂತ್ರವಾಗಿದೆ.

ಪರೋಪಕಾರಾಯ ಫಲಂತಿ ವೃಕ್ಷಾಃ| ಪರೋಪಕಾರಾಯ ವಹಂತಿ ನದ್ಯಃ |

ಪರೋಪಕಾರಾಯ ದುಹಂತಿ ಗಾವಃ | ಪರೋಪಕಾರಾರ್ಥಮ್ ಇದಂ ಶರೀರಮ್ ||

ಪರೋಪಕಾರಕ್ಕಾಗಿಯೇ ಮರಗಳು ಹಣ್ಣುಕೊಡುತ್ತವೆ, ನದಿಗಳು ನೀರು ಇತರರ ಅನುಕೂಲಕ್ಕಾಗಿಯೇ ಇದೆ. ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ, ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರ ಮಾಡುವುದಕ್ಕಾಗಿಯೇ ಎಂಬ ಈ ಪುರಾತನ ಸಂಸ್ಕೃತ ಶ್ಲೋಕವೇ ನಮ್ಮ ಸಂಸ್ಕೃತಿಯನ್ನು ನಮ್ಮ ಪರಸ್ಪರ ಉಪಕಾರವನ್ನು ಎತ್ತಿ ತೋರಿಸುತ್ತಿದೆ.

ನಾನೂ ಕೂಡ ನನ್ನ ಬ್ಲಾಗ್ನಲ್ಲಿ ನೆರೆಹೊರೆ (https://wp.me/paLWvR-I) ಎಂಬ ಲೇಖನವನ್ನು ಇದೇ ಕುರಿತಾಗಿಯೇ ಕೆಲವು ತಿಂಗಳಗಳ ಹಿಂದೆಯೇ ಬರೆದಿದ್ದೆ. ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ನಾವು ಮಾಡುವ ಪುಣ್ಯ ಕೆಲಸಗಳು ನಮ್ಮ ಮಕ್ಕಳನ್ನು ಇಲ್ಲವೇ ಮೊಮ್ಮಕ್ಕಳನು ಕಾಪಾಡುತ್ತದೆ ಎಂದೇ ಭಾವಿಸಿಯೇ ಮಾಡುತ್ತೇವೆ. ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಆ ಭಗವಂತ ಲೆಕ್ಕ ಇಟ್ಟಿರುತ್ತಾನೆ ಮತ್ತು ಸಮಯ ಬಂದಾಗ ನಮ್ಮನ್ನು ಕಾಪಾಡುತ್ತಾನೆ ಎಂದೇ ನಂಬಿದ್ದೇವೆ ಮತ್ತು ಅಂತೆಯೇ ಇತರಿಗೆ ಸಹಾಸ ಹಸ್ತವನ್ನು ಚಾಚುತ್ತೇವೆ. ಇದೇ ಪರಿಕಲ್ಪನೆಯನ್ನು ಸ್ವಿಜರ್ಲ್ಯಾಂಡಿನಲ್ಲಿ ಮತ್ತು ಹಲವಾರು ವಿದೇಶಗಳಲ್ಲಿ ಸಮಯದ ಬ್ಯಾಂಕ್ ಎಂಬ ಹೆಸರಿನಲ್ಲಿ ಆಧುನೀಕರಣಗೊಳಿಸಿ ಅದಕ್ಕೊಂದು ವ್ಯವಹಾರ ರೂಪವನ್ನು ಕೊಟ್ಟಿದ್ದಾರೆ ಅಷ್ಟೇ.

ಇಂದಿಗೂ ನಮ್ಮ ಹಳ್ಳಿಗಳಲ್ಲಿ ಯಾವುದೇ ಸಭೆ ಸಮಾರಂಭಗಳಾಗಲೀ, ಜಾತ್ರೆಗಳಾಗಲೀ, ಸಾಮೂಹಿಕ ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರಿನ ಪ್ರತಿ ಮನೆಯ ಸದಸ್ಯರೂ ಒಂದಾಗಿಯೇ ತಮ್ಮ ತಮ್ಮ ಕುಶಲತೆಯ ತಕ್ಕಂತೆ ಜೋಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ. ಇಂದಿಗೂ ಹಳ್ಳಿಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಹತ್ತಾರು ರೈತರು ಒಂದು ಕಡೆ ಕಣ ಮಾಡಿ ಎಲ್ಲರೂ ಒಗ್ಗಟ್ಟಾಗಿ ಎಲ್ಲರ ಬೆಳೆಗಳನ್ನೂ ಸ್ವಚ್ಚಗೊಳಿಸುತ್ತಾರೆ. ಇಲ್ಲಿ ತಾನು ಹೆಚ್ಚು ಇನ್ನೊಬ್ಬ ಕಡಿಮೆ ಎಂಬ ಭಾವನೆಗಳು ಇರುವುದಿಲ್ಲ ಮತ್ತು ಆಳು ಕಾಳುಗಳಿಗಳಿಗೆ ಕೂಲಿಯನ್ನು ಕೊಡುವುದಿಲ್ಲ. ಎಲ್ಲರ ಒಗ್ಗಟ್ಟಿನ ಪರಿಶ್ರಮವೇ ಇಲ್ಲಿ ಪ್ರಧಾನವಾಗುತ್ತದೆಯೇ ಹೊರತು ಯಾರೂ ಇಲ್ಲಿ ಯಾರೂ ತಮ್ಮ ಸೇವೆಯನ್ನು ಲೆಖ್ಖ ಇಡುವುದಿಲ್ಲ ಮತ್ತು ಅವರು ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯನ್ನೂ ಬಯಸುತ್ತಿರಲಿಲ್ಲ.

ಪಾಶ್ಚಾತ್ಯ ಸಂಸ್ಕೃತಿಯನ್ನು ಆದರಿಸುತ್ತಾ, ನಾವು ನಮ್ಮದೇ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನಾವು ಮರೆಯುತ್ತಿದ್ದರೆ, ಪಾಶ್ಚಾತ್ಯರು ನಮ್ಮ ಸತ್ಸಂಪ್ರದಾಯಗಳಿಗೆ ಹೊಸಮೆರಗು ನೀಡುತ್ತಾ ಸದುಪಯೋಗ ಪಡಿಸಿಸಿಕೊಳ್ಳುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ನಮ್ಮ ಮಕ್ಕಳಿಗೆ ನಮ್ಮ ಸನಾತನ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಕಲಿಸಿಕೊಡೋಣ. ಸಾಧ್ಯವಾದಷ್ಟೂ ನಮ್ಮ ಮನೆಗಳಲ್ಲಿ ನಮ್ಮ ಮಾತೃಭಾಷೆಗೇ ಒತ್ತು ಕೊಡುವುದರ ಮೂಲಕ ನಮ್ಮ ಸಂಸೃತಿಗಳಿಗೆ ಪುನಶ್ಚೇತನ ಕೊಡೋಣ. ಹಿಂದಿನಂತೆಯೇ ಪರಸ್ಪರ ಸಹಾಯ ಮಾಡೋಣ ನಮ್ಮ ಮುಂದಿನ ಪೀಳಿಗೆಗಳಿಗೂ ನಮ್ಮ ತನವನ್ನು ಉಳಿಸೋಣ ಬೆಳೆಸೋಣ. ಧರ್ಮೋ ರಕ್ಷತಿ ರಕ್ಷಿತಃ. ಭಾರತವನ್ನು ಮತ್ತೊಮ್ಮೆ ವಿಶ್ವ ಗುರುವನ್ನಾಗಿ ಮಾಡೋಣ.

ಏನಂತೀರೀ?

ಹಿರಿಯರು ಇರಲವ್ವಾ ಮನೆತುಂಬಾ

ಹಬ್ಬ ಹರಿದಿನಗಳಲ್ಲಿ, ಮದುವೆ ಮುಂಜಿ ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಆಚಾರ, ವಿಚಾರ ಕಟ್ಟು ಪಾಡುಗಳು ಮತ್ತು ಸಂಪ್ರದಾಯದ ಆಚರಣೆಗಳೇ ಹೆಚ್ಚಿನ ಮಹತ್ವ ಪಡೆದಿರುತ್ತವೆ. ಒಂದೊಂದು ಪ್ರದೇಶದಲ್ಲಿಯೂ, ಒಬ್ಬೊಬ್ಬರ ಮನೆಗಳಲ್ಲಿಯೂ ಅಲ್ಲಿಯ ಸ್ಥಳೀಯ ಪರಿಸರ, ಹವಾಮಾನ ಮತ್ತು ಅನುಕೂಲಕ್ಕೆ ತಕ್ಕಂತೆ ಆಚರಣೆಗಳು ರೂಢಿಯಲ್ಲಿರುತ್ತದೆ. ಹಾಗಂದ ಮಾತ್ರಕ್ಕೆ ಈ ಪದ್ದತಿಗಳಿಗೆ ಯಾವುದೇ ಲಿಖಿತ ವಿಧಿವಿಧಾನಗಳು ಇಲ್ಲವಾದರೂ ಅದು ತಲೆ ತಲಾಂತರದಿಂದ ಹಿರಿಯರು ಆಚರಿಸುತ್ತಿದ್ದದ್ದನು ನೋಡಿ, ಕೇಳಿ ತಿಳಿದು ರೂಢಿಯಲ್ಲಿಟ್ಟು ಕೊಂಡು ಬಂದಿರುತ್ತಾರೆ.

ನೆನ್ನೆ ವರಮಹಾಲಕ್ಷ್ಮಿ ಹಬ್ಬ. ಸಕಲ ಹಿಂದೂಗಳು ಯಾವುದೇ ಜಾತಿಯ ತಾರತಮ್ಯವಿಲ್ಲದೇ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಹಬ್ಬ. ಜೊತೆಗೆ ಸಕಾಲಿಕವಾಗಿ ಮಳೆಯೂ ಬಿದ್ದ ಕಾರಣ, ನಮ್ಮ ಸುತ್ತಮುತ್ತಲ ಪ್ರದೇಶಗಳೆಲ್ಲಾ ಹಚ್ಚ ಹಸಿರನ್ನು ಹೊತ್ತು ಪ್ರಕೃತಿಯೇ ನಮ್ಮೆಲ್ಲರ ಸಂಭ್ರಮವನ್ನು ಇಮ್ಮಡಿಗೊಳಿಸಿ ಹಬ್ಬಕ್ಕೆ ಇನ್ನೂ ಮೆರಗನ್ನು ‌ತಂದಿದೆ.. ಇಂತಹ ಹಬ್ಬದಂದು ಮನೆಯಲ್ಲಿಯೂ ಅದೇ ವಾತಾವರಣ ಮೂಡಿಸಲು ತಳಿರು ತೋರಣಗಳಿಂದ ಸಿಂಗರಿಸುವುದು ವಾಡಿಕೆ. ನಮ್ಮ ಪೂಜ್ಯ ತಂದೆಯವರು ಇದ್ದಾಗ ಅವರೇ ಹಿಂದಿನ ದಿನ ಚಿಗುರಾದ ಮಾವಿನ ಎಲೆಗಳನ್ನು ತಂದು ಅದನ್ನು ತೊಳೆದು, ನೀಟಾಗಿ ಒರೆಸಿ ಒಂದೇ ಸಮಾನಾದ ಎಲೆಗಳನ್ನೆಲ್ಲಾ ಜೋಡಿಸಿ ತುದಿಯನ್ನು ಸರಿಸಮನಾಗಿ ಕತ್ತರಿಸಿ, ಮನೆಯ ಮುಖ್ಯದ್ವಾರ ಮತ್ತು ದೇವರ ಮನೆಗಳ ಬಾಗಿಲಿನ ಹಳೆಯ ತೋರಣಗಳನ್ನು ತೆಗೆದು., ದಾರವನ್ನು ಮತ್ತೊಮ್ಮ ಹುರಿಗೊಳಿಸಿ, ಬಾರೋ ಬಾರೋ ಮಗು, ಇಲ್ಲವೇ ಬಾರೋ ಬಾರೋ ಅಕ್ಕಾ, ಅಪ್ಪಾ ಬರುವ ಹೊತ್ತಿಗೆ ತೋರಣ ಎಲ್ಲಾ ಕಟ್ಟಿ ಬಿಡೋಣ ಎಂದು ನನ್ನ ಮಗ ಇಲ್ಲವೇ ಮಗಳನ್ನು ಪೂಸಿ ಹೊಡೆಯುತ್ತಾ ಅವರ ಸಹಾಯದೊಂದಿಗೆ ಚೆಂದದ ತೋರಣಗಳನ್ನು ಕಟ್ಟಿ ಉಳಿದ ಎಲ್ಲಾ ಬಾಗಿಲುಗಳಿಗೆ ಮಾವಿನ ಕುಡಿ ಮತ್ತು ಬೇವಿನ ಕುಡಿಯನ್ನು ಸಿಕ್ಕಿಸಿದರೆ, ನಮ್ಮ ತಾಯಿಯವರು ಮನೆಯ ಕೈ ತೋಟದಲ್ಲಿಯೇ ಬಿಟ್ಟ ಹೂವುಗಳ ಜೊತೆಗೆ ಸಿಕ್ಕ ಪಕ್ಕ ಪತ್ರೆಗಳನ್ನೆಲ್ಲಾ ಸೇರಿಸಿ ಮುದ್ದಾದ ತೋಮಲವನ್ನು ಕಟ್ಟಿ ಬಾಗಿಲಿಗೆ ಸಿಕ್ಕಿಸಿ ಹಬ್ಬದ ಹಿಂದಿನ ದಿನವೇ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿ ಬಿಡುತ್ತಿದ್ದರು.

ಆದರಿಂದು ಆ ರೀತಿ ಸಂಭ್ರಮಿಸಲು ನಮ್ಮ ಜೊತೆ ನಮ್ಮ ತಾಯಿ ಮತ್ತು ತಂದೆಯವರು ಇಲ್ಲದಿದ್ದರೂ ಆ ಸತ್ಸಂಪ್ರದಾಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ನಡೆಸಿಕೊಂಡು ಹೋಗುವುದನ್ನು ತಮ್ಮ ಮೊಮ್ಮಕ್ಕಳಿಗೆ ಕಲಿಸಿ ಕೊಟ್ಟಿ ಹೋಗಿದ್ದಾರೆ. ನೆನ್ನೆ ಸಂಜೆ ಮನೆಯಿಂದಲೇ ಕಛೇರಿಯ ಕೆಲಸ ಮುಗಿಸಿದಾಗ ತಡರಾತ್ರಿಯಾಗಿತ್ತು. ಅಷ್ಟು ಹೊತ್ತಿಗಾಗಲೇ ನನ್ನ ಮಗ, ಎದುರು ಮನೆಯಿಂದ ಮಾವಿನ ಸೊಪ್ಪು, ಬಾಳೇಕಂದು ಎಲ್ಲವನ್ನೂ ತಂದು ತನ್ನ ತಾಯಿಯ ಸಹಾಯದಿಂದ ತನ್ನ ತಾತನ ರೀತಿಯಲ್ಲಿಯೇ ಅತ್ಯಂತ ಚೊಕ್ಕವಾಗಿ ತೋರಣ ಕಟ್ಟಿದ್ದನ್ನು ನೋಡಿದಾಗ, ನನಗೆ ಅರಿವಿಲ್ಲದಂತೆಯೇ ನನ್ನ ಕಣ್ಣುಗಳು ತುಂಬಿ ಹೃದಯ ಭಾರವಾಗಿ ಅಗಲಿದ ನಮ್ಮ ತಂದೆಯರ ನೆನಪಾಯಿತು.

ಬೆಳಿಗ್ಗೆ ತೈಲಾಭ್ಯಂಜನಕ್ಕೆ ಮನೆಯವರೆಲ್ಲರೂ ಸಿದ್ಧರಾದಾಗ ಮಗಳು ನನಗೆ ಮತ್ತು ನನ್ನ ಮಗನ ಹಣೆಗೆ ಕುಂಕುಮವಿಟ್ಟು ನೆತ್ತಿಯ ಮೇಲೆ ಹರಳೆಣ್ಣೆ ಒತ್ತಿ ತನ್ನಮ್ಮನ ಜೊತೆಯಲ್ಲಿ ಆರತಿ ಬೆಳಗುತ್ತಿದ್ದಾಗ ನನಗೆ, ಆಕೆ ನನ್ನ ಮಗಳಂತೆ ಕಾಣದೆ ಸ್ವತಃ ನನ್ನ ತಾಯಿಯೇ ನನಗೆ ಆರತಿ ಮಾಡುತ್ತಿದ್ದಾರೇನೋ ಎಂಬಂತೆ ಭಾಸವಾಗಿದ್ದಂತೂ ಸತ್ಯ. ಅದೇ ರೀತಿ ಹಬ್ಬಕ್ಕೂ ಮುಂಚೆ, ಅಮಾವಾಸ್ಯೆಗೂ ಮೊದಲೇ ಅಮ್ಮಾ ಮಕ್ಕಳೇ ಸೇರಿಕೊಂಡು ಮನೆಯ ಧೂಳನ್ನೆಲ್ಲಾ ತೆಗೆದು ದೇವರುಗಳನ್ನೆಲ್ಲಾ ತೊಳೆದು ಮತ್ತೊಮ್ಮೆ ಅಣಿಗೊಳಿಸಿ,ತಾತ ಇಲ್ಲದಿರುವ ಕಾರಣ ನನ್ನಿಂದಲೇ ಭಕ್ಷೀಸು ಕೂಡಾ ಪಡೆದಿದ್ದರು.

ಮನೆಯವರೆಲ್ಲರೂ ಕೂಡಿ ಸರಳವಾಗಿ ಆದರೆ ಸಾಂಗೋಪಾಂಗವಾಗಿ ಪೂಜೆಗಳನ್ನು ಮುಗಿಸಿ, ಪ್ರಸಾದದ ಜೊತೆ ಬೆಳಗಿನ ಉಪಹಾರ ಮುಗಿಸಿದ ಸಂತರ ಮಧ್ಯಾಹ್ನದ ಅಡುಗೆಯ ತಯಾರಿಗೆ ಸಿದ್ದವಾದಾಗ, ನಾನು ಮತ್ತು ನನ್ನ ಮಗ ತರಕಾರಿ ಹೆಚ್ಚಿಕೊಟ್ಟು, ತೆಂಗಿನಕಾಯಿ ತುರಿದುಕೊಟ್ಟರೆ, ಮಗಳು ತನ್ನ ಅಜ್ಜಿ (ನಮ್ಮ ಮನೆಯವರ ತಾಯಿ)ಯ ಜೊತೆ ಬೇಳೆ ಒಬ್ಬಟ್ಟಿಗೆ ಹೂರಣ ಹೇಗೆ ಸಿದ್ಧ ಪಡಿಸಿಕೊಳ್ಳು ಬೇಕು ಎಂಬುದನ್ನು ಕಲಿತುಕೊಳ್ಳುತ್ತಿದ್ದಳು. ನನ್ನ ಮನೆಯೊಡತಿ ಉಳಿದ ಪದಾರ್ಥಗಳ ತಯಾರಿಯಲ್ಲಿ ಮಗ್ನಳಾಗಿದ್ದರೆ, ನಮ್ಮ ಮಾವನವರು ಮನೆಯ ಹಿತ್ತಲಿನಿಂದ ಕತ್ತರಿಸಿ ತಂದ ಬಾಳೇ ಎಲೆಯನ್ನು ತೊಳೆದು ಒರೆಸಿ, ಒಬ್ಬಟ್ಟು ಮಾಡಲೂ ಮತ್ತು ಊಟಕ್ಕೂ ಬಾಳೆ ಎಲೆ ಸಿದ್ದ ಪಡಿಸಿಟ್ಟಿದ್ದರು. ಹೀಗೆ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಕೊಂಡು ನಮ್ಮ ಮನೆ 1000, ಸಂಭ್ರಮ (ಸಾವಿರದ ಸಂಭ್ರಮಕ್ಕೆ) ಅನ್ವರ್ಥದಂತೆ ಸಂಭ್ರಮವಾಗಿ ಹಬ್ಬವನ್ನು ಆಚರಣೆ ಮಾಡಿದ್ದನ್ನು ಹೇಳುವುದಕ್ಕಿಂತ ಆಚರಿಸಿ ಅನುಭವಿಸಿದರೇ ಚೆಂದ ಮತ್ತು ಮನಕ್ಕೆ ಆನಂದ.

ಅಂದು ನಮ್ಮ ತಾಯಿ ತಂದೆಯರು ತಮ್ಮ ಮೊಮ್ಮಕ್ಕಳಲ್ಲಿ ಬಿತ್ತಿ ಹೋದ ಸಂಪ್ರದಾಯದ ಬೀಜ ಇಂದು ಮೊಳಕೆಯೊಡೆದು ಸಣ್ಣ ಸಸಿಯಾಗಿ ಟಿಸಿಲು ಹೊಡೆಯುತ್ತಿದ್ದರೆ ಅದಕ್ಕೆ ಇಂದು ನಮ್ಮ ಅತ್ತೆ ಮತ್ತು ಮಾವನವರು ಸರಿಯಾದ ಸಮಯಕ್ಕೆ ಸಂಪ್ರದಾಯದ ನೀರೇರದು ಪೋಷಿಸಿ ಹೆಮ್ಮರ ಮಾಡುವ ಕನಸು ಹೊತ್ತಿದ್ದಾರೆ ಮತ್ತು ಅದರಲ್ಲಿ ಬಹಳಷ್ಟು ಸಾಕಾರವನ್ನೂ ಪಡೆದಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸದು.

ಇಂದಿಗೂ ಸಹಾ ನಾವು ನಮ್ಮನ್ನು ಪರಿಚಯಿಸಿಕೊಳ್ಳುವ ಸಂಧರ್ಭದಲ್ಲಿ ಇಂತಹ ಊರಿನ, ಇಂತಹ ವಂಶದ, ಇಂತಹವರ ಮೊಮ್ಮಕ್ಕಳು, ಇಂತಹವರ ಮಕ್ಕಳು ಎಂದೇ ನಮ್ಮ ಹಿರಿಯರ ಅಸ್ತಿತ್ವದಿಂದಲೇ ಗುರುತಿಸಿಕೊಳ್ಳುತ್ತೇವೆ.‌ ನಮ್ಮ ವಂಶಾವಳಿಯ ಚೆನ್ನಾಗಿದ್ದಲ್ಲಿ ಅವರ ಮುಂದಿನ ಪೀಳಿಗೆಯೂ ಅದೇ ಸಂಸ್ಕಾರವನ್ನು ಹೊಂದಿರುತ್ತದೆ ಎಂಬುದೇ ಎಲ್ಲರ ನಂಬಿಕೆಯಾಗಿದೆ. ನಾವುಗಳು ತಪ್ಪು ಮಾಡಿದರೂ ಬೈಯ್ಯುವುದು ನಮ್ಮ ಹಿರಿಯರನ್ನೇ. ಯಾವ ವಂಶದವನಪ್ಪಾ ಇವನು? ಅದೇನು ಹೇಳ್ಕೊಟ್ಟಿದ್ದಾರಪ್ಪಾ ಇವರ ಅಪ್ಪಾ ಅಮ್ಮಾ ಎಂದು ಹಿರಿಯರನ್ನೇ ಬೈಯ್ಯುತ್ತಾರೆ.

ಇಂದು ಆಗಸ್ಟ್ 21, ಹಿರಿಯ ನಾಗರೀಕರ ದಿನ. ದುರಾದೃಷ್ಟವಶಾತ್ ಇಂದಿನ ಬಹುತೇಕ ಮನೆಗಳಲ್ಲಿ ಹಿರಿಯರನ್ನು ಒಬ್ಬಂಟಿಯಾಗಿ ಮಾಡಿ ನಾನಾ ಕಾರಣಗಳಿಗಾಗಿ ದೂರ ಇರುತ್ತಾರೆ. ಹಾಗೆ ದೂರ ಹೋಗುವುದು ತಪ್ಪು ಎಂದು ಹೇಳುವುದಿಲ್ಲ. ಆದರೆ ನಮ್ಮ ಮನೆಯ ಹಿರಿಯರನ್ನೂ ಅವರ ಕಡೆಯ ದಿನಗಳಲ್ಲಿ ನಮ್ಮೊಂದಿಗೆ ಇಟ್ಟುಕೊಂಡು ಯಥಾಶಕ್ತಿ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರೇನೂ ನಮ್ಮಿಂದ ಪ್ರತಿದಿನ ಭಕ್ಷ್ಯ ಭೋಜನಗಳನ್ನೇನೂ ಬಯಸುವುದಿಲ್ಲ. ನಮ್ಮಿಂದ ಹಣಕಾಸಿನ ನೆರವನ್ನಂತೂ ಕೇಳುವುದಿಲ್ಲ. ಅವರಿಗೆ ಬೇಕಾದದ್ದು ಮಕ್ಕಳ ಮತ್ತು ಮೊಮ್ಮಕ್ಕಳ ಪ್ರೀತಿ ಮತ್ತು ವಿಶ್ವಾಸ ಅಷ್ಟೇ. ದಯವಿಟ್ಟು ನಮ್ಮ ಪೋಷಕರನ್ನು ವೃದ್ದಾಶ್ರಮಕ್ಕೆ‌ ಸೇರಿಸದಿರೋಣ. ಹೆತ್ತ‌ಮಕ್ಕಳೇ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿ ಕೊಳ್ಳಲು ಆಗದಿದ್ದಲ್ಲಿ ವೃದ್ಧಾಶ್ರಮದಲ್ಲಿ ಸಂಬಂಧವೇ ಪಡೆದವರು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ ಎಂದು ಹೇಗೆ ತಾನೇ ನಂಬುವುದು?

ಹಿಂದಿನ ಕಾಲದಲ್ಲಿ ಆಶೀರ್ವಾದ ಮಾಡುವಾಗ ಮಕ್ಕಳಿರಲವ್ವಾ ಮನೆ ತುಂಬಾ ಎಂದು ಹೇಳುತ್ತಿದ್ದರು. ಇಂದು ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೆರಡೇ ಇರಲಿ ಮತ್ತು ಅವರ ಜೊತೆಗೆ ಅವರ ಅಜ್ಚಿ ಯಂದಿರು, ತಾತ ಮತ್ತು ಅಜ್ಜನವರು ಜೊತೆಯಲ್ಲಿಯೇ ಇರಲಿ ಎನ್ನುವುದು ಸೂಕ್ತವಲ್ಲವೇ?

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ನೂಲಿನಂತೆ ಸೀರೆ ತಾಯಿಯಂತೆ ಮಗಳು ಎನ್ನುವಂತೆ, ನಾವು ಇಂದು ಕಲಿಸಿ ಕೊಡುವ ಸಂಸ್ಕೃತಿ ಮತ್ತು ಸಂಪ್ರದಾಯಗಳೇ ಮುಂದೆ ತಲಾತಲಾಂತರದವರೆಗೂ ನಮ್ಮ ವಂಶವನ್ನು ಕಾಪಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಹಿಂದಿನಂತೆಯೇ, ಅವಿಭಕ್ತ ಕುಟುಂಬಗಳಾಗಿ ಇರೋಣ. ಅನಿವಾರ್ಯ ಪರಿಸ್ಥಿತಿಯಲ್ಲಿ, ಎಲ್ಲೇ ಇರಲೀ, ಹೇಗೇ ಇರಲೀ, ಹೆತ್ತ ತಂದೆ ತಾಯಿ, ಕಟ್ಟಿ ಕೊಂಡ ಮಡದಿ ಮತ್ತು ಜನ್ಮ ಕೊಟ್ಟ ಮಕ್ಕಳೊಂದಿಗೆ ವಿಭಕ್ತ ಕುಟುಂಬಗಳಾಗಿಯಾದರೂ ಸುಖಃ ಸಂಸಾರ ನಡೆಸೋಣ. ಮನಗಳು ವಿಕಸನಗೊಂಡಂತೆಲ್ಲಾ ಮನೆಗಳು ಅರಳುತ್ತವೆ. ಮನೆಗಳು ಅರಳಿದಾಗ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳು ಮಾಯವಾಗಿ ಇಡೀ ಕುಟುಂಬ ಸುಖಃ ಶಾಂತಿ ನೆಮ್ಮದಿಯಿಂದ ಇರುತ್ತದೆ.

ಏನಂತೀರೀ?

ನಿಮ್ಮವನೇ ಉಮಾಸುತ

ಮಾವಿನ ತಳಿರು ತೋರಣದ ಮಹತ್ವ

ನಮ್ಮ ಭಾರತೀಯ ಹಿಂದೂ  ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ   ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ  ಅಥವಾ ಮನೆಗಳಲ್ಲಿ   ಮದುವೆ,ಮುಂಜಿ, ನಾಮಕರಣ ಮುಂತಾದ  ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವ ಒಂದು ಅಂಶವೆಂದರೆ ಮಾವಿನ ತಳಿರು ತೋರಣ. ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರ ಬಹುದು,  ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯ ಬಾಗಿಲಾಗಿರಬಹುದು ಅಥವಾ ಧಾರ್ಮಿಕ ಮಂಟಪ ಇಲ್ಲವೇ ತೆರೆದ ಚಪ್ಪರಗಳಾಗಿರಬಹುದು ಈ ಎಲ್ಲಾ   ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ. ಹಾಗಾದರೆ ಮಾವಿನ ಎಲೆಯ ತೋರಣವನ್ನೇ ಏಕೆ ಕಟ್ಟಬೇಕು? ಅದರ ಮಹತ್ವವೇನು? ಎಂದು ಯೋಚಿಸಿದರೆ,

ಮನೆಯ ಮುಂದೆ ರಂಗು ರಂಗಾದ  ರಂಗೋಲಿ ಇಡುವುದು, ಹೊಸಿಲಿಗೆ ತೋರಣ ಕಟ್ಟುವುದು,   ಹೆಂಗಸರು ಕೈತುಂಬಾ ಬಳೆ ತೊಟ್ಟು ಹಣೆಗೆ ಸಿಂಧೂರ ಧರಿಸುವುದು,  ಗಂಡಸರು ಹಣೆಯಲ್ಲಿ ಕುಂಕುಮ ಅಥವಾ ತಿಲಕಗಳನ್ನು ಧರಿಸುವುದು,ದೇವರಿಗೆ ಹೂವಿನ ಹಾರಗಳನ್ನು  ಹಾಕುವುದು ಇವುಗಳೆಲ್ಲವೂ  ಅಲಂಕಾರಿಕವೂ ಹೌದು ಮತ್ತು  ಶುಭ ಕಾರ್ಯಕ್ರಮಗಳ ಸಂಕೇತವೂ ಹೌದು. ಆದರೆ ಇವೆಲ್ಲವುಗಳ ಹಿಂದೆ ಕೆಲವು  ವೈಜ್ಞಾನಿಕ ಸತ್ಯಗಳಿವೆ. ಹಾಗಾಗಿಯೇ, ನಮ್ಮ ಪೂರ್ವಜರು ಸಂಪ್ರದಾಯದ ಹೆಸರಿನಲ್ಲಿ ಇಂತಹ ಪದ್ದತಿಗಳನ್ನು ರೂಢಿ ತಂದಿದ್ದಾರೆ.

ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ  ಇಂಗಾಲದ ಡೈಆಕ್ಸೈಡನ್ನು  ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.  ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು  ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ  ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ  ಮಂಟಪದ ಸುತ್ತಮುತ್ತಲೂ  ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ   ಮಾವಿನ ಎಲೆಯನ್ನೇ  ತೋರಣವನ್ನಾಗಿ ಏಕೆ  ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ.  ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.

ಇನ್ನು  ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ  ಮಾವಿನ ತೋರಣ ಕಟ್ಟುವುದರಿಂದ  ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.  ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು  ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.

ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ  ಬೇವಿನ ಸೊಪ್ಪಿನ ಎಲೆ ಅಥವಾ  ಟೊಂಗೆಗಳನ್ನು ಸಿಕ್ಕಿಸುವುದರಿಂದ,  ಮಾವು ಮತ್ತು ಬೇವಿನ ಎಲೆಯಲ್ಲಿ  ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ,  ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ  ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.

ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ   ಇರುವಂತೆ  ಮಾಡಿ, ಅವುಗಳು  ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.

ಹೀಗೆ   ನಾವು  ಅನುಸರಿಸುವ  ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳ ಅಥವಾ ಪದ್ದತಿಗಳ  ಮೂಲ ಆಶಯ ವೈಜ್ಞಾನಿಕ ಪ್ರಯೋಜನಗಳೇ ಆಗಿರುತ್ತವೆ. ನಮಗೆ ಅವುಗಳ ಕುರಿತಾಗಿ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಮೂಢನಂಬಿಕೆ ಎಂದು ತಿಳಿದು ಸರಿಯಾಗಿ ಆಚರಿಸದೇ ಹಬ್ಬ ಹರಿದಿನಗಳ  ಸದುಪಯೋಗ  ಪಡೆದುಕೊಳ್ಳಲು ಸಾಧ್ಯವಾಗದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯವೇ ಸರಿ.

ಮಾವು ಮತ್ತು ಬೇವಿನ ತೋರಣದ ಇಷ್ಟೋಂದು  ಮಹತ್ವ ತಿಳಿದ ಮೇಲೆಯಾದರೂ  ಅಲಂಕಾರಕ್ಕೆಂದು ನಮ್ಮೆಲ್ಲರ ಮನೆಯ ಮಂದೆ ಕಟ್ಟಿರುವ ನಿಶ್ಪ್ರಯೋಜಕ ಪ್ಲಾಸ್ಟಿಕ್  ತೋರಣಗಳ ಜಾಗದಲ್ಲಿ  ಇಂದೇ ಹಚ್ಚ ಹಸಿರಿನ ಮಾವಿನ ಮತ್ತು ಬೇವಿನ ತೋರಣವನ್ನು ಕಟ್ಟೋಣ. ಹಾಗೆ ತೋರಣ ಕಟ್ಟುವಾಗ ಸುಲಭ ಮತ್ತು ಅನುಕೂಲ ಎಂದು ಸ್ಟಾಪ್ಲರ್ ಪಿನ್ ಬಳೆಸದೆ, ಹಂಚಿ ಕಡ್ಡಿಯನ್ನೋ ಇಲ್ಲವೇ ಉಪಯೋಗಿಸಿದಂತಹ ಊದುಕಡ್ಡಿಯ ತುದಿಯನ್ನೋ ಬಳಸೋಣ. ನಾಳೆಯ ಕೆಲಸ ಇಂದೇ ಮಾಡೋಣ. ಇಂದಿನ ಕೆಲಸ ಈಗಲೇ ಮಾಡೋಣ.

ಏನಂತೀರೀ?

ಯುಗಾದಿ ಹಬ್ಬ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆಯನ್ನು ಕುಲವಧು ಚಲನಚಿತ್ರದಲ್ಲಿ ಅಳವಡಿಸಿಕೊಂಡು ಲೀಲಾವತಿಯವರು ಹಾಡುತ್ತ ನರ್ತಿಸುವುದನ್ನು ನೋಡುತ್ತಿದ್ದರೆ ಅದುವೇ ಕಣ್ಣಿಗೆ ಹಬ್ಬ. ಮನಸ್ಸಿಗೆ ಆನಂದ.

yugadi5

ನಮ್ಮ ಹಿರೀಕರು ನಮ್ಮ ಹವಾಮಾನಕ್ಕೆ ಅನುಗುಣವಾಗಿಯೇ ಬಹುತೇಕ ಹಬ್ಬಗಳನ್ನು ಆಚರಿಸುವ ಪದ್ದತಿಯನ್ನು ರೂಢಿಮಾಡಿದ್ದಾರೆ. ಅಂತೆಯೇ ಪ್ರಕೃತಿಯೂ ತನ್ನ ಹಳೆಯದ್ದನೆಲ್ಲಾ ಕಳೆದು ಕೊಂಡು ಹೊಸ ಹೊಸದಾಗಿ ಚಿಗುರು ಎಲೆಗಳಿಂದ ಕಂಗೊಳಿಸುತ್ತಾ ಸೂರ್ಯನೂ ಕೂಡಾ ಕೆಲವೇ ದಿನಗಳ ಹಿಂದಷ್ಟೇ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ತನ ಪಥ ಬದಲಿಸಿ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡು ಎಲ್ಲವೂ ಹೊಸದಾಗಿಯೇ ಇರುವುದರಿಂದ ಚೈತ್ರಮಾಸದ ಶುದ್ಧ ಪ್ರತಿಪದವನ್ನು ಹೊಸ ವರ್ಷ ಯುಗಾದಿ ಹಬ್ಬ ಎಂದು ಆಚರಿಸುತ್ತೇವೆ. ಯುಗಾದಿ ಎಂಬ ಶಬ್ದವು ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳ ಸಮ್ಮಿಳನವಾಗಿದೆ. ಇಲ್ಲಿ ಯುಗ ಎಂದರೆ ನಾವು ವರ್ಷೆಂದು ಭಾವಿಸಿಕೊಂಡು ಹೊಸವರ್ಷವೆಂದು ಆಚರಿಸುತ್ತೇವೆ.

ಹಿಂದುಗಳ ಪಾಲಿಗೆ ಹೊಸ ವರ್ಷದ ಆರಂಭವಾದ ಈ ಯುಗಾದಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಸೂರ್ಯ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆ ತಮಿಳುನಾಡು, ಕೇರಳ ಮತ್ತು ಕರಾವಳಿ ಭಾಗದ ಕರ್ನಾಟಕದವರು ಸೌರಮಾನ ಯುಗಾದಿಯನ್ನು ಆಚರಿಸಿದರೆ, ಬಹುತೇಕ ಕರ್ನಾಟಕ ಮತ್ತು ಆಂದ್ರ ಪ್ರದೇಶದವರು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಅಂತೆಯೇ ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಾಡವಾ ಎಂಬ ಹೆಸರಿನಲ್ಲಿ ಪ್ರತಿಯೊಂದು ಮನೆಗಳ ಮುಂದೆಯೂ ಗುಢಿ (ರೇಷ್ಮೆಯ ಧ್ವಜ ಅಥವಾ ಬಟ್ಟೆ)ಯನ್ನು ಒಂದು ಕೋಲಿನ ತುದಿಗೆ ಕಟ್ಟಿ ಮನೆಯ ಮುಂದೆ ನಿಲ್ಲಿಸುವ ಪದ್ದತಿ ಇದೆ.

ಅಂದು ಪ್ರತಿಯೊಬ್ಬರ ಮನೆಯಲ್ಲೂ ಮುಖ್ಯದ್ವಾರಗಳು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ಎಲೆಗಳ ತಳಿರು ತೋರಣದ ಜೊತೆಗೆ ತುದಿಯಲ್ಲಿ ಚಿಗುರು ಬೇವಿನ ಕಡ್ದಿಗಳನ್ನು ಸಿಕ್ಕಿಸಿ ಅಲಂಕರಿಸುವ ಪರಿಪಾಠವಿದೆ. ನಾಗರ ಪಂಚಮಿ, ಗೌರಿ, ಗಣೇಶ, ಸುಬ್ಬರಾಯನ ಶ್ರಷ್ಠಿ ಮುಂತಾದ ಹಬ್ಬಗಳಿಗಿರುವಂತೆ ಇರುವ ನಿಷ್ಠೆ ನಿಯಮಗಳು ಈ ಹಬ್ಬಕ್ಕೆ ಇಲ್ಲವಾದರೂ, ಬೆಳ್ಳಂಬೆಳಿಗ್ಗೆ ಎಲ್ಲರೂ ಎದ್ದು, ತಮ್ಮ ನಿತ್ಯಕರ್ಮಗಳನ್ನು ಮುಗಿಸಿ, ಮನೆಯನ್ನು ಚೊಕ್ಕಗೋಳಿಸಿ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಆಬಾಲವೃಧ್ಧರಾದಿಯಾಗಿ ಕಡ್ಡಾಯವಾಗಿ ಎಣ್ಣೆಯ ಸ್ನಾನ ಮಾಡಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು , ದೇವರ ಮುಂದೆ ಹೊಸದಾಗಿ ತಂದಿದ್ದ ಪಂಚಾಂಗವನ್ನು ಇರಿಸಿ, ಬೇವು, ಬೆಲ್ಲ ಮತ್ತು ತುಪ್ಪ ಬೆರೆಸಿದ ನೈವೇದ್ಯ ದೊಂದಿಗೆ ಕುಲದೇವತೆಗಳನ್ನು ಪೂಜೆ ಮಾಡಿ,

yugadi

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ,

ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ

ಎಂಬ ಶ್ಲೋಕ ಹೇಳುತ್ತಾ ಮನೆಯವರೆಲ್ಲರೂ, ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ಸೇವಿಸುವುದರ ಮೂಲಕ ಮೊದಲ ಹಂತದ ಹಬ್ಬ ಮುಗಿಯುತ್ತದೆ.

yugadi3

ಹಬ್ಬ ಎಂದ ಮೇಲೆ ಊಟ ಉಪಚಾರಗಳೇ ಅತ್ಯಂತ ಮಹತ್ವವಾಗಿರುತ್ತದೆ. ಅಂತೆಯೇ ನಮ್ಮ ಪ್ರತಿ ಹಬ್ಬಗಳಿಗೂ ಅದರದೇ ಆದ ವಿಶೇಷವಾದ ಸಿಹಿ ಪದಾರ್ಥವಿದ್ದಂತೆ ಕರ್ನಾಟಕ, ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳ ಯುಗಾದಿಯ ಹಬ್ಬಕ್ಕೆ ಕಾಯಿ ಹೋಳಿಗೆ ಅಥವಾ ಬೇಳೆ ಒಬ್ಬಟ್ಟು ಮಾಡುವ ಪದ್ದತಿಯಿದ್ದರೆ, ಕೊಂಕಣ ಮತ್ತು ಮಹಾರಾಷ್ಟ್ರಗಳಲ್ಲಿ ಅದನ್ನೇ ಪೂರನ್ ಪೋಳಿ ಎಂಬ ಹೆಸರಿನಲ್ಲಿ ಸಿಹಿ ಪದಾರ್ಥ ತಯಾರಿಸುತ್ತಾರೆ. ಈ ಒಬ್ಬಟ್ಟಿನ ಜೊತೆ, ಎಲೆಯ ತುದಿಗೆ ಒಬ್ಬಟ್ಟಿನ ಹೂರಣ, ಪಲ್ಯ, ಕೋಸಂಬರಿ, ಆಗಷ್ಟೇ ಮರದಿಂದ ಕಿತ್ತು ತಂದ ಎಳೆಯ ಮಾವಿನ ಕಾಯಿಯ ಚಿತ್ರಾನ್ನದ ಜೊತೆ ಒಬ್ಬಟ್ಟಿನ ಸಾರು ಅದಕ್ಕೆ ಒಂದೆರಡು ಮಿಳ್ಳೆ ಹಸನಾದ ತುಪ್ಪ ಸೇರಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಸೊರ್ ಸೊರ್ ಎಂದು ಶಬ್ಧ ಮಾಡುತ್ತಾ ಊಟ ಮಾಡುವುದನ್ನು ಹೇಳುವುದಕ್ಕಿಂತ ಸವಿಯುವುದೇ ಆನಂದ. ತಮ್ಮ ಮನೆಯಲ್ಲಿ ಮಾಡಿದ ಒಬ್ಬಟ್ಟನ್ನು ಅಕ್ಕ ಪಕ್ಕದವರಿಗೆ ಹಂಚಿ ಭಕ್ಷ ಭೂರಿ ಊಟ ಮಾಡಿದ ಪರಿಣಾಮವಾಗಿ ಆದ ಭುಕ್ತಾಯಾಸ ಕಳೆಯಲು ಒಂದೆರಡು ಘಂಟೆ ನಿದ್ದೆ ಮಾಡುವ ಮೂಲಕ ಎರಡನೇ ಹಂತದ ಹಬ್ಬದ ಆಚರಣೆ ಮುಗಿಯುತ್ತದೆ.

yugadi1

ಸಂಜೆ ಕೈಕಾಲು ಕೈಕಾಲು ಮುಖ ತೊಳೆದುಕೊಂಡು ಮನೆಯಲ್ಲಿ ದೇವರದೀಪ ಹಚ್ಚಿ ಮನೆಯ ಎಲ್ಲರೂ ದೇವರ ಮುಂದೆ ಕುಳಿತು ಬೆಳಿಗ್ಗೆ ಪೂಜೆ ಮಾಡಿದ್ದ ಪಂಚಾಂಗವನ್ನು ಶ್ರವಣ ಮಾಡುವ ಪದ್ದತಿಯಿದೆ. ಮನೆಯ ಹಿರಿಯರು ಪಂಚಾಂಗದಲ್ಲಿ ನಾಡಿನ ಈ ವರ್ಷದ ಫಲ, ಮಳೆ- ಬೇಳೆ, ದೇಶದ ಆದಾಯ ಮತ್ತು ವ್ಯಯಗಳನ್ನು ಓದಿದ ನಂತರ, ಮನೆಯ ಪ್ರತೀ ಸದಸ್ಯರ ರಾಶಿಗಳ ಅನುಗುಣವಾಗಿ ಅವರ ಆದಾಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜ ಪೂಜಾ-ರಾಜ ಕೋಪ, ಸುಖ-ದುಃಖಗಳ ಜೊತೆ ಕಂದಾಯ ಫಲವನ್ನು ತಿಳಿಸುತ್ತಾರೆ. ದೇಶ ಫಲ ಮತ್ತು ತಮ್ಮ ರಾಶಿಯ ಫಲ ಚೆನ್ನಾಗಿದ್ದವರು ಸಂತಸವಾಗಿದ್ದರೆ, ತಮ್ಮ ರಾಶಿಯ ಫಲ ಚೆನ್ನಾಗಿಲ್ಲದವರು ತಮ್ಮ ಗ್ರಹಚಾರವನ್ನು ಹಳಿಯುತ್ತಾ , ಅದು ಏನಾಗುತ್ತಾದೆಯೋ ನೋಡೇ ಬಿಡೋಣ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಕಾಲ ಕಾಲಕ್ಕೆ ಪೂಜಿಸುತ್ತಾ ಅವನನ್ನು ನಂಬಿದರೆ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಭಗವಂತನ ಮೇಲೆ ಹೊಣೆ ಹಾಕುತ್ತಾರೆ. ಆದಾದ ನಂತರ ಎಲ್ಲರೂ ಹತ್ತಿರದ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಮಾಡಿ ಮನೆಗೆ ಹಿಂದಿರುಗಿದ ನಂತರ ಮಧ್ಯಾಹ್ನ ಮಾಡಿದ್ದ ಅಡುಗೆಯನ್ನೇ ಬಿಸಿ ಮಾಡಿಕೊಂಡು ತಿನ್ನುವುದರ ಮೂಲಕ ಯುಗಾದಿ ಹಬ್ಬ ಸಂಪೂರ್ಣವಾಗುತ್ತದೆ.

ಇನ್ನು ಹಳ್ಳಿಗಳಲ್ಲಿ ಊರಿನ ಕುಲ ಪುರೋಹಿತರು ಅಥವಾ ಪಂಡಿತರು ಯುಗಾದಿಯ ಸಂಜೆ ಊರಿನ ದೇವಸ್ಥಾನಗಳಲ್ಲೋ ಅಥವಾ ಅರಳಿ ಕಟ್ಟೆಯ ಮುಂದೆ ಕುಳಿತುಕೊಂಡು ಎಲ್ಲರ ಸಮ್ಮುಖದಲ್ಲಿ ಹೊಸ ಪಂಚಾಂಗದ ಪ್ರಕಾರ ಮಳೆ, ಬೆಳೆ, ದೇಶಕ್ಕೆ ಮುಂದೆ ಬಹುದಾದ ವಿಪತ್ತುಗಳು ಮತ್ತು ಸೂರ್ಯ ಚಂದ್ರ ಗ್ರಹಣಗಳ ಬಗ್ಗೆ ಓದಿ ಹೇಳುತ್ತಾರೆ. ಸದಾ ಪುರದ ಹಿತವನ್ನೇ ಕಾಪಾಡುವ ಪುರೋಹಿತರಿಗೆ ರೈತಾಪಿ ಜನರುಗಳು ಯಥಾ ಶಕ್ತಿ ಧನ ಧಾನ್ಯಗಳನ್ನು ಕೊಟ್ಟು ಅವರ ಆಶೀರ್ವಾದ ಪಡೆಯುವ ಸಂಪ್ರದಾಯ ಹಲವೆಡೆ ಇನ್ನೂ ಜಾರಿಯಲ್ಲಿದೆ. ಅಂತೆಯೇ ಯುಗಾದಿ ಹಬ್ಬದ ಸಂಜೆ ಏನಾದರೂ ಮಳೆ ಬಂತೆಂದರೆ , ಆ ವರ್ಷ ಉತ್ತಮ ಮಳೆಯಾಗಿ, ಉತ್ತಮ ಬೆಳೆ ಬಂದು, ಊರು ಸುಭಿಕ್ಷವಾಗಿರುತ್ತದೆ ಎಂಬ ನಂಬಿಕೆಯೂ ರೈತಾಪಿ ಜನರಲ್ಲಿದೆ

ಇನ್ನು ಯುಗಾದಿಹಬ್ಬ ಮುಗಿದ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದೂ ಕೂಡಾ ಹಬ್ಬದ ವಾತಾವರಣವೇ ಇದ್ದು, ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕರಿಸುತ್ತಾರೆ. ವರ್ಷ ತೊಡಕು ಎಂದರೆ ಒಳ್ಳೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ದಿನ. ಈ ದಿನದ ಫಲ ಹೇಗಿರುತ್ತದೇಯೋ ಅದು ವರ್ಷವಿಡೀ ಇರುತ್ತದೆ ಎಂಬ ನಂಬಿಕೆ ಇರುವ ಕಾರಣ ಅಂದು ಉದ್ದೇಶ ಪೂರ್ವಕವಾಗಿ ಯಾವುದೇ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ. ಇದನ್ನೇ ನೆಪ ಮಾಡಿಕೊಳ್ಳುವ ಮಕ್ಕಳು ಅಮ್ಮಾ ಇವತ್ತು ವರ್ಷದ ತೊಡಕು ಸುಮ್ಮನೆ ಬಯ್ಯಬೇಡಿ, ಹೊಡೆಯಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಪರಿಸ್ಥಿತಿಯ ಲಾಭವನ್ನೂ ಪಡೆಯುವುದುಂಟು

ಇನ್ನು ಮಾಂಸಾಹಾರಿಗಳು, ಯುಗಾದಿ ಹಬ್ಬದಂದು ಕೇವಲ ಸಿಹಿ ಪದಾರ್ಥಗಳನ್ನೇ ತಿಂದವರು, ವರ್ಷದ ತೊಡಕಿನಂದು ಕಡ್ಡಾಯವಾಗಿ ಮಾಂಸದ ಅಡುಗೆಗಳನ್ನೇ ಮಾಡುವ ಪರಿಪಾಠವಿದೆ. ಮಾಂಸಾಹಾರದ ಜೊತೆಗೆ ಮದ್ಯ ಸೇವನೆಯೂ ಈ ವರ್ಷತೊಡಕಿನ ಆಚರಣೆಯ ಭಾಗಗಳಲ್ಲೊಂದಾಗಿ ಹೋಗಿರುವುದು ವಿಪರ್ಯಾಸವಾಗಿದೆ.

ಬೇರೆ ಯಾವ ಹಬ್ಬದಲ್ಲಿ ಇಲ್ಲದಿದ್ದರೂ ಯುಗಾದಿ ಮತ್ತು ವರ್ಷತೊಡಕಿನಂದು ಜೂಜಾಡುವುದೂ ಒಂದು ಆಚರಣೆಯಾಗಿ ಬೆಳೆದುಬಿಟ್ಟಿದೆ. ಹಳ್ಳಿಗಳಲ್ಲಿ ಸಂಜೆ ಪಂಚಾಂಗ ಶ್ರವಣಕ್ಕೆ ಮುಂಚೆ, ಹುಡುಗರು ಕಬಡ್ಡಿ, ವಾಲೀಬಾಲ್, ಖೋಖೋ, ಲಗೋರಿ, ಗುಂಡುಕಲ್ಲು ಎತ್ತಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ, ವಯಸ್ಕರುಗಳು ಬಾಜಿ ಕಟ್ಟಿ ಕೋಳಿ ಕಾಳಗ, ಟಗರು ಕಾಳಗ ಇಲ್ಲವೇ ಇಸ್ಪೀಟ್ ಆಟವಾಡುತ್ತಾ ದಿನ ಕಳೆಯುತ್ತಾರೆ. ಈ ಹಬ್ಬದಂದು ಜೂಜು ಸಾಂಪ್ರಾದಾಯವಾಗಿರುವ ಕಾರಣ ಪೋಲೀಸರೂ ಅದೋಂದು ದಿನ ನೋಡಿದರೂ ನೋಡದ ಹಾಗೆ ಜಾಣ ಕುರುಡನ್ನು ಪ್ರದರ್ಶಿಸುತ್ತಾರೆ.

ನಮ್ಮ ಹಿರಿಯರು ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಒಂದೊಂದು ಪ್ರತೀತಿಯನ್ನು ಸಂಪ್ರದಾಯದ ಮೂಲಕ ಆಚರಣೆಯಲ್ಲಿ ತಂದಿದ್ದಾರೆ. ನಾವುಗಳು ಆ ಹಬ್ಬಗಳ ನಿಜವಾದ ಅರ್ಥವನ್ನು ತಿಳಿದು ಆಚರಿಸಿದರೆ ಹಬ್ಬ ಮಾಡಿದ್ದಕ್ಕೂ ಸಾರ್ಥಕ ಮತ್ತು ಎಲ್ಲರ ಮನಸ್ಸಿಗೂ ನಮ್ಮದಿ, ಸುಖಃ ಮತ್ತು ಸಂತೋಷ ಇರುತ್ತದೆ.

ಏನಂತೀರೀ?

ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!

ಏ.6 ಯುಗಾದಿ, ಪಂಚಾಂಗ ಪೂಜಿಸುವ ದಿನ. ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ…. ಲೇಖಕರು : ಟಿ.ಎಂ. ಸತೀಶ್, ಸಂಪಾದಕರು, ourtemples.in

ಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ ನೋಡಲು ಬರುವುದಿಲ್ಲ. ಹಲವರು ಪಂಚಾಂಗ ಎಂದರೆ ಅರ್ಥವಾಗದ ಕಗ್ಗಂಟು, ಅದು ಪುರೋಹಿತರ ಸ್ವತ್ತು ಎಂದೇ ತಿಳಿದಿದ್ದಾರೆ.

ವಾಸ್ತವವಾಗಿ ಪಂಚಾಂಗ ಎಂದರೆ ಅರ್ಥವಾಗದ ಹಲವು ಶ್ಲೋಕಗಳಿಂದ ಕೂಡಿದ ಕಗ್ಗಂಟಲ್ಲ. ಬದಲಾಗಿ ಪಂಚಾಂಗ ಎಂಬುದು ಜನ ಜೀವನದ ನಿತ್ಯ ನಡೆವಳಿಕೆಗಳನ್ನು ವೈಜ್ಞಾನಿಕ ಆಧಾರಗಳ ಮೇಲೆ ವಿಶ್ಲೇಷಿಸುವ ಅತ್ಯದ್ಭುತ ಕಾಲಗಣನಾ ಶಾಸ್ತ್ರ.

ನಾವು ದೈನಂದಿನ ಲೌಕಿಕ ಚಟುವಟಿಕೆಗೆ ಬಳಸುವ ಜನವರಿ1ರಿಂದ ಡಿಸೆಂಬರ್ 31ರವರೆಗೆ ವಾರ ದಿನಾಂಕ ತೋರಿಸುವ ರೋಮನ್ ಕ್ಯಾಲೆಂಡರ್ ಹುಟ್ಟಿದ್ದು ಕ್ರಿಸ್ತ ಪೂರ್ವ 753ರಲ್ಲಿ. ಆದರೆ, ಅದಕ್ಕಿಂತ ಸಾವಿರಾರು ವರ್ಷಗಳ ಹಿಂದೆ ಅಂದರೆ ಸುಮಾರು 10 ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಯುಗಯುಗಗಳಿಂದ ಹಿಂದೂ ಪಂಚಾಂಗ ಕಾಲಗಣನಾ ಶಾಸ್ತ್ರವಾಗಿತ್ತು ಎಂದು ವಿಶ್ಲೇಷಿಸಲಾಗುತ್ತದೆ. ಇದಕ್ಕೆ ವೇದ, ಪುರಾಣಗಳಲ್ಲಿ ಹಲವು ಆಧಾರಗಳೂ ದೊರಕುತ್ತವೆ.

ಈಗ ವಿಶ್ವ ವ್ಯಾಪಿ ಚಾಲ್ತಿಯಲ್ಲಿರುವ ಕ್ಯಾಲೆಂಡರ್ ಗಳು ಇನ್ನೂ ಹುಟ್ಟದಿದ್ದ ಕಾಲದಲ್ಲಿ, ಹುಟ್ಟು, ಸಾವು, ವಿವಾಹದಿನ, ಗ್ರಹಣ ವಿಚಾರ ಸೇರಿದಂತೆ ಬದುಕಿನ ಮಹತ್ವದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲೆಂದೇ ವೈಜ್ಞಾನಿಕ ತಳಹದಿಯ ಮೇಲೆ ತಯಾರಿಸಿದ ವಾರ್ಷಿಕ ಕೈಪಿಡಿಯೇ ಪಂಚಾಂಗ.

ಐದರ ಸಮಾಗಮ: ವಾಸ್ತವವಾಗಿ ಪಂಚಾಂಗವೆಂಬುದು ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ ಎಂಬ ಐದು ವೈeನಿಕ ಅಂಗಗಳ ಸಮ್ಮಿಲನ ಹಾಗೂ ಮಾಹಿತಿ ಸಂಚಯ. ಸೂರ್ಯದ, ಚಂದ್ರ, ಭೂಮಿಯೂ ಸೇರಿದಂತೆ ನವಗ್ರಹಗಳ ಚಲನೆಯನ್ನೂ ಗುರುತಿಸುತ್ತಿದ್ದ ಶ್ರೇಷ್ಠ ಖಭೌತಜ್ಞರಾಗಿದ್ದ ನಮ್ಮ ಪೂರ್ವಿಕರು ವೈಜ್ಞಾನಿಕ ತಳಹದಿಯ ಅಧ್ಯಯನದಿಂದ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣಗಳನ್ನು ವಿಶ್ಲೇಷಿಸಿ ಪಂಚಾಂಗ ಸೃಷ್ಟಿಸಿದ್ದರು. ಗ್ರಹಣ ಯಾವ ದಿನ ಘಟಿಸುತ್ತದೆ. ಹುಣ್ಣಿಮೆ, ಅಮಾವಾಸ್ಯೆ ಎಂದು ಬರುತ್ತದೆ ಎಂಬಿತ್ಯಾದಿ ಮಹತ್ವದ ಮಾಹಿತಿಗಳನ್ನು ಈ ಪಂಚಾಂಗದಲ್ಲಿ ಸೆರೆಹಿಡಿಯುತ್ತಿದ್ದರು. ಈ ಎಲ್ಲ ಲೆಕ್ಕಾಚಾರಗಳಿಗೆ ತಿಥಿ, ವಾರ, ನಕ್ಷತ್ರ, ಕರ್ಣ ಹಾಗೂ ಯೋಗವೇ ಆಧಾರವಾಗಿತ್ತು.

ತಿಥಿ, ವಾರ, ನಕ್ಷತ್ರ, ಕರ್ಣ, ಯೋಗ ಎಂದರೇನು ?

ನಕ್ಷತ್ರ : ಆಗಸದಲ್ಲಿ ನಮಗೆ ಕೋಟ್ಯನುಕೋಟಿ ನಕ್ಷತ್ರಗಳು ಕಾಣಿಸಿದರೂ, ಸೂರ್ಯಸನ ಸುತ್ತ ಇರುವ ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ, ಮೃಗಶಿರೆ, ಆರಿದ್ರೆ, ಪುನರ್ವಸು, ಪುಷ್ಯ… ಇತ್ಯಾದಿ 27 ನಕ್ಷತ್ರಗಳನ್ನು ಮಾತ್ರ ಜ್ಯೋತಿಷಿಗಳು ದಿನ ಗಣನೆಗೆ ಪರಿಗಣಿಸಿದ್ದಾರೆ. ಇನ್ನುಳಿದ ನಕ್ಷತ್ರಗಳನ್ನು ಆಕಾಶಕಾಯಗಳು ಅಥವಾ ತ್ಯಾಜ್ಯ ನಕ್ಷತ್ರ ಎಂದು ಅವರು ವಿಶ್ಲೇಷಿಸಿದ್ದಾರೆ. ನಮ್ಮ ಭಾರತೀಯ ಋಷಿಮುನಿಗಳು ಹೀಗೆ ನಿರ್ಣಯಕ್ಕೆ ಬರಲು ಬಲವಾದ ವೈಜ್ಞಾನಿಕ ಆಧಾರವಿದೆ. ನಕ್ಷತ್ರದಿಂದ ದಿನವನ್ನು ಗುರುತಿಸುವುದು ಅತಿ ಪುರಾತನ ಪದ್ಧತಿಯಾಗಿದೆ. ಅದು ಹೇಗೆ ಎಂಬುದೂ ಅತಿ ಸ್ವಾರಸ್ಯಕರ. ಅಷ್ಟೇ ಅಲ್ಲ ನಮ್ಮ ಹಿರಿಯರ ಜ್ಞಾನಕ್ಕೆ ಹಿಡಿದ ಕನ್ನಡಿ. ನಕ್ಷತ್ರಮಂಡಲದಲ್ಲಿ ಚಂದ್ರಸ್ಥಾನ ಗಂಟೆ ಗಂಟೆಗೂ ಬದಲಾಗುತ್ತಿರುತ್ತದೆ. ಒಂದು ರಾತ್ರಿ ಚಂದ್ರನ ಸಮೀಪದಲ್ಲಿ ಯಾವ ನಕ್ಷತ್ರ ಇರುತ್ತದೆ ಎಂದು ಗುರುತಿಸಿದ್ದಾರೆ. ಅದೇ ನಕ್ಷತ್ರದ ಸಮೀಪಕ್ಕೆ ಚಂದ್ರ ಮತ್ತೆ ಯಾವಾಗ ಬರುತ್ತಾನೆ ಎಂಬುದನ್ನೂ ಅವರು ಗುರುತಿಸಿದ್ದಾರೆ. ಇಂದು ಒಂದು ನಕ್ಷತ್ರದ ಬಳಿ ಕಾಣಿಸಿಕೊಳ್ಳುವ ಚಂದ್ರ ಮತ್ತೆ ಅದೇ ನಕ್ಷತ್ರದ ಸನಿಹಕ್ಕೆ ಬರಲು ಸುಮಾರು 27.32ದಿನಗಳು ಬೇಕಾಗುತ್ತದೆಂಬುದನ್ನು ನಿರ್ಧರಿಸಿದ್ದಾರೆ. ಹೀಗಾಗಿಯೇ ತಿಂಗಳಲ್ಲಿ 30 ದಿನ ಬಂದಿರುವುದು. ಈ ಚಲನೆಗೆ ಅನುಗುಣವಾಗಿಯೇ ಎರಡೆರಡು ದಿನ ಒಂದೇ ತಿಥಿ ಇರುವುದು ಎಂಬುದನ್ನು ನಮ್ಮ ಪುರಾತನ ಭಾರತೀಯ ಖಗೋಳಜ್ಞರು ನಿರ್ಣಯಿಸಿದ್ದರು. ವೈಜ್ಞಾನಿಕ ಉಪಕರಣಗಳೇ ಇಲ್ಲದ ಸಮಯದಲ್ಲಿ ಈ ಎಲ್ಲ ಲೆಕ್ಕಾಚಾರ ಮಾಡಿದ ನಮ್ಮ ಪೂರ್ವಿಕರ ಜ್ಞಾನ ಶ್ರೀಮಂತಿಕೆಗೆ ನಾವೆಲ್ಲಾ ತಲೆ ಬಾಗಲೇ ಬೇಕು.

ತಿಥಿ : ತಿಥಿ ಎಂದರೆ, ಭೂಮಿಯನ್ನು ಸುತ್ತಲು ಚಂದ್ರನು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. (ಈ ಚಲನೆಯಲ್ಲಿ ಚಂದ್ರ ಭೂಮಿಯ ಮೇಲೆ ಬೀರುವ ಪರಿಣಾಮ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.) ಈ ಚಲನೆಯನ್ನು ಆಧರಿಸಿ ಶುಭ – ಅಶುಭ, ರಿಕ್ತ ತಿಥಿಗಳು ಎಂಬ ವಿಶ್ಲೇಷಣೆಯನ್ನು ನಮ್ಮ ಹಿರಿಯರು ಮಾಡಿದ್ದಾರೆ. ವಾಸ್ತವವಾಗಿ ದಿನ ನಿರ್ಧರಣೆಯನ್ನು ನಕ್ಷತ್ರದಿಂದ ಮಾತ್ರ ಮಾಡುವುದು ವ್ಯಾವಹಾರಿಕವಾಗಿ ಸರಿಯಲ್ಲ ಎಂದು ಮನಗಂಡ ನಮ್ಮ ಪೂರ್ವಿಕರು, ಚಂದ್ರನ ವೃದ್ಧಿಕ್ಷಯಗಳನ್ನು ಸೂಚಿಸುವ ತಿಥಿಗಳಿಂದಲೂ ದಿನವನ್ನು ನಿರ್ಧರಿಸುವ ಮಾರ್ಗ ಕಂಡುಕೊಂಡರು. ಅಮಾವಾಸ್ಯೆ, ಹುಣ್ಣಿಮೆಯ ಲೆಕ್ಕಾಚಾರದ ಮೇಲೆ ಮಾಸದಲ್ಲಿ ಎರಡು ಪಕ್ಷ ನಿರ್ಧರಿಸಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ಚತುರ್ದಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ ಎಂಬ 15 ತಿಥಿಗಳನ್ನೂ ಗುರಿತಿಸಿದರು.

ವಾರ : ವಾರಗಳು ಎಂದರೆ ಭೂಮಿ ತನ್ನ ಅಕ್ಷದ ಸುತ್ತ ಸುತ್ತು ಹಾಕುವ 7 ಅವಧಿ. (24 ಗಂಟೆ x 7 ದಿನ) ಈ ಚಲನೆ 7 ದಿನಕ್ಕೊಮ್ಮೆ ಪುನರಾವರ್ತನೆ ಆಗುವುದರಿಂದ ಇವುಗಳನ್ನು 7 ಗ್ರಹಗಳು ಎಂದು ಗುರುತಿಸಲಾಗಿದೆ. ಖಗೋಳ ವಿಜ್ಞಾನಿಗಳು ಸೂರ್ಯಇನನ್ನು ನಕ್ಷತ್ರ ಎಂದರೆ, ನಮ್ಮ ಋಷಿ ಮುನಿಗಳು, ಪಂಚಾಂಗಕರ್ತರು ಹಾಗೂ ಜ್ಯೋತಿಷಿಗಳು ಸೂರ್ಯನನನ್ನೂ ಒಂದು ಗ್ರಹ ಎಂದು ಪರಿಗಣಿಸಿದ್ದಾರೆ. ಅವರ ಪ್ರಕಾರ ನವಗ್ರಹಗಳ ಪೈಕಿ ಸೂರ್ಯಯನೂ ಒಬ್ಬ. ಹೀಗಾಗೆ ನಮಃಸೂರ್ಯಾ ಯ ಚಂದ್ರಾಯ ಮಂಗಳಾಯ ಬುಧಾಯಚ, ಗುರು ಶುಕ್ರ ಶನಿ ಭ್ರಶ್ಚ, ರಾಹುವೇ ಕೇತುವೇ ನಮಃ ಎಂಬು ಶ್ಲೋಕವೂ ಹುಟ್ಟಿರುವುದು. ಆ ಪ್ರಕಾರವಾಗಿ ಏಳು ದಿನಗಳಲ್ಲಿ ರವಿವಾರ, ಸೋಮ (ಚಂದ್ರ) ವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಎಂದು ಗುರುತಿಸಲಾಗಿದೆ. ಗ್ರಹಗಳ ಹೆಸರಿನ ಮೂಲಕ, ಶುಭ ಹಾಗೂ ಅಶುಭ ದಿನಗಳನ್ನೂ ನಿರ್ಧರಿಸಲಾಗಿದೆ. ರೋಮನ್ನರು ಕೂಡ ಹಿಂದೂ ಪಂಚಾಗದ ರೀತಿಯೇ ತಮ್ಮ ಕ್ಯಾಲೆಂಡರ್ ರಚಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ತಜ್ಞರ ಪ್ರಕಾರ ವಾರದ ಬಳಕೆ ಕ್ರಿ.ಶ. 4ನೇ ಶತಮಾನಕ್ಕೆ ಮೊದಲು ಭಾರತದಲ್ಲಿ ಬಳಕೆಯಲ್ಲಿರಲಿಲ್ಲ. ವೇದಗಳ ಕಾಲದಲ್ಲಿ ಆರು ದಿವಸಗಳ ವಾರ ಪ್ರಚಾರದಲ್ಲಿತ್ತು ಎಂದೂ ಹೇಳುತ್ತಾರೆ.

ಯೋಗ : ಸೂರ್ಯಿ ಚಂದ್ರರಿಬ್ಬರು 13 ಡಿಗ್ರಿ ಮತ್ತು 20 ಡಿಗ್ರಿ ಅಂತರಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಇನ್ನೂ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯಚಂದ್ರರ ರೇಖಾಂಶಾಂತರ ತಿಥಿಯನ್ನು ನಿರ್ಣಯಿಸುವುದೇ ಯೋಗ. ಹಾಗೆಯೆ ಸೂರ್ಯಚಂದ್ರರ ರೇಖಾಂಶಗಳ ಮೊತ್ತ ಯೋಗವನ್ನು ನಿರ್ಣಯಿಸುತ್ತದೆ. ಇದಕ್ಕೆ ಅಶ್ವಿನಿ ಮೂಲಬಿಂದುವಾಗಿರುತ್ತದೆ. ಸೂರ್ಯನ ರೇಖಾಂಶ ಮತ್ತು ಚಂದ್ರನ ರೇಖಾಂಶಗಳ ಈ ಯೋಗದಲ್ಲಿ ಸೂರ್ಯಕ ಚಂದ್ರರ ಚಲನೆ ಆಧರಿಸಿ 27 ಯೋಗಗಳನ್ನು ಹಾಗೂ ಸೂರ್ಯಶಚಂದ್ರರ ಚಲನೆಯ ವ್ಯತ್ಯಾಸ ಅರಿಯಲಾಗಿದೆ. ಇದು ಗ್ರಹಣ ಮೊದಲಾದ ವಿಷಯಗಳನ್ನು ಖಚಿತವಾಗಿ ಹೇಳಲು ನೆರವಾಗುತ್ತದೆ.

ಕರಣ : ಕರಣ ಎಂಬುದು ಒಂದು ದಿನದ ಅರ್ಧಭಾಗದಲ್ಲಿ ಸೂರ್ಯದ ಚಂದ್ರರ ನಡುವೆ ಇರುವ ದೂರದ ಪ್ರಮಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಚಂದ್ರಸೂರ್ಯರ ರೇಖಾಂಶಾಂತರ 60 ಆಗುವ ಅವಧಿಯೇ ಕರಣ. ಹೀಗಾಗಿ ಕರಣ ಕೂಡ ಸೂರ್ಯಶ ಚಂದ್ರರ ಚಲನೆಯನ್ನು ಅರ್ಥೈಸುವ ಮಾನದಂಡಗಳಲ್ಲೊಂದಾಗಿದೆ. ಕಾಲ ದೇಶಕ್ಕೆ ಅನುಗುಣವಾಗಿ ಪಂಚಾಂಗಗಳಿವೆ. ಉತ್ತರ ಭಾರತದಲ್ಲಿ ವಿಕ್ರಮ ಶಕೆಯ ರೀತ್ಯ ಕಾಲ ಗಣನೆ ಮಾಡುತ್ತಾರೆ. ವಿಕ್ರಮ ಶಕೆಯ ಆರಂಭದ ದಿನವಾದ ಕಾರ್ತೀಕ ಶುಕ್ಲ ಪಾಡ್ಯದಿಂದ (ದೀಪಾವಳಿ) ಉತ್ತರ ಭಾರತೀಯರಿಗೆ ಹೊಸವರ್ಷದ ದಿನ. ಆದರೆ, ದಕ್ಷಿಣ ಭಾರತೀಯರು ವಿಕ್ರಮಾದಿತ್ಯನನ್ನು ಶಾಲಿವಾಹನನು ಸಂಹರಿಸಿದ ದಿನದಿಂದ ಕಾಲಗಣನೆ ಆರಂಭಿಸುತ್ತಾರೆ. ಆದ್ದರಿಂದ ಶಾಲಿವಾಹನ ಶಕೆಯಲ್ಲಿ ಚೈತ್ರ ಶುಕ್ಲ ಪಾಡ್ಯವೇ ಪ್ರಥಮದಿನ. ಚೈತ್ರ ಮಾಸದ ಪೌರ್ಣಿಯ ದಿನ ಚಂದ್ರನು ಚಿತ್ತಾನಕ್ಷತ್ರದಲ್ಲಿ ಇರುವ ಕಾರಣ ಈ ಮಾಸಕ್ಕೆ ಚೈತ್ರ ಮಾಸ ಎಂದು ಹೆಸರು ಬಂದಿದೆ. ಅದೇ ರೀತಿ ದ್ವಾದಶ ರಾಶಿಗಳನ್ನು ಆಧರಿಸಿ 12 ತಿಂಗಳನ್ನು ನಿರ್ಧರಿಸಲಾಗಿದೆ. ಸೂರ್ಯೀನು ತನ್ನ ಉಪ ಗೋಚರ ವಾರ್ಷಿಕ ಚಲನೆಯಲ್ಲಿ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ.. ಇತ್ಯಾದಿ ದ್ವಾದಶ ರಾಶಿಗಳನ್ನು ಪ್ರವೇಶಿಸುವ ಕ್ಷಣಗಳನ್ನು ಆಯಾ ರಾಶಿಗಳ ಸಂಕ್ರಮಣವೆಂದೂ ಅರ್ಥೈಸಲಾಗುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೆ ಪಂಚಾಂಗದ ಭಾಗವಲ್ಲದಿದ್ದರೂ ಈ ಐದನ್ನೂ ಒಳಗೊಂಡ ವರ್ಷದ ಬಗ್ಗೆಯೂ ಹೇಳಲೇಬೇಕು. ನಮ್ಮ ಪೂರ್ವಿಕರು ಈಗಿನ ಇಸವಿ ಪದ್ಧತಿ ಜಾರಿಗೆ ಬರುವ ಮುನ್ನವೇ ನಮ್ಮ 12 ತಿಂಗಳ ಅವಧಿಯನ್ನು ವರ್ಷ ಎಂದು ಪರಿಗಣಿಸಿ ಒಂದೊಂದಕ್ಕೆ ಒಂದೊಂದು ಹೆಸರಿಟ್ಟಿದ್ದರು. ಅದನ್ನು ಪ್ರಭವ, ವಿಭವ, ಶುಕ್ಲ, ಪ್ರಮೋದೂತ, ಪ್ರಜೋತ್ಪತ್ತಿ, ಆಂಗೀರಸ, ಶ್ರೀಮುಖ, ಭಾವ, ಯುವ, ಧಾತ್ರಿ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ (ವಿಷು), ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತ, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇ ವಿಳಂಬಿ, ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭಕೃತ್ , ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರಿಧಾವಿ, ಪ್ರಮಾಧಿ, ಆನಂದ, ರಾಕ್ಷಸ, ನಳ, ಪೈಂಗಳ(ಪಿಂಗಳ), ಕಾಳಯುಕ್ತಿ, ಸಿದ್ಧಾರ್ಥಿ, ರುದ್ರ (ರೌದ್ರಿ), ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ ಹಾಗೂ ಅಕ್ಷಯ (ಕ್ಷಯ). 60 ವರ್ಷಗಳ ಬಳಿಕ ಮತ್ತೆ ಪ್ರಭವದಿಂದ ಆರಂಭವಾಗುತ್ತದೆ.

ಒಟ್ಟಾರೆಯಾಗಿ ಪಂಚಾಗ ನಮ್ಮ ಪೂರ್ವಿಕರು ಸಂಶೋಧಿಸಿದ ವೈಜ್ಞಾನಿಕ ಕಾಲ ನಿರ್ಣಯ. (ಈ ಲೇಖನ ಬರೆಯಲು ಹಲವು ಗ್ರಂಥಗಳನ್ನು ಆಕರವಾಗಿ ಪರಿಗಣಿಸಲಾಗಿದೆ)

ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಹದಿನೇಳನೇ ಶತಮಾನದಲ್ಲಿ ಪರಕೀಯರ ಆಕ್ರಮಣಕ್ಕೆ ತುತ್ತಾದ ನಮ್ಮ ದೇಶ ಧಾರ್ಮಿಕವಾಗಿಯೂ ಮತ್ತು ಸಂಸ್ಕೃತಿಕವಾಗಿಯೂ ಅಧೋಗತಿಯಲ್ಲಿ ಸಾಗುತ್ತಿದ್ದಾಗ ಶ್ರೀಮಾರ್ತಾಂಡ ದೀಕ್ಷೀತರು ಮತ್ತು ಲಕ್ಷ್ಮೀದೇವಿಯವರ ತಪಸ್ಸಿನ ಫಲವಾಗಿ ದೈವಾನುಗ್ರಹದಿಂದ ದೈವಾಂಶ ಸಂಭೂತರಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಮುರುಗೋಡದಲ್ಲಿ ಜನಿಸಿದರು.

ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಬಹಳ ಬೇಗ ಅಪಾರ ಭಕ್ತವೃಂದವನ್ನು ಗಳಿಸಿದ ಮಹಾಸ್ವಾಮಿಗಳು ತಮ್ಮ ಲೀಲೆಯಿಂದ ಕಾಲ ಕಾಲಕ್ಕೆ ಮಳೆ ಬೆಳೆ ಆಗುವಂತೆ ನೋಡಿಕೊಂಡು ಎಲ್ಲರೂ ಸುಸಂಸ್ಕೃತರಾಗಿ, ಸುಭೀಕ್ಷವಾಗಿರುವಂತೆ ನೋಡಿಕೊಂಡರು. ಅವರು ಬೆಳೆಸಿದ ಅನೇಕ ಶಿಷ್ಯವೃಂದದಲ್ಲಿ ಸಂತ ಶ್ರೇಷ್ಠ ರಾಜಾರಾಮರು ಅಗ್ರಗಣ್ಯರು. ಶ್ರೀ ರಾಜಾರಾಮರು ಗುರುಗಳ ಭಕ್ತಿಮಾರ್ಗದ ಪರಂಪರೆಯನ್ನು ಮುಂದುವರಿಸಿದ್ದಲ್ಲದೆ, ಜನರನ್ನು ಒಗ್ಗೂಡಿಸಲು ಸಹಸ್ರಾರು ಅಭಂಗಗಳನ್ನು ರಚಿಸಿ ಅಭಂಗಗಳನ್ನು ಅಭ್ಯಸಿಸುವ ಸಹಸ್ರಾರು ಭಜನಾ ಮಂಡಳಿಗಳ ಮೂಲಕ ಲಕ್ಷಾಂತರ ಭಕ್ತ ಸಮೂಹವನ್ನು ಮಹಾರಾಷ್ಟ್ರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹುಟ್ಟು ಹಾಕಿದರು. ಮುಂದೆ ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಚಳುವಳಿಯ ಸಂಧರ್ಭದಲ್ಲಿ ಬ್ರಿಟಿಷರ ವಿರುದ್ಧ ಜನಸಾಮಾನ್ಯರನ್ನು ಒಗ್ಗೂಡಿಸಲು ಇದೇ ಮಾರ್ಗವನ್ನು ಅನುಸರಿಸಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಪದ್ದತಿಯನ್ನು ಜಾರಿಗೆ ತಂದರು. ಈ ಮೂಲಕ ಆಧ್ಯಾತ್ಮಿಕವಾಗಿ ಜನರರನ್ನು ಒಗ್ಗೂಡಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಹರಿಕಾರರಾಗಿ ಸಂತ ಶ್ರೇಷ್ಠ ರಾಜಾರಾಮರು ಪ್ರಸಿದ್ಧಿಯಾದರು.

ದೇಶಾದ್ಯಂತ ನೆಲೆಸಿರುವ ಲಕ್ಷಾಂತರ ಚಿದಂಬರ ಸ್ವಾಮಿಗಳ ಅನುಯಾಯಿಗಳು ಸಂತ ರಾಜಾರಾಮರ ಜಯಂತಿಯನ್ನು ಪ್ರತೀ ವರ್ಷವೂ ಬಹಳ ಅದ್ದೂರಿಯಿಂದ ಆಚರಿಸುತ್ತಾರೆ. ಅದರಂತೆಯೇ, ನೆನ್ನೆ ಬೆಂಗಳೂರಿನ ಯಲಹಂಕದಲ್ಲಿ ನಡೆದ ಅಂತಹ ಒಂದು ಕಾರ್ಯಕ್ರಮಕ್ಕೆ ನನ್ನ ಪೂರ್ವ ಜನ್ಮದ ಸುಕೃತವೋ ಎನ್ನುವಂತೆ ಭಾಗವಹಿಸಲು ಸಾಧ್ಯವಾಯಿತು. ಸತತವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಕಾರ್ಯಕ್ರಮಕ್ಕೆ ನಮ್ಮ ಸ್ನೇಹಿತರು ಆಹ್ವಾನಿಸುತ್ತಿದ್ದರಾದರೂ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲವಾದ್ದರಿಂದ ಈ ಬಾರಿ ಖಂಡಿತವಾಗಿಯೂ ಭಾಗವಸಲೇ ಬೇಕೆಂಬ ಉತ್ಕಟ ಆಸೆಯಿಂದ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿಯೇ ಹೋದರೂ ಕಾರ್ಯಕ್ರಮಕ್ಕೆ ಭಾಗವಸಿದ್ದರ ಸಾರ್ಥಕತೆ ದೊರೆಯಿತು. ಶನಿವಾರ ಸಂಜೆ ಮೂರ್ನಾಲ್ಕು ಗಂಟೆಗಳ ಭಜನೆಯಿಂದ ಆರಂಭವಾದ ಕಾರ್ಯಕ್ರಮ, ಭಾನುವಾರಕ್ಕೂ ಮುಂದುವರಿದು ಬೆಳಿಗ್ಗೆ ಲಿಂಗಸ್ವರೂಪಿ ಚಿದಂಬರರಿಗೆ ರುದ್ರಾಭಿಷೇಕ ನಡೆದು ಮತ್ತು ಅವರ ಪಾದುಕೆಗಳಿಗೆ ಅಚ್ಚುಕಟ್ಟಾದ ಪೂಜೆ ನಡೆದು, ನಂತರ ಮಧ್ಯಾಹ್ನ ವೇಳೆಗೆ ಸಂತ ರಾಜಾರಾಮರನ್ನು ತೊಟ್ಟಿಲಿಗೆ ಹಾಕಿ ಅವರಿಗೆ ಪ್ರಹ್ಲಾದ, ಉದ್ದವ, ತುಕಾರಂ, ನಾಮದೇವ್ ಮತ್ತು ರಾಜಾರಾಮ ಎಂಬ ಐದು ಹೆಸರನಿಂದ ನಾಮಕರಣ ಮಾಡಿ ಆ ಕಾರ್ಯಕ್ರಮಕ್ಕೆ ಬಂದ ಹೆಂಗಳೆಯರೆಲ್ಲರೂ ಬಾಲ ಸ್ವರೂಪಿ ರಾಜಾರಾಮರ ತೊಟ್ಟಿಲು ತೂಗುವ ಶಾಸ್ತ್ರ ನಿಜಕ್ಕೂ ರಮಣೀಯವಾಗಿತ್ತು. ಇದರ ಜೊತೆಯಲ್ಲಿ ಅಬಾಲ ವೃದ್ಧರಾದಿಯಾಗಿ ಎಲ್ಲರೂ ರಾಜಾರಾಮರ ಅಂಭಂಗಗಳನ್ನು ತಾಳ ವಾದ್ಯಗಳೊಂದಿಗೆ ಸಂಕೀರ್ತನೆ ಮಾಡುತ್ತಾ ಭಕ್ತಿಯಲ್ಲಿ ಪರಮಾವಶದಲಿ ಮಿಂದು ತಲ್ಲೀನರಾಗಿ ನರ್ತನೆ ಮಾಡುತ್ತಿದ್ದದ್ದು ಎಲ್ಲರ ಗಮನ ಸೆಳೆಯುತ್ತಿತ್ತು. ಅಭಂಗಗಳ ಕಂಠಪಾಠವಿದ್ದವರು ಎತ್ತರದ ಧನಿಯಲ್ಲಿ ಹಾಡುತ್ತಿದ್ದರೆ ಬಾರದಿರುವವರೂ ಕೂಡ ತಮಗೇ ಅರಿವಿಲ್ಲದಂತೆಯೇ ತಲೆ ತೂಗಿಸುತ್ತಿದ್ದದ್ದು ಆ ಆಭಂಗಗಳ ಸತ್ವವನ್ನು ಎತ್ತಿ ತೋರಿಸುತ್ತಿದ್ದವು.

ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಉತ್ತಮ ತಂಡ ಇರಬೇಕು ಮತ್ತು ಆವರೆಲ್ಲರ ಮನಸ್ಥಿತಿಗಳು ಒಂದೇ ಆಗಿರಬೇಕು ಜೊತೆಗೆ ಎಲ್ಲರೂ ಕೈಜೋಡಿಸ ಬೇಕು. ಅಂತಹ ಸಮ್ಮಿಳನ ಈ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು. ಸಭಾಂಗಣದ ಮುಂಭಾಗದಲ್ಲಿಯೇ ಬಂದವರೆಲ್ಲರ ನೋಂದಾವಣೆ ಮಾಡಿಕೊಳ್ಳುತ್ತಿದ್ದರೆ ಮತ್ತೊಬ್ಬರು ಎಲ್ಲರ ಹಣೆಗೆ ತಿಲಕವನ್ನು ಇಟ್ಟು ಸ್ವಾಗತಿಸುತ್ತಿದ್ದದ್ದು ಮೆಚ್ಚುಗೆ ಪಡೆಯುತ್ತಿತ್ತು. ಎಲ್ಲಾ ಸ್ವಯಂ ಸೇವರಕರೂ ತಮ್ಮ ವಯೋ ಸಯಜಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಕಾರ್ಯಕ್ರಮದ ಒಂದು ಮೂಲೆಯಲ್ಲಿ ಚಿದಂಬರರು ಮತ್ತು ರಾಜಾರಾಮರ ಕುರಿತಾದ ಪುಸ್ತಕಗಳು ಭಜನಾ ಧ್ವನಿಸುರಳಿಗಳು ಹಾಗೂ ಉತ್ತರ ಕರ್ನಾಟಕ ಶೈಲಿಯ ಕೆಲವು ತಿಂಡಿ ತಿನಿಸುಗಳು ವ್ಯಾಪಾರಕ್ಕೆ ಲಭ್ಯವಿದ್ದವು. ಒಂದು ಕಡೆ ಪೂಜೆ ಪುನಸ್ಕಾರಗಳು ಮತ್ತು ಭಜನೆಗಳು ಹೃನ್ಮನಗಳನ್ನು ತಣಿಸುತ್ತಿದ್ದರೆ, ಸವಿರುಚಿಯಾದ ಊಟ, ಪ್ರಸಾದ ರೂಪದಲ್ಲಿ ಎಲ್ಲರ ನಾಲಿಗೆ ಬರವನ್ನು ಕಳೆದ್ದದ್ದಲ್ಲದೆ ಹೊಟ್ಟೆಯನ್ನು ತುಂಬಿಸಿದವು. ಪ್ರಸಾದ ವಿನಿಯೋಗ ಸಮಯದಲ್ಲೂ ವಯಸ್ಕರಿಗೆ ವೇದಿಕೆಯ ಹಿಂಭಾಗದಲ್ಲಿ ಮತ್ತು ಇತರ ಶಕ್ತ ಭಕ್ತಾದಿಗಳಿಗೆ ಮಹಡಿಯ ಮೇಲೆ ಯಾವುದೇ ರೀತಿಯ ನೂಕಾಟ ಅಥವಾ ತಳ್ಳಾಟಗಳಿಲ್ಲದೆ ವಿತರಣೆ ಮಾಡಿದ್ದು ಕಾರ್ಯಕ್ರಮದ ಅಚ್ಚುಕಟ್ಟು ತನವನ್ನು ಸಾರಿ ಹೇಳುತ್ತಿತ್ತು. ನಮ್ಮ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಸಮಾರಂಭಗಳಲ್ಲಿಯೇ 150-200 ಮಂದಿಯನ್ನು ಸಂತೈಸಲು ಕಷ್ಟ ಪಡುವ ಇಂದಿನ ಪರಿಸ್ಥಿತಿಯಲ್ಲಿ ಸರಿ ಸುಮಾರು 600-800 ಜನ ಒಂದು ಕಡೆ ಸೇರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀರ್ತಿ ಆಯೋಜಕರಿಗೆ ಸಲ್ಲುತ್ತದೆ.

ಈ ಕಾರ್ಯಕ್ರಮಕ್ಕೆ ಕೇವಲ ಚಿದಂಬರರ ಅನುಯಾಯಿಗಳಲ್ಲದೆ ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀ ವಿನಾಯಕ ತೊರವಿಯವರು, ಹೆಸರಾಂತ ವಕೀಲರು ಮತ್ತು ಕರ್ನಾಟಕ ರಾಜ್ಯದ ಮಾಜಿ ಅಡ್ಬೊಕೇಟ್ ಜನರಲ್ ಶ್ರೀ ಅಶೋಕ್ ಹಾರ್ನಳ್ಳಿಯವರು ಇಡೀ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜಾರಾಮರ ಅಭಂಗಗಳ ಹೊಸಾ ಧ್ವನಿ ಸುರಳಿಯನ್ನು ಅನಾವರಣ ಗೊಳಿಸಿದರೆ, ನಿವೃತ್ತ ನ್ಯಾಯಾಧೀಶರು ಮತ್ತು ಬಿಹಾರದ ಮಾಜೀ ರಾಜ್ಯಪಾಲರಾದ ಶ್ರಿ ರಾಮಾಜೋಯಿಸ್ ಅವರು ಮತ್ತು ಥಟ್ ಅಂತಾ ಹೇಳಿ ಖ್ಯಾತಿಯ ನಾ. ಸೋಮೇಶ್ವರ್ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು ಎಂದರೆ ತಪ್ಪಾಗಲಾರದು.

ಇಂದಿನ ದಿನಗಳಲ್ಲಿ ಬಹುಪಾಲು ಯುವಕರು ಹಣದ ಹಿಂದೆಯೇ ಹೋಗುವ ಪರಿಣಾಮ ಧಾರ್ಮಿಕ ಕಾರ್ಯಗಳೇ ಗೌಣವಾಗಿರುವಂತಹ ಸಂಧರ್ಭದಲ್ಲಿ ಚಿದಂಬರ ಸ್ವಾಮಿಗಳ ಅನುಯಾಯಿಗಳ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತವೆ ಎಂದರೆ ಅತಿಶಯೋಕ್ತಿಯೇನಲ್ಲ. ಇಂತಹ ಕಾರ್ಯಕ್ರಮಗಳು ಆಗ್ಗಿಂದ್ದಾಗೆ ಎಲ್ಲಾ ಕಡೆಯಲ್ಲೂ ನಡೆಯುವಂತಾದರೆ, ಭಾರತ ಮತ್ತೊಮ್ಮೆ ವಿಶ್ವ ವಂದಿತ ಗುರುವಾಗುವುದರಲ್ಲಿ ಸಂದೇಹವೇ ಇಲ್ಲ.

ಏನಂತೀರೀ?